ಯಾವುದೇ ಭಾವದ ತೀವ್ರತೆ ಅತಿಯಾದಾಗ ಕ್ರಿಯಾತ್ಮಕವಾಗಿ ಯಶಸ್ವಿಯಾಗದೆ ಹೋದಾಗ ಅದು ಶೋಕವನ್ನು ಹೊದೆಯಲು ಮುಂದಾಗುತ್ತದೆ. ಅವನಲ್ಲಿನ ಶೋಕ ಇವನಲ್ಲಿನ ಶೃಂಗಾರಕ್ಕೆ ಪುಷ್ಟಿಕೊಡುತ್ತಿದೆ. ವಿಪ್ರಲಂಭವನ್ನು ವರ್ಣಿಸುತ್ತಲೇ ಕವಿಯು ಹೊಸದಾದ ಮತ್ತೊಂದು ಭಾವವನ್ನು ಕೊನೆಯ ಭಾಗದ ಪದ್ಯದಲ್ಲಿ ತಂದುಬಿಡುತ್ತಾನೆ. ಅದು ಉತ್ಕಟವಾದ ಶೋಕವಾಗುತ್ತದೆ. ಕೇವಲ ಶೋಕವಾಗಿ ಅಷ್ಟಕ್ಕೆ ನಿಲ್ಲದೆ ಮುಂದೆ ಮುಂದೆ ನಡೆಯುತ್ತಾ ಪ್ರತಿಯೊಂದು ಹಿಂದಿನ ಘಟನೆಗಳ ಪ್ರಭಾವಕ್ಕೆ ಸಿಕ್ಕಿಕೊಂಡು ಬಿಡಿಸಿಕೊಳ್ಳಲಾರದ ಹಾಗೆ ರಚನೆ ನಡೆದು ಶೋಕದಿಂದ ಮುಂದೆ ಕರುಣಾ ರಸವಾಗಿ ಭಾವೋದಯ ಆಗಿ ಬಿಡುತ್ತದೆ.
ಆರ್. ದಿಲೀಪ್ ಕುಮಾರ್ ಅಂಕಣ

 

ಪಂಪ ಭಾರತದ ನಾಲಕ್ಕನೆಯ ಆಶ್ವಾಸದಲ್ಲಿನ ವಿಚಿತ್ರವಾದ ಸಂದರ್ಭವಿದು. ಆಗರ್ಭ ಶ್ರೀಮಂತನೊಬ್ಬನ ವಿಪ್ರಲಂಭ ಶೃಂಗಾರ ವರ್ಣನೆಯಿದು. ಕಾಣೆಯಾದ ತನ್ನ ಪ್ರಿಯತಮೆಯ ನೆನೆಕೆಯಿಂದ ಅವಳ ಅಗಲಿಕೆಯಿಂದ ಬಂದಿರುವುದು. ಈ ಅಗಲಿಕಯೆನ್ನು ತಾಳಲಾರದೆ ತನ್ನ ಹಿಂದಿನ ಎಲ್ಲವನ್ನು ನೆನೆಸಿಕೊಳ್ಳುತ್ತಲೇ ಅವನಾಡುವ ಮಾತುಗಳು ಇಲ್ಲಿ ಬಹಳ ಮುಖ್ಯವೆನಿಸುತ್ತದೆ. ಇಲ್ಲಿ ಅವನ ಮೂರು ನೆನೆಕೆಗಳೂ ವಿಪ್ರಲಂಭ ಅನ್ನುವುದಕ್ಕೆ ಬಹುಮುಖ್ಯ ಕಾರಣ ಅವಳು ಇಲ್ಲಿ ಇಲ್ಲ. ಅವಳ ಬಗೆಗಿನ ಮಾತುಗಳು, ಅವಳೊಡನೆ ಕಳೆದ ಸಮಯಗಳು ಮಾತ್ರ ಇವನಲ್ಲಿ ಬಹುದೊಡ್ಡ ಕೋಲಾಹಲವನ್ನು ಉಂಟು ಮಾಡಿದೆ. ಇದನ್ನು ರಸ್ತೆಯಲ್ಲಿ ನಡೆಯುವ ಅರಿಕೇಸರಿಯು ನೀಡಿ ‘ಈತನ್ ಎಮ್ಮೊಂದಿಗನುಮ್ ಎಮ್ಮ ನಂಟನುಮ್ ಅಕ್ಕುಮ್’ ಅಂದುಕೊಳ್ಳುತ್ತಾನೆ.

