ತೌಳವನಾಡಿನಲ್ಲಿ ಅವಲಕ್ಕಿಗೆ ಬಜಿಲು ಎಂದು ಹೇಳುತ್ತಾರೆ. ಬೆಳಗ್ಗೆ ಅಥವಾ ಸಂಜೆಯ ತಿಂಡಿಗೆ ಸಜ್ಜಿಗೆ-ಬಜಿಲು ಕರಾವಳಿಯಲ್ಲಿ ಬಹಳ ಪ್ರಸಿದ್ಧ. ಸಜ್ಜಿಗೆ ಎಂದರೆ ಉಪ್ಪಿಟ್ಟು. ಇದು ಕರಾವಳಿಯ ಹೊರಗಿನವರಿಗೆ ತಿಳಿದಿರಲಿಕ್ಕಿಲ್ಲ. ಇನ್ನೊಂದು ಅಷ್ಟೇ ಪ್ರಸಿದ್ಧ ತಿಂಡಿಯೆಂದರೆ ಕಡ್ಳೆ-ಬಜಿಲು. ಇವು ಇಲ್ಲಿನ ಹೊಟೇಲುಗಳಲ್ಲೂ ಸಿಗುತ್ತವೆ. ಸಮಾರಂಭಗಳಲ್ಲಿ ಉಳಿದ ತಿಂಡಿಗಳಿಗಿಂತ ಅವಲಕ್ಕಿ-ಸಜ್ಜಿಗೆ ಮಾಡುವುದೇ ಹೆಚ್ಚು. ಏಕೆಂದರೆ, ಇದನ್ನು ತಯಾರಿಸಲು ಕಡಿಮೆ ಶ್ರಮ-ಸಮಯ-ಪರಿಕರ ಸಾಕು. ಮಧ್ಯಾಹ್ನವಾದರೂ ಹಸಿವೆಯಾಗುವುದಿಲ್ಲ. ಹೊಟ್ಟೆಯಲ್ಲಿ ಕಾಂಕ್ರೀಟ್ ಹಾಕಿದಂತೆ ಗಟ್ಟಿ!
ಸಹನಾ ಕಾಂತಬೈಲು ಬರೆದ ಲಲಿತ ಪ್ರಬಂಧಗಳ ಸಂಕಲನ ‘ಇದು ಬರಿ ಮಣ್ಣಲ್ಲ’ ಪುಸ್ತಕದಿಂದ ಒಂದು ಪ್ರಬಂಧ ನಿಮ್ಮ ಓದಿಗೆ
`ಚಹಾದ ಜೊತೆಗೆ ತಿಂಡಿ ಏನು? ಅವಲಕ್ಕಿಯಾದ್ರೆ ನನಗೆ ಬೇಡ’ ಎಂದರು ಗಂಡ. ನಾನು ಅವಲಕ್ಕಿ ಮಾಡಲೆಂದು ಒಗ್ಗರಣೆಗೆ ರೆಡಿ ಮಾಡಿಕೊಳ್ಳುತ್ತಿದ್ದವಳು ಅದನ್ನು ಕೈಬಿಟ್ಟೆ. ಬೆಳಗ್ಗಿನ ಉಪಾಹಾರಕ್ಕೆ ಅವಲಕ್ಕಿ ತಿಂದರೆ ಅದು ಇಡ್ಲಿ, ದೋಸೆ, ಚಪಾತಿ, ಕಡುಬಿನಂತೆ ಹೊಟ್ಟೆ ಗಟ್ಟಿ ಮಾಡಲಿಕ್ಕಿಲ್ಲ; ಸರಿ. ಒಪ್ಪಿದೆ. ಆದರೆ, ಸಂಜೆಯ ತಿಂಡಿಗೂ ಅವಲಕ್ಕಿ ಮಾಡಿದರೆ ಗಂಡ ಮೂಗು ಮುರಿಯುವುದೇಕೆ ಎಂದು ತೀರಾ ಇತ್ತೀಚಿನವರೆಗೂ ನನಗೆ ಗೊತ್ತಿರಲಿಲ್ಲ. ಈಗ ನನ್ನ ಗಮನಕ್ಕೆ ಬಂದ ವಿಷಯವೆಂದರೆ ಅವಲಕ್ಕಿ ಮಾಡಲು