ಮನುಷ್ಯ ಬುದ್ದಿವಂತನಾದಂತೆಲ್ಲ ಅಪಾಯಕಾರಿ ಕೂಡ ಆಗುತ್ತಾನೆ. ಒಬ್ಬ ಅನಕ್ಷರಸ್ಥನ ಅಜ್ಞಾನಕ್ಕಿಂತ ಬುದ್ಧಿವಂತನ ಕುಟಿಲತೆ ಹೆಚ್ಚು ಅಪಾಯಕಾರಿ. ನಾಗರೀಕತೆ ಬೆಳೆದಂತೆಲ್ಲ ಮನುಷ್ಯ ಇನ್ನಷ್ಟು ಕರುಣಾಳು ಆಗಬೇಕಿತ್ತು, ತನ್ನ ನಿಜ ಧರ್ಮದಾಚೆ ಮನುಷ್ಯತ್ವ ಇದೆ ಎಂಬ ಅರಿವು ಇರಬೇಕಾಗಿತ್ತು. ಸ್ವಾರ್ಥ ಲೋಭ ತುಂಬಿದ ಜಗತ್ತಿನಲ್ಲಿ ಓದಿದ ಮನುಷ್ಯ ಉದಾರಿಯಾಗಬೇಕಿತ್ತು. ಆದರೆ ಆದದ್ದೇ ಬೇರೆ…. ಜಾತಿಗೊಂದು ಮಠ ಧರ್ಮಕ್ಕೊಂದು ಕಲ್ಯಾಣ ಮಂಟಪ ಬಡವರ ಅಜ್ಞಾನವೇ ಇವರ ಅಧಿಕಾರದ ಮೂಲವಾಗಿ ಯಾರು ಅಸಮಾನತೆಯ ವಿರುದ್ಧ ಧರ್ಮಾಂಧತೆಯ ವಿರುದ್ಧ ಮಾತನಾಡಬೇಕಿತ್ತೋ ಅವರೇ ಅದನ್ನು ಒಳಗೊಳಗೇ ಪೋಷಿಸುತ್ತ ತಮ್ಮ ಫ್ಯುಡೆಲ್ ಸಾಮ್ರಾಜ್ಯದ ಕುರ್ಚಿಗಳನ್ನು ಗಟ್ಟಿಗೊಳಿಸಿಕೊಳ್ಳುತ್ತಿದ್ದಾರೆ.
ಡಾ. ಲಕ್ಷ್ಮಣ ವಿ.ಎ. ಅಂಕಣ
ಸಾಂಪ್ರದಾಯಿಕ ಓದಿನ ಪ್ರಕಾರದಿಂದ ಗ್ಯಾಜೇಟ್ ಓದಿಗೆ ಓದುಗ ಹೊರಳುತ್ತಿರುವ ಸಂಕ್ರಮಣದ ಘಟ್ಟದಲ್ಲಿಂದು ನಾವಿದ್ದೇವೆ. ಇಂತಹ ಪರಿಸ್ಥಿತಿಯಲ್ಲಿ ಪುಸ್ತಕ ಪ್ರಕಟಿಸಲೇಬೇಕಾ ಎಂಬ ಮೂಲಭೂತಪ್ರಶ್ನೆ ಸಾಕಷ್ಟು ಸಲ ಗೊಂದಲಕ್ಕೊಳಗಾಗಿಸಿದೆ. ಆದರೂ ಈ ಪುಸ್ತಕಗಳು ಕೊಡುವ ಆಪ್ತಗಂಧದ ಮೋಹವನ್ನು ಬಿಡದವರು ಸಾಕಷ್ಟು ಸಂಖ್ಯೆಯ ಓದುಗರಿರುವರೆಂಬ ಧೈರ್ಯದಿಂದಲೇ ಇಂತಹದ್ದೊಂದು ಸಾಹಸಕ್ಕೆ ಕೈ ಹಾಕಲು ಲೇಖಕರನ್ನು ಮತ್ತು ಪ್ರಕಾಶಕರನ್ನು ಪ್ರೇರೇಪಿಸುತ್ತದೆ.
