ಚಾರ್ಲ್ಸ್ ಡಾರ್ವಿನ್ ಓದಿದ್ದಾನೆ ಎನ್ನಲಾದ ಕ್ರೈಸ್ಟ್ ಕಾಲೇಜಿಗನೊಳಗೆ ಪ್ರವೇಶಿಸಿದೆ. ಅಲ್ಲಿ ಆತನ ಹತ್ತಾರು ಅಡಿಯಷ್ಟು ದೊಡ್ಡ ಅಮೃತಶಿಲೆಯ ಮೂರ್ತಿ ಇದೆ. ಆ ಕಾಲೇಜಿನಲ್ಲಿ ಓದುತ್ತಿದ್ದಾಗ ಆತ ನುಡಿಸುತ್ತಿದ್ದ ಎನ್ನುವ ಪಿಯಾನೋ ಕೂಡ ಅಲ್ಲಿಯೇ ಇದೆ. ಕಾಲೀಜಿನಲ್ಲಿ ಇದ್ದ ಮಗನನ್ನು ನೋಡಲು ಬಂದಿದ್ದ ಆತನ ತಾಯಿಯ ಎದೆಮಟ್ಟದ ಮೂರ್ತಿಯೊಂದನ್ನೂ ಅಲ್ಲಿ ಇರಿಸಿದ್ದಾರೆ. ಅಲ್ಲಿಗೆ ನಾನು ಹೋಗಿದ್ದಾಗ ಯಾರೂ ಅಂದರೆ ಯಾರೂ ಇರಲಿಲ್ಲ, ಆದರೂ ಯಾವ ಕೋಣೆಯ, ಕಾಲೇಜಿನ ಬಾಗಿಲು ಹಾಕಿರಲಿಲ್ಲ. ಮುಖ್ಯದ್ವಾರದ ಬಳಿ ಒಬ್ಬಾತ ಒಳಹೋಗಲು ಬಯಸುವವರಿಗೆ ಒಂದು ಸಣ್ಣ ಬ್ರೋಷರ್ ಕೊಟ್ಟು ಕಳುಹಿಸುತ್ತಿದ್. ಕಂಡಷ್ಟೂ ಪ್ರಪಂಚ ಅಂಕಣದಲ್ಲಿ ಅಂಜಲಿ ರಾಮಣ್ಣ ಬರಹ.

 

ಈಗ ಕೇಂಬ್ರಿಡ್ಜ್‍ನ Lady Jain Court ಏರಿಯಾದಲ್ಲಿ ನಾನು ಪೇಯಿಂಗ್ ಗೆಸ್ಟ್ ಆಗಿ ಉಳಿದುಕೊಂಡಿರುವುದು ತೃತೀಯ ಲಿಂಗಿ ದಂಪತಿಯೊಬ್ಬರ ಮನೆಯಲ್ಲಿ. ಈ ಇಬ್ಬರು ಗಂಡಸರು ಕಳೆದ ಇಪ್ಪತ್ತು ವರ್ಷಗಳಿಂದ ಮದುವೆಯಾಗಿ ಸಂಸಾರ ನಡೆಸುತ್ತಿದ್ದಾರೆ. ಅಂಗವಿಕಲರ, ತೃತೀಯ ಲಿಂಗಿಗಳ, ಅಲಝಮೀರ್ ಹೊಂದಿರುವ ವ್ಯಕ್ತಿಗಳ ಹಕ್ಕುಗಳ ಬಗ್ಗೆ ವ್ಯಾಸಂಗ ಮತ್ತು ಸಂಶೋಧನೆ ಮಾಡುತ್ತಿದ್ದಾರೆ. ಈ ಭಾನುವಾರ ಅವರ ಜೊತೆ Adoption, Foster care, Sponsorship ವಿಷಯದ ಬಗ್ಗೆ ದೀರ್ಘ ಮಾತುಕತೆ ಆಯಿತು ಕೂಡ.

ಎಷ್ಟೆಲ್ಲಾ ಓದಿದ್ದರೂ ನೋಡಿದ್ದರೂ ಒಡನಾಡಿದ್ದರೂ ತೃತೀಯ ಲಿಂಗಿಗಳನ್ನು, ಅವರ ನಡವಳಿಕೆ ಹಾವಭಾವದ ಸಮೇತ ಕಾನೂನಾತ್ಮಕವಾಗಿ ಮತ್ತು ಸಾಮಾಜಿಕವಾಗಿಯೇ ಆಗಲೀ ಒಪ್ಪಿಕೊಳ್ಳಲು ಇನ್ನೂ ತಿಣುಕಾಡುತ್ತಿರುವವಳು ನಾನು. ಆದರೆ ಇಲ್ಲಿ ಇವರುಗಳ ನಡುವೆ ಎಂದಿನಂತೆ, ತೃಣ ಮಾತ್ರದ ವ್ಯತ್ಯಾಸ ಇಲ್ಲದೆ ಸಹಜ ಸಾಮಾನ್ಯ ರೀತಿಯ ನೆಮ್ಮದಿಯಿಂದ ಇದ್ದೇನೆ. ಅದಿನ್ನೆಷ್ಟು ಆರಾಮವಾಗಿ ಇದ್ದೀನಿ ಎಂದರೆ ಅದೇ ಒಂದು ಕರಣ್ ಜೋಹರ್ ಸಿನೆಮಾದಲ್ಲಿ ಪ್ರಿಯಾಂಕಾ ಚೋಪ್ರಾಳು ಜಾನ್ ಅಬ್ರಹಾಂ ಮತ್ತು ಅಭಿಷೇಕ್ ಬಚ್ಚನ್ ನಡುವೆ ಇರುತ್ತಾಳಲ್ಲ ಅಷ್ಟು ಚಂದವಾಗಿ.

