ಈಗ ಮಾತಿಗೆ ಬರಗಾಲ ಬಂದಂತೆ ಪ್ರತಿ ಸಂತೆಯ ವಾತಾವರಣಗಳು ನಿರ್ಮಾಣವಾಗುತ್ತಿದ್ದವು. ಇದೇಕೆಂದು ಅವನಿಗೆ ಈ ಕ್ಷಣಕ್ಕೂ ಅರ್ಥವಾಗಿರಲಿಲ್ಲ. ಜನರೇಕೇ ತನ್ನನ್ನೂ ಆಗುಂತುಕನಂತೆ ಕಂಡು ತನ್ನಿಂದ ಅಂತರ ಕಾಯ್ದುಕೊಳ್ಳುತ್ತಿರುವರೆಂದು ಆಗಾಗ ಯೋಚಿಸುತ್ತಿದ್ದನಾದರು ಅದಕ್ಕೆ ಪೂರಕವೆನಿಸುವ ಉತ್ತರಗಳು ಸಿಗುತ್ತಿರಲಿಲ್ಲ. ಸಂತೆ ಮುಗಿಸಿ ಬರುವಾಗ ಕಾಸೀಂ ಇವತ್ತು ವ್ಯಾಪಾರ ಅಂಥದ್ದು ಏನಿಲ್ಲವಾದರು, ತನಗೆ ಅಪಾರ ಮೀನು ತಿನ್ನುವ ಬಯಕೆಯಾಗಿದೆ. ತನ್ನ ಪೈಜಾಮಾದ ಕಳ್ಳ ಜೇಬಿನೊಳಗೆ ಮುದುರಿ ಮಡಿಸಿಟ್ಟಿದ್ದ ನೂರರ ಒಂದು ನೋಟು ತಗೆದು ಸಂಜೆಯಷ್ಟೇ ಹಿಡಿದು ರಸ್ತೆ ಬದಿಯಲ್ಲಿ ನಿಂತು ಮಾರುತ್ತಿದ್ದ ಜಿಲೇಬಿ ಮೀನುಗಳ ಜತೆ ಬಂದಿದ್ದ. ಈ ಮಾತುಕತೆಯಲ್ಲಿ ಇಬ್ಬರಿಗೂ ಅದರ ಕಡೆ ಗಮನವಿರಲಿಲ್ಲ.
ಆರ್. ಪವನ್ ಕುಮಾರ್ ಬರೆದ ಈ ಭಾನುವಾರದ ಕತೆ “ಕಾರ್ಮೋಡ” ನಿಮ್ಮ ಓದಿಗೆ
ಕಾಸೀಂ ಕೆಮ್ಮು ಅತಿಯಾದರು ಬೀಡಿ ಸೇದುವುದು ಬಿಡುವುದಿಲ್ಲ. ತುಟಿಗೆ ಆ ಬೆಂಕಿ ತುಂಡನ್ನು ಕಚ್ಚಿಸಿಕೊಂಡು ಪುಕಪುಕ ಹೊಗೆ ಎಳೆಯುತ್ತಿದ್ದ. ಅವನ ಸಂತೆ ವ್ಯಾಪಾರ ತೀರ ಸಾಧಾರಣವಾಗಿತ್ತು. ಸಂತೆಯ ತುಂಬಾ ಜನರಿದ್ದರೂ ಕಾಸೀಂಗೆ ಮಾತ್ರ ಗಿರಾಕಿಗಳು ಇರಲಿಲ್ಲ. ಅವನ ವ್ಯಾಪಾರದ ಮೇಲೆ ಕ್ಷುಲ್ಲಕ ಕಾರಣಗಳಿಂದ ಕಾರ್ಮೋಡ ಕವಿದಿತ್ತು. ಅದು ಕ್ರಮೇಣ ಕರಗಿ ಮಳೆಯಾಗಿ ಅಥವಾ ಗಾಳಿಯ ಜೊತೆಗೆ ಮುಂದೆ ಸರಿಯುವವರೆಗೂ ಏನೂ ಮಾಡುವಂತಿರಲಿಲ್ಲ. ಕುಳಿತು ಇನ್ನೇನು ಮಾಡುವುದೆಂದು ಬೀಡಿ ಮೊರೆ ಹೋಗಿದ್ದ. ಹೀಗೆ ಬೆಳಗಿನಿಂದ ಒಂದು ಕಟ್ಟು ಬೀಡಿ ಮುಗಿಸಿದ್ದ ಕಾಸೀಂ. ಕೆಮ್ಮು ಆತ್ಮಸಂಗಾತಿಯಂತೆ ಜೊತೆಗಿದ್ದು ಕಾಟ ಕೊಡುತ್ತಿತ್ತು. ಇವನೇನು ಅದಕ್ಕೆ ಮಣೆ ಹಾಕಿರಲಿಲ್ಲ. ಅದು ಕಾಟ ಕೊಟ್ಟಷ್ಟು ಇವನು `ಅರೇ ಇಸ್ಕೀ ಮಾದುರ್ ಚೋತ್ ಎಷ್ಟು ತಂಟೆ ನಿನ್ನದು’ ಎಂದುಕೊಳ್ಳುತ್ತಲೆ ಇದನ್ನು ಕೇಳಿದ ಪಕ್ಕದಲ್ಲಿದ್ದ ಇತರೆ ಹಣ್ಣು, ಕಾಯಿ, ತರಕಾರಿ ಮಾರುವ ವ್ಯಾಪಾರಿಗಳು “ಯೋ ಸಾಬಣ್ಣ ಅದು ತಂಟೆ ಅಲ್ಲ, ತೊಂಟೆ.. ಮೊದ್ಲು ಆ ಬೀಡಿ ಎಸಿ. ಏನ್ ಹುಟ್ಟತ್ತಲೆ ಬೀಡಿ ಕಚ್ಚಕೊಂಡು ಬಂದಿರೋನಂಗೇ ಆಡ್ತಿಯಾಪ್ಪ” ಎನ್ನುತ್ತಿದ್ದರು. ಕಾಸೀಂಗೆ ಇಷ್ಟು ಸಾಕಿತ್ತು. ಬೆಳಿಗ್ಗಿನಿಂದ ಕಟ್ಟಿದ್ದ ಬಾಯನ್ನು ಒಮ್ಮೆಗೆ ಬಿಚ್ಚಿದ್ದ. “ಏನ್ಮಾಡೋದು ಸಾವಕಾರ ಚಟ್ಟಕ್ಕೆ ಹೋದ್ರು ಚಟ ಬಿಡೋಲ್ಲ ನನ್ಮಂಗದು” “ಅದ್ಕೆ ಹಿಂಗ್ ಕೆಮ್ಮಕೊಂಡು ಸತ್ತೀಯಾ?” “ಇದ್ದು ಯಾವ ರಾಜ್ಯ ಆಳಬೇಕಿತ್ತು ನಾನು?” ಎನ್ನುವಾಗ ಅವನ ಮುಖದಲ್ಲೊಂದು ವ್ಯಂಗ್ಯ ಮೂಡುತ್ತಿತ್ತು. ಆಗ ಕಾಯಿ ಮಾರುವ ಚಿನ್ನಪ್ಪ “ಈಗಾ ಆಳ್ದೋರೆಲ್ಲಾ ಹಾಳು ಮಾಡಿರೋದು ಸಾಲ್ದೂಂತಾ ನೀನು ಬೇರೆ ಸೇರ‍್ಕೋಬೇಕಾ ಥೂ..”. “ಯಾಕೋ ಸಾವಕಾರ ಮನಸಾ ಅಂದ್ಮೇಲೆ ಆಸೆ ಇರಬಾರ್ದಾ?”. “ನೀನು ಬಿಡಪ್ಪೊ; ಆಳ್ದೇ ಏನ್ಮಾಡ್ತೀಯಾ. ದುಬೈ ದೊರೆಗೆ ಸೇಕ್ ಹ್ಯಾಂಡ್ ಕೊಟ್ಟು ಬಂದೋನು”. ಎಂದಾಗ ಈ ಮಾತು ಕಾಸೀಂಗೂ ಜೋರು ನಗು ತರಿಸಿತು. ತನ್ನ ಪರಿಚಿತರ ಬಳಿಯಲ್ಲಿ ಕಾಸೀಂ ಇದನ್ನು ಆಗಾಗ ರೂಢಿಗತವಾಗಿ ತಪ್ಪದೇ ಹೇಳುತ್ತಿದ್ದ. ಇದು ಸತ್ಯವೋ, ಸುಳ್ಳೋ ಎಂಬುದು ಮಾತ್ರ ಈವರೆಗೂ ಪತ್ತೆಯಾಗಿರಲಿಲ್ಲ. ಕಾಸೀಂಗೆ ದುಬೈಗೆ ಹೋಗುವ, ಅಲ್ಲಿ ಹಣ ಸಂಪಾದಿಸುವ ಬಯಕೆ ಮಾತ್ರ ಪ್ರಾಯದಲ್ಲಿ ಬಹಳ ಇತ್ತು. ಆದರೆ ಪರಿಸ್ಥಿತಿ ಸಮಯಗಳೆರಡು ಅದಕ್ಕೆ ಸ್ಪಂದಿಸಿರಲಿಲ್ಲ. ತನ್ನಾಸೆಯನ್ನು ಹೋಗಿ ಬಂದಂತೆ ಕಲ್ಪಿಸಿಯೇ ತಾನು ಆ ಕಾಲದಲ್ಲೇ ಹೋಗಿ ಅಲ್ಲಿರಲು ಮನಸ್ಸಾಗದೆ ಇತ್ತ ಬಂದನೆಂದು ಕೇಳುವವರ ಬಳಿ ಹೇಳುತ್ತಿದ್ದ. ಕಾಸೀಂಗೆ ತಾನು ಈ ರೀತಿಯಾಗಿ ಹೇಳುವುದು ಹೆಮ್ಮೆ ಮತ್ತು ಖುಷಿಯಾಗಿತ್ತು. ಅವನೊಂದಿಗೆ ಹರಟಲು ಕುಳಿತರೆ ಸಮಯದ ಪರಿವೇ ಇರುವುದಿಲ್ಲ. ಅಷ್ಟರ ಮಟ್ಟಿಗೆ ಕಾಸೀಂ ತನ್ನ ಎದುರಿರುವವರನ್ನು ಪರವಶ ಮಾಡಿ ಬಿಡುತ್ತಿದ್ದ.
ಅವನಿಗೆ ಈ ಮಾತಿನ ಕಲೆ ದಕ್ಕಿದ್ದು ಓದೋ ಶಾಲೆ ಬಿಟ್ಟು ತಂದೆಯೊಂದಿಗೆ ವ್ಯಾಪಾರಕ್ಕೆಂದು ಊರೂರಿನ ಸಂತೆಗಳ ಅಲೆಯುತ್ತ, ಅಲ್ಲಿನ ಜನಜೀವನದ ಜೊತೆ ಬೆರೆತು ತಂದೆಯ ರೀತಿ, ರಿವಾಜುಗಳ ಅನುಸರಿಸಿದಾಗ. ಕಾಸೀಂ ಓದಲಿಲ್ಲ ಎನ್ನುವುದು ಆ ಕಾಲಕ್ಕೆ ಅಂಥಾ ಮಹತ್ತರ ವಿಷಯವಲ್ಲ. ಅದೊಂದು ಕೂಡು ಕುಟುಂಬ. ಮನೆ ತುಂಬಾ ಮಕ್ಕಳು. ಅವುಗಳ ಹೊಟ್ಟೆ ತುಂಬಿಸುವುದೇ ದೊಡ್ಡ ಸಾಹಸವಾಗಿರುವಾಗ ಈ ಓದು ಅವನಿಗೆ ಲೆಕ್ಕಕ್ಕೆ ಬರಲಿಲ್ಲ.
