ನಾಲ್ಕು ಗಂಟೆಗಳ ಆಕಾರದ ದಿಬ್ಬಗಳು ಪ್ರಾರ್ಥನಾ ಮಂದಿರದ ನಾಲ್ಕು ಮೂಲೆಗಳನ್ನು ಆಕ್ರಮಿಸಿಕೊಂಡಿವೆ. ಮಾನವನ ದೇಹದಲ್ಲಿನ ಪ್ರತಿಯೊಂದು ಎಲುಬಿನ/ಮೂಳೆಗಳ ಗೊಂಚಲುಗಳು ಕಮಾನುಗಳನ್ನು ಆವರಿಸಿಕೊಂಡಿರುವ ತಲೆಬುರುಡೆಗಳ ಮಾಲೆಗಳೊಂದಿಗೆ ಗುಂಬದ ಮಧ್ಯಭಾಗದಲ್ಲಿ ನೇತಾಡುತ್ತಿವೆ. ಇದೇ ರೀತಿಯ ತಲೆಬುರುಡೆ ಮಾಲೆಗಳು ಚರ್ಚ್‌ನ ಬಲಿಪೀಠದ ಸುತ್ತಲು ಮತ್ತು ದೈತ್ಯಾಕಾರದ ಹೌಸ್ ಆಫ್ ಶ್ವಾರ್ಜೆನ್‌ಬರ್ಗ್‌ನ ರಾಜವಂಶದ ಲಾಂಛನವನ್ನು (ಜರ್ಮನ್ ಮತ್ತು ಜೆಕ್-ಬೊಹೆಮಿಯಾ) ಫ್ರಾಂಟಿಸೆಕ್‌ರಿಂಟ್ ಎಂಬ ಬಡಗಿ ಪ್ರವೇಶದ್ವಾರದ ಗೋಡೆಯ ಮೇಲೆ ಮೂಳೆಗಳಲ್ಲಿ ಬಿಡಿಸಿದ್ದಾನೆ.
ಡಾ. ಎಂ. ವೆಂಕಟಸ್ವಾಮಿ ಬರೆಯುವ ಚೆಕಿಯಾ ದೇಶದ ಪ್ರವಾಸ ಕಥನದ ಮೂರನೆಯ ಭಾಗ ಇಲ್ಲಿದೆ

ಕಮ್ಯುನಿಸಂ ಮ್ಯೂಸಿಯಂ

ಆ ದಿನ ಶನಿವಾರ ನಾನೂ ಕ್ರಾಂತಿ ಜಿಟಿಜಿಟಿ ಮಳೆಯಲ್ಲೇ ಪ್ರೇಗ್ ಮಧ್ಯ ಇರುವ `ಕಮ್ಯುನಿಸಂ ಮ್ಯೂಸಿಯಂ’ ನೋಡಲು ಹೋದೆವು. ದೊಡ್ಡ ಕಟ್ಟಡ, ಪ್ರವೇಶ ದ್ವಾರದಲ್ಲಿ ಒಬ್ಬಾತ ಕುಳಿತಿದ್ದು ಯಾರೂ ಇರಲಿಲ್ಲ. ಕ್ರಾಂತಿ, ಮೃದುವಾಗಿ `ಟು ಟಿಕೆಟ್ಸ್, ಎನಿ ಕನ್ಷೆಷನ್ ಫಾರ್ ಸಿನಿಯರ್ ಸಿಟಿಜನ್?’ ಎಂದಾಗ ಆತ `ಎಸ್’ ಎಂದ. ಒಂದು ಸಾವಿರ ಕೊರುನಾ ನೋಟು ಕೊಟ್ಟಾಗ 480 ಮತ್ತು 420 ಕೊರುನಾಗಳ ಎರಡು ಟೆಕೆಟ್ಸ್ ಕೊಟ್ಟು 100 ಕೊರುನಾ ವಾಪಸ್ ಕೊಟ್ಟ. ಒಳಗೆ ಹೋದರೆ ಅಚ್ಚುಕಟ್ಟಾಗಿದ್ದ ಸಣ್ಣ ಗ್ಯಾಲರಿ ಒಳಗೆ ಒಂದಷ್ಟು ಹಳೆ ವಾಹನಗಳು, ವ್ಲಾದಿಮಿರ್ ಲೆನಿನ್ ಮತ್ತು ಜೋಸೆಫ್ ಸ್ಟಾಲಿನ್ ಚಿತ್ರಗಳು ಮತ್ತು ಕಮ್ಯುನಿಸ್ಟ್ ಇತಿಹಾಸದ ಬಗ್ಗೆ ಪ್ರಿಂಟೆಡ್ ಗೋಡೆ ಬರಹಗಳು ವಿಶೇಷವಾಗಿ ರಷ್ಯಾ ಕ್ರಾಂತಿ ಮತ್ತು ರಷ್ಯಾ ಜೆಕ್‌ಅನ್ನು ವಶಪಡಿಸಿಕೊಂಡಿದ್ದರ ಬಗ್ಗೆ ಬರೆಯಲಾಗಿತ್ತು. ಒಳಗೆ ಒಂದಷ್ಟು ರಷ್ಯಾದವರು? ಮತ್ತು ಯುರೋಪಿಯನ್ನರು ಗಂಭೀರವಾಗಿ ಗೋಡೆ ಬರಹಗಳನ್ನು ಓದುತ್ತಿದ್ದರು. ಅವರ ನಡುವೆ ಕೆಲವು ವಿದ್ಯಾರ್ಥಿಗಳು ಮತ್ತು ಅಧ್ಯಾಪಕರುಗಳು ಇದ್ದರು.

