ಕಸಗುಡಿಸುವ ಹುಡುಗ ಇಡೀ ದಿನ ತನ್ನ ಮೊಣಕಾಲಿಗೆ ತಗುಲುವ ಬಕೇಟ್ ಹಿಡಿದು ಮನೆಗೂ ಕೆರೆಗೂ ಓಡಾಡಿಕೊಂಡಿರುತ್ತಿದ್ದ. ಹಾಗೆ ಪ್ರತಿ ಸಾರಿ ಹೋಗುವಾಗ ಬರುವಾಗ ಅವನ ಮುಖದಲ್ಲೊಂದು ದೊಡ್ಡ ಸ್ನೇಹಪೂರ್ವಕ ನಗೆ ಇಣುಕುತ್ತಿತ್ತು. ಆದರೆ ನಾನವನನ್ನು ದುರುಗುಟ್ಟಿ ನೋಡುತ್ತಿದ್ದೆ. ಅವನಿಗೆ ನನ್ನದೇ ವಯಸ್ಸುಹತ್ತು ವರ್ಷ. ಅವನಿಗೆ ಸಣ್ಣಗೆ ಕತ್ತರಿಸಿದ ಕ್ರಾಪ್ ಇತ್ತು. ಅವನ ಹಲ್ಲುಗಳು ಬಹಳ ಬಿಳುಪಾಗಿದ್ದವು ಮತ್ತು ಅವನ ಕೈ, ಕಾಲು, ಮುಖ ಯಾವಾಗಲೂ ಮಣ್ಣಾಗಿರುತ್ತಿದ್ದವು. ಸುಟ್ಟ ಕಪ್ಪು ಬಣ್ಣಕ್ಕಿದ್ದ ಅವನ ದೇಹದ ಮೇಲ್ಭಾಗ ಯಾವಾಗಲೂ ಬೆತ್ತಲೆಯಾಗಿರುತ್ತಿತ್ತು.
ಪ್ರಸಿದ್ಧ ಕಥೆಗಾರ ರಸ್ಕಿನ್ ಬಾಂಡ್ ಹದಿನಾರನೇ ವಯಸ್ಸಿನಲ್ಲಿ ಬರೆದ ಮೊದಲ ಕತೆಯನ್ನು ಆಶಾ ಜಗದೀಶ್ ಅನುವಾದಿಸಿದ್ದಾರೆ

 

ಕಸಗುಡಿಸುವ ಹುಡುಗ ಬಾಗಿಲಿಗೆ ನೇತುಹಾಕಿದ್ದ ಪರದೆಯ ಮೇಲೆ ನೀರೆರೆಚಿದ. ಒಂದು ಕ್ಷಣ ಗಾಳಿ ತಣ್ಣಗಾಯಿತು.

ನಾನು ನನ್ನ ಮಂಚದ ತುದಿಯಲ್ಲಿ ಕುಳಿತು ತೆರೆದ ಕಿಟಕಿಯನ್ನೇ ನಿಟ್ಟಿಸುತ್ತಿದ್ದೆ. ಧೂಳು ತುಂಬಿದ ರಸ್ತೆ ಮಧ್ಯಾಹ್ನದ ಉರಿಬಿಸಿಲಿಗೆ ಹೊಳೆಯುತ್ತಿತ್ತು.

ಕಾರೊಂದು ಅಲ್ಲಿಂದ ಸಾಗಿ ಹೋಯಿತು. ಅದು ಎಬ್ಬಿಸಿದ ಧೂಳು ಬಾಗಿದ ಮೋಡಗಳಲ್ಲಿ ಹಬ್ಬಿತು.

ನನ್ನ ತಂದೆ ಮಲೇರಿಯಾದಿಂದಾಗಿ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದ ಕಾರಣ ನನ್ನನ್ನು ನೋಡಿಕೊಳ್ಳಲು ಒಂದಷ್ಟು ಸೇವಕರನ್ನು ನೇಮಿಸಲಾಗಿತ್ತು. ಅವರೆಲ್ಲ ರಸ್ತೆಯ ಆ ಬದಿಯಲ್ಲಿ ವಾಸವಾಗಿದ್ದರು. ನಾನು ಅವರೊಂದಿಗೇ ಇರಬೇಕಿತ್ತು, ಮಲಗಬೇಕಿತ್ತು. ಆದರೆ ನಾನು ಯಾವುದೇ ಕಾರಣಕ್ಕೂ ಅವರೊಂದಿಗೆ ಊಟ ಮಾಡುತ್ತಿರಲಿಲ್ಲ. ನನಗೆ ಅವರು ಇಷ್ಟವಾಗುತ್ತಿರಲಿಲ್ಲ ಮತ್ತು ಅವರಿಗೆ ನಾನು ಇಷ್ಟವಾಗುತ್ತಿರಲಿಲ್ಲ.

