ಸಂಬಳ ಕೊಡುವ ಕೆಲಸವನ್ನು, ಹುದ್ದೆ ನೀಡುವ ಅಧಿಕಾರವನ್ನು, ಹಣ ತಂದುಕೊಡುವ ಸವಲತ್ತನ್ನು, ಸುಲಭಕ್ಕೆ ಬೆರಳತುದಿಗೆ ದಕ್ಕಿಸುವ ಆಧುನಿಕ ಜೀವನಶೈಲಿಯನ್ನು ಪ್ರೀತಿಸುವ, ಅದನ್ನು ಉಳಿಸಿಕೊಳ್ಳಲು ವಿಶ್ವಪ್ರಯತ್ನ ಮಾಡುವ ನಮಗೆ ಆರೋಗ್ಯ ಕಾಡಿಸುವ ಮರೀಚಿಕೆ. ಆರೋಗ್ಯವನ್ನೂ ಹಣ ಕೊಟ್ಟು ಕೊಳ್ಳುವ ಹಾಗಿದ್ದರೆ, ಸರಿಯಾಗುತ್ತಿತ್ತೇನೋ. ಅಷ್ಟಕ್ಕೂ ಈಗ ಮುವ್ವತ್ತು ನಲ್ವತ್ತರ ಹೊಸ್ತಿಲಲ್ಲಿರುವವರು ಒಂದು ಕಾಲಕ್ಕೆ ಒಳ್ಳೆಯ ಜೀವನಶೈಲಿ ಹೊಂದಿದ್ದವರೇ. ಅಮ್ಮನ ಅಡುಗೆ, ಅಪ್ಪನ ಶಿಸ್ತು, ಅಜ್ಜ ಅಜ್ಜಿಯರ ಮುದ್ದಿನ ಸುಖ ಕಂಡವರೇ.
ಎಸ್. ನಾಗಶ್ರೀ ಅಜಯ್ ಬರೆಯುವ “ಲೋಕ ಏಕಾಂತ” ಅಂಕಣ

ಮೆಡಿಕಲ್ ರಿಪೋರ್ಟ್ ನೋಡಿ, ಗೂಗಲ್ ಮಾಡಿ, ಸುತ್ತಮುತ್ತ ಗೆಳತಿಯರ ಮಾತು ಕೇಳಿ ತಲೆಕೆಟ್ಟು ಕಡೆಗೂ ಆಕೆ ಹಿರಿಯ ಸ್ತ್ರೀರೋಗ ತಜ್ಞೆಯನ್ನು ಭೇಟಿ ಮಾಡಿದ್ದಳು.
“ಇದು ಜೀವನಶೈಲಿಯ ತೊಂದರೆಯಿಂದ ಉಂಟಾದ ಸಮಸ್ಯೆ ಅಷ್ಟೇ. ದಿನಕ್ಕೆ ಮೂರು ಹೊತ್ತು ಸರಿಯಾಗಿ ಊಟ-ತಿಂಡಿ ಮಾಡು. ಅರ್ಧಗಂಟೆ ವ್ಯಾಯಾಮ ತಪ್ಪಿಸುವ ಹಾಗಿಲ್ಲ. ಧ್ಯಾನ, ಯೋಗ, ಭಜನೆ, ಸಂಗೀತ, ಡ್ರಾಯಿಂಗ್ ಹೀಗೆ ನಿನ್ನ ಮನಸ್ಸು ಸಮಾಧಾನ ಹೊಂದುವ ಚಟುವಟಿಕೆ ಒಂದನ್ನ ರೂಢಿಸಿಕೋ. ಮುಖ್ಯವಾಗಿ ಎಲ್ಲ ವಿಚಾರಕ್ಕೂ ತಲೆಬಿಸಿ ಮಾಡಿಕೊಳ್ಳದೆ, ಯಾರೇನೇ ಬೈದರೂ, ಹಂಗಿಸಿದರೂ, ನನಗಲ್ಲ ಅಂದುಕೊಂದು ನಿಶ್ಚಿಂತೆಯಿಂದ ಇರೋದನ್ನ ಅಭ್ಯಾಸ ಮಾಡು. ನೆನಪಿರಲಿ. ಮನೆ ಊಟ ಉತ್ತಮ. ಹೊರಗೆ ತಿನ್ನುವಾಗ ಆದಷ್ಟು ಇಡ್ಲಿ, ಪೊಂಗಲ್, ಪುಳಿಯೋಗರೆ ಹೀಗೆ ನಮ್ಮ ಆಹಾರಪದ್ಧತಿಗೆ ಒಗ್ಗುವುದನ್ನು ತೊಗೋ. ಇನ್ನು ಆರು ತಿಂಗಳು ಹೀಗಿದ್ದೂ ಇದೇ ಸಮಸ್ಯೆ ಬಂದರೆ, ಆಗ ನೋಡೋಣ. ನಿಜ ಹೇಳಬೇಕಂದ್ರೆ ನಾನು ಹೇಳಿದ ಹಾಗೆ ಕೇಳಿದ್ರೆ, ಈ ಸಮಸ್ಯೆ ತಾನೇತಾನಾಗಿ ಪರಿಹಾರ ಆಗಿಬಿಟ್ಟಿರತ್ತೆ.” ಅಂತ ಹೇಳಿ ಕಳಿಸಿದ್ದರು.

ಅವಳು ಹೇಳಿದ್ದಳು. “ಕೇಳೋದಕ್ಕೆ ಎಷ್ಟು ಸುಲಭ ಅನ್ನಿಸಿತ್ತು ಗೊತ್ತಾ? ಬೆಳಗಿನ ಧಾವಂತದಲ್ಲಿ ತಿಂಡಿ ಮಿಸ್ ಆಗಿಯೇ ಹೋಗತ್ತೆ. ಎಷ್ಟೇ ಬೇಡ ಅಂದುಕೊಂಡರೂ ಹೊರಗಿನಿಂದ ಪಿಜ್ಜಾ, ಐಸ್ ಕ್ರೀಂ, ಕೇಕ್, ಕುಕ್ಕೀಸ್ ಅಂತ ಆಫೀಸಲ್ಲೇ ತರಿಸಿಬಿಡ್ತಾರೆ. ಕೆಲವೊಮ್ಮೆ ಮನೆಯಲ್ಲಿ ಮಾಡಿಕೊಳ್ಳೋಕೆ ಬೇಸರ. ಇಡ್ಲಿ ತಿನ್ನೋಕೆ ಇಷ್ಟು ದೂರ ಬರಬೇಕಿತ್ತಾ ಅನ್ಸತ್ತೆ. ಮಳೆ, ಚಳಿ, ನಿದ್ದೆ ಅಂತ ಬೆಳಗಿನ ವ್ಯಾಯಾಮ ಒಂದಿನ ನಡೆದರೆ ನಾಲ್ಕು ದಿನ ನಡೆಯಲ್ಲ. ಯಾರೇನಂದ್ರೂ ತಲೆಕಡಿಸಿಕೊಳ್ಳದೆ ನಮ್ಮಷ್ಟಕ್ಕೆ ಇರೋದು ಅಷ್ಟು ಸುಲಭದ ಮಾತಾ? ಇದಕ್ಕಿಂತ ಏನಾದ್ರೂ ಮಾತ್ರೆ ಕೊಟ್ಟಿದ್ರೆ ದಿನಕ್ಕೆರಡು ನುಂಗಿ ಹಾಯಾಗಿರ್ತಿದ್ದೆ.”