ಇದು ವಿದೇಶ ಎನ್ನುವ ಆಕರ್ಷಣೆಯಿಂದ ಹಾಗಿದ್ದೇನೆ ಎಂದು ಯಾರಾದರೂ ಆರೋಪಿಸಿದರೆ ನಾನೀಗ ಅದನ್ನು ವಿರೋಧಿಸಲು ಹೋಗುವುದಿಲ್ಲ. ಯಾಕೆಂದರೆ ಈ ಬದುಕು ಪರ ವಿರೋಧಗಳ ಆಚೆಯೇ ಇರುವುದು ಎನ್ನುವ ಪಾಠ ಕಲಿಸಿಕೊಟ್ಟಿದೆ. ಊರಿಗೆ ಹಿಂದಿರುಗುವಾಗ ತೃತೀಯ ಲಿಂಗಿಗಳ ಬಗ್ಗೆ ಮಾನವ ಸಹಜ ಅಭಿಪ್ರಾಯವನ್ನು ಹೊಂದಿರುತ್ತೇನೆ ಎನ್ನುವುದಷ್ಟೆ ಈ ದಿನದ ಸಾಧನೆ. ಸಾಮ್ಯತೆ ಎಂದರೆ ಮಾನವೀಯತೆ ಮಾತ್ರ ಎಂದು ಅರಿಯಲು ಇರುವ ಅವಕಾಶ ಈ ಪ್ರವಾಸ.

ಇಲ್ಲಿನ Haffers Book Shop since 1876 ಎನ್ನುವ ಪುಸ್ತಕ ಮಾರಾಟ ಮಳಿಗೆಯಲ್ಲಿ Becoming Michelle Obama ಪುಸ್ತಕ ಕೊಂಡುಕೊಂಡೆ. ಈ ಪುಸ್ತಕ ಹೊರಬಂದಾಗ ಯುವಕನೊಬ್ಬ ಹೇಳಿದ್ದ ‘ತಾನು ಏನನ್ನೂ ಮಾಡದೆಯೇ ಗಂಡ ರಾಷ್ಟ್ರಾಧ್ಯಕ್ಷ ಎನ್ನುವ ಕಾರಣಕ್ಕೆ ಪ್ರಸಿದ್ಧಿ ಪಡೆದು ಬುಕ್ ಬರೆದು ಪ್ರಕಟಿಸಿ ಮೆಚ್ಚುಗೆ ಪಡೆಯುವುದು. ಹೆಂಗಸರ ಜೀವನ ಅದೆಷ್ಟು ಸುಲಭ’ ಎಂದು. ನಾನು ಏನೊಂದು ಉತ್ತರಿಸದೆ ಸುಮ್ಮನಿದ್ದೆ. ಕಾರಣವಿಷ್ಟೇ ಕೆಲವಕ್ಕೆ ಬದುಕು ಮಾತಿನಿಂದ ಆಚೆಯಲ್ಲೂ ಉತ್ತರ ನೀಡಿ ಪಾಠ ಕಲಿಸುತ್ತೆ ಎನ್ನುವುದು ಅಲೆದಾತ ಕಲಿಸಿರುವ ಮತ್ತೊಂದು ಪಾಠ.

ಕೇಂಬ್ರಿಡ್ಜ್‍ನ ರಸ್ತೆಗಳು ಅದೆಷ್ಟು ಶಾಂತ ನಿರಾಳ ಎಂದರೆ ಓಡಾಡುವಾಗ ಪುಸ್ತಕ ಓದುತ್ತಿರಬಹುದು, ಎಲ್ಲಿಯೂ ಢಿಕ್ಕಿ ಹೊಡೆಯುತ್ತೇವೆ ಎನ್ನುವ ಭಯ ಆತಂಕವಿಲ್ಲದೆ. ಹಾಗೇ ಓದುತ್ತಾ ಟ್ರಿನಿಟಿ ಕಾಲೇಜಿನೆಡೆಗೆ ಹೋಗುತ್ತಿದ್ದೆ. ಪುಸ್ತಕದ ಮೊದಲ ಪುಟದಲ್ಲಿ ಮಿಷೆಲ್ ಬರೆಯುತ್ತಾಳೆ “To all the people who have helped me become:……. and finally, Barack, who always promised me an interesting journey” ಈ ಸಾಲನ್ನು ಓದುತ್ತಿದ್ದಂತೆ ಯೋಚಿಸತೊಡಗಿದೆ, ಒಬ್ಬ ಗಂಡ ತನ್ನ ಹೆಂಡತಿಗೆ ಏನೆಲ್ಲಾ ಕೊಡಬಲ್ಲ? ಸುಖ, ಕಷ್ಟ, ಸಂತೋಷ, ಜವಾಬ್ದಾರಿ, ನೆಮ್ಮದಿ, ಕಣ್ಣೀರು ಹೂಂ ಇದೆಲ್ಲವನ್ನೂ. ಎಲ್ಲಕ್ಕಿಂತ ಹೆಚ್ಚಾಗಿ ಅಭದ್ರತೆಯನ್ನು. ಆದರೆ ಆಕೆಗೆ ಆಸಕ್ತಿದಾಯಕ ಜೀವನವನ್ನು ಕೊಡುತ್ತೇನೆ ಎನ್ನುವ ಆಶ್ವಾಸನೆಯನ್ನು ಅರ್ಥೈಯಿಸುವುದು ಹೇಗೆ?!