ಒಂದು ವಾರ.. ಬಹುಶಃ ಅದಕ್ಕೂ ಹೆಚ್ಚಿರಬಹುದು… ನಾನೊಬ್ಬನೇ ಊರಿನ ಹೊರಭಾಗದಲ್ಲಿ, ಕಾಡಿನ ಪರಿಧಿಯಲ್ಲಿದ್ದ ಆ ಕೆಂಪು ಇಟ್ಟಿಗೆಯ ಬಂಗಲೆಯಲ್ಲಿ, ವಾಸಮಾಡಬೇಕಿತ್ತು. ರಾತ್ರಿಯ ಹೊತ್ತಿನಲ್ಲಿ ನನ್ನ ಪಹರೆಗಾಗಿ ಕಸಗುಡಿಸುವ ಹುಡುಗ ಅಡುಗೆ ಕೋಣೆಯಲ್ಲಿ ಮಲಗುತ್ತಿದ್ದ. ಅವನನ್ನು ಬಿಟ್ಟು ನನಗ್ಯಾವ ಜೊತೆಗಾರರೂ ಇರಲಿಲ್ಲ. ಬರೀ ಅಕ್ಕಪಕ್ಕದ ಮನೆಯ ಮಕ್ಕಳು ಮಾತ್ರ ಇದ್ದರು. ಆದರೆ ಅವರಿಗೆ ನಾನು ಇಷ್ಟವಾಗುತ್ತಿರಲಿಲ್ಲ ಮತ್ತು ನನಗೆ ಅವರು ಇಷ್ಟವಾಗುತ್ತಿರಲಿಲ್ಲ.

(ರಸ್ಕಿನ್ ಬಾಂಡ್)

ಅವರ ತಾಯಿ ಒಮ್ಮೆ, “ನೋಡು ಆ ಕಸಗುಡಿಸುವ ಹುಡುಗನೊಂದಿಗೆ ಆಟವಾಡಬೇಡ, ಅವನು ಮಹಾ ಕೊಳಕ. ಮೇಲಾಗಿ ಅವ ನಿಮ್ಮ ಮನೆಯ ಕೆಲಸದವ.

ಅದನ್ನು ನೆನಪಿಡು. ಒಂದು ವೇಳೆ ನಿನಗೇನಾದರೂ ಆಟವಾಡಬೇಕೆನಿಸಿದರೆ ಬಂದು ನಮ್ಮ ಮಕ್ಕಳೊಂದಿಗೆ ಮಾತ್ರ ಆಟವಾಡು” ಎಂದು ಹೇಳಿದರು.

ಆದರೆ ನನಗೆ ಕಸಗುಡಿಸುವ ಹುಡುಗನೊಂದಿಗೂ ಆಟವಾಡಲು ಇಷ್ಟವಿರಲಿಲ್ಲ ಮತ್ತು ಪಕ್ಕದ ಮನೆಯ ಮಕ್ಕಳೊಂದಿಗೂ… ನಾ ಆ ವಾರವೆಲ್ಲಾ ಹಾಸಿಗೆಯ ತುದಿಯಲ್ಲಿ ಕೂತಿರುತ್ತಿದ್ದೆ ಮತ್ತು ನನ್ನ ತಂದೆ ಆಸ್ಪತ್ರೆಯಿಂದ ಮನೆಗೆ ಮರಳಿ ಬರುವುದನ್ನೇ ಕಾಯುತ್ತಿದ್ದೆ.