ಸಂತೆ ವ್ಯಾಪಾರ ಕಾಸೀಂಗೆ ತನ್ನ ತಂದೆಯಿಂದ ಬಂದ ಬಳುವಳಿ. ಅವನ ಅಣ್ಣ, ತಮ್ಮಂದಿರು ಕೂಡ ಇದನ್ನೆ ಮಾಡುತ್ತಿದ್ದರು. ಆದರೆ, ಅವರ ಮಾರಾಟದ ವಸ್ತುಗಳು ಮಾತ್ರ ಬೇರೆ ಬೇರೆ ಇರುತ್ತಿದ್ದವು. ಕಾಸೀಂ ಪ್ರಾಯದಲ್ಲಿ ಹಣ್ಣಿನ ವ್ಯಾಪಾರ ಮಾಡುತ್ತಿದ್ದ. ಅದರಲ್ಲೂ ಸೀಜನ್‌ಗೆ ತಕ್ಕಂತೆ ಹಣ್ಣುಗಳ ಹುಡುಕಿಕೊಂಡು ಅವುಗಳು ಹೆಚ್ಚಿನ ಪ್ರಮಾಣದಲ್ಲಿ ಸಿಗುವ ಊರುಗಳಿಗೆ ಹೋಗುವುದು, ಅಲ್ಲಿ ಎರಡು ದಿನ ತಂಗಿ ಹಣ್ಣಿನ ತೋಟಗಳ ಸುತ್ತಾಡಿಕೊಂಡು ಸಾಧ್ಯವಾದಷ್ಟು ಕಡಿಮೆ ಬೆಲೆಗೆ ವ್ಯಾಪಾರ ಕುದುರಿಸುವುದು, ನಂತರ ಮಾಲ್‌ನ ಸಮೇತ ತನ್ನ ಅಂಗಡಿಗೆ ತಂದು ಮಾರಾಟ ಮಾಡುವುದು ನಡೆಯುತ್ತಿತ್ತು. ಇದರಿಂದ ಅವನಿಗೆ ಎಲ್ಲಾ ಸೀಮೆಯ ಹಣ್ಣುಗಳ ರುಚಿ, ಪರಿಚಯ, ಯಾವ ಕಾಲದಲ್ಲಿ ಅವುಗಳ ಬೆಳೆ ಚೆನ್ನಾಗಿ ಬರುತ್ತದೆ ಎಂಬುದರ ಬಗ್ಗೆ ಅರಿವಿತ್ತು. ಅವುಗಳನ್ನು ಇಲ್ಲಿಗೆ ತಂದು ಹೋಲ್‌ಸೇಲ್‌ನಲ್ಲಿ ಮಾರುತ್ತಿದ್ದ ಕಾಸೀಂ ಆ ಸಮಯಕ್ಕೆ ಕುಟುಂಬದ ಇತರೆ ಸದಸ್ಯರಿಗೆ ಹೋಲಿಸಿಕೊಂಡರೆ ಹೆಚ್ಚು ಸಂಪಾದಿಸುತ್ತ ಅನುಕೂಲವಾಗಿದ್ದ. ಈ ಸಮಯದಲ್ಲೆ ಅವನಿಗೆ ದುಬೈಗೆ ಹೋಗುವ ವಿಪರೀತ ಬಯಕೆ ಹುಟ್ಟಿ, ಅದಕ್ಕಾಗಿ ಅಲ್ಲಿಗೆ ಹೋಗಿ ಬಂದ ಒಬ್ಬ ಪರಿಚಿತನೊಂದಿಗೆ ತಾನು ಹೋಗಲು ಪ್ರಯತ್ನಿಸುವಾಗ ತಂದೆ ಇದನ್ನು ಮುರಿದು “ಏನ್ ಬಾರಿ ಓದಿ ಕಸ್ತಿದ್ಯಾಂತ ಹೋಗ್ಬೇಕಾ ನೀನು? ಇಲ್ಲೇ ಉದ್ಧಾರ ಆಗ್ದೇ ಇರೋನು ಅಲ್ಲೇನು ಆಗ್ತೀಯೋ ಬದ್ಮಾಶ್. ಇಲ್ಲಿಂದ ಅಲ್ಲಿಗೆ ಹೋಗೋ ಈ ಶೋಕಿಯೆಲ್ಲಾ ಬಿಟ್ಟಿಬಿಡು” ಎಂದು ಗದರುತ್ತಿದ್ದರು. ಕಾಸೀಂಗೆ ಬಾಲ್ಯದಿಂದಲು ತಂದೆಯ ಭಯ ಇತ್ತು. ಆದ್ದರಿಂದ ಅವರಿಗೆ ಎದುರಾಡಲಾಗದೆ ತನ್ನ ಈ ಕನಸನ್ನು ಮುಂದೂಡುತ್ತ ಬಂದಿದ್ದ. ಇಲ್ಲಿನ ಅವನ ಹಣ್ಣಿನ ವ್ಯಾಪಾರವೇನು ಕಡಿಮೆಯಿರಲಿಲ್ಲ. ಒಳ್ಳೆ ಲಾಭದಾಯಕವಾಗಿತ್ತು. ಇದರ ನಡುವೆಯು ದುಬೈ ಕನಸು ಅವನ ಸೂಜಿಗಲ್ಲಿನಂತೆ ಸೆಳೆಯುತ್ತಿದ್ದು ಸುಳ್ಳಲ್ಲ. ಇದು ಸಾಧ್ಯವಾಗದ ಕಾರಣ ಈ ಹಣ್ಣುಗಳ ತರುವ ನೆಪದಲ್ಲಿ ಇತರೆ ಊರುಗಳ ತಿರುಗುವ ಮೂಲಕ ತೃಪ್ತನಾಗುತ್ತಿದ್ದ.
ಈ ಪ್ರಾಯದ ಸಮಯದಲ್ಲಿ ಊರೂರುಗಳ ತಿರುಗುವಾಗಲೇ ಅವನಿಗೆ ಹೆಂಡತಿ ಬಾನು ಕಣ್ಣಿಗೆ ಬಿದ್ದಿದ್ದು. ತೋಟ ಒಂದರಲ್ಲಿ ಕಿತ್ತಲೆ ಬಿಡಿಸುತ್ತಿದ್ದವಳನ್ನು ಕಾಸೀಂ ತುಂಬಾ ಇಷ್ಟಪಟ್ಟು ಮದುವೆಯಾಗಲು ಹಾರಿಸಿಕೊಂಡು ಬಂದಿದ್ದ. ಕಾಸೀಂ ನೋಡಲು ಸುಂದರನಲ್ಲದೆ ಹೋದರು ಮೈ, ಕೈ ತುಂಬಿಕೊಂಡು ಜೋರಾಗಿದ್ದ. ಹುಡುಗಿಯರು ತಿರಸ್ಕರಿಸದಷ್ಟು ರೂಪ ಅವನಲ್ಲಿತ್ತು. ಬಾನು ಕೂಡ ಅವನನ್ನು ತೋಟಕ್ಕೆ ಬಂದಾಗ ಅಲ್ಲಲ್ಲಿ ಗಮನಿಸಿದ್ದಳು. ಅವನ ಮಾತುಗಾರಿಕೆಗೆ ಅವಳು ಹೆಚ್ಚು ಮರುಳಾಗಿದ್ದಳು. ಬಾನು ಸುಂದರಿ. ಆದರೆ, ಬಿಸಿಲು, ಮಳೆಗಳೆನ್ನದೆ ತೋಟಗಳಲ್ಲಿ ದುಡಿಯುತ್ತಿದ್ದ ಕಾರಣ ಆ ಚೆಲುವು ಮಂಕಾಗಿತ್ತು. ಇದನ್ನು ಕಾಸೀಂ ಬಹಳ ಸೂಕ್ಷ್ಮವಾಗಿ ಗಮನಿಸಿದ್ದ. ಇನ್ನೂ ಅವಳು ತನ್ನ ಚೆಲುವಿನ ಬಗ್ಗೆ ಅಷ್ಟು ಆಸಕ್ತಿವಹಿಸಿರಲಿಲ್ಲ. ಕಾಸೀಂ ಎದುರಾದಾಗಲೆಲ್ಲಾ ಅವಳ ಎದೆಯೊಳಗೆ ಏನೋ ಸಂಚಲನವಾಗಿ ಅವನನ್ನು ಕದ್ದು ಕದ್ದು ನೋಡುವ ಆಸೆಯಾಗುತ್ತಿತ್ತು. ಈ ನೋಟವನ್ನೆ ಕಾಸೀಂ ತನ್ನ ಪ್ರೇಮಕ್ಕೆ ಬುನಾದಿಯಾಗಿ ಮಾಡಿಕೊಂಡ. ಇಬ್ಬರಿಗೂ ಪರಸ್ಪರ ಒಪ್ಪಿಗೆಯಾಗುತ್ತಲೆ ಮುಂದಿನದು ಮಿಂಚಿನಂತೆ ನಡೆದು ಹೋಗಿತ್ತು. ಬಾನು ಮನೆಯಲ್ಲೂ ಐದಾರು ಹೆಣ್ಣು ಮಕ್ಕಳಿದ್ದು, ಬಡತನ ತಾಂಡವವಾಡುತ್ತಿರುವಾಗ ಕಾಸೀಂ ಅವರ ಪಾಲಿಗೆ ದೇವರಂತೆ ಕಂಡು ಬಾನು ತಂದೆಯ ಮೇಲಿನ ದುಪ್ಪಟ್ಟು ಹೊರೆಯ ಒಂದು ಭಾಗವನ್ನು ತೆಗೆದು ಹಗುರಗೊಳಿಸಿದ್ದ. ಕಾಸೀಂ ಮನೆಯಲ್ಲಿ ಈ ಮದುವೆಯ ಕುರಿತು ತಂದೆ “ಎಂಥಾ ಸುವರ್ ಇವ್ನೂ. ಅಲ್ಲೆಲ್ಲೋ ಹಣ್ಣಿನ ವ್ಯಾಪಾರಕ್ಕೋಗಿ ಹೆಣ್ಣು ಹೊಡ್ಕೊಂಡು ಬರಬೌದ? ಇಲ್ಲಿ ಕೈ ತುಂಬಾ ಕೊಡೋ ಸಂಬಂಧಗಳ ಬಿಟ್ಟು ಅಲ್ಲಿ ಯಾರೋ ಪರದೇಶಿ ಕಟ್ಕಂಡು ಬಂದವ್ನೇ. ಯಾಕೆ ಇಲ್ಲಿ ಎಲ್ಲೂ ಹೆಣ್ಣು ಇರಲಿಲ್ಲ ನಿನ್ನ ಮಗ್ನಂಗೆ?” ಎಂದು ತಾಯಿಯನ್ನು ತರಾಟೆಗೆ ತಗೆದುಕೊಂಡಿದ್ದರು. ಕಾಸೀಂ ಮಾತ್ರ ಈ ಘಟನೆಯ ನಂತರ ತಂದೆಯ ಕಣ್ಣಿಗೆ ನೇರವಾಗಿ ತಿಂಗಳುಗಳ ಕಾಲ ಬಿದ್ದಿರಲಿಲ್ಲ. ಬಾನುಗೆ ಈ ಮನೆಯ ವಾತಾವರಣಕ್ಕೆ ಒಗ್ಗಿಕೊಳ್ಳಲು ಬಹಳ ವರ್ಷಗಳು ತೆಗೆದುಕೊಂಡಿತ್ತು. ಇತ್ತ ಗಂಡ ಕಾಸೀಂ ವ್ಯಾಪಾರಕ್ಕೆಂದು ಹೊರಗೆ ಹೊರಟರೆ ಸಾಕು, ಮನೆಯಲ್ಲಿ ಇತರರು ಇವಳ ಹೊಟ್ಟೆ ಉರಿಸುತ್ತಿದ್ದರು. ಕಾಸೀಂಗೆ ಮತ್ತೊಂದು ಮದುವೆ ಮಾಡುವುದಾಗಿ ಬಾನುವನ್ನು ಮನೆ ಬಿಟ್ಟು ಹೋಗುವಂತೆ ಹಿಂಸೆ ಕೊಡುತ್ತಿದ್ದರು. ಬಾನು ಇದಕ್ಕೆಲ್ಲಾ ಬಗ್ಗಲಿಲ್ಲ. ಅವಳಿಗೆ ಇಲ್ಲಿಂದ ತಾನು ನೆಲ ಕಿತ್ತರೆ ಹಾಳೆಂದು ಸ್ಪಷ್ಟವಾಗಿ ಗೊತ್ತಿತ್ತು. ಕಾಸೀಂ ತನ್ನನ್ನು ಮೆಚ್ಚಿ ಮದುವೆಯಾದ ಒಂದೇ ಕಾರಣ ಅವಳಿಗೆ ಸಾಕಿದ್ದರಿಂದ ಅವಳು ಇತರೆ ಎಲ್ಲಾವನ್ನು ನಿಭಾಯಿಸುತ್ತಿದ್ದಳು. ಕಾಸೀಂ ಸಂತೆ ವ್ಯಾಪಾರ ಮುಗಿಸಿ ಬರುತ್ತಲೆ ಹೆಂಡತಿ ಬಾನು ಮೇಲೆ ಮನೆಯವರು ಬಂಡಿಯಷ್ಟು ದೂರುಗಳ ನೀಡುತ್ತಿದ್ದರು. ಆದರೆ ಅವನು ಎಂದಿಗೂ ಈ ಕುರಿತು ಅವಳನ್ನು ವಿಚಾರಣೆಗೆ ಒಳಪಡಿಸುತ್ತಿರಲಿಲ್ಲ. ಅವನಿಗೆ ಬಾನು ಗುಣ, ಸ್ವಭಾವದ ಬಗ್ಗೆ ತಿಳಿದಿತ್ತು. ಹಾಗೆ ಆಕೆ ಕಾಸೀಂ ಕುಟುಂಬದಿಂದ ತನಗೆ ಎಷ್ಟೇ ನೋವು, ಹಿಂಸೆಗಳಾದರು ಅವನ ಬಳಿ ದೂರು ತರುತ್ತಿರಲಿಲ್ಲ. ಇದು ಕಾಸೀಂಗೆ ತುಂಬಾ ಮೆಚ್ಚುಗೆಯಾಗಿತ್ತು. ಮನೆಯಲ್ಲಿ ತಾನು ಸಂತೆ ವ್ಯಾಪಾರಕ್ಕೆ ಹೋದ ನಂತರ ನಡೆಯುವ ವಿದ್ಯಮಾನಗಳು ಅವನ ಗಮನಕ್ಕೆ ಬಂದಿದ್ದವಾದರು, ಮನೆಯಲ್ಲಿ ಅವನು ಚಿಕ್ಕವನಾದ್ದರಿಂದ ದೊಡ್ಡವರೊಂದಿಗೆ ಜಗಳಕ್ಕೆ ಇಳಿಯುತ್ತಿರಲಿಲ್ಲ. ಈ ಕಾರಣಕ್ಕೆ ಅವನು ಮನೆಯವರು ಎಷ್ಟು ಕೆರಳಿಸಲು ಯತ್ನಿಸಿದರು ಸಮಾಧಾನವಾಗಿರುತ್ತಿದ್ದ. ಕಾಸೀಂ ತಂದೆಯ ಅಕಾಲಿಕ ನಿಧನದ ನಂತರ ಈ ದೊಡ್ಡ ಕೂಡು ಕುಟುಂಬ ಬೇರೆ ಬೇರೆ ಟಿಸಿಲುಗಳಾಗಿ ಹೋಯಿತು. ಎಲ್ಲರು ತಮ್ಮ ಹೆಂಡತಿ, ಮಕ್ಕಳ ಜವಾಬ್ದಾರಿ ಹೊತ್ತು ಬೇರ್ಪಡೆಗೊಂಡರು. ಕಾಸೀಂ ಕೂಡ ಬಾನುವಿನೊಂದಿಗೆ ಬೇರೆ ಮನೆ ಮಾಡಿಕೊಳ್ಳುವ ವೇಳೆಗೆ ಇವರಿಗೆ ಎರಡು ಹೆಣ್ಣು ಮತ್ತು ಮೂರು ಗಂಡು ಮಕ್ಕಳಾಗಿದ್ದವು.
