ಇತರ ಅನೇಕ ಹೊಯ್ಸಳ ದೇಗುಲಗಳಲ್ಲಿ ಕಾಣುವ ಹಲವು ಸ್ತರಗಳ ಮಾದರಿಯಂತಲ್ಲದೆ, ಒಂದರ ಮೇಲೊಂದು ಗೋಪುರವಿರುವಂತೆಯೂ ಮೇಲಿನ ಕಿರುವೇದಿಕೆ(ಸ್ತೂಪಿ) ಮೇಲೆ ಕಳಶವಿರುವಂತೆಯೂ ವಿನ್ಯಾಸಮಾಡಲಾಗಿದೆ. ಐದು ಹಂತಗಳ ಕಿರುಗೋಪುರಗಳಿದ್ದು, ಎಲ್ಲ ದಿಕ್ಕುಗಳಿಗೆ ಅಭಿಮುಖವಾಗಿ, ಕೆಳಹಂತದ ಒಂದೊಂದು ಕಿರುಗೋಪುರದ ಮುಂಭಾಗದಲ್ಲಿ ದೇವತಾಮೂರ್ತಿಯನ್ನು ಕಾಣಬಹುದು. ಉಳಿದಂತೆ ಹೊಯ್ಸಳ ಕಲೆಯ ವೈಶಿಷ್ಟ್ಯವಾದ ಸಿಂಹಮುಖ, ಬಳ್ಳಿಚಿತ್ತಾರಗಳ ಸೂಕ್ಷ್ಮ ಕೆತ್ತನೆಯಿಂದ ಇಡೀ ಗೋಪುರ ಅಲಂಕೃತವಾಗಿದೆ. ಗೋಪುರದ ಕೆಳಭಾಗದಲ್ಲಿ ಹೊರಕ್ಕೆ ಚಾಚಿಕೊಂಡಂತಿರುವ ಸಮತಲವು ಕೆಳಗೋಡೆಯ ಕಂಬಗಳ ಮೇಲೆ ನೆಲೆಗೊಂಡ ರೀತಿಯೂ ಸೂಕ್ಷ್ಮಕೆತ್ತನೆಯ ವಿನ್ಯಾಸವಿರುವ ಅದರ ಅಂಚುಗಳೂ ಕಟ್ಟಡದ ಅಂದವನ್ನು ಹೆಚ್ಚಿಸಿವೆ.
ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿಯ ಇಪ್ಪತ್ಮೂರನೆಯ ಕಂತು

 

ಹಾಸನ ಜಿಲ್ಲೆಯ ಪ್ರಮುಖ ವಾಣಿಜ್ಯ ಕೇಂದ್ರವೆನಿಸಿರುವ ಅರಸೀಕೆರೆಯ ಹೆಸರಿನ ಪ್ರಸಿದ್ಧಿಯೇನಿದ್ದರೂ ಇಲ್ಲಿ ಕೆರೆಯೊಂದನ್ನು ಕಟ್ಟಿಸಿದ ಹೊಯ್ಸಳರಾಣಿಯೊಬ್ಬಳಿಗೆ ಸಲ್ಲಬೇಕು. ಬೆಂಗಳೂರು-ಹೊನ್ನಾವರ ಹೆದ್ದಾರಿಯಲ್ಲಿರುವ ಅರಸೀಕೆರೆ ತಾಲೂಕು ಕೇಂದ್ರವೂ ಹೌದು. ಇದಕ್ಕೆ ಹೊಯ್ಸಳರ ಆಡಳಿತಕಾಲದಲ್ಲಿ ಬಲ್ಲಾಳಪುರ ಎಂದೂ ಹೆಸರಿತ್ತಂತೆ. ಅರಸೀಕೆರೆಯಿಂದ ಹುಳಿಯಾರಿನ ಕಡೆಗೆ ಸಾಗುವ ರಸ್ತೆಯಲ್ಲಿ ಒಂದು ಕಿಲೋಮೀಟರ್ ಹೋದರೆ, ಕಾಣಸಿಗುವ ಶಿವ ದೇವಾಲಯವು ಹೊಯ್ಸಳ ವಾಸ್ತುಶಿಲ್ಪದ ವಿಶೇಷ ನಿರ್ಮಾಣಗಳಲ್ಲೊಂದು.