ಉಳಿದ ತಿಂಡಿಗೆ ಬೇಕಾದಂತೆ ಹೆಚ್ಚು ಸಮಯ ಬೇಕಾಗುವುದಿಲ್ಲ. ಅವಲಕ್ಕಿ ಹೇಗೂ ಸಿದ್ಧರೂಪದಲ್ಲಿ ಇರುತ್ತದೆ. ಅದಕ್ಕೆ ಸ್ವಲ್ಪ ಕಾಯಿತುರಿ, ಉಪ್ಪು, ಖಾರ ಬೆರೆಸಿ ಒಗ್ಗರಣೆ ಕೊಟ್ಟರೆ ಅವಲಕ್ಕಿ ರೆಡಿಯಾದಂತೆ. ಇಷ್ಟು ಸುಲಭದಲ್ಲಿ ಹೆಂಡತಿಯಾದವಳು ತಿಂಡಿ ತಯಾರಿಸಿಬಿಟ್ಟರೆ ಹೇಗೆ? ಅವಳು ಕೊಂಚ ಶ್ರಮ ಪಡಲಿ ಎಂಬುದು ನನ್ನ ಪತಿದೇವರ ಇಂಗಿತ ಅಷ್ಟೆ; ಬೇರೇನಿಲ್ಲ. ಅವರು ನೆಂಟರ ಮನೆಯಲ್ಲಿ, ಸಮಾರಂಭಗಳಲ್ಲಿ ಅವಲಕ್ಕಿ ಚಪ್ಪರಿಸಿ ತಿನ್ನುವುದನ್ನು ನಾನು ಕಣ್ಣಾರೆ ಕಂಡಿದ್ದೇನೆ.
ಅವಲಕ್ಕಿಗೆ ಸಂಬಂಧಿಸಿದಂತೆ ಒಂದು ಜನಪದ ಕತೆ ಹೀಗಿದೆ: ಒಬ್ಬ ಅಜ್ಜಿಗೆ ಅವಲಕ್ಕಿಯನ್ನು ಮೊಸರಲ್ಲಿ ನೆನೆಸಿ ತಿನ್ನುವುದೆಂದರೆ ಪಂಚಪ್ರಾಣ. ಆದರೆ ಅವಳು ನೆನೆ ಹಾಕಿದ ಅವಲಕ್ಕಿಯನ್ನು ಅವಳ ಮೊಮ್ಮಕ್ಕಳು ತಿಂದು ಬಿಡುತ್ತಿದ್ದರು. ಅವಳಿಗೆ ಏನೂ ಉಳಿಸುತ್ತಿರಲಿಲ್ಲ. ಒಮ್ಮೆ ಅವಳ ಮನೆ ಪಕ್ಕದಲ್ಲಿ ಒಂದು ಹರಿಕಥಾ ಕಾರ್ಯಕ್ರಮವಿತ್ತು. ಮೊಮ್ಮಕ್ಕಳೆಲ್ಲರೂ ಕೇಳಲು ಹೋದರು. ಅವಲಕ್ಕಿ ತಿನ್ನಲು ಇದೇ ಸುಸಂದರ್ಭವೆಂದು ಅಜ್ಜಿ ಮೊಸರಲ್ಲಿ ಅವಲಕ್ಕಿ ನೆನೆ ಹಾಕಿದಳು. ಸ್ವಲ್ಪ ಹೊತ್ತು ಬಿಟ್ಟು ತಿನ್ನಲು ಹೊರಟಾಗ ಹರಿದಾಸರು, `ಇನ್ನೂ ನೆನೆ… ಇನ್ನೂ ನೆನೆ…’ ಎಂದು ಹೇಳುವುದು ಕೇಳಿಸಿತು. `ಓ! ಹರಿದಾಸರಿಗೆ ನಾನು ಅವಲಕ್ಕಿ ನೆನೆ ಹಾಕಿದ್ದು ಗೊತ್ತಾಗಿದೆ. ಇನ್ನೂ ಚೂರು ನೆನೆಯಬೇಕು ಎಂದು ಅವರು ಹೇಳುತ್ತಿದ್ದಾರೆ. ಸ್ವಲ್ಪ ತಡೆದು ತಿನ್ನುತ್ತೇನೆ’ ಎಂದು ತಿನ್ನದೆ ಮುಚ್ಚಿಟ್ಟಳು. ಒಂದೈದು ನಿಮಿಷ ಕಳೆದ ಮೇಲೆ ತಿನ್ನಲು ಹೊರಟಳು. ಆಗ ಹರಿದಾಸರು `ಮತ್ತೂ ನೆನೆ… ಮತ್ತೂ ನೆನೆ’… ಎಂದು ಹೇಳುವುದು ಕೇಳಿತು. ಹಾಗಾದರೆ, ಇನ್ನೂ ಸ್ವಲ್ಪ ನೆನೆಯಲಿ ಎಂದು ಅಂದುಕೊಳ್ಳುತ್ತಿರುವಾಗಲೇ ಹರಿಕಥೆ ಮುಗಿಸಿ ಮೊಮ್ಮಕ್ಕಳು ಓಡೋಡಿ ಬಂದರು. ಪೂರ್ತಿ ಅವಲಕ್ಕಿಯನ್ನು ಕಬಳಿಸಿಯೇ ಬಿಟ್ಟರು.
ವಾಸ್ತವವಾಗಿ ಹರಿದಾಸರು `ಇನ್ನೂ ನೆನೆ… ಇನ್ನೂ ನೆನೆ… ಹರಿಯ, ಮತ್ತೂ ನೆನೆ… ಮತ್ತೂ ನೆನೆ… ಹರಿಯ’ ಎಂದು ಹೇಳಿದ್ದರು. ಅವಲಕ್ಕಿ ಮೊಮ್ಮಕ್ಕಳ ಪಾಲಾಗಲು ಕಾರಣ ಇನ್ನೂ ನೆನೆ, ಮತ್ತೂ ನೆನೆ ಮಾತ್ರ ಕೇಳಿಸಿ ಹರಿಯ ಎಂಬ ಶಬ್ದ ಅಜ್ಜಿಯ ಕಿವಿಗೆ ಬೀಳದೆ ಇದ್ದದ್ದು.
ಅವಲಕ್ಕಿಗೆ ಬನ್ನಂಕಾಯಿ ಹಾಕಿ ತಿಂದರೆ ಶಕ್ತಿವರ್ಧಕ ಎಂದು ನಮ್ಮ ಹಳ್ಳಿ ಕಡೆ ಹೇಳುತ್ತಾರೆ. ಬನ್ನಂಕಾಯಿ ಎಂದರೆ ಎಳನೀರಿಗಿಂತ ತುಸು ಹೆಚ್ಚು ಬಲಿತ ತೆಂಗಿನಕಾಯಿ. ನಾನು ಚಿಕ್ಕವಳಿರುವಾಗ ನಮ್ಮ ಅಡಿಕೆ ತೋಟ ಕಾವಲು ಕಾಯುವ ಕೆಲಸ ಮಾಡುತ್ತಿದ್ದ ಗುಡ್ಡಬ್ಯಾರಿ ದಿನಾ ಬೆಳಿಗ್ಗೆ ಹತ್ತು ಗಂಟೆಗೆ ಅರ್ಧ ಸೇರು ಅವಲಕ್ಕಿ, ಒಂದು ಬನ್ನಂಕಾಯಿ, ಒಂದು ತುಂಡು ಬೆಲ್ಲ ತಿನ್ನುತ್ತಿದ್ದ. ಅವಲಕ್ಕಿ, ಬೆಲ್ಲವನ್ನು ತಾಯಿ ಕೊಡುತ್ತಿದ್ದರು. ಬನ್ನಂಕಾಯಿಯನ್ನು ಅವನೇ ತೋಟದಿಂದ ಹೆಕ್ಕಿ ತರುತ್ತಿದ್ದ. ಬಿದ್ದ ಬನ್ನಂಕಾಯಿ ಸಿಗದಿದ್ದರೆ ಮರ ಹತ್ತಿ ಕೀಳುತ್ತಿದ್ದ. ಏಳು