ದ್ರೌಪತಿಯನ್ನು, ಸುಭದ್ರೆಯನ್ನು, ಹಿಡಿಂಬೆಯೊಂದಿಗೆ ಭೀಮನ ಸಂಬಂಧವನ್ನು ವರ್ಣಿಸುವಾಗ ಇದ್ದ ಒಂದು ಮಿತಿ ಇಲ್ಲಿ ಮೀರಿದೆ. ಕಾವ್ಯ ಸಂವಿಧಾನ ಮತ್ತು ಕಾವ್ಯದ ಬಂಧ ಅದನ್ನು ಒಪ್ಪುತ್ತದೆ. ಸುಭದ್ರೆಯನ್ನು ನೋಡಿದ ತಾಪ ಪರಿಹಾರಕ್ಕೆ ಅಂದಿನ ರಾತ್ರಿಯೇ ಅರ್ಜುನ ಊರು ಸುತ್ತುವುದು ಇಲ್ಲಿನ ಮುಖ್ಯ ಭಾಗ. ಆದರೆ ಹೋಗುವಾಗ ಅವನಿಗಷ್ಟೇ ಕಾಣುವ ವೇಶ್ಯೆಯರನ್ನು ತೋರಿಸದೆ ಓದುಗರಿಗೂ ಕಾಣಿಸುವಂತೆ ಮಾಡುವುದನ್ನು ನೋಡಿ ಪಂಪನ ರಸಿಕತೆಗೆ, ಜಾಣ್ಮೆಗೆ, ಕಾವ್ಯ ವಿಧಾನಕ್ಕೆ ಧಕ್ಕೆ ಆಗದ ಕ್ರಮಕ್ಕೆ ತಲೆ ಬಾಗಲೇಬೇಕು ಅನಿಸದೆ ಇರದು. ಅವನಿಗೆ ಕಾಣುವುದು ಆ ಕ್ಷಣದಲ್ಲಿ ಆದರೂ ಕಾಲದಿಂದ ಕಾಲಕ್ಕೆ ಪಂಪನನ್ನು ಓದುವವರೆಲ್ಲಾ ಅವರನ್ನು ಕಾಣುತ್ತಲೇ ಬಂದಿದ್ದಾರೆ.
ಆರ್. ದಿಲೀಪ್ ಕುಮಾರ್ ಬರೆಯುವ ಅಂಕಣ

 

ಪಂಪನ ವಿಕ್ರಮಾರ್ಜುನ ವಿಜಯದ ನಾಲಕ್ಕನೆಯ ಆಶ್ವಾಸದ ವೇಶ್ಯಾವಾಟಿಕೆಯರ ವರ್ಣನೆಯು ಬಹಳ ವಿಶೇಷವಾದದ್ದಾಗಿದೆ. ತನ್ನ ಕಾಲದ ವೇಶ್ಯೆಯರ ಚಿತ್ರವನ್ನು ಪಂಪ ಕಟ್ಟಿಕೊಡುವಲ್ಲಿ ತೀವ್ರತೆ ಬರಲು ಬಹಳ ಮುಖ್ಯ ಕಾರಣವೇ ಅವನು ಅದನ್ನು ಕಣ್ಣಾರೆ ಕಂಡಿರುವುದು. ರಾಜರ ಕಾಲದಲ್ಲಿ ಸಾಮಾನ್ಯವಾಗಿ ಅವರಿಗಿದ್ದ ಸಂಪತ್ತಿನಲ್ಲಿ ಈ ಹೆಣ್ಣುಮಕ್ಕಳ ಗುಂಪು ಅವನ ವೈಭವವನ್ನ ಸಾರುವಂತಹದ್ದು. ರಾಜರ ಸಪ್ತ ವ್ಯಸನಗಳಲ್ಲಿ ಹೆಣ್ಣಿನ ಸಂಗವೂ ಅದಕ್ಕೆ ಕಾರಣವಾಗುವ ವೇಶ್ಯೆಯರ ಗುಂಪೂ ಒಂದು. ಊರಿನ ವ್ಯಾಪ್ತಿಯಲ್ಲಿ ವೇಶ್ಯಾವಾಟಿಕೆಗೆ ಜಾಗ ಕೊಟ್ಟಿರುವುದೂ ಬಹಳ ಮುಖ್ಯ ಸಂಗತಿಗಳಲ್ಲೊಂದು. ಅವುಗಳ ಮೇಲಿನ ತೆರಿಗೆಯೂ ರಾಜ್ಯದ ಬೊಕ್ಕಸಕ್ಕೆ ಬರುತ್ತಿತ್ತು. ಅದೂ ರಾಜ್ಯದ ಆದಾಯಗಳಲ್ಲಿ ಒಂದಾಗಿತ್ತು. ಇದರೊಂದಿಗೆ ಪೆಣ್ಬುಯಿಲ್ ಅನ್ನುವ ಮತ್ತೊಂದು ಮೌಲ್ಯವನ್ನೂ ಗಮನಿಸಿ – ಅಸಹಾಯಕ ಹೆಣ್ಣನ್ನು ಹೊತ್ತೊಯ್ಯುವಾಗ ಜೀವ ಕೊಟ್ಟಾದರೂ ಅವಳನ್ನು ರಕ್ಷಿಸಬೇಕು ಎಂದು ಆ ಪೆಣ್ಬುಯಿಲ್ ತಿಳಿಸುತ್ತದೆ.