ಕಸಗುಡಿಸುವ ಹುಡುಗ ಇಡೀ ದಿನ ತನ್ನ ಮೊಣಕಾಲಿಗೆ ತಗುಲುವ ಬಕೇಟ್ ಹಿಡಿದು ಮನೆಗೂ ಕೆರೆಗೂ ಓಡಾಡಿಕೊಂಡಿರುತ್ತಿದ್ದ. ಹಾಗೆ ಪ್ರತಿ ಸಾರಿ ಹೋಗುವಾಗ ಬರುವಾಗ ಅವನ ಮುಖದಲ್ಲೊಂದು ದೊಡ್ಡ ಸ್ನೇಹಪೂರ್ವಕ ನಗೆ ಇಣುಕುತ್ತಿತ್ತು.
ಆದರೆ ನಾನವನನ್ನು ದುರುಗುಟ್ಟಿ ನೋಡುತ್ತಿದ್ದೆ.

ಅವನಿಗೆ ನನ್ನದೇ ವಯಸ್ಸು… ಹತ್ತು ವರ್ಷ. ಅವನಿಗೆ ಸಣ್ಣಗೆ ಕತ್ತರಿಸಿದ ಕ್ರಾಪ್ ಇತ್ತು. ಅವನ ಹಲ್ಲುಗಳು ಬಹಳ ಬಿಳುಪಾಗಿದ್ದವು ಮತ್ತು ಅವನ ಕೈ, ಕಾಲು, ಮುಖ ಯಾವಾಗಲೂ ಮಣ್ಣಾಗಿರುತ್ತಿದ್ದವು. ಅವ ಒಂದೇ ಒಂದು ಖಾಕಿ ಚಡ್ಡಿಯನ್ನು ಧರಿಸಿರುತ್ತಿದ್ದ ಮತ್ತು ಸುಟ್ಟ ಕಪ್ಪು ಬಣ್ಣಕ್ಕಿದ್ದ ಅವನ ದೇಹದ ಮೇಲ್ಭಾಗ ಯಾವಾಗಲೂ ಬೆತ್ತಲೆಯಾಗಿರುತ್ತಿತ್ತು.

ಪ್ರತಿ ಬಾರಿ ನೀರನ್ನು ಹೊತ್ತು ತರುವಾಗಲೂ ಅವನಿಗೆ ಸ್ನಾನ ಮಾಡಿದಂತಾಗುತ್ತಿತ್ತು. ಅಡಿಯಿಂದ ಮುಡಿಯವರೆಗೂ ನೆಂದ ಅವನ ಮೈ ಹೊಳೆಯುತ್ತಿತ್ತು.
ನನಗೆ ಬೆವರು ಸುರಿಯುತ್ತಿತ್ತು…

ಕೆಳ ಜಾತಿಯ ಜನ ಕೆರೆಯಲ್ಲಿ ಸ್ನಾನ ಮಾಡುತ್ತಿದ್ದರು. ಮಾಲಿಗಳು, ನೀರು ಹೊರುವವರು, ಅಡುಗೆಯವರು, ದಾದಿಯರು, ಕಸ ಗುಡಿಸುವವರು ಮತ್ತು ಅವರ ಮಕ್ಕಳು ಎಲ್ಲರೂ ಅಲ್ಲಿ ಸೇರುತ್ತಿದ್ದರು. ನಾನು “ಸಾಹೇಬ”ರ ಮಗ ಮತ್ತು ಸಮಾಜದ ರೀತಿ ರಿವಾಜುಗಳ ಪ್ರಕಾರ ನಾನು ಕೆಳಜಾತಿಯ ಮಕ್ಕಳೊಂದಿಗೆ ಆಡುವಂತಿರಲಿಲ್ಲ.

ಆದರೆ ನಾನು ಇತರೆ ಸಾಹೇಬರ ಮಕ್ಕಳೊಂದಿಗೂ ಆಡುತ್ತಿರಲಿಲ್ಲ. ಕಾರಣ ನನಗೆ ಅವರು ಇಷ್ಟವಾಗುತ್ತಿರಲಿಲ್ಲ ಮತ್ತು ಅವರಿಗೆ ನಾನು ಇಷ್ಟವಾಗುತ್ತಿರಲಿಲ್ಲ.
ನಾನು ಕಿಟಕಿಯ ಗಾಜಿನ ಮೇಲೆ ನೊಣಗಳು ಗುಯ್ ಗುಟ್ಟುವುದನ್ನು ನೋಡುತ್ತಿದ್ದೆ. ಹಲ್ಲಿಯೊಂದು ಮರದ ಜಂತಿಯನ್ನು ಕೊರೆಯುತ್ತಿತ್ತು. ಗಾಳಿಗೆ, ಒಣಗಿದ ತರಗೆಲೆಗಳು, ಹೂ ಪಕಳೆಗಳು ತೂರಾಡುತ್ತಿದ್ದವು.