ಮದುವೆಯಾಗಿ ಐವತ್ತು ಮಕ್ಕಳ ತಂದೆಯಾಗಿದ್ದರೂ, ವಯಸ್ಸು ತೊಂಬತ್ತು ದಾಟಿದಾಗಲೂ ಕಲ್ಲುಗುಂಡಿನ ಹಾಗೆ ಇದ್ದ. ಆ ವಯಸ್ಸಲ್ಲೂ ನನ್ನ ತಾಯಿಗೆ ಉಪ್ಪಿನಕಾಯಿ ಹಾಕಲು ಮಾವಿನಮಿಡಿ ಕೊೈದು ಕೊಡುತ್ತಿದ್ದ. ಆತ ನೂರು ವರ್ಷ ಚೆನ್ನಾಗಿ ಬದುಕಿದ್ದ. ತನ್ನ ಆರೋಗ್ಯದ ಗುಟ್ಟು ನಿತ್ಯ ಬನ್ನಂಕಾಯಿ ಹಾಕಿದ ಅವಲಕ್ಕಿ ತಿನ್ನುವುದೆಂದು ಅವನು ಹೇಳುತ್ತಿದ್ದ. ಹಿಂದೆಯೆಲ್ಲ ಕರಾವಳಿಯಲ್ಲಿ ಕಂಬಳದ ಕೋಣ ಓಡಿಸುವವರು ಅವಲಕ್ಕಿ-ಬನ್ನಂಕಾಯಿ ತಿನ್ನುತ್ತಿದ್ದರಂತೆ. ಕೋಣನ ಜತೆ ಓಡುವ ಬಲ ಇದನ್ನು ತಿಂದೇ ಅವರಿಗೆ ಬರುತ್ತಿದ್ದುದಂತೆ.
ಬೆಳಗ್ಗೆ ಬೇಗ ಪ್ರಯಾಣ ಕೈಗೊಳ್ಳಲು ಇದ್ದರೆ ಅವಲಕ್ಕಿಯಷ್ಟು ಸುಲಭದಲ್ಲಿ ಒದಗುವ ತಿಂಡಿ ಬೇರೆ ಇರಲಿಕ್ಕಿಲ್ಲ. ಹಿಂದಿನ ಕಾಲದಲ್ಲಿ ವಾಹನ ಸೌಕರ್ಯ ಈಗಿನಂತೆ ಇರಲಿಲ್ಲ. ನಿಯಮಿತ ಬಸ್ ಇರುತ್ತಿದ್ದುದರಿಂದ ನನ್ನ ಅಜ್ಜಿ ಕೆಲವು ಮೈಲುಗಳ ದೂರದಲ್ಲಿರುವ ಅವಳ ತವರು ಮನೆಗೆ ಹೋಗಬೇಕಾದರೆ ಮುಂಜಾನೆ ಐದು ಗಂಟೆಗೆಲ್ಲ ಹೊರಟರೂ ತಲುಪುವಾಗ ಸಾಯಂಕಾಲ ಆಗುತ್ತಿತ್ತಂತೆ. ಹಾಗಾಗಿ ಹೊರಡುವ ಮೊದಲು ಅವಲಕ್ಕಿಗೆ ಮೊಸರು ಬೆರೆಸಿ ತಿನ್ನುತ್ತಿದ್ದಳಂತೆ. ಹಾಗೆ ತಿಂದರೆ ಬೇಗನೆ ಹಸಿವು, ಬಾಯಾರಿಕೆ, ಆಯಾಸ ಆಗುತ್ತಿರಲಿಲ್ಲವಂತೆ. ತಾನು ಮಾತ್ರವಲ್ಲ ಅಂದು ಹೆಚ್ಚಿನವರು ಪ್ರಯಾಣ ಕಾಲದಲ್ಲಿ ಅವಲಕ್ಕಿ-ಮೊಸರು ತಿಂದೇ ಹೊರಡುತ್ತಿದ್ದರು ಎಂಬುದು ಅಜ್ಜಿಯ ಮಾತು. ಇದು ಅವಲಕ್ಕಿಗಿರುವ ಶಕ್ತಿ!