ಬಾನುವಿಗೆ ಬೇರೆ ಸಂಸಾರ ಹೂಡಿದ ನಂತರ ಇಲ್ಲಿಂದ ಹೊಸ ಜವಾಬ್ದಾರಿ ಹೆಗಲೇರಿತ್ತು. ಸಾಲದ್ದಕ್ಕೆ ತನ್ನ ಅತ್ತೆಯ ಮನೆಯಿಂದ ಕಾಸೀಂನ ಪಾಲಿಗೆಂದು ಎರಡ್ಮೂರು ಹಿತ್ತಾಳೆ ವಸ್ತುಗಳು ಬಿಟ್ಟರೆ ಬೇರೆನೂ ಬಂದಿರಲಿಲ್ಲ. ಅವರೆಲ್ಲಾ ತಂದೆ ಸಂಪಾದಿಸಿದ್ದನ್ನು ಕಳ್ಳತನದಲ್ಲಿ ಸಮಸ್ತರ ಮುಂದೆ ಹಂಚುವ ಮೊದಲೆ ಒಂದೊಂದಾಗಿ ಲೂಟಿ ಮಾಡಿದ್ದರು. ಕಾಸೀಂ ಕೂಡ ಇದರ ಕುರಿತು ಏನೊಂದು ಕೇಳಲು ಹೋಗಲಿಲ್ಲ. ಮಕ್ಕಳೆಲ್ಲಾ ಇನ್ನೂ ತೀರ ಸಣ್ಣವರು. ಈ ನಡುವೆ ಗಂಡನ ದುಡಿಮೆಯೊಂದೆ ಮನೆಗೆ ಆಧಾರವಾಗಿತ್ತು. ಬಾನು ತನ್ನ ಚಾಕಚಕ್ಯತೆ ಉಪಯೋಗಿಸಿಕೊಂಡು ಸಂಸಾರವನ್ನು ತೂಗಿಸುವ ಸವಾಲನ್ನು ಇತರರಿಗಿಂತ ಚೆನ್ನಾಗಿ ನಿರ್ವಹಿಸಿದ್ದಳು. ಇದು ಅವಳಿಗೆ ತಾಯಿಯಿಂದ ಬಂದ ಬಳುವಳಿಯಾಗಿತ್ತು. ಆ ತುಂಬು ಕುಟುಂಬವನ್ನು ತನ್ನ ಅಮ್ಮ ತೂಗಿಸುತ್ತಿದ್ದ ಪರಿಯನ್ನೆ ಬಾನು ಇಲ್ಲಿ ಅನುಸರಿಸಿದ್ದಳು. ಕಾಸೀಂ ದುಡಿದು ತರುವುದನ್ನು ಮಾತ್ರ ತಪ್ಪಿಸುತ್ತಿರಲಿಲ್ಲ. ಆದರೆ, ಊರೂರಗಳ ಮೇಲೆ ಹೋಗಿ ಲಾಟ್‌ಗಟ್ಟಲೆ ಹಣ್ಣುಗಳ ತಂದು ಗುಡ್ಡೆ ಹಾಕುವ ಅವನ ಕಾರ್ಯ ಮಾತ್ರ ಸ್ವಲ್ಪ ತಗ್ಗಿತ್ತು. ಈಗೇನಿದ್ದರು ಸೀಜನ್‌ನಲ್ಲಿ ಮಾವಿನ ಹಣ್ಣಿನ ಸಲುವಾಗಿ ಮಾತ್ರ ಅವನ ಯಾತ್ರೆ ಹೊರಡುತ್ತಿತ್ತು. ಇನ್ನೂ ಹುಣಸೆ, ಹಲಸು, ಕಲ್ಲಂಗಡಿ, ಕಿತ್ತಲೆ, ಸೀಬೆ, ನೆಲ್ಲಿ, ಸಪೋಟಗಳನ್ನು ಆ ಸಮಯಕ್ಕೆ ಹೋಲ್‌ಸೇಲ್‌ನಲ್ಲಿ ಕೊಂಡು ಪ್ರಮುಖ ಸಂತೆಗಳಲ್ಲಿ ಮಾರುತ್ತಿದ್ದ. ಈ ಕಾಯಕದಿಂದಲೆ ಅವನ ಇಬ್ಬರು ಹೆಣ್ಣು ಮಕ್ಕಳನ್ನು ಒಳ್ಳೆಯ ಕಡೆ ಮದುವೆ ಮಾಡಿ ಗಂಡು ಮಕ್ಕಳ ವ್ಯಾಪಾರಕ್ಕೊಂದು ದಾರಿ ಮಾಡಿದವನು ಅವರಿಗೂ ಮದುವೆ ಮಾಡಿದ್ದ. ತನ್ನ ಹಣ್ಣಿನ ವ್ಯಾಪಾರವನ್ನು ಮಕ್ಕಳಿಗೆ ಕಲಿಸಿದವನು ಮುಂದೆ ತನಗೆ ವಯಸ್ಸಾದಂತೆ ಅದನ್ನು ಪೂರ ಮಕ್ಕಳ ಸುರ್ಪದಿಗೆ ಬಿಟ್ಟು ಕೊಟ್ಟಿದ್ದ. ಅವರು ಇದನ್ನು ತಮ್ಮದೇ ರೀತಿಯಲ್ಲಿ ಮುಂದುವರೆಸಿಕೊಂಡು ಹೋಗಿದ್ದರು.
ಮಕ್ಕಳು ಅವನಿಂದ ವ್ಯವಹಾರ ಕಲಿತು, ಮದುವೆಯಾಗಿ ಹೆಂಡತಿಯರು ಪಕ್ಕಕ್ಕೆ ಬಂದು ಒಂದು ಮಗುವಾಗುತ್ತಲೆ ಮನೆ ಚಿಕ್ಕದೆಂದು ಹೇಳುತ್ತ ತಾವು ಸ್ವತಂತ್ರವಾಗಿ ಇರಲು ಇಚ್ಛಿಸಿದ್ದರು. ಆದ್ದರಿಂದ ಯಾರು ಈಗ ಅವನ ಜೊತೆಯಲ್ಲಿ ಇರಲಿಲ್ಲ. ಕಾಸೀಂ ಸಂಪಾದನೆಯೆಲ್ಲ ಈ ಸಂಸಾರ, ಮಕ್ಕಳ ಮದುವೆ ತೂಗಿಸುವಲ್ಲೆ ಖರ್ಚಾಗಿತ್ತು. ಮನೆಯಿಂದ ಹೊರ ಬಂದಾಗ ಬಾನು ಹಠ ಹಿಡಿದಳೆಂದು ಕೂಡಿಸಿಟ್ಟ ಹಣದಲ್ಲಿ ಒಂದು ಸ್ವಂತ ಜಾಗ ಕೊಂಡಿದ್ದ. ಮುಂದೆ ಅಲ್ಲಿ ವಾಸಿಸಲು ಮನೆ ಕಟ್ಟಿಕೊಳ್ಳಲಷ್ಟೇ ಅವನಿಗೆ ಸಾಧ್ಯವಾಗಿದ್ದು, ಇದರ ಹೊರತು ಇನ್ಯಾವ ಆಸ್ತಿಗಳನ್ನು ಅವನಿಂದ ಮಾಡಲಾಗಲಿಲ್ಲ. ಅಲ್ಲೆ ದುಡಿದು ಅಲ್ಲೆ ಉಣ್ಣುವ ಜೀವನ ಅಭ್ಯಾಸವಾಗಿತ್ತು. ಅವನು ಸ್ವಂತವಾಗಿ ಸಂಪಾದಿಸಿ ಕಟ್ಟಿಸಿದ ಆ ಚಿಕ್ಕ ಮನೆಯಲ್ಲೀಗ ಗಂಡ, ಹೆಂಡತಿ ಇಬ್ಬರೇ ತಮ್ಮ ಸಂಧ್ಯಾಕಾಲವನ್ನು ಕಳೆಯುತ್ತಿದ್ದರು. ಬಾನು ಕೂಡ ಮನೆಯಲ್ಲಿ ಸುಮ್ಮನೆ ಕುಳಿತು ಕಾಲಹರಣ ಮಾಡಲಾರದೆ ಊದಿನ ಕಡ್ಡಿಗಳ ಉಜ್ಜುತ್ತಿದ್ದಳು. ಇದನ್ನು ಅವಳು ಬಹಳ ವರ್ಷಗಳಿಂದ ಮಾಡುತ್ತಿದ್ದಳು. ಆಗೆಲ್ಲಾ ದೊಡ್ಡ ಮಟ್ಟದಲ್ಲಿ ಕಡ್ಡಿಗಳ ಉಜ್ಜಿ ತಾನಷ್ಟು ಕಾಸು ಸಂಪಾದಿಸಿ ಮನೆಗೆ ಬೇಕಾದ ಅಗತ್ಯ ವಸ್ತುಗಳಿಗೆ, ದಿನಸಿಗೆ ನೆರವಾಗಿದ್ದಳು. ಇವರ ಹೆಣ್ಣುಮಕ್ಕಳು ಹೈಸ್ಕೂಲ್‌ತನಕ ಕಲಿತರಾದರು, ಒಳ್ಳೆಯ ಕಡೆಯಿಂದ ವರಗಳು ಬರುತ್ತಲೆ ಮುಂದಿನ ಓದನ್ನು ಮೊಟಕುಗೊಳಿಸಿ ಮದುವೆ ಮಾಡಿ ಹೊರೆ ಇಳಿಸಿಕೊಂಡಿದ್ದರು. ಗಂಡು ಮಕ್ಕಳು ಮಾತ್ರ ಶಾಲೆ ಮೆಟ್ಟಿಲುಗಳ ಹತ್ತಿ ಸಂಖ್ಯೆಗಳ ಎಣಿಸುವುದು ಮತ್ತು ಅಕ್ಷರಗಳ ಗುರುತಿಸಿ, ಕೂಡಿಸಿ ಓದುವುದ ಕಲಿಯತ್ತಲೆ ತಮ್ಮ ಕಸುಬಿಗಿಷ್ಟು ಸಾಕೆಂದು ಕಾಸೀಂನೊಂದಿಗೆ ಸಂತೆಗಳ ಸುತ್ತಲು ಹೊರಟಿದ್ದರು. ಮನೆಯಲ್ಲೂ ಕೂಡ ಈ ದಂಪತಿ ಮಕ್ಕಳ ಓದಿಗೆ ಅಷ್ಟು ಗಮನ ಕೊಡಲಿಲ್ಲವಾದ್ದರಿಂದ ಅನ್ನ ದುಡಿದುಕೊಂಡು ತಿನ್ನುವುದನ್ನೆ ಮುಖ್ಯವೆಂದು ಭಾವಿಸಿದ್ದರು. ಅದರಂತೆ ಮಕ್ಕಳು ಕೂಡ ನಡೆದುಕೊಳ್ಳಲು ಎಲ್ಲವು ಅದರಂತೆ ನಡೆದು ಹೋಗಿತ್ತು.
