ಇಂದು ವಿಶ್ವ ಮಹಿಳಾ ದಿನ. ಇಂದೇ ಮಹಿಳಾ ಮೀಸಲಾತಿ ಮಸೂದೆ ಕೂಡ ಮಂಡನೆಯಾಗುತ್ತಿದೆ… ಈ ಹೊತ್ತಿನಲ್ಲಿ ಅರಳಾಳುಸಂದ್ರದ ಅನಸೂಯಮ್ಮನವರ ಕುರಿತ ಬರಹ ಇಲ್ಲಿದೆ…
ಹತ್ತಾರು, ನೂರಾರು ವರ್ಷಗಳ ಕಾಲ ನಮ್ಮ ನೆಲದಲ್ಲಿ ಗುಲಾಮಗಿರಿ ಅನುಭವಿಸಿದ ನಾವು ಈಗಲೂ ಎಚ್ಚೆತ್ತುಕೊಳ್ಳದಿದ್ದರೆ ಹೇಗೆ ಎಂಬ ಪ್ರಶ್ನೆ ರೈತರಿಗೆ ಎದುರಾದಾಗ ಹುಟ್ಟಿದ್ದೇ ರಾಜ್ಯ ರೈತ ಚಳುವಳಿ. ಅನಕ್ಷರಸ್ಥ ಸಮುದಾಯವೊಂದು ಸಡನ್ನಾಗಿ ಸಿಡಿದೆದ್ದು ನಿಂತಿದ್ದು- ಪ್ರಭುತ್ವದ ವಿರುದ್ಧ ಪ್ರತಿಭಟಿಸಿದ್ದು- ಇಡೀ ದೇಶದ ರೈತರನ್ನು ಜಾಗೃತರನ್ನಾಗಿಸಿತು. ಎಂಬತ್ತರ ದಶಕದ ರೈತ ಹೋರಾಟ ನಾಡಿನ ಪ್ರಮುಖ ಚಳುವಳಿಗಳ ಯಾದಿಯಲ್ಲಿ ದಾಖಲಾಗಿಹೋಯಿತು.
ಅಂತಹ ಶಕ್ತಿಯುತ ಚಳುವಳಿಗೆ ರಕ್ತ, ಮಾಂಸ ತುಂಬಿದವರು ನಾಡಿನ ರೈತರು. ಅವರನ್ನು ಹುರಿದುಂಬಿಸಿದವರು ನೂರಾರು ಪ್ರಜ್ಞಾವಂತ ನಾಯಕರು. ಅಂತಹ ನಾಯಕರ ಪಟ್ಟಿಯಲ್ಲಿ, ಅದರಲ್ಲೂ ಮಹಿಳಾ ವಿಭಾಗದಲ್ಲಿ, ಮೊದಲ ಪಂಕ್ತಿಯಲ್ಲಿ ದಾಖಲಾಗಬೇಕಾದ ಹೆಸರೇ- ಚನ್ನಪಟ್ಟಣ ತಾಲೂಕಿನ ಅರಳಾಳುಸಂದ್ರದ ಅನಸೂಯಮ್ಮ.
ಹೆಚ್ಚಿಗೆ ಓದದ, ನಗರಗಳನ್ನು ನೋಡದ, ಹಳ್ಳಿಯ ಸಾಧಾರಣ ಮಹಿಳೆ ಬಿ.ಅನಸೂಯಮ್ಮನವರು, ಭಾರೀ ಜನಾಂದೋಲನಗಳ ಅತ್ಯುನ್ನತ ನಾಯಕತ್ವಕ್ಕೇರದಿದ್ದರೂ ಅಂತಹ ನಾಯಕರುಗಳ ಸಾಕ್ಷಿಪ್ರಜ್ಞೆಯಂತೆ ತಮ್ಮ ಸೈದ್ಧಾಂತಿಕ ಬದ್ಧತೆ, ಸಂಘಟನಾ ಸಾಮರ್ಥ್ಯ ಮತ್ತು ಹೋರಾಟದ ಕೆಚ್ಚಿನಿಂದ ತಾವಿದ್ದ ತಾಣವನ್ನೇ ಹೋರಾಟದ ಕಣವನ್ನಾಗಿಸಿಕೊಂಡವರು. ಮನೆಬಿಟ್ಟು ಹೊರಬರದ, ತಾವಾಯಿತು ತಮ್ಮ ಒಕ್ಕಲುತನವಾಯಿತು ಎಂಬಂತಿದ್ದ, ಅಸಹಾಯಕತೆಯಿಂದ ಕುಗ್ಗಿಹೋಗಿದ್ದ ಹಳ್ಳಿಯ ಅವಿದ್ಯಾವಂತ ಮಹಿಳೆಯರಿಗೆ ಹೋರಾಟದ ಅರ್ಥ ಮತ್ತು ಅರಿವಿನ ತಿಳುವಳಿಕೆ ತುಂಬಿದವರು. ಪ್ರತಿಭಟನೆಯ ಮೂಲಕ ಪ್ರಭುತ್ವವನ್ನು ಪ್ರಶ್ನಿಸುವ ಧೈರ್ಯ ಕಲಿಸಿಕೊಟ್ಟವರು. ಹಳ್ಳಿಯ ಹಜಾರದಿಂದ ಎದ್ದುಬಂದ ಅನಸೂಯಮ್ಮನವರು ಇದನ್ನೆಲ್ಲ ಕಲಿತದ್ದು ತಮ್ಮ ಮನೆಯಿಂದ, ತಂದೆಯಿಂದ ಮತ್ತು ಹಳ್ಳಿಯಿಂದ. ಅವಲಂಭಿಸಿದ್ದು, ಅಳವಡಿಸಿಕೊಂಡದ್ದು