ಆಧುನಿಕ ಜೀವನಶೈಲಿ ಮನುಷ್ಯ ಅಸ್ತಿತ್ವವನ್ನು ಕುಬ್ಜಗೊಳಿಸುವುದರ ಜೊತೆಗೆ ಅವನ ತೀವ್ರ ಭಾವವಲಯಗಳನ್ನು, ಸೃಜನಶೀಲ ಆದರ್ಶಗಳ ಹಂಬಲಗಳನ್ನು ಗೇಲಿಮಾಡಿ ಅಪಹಾಸ್ಯಕ್ಕೀಡು ಮಾಡುವುದನ್ನು ಗುರುತಿಸಿರುವುದು ಸಂಕಲನದ ಹೆಚ್ಚುಗಾರಿಕೆಯಾಗಿದೆ. ಎಲ್ಲ ಕಡೆ ಮಾರುಕಟ್ಟೆಯ ಕಸ ತುಂಬಿರುವ, ವಸ್ತುಗುಡ್ಡಗಳು ಜನರನ್ನು ತಿಂದುತೇಗುವ, ಪ್ರತಿಬಿಂಬಗಳ ಮೆರವಣಿಗೆ ಸಾಗಿರುವ ದಟ್ಟವಾಸನೆಗಳ ನಗರದಲ್ಲಿ ಇದೇ ನಿರೂಪಕನ ಒಣನಾಲಿಗೆ ಜಡತ್ವ ಮೀರಿ ಮನಸುಗಳನ್ನು ಗೆಲ್ಲಬಹುದೆಂಬ ಭ್ರಮೆಯಲ್ಲಿ ಹೂಮಾಲೆ ಹಂಚುವ ಆಸೆ ಹೊಂದಿದೆ. ಮಿಲಿಗ್ರಾಮಿನ ಲೆಕ್ಕದಲ್ಲಿ ಜೀವ ಹಿಡಿದಿರುವ ಬಲೂನು ದೇಹಗಳಿಗೆ ನವಿಲನಾಟ್ಯ ಕಲಿಸಬೇಕೆಂಬ ತೀವ್ರಹಂಬಲವನ್ನು ತೋರಿಸಿದೆ.
ಎಸ್. ಸಿರಾಜ್ ಅಹಮದ್ ಅಂಕಣ
21ನೇ ಶತಮಾನದ ಆಧುನಿಕ ಜಗತ್ತಿನಲ್ಲಿ ಯಥೇಚ್ಛವಾಗಿ ಹರಡಿರುವ ಮಾರುಕಟ್ಟೆ ಸಂಸ್ಕೃತಿ, ಸರಕುಸಂತೆ, ಸಮೂಹ ಮಾಧ್ಯಮಗಳು, ವಿಜ್ಞಾನ-ತಂತ್ರಜ್ಞಾನದ ಸೌಲಭ್ಯಗಳೆಂಬ ಬಂಡವಾಳಶಾಹಿಯುಗದ‘ಮಹಾತಿಪ್ಪೆ’(ಎಚ್.ಎಸ್.ಶಿವಪ್ರಕಾಶರ ಮಾತು)ಯಲ್ಲಿ ಬಿದ್ದು ಉಪ್ಪರಿಗೆಯ ಸುಖದಲ್ಲಿ ಓಲಾಡುತ್ತಿರುವ ಸಮಕಾಲೀನ ನಾಗರಿಕ ಬದುಕಿನ ಹಲವು ವಿಪರೀತಗಳನ್ನು ಸ್ಪಷ್ಟವಾಗಿ ಶೋಧಿಸುವ ಬರಹಗಳು ಕನ್ನಡದಲ್ಲಿ ದೊಡ್ಡಪ್ರಮಾಣದಲ್ಲಿ ಮೂಡಿಬಂದಂತಿಲ್ಲ. 1980ರ ದಶಕದ ನಂತರದ ಕನ್ನಡ ಕಥನಪ್ರಕಾರ ಹಾಗೂ ವೈಚಾರಿಕ ಗದ್ಯಬರಹಗಳಲ್ಲಿ ಈ ಬಗೆಯ ಪರಿಣಾಮಗಳನ್ನು ಹಲವು ಬಗೆಗಳಲ್ಲಿ ಪರೀಕ್ಷಿಸುವ ಯತ್ನವನ್ನು ಕಾಣಬಹುದಾದರೂ ಕಾವ್ಯದಲ್ಲಿ ಈ ಬಗೆಯ ಪ್ರಯತ್ನಗಳು ಬಹಳ ಕಮ್ಮಿ.
