ಮಣ್ಣೆತ್ತಿನ ಅಮಾವಾಸೆ ದಿನ ಗುಳ್ಳವ್ವ ಕೂಡುತ್ತಾಳೆ. ಇವಳು ಐದು ವಾರ ಇರುತ್ತಾಳೆ. ಗುಳ್ಳವನನ್ನು ಸೀರೆ ಬಳೆ ಕುಂಕುಮದೊಂದಿಗೆ ಸಿಂಗರಿಸುತ್ತಾರೆ. ಹದಿಹರೆಯದ ಹುಡುಗಿಯರು ಇದರಲ್ಲಿ ಹೆಚ್ಚಾಗಿ ಪಾಲ್ಗೊಳ್ಳುವರು. ಅವರ ಜೊತೆ ಗುಳ್ಳವ್ವ ಐದು ವಾರ ಇರುವುದರಿಂದ ಭಾವನಾತ್ಮಕ ಸಂಬಂಧ ಬೆಳೆದಿರುತ್ತದೆ. ಐದನೇ ವಾರದ ಕೊನೆಯ ದಿನ ಹೊಲದಲ್ಲಿ ಹುಗಿಯುವಾಗ,ಇಲ್ಲವೇ
ಗಿಡದ ಮೇಲೆ ಕೂಡಿಸಿ ಬರುವಾಗ ಬಿಕ್ಕಿಬಿಕ್ಕಿ ಅಳುತ್ತಾರೆ. ಗುಳ್ಳವ್ವ ಕೂಡ ಮಳೆಗೆ ಸಂಬಂಧಿಸಿದ ದೇವತೆಯಾಗಿದ್ದಾಳೆ.

ರಂಜಾನ್ ದರ್ಗಾ ಬರೆಯುವ ‘ನೆನಪಾದಾಗಲೆಲ್ಲ’ ಸರಣಿಯ ಆರನೆಯ ಕಂತು.

 

ಜೂನ್ 7 ರಂದು ಮೃಗಶಿರ ಮಳೆಯಿಂದಾಗಿ ಮುಂಗಾರು ಪ್ರಾರಂಭವಾಗುವ ಸಂದರ್ಭದಲ್ಲಿ ಮಾಂಸಾಹಾರಿಗಳು ‘ಮಿರಗಾ ಹೂಡಿತು’ ಎಂದು ಹೇಳುತ್ತ ರಾತ್ರಿ ಖುಷಿಯಿಂದ ಹುಂಜ ಕೊಯ್ದು ‘ಹಬ್ಬ’ ಮಾಡುತ್ತಿದ್ದರು.

ನಗರವಾಸಿಗಳ ಕಣ್ಣಿಗೆ ಕೇವಲ ಬಿಳಿ ಮತ್ತು ಕರಿಮೋಡಗಳು ಮಾತ್ರ ಕಾಣಿಸುತ್ತವೆ. ಆದರೆ ರೈತರ ಕಣ್ಣಲ್ಲಿ ಅವು ಅನೇಕ ಪ್ರಕಾರದ ಮೋಡಗಳಾಗುತ್ತವೆ. ಆಗಿನ ಕಾಲದಲ್ಲಿ ನೀರಾವರಿ ವ್ಯವಸ್ಥೆ ಬಹಳ ಕಡಿಮೆ ಇತ್ತು. ಬಹುಪಾಲು ರೈತರು ಮಳೆಯ ಮೇಲೆಯೆ ಅವಲಂಬಿಸಬೇಕಿತ್ತು. ಆದ್ದರಿಂದ ಮಳೆಗಾಲದ ಆರಂಭದ ದಿನಗಳಿಂದ ಅವರ ಲಕ್ಷ್ಯವೆಲ್ಲ ಮೋಡಗಳ ಮೇಲೆಯೆ ಇರುತ್ತಿತ್ತು. ರೈತರು ಮೋಡಗಳ ಕುರಿತು ಮಾತನಾಡುತ್ತಿದ್ದುದರಲ್ಲಿ ಬಹಳಷ್ಟು ಮರೆತು ಹೋಗಿದ್ದಕ್ಕೆ ಬೇಸರವಿದೆ.

ಬೀಸುವ ಗಾಳಿಗೂ ಮಳೆಗೂ ಸಂಬಂಧ ಹೇಗಿರುತ್ತದೆ. ಅಲ್ಪ ಕಾಲದಲ್ಲೇ ಹಾರಾಡಿ ಮರಣಕ್ಕೀಡಾಗುವ ಮಳೆಹುಳುಗಳು ಮಳೆಯ ಮುನ್ಸೂಚನೆಯನ್ನು ಹೇಗೆ ತರುತ್ತವೆ. ಗುಡುಗು, ಮಿಂಚು, ತಂಪುಗಾಳಿ ಯಾವ ಕಡೆ ಮಳೆ ಬೀಳುತ್ತಿದೆ ಎಂಬುದನ್ನು ಹೇಗೆ ಸೂಚಿಸುತ್ತವೆ. ಕಾಮನಬಿಲ್ಲು ಹೇಗೆ ಯಾವ ಕಡೆ ಬಿದ್ದರೆ ಎಲ್ಲಿ ಮಳೆಯಾಗುವುದು. ಒಂದು ವೇಳೆ ಸೂರ್ಯನ ಸುತ್ತ ಬಿದ್ದರೆ ಮಳೆಗೆ ಹೇಗೆ ಅಡಚಣೆಯಾಗುವುದು. ಯಾವ ಕಡೆಯಿಂದ ಗಾಳಿ ಬೀಸಿದರೆ ಮೋಡಗಳು ನಮ್ಮ ಕಡೆಗೆ ಬರುತ್ತವೆ. ಮೋಡ ಹೇಗೆ ಗರ್ಭಗಟ್ಟುತ್ತದೆ. ಹೇಗೆ ಮಳೆ ಸುರಿಸುತ್ತದೆ. ಲದ್ದಿಹುಳುಗಳು ಜೋಳದ ಬೆಳೆಯ ಸುಳಿಯಲ್ಲಿ ಹೇಗೆ ಬರುತ್ತವೆ, ಮಿಡತೆಗಳು ಬಂದರೆ ಎಂಥ ಫಜೀತಿಯಾಗುವುದು ಮುಂತಾದವುಗಳನ್ನು ಅನುಭವಿ ರೈತರು ಹೇಳುವುದು ಪ್ರಕೃತಿ ವಿಶ್ವವಿದ್ಯಾಲಯದ ಪಾಠವೇ ಆಗಿರುತ್ತಿತ್ತು. ಆದರೆ ಕಾಲ ಕಳೆದಂತೆ ಅಂಥ ಅನುಭವದ ಮಾತುಗಳು ಮರೆಯಾಗಿ ಹೋಗಿವೆ. ರೈತರ ಅನುಭವ ಜ್ಞಾನವನ್ನು ಕಳೆದುಕೊಂಡಿದ್ದರಿಂದಲೇ ನಾವಿಂದು ಬಹಳ ಸಂಕಟಕ್ಕೊಳಗಾಗಿದ್ದೇವೆ.

