ಮಗಳು ಹಾಗೇ ನಿದ್ದೆ ಹೋಗಿದ್ದಾಳೆ. ಹೊರಗೆ ಚಂದ್ರನ ತುಂಡೊಂದು ಒಂದು ಕೋನದಲ್ಲಿ ಮುಖ ಊದಿಸಿಕೊಂಡು ಬೆಳ್ಳಗೆ ತೂಗುತ್ತಿದೆ. ಅದರ ಕೆಳಗೆ ಮಿಲಿಯಗಟ್ಟಲೆ ಗಾವುದ ದೂರದಲ್ಲಿ ಒಂದು ನಕ್ಷತ್ರ ಮಳ್ಳಿಯ ಹಾಗೆ ಮಿನುಗುತ್ತಿದೆ. ಆದರೂ ಅವೆರಡು ಅಷ್ಟು ಹತ್ತಿರ ಇರುವಂತೆ ತೋರುತ್ತಿದೆ. ‘ನೋಡು ಅವೆರಡು ಪರಸ್ಪರ ಕಣ್ಣು ಹೊಡೆಯುವ ಹಾಗೆ ಕಾಣಿಸುತ್ತಿವೆಯಾಲ್ಲಾ’ ಎಂದು ದೂರದ ಊರಿನಿಂದ ಯಾರೋ ಫೋನಿನಲ್ಲಿ ಅರುಹುತ್ತಾರೆ. ಮಗಳು ನಿದ್ದೆಯಲ್ಲಿ ಏನೋ ಹೇಳುತ್ತಿದ್ದಾಳೆ. ಇಲ್ಲೇ ಬೇಲಿಯ ಪಕ್ಕದಲ್ಲಿ ಒಂದು ರುಧ್ರಭೂಮಿಯಿದೆ. ಸಂಜೆ ಇವಳು ಆಡುತ್ತಿದ್ದ ಚೆಂಡು ಬೇಲಿದಾಟಿ ಅಲ್ಲಿಗೆ ಹಾರಿಹೋಗಿದೆ. ಹೆಕ್ಕಿಕೊಳ್ಳಲು ಹೆದರಿ ಅಲ್ಲೇ ಬಿಟ್ಟುಬಂದು ನಿದ್ದೆ ಹೋಗುವ ತನಕ ಸಾವಿನ ಕುರಿತೇ ಪ್ರಶ್ನೆಗಳನ್ನು ಕೇಳಿ ಈಗ ಬಹುಶಃ ನಿದ್ದೆಯಲ್ಲೂ ಆ ಚೆಂಡಿನ ಜೊತೆ ಆಡುತ್ತಿದ್ದಾಳೆ. ಬೀಸುವ ಗಾಳಿಗೆ ಗಾಳಿಮರದ ಬರಡು ಕೊಂಬೆಯೊಂದು ಅಲ್ಲಾಡುತ್ತಿದೆ. ಈ ಗಾಳಿಮರದ ಕೆಳಗಿನ ಭೂಮಿಗೆ ಬೆಂಕಿ ಬಿದ್ದು ಎಲ್ಲ ಬೂದಿಯಾಗಿ ಹೋಗಿದೆ.
ಇತ್ತೀಚೆಗೆ ಈ ನಗರದ ಅಂಚಿನ ಕಾಡುಗಳಿಗೆ ಆಗಾಗ ಬೆಂಕಿ ಬೀಳುತ್ತಿದೆ. ಯಾಕೋ ನಾನು ನೋಡಿದಲ್ಲೆಲ್ಲ ಬೆಂಕಿಬೀಳುತ್ತಿದೆಯಲ್ಲಾ ಎಂದು ಹೆದರಿಕೊಂಡರೆ ‘ಇಲ್ಲಾ ಸಾರ್, ಈ ಚಳಿಯ ದಿನಗಳಲ್ಲಿ ಇಲ್ಲಿ ಬೆಂಕಿಬೀಳುವುದು ಸಾಮಾನ್ಯ, ಬಡವರಿಗೆ ಸೌದೆ ಬೇಕಾಗುತ್ತದಲ್ಲಾ..’ ಎಂದು ರಾಗ ಎಳೆಯುತ್ತಾರೆ. ನಡು ಮಧ್ನಾಹ್ನದ ಹೊತ್ತು ಗಂಟೆ ಅಲ್ಲಾಡಿಸುತ್ತಾ, ತೇಕುತ್ತಾ ಬರುವ ಅಗ್ನಿಶಾಮಕ ವಾಹನ, ಅದು ಬಂದೊಡನೆ ಅದರ ಸುತ್ತ ಮುತ್ತಿಕೊಳ್ಳುವ ಮಕ್ಕಳು ಬೆಂಕಿಯನ್ನೂ ದಾಟಿ ಬರುವ ಅಗ್ನಿಶಾಮಕ ನೀರಿನ ತುಂತುರಿನಲ್ಲಿ ನೆನೆಯುತ್ತಾ, ಕೇಕೆ ಹಾಕುತ್ತಾ ಕುಣಿಯುತ್ತಾರೆ. ಎಷ್ಟೊಂದು ಉಲ್ಲಾಸ, ಎಷ್ಟೊಂದು ಹುಡುಗಾಟ ಈ ಪುಟ್ಟ ಊರಿನಲ್ಲಿ ಎಂದು ಬೆರಳು ಕಚ್ಚಿಕೊಳ್ಳುತ್ತೇನೆ.
ನನ್ನ ಮಗಳಿಗೆ ಇತ್ತೀಚೆಗೆ ಯಾಕೋ ವಿದೇಶಿಯರನ್ನು ಕಂಡರೆ ಸಿಟ್ಟು.ಯಾವುದಾದರೂ ಗುಡ್ಡಕ್ಕೆ ಬೆಂಕಿ ಹತ್ತಿಕೊಂಡರೆ ‘ಐ ಹೇಟ್ ಫಾರಿನರ್ಸ್’ ಎಂದು ಹೇಳುತ್ತಾಳೆ. ‘ನಮ್ಮ ಇಂಡಿಯಾವನ್ನು ಫಾರಿನರ್ಸೇ ಅಲ್ವಾ ಅಟಾಕ್ ಮಾಡ್ತಿರೋದು’ ಅನ್ನುತ್ತಾಳೆ. ಅವಳ ಪ್ರಕಾರ ಈ ಬೆಟ್ಟಕ್ಕೆ ಬೆಂಕಿಕೊಡುತ್ತಿರುವವರೂ ವಿದೇಶಿಯರೇ. ಇವಳ ಬಳಿ ಕಾಡ್ಗಿಚ್ಚು ಹೇಗೆ ಉಂಟಾಗುವುದು ಎಂದು ಹೇಗೆ ವಿವರಿಸುವುದು ಎಂದು ಗೊತ್ತಾಗದೆ ಸುಮ್ಮನಾಗುತ್ತೇನೆ. ಕಾಡಿನಲ್ಲಿ ಜಿಂಕೆಗಳು ರಭಸದಲ್ಲಿ ಓಡುವಾಗ ಅವುಗಳ ಗೊರಸು ಕಲ್ಲಿಗೆ ತಾಕಿ ಬೆಂಕಿ ಉಂಟಾಗುತ್ತದೆ ಎಂದು ಅವಳ ಮೇಷ್ಟರುಗಳು ಹೇಳಿದಂತೆ ನಾನೂ ಯಾಕೆ ಸುಳ್ಳು ಹೇಳಲಿ ಅನಿಸುತ್ತದೆ. ಯಾಕೆಂದರೆ ಅವಳ ಬಳಿ ನಾನು ಆಗಾಗ ಹೇಳುವ ಅತಿರಂಜಿತ ಕಥೆಗಳಿಗೆ ಅವಳೂ ಬಣ್ಣ ಕಟ್ಟಿ ಹೇಳಿ ಈಗಾಗಲೇ ಅವಳಿಗೆ ತರಗತಿಯಲ್ಲಿ ಸುಳ್ಳುಬುರುಕಿ ಎಂಬ ಹೆಸರು ಬಂದಿದೆ. ಇನ್ನೂ ಹೇಳಿದರೆ ನನ್ನದೂ ಉಳಿದಿರುವ ಮರ್ಯಾದೆ ಮಣ್ಣು ಪಾಲಾಗುತ್ತದೆ ಎಂದು ಸುಮ್ಮನಿರುತ್ತೇನೆ. ಬೈದರೆ, ‘ಬೈಯಬೇಡ, ಮಕ್ಕಳಿಗೆ ರೆಸ್ಪೆಕ್ಟ್ ಕೊಡಲು ಕಲಿ’ ಅನ್ನುತ್ತಾಳೆ. ತರಗತಿಯ ಪಾಠಗಳನ್ನು ಸರಿಯಾಗಿ ಬರೆದಿಲ್ಲ ಸೋಮಾರಿ ನೀನು ಅಂದರೆ, ‘ನೀನೂ ಸೋಮಾರಿಯೇ.. ಎಲ್ಲಿ, ನೀನು ಸಣ್ಣದಿರುವಾಗ ಸರಿಯಾಗಿ ಬರೆದಿರುವ ನೋಟುಬುಕ್ಕುಗಳನ್ನು ತೋರಿಸು.ನೀನು ಬರೆದಿರುವ ಕಥೆಗಳೆಲ್ಲ ಅಮ್ಮನ ಡೈರಿಯಿಂದ ಕಾಪಿ ಹೊಡೆದದ್ದು. ನನಗೆ ಗೊತ್ತಿಲ್ಲವಾ’ ಎಂದು ಹೇಳುತ್ತಾಳೆ. ‘ಹೋಗು, ಸುಮ್ಮನೆ ಆಟವಾಡಿಕೊಂಡು ಬಾ’ ಎಂದು ಕಳಿಸುತ್ತೇನೆ. ಆಟವಾಡಿಕೊಂಡು ಬಂದವಳು ರುಧ್ರಭೂಮಿಯ ಇನ್ನಷ್ಟು ದೆವ್ವದ ಕಥೆಗಳನ್ನು ಹೇಳುತ್ತಾಳೆ.
ಮೊನ್ನೆ ಹಾಗೇ ಆಟದ ನಡುವಿಂದ ಏದುಸಿರು ಬಿಡುತ್ತಾ ಬಂದವಳು ‘ಯಾರನ್ನೋ ಹುಡುಕಿಕೊಂಡು ಯಾರೋ ಅಜ್ಜಿ ಬಂದಿದ್ದಾರೆ, ಅವರು ಹುಡುಕುತ್ತಿರುವವರು ಇಲ್ಲಿ ಯಾರೂ ಇಲ್ಲ, ಹೆಲ್ಪ್ ಮಾಡು. ಅವರು ಗೇಟಿನ ಬಳಿ ನಿಂತಿದ್ದಾರೆ’ ಎಂದು ಗೋಗರೆಯ ತೊಡಗಿದಳು. ‘ಇಲ್ಲೇ ಮೇಲಕ್ಕೆ ಕರೆದುಕೊಂಡು ಬಾ’ ಎಂದೆ. ‘ಇಲ್ಲ ಅಜ್ಜಿಗೆ ಮೆಟ್ಟಲು ಹತ್ತಲು ಆಗುವುದಿಲ್ಲ. ನೀನೇ ಬಾ’ ಎಂದು ಕೈಹಿಡಿದು ಕೆಳಕ್ಕೆ ಎಳೆದುಕೊಂಡು ಹೋದಳು. ಹೋಗಿ ನೋಡಿದರೆ ಚಂದದ ಸುಂದರಿಯಾದ ಅಜ್ಜಿಯೊಬ್ಬಳು ಬಟ್ಟೆಗಳ ಎರಡು ಗಂಟುಗಳನ್ನು ಪಕ್ಕಕ್ಕೆ ಇಟ್ಟುಕೊಂಡು ಕಲ್ಲು ಬೆಂಚಿನ ಮೇಲೆ ಸಿಟ್ಟಲ್ಲಿ ಕೂತಿದ್ದಳು. ಆ ಅಜ್ಜಿಯ ಯಾರೋ ಇಲ್ಲೇ ಎಲ್ಲೋ ಸುತ್ತಮುತ್ತ ಇದ್ದಾರಂತೆ. ಅವರ ಮನೆಯ ದಾರಿ ತೋರಿಸಿ ಎಂದು ಸುತ್ತ ನೆರೆದಿದ್ದ ಮಕ್ಕಳನ್ನು ನಿಷ್ಠುರವಾಗಿ ಗದರಿಸುತ್ತಿತ್ತು. ಮಕ್ಕಳು ನಗುತ್ತಿದ್ದರು.