ಈ ಕಾಲಮಾನದ ಪ್ರಗತಿ, ಅಭಿವೃದ್ಧಿ, ಸರಕು, ಮಾರುಕಟ್ಟೆ, ತಂತ್ರಜ್ಞಾನಗಳು ನಮ್ಮ ಪ್ರಜ್ಞೆ, ವ್ಯಕ್ತಿತ್ವ, ಸಂಸ್ಕೃತಿ ಸೃಜನಶೀಲತೆಗಳನ್ನು ಕುಬ್ಜಗೊಳಿಸಿರುವ ಬಗ್ಗೆ ಹಲವರು ಚಿಂತನೆ ಮಾಡಿದ್ದಾರೆ. ವಾಲ್ಟರ್ ಬೆಂಜಮಿನ್ ಒಂದುಕಡೆ ವಿಜ್ಞಾನ-ತಂತ್ರಜ್ಞಾನಗಳು, ನಗರೀಕರಣದ ಸೌಲಭ್ಯಗಳ ಕಾರಣದಿಂದ ಕಲೆ ಸಾಹಿತ್ಯಕೃತಿಗಳಲ್ಲಿ ಅಡಗಿರುವ ಕಾಂತಿ ಮಾಯವಾಗಿ ನಿಸ್ತೇಜವಾಗಿಬಿಡುವ ಅಪಾಯವನ್ನು ಕುರಿತು ಚರ್ಚಿಸುತ್ತಾನೆ.
ಕಮಲಾಕರ ಕಡವೆಯವರ ಕವನಗಳನ್ನು ಓದುತ್ತಿರುವಾಗ ನಾವು ಬದುಕುತ್ತಿರುವ ಕಾಲಮಾನದಲ್ಲಿ ನಮ್ಮನ್ನು ಉಸಿರುಗಟ್ಟಿಸುವಂತೆ ಸುತ್ತುವರಿದಿರುವ ಹಲವು ಗೊಂದಲಗಳು ಇಲ್ಲಿನ ಪದ್ಯಗಳಲ್ಲಿರುವ ನೂರಾರು ಬಗೆಯ ಮಾತು, ಚಿಂತೆ-ಚಿಂತನೆ, ಸ್ವಗತಗಳ ಜಂಗುಳಿಯಲ್ಲಿ ಕಾಣಿಸುತ್ತವೆ. ಅವರ ಪದ್ಯಗಳನ್ನು ಓದುವುದೆಂದರೆ ಯಾವುದಕ್ಕೂ ವ್ಯವಧಾನವಿಲ್ಲದ ಮಹಾನಗರಗಳ ಇಕ್ಕಟ್ಟಿನ ಜನಸಂದಣಿಗಳಲ್ಲಿ ಕಳೆದುಹೋಗುವ ಹಾಗೆ. ಅದನ್ನು ಸಾಮಾನ್ಯವೆನ್ನಿಸುವ ಒಂದು ಪದ್ಯದ ಮೂಲಕವೇ ಹೇಳುವುದಾದರೆ: ಬೆಂಕಿ ಬಿದ್ದು ‘ನೂರು ಭರವಸೆಗಳ ನಗ್ನ ಇದ್ದಿಲುಗಳು ಥಳಥಳಿಸುತ್ತಿರುವ’ ತನ್ನ ಮನೆಯ ಬೂದಿಯೊಳಗಿನಿಂದ ಮಗುವೊಂದು ನೋಟುಬುಕ್ಕೊಂದನ್ನು ಎತ್ತಿ ಸುಟ್ಟಮನೆಯ ಚಿತ್ರ ಬಿಡಿಸಿದೆ. ಆದರೆ ಏನು ಮಾಡಿದರೂ ಮನೆಯೊಂದಿಗೇ ಸುಟ್ಟುಹೋದ ತನ್ನ ಪ್ರೀತಿಯ ಬೆಕ್ಕಿನ ಮರಿಯನ್ನು ಆ ಚಿತ್ರದಲ್ಲಿ ಬಿಡಿಸಲಾಗದ ಅಸಹಾಯಕತೆಯಲ್ಲಿ ಮಗು ವಿಷಣ್ಣವಾಗಿ ಕೂತಿದೆ.
