ಪ್ಯಾರಿಸ್ ೨೦೨೪ ಒಲಿಂಪಿಕ್ಸ್ ವಿಶೇಷ ಏನೆಂದರೆ ಬ್ರೇಕ್ ಡಾನ್ಸ್ ಪಂದ್ಯ. ಇದನ್ನು ಘೋಷಿಸಿದಾಗ ಬ್ರೇಕ್ ಡಾನ್ಸ್ ಒಂದು ಕ್ರೀಡೆಯೇ, ಅದು ಹೇಗೆ ಆಟವಾಗುತ್ತದೆ? ಎಂದು ಪ್ರಶ್ನಿಸಿ, ಟೀಕಿಸಿ, ವಿರೋಧಿಸಿದವರು ಬಹಳ ಜನ. ಆದರೆ ಬ್ರೇಕ್ ಡಾನ್ಸ್ ಒಂದು ಕಠಿಣವಾದ ಕಲೆ, ಅದನ್ನು ದೈಹಿಕ ಚಟುವಟಿಕೆಯಾಗಿ, ಆರೋಗ್ಯಕ್ಕಾಗಿ ಕಲಿಯುವವರು ಹೆಚ್ಚುತ್ತಿದ್ದಾರೆ. ಅದನ್ನು ಒಂದು ಕ್ರೀಡೆಯೆಂದು ಪರಿಗಣಿಸಿದ್ದೇವೆ ಎಂದು ಒಲಿಂಪಿಕ್ಸ್ ಸಮಿತಿ ಹೇಳಿತ್ತು. ಆಸ್ಟ್ರೇಲಿಯಾದಿಂದ ಬ್ರೇಕ್ ಡಾನ್ಸ್ ಪಂದ್ಯಕ್ಕೆ ಹೋಗಿರುವುದು ರೇಚಲ್ ಗನ್.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”ದಲ್ಲಿ ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ಓಲಂಪಿಕ್ಸ್‌ನ ಕುರಿತ ಬರಹ ನಿಮ್ಮ ಓದಿಗೆ
ಪ್ರಿಯ ಓದುಗರೆ,
ಪ್ಯಾರಿಸ್ ನಗರದಲ್ಲಿ ನಡೆಯುತ್ತಿದೆ ಎಂದು ಈ ಬಾರಿ ಒಲಿಂಪಿಕ್ಸ್ ಪಂದ್ಯಗಳನ್ನು ನೋಡುತ್ತಿದ್ದೀನಿ. ಯಾಕೋ ಪಂದ್ಯಗಳನ್ನು ನೋಡುತ್ತಿದ್ದಾಗ ಕನ್ನಡ ಚಿತ್ರರಂಗದ ರತ್ನ ಶ್ರೀ ದ್ವಾರಕೀಶ್ ಅವರ ನಟನೆಯಲ್ಲಿ ಮೂಡಿಬಂದ ಈ ಹಾಡನ್ನು ಮತ್ತೆ ಯೂಟ್ಯೂಬಿನಲ್ಲಿ ನೋಡಿದೆ – ‘ಆಡೂ ಆಟ ಆಡೂ, ನೀ ಆಡು ಆಡೂ ಆಡಿ ನೋಡೂ, ಹಾ ರಾಜ ಹೇ ರಾಣಿ ಏ ಜಾಕಿ ಓ ಜೋಕರ್, ಎದುರಲ್ಲಿ ನಿಗಾ ಇಡೂ …’