ಕಸಗುಡಿಸುವ ಹುಡುಗ ನಕ್ಕ ಮತ್ತು ನಮಸ್ಕಾರ ಮಾಡಿದ. ನಾನವನ ಕಣ್ಣು ತಪ್ಪಿಸುತ್ತಾ “ದೂರ ಹೋಗು” ಎಂದೆ.

ಅವ ಅಡುಗೆ ಕೋಣೆಯೊಳಕ್ಕೆ ಹೋದ.

ನಾನು ಎದ್ದು ಕೋಣೆಯನ್ನು ದಾಟಿ, ಟೊಪ್ಪಿಗೆಗಳ ಸ್ಟ್ಯಾಂಡಿನಿಂದ ನನ್ನ ಟೊಪ್ಪಿಯೊಂದನ್ನು ತೆಗೆದೆ.

ಶತಪದಿಯೊಂದು ಗೋಡೆಯ ಮೇಲಿಂದ ಕೆಳಕ್ಕೆ ಹರಿದು ನೆಲದ ಮೇಲೆ ತೆವಳಿತು. ನಾನು ಚೀರುತ್ತಾ ಹಾಸಿಗೆಯ ಮೇಲಕ್ಕೆ ಎಗರಿ, ಸಹಾಯಕ್ಕಾಗಿ ಕೂಗಿದೆ.

ಕಸಗುಡಿಸುವ ಹುಡುಗ ಮಿಂಚಿನಂತೆ ಓಡಿಬಂದ. ನಾನು ಮಂಚದ ಮೇಲೆ ನಿಂತಿರುವುದನ್ನು ಮತ್ತು ನೆಲದ ಮೇಲೆ ಇದ್ದ ಶತಪದಿಯನ್ನು ನೋಡಿದ. ತಕ್ಷಣವೇ ಪುಸ್ತಕವೊಂದನ್ನು ಎತ್ತಿ ತಪ್ಪಿಸಿಕೊಳ್ಳಲು ಹೊರಟ ಕೀಟವನ್ನು ಬಿಡದೆ ಅದರ ಮೇಲೆ ಅಪ್ಪಳಿಸಿದ.

ನಾನಿನ್ನೂ ಹಾಸಿಗೆಯ ಮೇಲೇ ಹೆದರುತ್ತಾ, ನಡುಗುತ್ತಾ, ಭಯವಿಹ್ವಲನಾಗಿ ನಿಂತಿದ್ದೆ.

ಅವನು ತನ್ನ ಹಲ್ಲು ತೋರಿಸುತ್ತ, ನನ್ನನ್ನು ನೋಡಿ ನಕ್ಕ. ನನಗೆ ನಾಚಿಕೆಯಾಯಿತು. “ಹೋಗಿಲ್ಲಿಂದ..” ಎಂದು ಗದರಿದೆ.

ಟೊಪ್ಪಿ ಮತ್ತು ಟೊಪ್ಪಿಯ ಸ್ಟ್ಯಾಂಡನ್ನು ನಾನು ಮುಟ್ಟಲೇ ಬಾರದಿತ್ತು… ಯಾಕಾದರೂ ಮುಟ್ಟಿದೆನೋ ಎನಿಸಿಬಿಟ್ಟಿತು ನನಗೆ. ಆ ಕ್ಷಣ ಅಪ್ಪ ಇದ್ದಿದ್ದರೆ… ಎಂದು ನೆನೆಯುತ್ತಾ ಹಾಸಿಗೆಯ ಮೇಲೆ ಅವರು ಮನೆಗೆ ಬರುವುದನ್ನೇ ಕಾಯುತ್ತಾ ಕುಳಿತೆ.

ಸೊಳ್ಳೆಯೊಂದು ಬಹಳ ಹತ್ತಿರದಲ್ಲಿ, ಕಿವಿಯ ಬಳಿ ಗುಯ್ ಗುಟ್ಟುತ್ತಾ ಹಾರಿ ಹೋಯಿತು. ಅರೆ ಮನಸಿನಿಂದ ನಾನದನ್ನು ಹೊಡೆದು ಸಾಯಿಸಲು ಪ್ರಯತ್ನಿಸಿದೆ. ಆದರದು ತಪ್ಪಿಸಿಕೊಂಡು ಡ್ರೆಸ್ಸಿಂಗ್ ಟೇಬಲ್ಲಿನ ಹಿಂಭಾಗದಲ್ಲಿ ತಪ್ಪಿಸಿಕೊಂಡಿತು.

ಖಂಡಿತ ಇದು ನನ್ನ ಅಪ್ಪನಿಗೆ ಮಲೇರಿಯ ಬರುವಂತೆ ಮಾಡಿದ ಸೊಳ್ಳೆಯೇ ಇರಬೇಕು. ಮತ್ತೀಗ ನನ್ನನ್ನೂ ಕಚ್ಚಿ ನನಗೂ ಮಲೇರಿಯಾ ಹರಡಲು ಪ್ರಯತ್ನಿಸುತ್ತಿದೆ! ಅನಿಸಿತು.

ಪಕ್ಕದ ಮನೆಯ ಹೆಣ್ಣುಮಗಳು ಕಾಂಪೌಂಡ್ ಮುಂದೆ ನಡೆದು ಹೋಗುವಾಗ ಕಿಟಕಿಯಿಂದ ನನ್ನನ್ನು ನೋಡಿ ತೆಳುವಾಗಿ ನಕ್ಕಳು. ನಾನೂ ಮರಳಿ ಅವಳತ್ತ ಕಣ್ಣು ಹಾಯಿಸಿದೆ.

ಕಸಗುಡಿಸುವ ಹುಡುಗ ಬಕೆಟ್ ಹಿಡಿದು ಓಡಾಡುತ್ತಾ ನನ್ನನ್ನು ನೋಡಿ ಹಲ್ಲು ಕಿಸಿದ. ನಾನು ತಿರುಗಿ ಕೂತೆ.

ರಾತ್ರಿ ಮಲಗುವ ಮುಂಚೆ ಲೈಟ್ ಹಚ್ಚಿಕೊಂಡು ಕೂತು ಓದಲು ಪ್ರಯತ್ನಿಸಿದೆ. ‘ಪುಸ್ತಕಗಳಿಗೂ ನನ್ನ ಆತಂಕವನ್ನು ಅಡಗಿಸಲು ಸಾಧ್ಯವಾಗಲಿಲ್ಲ.

ಕಸಗುಡಿಸುವ ಹುಡುಗ ಮನೆಯೆಲ್ಲ ಓಡಾಡುತ್ತಾ ಬಾಗಿಲು ಕಿಟಕಿಗಳ ಚಿಲಕಗಳನ್ನು ಭದ್ರಪಡಿಸಿದ. ನಂತರ ನನ್ನ ಆದೇಶಗಳೇನಾದರೂ ಇವೆಯಾ ಎಂದು ಕೇಳಿದ.

ನಾನು ನನ್ನ ತಲೆಯನ್ನು ಅಡ್ಡಡ್ಡಲಾಗಿ ತೂಗಿದೆ.

ನನಗೆ ಕಸಗುಡಿಸುವ ಹುಡುಗನೊಂದಿಗೂ ಆಟವಾಡಲು ಇಷ್ಟವಿರಲಿಲ್ಲ ಮತ್ತು ಪಕ್ಕದ ಮನೆಯ ಮಕ್ಕಳೊಂದಿಗೂ… ನಾ ಆ ವಾರವೆಲ್ಲಾ ಹಾಸಿಗೆಯ ತುದಿಯಲ್ಲಿ ಕೂತಿರುತ್ತಿದ್ದೆ ಮತ್ತು ನನ್ನ ತಂದೆ ಆಸ್ಪತ್ರೆಯಿಂದ ಮನೆಗೆ ಮರಳಿ ಬರುವುದನ್ನೇ ಕಾಯುತ್ತಿದ್ದೆ.

ನಂತರ ಅವ ಸ್ವಿಚ್ ಬಳಿ ತೆರಳಿ, ಲೈಟ್ ಆಫ್ ಮಾಡಿ ತನ್ನ ಕೋಣೆಗೆ ತೆರಳಿದ. ಒಳಗೂ ಹೊರಗೂ ಎಲ್ಲೆಲ್ಲು ಕತ್ತಲು. ಒಂದೇ ಒಂದು ಬೆಳಕಿನ ಕಿರಣ ಕಸಗುಡಿಸುವ ಹುಡುಗನ ಕೋಣೆಯ ಬಾಗಿಲ ಬಿರುಕಿನಿಂದ ಕಿವುಚಿ ಹೊರಬರುತ್ತಿತ್ತು… ನಂತರ ಅದೂ ನಿಂತು ಹೋಯಿತು.

ನನಗೀಗ ಹೀಗೆ ಕಷ್ಟ ಪಡುವ ಬದಲು ಪಕ್ಕದ ಮನೆಯವರೊಂದಿಗೆ ಇದ್ದಿದ್ದರೆ ಚಿನ್ನಿತ್ತು ಎಂದು ಅನಿಸಿತು. ಕತ್ತಲು ನನ್ನನ್ನು ಹೆದರಿಸತೊಡಗಿತ್ತು. ನಿಗೂಢ ನೀರವ ನಿಶ್ಯಬ್ಧತೆಗೆ ಅಂಜಿಕೆಯಾಯಿತು.

ಬಾವಲಿಯೊಂದು ಹೊರಗಿಂದ ನೇರ ಕಿಟಕಿಯ ಗಾಜಿಗೆ ಬಂದು ಬಡಿದು ನೆಲದ ಮೇಲೆ ಬಿತ್ತು. ಗೂಬೆಯೊಂದು ಗೂಕ್ ಗೂಕ್ ಎಂದಿತು. ನಾಯಿಯೊಂದು ಬೊಗಳಿತು. ಬಂಗಲೆಯ ಹಿತ್ತಲಿನ ಕಾಡಿನೊಳಗಿಂದ ಗುಳ್ಳೆನರಿಯೊಂದು ಊಳಿಡುವ ಸದ್ದು ಕೇಳಿಸಿದಾಗ ನಾನು ಇನ್ನಷ್ಟು ಮುದುರಿ ಕುಳಿತೆ. ಆದರೆ ಕತ್ತಲ ಆ ನಿಶ್ಯಬ್ಧ ಸ್ಥಿರಚಿತ್ರಣವನ್ನು ಯಾವುದರಿಂದಲೂ ಬೇಧಿಸಲಾಗಲಿಲ್ಲ.

ಒಂದು ಒಣ ಗಾಳಿಯ ಊದುವಿಕೆಯ ಹೊರತಾಗಿ…

ಅದು ಸರಪರ ಶಬ್ದ ಮಾಡಿತು. ಅದು ನನ್ನ ತಲೆಯಲ್ಲಿ ಹಾವೊಂದು ತಣ್ಣಗೆ ಒಣ ಎಲೆಗಳು ಮತ್ತು ರೆಂಬೆಕೊಂಬೆಗಳ ನಡುವೆ ತೆವಳುತ್ತಿರುವ ಹಾಗೆ ಭಾಸವಾಗುವಂತೆ ಮಾಡಿತು. ನನಗೊಂದು ಕತೆ ನೆನಪಾಯಿತು. ಬಹಳ ದಿನಗಳ ಹಿಂದಿನದ್ದೇನಲ್ಲ, ಹೊರಗೆ ಮಲಗಿದ್ದ ಹುಡುಗನೊಬ್ಬನನ್ನು ನಾಗರಹಾವೊಂದು ಕಚ್ಚಿಬಿಟ್ಟಿತ್ತು.

ನನ್ನಿಂದ ಇನ್ನು ಮಲಗಲಾಗಲಿಲ್ಲ. ಈಗಲೇ ಅಪ್ಪ ಬೇಕೆಂದು ಹಂಬಲಿಸತೊಡಗಿದೆ.

ಶಟರ್ ಗಳು ಪತರಗುಟ್ಟಿದವು, ಬಾಗಿಲುಗಳು ಕೀರ್ ಕಿರ್ ಶಬ್ದ ಮಾಡಿದವು, ಅದು ಖಂಡಿತ ದೆವ್ವಗಳ ರಾತ್ರಿಯಾಗಿತ್ತು.. ದೆವ್ವಗಳದ್ದು!
ದೇವರೇ ನಾನವುಗಳ ಬಗ್ಗೆ ಏಕೆ ಯೋಚಿಸಿದೆ?!

ದೇವರೇ?! ಅದು ಅಲ್ಲಿ ಬಚ್ಚಲ ಬಾಗಿಲ ಮುಂದೆ ನಿಂತಿದೆ…

ಅದು ನನ್ನ ತಂದೆ! ನನ್ನ ತಂದೆ ಮಲೇರಿಯಾದಿಂದ ಸತ್ತು… ನನ್ನನ್ನು ನೋಡಲು ಇಲ್ಲಿಗೆ ಬಂದುಬಿಟ್ಟರಾ… ನಾನು ಒಂದೇ ಜಿಗಿತಕ್ಕೆ ಸ್ವಿಚ್ಚಿನ ಬಳಿಗೆ ಹಾರಿದೆ. ಕೋಣೆ ಬೆಳಗಿತು. ನಾನು ಭಯದಿಂದ ಹಾಸಿಗೆಯೊಳಗೆ ಮುದುರಿಕೊಂಡೆ. ಬೆವರು ನನ್ನ ನೈಟ್ ಡ್ರೆಸ್ಸನ್ನು ತೋಯ್ಸಿಬಿಟ್ಟಿತ್ತು.

ಅದು ನನ್ನಪ್ಪ ಆಗಿರಲಿಲ್ಲ, ಅದನ್ನು ನಾನು ನೋಡಿದೆ. ಅದು ಅವನ ಡ್ರೆಸ್ಸಿಂಗ್ ಗೌನ್ ಆಗಿದ್ದು, ಬಚ್ಚಲ ಬಾಗಿಲಿಗೆ ಅದನ್ನು ನೇತು ಹಾಕಲಾಗಿತ್ತು. ಅದನ್ನವರು ಆಸ್ಪತ್ರೆಗೆ ತೆಗೆದುಕೊಂಡು ಹೋಗಿರಲಿಲ್ಲ.

ನಾನು ಲೈಟನ್ನು ಆರಿಸಿದೆ.

ಹೊರಗಿನ ಸುಯ್ ಎನ್ನುವ ಶಬ್ದ ಇನ್ನಷ್ಟು ಆಳ ಮತ್ತು ಹತ್ತಿರವಾದಂತೆ ತೋರಿತು. ನನಗೆ ಆ ಕ್ಷಣ ಶತಪದಿ, ಬಾವಲಿ, ನಾಗರಹಾವು ಮತ್ತು ಮಲಗಿದ್ದ ಹುಡುಗ.. ಎಲ್ಲ ನೆನಪಾದವು. ತಲೆ ಮುಚ್ಚುವಂತೆ ರಗ್ಗೆಳೆದುಕೊಂಡೆ. ನಾನು ಏನನ್ನೂ ನೋಡುತ್ತಿಲ್ಲ ಎಂದಾದರೆ, ಯಾವುದೂ ನನ್ನನ್ನು ನೋಡುತ್ತಿಲ್ಲ ಎನ್ನುವ ಹಾಗೆ…

ಈ ಕತ್ತಲ ಸ್ಥಿರ ಚಿತ್ರಣಕ್ಕೆ ಜೋರಾದ ಗುಡುಗೊಂದು ಅಪ್ಪಳಿಸಿತು.

ಆಕಾಶವನ್ನು ಸೀಳುವಂಥ ಮಿಂಚಿನ ಸಳುಕೊಂದು ಎಷ್ಟು ಹತ್ತಿರದಲ್ಲಿ ಮಿಂಚಿ ಮಾಯವಾಯಿತೆಂದರೆ ಹೊರಭಾಗದ ಮರ ಮತ್ತು ಎದುರು ಮನೆಯ ರೇಖಾಚಿತ್ರ ಹೊಂಬಣ್ಣದ ಕ್ಯಾನ್ವಾಸಿನ ಮೇಲೆ ಮೂಡಿದವು.

ನಾನು ಇನ್ನಷ್ಟು ಪಲ್ಲಂಗದ ಆಳಕ್ಕಿಳಿದೆ, ಕಿವಿ ಮುಚ್ಚುವಂತೆ ದಿಂಬನ್ನು ಅವಚಿಕೊಂಡೆ.

