ನಮ್ಮ ಗೈಡ್, `ಇಲ್ಲಿಗೆ ಬರುವ ಕೆಲವು ಉತ್ಸಾಹಿ ಪ್ರವಾಸಿಗರು ರಾತ್ರಿ ನಗರದಲ್ಲಿ ಕಳೆದುಹೋಗುತ್ತಾರೆ. ಒಂದೆರಡು ದಿನಗಳಾದ ಮೇಲೆ ತಮ್ಮ ಇರುವಿಕೆಯ ಸ್ಮೃತಿಗೆ ಹಿಂದಿರುಗಿದಾಗ ತಾವಿರುವ ಹೋಟಲಿಗೆ ಹಿಂದಿರುಗಿಬರುತ್ತಾರೆ. ನೀವ್ಯಾರಾದರೂ ಕಳೆದುಹೋಗುವುದಾದರೆ, ರಾತ್ರಿ ನಿಮ್ಮ ಹೋಟಲ್‌ನಿಂದ ಹೊರಕ್ಕೆ ಬಂದರೆ ಸಾಕು, ಉಳಿದ ಕೆಲಸಗಳು ತನಗೆತಾನೇ ನಡೆಯುತ್ತವೆ. ನೀವ್ಯಾರಾದರೂ ತಯಾರಿದ್ದರೆ ನಾನು ಕರೆದುಕೊಂಡು ಹೋಗುತ್ತೇನೆ, ಆದರೆ ಹಿಂದಕ್ಕೆ ಕರೆದುತರುವ ಗ್ಯಾರಂಟಿ ಕೊಡಲಾರೆ. ನಿಮ್ಮ ನಿಮ್ಮ ಗಂಡಂದಿರರನ್ನು ರಾತ್ರಿ ಹೊರಗೋಗದಂತೆ ನೋಡಿಕೊಳ್ಳಿ’ ಎಂಬುದಾಗಿ ಮಹಿಳೆಯರಿಗೆ ಎಚ್ಚರಿಕೆ ಕೊಟ್ಟನು.
ಆಮ್‌ಸ್ಟರ್‌ಡ್ಯಾಮ್‌ನ ಪ್ರವಾಸ ಅನುಭವಗಳ ಕುರಿತು ಡಾ. ಎಂ. ವೆಂಕಟಸ್ವಾಮಿ ಪ್ರವಾಸ ಕಥನ ನಿಮ್ಮ ಓದಿಗೆ
ನಾವಿದ್ದ ಐಷಾರಾಮಿ ಹವಾ ನಿಯಂತ್ರಣ ಬಸ್ಸು ಬೆಲ್ಜಿಯಂನ ಬ್ರಸೆಲ್ಸ್ ನಗರವನ್ನು ಬಿಟ್ಟು ಬೆಲ್ಜಿಯಂ ಗಡಿ ದಾಟಿ ನೆದರ್ಲ್ಯಾಂಡ್ ದೇಶದ ಒಳಗೆ ಬರ‍್ರನೆ ಸಾಗುತ್ತಿತ್ತು. ಎಲ್ಲಿ ನೋಡಿದರೂ ಸಮತಟ್ಟು ನೆಲ, ಸಣ್ಣಸಣ್ಣ ದಿಬ್ಬಗಳು ಮತ್ತು ಗುಡ್ಡಗಳು, ಹಚ್ಚನೆ ಹಸಿರು ಹೊಲಗಳು, ಅಲ್ಲಲ್ಲಿ ಸಣ್ಣಸಣ್ಣ ಮತ್ತು ದೊಡ್ಡದೊಡ್ಡ ಹಳ್ಳಿಗಳು ಮತ್ತು ಗಿರಗಿರನೆ ತಿರುಗುತ್ತಿರುವ ಗಾಳಿಯಂತ್ರಗಳು ಕಾಣಿಸುತ್ತಿದ್ದವು. ಹಳ್ಳಿಗಳ ಮನೆಗಳು ಸಾಮಾನ್ಯ ಮನೆಗಳಾಗಿದ್ದು ಯಾವುದೇ ಮಹಡಿ ಮನೆಗಳು ಕಾಣಿಸಲಿಲ್ಲ. ಹಳ್ಳಿಗಳ ನಡುವೆ ಜೀಸಸ್ ಶಿಲುಬೆಗಳಿರುವ ಸಣ್ಣಸಣ್ಣ ಚರ್ಚ್‌ಗಳು ಇದ್ದವು. ಸಾಮಾನ್ಯವಾಗಿ ನಮ್ಮ ದೇಶದಲ್ಲಿ ರಸ್ತೆಗಳು ಹಳ್ಳಿ/ಪಟ್ಟಣಗಳ ಮಧ್ಯತೂರಿ ಜನಜಂಗುಳಿಯಲ್ಲಿ ಹಾದುಹೋಗುತ್ತವೆ. ಆದರೆ ಇಲ್ಲಿನ ರಸ್ತೆಗಳು ಹಳ್ಳಿಗಳ ಹೊರಗೆ ಒಂದೆರಡು ಕಿ.ಮೀ.ಗಳ ದೂರದಲ್ಲಿ ಹಾದುಹೋಗುತ್ತಿದ್ದವು. ಪ್ರತಿಯೊಂದು ಹಳ್ಳಿಯ ದಾರಿ ಮುಖ್ಯರಸ್ತೆಯಿಂದ ಉದ್ದನೆ ವಕ್ರ ರಸ್ತೆಯಲ್ಲಿ ಹಳ್ಳಿಯ ಕಡೆಗೆ ಸಾಗುತ್ತಿತ್ತು. ಯಾವುದೇ ರಸ್ತೆ ಇನ್ನೊಂದು ರಸ್ತೆಗೆ ಅಡ್ಡಬರುತ್ತಿರಲಿಲ್ಲ. ರಸ್ತೆಗಳಲ್ಲಿ ಕಾರುಗಳು ಮತ್ತು ಬಸ್ಸುಗಳು ಮಾತ್ರ ಬರ‍್ರನೆ ಓಡುತ್ತಿದ್ದವು. ದ್ವಿಚಕ್ರ ವಾಹನಗಳಾಗಲಿ, ಜನರಾಗಲಿ ರಸ್ತೆಗಳಲ್ಲಿ ನಾಪತ್ತೆಯಾಗಿದ್ದರು.
ನೆದರ್ಲ್ಯಾಂಡ್‌ನ ಹಿಂದಿನ ಹೆಸರು ಹಾಲೆಂಡ್, ಇದು ಕೆರಿಬಿಯನ್ ವಲಯದಲ್ಲಿ ಸಾಗರೋತ್ತರ ಪ್ರದೇಶಗಳನ್ನು ಹೊಂದಿರುವ ವಾಯುವ್ಯ ಯುರೋಪ್‌ನಲ್ಲಿರುವ ದೇಶವಾಗಿದೆ. ನೆದರ್ಲ್ಯಾಂಡ್ ಸಾಮ್ರಾಜ್ಯದ ನಾಲ್ಕು ಘಟಕ ರಾಷ್ಟ್ರಗಳಲ್ಲಿ ನೆದರ್ಲ್ಯಾಂಡ್ ಅತಿದೊಡ್ಡದಾಗಿದೆ (ಅರುಬಾ, ಕುರಾಕೊ, ಸಿಂಟ್ ಮಾರ್ಟೆನ್ ಮತ್ತು ನೆದರ್ಲ್ಯಾಂಡ್). ನೆದರ್ಲ್ಯಾಂಡ್ 12 ಜಿಲ್ಲೆಗಳನ್ನು ಹೊಂದಿದ್ದು ಪೂರ್ವಕ್ಕೆ ಜರ್ಮನಿ, ದಕ್ಷಿಣಕ್ಕೆ ಬೆಲ್ಜಿಯಂ, ವಾಯುವ್ಯದಲ್ಲಿ ಕೆರಿಬಿಯನ್ ಸಮುದ್ರ ಕರಾವಳಿಯನ್ನು ಹೊಂದಿದೆ. ಕೆರಿಬಿಯನ್ ಸೇಂಟ್ ಮಾರ್ಟಿನ್ ವಿಭಜಿತ ದ್ವೀಪದಲ್ಲಿ ಫ್ರಾನ್ಸ್‌ನೊಂದಿಗೆ ಗಡಿ ಹಂಚಿಕೊಂಡಿದೆ. ಜೊತೆಗೆ ಯು.ಕೆ. ಜರ್ಮನಿ ಮತ್ತು ಬೆಲ್ಜಿಯಂನೊಂದಿಗೆ ಕರಾವಳಿ ಗಡಿಗಳನ್ನು ಹೊಂದಿದೆ. 1944-1945ರ ಎರಡನೆ ವಿಶ್ವ ಮಹಾಯುದ್ಧದ ನಂತರ ನೆದರ್ಲ್ಯಾಂಡ್‌ಅನ್ನು ಆಕ್ರಮಿಸಿಕೊಂಡಿದ್ದ ಕೆನಡಿಯನ್, ಬ್ರಿಟಿಷ್, ಪೋಲಿಷ್, ಡಚ್ ಮತ್ತು ಅಮೆರಿಕನ್ ಪಡೆಗಳು ನೆದರ್ಲ್ಯಾಂಡ್‌ಅನ್ನು ಬಿಟ್ಟುಹೋದವು. ನೆದರ್ಲ್ಯಾಂಡ್ 1919ರಲ್ಲಿ ಮಹಿಳೆಯರ ಮತದಾನದ ಹಕ್ಕನ್ನು ಅನುಮತಿಸಿತು ಮತ್ತು 2001ರಲ್ಲಿ ಜಗತ್ತಿನಲ್ಲಿ ಮೊದಲಿಗೆ ಸಲಿಂಗ ವಿವಾಹವನ್ನು ಕಾನೂನುಬದ್ಧಗೊಳಿಸಿತು. ಜಗತ್ತಿನಲ್ಲಿ ಅತಿ ಹೆಚ್ಚು 11ನೇ ತಲಾದಾಯವನ್ನು ಹೊಂದಿರುವ ನೆದರ್ಲ್ಯಾಂಡ್ ಯುರೋಪಿಯನ್ ಸದಸ್ಯತ್ವದ ಜೊತೆಗೆ G10, NATO, OECD, and WTO ಸ್ಥಾಪಕ ಸದಸ್ಯ ದೇಶವಾಗಿದೆ.