(ಮುಂಗಾರು ಮಳೆ)

ಮಳೆ ಬರುವ ಪೂರ್ವದಲ್ಲೇ ಹಳ್ಳಿಗರು ಕ್ರಿಯಾಶೀಲರಾಗುತ್ತಿದ್ದರು. ತಮ್ಮ ಮೇಲ್ಮುದ್ದೆಯ ಮನೆಗಳ ಮೇಲೆ ಬೆಳೆದು ಒಣಗಿ ಹೋದ ಹುಲ್ಲನ್ನು ಜನ ತೆಗೆಯುತ್ತಿದ್ದರು. ಮಾಳಿಗೆಯನ್ನು ಗಟ್ಟಿಗೊಳಿಸುತ್ತಿದ್ದರು. ಮಳೆಗಾಲದಲ್ಲಿ ಹುಲ್ಲು ಬೆಳೆದಾಗ ತೆಗೆದರೆ ಮನೆ ಸೋರುವುದು. ಆ ಕಾರಣಕ್ಕಾಗಿ ಆ ಹುಲ್ಲು ಒಣಗುವವರೆಗೆ ಏನೂ ಮಾಡಲಿಕ್ಕಾಗುತ್ತಿರಲಿಲ್ಲ. ಆ ಮಣ್ಣಿನ ಮಾಳಿಗೆಯ ಮೇಲಿನ ನೀರಿನ ಅಂಶವೆಲ್ಲ ಹೋಗಿ ಹುಲ್ಲು ಒಣಗಿದ ಮೇಲೆಯೆ ಅದನ್ನು ತೆಗೆಯಲು ಸಾಧ್ಯವಾಗುತ್ತಿತ್ತು.

ಮಳೆ ಶುರುವಾದ ಮೇಲೆ ಹೊಲದ ಕೆಲಸ ಜಾಸ್ತಿಯಾಗುವುದರಿಂದ ದೈನಂದಿನ ಬದುಕಿಗೆ ಬೇಕಾದ ಸಾಮಾನುಗಳನ್ನು ತರಲು ಸಮಯ ಸಿಗುತ್ತಿರಲಿಲ್ಲ. ಕಾರಣ ಸಾಧ್ಯವಾದಷ್ಟು ದಿನಬಳಕೆಯ ವಸ್ತುಗಳನ್ನು ಕೂಡಿಡುತ್ತಿದ್ದರು. ಹಿಂದಿನ ರಾಶಿಯ ಸಂದರ್ಭದಲ್ಲಿ ಬೀಜಕ್ಕಾಗಿ ಆಯ್ಕೆ ಮಾಡಿದ ಬೀಜದ ತೆನೆಗಳಿಂದ ಬೀಜಗಳನ್ನು ಬಿಡಿಸಿ ಬಿತ್ತನೆಗೆ ಸಿದ್ಧ ಮಾಡಿ ಇಟ್ಟುಕೊಳ್ಳುತ್ತಿದ್ದರು. ಜೋಳದ ಬೀಜಗಳು ತೆನೆಯಲ್ಲೇ ಇದ್ದರೆ ಯಾವುದೇ ಬೀಜೋಪಚಾರದ ಅವಶ್ಯಕತೆ ಇರುವುದಿಲ್ಲ. ಆದರೆ ಇತರೆ ಬೀಜಗಳನ್ನು ಮಡಕೆಗಳಲ್ಲಿ ಬೂದಿಯಿಂದ ಮುಚ್ಚಿ ಮನೆಯ ಮೂಲೆಯಲ್ಲಿ ಅಡಕಿಲಿಡುತ್ತಿದ್ದರು.

ಮಿರಗಾ ಮಿಂಚುವ ಆಸುಪಾಸಿನ ದಿನಗಳಲ್ಲಿ ಕಾರಹುಣ್ಣಿಮೆ ಬರುವುದು. ಇದು ನಿಜವಾದ ಅರ್ಥದಲ್ಲಿ ಜಾನುವಾರುಗಳ ಹಬ್ಬವೇ ಆಗಿರುತ್ತದೆ. ರೈತರು ಭಾರತ ಹುಣ್ಣಿಮೆ ಸಮಯದಲ್ಲೇ ಬಂಕದ (ಬಾಗಿದ) ತೆನೆಯನ್ನು ತೆಗೆದಿಟ್ಟು ಮನೆಯ ಜಂತಿಗೆ ಕಟ್ಟಿರುತ್ತಾರೆ. ಕಾರಹುಣ್ಣಿಮೆ ಹಿಂದಿನ ದಿವಸ ಆ ತೆನೆಗಳಿಂದ ಬಿಡಿಸಿದ ಜೋಳದಿಂದ ಹುಗ್ಗಿ ಮಾಡಿ ಜಾನುವಾರುಗಳಿಗೆ ತಿನಿಸಿ ತಾವೂ ತಿನ್ನುತ್ತಾರೆ. ಆ ಹುಗ್ಗಿಗೆ ಹೊನ್ನುಗ್ಗಿ ಎಂದು ಕರೆಯುತ್ತಾರೆ.

(ಗೊಟ್ಟ ಹಾಕುವುದು)

ಕಾರಹುಣ್ಣಿಮೆ ದಿನ ಬೆಳಿಗ್ಗೆಯೆ ನಾಲ್ಕೈದು ತತ್ತಿ ಒಡೆದು ಎತ್ತಿನ ಬಾಯಲ್ಲಿ ಹಾಕುವರು. ಅಂಬಲಿ, ಮಜ್ಜಗಿ, ದಾರೂ ಸೇರಿಸಿ ಗೊಟ್ಟ (ದನಕರುಗಳಿಗೆ ಔಷಧಿ ಮುಂತಾದವುಗಳನ್ನು ಕುಡಿಸಲು ಬಳಸುವ ಬಿದಿರಿನ ಕೊಳವೆ) ಹಾಕುವರು. ಸ್ವಲ್ಪ ಸಮಯದ ನಂತರ ಹಳ್ಳಕ್ಕೆ ಎತ್ತುಗಳನ್ನು ಒಯ್ದು ಮೈತೊಳೆಯುವರು. ಕೋಡುಗಳಿಗೆ ವಾರ್ನಿಶ್ ಹಚ್ಚಿ ಸಿಂಗರಿಸಿದ ನಂತರ ಹಿತ್ತಾಳೆಯ ಕೋಡಣಸು (ಗೊಣಸು) ಸಿಗಿಸುವರು. ಕಟ್ಟಿಗೆಯಲ್ಲಿ ಕೆತ್ತಿದ ಲಿಂಗ, ನವಿಲು, ಹೂಗಳು ಮುಂತಾದವುಗಳ ಮುದ್ರೆಗಳನ್ನು ಬಣ್ಣದಲ್ಲಿ ಅದ್ದಿ ಎತ್ತುಗಳ ಬೆನ್ನಿನ ಮೆಲೆ ಗುಲ್ಲಾ (ಸಿಕ್ಕಾ) ಹಾಕುವರು. ಆಗ ಎತ್ತುಗಳು ವರ್ಣರಂಜಿತವಾಗಿ ಕಾಣುವವು.