ಮೇಲ್ನೋಟಕ್ಕೆ ವೇಶ್ಯಾವಾಟಿಕೆ ಎಂದಾಕ್ಷಣ ಲೋಲುಪರು ಭೋಗಿಗಳು ಅನ್ನುವುದನ್ನಷ್ಟೇ ಗಮನಿಸದೆ ಅದರ ಮತ್ತೊಂದು ಮುಖವಾದ ರಕ್ಷಣೆಯನ್ನೂ ಗಮನಿಸುವುದು ಆ ಸಮಾಜದ ಒಪ್ಪಿತ ಮೌಲ್ಯವನ್ನು ತಿಳಿಯಲು ಸಹಾಯಕವಾಗುತ್ತದೆ. ಇವೆಲ್ಲಾ ಆ ಕಾಲದ ಜನ ಸಮುದಾಯವೊಂದರ ಬೇಕು ಬೇಡಗಳ ಜೊತೆ ಜೊತೆಗೆ ಅವರ ಜೀವನ ಕ್ರಮವನ್ನು ತಿಳಿಸುತ್ತದೆ.

ವೇಶ್ಯಾವಾಟಿಕೆಯ ಜಾಗದಲ್ಲಿ ಪಂಪ ತನ್ನ ರಾಜನಾದ ಅರಿಕೇಸರಿಯನ್ನು ಓಡಾಡಿಸುತ್ತಾನೆ. ಇಲ್ಲಿನ ಸಂದರ್ಭವು ಸುಭದ್ರೆಯನ್ನು ನೆನೆದು ವಿರಹ ಭಾರದಲ್ಲಿ ಅರಿಕೇಸರಿ ನಡೆವುದು. ಸಾಮಾನ್ಯ ಚಂದ್ರ, ಈಜು ಕೊಳ, ಅದರ ಕನ್ನಡಿಯಲ್ಲಿ ತನ್ನ ಬಿಂಬದ ಜೊತೆಗೆ ಅವಳದೂ ಕಾಣುವ ಹಾಗಿನ ಭ್ರಮೆ, ಚಂದ್ರನ ಮುಖದಲ್ಲಿ ಅವಳ ಮುಖ ಕಾಣುವುದು… ಇಂತಹಾ ಸಾಮಾನ್ಯ ವರ್ಣನೆಗಳನ್ನು ಕಾವ್ಯ ಭಾಗದಲ್ಲಿ ತರದೆ ನೇರವಾಗಿ ವೇಶ್ಯಾವಾಟಿಕೆಯ ಮನೆಗಳಿರುವ ರಸ್ತೆಯಲ್ಲಿ ನಡೆಯುತ್ತಾನೆ. ಆ ಮನೆಗಳ ಒಳಹೋಗಿ ನೋಡುವ ಚಿತ್ರವೊಂದನ್ನು ತರದೆ ಇರುವುದರಿಂದ ರಾಜನಾದ ಅರಿಕೇಸರಿಯ ಮಾನ ಉಳಿಸಿದ ಕವಿ ಪಂಪ ಎನ್ನಬಹುದೇನೋ!

ಪ್ರಿಯತಮೆಯನ್ನೋ, ಹೆಂಡತಿಯನ್ನೋ ವರ್ಣಿಸುವಾಗ ಒಂದು ಅತಿಗೆ ಹೋಗದೆ ಅಲ್ಲೊಂದು ಪ್ರಜ್ಞೆಯ ಮಿತಿ ಇದ್ದೇ ಇರುತ್ತದೆ. ಆದರೆ ಇಲ್ಲಿ ಒಂದು ಹೆಜ್ಜೆ ಮುಂದೆ ಹೋಗಿ ವೇಶ್ಯಾವಾಟಿಕೆಯ ಸ್ತ್ರೀಯರನ್ನು ವರ್ಣಿಸುವ ಪಂಪನ ಕ್ರಮ ಬೆರಗಾಗಿಸುತ್ತದೆ.

ದ್ರೌಪತಿಯನ್ನು, ಸುಭದ್ರೆಯನ್ನು, ಹಿಡಿಂಬೆಯೊಂದಿಗೆ ಭೀಮನ ಸಂಬಂಧವನ್ನು ವರ್ಣಿಸುವಾಗ ಇದ್ದ ಒಂದು ಮಿತಿ ಇಲ್ಲಿ ಮೀರಿದೆ. ಕಾವ್ಯ ಸಂವಿಧಾನ ಮತ್ತು ಕಾವ್ಯದ ಬಂಧ ಅದನ್ನು ಒಪ್ಪುತ್ತದೆ. ಸುಭದ್ರೆಯನ್ನು ನೋಡಿದ ತಾಪ ಪರಿಹಾರಕ್ಕೆ ಅಂದಿನ ರಾತ್ರಿಯೇ ಅರ್ಜುನ ಊರು ಸುತ್ತುವುದು ಇಲ್ಲಿನ ಮುಖ್ಯ ಭಾಗ. ಆದರೆ ಹೋಗುವಾಗ ಅವನಿಗಷ್ಟೇ ಕಾಣುವ ವೇಶ್ಯೆಯರನ್ನು ತೋರಿಸದೆ ಓದುಗರಿಗೂ ಕಾಣಿಸುವಂತೆ ಮಾಡುವುದನ್ನು ನೋಡಿ ಪಂಪನ ರಸಿಕತೆಗೆ, ಜಾಣ್ಮೆಗೆ, ಕಾವ್ಯ ವಿಧಾನಕ್ಕೆ ಧಕ್ಕೆ ಆಗದ ಕ್ರಮಕ್ಕೆ ತಲೆ ಬಾಗಲೇಬೇಕು ಅನಿಸದೆ ಇರದು. ಅವನಿಗೆ ಕಾಣುವುದು ಆ ಕ್ಷಣದಲ್ಲಿ ಆದರೂ ಕಾಲದಿಂದ ಕಾಲಕ್ಕೆ ಪಂಪನನ್ನು ಓದುವವರೆಲ್ಲಾ ಅವರನ್ನು ಕಾಣುತ್ತಲೇ ಬಂದಿದ್ದಾರೆ.

ವೇಶ್ಯಾವಾಟಿಕೆಯಲ್ಲಿ ತೊಡಗಿ ಸಿಕ್ಕುಬಿದ್ದರೆ ಇಂದಿನ ಕಾನೂನಿನ ಶಿಕ್ಷೆಗಿಂತ ಘೋರವಾದ ಶಿಕ್ಷೆ ಅಂದಿನ ಸಮಾಜದಲ್ಲಿ ಜಾರಿಯಲ್ಲಿತ್ತು. ಗಂಡು ತನ್ನ ಹೆಂಡತಿಗೆ ಕೈ ಕೊಟ್ಟು ಅಥವಾ ಅವಳಿಗೆ ಮರೆಮಾಚಿ ನಿಷ್ಟೆಯಿಂದ ನಡೆದುಕೊಳ್ಳದೇ ಮತ್ತೊಬ್ಬಳ ಸಂಗದಲ್ಲಿದ್ದು ಸಿಕ್ಕಿಬಿದ್ದರೆ ಅವನು ಮಾಡಿದ ನಂಬಿಕೆಯ ದ್ರೋಹಕ್ಕೆ ಮತ್ತು ಕೌಟುಂಬಿಕ ನಿಯಮವನ್ನು ಮೀರಿದ್ದಕ್ಕೆ ಶಿರಚ್ಛೇದನ ಮಾಡುವುದು, ಅದೇ ಹೆಣ್ಣು ಗಂಡನಿಗೆ ತಿಳಿಯದಂತೆ ಕಾದಲ (ಪ್ರೇಮ)ನಲ್ಲಿ (ಗಮನಿಸಿ ‘ಕಾದಲ’ ಪದ ಪಂಪನಲ್ಲಿ ಬಳಕೆಯಲ್ಲಿಯುವುದರ ಜೊತೆಗೆ ತಮಿಳಿನಲ್ಲಿ ಇಂದಿಗೂ ಬಳಕೆಯಲ್ಲಿದೆ) ಜೊತೆ ಸಿಕ್ಕಿಬಿದ್ದರೆ ಅವಳ ಮೂಗು ಕೊಯ್ಯುವ, ಯಾವ ಸೌಂದರ್ಯವನ್ನೇ ಇಟ್ಟುಕೊಂಡು ವಂಚಿಸಿದಳೋ ಆ ಸೌಂದರ್ಯವನ್ನೇ ನಾಶ ಮಾಡುವ (ಶೂರ್ಪನಖಿಗೆ ಆದ ಅವಸ್ಥೆಯನ್ನು ನೆನಪಿಗೆ ತರುತ್ತದೆ) ಶಿಕ್ಷೆ ವಿಧಿಸುವುದು ಆ ಕಾಲದ ಸಮಾಜದಲ್ಲಿ ಚಾಲ್ತಿಯಲ್ಲಿತ್ತು. ಇದು ಆ ಕಾಲದಲ್ಲಿ ಸಂಸಾರದ ಒಳಗಿದ್ದು ಕದ್ದು ಹಾದರ ಮಾಡುವವರಿಗೆ ಮಾತ್ರ. ಆದರೆ ಹಾದರವನ್ನೇ ವೃತ್ತಿಯನ್ನಾಗಿ ಮಾಡುತ್ತಿದ್ದ ಸಮುದಾಯದ ವರ್ಣನೆಗೆ ತನ್ನ ಕಾವ್ಯದಲ್ಲಿ ಒಂದು ಭಾಗವನ್ನೇ ಕೊಡುವುದು ಪಂಪ ತನ್ನ ಕಾಲಘಟ್ಟದಲ್ಲಿನ ಅಲಕ್ಷಿತ ಸಮುದಾಯ ಒಂದಕ್ಕೆ, ಸಮಾಜದಿಂದ ಹೊರತಳ್ಳಲ್ಪಟ್ಟ ಜನ ಸಮುದಾಯವೊಂದಕ್ಕೆ ಕೊಟ್ಟ ಮನ್ನಣೆಯಲ್ಲದೆ ಮತ್ತಿನ್ನೇನೂ ಅಲ್ಲ.