ಶ್ರೀ ಕಿಶೋರ್ ಕುಮಾರ್ ಅವರ ವಿಶೇಷ ಛಾಪಿನ ಆಕರ್ಷಕ ಗಾಯನಕ್ಕೆ ಗಮನ ಕೊಟ್ಟು ಈ ಹಾಡಿನ ಸಾಹಿತ್ಯಕ್ಕೆ ನಿಗಾ ಕೊಡುವುದು ಕಷ್ಟ ಎನ್ನಿ. ಆದರೆ ಹಾಡನ್ನು ಕೇಳುತ್ತಾ ಅದರ ಸಾಹಿತ್ಯವನ್ನು ಮೆಲುಕು ಹಾಕಿದಾಗ ಅದು ಒಲಿಂಪಿಕ್ಸ್ ವಿದ್ಯಮಾನಗಳನ್ನು ಕುರಿತೆ ಇರುವಂತೆ ಅನ್ನಿಸಿಬಿಟ್ಟಿತು. ಅವರು ಗೆದ್ದರು, ಇವರು ಸೋತರು, ಅವಳ ಹರ್ಷ, ಇವಳ ಕಣ್ಣೀರು, ಚಿನ್ನದ ಪದಕ ಗೆದ್ದ ಬಾಲಕಿಯ ಮುಗ್ಧತೆ, ಕಂಚಿನ ಪದಕ ವಿಜೇತ ಪುರುಷ ತಂಡದ ಬಿಗು ಮೊಗ… ಸ್ಪರ್ಧೆಯೆಂದರೆ ಅದು ಏಳು-ಬೀಳುಗಳ ಹಾವು-ಏಣಿ ಆಟ. ಅದು ಕಾಂಪಿಟಿಷನ್ ಹೌದೆ ವಿನಃ ಕೋಆಪರೇಶನ್ ಅಲ್ಲ. ಆಡುವಾಗ ನಿಗಾ ಇಡಬೇಕು ಎನ್ನುವುದು ಕಡ್ಡಾಯ ನಿಯಮ. ಇದನ್ನು ಬರೆಯುವಾಗ ಒಬ್ಬ ಭಾರತೀಯಳಾಗಿ ನನ್ನ ಮನಸ್ಸು ಮಿಡಿಯುತ್ತಿರುವುದು ಭಾರತೀಯ ಕುಸ್ತಿಪಟು ವಿನೇಶ್ ಫೋಗಟ್ ಬಗ್ಗೆ. ಆದರೆ ಈ ಅಂಕಣ ‘ಆಸ್ಟ್ರೇಲಿಯಾ ಪತ್ರ’ ಆಗಿರುವುದರಿಂದ ಆಸ್ಟ್ರೇಲಿಯಾ-ಒಲಿಂಪಿಕ್ಸ್ ಬಗ್ಗೆ ಹಂಚಿಕೊಳ್ಳುತ್ತಿದ್ದೀನಿ.
ಆಗಸ್ಟ್ ೮ ನೇ ತಾರೀಕಿನಂತೆ ಒಲಿಂಪಿಕ್ಸ್ ಪದಕ ಪಟ್ಟಿಯಲ್ಲಿ ಆಸ್ಟ್ರೇಲಿಯಾ ದೇಶವು ಮೂರನೆ ಸ್ಥಾನದಲ್ಲಿದೆ (೧೮ ಚಿನ್ನದ ಪದಕಗಳನ್ನಾಧರಿಸಿ). ಆಸ್ಟ್ರೇಲಿಯಾದಿಂದ ೪೫೦ ಸ್ಪರ್ಧಾಳುಗಳು ೪೨ ಕ್ರೀಡಾ ವಿಭಾಗಗಳಲ್ಲಿ ಭಾಗವಹಿಸಲು ಹೋಗಿದ್ದಾರೆ. ಅಷ್ಟೆಲ್ಲ ವಿಭಾಗಗಳಲ್ಲಿ ಸುಮಾರು ೩೩೦ ಪಂದ್ಯಗಳು ನಡೆಯುತ್ತವೆಯೆಂದು ಹೇಳಿದ್ದಾರೆ. ಎಂದಿನಂತೆ ಆಸ್ಟ್ರೇಲಿಯನ್ ಕ್ರೀಡಾಪಟುಗಳಿಗೆ ಪ್ರಿಯವಾದ ಈಜು, ಕಯಾಕಿಂಗ್, ಸೈಕ್ಲಿಂಗ್, ಟೆನಿಸ್, ಸ್ಕೇಟ್ ಬೋರ್ಡಿಂಗ್, ಪೋಲ್ ವಾಲ್ಟ್ ಮುಂತಾದ ವಿಭಾಗಗಳಲ್ಲಿ ಚಿನ್ನದ ಸುರಿಮಳೆಯಾಗಿದೆ. ಇದೆ ಮೊದಲಬಾರಿ ಆಸ್ಟ್ರೇಲಿಯಾವು ೧೮ ಚಿನ್ನದ ಪದಕಗಳನ್ನು ಗಳಿಸಿರುವುದು ದೇಶಕ್ಕೆ ಹೆಗ್ಗಳಿಕೆಯ ಮಾತು.
