ಶಾಲೆಗೆ ಹೋದರೂ ನೀಲಿಗೆ ಹುಲಿಯದೇ ಮುಖ ನೆನಪಿಗೆ ಬರುತ್ತಿತ್ತು. ತನ್ನ ಸಹಪಾಟಿಗಳಿಗೂ ಹುಲಿಯನ್ನು ತೋರಿಸಬೇಕು ಅನಿಸತೊಡಗಿತು. ಮಾಸ್ತ್ರು ಪಾಠ ಮಾಡುತ್ತಿರುವಂತೆಯೇ ಪಿಸಪಿಸನೆ ಆಚೀಚೆಗೆ ಕುಳಿತವರಿಗೆ ವಿಷಯ ಮುಟ್ಟಿಸಿದಳು. ಇಂದೇನು? ಯಾವ ಮಕ್ಕಳೂ ಪಾಠದೆಡೆಗೆ ಗಮನವನ್ನೇ ನೀಡುತ್ತಿಲ್ಲವೆಂದು ಕ್ಷಣಕಾಲ ದಿಟ್ಟಿಸಿದ ಗೌಡಾ ಮಾಸ್ತ್ರು ಸುದ್ದಿಮೂಲವನ್ನು ಪತ್ತೆ ಹಚ್ಚಿಯೇಬಿಟ್ಟರು. ನೀಲಿಯನ್ನು ನಿಲ್ಲಿಸಿ ವಿಷಯ ಕೇಳಿದ್ದೇ ತಡ ಪಟಪಟನೆ ಪಟಾಕಿ ಸರಕ್ಕೆ ಬೆಂಕಿ ಕೊಟ್ಟಂತೆ ಎಲ್ಲ ಕತೆಯನ್ನು ಹೇಳಿಬಿಟ್ಟಳು. ಗೌಡಾ ಮಾಸ್ತ್ರು ಅವರೆಲ್ಲ ಎಣಿಸಿದಂತೆ ಆಶ್ಚರ್ಯಚಕಿತರಾಗದೇ ಇದ್ದಕ್ಕಿದ್ದಂತೆ ಗಂಭೀರವಾಗಿಬಿಟ್ಟರು.
ಸುಧಾ ಆಡುಕಳ ಬರೆಯುವ “ಹೊಳೆಸಾಲು” ಅಂಕಣದ ಎರಡನೇ ಕಂತಿನಲ್ಲಿ ‘ನೀಲಿ’ ಹುಲಿ ಕಂಡ ಕತೆ, ನಿಮ್ಮ ಓದಿಗೆ

ನಡುರಾತ್ರಿಯಲಿ ಇಡಿಯ ನೆಲವೇ ಕಂಪಿಸುವಂತೆ ಕೂಗೊಂದು ಕೇಳಿಬಂದಾಗ ನೀಲಿ ಗಾಢ ನಿದ್ದೆಯಲ್ಲಿದ್ದಳು. ಕನಸೇನಾದರೂ ಕಂಡೆನೇನೊ? ಎಂದು ಮಗ್ಗಲು ಮಗುಚಿ ಮುಖದವರೆಗೂ ಹೊದ್ದುಕೊಂಡು ಮಲಗಿದಳು. ಮರುಕ್ಷಣದಲ್ಲಿ ಮತ್ತೆ ಅಂಥದ್ದೇ ನೆಲನಡುಗುವ ಸದ್ದು ಕೇಳಿಬಂತು. ಹೆದರಿಕೆಯಿಂದ ಅಪ್ಪನನ್ನು ಕರೆದಳು. ದಿನವೂ ಅಮ್ಮನೊಂದಿಗೆ ಒಳಗೆ ಮಲಗುತ್ತಿದ್ದವಳು ಇಂದು ಪ್ರವಾಸದ ಸುದ್ಧಿಯನ್ನು ಹೇಳಲೆಂದು ಅಪ್ಪನೊಂದಿಗೆ ಹೊರಮನೆಯಲ್ಲೇ ಮಲಗಿದ್ದಳು. ಬೆಳಿಗ್ಗೆ ಹೊರಟಾಗಿನಿಂದ ಬರುವವರೆಗಿನ ಎಲ್ಲ ವಿವರಗಳನ್ನು ಅಪ್ಪನಿಗೆ ವರದಿ ಒಪ್ಪಿಸುತ್ತಲೇ ಇದ್ದಳು. ಬೇಸಿಗೆಯ ಸೆಕೆಗೆ ಅಡಿಕೆ ಹಾಳೆಯ ಬೀಸಣಿಗೆಯಿಂದ ಗಾಳಿ ಹಾಕಿಕೊಳ್ಳುತ್ತಾ ಮಲಗಿದ ಅಪ್ಪ ಅವಳ ಮಾತಿಗೆ ಹೂಂಗುಡುವುದಷ್ಟೇ ಅಲ್ಲ, ನಡುನಡುವೆ ತಮ್ಮ ಅನುಭವಗಳನ್ನೂ ಸೇರಿಸುತ್ತ ಕವಳದ ಮೇಲೆ ಕವಳ ಜಗಿಯುತ್ತ, ಉಗಿಯುತ್ತ ಸಮಯ ಕಳೆಯುತ್ತಿದ್ದರು. ಇವರಿಬ್ಬರ ಸುದ್ದಿಯ ಜೋರಿಗೆ ನಿದ್ದೆ ಬಾರದ ಅಮ್ಮ ಹೊರಗೆದ್ದು ಬಂದವರು, “ಮರದ ಬಾಯಾಗಿದ್ರೆ ಒಡೆದುಹೋಗ್ತಿತ್ತು. ಎಷ್ಟು ಮಾತಾಡ್ತೆ ಕೂಸೆ. ಮಲ್ಕೊ ಸುಮ್ನೆ. ನಿಮಗಾದರೂ ಬುದ್ದಿ ಬೇಡ್ವಾ? ಬೆಳಗೆದ್ದು ನಸುಕಿನಲ್ಲಿ ಆ ಹಂಡಗೂಳಿ ಎಲ್ಲಿಗೋಯ್ತೆಂದು ಹುಡುಕಿ ಬನ್ನಿ.” ಎಂದು ಗದರಿದ್ದಳು. ಪ್ರವಾಸದಿಂದ ಸುಸ್ತಾಗಿ ಮರಳಿದ ನೀಲಿಗೆ ಹಂಡಗೂಳಿ ಮನೆಗೆ ಬಾರದ ವಿಷಯವನ್ನು ಹೇಳುವುದು ಬೇಡವೆಂದುಕೊಂಡಿದ್ದ ಅಪ್ಪ ಅನಿವಾರ್ಯವಾಗಿ ಈಗ ಹೇಳಬೇಕಾಯಿತು. ನೀಲಿಯ ಅಚ್ಚುಮೆಚ್ಚಿನ ಕರು ಹಂಡಗೂಳಿ ಆ ದಿನ ಕಾಡಿನಿಂದ ಮನೆಗೆ ಮರಳಿರಲಿಲ್ಲ. ರಾತ್ರಿಯವರೆಗೂ ನಾಲ್ಕಾರು ಜನರು ಹೋಗಿ ಹುಡುಕಿದರೂ ಅದರ ಸುಳಿವಿರಲಿಲ್ಲ. ಈ ಸುದ್ದಿ ಕೇಳಿದ ಮೇಲೆ ನೀಲಿಯ ಬಾಯಿಂದ ಮಾತುಗಳೇ ಹೊರಡಲಿಲ್ಲ. ಎಷ್ಟು ಹೊತ್ತಿಗೆ ಬೆಳಗಾಗುವುದೋ, ಎಷ್ಟು ಹೊತ್ತಿಗೆ ಅಪ್ಪ ಹಂಡಗೂಳಿಯನ್ನು ಹುಡುಕಿ ತರುವನೋ ಎಂಬ ಕಳವಳದಲ್ಲೇ ಕಣ್ಮುಚ್ಚಿದ್ದಳು. ಮತ್ತೀಗ ಅದೆಂಥದ್ದೋ ನಿಗೂಢ ಶಬ್ದಕ್ಕೆ ನಡುರಾತ್ರಿಯಲ್ಲಿ ಎಚ್ಚರವಾಗಿತ್ತು.