ಮಾತಿಲ್ಲದವರ ಪರವಾಗಿ ಮಾತಾಡಿದ ಮೊದಲ ಕವಿ ಪಂಪ ಅನಿಸುತ್ತದೆ. ಇಲ್ಲಿ ಮನ್ನಣೆ ಅನ್ನುವುದಕ್ಕೆ ಎರಡು ಬಹಳ ಮುಖ್ಯ ಕಾರಣಗಳು ಇದೆ. ಒಂದು ಅದು ಜನರ ಜೊತೆಗೆ ಸಮಾಜದಲ್ಲಿ ಇದ್ದದ್ದು, ಇದ್ದೂ ಅಲಕ್ಷ್ಯಕ್ಕೆ ಒಳಗಾಗಿದ್ದಿದ್ದು ಮತ್ತೊಂದು ಕಾವ್ಯದಲ್ಲಿ ಇದಕ್ಕೆ ಕೊಟ್ಟ ಜಾಗ. ಈ ಎರಡೂ ಕಾರಣದಿಂದ ಬದುಕು ಮತ್ತು ಕಾವ್ಯದ ಅಂತರ ಕಡಿಮೆ ಮಾಡುತ್ತಲೇ ಕಾಲಾತೀತವಾದ ಮಹಾಭಾರತವನ್ನು ತನ್ನ ಕಾಲದಲ್ಲಿ ಬಂಧಿಸಿ ಇಡುವುದು ಪಂಪ ಭಾರತದ ಕೃತಿಗೆ ಕೊಟ್ಟ ಮರುಹುಟ್ಟಿನ ಜೊತೆಗೇ ಅವನ ಅಸ್ಮಿತೆಗೆ ಸಾಕ್ಷಿಯಿದು ಅನಿಸದೆ ಇರದು.

ಸಂಸಾರಕ್ಕೂ ವ್ಯಭಿಚಾರಕ್ಕೂ ಒಂದು ಅಂತರ, ಕಾರಣಗಳಂತೂ ಇದ್ದೇ ಇರುತ್ತದೆ. ಕವಿಯಾದವನು ಇದನ್ನು ಗ್ರಹಿಸುವುದಕ್ಕೂ, ಒಬ್ಬ ಸಮಾಜಶಾಸ್ತ್ರಜ್ಞ ಗುರುತಿಸುವುದಕ್ಕೂ, ಮನೋವೈದ್ಯ ಗುರುತಿಸುವುದಕ್ಕೂ ಬಹಳಷ್ಟು ವ್ಯತ್ಯಾಸವಿದ್ದರೂ ಸಂಸಾರದಲ್ಲಿನ ಸಾರದ ಕೊರತೆಯೇ ಮೊದಲನೆಯದು ಅನ್ನುವುದಂತೂ ಬಹಳ ಮುಖ್ಯ ಕಾರಣ. ಅಂತಹಾ ಕಾರಣವನ್ನು ಪಂಪ ಹುಡುಕುವುದು ಈ ಭಾಗದಲ್ಲಿ ಅನಿಸದೆ ಇರದು. ಇಲ್ಲೊಂದು ಸಾಮಾಜಿಕ ಮತ್ತು ವೈಯುಕ್ತಿಕವಾದ ಕಾರಣದ ಜೊತೆಗೇ ನಮ್ಮನ್ನು ಮೀರಿದ ಒಳಗಿನ ವಾಸನಾ ರೂಪದ ಭಾವವೊಂದರ ಒತ್ತಡವೂ ಇಲ್ಲಿ ಕೆಲಸ ಮಾಡುತ್ತದೆ. ಈ ಕಾರಣವನ್ನು ಮನ್ಮಥ, ಸ್ಮರ ಎಂದು ಮಾತು ಪ್ರಾರಂಭ ಮಾಡಿ ಆ ಭಾಗದ ವರ್ಣನೆಗೆ ಬರುತ್ತಾನೆ. ಆ ಭಾಗದ ಒಂದು ವೃತ್ತವು ಹೀಗಿದೆ:

ಅಲರ್ಗಣ್ಣೊಳ್ ಸ್ಮರನಿರ್ದನಕ್ಕುಮ್
ಎಡವೋಪಾ ಜೋಡೆ ಕಾಮಂಗೆ ಕಾದಲೆಯಕ್ಕುಂ
ಪೆಱತೇನೋ?
ಪಾದರದೊಳ್
ಸಂಸಾರ ಸರ್ವಸ್ವಮಂ
ಗೆಲೆವಂದಿಂಪಿನ ಅಲಂಪನಾಳ್ದ ಸವಿಯುಂಟಕ್ಕುಂ
ಸಮಂತಾವಗಂ
ತಲೆಯಂ ಮೂಗುಮನ್ ಒತ್ತೆಯಿಟ್ಟು ನೆರೆವಂತು
ಉಂತೇನವರ್ ಗಾಂಪರೇ? ( ೪.೮೪ )

ವೇಶ್ಯಾವಾಟಿಕೆಯ ಜಾಗದಲ್ಲಿ ಪಂಪ ತನ್ನ ರಾಜನಾದ ಅರಿಕೇಸರಿಯನ್ನು ಓಡಾಡಿಸುತ್ತಾನೆ. ಇಲ್ಲಿನ ಸಂದರ್ಭವು ಸುಭದ್ರೆಯನ್ನು ನೆನೆದು ವಿರಹ ಭಾರದಲ್ಲಿ ಅರಿಕೇಸರಿ ನಡೆವುದು. ಸಾಮಾನ್ಯ ಚಂದ್ರ, ಈಜು ಕೊಳ, ಅದರ ಕನ್ನಡಿಯಲ್ಲಿ ತನ್ನ ಬಿಂಬದ ಜೊತೆಗೆ ಅವಳದೂ ಕಾಣುವ ಹಾಗಿನ ಭ್ರಮೆ, ಚಂದ್ರನ ಮುಖದಲ್ಲಿ ಅವಳ ಮುಖ ಕಾಣುವುದು…

