ಕಥಾನಾಯಕಿಯಾದ ನರ್ಮದಾ ಪುರುಕುತ್ಸಾನಿಯ ಪಾತ್ರ ಅತ್ಯಂತ ಸಶಕ್ತವಾಗಿದೆ. ಕನ್ನಡ ಕಾದಂಬರಿ ಲೋಕದಲ್ಲಿ ಶಕ್ತಿಯುತವಾದ ನಾಯಕಿ ಮುಖ್ಯ ಪಾತ್ರದಲ್ಲಿರುವುದು ಸ್ವಲ್ಪ ಅಪರೂಪವೇ. ಪುರುಕುತ್ಸಾನಿಯ ಪಾತ್ರವನ್ನು ಪುಣೇಕರ್ ಅವರು ಕಟ್ಟಿಕೊಟ್ಟಿರುವ ಬಗೆ ಬಹಳ ಚನ್ನಾಗಿದೆ. ಸುತ್ತಮುತ್ತಲಿನ ರಾಜರಂತೆ ವಿಸ್ತರಣಾ ದಾಹವನ್ನು ಹೊಂದದೇ ತನ್ನ ರಾಜ್ಯವನ್ನು ಇರುವಷ್ಟು ಉಳಿಸಿಕೊಂಡು ಅಲ್ಲೇ ದಕ್ಷವಾಗಿ ಆಡಳಿತವನ್ನು ಮಾಡುತ್ತಾಳೆ. ಆದರೆ ತನ್ನ ನಾಡಿನ ಮೇಲೆ ಆಕ್ರಮಣ ಮಾಡಿದ ರಾಜರನ್ನು ಚೂರೂ ಎದೆಗುಂದದೇ ಸದೆಬಡಿಯುತ್ತಾಳೆ. ಎಲ್ಲವೂ ರಾಣಿಯ ಕೈಯಿಂದ ಏಕಾಂಗಿಯಾಗಿ ಮಾಡಲು ಸಾಧ್ಯವಿರದಿರುವುದು ನಿಜವೇ.
“ಓದುವ ಸುಖ” ಅಂಕಣದಲ್ಲಿ ಗಿರಿಧರ್ ಗುಂಜಗೋಡು ಬರಹ
ನಾನು ಪದವಿ ಓದಿದ್ದು ಮೂಡುಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ. ನನ್ನ ಜೀವನದಲ್ಲಿ ಮೂಡುಬಿದಿರೆಯಲ್ಲಿ ಕಳೆದ ಆ ಮೂರು ವರ್ಷಗಳು ನನ್ನ ಬದುಕಿನ ಅತ್ಯುತ್ತಮ ದಿನಗಳಲ್ಲಿ ಒಂದಾಗಿವೆ. ನನ್ನ ಕಾಲೇಜು ಅನೇಕ ವಿಷಯಗಳನ್ನು ಕಲಿಸಿದೆ. ಕಹಿ ಘಟನೆಗಳಿಗಿಂತ ಜಾಸ್ತಿ ಸಿಹಿ ನೆನಪುಗಳ ಕೊಟ್ಟಿದೆ. ಅದರಲ್ಲೂ ಅಲ್ಲಿರಬೇಕಾದರೆ ಹಲವಾರು ಪುಸ್ತಕಗಳು ಓದಲು ಸಿಕ್ಕವು. ಅದುವರೆಗೆ ಓದಿರದ ಅನೇಕ ಲೇಖಕರ ಪುಸ್ತಕಗಳನ್ನು ಅಲ್ಲಿ ಓದಿದೆ.
ಅಲ್ಲಿನ ಕನ್ನಡ ವಿಭಾಗದಲ್ಲಿ ಒಂದು ಪುಟ್ಟ ವಾಚನಾಲಯವಿತ್ತು. ಅಮೂಲ್ಯವಾದ ಹಲವಾರು ಪುಸ್ತಕಗಳು ಅಲ್ಲಿನ ಸಂಗ್ರಹದಲ್ಲಿದ್ದವು. ನನ್ನ ದ್ವಿತೀಯ ಭಾಷೆ ಸಂಸ್ಕೃತವಾಗಿದ್ದರೂ ಕನ್ನಡ ಸಾಹಿತ್ಯ ಆಸಕ್ತಿಯ ವಿಷಯವಾಗಿದ್ದರಿಂದ ಕನ್ನಡ ಉಪನ್ಯಾಸಕರ ಒಡನಾಟವೂ ಚೆನ್ನಾಗಿತ್ತು. ಒಂದು ದಿನ ಕನ್ನಡ ಉಪನ್ಯಾಸಕರಾದ ಹರೀಶ್ ಸರ್ ಅವರಲ್ಲಿ ಪುಸ್ತಕ ಕೇಳಲು ಹೋದಾಗ ಒತ್ತಾಯ ಮಾಡಿ ‘ಅವಧೇಶ್ವರಿ’ ಅನ್ನುವ ಪುಸ್ತಕವನ್ನು ಕೈಗಿಟ್ಟರು. ಅಂದು ‘ಶಂಕರ ಮೊಕಾಶಿ ಪುಣೇಕರ್’ ಮತ್ತು ‘ಅವಧೇಶ್ವರಿ’ ಅನ್ನುವ ಈ ಎರಡೂ ಹೆಸರನ್ನ ಕೇಳಿರಲಿಲ್ಲ. ಆದ ಕಾರಣ ಸರ್ ಇದು ಬೇಡ ದಯವಿಟ್ಟು ಬೇರೆ ಪುಸ್ತಕ ಕೊಡಿ ಅಂತ ಕೇಳಿದಾಗ ‘ಓದೋ ಭಟ್ಟಾ, ತುಂಬಾ ಚನ್ನಾಗಿದೆ’ ಎಂದು ಒತ್ತಾಯ ಮಾಡಿ ಕೈಗಿಟ್ಟರು.
ಮೇಲೆ ಹೇಳಿದಂತೆ ನಾನು ಶಂಕರ ಮೊಕಾಶಿ ಪುಣೆಕರ್ ಅವರ ಹೆಸರನ್ನೇ ಕೇಳಿರಲಿಲ್ಲ. ಸಾಹಿತ್ಯವನ್ನು ಬಹಳ ಗಂಭೀರವಾಗಿ ಓದುವ ಓದುಗರಿಗೆ ಮತ್ತು ಕನ್ನಡ ಸಾಹಿತ್ಯವನ್ನು ಮುಖ್ಯ ವಿಷಯವನ್ನಾಗಿ ತೆಗೆದುಕೊಂಡು ಅಧ್ಯಯನ ಮಾಡುವವರಿಗೆ ಮಾತ್ರ ಅವರ ಹೆಸರು ಚಿರಪರಿಚಿತವೆಂದು ಅಂದುಕೊಳ್ಳುತ್ತೇನೆ. ನಿಯಮಿತವಾಗಿ ಪುಸ್ತಕಗಳನ್ನು ಓದುತ್ತಿದ್ದ ನನ್ನ ಎಷ್ಟೋ ಮಿತ್ರರಿಗೂ ಶಂಕರ ಮೊಕಾಶಿ ಪುಣೆಕರ್ ಅವರ ಹೆಸರಿನ ಪರಿಚಯ ಇರಲಿಲ್ಲ. ಆಮೇಲೆ ಒಂದಿಬ್ಬರು ಹಿರಿಯರಲ್ಲಿ ಕೇಳಿದಾಗಲಷ್ಟೇ ಅವರ ಬಗ್ಗೆ ಸರಿಯಾದ ಪರಿಚಯವಾಗಿದ್ದು. ಅವರ ಇನ್ನೊಂದು ಪ್ರಸಿದ್ಧ ಕೃತಿಯಾದ ಗಂಗವ್ವ ಗಂಗಾಮಾಯಿ ಬಗೆಗೂ ಸುಮಾರು ಕೇಳಿದ್ದೇನೆ. ಒಮ್ಮೆ ಅದನ್ನು ತೆಗೆದುಕೊಳ್ಳಬೇಕೆಂದು ಸಪ್ನಾಕ್ಕೆ ಹೋದರೂ ಪ್ರತಿಗಳು ಲಭ್ಯವಿರಲಿಲ್ಲ. ಮುಂದೆ ಅದನ್ನು ಖರೀದಿಸಿ ಓದುವ ಇಚ್ಛೆಯಿದೆ.