ಈ ಸಂದರ್ಭವೂ ಪಂಪ ಭಾರತದ ನಾಲಕ್ಕನೆಯ ಆಶ್ವಾಸದಲ್ಲಿ ಬರುವುದೇ ಆಗಿದೆ. ಇಲ್ಲಿ ವಿಕ್ರಮಾರ್ಜುನನು ಬೆಳಗ್ಗೆ ಸುಭದ್ರೆಯನ್ನು ಕಂಡುದರ ನೆನೆಕೆಗಳಂತೆ ಇಲ್ಲಿ ರೋಧಿಸುತ್ತಿರುವ ಆಗರ್ಭ ಶ್ರೀಮಂತನ ಮಾತುಗಳೂ ಇದೆ. ಇಲ್ಲಿ ಇಬ್ಬರೂ ಸಮಾನರು. ಭಾವ ಸಮಾನತೆ ಅನ್ನುವುದು ರಾಜನಾದರೂ, ಅವನ ರಾಜ್ಯದ ಒಬ್ಬ ಸಾಮಾನ್ಯ ಪ್ರಜೆಯಾದರೂ ಎಲ್ಲರಿಗೂ ಉಂಟಾಗುವುದೇ ಆಗಿದೆ ಅನ್ನುವುದನ್ನು ಬರೆಯುತ್ತಲೇ ಬಹು ಮುಖ್ಯ ಭಾವವೊಂದನ್ನು ಇಲ್ಲಿ ಪಂಪ ತರುತ್ತಾನೆ. ಈ ಭಾವಾಗಮನವೇ ಪಂಪ ಅರಿಕೇಸರಿಗೂ ಅಥವಾ ಪ್ರಭುತ್ವ ಹೊಂದಿರುವ ವ್ಯಕ್ತಿಯೂ ಸಾಮಾನ್ಯನಲ್ಲಿ ಸಾಮಾನ್ಯ ಅನ್ನುವ ಭಾವವನ್ನು ತರಲು ನೋಡಿದ್ದಾನೆ.