ತದನಂತರ ಎತ್ತುಗಳಿಗೆ ಮದುಮಗನ ಹಾಗೆ ಬಾಸಿಂಗ ಕಟ್ಟುವರು. ಹರಳುಗಳನ್ನು ಕೂಡಿಸಿದ ಹಿತ್ತಾಳೆಯ ಹೊಳೆಯುವ ಹಣೆಪಟ್ಟಿ ಹಾಕುವರು. ಮೆತ್ತನೆಯ ಹತ್ತಿ ಮತ್ತು ರೇಷ್ಮೆಯಿಂದ ತಯಾರಿಸಿದ ಕುತನಿ ಬಟ್ಟೆಯ ಜೂಲಾ(ಹೊದಿಕೆ)ಗೆ ರೂಪಾಯಿ ಅಗಲ ಕನ್ನಡಿಯ ಬಿಲ್ಲೆಗಳಿಂದ ಸುಂದರಗೊಳಸಿ, ಮುತ್ತಿನ ಗೊಂಡೆ (ಕುಚ್ಚು) ಕಟ್ಟಿ ಎತ್ತುಗಳ ಮೈತುಂಬ ಹಾಕುವರು. ಇಣಿ(ಹಿಣಿಲು) ಎದ್ದು ಕಾಣುವ ಹಾಗೆ ಆ ಜಾಗದಲ್ಲಿ ಸಿಂಪಿಗರು ಬಟ್ಟೆ ಕತ್ತರಿಸಿ ಹೊಲೆದಿರುತ್ತಾರೆ. ಹೀಗೆ ವರ್ಣಮಯವಾದ ಜೂಲಾದೊಳಗೆ ಇಣಿ ಎದ್ದು ಕಾಣುವುದರಿಂದ ಎತ್ತಿನ ಸೌಂದರ್ಯಕ್ಕೆ ಹೆಚ್ಚಿನ ಮೆರಗು ಬರುತ್ತದೆ. ನೆದರು ಬೀಳಬಾರದೆಂದು (ದೃಷ್ಟಿ ತಾಗಬಾರದೆಂದು) ರೈತರು ಎತ್ತುಗಳ ಕೊರಳಲ್ಲಿ ಮತ್ತು ಕಾಲಲ್ಲಿ ಕಂಬಳಿಯ ದಪ್ಪನೆಯ ಕರಿದಾರ ಕಟ್ಟುವರು.

ಕಾರಹುಣ್ಣಿಮೆ ಕರಿ ಹರಿಯುವ ವೇಳೆ ಎತ್ತುಗಳ ಓಟದ ಸ್ಪರ್ಧೆ ಏರ್ಪಡಿಸುವರು. ಬರಿ ಗಾಲಿಗಳುಳ್ಳ ಹಾಗೂ ರೈತ ನಿಲ್ಲಲ್ಲು ಸಾಧ್ಯವಾಗುವಷ್ಟು ಸ್ಥಳವಿರುವ ಎಕ್ಕಾ ಗಾಡಿಯಂಥ ಚಿಕ್ಕ ಚಕ್ಕಡಿಗೆ ಮೂಗುದಾರ ತೆಗೆದ ಎತ್ತನ್ನು ಕಟ್ಟಿರುತ್ತಾರೆ. ರೈತರು ತಮ್ಮ ತಮ್ಮ ಚಕ್ಕಡಿಗಳ ಮೇಲೆ ಗಟ್ಟಿಯಾಗಿ ಹಿಡಿತ ಸಾಧಿಸಿ ನಿಂತಿರುತ್ತಾರೆ. ಆ ಎತ್ತುಗಳ ಓಟದಲ್ಲಿ ಮೊದಲು ಬಂದ ಎತ್ತಿಗೆ ಹೆಚ್ಚಿನ ಬಹುಮಾನವಿರುತ್ತದೆ. ಪಂಚಾಯ್ತಿಯವರು, ಶ್ರೀಮಂತರು, ಜಮೀನುದಾರರು ಮುಂತಾದವರು ಬಹುಮಾನಗಳನ್ನು ಇಟ್ಟಿರುತ್ತಾರೆ.

(ಬಿತ್ತನೆ ಕಾರ್ಯ)

ಬಸವ ಜಯಂತಿಯ ಸಂದರ್ಭದಲ್ಲಿ ಕೂಡ ಎತ್ತುಗಳನ್ನು ಸಿಂಗರಿಸಿ ಊದಿಸುತ್ತ ಬಾರಿಸುತ್ತ ಮೆರವಣಿಗೆ ಹೊರಡಿಸುವರು.
ಜನವರಿ 14ರಂದು ಬರುವ ಸಂಕ್ರಾಂತಿಗೆ ಮೊದಲು ದನಗಳನ್ನು ಚೆನ್ನಾಗಿ ಮೇಯಿಸುವರು. ಜೋಳದ ಬಾಟಿ (ತೆನೆ ಆಗದ ದಂಟು), ಕುಸುಬಿ ಹಿಂಡಿ ಮುಂತಾದ ಶಕ್ತಿಯುತ ಪಶು ಆಹಾರ ನೀಡುತ್ತ ಎತ್ತುಗಳನ್ನು ದಷ್ಟಪುಷ್ಟ ಮಾಡುವರು. ಚೆನ್ನಾಗಿ ಮೇಯಿಸುವುದರ ಜೊತೆ ಅವುಗಳ ಮೈ ತಿಕ್ಕುತ್ತ ಮತ್ತು ಸ್ನಾನ ಮಾಡಿಸುತ್ತ ರಕ್ತ ಮಾಂಸ ತುಂಬಿಕೊಳ್ಳುವಂತೆ ಮಾಡುವರು. ಸಂಕ್ರಮಣದ ಸಂದರ್ಭದಲ್ಲಿ ನಡೆಯುವ ಉತ್ತಮ ರಾಸುಗಳ ಅಂಗಸೌಷ್ಟವ ಮತ್ತು ಸೌಂದರ್ಯ ಸ್ಪರ್ಧೆಗಾಗಿ ತಮ್ಮ ಎತ್ತುಗಳನ್ನು ಸಿಂಗರಿಸುವುದರಲ್ಲಿ ರೈತರು ತಲ್ಲೀನರಾಗುತ್ತಿದ್ದರು. ಸಂಕ್ರಾಂತಿಯ ಸಂದರ್ಭದಲ್ಲಿ ವಿಜಾಪುರ, ಸೋಲಾಪುರ ಮುಂತಾದ ಕಡೆಗಳಲ್ಲಿ ಒಂದು ತಿಂಗಳವರೆಗೆ ದನಗಳ ಜಾತ್ರೆ ನಡೆಯುತ್ತಿತ್ತು. ಉತ್ತಮ ದನಗಳನ್ನು ಕೊಳ್ಳಲು ವಿವಿಧ ಕಡೆಗಳಿಂದ ರೈತರು ಬರುತ್ತಿದ್ದರು.

ಆಗ ಟ್ರ್ಯಾಕ್ಟರ್ ಸುಳಿವು ಇರಲಿಲ್ಲ. ಎಲ್ಲ ಕೆಲಸಕಾರ್ಯಗಳಿಗೂ ಎತ್ತುಗಳನ್ನೇ ಅವಲಂಬಿಸಬೇಕಾಗಿತ್ತು. ಮಳೆಗಾಲ ಪೂರ್ವದ ಬೇಸಗೆ ಕಾಲದಲ್ಲಿ ಮಾಗಿ ಉಳುಮೆ ಮಾಡುತ್ತಿದ್ದರು. ಆಗ ಭೂಮಿಯಲ್ಲಿ ಹುಳಗಳು ಮತ್ತು ಅವುಗಳ ಮೊಟ್ಟೆಗಳು ಸುಡುಬಿಸಿಲಿನಿಂದಾಗಿ ನಿರ್ನಾಮವಾಗುತ್ತಿದ್ದವು.