ಮತ್ತೊಮ್ಮೆ ಕೂಗನ್ನು ಆಲಿಸಿದ ಅಪ್ಪ, “ಅದು ಹುಲಿಯ ಕೂಗು. ಕಣ್ಮುಚ್ಚಿ ಮಲಗು.” ಎಂದ. ನೀಲಿ “ಮತ್ತೇಕೆ ನೆಲವೆಲ್ಲ ಕಂಪಿಸುತ್ತಿದೆ?” ಎಂದಳು. “ಹುಲಿ ಕೂಗುವಾಗ ನೆಲಕ್ಕೆ ಬಾಯಿಟ್ಟು ಕೂಗುತ್ತದೆ. ಹಾಗಾಗಿ ನೆಲ ನಡುಗುತ್ತದೆ.” ಎಂದು ಅಪ್ಪ ಮತ್ತೊಂದು ಬೀಡಿಯನ್ನು ಹಚ್ಚಿದ. ನೀಲಿ ಕತ್ತಲ ರಾತ್ರಿಯಲ್ಲಿ ಚುಕ್ಕೆಯಂತೆ ಹೊಳೆಯುವ ಬೀಡಿಯ ತುದಿಯನ್ನು ದಿಟ್ಟಿಸತೊಡಗಿದಳು. ಒಮ್ಮೆ ಹೊಳೆಯುತ್ತ, ಇನ್ನೊಮ್ಮೆ ಮಂಕಾಗುತ್ತ, ಕೊನೆಗೊಮ್ಮೆ ಚುಕ್ಕೆ ಮಾಯವಾಯಿತು. ಹಂಡಗೂಳಿಯ ನೆನಪು ಉಕ್ಕುಕ್ಕಿ ಬಂದು ನಿದ್ದೆ ದೂರಾಯಿತು. ಹೊಳೆಸಾಲಿನಲ್ಲಿ ದನವೊಂದು ಕರು ಹಾಕಿದರೆ ಮಕ್ಕಳಿಗೆಲ್ಲ ಅದೆಂಥಹ ಸಂಭ್ರಮ! ಮೊದಲಿಗೆ ಹೆಣ್ಣೋ, ಗಂಡೋ ಎಂದು ತಿಳಿದುಕೊಳ್ಳುವುದು, ಮತ್ತೆ ಅದಕ್ಕೊಂದು ಚಂದದ ಹೆಸರನ್ನು ಹುಡುಕುವುದು, ದೊಡ್ಡವರೆಲ್ಲ ಬಾಣಂತಿ ದನದ ಸ್ನಾನಕ್ಕೆಂದು ಬಿಸಿನೀರು ಕಾಯಿಸುವುದರಲ್ಲಿ, ದನಕ್ಕೆ ನಂಜೇರದಂತೆ ವನಪಿನ ಬಳ್ಳಿ ತಂದು ಕಷಾಯ ಕಾಯಿಸುವುದರಲ್ಲಿ ಮಗ್ನರಾಗಿದ್ದರೆ ಮಕ್ಕಳಿಗೆ ಆ ಪುಟ್ಟ ಕರುವನ್ನು ನೋಡುವ ತವಕ. ಆಗತಾನೇ ಹುಟ್ಟಿದ ಕರು ನೆಲದಲ್ಲಿ ಕಾಲೂರಲು ತಡವರಿಸುತ್ತಾ ಅಮ್ಮನ ಮೊಲೆಗೆ ಬಾಯಿಡಲು ಹೆಣಗುವುದು, ದನ ತನ್ನ ಕರುವನ್ನು ನೆಕ್ಕಲೆಂದು ನವಜಾತ ಕರುವಿನ ಮೈಮೇಲೆ ಭತ್ತದ ಹೊಟ್ಟು ಬೀರುವುದು, ತನ್ನ ನಾಲಿಗೆಯನ್ನು ಇಷ್ಟುದ್ದ ಚಾಚಿ ದನವು ಕರುವಿನ ಮೈಯ್ಯಿಡೀ ನೆಕ್ಕುವುದು, ಸುಡು ನೀರಿನಲ್ಲಿ ದನವನ್ನು ಮೀಸುತ್ತಾ ಅಮ್ಮ, “ಮನುಷ್ಯರಿಗಾದರೆ ಮೂರು ತಿಂಗಳಿಡೀ ಬಿಸಿನೀರ ಸ್ನಾನ, ಪಾಪ ಈ ಮೂಕಜಾತಿ. ಇವತ್ತೊಂದೇ ಬಿಸಿನೀರ ಶಾಖ” ಎನ್ನುತ್ತಾ ದನದ ಹೊಟ್ಟೆ ಕೆಚ್ಚಲಿಗೆಲ್ಲ ಬಿಸಿನೀರನ್ನು ಬೀಸಿ, ಬೀಸಿ ಎರಚುವುದು, ಬಿಸಿನೀರ ಶಾಖಕ್ಕೆ ಸೋರುವ ಕೆಚ್ಚಲಿಂದ ಇಷ್ಟೇ ಇಷ್ಟು ಹಾಲನ್ನು ಹಿಂಡಿ ತೆಂಗಿನ ಮರಕ್ಕೆ ಹಾಕುವುದು ಹೀಗೆ ಒಂದಿಡೀ ದಿನ ಮನೆಯಲ್ಲಿ ಸಡಗರ ತುಂಬಿಕೊಳ್ಳುತ್ತಿತ್ತು. ಅದಾದ ಮರುದಿನವೇ ಆ ಕರುವಿಗೊಂದು ಮುದ್ದಾದ ಹೆಸರು ಸೇರ್ಪಡೆಯಾಗುತ್ತಿತ್ತು. ಸಾಮಾನ್ಯವಾಗಿ ಸೋಮವಾರ ಹುಟ್ಟಿದರೆ ಸೋಮ, ಮಂಗಳವಾರ ಹುಟ್ಟಿದರೆ ಮಂಗಳ/ಳಿ, ಬುಧವಾರ ಹುಟ್ಟಿದರೆ ಬುಧವಂತ/ತಿ…. ಹೀಗೆ ಹುಟ್ಟಿದ ವಾರಗಳ ಆಧಾರದಲ್ಲಿ ಕರುಗಳಿಗೆ ನಾಮಕರಣವಾಗುತ್ತಿತ್ತು. ಇಲ್ಲವಾದಲ್ಲಿ ಅವುಗಳ ಬಣ್ಣ ಮತ್ತು ಚಹರೆಯನ್ನು ಆಧರಿಸಿ ಹೆಸರಿಡುತ್ತಿದ್ದರು. ಬೆಳ್ಳ/ಳ್ಳಿ, ಕೆಂದ/ದಿ, ಕರಿಯಮ್ಮ/ಪ್ಪ …ಹೀಗೆ. ಹಣೆಯಲ್ಲಿ ಇಷ್ಟಗಲ ಬಿಳಿಯ ಹುಂಡನ್ನು ಹೊಂದಿದ ನರುಗೆಂಪು ಬಣ್ಣದ ಗಂಡುಗರುವಿಗೆ ‘ಹಂಡ’ ಎಂದು ನೀಲಿಯೇ ನಾಮಕರಣ ಮಾಡಿದ್ದಳು.

ಹುಟ್ಟಿ ಒಂದು ವಾರದಲ್ಲಿಯೇ ಹಂಡನ ಅಮ್ಮ ಅದ್ಯಾವುದೋ ರೋಗಬಂದು ತೀರಿಹೋಗಿತ್ತು. ಹುಲ್ಲನ್ನೂ ತಿನ್ನಲು ಗೊತ್ತಿರದ ಹಂಡಗೂಳಿ ಪಿಳಿಪಿಳಿ ಕಣ್ಣುಬಿಡುತ್ತಾ ನಿಂತಿತ್ತು. ಇಡಿಯ ಊರಿನವರೆಲ್ಲರೂ ಕರುವಿನ ತಬ್ಬಲಿತನಕ್ಕೆ ಮರುಗಿದ್ದರು. ನೋಡುನೋಡುತ್ತಾ ಎಳೆಯ ಕರುವೊಂದನ್ನು ಸಾಯಗೊಡಬಾರದೆಂದು ನೀಲಿಯ ಅಪ್ಪ ದಿನದ ಮೂರುಹೊತ್ತು ಬೇರೆ ದನದ ಹಾಲನ್ನು ಕರೆದು ಬಿದಿರಿನ ನಳಿಕೆಯನ್ನು ಕರುವಿನ ಬಾಯಿಗಿಟ್ಟು ಹಾಲೆರೆಯುತ್ತಿದ್ದರು. ಅದನ್ನು ಕುಡಿಯಲು ಬಾರದ ಕರು ಒದ್ದಾಡುತ್ತ ನಳಿಕೆ ಬಾಯಿಗೆ ಚುಚ್ಚಿ ಗಾಯವಾಗಿತ್ತು. ಇದನ್ನೆಲ್ಲ ನೋಡುತ್ತಿದ್ದ ನೀಲಿಯ ಮನಸ್ಸಿನಲ್ಲಿ ಥಟ್ಟನೆ ಒಂದು ವಿಷಯ ಬಂತು. ಮನೆಯಲ್ಲಿ ಅತ್ತೆಯ ಮಗಳಿಗೆಂದು ತಂದಿದ್ದ ಬಾಟಲಿ, ನಿಪ್ಪಲುಗಳಿದ್ದವು. ಅದರಲ್ಲಿ ಹಾಲು ತುಂಬಿಸಿ ಕುಡಿಸಿದರೆ ಹೇಗೆ? ಎಂದು ಹೊಳೆದಿದ್ದೇ ತನ್ನ ಯೋಜನೆಯನ್ನು ಕಾರ್ಯರೂಪಕ್ಕೆ ತಂದೇಬಿಟ್ಟಳು. ಕುಡಿಯಲು ಕಷ್ಟಪಡುತ್ತಿದ್ದ ಕರು ಪುಟ್ಟ ಮಗುವಿನಂತೆ ಬಾಟಲಿ ಹಾಲನ್ನು ಕುಡಿಯತೊಡಗಿತು. ಮುಂದೆ ನೀರು, ಗಂಜಿತಿಳಿ ಹೀಗೆ ಎಲ್ಲವೂ ಬಾಟಲಿಯಿಂದಲೇ ಕರುವಿನ ಬಾಯೊಳಗೆ ಇಳಿಯತೊಡಗಿ ತಿಂಗಳು ಕಳೆಯುವುದರೊಳಗೆ ಕರು ಹುಲ್ಲು ಮೇಯುವಂತಾಗಿತ್ತು. ಹಾಗಾಗಿ ಹಂಡಗೂಳಿಯೆಂದರೆ ನೀಲಿಗೆ ತನ್ನದೇ ಮಗುವೆಂಬಷ್ಟು ಅಕ್ಕರೆ! ಇಂದು ಮನೆಗೆ ಬಾರದ ಹಂಡ, ಈ ರಾತ್ರಿ ನೆಲ ನಡುಗುವಂತೆ ಕೂಗುವ ಹುಲಿ ಎಲ್ಲವೂ ಏನೋ ಒಂದು ಅನಾಹುತದ ಮುನ್ಸೂಚನೆಯಂತೆ ಎನ್ನಿಸಿ ನೀಲಿ ಭಯಗೊಂಡಳು.

