ಈ ಶೋಷಣೆಗಳು ಕಥೆಗಾರನನ್ನು ಕಾಡಿದಾಗ ಹುಟ್ಟುವ ಕಥೆ ಓದುಗನನ್ನೂ ಕಾಡುವಂತೆ ಮಾಡುವುದು ಬರಹಗಾರನ ಸವಾಲು. ಈ ಶೋಷಣೆಗಳಿಗೆ ಹತ್ತುಹಲವು ಮುಖಗಳಿವೆ. ಅವುಗಳಿಂದ ಪಾರಾಗಲೂ ಹತ್ತುಹಲವು ದಾರಿಗಳನ್ನು ಹುಡುಕುತ್ತೇವೆ. ಆ ಶೋಷಣೆಗಳ ವಿರುದ್ಧ ಹೋರಾಡಲು ಯತ್ನಿಸುತ್ತೇವೆ. ಹಾಗಿರುವ ಅನೇಕ ಕಥೆಗಳು ಆಶಾ ಜಗದೀಶ್ ಹೊರತರುತ್ತಿರುವ ಈ ಸಂಕಲನದಲ್ಲಿವೆ. ಸಮಾಜದ ಶ್ರೇಣೀಕೃತ ವ್ಯವಸ್ಥೆ, ಹೆಣ್ಣು ಎಂಬ ಕಾರಣಕ್ಕೆ ಅವಳಿಗೆ ದಕ್ಕಿರುವ ಎರಡನೆಯ ದರ್ಜೆಯ ಸ್ಥಾನಮಾನ, ಅದರಿಂದ ಆಕೆ ಯಾವತ್ತೂ ಅಸಹಾಯಕಳಾಗಿ ಶೋಷಿಸುವ ಗಂಡಿನ ಕೈಕೆಳಗೇ ಬದುಕಬೇಕಾದ ಅನಿವಾರ್ಯತೆ, ಶೋಷಣೆಯನ್ನು ಹಲ್ಲು ಕಚ್ಚಿ ಸಹಿಸಿಕೊಂಡೂ ನಗಬೇಕಾದ ದುಃಸ್ಥಿತಿ ಇವೆಲ್ಲವೂ ಲೇಖಕಿಯನ್ನು ಬಹುವಾಗಿ ಕಾಡಿದೆ.
ಆಶಾ ಜಗದೀಶ್ ಅವರ ‘ಮಳೆ ಮತ್ತು ಬಿಳಿ ಬಟ್ಟೆ’ ಕಥಾಸಂಕಲನಕ್ಕೆ ಮಾಲಿನಿ ಗುರುಪ್ರಸನ್ನ ಬರೆದ ಮಾತುಗಳು

 