ವಚನ : ಎನುತ್ತುಂ ಬರ್ಪನೊಂದೆಡೆಯೊಳ್ ಮನಸಿಜನ ನಡಪಿದ ಜಂಗಮಲತೆಗಳಂತೆ ಮನೋಜನ ಕಾಪಿನ ಕಲ್ಪಲತೆಗಳಂತೆ ಮನೋಜನೆಂಬ ದೀವಗಾಱನ ಪುಲ್ಲೆಗಳಂತೆ ತಂತಮ್ಮ ಮನೆಯ ಮುಂದಣ ಪಚ್ಚೆಯ ಜಗುಲಿಗಳೊಳಂ ಮಣಿಮಯ ಮತ್ತವಾರಣಂಗಳೊಳಮಳವಿಗೞಿದ ವಿಳಾಸಂಗಳೊಳಂ ತಂಡತಂಡದೆ ನೆರೆದಿರ್ದ ಪೆಂಡವಾಸದೊಳ್ವೆಂಡಿರಂ ಕಂಡು…

ಎಂದು ಭಾಗ ಮುಂದುವರೆಯುತ್ತದೆ. ಇಲ್ಲಿನ ಪದ್ಯ ಭಾಗದ ಬಗೆಗೆ ಮಾತನಾಡುವುದಕ್ಕೂ ಮೊದಲು ಪಂಪನ ಆದಿಪುರಾಣದ ಮೊದಲನೆಯ ಆಶ್ವಾಸದಿಂದ ಆಯ್ದ ಒಂದು ಸಾಲನ್ನು ಇಲ್ಲಿ ನೆನೆಯುವುದು ಬಹಳ ಮುಖ್ಯ ಅನಿಸುತ್ತದೆ.

ಸಂಸಾರದೊಳ್ ಸಾರಮಪ್ಪುದಱಿಂ ಧರ್ಮಂ
ಅದಂ ನಿಮಿರ್ಚುವುದಱಿಂ ಸಂಸಾರ ಸಾರೋದಯಂ ( ೧.೨೬ )

ಇಲ್ಲಿನ ಎರಡೂ ಕೃತಿಗಳಲ್ಲಿನ ಆಯ್ದ ಸಾಲುಗಳ ಭಾವವನ್ನು ಒಮ್ಮೆ ಗಮನಿಸಿ. ಪಂಪ ತನ್ನದೇ ಕಾವ್ಯದ ಭಾವವೊಂದನ್ನು ತಾನೇ ಮೀರುವ ಮಟ್ಟದ ಅನುಭವ ಅವನಿಗಾಗಿದೆ ಅನ್ನುವುದನ್ನು ಇದು ಸಾಕ್ಷಿಯಾಗಿ ತೋರಿಸುತ್ತಿದೆ. “ಸಂಸಾರ ಸಾರೋದಯ” ಅನ್ನುವುದು ಪಂಪನ ಬಿರುದುಗಳಲ್ಲಿ ಒಂದೆಂದು ಅವನೇ ಆದಿಪುರಾಣದಲ್ಲಿ ಹೇಳಿಕೊಂಡಿದ್ದಾನೆ. ಅಂತಹಾ ಸಂಸಾರದ ಮೀರುವಿಕೆಯ ಬಗೆಗೆ ವಿಕ್ರಮಾರ್ಜುನ ವಿಜಯದಲ್ಲಿನ ಈ ಭಾಗದಲ್ಲಿ ಮಾತನಾಡುತ್ತಿದ್ದಾನೆ. ಈ ಒಂದು ಕೃತಿಯಿಂದ ಮತ್ತೊಂದು ಕೃತಿಗೆ ತನ್ನ ಅಭಿಪ್ರಾಯದಲ್ಲಿ ಮೀರಿಕೊಳ್ಳುವುದೇ ನಿಜವಾದ ಕವಿಯ ಲಕ್ಷಣ ಅನಿಸದೆ ಇರದು.

ಇಲ್ಲಿನ ಎರಡೂ ಕಾವ್ಯಗಳ ಸಂದರ್ಭ ಏನೇ ಇದ್ದರೂ ಅವನಲ್ಲಿನ ಒಳಗಿನ ಒತ್ತಡ ಸೃಜಿಸುವುದು ಈ ಮೀರಿಕೊಳ್ಳುವಿಕೆಯನ್ನೇ. ವಿಕ್ರಮಾರ್ಜುನ ವಿಜಯದ ಕಾವ್ಯ ಸಂದರ್ಭದಲ್ಲಿ ನೋಡುತ್ತಿರುವುದು ಅರ್ಜುನನೇ ಆದರೂ ನೋಡಿರುವುದು ಪಂಪ. ಎರಡನೆಯದರಲ್ಲಿ ಸ್ವತಃ ತನ್ನ ಬಗೆಗೇ ಹೇಳಿಕೊಳ್ಳುವಾಗ ಪಂಪನೇ ಆಡಿರುವ ಮಾತದು ಎನ್ನುವುದೇ ವಿಶೇಷ.