ಆಚಾರ್ಯ ಡಿ. ಎಲ್. ಎನ್. ಈ ಭಾಗದ ಕೆಲವು ವೃತ್ತಗಳಿಗೆ ಅರ್ಥ ಹೇಳುತ್ತಾ “ಉಜ್ವಲಭಾಗವಿದು” ಅಂದಿರುವುದು ಸಹಾ ಈ ಕಾರಣಕ್ಕಾಗಿಯೇ. ಯಾವ ರಾಜನ ಆಸ್ಥಾನದಲ್ಲಿದ್ದು, ಯಾವ ರಾಜನನ್ನು ಕಾವ್ಯದ ಕಥಾ ನಾಯಕನನ್ನಾಗಿ ಕೇಂದ್ರ ಮಾಡಿಕೊಂಡು ರಚನೆಗೆ ಮುಂದಾದನೋ ಅವನು ಸಾಮಾನ್ಯ ಮನುಷ್ಯನೇ. ಅವನಲ್ಲಿನ ರಾಗ ದ್ವೇಷಗಳೂ ಉಳಿದವರಲ್ಲಿ ಬರುವಂತೆಯೇ ಅನ್ನುವುದನ್ನು ಸೇರಿಸಿ, ಕೊನೆಗೆ ಅದನ್ನು ನೋಡುತ್ತಾ ವೇಶ್ಯಾವಾಟಿಕಾ ರಸ್ತೆಯಲ್ಲಿ ಹೋಗುತ್ತಿದ್ದ ಅರಿಕೇಸರಿಯ ಬಾಯಲ್ಲಿ (ಅರ್ಜುನನೂ) “ಹೌದು ಇವನೂ ನನ್ನಂತೆ, ಇವನೂ ನನ್ನ ಸಂಬಂಧಿಕನೇ” ಎಂದು ಹೇಳಿಸುತ್ತಾನೆ. ಇದು ಈ ಭಾಗದ ಬಹು ಮುಖ್ಯವಾದ ಅಂಶ. ಯಾವುದೇ ರಸವಾಗಿರಲಿ ಅದನ್ನು ತರುವಾಗ ಮಾಡುವ ಸಾಮಾನ್ಯೀಕರಣ ಕೇವಲ ಓದಗನಿಗಷ್ಟೇ ಅಲ್ಲ, ಆ ಕಾಲದ ರಾಜನಿಗೂ ಅದು ಸಾಮಾನ್ಯೀಕರಣವಾಗಿ ನಿಲ್ಲಿಸಿ ಅದರಲ್ಲಿ ಯಶಸ್ವಿಯಾಗುವ ಇವನ ದಿಟ್ಟತನ ಮರೆಯಲಾಗದು ಮತ್ತು ಕಡೆಗಣಿಸಲಾಗದು. ಈ ಭಾವ ಸಮಾನತೆ, ಸ್ಥಿತಿ ಸಮಾನತೆ ಮನುಷ್ಯನಾದವನಿಗೆ ಮಾತ್ರ ಸಾಧ್ಯ ಅಂತಹಾ ಮನುಷ್ಯನೇ ಇವನು ಅನ್ನುತ್ತಲೇ ಮೇಲ್ ಸ್ಥರದಲ್ಲಿ ನಿಂತಿರುವ ಒಬ್ಬನನ್ನೂ, ಸಮಾಜದ ಕೊನೆಯ ಸ್ಥರದಲ್ಲಿ ನಿಂತಿರುವ ಮತ್ತೊಬ್ಬನನ್ನೂ ಸಮಾನ ಮಾಡಿಬಿಡುತ್ತಾನೆ.

ಆಗರ್ಭ ಶ್ರೀಮಂತನೊಬ್ಬ ತನ್ನ ಕಳೆದುಹೋದ ಪ್ರಿಯತಮೆಯನ್ನು ನೆನೆದು ವರ್ತಮಾನದ ಮೇಲೆ ಭೂತವನ್ನು ಇಟ್ಟುಕೊಂಡು ಮಾತಾಡುತ್ತಾ ಇರುತ್ತಾನೆ. ಅವನ ಮಾತಿನ ತುಂಬಾ ಅವಳೊಂದಿಗೆ ನಡೆದ ಶೃಂಗಾರ ಸರಸ ಸಲ್ಲಾಪದ ಚಿತ್ರಗಳ ವಿವರಣೆಯೇ ಇದೆ. ಆದರೆ ಇಂದು ಅವಳಿಲ್ಲ. ಮನುಷ್ಯನ ಸಾಮಾನ್ಯ ಭಾವ ಇದು. ಕಳೆದು ಹೋದ ನಂತರವೇ ಅದರಲ್ಲಿನ ಭಾವ ಶೋಕವಾಗುವುದು, ಹಾಗೇ ಆ ಶೋಕದ ಮೇಲೆ ಅವರೊಂದಿಗೆ ಕಳೆದ ಸಂತಸದ ಕ್ಷಣಗಳ ನೆನಪು ಮರಳಿಸುವುದು. ಇಲ್ಲಿನ ಅವನ ಸ್ಥಿತಿಯೂ ಹಾಗೇ ಇದೆ.