ಇಲ್ಲಿನ ಎಲ್ಲ ಪದ್ಯಗಳನ್ನು ಇಡಿಯಾಗಿ ಓದಿದ ಮೇಲೆ ಸುತ್ತಲಿನ ಆಧುನಿಕ ಬದುಕಿನಲ್ಲಿನ ವಿಷಮತೆಗಳಿಂದಾಗಿ ಕಲ್ಪನೆ, ಜೀವಂತಿಕೆ, ಸೃಜನಶೀಲತೆಗಳನ್ನು ನೀಗಿಕೊಂಡು ನಿಸೂರಾಗಿ ಕೂತ ವ್ಯಕ್ತಿಗಳ ಹತಾಶಚಿತ್ರವೇ ನಮ್ಮೆದುರು ರಾಚುತ್ತದೆ. ಇಂಥ ಹತಾಶೆ ಕೇವಲ ವ್ಯಕ್ತಿಗಳ ಅನುಭವದ ನೆಲೆಯಲ್ಲಿ ಮಾತ್ರ ಕಾಣಿಸದೆ ಒಟ್ಟು ಸಮಕಾಲೀನ ಸಂದರ್ಭವೊಂದರ ಸಂಕಟವಾಗಿಯೂ ಕಾಣುವುದರಿಂದ ಇಲ್ಲಿನ ಕವನಗಳಿಗೆ ವಿಶೇಷವಾದ ಅರ್ಥ ಒದಗಿಬಂದ ಹಾಗಿದೆ. ಹಾಗಾಗಿಯೇ ಇಲ್ಲಿನ ವ್ಯಕ್ತಿಗಳ ನಿಟ್ಟುಸಿರು, ವಿಷಾದ-ಹತಾಶೆಯ ಬಿಕ್ಕಳಿಕೆಗಳು ಅಪ್ಪಟ ನವ್ಯಶೈಲಿಯ ಪದ್ಯಗಳನ್ನು ನೆನಪಿಸಿದರೂ ಅವು ವರ್ತಮಾನದ ಬದುಕಿನ ನರಳಿಕೆಯ ವಿವರಗಳಾಗಿರುವುದರಿಂದ ಅವುಗಳ ಹಿಂದಿರುವ ಸಂದರ್ಭಸೂಚಿಯಿಂದಾಗಿ ನವ್ಯಮಾದರಿಯ ಪದ್ಯಗಳಿಗಿಂತ ಬೇರೆಯವುಗಳೆಂದು ಭಾವಿಸಬಹುದು.
ಇಲ್ಲಿನ ಹಲವು ಕವಿತೆಗಳಲ್ಲಿರುವಂತೆ ಇಲ್ಲಿನ ನಿರೂಪಕ ಅತಿಸೂಕ್ಷ್ಮ ಸಂವೇದನೆಯವನಾಗಿದ್ದರೂ ಆಧುನಿಕ ಬದುಕಿನ ಹಲವು ವಿಪರೀತಗಳಲ್ಲಿ ಬದುಕುತ್ತ, ಪೂರ್ವಜರ ನೆನಪುಗಳನ್ನು ಹೂಳಿ ಸ್ವಂತ ಇತಿಹಾಸದ ಅಮಲಿನಲ್ಲಿ ಬಿದ್ದಿರುವವನು. ಅವನನ್ನು ಪ್ರಭಾವಿಸಿರುವ ವಿಚಾರಗಳು ತುಂತುರುಮಳೆಯಂತೆ ಅವನ ಹೊರಗನ್ನು ಮಾತ್ರ ಸೋಕಿ, ಮಡಕೆಯಂತೆ ತಣ್ಣಗಾಗಿಬಿಟ್ಟಿವೆ. ಹೊರಗೆ ಆಕಾಶ ನೋಡಿದರೆ ಎಲ್ಲ ಸಂಬಂಧಗಳೂ ಫೋನು-ವಿದ್ಯುತ್ತಿನ ವಯರುಗಳಂತೆ ಗೋಜಲಾಗಿಬಿಟ್ಟಿವೆ. ಇದರಿಂದ ಪಾರಾಗಲೋ ಎಂಬಂತೆ ಆಧ್ಯಾತ್ಮದ ಕಡೆ ಹೊರಳಿದರೆ ಫಕೀರರು ಬೆಕ್ಕುಬಾವಲಿಗಳನ್ನು ತೋರಿಸಿ ನಿರಾಶೆಗೊಳಿಸಿದ್ದಾರೆ. ಅವನ ನಿರಾಶೆ ಚೌಕದಲ್ಲಿರುವ ಹಾರ್ನುಗಳ ಗದ್ದಲ ಮತ್ತು ಮಕ್ಕಳ ಶಬ್ದಕೋಶವನ್ನು ನಿಯಂತ್ರಿಸುವ ಜಾಹೀರಾತುಗಳ ಹಾವಳಿಯಿಂದಾಗಿ ವಿಪರೀತಗೊಂಡು, ಸುತ್ತಲಿನ ಜಗತ್ತು ಎಂದಿಗೂ ‘ಮುಗಿಯದ ಮಧ್ಯಾಹ್ನ’ದ ನಿರಂತರ ಬೇಗುದಿಯಲ್ಲಿ ಸಿಲುಕಿದಂತೆ ಕಾಣುತ್ತದೆ.