ಒಳಗೆ ಮತ್ತು ಹೊರಗಿನ ಒತ್ತಡಗಳು ಕವಿಯಲ್ಲಿ ಕರ್ಷಣವನ್ನು ಸೃಜಿಸುತ್ತದೆ. ಇದೇ ಅವನ ಕಾವ್ಯದ ಆವಿರ್ಭಾವಕ್ಕೆ ಬಹುಮುಖ್ಯ ಕಾರಣ. ಈ ಕಾರಣದಿಂದ ಹೊರಗೆ ಉಳಿದನೆಂದರೆ ಅವನು ಸಮಕಾಲೀನದಲ್ಲಿ ಉಳಿಯಲಾರ. ಯಾರು ಸಮಕಾಲೀನ ಒತ್ತಡಕ್ಕೆ ಸ್ಪಂದಿಸರೋ ಅವರು ಕಾಲಾತೀತ ಆಗಲಾರರು. ಇದಕ್ಕೆ ಬಹುಮುಖ್ಯ ಸಾಕ್ಷಿಯಾಗಿ ಈ ಪದ್ಯ ನಿಲ್ಲುತ್ತದೆ. ಶೃಂಗಾರದಿಂದ ಪ್ರಾರಂಭವಾಗಿ ಅದರಲ್ಲೇ ಲೀನವಾಗಿ ನಂತರ ಜಾಗೃತ ಭಾವಕ್ಕೆ ಕರೆದುಕೊಂಡು ಬರುತ್ತಲೇ ಯಶಸ್ವಿಯಾಗುತ್ತದೆ. ಇನ್ನೊಂದು ಕ್ರಮದಲ್ಲಿ ಹೇಳುವುದೇ ಆದರೆ ಒಳಗಿನ ಭಾವದ ರಚನೆಯಿಂದ ಪ್ರಾರಂಭ ಮಾಡಿ ಹೊರಗಿನ ರಚನೆಯು ಯಶಸ್ವಿಯಾಗಿ ಕೊನೆಗೊಳ್ಳುತ್ತದೆ. ಈ ಕೊನೆಯಾಗುವಾಗಲೂ ಒಂದು ಪ್ರಶ್ನೆಯನ್ನು ಎತ್ತಿಟ್ಟು ಕಾವ್ಯ ಭಾಗ ಕೊನೆಯಾಗಿ, ಓದುಗನ ಒಳಗೆ ಆಲೋಚನೆ ಪ್ರಾರಂಭ ಆಗುತ್ತದೆ. ಅಲ್ಲೊಂದು ಧುತ್ತೆಂದು ಒಳಗಿನಿಂದಲೇ ಮತ್ತೊಂದು ಅವನ ಕಾಲದ ಸಮಾಜ ಒಪ್ಪಿತ ನಿಯಮವು ಕಾವ್ಯದಲ್ಲಿ ಹೊಸ ಭಾವವಾಗಿ ಉದಯ ಆಗಿಬಿಡುತ್ತದೆ.

ಅರ್ಜುನನು ವೇಶ್ಯಾವಾಟಿಕೆಯ ಮನೆಯ ಮುಂದೆ ಹೋಗುವಾಗ ಅವರ ಸನ್ನೆ, ಮಾತು, ಚೇಷ್ಟೆ ಅದೂ ಕೇವಲ ಚೇಷ್ಟೆಯಲ್ಲ ಮೃತ್ಯುವಿನಂತಹಾ ಚೇಷ್ಟೆ (ಆಡುವ ಮಿೞ್ತುಗೊಡ್ಡಂಗಳುಮಂ) ಯನ್ನು ನೋಡಿ ಮನಸ್ಸಿನಲ್ಲಿ ಅಂದುಕೊಳ್ಳುವಾಗ ಈ ಮೇಲೆ ಕಾಣಿಸಿರುವ ಪದ್ಯ ಬರುತ್ತದೆ. ‘ಅವಳ ಹೂವಿನಂಥಾ ಕಣ್ಣಿನಲ್ಲೇ ಮನ್ಮಥನು ಇದ್ದವನಾಗುತ್ತಾನೆ, ಸಂಕೇತ ಸ್ಥಾನಕ್ಕೆ ಹೋಗುವ ಅವರು ಮನ್ಮಥನಿಗೇ ಪ್ರಿಯರಾಗಿರಬೇಕು, ಹಾದರದಲ್ಲಿ ಸಂಸಾರ ಸುಖವನ್ನೇ ಮೀರಿಸುವ ಸುಖವು ಇರಬೇಕು ಅದಿಲ್ಲದೆ ಇದ್ದಿದ್ದರೆ ತಲೆ, ಮೂಗನ್ನು ಏಕೆ ಒತ್ತೆ ಇಟ್ಟು ವಿಟರನ್ನು ಹುಡುಕಿ ಹೋಗುವಷ್ಟು ಅವರೆಲ್ಲಾ ದಡ್ಡರೇ?’ ಎಂದು ತನ್ನ ಮಾತನ್ನು ಆಡುತ್ತಲೇ ವಚನವು ಬರುತ್ತದೆ. ಆ ವಚನವೋ ಮತ್ತೊಂದು ಬೇಟೆಯ ಚಿತ್ರವನ್ನೇ ಕಣ್ಣೆದುರು ತರುತ್ತದೆ. (ಪಂಪ ಭಾರತದ ಮೊದಲ ಆಶ್ವಾಸದಲ್ಲಿಯ ‘ಮೃಗಯಾವ್ಯಾಜದಿನೊರ್ಮೆ…’ ಪದ್ಯವನ್ನೊಮ್ಮೆ ಗಮನಿಸಿ, ಮಹಾಭಾರತದ ಪ್ರಾರಂಭವೂ ಒಂದು ಬೇಟೆಯ ಚಿತ್ರದಿಂದಲೇ ಆಗುತ್ತದೆ.)