ಸುಖವನ್ನಷ್ಟೇ ಹೇಳದ ಕಥೆಗಳು…

ದಿನನಿತ್ಯದ ದಿನಚರಿ ಕಥೆಯಾಗಲಾರದು.. ಅವರು ಸುಖವಾಗಿದ್ದರು ಎಂದು ಹೇಳುವುದು, ಕೇಳುವುದು ಬಹಳ ಖುಷಿಯ ಮಾತೇ ಹೌದಾದರೂ ಅದು ಕಥೆಯಾಗಲಾರದು.. ಅವರು ಸುಖವಾಗಿದ್ದರು ಎಂಬಲ್ಲಿಗೆ ಕಥೆ ಮುಗಿಯುವುದು ವಾಡಿಕೆ. ಹಾಗಾದರೆ ಸುಖವೆನ್ನುವುದು ಕಥೆಯನ್ನು ಸೃಷ್ಟಿಸಲಾರದೆ? ಸದಾ ಸುಖವೆನ್ನುವುದರಲ್ಲಿ ಇರುವುದು ಏರಿಳಿತಗಳಿಲ್ಲದ ಏಕತಾನತೆಯಾ? ಸುಖ ಮುಗಿದು ಸಮಸ್ಯೆ ಆರಂಭವಾದಾಗ ಕಥೆ ಶುರುವಾಗುತ್ತದೆಯಾ? ಸಮಸ್ಯೆ ಮುಗಿದು ಸುಖ ಆರಂಭವಾಗುವಲ್ಲಿ ಕಥೆಯೂ ಮುಗಿಯುವುದಾ? ಕೆಲವು ಸುಖದ.. ಸುಖವನ್ನಷ್ಟೇ ಹೇಳುವ ಕಥೆಗಳೂ ಇಲ್ಲದಿಲ್ಲ. ಆದರೆ ಅವು ಪರಿಣಾಮಕಾರಿಯಾಗಿರಲಾರದು. ಅನುದಿನದ ದಿನಚರಿ ವ್ಯತ್ಯಾಸವಾದಾಗಲೇ ಕಥೆ ಹುಟ್ಟುವುದು. ಸಾಮಾನ್ಯ ದಿನಚರಿಯಲ್ಲಿ ವ್ಯತ್ಯಾಸವಾಗದಿದ್ದರೆ ಕಥೆ ಹುಟ್ಟಲು ಸಾಧ್ಯವೇ ಇಲ್ಲ.

(ಆಶಾ ಜಗದೀಶ್)

ಅನುದಿನದ ದಿನಚರಿ ವ್ಯತ್ಯಾಸವಾಗುವುದಾದರೂ ಹೇಗೆ? ಎಲ್ಲರ ನಡೆನುಡಿಯೂ ಒಂದೇ ರೀತಿ ಇದ್ದಿದ್ದರೆ.. ಎಲ್ಲರ ಸ್ವಭಾವ ಒಂದೇ ಆಗಿದ್ದರೆ ದಿನಚರಿ ಭಂಗವಾಗುವುದಾದರೂ ಹೇಗೆ? ಜಗತ್ತಿನಲ್ಲಿ ಪ್ರತಿಯೊಬ್ಬರ ನಡೆನುಡಿಯೂ ಭಿನ್ನ.. ವಿಭಿನ್ನ.. ಹಾಗಿರುವುದರಿಂದಲೇ ಒಬ್ಬರಿನ್ನೊಬ್ಬರ ನಡುವಣ ಅಭಿಪ್ರಾಯ ಭೇದ .. ಜಗಳ, ಕಿತ್ತಾಟ , ನೋವು, ಅಳು.. ಕಥೆ ಹುಟ್ಟುವುದು ಅಲ್ಲಿಯೇ.. ಕಥೆ ಬೆಳೆಯುವುದೂ ಹಾಗೆಯೇ.. ಹೀಗೆ ಬೆಳೆದ ಕಥೆ ಒಬ್ಬರನ್ನೊಬ್ಬರು ಕ್ಷಮಿಸಿ ಅರ್ಥ ಮಾಡಿಕೊಂಡು ರಾಜಿಯಾದ ಮೇಲೆ “ಸುಖವಾಗಿದ್ದರು” ಎಂಬ ಮಾತಿನೊಂದಿಗೆ ಕಥೆ ಸಮಾಪ್ತಿಯಾಗುವುದು ವಾಡಿಕೆ. ಎಲ್ಲ ಕಥೆಯೂ ಹಾಗಾಗಲೇ ಬೇಕಿಲ್ಲ.. ಎಲ್ಲ ಕಥೆಗಳಿಗೂ ಸುಖಾಂತವಾಗುವ ಭಾಗ್ಯವಿರುವುದಿಲ್ಲ. ಅಂತಹಾ ಕಥೆಗಳೇ ಕಾಡುವುದು. ಯಾರೋ ಯಾರನ್ನೋ ಅಪಾರ್ಥ ಮಾಡಿಕೊಳ್ಳುತ್ತಾರೆ, ಯಾರೋ ನೋಯಿಸುತ್ತಾರೆ.. ನೋವುಣ್ಣುತ್ತಾರೆ .. ಮತ್ಯಾರೋ ಶೋಷಿಸುತ್ತಾರೆ. ಶೋಷಣೆಗೆ ಒಳಗಾದವರ ನೋವು ಯಾರ ಕಣ್ಣಿಗೂ ಕಾಣುವುದಿಲ್ಲ.. ಅವರ ಕಥೆಗಳು ಅವರ ಪಾಲಿನ ವ್ಯಥೆಗಳಾಗೇ ಉಳಿಯುತ್ತವೆ.