ಹೊಳೆಸಾಲಿನಲ್ಲಿ ಸಾಕಿದ ಪಶುವೊಂದು ಕಳೆದುಹೋದರೆ ಅದೊಂದು ದೊಡ್ಡ ಸಂಗತಿಯೆ. ಸಂಜೆಯಾಗುವುದರೊಳಗೆ ಪಶುವಿನ ಯಜಮಾನ ತನ್ನ ಮನೆಯ ಹತ್ತಿರದವರಿಗೆಲ್ಲ ವಿಷಯ ಮುಟ್ಟಿಸುತ್ತಾನೆ. ತಕ್ಷಣ ಅದೆಂಥದ್ದೇ ಕೆಲಸವಿರಲಿ, ಜನರೆಲ್ಲ ತಂಡ ಕಟ್ಟಿಕೊಂಡು ತಮ್ಮಲ್ಲಿರುವ ಬ್ಯಾಟರಿ ಹಿಡಿದುಕೊಂಡು ಹುಡುಕಲು ಹೊರಡುತ್ತಾರೆ. ತಮ್ಮ ದನಕರುಗಳು ದಿನವೂ ಮೇಯುವ ಜಾಗಗಳನ್ನೆಲ್ಲ ಮೊದಲು ಪರೀಕ್ಷಿಸುತ್ತಾರೆ. ಕೆಲವೊಮ್ಮೆ ಕಾಲಿಗೆ ಬಳ್ಳಿ ಸಿಕ್ಕಿ ಅಥವಾ ನೀರಿನ ಹೊಂಡದಲ್ಲಿ ಬಿದ್ದು ಏಳಲಾಗದೇ ದನಕರುಗಳು ಮನೆಗೆ ಬಾರದಿರುವ ಸಂದರ್ಭಗಳು ಇರುತ್ತವೆ. ಇನ್ನೂ ಸಿಕ್ಕಿಲ್ಲವೆಂದರೆ ಅದು ಹುಲಿಯ ಕೈವಾಡವೇ ಆಗಿರುತ್ತದೆ. ಆಗ ಎಲ್ಲರ ಗಮನ ಹುಲಿಯನ್ನು ಕೊಲ್ಲುವುದರ ಕಡೆಗೆ ಹರಿಯುತ್ತದೆ.

ಯಾವುದೇ ಪ್ರಾಣಿಯನ್ನು ಭೇಟೆಯಾಡಿದ ಹುಲಿ ಒಂದೇ ದಿನದಲ್ಲಿ ಅದನ್ನು ತಿನ್ನುವುದಿಲ್ಲ. ಹಗಲೆಲ್ಲ ಮರೆಯಾಗಿದ್ದು ರಾತ್ರಿಯ ವೇಳೆಗೆ ಮತ್ತೆ ತಿನ್ನಲು ಬಂದೇಬರುತ್ತದೆ. ಹುಲಿಯನ್ನು ಕೊಲ್ಲಲು ಅವರಲ್ಲಿ ಅನೇಕ ತಂತ್ರಗಳಿವೆ. ಮೊದಲನೆಯದು ಸತ್ತಿರುವ ಪ್ರಾಣಿಯ ದೇಹದಲ್ಲಿ ವಿಷವನ್ನಿಡುವುದು. ಆದರೆ ಹುಲಿಗಳು ಎಷ್ಟು ಸೂಕ್ಷ್ಮಜೀವಿಗಳೆಂದರೆ ವಿಷದ ವಾಸನೆಗೆ ಪ್ರಾಣಿಯನ್ನು ತಿನ್ನದೇ ಹೋಗುವುದುಂಟು. ತೀರ ಸಾಮಾನ್ಯವಾದ ವಿಧಾನವೆಂದರೆ ಕೋವಿ ಕಟ್ಟುವುದು. ಹೊಳೆಸಾಲಿನ ಅದೆಷ್ಟೋ ಮನೆಗಳಲ್ಲಿ ಪರವಾನಗಿಯಿರುವ ಕೋವಿಗಳು ಬ್ರಿಟಿಷರ ಕಾಲದಿಂದಲೂ ಇವೆ. ವರ್ಷಕ್ಕೊಮ್ಮೆ ಇಂತಿಷ್ಟು ಕರವೆಂದು ಕಟ್ಟಿ ಪರವಾನಗಿಯನ್ನು ನವೀಕರಿಸಿಕೊಳ್ಳುತ್ತಾರೆ. ಕೋವಿ ಕಟ್ಟುವ ತಂತ್ರ ಸುಲಭದ್ದೇನೂ ಅಲ್ಲ. ನಿಪುಣ ಬೇಟೆಗಾರನೊಬ್ಬ ಹುಲಿ ಬೇಟೆಯಾಡಿದ ತಾವನ್ನು ಗುರುತಿಸಿಕೊಳ್ಳುತ್ತಾನೆ. ಎಲ್ಲಿಯೂ ತಾನು ಬಂದ ಕುರುಹು ಸಿಗದಂತೆ ಮೆಲ್ಲನೆ ಹೆಜ್ಜೆಯಿಡುತ್ತಾ ಸಾಗಿ ಸತ್ತುಬಿದ್ದ ಪ್ರಾಣಿಯ ದೇಹಕ್ಕೆ ಹಗ್ಗವೊಂದನ್ನು ಬಿಗಿಯುತ್ತಾನೆ. ಅದೇ ಹಗ್ಗವನ್ನು ಆ ಪ್ರದೇಶದ ಸುತ್ತಲೂ ಇರುವ ಗಿಡಗಳಿಗೆ ಸುತ್ತುತ್ತಾ ಹುಲಿ ಬರುವ ದಾರಿಯೊಂದನ್ನು ಬಿಟ್ಟು ಪ್ರಾಣಿಯ ದೇಹಕ್ಕೆ ಎದುರಾಗಿ ಕೋವಿಯನ್ನು ಕಟ್ಟುತ್ತಾನೆ. ಕೋವಿಯ ಟ್ರಿಗರಿಗೆ ಪ್ರಾಣಿಯ ದೇಹದಿಂದ ಬಂದ ಹಗ್ಗವನ್ನು ಸುತ್ತುತ್ತಾನೆ. ಹುಲಿಯು ಪ್ರಾಣಿಯನ್ನು ತಿನ್ನುತ್ತಾ ದೇಹವನ್ನು ಅತ್ತಿತ್ತ ಎಳೆದ ಕೂಡಲೇ ಕೋವಿಯಿಂದ ಗುಂಡು ಹಾರುತ್ತದೆ. ಹುಲಿಯ ನಸೀಬು ಒಳ್ಳೆಯದಿದ್ದರೆ ಗುಂಡು ಗುರಿ ತಪ್ಪುತ್ತದೆ. ಇಲ್ಲವಾದಲ್ಲಿ ದೇಹದ ಯಾವುದಾದರೂ ಭಾಗಕ್ಕೆ ತಾಗುತ್ತದೆ. ಗಾಯಗೊಂಡ ಹುಲಿ ವಾರದೊಳಗೆ ಎಲ್ಲಿಯಾದರೂ ಸತ್ತುಬಿದ್ದಿರುತ್ತದೆ. ಗಾಯಗೊಂಡ ಹುಲಿ ಭಾರೀ ಅಪಾಯವೆಂದು ಆ ದಿನಗಳಲ್ಲಿ ಜನರು ಕಾಡಿಗೆ ಹೋಗುವುದನ್ನು ನಿಲ್ಲಿಸುತ್ತಾರೆ.