ಕಾಸೀಂ ಕಾಲದಿಂದ ದುಡಿದವನು ಈಗ ವಯಸ್ಸಾಯಿತು ಮನೆಯಲ್ಲಿ ಕುಳಿತಿರು ಎಂದರೆ ಕೇಳುವವನಲ್ಲ. ಈಗ ಅವನ ವ್ಯಾಪಾರ ಪೂರ್ಣವಾಗಿ ಬದಲಾಗಿತ್ತು. ಹಣ್ಣುಗಳ ಹೊತ್ತು ತಂದು ಮಾರುವುದೆಲ್ಲಾ ಅವನಿಂದ ಸಾಧ್ಯವಿರಲಿಲ್ಲ. ಹಾಗಾಗೀ ಸುಲಭದ ಊದಿನ ಕಡ್ಡಿ ವ್ಯಾಪಾರವನ್ನು ಕಂಡುಕೊಂಡಿದ್ದ. ಯಾರಾದರು ಮಾತಿನಲ್ಲಿ ಸಿಕ್ಕು “ಅಲ್ಲೋ ತಾತ ಇಷ್ಟು ವಯಸ್ಸಾದ ಮೇಲೂ ನೀನು ಹಳೇ ಗಾಡಿ ತಳ್ಳಕೊಂಡು ಊದಿನ ಕಡ್ಡೀ ಮಾರೋದು ಏನೀದೆ” ಎಂದರೆ ಕಾಸೀಂ ಚುರುಕಾಗಿ “ಹ್ಹೇ ಹೈವಾನ್ ನನ್ಗೆ ವಯಸ್ಸಯ್ತಾಂತೂ ನಾನೇನು ತಿನ್ನೋದು ನಿಲ್ಸಿಲ್ಲ ಅಲ್ಲ. ಅಂದ್ಮೇಲೆ ದುಡಿಮೆ ಯಾಕೆ ನಿಲ್ಸಿಸಲೀ. ಆಗ ಪ್ರಾಯಯಿತ್ತು ತಿರುಗಿ ಹೊತ್ತು ತಂದು ಹಣ್ಣು ಮರ‍್ತಿದ್ದೆ, ಈಗ ಆಗೋದಿಲ್ಲ ಊದಿನ ಕಡ್ಡೀ ಮಾರ್ತೀನಿ. ಮನಸಾ ಕುಂತ್ರೇ ಕೆಡ್ತಾನೆ. ಶಕ್ತಿ ಇರೋತನ್ಕ ತಿರುಗೋದು ಆಮೇಲೆ ಅಲ್ಲಾ ಇದಾನಲ್ಲ” ಎಂದು ತನ್ನದೇ ರೀತಿಯಲ್ಲಿ ಸಮಜಯಾಷಿ ಕೊಡುತ್ತಿದ್ದ. ದುಡಿಮೆ ಕಾಸೀಂನ ಮೂಲ ಮಂತ್ರವಾಗಿತ್ತು. ಮನೆಯಲ್ಲಿ ಬಾನು ಈಗಲೂ ಹೆಚ್ಚಿನ ಸಮಯ ಊದಿನ ಕಡ್ಡಿಗಳನ್ನು ಉಜ್ಜುವ ಕೆಲಸ ಮಾಡುತ್ತಿದ್ದಳು. ಅದರ ಪ್ರಮಾಣ ಮಾತ್ರ ಸಂಪೂರ್ಣ ಕಡಿಮೆಯಾಗಿತ್ತು. ಹಿಂದಿನಂತೆ ಊದಿನ ಕಡ್ಡಿಗೆ ಬೇಕಾದ ಕಚ್ಚಾ ಸಾಮಾಗ್ರಿಗಳ ತಂದು ಊದಿನ ಕಡ್ಡಿಗಳ ತಯಾರಿಸಿ ಆ ಕಂಪನಿಗಳವರಿಗೆ ಕೊಟ್ಟು ಲೆಕ್ಕದ ಪುಸ್ತಕದಲ್ಲಿ ತಾನು ಉಜ್ಜಿದ ಕಡ್ಡಿಗಳಿಗೆ ಕೂಲಿ ಬರೆಸಿಕೊಂಡು, ಹಳೇಯ ಬಾಕಿ ಪಡೆದು ಹೊಸದನ್ನು ಉಳಿಸಿಕೊಳ್ಳುವಂತಿರಲಿಲ್ಲ. ಈಗೇನಿದ್ದರು ಕಾಸೀಂನ ಸಂತೆ ವ್ಯಾಪಾರದ ಸಲುವಾಗಿ ಬಾನು ಕಚ್ಚಾ ಸಾಮಾಗ್ರಿಗಳ ಕೊಂಡು ತಂದು ಊದಿನ ಕಡ್ಡಿಗಳ ಉಜ್ಜಿ ಬಿಸಿಲಿನಲ್ಲಿ ಒಣಗಿಸಿ ಅದಕ್ಕೆ ಘಮ್ಮನ್ನೆವ ಸುಗಂಧ ದ್ರವ್ಯವನ್ನು ಸಿಂಪಡಿಸಿದವಳೇ ತಾನೇ ಇಂತಿಷ್ಟು ಕಡ್ಡಿಗಳನ್ನು ತುಂಬಿ ಅದನ್ನು ಮೇಣದ ಬತ್ತಿಯ ಬಿಸಿಯಿಂದ ಒಂದು ಪ್ಯಾಕ್ ಮಾಡುತ್ತಿದ್ದಳು. ಈ ರೀತಿಯ ಪ್ಯಾಕ್‌ಗಳನ್ನು ಕಾಸೀಂ ತನ್ನ ಹಳೇ ಮೊಪೆಡ್‌ನಲ್ಲಿ ಹೊತ್ತು ಸುತ್ತಲಿನ ಸಂತೆ, ಜಾತ್ರೆಗಳಲ್ಲಿ ಮಾರಾಟ ಮಾಡಿ ಬರುವ ಹಣದಿಂದ ಇವರಿಬ್ಬರ ಜೀವನದ ಖರ್ಚುವೆಚ್ಚಗಳು ನಡೆಯುತ್ತಿತ್ತು. ಮಕ್ಕಳ ಮೇಲೆ ಅವಲಂಬಿತರಾಗದೆ ಈ ದಂಪತಿ ಇಳಿವಯಸ್ಸಿನಲ್ಲಿ ತಮ್ಮ ಅಗತ್ಯತೆಗಳನ್ನು ಈ ಮೂಲಕ ಪೂರೈಸಿಕೊಳ್ಳುತ್ತಿದ್ದರು. ಬಾನು ಕಾಸೀಂನ ಸುಧಾರಿಸದ ಅನಾರೋಗ್ಯ ಕಂಡು “ನೀವು ಸಂತೆಗೋಗಿ ಆ ಧೂಳಲ್ಲಿ ವ್ಯಾಪಾರ ಮಾಡೋದು ಬೇಡ” ಎಂದರೆ ಕಾಸೀಂ ಬಾದಿಸುವ ಮಂಡಿ ನೋವಿನಲ್ಲೂ ಬಾನು ಕುಳಿತು ಊದಿನ ಕಡ್ಡಿ ಉಜ್ಜುವುದ ಕಂಡಿದ್ದವನು “ನೀನು ಇನ್ಮೇಲೆ ಈ ಊದಿನ ಕಡ್ಡೀ ಉಜ್ಜೋದು ಬೇಡ” ಎನ್ನುತ್ತಿದ್ದಂತೆ ಇವರಿಬ್ಬರಿಗೂ ತಾವು ಮಾಡುವ ಕಾರ್ಯಗಳು ಅಷ್ಟು ಸುಲಭವಾಗಿ ಬಿಟ್ಟು ಕೊಡಲಾಗದೆಂದು ಅರ್ಥವಾಗಿತ್ತು. ಆದ್ದರಿಂದ ಇಬ್ಬರು ಮತ್ತೆ ಈ ಮಾತುಗಳಿಗೆ ಅವಕಾಶ ಕೊಡದೆ ತಮ್ಮ ಕಾರ್ಯಗಳಲ್ಲಿ ತಲೀನರಾಗುತ್ತಿದ್ದರು. ಬಾನುವಿಗೆ ಮೊಮ್ಮಕ್ಕಳು ಆಗಾಗ ಮನೆಗೆ ಬರುವುದರಿಂದ ಸಂತಸವಾಗಿತ್ತು. ಹೆಣ್ಣುಮಕ್ಕಳು ಸಹಿತ ಅಪ್ಪ, ಅಮ್ಮನ ನೋಡಲು ಈ ಚಿಕ್ಕ ಮನೆಗೆ ಬರುತ್ತಿದ್ದರು. ಆದರೆ, ಅವರಿಂದಲೂ ಸಹಿತ ಇವರಿಂದ ಈ ಕೆಲಸಗಳ ತಪ್ಪಿಸಲಾಗಿರಲಿಲ್ಲ. ಅಳಿಯಂದಿರು ಉತ್ತಮ ಸ್ಥಿತಿಯಲ್ಲಿದ್ದು, ನೀವಿಗೆ ಸಂತೆ ವ್ಯಾಪಾರ ಮಾಡುವುದರ ಕುರಿತು ಹೆಣ್ಣುಮಕ್ಕಳು ಕಾಸೀಂನ ಕೇಳಿದರೆ “ಬೇಟಿ, ಅರಮನೆ ಬಂತೂಂತಾ ನೆರಳ ಕೊಟ್ಟ ಮರ ಕಡೀ ಬಾರ್ದು. ದೊರೆ ಆದ್ರು ಬಂದು ದಾರಿ ಮರೀ ಬಾರ್ದು” ಎಂದು ತನ್ನದೇ ಲೋಕೋಕ್ತಿ ಹೇಳುವ ಮೂಲಕ ಅವರನ್ನು ತೆಪ್ಪಗಾಗಿಸುತ್ತಿದ್ದ.
ತನ್ನ ಮಕ್ಕಳು ಬೆಳೆದು ಎಷ್ಟು ದೊಡ್ಡವರಾದರೇನು ತಾನು ದುಡಿದು ತಿನ್ನಬೇಕು ಎನ್ನುವುದು ಕಾಸೀಂನ ವಾದ. ಅದಕ್ಕಾಗಿ ಅವನು ಹೀಗೆ ಸುತ್ತಲಿನ ಊರೂರಿನ ಸಂತೆಗಳಲ್ಲಿ ಊದಿನ ಕಡ್ಡಿಯ ವ್ಯಾಪಾರಕ್ಕೆ ಮುಂದಾಗಿದ್ದ. ಈ ವ್ಯಾಪಾರ ಅಂಥಾ ಜೋರಿನದು ಅಲ್ಲದೆ ಹೋದರು ಹೂಡಿದ ಬಂಡವಾಳಕ್ಕೆ ಮೋಸವಿರಲಿಲ್ಲ. `ಆ ದೇವರಿರೂವ್ರಗೂ, ಈ ಜನ ಬೇಡಿ ಕೈ ಮುಗಿಯೋವ್ರಗೂ ಊದಿನ ಕಡ್ಡಿ ಬೇಕೇಬೇಕು’ ಎಂಬುದು ಅವನ ನಂಬಿಕೆಯಾಗಿತ್ತು. ಈ ಕಾರಣಕ್ಕೆ ಹೆಚ್ಚು ಭಾರವಿರದ ಮತ್ತು ತ್ರಾಸವಿರದ ಊದಿನ ಕಡ್ಡಿ ವ್ಯಾಪಾರವನ್ನ ಆಯ್ಕೆ ಮಾಡಿಕೊಂಡಿದ್ದ. ಅವನಿಗೆ ಟಿ.ವಿ.ಎಸ್. ಹಳೇ ಮೊಪೆಡ್ ಸಾಥ್ ನೀಡಿತ್ತು. ಯಾವ ಸಂತೆ, ಜಾತ್ರೆಗಾದರು ಸರಿ ಅವನ ಸವಾರಿ ಇದರಲ್ಲೆ ಸಾಗುತ್ತಿತ್ತು. ಎರಡು ಬ್ಯಾಗ್‌ಗಳನ್ನು ಹ್ಯಾಂಡಲ್‌ಗೆ ನೇತಾಕಿ ಮುಂದೊಂದು, ಹಿಂದೆರೆಡು ಬಾಕ್ಸ್‌ಗಳನ್ನು ಇರಿಸಿಕೊಂಡವನು ಬೆಳಗ್ಗಿನ ಜಾವದಲ್ಲೆ ಮನೆ ಬಿಡುತ್ತಿದ್ದ. ಸಂತೆಯ ದಿನ ಅವನ ಊಟ, ತಿಂಡಿಯಲ್ಲಾ ಹೊರಗಡೆಯೇ ನಡೆಯುವುದು. ಬಾನು ತನ್ನೊಬ್ಬಳ ಹೊಟ್ಟೆಗೆ ಚಿಂತೆ ಮಾಡುತ್ತಿರಲಿಲ್ಲ. ರಾತ್ರಿ ಉಳಿದಿದ್ದನ್ನೆ ತಿಂದುಕೊಂಡು ತಾನು ಕೂಡ ಎಳೆ ಬಿಸಿಲಿನಲ್ಲಿ ಊದಿನ ಕಡ್ಡಿ ಉಜ್ಜುವ ಕಾಯಕದಲ್ಲಿ ತೊಡಗಿಕೊಂಡರೆ ಬಿಸಿಲೇರುವ ವೇಳೆಗೆ ಅದನ್ನು ಒಣಗಿಸಲು ಸರಿಯಾಗುತ್ತಿತ್ತು.