ಈ ಅಜ್ಜಿಯ ಸಹವಾಸ ಕಷ್ಟ ಅನಿಸಿತು. ಯಾಕೆಂದರೆ ಈ ಅಜ್ಜಿ ಎರಡುಮೂರು ತಿಂಗಳುಗಳ ಹಿಂದೆ ಜೋರಾಗಿ ಮಳೆ ಸುರಿಯುತ್ತಿರುವಾಗ ರಸ್ತೆಯ ನಡುವಲ್ಲಿ ಗಂಟೆಗಟ್ಟಲೆ ನೆನೆಯುತ್ತಾ ನಿಂತುಕೊಂಡಿತ್ತು. ‘ಯಾಕೆ ಅಜ್ಜೀ ಮನೆಗೆ ಬಿಡಬೇಕಾ’ ಎಂದು ಕೇಳಿದರೆ, ‘ನಿನ್ನ ಕೆಲಸ ನೋಡಿಕೊಂಡು ನೀನು ಹೋಗಪ್ಪಾ, ನನ್ನನ್ನು ಕರೆದುಕೊಂಡು ಹೋಗಲು ಯಾರೋ ಬರುತ್ತಾರೆ’ ಎಂದು ನನ್ನನ್ನು ಗದರಿ ಕಳುಹಿಸಿತ್ತು. ಆಮೇಲೆಯೂ ತುಂಬಾ ಹೊತ್ತು ಮಳೆಯಲ್ಲಿ ನಿಂತುಕೊಂಡಿತ್ತು. ಈಗ ನೋಡಿದರೆ ಅದೇ ಅಜ್ಜಿ ಕಲ್ಲು ಬೆಂಚಿನಲ್ಲಿ ಕುಳಿತು ನನ್ನನ್ನೇ ದುರುಗುಟ್ಟಿಕೊಂಡು ನೋಡುತ್ತಿತ್ತು.
‘ಯಾರು ಬೇಕಜ್ಜೀ..?’ ಎಂದು ಕೇಳಿದರೆ ಯಾರೂ ಇದುವರೆಗೆ ಕೇಳಿರದ ಹೆಸರೊಂದನ್ನು ಹೇಳಿ, ‘ಒಂದು ಸಲ ಅವರ ಮನೆ ತೋರಿಸಪ್ಪಾ’ ಎಂದು ಕೇಳಿತು’ ‘ಇಲ್ಲಿ ಯಾರೂ ಆ ಹೆಸರಿನವರು ಇಲ್ಲ, ಇದು ಬಿಟ್ಟರೆ ಮುಂದೆ ಇರುವುದು ಸ್ಮಶಾನ. ಅಲ್ಲೂ ಯಾರೂ ಇಲ್ಲ’ ಎಂದು ಹೇಳಿದೆ. ‘ಇಲ್ಲ ಕಣಪ್ಪಾ, ಅವರು ರೇಡಿಯೋದಲ್ಲಿ ಚಂದ ಹಾಡು ಹೇಳುತ್ತಾರೆ. ಇಲ್ಲೇ ಇದಾರೆ, ತೋರಿಸಪ್ಪಾ ನಿನಗೆ ಕೈಮುಗಿಯುತ್ತೇನೆ,’ ಎಂದು ಕೈಯನ್ನೂ ಮುಗಿಯಿತು. ಆಮೇಲೆ ಕುಳಿತಲ್ಲಿಂದ ಎದ್ದು ಬಂದು ‘ನೋಡಲು ನಿನ್ನ ಹಾಗೇ ಇದಾರೆ. ನಿನ್ನ ಹೆಸರೇನಪ್ಪಾ?’ ಎಂದು ಕೇಳಿತು. ನಾನು ಹೇಳಿದೆ. ಅಜ್ಜಿಯ ಕಿವಿಗಳಿಗೆ ಕೇಳಿಸಲಿಲ್ಲ. ಆಮೇಲೆ ಜೋರಾಗಿ ಅಜ್ಜಿಯ ಕಿವಿಯ ಬಳಿ ನನ್ನ ಹೆಸರನ್ನು ಕಿರುಚಿದೆ. ಅಜ್ಜಿ, ‘ಓ ತುರುಕರವನಾ.. ಹಾಗಾದರೆ ನೀನು ಅಲ್ಲ’ ಎಂದು ಮುಖವನ್ನು ನಿರಾಶೆ ಮಾಡಿಕೊಂಡಿತು.