ಬಹುಶಃ ನಾನು ಭೈರಪ್ಪನವರ ಪರ್ವ ಓದಿ ಹೆಚ್ಚು ದಿನಗಳಾಗಿರಲಿಲ್ಲ. ದೈವತ್ವಕ್ಕೇರಿದ ಪೌರಾಣಿಕ ಕಥನಗಳನ್ನು ಸಾಮಾನ್ಯ ಮಾನವರ ಮಟ್ಟಕ್ಕಿಳಿಸಿ ಬರೆವ ಸಾಹಸವನ್ನು ಮೊದಲು ನೋಡಿದ ಪುಸ್ತಕವದು. ಆ ಸಮಯದಲ್ಲಿ ಅದನ್ನು ಅರಗಿಸಿಕೊಳ್ಳಲು ಚೂರು ಸಮಯ ತೆಗೆದುಕೊಂಡಿತ್ತು. ಅವಧೇಶ್ವರಿ ಸ್ವಲ್ಪ ಅದೇ ಪ್ರಕಾರದ ಕಾದಂಬರಿಯಾದುದರಿಂದ ಅರಗಿಸಿಕೊಳ್ಳಲು ಅಂತಹ ಕಷ್ಟವೇನೂ ಆಗಲಿಲ್ಲ.
ನಾನು ಭಾಷೆಯನ್ನು ಶಿಷ್ಟವಾಗಿ ಅಧ್ಯಯನ ಮಾಡಿದವನಲ್ಲ. ವಿಮರ್ಶಕನೂ ಅಲ್ಲ. ಒಂದು ಪುಸ್ತಕವನ್ನು ಸಾಮಾನ್ಯ ಓದುಗನ ದೃಷ್ಟಿಕೋನದಲ್ಲಿ ಹೇಳಿ ಅದನ್ನು ಓದಲು ಆಸಕ್ತಿಯನ್ನು ಕೆರಳಿಸಿ ಕೊಡುವ ಪ್ರಯತ್ನವನ್ನು ಮಾತ್ರ ಮಾಡುತ್ತಾ ಇದ್ದೇನೆ. ಅವಧೇಶ್ವರಿಯ ಕುರಿತು ಧನಾತ್ಮಕವಾದ ಮತ್ತು ಅದನ್ನು ಟೀಕಿಸಿ ಬರೆದ ವಿಮರ್ಶೆಗಳೆರಡೂ ಕನ್ನಡದಲ್ಲಿ ಬಂದಿವೆ. ಇದು ವಿಮರ್ಶೆಯಾಗಿರದೇ ನಾನು ಈ ಪುಸ್ತಕವನ್ನು ಓದಿದ ಅನುಭವ ಅಷ್ಟನ್ನೇ ಹೇಳುತ್ತಿರುವುದು.