ದೇಶದ ಅಧಿಕೃತ ಭಾಷೆ ಡಚ್ ಆಗಿದ್ದು, ಇಂಗ್ಲಿಷ್ ಮತ್ತು ಪಾಪಿಯಮೆಂಟೊ, ಕೆರಿಬಿಯನ್ ಪ್ರಾಂತ್ಯಗಳಲ್ಲಿ ಅಧಿಕೃತ ಭಾಷೆಗಳಾಗಿವೆ. ಫಲವತ್ತಾದ ಮಣ್ಣು, ಒಳ್ಳೆ ಹವಾಮಾನ ತೀವ್ರ ಕೃಷಿಯಲ್ಲಿ ತೊಡಗಿಸಿಕೊಂಡಿರುವ ನೆದರ್ಲ್ಯಾಂಡ್ ಆಹಾರ ಮತ್ತು ಕೃಷಿ ಉತ್ಪನ್ನಗಳ ಮೌಲ್ಯದಲ್ಲಿ ವಿಶ್ವದ ಎರಡನೆ ಅತಿದೊಡ್ಡ ರಫ್ತುದಾರ ದೇಶವಾಗಿದೆ. ಇದನ್ನು ನಂಬುವುದಾದರು ಹೇಗೆ? ಹೌದು! ನಂಬಲೇಬೇಕು. ಇದೇ ರೀತಿಯ ಇನ್ನೊಂದು ಉದಾಹರಣೆಯೆಂದರೆ ನೆದರ್ಲ್ಯಾಂಡ್‌ನ ಅರ್ಧದಷ್ಟು ಭೂಪ್ರದೇಶವನ್ನು ಹೊಂದಿರುವ ಇಸ್ರೇಲ್ ದೇಶ ಕೂಡ ಕೃಷಿ ಇನ್ನಿತರ ವಸ್ತುಗಳನ್ನು ರಫ್ತು ಮಾಡುತ್ತದೆ. ಜಗತ್ತಿನಲ್ಲಿ ಸಾಸಿವೆ ಕಾಳುಗಳಷ್ಟು ಗಾತ್ರದ ಭೂಪ್ರದೇಶಗಳನ್ನು ಹೊಂದಿರುವ ಇಂತಹ ದೇಶಗಳ ಪ್ರಗತಿಯನ್ನು 3.28 ದಶಲಕ್ಷ ಭೂಪ್ರದೇಶ ಹೊಂದಿರುವ ನಮ್ಮ ದೇಶಕ್ಕೆ ಹೋಲಿಸಿದಾಗ ಏನು ಹೇಳಬೇಕು?
ನೆದರ್ಲ್ಯಾಂಡ್‌ನ ಒಟ್ಟು ಭೂಪ್ರದೇಶ 41,865 ಚ.ಕಿ.ಮೀ.ಗಳು (ಕರ್ನಾಟಕದ 20 ಭಾಗಕ್ಕಿಂತ ಕಡಿಮೆ), ಜನಸಂಖ್ಯೆ 1.80 ಕೋಟಿ. ದೇಶದ 26% ಪ್ರದೇಶ ಸಮುದ್ರಮಟ್ಟದಿಂದ ಕೆಳಗಿದ್ದು ಅತಿ ಎತ್ತರದ ಪ್ರದೇಶವೆಂದರೆ ಸಮುದ್ರ ಮಟ್ಟದಿಂದ ಕೇವಲ 1,057 ಅಡಿಗಳ ಎತ್ತರ ಇರುವ ಪ್ರದೇಶ. 74% ಡಚ್ಚರು, 8.4% ಯುರೋಪಿಯನ್ನರು, 2.4% ಟರ್ಕಿಶ್, ಉಳಿದವರು ಮೊರೊಕನ್, ಇಂಡೋನೇಷಿಯನ್, ಸುರಿನಾಮಿಗಳು ಮತ್ತು ಡಚ್ ಕೆರಿಬಿಯನ್ನರು. ಇನ್ನು ಧರ್ಮಗಳ ವಿಷಯಕ್ಕೆ ಬಂದರೆ 55.5% ಜನರು ಯಾವುದೇ ಧರ್ಮವನ್ನು ನೆಚ್ಚಿಕೊಂಡಿಲ್ಲ; 34% ಕ್ರಿಶ್ಚಿಯನ್ನರು (18.8% ಕ್ಯಾಥೋಲಿಕ್ಸ್ ಮತ್ತು 14.4% ಪ್ರೊಟೆಸ್ಟಂಟರು), 5.2% ಇಸ್ಲಾಂ ಮತ್ತು 5.1 ಇತರ ಧರ್ಮಿಯರು. 1588ರಲ್ಲಿ ಪ್ರಾರಂಭವಾದ ರಿಪಬ್ಲಿಕನ್ ಅವಧಿಯಲ್ಲಿ ನೆದರ್ಲ್ಯಾಂಡ್ ರಾಜಕೀಯ, ಆರ್ಥಿಕ ಮತ್ತು ಸಾಂಸ್ಕೃತಿಕ ಶ್ರೇಷ್ಠತೆಯ ವಿಶಿಷ್ಟ ಯುಗವನ್ನು ಪ್ರವೇಶಿಸಿ, ಯುರೋಪ್‌ನಲ್ಲಿ ಅತ್ಯಂತ ಶಕ್ತಿಶಾಲಿ ಮತ್ತು ಪ್ರಭಾವಶಾಲಿ ಸ್ಥಾನವನ್ನು ಪಡೆದುಕೊಂಡಿತು. ಈ ಅವಧಿಯನ್ನು `ಡಚ್ ಗೋಲ್ಡನ್ ಏಜ್’ ಎಂದು ಕರೆಯುತ್ತಾರೆ. ಈ ಅವಧಿಯಲ್ಲಿ ಡಚ್ ಈಸ್ಟ್ ಇಂಡಿಯಾ ಕಂಪನಿ ಮತ್ತು ಡಚ್ ವೆಸ್ಟ್ ಇಂಡಿಯಾ ಕಂಪನಿಗಳು ಜಗತ್ತಿನಾದ್ಯಂತ ವಸಾಹತುಗಳು ಮತ್ತು ವ್ಯಾಪಾರದ ಪೋಸ್ಟ್‌ಗಳನ್ನು ಸ್ಥಾಪಿಸಿದವು. ದೇಶದಲ್ಲಿ ಆಮ್‌ಸ್ಟರ್‌ಡ್ಯಾಮ್, ರೋಟರ್‌ಡ್ಯಾಮ್, ದಿ ಹೇಗ್ ಮತ್ತು ಉಟ್ರೆಕ್ಟ್ ನಾಲ್ಕು ದೊಡ್ಡ ನಗರಗಳಿವೆ.
ನಾವಿದ್ದ ಬಸ್ಸು ಆಮ್‌ಸ್ಟರ್‌ಡ್ಯಾಮ್‌ನ `ಆಮ್ಸ್ಟೆಲ್’ ನದಿ ದಡಗಳ ಮೇಲೆ ಪಾರಂಪರಿಕ ಕಟ್ಟಡಗಳ ಮಧ್ಯೆ ಸರ‍್ರನೆ ಹೋಗುತ್ತಿತ್ತು. ಆಮ್‌ಸ್ಟರ್‌ಡ್ಯಾಮ್ ನಗರವನ್ನು `ಉತ್ತರದ ವೆನಿಸ್’ ಎಂದೂ ಕರೆಯಲಾಗುತ್ತದೆ. ನಗರದ ನಡುವಿನ ಕಾಲುವೆಗಳು ವಿಶೇಷವಾಗಿದ್ದು ಇದನ್ನು ಯುನೆಸ್ಕೋ ವಿಶ್ವ ಪರಂಪರೆಯ ತಾಣವೆಂದು ಘೋಷಿಸಲಾಗಿದೆ. ಆಮ್ಸ್ಟೆಲ್ ನದಿ ಮುಖದಲ್ಲಿರುವ ಆಮ್‌ಸ್ಟರ್‌ಡ್ಯಾಮ್ ಪಟ್ಟಣವನ್ನು ಪ್ರವಾಹದಿಂದ ರಕ್ಷಿಸಲು ಮೊದಲಿಗೆ 13ನೇ ಶತಮಾನದಲ್ಲಿ ಒಂದು ಅಣೆಕಟ್ಟೆಯನ್ನು ಕಟ್ಟಲಾಯಿತು. 12ನೇ ಶತಮಾನದ ಉತ್ತರಾರ್ಧದಲ್ಲಿ ಆಮ್‌ಸ್ಟರ್‌ಡ್ಯಾಮ್ ಮೀನುಗಾರರ ಒಂದು ಸಣ್ಣ ಗ್ರಾಮವಾಗಿತ್ತು. 17ನೇ ಶತಮಾನದಲ್ಲಿ ನೆದರ್ಲ್ಯಾಂಡ್‌ನ `ಗೋಲ್ಡನ್ ಏಜ್’ನಲ್ಲಿ ಆರ್ಥಿಕ ವಿಶ್ವಶಕ್ತಿಗಳಲ್ಲಿ ಒಂದಾಗಿ ಇದು ವಿಶ್ವದ ಪ್ರಮುಖ ಬಂದರಾಯಿತು. 20ನೇ ಶತಮಾನದಲ್ಲಿ ನಗರ ವಿಸ್ತರಣೆಗೊಂಡು ಸುತ್ತಮುತ್ತಲಿನ ಉಪನಗರಗಳನ್ನು ಸೇರಿಸಿಕೊಂಡು ಹೊಸನಗರವನ್ನು ನಿರ್ಮಿಸಲಾಯಿತು.
16 ಮತ್ತು 17ನೇ ಶತಮಾನಗಳಲ್ಲಿ ಆಮ್‌ಸ್ಟರ್‌ಡ್ಯಾಮ್‌ನ ಉಸ್ತುವಾರಿ ವಹಿಸಿದ್ದ ಜನಪ್ರತಿನಿಧಿಗಳು ಈ ಕಾಲುವೆಗಳನ್ನು ವಿನ್ಯಾಸಗೊಳಿಸಿ ನಿರ್ಮಿಸಿದರು. ಇಲ್ಲಿನ ರಾಜಪ್ರತಿನಿಧಿಗಳು, ಶ್ರೀಮಂತರು ಮತ್ತು ವ್ಯಾಪಾರಿಗಳು ನಗರದ ಆಡಳಿತವನ್ನು ನಿರ್ವಹಿಸುತ್ತಾ ಬಂದಿದ್ದಾರೆ. ಮೊದಲಿಗೆ ಹೆರೆನ್‌ಗ್ರಾಚ್ಟ್ ಹೆಸರಿನ ಮುಖ್ಯ ಕಾಲುವೆಯನ್ನು ನಿರ್ಮಿಸಲಾಯಿತು. ಒಟ್ಟು ಸುಮಾರು 100 ಕಿ.ಮೀ.ಗಳ ಉದ್ದ ಇರುವ ನದಿ ಕಾಲುವೆಗಳ ಮೇಲೆ ನೂರಾರು ಸೇತುವೆಗಳಿದ್ದು ಅವುಗಳಲ್ಲಿ ಸಣ್ಣಸಣ್ಣ ಕ್ರೂಸ್‌ಗಳು ಸಂಚರಿಸುತ್ತಿರುತ್ತವೆ. ಅವುಗಳಲ್ಲಿ ಮುಖ್ಯವಾಗಿ ಹೆರೆನ್‌ಗ್ರಾಚ್ಟ್ (ಕಾಲುವೆ), ಪ್ರಿನ್‌ಸೆನಗ್ರಾಚ್ಟ್ ಮತ್ತು ಕೀಜರ್ಸ್‌ಗ್ರಾಚ್‌ಗಳಿವೆ. ನಾವೆಲ್ಲ ಕ್ರೂಸ್‌ನ ಮೇಲೆ ಕುಳಿತುಕೊಂಡು ಸುತ್ತಲೂ ನೋಡುತ್ತಾಹೋದೆವು. ಈ ಕಾಲುವೆಗಳ ಮೂಲಕ ಕ್ರೂಸ್‌ಗಳಲ್ಲಿ ಸುತ್ತಾಡಿದಾಗ ಸುಮಾರು 1500 ನಗರದ ಹಳೆಕಾಲದ ಕಟ್ಟಡಗಳನ್ನು ನೋಡಬಹುದು. ಇವೆಲ್ಲ ಹಳೆ ಪಾರಂಪರಿಕ ಕಟ್ಟಡಗಳಾಗಿದ್ದು ಮಧ್ಯೆಮಧ್ಯೆ ಸಣ್ಣಸಣ್ಣ ಹಸಿರು ದಿಬ್ಬಗಳು, ಉದ್ಯಾನವನಗಳನ್ನು ನೋಡಬಹುದು. ಈ ನಗರದಲ್ಲಿ ಜನರು ಹೆಚ್ಚೆಚ್ಚು ಸೈಕಲ್‌ಗಳನ್ನು ಬಳಸುತ್ತಾರೆ.