ಪುಸ್ತಕ ಪ್ರಕಟಣೆ ಈ ಕಾಲದಲ್ಲಿ ಸ್ವಲ್ಪ ರಿಸ್ಕೀಯಾದರೂ ಇದನ್ನು ರೂಪಿಸುವ ಒಂದು ಸಾಮೂಹಿಕ ಜವಾಬ್ದಾರಿಯ ಒಂದು ಹುರುಪಿದೆಯಲ್ಲ ಇದೊಂದು ತರಹ ಮದುವೆ ಮನೆಯಲ್ಲಿನ ಸಂಭ್ರಮದ ಅಷ್ಟೇ ಎಚ್ಚರಿಕೆಯ (ಏನಾದರೂ ಹೆಚ್ಚು ಕಡಿಮೆಯಾದರೆ ಬೀಗರ ಮುಂದೆ ಅವಮಾನ ಆಗಬಾರದಲ್ಲ, ಎನ್ನುವುದಕ್ಕಿಂತ ನೆಂಟರಿಗೆ ಅಪಚಾರವಾಗಬಾರದಲ್ಲ ಎನ್ನುವ ಎಚ್ಚರಿಕೆ ಕೂಡ) ಕೆಲಸ. ಈ ಒಂದು ಸಾಮೂಹಿಕ ಕ್ರಿಯೆಯಲ್ಲಿ ಪ್ರಕಾಶಕ, ಕವಿ, ಹಿರಿಯರು ಬರೆದುಕೊಡುವ ಮುನ್ನುಡಿ, ಬೆನ್ನುಡಿ, ಡಿ,ಟಿ.ಪಿ.ಯವರು, ಪ್ರೂಫ್ ತಿದ್ದುವವರು, ಮುಖಪುಟ ವಿನ್ಯಾಸಕಾರರು, ರೇಖಾಚಿತ್ರ ಬಿಡಿಸುವವರು…. ಇವರೆಲ್ಲ ಬೇರೆ ಬೇರೆಯಾದರೂ ಈ ಪುಸ್ತಕವೆಂಬ ಮಕಮಲ್ಲ ಬಟ್ಟೆಯ ನೇಯ್ಗೆಯಲ್ಲಿ ಇವರೆಲ್ಲಾ ಒಂದೇ ಸೂತ್ರದಲ್ಲಿ ಬಂಧಿಯಾಗಿ ತಮ್ಮ ತಮ್ಮ ಬಿಡಿ ಕೆಲಸ ಬಿಟ್ಟು ಇಡೀ ಕಾಯಕದ ನೆಪದಲ್ಲಿ ಒಂದಾಗುತ್ತಾರೆ…. ಈ ನೆಪದಲ್ಲೊಂದಿಷ್ಟು ಮನಸುಗಳು ಒಂದಾಗುತ್ತವೆ. ಈ ನೆನಪುಗಳು ನಮ್ಮ ಜೀವನಪೂರ್ತಿ ಖುಷಿಯಾಗಿರಲು ಕಾರಣವಾಗುತ್ತವೆ. ಹೀಗಾಗಿ ಪುಸ್ತಕದ ಲಾಭ, ನಷ್ಟ, ಮಾರುಕಟ್ಟೆ, ಅರ್ಥಗಳೆಲ್ಲ ಈ ಒಂದು ಗಳಿಗೆಯಲ್ಲಿ ಅನರ್ಥವಾಗುತ್ತವೆ. ಇದನ್ನು ನನ್ನ ಕವನ ಸಂಕಲನದ ಮಾತುಗಳಲ್ಲಿ ಬರೆದಿದ್ದೆ.