Incest ಅಥವಾ ರಕ್ತ ಸಂಬಂಧಿಗಳಲ್ಲಿ ಮದುವೆಯಾಗುವುದು ನಮ್ಮ ಸಮಾಜದಲ್ಲಿ ಹೊಸದೇನಲ್ಲ. ಮಾವನ ಮಗಳನ್ನೋ ಅಥವಾ ಅತ್ತೆಯ ಮಗನನ್ನೋ ಇಲ್ಲಾ ಸೋದರ ಮಾವನನ್ನೋ ಮದುವೆಯಾಗುವುದು ನಮ್ಮಲ್ಲಿ ಬಹಳ ಸಾಮಾನ್ಯ. ಈಗ ಕೂಡಾ ಅಂತಹ ಉದಾಹರಣೆಗಳನ್ನು ಸಾಕಷ್ಟು ನೋಡಬಹುದು. ಸಮಾಜದಲ್ಲಿ ಅದು ಬಹುಮಟ್ಟಿಗೆ ಒಪ್ಪಿತ. ಅದನ್ನು ಸಹಜವಾಗಿಯೇ ಸ್ವೀಕರಿಸುತ್ತಾರೆ. ಆದರೆ ಸ್ವಂತ ಅಣ್ಣ ತಂಗಿ ಅಥವಾ ಅಕ್ಕ ತಮ್ಮ ಮದುವೆಯಾಗುವುದು ಯಾವ ಕಾರಣಕ್ಕೂ ಸ್ವೀಕೃತವಲ್ಲ. ಭಾರತ ಮಾತ್ರವಲ್ಲ, ಹೆಚ್ಚಿನ ಎಲ್ಲಾ ಸಂಸ್ಕೃತಿಗಳಲ್ಲಿ ಮುಖ್ಯ ಧರ್ಮಗಳಲ್ಲಿ ಕಡ್ಡಾಯವಾಗಿ ನಿಷೇಧಿಸಲ್ಪಟ್ಟ ಸಂಬಂಧದಲ್ಲಿ ಬರುತ್ತದೆ. ಆದರೆ ಚರಿತ್ರೆಯಲ್ಲಿ ಅದು ತೀರಾ ಅಪರೂಪದ ಘಟನೆಯೇನಲ್ಲ. ತಮ್ಮ ವಂಶದ ರಕ್ತ ಬೇರೆಯವರೊಡನೆ ಸೇರಬಾರದು ಎಂದು ಹಿಂದೆ ಅನೇಕ ಸಂಸ್ಕೃತಿಗಳಲ್ಲಿ ಈ ಪದ್ಧತಿ ಅನುಸರಿಸುವುದು ಸಾಮಾನ್ಯವಾಗಿತ್ತು. ಕ್ಲಿಯೋಪಾತ್ರ ತನ್ನ ತಮ್ಮನನ್ನೇ ಮದುವೆಯಾಗಿದ್ದನ್ನು ನೆನಪಿಸಿಕೊಳ್ಳಬಹುದು. ಅದೇ ರೀತಿ ಈ ಕಾದಂಬರಿಯಲ್ಲಿ ಕೋಡಾ ಕಥೆಯ ನಾಯಕಿಯಾದ ಅಯೋಧ್ಯೆ ಎಂಬ ಚಿಕ್ಕ ರಾಜ್ಯದ ರಾಜಕುಮಾರಿ ನರ್ಮದಾ ಪುರುಕುತ್ಸಾನಿ ತನ್ನ ಸ್ವಂತ ಅಣ್ಣನಾದ ಪುರಕುತ್ಸನನ್ನೇ ಮದುವೆಯಾಗಬೇಕಾಗಿ ಬರುತ್ತದೆ.
ಉತ್ಸಾಹದ ಚಿಲುಮೆಯಾಗಿದ್ದ, ಚತುರೆಯಾಗಿದ್ದ, ಆಟೋಟದಲ್ಲಿ ಯಾವತ್ತೂ ಮುಂದಿದ್ದ ಪುರಕುತ್ಸಾನಿಯ ಸಾಮರ್ಥ್ಯದ ಮುಂದೆ ಪುರಕುತ್ಸ ಯಾವತ್ತೂ ದುರ್ಬಲನೇ. ಚಿಕ್ಕಂದಿನಿಂದಲೂ ಅಣ್ಣನನ್ನು ಆಟದಲ್ಲಿ ಬಾರಿ ಬಾರಿ ಸೋಲಿಸುತ್ತಿದ್ದ ಕಾರಣ ಅವನಲ್ಲಿ ಒಂತರಾ ಕೀಳರಿಮೆಯೂ ಬಿತ್ತಿದಂತೆ ಆಗಿರುತ್ತದೆ. ಮದುವೆಯಾದ ಕೆಲವೇ ಸಮಯದಲ್ಲಾದ ತಂದೆಯ ಮರಣ ಪುರಕುತ್ಸನಿಗೆ ಅನಾಯಾಸವಾಗಿ ರಾಜ್ಯದ ಸಿಂಹಾಸನವನ್ನು ತಂದುಕೊಡುತ್ತದೆ.