ಕಾಸೀಂ ಹಿಂದಿನಿಂದಲು ಹೆಚ್ಚು ಮಾಂಸ ಪ್ರಿಯ. ಅವನ ದುಡಿತದ ಒಂದು ಪಾಲು ಅದಕ್ಕಾಗೇ ಮೀಸಲು. ಅವನಿಗೆ ರಾತ್ರಿಯ ವೇಳೆ ಒಂದು ಒಣ ಮೀನಿನ ತುಂಡಾದರು ಊಟದ ಜೊತೆ ನಂಜಿಕೊಳ್ಳಲು ಇರದಿದ್ದರೆ ಅದನ್ನು ಊಟವೆಂದು ಏಕೆ ಕರೆಯಬೇಕು ಎನ್ನುತ್ತಿದ್ದ. ಬಾನು ಕೈ ರುಚಿ ಅವನಿಗೆ ಕಾಲದಿಂದ ನಾಲಿಗೆ ಕುಣಿಯುವಂತೆ ಮಾಡಿತ್ತು. ಮಾಂಸಹಾರದ ಖಾದ್ಯಗಳ ಮಾಡುವಲ್ಲಿ ಅವಳು ವಿಶೇಷ ಪರಿಣಿತಿ ಹೊಂದಿದ್ದಳು. ಕಾಸೀಂ ಮಾಂಸ, ಮೀನು ಹೀಗೆ ಏನೇ ತಂದರು ಅದನ್ನು ತನ್ನ ಕೈ ಗುಣದಿಂದ ಉತ್ಕೃಷ್ಟ ರುಚಿಯಾಗಿ ಬದಲಿಸುತ್ತಿದ್ದಳು. ಕಾಸೀಂ ಈ ಕಾರಣಕ್ಕೂ ದುಡಿಯುತ್ತಿದ್ದಾನೆ ಎಂದರು ಸರಿಯೇ. ಅವನಿಗೆ ಪ್ರತಿಸಾರಿ ಮಕ್ಕಳ ಬಳಿ ತನ್ನ ಬಾಯಿಚಪಲದ ಸಲುವಾಗಿ ಕೈ ಚಾಚಿ ನಿಲ್ಲುವುದು ಚೂರು ಸರಿ ಕಾಣುತ್ತಿರಲಿಲ್ಲ. ಅದಕ್ಕೆಂದು ತಾನು ಸಂತೆ ಮುಗಿಸಿ ಬರುವಾಗಲೇ ವ್ಯಾಪಾರ ಚೆನ್ನಾಗಿದ್ದರೆ ಎಳೆ ಕುರಿ ಮಾಂಸವನ್ನು, ಸಾಧಾರಣವಾದರೆ ಕೋಳಿ ಮಾಂಸವನ್ನು, ನೀರಸವಾದರೆ ಹಸಿ ಮೀನು ಅಥವಾ ಒಣ ಮೀನು, ಕರ‍್ಮೀನುಗಳನ್ನೂ ತಪ್ಪದೇ ತರುತ್ತಿದ್ದ. ಬೆಳಗ್ಗೆ, ಮಧ್ಯಾಹ್ನ ಹೊರಗಡೆ ಚೂರುಪಾರು ತಿಂದುಕೊಂಡು ವ್ಯಾಪಾರದಲ್ಲಿ ಇರುತ್ತಿದ್ದವನು ರಾತ್ರಿಗೆ ಮಾತ್ರ ಹೊಟ್ಟೆ ತುಂಬಾ ಒಳ್ಳೆ ಭೋಜನವನ್ನು ಬಯಸುತ್ತಿದ್ದ. ಇದನ್ನು ಅರಿತುಕೊಂಡಿದ್ದ ಬಾನು ಅದಕ್ಕೆ ಮೋಸ ಮಾಡದವಳಂತೆ ಅಡುಗೆ ಸಿದ್ಧ ಪಡಿಸುತ್ತಿದ್ದಳು. ಕಾಸೀಂ ಎಲ್ಲೋ ಅಪರೂಪಕ್ಕೊಮ್ಮೆ ಬಾನು ಒತ್ತಾಯ ಮಾಡಿ ಕೇಳಿದ ಕಾರಣಕ್ಕೆ ಸೊಪ್ಪು, ತರಕಾರಿಗಳ ತರುತ್ತಿದ್ದ. ಇನ್ನೂ ಸಂತೆ ಇಲ್ಲದ ದಿನ ಕಾಸೀಂ ಮನೆಯಂಗಳದಲ್ಲಿ ಉಳಿಯದೆ ಒಬ್ಬನೇ ಗಾಣ, ಎರೆಹುಳಗಳ ಹಿಡಿದು ಮೀನಿನ ಶಿಕಾರಿಗೆ ಹೋಗುತ್ತಿದ್ದ. ಈಡೀ ದಿನ ಅವನಿಗೆ ಅಲ್ಲಿ ಹೊತ್ತು ಕಳೆಯುವುದು ತಿಳಿಯುತ್ತಿರಲಿಲ್ಲ. ಶಿಕಾರಿ ಅವನಿಗೆ ಒಂದು ರೀತಿಯ ತೆವಲಾಗಿತ್ತು. ಹೊಳೆಗಳ ಅಂಚಿನಲ್ಲಿ ಕುಳಿತು ನೀರಿಗೆ ಗಾಳ ಎಸೆದವನು ತಾಸುಗಟ್ಟಲೆ ತಾಳ್ಮೆಯಿಂದ ಕೂತಿರುತ್ತಿದ್ದ. ನಸೀಬಿದ್ದರೆ ಒಳ್ಳೆ ಮೀನುಗಳು ಬೀಳುತ್ತಿದ್ದವು. ಅದರಲ್ಲಿ ಅಪ್ಪಿತಪ್ಪಿ ಸಣ್ಣವು ಸಿಕ್ಕಿ ಬಿದ್ದರೆ `ನಿನಗಿನ್ನೂ ಆಯಸ್ಸಿದೆ ಹೋಗು’ ಎಂದು ನೀರಿಗೆ ಎಸೆಯುತ್ತಿದ್ದ. ದೊಡ್ಡ ಮತ್ತು ಮಧ್ಯಮ ಗಾತ್ರದ ಮೀನುಗಳಷ್ಟೆ ಅವನ ಗುರಿಯಾಗಿತ್ತು. ಬಾನು ಅವನು ತರುವ ಮೀನಿಗೆ ಖಾರ ಕಡೆದು ಇಟ್ಟುಕೊಂಡಿರುತ್ತಿದ್ದಳು. ಈ ಶಿಕಾರಿಯು ಅಷ್ಟೇ ಹಲವು ಸಾರಿ ಸೋವಿಯಾದರೆ, ಕೆಲವು ಬಾರಿ ಅವನು ಬರೀ ಕೈಯಲ್ಲಿ ಹಿಂದಿರುಗುತ್ತಿದ್ದ. ಆಗೆಲ್ಲ ಬಾನು ಸಂಪಾದನೆ, ಅಂಗಡಿಯಿಂದ ಕೋಳಿ ಮಾಂಸ ತರುವ ಮೂಲಕ ಕಾಸೀಂನ ತೃಪ್ತಿ ಪಡಿಸುತ್ತಿತ್ತು.
ಈ ದಿನ ಸಂತೆಯ ವ್ಯಾಪಾರ ಅಷ್ಟಿರಲಿಲ್ಲ. ಕಾಸೀಂ ತಾನು ಮಾರಾಟಕ್ಕೆ ತಂದಿದ್ದ ಊದಿನ ಕಡ್ಡಿಯ ಬಾಕ್ಸ್ ನೋಡಿದ. ಅದರಲ್ಲಿ ಬೆಳಗಿನಿಂದ ಹತ್ತೋ, ಹನ್ನೆರಡೋ ಪ್ಯಾಕ್‌ಗಳ ಹೊರತು ಉಳಿದೆಲ್ಲಾ ಹಾಗೆ ಉಳಿದಿದ್ದವು. ಅವನಿಗೆ ಸಂಪೂರ್ಣ ಒಂದು ಬಾಕ್ಸ್ ಮಾರಿದರೆ ಅಷ್ಟು ಲಾಭವಾಗುತ್ತಿತ್ತು. ಜನರೇಕೋ ಅವನ ಊದಿನ ಕಡ್ಡಿಯ ಕಡೆ ಮನಸ್ಸೇ ಮಾಡುತ್ತಿರಲಿಲ್ಲ. ಕಾಸೀಂ “ಅಮ್ಮಾ ಬನ್ನಿ ತಗೋಳಿ ದೇವ್ರಗಚ್ಚೂ ಘಮಘಮ ಊದಿನ ಕಡ್ಡಿ ಕಡಿಮೆ ಬೆಲೆ ಜಾಸ್ತಿ ಕಡ್ಡಿ. ಎರಡು ಹಚ್ಚಿ ಸಾಕು ದೇವ್ರ ಒಲಿಲಿಲ್ಲ ಕೇಳಿ” ಎಂದು ತನ್ನದೇ ಸಮರ್ಥನೆಗಳ ನೀಡುತ್ತ ವ್ಯಾಪಾರಕ್ಕೆ ಗಿರಾಕಿಗಳ ಕರೆಯುತ್ತಿದ್ದ. ಬಂದವರಿಗೆ ಅಲ್ಲೇ ಸ್ಯಾಂಪಲ್ ಎಂಬಂತೆ ಊದಿನ ಕಡ್ಡಿ ಹಚ್ಚಿ ಸುವಾಸನೆಯ ಪರಿಮಳ ತೋರಿಸುತ್ತಿದ್ದ. ಇದರಿಂದ ಕೆಲವರು ಕೊಳ್ಳುತ್ತಿದ್ದರು. ಇದು ಕಾಸೀಂ ವ್ಯಾಪಾರದಲ್ಲಿ ತೋರುತ್ತಿದ್ದ ಎಂದಿನ ವರಸೆಯಾಗಿತ್ತು. ಬಂದವರಿಗೆ ಇದಕ್ಕಿಂತ ಉತ್ತಮವಾದ ಮತ್ತೊಂದು ಹೆಚ್ಚಿನ ಬೆಲೆಯ ಊದಿನ ಕಡ್ಡಿಗಳು ಅವನ ಬಳಿ ಲಭ್ಯವಿದ್ದವು. ಅದನ್ನು ಕೇಳಿದವರಿಗೆ ತೋರಿಸಿ ಚೌಕಾಸಿ ಮಾಡಿ ಕೊನೆಗೆ ಅವರತ್ತ ದಾಟಿಸುತ್ತಿದ್ದ. ಕಾಸೀಂನ ಮೂಡ್ ಚೆನ್ನಾಗಿದ್ದರೆ `ಘಮಘಮ, ಘಮಘಮ ಘಮ್ಮಾ, ಊದಿನ ಕಡ್ಡಿಯಮ್ಮಾ, ಒಂದಚ್ಚಿದರೆ ಸಾಕಾಮ್ಮಾ, ದೇವರು ಓಡಿ ಬರುವನಮ್ಮಾ’ ಎಂದು ತನ್ನದೇ ರಾಗದಲ್ಲಿ ಲಯ ಮತ್ತು ಪ್ರಾಸಬದ್ಧವಾಗಿ ಹಾಡುತ್ತಿದ್ದ. ಇದನ್ನು ಕೇಳಿದವರಿಗೆ ಒಂದೆಡೆ ನಗುವಾದರೆ, ಮತ್ತೊಂದೆಡೆ ಈ ಪ್ರಾಯದಲ್ಲಿ ಕಾಸೀಂನ ವ್ಯಾಪಾರದ ಉತ್ಸಾಹ ಕಂಡು ಖುಷಿಯಾಗುತ್ತಿತ್ತು. ಬರುವ ಗ್ರಾಹಕರೊಂದಿಗೆ ಲವಲವಿಕೆಯಿಂದಲೆ ನಗುಮುಖದಿಂದ ಚಟುವಟಿಕೆ ನಡೆಸುತ್ತ, ಸಮಾಧಾನವಾಗಿರುತ್ತಿದ್ದ. ಇದರಿಂದ ಅವನಿಗೆ ಒಂದಷ್ಟು ಖಾಯಂ ಗಿರಾಕಿಗಳಿದ್ದರು. ಅವರು ಬಂದು ಇವನಿಂದ ವಾರಕ್ಕೆ, ಹದಿನೈದು ದಿನಕ್ಕೆ ಆಗುವಷ್ಟು ಊದಿನ ಕಡ್ಡಿ ಖರೀದಿಸುತ್ತಿದ್ದರು. ಅವರೊಂದಿಗೆ ಕಾಸೀಂ ಬರೀಯ ವ್ಯಾಪಾರವಲ್ಲದೆ ವೈಯಕ್ತಿಕ ಕಷ್ಟ, ಸುಖಗಳ ವಿಚಾರಿಸಿಕೊಂಡು ತನ್ನ ಸುಖ, ದುಃಖಗಳ ಹೇಳುತ್ತಿದ್ದ. ಇದರಿಂದ ಇಲ್ಲೊಂದು ಸಹಜ ಅನುಬಂಧ ಬೆಳೆದಿತ್ತು. ಇದು ಎಷ್ಟರ ಮಟ್ಟಿಗೆ ಎಂದರೆ ಕಾಸೀಂ ಒಂದು ವಾರ ಸಂತೆ ತಪ್ಪಿಸಿದರೆ “ಆರಾಮ್ ಇದ್ದೀಯಾ ಸಾಬಣ್ಣ ಹೋದವಾರ ಸಂತೇಲಿ ಕಾಣಲಿಲ್ಲ” ಎಂದು ಅವರು, ಅವರು ಬಾರದಿದ್ದರೆ ಕಾಸೀಂ “ಹೋದ ವಾರ ಸಂತೆ ಏನೇನೂ ಚಂದಗಿರಲಿಲ್ಲ ನೀವು ಇರ್ದೇ” ಎಂದು ನಗು ಮುಖದಿಂದ ಹೇಳುತ್ತಿದ್ದ. ಆದ್ದರಿಂದ ಇದು ಬರೀ ವ್ಯಾಪಾರಕ್ಕೆ ಅಷ್ಟೇ ಸೀಮಿತವಾಗಿರಲಿಲ್ಲ.