ಬೆಳಗೆದ್ದು ನೋಡಿದರೆ ಮನೆಯಿಂದ ಅನತಿ ದೂರದಲ್ಲಿಯೇ ಹಂಡಗೂಳಿಯ ದೇಹವಿತ್ತು. ಜನರೆಲ್ಲ ಸೇರಿ ಕೋವಿ ಕಟ್ಟಿದ್ದೂ ಆಯಿತು. ರಾತ್ರಿ ಗುಂಡು ಸಿಡಿದ ಸದ್ದೂ ಕೇಳಿತ್ತು. ಕೋವಿಯನ್ನು ಬಿಚ್ಚಲು ಹೋದ ಗಣಪಯ್ಯ ಹುಲಿ ಖಂಡಿತವಾಗಿಯೂ ಸತ್ತಿದೆ ಎಂದು ಸಾರಿದ್ದ. ಆದರೂ ಹುಲಿಯ ಸಾವಿನ ಕುರುಹು ಸಿಗದೇ ಪೂರ್ತಿಯಾಗಿ ನಂಬುವ ಹಾಗಿರಲಿಲ್ಲ. ಕಾದು ನೋಡುವ ಹಾದಿಯಲ್ಲಿ ಊರವರೆಲ್ಲರೂ ಇರುವಾಗಲೇ ಕೋವಿ ಕಟ್ಟಿದ ಗಣಪಯ್ಯನ ಎಳೆದನವೊಂದು ಮಾಯವಾಗಿತ್ತು. ಹುಡುಕುತ್ತ ಹೋದವರಿಗೆ ಹುಲಿಯದೇ ಕಾರುಬಾರೆಂದು ಅರಿವಾಗಿತ್ತು. ಗಣಪಯ್ಯನಿಗೆ ಒಂದು ಬದಿಯಲ್ಲಿ ದನ ಕಳಕೊಂಡ ದುಃಖ, ಇನ್ನೊಂದು ಬದಿಯಲ್ಲಿ ಎಂದೂ ಗುರಿತಪ್ಪದ ತನ್ನ ಕೋವಿಯ ಗುರಿ ಹುಸಿಯಾದ ಅವಮಾನ. ಇವುಗಳ ತಾಕಲಾಟದಲ್ಲಿ ನನ್ನ ದನ ತಿಂದ ಹುಲಿಯನ್ನು ಹೊಡೆಯದೇ ಇರಲಾರೆ ಎಂದು ಪ್ರತಿಜ್ಞೆಗೈದುಬಿಟ್ಟ. ಮತ್ತೊಮ್ಮೆ ತನ್ನ ಕೋವಿ ಕಟ್ಟುವ ತಂತ್ರವನ್ನು ಪರೀಕ್ಷೆಗೊಡ್ಡುವ ಧೈರ್ಯ ಅವನಿಗಿರಲಿಲ್ಲವಾಗಿ ಬದಲಿ ಮಾರ್ಗಗಳ ಬಗ್ಗೆ ಚಿಂತಿಸತೊಡಗಿದ. ಏನು ಮಾಡುವುದಿದ್ದರೂ ಹುಲಿ ತಾನು ಕೊಂದ ದನವನ್ನು ತಿಂದು ಮುಗಿಸುವುದರೊಳಗೆ ಮಾಡಬೇಕಿತ್ತು. ಅವರಿವರಲ್ಲಿ ವಿಚಾರಿಸಿ ಹೊಸ ಉಪಾಯವೊಂದನ್ನು ಕಂಡುಹಿಡಿದೇಬಿಟ್ಟ.

“ಮನುಷ್ಯರಿಗಾದರೆ ಮೂರು ತಿಂಗಳಿಡೀ ಬಿಸಿನೀರ ಸ್ನಾನ, ಪಾಪ ಈ ಮೂಕಜಾತಿ. ಇವತ್ತೊಂದೇ ಬಿಸಿನೀರ ಶಾಖ” ಎನ್ನುತ್ತಾ ದನದ ಹೊಟ್ಟೆ ಕೆಚ್ಚಲಿಗೆಲ್ಲ ಬಿಸಿನೀರನ್ನು ಬೀಸಿ, ಬೀಸಿ ಎರಚುವುದು, ಬಿಸಿನೀರ ಶಾಖಕ್ಕೆ ಸೋರುವ ಕೆಚ್ಚಲಿಂದ ಇಷ್ಟೇ ಇಷ್ಟು ಹಾಲನ್ನು ಹಿಂಡಿ ತೆಂಗಿನ ಮರಕ್ಕೆ ಹಾಕುವುದು ಹೀಗೆ ಒಂದಿಡೀ ದಿನ ಮನೆಯಲ್ಲಿ ಸಡಗರ ತುಂಬಿಕೊಳ್ಳುತ್ತಿತ್ತು. ಅದಾದ ಮರುದಿನವೇ ಆ ಕರುವಿಗೊಂದು ಮುದ್ದಾದ ಹೆಸರು ಸೇರ್ಪಡೆಯಾಗುತ್ತಿತ್ತು.