ಈಜು, ಜಿಮ್ನಾಸ್ಟಿಕ್ಸ್, ಓಟ, ಮುಂತಾದ ಪಂದ್ಯಗಳನ್ನು ನೋಡುತ್ತಿದ್ದಾಗ ನನಗೆ ಬಹಳ ಇಷ್ಟವಾದದ್ದು ಪಾರ್ಕ್ ಸ್ಕೇಟ್ ಬೋರ್ಡಿಂಗ್ ಪಂದ್ಯ. ಈ ಬಾರಿ ಆಸ್ಟ್ರೇಲಿಯನ್ ಪಟುಗಳು ಮಹಿಳಾ ಮತ್ತು ಪುರುಷರ ಎರಡೂ ವಿಭಾಗಗಳಲ್ಲಿ ಚಿನ್ನದ ಪದಕ ವಿಜೇತರಾಗಿದ್ದಾರೆ. ಹಾಗೆ ನೋಡಿದರೆ ಇವರು ವಯಸ್ಸಿನಲ್ಲಿ ಕಿರಿಯರು. ಪುರುಷ ವಿಭಾಗದ ಕೀಗನ್ ಪಾಮರ್ ೨೦ ವರ್ಷದವನು. ಚಾಲೂಕಾಗಿ ತನ್ನ ಬೋರ್ಡಿನ ಮೇಲೆ ಜಾರುತ್ತಾ, ಪ್ರತಿಭೆ ಮೆರೆದು ಚಿನ್ನ ಗಳಿಸಿ, ಜಯಭೇರಿ ಬಾರಿಸಿ ‘ಐ ಸ್ಟಿಲ್ ಕಾಂಟ್ ಬಿಲೀವ್ ಇಟ್ ಬ್ರೊ’ ಅಂತ ಕೂಲ್ ಆಗಿ ಮಾತನಾಡಿದ ಚತುರ. ಕೀಗನ್ ಹಿಂದಿನ ಬಾರಿ ಟೋಕಿಯೋ ೨೦೨೦ ಒಲಿಂಪಿಕ್ಸ್‌ನಲ್ಲೂ ಚಾಂಪಿಯನ್ ಆಗಿದ್ದು ತನ್ನ ಹಿರಿಮೆಯನ್ನು ಈ ಬಾರಿಯೂ ಉಳಿಸಿಕೊಂಡಿದ್ದು ಆಸ್ಟ್ರೇಲಿಯನ್ ಪ್ರಧಾನ ಮಂತ್ರಿಯ ಗಮನವನ್ನೂ ಸೆಳೆದಿತ್ತು.
ಸ್ಕೇಟ್ ಬೋರ್ಡ್ ಎಂದರೆ ನನಗೆ ಬಲು ಇಷ್ಟ. ಮಹಿಳಾ ವಿಭಾಗದಲ್ಲಿ ಚಿನ್ನ ಗಳಿಸಿದ ಅರಿಸಾ ಟ್ರು ಕೇವಲ ಹದಿನಾಲ್ಕು ವರ್ಷ ವಯಸ್ಸಿನ ಶಾಲಾಬಾಲಕಿ. ಇವಳು ಅತ್ಯಂತ ಕಿರಿಯ ಆಸ್ಟ್ರೇಲಿಯನ್ ಒಲಿಂಪಿಕ್ಸ್ ಚಾಂಪಿಯನ್. ದೇಹಗಾತ್ರದಲ್ಲೂ ಸ್ವಲ್ಪ ಚಿಕ್ಕದಾಗಿರುವ ಅರಿಸಾ ತನ್ನ ಉದ್ದನೆ ಕೂದಲಿಗೆ ರಿಬ್ಬನ್ ಹಾಕಿ ಬಂಧಿಸಿ, ಪ್ಯಾರಿಸ್ ನಗರದ ಸ್ಕೇಟ್ ಬೋರ್ಡಿಂಗ್ ಅಖಾಡಕ್ಕೆ ಬಂದಾಗ ನನ್ನ ಕನಸಿಗೆ ನಿಜರೂಪ ಬಂದಂತಾಗಿತ್ತು. ಇತ್ತ ಅವಳ ತವರಿನಲ್ಲಿ – ನಮ್ಮ ರಾಣಿರಾಜ್ಯದ ಗೋಲ್ಡ್ ಕೋಸ್ಟ್ ನಗರದಲ್ಲಿ – ಅವಳ ಶಾಲಾ ಸ್ನೇಹಿತರು, ಅಭಿಮಾನಿಗಳು ಹರ್ಷೋದ್ಘಾರ ಮಾಡಿದರು. ಎಲ್ಲರೂ ತಾವು ರಾತ್ರಿ ಜಾಗರಣೆ ಮಾಡಿ ಪಂದ್ಯವನ್ನು ವೀಕ್ಷಿಸಿ ನಂತರ ಅರಿಸಾ ವಿಜಯವನ್ನು ಸಂಭ್ರಮದಿಂದ ಆಚರಿಸಿದ್ದನ್ನು ಟಿವಿ ಚಾನೆಲ್‌ಗಳಲ್ಲಿ ಹೇಳಿದರು.