1968ರ ಆಗಸ್ಟ್ 20ರಂದು ರಷ್ಯನ್ ಸೈನ್ಯ ಯಾವುದೇ ಸೂಚನೆಗಳಿಲ್ಲದೆ ಟ್ಯಾಂಕರುಗಳ ಸಮೇತ ಚೆಕೊಸ್ಲೊವಾಕಿಯಾ (ಆಗ ಚೆಕಿಯಾ ಮತ್ತು ಸ್ಲೊವಾಕಿಯಾ ಎರಡೂ ಒಟ್ಟಾಗಿದ್ದವು. 1991ರಲ್ಲಿ ರಷ್ಯಾ ಹೊರನಡೆದಾಗ 1992ರಲ್ಲಿ ಎರಡೂ ದೇಶಗಳು ಬೇರ್ಪಟ್ಟವು) ಒಳಕ್ಕೆ ನುಗ್ಗಿ ಬಂದುಬಿಟ್ಟಿತ್ತು. ಚೆಕೊಸ್ಲೊವಾಕಿಯಾ ಸರ್ಕಾರ ಯಾವುದೇ ತಯಾರಿ ಇಲ್ಲದ ಕಾರಣ ಸಂಪೂರ್ಣವಾಗಿ ಶರಣಾಗತಿ ಆಗಬೇಕಾಯಿತು. ಪರಿಣಾಮ ಪ್ರೇಗ್‌ನ ಯಾವುದೇ ಪಾರಂಪರಿಕ ಕಟ್ಟಡಗಳು ನಾಶವಾಗಲಿಲ್ಲ. ಮ್ಯೂಸಿಯಂನಲ್ಲಿ ಹೆಚ್ಚಾಗಿ ರಷ್ಯಾ ಕಮ್ಯುನಿಸಂ ಇತಿಹಾಸದ ಬಗ್ಗೆಯೇ ಬರಹಗಳಿದ್ದವು. ಅಲ್ಲಲ್ಲಿ ಕಪ್ಪುಬಿಳುಪು ಬಣ್ಣದ ಐತಿಹಾಸಿಕ ನಾಯಕರ ಚಿತ್ರಗಳು ಇದ್ದವು. ಅದರಲ್ಲಿ 1979ರಲ್ಲಿ ಜರ್ಮನ್ ಡೆಮಾಕ್ರಟಿಕ್ ರಿಪಬ್ಲಿಕ್ ಸ್ಥಾಪನೆಯ 30ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ತೆಗೆದ ಛಾಯಾಚಿತ್ರ ವಿಶೇಷವಾದದ್ದು. ಅದು ಸಮಾಜವಾದಿ ಸಹೋದರರ ಚುಂಬನವಾಗಿದ್ದು ಲಿಯೊನಿಡ್ ಬ್ರೆಜ್ನೆವ್ (ಯು.ಎಸ್.ಎಸ್.ಆರ್. ನಾಯಕ) ಮತ್ತು ಎರಿಕ್ ಹೊನೆಕರ್ (ಜರ್ಮನ್ ಡೆಮಾಕ್ರಟಿಕ್ ಆಫ್ ಈಸ್ಟ್ ಜರ್ಮನಿ) ಅವರದು. ಇದನ್ನು ಕ್ಲಿಕ್ಕಿಸಿದವರು ರೆಗಿಸ್ ಬೋಸ್ಸು. ಇದು ಎರಡನೇ ವಿಶ್ವಮಹಾಯುದ್ಧದ ನಂತರದ ಕಮ್ಯುನಿಸ್ಟ್ ಆಡಳಿತದ ಖಾತೆಯನ್ನು ಪ್ರಸ್ತುತಪಡಿಸಲು ಮೀಸಲಿಟ್ಟಿರುವ ವಸ್ತುಸಂಗ್ರಹಾಲಯವಾಗಿದೆ. ಕಮ್ಯುನಿಸಂನ ಕಬ್ಬಿಣದ ಪರದೆಯ ಹಿಂದಿನ ಜೀವನವನ್ನು ತಲ್ಲೀನಗೊಳಿಸುವ ದೃಶ್ಯಗಳನ್ನು ಇಲ್ಲಿ ಅನಾವರಣಗೊಳಿಸಲಾಗಿದೆ. ಜೊತೆಗೆ ಕಲಾಕೃತಿಗಳು, ಸಂದರ್ಶನಗಳು, ಆರ್ಕೈವ್ ಛಾಯಾಚಿತ್ರಗಳು, ಐತಿಹಾಸಿಕ ದಾಖಲೆಗಳನ್ನು ಸಂಗ್ರಹಿಸಿ ಇಡಲಾಗಿದೆ.

(ಮ್ಯೂಸಿಯಂ ಆಫ್ ಕಮ್ಯುನಿಸಂನ ಒಂದು ಒಳನೋಟ)

ಈ ಮ್ಯೂಸಿಯಂಅನ್ನು ಸ್ಥಾಪಿಸಿದವರು ಅಮೆರಿಕನ್ ಉದ್ಯಮಿ ಮತ್ತು ರಾಜಕಾರಣಿ ಗ್ಲೆನ್‌ಸ್ಪೀಕರ್. ಗ್ಲೆನ್ 1000 ಕಲಾಕೃತಿಗಳನ್ನು ಖರೀದಿಸಲು 28,000 ಡಾಲರ್ ಖರ್ಚು ಮಾಡಿದರಂತೆ. ಇದನ್ನು ವಿನ್ಯಾಸಗೊಳಿಸಿದವರು ಸಾಕ್ಷ್ಯಚಿತ್ರ ನಿರ್ಮಾಪಕ ಜಾನ್ ಕಪ್ಲಾನ್. ಕಪ್ಲಾನ್ ಕಮ್ಯುನಿಸ್ಟ್ ಆಡಳಿತದ ಮೂರು ರೀತಿಯ ದುರಂತಗಳನ್ನು/ದುಃಸ್ವಪ್ನಗಳನ್ನು ಇಲ್ಲಿ ಸೃಷ್ಟಿಸಿದ್ದಾರೆ. ಕಮ್ಯುನಿಸಂ ಆಡಳಿತದಲ್ಲಿ ನಡೆದ ದುಃಖಮಯ ಬದುಕು, ರಹಸ್ಯ ಪೊಲೀಸ್ ವಿಚಾರಣೆಗಳು ಮತ್ತು ಸೀಮಿತ ಆಹಾರ ಸರಬರಾಜು. ಈ ಎಲ್ಲವನ್ನೂ ಕಪ್ಪು-ಬಿಳುಪು ಮತ್ತು ಕೆಂಪು ಬಣ್ಣಗಳಲ್ಲಿ ರೂಪಿಸಲಾಗಿದೆ. ಕಮ್ಯುನಿಸ್ಟ್ ಆಡಳಿತ, ಕಾನೂನು ವ್ಯವಸ್ಥೆ, ಶಿಕ್ಷಣ ವ್ಯವಸ್ಥೆ ಮತ್ತು ವ್ಯಾಪಾರದ ಬದುಕನ್ನು ಜೆಕ್ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ವಿವರಿಸಲಾಗಿದೆ.

ಕ್ರಾಂತಿ, ನನ್ನನ್ನ ಕರೆದುಕೊಂಡುಹೋಗಿ ಟಾಯ್ಲೆಟ್ ಪಕ್ಕದಲ್ಲಿ ಲೆನಿನ್ ಮತ್ತು ಸ್ಟಾಲಿನ್ ಅವರ ಲೈಫ್ ಸೈಜ್ ಚಿತ್ರಗಳನ್ನು ತೋರಿಸಿ, `ಜೆಕ್ ಜನರು ರಷ್ಯನ್ನರನ್ನು ಇಷ್ಟಪಡುವುದಿಲ್ಲ. ಅದಕ್ಕಾಗಿ ಅವರ ಶಿಲ್ಪಗಳನ್ನು ಟಾಯ್ಲೆಟ್ ಹತ್ತಿರ ನಿಲ್ಲಿಸಿದ್ದಾರೆ’ ಎಂದು ನಕ್ಕ. ನಂತರ `ಜೆಕ್‌ನವರು ಯಾರೂ ಈ ಮ್ಯೂಸಿಯಂ ನೋಡಲು ಬರುವುದಿಲ್ಲ’ ಎಂದ. ಗೋಡೆಯಲ್ಲಿದ್ದ ಬರಹಗಳನ್ನು ಒಂದಷ್ಟು ಓದಿಕೊಂಡು ನಂತರ ಒಂದಷ್ಟನ್ನು ಕ್ಯಾಮೆರಾದಲ್ಲಿ ಕ್ಲಿಕ್ಕಿಸಿಕೊಂಡೆ. ಒಂದು ಕಡೆ `ಕಮ್ಯುನಿಸ್ಟ್ ಪ್ರಾಪಗಂಡ’ ಎಂಬ ಅಕ್ಷರಗಳನ್ನು ದೊಡ್ಡದಾಗಿ ಬರೆಯಲಾಗಿತ್ತು. ಒಂದು ಕಡೆ ರಷ್ಯನ್ ಯೋಧರು ಜೆಕ್ ಮಹಿಳೆಯರಿಗೆ ನೀಡಿದ ಕಿರುಕುಳಗಳನ್ನು ವಿಡಿಯೋ ಮೂಲಕ ವಿವರಿಸುವುದನ್ನು ತೋರಿಸಲಾಗುತ್ತಿತ್ತು. ಪರದೆಯ ಪಕ್ಕದಲ್ಲಿದ್ದ ಇಯರ್‌ಫೋನ್ ಕಿವಿಗೆ ಹಾಕಿಕೊಂಡು ಅವರ ಮಾತುಗಳನ್ನು ಕೇಳಿಸಿಕೊಳ್ಳಬಹುದಾಗಿತ್ತು. ಇನ್ನೊಂದು ಕಡೆ ಒಂದಷ್ಟು ಪುಸ್ತಕಗಳು, ಕೀಚೈನುಗಳು, ಬನಿಯನ್‌ಗಳು ಮತ್ತು ಇತರ ವಸ್ತುಗಳನ್ನು ಮಾರಲು ಇಡಲಾಗಿತ್ತು. ಅದರಲ್ಲಿ ಕಮ್ಯುನಿಸ್ಟ್ ನಾಯಕರ ತಲೆಬುರುಡೆಗಳ (ಮೇಲೆ ಬತ್ತಿಗಳು) ಕ್ಯಾಂಡಲ್‌ಗಳಿದ್ದವು. ಅಂದರೆ ಅವರನ್ನು ಕ್ಯಾಂಡಲ್ ಮೂಲಕ ಉರಿಸಿ ಕೋಪವನ್ನು ತೀರಿಸಿಕೊಳ್ಳಬಹುದಾಗಿತ್ತು.

ಈ ಮ್ಯೂಸಿಯಂ ಒಂದು ರೀತಿಯಲ್ಲಿ ರಷ್ಯಾ ಮತ್ತು ಜೆಕ್ ಇಬ್ಬರಿಗೂ ಅನಿವಾರ್ಯ ಇದ್ದಂತೆ ತೋರುತ್ತಿತ್ತು. ಜೆಕ್ ಜನರು, ರಷ್ಯನ್ನರು, ಜೆಕ್ ಜನರ ಮೇಲೆ ನಡೆಸಿದ ದಬ್ಬಾಳಿಕೆ ಮತ್ತು ಕ್ರೂರತೆಯನ್ನು ಜಗತ್ತಿಗೆ ತೋರಿಸುವುದಾಗಿದ್ದರೆ, ರಷ್ಯನ್ನರಿಗೆ ನಾವು ಉತ್ತರ ಧ್ರುವವನ್ನೆಲ್ಲ ಆಳಿದೆವು ಎಂದು ತೋರಿಸುವುದಾಗಿತ್ತು. ಆದರೆ ಈ ಮ್ಯೂಸಿಯಂ ನೋಡಿದ ರಷ್ಯನ್ನರು ನಮ್ಮವರು ಇಷ್ಟು ಕ್ರೂರವಾಗಿ ನಡೆದುಕೊಂಡರೆ ಎನ್ನುವ ಖೇದ ಭಾವನೆ ಉಂಟಾಗದೆ ಇರದು! ಒಟ್ಟಿನಲ್ಲಿ ನನಗೆ ಇದೊಂದು ಶೀತಲ ಸಮರದ ಮ್ಯೂಸಿಯಂನಂತೆ ಕಾಣಿಸಿತು. ಈ ಸಣ್ಣ ಮ್ಯೂಸಿಯಂ ನೋಡಲು 480 ಕ್ರೌನ್ ತುಂಬಾನೆ ಜಾಸ್ತಿ ಎನಿಸಿತು. ಈ ಮ್ಯೂಸಿಯಂ ನೋಡಲು ರಷ್ಯಾದವರು/ಜರ್ಮನರು ತಾನೇ ಬರುವುದು ಎಂಬುದಾಗಿ ಜೆಕ್‌ನವರು ತಿಳಿದಿರಬೇಕು ಎಂದುಕೊಂಡೆ!

*****

ಅಲ್ಲಿಂದ ನಾನು ಕ್ರಾಂತಿ ಬಿಯಾಸ್ (ಪಂಜಾಬಿನ ಒಂದು ನದಿ ಹೆಸರು) ಮಾಡರ್ನ್ ದಾಬಾ ರೆಸ್ಟೋರೆಂಟಿಗೆ ಹೋದೆವು. ಬೇರೆ ಕಡೆ ಹೋಗಿದ್ದ ಸುಶೀಲ, ಸ್ಮಿತಾರೆಡ್ಡಿ ಮತ್ತು ಕ್ರಾಂತಿಯ ಗೆಳತಿ ರಷ್ಯಾದ ಧಾರಿಯ ನಮ್ಮ ಜೊತೆಗೆ ಸೇರಿಕೊಂಡರು. ಧಾರಿಯ ಜೊತೆಗೆ ಒಂದು ನಾಯಿ ಮರಿಯೂ ಇತ್ತು. ಬಿಯಾಸ್, ಪಂಜಾಬಿ ವೆಜ್ ರೆಸ್ಟೋರೆಂಟಾಗಿದ್ದು ಹೆಚ್ಚಾಗಿ ಸ್ಥಳೀಯರೆ ಊಟ ಮಾಡುತ್ತಿದ್ದು ರೆಸ್ಟೋರೆಂಟ್‌ಅನ್ನು ಸ್ಥಳೀಯ ಮಹಿಳೆಯರೆ ನಡೆಸುತ್ತಿದ್ದರು. ನಾಲ್ಕಾರು ವೆಜ್ ಫ್ರೈಡ್ ಐಟಂಗಳು, ದಾಲ್, ಪನ್ನೀರ್, ನಾಲ್ಕಾರು ಪಲ್ಯಗಳು ಎರಡು ರೀತಿಯ ಅನ್ನ, ರೋಟಿಗಳು ಇದ್ದವು. ಎಲ್ಲವನ್ನು ತಟ್ಟೆಯಲ್ಲಿ ಹಾಕಿಕೊಂಡು ತೂಕದ ಮಷಿನ್ ಮೇಲಿಟ್ಟಾಗ ಪರಿಚಾರಕಿ ಬಿಲ್ ಹಾಕಿದಳು. ಧಾರಿಯ ಹಿಡಿದುಕೊಂಡು ಬಂದಿದ್ದ ಸಣ್ಣ ನಾಯಿ ಮರಿಯನ್ನು ಟೇಬಲ್ ಕೆಳಗೆ ಸಣ್ಣ ಹಗ್ಗದಲ್ಲಿ ಕಟ್ಟಿಹಾಕಿದಳು. ನಂತರ ತನ್ನ ಬ್ಯಾಗ್‌ನಲ್ಲಿದ್ದ ಸಣ್ಣ ಗ್ಲಾಸ್ ಬೌಲ್ ತೆಗೆದು ನಾಯಿ ಮರಿಗೆ ತಟ್ಟೆಯಿಂದ ಅನ್ನ ಹಾಕಿ ಕೆಳಗಿಟ್ಟಳು. ನಾಯಿಮರಿ ಸದ್ದಿಲ್ಲದೆ ತಿಂದುಕೊಂಡಿತು. ಊಟ ಮುಗಿದ ಮೇಲೆ ಎಲ್ಲರೂ ತಮ್ಮ ತಟ್ಟೆ ಗ್ಲಾಸುಗಳನ್ನು ಒಂದು ಕಡೆ ತೆಗೆದು ಇಟ್ಟೆವು.