ಗಾಂಧಿ ತತ್ವವನ್ನು. ಗಾಂಧೀಜಿಯ ಗ್ರಾಮಾಭಿವೃದ್ಧಿ ಕನಸು-ಕಲ್ಪನೆಗಳ ತಳಹದಿಯಲ್ಲಿ ಹಳ್ಳಿಯ ಜನರನ್ನು ಸಂಘಟಿಸುತ್ತಲೇ ಅವರನ್ನು ಹೋರಾಟದ ಹಾದಿಗಚ್ಚಿ, ಅದರಲ್ಲಿಯೇ ತಮ್ಮ ಬದುಕಿನ ಅರ್ಥ ಕಂಡುಕೊಂಡ ಅನಸೂಯಮ್ಮನವರು ಎದುರಿಸಿದ ಸಮಸ್ಯೆಗಳು ಒಂದೆರೆಡಲ್ಲ. ಆ ಹೋರಾಟದ ಹಾದಿಯಲ್ಲಿ ಕಂಡುಂಡ ನೋವು ನೂರೆಂಟು. ಅಂತಹ ಘಟನೆಗಳ ಸರಮಾಲೆಯಲ್ಲಿ ಸರಕ್ಕನೆ ಸಿಡಿದ ತುಣುಕೊಂದು ಇಲ್ಲಿದೆ, ಈ ಮಹಿಳಾ ದಿನಕ್ಕಾಗಿ…
ಜಪ್ತಿ- ಮರುಜಪ್ತಿ
`1976ರಲ್ಲಿ ನಮ್ಮೂರಿನ ಪಟೇಲನ ವಿರುದ್ಧ ನಮ್ಮ ಸಮರ ಸಾಗಿತ್ತು. ಅದು ಬಡ ರೈತರ ಜಮೀನಿಗೆ ಸಂಬಂಧಿಸಿದ ಗೇಣಿ ಹೋರಾಟ. ಅದೇ ಸಮಯದಲ್ಲಿ ಮತ್ತೊಂದು ಕಡೆ ಬ್ಯಾಂಕಿನವರ ಜಪ್ತಿಯೂ ನಡೆಯುತ್ತಿತ್ತು. ಆ ಪಟೇಲಿದ್ನಲಾ, ಅವ್ನು ಒಂದ್ಸಲ, ಅಧಿಕಾರಿಗಳಿಗೆ ಏನೋ ಕೊಟ್ಟು ನಮ್ಮನೆಗೆ ಜಪ್ತಿಗೆ ಕಳ್ಸಿಬುಟ್ಟಿದ್ದ. ನಮ್ಮನೆರು (ಸೋಮಣ್ಣ) ಅದ್ಯಾವುದೊ ಬ್ಯಾಂಕ್ನಲ್ಲಿ ಸಾಲ ತಗಂಬುಟ್ಟಿದ್ರು. ಅದು ನನ್ಗೆ ಗೊತ್ತಿರಲಿಲ್ಲ. ಆದ್ರೆ, ಪಕ್ಕದ ಸೋದರಮಾವನ ಮನೆ ಜಪ್ತಿಯಾಗಿ, ಅವರು ಬಂದು ಎಲ್ಲ ಹೇಳಿದ್ರು. ಜಪ್ತಿ ಅಂದೆ ಏನು ಅಂತ ನನ್ಗೆ ಗೊತ್ತಾಗಿತ್ತು. ಜಪ್ತಿ ಮಾಡೋರು ಸಾಮಾನ್ಯವಾಗಿ ಮನೆ ಗಂಡಸ್ರು ಇಲ್ಲದಾಗ್ಲೆ ಬರ್ತಿದ್ರು. ಜಪ್ತಿ ಭಾರೀ ಅಮಾನುಷವಾಗಿತ್ತು. ಬಿತ್ತನೆ ಬೀಜ, ಹೊಲ ಉಳೋ ಹಸು, ಊಟದ್ ಪಾತ್ರೆ ಪಡಗನೆಲ್ಲ ಎತ್ಕಂಡೋಗರು. ಹೆಂಗಸ್ರು ಮಕ್ಳು ಊರೇ ಕಿತ್ತೋಗಹಂಗೆ ಬಡಕಳರು. ಅಯ್ಯೋ ಅನ್ನಸದು. ಕರುಳು ಕಿತ್ ಬರದು. ಒಂದಿನ ನನ್ಗೆ ಸಿಕ್ಕಾಪಟ್ಟೆ ಕೆಲ್ಸ, ಆಗ ನಾನು ಪೋಸ್ಟ್ ಆಫೀಸ್ ಕೆಲ್ಸಾನ ಮನೇಲೇ ಮಾಡ್ತಿದ್ದೆ. ರೈತ್ರು ಮನೆದು, ಮೋಟ್ರು ಮೀಟ್ರು ಬಿಲ್ನೆಲ್ಲ ಆರುಳಕ್ಕೋಗುವಾಗ್ಲೆ ಕೊಟ್ಟುಹೋಗಬುಡರು. ಅವರು ಜಮೀನಿಂದ ಬರ್ವಾಗ ರಸೀದಿ ಈಸ್ಕಳರು. ಆ ಕೆಲಸದಲ್ಲಿ ನಾನು ಮುಳುಗೋಗಿದೀನಿ. ಹೊರಗಡೆ ಅಧಿಕಾರಿಗಳ ಒಂದ್ ಹಿಂಡು ನಮ್ಮನೆ ಮುಂದೆ ನಿಂತು, `ಯಾರಿದ್ದೀರಿ, ಜಪ್ತಿಗೆ ಬಂದಿದೀವಿ’ ಅಂದರು.
`ಏನು, ಯಾರು ನೀವು ಅಂತ ಹೊರಗ್ಹೋದೆ. ಜಪ್ತಿಯೋರು ಅಂತ ಗೊತ್ತಾಯ್ತು, ನಾನಿದ್ದಳು, `ನೋಡಿ ನೀವು ಸಾಲನ ನನಿಗ್ ಕೊಟ್ಟಿಲ್ಲ, ಯಾರಿಗ್ ಕೊಟ್ಟಿದ್ದಿರೋ ಅವರತ್ರ ಕೇಳ್ಕಳಿ. ನನ್ ಮನೇಲಿ ಏನ್ ಸಾಮಾನವೆ ಅವು ನಾನ್ ತಂದಿರವು, ನನ್ನವು. ಅವುನ್ನ ಮುಟ್ಟದ್ರೆ ಸರಿಯಾಗಿರದಿಲ್ಲ, ನಾನು ಸುಮ್ಮನಿರದಿಲ್ಲ’ ಅಂದು `ಲೇ ಕರಿಯ, ಸೋಮಣ್ಣರು ಎಲ್ಲಿದ್ರು ಸರಿ ಕರ್ಕಂಬರೋಗ್’ ಅಂತ ಅವುನ್ನ ಕಳ್ಸಿ, ಅವ್ರು ಬರೋವರ್ಗೂ ಅವುರ್ನೆಲ್ಲ ಜಗಲಿ ಮೇಲೇ ಕೂರಸ್ದೆ. ನಮ್ಮನೆಗೆ ಯಾರ್ ಬಂದ್ರುವೆ ಕಾಫಿ, ಟೀ ಕೊಡ್ದೆ ಕಳಸ್ತಿರಲಿಲ್ಲ. ಆದ್ರೆ ಇವರಿಗೆ ಒಂದ್ ಲೋಟ ನೀರ್ನು ಕೊಡ್ನಿಲ್ಲ. ಆಮೇಲೆ ಅವರು ಬಂದ್ರು, ಅವುರಿಗೆ ಏನೊ ಸಮಾಧಾನ ಮಾಡುದ್ರು. ನಾನಿದ್ದಳು, `ನೋಡಿ ಮದ್ಲು ಸಾಲ ತೀರ್ಸಿ, ನನ್ನವೇನಾದ್ರು ಮುಟ್ಟಕ್ಕೆ ಬಂದ್ರೆ ಅವುರೇನಾದ್ರು ಆಯ್ತರೆ, ಇಲ್ಲ ನಾನು ಏನಾದ್ರು ಆಯ್ತಿನಿ’ ಅಂತ ಒಸಿ ಜಬರ್ ದಸ್ತಾಗಿ ಅಂದೆ. ಅವುರು ಮತ್ತೇನೂ ಮಾತಾಡದೆ ಹೋದ್ರು.
`ಆ ಕರಿಯ ಅಂತಿದ್ನಲ್ಲ, ಅವುನು ಎಸ್ಸಿ, ನಮ್ಮನೇಲೆ ಇದ್ದ. ಆಗ ನಾವು ಮೋಟ್ರು ಇಟ್ಕೊಂಡಿದ್ದೊ, ರೇಶ್ಮೆ ಬೆಳಿತಿದ್ದೊ, ಅದ್ನೆಲ್ಲ ಕರಿಯ ಮಾಡ್ಕೊಂಡಿದ್ದ. ಅವುನು ನಮ್ಗೆ ಗೊತ್ತಿಲ್ದಂಗೆ ಸಾಲ ತಗಂಡಿದ್ದ, ವಾಚು, ಉಂಗುರ, ಸೈಕಲ್ಲು… ಜೋರಾಗಿದ್ದ. ನಮ್ಗೇನು, ಕರಿಯ ಚೆನ್ನಾಗವ್ನೆ ಬುಡು ಅಂತ ನಮ್ ಪಾಡಿಗೆ ನಾವಿದ್ದೊ. ಆದ್ರೆ ಒಂದಿನ ಅಧಿಕಾರಿಗಳು ನಮ್ಮನೆಗೆ ಬಂದ್ರು, ಬಂದೋರು,
`ಏನ್ರಮ್ಮ, ಜೀತ ವಿಮುಕ್ತಿ ಬಗ್ಗೆ ಹೋರಾಟ ಮಾಡ್ತೀನಿ ಅಂತಿರಾ, ನೀವೆ ಎಸ್ಸಿ ಹುಡುಗನ್ನ ಜೀತಕ್ಕಿಟ್ಟಂಡಿದ್ದೀರಲ್ಲಾ’ ಅಂದ್ರು. `ಅವುನ್ನ ನಾವು ಜೀತಕ್ಕಿಟ್ಕಂಡಿಲ್ಲ, ಅರ್ಧ ಎಕರೆ ಜಮೀನು ಕೊಟ್ಟಿದೀವಿ, ಬರೊ ಉತ್ಪತ್ತಿನಲ್ಲಿ ಅರ್ಧ ನಮ್ಗೆ ಕೊಟ್ಟು, ಇನ್ನರ್ಧ ಅವುನೆ ಇಟ್ಕತನೆ, ನಮ್ಮಲ್ಲೇ ಊಟ, ಸ್ನಾನ ಮಾಡ್ತನೆ, ಬಟ್ಟೆ ಕೊಡಸ್ತಿವಿ. ಅವುನು ಅಷ್ಟಕ್ಕೂ ನಮ್ ಮನೆ ಮಗಂಥರಾ’ ಅಂದೆ.
`ಇಷ್ಟೆಲ್ಲ ಮಾತಾಡರು ನಿಮ್ಮೆಜಮಾನ್ರಿಗೇಳಿ ಸಾಲ ಕಟ್ಟಸ್ರಿ’ ಅಂದ.
`ನನ್ಗೆ ಉರುದೋಯ್ತು, ನಿನ್ನ ಹೆಂಡ್ತಿನ್ ಕೇಳಿ ಸಾಲ ಕೊಟ್ಟಿದ್ದ ಅಂದೆ. ಅವುನು ಬೆಚ್ಚಿಬಿದ್ದೋದ. ಮಾತಾಡದನಂಗಾದ. ನಾನಿದ್ದಳು, ಹೆಂಡ್ತಿರ ಮಾತು ಕೇಳೊ ಗಂಡಸರಲ್ಲ ನಮ್ಮನೇರು. ನೀವು ಹಿಂಗೆ ಪದೆ ಪದೇ ಸಾಲ ಕೇಳ್ಕಂಡು ಮನೆತಕ್ಕೆ ಬರಬಾರದು. ಅದರಲ್ಲೂ ಹೆಂಗಸರನ್ನು ಕೇಳ್ಳೇಬಾರದು, ನಮ್ಮನೆ ಅಂತಲ್ಲ ಯಾವ ಹೆಂಗಸ್ರು ಇರೊ ಮನೆತಕ್ಕು ಹೋಗಬಾರ್ದು ಅಂದೆ. ಅವುರಿಗೆ ಸಿಕ್ಕಾಪಟ್ಟೆ ಕೋಪ ಬಂತು, ಹೊರಟೋದ್ರು.
`ಆದರೆ ಅಧಿಕಾರಿಗಳು ಜಪ್ತಿ ನಿಲ್ಲಿಸಲಿಲ್ಲ. ಗಂಡಸ್ರೆಲ್ಲ ಹೊಲಗೆಲಸಕ್ಕೆ ಹೋಗಬುಡರು. ಮನೇಲಿ ಉಳೀತಿದ್ದೆ ಹೆಂಗಸ್ರು, ನಾವು ಒಂದಿಷ್ಟು ಹೆಂಗಸ್ರು ಊರೂರಿಗೆ ಹೋಗಿ, ಆ ಹೆಂಗಸ್ರುನೆಲ್ಲ ಸೇರಿಸ್ಕಂಡು, ಅವರಿಗೆಲ್ಲ ಹಕ್ಕುಬಾಧ್ಯತೆಗಳನ್ನು ತಿಳಿಸ್ತಾಹೋದೊ, ಅಂದ್ರೆ, ಜಪ್ತಿ ಮಾಡಕ್ಕೆ ಬಂದ ಅಧಿಕಾರಿಗಳ ತಡ್ದು, ಗ್ರಾಮ ನಮ್ದು, ಯಾಕ್ ಬಂದ್ರಿ, ಯಾರ್ನ ಕೇಳಿ ಬಂದ್ರಿ, ನಾವು ನಿಮ್ ಆಫೀಸ್ಗೆ ಹಿಂಗೆ ಹೇಳದೆ ಕೇಳದೆ ನುಗ್ತಿವಾ, ನುಗ್ಗದ್ರೆ ನಮ್ಮುನ್ನ ಕತ್ತು ಹಿಡಿದು ನೂಕಸಲ್ವ ನೀವು, ಊರಿನ ಮುಂದೆ ಬೋರ್ಡ್ ಹಾಕಿರದು ಕಾಣದಿಲ್ವ, ಈಗ ಕೇಳದೆ ಬಂದಿದೀರಲ್ಲ ಸಗಣಿನೀರು ಎರಚದಾ, ಕಂಬಕ್ಕೆ ಕಟ್ಟಸದಾ… ಅಂತ ಪ್ರಶ್ನೆ ಮಾಡುವೊ. ನಮ್ ಪ್ರಶ್ನೆಗೆ ಅಧಿಕಾರಿಗಳತ್ರ ಉತ್ತರ ಇರಲಿಲ್ಲ. ಅದನ್ನು ನೋಡಿ ನಮ್ ಹಿಂದೆ ಬಂದ ಹೆಂಗಸ್ರಿಗೆ ನಮ್ ಮೇಲೆ ವಿಶ್ವಾಸ ಬಂತು. ಸಂಘಟನೆ ಮೂಲಕ ನಾವು ಕೋರ್ಟಿಗೆ ಹೋಗಿ ಜಪ್ತಿ ತಡೆಯಾಜ್ಞೆ ತಂದೊ. ಅವುರು ಜಪ್ತಿ ಮಾಡಿ ತಗಂಡೋಗಿದಾರಲ್ಲ, ನಾವೂ ಕೂಡ ಮರು ಜಪ್ತಿ ಮಾಡನ ಅಂತ ಜನರನ್ನು ಹುರಿದುಂಬಿಸಿದೊ. ಅಧಿಕಾರಿಗಳಿಗೆ ಕಸಿವಿಸಿ ಶುರುವಾಯ್ತು.
`ಅಧಿಕಾರಿಗಳಿದ್ದರು ಫಸ್ಟು ಫಸ್ಟು ರೋಪ್ ಹಾಕರು, `ಏನ್ರಿ ನೀವು, ನಾವು ಬ್ಯಾಡವೇನ್ರಿ ನಿಮ್ಗೆ, ಸರ್ಕಾರದ ದುಡ್ಡು ಬೇಕಾದ್ರೆ ಹುಡುಕಂಡ್ ಬತ್ತಿರಾ’ ಅಂತೆಲ್ಲ ಅಂದ್ರು. `ಏನ್ ನಿಮ್ ಮನಿಂದ ತತ್ತಿರ ದುಡ್ಡ, ನೀವು ಕಾರಲ್ಲಿ ಬಂದಿದೀರ, ಆ ಕಾರ್ ಯಾರ್ದು? ನೀವು ಒಬ್ಬರೆ ದುಡಿತಿರ- ನಿಮ್ ಮನೆರೆಲ್ಲ ಸುಖವಾಗಿದಾರೆ. ನಾವು ಮನೆರೆಲ್ಲ ದುಡಿತಿವಿ- ಆದ್ರೂ ಹೊಟ್ಟಗಿಲ್ಲ, ನಮ್ ಬಟ್ಟೆ ನೋಡಿ…’ ಅಂತೆಲ್ಲ ಪ್ರಶ್ನೆ ಕೇಳಿ ಅಂತ ನಮ್ಮ ಸುತ್ತ ಇದ್ದ ಹೆಂಗಸ್ರು, ಗಂಡಸ್ರನ್ನು ಹುರಿದುಂಬಿಸಿದೊ. ನಾನ್ ಮಾಡ್ತಿರದ್ ನೋಡಿ ನೋಡಿ ಅಧಿಕಾರಿಗಳಿಗೆ ರೇಗೋಗಿತ್ತು.
`ಈ ಮಧ್ಯೆ ನನ್ನ ಹುಡಿಕ್ಕಂಡು ಒಬ್ಬ ಪೊಲೀಸೋನು ನಮ್ಮನೆಗೆ ಬಂದ, `ಯಾರ್ರಿ ಅದು ಅನಸೂಯಮ್ಮ, ಸಾಲ ವಸೂಲಿಗೆ, ಜಪ್ತಿಗೆ ಬರೊ ಅಧಿಕಾರಿಗಳಿಗೆ ತೊಂದರೆ ಕೊಡ್ತಿದೀರ ಅಂತ ನಿಮ್ಮ ಮೇಲೆ ಕಂಪ್ಲೇಂಟ್ ಇದೆ…’ ಅಂದ. ನಾನು ಯಾರಪ್ಪ ನೀನು ಅಂದೆ. ಅವನಿಗೆ ಕ್ವಾಪ… ನೆತ್ತಿಗತ್ತುಬುಡ್ತು. ಏನಮ್ಮ ನೀನು ಹಿಂಕೇಳ್ತಿಯಾ, ಬಟ್ಟೆ ಹಾಕ್ಕಂಡಿರದು ನೋಡುದ್ರೆ ಗೊತ್ತಾಗಲ್ವ ಅಂದ. ಅಷ್ಟೊತ್ತಿಗೆ ಜನ ಸೇರ್ಕಂಡ್ರು. ಈ ಬಟ್ಟೆ, ಬ್ಯಾಡ್ಜು, ಟೋಪಿ… ಕಾಸು ಕೊಟ್ರೆ ಸಿಗದಿಲ್ವ, ನೀನೇ ಪೊಲೀಸ್ ಅನ್ನದ್ಕೆ ನಿನ್ನತ್ರ ಐಡೆಂಟಿಟಿ ಕಾರ್ಡ್ ಐತಾ ಅಂದೆ. ನೋಡಿ, ನಮ್ಮ ಹಳ್ಳಿ ಹೆಂಗಸ್ರಿಗೆ ಆಗಲೇ ಐಡಿ ಕಾರ್ಡ್ ಬಗ್ಗೆ ತಿಳಿವಳಿಕೆ ಇತ್ತು. ಅದನ್ನು ರೈತ ಸಂಘಟನೆ, ಚಳುವಳಿ, ನಾಯಕರು, ಲಿಟರೇಚರ್ರು ಕಲಿಸಿದ್ದೋ. ಐಡಿ ಕಾರ್ಡ್ ಅಂದಾಕ್ಷಣ ಅವನು ಸುಸ್ತಾಗೋದ, ಮಾತೆ ಹೊರಡಲಿಲ್ಲ. ಎಲ್ಲಿರುತ್ತೆ ಅವನತ್ರ ಐಡಿ ಕಾರ್ಡು? ಇಲ್ಲ ಅಂದ. ಹೇಳದೆ ಕೇಳದೆ ಗ್ರಾಮ ನುಗ್ಗಿದಿಯ, ನಾನು ಹಣ ಇಟ್ಕೊಂಡು ಪೋಸ್ಟ್ ಆಫೀಸ್ ಕೆಲಸ ಮಾಡ್ತಿದೀನಿ, ತಪ್ಪಾಯ್ತು ಅಂತ ಅಪಾಲಜಿ ಪತ್ರ ಬರಕೊಟ್ಟು ಹೋಗು, ಇಲ್ಲ ಅಂದ್ರೆ ಮನೆವಳಿಕೆ ಸೇರ್ಸಿ ಕೂಡಾಕ್ತಿವಿ, ಬೀಗ ಹಾಕ್ತಿವಿ, ಊಟಾನೂ ಕೊಡ್ತಿವಿ ಅಂದೊ. ಆತ ವಿಧಿಯಿಲ್ಲದೆ ಅಪಾಲಜಿ ಬರೆದುಕೊಟ್ಟು ಹೋದ.
`ಆಗ ನಮ್ಮೂರಿನ ಮೇಲಿನ ಕ್ವಾಪ ಇನ್ನೂ ಜಾಸ್ತಿಯಾಯ್ತು. ಅಧಿಕಾರಿಗಳೆಲ್ಲ ಸಭೆ ಸೇರಿ, ಮೊದಲು ಸೋಮಣ್ಣ(ನಮ್ಮೆಜಮಾನ್ರು)ನಿಂದಲೇ ಶುರು ಮಾಡನ, ಅವರಿಂದಲೇ ಒಂದ್ ಐವತ್ತು ರೂಪಾಯಿ ಕಟ್ಟಿಸ್ಕಂಡು ರಸೀತಿ ಹಾಕನ, ಅದನ್ನು ಎಲ್ಲರಿಗೂ ತೋರ್ಸನ, ಆಗ ಎಲ್ರೂ ಕಟ್ತರೆ ಅಂತ ಪ್ಲಾನ್ ಹಾಕ್ಕೊಂಡಿದ್ರು. ನಮ್ಮನೆಗೆ ಅಧಿಕಾರಿಗಳು ಬರೋದು, ಕಾಫಿ ಕುಡಿದು ಹೋಗದು ಮಾಮೂಲಾಗಿತ್ತು. ಹಂಗೆ ಒಂದಿನ ಇಪ್ಪತ್ತು ಮೂವತ್ತು ಜನ ಅಧಿಕಾರಿಗಳು ನಮ್ಮನೆಗೆ ಬಂದ್ರು. ಅವರೆಲ್ಲ ನಮಗೆ ಪರಿಚಯದ ಅಧಿಕಾರಿಗಳೆ. ಬಂದ್ರಲ್ಲ ಅಂತ ನಾನು ಅವುರಿಗೆಲ್ಲ ಬ್ಯಾಲದಣ್ಣಿನ ಪಾನಕ ಮಾಡಿ ಅವರ ಮುಂದಿಟ್ಟೆ, ಲೋಟ ಕೈಯಲ್ಲಿಡಕಂಡ ಅಧಿಕಾರಿ, `ಇದು ಅಮೃತ ಅಂತ ತಿಳಕತಿನಿ, ರೈತರಿಗೆ ಕಷ್ಟ ಇದೆ ಅಂತ ನನ್ಗೂ ಗೊತ್ತು, ನೀವು ಒಂದು ಐವತ್ತು ರೂಪಾಯಿ ಕಟ್ಟಿ, ರಸೀತಿ ತಗಳಿ, ಈ ಪಾನಕಾನ ಅಮೃತ ಅಂತೇಳಿ ಕುಡಿತಿನಿ…’ ಅಂತ ನೈಸಾಗಿ ನಮ್ಮನೇರ್ನ ತೆಕ್ಕೆಗೆ ತಗತಿದ್ದ. ನಮ್ಮನೆರು ಅವರ ಮಾತಿಗೆ ಮರುಳಾಗಿ ಜೇಬಿಗೆ ಕೈಹಾಕಕೆ ಮನಸ್ಸು ಮಾಡಿದ್ರು. ನನಗೆ ನಮ್ಮ ಹೋರಾಟವೆಲ್ಲ ಹೊಳೇಲಿ ಹುಣಸೇಹಣ್ಣು ಕಲಸಿದ ಹಾಗಾಗಿಹೋಯ್ತಲ್ಲ ಅಂತ ಯೋಚನೆ ಶುರುವಾಯ್ತು. ತಕ್ಷಣವೇ ಮುಂದೆ ಹೋಗಿ ನಿಂತ್ಕಂಡೆ, `ಅವರ ಜೇಬಲ್ಲಿ ಐವತ್ತು ನೂರು ರೂಪಾಯಿ ಇದ್ರು ರಸೀತಿ ಹಾಕ್ಸಲ್ಲ, ನಿಮಗೆ ಕೊಡಕೆ ಬುಡದಿಲ್ಲ. ಅದು ಮಕ್ಕಳ ಊಟಕ್ಕೆ ಬೇಕಾದ ಸಾಮಾನು ತರಕ್ಕಿರದು, ನಾನು ಕೊಡದಿಲ್ಲ’ ಅಂದೆ. ನಮ್ಮೆಜಮಾನ್ರು ನನ್ನ ಸಿಟ್ಟು ನೋಡಿ ಸುಮ್ಮನಾದ್ರು.
`ಇದಾದಮೇಲೆ ನಮ್ಮ ಊರಿನ ಮೇಲೆ ಅಧಿಕಾರಿಗಳಿಗೆ ಜಿದ್ದು ಬೆಳೆದುಬುಟ್ತು. ಇವರಿಗೇನಾದ್ರು ಮಾಡ್ಲೆಬೇಕು ಅಂತ ಹಟಕ್ಕೆ ಬಿದ್ದರು. ಹಿಂಗಿರಬೇಕಾದ್ರೆ ಒಂದಿನ ಎರಡುಮೂರು ವ್ಯಾನಲಿ ಪೊಲೇಸ್ನೋರು, ಅಧಿಕಾರಿಗಳು ಎಲ್ಲ ಒಟ್ಟೊಟ್ಟಿಗೆ ನಮ್ ಊರಿಗೆ ನುಗ್ಬುಟ್ರು, ಊರಿನ ಆ ತುದಿಲಿರೋ ಒಂದ್ ಮನೆ ಮೇಲೆ ದಾಳಿ ಮಾಡುದ್ರು, ಆ ಮನೇಲೇನಾಗಿದೆ, ಆಯಮ್ಮನ ಗಂಡ ಸತ್ತು ಹದಿನೈದು ದಿನ ಆಗಿದೆ. ಆ ಹಸಿ ನೋವು, ಸಂಕಟದಲ್ಲಿ ಇರೋ ಟೈಮಲ್ಲೆ ಇವರು ನುಗ್ಗವ್ರೆ. ಆಯಮ್ಮ ತಲೆ ಮೇಲೆ ಕೈಹೊತ್ತು, ನನ್ನ ಗಂಡ ಸತ್ತೋಗವ್ನೆ, ಬ್ಯಾಡ ಕಣ್ರಪ್ಪ ಅಂದ್ರು ಕೇಳ್ದೆ ಆಯಮ್ಮನ್ನ ಮೂಲೆಗೆ ನೂಕ್ ಬುಟ್ಟವ್ರೆ. ಇದು ನನ್ಗೆ ಗೊತ್ತಾಯ್ತು. ಜೊತೆಗೆ ಒಂದಿಷ್ಟು ಹೆಂಗಸರ್ನ ಕರಕೊಂಡು ಅಲ್ಲಿಗೆ ಹೋದೆ. ಆಗೆಲ್ಲ ರೈತ ಸಂಘದ್ದು ಹಾಡುಗಳು ಭಾರೀ ಫೇಮಸ್ ಆಗಿದ್ದೊ, `ಎಲ್ಯವನೆ ಎಲ್ಯವನೆ, ನಮ್ಮ ಬತ್ತ ರಾಗಿ ತಿನ್ನೋ ಕತ್ತೆ ಸೂಳೆಮಗ… ಏನು ಮಾಡಿ ಏನು ಬಂತಣ್ಣ ಓ ರೈತಣ್ಣ, ಯಾತಕಾಗೀ ಬದುಕು ತಿಳಿಯಣ್ಣ…’ ಹಿಂಗೆ ಹಾಡಕ್ಕೆ ಶುರು ಮಾಡದ್ರೆ ಊರ ಜನರೆಲ್ಲ ಗುಂಪುಗೂಡರು. ಹಿಂಗೆ ಗುಂಪಾಗಿ ಆ ಮನೆತಕ್ಕೋದೊ, ಆಯಮ್ಮನ ಸ್ಥಿತಿ ನೋಡಿ ನಮ್ಮ ಪಾರ್ವತಮ್ಮನೋರು- ನಮ್ ಅರ್ಕೇಶ್ ಇದಾರಲ್ಲ, ವೀರಪ್ಪನ್ ಹಿಡಿಯಕ್ಕೆ ಹೋಗಿದ್ದ ಎಸ್ಟಿಎಫ್ ಟೀಂನಲ್ಲಿದ್ರಲ್ಲ ಅವರಮ್ಮ- ಮನುಷ್ಯತ್ವ ಇಲ್ದೋರು, ಇಂಥ ಸ್ಥಿತೀಲೂ ಆಯಮ್ಮನ್ನ ಹಿಂಗ್ ನೂಕಿದೀರಲ್ಲ ಅಂತ ಪೊಲೀಸ್ನೋರ ಮೇಲೆ ಎಗರಿ ಹೋದ್ರು. ನಾನು ಪರಿಸ್ಥಿತಿನ ನೋಡ್ಕಂಡು, ನಿಧಾನವಾಗಿ, ಇಷ್ಟೊಂದು ಅಮಾನವೀಯವಾಗಿ ಪೊಲೀಸ್ನೋರು ವರ್ತಿಸಲ್ಲ, ಅವರೂ ಮನುಷ್ಯರೇ ಅಲ್ವ, ಅವರು ಬಂದಿರದು ನಮ್ ರಕ್ಷಣೆಗೆ, ನ್ಯಾಯದ ಪರವಾಗಿ ಇರೋರಲ್ಲವ ನೀವು ಅಂದೆ. ಅವರು ದಾಳಿನ ನಿಲ್ಲಿಸಿ ಒಂದು ಕಡೆಗೆ ಸುಮ್ಮನೆ ನಿಂತ್ಕಂಡ್ರು. ನೋಡಿ, ನಮ್ಮೂರಲ್ಲಿ ದನಗಳೂ ಕೂಡ ಯಾರ್ನೂ ತಳ್ಳಕಂಡು, ನೂಕ್ಕಂಡು, ಬೀಳುಸ್ಕಂಡು ಹೋಗಲ್ಲ. ನೋಡಿ ಬೇಕಾದ್ರೆ, ಅವುಗಳ ಪಾಡಿಗೆ ಅವು ಅರಗಾಗಿ ಹೋಯ್ತವೆ, ಅಂಥಾದ್ರಲ್ಲಿ ನೀವು ಹಿಂಗ್ ಮಾಡಿದೀರಲ್ಲ, ನಿಮಗೆ ಏನ್ ಮಾಡಬೇಕು ಅಂತ ತರಾಟೆಗೆ ತಗಂಡೆ. ಮನೆ ಜಪ್ತಿ ಮಾಡಕೆ ಬಿಡಲ್ಲ ಅಂತ ಹೆಂಗಸರೆಲ್ಲ ಕವರ್ ಮಾಡ್ಕಂಡ್ ನಿಂತ್ಕಂಡೊ. ನೋಡಿ ನಾವು ಯಾರ ಋಣದಲ್ಲೂ ಬದುಕಿಲ್ಲ, ಸ್ವಾತಂತ್ರ್ಯ ಬಂದಮೇಲೆ ರೈತರಿಗಾಗಿರೊ ಅನ್ಯಾಯ, ಅದಕ್ಕೆ ಸರ್ಕಾರ ಕಟ್ಟಿಕೊಡಬೇಕಾದ ಹಣ, ಅದನ್ನೆಲ್ಲ ಪಟ್ಟಿ ಮಾಡಿ ಸರ್ಕಾರಕ್ಕೆ ಕಳ್ಸಿದೀವಿ. ಅದು ಅಲ್ಲಿಂದ ಬಂದಮೇಲೆ, ಯಾರ್ಯಾರು ಎಷ್ಟೆಷ್ಟು ಕೊಡಬೇಕು ಅಂತ ಹೇಳದಮೇಲೆ ನಾವು ಕಟ್ತಿವಿ, ಆಮೇಲೆ ನೀವು ಬನ್ನಿ ಅಂದೊ.
`ಏನ್ರಿ ನೀವು ಎಲ್ಲಾರ ಮನೆಗೂ ಬರ್ತಿರಾ, ಎಲ್ರ ಮನೆ ಮಹಿಳೆಯೇನ್ರಿ ನೀವು ಅಂದ. ನೋಡಿ, ಒಂದು ಹಳ್ಳಿ ಅಂದ್ರೆ ಒಂದು ಕುಟುಂಬ ಇದ್ದಂಗೆ, ಹಳ್ಳಿಗೆ ಒಳ್ಳೆ ಹೆಸರು ಬಂದ್ರೆ ಎಲ್ಲರಿಗೂ ಬಂದಂಗೆ, ಕೆಟ್ಟ ಹೆಸರು ಬಂದ್ರೆ ಎಲ್ಲರಿಗೂ, ಹಳ್ಳಿಯ ಘನತೆ, ಗೌರವಗಳನ್ನು ಕಾಪಾಡ್ಕೊಬೇಕಾದ್ದು ನಮ್ಮ ಕರ್ತವ್ಯ. ನೀವು ಯಾವುದಾವುದೊ ಊರುನೋರು, ಯಾವುದಾವುದೋ ಮನೆಗಳಿಂದ ಬಂದೋರು ನಿಮಗೆ ಅದೆಲ್ಲ ಅರ್ಥ ಆಗಲ್ಲ ಬುಡಿ ಅಂದೆ.
`ಅವರು ಮನೆಗೆ ನುಗ್ಗಿದಂಗೆಲ್ಲ ಹೆಂಗಸ್ರು ಮಕ್ಕಳು ನುಗ್ಗಿ ಜವಾಬು ಕೊಡ್ತಿದ್ದೊ, ಪ್ರಶ್ನೆ ಹಾಕ್ತಿದ್ದೊ. ಅವರೇನ್ಮಾಡಿದ್ರು, ಪ್ಲಾನ್ ಮಾಡಿ ಇನ್ನೊಂದು ಮನೆಗೆ ನುಗ್ಬುಟ್ರು. ಏನ್ ಮಾಡದು. ಆ ಮನೆಗೆ ಒಂದೇ ಬಾಗ್ಲು. ನಾವು ಎಲ್ರೂ ಹೆಂಗಸ್ರೆ, ಅವುರೆಲ್ಲ ಗಂಡಸ್ರು, ಕೈಯಲ್ಲಿ ಏನೇನೋ ಹಿಡಕಂಡವ್ರೆ, ಅಧಿಕಾರ ಬೇರೆ ಐತೆ, ಯೋಚ್ನೆ ಮಾಡದೊ, ಮನೆ ಬಾಗಿಲು ಹಾಕ್ಕೊಂಡೊ, ಮೆಣಸಿನಕಾಯಿ ಘಾಟ್ ಹಾಕಿ, ಮನಿವಳಿಕೆ ಮಡಗ್ದೊ, ಹೊಗೆ ಜೋರಾಯಿತು. ಅವರಿಗೆಲ್ಲ ಅದು ಹೊಸ ಜಾಗ, ದಾರಿ ಗೊತ್ತಿಲ್ಲ. ಘಾಟು ಕುಡಿದು ಕೆಮ್ಮಕ್ ಶುರು ಮಾಡುದ್ರು, ಕೆಲವ್ರು ತಲೆ ಹೊಡಕಂಡು ಅಪ್ಪಾ ಅಂದ್ರು, ಇನ್ಯಾರೊ ಒಬ್ರು ಪ್ಯಾಂಟ್ ಹರಕ್ಕಂಡು ಕಣ್ಣೀರಾಕ್ತಿದಾರೆ. ನಿಮ್ ದಮ್ಮಯ್ಯ ಅಂತಿವಿ ಬುಟ್ಟುಬುಡಿ, ನಿಮ್ ಊರಿಗೆ ಇನ್ನೊಂದ್ಸಲ ಬರದಿಲ್ಲ ಅಂತ ಕೂಗ್ತಿದಾರೆ…. ಕೊನೆಗೆ ನಮಗೇ ಅಯ್ಯೋ ಅನ್ನಿಸಿ ಬುಟ್ಟೊ…..’
ಹಳ್ಳಿ ಹಕ್ಕಿ ಅನಸೂಯಮ್ಮನವರ ಅಂದಿನ ಆ ಧೈರ್ಯ, ಸಂಘಟನಾ ಶಕ್ತಿ, ಸೇವಾ ಮನೋಭಾವ, ಹೋರಾಟ, ಕೆಚ್ಚು ಇಂದಿನ ಮಹಿಳೆಯರಿಗೆ ಒಂದಷ್ಟು ಸ್ಫೂರ್ತಿ, ಪ್ರೇರಣೆ ನೀಡಿ ಜಾಗೃತರನ್ನಾಗಿಸಿದರೆ- ಅಷ್ಟು ಸಾಕಲ್ಲವೆ?
ಬಹುಮುಖ ಆಸಕ್ತಿಗಳ ಹಿರಿಯ ಪತ್ರಕರ್ತರು. ಮೂಲತಃ ಚನ್ನರಾಯಪಟ್ಟಣ ತಾಲ್ಲೂಕಿನವರು. ಈಗ ಬೆಂಗಳೂರು.