ಕರ್ಕಿಹತ್ತಿದ, ಭಿತ್ತನೆ ಇಲ್ಲದೆ ಫಡಾ ಬಿದ್ದ ಮತ್ತು ಮಸಾರಿ ಭೂಮಿಯಲ್ಲಿ ಉತ್ತುವುದು (ಉಳಿಮೆ ಮಾಡುವುದು – ನೇಗಿಲು ಹೊಡೆಯುವುದು), ಎರೆಭೂಮಿಯಲ್ಲಿ ಮಡಕಿ ಹೊಡೆಯುವುದು, (ನೇಗಿಲು ಕಬ್ಬಿಣದಿದ್ದು ಆಳವಾಗಿ ಮಣ್ಣನ್ನು ಎತ್ತಿ ಹಾಕುತ್ತದೆ. ಮಡಕಿ ಕಟ್ಟಿಗೆಯಿಂದ ತಯಾರಿಸಿದ್ದು ನೇಗಿಲದಷ್ಟು ಮಣ್ಣನ್ನು ಎತ್ತಿ ಹಾಕುವುದಿಲ್ಲ. ಎರೆಭೂಮಿಗೆ ಎಷ್ಟುಬೇಕೋ ಅಷ್ಟೇ ಎತ್ತಿಹಾಕುವುದು.) ಬಿತ್ತುವುದು, ಸಸಿಗಳ ಮಧ್ಯೆ ಕಸ ತೆಗೆಯುವುದಕ್ಕಾಗಿ ಮತ್ತು ಬೇರಿನ ಮೇಲೆ ಹೆಚ್ಚಿನ ಮಣ್ಣು ಬೀಳಿಸುವುದಕ್ಕಾಗಿ ಎಡೆ ಹೊಡೆಯುವುದು, ಬೆಳೆ ಕಟಾವು ಮಾಡಿದ ನಂತರ ಕಣ ತಯಾರಿಸಿ ಎತ್ತುಗಳನ್ನು ಕಟ್ಟಿ ಹಂತಿ ಹೊಡೆದು ತೆನೆಗಳಿಂದ ಕಾಳನ್ನು ಬೇರ್ಪಡಿಸುವುದು, ಅದಾದನಂತರ ಹರಗಿ (ಕುಂಟಿ ಹೊಡೆದು) ಹೊಲವನ್ನು ಸ್ವಚ್ಛ ಮಾಡುವುದು, ತೋಟಕ್ಕೆ ನೀರುಣಿಸುವುದಕ್ಕೋಸ್ಕರ ಬಾವಿಯ ನೀರನ್ನು ಎತ್ತುವುದಕ್ಕಾಗಿ ಮಟ್ಟಿ (ಕಪಲಿ) ಹೊಡೆಯುವುದು, ವ್ಯವಸಾಯೋತ್ಪನ್ನಗಳನ್ನು ಮಾರುಕಟ್ಟೆಗೆ ಸಾಗಿಸುವುದು ಮುಂತಾದ ಕೃಷಿ ಕಾರ್ಯಗಳಲ್ಲದೆ ಜಾತ್ರೆ, ಉರುಸ್, ಮದುವೆ, ಮುಂಜಿ, ನಿಬ್ಬಣ ಮುಂತಾದ ಸಂದರ್ಭಗಳಲ್ಲಿ ಕೂಡ ಗಾಡಿ ಕಟ್ಟಲು ಎತ್ತುಗಳು ಬೇಕೇಬೇಕು.

ಮದುವೆ ಸಂದರ್ಭದಲ್ಲಿ ಪರವೂರಿನ ಕನ್ಯೆಯ ಮನೆಗೆ ನಿಬ್ಬಣ ಹೋಗುವಾಗ ವರನ ಶ್ರೀಮಂತ ಮನೆತನದವರು ಕೂಡ ಸಿಂಗರಿಸಿದ ಸವಾರಿ ಗಾಡಿಗಳಲ್ಲಿ ಹೋಗುತ್ತಿದ್ದರು. ಅವರು ಎಷ್ಟು ಗಾಡಿಗಳಲ್ಲಿ ಬಂದಿದ್ದಾರೆ ಎಂಬುದರ ಮೇಲೆ ಅವರ ಶ್ರೀಮಂತಿಕೆಯನ್ನು ಆ ಪರವೂರಿನ ಜನರು ಅಳೆಯುತ್ತಿದ್ದರು. ಹಳ್ಳಿಗಳಿಗೆ ಬಸ್ಸುಗಳ ಸೌಕರ್ಯವಿಲ್ಲದ ಆ ಕಾಲದಲ್ಲಿ ಐವತ್ತು ಸವಾರಿ ಗಾಡಿಗಳಲ್ಲಿ ನಿಬ್ಬಣ ಬಂದುದುಂಟು. ಅವುಗಳನ್ನು ನೋಡುವುದೇ ಒಂದು ಸೊಬಗು. ಆ ಕಾಲದಲ್ಲಿ ಎಂಟೆತ್ತಿನ ಒಕ್ಕಲುತನದ ಶ್ರೀಮಂತರೂ ಇದ್ದರು.

ಈ ಎಲ್ಲ ಕಾರಣಗಳಿಂದ ರೈತರಿಗೆ ದನಕರುಗಳೇ ಪಂಚಪ್ರಾಣವಾಗಿದ್ದವು. ಅವುಗಳ ಆರೋಗ್ಯದ ಕಡೆಗೂ ಹೆಚ್ಚಿನ ಗಮನ ಕೊಡುತ್ತಿದ್ದರು. ದನಗಳ ಹೊಟ್ಟೆ ಉಬ್ಬಿದಾಗ, ಒಂದು ಪಾವು ಕೊಬ್ಬರಿ ಎಣ್ಣೆಯಲ್ಲಿ ಸೇಂಗಾ ಕಾಳಿನಷ್ಟು ಎಲೆಗೆ ಹಚ್ಚುವ ಸುಣ್ಣವನ್ನು ಸೇರಿಸಿ ಗೊಟ್ಟಾ ಹಾಕುತ್ತಿದ್ದರು. ಉಚಕೊಳ್ಳುವಾಗ (ಭೇದಿ ಹತ್ತಿದಾಗ)ಬಿಳಿ ತುರುಬಿ ಸಸ್ಯದಿಂದ ತಯಾರಿಸಿದ ರಸವನ್ನು ಗೊಟ್ಟ ಹಾಕುವುದು ಸಾಮಾನ್ಯವಾಗಿತ್ತು. ಜ್ವರ ಬಂದರೆ ಆಳವಿ, ಅಮೃತಬಳ್ಳಿಯ ರಸ ಮತ್ತು ಉಪ್ಪು ಸೇರಿಸಿ ಗೊಟ್ಟ ಹಾಕುತ್ತಿದ್ದರು. ನೊಗ ಹೊತ್ತು ಹೆಗಲು ಬಂದಾಗ (ರಕ್ತ ಹೆಪ್ಪುಗಟ್ಟಿ ಹೆಗಲು ಊದಿಕೊಂಡಾಗ) ಮದಗುಣಕಿಯ ರಸ ಹಚ್ಚುತ್ತಿದ್ದರು. ಗಂಟಲು ಉಬ್ಬಿದ್ದರೆ ಹಸಿ ಇಂಗಳ ಮುಳ್ಳಿನಿಂದ ಆ ಜಾಗದಲ್ಲಿ ಮೆತ್ತಗೆ ಹೊಡೆಯುತ್ತಿದ್ದರು. ಆಗ ಕೀವು ಸೋರಿ ಗುಣವಾಗುತ್ತಿತ್ತು. ಬಾಯಿ ಬೇನೆ ಬಂದಾಗ ದನಗಳು ಮೇವು ತಿನ್ನುತ್ತಿದ್ದಿಲ್ಲ. ಆಗ ಹಳ್ಳದಲ್ಲಿನ ಸಣ್ಣ ಮೀನು ತರಿಸಿ ಇತರ ಔಷಧಿ ಜೊತೆ ಸೇರಿಸಿ ಆ ದನಗಳ ಬಾಯಲ್ಲಿ ಹಾಕುತ್ತಿದ್ದರು. ಖುರದ (ಗೊರಸು) ಸಂದಿಯಲ್ಲಿ ಹುಳುಗಳು ಆದಾಗ, ಆ ಜಾಗದಲ್ಲಿ ಗಾಸ್ಲೇಟ್ ಎಣ್ಣೆ (ಕೆರೊಸಿನ್) ಹಾಕಿ ಹುಳಗಳ ಬಾಧೆ ತಪ್ಪಿಸುತ್ತಿದ್ದರು. ರಸ್ತೆ ಮೇಲೆ ಬಂಡಿ ಎಳೆಯುವ ಎತ್ತುಗಳು ಕಾಲುಜಾರಿ ಬೀಳಬಾರದೆಂದು ನಾಲು ಬಡಿಸುತ್ತಿದ್ದರು. ಎರೆ ಭೂಮಿಯಲ್ಲಿ ದುಡಿಯುವ ಎತ್ತುಗಳಿಗೆ ನಾಲು ಬಡಿಯುವ ಅವಶ್ಯಕತೆ ಇರಲಿಲ್ಲ.