ಇಷ್ಟು ಸುಲಭದಲ್ಲಿ ಹೆಂಡತಿಯಾದವಳು ತಿಂಡಿ ತಯಾರಿಸಿಬಿಟ್ಟರೆ ಹೇಗೆ? ಅವಳು ಕೊಂಚ ಶ್ರಮ ಪಡಲಿ ಎಂಬುದು ನನ್ನ ಪತಿದೇವರ ಇಂಗಿತ ಅಷ್ಟೆ; ಬೇರೇನಿಲ್ಲ. ಅವರು ನೆಂಟರ ಮನೆಯಲ್ಲಿ, ಸಮಾರಂಭಗಳಲ್ಲಿ ಅವಲಕ್ಕಿ ಚಪ್ಪರಿಸಿ ತಿನ್ನುವುದನ್ನು ನಾನು ಕಣ್ಣಾರೆ ಕಂಡಿದ್ದೇನೆ.
ತೌಳವನಾಡಿನಲ್ಲಿ ಅವಲಕ್ಕಿಗೆ ಬಜಿಲು ಎಂದು ಹೇಳುತ್ತಾರೆ. ಬೆಳಗ್ಗೆ ಅಥವಾ ಸಂಜೆಯ ತಿಂಡಿಗೆ ಸಜ್ಜಿಗೆ-ಬಜಿಲು ಕರಾವಳಿಯಲ್ಲಿ ಬಹಳ ಪ್ರಸಿದ್ಧ. ಸಜ್ಜಿಗೆ ಎಂದರೆ ಉಪ್ಪಿಟ್ಟು. ಇದು ಕರಾವಳಿಯ ಹೊರಗಿನವರಿಗೆ ತಿಳಿದಿರಲಿಕ್ಕಿಲ್ಲ. ಇನ್ನೊಂದು ಅಷ್ಟೇ ಪ್ರಸಿದ್ಧ ತಿಂಡಿಯೆಂದರೆ ಕಡ್ಳೆ-ಬಜಿಲು. ಇವು ಇಲ್ಲಿನ ಹೊಟೇಲುಗಳಲ್ಲೂ ಸಿಗುತ್ತವೆ. ಸಮಾರಂಭಗಳಲ್ಲಿ ಉಳಿದ ತಿಂಡಿಗಳಿಗಿಂತ ಅವಲಕ್ಕಿ-ಸಜ್ಜಿಗೆ ಮಾಡುವುದೇ ಹೆಚ್ಚು. ಏಕೆಂದರೆ, ಇದನ್ನು ತಯಾರಿಸಲು ಕಡಿಮೆ ಶ್ರಮ-ಸಮಯ-ಪರಿಕರ ಸಾಕು. ಮಧ್ಯಾಹ್ನವಾದರೂ ಹಸಿವೆಯಾಗುವುದಿಲ್ಲ. ಹೊಟ್ಟೆಯಲ್ಲಿ ಕಾಂಕ್ರೀಟ್ ಹಾಕಿದಂತೆ ಗಟ್ಟಿ!