ಹಾಗಾದರೆ ಗಂಡನು ತನ್ನ ಹೆಂಡತಿಗೆ ಆಸಕ್ತಿದಾಯಕ ಜೀವನ ನೀಡುತ್ತೇನೆ ಎನ್ನುವ ಪ್ರಮಾಣದೊಂದಿಗೆ ಸಪ್ತಪದಿ ತುಳಿಯುವುದು ಹೇಗೆ, ಇದನ್ನು ಹೇಗೆಲ್ಲಾ ದಕ್ಕಿಸಿಕೊಳ್ಳಬೇಕಿದೆ ನನಗೆ ಎಂದುಕೊಳ್ಳುತ್ತಾ ಪುಸ್ತಕದ ಹಾಳೆ ತಿರುವುವಾಗ ಇಲ್ಲಿನ ಭಾರತೀಯ ಮತ್ತು ಪಾಕಿಸ್ತಾನಿ ಹೆಂಗಸರ ಕೂಟದಲ್ಲಿ ಒಂದು ಹಾಸ್ಯ ಪ್ರಚಲಿತದಲ್ಲಿ ಇರುವುದು ನೆನಪಾಗುತ್ತಿದೆ. ಅವರು ದೊಡ್ಡದಾಗಿ ನಗುತ್ತಾ ಹೇಳುತ್ತಾರೆ “ಹೆಂಡತಿ ಆಗುವುದು ಅದರಲ್ಲೂ ಅದೇ ಗಂಡನ ಮಕ್ಕಳಿಗೆ ತಾಯಿ ಆಗುವುದು ಎಂದರೆ ಹುಡುಗಾಟವಲ್ಲ”. ಇದನ್ನು ಕೇಳಿದಾಗ ಹೆಂಗಸರ ಬದುಕು ಸುಲಭ ಎನ್ನುವ ಆ ಯುವಕನ ಮಾತು ನೆನಪಾಗುತ್ತದೆ. ಆಸಕ್ತಿದಾಯಕ ಜೀವನ ಕೊಡುತ್ತೇನೆ ಎಂದು ಪ್ರಮಾಣೀಕರಿಸುವ ಗಂಡಂದಿರನ್ನು ನೋಡುವಾಗ ಜೀವನವು ಜಗತ್ತಿನ ಅಸೀಮ ವ್ಯಾಪ್ತಿಯ ಎಚ್ಚರ ಮೂಡಿಸುತ್ತದೆ.

ಈ ಎಚ್ಚರದೊಂದಿಗೆ ಹೊಕ್ಕಿದ್ದೆ ಟ್ರಿನಿಟಿ ಕಾಲೇಜ್. 1546ರಲ್ಲಿ ಸ್ಥಾಪನೆಗೊಂಡ ಅತ್ಯಂತ ಹಳೆಯ ಕಾಲೇಜುಗಳಲ್ಲಿ ಒಂದು ಟ್ರಿನಿಟಿ ಕಾಲೇಜು. ಕೇಂಬ್ರಿಡ್ಜ್‌ನಲ್ಲಿ ಎಲ್ಲಾ ಕಾಲೇಜುಗಳನ್ನೂ ಹೀಗೇ ಸುಮ್ಮನೆ ಸುತ್ತಿ ಬರಬಹುದು (ಕೆಲವಕ್ಕೆ ಪ್ರವೇಶದರ ಇರುತ್ತದೆ). ಪ್ರಪಂಚದ ಸುಪ್ರಸಿದ್ಧ ಕಾಲೇಜುಗಳಲ್ಲಿ ಯಾವಯಾವ ಮಹನೀಯರು ಓದಿದ್ದಾರೆ, ಅಲ್ಲಿನ ದಿನಚರಿ ಏನು, ಕಾಲೇಜಿನ ಫೀಸ್ ಎಷ್ಟು, ವಾಸ್ತುಶಿಲ್ಪ ಹೇಗೆ, ಪ್ರಯೋಗಾಲಯಗಳು ಏನು ಮಾಡುತ್ತವೆ, ಧಾರ್ಮಿಕತೆಯ ಬಗ್ಗೆ ನಿಲುವು ಮತ್ತು ಸೇವೆ, ಪೇಂಟಿಂಗ್‌ಗಳು, ಶಿಲ್ಪಕಲೆ, ಪಾಠಗಳನ್ನು ಕಲಿಸಿಕೊಡುವ ರೀತಿ ಎಲ್ಲವನ್ನೂ ಗಮನಿಸಬಹುದು.

ಟ್ರಿನಿಟಿ ಕಾಲೇಜಿನಲ್ಲಿ ಓದಿದ್ದು ಸರ್ ಐಸ್ಯಾಕ್ ನ್ಯೂಟನ್. ಅವನ ತಲೆ ಮೇಲೆ ಸೇಬು ಬಿತ್ತೋ ಇಲ್ಲವೋ ಎನ್ನುವುದರ ಬಗ್ಗೆ ಇಲ್ಲಿ ಇನ್ನೂ ಸಂಶೋಧನೆಗಳು ನಡೆಯುತ್ತಿವೆ. ಆದರೆ ನಾವುಗಳು ಭೂಮಿಗೆ ಬಂದ ದಿನದಿಂದಲೂ ಕಲಿಸಲಾಗಿದೆ ಅವನ ತಲೆ ಮೇಲೊಂದು ಸೇಬು ಥಪಕ್ ಅಂತ ಬಿದ್ದಾಗ ತಿಳಿದದ್ದು ಗುರುತ್ವಾಕರ್ಷಣೆ. ಅವನಿಂದಲೇ ಜಗತ್ತಿಗೇ ಅರಿವು ಬಂದಿದ್ದು Every action has an equal and opposite reaction ಎಂದು. ಅದೇ Sir Issac Newton ಓದಿದ Trinity College ಇದು. ಆ ಸೇಬಿನ ಗಿಡದಂತಹ ಮರದ ನಾಲ್ಕನೆಯ ತಲೆಮಾರನ್ನೂ ಇಲ್ಲಿ ಕಾಪಿಟ್ಟಿದ್ದಾರೆ. ಅಂದಹಾಗೆ ನೆಹರು, ರಾಜೀವ್ ಗಾಂಧಿ ಓದಿದ್ದೂ ಇಲ್ಲಿಯೇ. ರಾಹುಲ್ ಗಾಂಧಿಕೂಡ ಇಲ್ಲಿಯೇ ಓದಿದ್ದು ಎನ್ನುತ್ತೆ ಗೂಗಲ್. ಆದರೆ ಅದರ ಬಗ್ಗೆ ಇಲ್ಲಿ ಕಾಲೇಜಿನಲ್ಲಿ ಯಾವುದೇ ಮಾಹಿತಿ ಸಿಗಲಿಲ್ಲ. ಪ್ರತೀ ಕ್ರಿಯೆಗೂ ಒಂದು ಪ್ರತಿಕ್ರಿಯೆ ಇದ್ದೇ ಇರುತ್ತದೆ ಎನ್ನುವ ನ್ಯೂಟನ್ ಆ ಸೇಬಿನ ಮರದ ಬಳಿ ನಾನು ಸೆಲ್ಫಿ ತೆಗೆದುಕೊಳ್ಳಲು ಪಟ್ಟ ತೀರು ನೋಡಿದ್ದಿದ್ದರೆ ಅದಿನ್ನೆಷ್ಟು ನಿಯಮಗಳನ್ನು ಹೊಸದಾಗಿ ನೀಡುತ್ತಿದ್ದನೋ!

