ಅದೆಷ್ಟು ದಿನ ಚಂಡಿ ಬಟ್ಟೆಯಲ್ಲಿಯೇ ತರಗತಿಗಳನ್ನ ಕೇಳಿದೆವು ನಾವು? ಚಳಿ ಹೆಚ್ಚಾಗಿ ಬಾಟನಿ ಲ್ಯಾಬ್ ಹತ್ತಿರ ಹಾಕುತ್ತಿದ್ದ ಅಗ್ಗಿಸ್ಟಿಕೆ ಬಿಸಿಗೆ ಹೋಗಿ ನಿಲ್ಲುತ್ತಿದ್ದ ದಿನಗಳು ನೆನಪಾಗುತ್ತವೆ. ಆ ಲ್ಯಾಬಿನ ಬಳಿ ಇರುತ್ತಿದ್ದ ಸಿರಿಬಾಯಿ ಅಂಕಲ್ ನಮ್ಮನ್ನು ನೋಡಿದ ಕೂಡಲೆ ಬನ್ನಿ ಬನ್ನಿ ಎಂದು ಕರೆದು ಇನ್ನಷ್ಟು ಇದ್ದಿಲನ್ನು ಹಾಕಿ ಕೆಂಡ ಮಾಡುತ್ತಿದ್ದದ್ದು ಇನ್ನೂ ಕಣ್ಣಿಗೆ ಕಟ್ಟಿದಂತಿದೆ.
ಸುಮಾವೀಣಾ ಬರೆಯುವ “ಕೊಡಗಿನ ವರ್ಷಕಾಲ” ಸರಣಿಯಲ್ಲಿ ಸ್ನೇಹಿತರ ದಿನಕ್ಕೆ ಬರೆದ ಪತ್ರ ಇಲ್ಲಿದೆ
ಪ್ರಿಯ ಹುಚ್ ಕಪಿಗಳೆ,
ಎಲ್ಲೆಲ್ಲಿ…… ಅಂತ ನಿಮ್ಮನ್ನ ಹುಡುಕೋದು. ಇನ್ಸ್ಟ, ಫೇಸ್ಬುಕ್ ಎಲ್ಲಿ ಹುಡುಕಿದರೂ ಸಿಗ್ತಾ ಇಲ್ವೆ ನೀವ್ಗಳು. ಇಂಥ ಸ್ಮಾರ್ಟ್ ಕಾಲದಲ್ಲೂನೂ…..! ಛೇ.. ಲ್ಯಾಂಡ್ ಲೈನ್ ಇದ್ದಾಗ್ಲೆ ಚೆನ್ನಾಗಿತ್ತು. ನಿಮ್ಮ ಒಡನಾಟ ಕಡೆಪಕ್ಷ ಫೋನ್ ಕರೆಯಲ್ಲಿಯಾದರೂ ಇತ್ತು. ಲ್ಯಾಂಡ್ ಲೈನ್ ಹಾಗು ಮೊಬೈಲ್ ಫೋನಿನ ಸಂಧಿಕಾಲದವರು ನಾವು. ಹಾಗಾಗಿ ತ್ರಾಸಾಗುತ್ತಿದೆ. ಈಗ ಎಲ್ಲ ನೆನಪನ್ನೂ ಮೊಬೈಲ್ ಮಾಡಿಕೊಡುತ್ತದೆ.