ಈ ಶೋಷಣೆಗಳು ಕಥೆಗಾರನನ್ನು ಕಾಡಿದಾಗ ಹುಟ್ಟುವ ಕಥೆ ಓದುಗನನ್ನೂ ಕಾಡುವಂತೆ ಮಾಡುವುದು ಬರಹಗಾರನ ಸವಾಲು. ಈ ಶೋಷಣೆಗಳಿಗೆ ಹತ್ತುಹಲವು ಮುಖಗಳಿವೆ. ಅವುಗಳಿಂದ ಪಾರಾಗಲೂ ಹತ್ತುಹಲವು ದಾರಿಗಳನ್ನು ಹುಡುಕುತ್ತೇವೆ. ಆ ಶೋಷಣೆಗಳ ವಿರುದ್ಧ ಹೋರಾಡಲು ಯತ್ನಿಸುತ್ತೇವೆ. ಹಾಗಿರುವ ಅನೇಕ ಕಥೆಗಳು ಆಶಾ ಜಗದೀಶ್ ಹೊರತರುತ್ತಿರುವ ಈ ಸಂಕಲನದಲ್ಲಿವೆ. ಸಮಾಜದ ಶ್ರೇಣೀಕೃತ ವ್ಯವಸ್ಥೆ, ಹೆಣ್ಣು ಎಂಬ ಕಾರಣಕ್ಕೆ ಅವಳಿಗೆ ದಕ್ಕಿರುವ ಎರಡನೆಯ ದರ್ಜೆಯ ಸ್ಥಾನಮಾನ, ಅದರಿಂದ ಆಕೆ ಯಾವತ್ತೂ ಅಸಹಾಯಕಳಾಗಿ ಶೋಷಿಸುವ ಗಂಡಿನ ಕೈಕೆಳಗೇ ಬದುಕಬೇಕಾದ ಅನಿವಾರ್ಯತೆ, ಶೋಷಣೆಯನ್ನು ಹಲ್ಲು ಕಚ್ಚಿ ಸಹಿಸಿಕೊಂಡೂ ನಗಬೇಕಾದ ದುಃಸ್ಥಿತಿ ಇವೆಲ್ಲವೂ ಲೇಖಕಿಯನ್ನು ಬಹುವಾಗಿ ಕಾಡಿದೆ. ಇದರೊಡನೆ ಮನುಷ್ಯ ಸಹಜ ಸ್ವಭಾವಗಳಲ್ಲಿ ಕಂಡು ಬರುವ ಅಮಾನವೀಯತೆ. ಅನಾದರ್ ಚ್ಯಾನ್ಸ್ ಎಂಬ ಕಥೆಯಲ್ಲಿ ಕಂಡು ಬರುವ ಶೋಷಣೆಗೆ ಲಿಂಗ ತಾರತಮ್ಯವಿಲ್ಲ. ಅಲ್ಲಿ ಆ ಶೋಷಣೆಯಿಂದ ತಪ್ಪಿಸಿಕೊಳ್ಳುವುದು ಸುಲಭ, ಹೊರಬರುವುದು ಮಾನಸಿಕವಾಗಿ ಕಷ್ಟ.. ಅದಕ್ಕೆ ಬೇಕಿರುವುದು ತುಸು ವಿವೇಕ ಅಷ್ಟೇ. ಬಳ್ಳಿ ತೊರೆದ ಮೊಗ್ಗು ಕಥೆಯ ಶೋಷಣೆಯ ರೀತಿಯೇ ಬೇರೆ. ಯಾವ ವ್ಯಭಿಚಾರಕ್ಕೂ ಕಡಿಮೆಯಿಲ್ಲವೆಂದು ಆಕೆ ಭಾವಿಸುವ ಬರಿದೇ ದೇಹಕ್ಕಷ್ಟೇ ಸೀಮಿತವಾದ ಮನಸೊಪ್ಪದ ದಾಂಪತ್ಯ. ಆತನ ಕಣ್ಣಲ್ಲಿ ಯಾವುದು ಅವನ ಅಧಿಕಾರದ ವ್ಯಾಪ್ತಿಯಲ್ಲಿ. ಸಂಬಂಧದ ವ್ಯಾಪ್ತಿಯಲ್ಲಿ ಸಕ್ರಮವೋ. ದೇಹಗಳೊಳಗೆ ಜೀವವೂ ಇದ್ದರಷ್ಟೇ ಅದು ಬಾಂಧವ್ಯ ಎಂದು ನಂಬಿದವಳಿಗೆ ಅದು ಅಕ್ರಮ. ಇಲ್ಲಿ ಆಕೆಗೆ ಗಂಡನ ಕುರಿತು ಆಕ್ರೋಶವಿಲ್ಲ. ಆತನ ಮನಸ್ಥಿತಿಯ ಕುರಿತು ಕನಿಕರ. ಇಲ್ಲಿ ಆಕೆ ಪಾರಾಗುವುದು ಶಾಶ್ವತ ಶೋಷಣೆಯಿಂದಲ್ಲ. ತಾತ್ಕಾಲಿಕ ಸಮಸ್ಯೆಯಿಂದಷ್ಟೇ ಬಿಡುಗಡೆ. ಅದು ಸಹಜ ಕೂಡಾ.