ಹೊಳೆಸಾಲಿನಿಂದ ಬಲುದೂರದ ಘಟ್ಟದೂರಿನ ಶಿವರಾಯನಿಗೆ ಕರೆಹೋಯಿತು. ಶಿವರಾಯನನ್ನು ಎಲ್ಲರೂ ಹುಲಿರಾಯರು ಎಂದೇ ಕರೆಯುತ್ತಿದ್ದರು. ರಾತ್ರಿ ಕಾಡಿನಲ್ಲಿ ಅಟ್ಟಣಿಗೆ ಕಟ್ಟಿಕೊಂಡು ಕುಳಿತು ತನ್ನ ಬೇಟೆಯನ್ನು ತಿನ್ನಲು ಬರುವ ಹುಲಿಯನ್ನು ಗುರಿಯಿಟ್ಟು ಹೊಡೆಯುವ ಅವನ ಧೈರ್ಯ ಸೀಮೆಗೆಲ್ಲ ದಂತಕತೆಯಾಗಿತ್ತು. ಅಗತ್ಯಬಿದ್ದರೆ ಮರವನ್ನೂ ಏರಬಲ್ಲ ಹುಲಿಯನ್ನು ಹಾಗೆ ಮುಖಾಮುಖಿಯಾಗಿ ಬೇಟೆಯಾಡುವುದು ಸುಲಭದ ಸಂಗತಿಯೇನೂ ಆಗಿರಲಿಲ್ಲ. ಹಾಗಾಗಿ ಅವನ ವರಮಾನವೂ ಅಷ್ಟೇ ದುಬಾರಿಯಾಗಿತ್ತು. ಏನಾದರಾಗಲಿ, ಗಣಪಯ್ಯನಿಗೆ ಮೂಗಿನ ತುಂಡು ಉಳಿಸಿಕೊಳ್ಳಬೇಕಿತ್ತು. ಮರುದಿನವೇ ಶಿವರಾಯ ಹೊಳೆಸಾಲಿಗೆ ಬಂದಿಳಿದಾಗಿತ್ತು. ಸಂಜೆಯಾಗುವ ಮೊದಲೇ ಒಬ್ಬನೇ ಒಬ್ಬ ಸಹಾಯಕನನ್ನು ಜತೆಗೆ ಕರೆದುಕೊಂಡು ಹೋದ ಶಿವರಾಯ ಅಟ್ಟಣಿಗೆ ಕಟ್ಟಿ ಅದರ ಮೇಲೇರಿ ಕುಳಿತವನೇ ಸಹಾಯಕನನ್ನು ಮರಳಿ ಕಳಿಸಿಬಿಟ್ಟ. ಇಡೀ ಊರಿಗೆ ಊರೇ ಶಿವರಾಯನ ಕೋವಿಯ ಗುಂಡಿನ ಶಬ್ದಕ್ಕಾಗಿ ಕಾದು ಕುಳಿತಿತ್ತು. ನಡುರಾತ್ರಿಯವರೆಗೂ ಕಾದ ನೀಲಿ ಕುಳಿತಲ್ಲಿಯೇ ನಿದ್ದೆ ಹೋಗಿದ್ದಳು.

ಬೆಳಗಾಗುತ್ತಲೇ ಅಮ್ಮ, “ನೀಲಿ, ಹುಲಿ ನೋಡ್ತೀಯೇನೆ? ಗಣಪಯ್ಯನ ಮನೆಗೆ ಹೋಗಿ ಬಾ” ಎಂದಳು. ತಲೆಬುಡ ಅರ್ಥವಾಗದ ನೀಲಿ ಪಿಳಿಪಿಳಿ ಕಣ್ಣುಬಿಟ್ಟಳು. ರಾತ್ರಿ ಶಿವರಾಯನ ಗುಂಡಿಗೆ ಬಲಿಯಾದ ಹುಲಿಯನ್ನು ಹಾಗೆಯೇ ಅಡ್ಡೆಯಲ್ಲಿ ಎತ್ತಿತಂದ ಗಣಪಯ್ಯ ತನ್ನ ಮನೆಯ ಅಂಗಳದಲ್ಲಿ ಕಬಕೋಲನ್ನು ಕೊಟ್ಟು ಜೀವಂತ ಇರುವಂತೆ ನಿಲ್ಲಿಸಿದ್ದ. ಹುಲಿಯೆದುರು ನಿಂತ ನೀಲಿ ಸ್ಥಂಭೀಭೂತಳಾದಳು. ಅದರ ಮೈ ಬಣ್ಣ, ಮುಖದ ಚಂದ, ಚರ್ಮದ ನುಣುಪು, ದೇಹದ ನೀಳತೆ ಎಲ್ಲವೂ ಎಷ್ಟೊಂದು ಮನೋಹರವಾಗಿತ್ತೆಂದರೆ ಆ ಕ್ಷಣದಲ್ಲಿ ತನ್ನ ಹಂಡಗೂಳಿಯನ್ನು ಕೊಂದ ಈ ಜೀವಿಯನ್ನು ಮನ್ನಿಸಲು ಅಣಿಯಾಗಿಬಿಟ್ಟಿದ್ದಳು. ಆದರೆ “ಹೋಗು, ಕ್ಷಮಿಸಿದ್ದೇನೆ” ಎಂದರೂ ಹುಲಿ ಅಲ್ಲಿಂದ ಚಲಿಸುವಂತಿರಲಿಲ್ಲ. ಹುಲಿ ಹೊಡೆದ ಶಿವರಾಯ ಅದಾಗಲೇ ಮನೆಗೆ ಹೊರಟುಹೋಗಿದ್ದ.

ಇಲ್ಲಿ ಊರಿಗೆ ಊರೇ ಹುಲಿಯ ಸುತ್ತಲೂ ನಿಂತು ಕತೆ ಹೇಳುವುದರಲ್ಲಿ ಮಗ್ನವಾಗಿತ್ತು. ಈ ಹೆಬ್ಬುಲಿ ಹೊಳೆ ದಾಟಿದ ಗುರುತು ತನ್ನ ಕಣ್ಣಿಗೇಕೆ ಕಾಣಲಿಲ್ಲವೆಂಬ ಸತ್ಯ ನಾಗಪ್ಪಜ್ಜನಿಗೆ ಈಗ ಹೊಳೆದಿತ್ತು. ಅವನ ಆಯುಷ್ಯದಲ್ಲಿ ಅವನು ಇಷ್ಟು ದೊಡ್ಡ ಹುಲಿಯನ್ನು ನೋಡಿದ್ದಿಲ್ಲ. ಗರ‍್ಕೆಗಳೆಂಬ ಚಿಕ್ಕ ಜಾತಿಯ ಹುಲಿಗಳು ಮಾತ್ರವೇ ಗುಂಪುಗೂಡಿ ಅವರ ಕಾಡಿನಲ್ಲಿ ವಾಸಿಸುತ್ತಿದ್ದುದು ಅವನಿಗೆ ಗೊತ್ತಿತ್ತು. ಆದರೆ ಪುಣ್ಯಕೋಟಿಯ ಕತೆಯಲ್ಲಷ್ಟೇ ಕೇಳಿದ್ದ, ಪಟಾಕಿ ಪ್ಯಾಕೆಟ್ಟಿನ ಕವರಿನಲ್ಲಷ್ಟೇ ನೋಡಿದ್ದ ಈ ಜಾತಿಯ ಹುಲಿಯ ಹೆಜ್ಜೆಗಳು ಅವನಿಗೆ ಪರಿಚಿತವೂ ಆಗಿರಲಿಲ್ಲ. ಅವರ ಕತೆಯಲ್ಲಿ ಕಳೆದುಹೋಗಲು ಸಮಯವಿಲ್ಲದ ನೀಲಿ ಶಾಲೆಗೆ ವೇಳೆಯಾಗುತ್ತಿದೆಯೆಂದು ಅಲ್ಲಿಂದ ಕಾಲ್ಕಿತ್ತಳು.