ಅಲ್ಲಿಂದ ಹೊರಗೆ ಬಂದಿದ್ದೆ ಎದುರಿಗಿನ ಚೌಕದಲ್ಲಿ ಸುಮಾರು 10 ಅಡಿಗಳ ಎತ್ತರದ ಒಂದು ಉಕ್ಕು ಫಜಲ್‌ಕ್ಯೂಬ್ ರೀತಿಯ ಮುಖ ಕಾಣಿಸಿಕೊಂಡಿತು. ಒಂದಷ್ಟು ಜನರು ಅದರ ಪಕ್ಕದಲ್ಲಿ ನಿಂತುಕೊಂಡು ಫೋಟೋಗಳನ್ನು ಕ್ಲಿಕ್ಕಿಸಿಕೊಳ್ಳುತ್ತಿದ್ದರು. ಐದಾರು ಡಿಗ್ರಿ ಸೆಲ್ಸಿಯಸ್ ಚಳಿಯ ತಾಪಮಾನ ಮೈ ನಡುಗಿಸುತ್ತಿತ್ತು. ಎಲ್ಲರೂ ಬೆಚ್ಚಗಿನ ಉಡುಪುಗಳನ್ನು ಏರಿಸಿಕೊಂಡಿದ್ದರು. ಕ್ರಾಂತಿ, `ಅದು ಜೆಕ್ ಪ್ರಖ್ಯಾತ ಲೇಖಕ ಕಾಫ್ಕಾ ಮುಖ. ಅದು ಆಗಾಗ ಫಜಲ್ ಕ್ಯೂಬ್‌ನಂತೆ ತಿರುಗುತ್ತಿರುತ್ತದೆ, ಎಂದ. ನಾವು ಸುಮಾರು ಹೊತ್ತು ಅದರ ಎದುರಿಗೆ ನಿಂತುಕೊಂಡು ಅದನ್ನೇ ನೋಡತೊಡಗಿದೆವು. ಅದು ಹತ್ತುಹದಿನೈದು ನಿಮಿಷಗಳಿಗೆ ಒಮ್ಮೆ ಗಿರಗಿರನೆ ತಿರುಗುತ್ತಿತ್ತು. ಅಂದರೆ ಕಾಫ್ಕಾ ಮುಖದ ಪ್ರತಿಯೊಂದು ಪದರು ಸಣ್ಣಸಣ್ಣ ಉಕ್ಕಿನ ಇಟ್ಟಿಗೆಗಳಂತೆ ತಿರುಗುತ್ತಿತ್ತು.

ಕಪ್ಲಾನ್ ಕಮ್ಯುನಿಸ್ಟ್ ಆಡಳಿತದ ಮೂರು ರೀತಿಯ ದುರಂತಗಳನ್ನು/ದುಃಸ್ವಪ್ನಗಳನ್ನು ಇಲ್ಲಿ ಸೃಷ್ಟಿಸಿದ್ದಾರೆ. ಕಮ್ಯುನಿಸಂ ಆಡಳಿತದಲ್ಲಿ ನಡೆದ ದುಃಖಮಯ ಬದುಕು, ರಹಸ್ಯ ಪೊಲೀಸ್ ವಿಚಾರಣೆಗಳು ಮತ್ತು ಸೀಮಿತ ಆಹಾರ ಸರಬರಾಜು. ಈ ಎಲ್ಲವನ್ನೂ ಕಪ್ಪು-ಬಿಳುಪು ಮತ್ತು ಕೆಂಪು ಬಣ್ಣಗಳಲ್ಲಿ ರೂಪಿಸಲಾಗಿದೆ. ಕಮ್ಯುನಿಸ್ಟ್ ಆಡಳಿತ, ಕಾನೂನು ವ್ಯವಸ್ಥೆ, ಶಿಕ್ಷಣ ವ್ಯವಸ್ಥೆ ಮತ್ತು ವ್ಯಾಪಾರದ ಬದುಕನ್ನು ಜೆಕ್ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ವಿವರಿಸಲಾಗಿದೆ.

ಫ್ರಾಂಜ್‌ ಕಾಫ್ಕಾನ ಸಾಹಿತ್ಯ ಆತಂಕ ಮತ್ತು ಪರಕೀಯತೆಯಿಂದ ನಿರೂಪಿಸಲ್ಪಟ್ಟ ಪಾತ್ರಗಳಿಂದ ಕೂಡಿದ್ದು ಅಸಂಬದ್ಧ ಸನ್ನಿವೇಶಗಳನ್ನು ಎದುರಿಸುತ್ತವೆ. ಅವನ ಕಾದಂಬರಿ `ದಿ ಟ್ರಯಲ್’ ಪ್ರಸಿದ್ಧಿ ಪಡೆದಿದೆ. ಅದರಲ್ಲಿ ಬರುವ ಒಬ್ಬ ವ್ಯಕ್ತಿಗೆ ಎಂದಿಗೂ ಹೆಸರಿಸದ ಅಪರಾಧದ ಆರೋಪವಿದೆ. ಇನ್ನೊಂದು ಪುಸ್ತಕ `ದಿ ಮೆಟಾಮಾರ್ಫಾಸಿಸ್’, ಇದರಲ್ಲಿ ನಾಯಕನು ತಾನು ಕೀಟವಾಗಿ ರೂಪಾಂತರಗೊಳ್ಳುವುದನ್ನು ನೋಡಬಹುದು. ಕ್ರಾಂತಿ ಎರಡೂ ಕೃತಿಗಳನ್ನು ಟ್ರೈ ಮಾಡಿದ್ದೇನೆ ಏನೂ ಅರ್ಥವಾಗುವುದಿಲ್ಲ’ ಎಂದ. ನಾನು, ಮೆಟಾಮಾರ್ಫಾಸಿಸ್ ಓದಲು ಟ್ರೈ ಮಾಡಿದ್ದೆ ಆಗಲಿಲ್ಲ’ ಎಂದೆ. `ಬಹಳ ಜನರು ನನ್ನ ನೆಚ್ಚಿನ ಲೇಖಕ ಕಾಫ್ಕಾ ಎಂದು ಹೇಳಿಕೊಳ್ಳುತ್ತಾರೆ. ಅದರಲ್ಲಿ ಜಗ್ಗಿ ವಾಸುದೇವ್ ಕೂಡ ಒಬ್ಬರು’ ಕ್ರಾಂತಿ ನಕ್ಕ.

ಅಸ್ಥಿಪಂಜರಗಳ ಭಯಾನಕ ಸ್ಮಾರಕ ದಿ ಸೆಡ್ಲೆಕ್ ಒಸ್ಸುರಿ

ಪ್ರೇಗ್‌ನಿಂದ ಮೆಟಾಡೋರ್‌ನಲ್ಲಿ 20 ಪ್ರವಾಸಿಗರು 200 ಕಿ.ಮೀ. ದೂರದ `ದಿ ಸೆಡ್ಲೆಕ್ ಒಸ್ಸುರಿ’ ಹಳ್ಳಿಯ ಕಡೆಗೆ ಹೊರಟೆವು. ಅವರಲ್ಲಿ ಜಪಾನ್, ಕೆನಡಾ, ಯುರೋಪ್ ಮತ್ತು ನಾವು ಇದ್ದೆವು. ಇದು 1142ರಲ್ಲಿ ಸ್ಥಾಪನೆಗೊಂಡ ಬೊಹೆಮಿಯಾದ ಮೊದಲ ಸಿಸ್ಟರ್ಸಿಯನ್ ರೋಮನ್ ಕ್ಯಾಥೊಲಿಕ್ ಚಾಪೆಲ್ ಆಗಿದ್ದು ಇಲ್ಲಿ ಎಲ್ಲಾ ಸಂತರನ್ನು ಸಮಾಧಿ ಮಾಡಲಾಗಿದೆ. ಹಿಂದಿನ ಸೆಡ್ಲೆಕ್ ಅಬ್ಬೆ, ಈಗಿನ ಜೆಕ್ ಗಣರಾಜ್ಯದ ಕುಟ್ನಾ ಹೋರಾಗೆ ಸೇರಿದೆ. ಈ ಚರ್ಚ್‌ನಲ್ಲಿ ಸುಮಾರು 40,000 ದಿಂದ 70,000 ಅಸ್ಥಿಪಂಜರಗಳನ್ನು ಸಂಗ್ರಹಿಸಿ ಇಡಲಾಗಿದೆ. ಈ ಅಸ್ಥಿಪಂಜರಗಳ ಮೂಳೆಗಳನ್ನು ಅನೇಕ ಸಂದರ್ಭಗಳಲ್ಲಿ ಪ್ರಾರ್ಥನಾ ಮಂದಿರಕ್ಕೆ ಅಲಂಕಾರ ಮತ್ತು ಪೀಠೋಪಕರಣಗಳನ್ನು ರೂಪಿಸಿ ಕಲಾತ್ಮಕವಾಗಿ ಜೋಡಿಸಲಾಗಿದೆ. ಜೆಕ್ ಗಣರಾಜ್ಯದಲ್ಲಿ ಪ್ರವಾಸಿಗರು ಭೇಟಿ ನೀಡುವ ಮುಖ್ಯ ಪ್ರವಾಸಿ ಆಕರ್ಷಣೆಗಳಲ್ಲಿ ಕುಟ್ನಾ ಹೋರಾ ಅಸ್ಥಿಪಂಜರಗಳ ಮ್ಯೂಸಿಯಂ ಕೂಡ ಒಂದಾಗಿದೆ.

ನಾಲ್ಕು ಗಂಟೆಗಳ ಆಕಾರದ ದಿಬ್ಬಗಳು ಪ್ರಾರ್ಥನಾ ಮಂದಿರದ ನಾಲ್ಕು ಮೂಲೆಗಳನ್ನು ಆಕ್ರಮಿಸಿಕೊಂಡಿವೆ. ಮಾನವನ ದೇಹದಲ್ಲಿನ ಪ್ರತಿಯೊಂದು ಎಲುಬಿನ/ಮೂಳೆಗಳ ಗೊಂಚಲುಗಳು ಕಮಾನುಗಳನ್ನು ಆವರಿಸಿಕೊಂಡಿರುವ ತಲೆಬುರುಡೆಗಳ ಮಾಲೆಗಳೊಂದಿಗೆ ಗುಂಬದ ಮಧ್ಯಭಾಗದಲ್ಲಿ ನೇತಾಡುತ್ತಿವೆ. ಇದೇ ರೀತಿಯ ತಲೆಬುರುಡೆ ಮಾಲೆಗಳು ಚರ್ಚ್‌ನ ಬಲಿಪೀಠದ ಸುತ್ತಲು ಮತ್ತು ದೈತ್ಯಾಕಾರದ ಹೌಸ್ ಆಫ್ ಶ್ವಾರ್ಜೆನ್‌ಬರ್ಗ್‌ನ ರಾಜವಂಶದ ಲಾಂಛನವನ್ನು (ಜರ್ಮನ್ ಮತ್ತು ಜೆಕ್-ಬೊಹೆಮಿಯಾ) ಫ್ರಾಂಟಿಸೆಕ್‌ರಿಂಟ್ ಎಂಬ ಬಡಗಿ ಪ್ರವೇಶದ್ವಾರದ ಗೋಡೆಯ ಮೇಲೆ ಮೂಳೆಗಳಲ್ಲಿ ಬಿಡಿಸಿದ್ದಾನೆ. 1995ರಲ್ಲಿ ಸೆಡ್ಲೆಕ್ ಅಬ್ಬೆ ಮತ್ತು ಕುಟ್ನಾ ಹೋರಾ ಕೇಂದ್ರದ ಭಾಗಗಳನ್ನು ಯುನೆಸ್ಕೋ ವಿಶ್ವಪರಂಪರೆಯ ತಾಣವಾಗಿ ಘೋಷಿಸಿದೆ. ಇದು ಬರೂಕ್ ವಾಸ್ತುಶಿಲ್ಪವಾಗಿದೆ. ಈ ಶೈಲಿ 17ನೇ ಶತಮಾನದಲ್ಲಿ ಇಟಲಿಯಲ್ಲಿ ಹುಟ್ಟಿಕೊಂಡು ಯುರೋಪ್‌ನ ಉಳಿದ ಭಾಗಗಳಿಗೆ ಹರಡಿಕೊಂಡಿತು. ಇದರ ವಿನ್ಯಾಸ ಮತ್ತು ಕಲೆ ಅತ್ಯಂತ ಶ್ರೀಮಂತ ಶೈಲಿಯದ್ದಾಗಿದ್ದು ಅಮೃತಶಿಲೆಗಳು ಮತ್ತು ದೊಡ್ಡ ಪ್ರಮಾಣದ ಗಾಢ ಬಣ್ಣಗಳಿಂದ ರೂಪಿಸಲ್ಪಟ್ಟಿದೆ.

ಸ್ವಲ್ಪ ಹಿಂದಕ್ಕೆ ಹೋದರೆ, 1278ರಲ್ಲಿ ಬೊಹೆಮಿಯಾದ ರಾಜ ಒಟ್ಟೋಕರ್-2, ಹೆನ್ರಿಯನ್ನು ಸೆಡ್ಲೆಕ್‌ನ ಸಿಸ್ಟರ್ಸಿಯನ್ ಚರ್ಚ್‌ಗೆ ಕಳುಹಿಸಿದನು. ಈತ ಗೋಲ್ಗೊಥಾದಿಂದ ತೆಗೆದು ತಂದಿದ್ದ ಒಂದಷ್ಟು ಮಣ್ಣನ್ನು ಅಬ್ಬೆ ಸ್ಮಶಾನದ ಮೇಲೆ ಚೆಲ್ಲಿದನು. ಈ ಧಾರ್ಮಿಕ ಕ್ರಿಯೆಯ ವಿಷಯ ಬಹುಬೇಗನೆ ಸುತ್ತಮುತ್ತಲೂ ಹರಡಿ ಸೆಡ್ಲೆಕ್‌ನಲ್ಲಿರುವ ಸ್ಮಶಾನವು ಮಧ್ಯ ಯುರೋಪಿನಾದ್ಯಂತ ಅಪೇಕ್ಷಣೀಯ ಸಮಾಧಿಯ ಸ್ಥಳವಾಯಿತು. 14ನೇ ಶತಮಾನದ ಮಧ್ಯದಲ್ಲಿ `ಬ್ಲಾಕ್ ಡೆಥ್’ನಲ್ಲಿ ಸತ್ತವರು ಮತ್ತು 15ನೇ ಶತಮಾನದ ಆರಂಭದಲ್ಲಿ ಹುಸ್ಸೈಟ್ ಯುದ್ಧಗಳಲ್ಲಿ ಸತ್ತವರನ್ನು ಅಬ್ಬೆ ಸ್ಮಶಾನದಲ್ಲಿ ಸಮಾಧಿ ಮಾಡಲಾಯಿತು. ಬ್ಲಾಕ್ ಡೆಥ್ (1346-1353) ಕಾಲದಲ್ಲಿ ಬುಬೊನಿಕ್ ಪ್ಲೇಗ್‌ನಿಂದ ಸುಮಾರು 50 ದಶಲಕ್ಷ ಜನರು ಪ್ರಾಣ ಕಳೆದುಕೊಂಡಿದ್ದರು. ಇದು 14ನೇ ಶತಮಾನದ ಯುರೋಪ್‌ನ 50% ಜನಸಂಖ್ಯೆ ಎನ್ನಲಾಗಿದೆ. ಬುಬೊನಿಕ್ ರೋಗ ಯೆರ್ಸಿನಿಯಾ ಪೆಸ್ಟಿಕ್ ಬ್ಯಾಕ್ಟೀರಿಯಾದಿಂದ ಉಂಟಾಗಿ ಚಿಗಟಿ/ತಿಗಣಿಗಳಿಂದ ಹರಡುತ್ತಿತ್ತು.

1400ರ ದಶಕದಲ್ಲಿ ಗೋಥಿಕ್ ಚರ್ಚ್ಅನ್ನು ಸ್ಮಶಾನದ ಮಧ್ಯದಲ್ಲಿ ಎತ್ತರದ ಕಮಾನುಗಳಿಂದ ನಿರ್ಮಿಸಲಾಯಿತು. ನಿರ್ಮಾಣದ ಸಮಯದಲ್ಲಿ ಪತ್ತೆಯಾದ ಸಾಮೂಹಿಕ ಅಸ್ಥಿಪಂಜರಗಳನ್ನು ಹೊರತೆಗೆದು ಹೊಸ ಚರ್ಚ್‌ನಲ್ಲಿ ಸಂಗ್ರಹಿಸಿಡಲು ಯೋಜನೆ ಮಾಡಲಾಯಿತು. 1511ರ ನಂತರ ಹೊರತೆಗೆದ ಅಸ್ಥಿಪಂಜರಗಳು ಮತ್ತು ಅವುಗಳ ಎಲುಬುಗಳನ್ನು ಪ್ರಾರ್ಥನಾ ಮಂದಿರದಲ್ಲಿ ಜೋಡಿಸುವ ಕೆಲಸವನ್ನು ಒಬ್ಬ ಅರೆ-ಕುರುಡ ಸನ್ಯಾಸಿಗೆ ವಹಿಸಲಾಯಿತು. 1703 ಮತ್ತು 1710ರ ನಡುವೆ ಚರ್ಚ್ ಮುಂಭಾಗದ ಗೋಡೆ ವಾಲಿಕೊಂಡು ಅದನ್ನು ತಡೆಯಲು ಹೊಸ ಪ್ರವೇಶದ್ವಾರವನ್ನು ನಿರ್ಮಿಸಲಾಯಿತು. ಜೆಕ್ ಬರೂಕ್ ಶೈಲಿಯಲ್ಲಿ ಈ ಯೋಜನೆಯನ್ನು ಜಾನ್ ಸ್ಯಾಂಟಿನಿ ಐಚಲ್ ವಿನ್ಯಾಸಗೊಳಿಸಿದನು. ಈ ಅಸ್ಥಿಪಂಜರಗಳ ಕತೆಗಳು ಅನೇಕ ಕಾದಂಬರಿಗಳು ಮತ್ತು ಸಿನಿಮಾಗಳಿಗೆ ಪ್ರೇರಣೆಯಾಯಿತು. ಈ ಅಸ್ತಿಪಂಜರ, ತಲೆಬುರುಡೆಗಳು ಮತ್ತು ಎಲುಬುಗಳ ಮ್ಯೂಸಿಯಂಅನ್ನು ನೋಡುವುದು ಒಂದು ರೋಮಾಂಚನ ಮತ್ತು ಭಯಾನಕ ಅನುಭವವಾಗಿದೆ. ಇದನ್ನು ನೋಡಿದ ಮೇಲೆ ನಮ್ಮ ದೇಶದ ವಾರಣಾಸಿ/ಕಾಶಿಯ ಸ್ಮಶಾನ ಘಾಟ್‌ಗಳು ಜ್ಞಾಪಕಕ್ಕೆ ಬಂದುಬಿಟ್ಟವು.

ಕಾರ್ಲೋವಿ ವೇರಿ ಸ್ಪಾ

ಒಂದು ಬೆಳಿಗ್ಗೆ ನಾವು ಮೂವರೂ ಕುಳಿತಿದ್ದ ಒಳ್ಳೆ ಕಾರು ಪ್ರೇಗ್ ಪಶ್ಚಿಮಕ್ಕಿರುವ 106 ಕಿ.ಮೀ.ಗಳ ದೂರದ ಕಾರ್ಲೋವಿ ವೇರಿಯ ಕಡೆಗೆ ಒಂದೇ ವೇಗದಲ್ಲಿ ಸಾಗುತ್ತಿತ್ತು. ಸಮತಟ್ಟು ಪ್ರದೇಶಗಳು ಮಧ್ಯೆಮಧ್ಯೆ ಹಳ್ಳದಿನ್ನೆಗಳು ಮಳೆ ಇಲ್ಲದೆ ಭೂಮಿ ಒಣಗಿಹೋಗಿತ್ತು. ಆದರೆ ವಾತಾವರಣ ಮಾತ್ರ ಐದಾರು ಡಿಗ್ರಿಗಳಿದ್ದು ವಾಹನದೊಳಗೆ 22 ಡಿಗ್ರಿಗಳ ಉಷ್ಣವನ್ನು ಏಸಿಯಿಂದ ಕಾಯ್ದಿರಿಸಿಕೊಳ್ಳಲಾಗಿತ್ತು. ಹಿಂದೆ ಜರ್ಮನಿ/ಇಂಗ್ಲಿಷ್‌ನಲ್ಲಿ ಕರ್ಸ್ಲ್‌ಬಾದ್ ಆಗಿದ್ದ ಊರನ್ನು ಈಗ ಜೆಕ್‌ನಲ್ಲಿ ಕಾರ್ಲೋವಿ ವೇರಿ ಎಂದು ಕರೆಯಲಾಗುತ್ತಿದೆ. ಇದಕ್ಕೆ `ಕಿಂಗ್ ಚಾರ್ಲ್ಸ್ ಸ್ನಾನ’ ಎಂಬ ಅರ್ಥವೂ ಇದೆಯಂತೆ. ಇದು ಪ್ರಸ್ತುತ ಪ್ರಖ್ಯಾತ ಜೆಕ್ ಗಣರಾಜ್ಯದ ಸ್ಪಾ ಪಟ್ಟಣವಾಗಿದ್ದು ಓಹ್ರೆ ಮತ್ತು ಟೆಪ್ಲಾ ನದಿಗಳ ಸಂಗಮವಾಗಿದ್ದು 50 ಸಾವಿರ ಜನಸಂಖ್ಯೆಯನ್ನು ಹೊಂದಿದೆ. ಪವಿತ್ರ ರೋಮನ್ ಚಕ್ರವರ್ತಿ ಬೊಹೆಮಿಯಾ ರಾಜನಾದ ಚಾರ್ಲ್ಸ್ ಈ ಪಟ್ಟಣದ ಸ್ಥಾಪಕ. ಟೆಪ್ಲಾ ನದಿ ಕಣಿವೆಯಲ್ಲಿ 13 ಬಿಸಿನೀರು ಬುಗ್ಗೆಗಳು ಬಿಸಿನೀರನ್ನು ಚಿಮ್ಮಿಸುತ್ತಲೇ ಇರುತ್ತವೆ. ಇಡೀ ದಿನ ಅಥವಾ 24 ಗಂಟೆಗಳು ಬಿಸಿನೀರನ್ನು ಚಿಮ್ಮುತ್ತಿರುವ ಈ ಬುಗ್ಗೆಗಳಲ್ಲಿ ಹಲವಾರು ನೈಸರ್ಗಿಕ ಖನಿಜಗಳಿದ್ದು ಅದನ್ನು ಕೆಲವು ನೂರು ವರ್ಷಗಳಿಂದ ಜನರು ತಮ್ಮ ಆರೋಗ್ಯಕ್ಕಾಗಿ ಬಳಸುತ್ತಾ ಬಂದಿರುವುದು ತಿಳಿದುಬರುತ್ತದೆ. ಯಾತ್ರಿಗಳು ನದಿ ದಡದ ಉದ್ದಕ್ಕೂ ಇರುವ ಅಂಗಡಿಗಳಲ್ಲಿ ಚಪ್ಪಟೆಯಾಕಾರದ ಬಣ್ಣಬಣ್ಣದ ಪಿಂಗಾಣಿ ಗ್ಲಾಸುಗಳನ್ನು ಕೊಂಡುಕೊಂಡು ಬುಗ್ಗೆಗಳ ನೀರನ್ನು ಹಿಡಿದುಕೊಂಡು ನಿಧಾನವಾಗಿ ಕುಡಿಯುತ್ತಾ ಸಾಗುತ್ತಿದ್ದರು.

ಇದೇ ಕಾರಣದಿಂದ ಈ ಐತಿಹಾಸಿಕ ಪಟ್ಟಣ ಸ್ಪಾ ಪಟ್ಟಣವಾಗಿ ಪ್ರಸಿದ್ಧಿ ಹೊಂದಿದ್ದು ಅಚ್ಚುಕಟ್ಟಾದ ಪಾರಂಪರಿಕ ಕಟ್ಟಡಗಳಿಂದ ಸಂರಕ್ಷಿಸಲಾಗಿದೆ. ಎರಡೂ ನದಿಗಳ ದಡಗಳಲ್ಲಿರುವ ಗಿಡಮರ ಉದ್ಯಾನವನಗಳು ಮತ್ತು ಪಾರಂಪರಿಕ ಕಟ್ಟಡಗಳು ರಾಜಮಹಾರಾಜರು ಆಳಿದ ಅರಮನೆಗಳು ನೋಡಲು ಸುಂದರವಾಗಿದ್ದು ಹಸಿರು ಬೆಟ್ಟಗಳ ಹಿನ್ನೆಲೆಯಿಂದ ಭೂದೃಶ್ಯ ಇನ್ನಷ್ಟು ಕಂಗೊಳಿಸುತ್ತಿತ್ತು. ಕಾರ್ಲೋವಿ ವೇರಿ, ಯುರೋಪಿನ ಅತಿದೊಡ್ಡ ಸ್ಪಾ ಕಟ್ಟಡಗಳ ಸಂಕೀರ್ಣವನ್ನು ಹೊಂದಿದ್ದು 2012ರಲ್ಲಿ ಈ ಪಟ್ಟಣ `ಗ್ರೇಟ್ ಸ್ಪಾ ಟೌನ್ಸ್ ಒ’ ಹೆಸರಿನಲ್ಲಿ ಯುನೆಸ್ಕೋ ವಿಶ್ವ ಪರಂಪರೆಯ ತಾಣವೆಂದು ಘೋಷಿಸಲಾಯಿತು. ಈ ಪಟ್ಟಣ 18 ರಿಂದ 20ನೇ ಶತಮಾನಗಳವರೆಗಿನ ಸ್ಪಾಗಳು ಮತ್ತು ವಾಸ್ತುಶಿಲ್ಪದಲ್ಲಿ ಹೆಸರು ಪಡೆದಿದೆ. ದಡದ ಉದ್ದಕ್ಕೂ ನಾಲ್ಕಾರು ಬುಗ್ಗೆಗಳಿಗೆ ನಲ್ಲಿಗಳನ್ನು ಅಳವಡಿಸಿ ನೀರನ್ನು ನಲ್ಲಿಗಳ ಮೂಲಕ ಹಿಡಿದುಕೊಳ್ಳುವಂತೆ ಮಾಡಲಾಗಿದೆ. ಒಂದು ಕಡೆ ದೊಡ್ಡದಾದ ಬಿಸಿನೀರು ಬುಗ್ಗೆ ಸುಮಾರು 50 ಅಡಿಗಳ ಎತ್ತರಕ್ಕೆ ನಾಲ್ಕಾರು ಕ್ಷಣಗಳಿಗೆ ಒಮ್ಮೆ ಚಿಮ್ಮುತ್ತಿತ್ತು. ಬುಗ್ಗೆಯ ಸುತ್ತಲೂ ಎತ್ತರದ ಗೋಪುರವನ್ನು ಕಟ್ಟಿ ಜನರು ವೀಕ್ಷಿಸುವಂತೆ ಮಾಡಲಾಗಿದೆ. ಎಲ್ಲಾ ಬುಗ್ಗೆಗಳಲ್ಲಿ 30 ರಿಂದ 75 ಡಿಗ್ರಿಗಳ ತಾಪಮಾನದವರೆಗೆ ಬಿಸಿನೀರು ಚಿಮ್ಮುತ್ತಿರುವುದಾಗಿ ನಮ್ಮ ಚಾಲಕ-ಗೈಡ್ ಹೇಳಿದ.

ಕಾರ್ಲೋವಿ ವೇರಿಯಲ್ಲಿ ಸ್ಲಾವಿಕ್ ವಸಾಹತುವನ್ನು ತಾಸೊವಿಸ್ ಮತ್ತು ಸೆಡ್ಲೆಕ್‌ನಲ್ಲಿನ ಸಂಶೋಧನೆಗಳಿಂದ ದಾಖಲಿಸಲಾಗಿದೆ. 13ನೇ ಶತಮಾನದಲ್ಲಿಯೇ ಈ ಪ್ರದೇಶದಲ್ಲಿ ವಾಸಿಸುತ್ತಿದ್ದ ಜನರು ಈ ಉಷ್ಣ ಬುಗ್ಗೆಗಳ ನೀರಿನಿಂದ ಕೆಲವು ಕಾಯಿಲೆಗಳು ಗುಣವಾಗುತ್ತಿದ್ದವು ಎನ್ನುವುದನ್ನು ತಿಳಿದಿದ್ದರು ಎನ್ನಲಾಗಿದೆ. ಇದೇ ಕಾಲದಲ್ಲಿ ಜರ್ಮನ್ ಮಾತನಾಡುವ ಪ್ರದೇಶಗಳಿಂದ ಜರ್ಮನ್ ವಸಾಹತುಗಾರರು, ಕುಶಲಕರ್ಮಿಗಳು ಮತ್ತು ಗೇಣಿದಾರರು ಇಲ್ಲಿಗೆ ಆಗಮಿಸಿದರು. ಅಂತಿಮವಾಗಿ ಸ್ಥಳೀಯರು ಮತ್ತು ಜರ್ಮನರು ಒಟ್ಟುಗೂಡಿ ಈ ಪ್ರದೇಶದ ಅಭಿವೃದ್ಧಿಯಲ್ಲಿ ತೊಡಗಿಕೊಂಡರು. 1325ರಲ್ಲಿಯೇ ಇಲ್ಲಿನ ಒಬೋರಾ ಎಂಬ ಹಳ್ಳಿಯ ಹೆಸರು ದಾಖಲಾಗಿದೆ. ಕಾರ್ಲೋವಿ ವೇರಿ 1349ರ ಸುಮಾರಿಗೆ ಸ್ಥಾಪನೆಯಾಯಿತು. ಒಂದು ಕತೆಯ ಪ್ರಕಾರ ಚಾರ್ಲ್ಸ್-4 ಲೋಕೆಟ್ ಎಂಬಲ್ಲಿ ವಾಸ್ತವ್ಯ ಹೂಡಿದ್ದ ಸಮಯದಲ್ಲಿ ಆಧುನಿಕ ಕಾರ್ಲೋವಿ ವೇರಿಯ ಸುತ್ತಮುತ್ತಲಿನ ಕಾಡುಗಳಿಗೆ ದಂಡಯಾತ್ರೆಯನ್ನು ಆಯೋಜಿಸಿದನು. ರಾಜನ ಆಳುಗಳು ಒಮ್ಮೆ ಆಕಸ್ಮಿಕವಾಗಿ ಬಿಸಿನೀರಿನ ಬುಗ್ಗೆಗಳನ್ನು ಗಮನಿಸಿದರು. ದಂಡಯಾತ್ರೆಯಲ್ಲಿ ಗಾಯಗೊಂಡಿದ್ದ ರಾಜನ ಕಾಲು ಬಿಸಿ ನೀರಿನಿಂದ ಗುಣವಾಯಿತಂತೆ. ನಂತರ ಅಲ್ಲಿ ಬಿಸಿ ಸ್ಪಾಗಳನ್ನು ಸ್ಥಾಪಿಸಿದರು. ಅಲ್ಲಿ ಒಂದು ಪಟ್ಟಣಕ್ಕೆ ಬೇಕಾದ ಎಲ್ಲ ಸವಲತ್ತುಗಳನ್ನು 1370ರ ನಂತರ ನಿರ್ಮಿಸಲಾಯಿತು. ಹಿಂದಿನ ವಸಾಹತುಗಳು ಈಗಿನ ಪಟ್ಟಣದ ಹೊರವಲಯದಲ್ಲಿ ನೋಡಬಹುದು.