 

ಅಲ್ಲಿಂದ ಸೀದಾ ನಡೆದದ್ದು ಚಾರ್ಲ್ಸ್ ಡಾರ್ವಿನ್ ಓದಿದ್ದಾನೆ ಎನ್ನಲಾದ ಕ್ರೈಸ್ಟ್ ಕಾಲೇಜಿಗೆ. ಅಲ್ಲಿ ಆತನ ಹತ್ತಾರು ಅಡಿಯಷ್ಟು ದೊಡ್ಡ ಅಮೃತಶಿಲೆಯ ಮೂರ್ತಿ ಇದೆ. ಆ ಕಾಲೇಜಿನಲ್ಲಿ ಓದುತ್ತಿದ್ದಾಗ ಆತ ನುಡಿಸುತ್ತಿದ್ದ ಎನ್ನುವ ಪಿಯಾನೋ ಕೂಡ ಅಲ್ಲಿಯೇ ಇದೆ. ಕಾಲೀಜಿನಲ್ಲಿ ಇದ್ದ ಮಗನನ್ನು ನೋಡಲು ಬಂದಿದ್ದ ಆತನ ತಾಯಿಯ ಎದೆಮಟ್ಟದ ಮೂರ್ತಿಯೊಂದನ್ನೂ ಅಲ್ಲಿ ಇರಿಸಿದ್ದಾರೆ. ಅಲ್ಲಿಗೆ ನಾನು ಹೋಗಿದ್ದಾಗ ಯಾರೂ ಅಂದರೆ ಯಾರೂ ಇರಲಿಲ್ಲ, ಆದರೂ ಯಾವ ಕೋಣೆಯ, ಕಾಲೇಜಿನ ಬಾಗಿಲು ಹಾಕಿರಲಿಲ್ಲ. ಮುಖ್ಯದ್ವಾರದ ಬಳಿ ಒಬ್ಬಾತ ಒಳಹೋಗಲು ಬಯಸುವವರಿಗೆ ಒಂದು ಸಣ್ಣ ಬ್ರೋಷರ್ ಕೊಟ್ಟು ಕಳುಹಿಸುತ್ತಿದ್ದ. ಅಷ್ಟೇ. ಅಲ್ಲಿ ಈಗಲೂ ವಿದ್ಯಾರ್ಥಿಗಳು ಓದುತ್ತಿದ್ದಾರೆ. ವಿಕಾಸ ಎನ್ನುವುದನ್ನು ನಾವಿನ್ನೂ ವಾದದ ಮಟ್ಟದಲ್ಲಿಯೇ ಉಳಿಸಿಕೊಂಡಿದ್ದೇವೆ ಎನ್ನುವುದು ಸದ್ಯ, ಡಾರ್ವಿನ್‌ಗೆ ತಿಳಿಯದೇ ಇದ್ದದ್ದೇ ಒಳಿತಾಯ್ತು ಎನ್ನಿಸಿತು.

ಸಲ್ಮಾನ್ ರಷ್ದಿ, ಅರಬಿಂದೋ ಘೋಷ್ ಇನ್ನೂ ಮುಂತಾದ ಸುಪ್ರಸಿದ್ಧ ವ್ಯಕ್ತಿಗಳು ಓದಿದರು ಎನ್ನುವ ಖ್ಯಾತಿ ಹೊತ್ತ, 1441ರಲ್ಲಿ ಆರಂಭವಾದ ಕಿಂಗ್ಸ್ ಕಾಲೇಜು, ಟ್ರಿನಿಟೀ ಕಾಲೇಜು, ಕ್ರೈಸ್ಟ್ ಕಾಲೇಜು ಇವುಗಳು ಜಗತ್ತಿನಲ್ಲೇ ಅತ್ಯಂತ ದುಬಾರಿ ಸಂಸ್ಥೆಗಳು. ಪವಾಡ ಸದೃಶ ಬುದ್ಧಿ ಇರುವ ಹತ್ತು-ಹನ್ನೆರಡು ವಿದ್ಯಾರ್ಥಿಗಳು ಇಲ್ಲಿ ಈಗ ಓದುತ್ತಿದ್ದರೆ ಹೆಚ್ಚು. ಅವರ ಸಂಪೂರ್ಣ ಎಂದರೆ ಸಂಪೂರ್ಣ ಖರ್ಚನ್ನು ಬ್ರಿಟೀಷ್ ಸರ್ಕಾರವೇ ಭರಿಸಿ ಓದಿಸುತ್ತದೆ. ಅಲ್ಲಿನ ವಿದ್ಯಾರ್ಥಿಗಳು ಫೀಸ್ ಭರಿಸಬೇಕು, ಊಟ ತಿಂಡಿ ಹೊಂದಿಸಬೇಕು, ಮುಂದಿನ ಕೆಲಸ ಹುಡುಕಬೇಕು ಎನ್ನುವ ಯಾವುದೇ ಒತ್ತಡವಿಲ್ಲದೆ ಅಲ್ಲಿ ರಾಜಕುಮಾರನ ಜೀವನ ಶೈಲಿಯಲ್ಲಿ ಓದಬಹುದು. ಆದರೆ ಎಲ್ಲಾ ಸವಲತ್ತುಗಳು ಸಾಲದ ರೂಪದಲ್ಲಿ ಮಾತ್ರ. ಕೆಲಸ ಹಿಡಿದು ನಾಲ್ಕು ವರ್ಷಗಳಿಂದ ಸಾಲ ಹಿಂದಿರುಗಿಸಬೇಕಾದ ಪ್ರಕ್ರಿಯೆ ಪ್ರಾರಂಭ ಆಗುತ್ತದೆ. ಮುಗಿಯುವುದು ಯಾವಾಗ?! ಉಹುಂ, ಸಾಧ್ಯವೇ ಇಲ್ಲ. ಈ ಕಾಲೇಜುಗಳು ಅದೆಷ್ಟು ಕಾಸ್ಟ್ಲಿ ಎಂದರೆ ಯಾವ ವ್ಯಕ್ತಿಯೂ ಜೀವನವಿಡೀ ದುಡಿದರೂ, ಪೂರ್ವಾರ್ಜಿತ ಆಸ್ತಿ ಕೊಚ್ಚಿಹೋಗುವಷ್ಟು ಇಲ್ಲದಿದ್ದರೆ ಸಾಲ ತೀರಿಸಲಾರ. ಖರ್ಚು, ಶುಲ್ಕಕ್ಕೆ ಸಂಬಂಧಪಟ್ಟ ಎಲ್ಲಾ ಮಾಹಿತಿಗಳೂ ಆ ಕಾಲೇಜಿನ ವೆಬ್‌ಸೈಟ್‌ನಲ್ಲಿ ಯಾವುದೇ ಮುಚ್ಚುಮರೆ ಇಲ್ಲದೆ ಕೊಟ್ಟಿದ್ದಾರೆ.