ಅವಲಕ್ಕಿ ಬಳಸಿ ಎಷ್ಟೆಲ್ಲ ವಿಧದ ತಿಂಡಿಗಳನ್ನು ಮಾಡಬಹುದು! ಒಂದೊಂದು ತಿಂಡಿಗೂ ಇನ್ನೊಮ್ಮೆ, ಮತ್ತೊಮ್ಮೆ ತಿನ್ನಬೇಕೆನಿಸುವ ರುಚಿ! ಅವಲಕ್ಕಿ ಹೋಳಿಗೆ, ಅವಲಕ್ಕಿ ಪಾಯಸ, ಅವಲಕ್ಕಿ ದೋಸೆ, ಅವಲಕ್ಕಿ ಲಾಡು, ಅವಲಕ್ಕಿ ಹಪ್ಪಳ, ಅವಲಕ್ಕಿ ಚಟ್ನಿ, ಅವಲಕ್ಕಿ ಸಂಡಿಗೆ, ಅವಲಕ್ಕಿ ಉಸುಲಿ, `ಸಿ’ ಅವಲಕ್ಕಿ, ಒಗ್ಗರಣೆ ಅವಲಕ್ಕಿ… ಪಟ್ಟಿ ನೋಡಿ ಬಾಯಲ್ಲಿ ನೀರೂರದಿದ್ದರೆ ಮತ್ತೆ ಹೇಳಿ. ದೋಸೆ, ಇಡ್ಲಿಗೆ ರುಬ್ಬುವಾಗ ಒಂದು ಹಿಡಿ ಅವಲಕ್ಕಿಯನ್ನು ಸೇರಿಸಿದರೆ ಅದು ಹೂವಿನಂತೆ ಮೆತ್ತಗಾಗುತ್ತದೆ. ನನ್ನ ಅತ್ತೆ ಹೇಳುತ್ತಿದ್ದರು, `ಹಿಂದಿನ ಕಾಲದಲ್ಲಿ ಬಡತನ ಜಾಸ್ತಿ ಇತ್ತು. ಮದುವೆ, ಮುಂಜಿ, ಶ್ರಾದ್ಧ, ಪೂಜೆ ಇತ್ಯಾದಿ ಕಾರ್ಯಕ್ರಮಗಳಿಗೆ ಭಕ್ಷ್ಯವಾಗಿ ಹೋಳಿಗೆ, ಲಾಡಿನ ಬದಲು ಅವಲಕ್ಕಿ ಮನಾರ ಎಂಬ ಸಿಹಿತಿಂಡಿಯನ್ನು ಬಳಸುತ್ತಿದ್ದರು’ ಎಂದು. ಅವಲಕ್ಕಿಯನ್ನು ಎಣ್ಣೆಯಲ್ಲಿ ಕರಿದು ಸಕ್ಕರೆ ಪಾಕಕ್ಕೆ ಹಾಕಿ ಮೇಲಿನಿಂದ ಒಣ ಶುಂಠಿ ಅಥವಾ ಏಲಕ್ಕಿ ಪುಡಿ ಉದುರಿಸಿದರೆ ಅವಲಕ್ಕಿ ಮನಾರ ತಯಾರು. ನನ್ನ ಅಮ್ಮನೂ ನಾವು ಮಕ್ಕಳಿರುವಾಗ ಅವಲಕ್ಕಿ ಮನಾರ ತಯಾರಿಸಿ ಕೊಡುತ್ತಿದ್ದಳು. `ಬಲ್ಲವರೇ ಬಲ್ಲರು ಬೆಲ್ಲದ ಸವಿಯ’ ಎಂಬಂತೆ ಇದರ ರುಚಿಯನ್ನು ತಿಂದೇ ಸವಿಯಬೇಕು.