ನಾವು ಕುಳಿತಿದ್ದ ಕ್ರೂಸ್‌ನ ಮೇಜುಗಳ ಮೇಲೆ ಕಿವಿಗಳಿಗೆ ಹಾಕಿಕೊಳ್ಳುವ ಏರ್‌ಫೋನ್ಸ್ ಇಟ್ಟಿದ್ದು ಎದುರಿಗೆ ಬಣ್ಣದ ಪಝ಼ಲ್ ಡಬ್ಬಿಗಳನ್ನು ಇಟ್ಟಿದ್ದರು. ಅದನ್ನು ಪರಿಶೀಲಿಸಿ ಆ ಡಬ್ಬಿಗೆ ಏರ್‌ಫೋನ್ ವೈರ್ ಸಿಕ್ಕಿಸಿಕೊಂಡು ಅಲ್ಲಿದ್ದ ದೇಶಗಳ ಬಾವುಟಗಳಿರುವ ಸ್ವಿಚ್ಚನ್ನು ಒತ್ತಿದರೆ ಸಾಕು, ನಿಮಗೆ ಆಯಾ ದೇಶಗಳ ಭಾಷೆಯಲ್ಲಿ ಅದು ವಿಹಾರದ ವಿವರಣೆಗಳನ್ನು ನೀಡುತ್ತಾಹೋಗುತ್ತದೆ. ಆದರೆ ಅದರಲ್ಲಿ ಇಂಗ್ಲಿಷ್ ಜೊತೆಗೆ ಕೆಲವು ಮುಖ್ಯ ಯುರೋಪಿಯನ್ ಭಾಷೆಗಳು ಮಾತ್ರ ಇದ್ದವು. ಆಮ್ಸ್ಟೆಲ್ ನದಿ ಮುಖದಲ್ಲಿರುವ ನಗರದ ಮೇಲೆ ಪ್ರವಾಹ ಬರುವುದನ್ನು ತಪ್ಪಿಸಲು ನೂರಾರು ಕಾಲುವೆಗಳನ್ನು ಸುತ್ತಿಬಳಸಿ ನಿರ್ಮಿಸಿರುವುದು ಕಾಣಿಸುತ್ತದೆ. ಅಂದರೆ ಹೆಚ್ಚು ನೀರುಬಂದಾಗ ನೀರು ಕಾಲುವೆಗಳಲ್ಲಿ ಸುತ್ತಿಬಳಸಿ ಸಾಗಿ ಪ್ರವಾಹವನ್ನು ತಪ್ಪಿಸುವ ವ್ಯವಸ್ಥೆ ಇದಾಗಿದೆ. ಜೊತೆಗೆ ಕಾಲುವೆಗಳ ನಡುವೆಯೆ ನಗರದ ವಸತಿ ಯೋಜನೆಗಳನ್ನು ನಿರ್ಮಿಸಲಾಗಿದೆ. ಬಹುಶಃ ಈ ರೀತಿಯ ಕಾಲುವೆಗಳನ್ನು ಮಾಡದೇಹೋಗಿದ್ದರೆ ಈ ನಗರ ಉಳಿಯುತ್ತಿರಲಿಲ್ಲ. ತೀರಾ ಏರುಪೇರಿನ ಹವಾಮಾನ ಇರುವ ನಗರದಲ್ಲಿ ಝೀರೊ ಡಿಗ್ರಿಯಿಂದ (ಫೆಬ್ರವರಿ) 22 ಡಿಗ್ರಿಗಳವರೆಗೂ (ಜುಲೈ) ಇರುತ್ತದೆ. ವಾರ್ಷಿಕ ಮಳೆ 700 ರಿಂದ 900 ಮಿಲಿಮೀಟರುಗಳು.
ನಗರದ ಪ್ರಮುಖ ಆಕರ್ಷಣೆಗಳಲ್ಲಿ ಅದರ ಐತಿಹಾಸಿಕ ಕಾಲುವೆಗಳು, ರಿಜ್ಸ್ಕ್ಸ್ ಮ್ಯೂಸಿಯಂ, ಡಚ್ ಗೋಲ್ಡನ್ ಏಜ್ ಕಲೆಯ ದೊಡ್ಡ ಸಂಗ್ರಹಾಲಯ, ವ್ಯಾನ್‌ಗಾಗ್ ಮ್ಯೂಸಿಯಂ, ನಗರದ ರಾಯಲ್ ಪ್ಯಾಲೇಸ್ ಮತ್ತು ಹಳೆ ಸಿಟಿ ಹಾಲ್ ಇರುವ ಅಣೆಕಟ್ಟಿನ ಚೌಕ, ಆಧುನಿಕ ಕಲೆಗಳ ಸ್ಟೆಡೆಲಿಜ್ಕ್ ಮ್ಯೂಸಿಯಂ, ಹಾರ್ಟ್ ಮ್ಯೂಸಿಯಂ, ಕನ್ಸರ್ಟ್‌ಗೆಬೌ ಕನ್ಸರ್ಟ್ ಹಾಲ್, ಅನ್ನಾ ಫ್ರಾಂಕ್ ಹೌಸ್, ಸ್ಕೀಪ್ವಾರ್ಟ್ ಮ್ಯೂಸಿಯಂ ಇತ್ಯಾದಿ ಮುಖ್ಯವಾದವು. ಆಮ್‌ಸ್ಟರ್‌ಡ್ಯಾಮ್‌ನ ರಾತ್ರಿ ಜೀವನ ಮತ್ತು ಉತ್ಸವದ ಚಟುವಟಿಕೆಗಳಿಗೆ ಹೆಸರುವಾಸಿಯಾಗಿದೆ. ಹಲವಾರು ನೈಟ್‌ಕ್ಲಬ್‌ಗಳ (ಪ್ರಖ್ಯಾತ ಮೆಲ್ಕ್‌ವೆಗ್ ಮತ್ತು ಪ್ಯಾರಾಡಿಸೊ) ಜೊತೆಗೆ ವಿಶ್ವದ ಅತ್ಯಂತ ಪ್ರಸಿದ್ಧ ಕ್ಲಬ್ಬುಗಳು ಇವೆ. ಅವೆಲ್ಲ ಈಗಲೂ ಸಕ್ರಿಯವಾಗಿವೆ.
ನಮ್ಮ ಗೈಡ್, `ಇಲ್ಲಿಗೆ ಬರುವ ಕೆಲವು ಉತ್ಸಾಹಿ ಪ್ರವಾಸಿಗರು ರಾತ್ರಿ ನಗರದಲ್ಲಿ ಕಳೆದುಹೋಗುತ್ತಾರೆ. ಒಂದೆರಡು ದಿನಗಳಾದ ಮೇಲೆ ತಮ್ಮ ಇರುವಿಕೆಯ ಸ್ಮೃತಿಗೆ ಹಿಂದಿರುಗಿದಾಗ ತಾವಿರುವ ಹೋಟಲಿಗೆ ಹಿಂದಿರುಗಿಬರುತ್ತಾರೆ. ನೀವ್ಯಾರಾದರೂ ಕಳೆದುಹೋಗುವುದಾದರೆ, ರಾತ್ರಿ ನಿಮ್ಮ ಹೋಟಲ್‌ನಿಂದ ಹೊರಕ್ಕೆ ಬಂದರೆ ಸಾಕು, ಉಳಿದ ಕೆಲಸಗಳು ತನಗೆತಾನೇ ನಡೆಯುತ್ತವೆ. ಇಲ್ಲಿ ಡ್ರಗ್ಸ್ ನಿಷೇಧವಿಲ್ಲ. ಹಿಂದಿನ ವರ್ಷಗಳಲ್ಲಿ ನಾನು ಟೂರ್ ಗೈಡ್ ಆಗಿದ್ದಾಗ ಇಬ್ಬರು ಪ್ರವಾಸಿಗರು ರಾತ್ರಿ ಕಳೆದುಹೋಗಿ ಮರುದಿನ ಮಧ್ಯಾಹ್ನ ಹೋಟಲ್‌ಗೆ ಹಿಂದಿರುಗಿಬಂದಿದ್ದರು. ಅವರಲ್ಲಿ ಒಬ್ಬರು ಬ್ಯಾಚುಲರ್ ಆಗಿದ್ದು, ಇನ್ನೊಬ್ಬರು ಫ್ಯಾಮಿಲಿಮನ್. ಆ ಫ್ಯಾಮಿಲಿಮನ್ ಪತ್ನಿಯನ್ನು ಸುಧಾರಿಸುವುದರಲ್ಲಿ ನನಗೆ ಪ್ರಾಣಹೋಗಿ ಬಂದಿತ್ತು. ನೀವ್ಯಾರಾದರೂ ತಯಾರಿದ್ದರೆ ನಾನು ಕರೆದುಕೊಂಡು ಹೋಗುತ್ತೇನೆ, ಆದರೆ ಹಿಂದಕ್ಕೆ ಕರೆದುತರುವ ಗ್ಯಾರಂಟಿ ಕೊಡಲಾರೆ. ನಿಮ್ಮ ನಿಮ್ಮ ಗಂಡಂದಿರರನ್ನು ರಾತ್ರಿ ಹೊರಗೋಗದಂತೆ ನೋಡಿಕೊಳ್ಳಿ’ ಎಂಬುದಾಗಿ ಮಹಿಳೆಯರಿಗೆ ಎಚ್ಚರಿಕೆ ಕೊಟ್ಟನು. ನಮ್ಮಲ್ಲಿದ್ದ ಒಂಟಿ ಮನುಷ್ಯ ದಯವಿಟ್ಟು ನನ್ನನ್ನ ಕರೆದುಕೊಂಡು ಹೋಗಿ ಎಂದು ಗೈಡ್‌ಗೆ ದುಂಬಾಲು ಬಿದ್ದಿದ್ದ. ನಮ್ಮ ಜೊತೆಗೆ ಬಂದಿದ್ದ ಕೆಲವು ಜೋಡಿಗಳು ರಾತ್ರಿ ಡಿನ್ನರ್ ಮುಗಿಸಿ ನಾವಿದ್ದ ಶೀಫೊಲ್ ಹೋಟಲಿನ ಎದುರಿಗಿದ್ದ ಕಸೀನೋಗೆ ಹೋಗಿ ಹಿಂದಕ್ಕೆ ಬಂದಿದ್ದರು. ಕಾರಣ ಅಲ್ಲಿ ಪ್ರವೇಶ ಶುಲ್ಕ ನೀಡಿ, ಪಾಸ್‌ಪೋರ್ಟ್ ತೋರಿಸಬೇಕು ಎಂದರಂತೆ. ನಾವು ಡಿನ್ನರ್ ಮುಗಿಸಿ ಗಪ್‌ಚಿಪ್ ಎಂದು ಚಳಿಗೆ ಹೋಟಲ್‌ನಲ್ಲಿ ಮಲಗಿಕೊಂಡಿದ್ದೆವು. ಯುರೋಪ್‌ನಲ್ಲಿ ನಾವು ತಂಗಿದ್ದ ಅತ್ಯಂತ ಸುಂದರ ಮತ್ತು ದುಬಾರಿ ಹೋಟಲೆಂದರೆ ಹೋಟಲ್ ಶೀಫೊಲ್ ಆಗಿತ್ತು.
