ಗಂಡಸರು ಆಗ ನೀರು ಹಿಡಿಯಲು ಕಬ್ಬಿಣದ ಬಕೆಟ್ ತರುತ್ತಿದ್ದರು. ಅದನ್ನು ಎತ್ತಿ ಒಯ್ಯುವುದು ಗಂಡಿಗೆ ಸುಲಭ. ಆದರೆ ಹೆಂಗಸರಿಗೆ ಇದು ಸರಿ ಬಾರದು. ಕಾರಣ ಬಕೆಟ್ ಕಾಲಿಗೆ ತೊಡರುವುದು. ನಮ್ಮ ಮನೆಗೆ ಬೀದಿ ನಲ್ಲಿಯಿಂದ ನೀರು ಹೊತ್ತು ತರುವ ಕೆಲಸ ಎರಡನೇ ಅಣ್ಣ ರಾಜು ಮಾಡುತ್ತಿದ್ದ. ದಷ್ಟ ಪುಷ್ಟವಾಗಿ ಬೆಳೆದಿದ್ದ ಅವನು ತಲಾ ಮೂವತ್ತು ಲೀಟರ್ ಹಿಡಿಸುವ ಎರಡು ಕಬ್ಬಿಣದ ಬಕೆಟ್‌ನಲ್ಲಿ ನೀರು ತುಂಬಿಸಿಕೊಂಡು ಒಂದೊಂದು ಕೈನಲ್ಲಿ ಒಂದೊಂದು ಬಕೆಟ್ ಹಿಡಿದು ನೀರು ತರುತ್ತಿದ್ದ.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಇಪ್ಪತ್ತಾರನೆಯ ಕಂತು ನಿಮ್ಮ ಓದಿಗೆ

ಐವತ್ತರ ದಶಕದಲ್ಲಿ ಬೆಂಗಳೂರಿನಲ್ಲಿ ನೀರು ಸರಬರಾಜು ವ್ಯವಸ್ಥೆ ಹೇಗಿತ್ತು ಅಂದರೆ ಮಧ್ಯಮ ವರ್ಗದ ಮನೆಗಳಿಗೆ ಪೈಪ್ ವ್ಯವಸ್ಥೆ ಇನ್ನೂ ಜಾರಿ ಆಗಿರಲಿಲ್ಲ. ಹಾಗೆ ನೋಡಿದರೆ ಅದರ ಕಲ್ಪನೆಯೇ ಇರಲಿಲ್ಲ ಅನ್ನಬಹುದು. ಪ್ರತಿ ರಸ್ತೆಗೂ ಎರಡು ಅಥವಾ ಮೂರು ಸಾರ್ವಜನಿಕ ಕೊಳಾಯಿ ಇರುತ್ತಿತ್ತು. ಇದು ಯೋಜಿತ ಬಡಾವಣೆಗಳ ಮಾತು. ಸ್ಲಂ ಗಳಲ್ಲಿ ಒಂದೋ ಎರಡೋ ಸಾರ್ವಜನಿಕ ಕೊಳಾಯಿ ಅಷ್ಟೇ. ನಾನು ನೋಡಿರುವ ಬೆಂಗಳೂರಿನ ಕೆಲವು ಅಂದಿನ ಸ್ಲಂ ಗಳ ಬಗ್ಗೆ ಮುಂದೆ ತಿಳಿಸುತ್ತೇನೆ. (ನನ್ನ ನೆನಪಿನಲ್ಲಿ ಸ್ವತಂತ್ರ ಪಾಳ್ಯದ (ಇದು ಒಂದು ಆಗಿನ ಸ್ಲಂ) ಚಿತ್ರ ಕಡೆದ ಹಾಗೆ ಉಳಿದಿದೆ. ಸ್ವತಂತ್ರ ಪಾಳ್ಯ ಶ್ರಿರಾಮಪುರದ ಒಂದು ಭಾಗ ಮತ್ತು ಆಗ ಅದು ಒಂದು ಕಳ್ಳ ಭಟ್ಟಿ ತಯಾರಿಕಾ ಕೇಂದ್ರವಾಗಿತ್ತು.)

ಮೊದಲ ಬಾರಿಗೆ ಈ ಕೊಳಾಯಿ ಪದ ನನ್ನ ಕಿವಿಗೆ ಬಿದ್ದಾಗ ನಲ್ಲಿ ಎನ್ನುವ ಅತ್ಯಂತ ಸುಂದರ ಹೆಸರನ್ನು ಕೊಳಾಯಿ ಎಂದು ಕರೆದವರ ಮೇಲೆ ಕೋಪ ಉಕ್ಕಿತ್ತು. ಕೊಳಾಯಿ ಪದವನ್ನು ನನ್ನ ಸುತ್ತ ಮುತ್ತಲಿನ ತಮಿಳು ಭಾಷಿಕರೇ ಹೆಚ್ಚು ಉಪಯೋಗಿಸುತ್ತಾ ಇದ್ದದ್ದರಿಂದ ಅದು ತಮಿಳು ಪದ ಅನ್ನುವ ಭಾವನೆ ಮನಸ್ಸಿನಲ್ಲಿ ಊರಿತ್ತು! ಎಷ್ಟೋ ವರ್ಷ ಅದು ತಮಿಳು ಪದವೇ ಎನ್ನುವ ಖಚಿತ ಭಾವನೆ ಸಹಾ ಇತ್ತು. ನಿಧಾನಕ್ಕೆ ಬೆಂಗಳೂರಿನ ಎಲ್ಲರೂ ಈ ಕೊಳಾಯಿ ಪದವನ್ನೇ ನಲ್ಲಿಗೆ ಪರ್ಯಾಯವಾಗಿ ಉಪಯೋಗಿಸುವುದು ಅಭ್ಯಾಸ ಆಯಿತು. ಈಗ ಅದು ನಮ್ಮದೇ ಪದ ಎನ್ನುವ ನಂಬಿಕೆ ಹುಟ್ಟಿದೆ. ಹೇಗೆ ಅಂದರೆ ಸಾರು ಅನ್ನುವ ನಮ್ಮ ಪದ ರಸಂ ಅನ್ನುವ ತಮಿಳು ಪದಕ್ಕೆ ರೂಪಾಂತರ ಆಯಿತು. ಈಗ ಸಾರು ಅನ್ನುವ ಪದ ಯಾವ ಹೋಟಲಿನಲ್ಲಿಯೂ ಚಾಲ್ತಿಯಲ್ಲಿ ಇಲ್ಲ. ಸಾರು ಅಂದರೆ ಕಣ್ಣು ಬಾಯಿ ಬಿಟ್ಟು ನಿಮ್ಮನ್ನು ಕೆಕ್ಕರಿಸಿ ನೋಡುವ ಮಾಣಿಗಳು ಹೆಚ್ಚು. ಅದೇ ರೀತಿ ಅನ್ನ ಎನ್ನುವ ಪದ. ಯಾವುದೇ ಮದುವೆ ಊಟಕ್ಕೆ ಹೋಗಿ ಅಲ್ಲಿ ಅನ್ನ ತಂದು ರೈಸ್ ರೈಸ್ ಎನ್ನುತ್ತಾರೆ. ನೀವು ಅನ್ನ ಅನ್ನಿ. ಅದು ಬಡಿಸುವ ಜನಕ್ಕೆ ಅರ್ಥವೇ ಆಗದು. ಈಗ ಈ ರೈಸ್ ಸಹ ಒಂದು ಆಡಿಷನ್ ಪದಕ್ಕೆ ಸೇರಿದೆ. ಅದು ವೈಟ್ ರೈಸ್! ಅಂದರೆ ಬಿಳಿ ಅನ್ನ ಅಥವಾ ಬರೀ ಅನ್ನ. ಇನ್ನೊಂದು ಹತ್ತು ವರುಷದಲ್ಲಿ ಈ ಅನ್ನ ಎನ್ನುವ ಪದ ನಮ್ಮ ಭಾಷಾ ಚರಿತ್ರೆಗೆ ಅಂದರೆ ಇತಿಹಾಸ ಸೇರಿಬಿಡುತ್ತದೆ. ಈಗ ಮತ್ತೆ ಕೊಳಾಯಿಗೆ ಬನ್ನಿ.

ನಾನು ಮೊದಲು ನೋಡಿದ ಕೊಳಾಯಿ ಹೇಗಿತ್ತು ಎಂದು ನಿಮಗೆ ವಿವರಿಸಲೇಬೇಕು. ರಸ್ತೆಯ ಅಂಚಿನಲ್ಲಿ ಮೇಲಿನ ಅರ್ಧ ಗುಂಡಗೆ ಕತ್ತರಿಸಿರುವ ಒಂದು ಚಪ್ಪಡಿ ಕಲ್ಲು ಕಲ್ಪಿಸಿಕೊಳ್ಳಿ. ಅದಕ್ಕೆ ಮೇಲಿನಿಂದ ಆರೆಂಟು ಇಂಚು ತಳಗೆ ಒಂದು ಪೈಪ್ ತೂರಿಸುವಷ್ಟು ಕಿಂಡಿ. ಈ ಕಿಂಡಿ ಮೂಲಕ ನೆಲದಲ್ಲಿ ಹುದುಗಿದ್ದ ಮುಖ್ಯ ಪೈಪ್ ಮೂಲಕ ನೀರು ಹರಿದು ಬಂದು ಕೊಳಾಯಿ ಸೇರುತ್ತಿತ್ತು. ಕೊಳಾಯಿ ಪೈಪ್‌ನ ಮುಂಭಾಗದಲ್ಲಿ ಅಳವಡಿಸಿಕೊಂಡಿತ್ತು. ಈ ಕೊಳಾಯಿ ನೋಡಿದ ಕೂಡಲೇ ನುಣ್ಣಗೆ ಶೇವ್ ಮಾಡಿಕೊಂಡಿರುವ ಸಿಂಹದ ಎರಡೂ ಕೆನ್ನೆ ತುಂಬಿದ ಮುಖ ನೆನಪು ಮೂಡುತ್ತಿತ್ತು. ಅದರ ಎಡ ಕಿವಿ ಇರಬೇಕಾದ ಕಡೆ ಅರ್ಧ ಕತ್ತರಿಸಿದ ಸೊಂಡಲಿನ ಆಕಾರದ ಹಿಡಿಕೆ. ಈ ಹಿಡಿಕೆ ಕೆಳಕ್ಕೆ ಜಗ್ಗಿದರೆ ನಳದಿಂದ ನೀರು ಬರುವ ವ್ಯವಸ್ಥೆ ಇತ್ತು. ಕೆಲವು ಕಡೆ ನೀರು ಹಿಡಿಯುವ ಪಾತ್ರೆ ಇಡಲು ಒಂದು ಚಿಕ್ಕ ಕಟ್ಟೆ ಇರುತ್ತಿತ್ತು. ಕಟ್ಟೆ ಇಲ್ಲದ ಕಡೆ ಪಾತ್ರೆಯನ್ನು ನಲ್ಲಿ ಕೆಳಗೆ ಇರಿಸಿ ನೀರು ಹಿಡಿದುಕೊಳ್ಳುತ್ತಿದ್ದರು. ಕೆಲವರು ಪಾತ್ರೆಗೆ ನೀರು ಬಿಡುವ ಮುನ್ನ ಸುತ್ತ ಮುತ್ತ ನೀರನ್ನು ಹೊಯ್ದು ಶುದ್ಧಮಾಡುತ್ತಿದ್ದರು. ಕೆಲವರು ಹುಣಿಸೆ ಹಣ್ಣಿನಿಂದ ಪಾತ್ರೆ ಉಜ್ಜಿ ತೊಳೆದು ನೀರು ಹಿಡಿಯುತ್ತಿದ್ದರು. ಮೊದಮೊದಲು ಯಾರೋ ಒಂದಿಬ್ಬರು ಮಾಡಿದ ಈ ಶುದ್ಧ ಮಾಡುವ ಪ್ರಕ್ರಿಯೆ ಎಲ್ಲರಿಗೂ ಅಂಟಿತು. ಒಂದು ಬಿಂದಿಗೆ ನೀರು ಹಿಡಿದರೆ ಒಂದು ಬಿಂದಿಗೆ ಈ ಕ್ಲೀನ್ ಉದ್ದೇಶಕ್ಕೆ ನೆಲ ಸೇರುತ್ತಿತ್ತು. ಸಾರ್ವಜನಿಕ ನಲ್ಲಿ ಸುತ್ತಲೂ ಕೊಚ್ಚೆ ಅಂದರೆ ಕೊಚ್ಚೆ! ಸಾಮಾನ್ಯವಾಗಿ ರಸ್ತೆ ನಲ್ಲಿಗಳಿಂದ ಬಿಂದಿಗೆಗಳಲ್ಲಿ ನೀರು ಹಿಡಿದು ಮನೆಗೆ ಒಯ್ಯುವವರು ಮನೆಯ ಹೆಂಗಸರು. ಹೆಂಗಸರಿಗೆ ಈ ಕೊಳಾಯಿ ಬಳಿ ಸೇರಿ ಸಂಸಾರ ತಾಪತ್ರಯ ಚರ್ಚಿಸುವುದು ಆಗಿನ ಒಂದು ಸಹಜ ಕ್ರಿಯೆ. ಹೆಂಡತಿ ಊರಿಗೆ ಹೋಗಿದ್ದಾಗ ಅಥವಾ ಬೇರೆ ಸಂದರ್ಭಗಳಲ್ಲಿ ಗಂಡಸು ನೀರಿಗೆ ಬಂದರೆ ಅವನಿಗೆ ಕ್ಯೂ ನಿಂದ ವಿನಾಯಿತಿ. ಪಾಪ ಪದ್ದಕ್ಕನ ಗಂಡ ಬಂದಿದೆ, ಪುಷ್ಪಾ ಗಂಡ ಬಂದವ್ನೆ, ನೀರು ಹಿಡಕೊಂಡು ಹೋಗಲಿ ಎನ್ನುವ ವಿನಾಯಿತಿ.

ಕೊಳಾಯಿಯಲ್ಲಿ ನೀರು ಹರಿಸುವುದು ಒಂದು ನಿರ್ದಿಷ್ಟ ಸಮಯದಲ್ಲಿ. ಆದರೂ ಉದ್ದಕ್ಕೆ ಕೊಡ ಬಕಿಟ್ ಗುಂಡಿ ಕೊಳದಪ್ಪಳೆ.. ಹೀಗೆ ವೈವಿಧ್ಯಮಯವಾದ ನೀರು ಶೇಖರಣೆಯ ಪಾತ್ರೆಗಳು ಕ್ಯೂ ನಲ್ಲಿ ಇರುತ್ತಿದ್ದವು. ನಾನು ಮೊದಲು ಗುಂಡಿ ಎನ್ನುವ ಪಾತ್ರೆ ನೋಡಿದ್ದು ಇಲ್ಲೇ! ಅದೇ ರೀತಿ ಹಾಲು ವಿತರಿಸುವ ಡಬ್ಬಗಳಲ್ಲಿ ಸಹ ನೀರು ಹೊರುವುದು ಹಾಗೂ ಶೇಖರಿಸುವುದನ್ನು ನೋಡಿದ್ದೇನೆ. ಬಸುರಿ, ಬಾಣಂತಿಯರು ನೀರು ಹಿಡಿದುಕೊಳ್ಳಲು ಬಂದರೆ ಅವರಿಗೆ ಕ್ಯೂ ಇಲ್ಲ. ಎಷ್ಟೋ ಸಲ ಅವರ ಮನೆಗೆ ಮಿಕ್ಕ ಹೆಂಗಸರೇ ಕೊಡದಲ್ಲಿ ನೀರು ಹೊತ್ತು ಹಾಕುತ್ತಿದ್ದರು. ಅರವತ್ತರ ದಶಕದಲ್ಲಿ ಇನ್ನೂ ಪ್ಲಾಸ್ಟಿಕ್ ಬಿಂದಿಗೆ ಬಕೆಟ್ ಬಂದಿರಲಿಲ್ಲ. ಅದರಿಂದ ಲೋಹದ ಪಾತ್ರೆಗಳು ಕ್ಯೂ ನಲ್ಲಿ ಕಾಣುತ್ತಿದ್ದವು. ಯಾವಾಗ ಪ್ಲಾಸ್ಟಿಕ್ ನಮ್ಮ ಜೀವನ ಪ್ರವೇಶ ಮಾಡಿತೋ ಲೋಹ ಸಾಮ್ರಾಜ್ಯ ನಮ್ಮ ಸಾರ್ವಜನಿಕ ನಲ್ಲಿಗಳ ಬಳಿ ಹೇಳ ಹೆಸರಿಲ್ಲದೆ ನಾಮಾವಶೇಷ ಆಗಿ ಬಿಟ್ಟಿತು. ಎಲ್ಲೆಡೆ ಸಾಮ್ರಾಜ್ಯ ಸ್ಥಾಪಿಸಿದ ಪ್ಲಾಸ್ಟಿಕ್ ಇಂದಿಗೂ ಅದನ್ನು ಮುಂದುವರೆಸಿಕೊಂಡು ಬಂದಿದೆ.

ಗಂಡಸರು ಆಗ ನೀರು ಹಿಡಿಯಲು ಕಬ್ಬಿಣದ ಬಕೆಟ್ ತರುತ್ತಿದ್ದರು. ಅದನ್ನು ಎತ್ತಿ ಒಯ್ಯುವುದು ಗಂಡಿಗೆ ಸುಲಭ. ಆದರೆ ಹೆಂಗಸರಿಗೆ ಇದು ಸರಿ ಬಾರದು. ಕಾರಣ ಬಕೆಟ್ ಕಾಲಿಗೆ ತೊಡರುವುದು. ನಮ್ಮ ಮನೆಗೆ ಬೀದಿ ನಲ್ಲಿಯಿಂದ ನೀರು ಹೊತ್ತು ತರುವ ಕೆಲಸ ಎರಡನೇ ಅಣ್ಣ ರಾಜು ಮಾಡುತ್ತಿದ್ದ. ದಷ್ಟ ಪುಷ್ಟವಾಗಿ ಬೆಳೆದಿದ್ದ ಅವನು ತಲಾ ಮೂವತ್ತು ಲೀಟರ್ ಹಿಡಿಸುವ ಎರಡು ಕಬ್ಬಿಣದ ಬಕೆಟ್‌ನಲ್ಲಿ ನೀರು ತುಂಬಿಸಿಕೊಂಡು ಒಂದೊಂದು ಕೈನಲ್ಲಿ ಒಂದೊಂದು ಬಕೆಟ್ ಹಿಡಿದು ನೀರು ತರುತ್ತಿದ್ದ. ಮನೆಗೆ ಪೈಪ್ ಬರುವ ತನಕ ಈ ಕೆಲಸ ಅವನದ್ದೇ. ಅಪರೂಪಕ್ಕೆ ನಾವು ಒಂದೊಂದು ಪುಟ್ಟ ಬಿಂದಿಗೆ ನೀರು ಹೊರುತ್ತಿದ್ದೆವು. ಹೆಂಗಸರು ಕೊಡ ತಂದು ಸೊಂಟದಲ್ಲಿ ತಲೆ ಮೇಲೆ ಹೀಗೆ ನೀರು ಒಯ್ಯುತ್ತಿದ್ದರು. ಇದು ಅರವತ್ತರ ದಶಕದ ಒಂದು ಸುಂದರ ನೆನಪು.

ಕೆಲವರಿಗೆ ಕೊಳಾಯಿ ಹಿಡಿ ಒತ್ತಿ ಹಿಡಿಯುವುದು ಕೈನೋವು ತರಿಸುತ್ತಿದ್ದ ಕೆಲಸ. ಅದಕ್ಕೊಂದು ಉಪಾಯ ಕಂಡುಕೊಂಡಿದ್ದರು. ಒಂದು ಕಲ್ಲಿನ ಬೋಚಿ ಹುಡುಕಿ ಅದನ್ನು ನಲ್ಲಿ ಹಾಗೂ ಹ್ಯಾಂಡಲ್ ಮಧ್ಯೆ ಸಿಕ್ಕಿಸುತ್ತಿದ್ದರು. ನೀರು ಹರಿಯುತ್ತಿತ್ತು. ಇದು ನಮಗೆ ಒಂದು ಮ್ಯಾಜಿಕ್ ತರಹ ಅನಿಸುತ್ತಿತ್ತು.

ಅರವತ್ತರ ದಶಕದ ಸುಂದರ ನೆನಪುಗಳು ನಿಧಾನಕ್ಕೆ ತನ್ನ ಸೌಂದರ್ಯ ಕಳೆದುಕೊಂಡಿತು. ನೀರು ಹಿಡಿಯುವ ಸ್ಥಳಗಳು ಹೆಂಗಸರ ಜಗಳದ ಹೊಡೆದಾಟದ ತಾಣಗಳಾಗಿ ಬದಲಾದವು. ಬೆಂಬಲಕ್ಕೆ ಹೋದ ಗಂಡಸರಲ್ಲಿ ಸಹ ಗುಂಪುಗಳಾದವು. ಅವು ನಮ್ಮ ಹಾಸ್ಯ ಸಾಹಿತಿಗಳಿಗೆ ಮಹಾ ಅನುಭವ ಕೊಟ್ಟಿತು ಮತ್ತು ಹೇರಳವಾಗಿ ನಲ್ಲಿ ಜಗಳಗಳು ತಮಾಷೆಯ ವಸ್ತುಗಳಾದವು. ಆಗಿನ ಯಾವುದೇ ಹಾಸ್ಯ ಸಾಹಿತಿಯ ಕೃತಿ ನೋಡಿ, ಬೀದಿ ನಲ್ಲಿ ಜಗಳದ ಬಗ್ಗೆ ಒಂದು ಲೇಖನ ಇದ್ದೇ ಇರುತ್ತೆ! ಅದೇ ರೀತಿ ಬೀದಿ ನಲ್ಲಿಗಳು ಪ್ರೀತಿ ಪ್ರೇಮ ಹುಟ್ಟುವ ಪುರೋಹಿತ ಬಂಡೆಗಳು ಸಹ ಆದವು. ಪುರೋಹಿತ ಬಂಡೆ ಎನ್ನುವ ಕಚಗುಳಿ ಇಡುವ ಪದ ನಾನು ತ ರಾ ಸು ಅವರ ಪುಸ್ತಕ ಒಂದರಿಂದ ಹಾರಿಸಿದ್ದೇನೆ! ನಜೀರ್ ಸಾಬ್ ಅವರು ಮಂತ್ರಿ ಆಗಿದ್ದ ಸಮಯದಲ್ಲಿ ಹೇರಳವಾಗಿ ರಾಜ್ಯಾದ್ಯಂತ ಬೋರ್ ವೆಲ್‌ಗಳು ಬಂದವು.

ಆಗ ಬೆಂಗಳೂರಿನ ಸುಮಾರು ಪ್ರದೇಶಗಳಿಗೆ ತಿಪ್ಪಗೊಂಡನಹಳ್ಳಿ ಕೆರೆಯ ನೀರು ಸರಬರಾಜು ಆಗುತ್ತಿತ್ತು. ಅದನ್ನು ಪೈಪ್ ಮೂಲಕ ಹಾಯಿಸುತ್ತಿದ್ದರು. ಮಲ್ಲೇಶ್ವರದ ಹದಿನೆಂಟನೇ ಕ್ರಾಸಿನಲ್ಲಿ ಒಂದು ಕಟ್ಟಡ ಇತ್ತು. ಅದನ್ನು ಜ್ಯೂಯೆಲ್ ಫಿಲ್ಟರ್ಸ್ ಎನ್ನುತ್ತಿದ್ದರು. ಇದರಲ್ಲಿ ತಿಪ್ಪಗೊಂಡನಹಳ್ಳಿ ಕೆರೆ ನೀರು ಶುದ್ಧೀಕರಣ ಆಗುತ್ತಿತ್ತು. ತಿಪ್ಪಗೊಂಡನಹಳ್ಳಿ ನಂತರ ಹೆಸರಘಟ್ಟ ಕೆರೆಯಿಂದಲೂ ಬೆಂಗಳೂರು ನೀರು ಪಡೆಯುತ್ತಿತ್ತು.

ಕಾವೇರಿ ನದಿ ನೀರು ಬೆಂಗಳೂರಿಗೆ ಸರಬರಾಜು ಆಗಲು ಶುರು ಆದ ನಂತರ ಈ ಎರಡೂ ಕೆರೆಗಳ ಮೇಲಿನ ಒತ್ತಡ ಕಡಿಮೆ ಆಯಿತು. ಒತ್ತಡ ಕಡಿಮೆ ಆದ ಪರಿಣಾಮ ಎಂದರೆ ಲ್ಯಾಂಡ್ ಶಾರ್ಕ್‌ಗಳ ಗಮನ ಇವುಗಳ ಮೇಲೆ ಅಂದರೆ ಎರಡೂ ಕೆರೆಗಳ ಮೇಲೆ ಬಿದ್ದಿತು. ಎರಡೂ ಕೆರೆ ಒಣಗಿಸಿ ಅದರ ಮೇಲೆ ಮಹಲು ನಿರ್ಮಿಸುವ ಒಂದು ಸುಂದರ ಕನಸು ಹರಡಿತು. ಪರಿಸರವಾದಿಗಳ ಕಟ್ಟೆಚ್ಚರದಿಂದ ಈ ಕನಸು ಕನಸಾಗಿಯೇ ಉಳಿಯಿತು, ಕೆರೆ ಇನ್ನೂ ಜೀವ ಉಳಿಸಿಕೊಂಡಿದೆ. ಆದರೂ ಕೆರೆ ಸುತ್ತ ಕಟ್ಟಡ ನಿರ್ಮಿಸುವ ಹುನ್ನಾರ ಇನ್ನೂ ಮುಂದುವರೆದಿದೆ.

ತನ್ನ ನೈಸರ್ಗಿಕ ಚೆಲುವಿನಿಂದ ಅದು ಆಕರ್ಷಿಸುವ ಗುಣ ಹೆಚ್ಚಿಸಿಕೊಂಡಿದೆ. ವಾರಾಂತ್ಯ ವಿಹಾರಕ್ಕೆ ಬೆಂಗಳೂರಿನವರು ಸೇರಿದ ಹಾಗೆ ಹೊರಗಡೆಯಿಂದ ಸಹ ಜನ ಬರುತ್ತಾರೆ. ಹೆಸರು ಘಟ್ಟದ ಬಳಿ ಒಂದು ವಿಶಾಲವಾದ ಮೈದಾನ ಇದ್ದು ಅದು ಸಿನಿಮಾಗಳಲ್ಲಿ ಯುದ್ಧ ಭೂಮಿಯಾಗಿ, ರೇಸ್ ಜಾಗವಾಗಿ, ಜಾತ್ರೆಯಾಗಿ… ಹೀಗೆ ಹಲವು ನೂರು ರೀತಿ ಜೀವ ಪಡೆಯುತ್ತದೆ.

ಆಗ ಅಂದರೆ ಅರವತ್ತರ ದಶಕದಲ್ಲಿ ಕೆರೆ ಕುಂಟೆ ಸೇರಿದ ಹಾಗೆ ನಲ್ಲಿ ಅಂದರೆ ಕೊಳಾಯಿಗಳಿಂದ ನೇರವಾಗಿ ನೀರು ಕುಡಿಯುತ್ತಿದ್ದೆವು. ಬಾಯಾರಿಕೆ ಆದರೆ ಸಾಕು ಹತ್ತಿರದ ಕೊಳಾಯಿ ಬಳಿ ನಡೆದು ಕೊಳಾಯಿ ಹಿಡಿ ಒತ್ತಿ ನೇರ ನೀರು ಬೊಗಸೆಯಲ್ಲಿ ಹಿಡಿದು ಕುಡಿದರೆ ಅದೇನು ಸಂತೋಷ….! ಕೆರೆ ನೀರು, ಕಾಲುವೆ ನೀರು ತಿಳಿಯಾಗಿ ಹರಿಯುತ್ತಿತ್ತು. ಯಾವುದೇ ಬೇನೆಯ, ಯಾವುದೇ ಕ್ರಿಮಿ ಹೊಟ್ಟೆ ಸೇರಿತು ಅನ್ನುವ ಯೋಚನೆಯೇ ಇಲ್ಲದೇ ನೀರು ಹೀರುತ್ತಿದ್ದೆವು!

ನಲ್ಲಿ ನೀರನ್ನು ಜ್ಯುವೆಲ್ ಫಿಲ್ಟರ್ ಮಾಡಿರುತ್ತಾರೆ ಎನ್ನುವ ಭರವಸೆ ಇತ್ತು. ಕೆರೆ ನೀರು ತಿಳಿಯಾಗಿರುತ್ತಿತ್ತು ಮತ್ತು ಅದರಲ್ಲಿ ಕೈಕಾಲು ತೊಳೆದು ಬೊಗಸೆಯಲ್ಲಿ ನೀರು ತೆಗೆದು ಕುಡಿದರೆ ಜೀವ ಹಾಯ್ ಅನಿಸುತ್ತಿತ್ತು. ಜ್ಯುವೆಲ್ ಫಿಲ್ಟರ್ ಅನ್ನುವ ಪದ ಎಷ್ಟೋ ವರ್ಷಗಳ ನಂತರ ಅದು jewel filter ಅಲ್ಲವೆಂದೂ juwel filter ವ್ಯವಸ್ಥೆ ಎಂದೂ ತಿಳಿಯಿತು. ಸ್ಪಾಂಜುಗಳ ನಡುವೆ ನೀರು ಹಾಯಿಸಿ ನೀರಿನಲ್ಲಿನ ಬ್ಯಾಕ್ಟೀರಿಯಾ ತೆಗೆಯುವ ವಿಧಾನ ಎಂದು ನಮ್ಮ ದೊಡ್ಡಣ್ಣ ಚಿತ್ರ ಬರೆದು ವಿವರಿಸಿದ್ದ. ಹದಿನೆಂಟನೇ ಕ್ರಾಸಿನ ಈ ಜ್ಯುವೇಲ್ ಫಿಲ್ಟರ್ ಮರೆತ ಸಂಗತಿ. ಈಗಿನ ಪೀಳಿಗೆಗೆ ಅಲ್ಲೊಂದು ಜುವೆಲ್ ಫಿಲ್ಟರ್ ವ್ಯವಸ್ಥೆ ಇತ್ತು ಎಂಬುದು ತಿಳಿದ ಹಾಗೆ ಕಾಣೆ. ನಾನೂ ಸಹ ಈ ಪದ ಕೇಳಿ ವರ್ಷಗಳೇ ಕಳೆದಿವೆ. ಅಲ್ಲಿನ ವ್ಯವಸ್ಥೆಗೆ ಈಗ ಪರ್ಯಾಯ ಯಾವುದು ಎಂದು ತಿಳಿಯದು. ಅಲ್ಲಿ ಈಗ ಆ ಕಟ್ಟಡ ಇದೆಯೋ ಇಲ್ಲವೋ ಸಹ ತಿಳಿಯದು.

ಬೆಂಗಳೂರಿನ ಒಂದು ಪ್ರಾಚೀನ ಲ್ಯಾಂಡ್ ಮಾರ್ಕ್ ಆಗಿದ್ದ ಜುವೆಲ್ ಫಿಲ್ಟರ್ ಹೆಸರು ಈಗ ಮರೆಯಾಗಿದೆ. ಎಂಬತ್ತರ ದಶಕದ ಅಂಚಿನಲ್ಲಿ ಅಮೆರಿಕದ ಕಂಪನಿಯೊಂದು ಬಾಟಲಿ ನೀರು ತಯಾರಿಕೆ ಮತ್ತು ಮಾರಾಟ ಅದನ್ನು ಕೈಗೆತ್ತಿಕೊಂಡಿತು. ಇಡೀ ದೇಶದ ಪತ್ರಿಕೆಗಳಲ್ಲಿ ಪೈಪೋಟಿಯ ಹಾಗೆ ಶುದ್ಧೀಕರಿಸದ ನೀರು ಜೀವಕ್ಕೆ ಎಷ್ಟು ಹಾನಿಕರ ಎಂಬುದರ ಬಗ್ಗೆ ಲೇಖನಗಳು ಬಂದವು, ಬಂದವು ಮತ್ತು ಬಂದವು. Water borne diseases ಎನ್ನುವ ವಿಷಯ ಕುರಿತ ಹಾಗೆ ಇಡೀ ದೇಶದ ತುಂಬಾ ವ್ಯಾಪಕವಾದ ವರದಿಗಳು ಪ್ರಕಟಗೊಂಡವು. ಆಗಿನ್ನೂ ಸಾಮಾಜಿಕ ಜಾಲತಾಣಗಳು ಈಗಿನ ಹಾಗೆ ಅಣಬೆ ತರಹ, ಪಾರ್ಥೇನಿಯಂ ರೀತಿ ಹಬ್ಬಿರಲಿಲ್ಲ. ಆದರೂ ವ್ಯವಸ್ಥಿತವಾದ ಬ್ರೈನ್ ವಾಶಿಂಗ್ ಹೇಗೆ ನಡೆಯಿತು ಅಂದರೆ ಜನ ನಲ್ಲಿ ನೀರು ಕುಡಿದರೆ ವಾಂತಿ ಬೇಧಿ ಹತ್ತಿ ಸಾಯುತ್ತೇವೆ ಅನ್ನುವಷ್ಟರ ಮಟ್ಟಿಗೆ ತಮ್ಮ ಮೈಂಡ್ ಸೆಟ್ ಬದಲಾಯಿಸಿಕೊಂಡರು. ಒಂದೇ ವರ್ಷದಲ್ಲಿ ಸ್ಥಳೀಯ ಸರಬರಾಜಿನ ನೀರು ಕೊಲ್ಲುವ ವಿಷ ಎಂದು ನಂಬಿಕೆ ಹುಟ್ಟಿತು! ಬಾಟಲಿಯ ನೀರು ಸರ್ವೋತ್ತಮ ಎಂದು ಬಿಂಬಿಸಲಾಯಿತು. ಎಲ್ಲೋ ಅಲ್ಲೊಂದು ಇಲ್ಲೊಂದು ಪ್ರತಿರೋಧದ ಕ್ಷೀಣ ಧ್ವನಿ ಹುಟ್ಟಿತು; ಆದರೂ ಅದರ ಪ್ರಭಾವ ಅಷ್ಟಿರಲಿಲ್ಲ. ಮೇನಕಾ ಗಾಂಧಿ ಅಂತಹ ರಾಷ್ಟ್ರೀಯ ಮಟ್ಟದ ಪ್ರಚಾರ ಪಡೆಯುವ ಚಾತಿಇದ್ದ ಅವರ ಮಾತುಗಳೂ ಸಹ ಗೌಣ ಆದವು. ಒಂದು ಲೀಟರ್ ಬಾಟಲಿ ನೀರು ತಯಾರಿಸಲು ಅದೆಷ್ಟೋ ನೂರು ಲೀಟರ್ ನೀರು ಚರಂಡಿಗೆ ಹರಿಸಬೇಕು ಎನ್ನುವ ಅವರ ಮಾತು ಪ್ರಚಾರ ಪಡೆಯಲಿಲ್ಲ. ಅದರ ಪ್ರತಿಫಲ ಎಂದರೆ ಈಗ ಎಲ್ಲಿಯೇ ಹೋಗಿ ಬಾಟಲಿ ನೀರು ಬೇಕೆ ಬೇಕು ಮತ್ತು ಬಾಟಲಿ ನೀರು ಬಿಟ್ಟು ಬೇರೆ ನೀರು ಕುಡಿದರೆ ಹೊಟ್ಟೆ ಖಂಡಿತ ಕೆಟ್ಟು ಹೋಗುತ್ತದೆ.. ಹೀಗೆ ನಮ್ಮ ಮನಸು ಟ್ಯೂನ್ ಆಗಿದೆ. ಕಾಕತಾಳೀಯ ಅನ್ನುವಂತೆ ಬಾಟಲಿ ನೀರು ಬಿಟ್ಟು ಬೇರೆ ಶುದ್ಧೀಕರಿಸಿದ ನೀರು ಕುಡಿದರೂ ಸಹ ಹೊಟ್ಟೆಯಲ್ಲಿ ಕಸಿವಿಸಿ..! ಒಟ್ಟಾರೆ ನಮ್ಮ ರೋಗ ನಿರೋಧಕ ಶಕ್ತಿ ಅಂದರೆ immunity ಸಂಪೂರ್ಣ ಕಡಿಮೆ ಆಗಿದೆ! ನಿಮ್ಮ ಕಣ್ಣೆದುರೇ ಫಿಲ್ಟರ್ ನೀರು ಬರುತ್ತಿದ್ದರೂ ಬಾಟಲ್ ಮೊರೆ ಹೋಗುತ್ತೇವೆ.

ಪೈಪ್‌ಗಳನ್ನ ಮನೆಗಳಿಗೆ ಅಳವಡಿಸುವ ಕೆಲಸ ಅರವತ್ತರ ದಶಕದ ಉತ್ತರಾರ್ಧದಲ್ಲಿ ಶುರು ಆಯಿತು. ರಸ್ತೆಯಿಂದ ನೀರು ಹೊರುವ ಕೆಲಸ ನಿಂತಿತು ಎಂದು ಖುಶಿ ಪಡುವ ಮನಸ್ಥಿತಿ ಕೆಲವೇ ದಿವಸ ಅಷ್ಟೇ ಇದ್ದದ್ದು. ಈಗ ಅದರ ಕತೆಗೆ ಬಂದೆ. ಮನೆ ಒಳಗಡೆಗೆ ಬೇಕಾದ ಕಡೆ ನಲ್ಲಿ ಇರುವ ಹಾಗೆ ಯೋಚಿಸಿ ಪೈಪ್ ಜೋಡಿಸುವ ಪ್ಲಂಬರ್‌ನ ಕರೆದುಕೊಂಡು ಬಂದು ಪೈಪ್ ಅಳವಡಿಸಿ ಜೆಬಲ್ಲಿನ ಕಾಸು ಖಾಲಿ ಮಾಡಿಕೊಂಡು ಆಯ್ತಾ… ಒಂದು ತಿಂಗಳು ಎರಡು ತಿಂಗಳು ಅಥವಾ ಒಂದೆರೆಡು ವರ್ಷ ನೀರು ಬಂತು. ಅದೂ ಹೇಗೆ? ಮಧ್ಯ ರಾತ್ರಿ ನೀರು ಬಿಡ್ತಾ ಇದ್ದ ವಾಲ್ವ್ ಮ್ಯಾನು. ಮಧ್ಯ ರಾತ್ರಿ ಎದ್ದು ನೀರು ಹಿಡಿಯುವುದು ಪ್ರತಿದಿನದ ಕೆಲಸ ಆಯಿತು. ನೀರು ಶೇಖರಿಸಲು ಮನೆಯ ಹಿಂಭಾಗದಲ್ಲಿ ತೊಟ್ಟಿಗಳು ಬಂದವು. ಪರಿಸ್ಥಿತಿ ಹತೋಟಿಗೆ ಬಂತು ಅನ್ನುವಷ್ಟರಲ್ಲಿ ಮತ್ತೊಂದು ಹೊಸ ಸಮಸ್ಯೆ ಉದ್ಭವ ಆಯಿತು.

ನೀರು ಬಿಡುವ ಒತ್ತಡ ಕಮ್ಮಿ ಆಗಿ ಗಂಟೆಗೆ ಒಂದು ಬಿಂದಿಗೆ ನೀರು ಬರುವ ಹಾಗಾಯಿತು. ಹೊಸ ಬಡಾವಣೆಗಳಲ್ಲಿ ಆಗಿನ್ನೂ ಸಂಪು ಮತ್ತು ಓವರ್ ಹೆಡ್ ಟ್ಯಾಂಕ್ ಹೆಸರು ಗೊತ್ತಿರಲಿಲ್ಲ. ಸಂಪು ಅಂದರೆ ನೆಲದ ಅಡಿಯಲ್ಲಿ ಒಂದು ತೊಟ್ಟಿ ನೀರು ಶೇಖರಣೆಗೆ ಮಾಡುವುದು. ಅದನ್ನು ಮನೆ ಮೇಲೆ ಇರಿಸಿರುವ ಓವರ್ ಹೆಡ್ ಟ್ಯಾಂಕ್‌ಗೆ ಮೋಟಾರ್ ಮೂಲಕ ತುಂಬುವುದು. ಸುಮಾರು ಮನೆಗಳಲ್ಲಿ ಅಡಿಗೆ ಮನೆ ಹತ್ತಿರ ಒಂದು ಎರಡು ಅಡಿ ಆಳ, ಎರಡು ಅಡಿ ಚೌಕದ ಒಂದು ಗುಂಡಿ ಮಾಡಿಸಿ ಅದರ ಮೇಲೆ ನಲ್ಲಿಯನ್ನು ಪೈಪ್‌ಗೆ ಹೊಂದಿಸಿದರು. ಸರಿ ರಾತ್ರಿ ಈ ಗುಂಡಿ ಮುಂದೆ ಕೂತು ನಲ್ಲಿ ಬಿಟ್ಟು ಗುಂಡಿಯಲ್ಲಿ ಇಟ್ಟ ಕೊಡಕ್ಕೆ ನೀರು ತೊಟ್ಟಿಕ್ಕುವುದನ್ನು ನೋಡುತ್ತಾ ಕೂರಬೇಕು. ಬಿಂದಿಗೆ ನೀರು ತುಂಬಿದ ನಂತರ ಮತ್ತೊಂದು ಬಿಂದಿಗೆ ಇಟ್ಟು ಈ ನೀರು ತೊಟ್ಟಿಗೆ ಸುರಿಯುವುದು. ಇದು ಸರಿ ಸುಮಾರು ಎಲ್ಲಾ ಮನೆಗಳಲ್ಲಿ ಆಗಿನ ಪರಿಸ್ಥಿತಿ. ಇಡೀ ರಾತ್ರಿ ಹೆಂಗಸರು ನಿದ್ದೆ ಗೆಟ್ಟು ಈ ಶೇಖರಣೆ ಕಾರ್ಯ ಮಾಡುತ್ತಿದ್ದರು. ಇದೂ ಸಹ ಐದಾರು ವರ್ಷ ನಡೆಯಿತು. ಆಗ ಇನ್ನೂ ಟ್ಯಾಂಕರ್ ನೀರು ಬೆಂಗಳೂರಿಗರಿಗೆ ಪರಿಚಯ ಆಗಿರಲಿಲ್ಲ. ಕೆಲವು ಹಳೇ ಪ್ರದೇಶದಲ್ಲಿ ಮನೆಗಳಿಗೆ ಬಾವಿ ಇತ್ತು. ಬಡಾವಣೆಗಳಲ್ಲಿ ಬಾವಿಗಳು ಕಡಿಮೆ. ಅಕ್ಕ ಪಕ್ಕದ ಬಾವಿಯಿಂದ ನೀರು ಕೇಳಿ ಪಡೆಯುವವರು ಇದ್ದರು. ಬಾಯಿ ಕೈ ಬಲ ಇದ್ದವರು ಅವರವರ ಏರಿಯಾಗಳಿಗೆ ನಲ್ಲಿ ನೀರು ಸರಿ ಹೊತ್ತಿನಲ್ಲಿ ಬರುವ ವ್ಯವಸ್ಥೆ ಮಾಡಿಕೊಂಡರು. ಮಿಕ್ಕವರು ಇದು ಕರ್ಮ ಅಂತ ಅನುಭವಿಸಿದರು. ಕೆಲವು ಸಲ ಒಟ್ಟಿಗೆ ಐದಾರು ದಿವಸ ನೀರು ಸರಬರಾಜು ಇರುತ್ತಿರಲಿಲ್ಲ. ಲೋಕಲ್ ಪುಡಾರಿ ಮನೆ ಮುಂದೆ ಜನ ಸೇರಿ ಗೊಳೋ ಅಂತ ಗೋಳು ಹೇಳುವರು. ಪುಡಾರಿ ಹಾಂ ಹೀಗೋ ಸಮಸ್ಯೆ? ಮೊದಲೇ ನನಗೆ ಹೇಳಿದ್ದರೆ…… ಅಂತ ಜುಬ್ಬಾ ಪೈಜಾಮ ಸರಿ ಪಡಿಸಿಕೊಂಡು ಹಿಂಬಾಲಕ ಹಿಂಡನ್ನು ಕರೆದುಕೊಂಡು ಅಂಬಾಸೆಡರ್ ಕಾರು ಹತ್ತುತ್ತಿದ್ದ. ಆಗ ಅಂಬಾಸೆಡರ್ ಕಾರೇ ಹೆಚ್ಚು ಇದ್ದದ್ದು. ಈಗಿನ ಹಾಗೆ ನೂರೆಂಟು ವೆರೈಟಿ ಕಾರುಗಳು ಇರಲಿಲ್ಲ. ಕೆಲವು ಕೆಲವೇನು ಟಿ ಆರ್ ಶಾಮಣ್ಣ ಎನ್ನುವ ಜನಪ್ರತಿನಿಧಿ ಒಬ್ಬರು ಯಾವಾಗಲೂ ಆಟೋದಲ್ಲೇ ಪ್ರಯಾಣ. ಜನರ ಸಮಸ್ಯೆ ಪರಿಹರಿಸಲು ಯಾವಾಗಲೂ ಆಟೋ. ಇವರು ಇಂದಿರಾಗಾಂಧಿ ಅವರ ಕಾಲದಲ್ಲಿ ಬೆಂಗಳೂರಿನಿಂದ ಲೋಕಸಭೆಗೆ ಆಯ್ಕೆ ಆದರು. ದೆಹಲಿಯಲ್ಲಿ ಸಹ ಇವರ ಆಟೋ ತುಂಬಾ ಫೇಮಸ್ ಆಗಿತ್ತು. ಪಾರ್ಲಿಮೆಂಟ್‌ಗೆ ಇವರು ಹೋಗೋದು ಕೊಂಚ ತಡ ಆಯಿತು. ಇಂದಿರಾಗಾಂಧಿ ಅವರು ತಮ್ಮ ಸಂಪುಟದ ಕರ್ನಾಟಕದ ಸಚಿವರು ಒಬ್ಬರ ಬಳಿ ವೇರ್ ಈಸ್ ದಟ್ ಆಟೋ ಎಂಪಿ ಅಂತ ಕೇಳಿದ್ದರು! ಪುಡಾರಿ ಅಂಬಾಸೆಡರ್ ಹತ್ತಿ ಹೋದನ.. ಅಲ್ಲಿ ಯಾರ ಕೈಲಿ ಅದೇನು ಮಾತಾಡಿದನೋ.. ಒಂದೆರೆಡು ಗಂಟೆಯಲ್ಲಿ ಟ್ಯಾಂಕರ್ ನೀರು ಲಾರಿಯಲ್ಲಿ ಬರುತ್ತಿತ್ತು. ಒಬ್ಬರಿಗೆ ಎರಡು ಬಿಂದಿಗೆ ಕೋಟಾ. ಅರ್ಧ ನೀರು ಭೂಮಿಗೆ, ಅರ್ಧ ನೀರು ನಮಗೆ! ಈ ವ್ಯವಸ್ಥೆ ಈಗಲೂ ಸಹ ಮುಂದುವರೆದುಕೊಂಡು ಬಂದಿದೆ. ಸಂಪು ಮತ್ತು ಓವರ್ ಹೆಡ್ ಟ್ಯಾಂಕ್ ಅಸ್ತಿತ್ವಕ್ಕೆ ಬಂದು ಜನರ ಬಾಳು ಹಸನಾಯಿತು ಎಂದು ಬೀಗಿದೆವು.

ಇನ್ನೊಂದು ತಾಪತ್ರಯ ಇದೇ ಸುಮಾರಿಗೆ ತಲೆಗೆ ಅಂಟಿತು. ಇಲ್ಲಿ ಮಾರುವ ಮೋಟಾರ್‌ಗಳಿಗಿಂತ ತಮಿಳುನಾಡಿನ (ಆಗ ಚೆನ್ನೈ) ಕೊಯಮತ್ತೂರು ಹಾಗೂ ಕುಂಭಕೋಣಂನಲ್ಲಿ ಬೆಲೆ ಅರ್ಧಕ್ಕೆ ಅರ್ಧ ಎನ್ನುವ ಸುದ್ದಿ ಹಬ್ಬಿತು. ಕಾರ್ಖಾನೆ ಕೆಲಸಗಾರರು ಅಂದರೆ ಎಲ್ಲೆಲ್ಲಿ ದುಡ್ಡು ಮಿಗಿಸಬಹುದೋ ಅತ್ತ ಹೆಚ್ಚು ತಲೆ ಓಡಿಸುತ್ತಾರೆ. ಸರಿ ಎಂಟು ಹತ್ತು ಮನೆಗಳವರು ಸೇರಿ ಮೋಟಾರ್ ಕೊಳ್ಳುವ ನಿಶ್ಚಯ ಮಾಡುವುದು. ಇಬ್ಬರು ಕೊಯಮತ್ತೂರು ಹಾಗೂ ಕುಂಭಕೋಣಂಗೆ ಹೋಗಿ ಮೋಟಾರ್ ತರುವುದು. ಈ ವ್ಯವಸ್ಥೆ ಸುಮಾರು ದಿವಸ ಜಾರಿಯಲ್ಲಿತ್ತು! ನಂತರ ಈ ವ್ಯವಸ್ಥೆ ಮನೆಗೆ ವೆಟ್ ಗ್ರೈಂಡರ್ ಕೊಳ್ಳುವಾಗ ಸಹ ಮುಂದುವರೆಯಿತು! ಸುಮಾರು ಈ ನಡುವೆ ಕಾವೇರಿ ಕೃಪೆ ಬಂತು.

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಸ್ತಿತ್ವಕ್ಕೆ ಬಂತು. ಮುನಿಸಿಪಾಲಿಟಿ ಜವಾಬ್ದಾರಿ ಹೆಗಲು ಬದಲಾಯಿತು. ಕಾವೇರಿ ನದಿ ನೀರನ್ನು ಬೆಂಗಳೂರಿಗೆ ಹರಿಸುವ ಯೋಜನೆ ಶುರು ಆಯಿತು. ಟಿ ಕೆ ಹಳ್ಳಿ ಎನ್ನುವ ಹಳ್ಳಿಯಲ್ಲಿ ದೊಡ್ಡ ದೊಡ್ಡ ಆರು ಅಡಿ ವ್ಯಾಸದ ಪೈಪ್ ವೆಲ್ಡಿಂಗ್ ಮತ್ತು ಅಳವಡಿಕೆ ಕಾರ್ಯ ನಡೆಯಲು ಆರಂಭ ಆಯಿತು. ಟಿ ಕೆ ಹಳ್ಳಿ ಅಂದರೆ ತೊರೆ ಕಾಡನ ಹಳ್ಳಿ ಅಂತ. ಹಂತ ಹಂತವಾಗಿ ಕಾವೇರಿ ನೀರು ನಗರಕ್ಕೆ ಹರಿದು ಬರಲು ವ್ಯವಸ್ಥೆ ರೂಪಿಸಲಾಯಿತು. ಈಗ ತೋರೇಕಾಡಿನ ಹಳ್ಳಿಯಲ್ಲಿ ನೀರು ಸಂಸ್ಕರಣ ಘಟಕ ಕಾರ್ಯ ನಿರ್ವಹಿಸುತ್ತಿದೆ.

ನಜೀರ್ ಸಾಬ್ ಅವರ ಕಾಲದಲ್ಲೇ ಬೋರ್ ವೆಲ್ ವ್ಯಾಪಕ ಪ್ರಚಾರ ಪಡೆಯಿತು. ಎಲ್ಲೆಲ್ಲಿ ನೀರಿನ ಅಭಾವ ಇದೆ ಅನಿಸಿತೋ ಅಲ್ಲೆಲ್ಲ ಬೋರ್‌ವೆಲ್ ತೋಡಲಾಯಿತು. ಜನರಿಗೆ ಹೀಗೆ ನೀರು ಕೊಟ್ಟ ನಜೀರ್ ಸಾಬ್ ಅವರು ನೀರು ಸಾಬ್ ಎಂದು ಪ್ರೀತಿಯಿಂದ ಕರೆಸಿಕೊಂಡರು. ಕೆಲವೇ ವರ್ಷಗಳಲ್ಲಿ ಬೋರ್‌ವೆಲ್ ನೀರು ಭೂಮಿಯ ಅಂತರ್ ಜಲದ ಮಟ್ಟ ಕಡಿಮೆ ಮಾಡುತ್ತದೆ ಎನ್ನುವ ವರದಿ ಬಂತು! ಅಂದರೆ ಒಂದು ಮಾಡಿದರೆ ಇನ್ನೊಂದು ಹುಟ್ಟುತ್ತಿತ್ತು.

ಬಸುರಿ, ಬಾಣಂತಿಯರು ನೀರು ಹಿಡಿದುಕೊಳ್ಳಲು ಬಂದರೆ ಅವರಿಗೆ ಕ್ಯೂ ಇಲ್ಲ. ಎಷ್ಟೋ ಸಲ ಅವರ ಮನೆಗೆ ಮಿಕ್ಕ ಹೆಂಗಸರೇ ಕೊಡದಲ್ಲಿ ನೀರು ಹೊತ್ತು ಹಾಕುತ್ತಿದ್ದರು. ಅರವತ್ತರ ದಶಕದಲ್ಲಿ ಇನ್ನೂ ಪ್ಲಾಸ್ಟಿಕ್ ಬಿಂದಿಗೆ ಬಕೆಟ್ ಬಂದಿರಲಿಲ್ಲ. ಅದರಿಂದ ಲೋಹದ ಪಾತ್ರೆಗಳು ಕ್ಯೂ ನಲ್ಲಿ ಕಾಣುತ್ತಿದ್ದವು. ಯಾವಾಗ ಪ್ಲಾಸ್ಟಿಕ್ ನಮ್ಮ ಜೀವನ ಪ್ರವೇಶ ಮಾಡಿತೋ ಲೋಹ ಸಾಮ್ರಾಜ್ಯ ನಮ್ಮ ಸಾರ್ವಜನಿಕ ನಲ್ಲಿಗಳ ಬಳಿ ಹೇಳ ಹೆಸರಿಲ್ಲದೆ ನಾಮಾವಶೇಷ ಆಗಿ ಬಿಟ್ಟಿತು.

ಇಡೀ ಪ್ರಪಂಚದಲ್ಲಿ ನೂರಾ ನಲವತ್ತು ಕಿಮೀ ನಷ್ಟು ದೂರ ಪೈಪ್ ಮೂಲಕ ಒಂದು ನಗರಕ್ಕೆ ನೀರು ಒದಗಿಸುವ ವ್ಯವಸ್ಥೆ ಇದೊಂದೇ ಎಂದು ತಜ್ಞರು ಹೇಳುವುದು ಕೇಳಿದ್ದೇನೆ ಮತ್ತು ಇದರ ಬಗ್ಗೆ ಜಲ ತಜ್ಞರ ವಿವರಣೆ ಸಹಾ ಕೇಳಿದ್ದೇನೆ. ಅದರ ಸತ್ಯಾಸತ್ಯತೆ ತಿಳಿಯದು.

ಮೊದಮೊದಲು ಬೆಂಗಳೂರಿನ (ಬೆಂಗಳೂರು ಮಹಾನಗರ ಪಾಲಿಕೆ; ಆಗಿನ ಹೆಸರು) ಹಳೆಯ ಭಾಗಗಳಿಗೆ ಕಾವೇರಿ ನೀರು ಬಂದಿತು. ಸುತ್ತಮುತ್ತಲ ನೂರಾ ಹತ್ತು ಹಳ್ಳಿಗಳನ್ನು ಬೆಂಗಳೂರಿಗೆ ಸೇರಿಸಿ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಆಯಿತು. ಈ ಹಳ್ಳಿಗಳಿಗೂ ಸಹ ಕುಡಿಯುವ ನೀರು ಒದಗಿಸುವ ಜವಾಬ್ದಾರಿಯನ್ನು ಜಲ ಮಂಡಳಿ ಹೊತ್ತಿತು. ಕಾವೇರಿ ಐದನೇ ಹಂತದಲ್ಲಿ ಈ ಹೊಸದಾಗಿ ಸೇರ್ಪಡೆಗೊಂಡ ಹಳ್ಳಿಗಳಿಗೆ ನೀರು ಪೂರೈಕೆ ಮಾಡುವ ಯೋಜನೆ ಜಲಮಂಡಳಿಯದು.

ಹಲವು ಎಡರು ತೊಡರುಗಳ ನಡುವೆ ಕೆಲಸ ನಡೆದಿದೆ. ನಮ್ಮ ರಾಜ್ಯದಲ್ಲೇ ಹುಟ್ಟಿ ಹರಿಯುವ ನೀರನ್ನು ನಾವು ನಮ್ಮ ಜನರಿಗೆ ನೀಡುವ ಹಾಗಿಲ್ಲದ ಹತೋಟಿಗೆ ರಾಜ್ಯ ಒಳಪಟ್ಟಿದೆ. ಮೊದಲಿನಿಂದಲೂ ಬಹಳ ಸೌಮ್ಯ ಸ್ವಭಾವದ ರಾಜಕಾರಣಿಗಳು ತಮ್ಮ ಅಧೈರ್ಯದಿಂದ ರಾಜ್ಯದ ಹಿತಾಸಕ್ತಿ ಕಾಪಾಡುವಲ್ಲಿ ಸಂಪೂರ್ಣ ಎಡವಿದ್ದಾರೆ. ನೆರೆ ರಾಜ್ಯದ ನಾಯಕರುಗಳನ್ನು ನೋಡಿ ಇವರು ಕಲಿಯಬೇಕಾದ್ದು ಬಹಳ ಇದೆ. ನನ್ನಂತಹವನಿಗೂ ಕೋಪ ಬರಿಸುವ ಹಲವು ಪ್ರಸಂಗಗಳು ತಮಿಳುನಾಡಿನ ಮೂಲಕ ನಡೆದಿದೆ. ಆದರೆ ನಮ್ಮ ರಾಜಕಾರಣಿಗಳಿಗೆ ಇದರ ಬಿಸಿ ತಟ್ಟಿಲ್ಲ. ದೆಹಲಿ ದೊರೆಗಳಿಗೆ ಹೆದರುವ ಪುಕ್ಕಲರು ಎಂದು ನಮ್ಮ ರಾಜ ಕಾರಣಿಗಳೂ ಪ್ರಸಿದ್ಧರು…!

ಕೇಂದ್ರ ಸರ್ಕಾರ, ನ್ಯಾಯ ನೀಡಬೇಕಾದ ಪ್ರಾಧಿಕಾರ ಮೊದಲಾದ ಎಲ್ಲಾ ಸಂಸ್ಥೆಗಳೂ ಕರ್ನಾಟಕದ ನೈಜ ನೀರಿನ ಹಕ್ಕನ್ನು ನಿರಾಕರಿಸುತ್ತಾ ಬಂದಿವೆ. ನಮ್ಮ ರಾಜಕಾರಣಿಗಳು ಬಾಲ ಮುದುರಿಕೊಂಡು ಕೂತಿವೆ. ಒಟ್ಟಿನಲ್ಲಿ ಕರ್ನಾಟಕ ನ್ಯಾಯ ವಂಚಿತ. ಈಚೆಗೆ ಕಾವೇರಿ ಪ್ರಾಧಿಕಾರದ ಸಭೆಯ ಒಂದು ವರದಿ ನೆನಪಾಯಿತು.

ನೀರು ಪ್ರಾಧಿಕಾರದ ಮುಂದೆ ತಮಿಳುನಾಡಿನ ವಕೀಲರು ತಮ್ಮ ವಾದ ಮಾಡುತ್ತಿದ್ದರು. ನಮ್ಮ ರಾಜ್ಯದ ನೀರಿನ ಅವಶ್ಯಕತೆ ಕುರಿತು ನಮ್ಮ ವಕೀಲರು ಬೆಂಗಳೂರಿನ ಜನಕ್ಕೆ ಇಷ್ಟು ನೀರು ಕೊಡುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ವಿವರ ನೀಡುತ್ತಿದ್ದರು. ಎದುರು ಪಕ್ಷದ ವಕೀಲ ಬೆಂಗಳೂರಿಗೆ ನೀರು ಬಿಡಲು ನಿಮಗೆ ನಾವು ಅಧಿಕಾರ ಕೊಟ್ಟಿದ್ದೇವ? ಎನ್ನುವ ಅರ್ಥ ಬರುವ ವಾದ ಮಂಡಿಸಿದರು. ನಮ್ಮೂರಲ್ಲಿ ಹುಟ್ಟುವ ನದಿ ನೀರು ಕುಡಿಯಲು ಈ ದೊಣ್ಣೆ ನಾಯಕ ಅಪ್ಪಣೆ ಕೊಡ ಬೇಕಿತ್ತಂತೆ! ಅಬ್ಬಾ ತಮಿಳರ ತಿಮಿರೇ… ಅಂತ ಯಾರಿಗಾದರೂ ಅನಿಸಬೇಕು ಹಾಗಿತ್ತು ಈ ವಾದ.

ಕಾವೇರಿ ನದಿಗೆ ತ್ಯಾಜ್ಯ ಹರಿಯುತ್ತಿದೆ ಎನ್ನುವ ಒಂದು ದೂರು ಕೆಲವರ್ಷಗಳಿಂದ ಕೇಳಿಬರುತ್ತಿದೆ. ತಮಿಳು ನಾಡು ಈ ದೂರನ್ನು ಆಗಾಗ ಹೇಳುತ್ತಲೆ ಬಂದಿದೆ. ನದಿ ನೀರಿಗೆ ತ್ಯಾಜ್ಯ ಹರಿಸುವುದು ಅಪರಾಧ. ಅಪರಾಧಿಗಳಿಗೆ ಶಿಕ್ಷೆ ನೀಡಿ ಈ ಬೇಜವಾಬ್ದಾರಿ ಕೆಲಸಕ್ಕೆ ತಡೆ ಹಾಕಬೇಕು. ಬೆಂಗಳೂರಿಗೆ ಕಾವೇರಿ ನೀರಿನ ಬದಲಿಗೆ ಒಂದು ಪರ್ಯಾಯ ವ್ಯವಸ್ಥೆ ಇರಬೇಕು ಎಂದು ಜಲತಜ್ಞರು Water Experts ಸಲಹೆ ಮಾಡುತ್ತಲೆ ಬಂದಿದ್ದಾರೆ. ಅವರ ಪ್ರಕಾರ ಬೆಂಗಳೂರಿನ ಮಳೆ ನೀರೇ ಅದರ ಅಗತ್ಯ ಪೂರೈಸಬಹುದು. ಸಮುದ್ರ ಮಟ್ಟದಿಂದ ಸಾವಿರ ಮೀಟರ್ ಮೇಲಿರುವ ಬೆಂಗಳೂರಿಗೆ ಬಿದ್ದ ಮಳೆ ನೀರು ಹರಿದು ಹೊಸೂರು ಸೇರಿ ಅಲ್ಲಿ ವ್ಯರ್ಥ ಆಗುತ್ತೆ. ಹೀಗೆ ವ್ಯರ್ಥವಾಗುವ ನೀರು ಇಲ್ಲೇ ಉಪಯೋಗ ಆಗಬೇಕು. ಅದಕ್ಕಾಗಿ ಬೆಂಗಳೂರಿನ ಎಲ್ಲೆಡೆ ಮಳೆ ನೀರು ಕೊಯ್ಲು ಮಾಡಿ ನೀರಿನ ಇಂಗುದಾಣ ನಿರ್ಮಿಸಬೇಕು. ಈ ನಿಟ್ಟಿನಲ್ಲಿ ಬೆಂಗಳೂರಿನ ಹಲವು ರಸ್ತೆಗಳಲ್ಲಿ ಮಳೆ ನೀರು ಇಂಗುದಾಣ ನಿರ್ಮಾಣ ಆಗಿದೆ. ಜತೆಗೆ ಅಂತರ್ಜಲ ವೃದ್ಧಿಗೆ ಮಳೆ ನೀರು ಕೊಯ್ಲು ಕಡ್ಡಾಯ ಮಾಡಲಾಗಿದೆ. ಮುಂಬರುವ ವರ್ಷಗಳಲ್ಲಿ ಇದರ ಪರಿಣಾಮ ಬಹು ನಿರೀಕ್ಷೆಯಲ್ಲಿದೆ. ಇನ್ನೂ ಒಂದು ಹೆಚ್ಚಿನ ಬೆಂಗಳೂರಿಗರಿಗೆ ತಿಳಿಯದ ಸಂಗತಿ ಒಂದಿದೆ. ನಮಗೆ ಬರುವ ಕಾವೇರಿ ನೀರಿಗೆ ನಾವು ಕೊಡುತ್ತಿರುವ ಶುಲ್ಕ ತುಂಬಾ ಅಂದರೆ ತುಂಬಾ ಕಡಿಮೆ. ನೀರು ಸರಬರಾಜು ಮಂಡಳಿ ವೆಚ್ಚಮಾಡುತ್ತಿರುವ ಹಣದ ಒಂದು ಕೊಂಚ ಭಾಗ ಮಾತ್ರ ಶುಲ್ಕದ ರೂಪದಲ್ಲಿ ಪಾವತಿ ಆಗುತ್ತಿದೆ. ಅಂದರೆ ನಾವೆಲ್ಲರೂ ನೀರಿನ ಸಬ್ಸಿಡಿಯನ್ನು ನಮಗೆ ಗೊತ್ತಿಲ್ಲದೇ ಅನುಭವಿಸುತ್ತಾ ಬಂದಿದ್ದೇವೆ!

ನಗರ ಬೆಳೆದ ಹಾಗೆ ಕಾಡುವ ಸಾವಿರಾರು ಸಮಸ್ಯೆಗಳಲ್ಲಿ ಪ್ರಮುಖವಾದದ್ದು ನೀರು ಪೂರೈಕೆ. ಕೆಲ ವರ್ಷಗಳ ಹಿಂದೆ BDA ಹೊಸ ಬಡಾವಣೆಗಳಿಗೆ ಮತ್ತು ಬಹುಮಹಡಿ ಕಟ್ಟಡಗಳಿಗೆ ನೀರಿನ ವ್ಯವಸ್ಥೆಯ ಹೊಣೆ ತಪ್ಪಿಸಿಕೊಂಡಿತು. ಅದರ ಪರಿಣಾಮ ಅಂದರೆ ಹೇರಳವಾಗಿ ಅಂತರ್ ಜಲದ ಉಪಯೋಗ ಆಗಿದ್ದು. ಊರಿನ ಅಂತರ್ ಜಲ ಮಟ್ಟ ಪಾತಾಳ ಸೇರಿದೆ. ನಮ್ಮ ಸಾಮಾಜಿಕ ಶಾಸ್ತ್ರಿಗಳು ಬೆಂಗಳೂರಿಗೆ ಇನ್ನು ನೂರು ವರ್ಷ ಮಾತ್ರ ಆಯಸ್ಸು ಎಂದಿದ್ದಾರೆ. ಹತ್ತು ಹದಿನೈದು ವರ್ಷ ಹಿಂದೆ Kolkata Dying ಎನ್ನುವ ಸುದ್ದಿ ಹೆಚ್ಚು ಶಬ್ದ ಮಾಡಿತು ಮತ್ತು ನಂತರ ಉಡುಗಿತು. ಇದೂ ಸಹ ಹಾಗೇ ಆಗಲಿ.

ಮಳೆ ಬಂದಾಗ ಅರ್ಧ ಬೆಂಗಳೂರು ಜಲಾವೃತ ಆಗುತ್ತದೆ. ಬೋಟುಗಳ, ತೆಪ್ಪಗಳ ಮೂಲಕ ಸಂತ್ರಸ್ತ ನಾಗರಿಕರನ್ನು ಅವರವರ ಅಪಾರ್ಟ್ಮೆಂಟ್‌ಗಳಿಂದ ಸುರಕ್ಷಿತ ಸ್ಥಳಕ್ಕೆ ಸಾಗಿಸುವುದು ಈಚಿನ ಕೆಲವು ವರ್ಷಗಳಿಂದ ಟೈಮ್ ಟೇಬಲ್ ಹಾಕಿದಂತೆ ನಡೆಯುತ್ತಿದೆ. ರಾಜಕಾಲುವೆ ಮತ್ತು ಕೆರೆಗಳ ಮೇಲೆ ವಸತಿ ಗೃಹ ಬಂದಿರುವುದೇ ಇದಕ್ಕೆ ಕಾರಣ ಎಂದು ಸರ್ಕಾರ ಸಬೂಬು ಹೇಳುತ್ತದೆ. ನೊಂದ ಸಂತ್ರಸ್ತರು (ಇವರು ಭಾರತದ ಬೇರೆ ಬೇರೆ ಭಾಗಗಳಿಂದ ನಮ್ಮೂರಿಗೆ ವಲಸೆ ಬಂದಿರುವವರು ಮತ್ತು ಯಾರಿಗೂ ಕನ್ನಡ ಬರಲ್ಲ ಮತ್ತು ಎಂ ಎನ್ ಸಿ ಉದ್ಯೋಗಿಗಳು. ಕನ್ನಡ ಕಲಿಯಬೇಕು ಅನ್ನುವ ಆಸೆಯೂ ಅವರಿಗೆ ಇಲ್ಲ. ಅದರ ಬದಲಿಗೆ ಅವರ ಭಾಷೆ ಇಲ್ಲಿ ಹೇರುತ್ತಾರೆ). ಈಗಿನ ನೂರಾರು ಟೀವಿ ಚಾನಲ್‌ಗಳ ಮೂಲಕ ಬೆಂಗಳೂರನ್ನು ಬೈದು ಉಪ್ಪು ಹಾಕುತ್ತಾರೆ. ನಮ್ಮ ಊರಲ್ಲಿ ಹೀಗಿಲ್ಲ ಎಂದು ಅವರ ಊರನ್ನು ಹೊಗಳುತ್ತಾರೆ. ಮಳೆ ಬಂದಾಗ ಈ ಗುಂಪಿನ ಜನಕ್ಕೆ ಬೆಂಗಳೂರು ಒಂದು ವೈರಿ, ಒಂದು ದೊಡ್ಡ ಕ್ರಿಮಿನಲ್ ಆಗಿ ಬಿಡುತ್ತದೆ. ಆದರೆ ಯಾರೂ ಬೆಂಗಳೂರು ಬಿಡರು. ಇಷ್ಟೆಲ್ಲಾ ಅವ್ಯವಸ್ಥೆ ಇದ್ದರೂ ಇಲ್ಲೇ ಇನ್ನೂ ಆಳವಾಗಿ ಬೇರು ಬಿಡುತ್ತಾರೆ ಮತ್ತು ತಮ್ಮ ನೆಂಟರು ಇಷ್ಟರನ್ನು ಇಲ್ಲಿಗೆ ಕರೆತಂದು ತುಂಬುತ್ತಾರೆ. ಬೆಂಗಳೂರಿನ ಗರ್ಭ ಮತ್ತಷ್ಟು ದೊಡ್ಡದಾಗುತ್ತದೆ. ಮುಂದಿನ ವರ್ಷ ಮಳೆ ಸೀಜನ್ನಿನಲ್ಲಿ ಈ ಕತೆ ಪುನರಾವರ್ತನೆ ಆಗುತ್ತದೆ. ಕೇಂದ್ರ ಸಾರ್ವಜನಿಕ ಉದ್ದಿಮೆಯಲ್ಲಿ ನಾನು ನಾಲ್ಕು ದಶಕಗಳ ಕಾಲ ಕೆಲಸ ಮಾಡಿದವನು. ದೇಶದ ಎಲ್ಲಾ ಭಾಗಗಳಿಂದ ಇಲ್ಲಿಗೆ ನೌಕರಿಗೆ ಎಂದು ಜನ ಬಂದರೂ, ಬಂದರೂ ಬಂದು ತುಂಬಿಕೊಂಡರು. ಬೆಂಗಳೂರು ಅವರೆಲ್ಲರನ್ನೂ ತನ್ನ ಗರ್ಭದೊಳಗೆ ಸೇರಿಸಿಕೊಂಡಿತು. ಈ ಹೊರಗಿನಿಂದ ವಲಸೆ ಬಂದವರಿಗೆ ಬೆಂಗಳೂರು ಹೇಗೆ ಒಗ್ಗಿತು ಅಂದರೆ ಒಬ್ಬನೇ ಒಬ್ಬ ಬೆಂಗಳೂರು ಬಿಟ್ಟು ಅವರ ತವರಿಗೆ ಹೋಗಿಲ್ಲ. ಇನ್ನೂ ತಮಾಷೆ ಅಂದರೆ ಇಲ್ಲಿನ ಭಾಷೆ ಕಲಿತಿಲ್ಲ! ಇಲ್ಲಿನ ಮೂಲ ನಿವಾಸಿಗಳ ಮೇಲೆ ಸವಾರಿ ಮಾಡುವ ಅವರು ನಮ್ಮ ಭಾಷೆ ನಮ್ಮ ಆಹಾರ ನಮ್ಮ ಪದ್ಧತಿ ಇವುಗಳನ್ನು ತಮಾಷೆ ಮಾಡುತ್ತಾರೆ. ನಮ್ಮ ಮುಗ್ಧ ಜನರು ಇದನ್ನು ಅವಮಾನ ಅಂದುಕೊಳ್ಳರು. ನಮ್ಮ ಬಗ್ಗೆ ನಮಗೇ ಅಪಾರವಾದ ಮರುಕ ಹುಟ್ಟುವುದು ಇಂತಹ ಸಂದರ್ಭಗಳಲ್ಲಿ..!

ಬೆಂಗಳೂರಿನ ಒಂದು ಮರೆತು ಹೋಗಿರುವ ನದಿ ಎಂದರೆ ಅದು ವೃಷಭಾವತಿ ನದಿ. ಒಮ್ಮೆ ಯಾವಾಗಲೋ ಅದೆಷ್ಟೋ ಶತಮಾನಗಳ ಹಿಂದೆ ಈ ನದಿ ನೀರು ಕುಡಿಯಲು ಯೋಗ್ಯ ಇತ್ತು ಎನ್ನುವ ಒಂದು ಜನಪದ ಕತೆಯಿದೆ. ಕತೆ ಹೀಗಿದೆ.

ಮೇದರ ಲಿಂಗನ ಹಳ್ಳಿ ಜನರು ದರ್ಮಾಂಬುಧಿ ಬಳಿಯ ದೇವರಿಗೆ ಹರಕೆ ತೀರಿಸಲು ಹೊರಡುತ್ತಾರೆ. ಕತ್ತಲಾದಾಗ ಮಲ್ಲಾಪುರ ಎನ್ನುವ ಕಾಡಿನಲ್ಲಿ ತಂಗುತ್ತಾರೆ. ಉಣ್ಣಲು ಅನ್ನ ಮಾಡಲು ಮೂರು ಕಲ್ಲು ಜೋಡಿಸಿ ಅದರಲ್ಲಿ ಅಕ್ಕಿ ನೀರು ಇಡುತ್ತಾರೆ. ಬೆಂಕಿ ಹಚ್ಚಲು ಬೆಂಕಿ ಸಿಗದು ಅದನ್ನು ಹುಡುಕಿ ಕೊಂಚ ದೂರ ಹೋಗುತ್ತಾರೆ. ಬೆಂಕಿ ವಾಪಸು ತರುವಷ್ಟರಲ್ಲಿ ಪಾತ್ರೆಯಲ್ಲಿ ಅಕ್ಕಿ ಬೆಂದು ಅನ್ನ ಆಗಿರುತ್ತೆ! ಕಲ್ಲು ಬಿಸಿ ಆಗಿರುತ್ತೆ. ಕಾಡಿನಲ್ಲಿ ಸಿಕ್ಕ ಕಲ್ಲು ಕುಲದೇವತೆ ಆಗುತ್ತದೆ. ಕಲ್ಲು ಕಾಡು ಮಲ್ಲೇಶ(ಮಲ್ಲಿಕಾರ್ಜುನ) ಆಗುತ್ತದೆ. ಇಲ್ಲೇ ಕಾಡುಮಲ್ಲೇಶ್ವರ(ಕಾಡು ಮಲ್ಲಿಕಾರ್ಜುನ)ಗುಡಿ ಬರುತ್ತೆ. ಇದರ ಎದುರು ಒಂದು ವೃಷಭ (ಹಸು) ತನ್ನ ಬಾಯಿನಿಂದ ನೀರು ಹರಿಸುತ್ತಾ ಇರುತ್ತದೆ. ಇದು ಈಗಿನ ಮಲ್ಲೇಶ್ವರ ಮತ್ತು ವೃಷಭಾವತಿ ನದಿ. ಬೆಂಗಳೂರಿನ ಮತ್ತೊಂದು ತುದಿಯಲ್ಲಿನ ಬಸವನ ಗುಡಿಯಲ್ಲಿನ ವೃಷಭದ ಬಾಯಿಯಲ್ಲೂ ನೀರು ಬರುತ್ತದೆ. ಮೇದರ ಲಿಂಗನ ಹಳ್ಳಿ ಅಂದರೆ ಅದು ಈಗಿನ IISC ಸೈನ್ಸ್ ಇನ್ಸ್ಟಿಟ್ಯೂಟ್ ಕ್ಯಾಂಪಸ್. ದರ್ಮಾಂಬುಧಿ ಕೆರೆ ಅಂದರೆ ನಮ್ಮ ಈಗಿನ ಬಸ್ ಸ್ಟಾಂಡ್. ಮತ್ತು ಅಲ್ಲಿನ ದೇವಸ್ಥಾನ ಅಂದರೆ ಅಣ್ಣಮ್ಮ ಬೆಂಗಳೂರಿನ ಗ್ರಾಮದೇವತೆ. ಈ ಕತೆ ವ್ಯಾಪಕ ಪ್ರಚಾರ ಪಡೆಯುತ್ತಿದೆ.

ಸುಬೇದಾರ್ ರಸ್ತೆಯಲ್ಲಿನ ಅಣ್ಣಮ್ಮದೇವರ ಗುಡಿ ನಗರದ ಎಲ್ಲಾ ಸ್ತರದ ಜನರಿಗೂ ನಂಟು ಇರುವ ದೇವರು. ಅದೊಂದು ರೀತಿ ವರ್ಗಾತಿತ, ಜಾತ್ಯಾತೀತ ದೇವತೆ. ಮಕ್ಕಳಿಗೆ ಅಮ್ಮ ಬಂದಾಗ ಎಲ್ಲರೂ (ಎಲ್ಲಾ ಜಾತಿಯವರೂ) ಅಣ್ಣಮ್ಮ ದೇವತೆಗೆ ಹರಕೆ ಹೊರುತ್ತಾರೆ. ಅಲ್ಲಿ ಹೋಗಿ ದೇವರಿಗೆ ಮೊಸರು ಅಭಿಷೇಕ ಮಾಡುತ್ತಾರೆ. ನಾನೂ ಅಲ್ಲಿಗೆ ಸುಮಾರು ಸಲ ಹೋಗಿ ಮೊಸರಿನ ಅಭಿಷೇಕ ನೋಡಿದ್ದೇನೆ. ನನ್ನ ಮಕ್ಕಳಿಗೆ, ಮೊಮ್ಮಕ್ಕಳಿಗೆ ಅಮ್ಮ ಬಂದಾಗ ಕಾಣಿಕೆ ಒಪ್ಪಿಸಿ ಮೊಸರು ಅಭಿಷೇಕ ಮಾಡಿದ್ದೇವೆ! ಹೀಗೆ ಅಣ್ಣಮ್ಮನಿಗೆ ಮೊಸರು ಅಭಿಷೇಕ ನಡೆಸಿದ ಹಾಗೆ ಮಿಕ್ಕ ಯಾವ ನಗರ ದೇವತೆಗಳಿಗೂ ಬೆಂಗಳೂರಿನಲ್ಲಿ ಅಭಿಷೇಕ ಆಗಿರುವುದು ನಾನು ಕಾಣೆ. ಬೆಂಗಳೂರಿಗೆ ಅಂಟಿಕೊಂಡ ಹಾಗೆ ಇದ್ದ ಈಗ ಬೆಂಗಳೂರಿನ ಒಂದು ಭಾಗವೇ ಆಗಿರುವ ಹಲವು ಹಳ್ಳಿಗಳಿಗೆ ಅಲ್ಲಿಯದೇ ಆದ ಕೆಲವು ದೇವತೆಗಳು ಇವೆ. ಗಂಗಮ್ಮ, ಜಲಗೆರಮ್ಮ, ಮೊದಲಾದ ದೇವತೆಗಳು ಹಳ್ಳಿಗೆ ಸೇರಿದವು. ನಗರದ ಒಂದು ಭಾಗವೇ ಆಗಿರುವ ಮಲ್ಲೇಶ್ವರದಲ್ಲಿ ಒಂದು ಮಾರಮ್ಮನ ದೇವತೆಗೆ ದೊಡ್ಡ ದೇವಸ್ಥಾನ ಇದ್ದು ಈಗೊಂದು ಎರಡು ದಶಕಗಳಿಂದ ಖ್ಯಾತಿ ಪಡೆಯುತ್ತಿದೆ. ಈ ದೇವತೆಗೆ ಸರ್ಕಲ್ ಮಾರಮ್ಮ ಎನ್ನುವ ಹೆಸರನ್ನು ಯಾರೋ ಇಟ್ಟು ಈಗ ಅದು ನೈಜ ನಾಮವೇ ಆಗಿದೆ! ಬೆಂಗಳೂರಿನ ದೇವಸ್ಥಾನಗಳ ಬಗ್ಗೆ ಮುಂದೆ ಯಾವಾಗಲಾದರೂ ಬರೆಯುತ್ತೇನೆ..

ಮತ್ತೆ ವೃಷಭಾವತಿಗೆ…

ಈಗ ಬೆಂಗಳೂರಿನ ಯಾವುದಾದರೂ ಪ್ರದೇಶದಲ್ಲಿ ದೊಡ್ಡ ಕಾಲುವೆ ಕಂಡರೆ ಮತ್ತು ಅದರಲ್ಲಿ ಕಪ್ಪು ಬಣ್ಣದ ನೀರು ಹರಿಯುತ್ತಿದ್ದರೆ, ಅದು ವೃಷಭಾವತಿ ಎಂದು ಗುರುತಿಸಬಹುದು. ಮಲ್ಲೇಶ್ವರದ ಲಿಂಕ್ ರಸ್ತೆಯಲ್ಲಿ ನೀವು ಹೋದರೆ ಅಲ್ಲೊಂದು ದೊಡ್ಡ ಕಾಲುವೆ ರಸ್ತೆಯ ಎರಡೂ ಪಕ್ಕ ನಿಮಗೆ ಕಾಣುತ್ತದೆ. ಕಾಲುವೆ ಮೇಲೆ ಕಟ್ಟಿರುವ ರಸ್ತೆಯ ಅಡಿಯಲ್ಲಿ ಈ ಕಪ್ಪು ನೀರು, ಗ್ರೇ ವಾಟರ್ ಹರಿಯುತ್ತದೆ. ಇದೇ ರೀತಿಯ ಕಪ್ಪು ನೀರಿನ ಕಾಲುವೆ ಪ್ರಕಾಶ ನಗರ ರಾಜಾಜಿನಗರದ ಬಳಿಯ ರಾಮಚಂದ್ರಪುರ, ಮಲ್ಲೇಶ್ವರದ ಲಿಂಕ್ ರಸ್ತೆ, ಗೊಬಿಚೆಟ್ಟಿ ಪಾಳ್ಯ, ಕಾಮರಾಜ್ ರಸ್ತೆಯ ಬಳಿ ಮೊದಲಾದ ಸ್ಥಳದಲ್ಲಿ ನಿಮಗೆ ಕಾಣಿಸುತ್ತದೆ. ಮಾನವ ಕಲ್ಮಷ ಹೊತ್ತು ಸಾಗುವ ಕೊಳಚೆ ನೀರನ್ನು ಗ್ರೇ ವಾಟರ್ ಎಂದು ಪರಿಸರವಾದಿಗಳು ನಾಮಕರಣ ಮಾಡಿದ್ದಾರೆ. ಇದು ಭಾಷೆಗೆ ಸೇರಿದ ಹೊಸಾ ಪದ. ಎಪ್ಪತ್ತರ ದಶಕದಲ್ಲಿ ಈ ಪದ ಅಷ್ಟಾಗಿ ಬಳಕೆಯಲ್ಲಿ ಇರಲಿಲ್ಲ. ಎರಡು ಸಾವಿರದ ಇಸವಿ ಆದಿ ಭಾಗದಲ್ಲಿ ಈ ಪದ ವ್ಯಾಪಕ ಬಳಕೆಯಲ್ಲಿ ಬಂದಿದೆ.

ಇಡೀ ಬೆಂಗಳೂರಿಗೆ ಈ ಬವಣೆಯೇ ಅಂದರೆ ಇಲ್ಲ. ಮಂತ್ರಿಗಳು ಪುಡಾರಿಗಳು ಮತ್ತು ಹಣವಂತರು ಇರುವ ಸ್ಥಳಗಳಲ್ಲಿ ನೀರಿನ ತೊಂದರೆ ಇಲ್ಲ. ಬರೀ ಬಡವರಿಗೆ ಮಾತ್ರ ಈ ಸಮಸ್ಯೆ! ಟ್ಯಾಂಕರ್‌ಗಳಿಂದ ನೀರು ಒದಗಿಸುವ ಒಂದು ದೊಡ್ಡ ಉದ್ಯಮ ಬೆಂಗಳೂರಿನದು. ಕೆರೆ ಕಲುಷಿತ ನೀರು.. ಹೀಗೆಂದರೆ ಕುಡಿಯಲು ಅಯೋಗ್ಯವಾದ ನೀರು ಟ್ಯಾಂಕರ್ ಮೂಲಕ ಜನರಿಗೆ ಸೇರುತ್ತದೆ.

ಈಗಲೂ ಟ್ಯಾಂಕರ್ ನೀರಿನ ಮೇಲೆ ಅವಲಂಬಿತ ಆಗಿರುವ ಲಕ್ಷಾಂತರ ಬೆಂಗಳೂರಿಗರು ಇದ್ದಾರೆ ಮತ್ತು ಅವ್ಯವಸ್ಥೆಗೆ ಹೊಂದಿಕೊಂಡು ಜೀವನ ನೂಕುತ್ತಿದ್ದಾರೆ. ಮೂಲಭೂತ ನಾಗರಿಕ ಸೌಲಭ್ಯಗಳನ್ನು ಒದಗಿಸಲು ಸರ್ಕಾರ ಹಾಗೂ ನಮ್ಮ ಜನ ಪ್ರತಿನಿಧಿಗಳು ಸಂಪೂರ್ಣ ಸೋತಿದ್ದಾರೆ.