ಆಮೇಲೆ ನಾನು ಆ ಅಜ್ಜಿಯನ್ನು ಮಗುವಿನಂತೆ ಕಾರಿನಲ್ಲಿ ಕೂರಿಸಿಕೊಂಡು ಈ ಊರೆಲ್ಲಾ ಸುತ್ತಾಡಿದೆ. ಅನಾಥಾಶ್ರಮಗಳನ್ನು ಕಂಡು ಬಂದೆ. ಆ ಅಜ್ಜಿಯ ಮಕ್ಕಳು ಮೊಮ್ಮಕ್ಕಳನ್ನು ನೋಡಿ ಬಂದೆ. ಅನಾಥಾಶ್ರಮದವರಿಗೂ, ಮಕ್ಕಳು ಮೊಮ್ಮಕ್ಕಳಿಗೂ ಈ ಅಜ್ಜಿಯನ್ನು ಕಂಡರೆ ಅಸಡ್ಡೆ ಮತ್ತು ಹೆದರಿಕೆ. ಯಾಕೆಂದರೆ ಈ ಅಜ್ಜಿ ಎಲ್ಲೂ ನಿಲ್ಲದ ನದಿಯಂತೆ ತಪ್ಪಿಸಿಕೊಂಡು ಓಡಾಡುತ್ತಾಳಂತೆ. ಎಲ್ಲರಲ್ಲೂ ಸಿಟ್ಟುಮಾಡಿಕೊಂಡು ರಾದ್ಧಾಂತಗಳನ್ನು ಉಂಟುಮಾಡುತ್ತಾಳೆ. ಯಾರೋ ಯಾರದೋ ಕುತ್ತಿಗೆಯನ್ನು ಹಿಚುಕಿದರು ಎಂದು ಸುಳ್ಳು ಸುಳ್ಳೇ ಸುದ್ದಿ ಹಬ್ಬಿಸುತ್ತಾಳಂತೆ. ಮದುವೆಯೇ ಆಗದವಳಿಗೆ ‘ಮದುವೆಯಾಗಿದೆ ಆದರೆ ತಾಳಿಕಟ್ಟದೆ ತಪ್ಪಿಸಿಕೊಂಡು ತಿರುಗಾಡುತ್ತಾಳೆ ಚಿನಾಲಿ’ ಎಂದು ಹೇಳಿಕೊಂಡು ಓಡಾಡುತ್ತಾಳಂತೆ. ಅವರೆಲ್ಲರೂ ಹೇಳಿದ ಆ ಅಜ್ಜಿಯ ಕಥೆಗಳನ್ನು ಕೇಳಿ ಆವತ್ತು ಸಂಜೆ ತುಂಬ ಹೊತ್ತಿನ ತನಕ ತಲೆದೂಗುತ್ತಿದ್ದೆ. ಆ ಮೇಲೆ ಆ ರಾತ್ರಿ ಮಲಗಲು ಆ ಅಜ್ಜಿಗೆ ಒಂದು ಜಾಗವನ್ನೂ ಹುಡುಕಿಕೊಟ್ಟೆ.