“ಆರೋಗ್ಯ ಎನ್ನುವುದು ಬರಿಯ ದೇಹಕ್ಕೆ ಸಂಬಂಧಿಸಿದ್ದಲ್ಲ. ದೇಹ, ಮನಸ್ಸು, ಬುದ್ಧಿಗಳು ಒಂದಕ್ಕೊಂದು ಪೂರಕವಾಗಿ ಕೆಲಸ ಮಾಡಿದಾಗ ಮಾತ್ರ ಆರೋಗ್ಯ ಲಭಿಸುತ್ತದೆ. ನಾನು ಔಷಧಿ ಕೊಡಬಹುದು. ಆದರೆ ಅದಕ್ಕೆ ಪೂರಕವಾಗಿ ನಿಮ್ಮ ಚಿಂತನೆಗಳು, ಕ್ರಿಯೆ, ಪರಿಶ್ರಮ ಇದ್ದಾಗಷ್ಟೇ ಯಶಸ್ಸು ಸಾಧ್ಯ. ನಿಮ್ಮ ಸಹಕಾರ ಇಲ್ಲದೆ, ಕೇವಲ ಔಷಧಿಯಿಂದ ಏನೂ ಪ್ರಯೋಜನವಿಲ್ಲ.” ಎನ್ನುತ್ತಿದ್ದ ಆಯುರ್ವೇದ ವೈದ್ಯರು ನೆನಪಾದರು.


ಸಂಬಳ ಕೊಡುವ ಕೆಲಸವನ್ನು, ಹುದ್ದೆ ನೀಡುವ ಅಧಿಕಾರವನ್ನು, ಹಣ ತಂದುಕೊಡುವ ಸವಲತ್ತನ್ನು, ಸುಲಭಕ್ಕೆ ಬೆರಳತುದಿಗೆ ದಕ್ಕಿಸುವ ಆಧುನಿಕ ಜೀವನಶೈಲಿಯನ್ನು ಪ್ರೀತಿಸುವ, ಅದನ್ನು ಉಳಿಸಿಕೊಳ್ಳಲು ವಿಶ್ವಪ್ರಯತ್ನ ಮಾಡುವ ನಮಗೆ ಆರೋಗ್ಯ ಕಾಡಿಸುವ ಮರೀಚಿಕೆ. ಆರೋಗ್ಯವನ್ನೂ ಹಣ ಕೊಟ್ಟು ಕೊಳ್ಳುವ ಹಾಗಿದ್ದರೆ, ಸರಿಯಾಗುತ್ತಿತ್ತೇನೋ. ಅಷ್ಟಕ್ಕೂ ಈಗ ಮುವ್ವತ್ತು ನಲ್ವತ್ತರ ಹೊಸ್ತಿಲಲ್ಲಿರುವವರು ಒಂದು ಕಾಲಕ್ಕೆ ಒಳ್ಳೆಯ ಜೀವನಶೈಲಿ ಹೊಂದಿದ್ದವರೇ. ಅಮ್ಮನ ಅಡುಗೆ, ಅಪ್ಪನ ಶಿಸ್ತು, ಅಜ್ಜ ಅಜ್ಜಿಯರ ಮುದ್ದಿನ ಸುಖ ಕಂಡವರೇ. ತರಹೇವಾರಿ ಸೊಪ್ಪು, ತರಕಾರಿ, ಕಾಳು, ಮುದ್ದೆ, ಅನ್ನ, ಚಪಾತಿ, ಉಪ್ಪಿಟ್ಟು, ಅವಲಕ್ಕಿ, ದೋಸೆ, ಇಡ್ಲಿಗಳಲ್ಲೇ ಬಾಲ್ಯ ಕಳೆದವರು. ಅಪರೂಪಕ್ಕೆ ಒಮ್ಮೆ ಹಾದಿಬೀದಿಯ ಚುರುಮುರಿ, ಪಾನಿಪುರಿ, ಹುಟ್ಟುಹಬ್ಬದ ನೆಪದಲ್ಲಿ ಕೇಕ್, ಚಿಪ್ಸ್, ಹೋಟೇಲಿನ ಮಸಾಲೆದೋಸೆ ಸಿಕ್ಕರೆ ಎಂತಹ ಸಂತೃಪ್ತಿ. ಮನದಣಿಯೆ ಆಟವಾಡುವ, ಅಲ್ಲಿಂದಿಲ್ಲಿಗೆ ಓಡಾಡುತ್ತಲೇ ಸಮಯ ಕಳೆಯುವ ದಿನಗಳಲ್ಲಿ ತಿಂದಿದ್ದು ಅರಗಲು ಎಷ್ಟು ಹೊತ್ತು? ಕರಗಿಸಲೆಂದೇ ಕಸರತ್ತು ಮಾಡಬೇಕಾದ ದಿನಗಳಲ್ಲಿ, ಅಂದಿನ ಕಾಲ ನೆನಪಾದರೆ ನಿಟ್ಟುಸಿರು.