ಪಿಸುಗುಡುತ್ತಲೇ ಇದ್ದು ಮನದ ಬನಿಯಾಗಿರುವ ಸುನಂದಾ, ನಮ್ ಕಾಲದ ಫ್ಯಾಷನ್ ಡಿಸೈನರ್ ತುಳಸಿ, ಹೊರಗೆ ಬಿಸಿಲಿನ ಕಾವು ಎಷ್ಟು ಏರಿದರೂ ಸದಾ ಕೊಡೆ ಹಿಡಿದೆ ಕೂಲ್ ಇರುತ್ತಿದ್ದ ಕಾವೇರಮ್ಮ, ಕಡೇ ಪಕ್ಷ ಹುಣಸೆ ಬೀಜವನ್ನಾದರೂ ಬಾಯಾಡುತ್ತಿದ್ದ ಕುರುಕಲು ಪ್ರೇಮಿ ಪ್ರೇಮಾ… ಕಾಮಿಡಿ ಮೂಲಕ ಸದಾ ತರಗತಿಯನ್ನು ಹಾಸ್ಯದ ಹೊನಲಿನಲ್ಲಿಯೇ ಇರಿಸುತ್ತಿದ್ದ ರಜನಿ “ನಮ್ಮಮ್ಮಿ ಶಾರದ ಉಮ್ಮಾ ಮಹೇಶ್ವರಿ” ಎನ್ನುತ್ತಲೆ ಗೆಸ್ಟ್ ಅಪಿಯರೆನ್ಸ್ ಕೊಡುತ್ತಿದ್ದ ಶಾರದೆ, ಎಲ್ಲರೆದುರೂ ಸೀತಮ್ಮಾ ಎಂದು ಕರೆಸಿಕೊಂಡು ಮರೆಯಲ್ಲಿ ಮೈನಾ ಹಕ್ಕಿಯಂತೆ ತರಗತಿಯಲ್ಲಿ ಹಾರಿ ಹಾರಿ ರೆಕ್ಕೆ ಬಡಿದಂತೆ ಅಲ್ಲಲ್ಲೆ ಕೂರುತ್ತಿದ್ದ ಮೈನಾ…. ಅಶ್ವಿನಿ, ಮಮತ, ವಿಂಧ್ಯ, ಚಿಕ್ಕಮ್ಮ, ಗೀತಾ, ಚಂದ್ರಕಲಾ, ನೀಲಮ್ಮ ಯಾವಾಗಲೂ ನಗುತ್ತಲೇ ಇರುತ್ತಿದ್ದ ಸುಜಾತ, ನಾಟಿಯಾಗಿದ್ದ ಡಾಟಿ ನಿಮ್ಮೆಲ್ಲರ ನೆನಪು ನನ್ನನ್ನ ಕಾಡುತ್ತಿದೆ.
ನೀವಾದ್ರೂ ಹುಡುಕಬಾರದೆ ನನ್ನನ್ನ. ಗುಂಪು ಗುಂಪಾಗಿ ಕಾಲೇಜಿನಿಂದ ಪ್ರೈವೇಟ್ ಬಸ್ಟ್ಯಾಂಡ್ ತಲುಪುವವರೆಗೂ ನಿಮ್ಮ ವಿರಾಮ ಇರುತ್ತಿರಲಿಲ್ಲ. ನನ್ನನ್ನ ನಮ್ಮನೆ ಹತ್ತಿರ ಬಿಟ್ಟು ನೀವುಗಳು ದಾಟಿ ಹೋಗುತ್ತಿದ್ದೀರಿ…. ಎಲ್ಲಿ ಹೋದಿರಿ ಗೆಳತಿಯರೆ. ಹಚ್ಚಹಸಿರಿನಂಥ ನೆನಪನ್ನು ಹಾಗೆ ಚೆಲ್ಲಿ. ಈಗ ಚೌಕಿ ದೊಡ್ಡದಾಗಿದೆ… ಆಗ ಮುಂಬಾಗಿದ್ದ ಅಂಗಡಿಗಳು ಹೊಟ್ಟೆಯನ್ನು ಒಳಕ್ಕೆ ಎಳೆದುಕೊಂಡು ಟ್ರಿಮ್ ಆಗಿ ಕಾಣುತ್ತಿವೆ.
ಮಡಿಕೇರಿ ಮಳೆಯಬ್ಬರದಲಿ ನಾವ್ ತೋಯ್ದಂತೆ ಆ ದಿನಗಳ ನೆನಪು ತೋಯ್ದಿಲ್ಲ. ನಾವು ಕನ್ನಡ ಆಪ್ಶನಲ್ (ಹೆಚ್.ಕೆ.ಪಿ) ವಿದ್ಯಾರ್ಥಿಗಳು ಅನ್ನುವ ಕಾರಣಕ್ಕೆ ಇಡೀ ಕಾಲೇಜಿನವರಿಗೆ ಪರಿಚಿತವಾಗಿದ್ದೆವು. ಭಾ.ಕಾ.ಮಿ(ಭಾರತೀಯ ಕಾವ್ಯ ಮೀಮಾಂಸೆ) ಕಬ್ಬಿಣದ ಕಡಲೆ ಅಂದುಕೊಂಡಿದ್ದೆವು… ಆದರೆ ಅಷ್ಟು ಕಷ್ಟ ಅಲ್ಲ ಗೊತ್ತ! ನಾವು ಸರಿಯಾಗಿ ಅರ್ಥ ಮಾಡಿಕೊಂಡಿರಲಿಲ್ಲ ಅಷ್ಟೇ, ಅಂತೆಯೇ ಯುರೋಪಿಯನ್ ಹಿಸ್ಟರಿ, ಇಂಟರ್ನ್ಯಾಷನಲ್ ರಿಲೇಷನ್ಸ್ ಪೇಪರ್‌ಗಳೂ ಅಷ್ಟೇ. ಅವೆಲ್ಲಾ ಘಮ್ಮತ್ತಿನ ಪೇಪರ್‌ಗಳು.