ನನ್ನ ಅಮ್ಮ ಮುಟ್ಟಾದ ದಿನಗಳಲ್ಲಿ ಮೂರು ದಿನ ಹೊರಗೆ ಕೂರುತ್ತಿದ್ದಳು. ಆ ಸಮಯದಲ್ಲಿ ಅಪ್ಪನೇ ಅಡುಗೆ ಮಾಡುತ್ತಿದ್ದದ್ದು. ಮೂರು ದಿನವೂ ಅಪ್ಪ ಮಾಡುತ್ತಿದ್ದ ತಿಂಡಿ ಅವಲಕ್ಕಿಯೊಂದೇ. ಕಾಗೆ ಮುಟ್ಟಿದರೆ ಮುಟ್ಟಾಗುವುದು ಎಂದು ಅಮ್ಮ ಹೇಳುತ್ತಿದ್ದಳು. ಅಮ್ಮ ಮುಟ್ಟಾಗಿರುವಾಗ ಅವಲಕ್ಕಿ ತಿಂದೂ ತಿಂದೂ ಸಾಕಾಗಿ ನಾವು ಮಕ್ಕಳು `ಕಾಗೆ ಬರುವಾಗ ನಿನಗೆ ಅದಕ್ಕೆ ಮುಟ್ಟಲು ಸಿಗದ ಹಾಗೆ ಓಡಲು ಏನಾಗಿತ್ತು?’ ಎಂದು ಅವಳನ್ನು ಬೈಯುತ್ತಿದ್ದೆವು. ಆಗೆಲ್ಲ ಅವಳು ನಕ್ಕು ಬಿಡುತ್ತಿದ್ದಳು. ಉತ್ತರ ಕೊಡಲು ಹೋಗುತ್ತಿರಲಿಲ್ಲ.
ಬೆಲ್ಲ, ಕಾಯಿತುರಿ ಬೆರೆಸಿದ ಅವಲಕ್ಕಿಯನ್ನು ದೇವರಿಗೆ ನೈವೇದ್ಯವಾಗಿ ಬಳಸುತ್ತಾರ. ‘ಆಚೆಮನೆ ಸುಬ್ಬಮ್ಮನವರದು ಏಕಾದಶಿ ಉಪವಾಸ. ಏನೋ ಸ್ವಲ್ಪ ತಿಂತಾರಂತೆ ಅವಲಕ್ಕಿ, ಉಪ್ಪಿಟ್ಟು, ಪಾಯಸ’ ಎಂಬ ಕವಿವಾಣಿಯಂತೆ ಅವಲಕ್ಕಿ ತಿಂದು ಉಪವಾಸ ವ್ರತ ಕೈಗೊಳ್ಳುವವರು ಇದ್ದಾರೆ. ಅವಲಕ್ಕಿ ಶುಭಕಾರ್ಯಗಳಿಗೂ ಬೇಕು; ಅಶುಭ ಕಾರ್ಯಗಳಿಗೂ ಬೇಕು. ಕರಾವಳಿ, ಮಲೆನಾಡಿನ ಹಲವು ಸಮುದಾಯಗಳಲ್ಲಿ ಸತ್ತವರಿಗೆ ಅವುಲು ಹಾಕುವುದು, `ಬಜಿಲು ಪಾಡುನೆ’ ಎಂಬ ಸಂಪ್ರದಾಯವಿದೆ. ಅದೆಂದರೆ ಸತ್ತು ಒಂದು ವರ್ಷದೊಳಗೆ ದೀಪಾವಳಿಯಂದು ಕುಟುಂಬಸ್ಥರು, ಬಂಧುಗಳು, ನೆರೆಹೊರೆಯವರು ಬಾಳೆಹಣ್ಣು, ಬೆಲ್ಲ, ಅವಲಕ್ಕಿ ಜೊತೆ ಸತ್ತವರ ಮನೆಗೆ ಬಂದು ಸತ್ತವರಿಗೆ(ಹೆಣ್ಣಿಗೆ ಅಮಾವಾಸ್ಯೆಯಂದು, ಗಂಡಿಗೆ ಪಾಡ್ಯದಂದು) ಅವುಗಳನ್ನು ಬಡಿಸುವುದು ಮತ್ತು ಬಂದವರೆಲ್ಲರೂ ಪ್ರಸಾದದ ರೂಪದಲ್ಲಿ ಆ ಅವಲಕ್ಕಿಯನ್ನು ಸೇವಿಸುವುದು.