ಹೈಡಲ್‌ಬರ್ಗ್ ಮಧ್ಯೆ ಹರಿಯುವ ನದಿ.
1602ರಲ್ಲಿ ಸ್ಥಾಪನೆಯಾದ ಆಮ್‌ಸ್ಟರ್‌ಡ್ಯಾಮ್ ಸ್ಟಾಕ್ ಎಕ್ಸ್ಚೇಂಜ್‌ಅನ್ನು ವಿಶ್ವದ ಅತ್ಯಂತ ಹಳೆಯ ಆಧುನಿಕ ಸೆಕ್ಯುರಿಟೀಸ್ ಮಾರ್ಕೆಟ್ ಸ್ಟಾಕ್ ಎಕ್ಸ್ಚೇಂಜ್ ಎಂದು ಪರಿಗಣಿಸಲಾಗಿದೆ. ಆಮ್‌ಸ್ಟರ್‌ಡ್ಯಾಮ್ ವಾಣಿಜ್ಯ ರಾಜಧಾನಿಯ ಜೊತೆಗೆ ಯುರೋಪ್‌ನ ಉನ್ನತ ಹಣಕಾಸು ಕೇಂದ್ರಗಳಲ್ಲಿ ಒಂದಾಗಿದ್ದು ಜಗತ್ತಿನ ಮುಖ್ಯನಗರಗಳ ಸಂಶೋಧನಾ ಜಾಲದಿಂದ `ಆಲ್ಫಾ ವಿಶ್ವ ನಗರ’ವೆಂದು ಪರಿಗಣಿಸಲಾಗಿದೆ. ಜಗತ್ತಿನ ಅನೇಕ ದೊಡ್ಡ ಕಂಪನಿಗಳು ಇಲ್ಲಿ ನೆಲೆಗೊಂಡಿವೆ ಮತ್ತು ಪ್ರಮುಖ ತಂತ್ರಜ್ಞಾನ ಕಂಪನಿಗಳು; ಉಬರ್, ನೆಟ್‌ಫ್ಲಿಕ್ಸ್ ಮತ್ತು ಟೆಸ್ಲಾ ಕಂಪನಿಗಳ ಪ್ರಧಾನ ಕಚೇರಿಗಳು ಇಲ್ಲಿವೆ. ಜಗತ್ತಿನಲ್ಲಿ 9ನೇ ಅತ್ಯುತ್ತಮ ವಾಸಯೋಗ್ಯ ನಗರವಾಗಿದ್ದು, ಪರಿಸರ ಮತ್ತು ಮೂಲ ಸೌಕರ್ಯಗಳು ಜೀವನಮಟ್ಟದಲ್ಲಿ 12ನೇ ಸ್ಥಾನ ಪಡೆದುಕೊಂಡಿದೆ. ಆಮ್‌ಸ್ಟರ್‌ಡ್ಯಾಮ್ ಬಂದರು ಯುರೋಪಿನ ಐದನೇ ದೊಡ್ಡ ಬಂದರಾಗಿದ್ದು ಶೀಪೊಲ್ ವಿಮಾನ ನಿಲ್ದಾಣ ಯುರೋಪ್‌ನಲ್ಲಿ ಮೂರನೇ ಜನನಿಬಿಡ ವಿಮಾನ ನಿಲ್ದಾಣವಾಗಿದೆ (ಜಗತ್ತಿನ 11ನೇ ಜನನಿಬಿಡ ನಿಲ್ದಾಣ). ಆಮ್‌ಸ್ಟರ್‌ಡ್ಯಾಮ್ ವಿಶ್ವದ ಅತ್ಯಂತ ಬಹುಸಂಸ್ಕೃತಿಯ ನಗರಗಳಲ್ಲಿ ಒಂದಾಗಿದ್ದು, 177 ದೇಶಗಳ ಜನರು ಇಲ್ಲಿ ನೆಲೆಸಿದ್ದಾರೆ. ಆದರೆ ಇಲ್ಲಿನ ಶೀತಲ ವಾತಾವರಣ ಅಡ್ಡಿಯಾಗಿದೆ.
ಆಮ್‌ಸ್ಟರ್‌ಡ್ಯಾಮ್‌ನಲ್ಲಿರುವ ಡಿ ವಾಲೆನ್ ಅತಿ ದೊಡ್ಡ ಮತ್ತು ಪ್ರಸಿದ್ಧವಾದ ರೆಡ್‌ಲೈಟ್ ಜಿಲ್ಲೆಯಾಗಿದೆ. ಇದು 300 ಒಂಟಿ ಕೋಣೆಗಳಲ್ಲಿ ಲೈಂಗಿಕ ಸೇವೆಗಳನ್ನು ಒದಗಿಸುತ್ತದೆ. ಈ ಕೋಣೆಗಳ ಮುಂದೆ ಕೆಂಪು ದೀಪಗಳನ್ನು ಹಾಕಲಾಗಿರುತ್ತದೆ. ಈ ಪ್ರದೇಶದ ಜೊತೆಗೆ ಸಿಂಗಲ್‌ಗೆಬೀಡ್ ಮತ್ತು ರುಯ್ಸ್ಡೇಲ್‌ಕೇಡ್ ಮತ್ತು ಆಮ್‌ಸ್ಟರ್‌ಡ್ಯಾಮ್ ರೋಸ್ ಬರ್ಟ್ ಪ್ರದೇಶಗಳು ರೆಡ್‌ಲೈಟ್ ಪ್ರದೇಶಗಳಾಗಿವೆ. ಇದರ ಜೊತೆಗೆ ಈ ಪ್ರದೇಶಗಳಲ್ಲಿ ಹಲವಾರು ಸೆಕ್ಸ್ ಶಾಪುಗಳು, ಸೆಕ್ಸ್ ಥಿಯೇಟರುಗಳು, ಪೀಪ್ ಶೋಗಳು, ಸೆಕ್ಸ್ ಮ್ಯೂಸಿಯಂಗಳು, ಗಾಂಜಾ ಮ್ಯೂಸಿಯಂಗಳು ಮತ್ತು ಗಾಂಜಾ ಮಾರಾಟ ಮಾಡುವ ಹಲವಾರು ಕಾಫಿ ಅಂಗಡಿಗಳು ಇವೆ. ಒಟ್ಟಿನಲ್ಲಿ ನೆದರ್ಲ್ಯಾಂಡ್ ಸೆಕ್ಸ್ಫ್ರೀ, ಡ್ರಗ್ಸ್ಫ್ರೀ ದೇಶವಾಗಿದೆ.
ಜಗತ್ತಿನ ಪ್ರಖ್ಯಾತ ಕಲಾವಿದ ವಿನ್ಸೆಂಟ್ ವಿಲ್ಲೆಮ್ ವ್ಯಾನ್ ಗಾಗ್ 1853ರಲ್ಲಿ ಪ್ರಧಾನ ಕ್ಯಾಥೋಲಿಕ್ ಪ್ರಾಂತ್ಯದ ಉತ್ತರ ಬ್ರಬಂಟ್‌ನ ಗ್ರೂಟ್-ಜುಂಡರ್ಟ್, ನೆದರ್ಲ್ಯಾಂಡ್‌ನಲ್ಲಿ ಜನಿಸಿದನು. ಡಚ್ ರಿಫಾರ್ಮ್ಡ್ ಚರ್ಚ್ ಮಂತ್ರಿಯಾದ ಥಯೋಡೋರಸ್ ವ್ಯಾನ್ ಗಾಗ್ ಮತ್ತು ಅವರ ಪತ್ನಿ ಅನ್ನಾ ಕಾರ್ನೆಲಿಯಾ ಕಾರ್ಬೆಂಟಸ್ ದಂಪತಿಯ ಮೊದಲ ಮಗನೆ ವಿನ್ಸೆಂಟ್ ವ್ಯಾನ್ ಗಾಗ್. ಜಗತ್ಪ್ರಸಿದ್ಧ ಕಲಾವಿದರು, ವಿಜ್ಞಾನಿಗಳು, ತತ್ವಜ್ಞಾನಿಗಳು ಮತ್ತು ಲೇಖಕರು ಅರೆಹುಚ್ಚರಾಗಿರುತ್ತಾರೆ ಎನ್ನುವ ಮಾತಿದೆ. ವಿನ್ಸೆಂಟ್ ವ್ಯಾನ್ ಗಾಗ್ ತನ್ನ ಜೀವನದುದ್ದಕ್ಕೂ ಸಾಕಷ್ಟು ಆಸಕ್ತಿಗಳನ್ನು ಹೊಂದಿದ್ದನು, ಆದರೆ ಅವನ ಆಸಕ್ತಿಗಳು ಎಂದಿಗೂ ಸುಗಮವಾಗಿ ಫಲಿಸಲಿಲ್ಲ. ಗಾಗ್ ಮೊದಲಿಗೆ ತನ್ನ ಸೋದರ ಸೊಸೆ ಕೀ ವೋಸ್-ಸ್ಟ್ರೈಕರ್‌ಳನ್ನು ಪ್ರೀತಿಸಲು ಪ್ರಾರಂಭಿಸಿದಾಗ ಆಕೆ ವ್ಯಾನ್ ಗಾಗ್ ಪ್ರೀತಿಯನ್ನು ತಿರಸ್ಕರಿಸಿ ಕೆಟ್ಟ ಆರಂಭವನ್ನು ಪಡೆದನು. ನಂತರ ಗಾಗ್ ಸ್ವಲ್ಪ ಕಾಲ ಮಾಜಿ ವೇಶ್ಯೆ ಸಿಯೆನ್ ಹೂರ್ನಿಕ್ ಜೊತೆಯಲ್ಲಿ ವಾಸಮಾಡುತ್ತ ಅವನ ಕುಟುಂಬವನ್ನು ಅವಮಾನದಲ್ಲಿ ಮುಳುಗಿಸಿದನು.