ಅರಿಸಾಳ ಸ್ಕೇಟ್ ಬೋರ್ಡಿಂಗ್ ಕೌಶಲ್ಯ ಬೆಟ್ಟಸಬೆರಗಾಗುವಂತಿತ್ತು. ಒಂದುಬಾರಿಯೂ ತಪ್ಪು ಮಾಡದೆ, ಲೀಲಾಜಾಲವಾಗಿ ತನ್ನ ಬೋರ್ಡನ್ನು ನಿಯಂತ್ರಿಸುತ್ತಾ, ರಬ್ಬರಿನಂತೆ ದೇಹವನ್ನು ಕುಗ್ಗಿಸಿ, ಬಳುಕಿಸಿ, ನಿಲ್ಲಿಸಿ, ಬಗ್ಗಿಸಿ, ಪಾದಗಳನ್ನು ಬೋರ್ಡಿನಿಂದ ತೆಗೆಯದೆ, ಬೋರ್ಡನ್ನು ಕಾಂಕ್ರೀಟ್ ಗೋಡೆಯ ಮೇಲೆ ಹತ್ತಿಸಿ, ಜಾರಿಸಿ, ಗಾಳಿಯಲ್ಲಿ ಹಾರಿ, ಎರಡು ಬಾರಿ ದೇಹವನ್ನು, ಬೋರ್ಡನ್ನು ತಿರುಗಿಸಿ ಮತ್ತೆ ಗೋಡೆಯಂಚಿನ ಮೇಲೆ ಇಳಿದಾಗ ಅವಳ ಚಾಂಪಿಯನ್ ಕಲೆ, ಅದ್ಭುತ ಪ್ರತಿಭೆ ಸಾಬೀತಾಗಿತ್ತು. ಕಣ್ಣಿಗೆ ಹಬ್ಬವಾಗಿತ್ತು. ಅವಳ ಜಪಾನ್ ಮೂಲದ ತಾಯಿಗೆ, ವೆಲ್ಷ್ ಮೂಲದ ತಂದೆಗೆ ಹಿರಿಹಿರಿ ಹಿಗ್ಗು. ಅವಳ ಕೋಚ್‌ಗಂತೂ ಕುಣಿದಾಡುವಷ್ಟು ಸಂತೋಷ. ಅರಿಸಾ ಸ್ವಭಾತಃ ಮೃದುಭಾಷಿ. ತನ್ನ ಬಾಲ್ಯದ ಮುಗ್ಧತೆಯನ್ನು ತೋರಿ ಎಲ್ಲರ ಮನ ಗೆದ್ದಿದ್ದಾಳೆ. ಟಿವಿ ಸಂದರ್ಶನದಲ್ಲಿ ಅವಳು ಹೇಳಿದ್ದು ತಾನು ಚಿನ್ನದ ಪದಕವನ್ನು ಗೆದ್ದರೆ ಅಮ್ಮಅಪ್ಪಂದಿರು ತನಗೊಂದು ಮುದ್ದು ಪೆಟ್ ಬಾತುಕೋಳಿಯನ್ನು ಕೊಡಿಸಬೇಕು ಎಂದು ಒಪ್ಪಂದ ಮಾಡಿಕೊಂಡಿದ್ದಳಂತೆ. ವಾಪಸ್ ಆಸ್ಟ್ರೇಲಿಯಾಕ್ಕೆ ಹೋದಾಗ ತಾನು ಎದುರುನೋಡುತ್ತಿರುವುದು ಗೆಳತಿಯರ ಸಂಗ ಮತ್ತು ಪೆಟ್ ಬಾತುಕೋಳಿ ಎಂದು ಹೇಳಿ ನಕ್ಕಳಾ ಹುಡುಗಿ.