ಆದರೆ ರಾಜ್ಯಕಾರ್ಯದಲ್ಲಿ ಆಸಕ್ತಿಯೇ ಇಲ್ಲದೇ ಬರೀ ಸ್ತ್ರೀ ಸಂಗದಲ್ಲಿ ಮತ್ತು ಲೋಲುಪತೆಯಲ್ಲೇ ಅವನಿಗೆ ಆಸಕ್ತಿ. ರಾಜನೇ ಸರಿಯಿಲ್ಲವೆಂದರೆ ಸಾಮ್ರಾಜ್ಯದ ಹಳಿ ತಪ್ಪುವುದು ಬಹಳ ಸುಲಭ. ರಾಜ್ಯವನ್ನು ಉಳಿಸಿಕೊಳ್ಳಲು ಅನಿವಾರ್ಯವಾಗಿ ರಾಜ್ಯದ ಆಡಳಿತ ಕೈಗೆ ತೆಗೆದುಕೊಳ್ಳುವ ಸಂದರ್ಭ ಬಂದಾಗ ರಾಣಿ ಅದನ್ನು ಹೇಗೆ ನಿಭಾಯಿಸಿ ಆಡಳಿತ ನಡೆಸಿದಳು ಅನ್ನುವುದೇ ಕಾದಂಬರಿಯ ಮುಖ್ಯ ಕಥಾವಸ್ತು.
ಕಥಾನಾಯಕಿಯಾದ ನರ್ಮದಾ ಪುರುಕುತ್ಸಾನಿಯ ಪಾತ್ರ ಅತ್ಯಂತ ಸಶಕ್ತವಾಗಿದೆ. ಕನ್ನಡ ಕಾದಂಬರಿ ಲೋಕದಲ್ಲಿ ಶಕ್ತಿಯುತವಾದ ನಾಯಕಿ ಮುಖ್ಯ ಪಾತ್ರದಲ್ಲಿರುವುದು ಸ್ವಲ್ಪ ಅಪರೂಪವೇ. ಪುರುಕುತ್ಸಾನಿಯ ಪಾತ್ರವನ್ನು ಪುಣೇಕರ್ ಅವರು ಕಟ್ಟಿಕೊಟ್ಟಿರುವ ಬಗೆ ಬಹಳ ಚನ್ನಾಗಿದೆ. ಸುತ್ತಮುತ್ತಲಿನ ರಾಜರಂತೆ ವಿಸ್ತರಣಾ ದಾಹವನ್ನು ಹೊಂದದೇ ತನ್ನ ರಾಜ್ಯವನ್ನು ಇರುವಷ್ಟು ಉಳಿಸಿಕೊಂಡು ಅಲ್ಲೇ ದಕ್ಷವಾಗಿ ಆಡಳಿತವನ್ನು ಮಾಡುತ್ತಾಳೆ. ಆದರೆ ತನ್ನ ನಾಡಿನ ಮೇಲೆ ಆಕ್ರಮಣ ಮಾಡಿದ ರಾಜರನ್ನು ಚೂರೂ ಎದೆಗುಂದದೇ ಸದೆಬಡಿಯುತ್ತಾಳೆ.