ವ್ಯಾನ್ ಗಾಗ್ ಇದ್ದ ನ್ಯೂನೆನ್‌ನಲ್ಲಿ ಮಾರ್ಗಾಟ್ ಬೆಗೆಮನ್ ಎಂಬಾಕೆ ಇದ್ದು, ವ್ಯಾನ್ ಗಾಗ್‌ನನ್ನು ನೋಡದಂತೆ ಅವಳ ಕುಟುಂಬವು ನಿರ್ಬಂಧಿಸಿದಾಗ ಅವಳು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದಳು. ಪ್ಯಾರಿಸ್‌ನಲ್ಲಿ ಇಟಾಲಿಯನ್ ಅಗೋಸ್ಟಿನಾ ಸೆಗಟೋರಿ ಅವರೊಂದಿಗಿನ ವ್ಯಾನ್ ಗಾಗ್ ಅಸಾಧ್ಯ ಪ್ರೇಮ ಸಂಬಂಧದ ನಂತರ, ಆತ ಅಂತಿಮವಾಗಿ ತನ್ನ ನಿಜವಾದ ಪ್ರೀತಿಯನ್ನು ಕಂಡುಕೊಳ್ಳಲು ಉದ್ದೇಶಿಸಿಲ್ಲ ಎಂದು ಒಪ್ಪಿಕೊಳ್ಳಲು ನಿರ್ಧರಿಸಿದನು. ವ್ಯಾನ್ ಗಾಗ್ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೆ ಮುಂಚೆ ತನ್ನ ಎರಡೂ ಕಿವಿಗಳನ್ನು ಕತ್ತರಿಸಿ ಪ್ಯಾಕ್ ಮಾಡಿ ಕಳಿಸಿದನಂತೆ. ಅದಕ್ಕೆ ಮುಂಚೆ ಹಳದಿ ಮನೆಯಲ್ಲಿ ಗೌಗ್ವಿನ್‌ನೊಂದಿಗೆ (ಒಬ್ಬ ಕಲಾವಿದ) ದೊಡ್ಡ ಗಲಾಟೆ ನಡೆದಿತ್ತು ಎನ್ನಲಾಗಿದೆ. ಕತ್ತರಿಸಿದ ಕಿವಿಗಳನ್ನು ಹತ್ತಿರದ ವೇಶ್ಯ ಗೃಹಕ್ಕೆ ಕಳುಹಿಸಿಕೊಟ್ಟನು ಎಂದು ಹೇಳಲಾಗುತ್ತದೆ. ವೇಶ್ಯಾ ಗೃಹದಲ್ಲಿದ್ದ ವೈಶ್ಯೆಯೊಬ್ಬಳು ಯಾವಾಗಲು ವ್ಯಾನ್‌ಗಾಗ್‌ನ ಕಿವಿಗಳ ಜೊತೆಗೆ ಆಟವಾಡುತ್ತ ಇವು ನನಗೆ ಬೇಕು ಎನ್ನುತ್ತಿದ್ದಳಂತೆ!
ಬೆಂಗಳೂರಿನ `ಚ್ಯಾರಿಯಟ್ ವರ್ಲ್ಡ್ ಟೂರ್ಸ್’ ಮೂಲಕ ನಾನು, ಸುಶೀಲ, ಸ್ಮಿಥಾ ರೆಡ್ಡಿ ಮತ್ತು ಸುರೇಶ್ ರೆಡ್ಡಿ ನಾಲ್ವರು ಬೆಂಗಳೂರಿನಿಂದ ದುಬೈ ಮೂಲಕ ಅಕ್ಟೋಬರ್ 16, ಮಧ್ಯಾಹ್ನ 1.30ಕ್ಕೆ ಪ್ಯಾರೀಸ್‌ನ `ಚಾರ್ಲ್ಸ್ ಡಿ ಗೌಲ್’ ವಿಮಾನ ನಿಲ್ದಾಣ ತಲುಪಿದೆವು. ವಿಮಾನ ನಿಲ್ದಾಣ ಹಳೆಯದಾಗಿದ್ದು ಯಾವುದೇ ವಿಶೇಷವೂ ಕಾಣಿಸಲಿಲ್ಲ. ಅಲ್ಲಿ ನಮಗಾಗಿ ಕಾಯುತ್ತಿದ್ದ ಕಾರ್ ಚಾಲಕ ನಮ್ಮನ್ನ ಪ್ಯಾರಿಸ್‌ನ ಅಂಚಿನಲ್ಲಿದ್ದ ಮಿಲಿನಿಯಮ್ ಹೋಟಲ್ ತಲುಪಿಸಿ ನನ್ನ ಕೆಲಸ ಮುಗಿಯಿತು ಎಂದು ಹೊರಟುಹೋದನು. ನಮಗಿಂತ ನಾಲ್ಕು ದಿನಗಳ ಮುಂಚೆ 22 ಜನರು ಬೆಂಗಳೂರಿನಿಂದ ಲಂಡನ್‌ಗೆ ಹೋಗಿ ಲಂಡನ್ ನೋಡಿಕೊಂಡು ನಾವು ಪ್ಯಾರಿಸ್ ತಲುಪಿದ ದಿನ ಅವರೂ ಅದೇ ಹೋಟಲ್ ತಲುಪಬೇಕಾಗಿತ್ತು. ಬೆಂಗಳೂರಿನಿಂದ 22 ಜನರ ಜೊತೆಗೆ ಹೊರಟಿದ್ದ ಗೈಡ್ ಮುಂಬೈನ ವಿಕಾಶ್ ತಲವಾರ್, ನಮ್ಮನ್ನ `ನೀವೇ ಪ್ಯಾರಿಸ್‌ಗೆ ಬಂದುಬಿಡಿ. ನಾವು ಮಿಲಿನಿಯಮ್ ಹೋಟಲ್‌ನಲ್ಲಿ ಭೇಟಿಯಾಗೋಣ’ ಎಂದಿದ್ದನು. ಹೋಟಲ್ ತಲುಪುವ ಮುಂಚೆ ವಿಕಾಶ್‌ಗೆ ಫೋನ್ ಮಾಡಿದಾಗ `ನಾವು ಲಂಡನ್‌ನಿಂದ ಬರುವುದು ಸಾಯಂಕಾಲ ಆಗುತ್ತದೆ, ಹೋಟಲ್‌ನಲ್ಲಿ ಕೊಠಡಿಗಳನ್ನು ಖಾದಿರಿಸಲಾಗಿದೆ, ರಿಸೆಪ್ಷನ್‌ನಲ್ಲಿ ಕೇಳಿ’ ಎಂದ.
ರಿಸೆಪ್ಷನ್‌ನಲ್ಲಿ ಕೇಳಿದಾಗ ಇಬ್ಬರು ಲೇಡಿ ರಿಸೆಪ್ಷನಿಸ್ಟ್‌ಗಳು `ಸಾರಿ, ನಿಮ್ಮ ಗೈಡ್ ಬರುವವರೆಗೂ ನಿಮಗೆ ಕೊಠಡಿಗಳನ್ನು ಕೊಡುವುದಿಲ್ಲ, ಅಲ್ಲಿ ಸೋಫಾಗಳಿವೆ ಕುಳಿತಿರಿ’ ಎಂದುಬಿಟ್ಟರು. ಏನು ಹೇಳಿದರೂ ಅವರು ಒಪ್ಪಲಿಲ್ಲ, ಹೋಗಲಿ ನಿಮ್ಮ ಮ್ಯಾನೇಜರ್ ಇದ್ದರೆ ಕರೆಯಿರಿ ಎಂದು ಹಲವಾರು ಸಲ ಕೇಳಿಕೊಂಡಾಗ ಒಳಗಿಂದ ಬಂದ ದೃಢಕಾಯ ನೀಗ್ರೋ ಗಂಟು ಮುಖ ಇಟ್ಟುಕೊಂಡು ಗಂಟಲಲ್ಲಿ ಗೆಜ್ಜೆಕಾಯಿ ನುಂಗಿದ್ದ ಧ್ವನಿಯಲ್ಲಿ ಇಲ್ಲ ಆಗುವುದಿಲ್ಲ ಎಂದು ಮುಖ ತಿರುಗಿಸಿಕೊಂಡು ಮತ್ತೆ ಒಳಕ್ಕೆ ಹೊರಟುಹೋದ. ಸ್ಮಿತಾರೆಡ್ಡಿ ಮತ್ತೆಮತ್ತೆ ಆ ರಿಸೆಪ್ಷನಿಸ್ಟ್‌ರನ್ನು ಒಪ್ಪಿಸಲು ಎಷ್ಟೇ ಪ್ರಯತ್ನಿಸಿದರೂ ಸಫಲವಾಗಲಿಲ್ಲ. ಕೊನೆಗೆ ವಿಕಾಶ್‌ಗೆ ನಾಲ್ಕಾರು ಸಲ ಫೋನ್ ಮಾಡಿ, ಆತ ಬೆಂಗಳೂರಿಗೆ ಫೋನ್ ಮಾಡಿ ಅಲ್ಲಿಂದ ಅವರು ಹೋಟಲ್‌ಗೆ ಫೋನ್ ಮಾಡಿ ಕೊನೆಗೆ ಸುಮಾರು ಎರಡು ಗಂಟೆಯಾದ ಮೇಲೆ ಗಂಟಿಕ್ಕಿಕೊಂಡು ಬಂದ ನೀಗ್ರೋ ಕೋಣೆಗಳ ಕೀಗಳನ್ನು ಕೊಟ್ಟ. ಹೊರಗಡೆ ಯಾವುದೋ ಒಂದು ಅತಿಥಿಗೃಹದಂತೆ ಕಾಣಿಸುತ್ತಿದ್ದ ಹೋಟಲ್ ಮೇಲೆ ಹೋದರೆ ಉದ್ದನೆ ಕಾರೀಡಾರ್‌ಗಳ ಲೆಕ್ಕವಿಲ್ಲದಷ್ಟು ಕೋಣೆಗಳನ್ನು ಹೊಂದಿದ್ದವು. ಎಲ್ಲೆಲ್ಲೂ ಚೀನಾ ದೇಶದ ಯಾತ್ರಿಗಳೆ ತುಂಬಿಕೊಂಡಿದ್ದರು.