ನಮ್ಮ ಸಂಖ್ಯೆ ಕಡಿಮೆ ಅನ್ನುವ ಕಾರಣಕ್ಕೆ ತಿಂಗಳಿಗೊಂದಾವರ್ತಿ ಕ್ಲಾಸ್ ರೂಮ್ ಬದಲಿಸುತ್ತಿದ್ದರು. “ದಡ್ಡತನ ಬೇಕಾದರೂ ಸಹಿಸಬಹುದು ಉದ್ಧಟತನ ಸಹಿಸಲಾಗದು…” ಅನ್ನುತ್ತಿದ್ದ ಜಯಂತಿ ಮೇಡಂ ಅವರ ಮಾತುಗಳು ಈಗ ಹೇಳಿದಂತೆ ಇವೆ. ಎಷ್ಟೇ ತರಲೆ ಕೀಟಲೆ ಮಾಡುತ್ತಿದ್ದರೂ ನಮಗೆ ಪಾಠ ಹೇಳುತ್ತಿದ್ದ ಲೆಕ್ಚರರ್ಸ್ ಬಳಿ ಎಂದಿಗೂ ನಾವು ಬದಲಿ ಹೇಳಿಸಿಕೊಂಡಿಲ್ಲ ಎನ್ನುವ ಸಮಾಧಾನವಿದೆ. ಗಿರೀಶ, ತಿಮ್ಮಯ್ಯ, ಧರ್ಮರಾಜು ನಮ್ಮಬ್ಬರಕೆ ಬಿಡುವಿನ ವೇಳೆಯಲ್ಲಿ ತರಗತಿಯಲ್ಲೇ ಇರುತ್ತಿರಲಿಲ್ಲ. ಕಾರವಾನ್ ಹೊರಟಂತೆ ನಾವು ಕಾಲೇಜಿನ ಕಾರಿಡಾರನ್ನು ಬಳಸುತ್ತಿದ್ದೆವು. ಕಡೆಗೆ ಒಂದು ದಿನ ಮಾಸ್ ಬಂಕ್ ಹಾಕಿ ಆಕಾಶವಾಣಿ, ಕೋಟೆ, ರಾಜಾಸೀಟಿನಲ್ಲಿ ಸ್ವಲ್ಪ ಹೊತ್ತು ಕಳೆದ ಘಳಿಗೆಗಳು ಅಪೂರ್ವವಾಗಿವೆ. ಥಟ್ ಅಂತ ತೋಟಗಾರಿಕೆ ಇಲಾಖೆ ಬಳಿ ಒಮ್ಮೆ ಸಿಕ್ಕ ದಮಯಂತಿ ನಳ ಮಹಾರಾಜನಂಥ ಹುಡುಗ ಸಿಕ್ಕಿದ್ದಾನೆ ಎಂದಿದ್ದಷ್ಟೇ ಗೊತ್ತು. ಝರೀನಾ ನೀನಾದರೂ ಸಿಗಬಾರ್ದೆ?