ಇತ್ತೀಚೆಗೆ ಸಂತೆಯಿಂದ ಹಿಂತಿರುಗುವ ಕಾಸೀಂನಲ್ಲಿ ಒಂದಷ್ಟು ಬದಲಾವಣಿಗಳಾಗಿರುವುದು ಬಾನು ಗಮನಕ್ಕೆ ಬಂದಿತ್ತು. ಅಂಥೆ ಊದಿನ ಕಡ್ಡಿ ವ್ಯಾಪಾರ ಕೂಡ ಅಷ್ಟು ಬಿರುಸಾಗಿರಲಿಲ್ಲ. ಹಿಂದೆಲ್ಲಾ ಯಾವ ಸಂತೆಗೆ ಹೋದರು ಕನಿಷ್ಠ ಎರಡು ಬಾಕ್ಸ್ ಊದಿನ ಕಡ್ಡಿ ಮಾರಿ ಬರುತ್ತಿದ್ದ. ಕಾಸೀಂ ನಸೀಬು ಚೆನ್ನಾಗಿದ್ದರೆ ಅದು ಮೂರಕ್ಕೂ ಏರಿದ ಉದಾಹರಣೆಗಳಿತ್ತು. ಆದರೆ, ಅದೀಗ ಒಂದು ಬಾಕ್ಸ್ ಕೂಡ ದಾಟುತ್ತಿರಲಿಲ್ಲ. ಸಾಲದ್ದಕ್ಕೆ ಅದರಲ್ಲೆ ಎಷ್ಟೋ ಉಳಿದು ಬಿಡುವುದರಿಂದ ಬಾನು ಮನೆಯಲ್ಲಿ ಊದಿನ ಕಡ್ಡಿ ಉಜ್ಜುವುದನ್ನು ಹಳೇಯ ಸ್ಟಾಕ್ ಉಳಿದ ಕಾರಣ ಆದಷ್ಟು ಕಡಿಮೆ ಮಾಡಿದ್ದಳು. ಈ ಕುರಿತು ಕಾಸೀಂಗೆ ಬಾನು “ಯಾಕೆ ವ್ಯಾಪಾರ ಮೊದಲ್ಲಗಿಂಲ್ವಾ? ಒಯ್ದಿದ್ದೆಲ್ಲಾ ಹಂಗೇ ತಂದಿದ್ದೀರಿ. ಕಡ್ಡೀ ಇನ್ನುಷ್ಟು ಜಾಸ್ತಿ ಹಾಕಿ ಪ್ಯಾಕ್ ಮಾಡ್ಲಾ, ಎರಡು ರೂಪಾಯಿ ಕಮ್ಮಿಯಾದ್ರು ಪರವಾಗಿಲ್ಲ ಮಾರೋದುತಾನೇ. ಎಲ್ಲಾ ದೇವ್ರ ಸೇವೆಗೆ ಅಲ್ವಾ” ಎಂದು ಪ್ರಶ್ನೆಗಳ ಸುರಿಸುತ್ತಿದ್ದರೆ, ಕಾಸೀಂ ಮ್ಲಾನನಾಗಿ ತೊಟ್ಟ ಪೈಜಾಮ ಕಳಚಿ ಕೈ, ಕಾಲು, ಮುಖ ತೊಳೆದು ಪಂಚೆ ಉಟ್ಟುವನು “ಬಿಲ್‌ಕುಲ್ ಇದು ಆ ಕಾಲ ಅಲ್ಲ. ಹೋಯ್ತು ಅದು. ಆದ್ರೂ ಹಳೇ ಗಿರಾಕಿಗಳಿರೋದರಿಂದ ಮೋಸ ಇಲ್ಲ. ನಿನ್ನ ಊದಿನ ಕಡ್ಡಿಗೂ ಈಗ ಜಾತಿ, ಧರ್ಮ ಅನ್ನೋ ಸಗಣಿ ಅಂಟಿಕೊಂಡಿದೆ. ಇದ್ನ್ ಆ ದೇವ್ರು ಕೇಳಿದ್ದನೋ, ಈ ಜನ ಮಾಡಿಟ್ಟರೋ ತಿಳಿಯೋಲ್ಲದು. ಜನ ಈಗ ಕಡ್ಡಿ ಕೊಳ್ಳೋ ಮುಂಚೆ ನನ್ನ ಮುಖ ನೋಡ್ತಾರೆ. ಯಾವ ಜನ ಅಂತ ಪತ್ತೆ ಮಾಡಿ, ಯೋಚ್ನೇ ಮಾಡ್ತಾರೆ. ನನಗೆ ಜೀವ ತಣ್ಣಗಾಗುತ್ತೆ” ಎನ್ನುತ್ತಿದ್ದಂತೆ ಕಾಸೀಂಗೆ ತನ್ನ ಈಚಿನ ಸಂತೆ ವ್ಯಾಪಾರದ ಕಹಿ ಅನುಭವ ಹೆಚ್ಚು ನೋವು ತರಿಸುವಂತೆ ಕಂಡಿತ್ತು. ಅದರಲ್ಲೂ ಕೆಲವು ಕಿಡಿಗೇಡಿಗಳು ಅವನಿಗೆ ಬೇಕೆಂದೆ ಈ ಸಂತೆಯಲ್ಲಿ ಊದಿನ ಕಡ್ಡಿ ವ್ಯಾಪಾರ ಮಾಡದಂತೆ ಬೆದರಿಕೆ ಒಡ್ಡುತ್ತಿದ್ದರು. ಕಾಸೀಂ ಇದಕ್ಕೆ ಅಷ್ಟು ಸುಲಭವಾಗಿ ಬಗ್ಗುವವನಲ್ಲ “ಯಾಕಪ್ಪ ನಾನು ವ್ಯಾಪಾರ ಮಾಡಬಾರ್ದು? ನಾನು ಬದುಕು ಮಾಡಬಾರ್ದಾ? ನನ್ನ ಊದಿನ ಕಡ್ಡಿಲೀ ನೀನು ಕಂಡಿರೋ ತಪ್ಪಾದ್ರು ಏನು?” ಎಂದರೆ ಆತ “ಯ್ಯೋ ಸಾಬ್ರು ನೀನು ನಮ್ಮೋರಿಗ್ಯಾಕೆ ಊದಿನ ಕಡ್ಡಿ ಮಾರೋದು? ನಮ್ಮ ದೇವ್ರಿಗೆ ಇದೆಲ್ಲಾ ಆಗಿ ಬರೋದಿಲ್ಲ” ಎನ್ನುವ ಪ್ರಶ್ನೆ ಉಪೇಕ್ಷೆ ಮಾಡುವಂತಿದ್ದರು, ಇವನಿಗೆ ಇಂದು ತಾನು ಸರಿಯಾಗಿ ಉತ್ತರಿಸದೆ ಹೋದರೆ ಕಷ್ಟವೆಂದುಕೊಂಡ ಕಾಸೀಂ ತನ್ನ ಇಷ್ಟು ವರ್ಷಗಳ ಸಂತೆ ವ್ಯಾಪಾರದ ಅನುಭವನ್ನು ಬಳಸಿಕೊಂಡವನು “ನನ್ನ ಕಸುಬಿನಷ್ಟು ನಿನ್ಗೆ ವಯಸ್ಸಾಗಿಲ್ಲ. ಎಳೆ ಪ್ರಾಯ, ಬಿಸಿ ರಕ್ತ. ಮಗಾ ಊದಿನ ಕಡ್ಡಿ ಹಚ್ಚೋರ ಭಕ್ತಿಲೀ ಇರ್ತದೆ, ಮಾರೋನ ಜಾತಿಲೀ ಅಲ್ಲ. ಆ ದೇವ್ರ, ಪ್ರಕೃತಿಗೆ ಇಲ್ದೇ ಇರೋ ಈ ಭೇದ ನಿಮ್ಗೆ ಯಾಕಪ್ಪ? ನಾನು ನಿಮ್ಮಾಗೆ ಮನಸಾ, ಇಲ್ಲಿಂದ ದುಡ್ಕಂಡೋದ್ರೇ ನನಗೆ ಅನ್ನ. ನನ್ನ ಹೊಟ್ಟೆ ಮೇಲೆ ಹೊಡಿಬೇಡ್ರಾಪ್ಪ” ಎಂದು ತನ್ನ ಆಳದ ಕಣ್ಣುಗಳಿಂದ ಜಲ ಉಕ್ಕಿಸುತ್ತ ಬೇಡಿಕೊಂಡಿದ್ದ. ಅವನ ಪರಿಸ್ಥಿತಿ ನೋಡುಗರಿಗೆ ಕರುಳು ಚುರುಕ್ ಎನ್ನುವಂತಿತ್ತು. ಸುತ್ತಲಿನ ವ್ಯಾಪಾರ ಮಾಡುವವರು ಕಾಲದಿಂದ ಕಾಸೀಂನ ಕಂಡ ಕಾರಣ ಅವನ ಬೆಂಬಲಕ್ಕೆ ಬಂದು ನಿಂತರು. ಈ ಗುಂಪಿಗೆ ತಮ್ಮದೇ ಆದ ಜವಾಬ್‌ಗಳ ಜೋರಾಗಿ ನೀಡಲು, ಅವರು ಜನ ಒಟ್ಟಾಗಿ ತಮ್ಮ ವಿರುದ್ಧ ನಿಂತು ದನಿ ಏರಿಸಿ ಪ್ರಶ್ನಿಸಲು ಈ ಕಾರ್ಯವನ್ನು ಸಮರ್ಥಿಸಿಕೊಳ್ಳಲಾಗದೆ ಇಲ್ಲಿ ಬಿಗಡಾಯಿಸುತ್ತಿರುವ ಸನ್ನಿವೇಶವನ್ನು ಕಂಡು ಅಲ್ಲಿಂದ ಸದ್ದಿಲ್ಲಿದೆ ತೆರಳಿದ್ದರು. ಮುಂದೆ ಈ ರೀತಿಯ ಇನ್ನೊಂದು ಘಟನೆ ಈ ಸಂತೆಯಲ್ಲಿ ಮರುಕಳಿಸಲಿಲ್ಲವಾದರು, ಈ ಘಟನೆಯಿಂದ ಸಂತೆಯ ವಾತಾವರಣ ಮಾತ್ರ ಗುರುತಿಸುವಷ್ಟು ಬದಲಾಗಿತ್ತು. ಮನೆಯಲ್ಲಿ ಇದನ್ನು ಕಾಸೀಂ ಹೆಂಡತಿಯೊಂದಿಗೆ ಹಂಚಿಕೊಂಡನಾದರು, ಅವನಿಗೆ ತನ್ನ ಸುತ್ತಲಿನ ಪರಿಸರವನ್ನು ಈ ರೀತಿಯ ವಿಷಗಾಳಿ ಆಗಾಗ ಬೀಸಿ ಕುಲಷಿತ ಮಾಡುತ್ತಿರುವುದರ ಬಗ್ಗೆ ತುಂಬಾ ವಿಷಾದವಿತ್ತು. ಹಿಂದೆಲ್ಲಾ ಎಲ್ಲೋ ಅತಿ ಅಪರೂಪದಂತಿದ್ದ ಈ ಘಟನೆಗಳು ಈಗಾ ಅಲ್ಲಲ್ಲಿ ನಾಯಿಕೊಡೆಯಂತೆ ತಲೆ ಎತ್ತುತ್ತಿರುವುದು ಯಾವುದರ ಸಂಕೇತವೆಂದು ಮಾತ್ರ ಕಾಸೀಂಗೆ ತಿಳಿಯಲಿಲ್ಲ.