ಕಾರ ಹುಣ್ಣಿಮೆ ನಂತರ, ಮೃಗಶಿರ ಮಳೆ ಮುಗಿದ ಮೇಲೆ ಆರಿದ್ರ ಮಳೆ ಪ್ರಾರಭವಾಗುವ ಮಣ್ಣೆತ್ತಿನ ಅಮಾವಾಸ್ಯೆಯ ಸಂದರ್ಭದಲ್ಲಿ, ಮಣ್ಣಿನಿಂದ ಎತ್ತುಗಳನ್ನು ತಯಾರಿಸುತ್ತಿದ್ದೆವು. ಅವುಗಳಿಗೆ ಕುಸಬಿ ಚುಚ್ಚಿ ಸಿಂಗರಿಸುತ್ತಿದ್ದೆವು. ನಂತರ ಎಲ್ಲ ಹುಡುಗರು ಸೇರಿ ಮಣ್ಣೆತ್ತುಗಳನ್ನು ಹಿಡಿದುಕೊಂಡು ಮೆರವಣಿಗೆ ಹೋಗುತ್ತಿದ್ದೆವು.

ಮಣ್ಣೆತ್ತಿನ ಅಮಾವಾಸೆ ದಿನ ಗುಳ್ಳವ್ವ ಕೂಡುತ್ತಾಳೆ. ಇವಳು ಐದು ವಾರ ಇರುತ್ತಾಳೆ. ಗುಳ್ಳವನನ್ನು ಸೀರೆ ಬಳೆ ಕುಂಕುಮದೊಂದಿಗೆ ಸಿಂಗರಿಸುತ್ತಾರೆ. ಹದಿಹರೆಯದ ಹುಡುಗಿಯರು ಇದರಲ್ಲಿ ಹೆಚ್ಚಾಗಿ ಪಾಲ್ಗೊಳ್ಳುವರು. ಅವರ ಜೊತೆ ಗುಳ್ಳವ್ವ ಐದು ವಾರ ಇರುವುದರಿಂದ ಭಾವನಾತ್ಮಕ ಸಂಬಂಧ ಬೆಳೆದಿರುತ್ತದೆ. ಐದನೇ ವಾರದ ಕೊನೆಯ ದಿನ ಹೊಲದಲ್ಲಿ ಹುಗಿಯುವಾಗ ಇಲ್ಲವೆ ಗಿಡದ ಮೇಲೆ ಕೂಡಿಸಿ ಬರುವಾಗ ಬಿಕ್ಕಿಬಿಕ್ಕಿ ಅಳುತ್ತಾರೆ. ಗುಳ್ಳವ್ವ ಕೂಡ ಮಳೆಗೆ ಸಂಬಂಧಿಸಿದ ದೇವತೆಯಾಗಿದ್ದಾಳೆ.

(ಮಣ್ಣೆತ್ತುಗಳ ತಯಾರಿಕೆ)

ಮಳೆಗಾಲದ ಆರಂಭದ ದಿನಗಳಿಂದ ಅವರ ಲಕ್ಷ್ಯವೆಲ್ಲ ಮೋಡಗಳ ಮೇಲೆಯೆ ಇರುತ್ತಿತ್ತು. ರೈತರು ಮೋಡಗಳ ಕುರಿತು ಮಾತನಾಡುತ್ತಿದ್ದುದರಲ್ಲಿ ಬಹಳಷ್ಟು ಮರೆತು ಹೋಗಿದ್ದಕ್ಕೆ ಬೇಸರವಿದೆ.

ಮಿರಗಾ ಹೂಡಿದ ಮೇಲೆ ಮುಂಗಾರು ಮಳೆ ಸಾಕಷ್ಟು ಆಗದಿದ್ದರೆ ರೈತರಲ್ಲಿ ದುಗುಡ ಉಂಟಾಗುತ್ತಿತ್ತು. ಮಳೆಗಾಗಿ ಹೆಣ್ಣುಮಕ್ಕಳು ಗುರ್ಚಿ ಹೊತ್ತುಕೊಂಡು ಬರುತ್ತಿದ್ದರು. ತೆವಿ (ಹಂಚು – ಕಾವಲಿ)ಯ ಮೇಲೆ ಕರ್ಕಿ ಚುಚ್ಚಿದ ಹಸಿ ಮಣ್ಣಿನ ದೊಡ್ಡ ಉಂಡೆಯನ್ನಿಟ್ಟ ಬಳಿಕ ಅದನ್ನು ತಲೆಯ ಮೇಲೆ ಇಟ್ಟುಕೊಂಡ ಬಾಲಕಿ ಮನೆಗಳ ಮುಂದೆ ಗರಗರ ತಿರುಗುತ್ತ “ಗುರ್ಚಿ ಗುರ್ಚಿ ಎಲ್ಲಾಡಿ ಬಂದಿ, ಹಳ್ಳ ಕೊಳ್ಳ ಸುತ್ತಾಡಿ ಬಂದೆ, ಸುರಿ ಮಳೆಯೆ” ಎಂದು ಮುಂತಾಗಿ ಹಾಡುವಾಗ, ಮನೆಯವರು ಅದರ ಮೇಲೆ ಚರಿಗೆ ನೀರು ಸುರಿಯುತ್ತಿದ್ದರು. ಬಾಲಕಿ ತಿರುಗುತ್ತಿರುವುದರಿಂದ ಅವಳ ಮೇಲೆ ನೀರು ಬೀಳದೆ ಸುತ್ತೆಲ್ಲ ಸುರಿಯುತ್ತಿತ್ತು. ಬಾಲಕಿಯ ಜೊತೆಗೆ ಬಂದ ಮಹಿಳೆಗೆ ಮನೆಯವರು ಜೋಳ, ರೊಟ್ಟಿ ಇಲ್ಲವೆ ಹಣ ಕೊಟ್ಟು ಕಳುಹಿಸುತ್ತಿದ್ದರು. ಗುರ್ಚಿ ಆಡಿಸಿದರೆ ಮಳೆ ಬರುತ್ತದೆ ಎಂಬ ನಂಬಿಕೆ ಜನರಲ್ಲಿತ್ತು. ಆಗ ಇದು ಕೂಡ ಜನಪದ ಕಲೆಗಳಲ್ಲಿ ಒಂದಾಗಿ ಬೆಳೆದಿತ್ತು.