ಮಿಱುಗುವ ತೋರ ಹಾರಮುಮನ್
ಅಪ್ಪಿನ ಕಾಳಸಗೆ ಅಡ್ಡಮೆಂಬ
ಬೇಸಱಿನೊಳೆ ಕಟ್ಟಲೊಲ್ಲದನಿತೞ್ಕಱನಿೞ್ಕುಳಿಗೊಂಡು
ಅಲಂಪಿನತ್ತೆರಗಿದ ನಲ್ಲಳ ಅಳ್ಳೆರ್ದೆಯೊಳ್
ಅಕ್ಕಟ
ಬೆಟ್ಟಗಳು ಬನಗಳುಂ ತೊಱೆಗಳುಂ ಈಗಳ್
ಒಡ್ಡಱಿಯದೊಡ್ಡಿಸಿ
ಸೈರಿಸುವಂತುಂಟಾದುದೇ !? ( ೪.೧೦೫ )

ಮುನಿಸೊನೊಳಂ ಅದಂ ಏವಯಿಸಿ
ಸೈರಿಸದೆ ಅದರೊಳ್ ಕನಲ್ದು
ಕಂಗನೆ ಕನಲುತ್ತುಮ್ ಉಮ್ಮಳಿಸಿ ಸೈರಿಸಲಾಱದೆ
ಮೇಲೆವಾಯ್ದು ಬಯ್ದನುವಿಸಿ ಕಾಡಿ
ನೋಡಿ ತಿಳಿದು
ಅೞ್ಕಱನ್ ಇೞ್ಕುಳಿಹೊಂಡಲಂಪುಗಳ್
ಕನಸಿನೊಳಂ ಪಳಂಚಲೆವುವು ಎನ್ನೆರ್ದೆಯೊಳ್
ತರಳಾಯತೇಕ್ಷಣೇ ! ( ೪.೧೦೬ )

ವಚನ : ಎಂದು ಸೈರಿಸಲಾರದೆ ತನ್ನ ಪ್ರಾಣವಲ್ಲಭೆಯೊಡನೆ ಇರ್ದಂದಿನ ಮುಳಿಸು ಒಸಗೆಗಳಂ ನೆನೆದು

ಬಗೆ ಗೆಲಲೆಂದು ಪುಸಿನಿದ್ದೆಯೊಳಾನಿರೆ
ಲಲ್ಲೆಗೆಯ್ದು ಲಲ್ಲೆಗೆ ಮಱೆದಿರ್ದೊಡೆ
ಅೞ್ಕಱಿನೊಳೊಂದಿ
ಮೊಗಂ ಮೊಗದತ್ತ ಸಾರ್ಚಿ
ಬೆಚ್ಚಗೆ ನಿಡುಸುಯ್ದು ನಲ್ಲಳ
ಮುಖಾಂಬುಜ ಸೌರಭದೊಳ್ ಪೊದಳ್ದು
ಅದೇಂ ಮಗಮಗಿಸಿತ್ತೋ
ಕತ್ತುರಿಯ ಕಪ್ಪುರದೊಂದು ಕದಂಬ ದಂಬುಲಂ ! ( ೪.೧೦೭ )

ಇಲ್ಲಿ ವಿಕ್ರಮಾರ್ಜುನನು ಬೆಳಗ್ಗೆ ಸುಭದ್ರೆಯನ್ನು ಕಂಡುದರ ನೆನೆಕೆಗಳಂತೆ ಇಲ್ಲಿ ರೋಧಿಸುತ್ತಿರುವ ಆಗರ್ಭ ಶ್ರೀಮಂತನ ಮಾತುಗಳೂ ಇದೆ. ಇಲ್ಲಿ ಇಬ್ಬರೂ ಸಮಾನರು. ಭಾವ ಸಮಾನತೆ ಅನ್ನುವುದು ರಾಜನಾದರೂ, ಅವನ ರಾಜ್ಯದ ಒಬ್ಬ ಸಾಮಾನ್ಯ ಪ್ರಜೆಯಾದರೂ ಎಲ್ಲರಿಗೂ ಉಂಟಾಗುವುದೇ ಆಗಿದೆ ಅನ್ನುವುದನ್ನು ಬರೆಯುತ್ತಲೇ ಬಹು ಮುಖ್ಯ ಭಾವವೊಂದನ್ನು ಇಲ್ಲಿ ಪಂಪ ತರುತ್ತಾನೆ.