ಶಾಲೆಗೆ ಹೋದರೂ ನೀಲಿಗೆ ಹುಲಿಯದೇ ಮುಖ ನೆನಪಿಗೆ ಬರುತ್ತಿತ್ತು. ತನ್ನ ಸಹಪಾಟಿಗಳಿಗೂ ಹುಲಿಯನ್ನು ತೋರಿಸಬೇಕು ಅನಿಸತೊಡಗಿತು. ಮಾಸ್ತ್ರು ಪಾಠ ಮಾಡುತ್ತಿರುವಂತೆಯೇ ಪಿಸಪಿಸನೆ ಆಚೀಚೆಗೆ ಕುಳಿತವರಿಗೆ ವಿಷಯ ಮುಟ್ಟಿಸಿದಳು. ಇಂದೇನು? ಯಾವ ಮಕ್ಕಳೂ ಪಾಠದೆಡೆಗೆ ಗಮನವನ್ನೇ ನೀಡುತ್ತಿಲ್ಲವೆಂದು ಕ್ಷಣಕಾಲ ದಿಟ್ಟಿಸಿದ ಗೌಡಾ ಮಾಸ್ತ್ರು ಸುದ್ದಿಮೂಲವನ್ನು ಪತ್ತೆ ಹಚ್ಚಿಯೇಬಿಟ್ಟರು. ನೀಲಿಯನ್ನು ನಿಲ್ಲಿಸಿ ವಿಷಯ ಕೇಳಿದ್ದೇ ತಡ ಪಟಪಟನೆ ಪಟಾಕಿ ಸರಕ್ಕೆ ಬೆಂಕಿ ಕೊಟ್ಟಂತೆ ಎಲ್ಲ ಕತೆಯನ್ನು ಹೇಳಿಬಿಟ್ಟಳು. ಗೌಡಾ ಮಾಸ್ತ್ರು ಅವರೆಲ್ಲ ಎಣಿಸಿದಂತೆ ಆಶ್ಚರ್ಯಚಕಿತರಾಗದೇ ಇದ್ದಕ್ಕಿದ್ದಂತೆ ಗಂಭೀರವಾಗಿಬಿಟ್ಟರು. “ಈಗೆಲ್ಲ ಹುಲಿಗಿಲಿ ಎಲ್ಲ ಕೊಲ್ಲಬಾರದು ಕೂಸೆ. ಅರಣ್ಯ ಅಧಿಕಾರಿಗಳೇನಾದರೂ ಗೊತ್ತಾದರೆ ಕೇಸ್ ಹಾಕ್ತಾರೆ. ಈ ಊರಿನ ಜನರಿಗೆ ಹೇಗೆ ಬುದ್ದಿ ಹೇಳೋದು ಗೊತ್ತಾಗ್ತಿಲ್ಲ. ಕೊಲ್ಲುವುದಂತೂ ಕೊಂದಿದ್ದಾರೆ, ಹಾಗೆ ಪ್ರದರ್ಶನಕ್ಕಿಡೋದಾ?” ಎಂದು ವಿಷಣ್ಣವದನರಾದರು. ವಿಠ್ಠಲನೆಂಬ ತುಂಟ ಹುಡುಗ, “ಆದ್ರೆ ಆ ಹುಲಿ ನಮ್ಮ ದನಾ ತಿನ್ನಬಹುದಾ?” ಎಂದು ತನ್ನ ವಾದವನ್ನು ಗುರುಗಳ ಮುಂದಿಟ್ಟೇಬಿಟ್ಟ. ಅದಕ್ಕೆ ಮಾಸ್ತ್ರು ಕೋಪಗೊಳ್ಳದೇ, “ಹುಲಿಗೆ ಅದು ನಿಮ್ಮ ದನ ಅಂತ ಗೊತ್ತಿರಲ್ಲ. ಅದು ತನ್ನ ಆಹಾರ ಅಂತ ತಿನ್ನತ್ತೆ. ಇಲ್ಲದಿದ್ದರೆ ಅದು ಸಾಯಬೇಕಾಗತ್ತೆ ಅಷ್ಟೆ. ಅದೆಲ್ಲ ಇರಲಿ, ಹುಲಿ ಹೊಡೆದು ಹೀಗೆಲ್ಲ ಪ್ರದರ್ಶನಕ್ಕಿಡೋದು ಭಾರೀ ಅಪಾಯ. ನೀವೆಲ್ಲ ಸುಮ್ಮನೆ ಓದುತ್ತಿರಿ, ಈಗಲೇ ಬಂದೆ” ಎಂದವರೇ ಶಾಲೆಯಿಂದ ಹೊರನಡೆದರು.

ವಿಧಿಯಿಲ್ಲದೇ ಶಾಲೆ ಬಿಡುವವರೆಗೂ ಕಾದ ಮಕ್ಕಳು ಶಾಲೆಯ ಕೊನೆಯ ಗಂಟೆ ಬಾರಿಸಿದ್ದೇ ತಡ ನೀಲಿಯೊಂದಿಗೆ ಹುಲಿ ನೋಡಲು ಹೊರಟುನಿಂತರು. ಹೊಳೆದಾಟಿ ಗಣಪಯ್ಯನ ಮನೆಯೆದುರು ಬಂದು ನಿಂತರೆ ಹುಲಿಯ ಸುಳಿವಿರಲಿಲ್ಲ, ಹೋಗಲಿ ಒಬ್ಬರೇ ಒಬ್ಬರು ಮನುಷ್ಯರ ಸುಳಿವೂ ಇರಲಿಲ್ಲ. ನೀಲಿ ಹೇಳಿದುದೇ ಸುಳ್ಳೇನೋ ಎಂಬ ವಾತಾವರಣ ಅಲ್ಲಿದ್ದುದರಿಂದ ಎಲ್ಲರೂ ನೀಲಿಯ ಮುಖ ನೋಡಿದರು. ನೀಲಿ ಮನೆಯ ಬಾಗಿಲಿನಲ್ಲಿ ಇಣುಕಿ, “ನಾಗಜ್ಜಿ, ಹುಲಿ ಎಲ್ಲೊಯ್ತೆ?” ಎಂದು ಕೇಳಿದಳು. ಕೆಮ್ಮುತ್ತಲೇ ಹೊರಬಂದ ನಾಗಜ್ಜಿ, “ಎಲ್ಲಿ ಹುಲಿ? ಎಂಥ ಹುಲಿ? ಮಗಾ, ಹುಲೀನೂ ಇಲ್ಲ, ಇಲೀನೂ ಇಲ್ಲ. ಕನಸು ಗಿನುಸು ಬಿತ್ತೋ ಹೇಂಗೆ?” ಎಂದು ಕೇಳಿದಳು. ನೀಲಿಗೆ ಏನೊಂದೂ ಅರ್ಥವಾಗದೆ ತನ್ನ ಸಹಪಾಟಿಗಳೆಡೆಗೆ ಅಸಹಾಯಕ ನೋಟ ಬೀರಿದಳು. ಒಬ್ಬೊಬ್ಬರೇ ಅಲ್ಲಿಂದ ಜಾಗ ಖಾಲಿ ಮಾಡಿದರು.