ಜನರಲ್ ಮಾರ್ಕೆಟ್ ಎನ್ನುವ ಸ್ಥಳ ಕೇಂಬ್ರಿಡ್ಜ್‌ನ ಪ್ರಸಿದ್ಧ ಮಾರುಕಟ್ಟೆ. ಮಾರುಕಟ್ಟೆ ಎನ್ನುವ ಪದ ಅದರ ವೈವಿಧ್ಯತೆಯನ್ನು ಕಿರಿದುಗೊಳಿಸಿಬಿಡುತ್ತದೆ. ಅಂತಹ ಸಾಧ್ಯತೆಗಳ ಜಾಗವದು. ಮೊನ್ನೆ ಅದರ ಸುತ್ತು ಬರುವಾಗ ಒಂದು ಶಾಲು ಕೊಂಡುಕೊಂಡೆ. ಹೊರಬರುವಾಗ ಅಂಗಡಿಯ ಮಾಲೀಕ “ನೀ ತೆಗೆದುಕೊಂಡ ಶಾಲು ನಿಜಕ್ಕೂ ತುಂಬಾ ಚೆನ್ನಾಗಿದೆ” ಎಂದ. ಆಗಲೇ ಶುರು ಆಯಿತು ನಮ್ಮಿಬ್ಬರ ನಡುವಿನ ಮುಂದಿನ ಮಾತುಗಳು.

ಆತ ಡೇವಿಡ್ 60 ವರ್ಷ ವಯಸ್ಸಿನವ. ಕಳೆದ 45 ವರ್ಷಗಳಿಂದ ಹೀಗೆ ಇಲ್ಲಿಯೇ ಇದೆ ಅಂಗಡಿ ನಡೆಸುತ್ತಿದ್ದಾನೆ. ನೇರವಾಗಿ ತನ್ನ ಮೊಬೈಲ್ ತೆಗೆದು ಅದರಲ್ಲಿ ಆಗತಾನೆ ಹುಟ್ಟಿದ ಅವಳಿಜವಳಿ ಜೀವಗಳನ್ನು ತೋರಿಸಿದ. ಮೊಬೈಲ್ ಪರದೆಯಿಂದಲೇ ಹಸಿ ಸೌಂದರ್ಯ ಜಿನುಗುತ್ತಿತ್ತು. “ಇದು ನನ್ನ ಮಗಳ ಮಕ್ಕಳು ನೋಡು” ಎಂದು ಆತ ತೋರಿಸುವಾಗ ಅವನ ಕಣ್ಣುಗಳಲ್ಲಿ ತಂದೆಯಾಗಲೀ ತಾತನಾಗಲೀ ಹೆಮ್ಮೆಯಾಗಿರಲಿಲ್ಲ. ಒಬ್ಬ ಅಪ್ಪಟ ಮನುಷ್ಯ ಅವತಾರವಾಗಿದ್ದ. ಮುಂದಿನ ನಿಮಿಷದಲ್ಲಿ ಇನ್ನೊಂದು ಮಗುವಿನ ಫೋಟೋ ತೋರಿಸುತ್ತಾ “ಕಳೆದ ತಿಂಗಳಷ್ಟೇ ತನ್ನ ಮಗನಿಗೆ ಹುಟ್ಟಿದ ಮಗು” ಎಂದ. ಆಗ ಅವನೊಬ್ಬ ಪಾತ್ರಧಾರಿ ಆಗಿರಲಿಲ್ಲ. ಹೊಸ ಹುಟ್ಟಿನೆಡೆಗೆ ಭರವಸೆಯಿಂದ ಎದುರು ನೋಡುವುದು ಸಂತೋಷ ಹಂಚಿಕೊಳ್ಳುವುದು ಇವಿಷ್ಟೇ ಮನುಷ್ಯನ ನಿಜ ಗುಣ ಎನ್ನುವ ನಿರ್ಧಾರಕ್ಕೆ ಇಂಚಿಂಚೇ ನನ್ನನ್ನು ದೂಡುತ್ತಿದ್ದ ಪ್ರವರ್ತಕನಂತೆ ಎನ್ನಿಸುತ್ತಿದ್ದ. ಡೇವಿಡ್ ಈ ವಯಸ್ಸಿನಲ್ಲೂ ತನ್ನ ಅನ್ನ ತಾನೇ ದುಡಿಯುತ್ತಿದ್ದಾನೆ. ಅವನೊಡನೆಯ ಮಾತಿನಿಂದ ಅನ್ನಿಸಿದ್ದು ಹಣವಿದೆ ಎನ್ನುವ ಕಾರಣಕ್ಕೆ ಜಗತ್ತು ಯಾವುದೇ ಅವಕಾಶವನ್ನು ಕೊಡುವುದಿಲ್ಲ. ಬದಲಿಗೆ ಜಾತಿ ಧರ್ಮ ಕೊಂಕುಗಳ ಸಂಕುಚತೆಯಿಂದ ಹೊರಬರಲು ಶಕ್ಯವಿರುವ ಎಲ್ಲಾ ಮನಸ್ಸುಗಳನ್ನು ಜಗತ್ತು ತಾನೇ ಕರೆದು ಅಪ್ಪಿಕೊಳ್ಳುತ್ತದೆ ಎಂದು. ಆಹಾರ ಬಣ್ಣ ವರ್ಗ ಜಾತಿ ಇವುಗಳ ಹೊರಗೆ ನಿಂತು ಜಗತ್ತನ್ನು ನಮ್ಮದೇ ಕಪ್ ಮತ್ತು ಸಾಸರಿನಲ್ಲಿ ಸುರುವಿಕೊಂಡು ಗುಟುಕರಿಸುವ ಸುಖಾನುಭವ ಪಡೆಯುವುದು, ಇಲ್ಲವೇ ನಾಯಿ ತನ್ನ ಬಾಲ ತಾನೇ ಹಿಡಿಯಲು ಸುತ್ತುವಂತೆ ತಿರುತಿರುಗಿ ತಿಪ್ಪೆಯಲ್ಲಿ ಕಾಲಾಡಿಸುವುದು, ಈ ಎರಡೂ ಅವಕಾಶಗಳನ್ನು ಏಕಕಾಲಕ್ಕೆ ನೀಡುವ ನೀಡುವ ಗುರು ಬದುಕು.