(ಗುರುಸಿದ್ಧ ಎಂಬ ಹಾಲುಮತದ ಸಿದ್ಧಪುರುಷ ಕಂಬಳಿ ಬೀಸಿದಾಗ ಮಳೆ ಬರುತ್ತಿತ್ತು ಎಂಬ ನಂಬಿಕೆ ಇದೆ. ಆ ಗುರುಸಿದ್ಧ>ಗುರ್ಸಿ>ಗುರ್ಚಿ ಆಗಿರಬಹುದು. ಹಾಡಿನ ಕೊನೆಯಲ್ಲಿ ಗುರುಸಿದ್ಧನ ಹೆಸರು ಬರುತ್ತದೆಯಾದ್ದರಿಂದ ಹೀಗೆ ಅದು ಗುರ್ಚಿ ಆಗಿರಬಹುದು ಎಂಬ ಚಿಂತನೆ ಇದೆ.)

ಇಂಥದೇ ಇನ್ನೊಂದು ಜನಪದ ಕಲೆ ಎಂದರೆ ಜೋಕುಮಾರಸ್ವಾಮಿ. ಕಬ್ಬಲಿಗ ಸಮಾಜದವರು ಮಣ್ಣಿನ ಅಥವಾ ಕಟ್ಟಿಗೆಯ ಮುಖವನ್ನು ಮಾಡಿ ‘ಜೋಕುಮಾರಸ್ವಾಮಿ’ ಎಂದು ಕರೆದು, ಅದರ ಬಾಯಲ್ಲಿ ಬೆಣ್ಣೆ ತುಂಬುತ್ತಾರೆ. ಆತ ಸಂತಾನದೇವತೆ ಆಗಿರುವುದರಿಂದ ಮಣ್ಣಿನಿಂದ ಅಥವಾ ಕಟ್ಟಿಗೆಯಿಂದ ಶಿಶ್ನವನ್ನು ಮಾಡಿ ಬುಟ್ಟಿಯಲ್ಲಿ ಜೋಕುಮಾರನ ಮುಖದ ಮುಂದೆ ಇಟ್ಟಿರುತ್ತಾರೆ. ಅವೆರಡನ್ನು ಬೇವಿನ ತೊಪ್ಪಲು ತುಂಬಿದ ಬುಟ್ಟಿಯಲ್ಲಿ ಇಟ್ಟು ಮನೆ ಮನೆ ತಿರುಗುತ್ತಾರೆ.

(ಜೋಕುಮಾರನ ಬಾಯಲ್ಲಿ ತುಂಬಿದ ಬೆಣ್ಣೆ ತೆಗೆದು ಪ್ರಸಾದದಂತೆ ಬೇವಿನ ತೊಪ್ಪಲಲ್ಲಿಟ್ಟು ಕೊಡುತ್ತಾರೆ. ಜೋಕುಮಾರ ಸಂತಾನಫಲದ ದೇವತೆಯಾದ ಕಾರಣ ಈ ಬೆಣ್ಣೆಯನ್ನು ತಿಂದರೆ ಮಕ್ಕಳಾಗದ ಹೆಣ್ಣುಮಕ್ಕಳಿಗೆ ಮಕ್ಕಳಾಗುತ್ತವೆ ಎಂಬ ನಂಬಿಕೆ ಇದೆ. ಚಿಕ್ಕಮಕ್ಕಳ ಕಣ್ಣಿನ ರೆಪ್ಪೆಯ ಮೇಲೆ ಆ ಬೆಣ್ಣೆಯನ್ನು ಹಚ್ಚುವುದರಿಂದ ಕಣ್ಣುಬೇನೆ ಬರುವುದಿಲ್ಲ ಎಂದು ಹೇಳುತ್ತಾರೆ. ಬೆಳೆ ಹುಲುಸಾಗಿ ಬೆಳೆಯಲಿ ಎಂದು ಅರಳಿಮರದ ಎಲೆಯಲ್ಲಿ ಪ್ರಸಾದ ರೂಪದಲ್ಲಿ ಬೇವಿನ ತೊಪ್ಪಲು ಸಮೇತ ಜೋಳದ ಕಿಚಡಿಯನ್ನು ಪ್ರಸಾದ ರೂಪದಲ್ಲಿ ರೈತಾಪಿ ಜನರಿಗೆ ಕೊಡುತ್ತಾರೆ. ರೈತರು ಅದನ್ನು ಸ್ವೀಕರಿಸಿ ತಮ್ಮ ಭೂಮಿಯಲ್ಲಿ ಹುಗಿಯುತ್ತಾರೆ. ಹೀಗೆ ಮಾಡುವುದರಿಂದ ಬೆಳೆ ರೋಗಮುಕ್ತವಾಗಿ ಚೆನ್ನಾಗಿ ಬರುವುದು ಎಂಬ ನಂಬಿಕೆ ಹಳ್ಳಿಗರದು.)

(ಅಲ್ಲೀಬಾದಿ ಗ್ರಾಮದ ಜೈಭೀಮನಗರ)

ಗಣೇಶ ಚತುರ್ಥಿ ದಿನ ಗಣೇಶ ಕೂಡುತ್ತಾನೆ. ಮುಂದೆ ಅಷ್ಟಮಿ ದಿನ ಜೋಕುಮಾರ ಬರುತ್ತಾನೆ. ಜೋಕುಮಾರನಿಗೆ ಗಣೇಶನ ದರ್ಶನ ಮಾಡಿಸುವುದಿಲ್ಲ. ಮಳೆ ಕಡಿಮೆಯಾಗಿ ಬೆಳೆ ಬಾಡುವ ಸ್ಥಿತಿಯಲ್ಲಿದ್ದಾಗ ಜೋಕುಮಾರ ಬಂದು ಮಳೆ ತರಿಸುತ್ತಾನೆ ಎಂಬುದು ರೈತರ ಅನಿಸಿಕೆ.

ಕಬ್ಬಲಿಗರ ಮನೆಯಲ್ಲಿ ಹುಟ್ಟುವ ಜೋಕುಮಾರ ಏಳುದಿನ ಇರುತ್ತಾನೆ. ಮುಂದೆ ಆತ ಅಗಸರ ಗಂಡುಳ್ಳ ಬಾಲೆಯನ್ನು ಮೋಹಿಸುತ್ತಾನೆ. ಅಗಸರು ರೊಚ್ಚಿಗೆದ್ದು ಆತನ ಕೊಲೆ ಮಾಡಿ ಹೆಣವನ್ನು ಬೇವಿನ ತೊಪ್ಪಲಲ್ಲಿ ಹಾಕಿ ಹೊಳೆಯಲ್ಲಿ ಎಸೆದು ಮೂರು ದಿನ ಸೂತಕ ಆಚರಿಸುತ್ತಾರೆ ಎಂಬ ದಂತಕಥೆ ಇದೆ.