ಈ ದೇವಾಲಯದ ಗೋಪುರವೂ ಮುಂಭಾಗದ ಮಂಟಪವೂ ಇತರ ಹೊಯ್ಸಳ ಗುಡಿಗಳಿಗಿಂತ ವಿಭಿನ್ನ ಶೈಲಿಯಲ್ಲಿ ನಿರ್ಮಿತವಾಗಿದ್ದು ಒಮ್ಮೆಗೇ ಕಣ್ಸೆಳೆಯುವಂತಿವೆ. ವಿಸ್ತಾರವಾದ ಮುಖಮಂಟಪ. ಒರಗಲು ಕಕ್ಷಾಸನಗಳು. ಅನೇಕ ಮೂಲೆಗಳ ವಿನ್ಯಾಸ. ಭವ್ಯವಾದ ಕಂಬಗಳು. ನಕ್ಷತ್ರಾಕಾರದ ಮೂಲೆಗಳ ಮೇಲೆ ಮೊಗುಚಿದ ಹರಿಗೋಲಿನ ಆಕಾರದ ಛಾವಣಿ. ಅರಸರ ಕಾಲದಲ್ಲಿ ನೃತ್ಯ ಗೀತಗಳ ವೇದಿಕೆಯಾಗಿರುತ್ತಿದ್ದ ನವರಂಗ- ಇವೆಲ್ಲವನ್ನು ನೋಡುತ್ತಿದ್ದಂತೆಯೇ ಈ ದೇಗುಲ ಪೂರ್ವಕಾಲದಲ್ಲಿ ಕಲೆ, ನೃತ್ಯ, ಸಾಂಸ್ಕೃತಿಕ ಚಟುವಟಿಕೆಗಳ ಕೇಂದ್ರವೂ ಆಗಿದ್ದಿತೆಂಬ ಅಂಶ ಸ್ಪಷ್ಟಪಡುತ್ತದೆ.

ಕಕ್ಷಾಸನ ಅಥವಾ ಒರಗುವ ಕಲ್ಲುಬೆಂಚುಗಳಿಂದ ಒಳಛಾವಣಿಯವರೆಗೆ ನಿಂತ ಚಿಕ್ಕ ಕಂಬಗಳೂ ನಡುವಣ ವೇದಿಕೆಯಿಂದ ಮೇಲುಭಿತ್ತಿಯವರೆಗೆ ತಲುಪಿದ ದೊಡ್ಡ ಕಂಬಗಳೂ ತಿರುಗಣೆಯಂತ್ರದ ಚಳಕದೊಂದಿಗೆ ಕುಸುರಿವಿನ್ಯಾಸಗಳಿಂದಲೂ ಆಕರ್ಷಕವಾಗಿ ಕಾಣುತ್ತವೆ. ಒರಗುವ ಆಸನದ ಕೆಳಭಾಗದಲ್ಲಿ ಆನೆಗಳನ್ನು ರೂಪಿಸಿರುವುದು ಸಭಾಂಗಣದ ಅಂದವನ್ನು ಹೆಚ್ಚಿಸಿದೆ. ಭುವನೇಶ್ವರಿಯಲ್ಲಿ (ಒಳಛಾವಣಿ) ಕೆತ್ತಲಾಗಿರುವ ಅಷ್ಟದಿಕ್ಪಾಲಕರ ಚಿತ್ರಗಳು ಸುಂದರವಾಗಿವೆ. ಒಳಗುಡಿಯ ಭುವನೇಶ್ವರಿಯಲ್ಲಿ ತಾಂಡವಮೂರ್ತಿ ಶಿವನ ಸುತ್ತ ಅಷ್ಟದಿಕ್ಪಾಲಕರಿರುವಂತೆ ನಿರೂಪಿಸಲಾಗಿದೆ.

ಗರ್ಭಗುಡಿಯ ಬಾಗಿಲವಾಡ ಸೂಕ್ಷ್ಮಕೆತ್ತನೆಯಿಂದ ಕೂಡಿದೆ. ದ್ವಾರಪಟ್ಟಕದ ಮೇಲೆ ಗಜಲಕ್ಷ್ಮಿಯನ್ನು ಕಾಣಬಹುದು. ಅದರ ಮೇಲುಭಾಗದ ಪಟ್ಟಿಕೆಯಲ್ಲಿ ಗಣಪತಿ ಹಾಗೂ ತ್ರಿಮೂರ್ತಿಗಳ ಕಿರುಶಿಲ್ಪಗಳಿವೆ. ಒಳಗುಡಿಯ ಶಿವಲಿಂಗಕ್ಕೆ ನಿತ್ಯಪೂಜೆ ಸಲ್ಲುತ್ತಿದೆ. ಗರ್ಭಗುಡಿಗೆ ಅಭಿಮುಖವಾಗಿ ನಂದಿಯ ಕಿರುವಿಗ್ರಹ. ಮೇಲೆ ಗೋಪುರದ ಮುಂಭಾಗದ ಸುಖನಾಸಿಯಲ್ಲೂ ನಂದಿಯಿದ್ದು, ಗಾರೆಯ ಈ ವಿಗ್ರಹವನ್ನು ಇತ್ತೀಚೆಗೆ ಮಾಡಿರಿಸಿರುವಂತೆ ಕಾಣುತ್ತದೆ. ಶಿವಾಲಯದ ಮಂಟಪದಂತೆಯೇ ಅದರ ಗೋಪುರದ ಆಕಾರವೂ ವಿಶಿಷ್ಟ.