ಅರಳು, ಮಂಡಕ್ಕಿಯಂತೆ ಅವಲಕ್ಕಿಯೂ ಭತ್ತದ ಉತ್ಪನ್ನ. ಹಿಂದೆ ಮನೆಗಳಲ್ಲೇ ಭತ್ತವನ್ನು ರಾತ್ರಿ ನೆನೆಸಿ ಬೆಳಿಗ್ಗೆ ಬೇಯಿಸಿ, ಒಣಗಿಸಿದ ಮೇಲೆ ಸಣ್ಣ ಒರಳಿನಲ್ಲಿ ಕುಟ್ಟಿ ಅವಲಕ್ಕಿ ತಯಾರಿಸುತ್ತಿದ್ದರಂತೆ. ಈಗ ಕುಟ್ಟುವ ಕೆಲಸವಿಲ್ಲ. ಎಲ್ಲ ಮಿಷನ್ ಮೇಡ್! ಅವಲಕ್ಕಿಯಲ್ಲೂ ಎಷ್ಟು ವಿಧ! ತೆಳು ಅವಲಕ್ಕಿ, ಪೇಪರ್ ಅವಲಕ್ಕಿ, ದಪ್ಪ ಅವಲಕ್ಕಿ… ಹೀಗೆ.
ಮನೆಗೆ ಅತಿಥಿಗಳು ಬಂದಾಗ ದಿಢೀರೆಂದು ಸಹಾಯಕ್ಕೊದಗುವ ಅವಲಕ್ಕಿಯನ್ನು ಕಂಡುಹಿಡಿದ ಮಹಾನುಭಾವ ಯಾರು ಎಂದು ಗೊತ್ತಿಲ್ಲದಿದ್ದರೂ ಅವಲಕ್ಕಿ ಹೊಸ ಕಾಲದ ಆವಿಷ್ಕಾರವಂತೂ ಅಲ್ಲ; ದ್ವಾಪರಯುಗದಲ್ಲೇ ಇತ್ತು ಎಂಬುದಕ್ಕೆ ಉದಾಹರಣೆ ಮಹಾಭಾರತದಲ್ಲಿ ಬರುವ ಶ್ರೀಕೃಷ್ಣ – ಸುದಾಮನ ಕತೆ. ಅವಲಕ್ಕಿ ಮಹಿಮೆಯ ಈ ಕತೆ ಹಲವರಿಗೆ ಗೊತ್ತಿರುವಂತದ್ದೇ ಆದರೂ ಅದನ್ನು ಉಲ್ಲೇಖಿಸದಿದ್ದರೆ ಈ ಬರಹ ಪೂರ್ಣವಾಗಲಿಕ್ಕಿಲ್ಲ. ಈ ಕತೆ ಗೆಳೆತನಕ್ಕೆ ಬಡತನ-ಸಿರಿತನವೆಂಬ ಭೇದವಿಲ್ಲ ಎಂಬುದಕ್ಕೆ ಉದಾಹರಣೆಯಾದರೂ ಅವಲಕ್ಕಿ ಶ್ರೀಕೃಷ್ಣನಿಗೆ ಪ್ರಿಯವಾದ ತಿಂಡಿಯಾಗಿತ್ತು ಮತ್ತು ಅದು ಬಡವರ ತಿನಿಸು ಎಂಬುದು ಇದರಿಂದ ಗೊತ್ತಾಗುತ್ತದೆ.
ಹೀಗೆ ದ್ವಾಪರಯುಗದಷ್ಟು ಹಳೆಕಾಲದಲ್ಲಿದ್ದ ಅವಲಕ್ಕಿ ಬಹುರೂಪಿಯಾಗಿ ವಿಸ್ತಾರಗೊಳ್ಳುತ್ತ ಇವತ್ತಿನವರೆಗೆ ಜೀವಂತವಾಗಿರುವುದು ಸೋಜಿಗವಾಗಿದೆ.
(ಕೃತಿ: ಇದು ಬರಿ ಮಣ್ಣಲ್ಲ (ಲಲಿತ ಪ್ರಬಂಧಗಳು), ಲೇಖಕರು: ಸಹನಾ ಕಾಂತಬೈಲು, ಪ್ರಕಾಶಕರು: ಅಹರ್ನಿಶಿ ಪ್ರಕಾಶನ, ಬೆಲೆ: 120/-)
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