ಆಸ್ಟ್ರೇಲಿಯನ್ ಮಹಿಳಾ ಈಜುಪಟುಗಳೂ ಭಾರಿ ಹೆಸರು ಮಾಡಿದ್ದಾರೆ. ಅದರಲ್ಲೂ ಹೆಚ್ಚಿನದಾಗಿ ಶಾಶ್ವತ ರೆಕಾರ್ಡ್ ಮಾಡಿದ್ದು ಎಮ್ಮಾ ಮಕೀನ್. ಈಕೆ ಈಗ ಆಸ್ಟ್ರೇಲಿಯಾದ ಅತ್ಯಂತ ಪ್ರಸಿದ್ಧ ಈಜುಗಾರ್ತಿ. ಒಂದೇ ಒಲಿಂಪಿಕ್ಸ್‌ನಲ್ಲಿ ಬರೋಬ್ಬರಿ ಏಳು ಪದಕಗಳನ್ನು ಗೆದ್ದ ಹಿರಿಮೆ ಈಕೆಯದ್ದು. ಮತ್ತೊಬ್ಬ ಸುಪ್ರಸಿದ್ಧ ಈಜುಗಾರ ಇಯಾನ್ ಥೋರ್ಪ್ ಹೆಸರಿನಲ್ಲಿದ್ದದ್ದು ಆರು ಪದಕಗಳ ರೆಕಾರ್ಡ್. ಅದನ್ನು ಮುರಿದು ಈಗ ಎಮ್ಮಾ ಮಕೀನ್ ಹುಡುಗಿಯರಿಗೆ, ಮಹಿಳೆಯರಿಗೆ ಮಾದರಿಯಾಗಿದ್ದಾರೆ.
ಮತ್ತೊಂದು ಪ್ಯಾರಿಸ್ ೨೦೨೪ ಒಲಿಂಪಿಕ್ಸ್ ವಿಶೇಷ ಏನೆಂದರೆ ಬ್ರೇಕ್ ಡಾನ್ಸ್ ಪಂದ್ಯ. ಇದನ್ನು ಘೋಷಿಸಿದಾಗ ಬ್ರೇಕ್ ಡಾನ್ಸ್ ಒಂದು ಕ್ರೀಡೆಯೇ, ಅದು ಹೇಗೆ ಆಟವಾಗುತ್ತದೆ? ಎಂದು ಪ್ರಶ್ನಿಸಿ, ಟೀಕಿಸಿ, ವಿರೋಧಿಸಿದವರು ಬಹಳ ಜನ. ಆದರೆ ಬ್ರೇಕ್ ಡಾನ್ಸ್ ಒಂದು ಕಠಿಣವಾದ ಕಲೆ, ಅದನ್ನು ದೈಹಿಕ ಚಟುವಟಿಕೆಯಾಗಿ, ಆರೋಗ್ಯಕ್ಕಾಗಿ ಕಲಿಯುವವರು ಹೆಚ್ಚುತ್ತಿದ್ದಾರೆ. ಅದನ್ನು ಒಂದು ಕ್ರೀಡೆಯೆಂದು ಪರಿಗಣಿಸಿದ್ದೇವೆ ಎಂದು ಒಲಿಂಪಿಕ್ಸ್ ಸಮಿತಿ ಹೇಳಿತ್ತು. ಆಸ್ಟ್ರೇಲಿಯಾದಿಂದ ಬ್ರೇಕ್ ಡಾನ್ಸ್ ಪಂದ್ಯಕ್ಕೆ ಹೋಗಿರುವುದು ರೇಚಲ್ ಗನ್. ಈಕೆ ಬ್ರೇಕ್ ಡಾನ್ಸ್ ಪಟು ಮತ್ತು ಅದೇ ವಿಷಯದಲ್ಲಿ ಪಿಎಚ್.ಡಿ ಪಡೆದು ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕಿಯಾಗಿದ್ದಾರೆ.