ಅಂದಹಾಗೆ 1971 ರವರೆಗೂ ಕೇಂಬ್ರಿಡ್ಜ್‌ನಲ್ಲಿ ಹುಡುಗರ ಕಾಲೇಜಿಗೆ ಹುಡುಗಿಯರು ಸೇರಿಕೊಳ್ಳುವುದಿರಲಿ ಹೋಗುವುದನ್ನೂ ನಿಷೇಧಿಸಲಾಗಿತ್ತು. 1958ರಲ್ಲಿ ಆರಂಭವಾದ Winston Churchill College ಮೊದಲ ಬಾರಿಗೆ ಈ ನಿಷೇಧ ತೆಗೆದು ಹಾಕಿತು. ಕೇಂಬ್ರಿಡ್ಜ್‌ನಲ್ಲಿ ಕೇವಲ 3 ಕಾಲೇಜುಗಳಲ್ಲಿ ಮಾತ್ರ ಕೋ-ಎಜುಕೇಶನ್ ಪದ್ಧತಿ ಇದೆ. ಕೋ-ಎಜುಕೇಷನ್ ಇದ್ದರೆ ಹುಡುಗಿಯರು ಹುಡುಗರ ತದೇಕಚಿತ್ತವನ್ನು ಹಾಳುಗೆಡುವುತ್ತಾರಂತೆ. ಅದಕ್ಕೇ ಈಗಲೂ ಬೇರೆಬೇರೆ ಕಾಲೇಜುಗಳೇ ಸೂಕ್ತ ಎನ್ನುವ ನಂಬಿಕೆ ಇದೆ ಎನ್ನುವ ವಿಷಯವನ್ನು ವಿನ್ಸ್ಟನ್ ಚರ್ಚಿಲ್ ಕಾಲೇಜಿನ ಮಾಹಿತಿ ಪತ್ರಗಳಲ್ಲಿ ಓದಿ ದಂಗಾಗಿ ಹೋದೆ.

Winston Churchill Collgeನಲ್ಲಿ ಭೌತವಿಜ್ಞಾನಿ Lise Meitner ಬಗ್ಗೆ Symposium ಇತ್ತು ಹೋಗಿದ್ದೆ. ಅದೊಂದು ಅದ್ಭುತ ಅನುಭವ. ಅತೀ ಸಣ್ಣ ವಿಷಯದ ಬಗ್ಗೆಯೂ ಗೌರವಯುತವಾದ ವಿಚಾರ ವಿನಿಮಯ ಮಾಡಿಕೊಂಡು ಹೊಸದನ್ನು ನೀಡುವ ಇಲ್ಲಿನ ಜನರ ಮನೋಭಾವ ಮತ್ತು ಅರ್ಹತೆಗೆ ಒಂದು ಸಲಾಂ ಹೇಳಲೇ ಬೇಕು. ಭೌತವಿಜ್ಞಾನ ವಿಭಾಗದಲ್ಲಿ ಮಹಿಳಾ ವಿಜ್ಞಾನಿಗಳು ಅದೆಷ್ಟು ಹಿಂದೆ ಇದ್ದಾರೆ ಎಂದರೆ ಇನ್ನೂ 200 ವರ್ಷಗಳು ಕಳೆಯಬೇಕು ಭೌತವಿಜ್ಞಾನಿಗಳಲ್ಲಿ ಗಂಡು ಹೆಣ್ಣಿನ ಅನುಪಾತ ಸಮವಾಗಲು ಎನ್ನುವ ಪ್ರೊ. Ruth Lewin sime ಅವರ ಮಾತುಗಳು ಅಚ್ಚರಿ, ವಿಷಾದ ಏನನ್ನೂ ಮೂಡಿಸದ ವಾಸ್ತವ ಆಗಿತ್ತು.

ಆ ಕಾಲೇಜಿನಲ್ಲಿ ಮೂರು ದಿನಗಳ ಕಾಲ ಮಹಿಳಾ ವಿಜ್ಞಾನಿಗಳ ಬದುಕು ಮತ್ತು ಕೆಲಸ ಎನ್ನುವ ವಿಷಯದಲ್ಲಿ ರಂಗೋತ್ಸವ ಇತ್ತು. ಇತಿಹಾಸದಿಂದ ಮರೆಯಾಗುತ್ತಿರುವ ಮಹಿಳೆಯರ ಕಥೆಯನ್ನು ರಂಗದ ಮೇಲೂ ತರುವ ತುಡಿತ ಎದ್ದು ಕಾಣುತ್ತಿತ್ತು. Sandra Schuddekopf ಅವರು ನಿರ್ದೇಶಿಸಿದ ನಾಟಕಗಳನ್ನು Anita Zieher ಎನ್ನುವ ಕಲಾವಿದೆ ಏಕಪಾತ್ರಿಯಾಗಿ ಅಭಿನಯಿಸಿದ್ದರು. ಈ ರಂಗೋತ್ಸವಕ್ಕೆ “Curie-Meitner-Lamarr-indivisible” ಎನ್ನುವ ಶೀರ್ಷಿಕೆ ನೀಡಲಾಗಿತ್ತು. ವಿಜ್ಞಾನಿಗಳಾದ Marie Curie, Lise Meitner ಮತ್ತು Hedy Lamarr ಇವರುಗಳನ್ನು ಈ ಬಾರಿ ರಂಗದ ಮೇಲೆ ತರಲು ಆಯ್ಕೆ ಮಾಡಿಕೊಳ್ಳಲಾಗಿತ್ತು. ಪ್ರತೀ ನಾಟಕವೂ 95 ನಿಮಿಷಗಳ ಕಾಲಾವಧಿಯದ್ದಾಗಿತ್ತು.

ಒಬ್ಬಳೇ ಕಲಾವಿದೆ ಪೂರ್ತೀ ನಾಟಕವನ್ನು ಒಂದೇ ಸ್ಟೇಜಿನ ಮೇಲೆ ನಿರ್ಮಿಸಿದ್ದ ಬೇರೆ ಬೇರೆ ಅಂಕಪರದೆಯನ್ನು, ಪರಿಕರಗಳನ್ನು ಬಳಸಿ ಮಾಡುತ್ತಿದ್ದ ನಾಟಕ ಅದು. ರಸಾಯನಶಾಸ್ತ್ರದ ಪ್ರಯೋಗಾಲಯವನ್ನೂ ರಂಗದ ಮೇಲೆ ಸೃಷ್ಟಿಸಲಾಗಿತ್ತು. ವಿಜ್ಞಾನ ನಾಟಕಗಳು ಹೇಗಿತ್ತು ಎನ್ನುವುದನ್ನು ಮಾತುಗಳಲ್ಲಿ ಹೇಳುವ ಪ್ರಯತ್ನವೇ ಸೀಮಾತೀತ ಮೂಢತೆ ಎನ್ನಿಸತ್ತೆ. ಇದನ್ನು ನೋಡುತ್ತಿರುವಾಗ ನಮ್ಮ ಥೇಮಾ ಥಿಯೇಟರ‍್ನ ಸುಷ್ಮಾ ನೆನಪಾಗುತ್ತಿದ್ದರು. ನಂತರ ಅವರಿಗೆ ಸಂದೇಶ ಕಳುಹಿಸಿದ್ದೆ. ರಂಗಸಜ್ಜಿಕೆಯನ್ನು ಹೀಗೆ ಚುರುಕಾಗಿ, ಬೇರೆಬೇರೆ ಹಿನ್ನಲೆಯಲ್ಲಿ ಸುಷ್ಮಾ ಬಹಳ ಚೆನ್ನಾಗಿ ಬಳಸುವುದನ್ನು ಕಂಡಿದ್ದೆ. ಭಾರತೀಯ ಯಾವುದೇ ಭಾಷೆಯಲ್ಲೂ ಇಲ್ಲದ ವಿಜ್ಞಾನ ನಾಟಕಗಳನ್ನು ಮೊದಲ ಬಾರಿಗೆ ಕನ್ನಡದಲ್ಲಿ ಪ್ರಯತ್ನಿಸಲಾಗಿದೆ. ಅದೂ ನನ್ನ ತವರೂರಾದ ಮೈಸೂರಿನಲ್ಲಿ ಎಂದು ಕಳೆದವಾರ ಓದಿದಾಗ ಮತ್ತೊಮ್ಮೆ ಕೇಂಬ್ರಿಡ್ಜಿನಲ್ಲಿ ನೋಡಿದ ಈ ಸರಣಿ ನೆನಪಾಯಿತು.

ಇಲ್ಲಿ ನಾಟಕಗಳು ಆರಂಭಗೊಳ್ಳುವ ಮುನ್ನ ಆಯಾ ವಿಜ್ಞಾನಿಯ ಬಗ್ಗೆ chronological ಆಗಿ ಪ್ರಿಂಟ್ ಮಾಡಿರುವ ಮಾಹಿತಿ ಪತ್ರವನ್ನು ವೀಕ್ಷಕರಿಗೆ ನೀಡುತ್ತಾರೆ. ನಾಟಕದ ನಂತರ ತೆರೆಯ ಹಿಂದಿನ ಮತ್ತು ವೇದಿಕೆಯ ಮೇಲಿನ ಕಲಾವಿದರುಗಳು, ನಿರ್ದೇಶಕರು ಹಾಗೂ ಆ ವಿಷಯದ ಕ್ಷೇತ್ರ ಪರಿಣಿತರ ಜೊತೆ ಸಂವಾದ ಇರುತ್ತದೆ. ಅಲ್ಲದೆ, ಬೇರೆ ಕಡೆ ಆ ನಾಟಕವನ್ನು ಆಡಲು ಬಯಸುವವರು ಹೇಗೆಲ್ಲಾ ಸಿದ್ಧತೆ ಮಾಡಿಕೊಳ್ಳಬೇಕು ಎನ್ನುವ ವಿಷಯವನ್ನೂ ಹೇಳಿಕೊಡುತ್ತಾರೆ. ಹೀಗೆ ನನ್ನ ಕೈಗೆ ಬಂದ ಮಾಹಿತಿ ಪತ್ರದಲ್ಲಿ ಮೂರೂ ಮಹಿಳಾ ವಿಜ್ಞಾನಿಗಳ ಬದುಕಿನ ವಿವರಣೆ ಸರಳವಾಗಿ ಮತ್ತು ಎಷ್ಟು ಬೇಕೋ ಅಷ್ಟು ಇತ್ತು. ಅದರಲ್ಲಿ Hedy Lamarra ಎನ್ನುವ ವಿಜ್ಞಾನಿ ಹೇಳಿದ್ದಾರೆ ಎನ್ನಲಾದ “Any girl can be glamerous. All you have to do is stand still and look stupid” ಎನ್ನುವ ವಾಕ್ಯ ನನ್ನನ್ನು ಇನ್ನಿಲ್ಲದಂತೆ ಆಕರ್ಷಿಸಿತು.