ಇನ್ನೂ ಕಾಸೀಂ ಸಂತೆ ಮುಗಿಯುತ್ತಲೆ ಮನೆಗೆ ಬೇಕಾದ ಸಾಮಾಗ್ರಿಗಳ ಸಂತೆಯಲ್ಲಿ ಖರೀದಿಸಿಕೊಂಡು, ಜೊತೆಗೆ ಒಣಮೀನು, ಸಿಗಡಿ, ಉಪ್ಪುಖಂಡಗಳೆಂದು ಕೊಂಡೊಯ್ಯುತ್ತಿದ್ದ. ಅವನ ಬದುಕಿನಲ್ಲಿ ಇದು ಮಾಮೂಲಿಯಾಗಿ ಜರಗುವ ಕ್ರಿಯೆಯಾಗಿತ್ತು. ಬಾನು ರಾತ್ರಿಯ ವೇಳೆ ಇವನ ದಾರಿಯನ್ನೆ ಕಾಯುತ್ತಿದ್ದಳು. ತಿರುವಿನ ಮೂಲೆಯಲ್ಲಿ ಮೊಪೆಡ್‌ನ ಸದ್ದಾಗುತ್ತಲೆ ಅವಳ ಮುಖದಲ್ಲಿ ಸಮಾಧಾನ ಕಾಣುತ್ತಿತ್ತು. ಮನೆ ಬಾಗಿಲಿಗೆ ಬರುತ್ತಲೆ ಗಾಡಿಯಿಂದ ಬಾಕ್ಸ್‌ಗಳ ಎತ್ತಿ ಒಳಗಿಡುವ ಕೆಲಸ ಮಾಡುತ್ತಿದ್ದಳು. ಕಾಸೀಂ ಅಲ್ಲೆ ಜಗುಲಿ ಮೇಲೆ ಕುಳಿತು ಸ್ವಲ್ಪ ಸುಧಾರಿಸಿಕೊಳ್ಳುತ್ತಿದ್ದ. ಬಾನು ಅವನ ಮುಖಭಾವ ನೋಡಿ ಮಾತುಕತೆಯ ವಿಷಯವನ್ನು ನಿರ್ಧಾರ ಮಾಡುತ್ತಿದ್ದಳು. ಈ ದಿನವು ಅವನು ಬಹಳ ಬೇಸರದಲ್ಲಿದ್ದ. ಇದನ್ನು ಕಂಡ ಬಾನು “ನಿಮ್ಗೆ ಆಗಲ್ಲಿಲ್ಲ ಅಂದ್ರೆ ಸಂತೆ ವ್ಯಾಪಾರ ನಿಲ್ಸಿ ಬಿಡಿ ಅಲ್ಲಾ ಮಾಡಿದಾಗೆ ಆಗುತ್ತೆ. ನಮ್ಮ ಮಕ್ಕಳ ಹತ್ರ ಸಹಾಯ ಕೇಳೋಣ. ನೀವು ಹೀಗೆ ವ್ಯಾಪಾರಕ್ಕೆ ಹೋಗಿ ಮನಸ್ಸು ಕೆಡಿಸಿಕೊಂಡು ಬರೋದು ಬೇಡ” ಎಂದಾಗ ಕಾಸೀಂ “ನನಗೆ ವಯಸ್ಸಾಯ್ತೋ, ಇಲ್ಲಾ ಈ ಕಾಲ ಬದಲಾಯ್ತೋ ಒಂದು ತಿಳಿತಿಲ್ಲ. ಈಗ ಜನ ನಾವು ಮೇಲೆ ಬಿದ್ದು ಮಾತಾಡಿಸಿದ್ರು ಮೂಗು ಮೂರಿತಾರೆ” ಅನ್ನುತ್ತಲೇ, ಬಾನು “ಅಂತಾವರ ಹತ್ರ ಮಾತೇಕೆ? ಸುಮ್ನಿದ್ರೇ ಆಯ್ತು”. ಕಾಸೀಂ “ವ್ಯಾಪಾರ ಸುಮ್ನಿದ್ರೆ ಆಗೋಲ್ಲ. ಜನ ಬರಬೇಕು, ಮಾತಾಡಬೇಕು, ಚೌಕಾಸಿ ಮಾಡ್ಬೇಕು, ಒಂದು ಕಾಸು ಹೆಚ್ಚುಕಮ್ಮಿ ಕಡ್ಡೀ ತಗೋಬೇಕು. ಅದೇ ವ್ಯಾಪಾರ. ಈಗ ಸಂತೆಲೀ ಇದೇನು ನಡೆಯಲ್ಲ. ನನಗೆ ಗೊತ್ತು ಇದು ಯಾವುದು ಶಾಶ್ವತ ಅಲ್ಲ; ಕವಿದಿರೋ ಮೋಡ ಅಷ್ಟೇ. ಸರಿತದೇ ಅಲ್ಲಿತನಕ ಇದ್ರೆ, ನಾವು ಸಮಾಧಾನವಾಗಿ ಕಾಯಬೇಕು” ಎನ್ನುತ್ತ ತನ್ನ ಕತ್ತನ್ನು ಆಕಾಶದ ಕಡೆ ಮಾಡಿ ಅಲ್ಲಿ ಮಿನುಗುತ್ತಿದ್ದ ನಕ್ಷತ್ರಗಳ ನೋಡುತ್ತಿದ್ದ. ಅವನ ಮುಖದಲ್ಲಿ ನಿರ್ಲಿಪ್ತಭಾವ ತುಂಬಿದ್ದನ್ನ ಬಾನು ಕಂಡವಳು ಮಾತು ಮುಂದುವರೆಸಲಿಲ್ಲ.
ಕಾಸೀಂ ಸ್ವಭಾವವೇ ಹಾಗೆ ಅವನಿಗೆ ಯಾವಾಗಲು ಮಾತಿಗೆ ಜನ ಬೇಕು. ಅವರೊಂದಿಗೆ ತಾನು ಏನಾದರು ಹರಟುತ್ತಿದ್ದರೆ ಸಾಕು ಬೇರೆನೂ ಬೇಡ. ಅವನ ಸುದೀರ್ಘ ವ್ಯಾಪಾರ ವಹಿವಾಟಿನಲ್ಲಿ ಇದೆಲ್ಲಾ ಬಹುಮುಖ್ಯ ಭಾಗವಾಗಿತ್ತು. ಅಂಥವನಿಗೆ ಈಗ ಮಾತಿಗೆ ಬರಗಾಲ ಬಂದಂತೆ ಪ್ರತಿ ಸಂತೆಯ ವಾತಾವರಣಗಳು ನಿರ್ಮಾಣವಾಗುತ್ತಿದ್ದವು. ಇದೇಕೆಂದು ಅವನಿಗೆ ಈ ಕ್ಷಣಕ್ಕೂ ಅರ್ಥವಾಗಿರಲಿಲ್ಲ. ಜನರೇಕೇ ತನ್ನನ್ನೂ ಆಗುಂತುಕನಂತೆ ಕಂಡು ತನ್ನಿಂದ ಅಂತರ ಕಾಯ್ದುಕೊಳ್ಳುತ್ತಿರುವರೆಂದು ಆಗಾಗ ಯೋಚಿಸುತ್ತಿದ್ದನಾದರು ಅದಕ್ಕೆ ಪೂರಕವೆನಿಸುವ ಉತ್ತರಗಳು ಸಿಗುತ್ತಿರಲಿಲ್ಲ. ಸಂತೆ ಮುಗಿಸಿ ಬರುವಾಗ ಕಾಸೀಂ ಇವತ್ತು ವ್ಯಾಪಾರ ಅಂಥದ್ದು ಏನಿಲ್ಲವಾದರು, ತನಗೆ ಅಪಾರ ಮೀನು ತಿನ್ನುವ ಬಯಕೆಯಾಗಿದೆ. ತನ್ನ ಪೈಜಾಮಾದ ಕಳ್ಳ ಜೇಬಿನೊಳಗೆ ಮುದುರಿ ಮಡಿಸಿಟ್ಟಿದ್ದ ನೂರರ ಒಂದು ನೋಟು ತಗೆದು ಸಂಜೆಯಷ್ಟೇ ಹಿಡಿದು ರಸ್ತೆ ಬದಿಯಲ್ಲಿ ನಿಂತು ಮಾರುತ್ತಿದ್ದ ಜಿಲೇಬಿ ಮೀನುಗಳ ಜತೆ ಬಂದಿದ್ದ. ಈ ಮಾತುಕತೆಯಲ್ಲಿ ಇಬ್ಬರಿಗೂ ಅದರ ಕಡೆ ಗಮನವಿರಲಿಲ್ಲ. ಬಾನುಗೆ ಈಗ ಅದರ ವಾಸನೆ ಸಿಕ್ಕಿತ್ತು. ಅದನ್ನು ಬ್ಯಾಗ್‌ನಿಂದ ತೆಗೆದು ಕ್ಲೀನ್ ಮಾಡಲು ತಂದಳು. ಕಾಸೀಂ ಯಾಂತ್ರಿಕವಾಗಿ ಮುಖಮಜ್ಜನ ಮಾಡಿದವನು ಬಟ್ಟೆ ಬದಲಿಸಿ ಬಂದು ಜಗುಲಿಯ ಮೇಲೆ ಕಾಲುಗಳ ಇಳಿಬಿಟ್ಟು ಕುಳಿತ. ಹೊರಗಡೆ ತುಂಬು ಬೆಳದಿಂಗಳು ಸೊಗಸಾಗಿತ್ತು. ಮನೆ ಅಂಗಳದಲ್ಲಿ ಬಾನು ಬೆಳಸಿದ ಹೂ ಗಿಡಗಳು, ಪರಂಗಿ ಗಿಡ, ನುಗ್ಗೇ ಮರವನ್ನು ಮೊದಲ ಬಾರಿಗೆ ಎಂಬಂತೆ ಕಾಸೀಂ ನೋಡುತ್ತಿದ್ದ. ಅವೆಲ್ಲಾ ಈ ಬೆಳಕಿನಲ್ಲಿ ಅದ್ದಿ ತೆಗೆದಂತಿದ್ದವು. ಅವನ ಮನದಲ್ಲಿ ಈಗ ತೊಳಲಾಡುತ್ತಿದ್ದ ವಿಚಾರಗಳೆಲ್ಲವು ಒಂದು ತಹಬದಿಗೆ ಬಂದಿತ್ತು. ಬಾನು ಮೀನನ್ನು ಉಜ್ಜಿ ಮೇಲಿನ ಸಿಪ್ಪೆ ಎರೆಯುತ್ತಿದ್ದಳು. ಕಾಸೀಂ ಅವಳ ಕೈಗಳನ್ನು ಗಮನಿಸಿದ. ಅದರಲ್ಲಿ ಇಷ್ಟು ವರ್ಷಗಳ ಕಾಲ ಊದಿನ ಕಡ್ಡಿ ಉಜ್ಜಿ ಸವೆದ ಗುರುತುಗಳೊಂದಿಗೆ ಹಸ್ತದ ರೇಖೆಗಳಲ್ಲಿ ದಟ್ಟ ಕಪ್ಪು ಮಸಿ ತುಂಬಿಕೊಂಡಿತ್ತು. ತಾನು ಪ್ರಾಯದಲ್ಲಿ ಕಂಡ ಬಾನು ಈಗ ಆ ರೂಪ, ಲಾವಣ್ಯಗಳ ಕಳೆದುಕೊಂಡು ಸೊರಗಿದವಳಂತೆ ಬಾಗಿದ ಬೆನ್ನಿನ ಮುದುಕಿಯಾಗಿದ್ದಳು. ಅದೇನೂ ಇಂದು ಅವಳ ಮೇಲಿನ ಭಾವನೆಗಳು ಮಮತೆ ಉಳ್ಳವಾಗಿದ್ದವು. ಅವಳಿಗೆ ಹೇಳಲೂ ಕಾಸೀಂನಲ್ಲಿ ಏನೇನೋ ಇತ್ತು ಆದರೆ ಬಾಯಿ ತೆರೆಯಲಿಲ್ಲ. ಬಾನು ಮಾತ್ರ ಇದ್ಯಾವುದನ್ನು ಗಮನಿಸದೆ ಮೀನನ್ನು ಶುಚಿಗೊಳಿಸಿ ಸಾಂಬರ್‌ಗೆ ಸಣ್ಣ ತುಂಡುಗಳಾಗಿ ಕತ್ತರಿಸಿ ಪಾತ್ರೆಗೆ ತುಂಬಿಸಿಕೊಂಡು ಅಡುಗೆಗೆ ಹೊರಟಳು.