ಅದೆಷ್ಟು ದಿನ ಚಂಡಿ ಬಟ್ಟೆಯಲ್ಲಿಯೇ ತರಗತಿಗಳನ್ನ ಕೇಳಿದೆವು ನಾವು? ಚಳಿ ಹೆಚ್ಚಾಗಿ ಬಾಟನಿ ಲ್ಯಾಬ್ ಹತ್ತಿರ ಹಾಕುತ್ತಿದ್ದ ಅಗ್ಗಿಸ್ಟಿಕೆ ಬಿಸಿಗೆ ಹೋಗಿ ನಿಲ್ಲುತ್ತಿದ್ದ ದಿನಗಳು ನೆನಪಾಗುತ್ತವೆ. ಆ ಲ್ಯಾಬಿನ ಬಳಿ ಇರುತ್ತಿದ್ದ ಸಿರಿಬಾಯಿ ಅಂಕಲ್ ನಮ್ಮನ್ನು ನೋಡಿದ ಕೂಡಲೆ ಬನ್ನಿ ಬನ್ನಿ ಎಂದು ಕರೆದು ಇನ್ನಷ್ಟು ಇದ್ದಿಲನ್ನು ಹಾಕಿ ಕೆಂಡ ಮಾಡುತ್ತಿದ್ದದ್ದು ಇನ್ನೂ ಕಣ್ಣಿಗೆ ಕಟ್ಟಿದಂತಿದೆ.
ಕಾಲೇಜ್ ಡೇ ಗೆ ತಿಂಗಳುಗಳಿಂದ ಸ್ಯಾರಿ ಹಾಕುವ ತಯಾರಿ ಮಾಡಿಕೊಂಡು ಕಡೆ ದಿನ ಸಲ್ವಾರ್ ತೊಟ್ಟು ಹೋಗುತ್ತಿದ್ದದ್ದನ್ನು ನೆನಪಿಸಿಕೊಂಡರೆ ಮತ್ತೆ ಆ ದಿನಗಳು ಮರಳಿ ಬರಬಾರದೆ ಅನ್ನಿಸುತ್ತದೆ. ತರಗತಿ ನಡು ನಡುವೆ ನೀವು ಪಾಸ್ ಮಾಡುತ್ತಿದ್ದ ಕಿರು ಸಂದೇಶಗಳು ಇನ್ನೂ ನನ್ನಲ್ಲಿ ಇವೆ. ಹಾಡು ಹಳೆಯದಾದರು ಭಾವ ನವನವೀನ ಎಂಬಂತೆ ನೋಟ್ಸಿನ ಹಾಳೆಗಳು ಹಳೆಯವೆ ಆದರೂ ಸಂದೇಶಗಳು ನಗು ತರಿಸುತ್ತವೆ. ಅಂದಿನ ಲವಲವಿಕೆ ಮೌನವಾಗಿದೆ, ನಿಮ್ಮನ್ನೆಲ್ಲಾ ಕಾಣುವ ತವಕ ಇಮ್ಮಡಿಯಾಗಿದೆ. ಮರದಡಿ ಕುಳಿತು ಇಂಟರ್ನಲ್ಸ್‌ಗೆ ಓದುತ್ತಿದ್ದ ದಿನಗಳ ನೆನಪು ಆಹಾ! ಅನ್ನಿಸುತ್ತಿದೆ. ರಾತ್ರಿಯಾದರೂ ಕುಳಿತು ಲಾಂಗ್…. ಅಲ್ಲ! ವೆರಿ ಲಾಂಗ್ ನೋಟ್ಸ್ ಬರೆಯುತ್ತಿದ್ದೆವು. ಈಗಿನವರು ಬರೆ ಜೆರಾಕ್ಸ್, ಪಿಡಿಎಫ್‌ನಲ್ಲಿ ಓದುತ್ತಾರೆ ಗೊತ್ತಾ!
ಆಗ ನಾವು 80 ಮಾರ್ಕ್ಸ್‌ಗೆ ಪರೀಕ್ಷೆ ಬರೆಯುತ್ತಿದ್ದೆವು. ಈಗ ಎನ್.ಈ. ಪಿ ಯವರು 60 ಅಂಕಗಳಿಗೆ ಪರೀಕ್ಷೆ… ನಾವೆಷ್ಟೇ ಬಾಲಿಶ ಅನ್ನಿಸಿದರೂ ನಮ್ಮಲ್ಲಿ ಅಸಾಧ್ಯ ಪೈಪೋಟಿ ಇದ್ದೇ ಇತ್ತು. ಮರೆಯಿಂದ ಲೈಬ್ರರಿಯಿಂದ ಪುಸ್ತಕಗಳನ್ನು ತೆಗೆದುಕೊಂಡು ಓದುವ ಪ್ರಯತ್ನ ಇದ್ದೇ ಇತ್ತು. ಕಾಲೇಜಿನ ಏರು ದಾರಿ ಈಗಿಲ್ಲ… ಅದೀಗ ಸಮತಟ್ಟಾಗಿದೆ. ಮೇನ್ ಗೇಟ್ ಹೊಸದಾಗಿದೆ. ಹೊಸ ಕಟ್ಟಡಗಳು ಇದ್ದ ಖಾಲಿ ಜಾಗವನ್ನು ಆಕ್ರಮಿಸಿಕೊಂಡಿವೆ.