ಆದರೆ ಮತ್ತೊಮ್ಮೆ ಅಪ್ಪಳಿಸಿದ ಗುಡುಗು ಹಿಂದಿಗಿಂತಲೂ ಹಿಂದೆಂದಿಗಿಂತಲೂ ಜೋರಾಗಿತ್ತು. ಇದುವರೆಗೂ ನಾನಂತಹ ಗುಡುಗನ್ನು ಕೇಳಿರಲೇ ಇಲ್ಲ. ನಾನು ನನ್ನ ಹಾಸಿಗೆಯಿಂದ ಎಗರಿದೆ. ಸರಿಯಾಗಿ ನಿಲ್ಲಲೂ ಆಗಲಿಲ್ಲ. ಹಾರಿದವನೇ ಕ್ಷಣಾರ್ಧದಲ್ಲಿ ಅರಿವಿಲ್ಲದೆ ಕಸಗುಡಿಸುವ ಹುಡುಗನ ಕೋಣೆಗೆ ಹೋಗುವ ತಪ್ಪು ಮಾಡಿಬಿಟ್ಟೆ.

ಆ ಹುಡುಗ ಬರಿ ನೆಲದ ಮೇಲೆ ಎದ್ದು ಕೂತ.

“ಏನಾಗುತ್ತಿದೆ?” ಕೇಳಿದ.

ಮಿಂಚೊಂದು ಫಳಗುಟ್ಟಿತು ಮತ್ತು ಅದರೊಂದಿಗೆ ಅವನ ಕಣ್ಣು ಹಲ್ಲುಗಳೂ ಮಿಂಚಿದವು. ಆ ಕತ್ತಲಲ್ಲಿ ಅವ ಮಸಕು ಮಸುಕಾಗಿ ಕಾಣುತ್ತಿದ್ದ.

“ನನಗೆ ಭಯವಾಯಿತು” ಎಂದೆ.

ನಾನವನ ಬಳಿ ಹೋದೆ ಮತ್ತು ನನ್ನ ಕೈ ತಣ್ಣನೆಯ ಭುಜವೊಂದನ್ನು ಸ್ಪರ್ಷಿಸಿತು.

“ಇಲ್ಲೇ ಇರು, ನನಗೂ ಭಯವಾಗುತ್ತಿದೆ” ಎಂದ ಅವನು.

ನಾನು ನೆಲದ ಮೇಲೆ ಕೂತೆ… ಗೋಡೆಗೆ ಒರಗಿಕೊಂಡು, ಅಸ್ಪೃಷ್ಯನ ಪಕ್ಕದಲ್ಲಿ, ಆ ಕೆಳಜಾತಿಯವನೊಂದಿಗೆ…. ನಂತರ ಗುಡುಗು ಮಿಂಚು ನಿಂತಿತು, ಮಳೆ ಬಂದಿತು. ಶ್… ಎಂದು ಹೊಯ್ಯುತ್ತಾ , ಚಿಟಪಟ ಸದ್ದು ಮಾಡುತ್ತಾ ಸುಕ್ಕುಗಟ್ಟಿದ ಸೂರಿನ ಮೇಲೆ ಮಳೆ ಸುರಿಯಿತು.

ಹೊರಗೊಮ್ಮೆ ನೋಡಿ ನನ್ನ ಕಡೆ ತಿರುಗುತ್ತಾ “ಮಳೆಗಾಲ ಶುರುವಾಯಿತು…” ಎಂದು ಹೇಳಿದ ಕಸಗುಡಿಸುವ ಹುಡುಗ. ಅವನ ನಗು ಕತ್ತಲಿನೊಂದಿಗೆ ಆಟವಾಡಿತು. ಅವನು ನಕ್ಕ. ನಾನೂ ನಕ್ಕೆ… ಸಣಕಲಾಗಿ…

ಆದರೆ ನಾನು ಸಂತೋಷವಾಗಿದ್ದೆ ಮತ್ತು ಸುರಕ್ಷಿತವಾಗಿದ್ದೆ. ಆಕಾಶದ ಬೆಳಕಲ್ಲಿ ಮಣ್ಣಿನ ವಾಸನೆ ಮನೆಯೊಳಕ್ಕೆ ನುಗ್ಗಿತು. ಮಳೆ ಮತ್ತಷ್ಟು ಜೋರಾಗಿ ಸುರಿಯಿತು.