ವಚನ : ಎಂದು ತನ್ನೊಳ್ ಪಲಂಬುತಿರ್ದನಂ ಕಂಡು – ಈತನ್ ಎಮ್ಮೊಂದಿಗನುಮ್ ಎಮ್ಮ ನೆಂಟನುಮ್ ಅಕ್ಕುಮ್ ಎಂದು ಮುಗುಳ್ನಗೆ ನಗುತ್ತುಂ ಬರ್ಪನ್

ಈ ಭಾಗದ ಮುಖ್ಯ ಪಠ್ಯಗಳನ್ನೊಮ್ಮೆ ಗಮನಿಸಿ. ಇಲ್ಲಿನ ಎಲ್ಲಾ ಭಾವಗಳೂ ಹಿಂದೆ ನಡೆದಿದ್ದೇ. ಆಗರ್ಭ ಶ್ರೀಮಂತ ತನ್ನ ಪ್ರಿಯತಮೆಗೆ ಕೊಟ್ಟು ತೊಟ್ಟುಕೊಳ್ಳಲು ಹೇಳಿದ್ದ ತೋರ ಹಾರವನ್ನು ನಮ್ಮಿಬ್ಬರ ಪ್ರೀತಿಯ ಮಧ್ಯೆ ಅದು ಅಡ್ಡವಾಗಿ ಬಂದಂತಿದೆ ಎಂದು ತೆಗೆದದ್ದು, ಇದ್ದಕ್ಕಿದ್ದ ಹಾಗೆ ನಮ್ಮಿಬ್ಬರ ಮಧ್ಯೆ ಬೆಟ್ಟಗಳು, ಬನಗಳು, ತೊರೆಗಳು ಬಂದು ದೂರ ಮಾಡಿದ್ದೂ (ಗಮನಿಸಿ – ಗೋಪಾಲಕೃಷ್ಣ ಅಡಿಗರ – ನನ್ನ ನಿನ್ನ ನಡುವೆ ಎಂತ ಕಡಲು ನಿಂತಿದೆ, ಅದೆಂತ ಕಡಲು ನಿಂತಿದೆ – ಕಾವ್ಯ) ಅವಳ ಹುಸಿಮುನಿಸು, ಅವಳ ನಡೆ ಎಲ್ಲವೂ ಕನಸಿನಲ್ಲಿ ತಾಕಿ ಕಂಡಂತೆ ಆಗುತ್ತಲೇ ಬೆಚ್ಚಿಬಿದ್ದಂತಾಗುವುದು. ಇವುಗಳಷ್ಟೇ ಅಲ್ಲದೇ ಒಸಗೆಯ ಬಗೆಗೆ ನೆನೆಸಿಕೊಳ್ಳುತ್ತಲೇ ಭಾರಗೊಂಡು ನೆನೆಯುತ್ತಿದ್ದಾನೆ. ತನ್ನೊಳಗೆ ಆದ ಹಿಂಸೆಯಿಂದ ಹಲುಬುತ್ತಿದ್ದಾನೆ. ಈ ಎಲ್ಲಾ ಹಿಂಸೆಗಳನ್ನು ಕಂಡೂ ವಿಕ್ರಮಾರ್ಜುನ ಬಹುವಾಗಿ ನೋಡಿ ನಕ್ಕು ನನ್ನ ಸಂಬಂಧಿ ಎಂದುಕೊಳ್ಳುತ್ತಾನೆ.

ಇಲ್ಲಿನ ಭಾವಗಳ ಬಗೆಗೆ ಮೊದಲೇ ಹೇಳಿದಂತೆ ಇದೊಂದು ವಿಪ್ರಲಂಭ ಶೃಂಗಾರದ ಚಿತ್ರ. ಸಾಮಾನ್ಯವಾಗಿ ಹೆಣ್ಣಿನ ಕಡೆಯಿಂದ ಹೇಳಿಸಿ ಅದನ್ನು ಪರಿಣಾಮಕಾರಿ ಮಾಡುವ ಕವಿಗಳಿಗಿಂತ ಇಲ್ಲಿ ಭಿನ್ನವಾಗಿ ರಚನೆಯಾಗಿದೆ. ಅದಕ್ಕೂ ಕಾವ್ಯ ಸಂವಿಧಾನಕ್ಕೂ ಬಹಳವಾದ ಸಂಬಂಧ ಇದ್ದೇ ಇದೆ. ಅರ್ಜುನ ಸುಭದ್ರೆಯನ್ನು ನೋಡಿ ವಿರಹದಿಂದ ರಸ್ತೆಯಲ್ಲಿ ಹೋಗುತ್ತಿರುವ ಸಂದರ್ಭದಲ್ಲಿ ಹೆಣ್ಣಿನ ವಿರಹ ತರದೆ ಸಮಾನಾಂತರವಾದ ಮತ್ತೊಬ್ಬ ಪುರುಷನ ವಿರಹ ವೇದನೆ ತರುತ್ತಲೇ ಇವನಲ್ಲಿ ಪರಿಣಾಮಕಾರಿಯಾಗಿ ಭಾವ ಸ್ಪುರಣ ಆಗಲು ಸಹಕಾರಿಯಾಗುತ್ತದೆ. ಈ ಭಾವ ಸ್ಪುರಣವೂ ಕವಿಯೊಬ್ಬನು ಕಾವ್ಯ ಸಂವಿಧಾನ ಮತ್ತು ಕಾವ್ಯ ಸಂದರ್ಭಕ್ಕೆ ಕೊಡುವ ಒತ್ತಿನಷ್ಟೇ ಮುಖ್ಯವಾದದ್ದು. ಇಲ್ಲಿ ಒಂದೇ ಭಾವ ಭಿನ್ನ ವ್ಯಕ್ತಿಗಳಲ್ಲಿ ಸಂಧಿಸುವುದು ಇಂತಹಾ ಕ್ಷಣದಲ್ಲೆ. ನೋಡುಗನಾಗಿ ಅರಿಕೇಸರಿಯ ಭಾವಕ್ಕೂ, ಸಂದರ್ಭದಲ್ಲಿ ತೊಳಲುತಿರುವ ವ್ಯಕ್ತಿಯ ಭಾವಕ್ಕೂ ಒಂದೇ ಸಂದರ್ಭ ಇದ್ದರೂ, ತೊಳಲುತಿರುವವನ ಮುಂದೆ ನೋಡುಗನದು ಹೆಚ್ಚಾಗುತ್ತಾ ಸಾಗುತ್ತದೆ. ಇದು ಒಂದು ಹಂತ ಮೀರಿದ ತಕ್ಷಣ ಶೋಕದ ಹೊದಿಕೆ ಹೊದ್ದು ಬಿಡುತ್ತದೆ. ಇದನ್ನು ಕಂಡ ತಕ್ಷಣ ಅರಿಕೇಸರಿಯು ನಾನೂ ಅವನೂ ಒಂದೇ ಎಂದು ಬಿಡುತ್ತಾನೆ. ಲೋಕದಲ್ಲಿ ಶೋಕಿಸುವವರಿಗೆ ಶೋಕದಲ್ಲಿರುವವರು ಮಾತ್ರ ಜೊತೆಯಾಗಬಲ್ಲರು ಅನ್ನುವುದನ್ನಷ್ಟೇ ಇಲ್ಲಿ ಮುಖ್ಯವಾಗಿಸಿ ಅದಕ್ಕೆ ಸಾಕ್ಷಿಯಾಗಿ ನಿಲ್ಲುತ್ತದೆ.

ಯಾವುದೇ ಭಾವದ ತೀವ್ರತೆ ಅತಿಯಾದಾಗ ಕ್ರಿಯಾತ್ಮಕವಾಗಿ ಯಶಸ್ವಿಯಾಗದೆ ಹೋದಾಗ ಅದು ಶೋಕವನ್ನು ಹೊದೆಯಲು ಮುಂದಾಗುತ್ತದೆ. ಇಲ್ಲಿಯದೂ ಹಾಗೇ ಆಗಿದೆ. ಅವನಲ್ಲಿನ ಶೋಕ ಇವನಲ್ಲಿನ ಶೃಂಗಾರಕ್ಕೆ ಪುಷ್ಟಿಕೊಡುತ್ತಿದೆ. ಯಾವುದನ್ನು ಮರೆಯಲು, ಮೀರಲು ಹೊರಗಡೆಗೆ ಬಂದನೋ ಅದನ್ನೇ ಕಾಣುವಂತಾಗುವುದು ಇಲ್ಲಿನ ವಿಶೇಷ. ಇಲ್ಲೊಂದು ವಿಶೇಷ ಗಮನಿಸಿ. ವಿಪ್ರಲಂಭವನ್ನು ವರ್ಣಿಸುತ್ತಲೇ ಕವಿಯು ಹೊಸದಾದ ಮತ್ತೊಂದು ಭಾವವನ್ನು ಕೊನೆಯ ಭಾಗದ ಪದ್ಯದಲ್ಲಿ ತಂದುಬಿಡುತ್ತಾನೆ. ಅದು ಉತ್ಕಟವಾದ ಶೋಕವಾಗುತ್ತದೆ. ಕೇವಲ ಶೋಕವಾಗಿ ಅಷ್ಟಕ್ಕೆ ನಿಲ್ಲದೆ ಮುಂದೆ ಮುಂದೆ ನಡೆಯುತ್ತಾ ಪ್ರತಿಯೊಂದು ಹಿಂದಿನ ಘಟನೆಗಳ ಪ್ರಭಾವಕ್ಕೆ ಸಿಕ್ಕಿಕೊಂಡು ಬಿಡಿಸಿಕೊಳ್ಳಲಾರದ ಹಾಗೆ ರಚನೆ ನಡೆದು ಶೋಕದಿಂದ ಮುಂದೆ ಕರುಣಾ ರಸವಾಗಿ ಭಾವೋದಯ ಆಗಿ ಬಿಡುತ್ತದೆ.

ಮೊದಲ ಎರಡು ಪದ್ಯಗಳ ನಂತರದಲ್ಲಿ ಬರುವ ವಚನದಿಂದ ಮುಂದಿನ ಭಾಗದ ಪದ್ಯವು ವಿಪ್ರಲಂಭ ಶೃಂಗಾರವು ಕರುಣಾ ರಸವಾಗಿ ಬದಲಾಗಿದ್ದಕ್ಕೆ ಬಹುದೊಡ್ಡ ಕೃತಿಸಾಕ್ಷಿಯಾಗಿ ನಿಲ್ಲುತ್ತದೆ. ಕೆಲವೊಮ್ಮೆ ಇನ್ನೊಂದಷ್ಟು ಗಂಭೀರವಾಗಿ ಈ ಸಂದರ್ಭವನ್ನು ಗಮನಿಸಿದರೆ ಇದು ಭಾವಶಬಲತೆ ಅನಿಸುವ ಮಟ್ಟಕ್ಕೆ ನಮ್ಮ ಆಲೋಚನೆಯನ್ನ ಹಿಡಿದರೂ ಅಲ್ಲಿರುವುದು ಭಾವೋದಯವೇ ಹೊರತು ಭಾವಶಬಲತೆ ಅಲ್ಲ ಅನ್ನುವುದು ತಿಳಿದುಬಿಡುತ್ತದೆ. ಒಂದನ್ನೊಂದು ಮೀರಿಸಿದ ಮಟ್ಟದಲ್ಲಿ ಬಂದರೂ ಇಲ್ಲೊಂದು ಮುಂದುವರಿಕೆಯ ಕ್ರಮ ಮೂರೂ ಪದ್ಯಗಳಲ್ಲಿ ಇದೆ. ದೇಹ, ಮನಸ್ಸು, ಇವೆರಡರ ಕೂಡುವಿಕೆ ಮುಂದಿನ ಭಾಗದಲ್ಲಿ ಉಜ್ವಲವಾಗಿ ಅಭಿವ್ಯಕ್ತವಾಗುತ್ತದೆ. ಮೊದಲ ನೋಟಕ್ಕೆ ಭಾವಶಬಲತೆ ಅನಿಸಿದ್ದು ಕೊನೆಯಲ್ಲಿನ ಪದ್ಯಭಾಗವನ್ನು ನೋಡಿದಾಗ ಅತಿಯಾದ ಓದಿನ ಕ್ರಮವದು ಅನಿಸಿಬಿಡುತ್ತದೆ.

ಹಾಗೆ ನೋಡಿದರೆ ಕಾವ್ಯಮೀಮಾಸಂಕರು ಮಿಶ್ರ ರಸಗಳ ಜೋಡಿಯಲ್ಲಿ ಶೃಂಗಾರ ಮತ್ತು ಕರುಣವನ್ನು ಶತ್ರು ರಸ ಜೋಡಿಯೆಂದೇ ಇಟ್ಟಿದ್ದಾರೆ. ಆದರೆ ಇದನ್ನೇ ರಚನೆಯ ಕ್ರಮದಲ್ಲಿ ತಂದಿರುವ ಕಾವ್ಯ ಭಾಗಗಳೆಲ್ಲವೂ ಯಶಸ್ವಿಯಾಗಿಯೇ ಇದೆ. ಆದಿಪುರಾಣದಲ್ಲಿನ ಒಂದು ಜೋಡಿಯ ಸಾವು ಇದಕ್ಕೆ ಬಹುದೊಡ್ಡ ಉದಾಹರಣೆ. ಶತ್ರುತ್ವ ಅನಿಸುವ ಹಾಗಿದ್ದರೂ ಇಲ್ಲೊಂದು ಭಾವದ ಮೆರುಗು ಇದೆ. ಇದೇ ಈ ಭಾಗದಲ್ಲಿನ ಬಹುಮುಖ್ಯ ಸೆಳೆಯುವ ಅಂಶ. ಸಂಸ್ಕೃತ ಕಾವ್ಯ ಮೀಮಾಂಸಕರು ಯಾವ ರಸದ ಶತ್ರುತ್ವ ಜೊಡಿಯೆಂದು ಕರೆದು ಗುಂಪು ಮಾಡಿದ್ದರೋ ಅಂತಹಾ ಒಂದು ನಿಯಮವನ್ನು ಕನ್ನಡದಲ್ಲಿ ಆ ಸಿದ್ಧಮಾದರಿಯ ಕ್ರಮವನ್ನು ಮುರಿದು ವರ್ಣಿತವಾಗುತ್ತಿರುವ ಭಾಗದಲ್ಲಿನ ಭಾವಕ್ಕೆ, ಕಾವ್ಯದ ಸಂವಿಧಾನಕ್ಕೆ, ಕಾವ್ಯ ಸಂದರ್ಭಕ್ಕೆ ಯಾವುದೇ ಧಕ್ಕೆ ಬರದ ಹಾಗೆ ಈ ಭಾಗ ಯಶಸ್ವಿಯಾಗುತ್ತದೆ.