ಕಾಸೀಂ ಬಾನು ಮತ್ತೆ ಊಟಕ್ಕೆ ಕರೆಯುವತನಕ ಒಬ್ಬನೇ ಕುಳಿತು ತನ್ನ ತಲೆಯಲ್ಲಿ ಬಂದಿದ್ದನ್ನೆಲ್ಲಾ ಜಗಿಯುತ್ತಿದ್ದ. ಪ್ರತಿ ಸಂತೆಯು ಅವನಿಂದ ಈಗೀಗ ಬಲವಂತವಾಗಿ ಏನನ್ನೂ ಕಸಿದುಕೊಳ್ಳುತ್ತಿತ್ತು. ಆದರೂ ಅಲ್ಲಲ್ಲಿ ಕೆಲವರ ಆಪ್ತತೆ ಈ ನೋವುನ್ನು ಮರೆಸುವಾಗ ತಾನಿನ್ನೂ ಇಲ್ಲಿ ಬದುಕಬಲ್ಲೆನೆಂಬ ಆಶಾವಾದ ಹುಟ್ಟಿಸುತ್ತಿತ್ತು. ತನ್ನ ವೃತ್ತಿಗೆ ಬೇಡ, ವಯಸ್ಸಿಗೂ ಕೂಡ ಮರ್ಯಾದೆ ಕೊಡದ ಕೆಲವರು ಏಕವಚನದಲ್ಲಿ `ಲೇ ಸಾಬಿ’ ಎಂದು ಸಂಬೋಧಿಸುತ್ತ ಪೂರ್ವಗ್ರಹ ಪೀಡಿತರಾಗಿ ವಿನಾಕಾರಣ ಕೈ ಎತ್ತಿ ಹೊಡೆಯಲು ಮುಂದಾದಾಗ ಹೃದಯ ಘಾಸಿಗೊಳ್ಳುತ್ತಿತ್ತು. ಮುಂದೇನಾಗುವುದೋ ಎಂಬ ಭಯದಲ್ಲಿ ನಿಂತಲ್ಲೆ ಜರ್ಜರಿತನಾಗಿ ನಡಗುತ್ತಿದ್ದ. ಈ ಹಿಂಸೆ, ನೋವು ಅವಮಾನಗಳನ್ನು ಅವನಿಗೆ ಸಹಿಸಲಾಗುತ್ತಿರಲಿಲ್ಲ. ಇರುವತನಕ ದುಡಿದು ತಿನ್ನುವ ಅವನ ತತ್ವಕ್ಕೆ ದೊಡ್ಡ ಪೆಟ್ಟು ಬಿದ್ದಂತೆ ಈ ವ್ಯಾಪಾರ, ಸಂತೆ ಎಲ್ಲಾ ಇಲ್ಲಿಗೆ ಸಾಕು ಎನಿಸಿ ಬಿಡುತ್ತಿತ್ತು. ಕಾಲದಿಂದ ಎಂದೂ ಯಾರ ಬಳಿಯು ತಂಟೆ ತಕರಾರುಗಳಿಗೆ ಹೋಗದೆ, ತನ್ನ ಪಾಡಿಗೆ ವ್ಯಾಪಾರ ಮಾಡಿಕೊಂಡು ಬದುಕಿದ್ದವನಿಗೆ ಇದು ಕೆಟ್ಟ ಅನುಭವವಾಗಿತ್ತು. ಇವರೇಕೆ ಹೀಗೆ ತನ್ನನ್ನೂ ದ್ವೇಷಿಸುತ್ತ ಕೆಂಡವಾಗಿದ್ದರೆಂದು ಚಿಂತಿಸುತ್ತಿದ್ದ. ಹಾಗೆ ಅವರೊಂದಿಗೆ ತಿರುಗಿ ಬೀಳಲು ಶಕ್ತಿಯಿರಲಿಲ್ಲ. ಇಂಥಾ ಘಟನೆಗಳು ಅವನಿಗೆ ಕೆಲ ಸಂತೆಯಲ್ಲಿ ಸವಾಲಾಗಿದ್ದವು. ಹಾಗೆಂದು ಈ ಸಂತೆಗಳ ಕಡೆ ಹೋಗುವುದ ನಿಲ್ಲಿಸಿದರೆ ಈ ಕಿಡಿಗೇಡಿಗಳಿಗೆ ಜಯವಾಗವುದೆಂದು ಇದರ ವಿರುದ್ಧ ಸೆಣಸುತ್ತಿದ್ದ. ಈ ಸೆಣಸಾಟದಲ್ಲಿ ಕಾಸೀಂಗೆ ತಾನು ತೀರ ಬಲಹೀನನಾಗಿರುವುದು ತಿಳಿದಿತ್ತು. ಈ ದ್ವೇಷ, ಮತ್ಸರ, ವೈರತ್ವಗಳ ವಿರುದ್ಧ ತನ್ನನ್ನೂ ಕಾಯುವ ಶಕ್ತಿ ಎಂದರೆ ಪ್ರೀತಿ, ಕುರುಣೆ, ಸಹಾನುಭೂತಿಗಳಷ್ಟೆ ಎಂದು ನಂಬಿದ್ದ. ಬಹಳ ಸಮಯದ ನಂತರ ಅಡುಗೆ ಮಾಡಿಟ್ಟು ಮನೆಯೊಳಗಿನಿಂದ ಬಂದ ಬಾನು “ಊಟಕ್ಕೆ ಬನ್ನಿ ತಟ್ಟೆಯಿಟ್ಟಿದ್ದೀನಿ” ಎಂದಳು. ಕಾಸೀಂಗೆ ಮಧ್ಯಾಹ್ನ ಊಟ ಸರಿಯಾಗಿರಲಿಲ್ಲವಾದ್ದರಿಂದ ಹೊಟ್ಟೆ ಚುರುಗುಟ್ಟಿತ್ತು. ತಲೆ ತುಂಬಿದ ಯೋಚನೆಗಳನ್ನು ಹಾಗೆ ಉಳಿಸಿಕೊಂಡು ಎದ್ದು ಒಳಗೆ ನಡೆದ. ಅವನು ಬಾನುವಿನೊಂದಿಗೆ ಸಂತೆಯಲ್ಲಿ ನಡೆಯುವ ಈ ಅನಪೇಕ್ಷಿತ ಮತ್ತು ಕ್ಷುಲ್ಲಕ ವಿಷಯಗಳನ್ನು ಹೆಚ್ಚು ಹಂಚಿಕೊಳ್ಳುತ್ತಿರಲಿಲ್ಲ. ಇದರಿಂದ ಅವಳು ಆತಂಕಗೊಂಡು ಕಳವಳ ಪಡುವಳೆಂದು. ಅವನ ಮಕ್ಕಳಿಗೂ ಈ ವಿದ್ಯಮಾನಗಳು ತಿಳಿದಿತ್ತಾದರು, ಅವರು ಕಾಸೀಂನ ಸಂತೆಗೆ ವ್ಯಾಪಾರಕ್ಕೆ ಹೋಗುವುದು ಬೇಡವೆಂದು ಕಡ್ಡಿ ತುಂಡು ಮಾಡಿದಂತೆ ಹೇಳಿದ್ದರು. ಆದ್ದರಿಂದ ಮತ್ತೆ ಮಕ್ಕಳ ಬಳಿ ಈ ವಿಚಾರವನ್ನು ಕಾಸೀಂ ಚರ್ಚಿಸಲು ಹೋಗಿರಲಿಲ್ಲ. ಊಟಕ್ಕೆ ಕುಳಿತಾಗ ಕಾಸೀಂ ಎದುರಿಗಿನ ಊದಿನ ಕಡ್ಡಿಯ ಶೇಖರಣೆ ನೋಡಿದ. ಅದು ಬೆಟ್ಟದ ಗಾತ್ರದಷ್ಟು ಇರುವಂತೆ ಭಾಸವಾಯಿತು. ಅದನ್ನು ನೋಡುತ್ತಲೆ ತಟ್ಟೆಯ ಮೇಲೆ ಬಾನು ಬಡಿಸುವುದನ್ನು ಗಮನಿಸಲಿಲ್ಲ. ಇಷ್ಟನ್ನೂ ಒಪ್ಪಓರಣಗೊಳಿಸುವಲ್ಲಿನ ಬಾನು ಶ್ರಮ ನೆನಪಾಯಿತು. ಅವಳು ಹೀಗೆ ಕಾಲದಿಂದ ದುಡಿದು, ದುಡಿದೇ ಸವೆದಿದ್ದಳು. ಅವಳ ಮೈಯಲ್ಲಿ ಮೂಳೆ, ಚಕ್ಕಳದ ಹೊರತು ಬೇರೆನಿರಲಿಲ್ಲ. ಕಾಸೀಂನ ಮನಕ್ಕೆ ಇವಳಿಗೆ ಇನ್ನಾದರು ನೆಮ್ಮದಿ ಕೊಡುವ ಎನಿಸಿತು. ಒಮ್ಮೆ ಅವಳನ್ನು ತದೇಕಚಿತ್ತದಿಂದ ನೋಡಿದ. ಮೊದಲೆ ಸಂತೆಯ ಘಟನೆಗಳಿಂದ ವಿಕ್ಷಿಪ್ತಗೊಂಡವನು ಈಗ ತಕ್ಷಣ ಒಂದು ದೃಢ ನಿರ್ಧಾರ ಮಾಡಿದ್ದ. ಬಾನು “ಏನು ನೋಡ್ತೀರಿ ಊಟ ಮಾಡಿ” ಎಂದರೆ ಕಾಸೀಂ ನಿಸ್ತೇಜನಾಗಿ “ನೀನು ಇನ್ನೂ ಈ ಊದಿನ ಕಡ್ಡಿ ಉಜ್ಜೋದು ಬೇಡ. ಇರೋದನ್ನ ಹೇಗೋ ಖಾಲಿ ಮಾಡ್ತೀನಿ. ಅಲ್ಲಿಗೆ ನನ್ನ ಸಂತೆ ವ್ಯಾಪಾರವೂ ಕೊನೆ” ಎಂದಾಗ ಅವನ ಕಣ್ಣಿನ ರೆಪ್ಪೆಗಳಲ್ಲಿ ನೀರಾಡುತ್ತಿತ್ತು. ಬಾನು ಇದನ್ನು ತೀಕ್ಷ್ಣವಾಗಿ ಗಮನಿಸಿದಳು. ಕಾಸೀಂ ತುತ್ತು ಕಲಸಿ ಬಾಯಿಗಿಟ್ಟಿದ್ದ ಕಾರಣ ಬಾನು ಏನು ಮಾತನಾಡಲಿಲ್ಲ. ಅವನ ಈ ನಿರ್ಧಾರದಿಂದಿರುವ ನೋವು, ವಿಷಾದಗಳು ಅವಳನ್ನು ತಾಕದಿರಲಿಲ್ಲ. ಹೀಗಾದರೆ ತಮ್ಮ ಮುಂದಿನ ಜೀವನ ಹೇಗೆ ಎಂಬುದಕ್ಕೆ ಒಮ್ಮೆ ತಾನು ಮಾಡಿದ ಊದಿನ ಕಡ್ಡಿಯ ರಾಶಿಯನ್ನು ಮತ್ತು ಅದರ ಪಕ್ಕಕ್ಕಿದ್ದ ತಾನು ನಿತ್ಯ ತಪ್ಪದೇ ಊದಿನ ಕಡ್ಡಿ ಹಚ್ಚುವ ದೇವರ ಪಟವನ್ನು ನಿರಾಸೆ ಕಂಗಳಿಂದ ನೋಡಿದಳು. ಹೊರಗಡೆ ಬೆಳದಿಂಗಳು ನಿರ್ವಾತ ಸೃಷ್ಟಿಸಿತ್ತು.

ಆರ್. ಪವನ್ ಕುಮಾರ್ ಮೂಲತಃ ಶ್ರೀರಂಗಪಟ್ಟಣದವರು. ಸಿನಿಮಾ ಮತ್ತು ಸಾಹಿತ್ಯ ಇವರ ಆಸಕ್ತಿಯ ಕ್ಷೇತ್ರಗಳು. ಇವರ ಕತೆಗಳು ಮತ್ತು ಬರಹಗಳು ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