ಇತರ ಅನೇಕ ಹೊಯ್ಸಳ ದೇಗುಲಗಳಲ್ಲಿ ಕಾಣುವ ಹಲವು ಸ್ತರಗಳ ಮಾದರಿಯಂತಲ್ಲದೆ, ಒಂದರ ಮೇಲೊಂದು ಗೋಪುರವಿರುವಂತೆಯೂ ಮೇಲಿನ ಕಿರುವೇದಿಕೆ(ಸ್ತೂಪಿ)ಯ ಮೇಲೆ ಕಳಶವಿರುವಂತೆಯೂ ವಿನ್ಯಾಸಮಾಡಲಾಗಿದೆ. ಐದು ಹಂತಗಳ ಕಿರುಗೋಪುರಗಳಿದ್ದು, ಎಲ್ಲ ದಿಕ್ಕುಗಳಿಗೆ ಅಭಿಮುಖವಾಗಿ, ಕೆಳಹಂತದ ಒಂದೊಂದು ಕಿರುಗೋಪುರದ ಮುಂಭಾಗದಲ್ಲಿ ದೇವತಾಮೂರ್ತಿಯನ್ನು ಕಾಣಬಹುದು. ಉಳಿದಂತೆ ಹೊಯ್ಸಳ ಕಲೆಯ ವೈಶಿಷ್ಟ್ಯವಾದ ಸಿಂಹಮುಖ, ಬಳ್ಳಿಚಿತ್ತಾರಗಳ ಸೂಕ್ಷ್ಮ ಕೆತ್ತನೆಯಿಂದ ಇಡೀ ಗೋಪುರ ಅಲಂಕೃತವಾಗಿದೆ.

ಈ ಗೋಪುರದ ಕೆಳಭಾಗದಲ್ಲಿ ಹೊರಕ್ಕೆ ಚಾಚಿಕೊಂಡಂತಿರುವ ಸಮತಲವು ಕೆಳಗೋಡೆಯ ಕಂಬಗಳ ಮೇಲೆ ನೆಲೆಗೊಂಡ ರೀತಿಯೂ ಸೂಕ್ಷ್ಮಕೆತ್ತನೆಯ ವಿನ್ಯಾಸವಿರುವ ಅದರ ಅಂಚುಗಳೂ ಕಟ್ಟಡದ ಅಂದವನ್ನು ಹೆಚ್ಚಿಸಿವೆ.

ಗರ್ಭಗುಡಿಯ ಹೊರಗೋಡೆಯ ಮೇಲೆಲ್ಲ ಕಂಬಗಳೂ ಆಕರ್ಷಕಗೋಪುರ ವಿನ್ಯಾಸಗಳೂ ಚಿತ್ರವಿಚಿತ್ರವಿನ್ಯಾಸಗಳೂ ನಿಮ್ಮ ಗಮನಸೆಳೆಯುತ್ತವೆ. ಉಳಿದ ಹೊಯ್ಸಳ ದೇವಾಲಯಗಳಲ್ಲಿ ಕಾಣುವಂತಹ ಎತ್ತರವಾದ ಜಗಲಿ, ಆನೆ, ಕುದುರೆ, ಹಂಸಾದಿಗಳ ಸಾಲುಪಟ್ಟಿಕೆಗಳೇನೂ ಇಲ್ಲಿ ಕಂಡು ಬರುವುದಿಲ್ಲ. ಕೆಳಗಿನ ಜಗತಿ(ಜಗಲಿ) ಎತ್ತರವಾಗಿಲ್ಲ. ಅದರ ಮೇಲಿನ ಕಂಬಗಳು ಒಂದಕ್ಕಿಂತ ಒಂದು ಸೊಗಸಾದ ಕೆತ್ತನೆಯಿಂದ ಕಣ್ತುಂಬುತ್ತವೆ.

