“ನಾನು ಯಾರು?!”

ನಾನು ಯಾರಿರಬಹುದು
ಸದಾ ಯೋಚಿಸುತ್ತೇನೆ
ನಾನು ಯಾರು ಹಾಗಾದರೆ
ನನ್ನೊಳಗೆ ಮತ್ಯಾರಾದರೂ…
ಅಥವಾ ನಾನೇ ಇನ್ನಾರೊಳಗಾದರೂ
ಇರಬಹುದು ಇರದೆಯೂ..

ಆ್ಯಶ್ ಟ್ರೇಯೊಳಗೆ ಮೂತಿ ಮುರಿದುಕೊಂಡು
ಬುಸುಗುಡುವ ಹೊಗೆಯ ರಿಂಗುಗಳನ್ನು
ಹುಟ್ಟಿಸುವ ಸಿಗರೇಟಿನ ತುಂಡಿನಂತೆ
ನನಗೇ ಸ್ಪಷ್ಟ ಇಲ್ಲ
ನಿರ್ಧಿಷ್ಟವಾಗಿರುವುದು ಸಾಧ್ಯವಿಲ್ಲದ
ನನಗೆ ಆಕಾರವಿಲ್ಲ

ಹಾಗೆಲ್ಲ ಇದ್ದಕ್ಕಿದ್ದಂತೆ ಯಾವುದೋ ಆಕಾರವನ್ನು
ತಾಳಿಬಿಡುವುದಾದರೂ ಹೇಗೋ ಹೇಳಿ
ಯಾಕೋ ನನಗೆ ಸರಿಕಾಣುವುದಿಲ್ಲ
ನಾನಿರುವಂತೆ ನಾನಿದ್ದರೆ ಮಾತ್ರವೇ ನಾನು
ಇಲ್ಲವಾದರೆ ಅದು ನನ್ನ ನೆರಳೂ ಸಹ ಅಲ್ಲ

ನಾನು ನನ್ನ ದೃಷ್ಟಿಯ ನಾನು ಮಾತ್ರ
ಇನ್ನೊಬ್ಬರ ದೃಷ್ಟಿಯ ನಾನು ನಾನಾದರೂ
ಹೇಗೆ ತಾನೇ ಆಗಬಲ್ಲೆ
ಅವರು ಕುರುಡ ಆನೆಯನ್ನು ತಡವಿ ನೋಡಿದಂತೆ
ನನ್ನನ್ನು ಗ್ರಹಿಸುತ್ತಾರೆ
ನನ್ನ ನಗು, ಅಳು, ಕೋಪ, ಹತಾಶೆ, ನೋವು,
ಸಂಕಟ, ಸ್ವಾರ್ಥ, ಹೊಟ್ಟೆಕಿಚ್ಚು, ಗರ್ವ, ಅಹಂ,
ಒಲವು, ಗೆಳೆತನ…
ಎಲ್ಲವನ್ನೂ ತುಂಡು ತುಂಡಾಗಿ ಉಣ್ಣುತ್ತಾರೆ
ಮತ್ತು ಬಣ್ಣಿಸುತ್ತಾರೆ

ನಾನು ಪ್ರಾಮಾಣಿಕಳು ಮತ್ತದನ್ನು ಜಗತ್ತಿಗೆ
ಒಪ್ಪಿಸುತ್ತೇನೆ ಎಂದು ಹೊರಡುವ ಹುಂಬಳು
ಯಾವ ಹೊತ್ತಿನಲ್ಲಿ ಸಣ್ಣತನವನ್ನು ಖಂಡಿಸುತ್ತೇನೋ
ಅದೇ ವೇಳೆ ನನ್ನೊಳಗೂ ಮಿಡಿನಾಗರಗಳು ಏಳುತ್ತವೆ
ನಾನು ಯಾರನ್ನಾದರೂ ಸುಲಭವಾಗಿ ಪ್ರೀತಿಸುತ್ತೇನೆ
ಕಾರಣ ವಿನಾಕಾರಣ ಪ್ರೀತಿಯ ಮಳೆ ಸುರಿದು
ಪೊರೆದ ಜನರನ್ನು ನಾನು ಕಂಡಿದ್ದೇನೆ
ನಾನು ಎಲ್ಲರನ್ನೂ ನಂಬುತ್ತೇನೆ ಹಾಗಾಗಿ
ಯಾರನ್ನೂ ನಂಬುವುದಿಲ್ಲ
ಕೆಡುಕು ಮಾಡಲಿಕ್ಕೂ ಗೊತ್ತುಂಟು ನನಗೆ
ಅದು ನನ್ನಿಂದ ಸಾಧ್ಯವಿಲ್ಲವಷ್ಟೇ
ತಿರುಗೇಟು ಕೊಡದಷ್ಟು ಹಸು ಸ್ವಭಾವಿಯೇನಲ್ಲ