ಆದರೆ ನಿಜಕ್ಕೂ ಈ ಎಲ್ಲ ಪುಸ್ತಕ ಓದಿನಿಂದ ಮನುಕುಲಕ್ಕೇನಾದರೂ ಲಾಭವಿದೆಯೇ ಎಂಬ ತೀರ ಫಿಲಾಸಫಿಕಲ್ ಆದ ಅಥವ ಕೆಲವರಿಗೆ ಅತೀ ಕ್ಷುಲ್ಲುಕ ವಿಚಾರವೊಂದು ನನ್ನ ಮನಸಿನಲಿ ಹಾಯ್ದು ನನ್ನ ಕಂಗೆಡಿಸಿತು. ಆರ್ಟ್ ಆಫ್ ಲಿವಿಂಗ್ ನ ರವಿಶಂಕರ ಗುರುಗಳಿಗೊಮ್ಮೆ ಸಂದರ್ಶನದಲ್ಲಿ “ನಿಮ್ಮ ಜೀವನದಲ್ಲಿ ಪ್ರಭಾವ ಬೀರಿದ ಪುಸ್ತಕದ ಹೆಸರು ಹೇಳಿ” ಅಂತ ಒಬ್ಬರು ಪ್ರಶ್ನಿಸಿದಾಗ “ನಾನು ಬಹಳ ವಿರಳವಾಗಿ ಪುಸ್ತಕ ಓದುತ್ತೇನೆ. ಬದಲಾಗಿ ಮನುಷ್ಯರ ಮುಖಗಳನ್ನು ಓದುತ್ತೇನೆ” ಎಂದು ಬಹುಮೂಲ್ಯವಾದ ಉತ್ತರ ಕೊಟ್ಟು ಅಲ್ಲಿದ್ದ ಪ್ರೇಕ್ಷಕರನ್ನು ಒಂದು ಸಲ ಯೋಚಿಸುವಂತೆ ಮಾಡಿದ್ದರು. ನಿಜ ಕೆಲ ಸಂತರು ಸಾಧುಗಳು ಸಿದ್ಧಿಯೆಂದು ಪಡೆದುಕೊಂಡಿದ್ದು ಕೇವಲ ತಮ್ಮ ಆತ್ಮಜ್ಞಾನದ ಬಲದಿಂದ ಅಂತ ಹೇಳಿದರೂ ನಮ್ಮಂತಹ ಹುಲುಮಾನವರಿಗೆ ಒಂದು ನೀರಸ ದೈನಿಕವನ್ನು ಏಕತಾನತೆಯ ಬದುಕನ್ನು ಕಳೆಯಲು ಅಥವ ಈ ಲೋಕವನ್ನು ಅರ್ಥೈಸಲು ಓದು ಮುಖ್ಯವಾಗುತ್ತದೆ.
ಮಹಾತ್ಮ ಗಾಂಧೀಜಿಯವರಿಗೆ un to the last ಪುಸ್ತಕ ಸಿಗದೇ ಹೋಗಿದ್ದರೆ ಅಥವ ಅವರು ಸತ್ಯ ಹರಿಶ್ಚಂದ್ರ ನಾಟಕ ನೋಡದೇ ಹೋಗಿದ್ದರೆ ಅವರು ದಕ್ಷಿಣ ಆಫ್ರಿಕೆಗೆ ಹೋಗದೆ ಇದ್ದಿದ್ದರೆ ಬಿಳಿಯರ ಮೇಲಿನ ಇಂಗ್ಲಿಷರ ದೌರ್ಜನ್ಯ ಅರ್ಥವಾಗುತ್ತಿತ್ತೆ? ಅವರು ಬ್ಯಾರಿಸ್ಟರ್ ಪದವಿ ಪಡೆಯದೇ ಹೋಗಿದ್ದರೆ ಕಾನೂನು ಅರ್ಥವಾಗುತ್ತಿತ್ತೆ? ಆಗ ಭಾರತದ ಅನಕ್ಷರತೆ ಎಷ್ಟಿತ್ತೆಂದರೆ ಸ್ವತಃ ಮುಕ್ಕಾಲು ಪಾಲು ಭಾರತೀಯರಿಗೆ ತಾವು ಬ್ರಿಟಿಷ್ ರ ದಾಸ್ಯದ ಸಂಕೋಲೆಯಲ್ಲಿದ್ದೇವೆಂಬ ಅರಿವಿರಲಿಲ್ಲ. ಇಂದಿಗೂ ಹಳ್ಳಿಗಳಲ್ಲಿ ವಲಸೆ ಕಾರ್ಮಿಕರಿಗೆ ಕೆಲ ಅಸಹಾಯಕ ಹೆಣ್ಣುಮಕ್ಕಳಿಗೆ ಸ್ವಾತಂತ್ರ್ಯದ ಅರಿವಿಲ್ಲ. ತಮ್ಮ ಮೇಲೆ ಆಗುತ್ತಿರುವ ಅನ್ಯಾಯದ ಅರಿವಿಲ್ಲ. ಇಂತಹ ಸಂದರ್ಭದಲ್ಲಿ ಓದು ಜ್ಞಾನದ ಅವಶ್ಯಕತೆ ತೀರ ಅನಿವಾರ್ಯವೆನಿಸುತ್ತದೆ. ಪುಸ್ತಕದ ಜ್ಞಾನವೆಂಬುದು ಸಾಕ್ಷಾತ್ ಸರಸ್ವತಿಯ ಪೂಜೆಯಾಗುತ್ತದೆ. ತಮ್ಮ ಬಿಡುಗಡೆಗೆ ಒಂದು ದಾರಿಯಾಗುತ್ತದೆ ಸ್ವಾತಂತ್ರ್ಯ ದ ಅರಿವಾಗುತ್ತದೆ.
ಆಗ ಭಾರತದ ಅನಕ್ಷರತೆ ಎಷ್ಟಿತ್ತೆಂದರೆ ಸ್ವತಃ ಮುಕ್ಕಾಲು ಪಾಲು ಭಾರತೀಯರಿಗೆ ತಾವು ಬ್ರಿಟಿಷ್ ರ ದಾಸ್ಯದ ಸಂಕೋಲೆಯಲ್ಲಿದ್ದೇವೆಂಬ ಅರಿವಿರಲಿಲ್ಲ. ಇಂದಿಗೂ ಹಳ್ಳಿಗಳಲ್ಲಿ ವಲಸೆ ಕಾರ್ಮಿಕರಿಗೆ ಕೆಲ ಅಸಹಾಯಕ ಹೆಣ್ಣುಮಕ್ಕಳಿಗೆ ಸ್ವಾತಂತ್ರ್ಯದ ಅರಿವಿಲ್ಲ. ತಮ್ಮ ಮೇಲೆ ಆಗುತ್ತಿರುವ ಅನ್ಯಾಯದ ಅರಿವಿಲ್ಲ.
ಓದಿನ ದುರಂತವೊಂದಿದೆ, ಅದನ್ನು ದೇವನೂರು ಮಹಾದೇವರು ಚೆನ್ನಾಗಿ ಹೇಳಿದ್ದಾರೆ. ಒಬ್ಬ ದಲಿತನಿಗೆ ದೀನನಿಗೆ ಇಷ್ಟು ದಿನ ತಾನಿರುವುದು ಸಮಾಜದ ಕಟ್ಟ ಕಡೆಯ ಪಾತಳಿಯಲ್ಲಿ ಎಂಬ ಅರಿವಿರದ ತನಕ ಅವನು ಖುಷಿಯಾಗಿರುತ್ತಾನೆ. ಆದರೆ ಯಾವಾಗ ಒಬ್ಬ ದಲಿತ ಓದಿದಂತೆಲ್ಲ ತನ್ನೆದುರಿಗಿನ ಅನ್ಯಾಯಗಳು ಕಣ್ಣಿಗೆ ರಾಚಿ ತನಗೇನೂ ಮಾಡಲಿಕ್ಕಾಗುವುದಿಲ್ಲವೆಂಬ ಅಸಹಾಯಕತೆ ಇದೆಯಲ್ಲ ಇದಕ್ಕಿಂತ ಹಿಂಸೆ ಇನ್ನೊಂದಿಲ್ಲ ಎಂದು ಬರೆಯುತ್ತಾರೆ ಮತ್ತು ಇದು ಎಷ್ಟು ನಿಜ ಕೂಡ.