ಕೋಣೆ ಚೆನ್ನಾಗಿಯೇ ಇತ್ತು. ಟೀವಿ ಹಾಕಿದರೆ ಕೆಲಸ ಮಾಡಲಿಲ್ಲ. ಇಲ್ಲಿ ಯಾವೆಲ್ಲ ಚಾನಲ್‌ಗಳು ಬರುತ್ತವೆ ಎನ್ನುವುದು ನನ್ನ ಕುತೂಹಲ. ಹೋಟಲ್ ದೂರಿನ ಸಂಖ್ಯೆಗೆ ಫೋನ್ ಮಾಡಿದ ಮೇಲೆ ಒಬ್ಬ ಉದ್ದನೆ ಸ್ಥಳೀಯ ಯುವಕ ಬಂದು ಕೈ ಸನ್ನೆಯಲ್ಲಿ ಕೇಳಿದ. ಅವನ ಭಾಷೆ ನಮಗೆ, ನಮ್ಮ ಭಾಷೆ ಅವನಿಗೆ ಏನೂ ಅರ್ಥವಾಗಲಿಲ್ಲ. ಅವನಿಗೆ ಫ್ರೆಂಚ್ ಬಿಟ್ಟರೆ ಏನೂ ಬರುತ್ತಿರಲಿಲ್ಲ. ನಾನು ಮೊಬೈಲ್‌ನಲ್ಲಿ ಇಂಗ್ಲಿಷ್‌ನಲ್ಲಿ ಟೈಪ್ ಮಾಡಿದರೆ ಅದನ್ನು ಅವನು ಮೊಬೈಲ್‌ನಲ್ಲಿ ಕಾಪಿ ಮಾಡಿಕೊಂಡು ಅಲ್ಲೇ ಫ್ರೆಂಚ್‌ಗೆ ಟ್ರಾನ್ಸ್‌ಲೇಟ್ ಮಾಡಿಕೊಂಡು ಮತ್ತೆ ಅದನ್ನು ಫ್ರೆಂಚ್‌ನಿಂದ ಇಂಗ್ಲಿಷ್‌ಗೆ ಅನುವಾದ ಮಾಡಿ ನನಗೆ ತೋರಿಸತೊಡಗಿದ. ಇಂದಿಗೂ ಇಂಗ್ಲಿಷ್‌ಅನ್ನು ದೂಷಿಸುವ ಫ್ರೆಂಚರು ವಿಜ್ಞಾನ-ತಂತ್ರಜ್ಞಾನದಲ್ಲಿ ಹಿಂದೆ ಉಳಿದಿಲ್ಲವಾದರೂ ಇಂಗ್ಲಿಷ್ ಭಾಷೆಯ ತೊಡಕು ಅವರನ್ನು ಕಾಡುತ್ತಿದೆ. ಕೊನೆಗೂ ಟಿವಿ ರಿಪೇರಿಯಾಗದ ನಮಗೆ ಬೇರೆ ಕೋಣೆಯನ್ನು ಕೊಟ್ಟರು. ಅಲ್ಲಿ ಟಿವಿ ಚಾನಲ್‌ಗಳನ್ನು ನೋಡಿ ನಿರಾಶೆಯಾಯಿತು.
ಸಾಯಂಕಾಲ 8 ಗಂಟೆಗೆ ವಿಕಾಶ್ ನಮ್ಮನ್ನ ಕೋಣೆಯಿಂದ ಹೊರಕ್ಕೆ ಕರೆದು ನಮಗಾಗಿ ತಂದಿದ್ದ ಡಿನ್ನರ್ ಪ್ಯಾಕ್‌ಗಳ ಜೊತೆಗೆ ಒಂದೊಂದು ಲೀಟರ್ ನೀರಿನ ಬಾಟಲ್ ಕೊಟ್ಟು ಸ್ವಲ್ಪ ಹೊತ್ತು ಮಾತನಾಡುತ್ತ, ನಾಳೆಯ ಪ್ರೋಗ್ರಾಮ್ ಬಗ್ಗೆ ವಿವರಿಸಿ ಬೆಳಿಗ್ಗೆ 7-30ಕ್ಕೆ ಕಾಂಪ್ಲಿಮೆಂಟ್ ಬ್ರೇಕ್‌ಪಾಸ್ಟ್ ಮುಗಿಸಿ, 8.30ಕ್ಕೆ ಬಸ್ಸಿನ ಹತ್ತಿರಕ್ಕೆ ಬರಬೇಕು ಎಂದು ಹೇಳಿದ. ಗೈಡ್ ಮತ್ತು ಬಸ್ ಚಾಲಕ ಇಬ್ಬರೂ ನಾವಿದ್ದ ಹೋಟಲ್‌ನಲ್ಲಿಯೇ ಉಳಿದುಕೊಂಡಿದ್ದರು. ಮರುದಿನ ಬೆಳಿಗ್ಗೆ ನಾವು ನಾಲ್ವರು, ನಮ್ಮ ಜೊತೆಗೆ 22 ಜನರು ಒಂದೇ ಬಸ್ಸಿನಲ್ಲಿ ಸೇರಿಕೊಂಡೆವು. ಗೈಡ್ ಮುಂಬೈನವನಾಗಿದ್ದು ಅವನಿಗೆ ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳು ಬರುತ್ತಿದ್ದು, ನಮ್ಮಲ್ಲಿ ಕೆಲವರಿಗೆ ಮಾತ್ರ ಹಿಂದಿ/ಇಂಗ್ಲಿಷ್ ಬರುತ್ತಿತ್ತು. ಅದರಲ್ಲಿ ಅರ್ಧ ಜನರಿಗೆ ಅರ್ಧಂಬರ್ಧ ಹಿಂದಿ ಗೊತ್ತಿದ್ದು ಮುಕ್ಕಾಲು ಜನರಿಗೆ ಇಂಗ್ಲಿಷ್ ಬರುತ್ತಿರಲಿಲ್ಲ. ಎಲ್ಲಾ 26 ಜನರೂ ಕನ್ನಡದವರೇ ಆಗಿದ್ದು, ಅದರಲ್ಲಿ ಒಂದೇ ಕುಟುಂಬಕ್ಕೆ ಸೇರಿದ ಅರ್ಧ ಜನರಿದ್ದರೆ ಉಳಿದ ಮೂರು ಕುಟುಂಬಗಳ ಆರು ಜನರು ಬೆಂಗಳೂರಿನ ಸ್ನೇಹಿತರಾಗಿದ್ದರು. ಇನ್ನು ಉಳಿದಿದ್ದು ನಾವು ನಾಲ್ವರು ಮತ್ತು ಒಂದು ದಂಪತಿ. ಒಬ್ಬಾತ ಮಾತ್ರ ಒಂಟಿ ವಿದುರನಾಗಿದ್ದನು. ಒಟ್ಟಿನಲ್ಲಿ ಎಲ್ಲರೂ ಒಬ್ಬರನ್ನೊಬ್ಬರು ಕಿಚಾಯಿಸುತ್ತ, ತಮಾಷೆ ಮಾಡುತ್ತ, ಹಾಡುಗಳನ್ನು ಹಾಡಿಕೊಳ್ಳುತ್ತ, ಚಳಿಯಾದಾಗ ಹಿಂದಿನ ಆಸನಗಳಲ್ಲಿ ಕುಳಿತು ಒಂದೆರಡು ಪೆಗ್ ಏರಿಸಿಕೊಂಡು ಜಾಲಿ ಮಾಡುತ್ತಿದ್ದರು.
ಎಲ್ಲಾ ಹೋಟಲುಗಳಲ್ಲೂ ಬೆಳಗಿನ ತಿಂಡಿ ಕಾಂಪ್ಲಿಮೆಂಟ್ ಆಗಿದ್ದು ಎಲ್ಲಾ ಕಡೆ ಒಂದೇ ರೀತಿಯ ಐಟಂಗಳು ಇರುತ್ತಿದ್ದವು. ಅನೇಕ ರೀತಿಯ ಬ್ರೆಡ್ಡು, ಮೊಟ್ಟೆ, ಬನ್ನು, ಹಣ್ಣುಗಳು, ಜೇನು, ಕಾಫಿ, ಟೀ, ಹಾಲು, ಕೆಲ್ಲೋಗ್ ಮತ್ತು ಜ್ಯೂಸ್‌ಗಳು ಇರುತ್ತಿದ್ದವು. ಎಲ್ಲಾ ಹೋಟಲುಗಳು ಶುದ್ಧ ಮತ್ತು ಸ್ವಚ್ಛತೆಯಿಂದ ಕೂಡಿದ್ದವು. ನಮ್ಮವರು `ಅದೇ ಹಣ್ಣು ಅದೇ ಬನ್ನು’ ಎಂದು ಗೇಲಿ ಮಾಡಿಕೊಂಡು ಸಾಕಷ್ಟು ತಿನ್ನುತ್ತಿದ್ದರು. ಇನ್ನು ಗೈಡ್ ಮಧ್ಯಾಹ್ನ ಮತ್ತು ರಾತ್ರಿ ಒಳ್ಳೊಳ್ಳೆ ಹೋಟಲುಗಳಿಗೆ ಕರೆದುಕೊಂಡುಹೋಗಿ ಊಟ ಕೊಡಿಸುತ್ತಿದ್ದನು. ಎಲ್ಲಾ ಕಡೆ ಬಫೆ ಪದ್ಧತಿ, ಒಂದು ಐಟಂ ಚಿಕನ್ ಇಲ್ಲ ಫಿಶ್ ಇದ್ದೇ ಇರುತ್ತಿತ್ತು. ಆದರೆ ಕರೆದುಕೊಂಡು ಹೋಗುತ್ತಿದ್ದ ಹೋಟಲುಗಳೆಲ್ಲವೂ ಇಂಡಿಯನ್, ಶ್ರೀಲಂಕಾ ಹೋಟಲುಗಳಾಗಿದ್ದವು; ಪಂಜಾಬಿ, ಸರವಣ ಭವನ್, ಶ್ರೀಲಂಕಾ ತಮಿಳರ ಹೋಟಲುಗಳು. ಊಟಕ್ಕೆ ಮಾತ್ರ ಏನೂ ಕೊರತೆ ಇರುತ್ತಿರಲಿಲ್ಲ. ಅಲ್ಲಲ್ಲಿ ಐಸ್‌ಕ್ರೀಮ್ ಕೂಡ ಕೊಡುತ್ತಿದ್ದರು. ಈಗ ನಮ್ಮವರು, `ಅದೇ ರೋಟಿ, ಅದೇ ಚಿಕನ್, ಅದೇ ದಾಲ್, ಅದೇ ಪಲ್ಯ’ ಎಂದು ಗೇಲಿ ಮಾಡಿಕೊಂಡು ಗಡದ್ ಆಗಿಯೇ ಊಟ ಮಾಡುತ್ತಿದ್ದರು. ಪ್ರಯಾಣ ಮಾಡುವಾಗ ಸರಿಯಾಗಿ ಊಟ ಮಾಡಲೇಬೇಕಿತ್ತು.