ಎಲ್ಲವೂ ರಾಣಿಯ ಕೈಯಿಂದ ಏಕಾಂಗಿಯಾಗಿ ಮಾಡಲು ಸಾಧ್ಯವಿರದಿರುವುದು ನಿಜವೇ. ರಾಣಿಯ ಕೈಯನ್ನು ಮುಖ್ಯವಾಗಿ ಬಲಪಡಿಸಿದವನು ಆಕೆ ಆಪ್ತ ಸಖ, ಸಲಹೆಗಾರ, ಗೂಢಾಚಾರ ಎಲ್ಲವೂ ಆಗಿದ್ದ ತಾರ್ಕ್ಷ್ಯ. ಅವನೊಬ್ಬ ಅದ್ಭುತವಾದ strategist. ಕೇವಲ ಪುರುಕುತ್ಸನಿಗೆ ಹೆಣ್ಣುಗಳ ಪೂರೈಸೋ ಕೆಲಸಕ್ಕೆ ನಿಯೋಜನೆಗೊಂಡಿದ್ದ ತಾರ್ಕ್ಷ್ಯನ ಪ್ರತಿಭೆಯನ್ನು ಗುರುತಿಸಿ ಆತನಿಗೆ ರಾಣಿ ರಾಜಕೀಯ ಕೆಲಸಗಳನ್ನು ಒಪ್ಪಿಸುತ್ತಾ ಹೋಗುತ್ತಾಳೆ. ಅವನ ಬುದ್ಧಿವಂತಿಕೆ ಮತ್ತು ಪರಿಶ್ರಮದಿಂದ ಆತ ರಾಣಿಯ ಅತ್ಯಾಪ್ತನಾಗುತ್ತಾನೆ. ಸುತ್ತಮುತ್ತಲಿನ ರಾಜ ಮಹಾರಾಜರುಗಳು ಕೂಡಾ ತಾರ್ಕ್ಷ್ಯ ಅಂದರೆ ಹೆದರಿ ನಡುಗುವಂತಾಗುತ್ತದೆ. ರಾಜ್ಯದ ಆಡಳಿತದಲ್ಲಿ ನಂ.೨ ಸ್ಥಾನಕ್ಕೆ ಬರುತ್ತಾನೆ.
ಇಡೀ ಕಾದಂಬರಿ ಓದಿದಾಗ ಇವೆರಡೇ ಬಹುಮುಖ್ಯವಾದ ಪಾತ್ರಗಳಂತೆ ಅನ್ನಿಸಿತು. ನಮ್ಮನ್ನು ಆವರಿಸಿಕೊಳ್ಳುವಂತೆ ಮಾಡುವ ಶಕ್ತಿ ಈ ಎರಡು ಪಾತ್ರಕ್ಕಿವೆ. ಇವೆರಡೂ ಕಾದಂಬರಿ ಓದಾದ ಮೇಲೂ ಬಹಳ ದಿನಗಳವರೆಗೆ ಕಾಡುತ್ತವೆ. ಈಗಲೂ ನನಗೆ ಅನೇಕ ಬಾರಿ ಯಾರಾದರೂ ಅತ್ಯಂತ ಸಮರ್ಥ ಆಡಳಿತ ಮಾಡುವ ಸಾಮರ್ಥ್ಯವುಳ್ಳ ಸ್ತ್ರೀಯನ್ನು ನೋಡಿದಾಗ ಪುರುಕುತ್ಸಾನಿಯನ್ನೂ, ಯಾರಾದರೂ ಸಮರ್ಥನಾದ ಸ್ಟ್ರಾಟಜಿಸ್ಟ್ ನೋಡಿದಾಗ ತಾರ್ಕ್ಷ್ಯನ ನೆನಪೂ ಆಗುತ್ತದೆ.
ಇನ್ನುಳಿದಂತೆ ನಿಯೋಗದಿಂದ ಹುಟ್ಟಿದ ರಾಣಿಯ ಮಗ ತ್ರಸದಸ್ಯು, ಆಚಾರ್ಯ ದೇವದೇಮ, ಸಿಂಹಾಭಟ್ಟ, ಕುಟಿಲ ಬುದ್ಧಿಯ ಭೀಮಭಟ್ಟ ಮತ್ತವನ ಮಗ ವೃಷಭಟ್ಟ, ಸೇನಾನಾಯಕ ಕಾಲಿಯಾ, ಭದ್ರಾಯು ಮೊದಲಾದ ಪಾತ್ರಗಳು ಗಮನ ಸೆಳೆಯುತ್ತವೆ.