ಕಾಲೇಜು ಫಂಕ್ಷನ್‌ಗಳಲ್ಲಿ ಫೋಟೊ ತೆಗೆಸಿಕೊಳ್ಳುವುದು ಆ ಫೋಟೊ ಬರುವವರೆಗೂ ಹೇಗ್ ಬಿದ್ದಿರ್ತೀವಿ? ಹೇಗ್ ಬಿದ್ದಿರ್ತೀವಿ? ಎನ್ನುತ್ತಾ ಕಾಯುತ್ತಿದ್ದ ಕುತೂಹಲದ ದಿನಗಳು ಎಷ್ಟಿದ್ದವು. ಈಗ ಫೋಟೊಗಳು ಮೊಬೈಲ್‌ಗೆ ಸೇರುವವರೆಗು ಅಷ್ಟೇ.. ಆನಂತರ ಅದರ ಗಮನವಿರುವುದಿಲ್ಲ. ನೋಟಿಸ್ ಬೋರ್ಡ್ ಹತ್ತಿರ ಗುಂಪು ಕಟ್ಟಿಕೊಂಡು ಯಾರಿಗೂ ಜಾಗ ಬಿಡದೆ ಇರುತ್ತಿದ್ದೆವು. ಈಗೆಲ್ಲಾ ಸಂದೇಶಗಳು ಮೊಬೈಲ್ ಮೂಲಕವೇ ಆಗುತ್ತದೆ. ಶೆಟ್ಟಿ ಬೇಕರಿ, ಕ್ವಾಲಿಟಿ ಫ್ಯಾನ್ಸಿ ಸ್ಟೋರ್ ಕುಸಿತದಿಂದ ಎಲ್ಲಿ ಶಿಫ್ಟ್ ಆಗಿವೆ ಗೊತ್ತಿಲ್ಲ!! ರಂಗೋಲಿ, ಸಿಂಧೂರ್, ಶಾಹಿನ್ಸ್, ಜವಹರ್, ಅರುಣ ಸ್ಟೋರ್, ಮಿಸ್ಬ ಪ್ರಾವಿಷನ್ ಸ್ಟೋರ್ ಈಗ ನೆನಪು ಅಷ್ಟೇ. ಪ್ರೈವೇಟ್ ಬಸ್ ಸ್ಟ್ಯಾಂಡ್ ಈಗ ಡೈರಿ ಫಾರ್ಮ್ ಹತ್ತಿರ ಶಿಫ್ಟ್ ಆಗಿದೆ. ಶಾಂತಿ ನಿಟ್ಟಿಂಗ್, ಕಾಫಿ ವರ್ಕ್ಸ್ ಕುರುಹು ಸಿಗಲಿಲ್ಲ. ಒಮ್ಮೆ ಸಿಗೋಣ… ನಾವೊಬ್ಬೊಬ್ಬರೆ ಎಲ್ಲಾ ಕಡೆ ಅಡ್ಡಾಡಬಹುದು. ದಸರಾಕ್ಕೆ ಬಂದಾಗಲೆಲ್ಲಾ ನಾನು ಮಂಟಪ ನೋಡದೆ, ಕರಗ ನೋಡದೆ ಗುಂಪಲ್ಲಿ ಯಾರಾದರೂ ಸಿಗುವರೆ ಎಂದು ಹುಡುಕಿದ್ದು ಇದೆ, ಶಾರದ ಮಾತ್ರ ಒಮ್ಮೆ ಸಿಕ್ಕಿದ್ದಳು… ಆದರೆ ಹೆಚ್ಚು ಸಮಯ ಒಟ್ಟಿಗೆ ಇರಲಾಗಲಿಲ್ಲ.