ಹಾಗಿದ್ದರೆ ಓದಿದವರು ಜ್ಞಾನಿಗಳೆಲ್ಲ ಸಮಾಜದ ಉದ್ಧಾರಕರೆ? ಸಾಮಾಜಿಕ ನ್ಯಾಯದ ಪ್ರತಿಪಾದಕರೇ? ಉಹುಂ ಅದೂ ಸುಳ್ಳು ಮನುಷ್ಯ ಬುದ್ದಿವಂತನಾದಂತೆಲ್ಲ ಅಪಾಯಕಾರಿ ಕೂಡ ಆಗುತ್ತಾನೆ. ಒಬ್ಬ ಅನಕ್ಷರಸ್ಥನ ಅಜ್ಞಾನಕ್ಕಿಂತ ಬುದ್ಧಿವಂತನ ಕುಟಿಲತೆ ಹೆಚ್ಚು ಅಪಾಯಕಾರಿ. ನಾಗರೀಕತೆ ಬೆಳೆದಂತೆಲ್ಲ ಮನುಷ್ಯ ಇನ್ನಷ್ಟು ಕರುಣಾಳು ಆಗಬೇಕಿತ್ತು, ತನ್ನ ನಿಜ ಧರ್ಮದಾಚೆ ಮನುಷ್ಯತ್ವ ಇದೆ ಎಂಬ ಅರಿವು ಇರಬೇಕಾಗಿತ್ತು. ಸ್ವಾರ್ಥ ಲೋಭ ತುಂಬಿದ ಜಗತ್ತಿನಲ್ಲಿ ಓದಿದ ಮನುಷ್ಯ ಉದಾರಿಯಾಗಬೇಕಿತ್ತು. ಆದರೆ ಆದದ್ದೇ ಬೇರೆ…. ಜಾತಿಗೊಂದು ಮಠ ಧರ್ಮಕ್ಕೊಂದು ಕಲ್ಯಾಣ ಮಂಟಪ ಬಡವರ ಅಜ್ಞಾನವೇ ಇವರ ಅಧಿಕಾರದ ಮೂಲವಾಗಿ ಯಾರು ಅಸಮಾನತೆಯ ವಿರುದ್ಧ ಧರ್ಮಾಂಧತೆಯ ವಿರುದ್ಧ ಮಾತನಾಡಬೇಕಿತ್ತೋ ಅವರೇ ಅದನ್ನು ಒಳಗೊಳಗೇ ಪೋಷಿಸುತ್ತ ತಮ್ಮ ಫ್ಯುಡೆಲ್ ಸಾಮ್ರಾಜ್ಯದ ಕುರ್ಚಿಗಳನ್ನು ಗಟ್ಟಿಗೊಳಿಸಿಕೊಳ್ಳುತ್ತಿದ್ದಾರೆ. ವಿ.ವಿ. ಗಳಲ್ಲಿ ಬಂಗಾರದ ಪದಕ ಪಡೆದುಕೊಂಡ ಸ್ಕಾಲರುಗಳು ತಮ್ಮ ತಮ್ಮ ಜಾತಿಯವರಿಗೆ ಪ್ರಾಧಾನ್ಯತೆ ಕೊಡುತ್ತ ತಾರತಮ್ಯ ಎಸಗುತ್ತಿರುವುದು ನಿತ್ಯ ಕಣ್ಣಿಗೆ ರಾಚುವ ಸತ್ಯವಾಗಿದೆ.
ಇಂದಿನ ಆಧುನಿಕ ಓದಿನ ಸಾಧನಗಳಾದ ಸಂಪರ್ಕ ಮಾಧ್ಯಮಗಳೂ ಫೇಕು ಸುದ್ದಿಗಳ ಹಬ್ಬಿಸುತ್ತಿವೆ. ಜನ ಜಾಗೃತಿ ಮೂಡಿಸಬೇಕಾದ ಟಿ.ವಿ.ಗಳು ಅತಿರಂಜಿತ ಸುದ್ದಿಗಳ ಬೆನ್ನುಬಿದ್ದು ಜನರ ಪಾಲಿಗೆ ಭಯೋತ್ಪಾಕವಾಗುತ್ತಿವೆ.