ಕೇಂಬ್ರಿಡ್ಜ್ ಊರಿಗೆ ಕಾಲಿಟ್ಟೊಡನೆ ಯಾರೂ ಮೊದಲು ಮಾಡಬೇಕಾದ ಕೆಲಸ, ಬಸ್ ಸ್ಟೇಷನ್, ಬಟ್ಟೆ ಅಂಗಡಿಗಳು, ಮೆಡಿಕಲ್ ಶಾಪ್ಸ್ ಇಲ್ಲೆಲ್ಲಾ ಉಚಿವಾಗಿ ತೆಗೆದುಕೊಳ್ಳಬಹುದು ಎಂದು ಇಟ್ಟಿರುವ ಆಯಾ ತಿಂಗಳ ಮಾಹಿತಿ ಪುಸ್ತಕವನ್ನು ಎತ್ತಿಟ್ಟುಕೊಳ್ಳುವುದು. 100-150 ಪುಟಗಳಷ್ಟು ಇರುವ ಆ ಪುಸ್ತಕದಲ್ಲಿ ಯಾವಯಾವ ದಿನ, ಎಷ್ಟು ಹೊತ್ತಿಗೆ, ಯಾವ ಕಾಲೇಜಿನಲ್ಲಿ ಏನೇನು ಚಟುವಟಿಕೆ ನಡೆಯುತ್ತದೆ. ಆ ಕಾರ್ಯಕ್ರಮದ ಸಂಕ್ಷಿಪ್ತ ವಿವರ ಏನು, ಆ ಜಾಗವನ್ನು ತಲುಪುವುದು ಹೇಗೆ, ಟಿಕೆಟ್ ಇದ್ದರೆ ಅದರ ದರ ಏನು, ಎಲ್ಲಿ ಪಡೆದುಕೊಳ್ಳಬಹುದು ಎಲ್ಲಾ ವಿವರ ಇರುತ್ತದೆ. ಸೆಮಿನಾರ್‌ಗಳು, ಪಾಠಗಳು, ಪ್ರಯೋಗಗಳು, ಚರ್ಚೆ, ವಿಚಾರ ಸಂಕಿರಣಗಳು, ಪ್ರಬಂಧ ಮಂಡನೆ, ನಾಟಕ ಸಂಗೀತ, ಚಿತ್ರಕಲೆ, ಕಥೆ ಹೇಳುವುದು, ಪುಸ್ತಕ ಓದುವುದು, ಗಿಡ ನೆಡುವುದು ಹೀಗೆ ಸಮಸ್ತ ಕಾರ್ಯಕ್ರಮವೂ ನಿತ್ಯವೂ ಇರುತ್ತದೆ ಅಲ್ಲಿ.

ಕೇಂಬ್ರಿಡ್ಜ್‌ನಲ್ಲಿ ಮ್ಯೂಸಿಯಮ್‌ಗಳಿವೆ. ಬೊಟಾನಿಕಲ್ ಉದ್ಯಾನವನ, ಕೆರೆ-ಕೊಳ, ಕಾಡುಪ್ರಾಣಿ ವೀಕ್ಷಣೆ, ಚರ್ಚುಗಳು, ಯುದ್ಧ ಸ್ಮಾರಕಗಳು, ಸಿರಿವಂತ ಅರಮನೆಯಂತಹಾ ಕಾಲೇಜುಗಳು, ಕಡಿಮೆ ಬೆಲೆಗೆ ಸಿಗುವ ಊಟ ತಿಂಡಿ ಎಲ್ಲವೂ ಇದೆ. ಪ್ರಪಂಚದ ವಿವಿಧ ದೇಶಗಳಿಂದ ಬಂದವರ ಒಡನಾಟವಿದೆ. ಓಡಾಡಲು ಬಸ್‌ಗಳಿವೆ. ಸೈಕಲ್ಲುಗಳೂ ಇವೆ. ಸಾಕಿಕೊಳ್ಳಲು ಪ್ರಾಣಿಗಳು ಸಿಗುತ್ತವೆ. ರಸ್ಕಿನ್ ಇಂಟರ್ನ್ಯಾಷನಲ್ ಕಾಲೇಜಿನಲ್ಲಿ ಪ್ರೊ. ರುಥ್ ಎಮ್ ಮಾರ್ಗನ್ ಅವರ “Forensic science and investigation under the microscope” ಪ್ರಂಬಂಧ ಮಂಡನೆ ಕಾರ್ಯಕ್ರಮಕ್ಕೆ ಹೋಗಿದ್ದೆ. ಕೇಂಬ್ರಿಡ್ಜ್‌ನಂತಹ ಜಾಗಕ್ಕೆ ಹೋಗುವುದು ಉಲ್ಲಸದ ಪ್ರವಾಸ ಎನ್ನುವುದಕ್ಕಿಂತ “ಬದುಕು ಅದೆಷ್ಟು ಚಿಕ್ಕದು” ಎನ್ನುವ ಖಿನ್ನತೆಗೆ ದಬ್ಬಿಬಿಡುತ್ತದೆ ಈ ಊರು. “ಇದೇ ನನ್ನ ಕಾಶಿ ರಾಮೇಶ್ವರವಾಗಲಿ. ಈ ಊರೇ ನನ್ನ ಮಾನಸಸರೋವರವಾಗಲಿ” ಎಂದು ನಿತ್ಯವೂ ಪ್ರಾರ್ಥಿಸಿಕೊಳ್ಳುತ್ತೇನೆ. ಅಂದಹಾಗೆ ಇಲ್ಲಿನ ಪೋಲೀಸ್ ಅಧಿಕಾರಿ ಅಲೆಕ್ಜಾಂಡರ್‌ ಅನ್ನು ಭೇಟಿ ಮಾಡಿದ್ದ ವಿಷಯವನ್ನೂ ಹಂಚಿಕೊಳ್ಳಬೇಕಿದೆ ಮತ್ತೊಮ್ಮೆ.