ಬೇಟೆಗಾರರು ಹುಲ್ಲೆಯನ್ನು ಕಟ್ಟಿಹಾಕಿ ಹುಲಿಯನ್ನು ಹಿಡಿಯುವ ಹಾಗೆ, ಮನೆಯ ಮುಂದಿನ ಕೈಸಾಲೆಯಲ್ಲಿ ಸೂಳೆಯರು ಇದ್ದರು ಅದನ್ನು ಇವನು ನೋಡಿದ. ಕಣ್ಣೆ ಮನ್ಮಥನ ಸ್ಥಾನ ಅಂದವನು ಕೊನೆಗೆ ಹುಲಿಯಂತಹವನನ್ನು ಬೇಟೆಯಾಡುವಲ್ಲಿ ಅದನ್ನು ಸೆಳೆಯಲು ಬಳಸುವ ಹುಲ್ಲೆಯ ಹಾಗೆ ಇವರು ಇರುವವರು ಅನಿಸುವ ಹಾಗೆ ಒಂದು ಚಿತ್ರಣ ಕೊಡುತ್ತಾನೆ. ಈ ಚಿತ್ರಣಗಳಲ್ಲಿ ವಿಶೇಷ ಅನಿಸುವುದು ಶೃಂಗಾರವನ್ನು ಹೇಳುತ್ತಲೇ ಬೇಟೆಯ ವೀರತ್ವದ ಕಡೆಗೆ ಧುತ್ತೆಂದು ಉದಿಸುವ ಭಾವ.

ಇಷ್ಟು ಇಲ್ಲಿನ ಭಾಗದ ವಿವರಣೆಯಾದರೆ, ಇಲ್ಲಿ ಆದ ಬಹುಮುಖ್ಯ ಎರಡು ಭಾವಗಳ ಉದಯವನ್ನು ಗಮನಿಸಬೇಕು. ಒಂದು ಶೃಂಗಾರದ ಉದಯಕ್ಕೆ ಕಾರಣವಾಗುವ ಪದಗಳನ್ನು ಒಮ್ಮೆ ಗಮನಿಸಿ – ಅಲರ್ದಗಣ್ಣು, ಸ್ಮರ, ಎಡಪೋಪ, ಜೋಡೆ(ಜಾರೆ), ಕಾದಲೆ, ಪಾದರ, ಅಲಂಪಿನ ಇಂಪು, ಇವೆಲ್ಲವೂ ಕಾವ್ಯ ಸಂದರ್ಭದಲ್ಲಿ ಸೃಜಿಸಿ ಕೊಡುವ ಶೃಂಗಾರ ರಸದ ಉತ್ಕಟತೆಯನ್ನೊಮ್ಮೆ ಗಮನಿಸಿ. ಬಹಳ ನೇರವಾಗಿಯೇ ಆ ಭಾವದ ಪ್ರಚೋದನೆಯನ್ನು ಪ್ರಾರಂಭ ಮಾಡಿದವನು ಇದ್ದಕ್ಕಿದ್ದಂತೆಯೇ ವೀರ ರಸಕ್ಕೆ ಪೂರಕ ಪದಗಳ ಜೋಡಣೆಗೆ ನಿಲ್ಲುತ್ತಾನೆ. ಮನೋಜನ ಕಾಪಿನ (ರಕ್ಷಣೆಗೆ), ದೀಪಗಾಱನ (ಒಂದು ಪ್ರಾಣಿಯನ್ನು ಹಿಡಿಯಲು ಮತ್ತೊಂದನ್ನು ಅದಕ್ಕೆ ಬಲಿ ಕೊಡಲು ನಿಲ್ಲಿಸುವುದು), ಹೀಗೆ ಹೇಳುವುದರ ಜೊತೆಗೆ ಶೃಂಗಾರವನ್ನು ವರ್ಣಿಸುವಾಗ ಸಮಕಾಲೀನ ಸಮಾಜ ಒಪ್ಪಿತ ಜಾರತನಕ್ಕೆ ವಿಧಿಸುವ ಶಿಕ್ಷೆಯ ಕಟ್ಟು ಕಟ್ಟಳೆಯನ್ನೂ ಮೀರುವಲ್ಲಿ ಯಶಸ್ವಿಯಾಗುವ ಆಂತರಿಕ ಭಾವದ ಒತ್ತಡವನ್ನು ಹೇಳಿದವನೇ ಕೊನೆಗೆ ಬೇಟೆಯ ಚಿತ್ರವನ್ನು ತಂದು, ಅಲ್ಲಿ ವೀರ ರಸವನ್ನು ಕಾಣಿಸುತ್ತಾನೆ.