ಹೀಗೆಯೇ ಸಾಗುವ ಹಲವಾರು ಪದ್ಯಗಳಲ್ಲಿ ಇಂಥದೇ ಭಾವ ಹಲವು ಭಾಷೆಗಳು (ಮರಾಠಿ, ಇಂಗ್ಲಿಶ್, ಹಿಂದಿ) ಹಲವು ಧ್ವನಿಗಳು, ಸಂದರ್ಭಗಳ ಮೂಲಕ ನಿರೂಪಿತವಾಗಿ ಗಾಢವಾದ ವಿಷಾದವೊಂದು ಆಳವಾಗಿ ಬಿದ್ದ ಏಟಿನಿಂದ ನೀಲಿಗಟ್ಟಿಕೊಳ್ಳುವ ಗಾಯದ ಹಾಗೆ ನಿಧಾನಕ್ಕೆ ಗಟ್ಟಿಯಾಗುತ್ತದೆ. ವಿಸ್ತಾರ ನೆಲೆಯೊಂದನ್ನು ರೂಪಿಸಿಕೊಳ್ಳುತ್ತದೆ. “ಒಳಗಿರಲು ನೆಪವಿಲ್ಲದೆ” ಎಂಬ ಪದ್ಯದಲ್ಲಿ ಮನೆಯಿಂದ ಹೊರಬಿದ್ದ ನಿರೂಪಕನನ್ನು ಮೋಟರುಗಳ ಮಹಾವೇಗ ಛೇಡಿಸಿ, ಸರಕುಗಳ ಸಂದಣಿ ದಾರಿ ತಪ್ಪಿಸಿ, ಸುಮ್ಮನಿದ್ದವನನ್ನು ಜಾಹಿರಾತುಗಳು ತಿವಿದು ಗಾಯಗೊಳಿಸಿವೆ. ಎಲ್ಲ ದನಿ, ದೃಶ್ಯಗಳು ಕೈಮೀರಿ ಏಕಆಕಾರವನ್ನು ಪಡೆದು ಶಾಶ್ವತ ತಲ್ಲಣವೊಂದು ಗೂಡುಕಟ್ಟಿದೆ (ಅಶಾಂತಿಯ ಪಾತಳಿ). ಸುತ್ತ ಹಲವು ವಿನ್ಯಾಸ, ವರ್ಣಗಳ ಸಂದಣಿಯೇ ನೆರೆದಿದ್ದರೂ ‘ಗುಡ್ಡ ತೂಕದ ಕೊರಗು ಘನವಾಗಿ ಕೂತಿದೆ’(ವಿಷಣ್ಣ ಬಾರಿನಲ್ಲಿ). ಒಟ್ಟಾರೆ ಅವನು ‘ದುಣ್ಣನೆಯ ಎಮ್ಮೆ’ಯಂತೆ ಎಷ್ಟು ಜಡವಾಗಿದ್ದಾನೆಂದರೆ ಕ್ಷಿತಿಜದಲ್ಲಿ ನಡೆಯುವ ಬೈಗುಬೆಳಗಿನ ದಿನನಿತ್ಯದ ಪವಾಡ ಯಾವ ದಿಕ್ಕಿನಲ್ಲಿ ಜರುಗುತ್ತದೆ ಎಂಬುದೂ ಸಹ ಅರಿವಾಗದಂತೆ ದಿಕ್ಕು ತಪ್ಪಿದ್ದಾನೆ(ಜಡ).