ಇಜ್ಜೋಡು ಕಥೆಯಲ್ಲಿ ಕಾಣಿಸುವ ಶೋಷಣೆ ಕೀಳರಿಮೆಯಿಂದ ಹೊರಹೊಮ್ಮಿದ್ದು. ಮಂಗಳಿ ಬೆಳೆದಂತೆಲ್ಲ ಅವಳ ಕೀಳರಿಮೆಯೂ ಬೆಳೆಯುತ್ತಲೇ ಹೋಗುತ್ತದೆ, ಅವಳನ್ನು ಶೋಷಿಸುವ ಪರಿಯೂ .. ಅಲ್ಲಿನ ಶೋಷಣೆಯನ್ನು ಆಶಾ ಶಾಶ್ವತವಾಗಿ ಪರಿಹರಿಸುವತ್ತ ಹೆಜ್ಜೆಯಿಡುತ್ತಾರೆ. ಪರಿಹರಿಸುವುದೆಂದರೆ ಮತ್ತೊಂದು ಅಂತಹುದೇ ಆಶ್ರಯ ಕಲ್ಪಿಸುವುದಲ್ಲ. ಅಲ್ಲಿನ ಶೋಷಣೆಯ ರೀತಿಯೇ ಬೇರೆ. ಪರಿಹಾರವೂ ಬೇರೆಯೇ.