ಕಾಡು ಝರಿ, ಹುಚ್ಚು ಹೊಳೆ, ಮತಿಗೆಟ್ಟ ನದಿ
ನನ್ನ ಜನಪ್ರಿಯ ರೂಪಕಗಳು
ಕಾಳಿ, ದುರ್ಗಿ, ಚಂಡಿ, ಚಾಮುಂಡಿ…
ಹೋಲಿಸಲಿಕ್ಕುಂಟು ಅಸಂಖ್ಯ ರೂಪಗಳು
ಬೆಂಕಿ, ಜ್ವಾಲೆ, ಕೆನ್ನಾಲಿಗೆ ಏನೇನೋ ಕಪೋಕಲ್ಪಿತ
ಹೆಸರುಗಳು
ನಾನಂತೂ ಇಟ್ಟ ಹೆಸರಿಲ್ಲದವಳು
ಹೋಗಲಿ ನನ್ನ ಹೆಸರು ನಿಮ್ಮಿಚ್ಛೆಯಂತೆ
ಹೆಣ್ಣು ಎನ್ನುವ ರೂಢನಾಮ ಮಾತ್ರ ನನ್ನ ಆತ್ಮದ್ದು

ನಾನು ಮಳೆ
ತೂಕ ಹೊತ್ತು ಧುಮುಕುತ್ತೇನೆ
ಅಪಾರ ಪ್ರೀತಿಯಿಂದ ಅಪ್ಪಳಿಸುತ್ತೇನೆ
ನನಗೆ ಸಾವಿಲ್ಲ ಚಕ್ರವಿದೆ

ಪ್ರೀತಿಸುತ್ತಿದ್ದ ನನ್ನ ಹೃದಯದ ಪ್ರತಿ
ಕೋಣೆಯೊಳಗೂ ಕಿಕ್ಕಿರಿದು ತುಂಬಿದ ಜನ
ಯಾರನ್ನೂ ಹೊರದಬ್ಬದೆ ಸಂಭಾಳಿಸಿದವಳು ನಾನು
ತಂಗಿದವರಲ್ಲಿ ಕೆಲವರು ಯಾತ್ರಿಕರು
ಕೆಲವರು ಮಾಂತ್ರಿಕರು
ಇನ್ನು ಕೆಲವರು ನಕ್ಷತ್ರಿಕರು

ಅದೊಂದು ವಿಧಿಯ ಲೆಕ್ಕಾಚಾರದಂತೆ
ಕರಾರುವಕ್ಕಾಗಿ ನಡೆದ ಘಟನಾವಳಿ
ಇತಿಹಾಸವಾದರೂ ಪ್ರತಿ ಕ್ಷಣದ ಲೆಕ್ಕವಿಡುತ್ತದೆ
ನಾನು ಯಾರೆಂದು ನಿರೂಪಿಸುವ ಕೆಲಸ ನನ್ನದಲ್ಲ
ಇತಿಹಾಸವೇ ಹೇಳುತ್ತದೆ ಮುಂದೊಂದು ದಿನ
ಕ್ಷಣಗಳ ದುಡಿಸಿಕೊಂಡಿದ್ದು ಯಾರು
ಮತ್ತದರ ಕೃಪೆಗೆ ಪಾತ್ರವಾಗಿದ್ದು ಯಾರು
ಎನ್ನುವುದನ್ನು

ನಾನು ಒಳ್ಳೆಯವಳೂ ಅಲ್ಲ ಕೆಟ್ಟವಳೂ ಅಲ್ಲ
ನಾನು ಜ್ಞಾನಿಯೂ ಅಲ್ಲ ಅಜ್ಞಾನಿಯೂ ಅಲ್ಲ
ನಾನು ಅರಿಷಡ್ವರ್ಗಗಳ ದಾಸಿಯೂ ಅಲ್ಲ
ಮೀರಿದವಳೂ ಅಲ್ಲ
ಸಂಸಾರಿಯೂ ಅಲ್ಲ ಸನ್ಯಾಸಿಯೂ ಅಲ್ಲ

ನಿಜ ಹೇಳಬೇಕೆಂದರೆ ನಾನ್ಯಾರೋ
ನನಗೇ ಗೊತ್ತಿಲ್ಲ
ಚಂಚಲತೆ ನನ್ನ ಸ್ವಭಾವವೋ ಗುರುತೋ ಹೆಸರೋ…
ಪ್ರತಿಕ್ಷಣವೂ ಹುಟ್ಟುವ ನನಗಾದರೂ
ಏಕೊಂದು ಸುಳಿವಿರಬೇಕು?!