ಆಧುನಿಕ ಬದುಕಿನ ವೇಗ, ಮಾರುಕಟ್ಟೆಯ ಗೌಜು, ಸರಕುಸಂದಣಿಯಲ್ಲಿ ಮನುಷ್ಯ ವ್ಯಕ್ತಿತ್ವವನ್ನು ತಣ್ಣಗೆ ನಿಸ್ತೇಜಗೊಳಿಸುವ ಅನುಭವವನ್ನು ವಿವರಿಸುವ ಈ ಪದ್ಯಗಳು ಅಭಿವ್ಯಕ್ತಿಯ ದೃಷ್ಟಿಯಲ್ಲಿ ಹಳತಾಗಿರುವ ಅತಿನವ್ಯದ ಶೈಲಿಯಲ್ಲಿದ್ದರೂ ಅನುಭವದ ನೆಲೆಯಲ್ಲಿ ಹೊಸದಿಕ್ಕಿನತ್ತ ಹೊರಟಿವೆ.
ಏನು ಮಾಡಿದರೂ ಮನೆಯೊಂದಿಗೇ ಸುಟ್ಟುಹೋದ ತನ್ನ ಪ್ರೀತಿಯ ಬೆಕ್ಕಿನ ಮರಿಯನ್ನು ಆ ಚಿತ್ರದಲ್ಲಿ ಬಿಡಿಸಲಾಗದ ಅಸಹಾಯಕತೆಯಲ್ಲಿ ಮಗು ವಿಷಣ್ಣವಾಗಿ ಕೂತಿದೆ.
ಈ ಬಗೆಯ ಆಧುನಿಕ ಜೀವನಶೈಲಿ ಮನುಷ್ಯ ಅಸ್ತಿತ್ವವನ್ನು ಕುಬ್ಜಗೊಳಿಸುವುದರ ಜೊತೆಗೆ ಅವನ ತೀವ್ರ ಭಾವವಲಯಗಳನ್ನು, ಸೃಜನಶೀಲ ಆದರ್ಶಗಳ ಹಂಬಲಗಳನ್ನು ಗೇಲಿಮಾಡಿ ಅಪಹಾಸ್ಯಕ್ಕೀಡು ಮಾಡುವುದನ್ನು ಗುರುತಿಸಿರುವುದು ಸಂಕಲನದ ಹೆಚ್ಚುಗಾರಿಕೆಯಾಗಿದೆ. ಎಲ್ಲ ಕಡೆ ಮಾರುಕಟ್ಟೆಯ ಕಸ ತುಂಬಿರುವ, ವಸ್ತುಗುಡ್ಡಗಳು ಜನರನ್ನು ತಿಂದುತೇಗುವ, ಪ್ರತಿಬಿಂಬಗಳ ಮೆರವಣಿಗೆ ಸಾಗಿರುವ ದಟ್ಟವಾಸನೆಗಳ ನಗರದಲ್ಲಿ ಇದೇ ನಿರೂಪಕನ ಒಣನಾಲಿಗೆ ಜಡತ್ವ ಮೀರಿ ಮನಸುಗಳನ್ನು ಗೆಲ್ಲಬಹುದೆಂಬ ಭ್ರಮೆಯಲ್ಲಿ ಹೂಮಾಲೆ ಹಂಚುವ ಆಸೆ ಹೊಂದಿದೆ. ಮಿಲಿಗ್ರಾಮಿನ ಲೆಕ್ಕದಲ್ಲಿ ಜೀವ ಹಿಡಿದಿರುವ ಬಲೂನು ದೇಹಗಳಿಗೆ ನವಿಲನಾಟ್ಯ ಕಲಿಸಬೇಕೆಂಬ ತೀವ್ರಹಂಬಲವನ್ನು ತೋರಿಸಿದೆ. ಆದರೆ ಮನುಷ್ಯ ಅಸ್ತಿತ್ವವನ್ನು ಕುರೂಪಗೊಳಿಸಿರುವ ಶಕ್ತಿಗಳ ಬಗ್ಗೆ, ಇಂಥ ಅನುಭವವನ್ನು ಹೇಗೆ ವಿವರಿಸಿದರೂ ಎಚ್ಚರಗೊಳ್ಳದ ಸಮಾಜದ ಸಂವೇದನಾ ಶೂನ್ಯತೆಯ ಬಗ್ಗೆ- ಕವನದುದ್ದಕ್ಕೂ ಬಳಕೆಯಾಗಿರುವ ವ್ಯಂಗ್ಯ ಏಕಕಾಲಕ್ಕೆ ಇಬ್ಬಗೆಯಲ್ಲೂ ಸೀಳುವಂತಿರುವುದು ಗಮನಾರ್ಹವಾಗಿದೆ(ಅತೀವ ಗೇಲಿಗಳ ನಡುವೆ).
ಸಂಕಲನದ ಅತ್ಯುತ್ತಮ ಪದ್ಯಗಳಾದ“ನಿಧಾನ ನಿಧನ”, “ಈಗ ಬಿದ್ದ ಹೆಣ”, “ಕಂಸದಲ್ಲಿ ಟಿಪ್ಪಣಿ”ಗಳಲ್ಲಿ ಈ ಬಗೆಯ ಪರಿಣಾಮಗಳು ಮನುಷ್ಯನ ಮೂಲಗುಣಗಳಾದ ಆತ್ಮಸಾಕ್ಷಿ, ಸಹಾನುಭೂತಿಗಳ ಜೊತೆಗೆ ಅವನ ಸೃಜನಶೀಲತೆಯ ನಾಶಕ್ಕೂ ಸಹ ಕಾರಣವಾಗುವುದನ್ನು ಗಮನಿಸಿರುವುದು ಸಂಕಲನದ ಬಹುಮುಖ್ಯ ಸಂಗತಿಯಾಗಿದೆ. ಆದ್ದರಿಂದಲೇ “ಈಗ ಬಿದ್ದ ಹೆಣ”ದಲ್ಲಿ ರಣಬಿಸಿಲಲ್ಲಿ ಗಾಯಗೊಂಡು ಬಿದ್ದಿರುವ ಹೆಣವನ್ನು ನೋಡಿ ಅದನ್ನು ಕೇವಲ ಪ್ರದರ್ಶನದ ವಸ್ತುವೆಂಬಂತೆ ಅಂತಃಕರಣದ ಸಣ್ಣಗೊಂದಲವೂ ಇಲ್ಲದೆ ಲೈವ್‌ಕವರೇಜ್ ಮಾಡುತ್ತಿರುವ ಮಾಧ್ಯಮ ಮತ್ತು ಇದನ್ನೆಲ್ಲ ಬಣ್ಣಿಸಲು ಹವಣಿಸುತ್ತಿರುವ ಕವಿತೆ ಎರಡನ್ನೂ ಅಮಾನುಷವೆಂಬಂತೆ ಕವಿ ಚಿತ್ರಿಸುವುದನ್ನು ಕಂಡು ಮನಸು ಕದಡಿಹೋಗುತ್ತದೆ.
“ಕಂಸದಲ್ಲಿ ಟಿಪ್ಪಣಿ”ಯೆಂಬ ಪದ್ಯದಲ್ಲಿ ‘ಶಬ್ದಗಳ ವಿಪರೀತ ಸೆಣಸಾಟ ತುಂಬಿದ ಮಾಧ್ಯಮ/ ನಮ್ಮನ್ನು ನೆಕ್ಕುತ್ತಿರುವಾಗ/ ಕಂಸದಲ್ಲಿ ಕೆಲವು ಟಿಪ್ಪಣಿಗಳನ್ನು ಮಾಡಿಟ್ಟೆವು”ಎಂಬ ಸಾಲಿದೆ. ಬದುಕಿನ ಎಲ್ಲ ಸಂದರ್ಭಗಳಲ್ಲಿ ಮೂತಿ ತೋರಿಸುವ ಮಾಧ್ಯಮಗಳ ಹಾವಳಿಯಿಂದಾಗಿ ಎಂಥ ಸಂಗತಿಯೂ ಅಂತಃಕರಣವಿಲ್ಲದ ಬರಿ ಮಾತಿನ ಹೊಟ್ಟುಹರಟೆಯಾಗಿ, ಕವಿತೆಯೆಂಬುದು ಕೇವಲ ಕಂಸದಲ್ಲಿ ಸಿಗುವ ಒಣವಿವರಣೆಯಂತಾಗಿದೆ ಎಂದಿರುವುದು ನಮ್ಮ ಕಾಲದ ದುರಂತಕ್ಕೆ ಹಿಡಿದ ಕನ್ನಡಿಯಾಗಿದೆ.