ಸೀಮೀ ದುರ್ಗವ್ವ ಕೂಡ ಮಳೆ ಬೆಳೆಗೇ ಸಂಬಂಧಿಸಿದವಳಾಗಿದ್ದಾಳೆ. ಕಟ್ಟಿಗೆಯ ಚಿಕ್ಕ ಎತ್ತಿನಗಾಡಿ ಮಾಡಿ, ಅದರೊಳಗೆ ಸೀಮೀ ದುರ್ಗವ್ವನ ಮೂರ್ತಿಯನ್ನು ಕೂಡಿಸುತ್ತಾರೆ. ಮೂರ್ತಿಗೆ ಬಣ್ಣ ಬಣ್ಣದ ಬಟ್ಟೆ ಸುತ್ತುತ್ತಾರೆ. ತಮ್ಮ ಊರಿನಿಂದ ಮುಂದಿನ ಊರಿನ ಸೀಮೆಯವರೆಗೆ ಅದನ್ನು ದಾಟಿಸುತ್ತಾರೆ. ಆ ಮೂಲಕ ಗಾಳಿಯನ್ನು ಮುಂದಿನ ಊರಿಗೆ ಸಾಗಿಸಿದಂತಾಗುತ್ತದೆ. ಹಾಗೆ ಮಾಡುವುದರಿಂದ ಗಾಳಿ ಇಲ್ಲದ ಕಾರಣ ಮೋಡ ಮುಂದೆ ಚಲಿಸದೆ ತಮ್ಮ ಪ್ರದೇಶದಲ್ಲೇ ಮಳೆ ಬೀಳುವುದೆಂದು ಹಳ್ಳಿಗರು ಭಾವಿಸುತ್ತಾರೆ.

ಈ ಸೀಮೀದುರ್ಗವ್ವಳನ್ನು ಊರೊಳಗೆ ತರುವ ಹಾಗಿಲ್ಲ. ತಂದರೆ ಮಳೆ ಆಗುವುದಿಲ್ಲ ಎಂಬ ಚಿಂತೆ ಅವರಿಗೆ ಕಾಡುವುದು. ಮುಂದಿನ ಊರಿನವರು ತಮ್ಮ ಸೀಮೆಗೆ ಬಂದ ಈ ದುರ್ಗವ್ವಳನ್ನು ತಮ್ಮ ಮುಂದಿನ ಗ್ರಾಮದ ಸೀಮೆಗೆ ದಾಟಿಸುತ್ತಾರೆ. ಹೀಗೆ ಸೀಮೀದುರ್ಗವ್ವ ಎಲ್ಲ ಗ್ರಾಮಗಳ ಸೀಮೆ ದಾಟುತ್ತ ಹೋಗುತ್ತಾಳೆ. ಈ ಸೀಮೀದುರ್ಗವ್ವಳ ‘ಅವತಾರ’ ನನ್ನ ಬಾಲ ಮನಸ್ಸಿನಲ್ಲಿ ಭಯ ಹುಟ್ಟಿಸುತ್ತಿತ್ತು.
ದುರ್ಗಮುರ್ಗಿಯವರು ಮುಂಗಾರು ಮಳೆಗಾಲದ ಮುನ್ನಾದಿನಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ. ಸಣ್ಣ ಕಪಾಟಿನಂಥ ಕಟ್ಟಿಗೆಯ ವರ್ಣರಂಜಿತ ಗುಡಿಯೊಳಗೆ ದುರ್ಗೆಯ ಮೂರ್ತಿಯನ್ನಿಟ್ಟು ಹೊತ್ತು ತರುತ್ತಾರೆ. ಹೆಣ್ಣುಮಕ್ಕಳು ಅದರ ಮುಂದೆ ನೀರು ಹಾಕುತ್ತಾರೆ. ದುರ್ಗಮುರ್ಗಿಯ ಹೆಂಡತಿ ಡೋಲು ಬಾರಿಸುತ್ತಾಳೆ. ಒಂದು ಕೈಯಲ್ಲಿ ಛಡಿಯಿಂದ ಕರಕರ ಡೋಲು ತಿಕ್ಕುತ್ತ, ಬಡಿಯುತ್ತ ಕೂಡುತ್ತಾಳೆ. ಗಂಡ ದಪ್ಪನೆಯ ಬಾರುಕೋಲಿನಿಂದ (ಹಂಟರ್‍ನಿಂದ) ಬಡಿದುಕೊಳ್ಳುತ್ತ ಹಿಂಸಾಭಕ್ತಿಯನ್ನು ಪ್ರದರ್ಶಿಸುತ್ತಾನೆ. ಉಗ್ರವಾದ ಮುಖವಾಡ ಹಾಕಿಕೊಂಡು ಕುಣಿಯುತ್ತಾನೆ. ಮಕ್ಕಳಿಗೆ ನಗಿಸುತ್ತಾನೆ, ಮುಖವಾಡದ ಮೂಗಿನಿಂದ ಸುಂಬಳ ತೆಗೆದು ಮಕ್ಕಳ ಮೇಲೆ ಎಸೆಯುವ ನಟನೆ ಮಾಡುತ್ತಾನೆ. ಆಗ ನಾವು ಮಕ್ಕಳು ನಿಜವೆಂದು ತಿಳಿದು ಹಿಂದೆ ಸರಿದು ನಿಲ್ಲುತ್ತಿದ್ದೆವು.

ಇದೆಲ್ಲ ಹಳ್ಳಿಯ ಬೀದಿಯ ಮೇಲೆ ನಡೆಯುವಂಥದ್ದು. ಸುತ್ತಲಿನ ಮನೆಯ ಹೆಣ್ಣುಮಕ್ಕಳು ಮೊರದಲ್ಲಿ ಎಣ್ಣೆ, ಉಪ್ಪು ಮತ್ತು ಜೋಳ ತಂದಿಡುತ್ತಿದ್ದರು. ಆಟ ಮುಗಿದ ನಂತರ ದುರ್ಗಮುರ್ಗಿಯ ಹೆಂಡತಿ ಎಣ್ಣೆಯನ್ನು ಬಾಟಲಿಯಲ್ಲಿ ಹಾಕಿಕೊಂಡು, ಉಪ್ಪನ್ನು ಡಬ್ಬಿಯಲ್ಲಿಟ್ಟುಕೊಂಡು ಜೋಳವನ್ನು ಚೀಲದಲ್ಲಿ ಸುರುವಿ ಗಂಟು ಕಟ್ಟುತ್ತಿದ್ದಳು. ನಂತರ ಮಹಿಳೆಯರು ತಮ್ಮ ಮೊರವನ್ನು ತೆಗೆದುಕೊಳ್ಳುತ್ತಿದ್ದರು.