ಈ ಕಂಬಗಳ ನಡುವಿನ ಅಂತರದಲ್ಲಿ ಕಿರುಗೋಪುರಗಳನ್ನು ರೂಪಿಸಿದೆ. ವಿಗ್ರಹಗಳನ್ನು ಪ್ರತ್ಯೇಕ ಕೋಷ್ಠ(ಗೂಡು)ಗಳಲ್ಲಿರಿಸದೆ, ಕಂಬಗಳ ಮುಂಭಾಗದಲ್ಲಿ ನಿಂತಿರುವಂತೆ ವಿನ್ಯಾಸಗೊಳಿಸಿರುವುದೊಂದು ವಿಶೇಷ. ಅವುಗಳ ಆಚೀಚೆಗೆ ಕಿರುಗೋಪುರಗಳು, ಇನ್ನೊಂದು ದೊಡ್ಡ ಕಂಬದ ನಡುವಣ ಅಂತರದಲ್ಲಿ ದೊಡ್ಡದೊಂದು ಗೋಪುರ ವಿನ್ಯಾಸ, ಅದರ ಕೆಳಗೆ ದೇವಪರಿವಾರದವರು ಇರುವಂತೆಯೂ ರೂಪಿಸಿದೆ.

ಹೊಯ್ಸಳ ಅರಸರಿಗೆ ತಮ್ಮ ಕಾಲದಲ್ಲಿ ತೀವ್ರವಾಗಿದ್ದ ಶೈವ-ವೈಷ್ಣವ ವೈಮನಸ್ಯದ ಅರಿವು ಇದ್ದೇ ಇತ್ತು. ತಾವು ಕಟ್ಟಿಸಿದ ಗುಡಿಗಳಲ್ಲಿ ಹರಿ-ಹರರಿಗೆ ಸಮಾನ ಸ್ಥಾನ ಕಲ್ಪಿಸುವ ಮೂಲಕ ಜನಮನದ ದ್ವೇಷಭಾವವನ್ನು ಶಮನಗೊಳಿಸಲೂ ಅವರು ಪ್ರಾಮಾಣಿಕವಾಗಿ ಪ್ರಯತ್ನಿಸಿದರು. ಹೀಗಾಗಿ ಅರಸೀಕೆರೆಯ ಗುಡಿಯು ಶಿವ ದೇವಾಲಯವಾದರೂ ಗೋಡೆಯ ಮೇಲೆಲ್ಲ ವಿಷ್ಣುರೂಪಗಳೂ ಕಾಣಸಿಗುವುದೊಂದು ವಿಶೇಷ. ಆದರೆ, ಯಾವುದೇ ವಿಗ್ರಹವೂ ಸುಸ್ಥಿತಿಯಲ್ಲಿಲ್ಲ ಎಂದೂ ಹೇಳದೆ ವಿಧಿಯಿಲ್ಲ.

ಹೊಯ್ಸಳ ವಾಸ್ತುಶಿಲ್ಪದ ಕಂಬಗಳು, ಗೋಪುರ, ಛಾವಣಿ ಮೊದಲಾದವುಗಳ ಸೊಬಗು, ವೈಶಿಷ್ಟ್ಯಗಳನ್ನು ನೋಡಿ ಸಂತೋಷಿಸುವುದಕ್ಕಾದರೂ ನೀವು ಅರಸೀಕೆರೆಯ ಶಿವಾಲಯಕ್ಕೆ ಭೇಟಿನೀಡಲೇಬೇಕು. ಇದೇ ರಸ್ತೆಯಲ್ಲಿ ಮುಂದೆ ಸಾಗಿದರೆ, ಹತ್ತಿರದಲ್ಲೇ ಮಾಲೇಕಲ್ಲು ತಿರುಪತಿಯೂ ಇದೆ. ಬೆಟ್ಟದ ಬುಡದಲ್ಲೇ ವೆಂಕಟರಮಣನ ದರ್ಶನಭಾಗ್ಯ. ತಾಕತ್ತಿದ್ದವರು ಬೆಟ್ಟ ಹತ್ತಿ ಅಲ್ಲಿನ ಗುಡಿಯನ್ನೂ ಸುತ್ತಿ ಬರಲು ಅಭ್ಯಂತರವಿಲ್ಲ.