ನಮ್ಮ ಜೊತೆಯಲ್ಲಿ ಮಂಡ್ಯದ ಕಡೆಯಿಂದ ಬಂದಿದ್ದ ವೃದ್ಧ ದಂಪತಿಯ ಜೊತೆಗೆ ಅವರ ಕುಟುಂಬದ ನಾಲ್ಕಾರು ಸದಸ್ಯರು ಬಂದಿದ್ದರು. ಅದರಲ್ಲಿ ವೃದ್ಧ ದಂಪತಿಯ ಸೊಸೆಯೊಬ್ಬರಿದ್ದು ಅವರು ಬಹಳ ಮುಗ್ಧ ಮಹಿಳೆಯಾಗಿದ್ದರು. ಅವರ ವಿಶೇಷವೆಂದರೆ ಅವರು ಎಲ್ಲೂ ಏನೂ ತಿನ್ನುತ್ತಿರಲಿಲ್ಲ, ಬರುವಾಗಲೇ ಏನೋ ಮನೆಯಿಂದಲೇ ತಯಾರಿ ಮಾಡಿಕೊಂಡು ಬಂದಿದ್ದು ಅದನ್ನು ಹೋಟಲ್‌ನಲ್ಲಿ ಬಿಸಿ ಮಾಡಿಕೊಂಡು ಬಂದು ಬಸ್ಸಿನಲ್ಲಿ ಕುಳಿತುಕೊಂಡು ತಿನ್ನುತ್ತಿದ್ದರು. ಆದರೆ ಯಾವುದೇ ಹೋಟಲಿಗೆ ಹೋದರೂ ವೃದ್ಧ ದಂಪತಿ ಮತ್ತು ಇತರರನ್ನು ಕೂರಿಸಿ ಊಟ ಬಡಿಸುತ್ತಿದ್ದರು. ಎಲ್ಲಾ ಹೋಟಲುಗಳಲ್ಲೂ ಬಫೆ ಪದ್ಧತಿ ಇದ್ದರೂ ವೃದ್ಧ ದಂಪತಿಯನ್ನು ಕೂರಿಸಿ ಇನ್ನಿತರರಿಗೂ ಅನ್ನ ಪಲ್ಯ ಯಾವುದೇ ಐಟಂ ಇದ್ದರೂ ತಟ್ಟೆ ಸೌಟುಗಳಲ್ಲಿ ತೆಗೆದುಕೊಂಡು ಬಂದು ಬಡಿಸುತ್ತಿದ್ದರು. ಹೋಟಲಿನವರು ಈಯಮ್ಮನ ಕೆಲಸವನ್ನು ನೋಡಿನೋಡಿ ಕೈಕೈ ಹಿಸುಕಿಕೊಳ್ಳುತ್ತಿದ್ದರು. ಕೆಲವೊಮ್ಮೆ ಗೈಡ್‌ಗೆ ದೂರು ನೀಡಿ ಆತ ಹಿಂದಿಯಲ್ಲಿ ಹೇಳಿದರೂ ಆಯಮ್ಮನ ಮೇಲೆ ಅದು ಏನೂ ಪರಿಣಾಮ ಬೀರಲಿಲ್ಲ. ಒಂದೆರಡು ನಿಮಿಷ ಸುಮ್ಮನಿದ್ದು ಮತ್ತೆ ಅದೇ ಕೆಲಸ ಮಾಡುತ್ತಿದ್ದರು. ಒಂದು ಹೋಟಲಿನಲ್ಲಂತೂ ಆಯಮ್ಮ ಬಡಿಸಿ ಉಳಿದಿದ್ದನ್ನು ಅದೇ ಕಡಾಯಿಗಳಿಗೆ ಮತ್ತೆ ಹಾಕುತ್ತಿರುವುದನ್ನು ನೋಡಿದ ಹೋಟಲಿನವರು ಹಾಗೆ ಹಾಕಬೇಡಿ, ಬೇರೆಯವರು ತಿನ್ನುವುದಿಲ್ಲ ಎಂದು ಆಬ್ಜೆಕ್ಟ್ ಮಾಡಿದರು. ಆದರೆ ಆಯಮ್ಮ ಸುಮ್ಮನೆ ನಕ್ಕರಷ್ಟೆ. ಇಡೀ ಟೂರ್‌ನಲ್ಲೆಲ್ಲ ಅವರು ತಮ್ಮ ಕೆಲಸವನ್ನು ಮುಂದುವರಿಸಿಕೊಂಡೇ ಬಂದಿದ್ದರು. ಅದಕ್ಕೆ ಕಾರಣ ವೃದ್ಧ ದಂಪತಿ ಸಾಕಷ್ಟು ವಯಸ್ಸಾಗಿದ್ದರು.
ಗೈಡ್, ಪ್ರತಿ ದಿನ ಬೆಳಿಗ್ಗೆ ಬಸ್ ಚಲಿಸಿದ ನಂತರ ಮೈಕ್ ತೆಗೆದುಕೊಂಡು ಹಿಂದಿಯಲ್ಲಿ ಆ ದಿನದ ಕಾರ್ಯಕ್ರಮ ಮತ್ತು ಮುಂದೆ ಬರುವ ಪ್ರತಿಯೊಂದು ಸ್ಮಾರಕದ ಬಗ್ಗೆ ಒಳ್ಳೆ ವಿವರಣೆಗಳನ್ನು ನೀಡುತ್ತಿದ್ದನು. ಯಾವುದೇ ಪ್ರಶ್ನೆ ಕೇಳಿದರೂ ಅದಕ್ಕೆ ಉತ್ತರ ಕೊಡುತ್ತಿದ್ದನು. ಅರ್ಧ ಜನರಿಗೆ ಹಿಂದಿ ಬರದ ಕಾರಣ ಅವರು ಏನೇನೋ ಅರ್ಥ ಮಾಡಿಕೊಳ್ಳುತ್ತಿದ್ದರು, ಇನ್ನು ಅಧಂಬರ್ಧ ಹಿಂದಿ ಬರುತ್ತಿದ್ದವರು ಇತರರಿಗೆ ಇನ್ನೇನೋ ಹೇಳುತ್ತಿದ್ದರು. ಒಟ್ಟಿನಲ್ಲಿ ಗೈಡ್ ಒಂದು ಹೇಳಿದರೆ ಅವರೆಲ್ಲ ಇನ್ನೇನೊ ಅರ್ಥ ಮಾಡಿಕೊಳ್ಳುತ್ತಿದ್ದರು. ಕಲೆವೊಮ್ಮೆ ಗೈಡ್ ಮಾತನಾಡುತ್ತಿದ್ದಾಗ ಗೈಡ್ ಮಾತುಗಳನ್ನ ಕೇಳಿಸಿಕೊಳ್ಳದೆ ಕನ್ನಡದಲ್ಲಿ ಮಾತನಾಡುತ್ತ ನಗಾಡುತ್ತಿದ್ದರು. ಇವರು ಏನು ಮಾತನಾಡುತ್ತಿದ್ದಾರೆ, ಯಾಕೆ ನಗುತ್ತಿದ್ದಾರೆ ಎನ್ನುವುದು ಗೈಡ್‌ಗೆ ಅರ್ಥವಾಗದೆ, ನನ್ನನ್ನ ಗೇಲಿ ಮಾಡುತ್ತಿದ್ದಾರೆ ಎಂದುಕೊಂಡು ಆಗಾಗ ರೇಗಾಡತೊಡಗಿದ.
ಈ ನಡುವೆ ಬಸ್ಸಿನಲ್ಲಿ ಕೆಟ್ಟ ವಾಸನೆ ಬರತೊಡಗಿತು. ಹಿಂದಿನ ಆಸನದಲ್ಲಿ ಕುಳಿತ್ತಿದ್ದ ವಿಧುರ ಮನುಷ್ಯ ಒಂದೆರಡು ಸಲ ಅಪಾಯದ ಬಟನ್ ಒತ್ತಿ ಚಾಲಕ ಅವನನ್ನು ತರಾಟೆಗೆ ತೆಗೆದುಕೊಂಡು ಗೈಡ್‌ಗೂ ಬಯ್ಯತೊಡಗಿದ. ಅದೇ ವೇಳೆ ಹಿಂದೆ ಕುಳಿತ್ತಿದ್ದ ಕೆಲವರು ಚಾಲಕನನ್ನು ಕನ್ನಡದಲ್ಲಿ `ಬಸ್ ಹತ್ತಿದಾಗಿನಿಂದಲೂ ಬಸ್‌ಅನ್ನು ಒಂದು ಸಲವೂ ಸ್ವಚ್ಛ ಮಾಡಲಿಲ್ಲ, ಎಂತಹ ಚಾಲಕ ಇವನು? ಇವನಿಂದ ಆಗಲಿಲ್ಲವೆಂದರೆ ಯಾರ ಕೈಯಲ್ಲಾದರೂ ಸ್ವಚ್ಛ ಮಾಡಿಸಬೇಕಾಗಿತ್ತು’ ಎಂದು ತಗಾದೆ ತೆಗೆದರು. ಇದನ್ನು ನಾವು ಗೈಡ್‌ಗೆ ಹಿಂದಿಯಲ್ಲಿ ಹೇಳಿದ್ದೆ, ಗೈಡ್ ಚಾಲಕನಿಗೆ ಹೇಳಿದ. ಆಗಲೇ ಕುಪಿತಗೊಂಡಿದ್ದ ಗೈಡ್ ಚಲಿಸುತ್ತಿದ್ದ ಬಸ್ಸಿನಲ್ಲಿಯೇ ಎದ್ದು ಬಂದು ಹಣ್ಣುಗಳು ಇತರ ತಿಂಡಿಗಳನ್ನು ತಿಂದು ಕುರ್ಚಿಗಳ ಕೆಳಗೆ ಬೀಳಿಸಿದ್ದ ಕಸವನ್ನು ಬಗ್ಗಿ ಎರಡೂ ಕೈಗಳಲ್ಲಿ ಬಾಚಿ ಎತ್ತಿಕೊಂಡು, ನೋಡಿ ನೀವು ಮಾಡಿರೋ ಕೆಲಸ ಎಂದು ತೋರಿಸಿದ. ಸ್ವಲ್ಪ ಅವಕ್ಕಾದ ನಮ್ಮ ಮಂಡ್ಯದ ಸ್ವಾಭಿಮಾನಿ ಯುವಕ ಎದ್ದು ಬಂದು ಒಂದು ಪ್ಲ್ಯಾಸ್ಟಿಕ್ ಚೀಲ ತೆಗೆದುಕೊಂಡು ಗಾರ್ಬೇಜ್ ಗಾರ್ಬೇಜ್… ಎನ್ನುತ್ತಾ ಕುರ್ಚಿಗಳ ಕೆಳಗಿದ್ದ ಕಸವನ್ನೆಲ್ಲ ಸಂಗ್ರಹ ಮಾಡತೊಡಗಿದ. ಎಲ್ಲರೂ ಅವರವರ ಹಿಂದೆ ಮುಂದೆ ಕೆಳಗಡೆ ಬಿದ್ದಿದ್ದ ಕಸ ತೆಗೆದು ಆತನ ಚೀಲದೊಳಕ್ಕೆ ಹಾಕಿದೆವು.