ದುರ್ಗಮ್ಮ ಮಕ್ಕಳ ರೋಗನಿವಾರಣೆ ಮಾಡುವಳು, ಮಳೆ ಬೆಳೆ ಕೊಡುವಳು ಎಂಬುದನ್ನು ಆ ದುರ್ಗಮುರ್ಗಿ ಒತ್ತಿ ಹೇಳುತ್ತಿದ್ದ. ನಂತರ ಆ ಹೊತ್ತುತಂದ ಕಪಾಟಿನಂಥ ಗುಡಿಯ ಮುಂದೆ ಕುಳಿತು ದುರ್ಗಮ್ಮನ ಕೊರಳಿಗೆ ಹಾಕಿದ ಸರ, ಬೆಳ್ಳಿತೊಟ್ಟಿಲು, ಬೆಳ್ಳಿಯ ಚಿಕ್ಕ ನೀಲಾಂಜನ ಮುಂತಾದವುಗಳನ್ನು ಒಂದೊಂದಾಗಿ ತೋರಿಸುತ್ತ ‘ಮಲ್ಲಪ್ಪ ಗೌಡ ಕೊಟ್ಟಾನೆ’ ಎಂದು ಮುಂತಾಗಿ ಹೇಳುತ್ತಾನೆ. ಆಗ ಅವನ ಹೆಂಡತಿ ಛಡಿಯಿಂದ ಡೋಲು ಬಾರಿಸುತ್ತ ‘ತಾನೆ ತಂದಾನೆ’ ಎಂದು ಹೇಳುತ್ತಾಳೆ. ಹೀಗೆ ಅವನು ಬೇರೆ ಬೇರೆ ವಸ್ತುಗಳನ್ನು ತೋರಿಸುತ್ತ ಪ್ರತಿಯೊಂದಕ್ಕೂ ಬೇರೆ ಬೇರೆ ಶ್ರೀಮಂತರು ಕೊಟ್ಟಿದ್ದಾರೆಂದು ಅವರ ಹೆಸರು ಹೇಳುತ್ತಿರುತ್ತಾನೆ. ಆದರೆ ಪ್ರತಿಸಲವೂ ‘ತಾನೇ ತಂದಾನೆ’ ಎಂದೇ ಅವನ ಹೆಂಡತಿ ಹೇಳುತ್ತಾಳೆ. ಹೀಗೆ ಅವರು ಜನರನ್ನು ರಂಜಿಸುತ್ತಿರುತ್ತಾರೆ. ಅನೇಕರು ದೇವಿಯ ಮುಂದೆ ರೊಕ್ಕ ಇಡುತ್ತಾರೆ.
ಇಂಥ ವಿವಿಧ ಪ್ರಸಂಗಗಳು ಒಳ್ಳೆಯ ಮಳೆ ಬೆಳೆಯ ಉದ್ದೇಶವನ್ನು ಹೊಂದಿದ್ದು ಮಕ್ಕಳ ಬೇನೆ ನಿವಾರಣೆ, ಸಾಂಕ್ರಾಮಿಕ ರೋಗಗಳಿಂದ ಜನರ ರಕ್ಷಣೆ ಮುಂತಾದವುಗಳ ಬಗ್ಗೆ ಜನರಲ್ಲಿ ಭರವಸೆ ಹುಟ್ಟಿಸುವಂಥವುಗಳಾಗಿವೆ.

(ಕಾರಹುಣ್ಣಿಮೆ ಬಣ್ಣ)

ಹಳ್ಳಿಗರ ನಂಬಿಕೆಯ ಲೋಕದಲ್ಲಿ ಇವೆಲ್ಲ ಜೀವಂತವಾಗಿದ್ದು ಇವು, ಜನರ ಭಯಭಕ್ತಿ ಮತ್ತು ಅಭಿರುಚಿಯ ದ್ಯೋತಕವಾಗಿರುತ್ತಿದ್ದವು. ಜೊತೆಗೆ ಹಳ್ಳಿಗರಿಗೆ ಮನರಂಜನೆಯನ್ನೂ ಕೊಡುತ್ತಿದ್ದವು. ಸಿನಿಮಾ, ಟಿವಿ, ಸ್ಮಾರ್ಟ್‌ಫೋನ್ ಮುಂತಾದವುಗಳು ಇಲ್ಲದ ಆ ಕಾಲದಲ್ಲಿ ನಾಟಕ, ಬಯಲಾಟ, ಬಹುರೂಪಿಗಾರರ ಬೀದಿನಾಟಕ ಮುಂತಾದವುಗಳ ನಂತರ ಇಂಥವು ಕೂಡ ಅವರ ಬದುಕಿನ ಅವಿಭಾಜ್ಯ ಅಂಗಗಳಾಗಿದ್ದವು.

ಹೊಲಗಳಲ್ಲಿ ಪೈರು ಬೆಳೆದ ನಿಂತಾಗ, ಎಳ್ಳಮಾವಾಸೆ ದಿನ ರೈತರು ಭೂಮಿತಾಯಿಗೆ ನೈವೇದ್ಯವೆಂದು ಹೊಲದ ತುಂಬೆಲ್ಲ ಹಬ್ಬದ ಅಡುಗೆಯ ಆಹಾರಪದಾರ್ಥಗಳನ್ನು ಚೆಲ್ಲುವ ಸಂಪ್ರದಾಯಕ್ಕೆ ‘ಚರಗ’ ಎಂದು ಕರೆಯುತ್ತಾರೆ. ಈ ಪದ್ಧತಿಯಲ್ಲಿ ಸಕಲ ಜೀವಾತ್ಮರಿಗೆ ಲೇಸ ಬಯಸುವ ತತ್ತ್ವವಿದೆ. ಹೊಲದಲ್ಲಿ ಎರೆಹುಳು, ಇರುವೆ, ಪ್ರಾಣಿ, ಪಕ್ಷಿ ಮುಂತಾದವುಗಳು ಕೂಡ ತಮ್ಮ ಆಹಾರದ ಪಾಲುದಾರರಾಗಬೇಕೆಂಬ ಜೀವಕಾರುಣ್ಯವನ್ನು ಈ ಸಂಪ್ರದಾಯ ಹೊಂದಿದೆ. ಚರಗ ಚೆಲ್ಲಲು ಕುಟುಂಬ, ಬಂಧುಬಳಗ ಮತ್ತು ಗೆಳೆಯರ ಸಮೇತ ಹೊಲಕ್ಕೆ ಹೋಗುತ್ತಾರೆ. ‘ಹುಲ್ ಹುಲಿಗೊ, ಚಲಾಂಬರಿಗೋ’ ಎಂದು ಘೋಷಣೆ ಕೂಗುತ್ತ ಚರಗ ಚೆಲ್ಲುತ್ತಾರೆ.
ಪಂಚಮಹಾಭೂತಗಳ ಪ್ರತೀಕವಾಗಿ ಐದು ಚಿಕ್ಕ ಕಲ್ಲುಗಳನ್ನಿಟ್ಟು ಕುಂಕುಮ ಹಚ್ಚಿ ಪೂಜೆ ಮಾಡುತ್ತಾರೆ.

ಭೂಮಿ ತಾಯಿಗೆ ಪೂಜೆ ಮಾಡಿ ನೈವೇದ್ಯ ಸಲ್ಲಿಸಿದ ನಂತರ ಎಲ್ಲರೂ ಸೇರಿ ಹೊಲದಲ್ಲೇ ಪ್ರಕೃತಿ ಮಡಿಲಲ್ಲಿ ಹಬ್ಬದೂಟ ಮಾಡಿ ಬರುತ್ತಾರೆ.

ಮದುವೆಗಳು, ಜಾತ್ರೆಗಳು, ಬಯಲಾಟಗಳು ದೈಹಿಕ ಶಕ್ತಿಯನ್ನು ಪ್ರದರ್ಶಿಸುವ ಕಸರತ್ತುಗಳು, ಹಬ್ಬಹರಿದಿನಗಳು, ಎತ್ತುಗಳ ಮೆರವಣೆಗೆ ಮತ್ತು ಹೊಲಗಳಲ್ಲಿ ದುಡಿಯುವುದೆಂದರೆ ಹಳ್ಳಿಗರಿಗೆ ಬಹಳ ಇಷ್ಟ. ಈ ಎಲ್ಲ ಕಾರಣಗಳಿಂದಾಗಿ ಹಿಂದಿನ ಕಾಲದ ರೈತರ ಬದುಕು ಅವರದೇ ಆದ ರೀತಿಯಲ್ಲಿ ಪರಿಪೂರ್ಣ ಬದುಕಾಗಿತ್ತು.

(ಚಿತ್ರಗಳು: ಸುನೀಲಕುಮಾರ ಸುಧಾಕರ)