ನಾಜೀ ಕ್ಯಾಂಪಿನ ಗ್ಯಾಸ್ ಚೆಂಬರಿನಿಂದ ಬದುಕಿ ಉಳಿದವನೊಬ್ಬ ಹೀಗೆ ಬರೆದಿದ್ದ. ಈ ಗ್ಯಾಸ್ ಚೇಂಬರಿನ ನಿರ್ಮಾತೃಗಳು ಇಂಜಿನೀಯರುಗಳೇ ಆಗಿದ್ದರಲ್ಲವೇ? ಈಗ ಮನುಕುಲದ ನಾಶಕ್ಕೆ ಬಟನ್ ತುದಿಗಳ ಮೇಲೆ ನಿಂತ ಅಣ್ವಸ್ತ್ರಗಳನ್ನು ಸಿದ್ಧಪಡಿಸಿಟ್ಟುಕೊಂಡಿದ್ದವರು ಅನಕ್ಷರಸ್ಥರೆ?
ಈಗ ಬಂದಿದೆಯಲ್ಲ ಕೊರೋನಾ ಮಾರಿ.. ಇಡೀ ಅರ್ಧ ಗ್ಲೋಬನ್ನು ಸ್ತಬ್ಧ ಗೊಳಿಸಿದೆಯಲ್ಲ, ಇದನ್ನು ಗುಣಪಡಿಸುವವರು ಯಾರು? ವೈದ್ಯರು, ವೈದ್ಯಕೀಯ ಸಿಬ್ಬಂದಿ ಅಲ್ಲವೇ? ಹಾಗಿದ್ದರೆ ಅಣ್ವಸ್ತ್ರಗಳು ಗುಡಿ ಚರ್ಚ್ ಮಸೀದಿಗಳು ನಮ್ಮ ಜೀವ ಉಳಿಸಲಾರವು ಎಂಬಂತಾಯ್ತು. ಹಾಗಿದ್ದರೆ ಮನುಕುಲದ ಉದ್ಧಾರಕ್ಕೆ ಅಂತ ಬಜೆಟ್ಟಿನಲ್ಲಿ ಕೊಡುವ ಅನುದಾನವೆಷ್ಟು? ರಾಷ್ಟ್ರದ ಭದ್ರತೆಯ ನೆಪದಲ್ಲಿ ಮಾಡುವ ಖರ್ಚು ಎಷ್ಟು?
ಕೊರೋನೊತ್ತರ ಕಾಲ ಇದಕ್ಕೆಲ್ಲ ಸಮರ್ಪಕ ಉತ್ತರ ಕಂಡುಕೊಳ್ಳದಿದ್ದರೆ ಈ ಭೂಮಿಯನ್ನು ನಾಶ ಮಾಡಲು ಅಣ್ವಸ್ತ್ರಗಳು ಬೇಕಾಗಿಲ್ಲ, ಕಣ್ಣಿಗೆ ಕಾಣದ ಒಂದು ವೈರಸ್ ಸಾಕು….. ಈ ಆತ್ಮಜ್ಞಾನದ ಪುಸ್ತಕವನ್ನು ಯಾವ ಗ್ರಂಥಾಲಯದಲ್ಲಿ ಹುಡುಕುವುದು?
ಡಾ. ಲಕ್ಷ್ಮಣ ವಿ.ಎ ಮೂಲತಃ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಮೋಳೆ ಗ್ರಾಮದವರು. ಮಹಾಗಣಪತಿ ಆಯುರ್ವೇದ ಮಹಾವಿದ್ಯಾಲಯದಲ್ಲಿ ವೈದ್ಯಕೀಯ ಪದವಿ, ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಡಿಪ್ಲೋಮಾ ಪದವಿ ಪಡೆದಿದ್ದಾರೆ. ಪ್ರಸ್ತುತ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಖಾಸಗೀ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.