“ನಿಧಾನ ನಿಧನ”ವೆಂಬ ಇನ್ನೊಂದು ಪದ್ಯದಲ್ಲಿ ಮಾರುಕಟ್ಟೆಯ ಉದ್ರಿಕ್ತ ಕೆಂಗಣ್ಣುಗಳ ನಡುವೆ, ಪದಾರ್ಥಪರ್ವತಗಳ ನೆರಳು ಕವಿದು ಆಕಾಶ ಜಾಹಿರಾತುಗಳ ಅಶಾಂತ ಪರದೆಯಾಗಿದೆ. ಮುಖ್ಯವಾಗಿ “ಹುಚ್ಚು ಬಯಕೆಗಳ ಹುಲುಸು ಬೆಳೆಗೆಂದು ಬಿತ್ತಲಾಗಿದೆ ಬೀಜ/ ಮಿದುಳ ಪದರಗಳಲ್ಲಿ ಕೊಬ್ಬಿ ಬೆಳೆದಿದೆ ಸಾಮಾನುಗಳ ಪೈರು/ ನಗರದ ಹೊರ ಪರಿಧಿಯಲ್ಲಿ ಕವನವೊಂದು ಕಿಸಕ್ಕನೆ ನಕ್ಕಿದೆ/ ತೊಟ್ಟಿ ತುಂಬಿರುವ ಹೃದಯಗಳಂತದು ನಿಧಾನ ನಿಧನದಲ್ಲಿದೆ” ಎನ್ನುವ ಸಾಲುಗಳು ಬಹಳ ಪರಿಣಾಮಕಾರಿಯಾಗಿವೆ.
ಕವನಸಂಕಲನದುದ್ದಕ್ಕೂ ಕಾಣುವ ನಿರಂತರ ವಿಷಾದ, ಮುಗಿಯದ ನಿರಾಶೆಗಳ ನಡುವೆಯೂ ಬದುಕಿನಲ್ಲಿ, ಪ್ರಕೃತಿಯಲ್ಲಿ ಕಾಣುವ ಸಣ್ಣಸಂಗತಿಗಳು ಕುತೂಹಲಕ್ಕೆ ಕಾರಣವಾಗಿ ಜೀವನದ ಬಗ್ಗೆ ಎಲ್ಲಿಲ್ಲದ ಆಶಾವಾದವನ್ನು ತರುವುದು ಸಮಾಧಾನದ ಸಂಗತಿಯಾಗಿದೆ. “ತೀರದ ಮರಳು” ಪದ್ಯದಲ್ಲಿ ಗುಡ್ಡವನ್ನು ತೇದು ತಯಾರಾದ ಮರಳರಾಶಿಯ ಕಣಗಳಲ್ಲಿ ಆನೆ ಮೆಟ್ಟಿದರೂ ಒಡೆಯದೇ ಇರುವ ಗಟ್ಟಿತನ ಕಂಡು ಕವಿಗೆ ಸೋಜಿಗವಾಗಿದೆ. ತೂಕವೇ ಇರದ ಸಣ್ಣಕಣಗಳು ಮನುಷ್ಯ ನಾಗರಿಕತೆಯ ಕುರುಹುಗಳಾದ ನಗರನಾಡುಗಳನ್ನು ಎತ್ತಿನಿಲ್ಲಿಸಿರುವುದನ್ನು ಕಂಡು ಕವಿ ಚಕಿತಗೊಂಡಿದ್ದಾನೆ. ಹಾಗೇ ಯಾವ ಗೊಬ್ಬರದ ಆರೈಕೆಯೂ ಇಲ್ಲದೆ ಹುಲುಸಾಗಿ ಬೆಳೆಯುವ ಕಳೆ ಎಷ್ಟು ಮೆಟ್ಟಿದರೂ ಕುಂದಿಲ್ಲದ ಆತ್ಮವಿಶ್ವಾಸದಲ್ಲಿ ಮತ್ತೆ ಎದ್ದುನಿಲ್ಲುವುದನ್ನು ಕಂಡು “ಬೆಳೆದರೆ ಬೆಳೆಯಬೇಕು ಕಳೆಯಂತೆ” ಎಂದು ಕವಿ ಹೇಳುವುದನ್ನು ನೋಡಿದರೆ ಕವಿಯ ಮನಸ್ಸು ಕರಾಳ ಪರಿಣಾಮಗಳನ್ನು ಮಾಡಬಲ್ಲ ಬೃಹತ್ ಸಂಗತಿಗಳಿಗಿಂತ ಎಲ್ಲ ಬಗೆಯ ಥಳುಕು ಲಾವಣ್ಯಗಳಿಂದ ಹೊರತಾದ ಬದುಕಿನ ಸರಳಸಾಚಾ(ಎಲೆ ಎಲೆಯೆ!) ಸಂಗತಿಗಳತ್ತ ಆಶಾಭಾವದಿಂದ ನೋಡುತ್ತಿದೆ ಅನಿಸುತ್ತದೆ. ಆದರೆ ಹೀಗೆ ಅಲ್ಲಲ್ಲಿ ಬಿಡಿಯಾಗಿ ಸಿಗುವ ಪದ್ಯಗಳು ಕವಿಯ ಒಟ್ಟು ಮನೋಧರ್ಮಕ್ಕೆ ಭಿನ್ನವಾದ ತೀರ್ಮಾನಗಳನ್ನು ಮಾಡುವಷ್ಟು ದಟ್ಟ ಪರಿಣಾಮವನ್ನೇನು ಉಂಟುಮಾಡುವುದಿಲ್ಲ.