ನಾವೀಗ ಎಲ್ಲದರ ಮೇಲೂ ರಾಶಿ ರಾಶಿ ತುಪ್ಪ ಸುರಿಯುವ, ಅನ್ಲಿಮಿಟೆಡ್ ಹೆಸರಲ್ಲಿ ನೂರೆಂಟು ಬಗೆ ಮುಂದಿಡುವ, ಲೋಡುಗಟ್ಟಲೆ ಸಕ್ಕರೆ, ಮೈದಾ, ಜಿಡ್ಡು ತುಂಬಿಕೊಡುವ ಹೋಟೇಲುಗಳ ಮುಂದೆ ಸರತಿಸಾಲಿನಲ್ಲಿ ನಿಂತು, ಬಡಿದಾಡಿಕೊಂಡು ತಿಂದು ಬರಲು ಸಿದ್ಧವಿದ್ದೇವೆ. ರೆಡಿ ಟು ಈಟ್ ಹೆಸರಲ್ಲಿ ಪ್ರಿಸರ್ವೇಟಿವ್ಸ್ ನಲ್ಲೇ ಮಿಂದೆದ್ದ ಪದಾರ್ಥಗಳನ್ನು ಮನೆತುಂಬ ತಂದಿಡುತ್ತೇವೆ. ಇಷ್ಟಾಗಿ ತರಕಾರಿಯ ಬೆಲೆ ಹತ್ತಿಪ್ಪತ್ತು ಜಾಸ್ತಿಯಾದರೆ, ಎಳನೀರು ನಲವತ್ತು ರುಪಾಯಿಯೆಂದರೆ, ಹಣ್ಣುಗಳು ದುಬಾರಿಯಾದರೆ ಸಂಕಟಪಟ್ಟು, ಕೊಳ್ಳದೇ ಸುಮ್ಮನುಳಿಯುತ್ತೇವೆ. ನಮಗೆ ಬೇಕಾದೆಡೆ ಖರ್ಚು ಮಾಡಲು, ಸಮಯ ನೀಡಲು ಯಾವುದೇ ಇತಿಮಿತಿಯಿಲ್ಲ. ಹಾಗಿದ್ದೂ ಜೀವನಶೈಲಿಯ ಸುಧಾರಣೆ ಏಕಿಷ್ಟು ಕಷ್ಟ? ಮನಸ್ಸು ಮಾಡಿ ಏನೆಲ್ಲಾ ಗಳಿಸಿದವರಿಗೆ, ಬದಲಾವಣೆ ಏಕೆ ಅಸಾಧ್ಯ?

ಹತ್ತಿರದವರ ಸಾವು ಕಂಡಾಗ, ಅನಾರೋಗ್ಯದ ವಿಷಯ ತಿಳಿದಾಗ, ಸಾಮಾಜಿಕ ಜಾಲತಾಣಗಳಲ್ಲಿ ಜೋರು ಚರ್ಚೆ ನಡೆದಾಗ ಒಂದೆರಡು ದಿನ ಆ ವಿಷಯದ ಬಗ್ಗೆ ಯೋಚಿಸಿ, ಮತ್ತೆ ಮೊದಲಿನ ಚಾಳಿ ಮುಂದುವರೆಸುವ ನಾವು ಬದಲಾಗಬಹುದೇ? ಬದಲಾಗಲೇಬೇಕಲ್ಲವೆ?