ಗೆಳತಿಯರೆ ನೀವೆಲ್ಲಾ ಸೌಖ್ಯವೆಂದು ಭಾವಿಸುವೆ. ಹೆಸರಷ್ಟೇ ನೆನಪು! ವಿಳಾಸ ಗೊತ್ತಿಲ್ಲ! ನಿಮ್ಮನ್ನೆಲ್ಲಾ ಅದೇ ಫೀಲ್ಡ್ ಮಾರ್ಷಲ್ ಕಾರಿಯಪ್ಪ ಕಾಲೇಜಿನ ಗ್ಯಾಲರಿ ಕ್ಲಾಸಿನಲ್ಲಿ, ಕನ್ನಡ ಡಿಪಾರ್ಟ್ಮೆಂಟಿನ ಪಕ್ಕದ ಕ್ಲಾಸಿನಲ್ಲಿ, ವಿಶಾಲವಾದ ಆಡಿಟೋರಿಯಮ್‌ನಲ್ಲಿ ಮತ್ತೆ ಭೇಟಿಯಾಗಲು ಮನಸ್ಸು ತುಡಿಯುತ್ತಿದೆ. ಕಿರಿದಾದ ಕಾಲೇಜು ರಸ್ತೆಯಲ್ಲಿ ಹಿರಿದಾದ ನಮ್ಮ ಸ್ನೇಹ ಪಯಣ ಒಮ್ಮೊಮ್ಮೆ ಸುರುಳಿಯಂತೆ ತೆರೆಯುತ್ತದೆ. ಧೂಪ ಧೂಮದಂತೆ ಅನತಿ ದೂರ ಸಾಗಿ ಸುರುಳಿಗೊಂಡು ವಾಯು ವಿಲೀನವಾಗುತ್ತದೆ. ಕೊರೊನಾ ಕಾಲದಲ್ಲಿ ಇಬ್ಬರು ಸ್ಕೂಲ್ ಮೇಟ್‌ಗಳು ಇನ್ನಿಲ್ಲವಾದರು ಎಂದು ತಿಳಿದಾಗ ತುಂಬಾ ವ್ಯಥೆಯಾಯಿತು.
ನಿಮ್ಮ ಹಳೆಯ ಮುಖವರಸೆ ಕೊಂಚ ಬದಲಾಗಿರಬಹುದು. ಸಪೂರವಿದ್ದ ನಾವು ಈಗ ಗಾತ್ರ…. ಬಲು ಗಾತ್ರದವರಾಗಿರಬಹುದು. ಆದರೆ ನಮ್ಮ ಸ್ನೇಹದ ಗಾತ್ರ ಕುಗ್ಗಿಲ್ಲ ಎಂದೇ ತಿಳಿಯುವೆ. ಭಲೇ ಜೋಡಿಗಳಾದ ಬಿಪಿ ಶುಗರ್…. ಥೈರಾಡ್‌ನಂಥ ನಕ್ಷತ್ರಿಕರು ನಮ್ಮ ಬೆನ್ನು ಹತ್ತಿರಬಹುದು. ಆದರೆ ನಮ್ಮ ಭಾಂದವ್ಯ ಮೃದು ಮೃದುಲವಾಗಿ ಮತ್ತೆ ನಮ್ಮನ್ನು ಬೆಸೆಯಬಹುದು. ನಮಗೆ ಪಾಠ ಹೇಳಿದ ಸರ್‌ಗಳು ಎಷ್ಟೆಷ್ಟು ದೊಡ್ಡ ಹುದ್ದೆಯಲ್ಲಿದ್ದಾರೆ ಗೊತ್ತ!! ಗಿರೀಶ್ ಸರ್ ಕುವೆಂಪು ಭಾಷಾ ಪ್ರಾಧಿಕಾರದ ಅಧ್ಯಕ್ಷರಾಗಿದ್ದರು, ಸೋಮಣ್ಣ ಸರ್ ಮಂಗಳೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗದ ನಿರ್ದೇಶಕರು, ಧರ್ಮ ಸರ್ ಪರೀಕ್ಷಾಂಗ ರಿಜಿಸ್ಟ್ರಾರ್, ಗಣಪತಿ ಸರ್ ಇತಿಹಾಸ ವಿಭಾಗದ ಮುಖ್ಯಸ್ಥರಾಗಿದ್ದಾರೆ. ಕರುಣಾಕರ್ ಸರ್ ಅರೆಭಾಷೆ ಅಕಾಡೆಮಿಯಲ್ಲಿದ್ದಾರೆ. ಅಂಥವರ ಹತ್ತಿರ ನಾವೆಲ್ಲ ಕಲಿತಿದ್ದೇವೆ.. ಇನ್ನೊಂದು ವಿಷಯ ಗೊತ್ತಾ? ಕೆಂಡಸಂಪಿಗೆಯ ರಷೀದ್ ಸರ್ ಕೂಡ ನಾವು ಕಾಲೇಜು ಬಿಟ್ಟನಂತರ ಅಲ್ಲಿ ಒಂದು ವರ್ಷದ ಇಂಗ್ಲಿಷ್ ಪಾಠ ಮಾಡಿದ್ದಾರೆ…..! ನಾವೆ ಅದೃಷ್ಟವಂತರು ಅಲ್ವೆ. ನಮ್ಮಲ್ಲಿ ಆರೋಗ್ಯಕರ ಪೈಪೋಟಿ ಇತ್ತು. ಹಾಸ್ಯ ಇತ್ತು.. ಆದರೆ ಅಪಹಾಸ್ಯ ಇರಲಿಲ್ಲ. ಓದುವ ಹಂಬಲ ಇತ್ತು.. ಈಗಿರುವಷ್ಟು ಆಗ ಸೌಲಭ್ಯಗಳಿರಲಿಲ್ಲ. ಸ್ನೇಹದ ಸೆಳೆತ ಪ್ರೀತಿಯ ತುಡಿತವಿತ್ತು. ಎಲ್ಲರೂ ಒಂದೇ ಎಂದರೂ ಒಬ್ಬೊಬ್ಬರೂ ವಿಭಿನ್ನವಾಗಿದ್ದೆವು. ಗುಂಪಾಗಿದ್ದೆವು. ಗುಂಪುಗಾರಿಕೆ ಇರಲಿಲ್ಲ. ವಾದಗಳನ್ನು ಮಾಡಿದರೂ ಅತಿರೇಖಕ್ಕೆ ಹೋಗುತ್ತಿರಲಿಲ್ಲ! ವಿವಾದಕ್ಕೆ ಆಸ್ಪದ ಇರಲಿಲ್ಲ. ಮಳೆಗಾಲದ ಗಾಳಿಸದ್ದಿನ ಮರ್ಮರದ ನಡುವೆ ಮತ್ತೊಮ್ಮೆ ಸಿಗುವಿರಿ ಅನ್ನುವ ವಿಶ್ವಾಸವಿದೆ. ಎಲ್ಲರಿಗೂ ಸ್ನೇಹ ದಿನದ ಶುಭಾಶಯಗಳು.
ಮುಖಾಮುಖಿಯಾಗೋಣ! ಭೇಟಿಯಾಗೋಣ!!
ಇಂತಿ ನಿಮ್ಮ ಸುಮಾ@ಸುಮಾವೀಣಾ
ಹೆಚ್ ಕಪಿಗಳ (ಹೆಚ್.ಕೆ.ಪಿ) 1988ರ ವಿದ್ಯಾರ್ಥಿಗಣ
ಎಫ್.ಎಮ್.ಸಿ ಮಡಿಕೇರಿ
ವೃತ್ತಿಯಿಂದ ಉಪನ್ಯಾಸಕಿ. ಹಲವಾರು ಪತ್ರಿಕೆಗಳಲ್ಲಿ ಇವರ ಲೇಖನಗಳು ಪ್ರಕಟವಾಗಿವೆ. ‘ನಲವಿನ ನಾಲಗೆ’ (ಪ್ರಬಂಧ ಸಂಕಲನ) ‘ಶೂರ್ಪನಖಿ ಅಲ್ಲ ಚಂದ್ರನಖಿ’(ನಾಟಕ) ‘ಮನಸ್ಸು ಕನ್ನಡಿ’ , ‘ಲೇಖ ಮಲ್ಲಿಕಾ’, ‘ವಿಚಾರ ಸಿಂಧು’ ಸೇರಿ ಇವರ ಒಟ್ಟು ಎಂಟು ಪುಸ್ತಕಗಳು ಪ್ರಕಟವಾಗಿವೆ.
ಮೇಡಮ್, ನೆನಪಿನ ಬುತ್ತಿಯ ಅಕ್ಕರೆಯ ಬರಹ. ಶಾಲಾ ದಿನಗಳ ಸವಿ ನೆನಪುಗಳು ಎಂದೆಂದಿಗೂ ಸಿಹಿ ????????