ಆದರೆ ಸಮಕಾಲೀನ ಆಧುನಿಕ ಬದುಕಿನ ಹಲವು ತಲ್ಲಣಗಳನ್ನು ಬಹಳ ಜಟಿಲವಾದ ಸಂಕೇತ ರೂಪಕಗಳ ಹೆಣಿಗೆಗಳಲ್ಲಿ ಹಿಡಿಯಲು ನೋಡುವ ಕಮಲಾಕರ ಕಡವೆಯವರ ಬರಹದ ಕ್ರಮ ಗಾಢಪರಿಣಾಮಕ್ಕಿಂತ, ಓದುಗನಲ್ಲಿ ಅಪಾರ ದಣಿವನ್ನು ಉಂಟುಮಾಡುವುದೇ ಹೆಚ್ಚು. ಬಹಳಕಾಲ ಕರ್ನಾಟಕದಿಂದ ಹೊರಗಿದ್ದರೂ ತನ್ನ ಸಂವೇದನೆಯ ಮಿದುವನ್ನು ಕಳೆದುಕೊಳ್ಳದೆ ಬರೆಯುತ್ತಿರುವ ಈ ಕವಿ ಕನ್ನಡದ ಇತ್ತೀಚಿನ ಕವಿತೆ ಉಗ್ರ ರೂಪಕನಿಷ್ಠ ಮಾದರಿಯನ್ನು ಹೊರತುಪಡಿಸಿಯೂ ಪಡೆದುಕೊಂಡಿರುವ ಭಾವವಿಷದತೆ-ತೀವ್ರತೆಯನ್ನು ಗಮನಿಸಿದ ಹಾಗಿಲ್ಲ. ಬಹಳ ತೀವ್ರವಾದುದನ್ನು, ಸೂಕ್ಷ್ಮ ಸಂವೇದನೆಯನ್ನು ಕಲೆಗಾರಿಕೆಯ ಕುಶಲತೆಯಲ್ಲಿ ಹೇಳಬಲ್ಲ ಶಕ್ತಿಯಿರುವ ಕಮಲಾಕರ ಕಡವೆಯವರು ತಮ್ಮ ಕವಿತೆ ಸಾಗುವ ದುರ್ಗಮ ತಿರುವುಗಳನ್ನು ನೇರಗೊಳಿಸಿದಲ್ಲಿ, ನಿರಾಳ ಪ್ರವೇಶ ದೊರಕಿದ ಸಮಾಧಾನ ಓದುಗರಿಗೆ ಸಿಗಬಹುದು.
(ಕೃತಿ: ಮುಗಿಯದ ಮಧ್ಯಾಹ್ನ, ಲೇಖಕರು: ಕಮಲಾಕರ ಕಡವೆ, ಅಕ್ಷರ ಪ್ರಕಾಶನ:2010, ಪು: 88, ಬೆಲೆ:65/-)
ಕನ್ನಡ ವಿಮರ್ಶಕ, ಲೇಖಕ, ಅನುವಾದಕ. ಮೂಲತಃ ಚಿತ್ರದುರ್ಗದವರು. ಶಿವಮೊಗ್ಗದ ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ ಇಂಗ್ಲೀಷ್ ಪ್ರಾಧ್ಯಾಪಕರು