ರಾಕ್ಷಸನಂತೆ ಶೋಷಿಸಲು ತೊಡೆ ತಟ್ಟಿ ನಿಂತವ ಸುತ್ತಮುತ್ತಲಿನೆಲ್ಲರನ್ನೂ ಶೋಷಿಸಿದರೂ ಕಟ್ಟಕಡೆಗೆ ಎಲ್ಲರಿಂದ ತಿರಸ್ಕೃತನಂತೆ ಬದುಕಬೇಕಾದ… ಸತ್ತ ನಂತರ ಸಮಾಧಿಯೂ ಬೀದಿಪಾಲಾಗಿ ಹೋಗಿ ಬರುವ ವಾಹನಗಳ ಹೊಗೆ ಕುಡಿಯುತ್ತಾ ಇರಬೇಕಾದ ಪರಿಸ್ಥಿತಿ ಶೋಷಣೆಯ ವಿರುದ್ಧ ನಿಂತ ಮತ್ತೊಂದು ರೀತಿ. ಒಂದು ಕಾದಂಬರಿಯಾಗುವಷ್ಟು ತಲೆಮಾರಿನ ಕಥೆ ಹೊತ್ತ ‘ಬಾವಿ’ ಎನ್ನುವ ಈ ಕಥೆಯ ಅಂತ್ಯ ಶೋಷಣೆಯ ವಿರುದ್ಧ ಕಥೆಗಾರ್ತಿಯ ಆಶಯದಂತೆ ಕಾಣುತ್ತದೆ.

(ಮಾಲಿನಿ ಗುರುಪ್ರಸನ್ನ)

ಬಹಳವಾಗಿ ಕಾಡುವುದು ‘ದಾಹ’. ಆ ಕಥೆಯಲ್ಲಿ ತಾಯಿಯ ಗಟ್ಟಿಗತನ.. ಆಕೆಯ ಸಾಮರ್ಥ್ಯ.. ಕೊನೆಗೆ ಆಕೆಯ ಸಾವು.. ಸಾವಿನ ನಂತರದ ಪ್ರಸಂಗಗಳು.. ಶ್ಮಶಾನ ವೈರಾಗ್ಯ ಎಂಬ ಮಾತಿಗೆ ಸಾಕ್ಷಿಯಾಗಬಲ್ಲ ಬದಲಾಗುವ ಮನಸ್ಥಿತಿಗಳು.. ಯಾವುದು ಸತ್ಯ? ಅಮ್ಮನ ಮೇಲಿನ ಪ್ರೀತಿ? ನಂತರದ ನೋವು? ತದನಂತರದ ದುರಾಸೆ? ಮಾನವೀಯ ಮೌಲ್ಯಗಳ ಮರೆತ ಒಡಹುಟ್ಟುಗಳು?.. ಇವೆಲ್ಲವೂ ಸತ್ಯವೇ. ಯಾವುದೂ ಸುಳ್ಳುಗಳಲ್ಲ. ಹೇಳುವ ರೀತಿ ಮಾತ್ರ ದಂಗು ಬಡಿಸುತ್ತದೆ. ಇಲ್ಲಿರುವ ಬಹುತೇಕ ಕಥೆಗಳು ಶೋಷಣೆಯನ್ನು ಬಹಳ ಮನಮುಟ್ಟುವಂತೆ ಚಿತ್ರಿಸಿವೆ. ಅವುಗಳಿಂದ ಹೊರಬರಲು ಇನ್ನಿಲ್ಲದಂತೆ ಹೋರಾಡುವ ಪಾತ್ರಗಳನ್ನೂ ಒಳಗೊಂಡಿದೆ.. ಕೆಲವರು ಅಸಹಾಯಕರಾಗಿ ನಿಟ್ಟುಸಿರಿಟ್ಟು ಕೈ ಚೆಲ್ಲಿದರೆ ಮತ್ತೆ ಕೆಲವರು ತಾತ್ಕಾಲಿವಾಗಿ.. ಮತ್ತೆ ಕೆಲವರು ಶಾಶ್ವತವಾಗಿ ಹೊರಬರುತ್ತಾರೆ..