ಇದೇವೇಳೆ ಹಿಂದೆ ಕುಳಿತಿದ್ದ ವಿಧುರ ಮನುಷ್ಯ ಮತ್ತೆ ಅಪಾಯದ ಬಟನ್ ಒತ್ತಿದ ಕಾರಣ ಚಾಲಕನ ಪಿತ್ತ ನೆತ್ತಿಗೆ ಏರಿತು. ಚಾಲಕ `ಐ ವಿಲ್ ಕಾಲ್ ದ ಪೊಲೀಸ್’ ಎಂದು ಜೋರಾಗಿ ಕೂಗಾಡಿದ. ರಸ್ತೆಯಲ್ಲಿ ಎಲ್ಲೆಂದರಲ್ಲಿ ಬಸ್ ನಿಲ್ಲಿಸಲು ಸಾಧ್ಯವಿಲ್ಲದ ಕಾರಣ ಚಾಲಕ ಬಸ್ ಓಡಿಸುತ್ತಲೇ ಕೂಗಾಡಿದ. ಈಗ ಗೈಡ್ ಕೂಡ ಅವನ ಜೊತೆಗೆ ಸೇರಿಕೊಂಡು `ನಾನು ಕಳೆದ 11 ವರ್ಷಗಳಿಂದ 40/60 ಜನರನ್ನು ಕರೆದುಕೊಂಡು ಇಡೀ ಯುರೋಪ್ ದೇಶಗಳಲ್ಲೆಲ್ಲ ಟೂರ್ ಮಾಡಿದ್ದೇನೆ. ಆದರೆ ನೀವು ಕೇವಲ 26 ಜನರಿದ್ದೀರಿ. ಇಷ್ಟೊಂದು ಗೋಳು ಹೊಯ್ದುಕೊಳ್ತಾ ಇದ್ದೀರಲ್ಲ, ನಾನು ಎಷ್ಟೋ ಯಾತ್ರಿಕರನ್ನು ಹ್ಯಾಂಡ್ಲ್ ಮಾಡಿದ್ದೀನಿ ನಿಮ್ಮಂಥ ಒಂದು ಬ್ಯಾಚ್‌ಅನ್ನು ನೋಡೇ ಇಲ್ಲ’ ಎಂದು ತನ್ನ ಅಸಹಾಯಕತೆಯನ್ನು ತೋಡಿಕೊಳ್ಳುವುದರ ಜೊತೆಗೆ ಒಂದಷ್ಟು ಕೂಗಾಡಿದ. ಇಡೀ ಬಸ್ಸು ಐದ್ಹತ್ತು ನಿಮಿಷ ನಿಶ್ಶಬ್ದವಾಯಿತು.
ಕೆಲವು ನಿಮಿಷಗಳಾದ ಮೇಲೆ ನಾವು ಹಿಂದಿ ಗೊತ್ತಿದ್ದವರು ಗೈಡ್‌ಗೆ `ನಿಮ್ಮ ಬಗ್ಗೆ ಯಾರೂ ಏನೂ ಮಾತನಾಡಿಕೊಳ್ಳುತ್ತಿಲ್ಲ’ ಎಂದು ಸಮಜಾಯಿಸಿ ಮಾಡಿದೆವು. ಕೊನೆಗೆ ಗೈಡ್ ರಾತ್ರಿ ಊಟದ ವೇಳೆ ಹೋಟಲಿನಲ್ಲಿ ಎಲ್ಲರ ಮುಂದೆ ನಿಂತುಕೊಂಡು `ಐ ಯಾಮ್ ವೆರಿ ಸಾರಿ, ನಾನೂ ಸ್ವಲ್ಪ ದುಡುಕಿಬಿಟ್ಟೆ’ ಎಂದು ಪೆಚ್ಚುಮೋರೆ ಹಾಕಿಕೊಂಡು ಕ್ಷಮೆ ಕೇಳಿದ. ಎಲ್ಲರೂ `ಅಯ್ಯೋ ಅದ್ಯಾಕೆ ಸಾರಿ ಹೇಳ್ತೀಯ ಬಿಡಪ್ಪ’ ಎಂದು ಮತ್ತೆ ನಗಾಡಿದರು. ಗೈಡ್ ನಗಲಾರದೆ ನಕ್ಕ. ಮರುದಿನ ಬೆಳಿಗ್ಗೆ ಬಸ್‌ಅನ್ನು ಸ್ವಚ್ಛ ಮಾಡಿದ್ದ ಚಾಲಕನು `ಐ ಯಾಮ್ ವೆರಿ ಸಾರಿ’ ಎಂದ. ಅಂದರೆ ಮನುಷ್ಯರ ಮಧ್ಯೆ ಕೆಲವೊಮ್ಮೆ ಕ್ರಿಯೆ ಪ್ರತಿಕ್ರಿಯೆ, ದೂರು ಪ್ರತಿದೂರುಗಳಿದ್ದು ಅರ್ಥ ಮಾಡಿಕೊಂಡರೆ ಎಷ್ಟು ಚೆನ್ನಾಗಿರುತ್ತದೆ ಎಂದುಕೊಂಡೆ. ನಾವು ನಾಲ್ಕು ಜನರು 11ನೇ ದಿನ ಆದ ಮೇಲೆ ಕೊನೆಯಲ್ಲಿ ಸ್ವಿಟ್ಜರ್ಲೆಂಡ್‌ನ ಜ್ಯುರಿಚ್ ಬಿಟ್ಟು ಬೆಂಗಳೂರಿಗೆ ಹಿಂದಿರುಗಿದೆವು. ಉಳಿದ 22 ಜನರು ಅಲ್ಲಿಂದ ಇನ್ನೂ ನಾಲ್ಕು ದಿನಗಳು ಇಟಲಿ ದೇಶ ಸುತ್ತಿಬರಲು ಹೊರಟುಹೋದರು.
ನಮ್ಮ 12 ದಿನಗಳ ಟೂರ್‌ನಲ್ಲಿ ಗಮನಿಸಿದ ಒಂದು ಸ್ವಾರಸ್ಯಕರ ವಿಷಯವೆಂದರೆ ಎಲ್ಲಾ ಮಹಿಳೆಯರು ತಮ್ಮ ಗಂಡಸರನ್ನು ಕಂಪ್ಲೀಟ್ ಕಂಟ್ರೋಲ್‌ನಲ್ಲಿ ಇಟ್ಟುಕೊಂಡಿರುವುದರ ಜೊತೆಗೆ ಎಲ್ಲಾ ಮಹಿಳೆಯರು ತಮ್ಮ ಗಂಡಂದಿರನ್ನು ಇಡೀ ಟೂರ್‌ನಲ್ಲೆಲ್ಲ ಬಯ್ಯುತ್ತಲೇ ಇದ್ದರು (ನನ್ನನ್ನೂ ಸೇರಿ), ಕೆಲವರು ನೋಡುವ ಒಂದು ನೋಟದಲ್ಲೆ ಆಜಾನುಬಾಹು ಗಂಡಸರನ್ನೂ ಸಹ ತಣ್ಣಗಾಗಿಸಿಬಿಡುತ್ತಿದ್ದರು. ನಮ್ಮ ಜೊತೆಗೆ ಆರಾಮಾಗಿ ಓಡಾಡುತ್ತ ಆನಂದಿಸುತ್ತಿದ್ದ ಒಬ್ಬೇಒಬ್ಬ ಗಂಡಸು ಎಂದರೆ ಆ ಒಂಟಿ ವಿಧುರ ಮನುಷ್ಯ. ಅವರ ಪತ್ನಿ ಇತ್ತೀಚೆಗೆ ತೀರಿಕೊಂಡಿದ್ದರಂತೆ. ಭಾರತ ದೇಶವನ್ನು ದೊಡ್ಡ ಪ್ರಜಾಪ್ರಭುತ್ವದ ದೇಶ ಎಂದು ಕರೆಯುತ್ತಾರೆ. ಯಾರಿಗೆ ಸ್ವಾತಂತ್ರ‍್ಯ ಬಂದಿದೆಯೋ ಏನೋ ಆದರೆ ಮದುವೆಯಾಗಿರುವ ಗಂಡಸರಿಗೆ ಮಾತ್ರ ತಮ್ಮ ಪತ್ನಿಯರಿಂದ ಇನ್ನೂ ಸ್ವಾತಂತ್ರ‍್ಯ ದೊರಕಿಲ್ಲ ಎಂದೇ ಹೇಳಬೇಕು! (ಪ್ರವಾಸ: ಅಕ್ಟೋಬರ್ 2023).
ಡಾ.ಎಂ.ವೆಂಕಟಸ್ವಾಮಿ ಮೂಲತಃ ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನ ಯರ್ರಗೊಂಡ ಬ್ಯಾಟರಾಯನಹಳ್ಳಿಯವರು. 1984ರಲ್ಲಿ ಲಕ್ನೋದಲ್ಲಿ ಭೂವಿಜ್ಞಾನಿಯಾಗಿ ಸೇರಿ, ಭಾರತೀಯ ಭೂವೈಜ್ಞಾನಿಕ ಸರ್ವೆಕ್ಷಣಾ ಇಲಾಖೆಯ (2015ರಲ್ಲಿ ನಾಗ್ಪುರದಲ್ಲಿ) ಮಹಾನಿರ್ದೇಶಕರಾಗಿ ನಿವೃತ್ತರಾಗಿದ್ದಾರೆ. ಕೆಲಕಾಲ ಕೆಜಿಎಫ್‍ನ ಎಲ್.ಐ.ಸಿ ಮತ್ತು ಮಧ್ಯಪ್ರದೇಶದ ಬಿಲಾಯ್‍ನಲ್ಲಿಯೂ ಕೆಲಸ ಮಾಡಿದ್ದಾರೆ.
3 ಕವನ ಸಂಕಲನಗಳು 3 ಪ್ರವಾಸ ಕಥೆಗಳು 2 ವೈಚಾರಿಕ ಕೃತಿಗಳು 8 ಕಾದಂಬರಿಗಳು, 8 ವಿಜ್ಞಾನ ಕೃತಿಗಳು ಮತ್ತು 2 ಇಂಗ್ಲಿಷ್ ಕೃತಿಗಳು ಸೇರಿದಂತೆ ಇವರ ಒಟ್ಟು 30 ಕೃತಿಗಳು ಪ್ರಕಟಗೊಂಡಿವೆ.