ಈ ಭಾವೋದಯವೇ ಇಲ್ಲಿನ ವಿಶೇಷತೆ. ಇಲ್ಲಿ ಎರಡು ಮುಖ್ಯ ಭಾವಗಳ ಉದಯವಾದರೂ ಕೊನೆಯಲ್ಲಿ ಸಂದರ್ಭದ ಅಡಿಯಲ್ಲಿ ವೇಶ್ಯಾವಾಟಿಕೆಯ ವರ್ಣನೆ ನಡೆದರೂ ಪಂಪ ಎತ್ತಿದ ಪ್ರಶ್ನೆ “ತಲೆಯಂ ಮೂಗುಮನೊತ್ತೆಯಿಟ್ಟು ನೆರೆವಂತುಂತೇನವರ್ ಗಾಂಪರೇ” ಅನ್ನುವ ಮಾತು ಕಾಲಾತೀತವಾಗಿ ನಿಂತು ಬಿಡತ್ತದೆ. ಅಲ್ಲಿನ ಬೇಟೆ ಹಣದ ಬೇಟೆಯೇ ಆಗಿದ್ದರೂ, ಕಾಮನೆಂಬುವಂತಹವನು ಕೊಲ್ಲಲು ಜಿಂಕೆಯನ್ನು ಬಳಿಗೆ ಬಿಟ್ಟು ಅದರ ಬಳಿ ಸುಳಿದ ಹುಲಿಯೂ ಸುಮ್ಮನಾಗುವುದು, ಸೋಲುವುದು ಅದೂ ತಲೆ ಕಡಿದರೂ, ಮೂಗು ಕೊಯ್ದರೂ ಅಲ್ಲಿಗೆ ಹೋಗುವವರೆಲ್ಲಾ ದಡ್ಡರೇ? ಅನ್ನುವ ಪ್ರಶ್ನೆ ಎಲ್ಲಾ ಕಾಲಕ್ಕೂ ಪ್ರಶ್ನೆಯಾಗಿಯೇ ಉಳಿಯುತ್ತದೆ. ಈ ಭಾವವು ಅರಿಕೇಸರಿಯ ಜೊತೆಗೆ ಪಂಪನಲ್ಲೂ ಇರುವ ಬೆರಗು, ಆಶ್ಚರ್ಯ ಭಾವದಿಂದ ಇದು ಕೊನೆಯಾಗುತ್ತದೆ.

ಪ್ರತಿಭಾನ್ವಿತ ಕವಿ ಮಾತ್ರವೇ ತನ್ನನ್ನು ತಾನು ಮೀರಿಕೊಳ್ಳುತ್ತಲೇ, ಉತ್ಕಟ ಭಾವಕ್ಕೆ ಅಭಿಮುಖವಾಗಿ ಶರಣಾಗಿ ಕೊನೆ ಇನ್ನೇನು ಅದರಲ್ಲೆ ಲೀನವಾಗಿ ಹೊಗುವಂತೆ ಕಾಣುತ್ತಿದ್ದಾನೆ ಅನಿಸಿದರೂ, ಅಲ್ಲಿಂದ ಬಿಡಿಸಿಕೊಂಡು ತನ್ನ ಕಾಲದ ಕಡೆಗೆ ಚಲಿಸಿ, ಅಲ್ಲಿನ ಒಪ್ಪಿತ ನಿಯಮಗಳನ್ನೂ ಮೀರುವವರಲ್ಲಿ ಮನುಷ್ಯನ ಅಂತರಾಳದಲ್ಲಿ ಮೂಡುವ ಭಾವದ ಉತ್ಕಟತೆಗೆ ಬೆರಗಾಗುವುದರ ಜೊತೆಗೇ ಅದಕ್ಕೆ ಕಾರಣವನ್ನು ಶೋಧಿಸಲು ನಿಲ್ಲುತ್ತಾನೆ. ಕೇವಲ ಬೆರಗಾಗುವುದೇ ಪ್ರತಿಭಾನ್ವಿತ ಕವಿಯ ಲಕ್ಷಣವಲ್ಲ. ಆ ಬೆರಗಿನ ಪರಿಣಾಮವು ಸಮಾಜದ ಒಪ್ಪಿತ ಮೌಲ್ಯವನ್ನು ಮೀರುವಲ್ಲಿ ಮನುಷ್ಯ ತೋರುವ ಗಟ್ಟಿತನಕ್ಕೆ ಆಗುವ ಬೆರಗದು. ಕಾರಣವನ್ನು ಹುಡುಕುವಾಗ ಕೊನೆಗೆ ಸಿಕ್ಕರೆ ಮನುಷ್ಯ ಪ್ರವೃತ್ತಿಯಿದು ಎಂತಲೋ, ಪ್ರಾಣಿ ಮನಸ್ಥಿತಿಯಿದು ಅಂತಲೋ, ಕೊನೆಗೆ ಯಾವುದೂ ಸಿಕ್ಕದಿದ್ದರೆ ಕಾಲದ ಹೊಡೆತಕ್ಕೆ ಸಿಕ್ಕವನೆಂತಲೋ ಕರೆದು ತೃಪ್ತಿಪಡುವನು. ಆ ಕಾಲವು ಕಾಮವಾಗಿದ್ದರೆ ಮನ್ಮಥನೇ ಕಾರಣ ಅನ್ನುವುದನ್ನು ಒಪ್ಪಿ ಮುಂದೆ ಹೋಗುತ್ತಾನೆ.