ಆಶಾ ಪಳಗಿದ ಲೇಖಕಿ. ಅವರ ಪದ್ಯಗಳು, ಅಂಕಣ ಬರಹಗಳು ಎಲ್ಲರಿಗೂ ಚಿರಪರಿಚಿತ.. ಅವರು ಕಥೆಗಳನ್ನೂ ಬರೆಯುತ್ತಿರುವುದು ಬಹಳ ಸಂತಸದ ವಿಷಯ… ಅದರಲ್ಲಿ ಅವರು ಇನ್ನೂ ಹೆಚ್ಚು ಯಶಸ್ಸನ್ನು ಸಾಧಿಸುತ್ತಾರೆ ಎಂಬ ಮಾತಿನ ಬಗ್ಗೆ ನನಗೆ ಅನುಮಾನವಿಲ್ಲ. ಕಥೆಯ ವಸ್ತುವನ್ನು ಆರಿಸುವಾಗ ಕಾದಂಬರಿಯಷ್ಟು ದೊಡ್ಡ ವಸ್ತು ಕೈಗೆತ್ತಿಕೊಂಡರೆ ಕಥೆಯ ಆಶಯ… ಕಥೆಯ ವಸ್ತುವಿನ ಮೇಲಿನ ಫೋಕಸ್ ಇಲ್ಲದಂತಾಗಿ ಬಿಡುವ ಅಪಾಯವನ್ನು ಅವರು ಮನಗಾಣಬೇಕಿದೆ. ಕಥೆ ಕಟ್ಟುವ ರೀತಿಯಲ್ಲಿ ಪಳಗಬೇಕಿದೆ, ಅವರ ಮಿತಿಗಳನ್ನು ಮೀರಿ ನಿಂತು ಅವರು ಬೆಳೆಯಬೇಕಿದೆ. ಪಾತ್ರಗಳನ್ನೂ ಕಟ್ಟುವ ರೀತಿ, ಯಾವ ಪಾತ್ರದ ಪರವಾಗಿಯೂ ನಿಲ್ಲದ ಸಂಯಮ, ನಿರೂಪಣೆಯಲ್ಲಿ ಉಪಯೋಗಿಸಿರುವ ಅವರ ಪ್ರಾಂತೀಯ ಜವಾರಿ ಭಾಷೆ, ಅವರು ಎತ್ತಿಹಿಡಿಯುವ ಸಮಸ್ಯೆಯ ವಿವಿಧ ಮುಖಗಳು… ಎಲ್ಲಎಲ್ಲವೂ ಆಶಾ ಮುಂದೆ ಈ ಕ್ಷೇತ್ರದಲ್ಲಿ ಬೆಳೆಯುವ ಬಗ್ಗೆ ಭರವಸೆ ನೀಡುತ್ತವೆ.

ಶಿಕ್ಷಕಿಯಾಗಿ, ಮನೆವಾರ್ತೆ ನಿಭಾಯಿಸಿ, ಪುಟ್ಟ ಕಂದಮ್ಮನ ದೇಖರೇಖಿಯ ನಡುವೆಯೂ ಆಶಾ ತನ್ನ ಬರವಣಿಗೆಯ ಜವಾಬ್ದಾರಿಯನ್ನು ಹೊಣೆಗಾರಿಕೆಯನ್ನು ಕಡೆಗಣಿಸದ ರೀತಿಯ ಬಗ್ಗೆ ನನಗೆ ಬೆರಗು… ಖುಷಿ… ಆಶಾ ಕನ್ನಡದ ಪ್ರಮುಖ ಕಥೆಗಾರ್ತಿಯಾಗುವ ಎಲ್ಲ ಲಕ್ಷಣಗಳನ್ನೂ ಹೊಂದಿದವರು.. ಹಾಗಾಗಲಿ. ಅವರಿಂದ ಬಹಳ ಮೌಲಿಕವಾದ ಕಥೆಗಳು ಹೊರಬರಲಿ.

 

(ಪುಸ್ತಕ: ಮಳೆ ಮತ್ತು ಬಿಳಿ ಬಟ್ಟೆ (ಕಥಾಸಂಕಲನ) ಲೇಖಕರು: ಆಶಾ ಜಗದೀಶ್, ಪ್ರಕಾಶಕರು: ನೇಕಾರ ಪ್ರಕಾಶನ,  ಬೆಲೆ:170)