ತಪ್ಪನ್ನು ಹುಡಕಲೇಬೇಕೆಂದು ಹೊರಟರೆ ಇಲ್ಲೂ ಕೆಲ ಫ್ಲಾಗಳು, ತಪ್ಪುಗಳು ಕಾಣುತ್ತವೆ. ತಪ್ಪು ಹುಡುಕಲೇಬೇಕೆಂದು ಕೂತರೆ ಆ ತರಹದ ತಪ್ಪುಗಳನ್ನು ನಾವು ಯಾವ ಕೃತಿಯಲ್ಲಿ ಬೇಕಾದರೂ ಎತ್ತಿ ತೋರಿಸಬಹುದು. ಆದರೆ ಒಟ್ಟಾರೆಯಾಗಿ ಇದು ಬಹಳ ಇಷ್ಟವಾಯಿತು. ಆ ಸಮಯದಲ್ಲಿ ಯೋಚಿಸಲೂ ಕೂಡಾ ಸಾಧ್ಯವಿಲ್ಲದ, ಹೀಗೇ ಎಂದು ಕಟ್ಟಿಕೊಂಡಿದ್ದ ಎಷ್ಟೋ ನಂಬಿಕೆಗಳನ್ನು ಮೀರಿ ಯೋಚಿಸುವ ಶಕ್ತಿಯನ್ನು ಈ ಪುಸ್ತಕ ನನಗೆ ನೀಡಿತು. ಮುಖ್ಯವಾಗಿ ಪುರಾಣ ವೇದ ಇತ್ಯಾದಿಗಳನ್ನು ಬರೀ ದೈವಿಕವಾಗಿ ನೋಡದೇ ವಿಮರ್ಶಾತ್ಮಕ ದೃಷ್ಟಿಯಿಂದ ನೋಡುವಂತೆ, ರಾಮಾಯಣ ಮಹಾಭಾರತ ಇತ್ಯಾದಿ ಕಥಾಪ್ರಪಂಚದ ಪಾತ್ರಗಳನ್ನು ಸಾಮಾನ್ಯ ಮಾನವರ ರೀತಿಯೂ ಕಲ್ಪಿಸಿಕೊಂಡು ಓದುವುದಕ್ಕೆ ಇದು ಮತ್ತು ಪರ್ವ ಸಹಾಯ ಮಾಡಿದೆ.
ನಾನು ಓದಿದ ನಂತರ ನನ್ನ ಗೆಳೆಯರ ಬಳಗದ ಸಾಹಿತ್ಯಾಸಕ್ತರಿಗೂ ಓದಲು ಹೇಳಿದೆ. ಎಲ್ಲರದ್ದೂ ಅದೇ ಮಾತು ಎಂತಾ ಅದ್ಭುತವಾದ ಕಾದಂಬರಿ ಎಂದು. ನಾವು ಸ್ನೇಹಿತರು ಸೇರಿ ೨-೩ ಬಾರಿ ಈ ಕಾದಂಬರಿಯ ಬಗ್ಗೆ ದೀರ್ಘವಾದ ಚರ್ಚೆ ಮಾಡಿದ ನೆನಪಿದೆ. ಈಗಲೂ ಊರಿಗೆ ಹೋದಾಗ ಮಧ್ಯ ಮಧ್ಯ ಕೆಲ ಪುಟಗಳ ಓದುತ್ತಾ ಇರುತ್ತೇನೆ. ಇತಿಹಾಸದ ಬಗ್ಗೆ ಆಸಕ್ತಿ ಇಲ್ಲದಿರುವವರಿಗೆ ಇದು ಸ್ವಲ್ಪ ಬೋರಿಂಗ್ ಅನ್ನಿಸಬಹುದು. ಆದರೂ ಇದು ನಾನು ಓದಲೇಬೇಕೆಂದು ಒತ್ತಾಯಿಸಿ ಹೇಳುವ ಕಾದಂಬರಿಗಳಲ್ಲಿ ಒಂದು.
ಊರು ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಗುಂಜಗೋಡು. ಸದ್ಯ ಮೈಸೂರಿನಲ್ಲಿ ವಾಸ. ಓದು, ತಿರುಗಾಟ, ಚದುರಂಗ ಇತ್ಯಾದಿ ಇಷ್ಟದ ಆಸಕ್ತಿಗಳು. ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ.