ಅಜ್ಜ ಬಲಿಪರು ಪದ್ಯ ಹೇಳಿಕೊಡುತ್ತಿದ್ದ ಶೈಲಿ ಅನನ್ಯವಾದದ್ದು, ಇನ್ನೊಬ್ಬರು ಅನುಸರಣೆ ಮಾಡಲಾಗದ್ದು. ಪದ್ಯವನ್ನು ಬಾಯಿಯಲ್ಲಿ ಹೇಳುತ್ತಾ ಎರಡೂ ಕೈಯ್ಯಲ್ಲಿ ಪದ್ಯದ ಛಂದೋಗತಿಯನ್ನು ತೋರಿಸುತ್ತಾ ಇರುವಂತೆಯೋ ಎನ್ನುವಂತೆ ಅಥವಾ ಪದ್ಯ ನಿಬದ್ಧವಾದ ತಾಳದ ಘಾತಗಳನ್ನು ಹಸ್ತದ ಬೀಸುವಿಕೆಯಿಂದ ತೋರಿಸುತ್ತಾ ಹೇಳಿಕೊಡುತ್ತಿದ್ದರು. ಇದರಿಂದ ಸಹಜವಾಗಿ ಅವರ ಶರೀರದ ಭಾಷೆಯೂ ಶಾರೀರದ ಭಾಷೆಯೂ ಕಲಿಯುತ್ತಿರುವ ಮೊಮ್ಮಗ ಕಿರಿಯ ಬಲಿಪರಲ್ಲಿ ಹಾಡಿನ ಅಂತರ್ಯವಾದ ತಾಳ, ಸಾಹಿತ್ಯ, ಭಾವ ಮತ್ತು ಗತಿ ಮನದೊಳಗೆ ಒಳಸೇರುತ್ತಿತ್ತು.
‘ಬಲಿಪ ಮಾರ್ಗ’ ಅಂಕಣದಲ್ಲಿ ಹಿರಿಯ ಬಲಿಪ ನಾರಾಯಣ ಭಾಗವತರು ಮೊಮ್ಮಗನಿಗೆ ಪದ್ಯಗಳನ್ನು ಕಲಿಸುತ್ತಿದ್ದ ರೀತಿನೀತಿಗಳ ಬಗೆಗೆ ಬರೆದಿದ್ದಾರೆ ಕೃಷ್ಣ ಪ್ರಕಾಶ ಉಳಿತ್ತಾಯ
ಅಜ್ಜ ಭಾಗವತಿಕೆ ಕಲಿಸಿದರು
ಮೊಮ್ಮಗ ಕಿರಿಯ ಬಲಿಪ ನಾರಾಯಣ ಭಾಗವತರು ತಮ್ಮ ಅಜ್ಜ ಹಿರಿಯ ಬಲಿಪ ನಾರಾಯಣ ಭಾಗವತರಿಂದ ಭಾಗವತಿಕೆ ಕಲಿತ ಕ್ರಮ ವಿಶಿಷ್ಟವೂ ಮತ್ತು ಅನ್ಯತ್ರ ದುರ್ಲಭ ರೀತಿಯದ್ದು ಮತ್ತು ಈ ಕ್ರಮ ಪರಿಶೀಲನೆಗೆ ಒಳಪಡಬೇಕಾದದ್ದು. ಬಲಿಪರಿಗೆ ಅವರ ಅಜ್ಜ ಭಾಗವತಿಕೆಯನ್ನು ತಾಳ (ಜಾಗಟೆ) ಹಿಡಿದು ಅಕ್ಷರ-ಕಾಲ ತೋರಿಸಿ ಹೇಳಿಕೊಟ್ಟದ್ದಲ್ಲ. ಕಲಿಕಾ ಕ್ರಮದಲ್ಲಿ ಎಂದಿನ ಔಪಚಾರಿಕತೆ ಇರಲಿಲ್ಲ. ಹಿರಿಯ ಬಲಿಪ ಭಾಗವತರು ಭಾಗವತಿಕೆ ಕಲಿಸಲು ತೊಡಗುತ್ತಿದ್ದುದೇ ಪ್ರಸಂಗ ಬಾಯಿಪಾಠ ಮಾಡಿಸುವ ಮೂಲಕ. ಪ್ರಸಂಗ ಕಂಠಸ್ಥವಾದ ಮೇಲೆ ಕಲಿಯುವವನಲ್ಲಿ ಲಯ ಜ್ಞಾನ ಬಂದಿದ್ದರೆ ತಾಳ ಹಾಕದೆ ಕೇವಲ ಹಾಡಿನ ಸಾಹಿತ್ಯವನ್ನು ಲಯಬದ್ಧವಾಗಿ(ಅಂದರೆ ಹಾಡು ರಚನೆಯಾದ ತಾಳದಲ್ಲಿ) ಹೇಳಿಕೊಡುವ ಮೂಲಕ ಹಾಡನ್ನೂ ತಾಳವನ್ನು ಏಕಕಾಲದಲ್ಲಿ ಕಲಿಸುತ್ತಿದ್ದರು. ಈ ಕ್ರಮ ವೈಜ್ಞಾನಿಕವೆನಿಸುತ್ತದೆ. ಭಾಗವತಿಕೆಗೆ ಬೇಕಾದ ಹಲವು ವಿಷಯಗಳನ್ನು ಏಕಕಾಲದಲ್ಲಿ ತಿಳಿಸಿಕೊಡುವ ರೀತಿಯದ್ದಾಗಿತ್ತು. ಅಂದರೆ ಅಜ್ಜಬಲಿಪರು ಯಕ್ಷಗಾನ ಭಾಗವತಿಕೆ ಕಲಿಯಲೂ ಒಂದು ಮಟ್ಟಿನ ಯೋಗ್ಯತೆಯನ್ನು ಅಪೇಕ್ಷಿಸುತ್ತಿದ್ದರು.
ಪ್ರಸಂಗ ಪಠ್ಯದ ಕಂಠಪಾಠ
ಯಕ್ಷಗಾನ ಭಾಗವತಿಕೆಯಲ್ಲಿ ಸಾಹಿತ್ಯ ಬಹುಮುಖ್ಯ ಪಾತ್ರ ವಹಿಸುತ್ತದೆ. ಪ್ರಸಂಗದ ನಡೆ; ಪಾತ್ರಗಳ ಶೀಲ-ಸ್ವಭಾವ ಇವೆಲ್ಲವೂ ಪ್ರಸಂಗದ ಪದ್ಯಗಳಲ್ಲಿ ಸೂಚಿತವಾಗಿರುತ್ತದೆ. ಆದ್ದರಿಂದ ಪ್ರಸಂಗ ಪಠ್ಯವನ್ನು ಓದುವ ಕ್ರಮದ ಜತೆಗೆ ಆ ಸಾಹಿತ್ಯವನ್ನು ಕಂಠಸ್ಥಮಾಡಿಕೊಳ್ಳಬೇಕೆಂದು ಬಯಸುತ್ತಿದ್ದ ಕಾಲವದು. ಪ್ರಸಂಗ ಓದುವ ಕ್ರಮವೆಂದರೆ ಪ್ರತಿ ಪದ್ಯಗಳಿಗೂ ವಿಶಿಷ್ಟವಾದ ಓದುವ ಗತಿ (ಗತ್, ದಸ್ತು, ಮಟ್ಟು, ಧಾಟಿ) ಇದೆ. ಇದನ್ನು ನಿರ್ಧರಿಸುವುದು ಆಯಾ ಪದ್ಯಗಳು ರಚಿಸಲ್ಪಟ್ಟ ಛಂದಸ್ಸುಗಳಿಂದ. ಇದಕ್ಕೆ ಅನುಗುಣವಾಗಿ ಪದ್ಯಗಳನ್ನು ಓದಲು ಭಾಗವತನಾದವನಿಗೆ ಬರಲೇಬೇಕು. ಮತ್ತೂ ಮುಖ್ಯವಾಗಿ ಹೀಗೆ ಓದಲು ಬಂದಮೇಲೆ, ಭಾಗವತನಾದವನ ಅರ್ಹತೆ ಮತ್ತು ಶ್ರೇಷ್ಠತೆ ಆತನಿಗೆಷ್ಟು ಪ್ರಸಂಗಗಳು ಕಂಠಸ್ಥವಾಗಿದೆ ಎಂಬುದರ ಮೇಲೂ ಇರುತ್ತಿತ್ತು. ಹಾಗಾಗಿಯೇ ಅಜ್ಜ ಬಲಿಪರು ತನ್ನ ಮೊಮ್ಮಗನಿಂದ ಮೊದಲು ಪ್ರಸಂಗಗಳನ್ನು ಕಂಠಪಾಠ ಮಾಡಿಸಲು ತೊಡಗಿಸಿದ್ದು. ಒಮ್ಮೆ ಕಂಠಪಾಠ ಮಾಡಿಕೊಂಡರೆ ಮತ್ತಿನ ಕೆಲಸ ಹಾಡಿನ ಮಟ್ಟುಗಳ ಮರ್ಮವನ್ನು ತಿಳಿಹೇಳುವದು. ಪದ್ಯಗಳು ಬಾಯಿಗೆ ಬರುತ್ತದೆ ಮತ್ತಿನ ಕೆಲಸ ಪದ್ಯವನ್ನು ಹಾಡುವ ಧಾಟಿ ಬಂದರಾಯ್ತು.
ಇಲ್ಲೊಂದು ಸೂಕ್ಷ್ಮಇದೆ. ಪದ್ಯದ ಹಾಡು ಅಂದರೆ ‘ಮಾತು’ ಅಥವಾ ‘ಸಾಹಿತ್ಯ’ ಮತ್ತು ಸಂಗೀತ ಅಂದರೆ ‘ಧಾತು’ ಇವನ್ನು ಪಾಠಮಾಡುವಾಗ ಸಹಜವಾಗಿಯೇ ಲಯಸಿದ್ಧಿಯೂ ದೊರಕುತ್ತದೆ. ಲಯವನ್ನು ಹೇಳಿಕೊಟ್ಟು ಬರುವಂಥದ್ದಲ್ಲ ಎಂಬುದು ಅಜ್ಜ ಬಲಿಪರಾದಿಯಾಗಿ ಎಲ್ಲ ಹಿರಿಯ ಅಭಿಜ್ಞ ಭಾಗವತರಿಗೂ ಅರಿವಿದ್ದ ವಿಷಯ. ಹಾಗಾಗಿ ಹಾಡಿನ ಮಟ್ಟನ್ನು ಪಾಠಮಾಡುವಾಗ ಲಯದ ವಿನ್ಯಾಸವೂ ಗತಿಯೂ ವಿದ್ಯಾರ್ಥಿಯಲ್ಲಿ ಅಚ್ಚೊತ್ತುತ್ತಿತ್ತು. ಹಾಡಿನ ಗತಿಯೇ ಲಯ-ತಾಳವಾಗಿ ಮನದಲ್ಲಿ ಸ್ಥಿರವಾಗಿ ನಿಲ್ಲುತ್ತಿತ್ತು. ಮಾತು-ಧಾತು-ಲಯ (ಸಾಹಿತ್ಯ-ಸಂಗೀತ-ನಿರ್ದಿಷ್ಟ ಕಾಲಗತಿಯಲ್ಲಿ ಮಾತುಧಾತುಗಳ ಅನುರಣನೆ) ಎಂಬ ಸಂಗೀತದ ತ್ರಿಕರಣಗಳ ಸಿದ್ಧಿಯಾಗುತ್ತಿತ್ತು. ಇದು ಅಜ್ಜ ಬಲಿಪರು ಕಿರಿಯ ಬಲಿಪರಿಗೆ ಪಾಠ ಮಾಡುತ್ತಿದ್ದ ಕ್ರಮದ ಹಿಂದಿರುವ ವಿವೇಚನೆ.
ಹಾಗಾಗಿ ಕಿರಿಯ ಬಲಿಪರಿಗೆ ಅಜ್ಜ ಮೊದಲು ಪ್ರಸಂಗವನ್ನು ಕಂಠಸ್ಥ ಮಾಡಲು ಹೇಳುತ್ತಿದ್ದರು. ಬಲಿಪರು ಕಂಠಪಾಠಕ್ಕೆ ತೊಡಗಿದ್ದು ಪ್ರಸಂಗವನ್ನು ಬರೆಯುವ ಮೂಲಕ. ಒಂದು ಪುಸ್ತಕದಲ್ಲಿ ಅಜ್ಜ ಹೇಳಿದ ಪದ್ಯಗಳನ್ನು ಪೆನ್ಸಿಲ್‌ನಲ್ಲಿ ಬರೆದುಕೊಳ್ಳಬೇಕು. ಮತ್ತೆ ಸಾಲಿನ ಎಡೆ ಸ್ಥಳಗಳಲ್ಲಿ ಪೆನ್‌ಗಳಲ್ಲಿ ಬರೆಯಬೇಕು. ಯಾವುದೇ ಪುಟವನ್ನು ವೃಥಾ ಹಾಳುಮಾಡಲು ಬಿಡುತ್ತಿರಲಿಲ್ಲ. ಹೀಗೆ ಪ್ರಸಂಗ ಬರೆಯುತ್ತಾ ಬರೆಯುತ್ತಾ ಪ್ರಸಂಗಗಳನ್ನು ಕಂಠಸ್ಥ ಮಾಡಿಕೊಂಡ ಮೊಮ್ಮಗ ಬಲಿಪ ನಾರಾಯಣ ಭಾಗವತರು ಇಡೀ ಪ್ರಸಂಗವನ್ನು ಅಜ್ಜನಿಗೆ ಹಾಡಿ ಒಪ್ಪಿಸಬೇಕು. ಒಂದೊಮ್ಮೆ ಪಾಠವನ್ನು ಒಪ್ಪಿಸಿಯಾದ ಮೇಲೆ ಮತ್ತೆ ಅಜ್ಜ ಅದನ್ನು ಕೇಳುತ್ತಿರಲಿಲ್ಲ. ಬರೆದ ಪುಸ್ತಕವನ್ನು ಇಟ್ಟುಕೊಳ್ಳಲೂ ಬಿಡುತ್ತಿರಲಿಲ್ಲ. ಹರಿದು ಬಿಸಾಡಿ ಬಿಡಬೇಕು ಅಷ್ಟೇ. ಬಾಯಿಪಾಠ ಬಂದಮೇಲೆ ಪುಸ್ತಕ ಯಾಕೆ ಎನ್ನುವ ಧೀರ ನಿಲುವು ಅವರದ್ದು. ಅಜ್ಜ ಬಲಿಪರ ಪ್ರಕಾರ ಬಾಯಿಪಾಠ ಬಾರದೆ ಪದ್ಯ ಹೇಳುವಂತಿಲ್ಲ. ಒಂದೈದಾರು ಸಲ ಓದಿದ ಮೇಲೆ ಕಿರಿಯ ಬಲಿಪರಿಗೆ ಪ್ರಸಂಗದ ಪದ್ಯಗಳು ಬಾಯಿಪಾಠ ಬರುತ್ತಿದ್ದವು. ಮೊಮ್ಮಗನ ಈ ಸಾಮರ್ಥ್ಯವನ್ನು ಅಜ್ಜ ಬಲಿಪರೂ ತುಂಬ ಅಭಿಮಾನದಿಂದ ಹೇಳುತ್ತಿದ್ದರಂತೆ.
ಬಲಿಪರ ತಂದೆಯವರಾದ ಬಲಿಪ ಮಾಧವ ಭಟ್ ಕೂಡ ಪದ್ಯಗಳನ್ನು ಬಾಯಿಪಾಠ ಮಾಡುವಂತೆ ಒತ್ತಾಸೆ ಮಾಡುತ್ತಿದ್ದರು. ಮಾತ್ರವಲ್ಲ ಮಾಧವ ಭಟ್ಟರು ಯಕ್ಷಗಾನದ “ತುಂಡು ಪದ”ಗಳನ್ನೂ ಹೇಳಿಕೊಡುತ್ತಿದ್ದರು. ಈ ತುಂಡು ಪದಗಳೆಂದರೆ ಪ್ರಸಂಗದ ನಿರ್ದಿಷ್ಟ ಸಂದರ್ಭದಲ್ಲಿ ಬರುವಂತಹಾ ಪದ್ಯಗುಚ್ಛಗಳಾಗಿರದೆ ಆ ಗುಂಪಲ್ಲಿನ ಸಣ್ಣ ಪದ್ಯ. ಇದನ್ನು ಹಿಂದಿನಿಂದಲೂ ಹಾಡುತ್ತಿದ್ದ ರೀತಿಯಲ್ಲೇ ಹೇಳಿಕೊಡುತ್ತಾ ಇದ್ದರು. ರಾಗ-ತಾಳಗಳಲ್ಲೇ ಹಾಡಿ ಹೇಳಿಸುತ್ತಿದ್ದರು. ಮಾಧವ ಭಟ್ಟರು ಪದ್ಯದ “ಬಿಡಿತ” ಮತ್ತು “ಮುಕ್ತಾಯ”ಗಳನ್ನು ಕಲಿತಿರಲಿಲ್ಲವಾದರೂ ಅದರ ಕಾಲದ-ಅಳತೆಯ ಅಂದಾಜಿದ್ದುದರಿಂದ ಪ್ರಯೋಗದಲ್ಲೇನೂ ತೊಡಕಾಗುತ್ತಿರಲಿಲ್ಲ. ತಂದೆ ಮಾಧವ ಭಟ್ಟರು ಮಗನಿಗೆ ಪದ್ಯ ಹೇಳಿಕೊಡುತ್ತಲೇ ರಂಗದ ಪ್ರಕ್ರಿಯೆಗಳನ್ನೆಲ್ಲಾ ಸಾಧ್ಯವಾದಷ್ಟು ಹೇಳಿಕೊಡುತ್ತಿದ್ದರಂತೆ. ಹೇಳಿಕೊಡುವುದೆಂದರೆ “ರಂಗದಲ್ಲಿ ಈ ಪದ್ಯದ ಸಂದರ್ಭದಲ್ಲಿ ಇಂತಹ ಸನ್ನಿವೇಶ ಎದುರಾಗುತ್ತದೆ, ಅದನ್ನು ಹೀಗೆ ನಿಭಾಯಿಸಬೇಕು – ಈ ರೀತಿಯಾಗಿ ವೇಷದವರು ಮಾಡುತ್ತಾರೆ, ಅವರನ್ನು ಹೇಗೆ ಸುಧಾರಿಸಬೇಕು ಅಂತೆಲ್ಲಾ ಹೇಳುವುದು”. ಮಗನು ಸಾಧ್ಯವಾದಷ್ಟು ಆಲಿಸುವುದು.
ಈ ಕಾಲದಲ್ಲಿ ಬಲಿಪ ಮಾಧವ ಭಟ್ಟರ ಪದ್ಯಗಳಿಗೆ ಮದ್ದಲೆ ನುಡಿಸಲು ಪೆರ್ಲ (ಕಾಸರಗೋಡು ತಾಲೂಕು) ಸಮೀಪದ ಗೋಪಾಲಾಚಾರಿ ಎಂಬವರು ಬರುತ್ತಿದ್ದರು. ಬಲಿಪ ಮಾಧವ ಭಟ್ಟರ ಮನೆಯಲ್ಲಿ ರಾತ್ರಿಯಿಂದ ಸರಿರಾತ್ರಿ ಹನ್ನೊಂದರವರೆಗೆ ಬಾಲಕ ಬಲಿಪರ ಪದ್ಯಗಳಿಗೂ ಮದ್ದಲೆ ನುಡಿಸುತ್ತಿದ್ದರು. ಹೀಗೆ ಅನೌಪಚಾರಿಕವಾಗಿ ಅಭ್ಯಾಸ ನಡೆಯುತ್ತಿತ್ತು. ಪದ್ಯದ ಬಿಡಿತ ( ಪದ್ಯದ ಎತ್ತುಗಡೆಯಾದ ಮೇಲೆ ನಿರ್ದಿಷ್ಟ ತಾಳಾವರ್ತಕ್ಕೆ ಮದ್ದಳೆಯ ನಿರ್ದಿಷ್ಟಗತಿಯ ಪಾಠಾಕ್ಷರಗಳನ್ನು ನುಡಿಸುವುದು) ಮತ್ತು ಮುಕ್ತಾಯ (ಪದ್ಯ ಮುಗಿದೊಡನೆ ಜಾಗಟೆಯನ್ನು ಮುಕ್ತಾಯ ಸೂಚಕವಾಗಿ ಎತ್ತುವಾಗ ನಿರ್ಧಿಷ್ಟ ತಾಳಾವರ್ತಗಳ ಅಳತೆಗೆ ಸರಿಯಾಗಿ ಮದ್ದಳೆಯ ಮುಕ್ತಾಯದ ನಡೆ ನುಡಿಸುವುದು) ಇವುಗಳ ಸಾಮಾನ್ಯಜ್ಞಾನ ಬಾಲಕ ಬಲಿಪ ನಾರಾಯಣ ಭಾಗವತರಿಗೆ ಲಭಿಸಿತು. ಹೀಗೆ ಬಲಿಪರನ್ನು ಭಾಗವತರನ್ನಾಗಿ ರೂಪಿಸುವ ಮೊದಲ ದಿನಗಳಲ್ಲಿ ಅವರ ತಂದೆ ಮಾಧವ ಭಟ್ಟರು ಮತ್ತು ಗೋಪಾಲಾಚಾರಿ ಅವರ ಪಾತ್ರ ಮಹತ್ವದ್ದಾಗಿದೆ.
ಕಲಿಸುವಿಕೆಯ ಶೈಲಿ
ಅಜ್ಜ ಬಲಿಪರು ಪದ್ಯ ಹೇಳಿಕೊಡುತ್ತಿದ್ದ ಶೈಲಿ ಅನನ್ಯವಾದದ್ದು ಇನ್ನೊಬ್ಬರು ಅನುಸರಣೆ ಮಾಡಲಾಗದ್ದು. ಪದ್ಯವನ್ನು ಬಾಯಿಯಲ್ಲಿ ಹೇಳುತ್ತಾ ಎರಡೂ ಕೈಯ್ಯಲ್ಲಿ ಪದ್ಯದ ಛಂದೋಗತಿಯನ್ನು ತೋರಿಸುತ್ತಾ ಇರುವಂತೆಯೋ ಎನ್ನುವಂತೆ ಅಥವಾ ಪದ್ಯ ನಿಬದ್ಧವಾದ ತಾಳದ ಘಾತಗಳನ್ನು ಹಸ್ತದ ಬೀಸುವಿಕೆಯಿಂದ ತೋರಿಸುತ್ತಾ ಹೇಳಿಕೊಡುತ್ತಿದ್ದರು. ಇದರಿಂದ ಸಹಜವಾಗಿ ಅವರ ಶರೀರದ ಭಾಷೆಯೂ ಶಾರೀರದ ಭಾಷೆಯೂ ಕಲಿಯುತ್ತಿರುವ ಮೊಮ್ಮಗ ಶ್ರೀ ಬಲಿಪ ನಾರಾಯಣ ಭಾಗವತರಲ್ಲಿ ಹಾಡಿನ ಅಂತರ್ಯ (ತಾಳ, ಸಾಹಿತ್ಯ, ಭಾವ ಮತ್ತು ಗತಿ) ಒಳಸೇರುತ್ತಿತ್ತು. ಒಳಸೇರಿದ್ದು ಸಂಸ್ಕಾರವಾಗಿ ಪರಿವರ್ತಿತವಾಯಿತು. ಮೊಮ್ಮಗ ಬಲಿಪರಿಗೆ ತಮ್ಮ ಅಜ್ಜನ ಮೇಲಿನ ಭಕ್ತಿ ಸಂತತವಾಗಿ ಉಳಿದು ಬಾಲಕ ಬಲಿಪರು ತೆಂಕುತಿಟ್ಟು ಯಕ್ಷಗಾನದ ಪ್ರಾತಿನಿಧಿಕ ಭಾಗವತನಾಗಿ ಉದಿಸಲು ಕಾರಣವಾಯ್ತು.
*****
ಬಲಿಪ ನಾರಾಯಣ ಭಾಗವತರು ನೆನಪಿಸಿಕೊಳ್ಳುವಂತೆ ತಮ್ಮ ಅಜ್ಜ ಅವರನ್ನು ಗದರಿಸಿಕೊಂಡೇ ಭಾಗವತಿಕೆಯ ಮರ್ಮವನ್ನು ಹೇಳಿಕೊಟ್ಟದ್ದು. ತಮ್ಮ ಹದಿಮೂರನೆಯ ವರ್ಷಕ್ಕೇ ಮನೆಯಲ್ಲಿ ಯಾರಿಗೂ ಹೇಳದೆ ಪಡ್ರೆ ಕುಂಟಿಕಾನ ಮನೆಯಿಂದ ಹೊರಟು ಅಜ್ಜನ ವಿಟ್ಲದ ಮನೆಗೆ ಬಂದು ಭಾಗವತಿಕೆ ಕಲಿಯಬೇಕೆಂಬ ಉತ್ಸಾಹದಿಂದ ಸೇರಿಕೊಂಡರು. ಮೊದಲು ಸಭಾಲಕ್ಷಣದ ಪಾಠವನ್ನುಅಜ್ಜ ಮಾಡಿಸುತ್ತಿದ್ದರು. ಒಂದು ಪಾಠ ಮಾಡಿದ್ದು ಕ್ರಮವಾಗಿ ಬರದೆ ನಂತರದ ಪಾಠದ ಕಡೆಗೆ ಹೋಗುತ್ತಿರಲಿಲ್ಲ. ಒಂದು ಪದ್ಯವನ್ನು ವಿವಿಧ ತಾಳಗಳಲ್ಲಿ ಹೇಳುವ ರೀತಿಯನ್ನೋ, ವಿವಿಧರಾಗ-ಭಾವದಲ್ಲಿ ಹೇಳುವುದನ್ನೋ ಕಲಿಸಿಕೊಡುತ್ತಿದ್ದರು; ಮಾತ್ರವಲ್ಲ ಒಂದೇ ಪದ್ಯವನ್ನು ಸಪ್ತತಾಳಗಳಲ್ಲೂ ಹಾಡುವ ಕ್ರಮವನ್ನು ಸಾಹಿತ್ಯದ ಛಂದಃಖಂಡಗಳ ಸಮುಚಿತ ವಿಭಜನೆಯ ಮೂಲಕ ಹಾಡಿ ತೋರಿಸಿ ಮೊಮ್ಮಗನಿಗೆ ಹೇಳಿಕೊಟ್ಟರು. ಆಟದಲ್ಲಿ ರಾತ್ರಿ ಬೇರೆ ಬೇರೆ ಜಾವಗಳಲ್ಲಿ ಹಾಡುವ ಕ್ರಮಗಳು, ಒಂದು ಸಾಹಿತ್ಯವನ್ನು ವಿಳಂಬವಾಗಿ, ಮಧ್ಯ ಲಯದಲ್ಲಿ ಮತ್ತು ತ್ವರಿತವಾಗಿ ಹಾಡುವುದೋ ಮತ್ತು ಹಾಡಿನ ಸಾಹಿತ್ಯದ ಗಣ ವಿಭಜನೆ ಸಮೇತ ಅರ್ಥ ಕೆಡದಂತೆ ಹಾಡುವ ಕ್ರಮವನ್ನೂ ಹೇಳಿಕೊಡುತ್ತಿದ್ದರು.
ಪದ್ಯ ರಚನೆಯ ಕ್ರಮಗಳ ಪಾಠ
ಅಜ್ಜ ಬಲಿಪರು ಕಿರಿಯ ಬಲಿಪ ನಾರಾಯಣ ಭಾಗವತರಿಗೆ ಪ್ರಸಂಗ ಸಾಹಿತ್ಯ ರಚನೆಯ ಕ್ರಮವನ್ನೂ ಹೇಳಿಕೊಟ್ಟಿದ್ದರು. ಬಾಲಕ ಬಲಿಪರಿಗೆ ಅತ್ಯಂತ ಆಸ್ಥೆಯಿಂದ ಭಾಮಿನಿ, ವಾರ್ಧಕ, ಕಂದ ಪದ್ಯಗಳನ್ನು ರಚಿಸುವ ವಿಧಾನವನ್ನು ಹೇಳಿಕೊಟ್ಟು ಅದನ್ನು ಬರೆಯಲು ಪ್ರೇರೇಪಿಸುತ್ತಿದ್ದರು. ಹೀಗೆ ಪ್ರಸಂಗ ಪಠ್ಯಗಳನ್ನು ಕಲಿಯುತ್ತಾ ಕಲಿಯುತ್ತಾ ಎರಡು ವರುಷಗಳಲ್ಲಿಯೇ ಬ್ರಹ್ಮ ಕಪಾಲ, ಪದ್ಮಾವತಿ ಕಲ್ಯಾಣ, ಹಿರಣ್ಯಾಕ್ಷ ವಧೆ, ಪ್ರಹ್ಲಾದಚರಿತ್ರೆ, ಶಶಿಪ್ರಭಾ ಪರಿಣಯ, ವಿಶ್ವಾಮಿತ್ರ ಮೇನಕೆ ಪ್ರಸಂಗಗಳನ್ನು ಬಾಲಕ ಬಲಿಪರು ಕಂಠಸ್ಥ ಮಾಡಿಕೊಂಡರು.
ಈಗ ಹಿರಿಯಕಲಾವಿದರಾಗಿ ಪದ್ಮಶ್ರೀ ಪ್ರಶಸ್ತಿ ಪಡೆದಿರುವ, ಸೂರಿಕುಮೇರು ಗೋವಿಂದ ಭಟ್ಟರು ಆಗಿನ್ನೂ ಕಲಿಕೆಯ ಹಂತದಲ್ಲಿದ್ದರು. ಅವರು ಅಜ್ಜ ಬಲಿಪರ ಬಳಿಗೆ ಅರ್ಥಗಾರಿಕೆ ಕಲಿಯಲು ಬರುತ್ತಿದ್ದರು. ಅವರಿಗೆ ಅಜ್ಜ ನಾಟ್ಯದ ಬಗೆಗಿನ ಮಾಹಿತಿಯನ್ನೂ ಕೊಡುತ್ತಿದ್ದರು. ಇವಿಷ್ಟೂ ಮುಂದೆ ಬಲಿಪರನ್ನು ಕೇವಲ ಭಾಗವತನನ್ನಾಗಿ ಮಾತ್ರ ಮಾಡದೆ ಒಬ್ಬ ವ್ಯುತ್ಪತ್ತಿಯುಳ್ಳ ಪ್ರಸಂಗಕರ್ತನನ್ನಾಗಿಯೂ ಮಾಡಿಸಿತು.
ಯಕ್ಷಗಾನದ ಮಾತು ಬಂದರೆ ಅಲ್ಲಿ ಅಜ್ಜನ ಗುಣಗಾನ ಮಾಡದೆ ಇರುವ ದಿನವಿಲ್ಲ ಕ್ಷಣವಿಲ್ಲ. ಅಜ್ಜ ಮನೆಗೆ ಬಂದವರ ಎದುರು ಮೊಮ್ಮಗನನ್ನು ಪರಿಚಯಿಸಿ “ಈ ಮಾಣಿ ಎಂತಕ್ಕೂ ಪ್ರಯೋಜನವಿಲ್ಲ” ಎಂದು ಕೈಯನ್ನು ಕೊಡವಿ ಹೇಳುತ್ತಿದ್ದರಂತೆ. ಈ ಬಾಲಕ ಇಷ್ಟು ಚಿಕ್ಕಂದಿನಲ್ಲಿಯೇ ಭಾಗವತಿಕೆ ಕಲಿಯುತ್ತಿರುವುದು ಇತರರಿಗೆ ಗೊತ್ತಾಗದಿರಲಿ ಎಂಬುದು ಅಜ್ಜನ ಉದ್ದೇಶ. ಇತರರೆದುರು ಹೊಗಳಿದರೆ ಬಲಿಪರೆಲ್ಲಿ ಗರ್ವಿತರಾಗಿ ಕಲಿಯಲು ಉದಾಸೀನರಾಗುತ್ತಾರೋ ಎಂಬ ದೂರಾಲೋಚನೆಯೂ ಇದೆಯೆನ್ನಿ.
ಪ್ರಸಂಗದ ಪದ ಹೇಳಿಕೊಟ್ಟು ಅಭ್ಯಾಸ ಮಾಡಿಸುತ್ತಿದ್ದ ಅಜ್ಜ ಬಲಿಪರು ಆ ಹಾಡಿನ ರಂಗಕ್ರಮದ ಸೂಕ್ಷ್ಮತೆಗಳನ್ನೆಲ್ಲಾ ಹೇಳುತ್ತಿರಲಿಲ್ಲ. ಅದೆಲ್ಲ ರಂಗದಲ್ಲೇ ಬರಬೇಕು. ಭಾಗವತ ಹಾಡುವಾಗ ಆಟದಲ್ಲಿ ಪದ ಹೇಳುವಾಗ ಕಲಿಯುವವ ನೋಡಬೇಕು. ನೋಡಿ ಕಲಿಯಬೇಕು. ಆದುದರಿಂದ ಕಲಿಸಿಕೊಟ್ಟಮೇಲೆ ಬಲಿಪರೇ ಅದನ್ನು ಅಭ್ಯಾಸ ಮಾಡುತ್ತಿದ್ದದ್ದು. ಎತ್ತುಗಡೆಯ ವೇಗ; ವೇಷಕ್ಕೆ ಪೂರಕವಾದ ರೀತಿ; ಇವನ್ನೆಲ್ಲಾ ಹೇಳಿಕೊಡುತ್ತಿದ್ದರು. ಪ್ರಸಂಗದ ಸೂಕ್ಷ್ಮಗಳು ಹೇಳಿಕೊಟ್ಟು ಬರುವ ಸಂಗತಿಗಳಲ್ಲವೆಂದು ಎಂದು ಅವನ್ನೆಲ್ಲ ಹೇಳಿಕೊಡುತ್ತಿರಲಿಲ್ಲ. ಅವೆಲ್ಲ ಪ್ರಾಯೋಗಿಕವಾಗಿ ಅಂದಂದಿನ ಪ್ರಸಂಗ, ಸ್ಥಳ, ಕಲಾವಿದ ಇವನ್ನೆಲ್ಲಾ ಅವಲಂಬಿಸಿರುವುದರಿಂದ ಹೇಳಿಕೊಟ್ಟಿರಲಿಲ್ಲ. ಮುಂದೆ ಅಜ್ಜನ ಭಾಗವತಿಕೆಯಿದ್ದ ಆಟಗಳನ್ನು ನೋಡುತ್ತಾ ಕಿರಿಯ ಬಲಿಪರು ರಂಗಕ್ರಮ ಕಲಿಯುವುದು ಸಾಧ್ಯವಾಯಿತು.
ಅಜ್ಜ ಭಾಗವತಿಕೆ ಹೇಳಿಕೊಡುವ ಕ್ರಮ ವೈಜ್ಞಾನಿಕವೂ ಮತ್ತು ಭಾಗವತಿಕೆಗೆ ಬೇಕಾದ ಹಲವು ವಿಷಯಗಳನ್ನು ಏಕಕಾಲದಲ್ಲಿ ತಿಳಿಸಿಕೊಡುವ ರೀತಿಯದ್ದಾಗಿತ್ತು ಎಂಬುದು ಗಮನಿಸಬೇಕಾದದ್ದು. ಅಂದರೆ ಅಜ್ಜಬಲಿಪರು ಯಕ್ಷಗಾನ ಭಾಗವತಿಕೆ ಕಲಿಯಲೂ ಒಂದು ಮಟ್ಟಿನ ಯೋಗ್ಯತೆಯನ್ನು ಅಪೇಕ್ಷಿಸುತ್ತಿದ್ದರು ಎನ್ನುವ ಅಂಶ ಧ್ವನಿತವಾಗುತ್ತದೆ.
ಕಿರಿಯ ಬಲಿಪರು ನೆನಪಿಸಿಕೊಳ್ಳುವಂತೆ ಹೊಸದಾಗಿ ಭಾಗವತಿಕೆ ಕಲಿಯಬೇಕೆಂದು ಬರುವವರಿಗೆ… ಪ್ರಸಂಗ ಎಷ್ಟು ಬಾಯಿಪಾಠ ಬರುತ್ತದೆ ಎಂದು ಅಜ್ಜ ಮೊದಲು ಪ್ರಶ್ನಿಸುತ್ತಿದ್ದರು. ಗೊತ್ತಿಲ್ಲ ಅಂದರೆ ಮೊದಲು ಹತ್ತು ಪ್ರಸಂಗ ಬಾಯಿಪಾಠ ಮಾಡಿ ಬಾ ಎಂದು ವಾಪಾಸು ಕಳಿಸುತ್ತಿದ್ದರು. ಅಷ್ಟು ಬಾಯಿಪಾಠ ಬಂದರೆ ಮಾತ್ರ ಪಾಠ. ಅಂದರೆ ಭಾಗವತಿಕೆ ಕೇವಲ ಹಾಡುಗಾರಿಕೆಯಲ್ಲ ಎಂಬುದು ಅವರ ಮಾತಿನರ್ಥ.
ಭಾಗವತಿಕೆಯೆಂದರೆ ಪ್ರಸಂಗ ನಡೆಸುವಿಕೆ; ಪ್ರಸಂಗದ ಹಾಡುಗಳನ್ನು ಬರೀ ಹಾಡುವುದಾದರೆ ಅವ ಭಾಗವತನಲ್ಲ; ಆತ ಕಥೆಗೆ ಸೂತ್ರಧಾರ ಎಂದು ಅಜ್ಜ ನಂಬಿದ್ದರು. ಅಜ್ಜನಲ್ಲಿ ಪ್ರಸಂಗಗಳ ಪುಸ್ತಕ ಇರಲಿಲ್ಲ. ಅವರ ಬಳಿಯಿದ್ದ ಒಂದೇ ಒಂದು ಪ್ರಸಂಗ ಪುಸ್ತಕವೆಂದರೆ “ಯಾದವಾಭ್ಯುದಯ”.
ಭಾಗವತಿಕೆ ಎನ್ನುವುದು ಕೇವಲ ಹಾಡುಗಾರಿಕೆಯಲ್ಲ; ಇಡೀ ಪ್ರಸಂಗ ಹೃದಯಸ್ಥವಾಗಿ ಅಂದಿನ ಕಲಾವಿದರು ಮತ್ತು ರಂಗದ ವಾತಾವರಣ ಇವನ್ನೆಲ್ಲಾ ಹೊಂದಿಕೊಂಡು ಹೊರಬರುವ ಸೃಜನಶೀಲ ಪ್ರಕ್ರಿಯೆ. ಪ್ರಸಂಗದಲ್ಲಿ ಕೆಲ ಪಾತ್ರಗಳು ಇಲ್ಲದಿದ್ದರೂ ಆ ಪ್ರಸಂಗದ ಮೂಲವಾದ ಪುರಾಣಗಳಲ್ಲೋ ಮೂಲ ಕಥೆಯಲ್ಲೋ ಇದ್ದರೆ ಮತ್ತು ಸಂದರ್ಭಕ್ಕನುಸಾರವಾಗಿ ಅಂತಹ ಪಾತ್ರಗಳನ್ನು ಸೇರಿಸಬೇಕೆಂದಿದ್ದರೆ ಔಚಿತ್ಯಪೂರ್ಣವಾಗಿ ಪದ್ಯರಚಿಸಿ ಪ್ರಸಂಗದ ಮೂಲ ಉದ್ದೇಶಕ್ಕೆ ಭಂಗ ಬಾರದ ರೀತಿಯಲ್ಲಿ ಸೇರಿಸಿಕೊಂಡು ಪ್ರಸಂಗ ನಡೆಸುವ ಸಾಮರ್ಥ್ಯ ಭಾಗವತನಾದವನಿಗೆ ಬೇಕು ಎನ್ನುತ್ತಿದ್ದರು.
ಹಾಗಾದುದರಿಂದ, ಭಾಗವತಿಕೆಯನ್ನು ಕಲಿಯುವ ಮೊದಲ ಹಂತವೇ ಪ್ರಸಂಗ ಪಠ್ಯವನ್ನು ಕಂಠಪಾಠ ಮಾಡುವುದು. ಅದರ ಛಂದೋಗತಿಗೆ ಅನುಗುಣವಾಗಿ ಓದಲು ಬರುವದು. ಸಭಾಲಕ್ಷಣ ಮತ್ತು ಒಂದೆರಡು ಪ್ರಸಂಗವಾದರೂ, ಪಾರ್ತಿಸುಬ್ಬನ ಪ್ರಸಂಗಗಳು ಅಥವಾ ದೇವೀದಾಸನ ಕೃಷ್ಣಸಂಧಾನ, ಅಗರಿ ಶ್ರೀನಿವಾಸ ಭಾಗವತರ “ದೇವೀಮಾಹಾತ್ಮೈ” ಇತ್ಯಾದಿಯನ್ನು ಪುಸ್ತಕದ ನೆರವಿಲ್ಲದೇ ಸರಾಗವಾಗಿ ಹಾಡಲು ಕಲಿತಾಗ ಯಕ್ಷಗಾನದ ಮಟ್ಟುಗಳ ಮನವರಿಕೆಯಾಗುತ್ತದೆ. ಇಷ್ಟು ಗೊತ್ತಿದ್ದರೆ ನಂತರದ ಪ್ರಸಂಗಗಳ ಹಾಡುಗಾರಿಕೆಯಲ್ಲಿ ದಾರಿತಪ್ಪದಂತೆ ಮಾಡುತ್ತದೆ. ಪ್ರಸಂಗ ಪಠ್ಯದ ಸರಿಯಾದ ಓದುವಿಕೆಯೇ ಭಾಗವತಿಕೆಯಲ್ಲಿ ಅಭಿಜ್ಞತೆಯ ಮಟ್ಟದ ಗುರಿಯನ್ನು ತಲುಪಲು ಇರುವ ಮೊದಲ ಮೆಟ್ಟಿಲು.
ಒಮ್ಮೆ ಮೊಮ್ಮಗ ಬಲಿಪರಿಗೆ ಮದ್ದಳೆ ಚೆಂಡೆ ಕಲಿಯಬೇಕು ಎಂಬ ಉತ್ಸಾಹ ಮೂಡಿತು. ಸರಿ, ಅಜ್ಜನ ಬಳಿ ಕೇಳಿಯೇ ಬಿಡುವ ಎಂದು ಧೈರ್ಯ ಮಾಡಿ ಕೇಳಿದರು.
‘ಅದೆಲ್ಲ ಬೇಡ ಯಾಕೆ, ಮದ್ದಳೆಯ ಲೆಕ್ಕಾಚಾರ ಗೊತ್ತಿದ್ದರೆ ಸಾಕು’ ಎಂದು ಕೈಯ್ಯಾಡಿಸಿಬಿಟ್ಟರು ಎಂದು ಕಿರಿಯಬಲಿಪರು ಈಗ ನೆನಪು ಮಾಡಿಕೊಳ್ಳುತ್ತಾರೆ.
ಅಜ್ಜ ತಮಗೆ ಮೂವತ್ತೈದು ಪ್ರಸಂಗಗಳನ್ನು ಬಾಯಿಪಾಠ ಮಾಡಿಸಿದ್ದಾರೆ. ಅಜ್ಜ ತನ್ನನ್ನು ಸಂಗೀತಗಾರನನ್ನಾಗಿ ಮಾಡಿದ ಮೇಲೆ ಮತ್ತೆ ಮೇಳದ ತಿರುಗಾಟಕ್ಕೆ ಹೋಗಲಿಲ್ಲವಂತೆ. ತಮಗೆ ಕಾವ್ಯ ಕಟ್ಟುವ ಸೂಕ್ಷ್ಮಗಳನ್ನು ತಿಳಿಹೇಳುತ್ತಿದ್ದುದಕ್ಕಿಂತಲೂ ತಾವಾಗಿಯೇ ಕಾವ್ಯವನ್ನು ಸೃಜಿಸುವಂತೆ ಮಾಡುತ್ತಿದ್ದರಂತೆ. ಅಜ್ಜ ಬಲಿಪರು ಮೂಲಭೂತವಾದ ಛಂದಸ್ಸಿನ ವ್ಯಾಕರಣಗಳನ್ನು ತಿಳಿಹೇಳುತ್ತಿದ್ದರು. ವಿಶೇಷವಾಗಿ ಅವರು ಸೂಚಿಸುತ್ತಿದ್ದುದು ಕಾಲ್ಪನಿಕ ಕಥೆಯನ್ನು ಬಲಿಪರೇ ಸೃಷ್ಟಿಸಿ ಕಾವ್ಯವನ್ನು ಕಟ್ಟಬೇಕೆಂದು. ಅಜ್ಜ ಬಲಿಪರು ಮೊಮ್ಮಗ ಬಲಿಪ ನಾರಾಯಣ ಭಾಗವತರಿಗೆ ಹೀಗೆ ಹೇಳುತ್ತಿದ್ದರಂತೆ:
“ತೆಂಗಿನ ಮರದ ಬಗ್ಗೆ ಒಂದು ಕತೆಯನ್ನು ಬರೆ. ಅದಾದಮೇಲೆ ಅದೇ ಕತೆಗೆ ಹಾಡುಗಳನ್ನು ರಚಿಸು” ಎಂದು ಸೂಚಿಸುತ್ತಿದ್ದರಂತೆ. ಹೀಗೆ ಕತೆಯನ್ನೂ ಕಾವ್ಯವನ್ನೂ ಹೆಣೆಯಲು ಹೆಗಲೆಣೆಯಾದರು ಅಜ್ಜ ಬಲಿಪರು. ಅಜ್ಜ ಪದ್ಯಗಳನ್ನು ಮೊಮ್ಮಗ ಬಲಿಪರ ಎದುರೇ ರಚಿಸುವಂತೆ ನಾಟಕವಾಡುತ್ತಾ ಇನ್ನು ಯಾವ ಶಬ್ದ ಬರಬೇಕು ಎಂದು ಆಲೋಚಿಸುವಂತೆ ಆಡುತ್ತಿದ್ದರು. ಮೊಮ್ಮಗ ಬಲಿಪರು “ಹೀಗೆ ಆದೀತಲ್ಲಾ” ಎಂದು ಹೊಳಹು ಕೊಟ್ಟಾಗ “ಹಾ ಹಾಗಾದೀತು” ಎಂದು ಪ್ರಸಂಗ ರಚಿಸುವ ವಿದ್ಯೆಯನ್ನು ಹೇಳಿಕೊಡುತ್ತಿದ್ದರು. ಕಂದ ಪದ್ಯಗಳ ಸೂಕ್ಷ್ಮವನ್ನೂ ರಚನೆಯನ್ನೂ ಅಜ್ಜ ಹೇಳಿಕೊಟ್ಟರು ಎಂದು ಹೇಳುತ್ತಾರೆ. ಮೊಮ್ಮಗ ಬಲಿಪರು ಅಂದಿನಿಂದ ಹೋಗುತ್ತಾ ಬರುತ್ತಾ ಪ್ರಸಂಗ ರಚನೆಯದೇ ಗುಂಗಲ್ಲಿ ಮುಳುಗುತ್ತಿದ್ದರಂತೆ. ಅದೇ ಗುಂಗು ಮತ್ತು ಪ್ರಸಂಗ ಪಠ್ಯದ ಅಭ್ಯಾಸವೇ ಅವರನ್ನು ಪ್ರಸಂಗಕರ್ತರನ್ನಾಗಿಯೂ ಮಾಡಿತು.
*****
ತಾಯಿ ತಾನೇ ಮೊದಲ ಗುರುವು
ಅಜ್ಜ ಬಲಿಪ ನಾರಾಯಣ ಭಾಗವತರ ಮನೆಗೆ ಭಾಗವತಿಕೆ ಕಲಿಯಲು ಹೋಗುವ ಮೊದಲು ಕಿರಿಯ ಬಲಿಪರು ತಂದೆ ಮಾಧವ ಭಟ್ಟರಿಂದಲೂ ಸ್ವಲ್ಪ ಸಂಗೀತ ಕಲಿತದ್ದುಂಟು. ಮುಖ್ಯವಾಗಿ ಬಲಿಪ ನಾರಾಯಣ ಭಾಗವತರು ತಮ್ಮ ತಾಯಿ ಸರಸ್ವತಿ ಅಮ್ಮನವರ ಕೊಡುಗೆಯನ್ನು ನೆನಪಿಸಿಕೊಳ್ಳುತ್ತಾರೆ. ಸಂಜೆಯಾದೊಡನೆಯೇ ಸರಸ್ವತಿ ಅಮ್ಮನವರು ಕಿರಿಯ ಬಲಿಪರಿಗೆ ಕಾರ್ತವೀರ್ಯಾರ್ಜುನ ಕಾಳಗ ಪ್ರಸಂಗದ ಹಾಡುಗಳನ್ನು ರಾಗವಾಗಿ ಹಾಡನ್ನು ರಚಿಸಿದ ಮಟ್ಟಿನಲ್ಲೇ ಹೇಳುತ್ತಿದ್ದರು. ಅದನ್ನು ಕಿರಿಯ ಬಲಿಪರು ಮತ್ತೆ ಹಾಡಿ ಹೇಳಬೇಕಿತ್ತು. ಇದು ನಡೆದದ್ದು ಅವರಿಗೆ ನಾಲ್ಕೊ ಐದೋ ವರ್ಷವಿದ್ದಾಗ. ಇದು ಪ್ರತಿ ದಿನ ಸಂಜೆಯ ವೇಳೆಗೆ ನಡೆಯುತ್ತಿದ್ದ ತಾಯಿ ‘ಸರಸ್ವತಿ’ಯ ಪಾಠ. ಶ್ರದ್ಧೆಯಿಂದ ಕಲಿತ ಈ ಪಾಠ ಬಲಿಪರಿಗೆ ಮುಂದೆ ಅಜ್ಜನಿಂದ ಭಾಗವತಿಕೆ ಕಲಿಯುವಾಗ ತುಂಬಾ ನೆರವಿಗೆ ಬಂದಿತು. ಅಜ್ಜನ ಪಾಠದ ಔನ್ನತ್ಯವನ್ನು ಗ್ರಹಿಸಲು ಮತ್ತು ಬೆಳೆಸಲು ತುಂಬಾ ಸಹಕಾರಿಯಾಯಿತು.
ಮಂಗಳೂರಿನ ಪೆರ್ಮಂಕಿಯವರಾದ ಕೃಷ್ಣಪ್ರಕಾಶ ಉಳಿತ್ತಾಯ ಉದ್ಯೋಗ ಕರ್ಣಾಟಕ ಬ್ಯಾಂಕ್ ಪ್ರಬಂಧಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ‘ಅಗರಿ ಮಾರ್ಗ’ ಮತ್ತು ‘ಸುಘಾತ’ ಅವರ ಪ್ರಕಟಿತ ಕೃತಿಗಳು. ಯಕ್ಷಗಾನ ಹಿಮ್ಮೇಳ ಚೆಂಡೆ ಮದ್ದಳೆ, ಯಕ್ಷಗಾನ ನಾಟ್ಯಾಭ್ಯಾಸ, ಮತ್ತು ಮೃದಂಗವಾದನದಲ್ಲಿ ಆಸಕ್ತಿ ಹೊಂದಿದ್ದಾರೆ.