ಒಲಿಂಪಿಕ್ಸ್ ಪಂದ್ಯಗಳಲ್ಲಿ ಭಾಗವಹಿಸಲು ಆಯಾ ದೇಶದ ಮಟ್ಟದಲ್ಲಿ ಆಯ್ಕೆಯಾಗಬೇಕಲ್ಲ, ಅದಕ್ಕಾಗಿ ಅನೇಕರು ಇಡೀ ಒಂದು ದಶಕವನ್ನು ಮುಡಿಪಾಗಿಡುತ್ತಾರೆ. ಜಿಮ್ನಾಸ್ಟಿಕ್ಸ್, ಈಜು ಮುಂತಾದ ಕ್ರೀಡೆಗಳಲ್ಲಿ ಪಳಗಬೇಕೆಂದರೆ ಕಿರುಬಾಲ್ಯದಿಂದಲೇ ಕಠಿಣ ತರಬೇತಿಗೆ ಒಟ್ಟಿಕೊಳ್ಳಬೇಕು. ಅಂದರೆ ಬೆಳಗ್ಗೆ ೪ ಗಂಟೆಗೆ, ಇನ್ನೂ ಕತ್ತಲಿರುವಾಗಲೆ, ಈಜುಕೊಳದಲ್ಲಿರಬೇಕು, ರನ್ನಿಂಗ್ ಟ್ರ್ಯಾಕ್‌ನಲ್ಲಿರಬೇಕು. ಮಕ್ಕಳನ್ನು ತರಬೇತಿಗೆ ಕರೆದೊಯ್ಯುವ ಪೋಷಕರು, ಮುಖ್ಯವಾಗಿ ಅಮ್ಮಂದಿರು, ತಾಳ್ಮೆ, ಮಾನಸಿಕ ಸ್ಥೈರ್ಯವನ್ನು ಬೆಳೆಸಿಕೊಂಡು ಅದನ್ನು ಮಕ್ಕಳಿಗೆ ದಾಟಿಸಬೇಕು. ಸ್ಪರ್ಧಾಳುಗಳ ಪಾತ್ರ ಎಷ್ಟಿರುತ್ತದೊ ಅಷ್ಟೇ ಮುಖ್ಯ ಪಾತ್ರವಿರುವುದು ಅವರ ಕುಟುಂಬದವರು ಮತ್ತು ಕೋಚ್‌ಗಳಿಗೆ. ಇದಲ್ಲದೆ, ತರಬೇತಿ ಪಡೆಯುತ್ತಿರುವ ಕಿರಿಯರು ಮತ್ತು ಅವರ ಕುಟುಂಬದವರು ಎಲ್ಲೆಲ್ಲೊ ನಡೆಯುವ ಸ್ಪರ್ಧೆಗಳಿಗೆ ಹಾಜರಾಗಬೇಕು. ಸ್ಪರ್ಧಾ ಪೋಷಾಕು, ಸಾಮಗ್ರಿಗಳ ಖರ್ಚುವೆಚ್ಚಗಳನ್ನು ಭರಿಸಬೇಕು. sponsor ಗಳನ್ನು ಹುಡುಕಿ ಅವರ ಮನವೊಲಿಸಬೇಕು. ಸ್ಪರ್ಧೆಗಳಲ್ಲಿ ಭಾಗವಹಿಸಲು ಸದಾ ಎಚ್ಚರದಿಂದಿರಬೇಕು. ಒಟ್ಟಾರೆ, ಒಲಿಂಪಿಕ್ಸ್ ಪಂದ್ಯಗಳಲ್ಲಿ ಭಾಗವಹಿಸಲು ವರ್ಷಗಳ ಕಾಲ ತಪಸ್ಸು ಮಾಡಬೇಕು. ನಮ್ಮ ಕೈತೋಟಗಾರರ ಗುಂಪಿನ ಸದಸ್ಯರೊಬ್ಬರ ಕುಟುಂಬದಲ್ಲಿ ಹೀಗೊಂದು ತಪಸ್ಸು ನಡೆದಿದೆ.