(ಮೋಸರ್ ಗ್ಲಾಸ್ ಕಾರ್ಖಾನೆಯ ಷೋರೂಂ ಒಳಗಿರುವ ವ್ಯಾಸ್)

ಚಾಲಕ ಕಾರ್ಲೋವಿ ವೇರಿಯ ಪಕ್ಕದಲ್ಲಿಯೇ ಪ್ರಖ್ಯಾತ ಜೆಕ್ ಕಂಪನಿ `ಮೋಸರ್’ ಗ್ಲಾಸ್ ಕಾರ್ಖಾನೆಯ ಷೋರೂಂ ಒಳಕ್ಕೆ ಕರೆದುಕೊಂಡು ಹೋಗಿ ತೋರಿಸಿದ. ಷೋರೂಂನಲ್ಲಿ ಅನೇಕ ಆಕಾರಗಳ ವಿಧವಿಧ ಬಣ್ಣಬಣ್ಣದ ಗ್ಲಾಸುಗಳನ್ನು ನೋಡಿದ ನಾನು ಸುಸ್ತಾಗಿ ಹೋದೆ. 1857ರಲ್ಲಿ ಪ್ರಖ್ಯಾತ ಕೆತ್ತನೆಗಾರ ಮತ್ತು ಉದ್ಯಮಿ ಲುಡ್ವಿಂಗ್ ಮೋಸರ್ ಇದೇ ಸ್ಥಳದಲ್ಲಿ ಕೆತ್ತನೆ ಕಾರ್ಯಾಗಾರ ಮತ್ತು ಅಂಗಡಿಯನ್ನು ತೆರೆದನಂತೆ. ಪ್ರಸ್ತುತ ಇದರ ವಾರ್ಷಿಕ ವ್ಯಾಪಾರ 158 ದಶಲಕ್ಷ ಜೆಕ್ ಕೊರುನಾ ಎನ್ನಲಾಗಿದೆ. ಶೋಕೇಸ್‌ನಲ್ಲಿದ್ದ ಒಂದು ಆಲಂಕಾರಿಕ ಗ್ಲಾಸ್ ವಾಸ್ ಬೆಲೆ 17,000,000 ಕೊರುನಾ ಎಂದು ಬರೆಯಲಾಗಿತ್ತು. ಅಲ್ಲೆ ಪಕ್ಕದಲ್ಲಿದ್ದ ಒಂದು ರೆಸ್ಟಾರಂಟಿಗೆ ಕರೆದುಕೊಂಡುಹೋದ ಚಾಲಕ ನಮಗೆ ಪ್ಯಾಕೇಜ್ ಟೂರ್ ಕೆಳಗೆ ಎಂದು ಊಟ ಕೊಡಿಸಿದ. ಒಳಗೆ ಮೆನು ಕಾರ್ಡ್ ತೋರಿಸಿ `ಈ ಎರಡು ಐಟಂಗಳಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳಿ’ ಎಂದ. ವಿಧಿ ಇಲ್ಲದೆ ಯಾವುದಾದರೂ ಕೊಡಿ ಎಂದೆವು. ಮೂರು ಬೌಲ್‌ಗಳಲ್ಲಿ ಟೊಮೊಟೊ, ಈರುಳ್ಳಿ, ಕ್ಯಾರೆಟ್ ಮತ್ತು ಯಾವುದೋ ಒಂದು ದೊಡ್ಡ ಎಲೆಗುಚ್ಛದ ಮೇಲೆ ಸಾಲಿಡ್ ಶೀಸ್ ಮತ್ತು ಉಪ್ಪನ್ನು ಸವರಿ ತಂದುಕೊಟ್ಟರು. ತಿಂದು ಹೊರಕ್ಕೆ ಬಂದೆವು.


ಬರುವಾಗ ಇನ್ನೊಂದು ದಾರಿಯಲ್ಲಿ ಮೇರಿಯನ್ಸ್ಕೆ ಲಾಜ್ನೆ ಅಥವಾ ಹಿಂದಿನ ಮರಿಯನ್‌ಬಾದ್ ಹೆಸರಿನ ಸ್ಪಾ ಪಟ್ಟಣವನ್ನು ನೋಡಿಕೊಂಡು ಹಿಂದಿರುಗುತ್ತಿದ್ದೆವು. ಸಮತಟ್ಟು ಪ್ರದೇಶ ಮತ್ತು ದಿಬ್ಬಗಳು ಹಸಿರಿನಿಂದ ಕಂಗೊಳಿಸುತ್ತಿದ್ದು ರಸ್ತೆಯ ಎರಡೂ ಕಡೆ ಹತ್ತಾರು ಹಳ್ಳಿಗಳು ಹಾದುಹೋಗುತ್ತಿದ್ದವು. ಪ್ರತಿ ದೊಡ್ಡ ಹಳ್ಳಿಯ ಪಕ್ಕದಲ್ಲಿ ಯಾವುದಾದರೂ ಒಂದು ಸಣ್ಣ ಕೈಗಾರಿಕೆ/ಕಾರ್ಖಾನೆ ಇರುವುದು ಕಂಡುಬಂದಿತು. ಅಂದರೆ ಪ್ರತಿಯೊಂದು ಹಳ್ಳಿಯನ್ನು ಸ್ವಯಂ ಅವಲಂಬಿತವಾಗಿ ಅಭಿವೃದ್ಧಿಪಡಿಸಲಾಗಿದೆ. ಇದರ ನಡುವೆ ಸಣ್ಣಗೆ ಮಳೆ ಜಿನುಗುತ್ತಿದ್ದು ರಸ್ತೆಯಲ್ಲಿ ವಾಹನ ಒಂದೇ ಸಮನೆ ಓಡುತ್ತಿತ್ತು. ನಮ್ಮ ಜೊತೆಯಲ್ಲಿದ್ದ ಚಾಲಕ ಯಾತ್ರೆಯ ಉದ್ದಕ್ಕೂ ಆಗಾಗ ಇಂಗ್ಲಿಷ್‌ನಲ್ಲಿ ಕೆಲವು ವಿಷಯಗಳನ್ನು ವಿವರಿಸುತ್ತಾ ಬರುತ್ತಿದ್ದನು. ಹೆಚ್ಚು ಕೇಳಿದಾಗ ಮೌನ ವಹಿಸಿಬಿಡುತ್ತಿದ್ದನು. ನಮ್ಮ ಜೊತೆಯಲ್ಲಿದ್ದ ಸ್ಮಿತಾರೆಡ್ಡಿ `ನಾವು ಪ್ರೇಗ್ ಎಷ್ಟೊತ್ತಿಗೆ ತಲುಪುತ್ತೇವೆ?’ ಎಂದು ಕೇಳಿದರು. ಆತ `100 ಕಿ.ಮೀ. ದೂರ ಇದೆ’ ಎಂದ. ಮತ್ತೆ ಸ್ಮಿತಾ `ಅದೇ ಎಷ್ಟೊತ್ತಿಗೆ ತಲುಪುತ್ತೇವೆ?’ ಎಂದರು. ಆತ `ಮಳೆ ಬೀಳುತ್ತಿದ್ದರೆ ನಾನು ನಿಖರವಾದ ಸಮಯ ಹೇಳಲು ಹೇಗೆ ಸಾಧ್ಯ?’ ಎಂದ. ಮಳೆಯಲ್ಲೇ ಸಾಯಂಕಾಲ ಆರು ಗಂಟೆಗೆ ಪ್ರೇಗ್ ತಲುಪಿದೆವು (ಪ್ರವಾಸ: ಮಾರ್ಚ್ 2024).

(ಹಿಂದಿನ ಕಂತು: ಗೋಡೆಯ ಮೇಲೆ ಪ್ರತಿಭಟನೆಯ ಚಿತ್ತಾರ)