ಆವತ್ತು ರಾತ್ರಿ ಎಲ್ಲೆಲ್ಲಿಂದಲೋ ನನಗೆ ದೂರವಾಣಿ ಕರೆಗಳು ಬಂದವು. ಅವೆಲ್ಲವೂ ದೊಡ್ಡ ದೊಡ್ಡ ಕೆಲಸದಲ್ಲಿರುವ ಆ ಅಜ್ಜಿಯ ಮಕ್ಕಳ ಕರೆಗಳು. ಅವರೂ ಅಜ್ಜಿಯ ಇನ್ನಷ್ಟು ಕಥೆಗಳನ್ನು ಹೇಳಿದರು. ‘ಅದೆಲ್ಲಾ ನನಗೆ ಗೊತ್ತಿಲ್ಲ. ವಯಸ್ಸಾದ ಹೆತ್ತವರನ್ನು ಅವರು ಹೇಗೇ ಇರಲಿ ಬೀದಿಯಲ್ಲಿ ಬಿಡುವುದು ಸರಿಯಲ್ಲ. ಕಾನೂನಿನ ಪ್ರಕಾರವೂ ಅಪರಾಧ.’ ಎಂದು ಅವರೆಲ್ಲರ ಬಳಿ ಮಾತು ಮುಗಿಸಿದ್ದೆ.
ಆಮೇಲೆ ಆ ನಡುರಾತ್ರಿಯಲ್ಲಿ ಆ ತೂಗುಚಂದ್ರನನ್ನು ನೋಡುತ್ತಾ, ಮಲಗಿರುವ ಮಗಳು ನಿದ್ದೆಯಲ್ಲಿ ಮಾತನಾಡುವಾಗ ಎದ್ದು ಹೋಗಿ ಕೇಳುತ್ತಾ ಆ ಚಂದದ ಇರುಳಿನಲ್ಲಿ ತುಂಬ ಹೊತ್ತು ಕೂತಿದ್ದೆ. ಆ ಅಜ್ಜಿಯ ಮುದ್ದು ಮುಖ, ಮುನಿಸಿಕೊಂಡಾಗ ವಕ್ರವಾಗುತ್ತಿದ್ದ ಅದರ ಬೊಚ್ಚುಬಾಯಿ, ಅದು ಉಟ್ಟುಕೊಂಡಿದ್ದ ನುಣುಪಾದ ರೇಶಿಮೆಯ ಸೀರೆ ಎಲ್ಲವನ್ನೂ ಮುಖದ ಮುಂದೆ ತಂದುಕೊಳ್ಳುತ್ತಿದ್ದೆ. ‘ಅಜ್ಜಿಯಂದಿರ ನಿನ್ನ ಸಹವಾಸ ಹೆಚ್ಚಾಯಿತು ಮಾರಾಯಾ, ನಿಜದ ಕಥೆಗಳನ್ನು ಬಚ್ಚಿಟ್ಟುಕೊಳ್ಳಲು ಈ ಬಾರಿ ಅಜ್ಜಿಯ ಕಥೆಯನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದೀಯಾ. ಮಗನೇ, ನೀನು ಜೋರಿದ್ದೀಯಾ’ ಎಂದು ಯಾರೋ ಕಿಚಾಯಿಸುತ್ತಿದ್ದರು. ’ಸುಮ್ಮನಿರು ಮಾರಾಯಾ, ಆನೆಗೆ ಇರುವೆಯ ಕಷ್ಟ, ಇರುವೆಗೆ ಆನೆಯ ಕಷ್ಟ. ನಿನಗಾದರೋ ತಮಾಷೆ’ ಎಂದು ನಿದ್ದೆ ಹೋಗಿದ್ದೆ.
(ಫೋಟೋಗಳೂ ಲೇಖಕರವು )
ಕಥೆ, ಕಾದಂಬರಿ, ಕವಿತೆ, ಅಂಕಣಗಳನ್ನು ಬರೆಯುತ್ತಾರೆ. ಮೈಸೂರು ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ನಿರ್ವಾಹಕ. ಅಲೆದಾಟ, ಫೋಟೋಗ್ರಫಿ ಮತ್ತು ಬ್ಲಾಗಿಂಗ್ ಇವರ ಇತರ ಹವ್ಯಾಸಗಳಲ್ಲಿ ಕೆಲವು. ಕೊಡಗಿನವರು.