ಮುಂದಿನ ೨೦೨೮ರ ಬೇಸಿಗೆ ಒಲಿಂಪಿಕ್ಸ್ ಪಂದ್ಯಗಳು ನಡೆಯುವುದು ಲಾಸ್ ಏಂಜೆಲ್ಸ್ ನಗರದಲ್ಲಿ. ಅದಾದ ನಂತರದ ೨೦೩೨ರ ಬೇಸಿಗೆ ಒಲಿಂಪಿಕ್ಸ್ ನಡೆಯುವುದು ನಮ್ಮ ಬ್ರಿಸ್ಬೇನ್ ನಗರದಲ್ಲಿ. ಎರಡು ವರ್ಷಗಳ ಹಿಂದೆ ಕ್ವೀನ್ಸ್‌ಲ್ಯಾಂಡ್ ರಾಜ್ಯ ಸರ್ಕಾರ ಇದನ್ನು ಹೇಳಿದಾಗ ರಾಜ್ಯದಲ್ಲಿ ಪರ-ವಿರೋಧಗಳ ದನಿಗಳಿದ್ದವು. ಗಗನಕ್ಕೇರುತ್ತಿದ್ದ ನಿತ್ಯಜೀವನದ ‘ಕಾಸ್ಟ್ ಆಫ್ ಲಿವಿಂಗ್’ ಸಮಸ್ಯೆ ಎಲ್ಲರನ್ನೂ ಕಾಡುತ್ತಿದ್ದಾಗ ನಮಗ್ಯಾಕೆ ಒಲಿಂಪಿಕ್ಸ್ ಬೇಕಿತ್ತು ಎಂದು ಸಾರ್ವಜನಿಕರು ಎಗ್ಗಾಡಿ, ಅದು ರಾಜಕೀಯ ದಾಳವಾಗಿ ಮುಖ್ಯಮಂತ್ರಿಗಳ ರಾಜೀನಾಮೆಯಲ್ಲಿ ಮುಕ್ತಾಯವಾಯ್ತು. ಹೊಸ ಮುಖ್ಯಮಂತ್ರಿ ಬಂದರು, ‘ಕಾಸ್ಟ್ ಆಫ್ ಲಿವಿಂಗ್’ ಸಮಸ್ಯೆಗೆ ಆದ್ಯತೆ ಕೊಟ್ಟಿದ್ದಾರೆ. ಪಕ್ಕದಲ್ಲಿ ೨೦೩೨ ಒಲಿಂಪಿಕ್ಸ್ ಪಂದ್ಯಗಳ ತಯಾರಿಯೂ ನಡೆಯುತ್ತಿದೆ. ಅಲ್ಲೊಂದು indoor ಸ್ಪೋರ್ಟಿಂಗ್ ಕಾಂಪ್ಲೆಕ್ಸ್, ಇಲ್ಲೊಂದು whitewater ಸೆಂಟರ್, ಅದೂಇದೂ ನಡೆಯುತ್ತಿದೆ. ಅದರ ಬಗ್ಗೆ ಮುಂದೊಮ್ಮೆ ಬರೆಯುತ್ತೀನಿ.
ಡಾ. ವಿನತೆ ಶರ್ಮ ಬೆಂಗಳೂರಿನವರು. ಈಗ ಆಸ್ಟ್ರೇಲಿಯಾದಲ್ಲಿ ವಾಸವಾಗಿದ್ದಾರೆ. ಕೆಲ ಕಾಲ ಇಂಗ್ಲೆಂಡಿನಲ್ಲೂ ವಾಸಿಸಿದ್ದರು. ಮನಃಶಾಸ್ತ್ರ, ಶಿಕ್ಷಣ, ಪರಿಸರ ಅಧ್ಯಯನ ಮತ್ತು ಸಮಾಜಕಾರ್ಯವೆಂಬ ವಿಭಿನ್ನ ಕ್ಷೇತ್ರಗಳಲ್ಲಿ ವಿನತೆಯ ವ್ಯಾಸಂಗ ಮತ್ತು ವೃತ್ತಿ ಅನುಭವವಿದೆ. ಪ್ರಸ್ತುತ ಸಮಾಜಕಾರ್ಯದ ಉಪನ್ಯಾಸಕಿಯಾಗಿದ್ದಾರೆ. ಇವರು ೨೦೨೨ರಲ್ಲಿ ಹೊರತಂದ ‘ಭಾರತೀಯ ಮಹಿಳೆ ಮತ್ತು ವಿರಾಮ: ಕೆಲವು ಮುಖಗಳು, ಅನುಭವ ಮತ್ತು ಚರ್ಚೆ’ ಪುಸ್ತಕದ ಮುಖ್ಯ ಸಂಪಾದಕಿ. ಇತ್ತೀಚೆಗೆ ಇವರ ‘ಅಬೊರಿಜಿನಲ್ ಆಸ್ಟ್ರೇಲಿಯಾಕ್ಕೊಂದು ವಲಸಿಗ ಲೆನ್ಸ್’ ಕೃತಿ ಪ್ರಕಟವಾಗಿದೆ.