ಮನೆಗೆ ಬಂದ ನೀಲಿ ಅಮ್ಮನಲ್ಲಿ ಕೇಳಿದ ಮೊದಲ ಪ್ರಶ್ನೆ, “ಅಮ್ಮಾ, ಹುಲಿ ಹೇಗೆ ಮಾಯವಾಯ್ತು?” ಅಮ್ಮ ಅದಕ್ಕೆ ನಾಗಜ್ಜಿ ಹೇಳಿದಂತೆ, “ಎಲ್ಲಿ ಹುಲಿ? ಯಾವ ಹುಲಿ? ಕನಸು ಗಿನಸು ಬಿತ್ತೋ ಹೇಂಗೆ?” ಎಂದು ಕೇಳಿದಳು. ನೀಲಿಗೆ ಅಮ್ಮನ ಮೇಲೆ ಮಾತ್ರವಲ್ಲ, ಈ ಹೆಣ್ಣು ಕುಲದ ಮೇಲೆಯೇ ಸಿಟ್ಟು ಬಂದು ತೋಟದಲ್ಲಿದ್ದ ಅಪ್ಪನೆಡೆಗೆ ಓಡಿದಳು. ಅಪ್ಪ ಅವಳನ್ನು ಕೂರಿಸಿ, “ಗಣಪಯ್ಯನಿಗೆ ಬುದ್ಧಿಯಿಲ್ಲ ಮಾರಾಯ್ತಿ. ಹುಲಿ ಹೊಡೆದದ್ದಲ್ಲದೇ ಅಂಗಳದಲ್ಲಿ ನಿಲ್ಲಿಸಿ ಪೌರುಷ ತೋರಿಸ್ತಿದ್ದ. ನಿಮ್ಮ ಮಾಸ್ತರೊಂದು ಅಲ್ಲದಿದ್ದರೆ ಇವತ್ತು ನಮ್ಮೂರ ಸುಮಾರು ಜನ ಜೈಲುಪಾಲು. ಮಾಸ್ತ್ರು ಬಂದು ಇದು ಕೇಸಾಗ್ತದೆ ಅಂತ ಎಚ್ಚರಿಸಿ, ಹುಲಿಯನ್ನ ತಕ್ಷಣ ತೋಟದಲ್ಲಿ ಹುಗಿದಾಕಿ ಅಂತ ಹೇಳಿದ್ರು. ಅವರು ಹೇಳಿಹೋದ ತಾಸಿನಲ್ಲೇ ಪೋಲೀಸರು ಹೊಳೆದಾಟಿ ಬಂದಾಯ್ತು. ಮಾಸ್ತ್ರು ಎಲ್ಲಿ ಹುಗಿದಾಕಿ ಅಂತ ಹೇಳಿದ್ರೋ ಅಲ್ಲಿಗೆ ಹೋಗಿ ಅಗೆದು ಎಲ್ಲ ನೋಡಿದ್ರು. ಹುಲಿ ಸಿಕ್ಕಿದ್ರೆ ತಾನೆ? ಯಾರನ್ನು ಕೇಳಿದ್ರೂ ಸ್ತ್ರು ಹೇಳಿಕೊಟ್ಟಂತೆ ಎಲ್ಲಿ ಹುಲಿ? ಯಾವ ಹುಲಿ? ಕನಸು ಗಿನಸು ಬಿತ್ತೋ ಹೇಂಗೆ? ಅಂತ ಹೇಳಿದ್ರು. ಬಂದ ದಾರಿಗೆ ಸುಂಕ ಇಲ್ದೆ ಅವರು ವಾಪಸ್ ಹೋದರು. ಆದರೂ ಇನ್ನು ಮುಂದೆ ಈ ಹುಲಿ ಹೊಡೆಯೋ ಉಸಾಬರಿ ಬೇಡ ಮಾರಾಯ್ತಿ” ಎಂದ. ಅಪ್ಪನ ವಿವರಣೆಯಲ್ಲಿ ನೀಲಿಗೆ ಅರ್ಥವಾಗದ ವಿಷಯವೊಂದಿತ್ತು. ಮಾಸ್ತ್ರು ಹುಲಿಯನ್ನು ಹೂತುಹಾಕಲು ಹೇಳಿದ ಜಾಗದಲ್ಲಿಯೇ ಪೋಲೀಸರು ಅಗೆದರೂ ಹುಲಿ ಮಾತ್ರ ಹೇಗೆ ಸಿಕ್ಕಲಿಲ್ಲ? ಎಂಬುದು. ಅಪ್ಪನಲ್ಲಿ ಕೇಳುವ ಎಂದರೆ ಅವರು ಆಗಲೇ ತಮ್ಮ ಹತಿಯಾರಗಳನ್ನು ತೊಳೆಯಲು ಹೊಳೆಯ ಬದಿಗೆ ನಡೆದಿದ್ದರು.

ನಾಗಪ್ಪಜ್ಜನ ಕಣ್ಣಿಗೂ ಬೀಳದಂತಹ ಹೆಜ್ಜೆ ಗುರುತುಗಳನ್ನು ಮೂಡಿಸುತ್ತ, ವರ್ಷದಲ್ಲಿ ನಾಲ್ಕಾರು ಬಾರಿ ತನ್ನ ಮೂಲಕ ಆಚೀಚೆಗೆ ದಾಟಿಹೋಗುವ ಹೆಬ್ಬುಲಿ ಮೈಯ್ಯ ನುಣುಪನ್ನು ನೆನಪಿಸಿಕೊಳ್ಳುತ್ತ ಹೊಳೆಯಿಂದು ವಿಷಾದದಿಂದ ಹರಿಯುತ್ತಿತ್ತು. ತನ್ನ ತೆಕ್ಕೆಗೆ ಇಂದು ಬಿದ್ದ ಹುಲಿಯ ದೇಹ ಅದೆಷ್ಟು ತಣ್ಣಗಿತ್ತು ಎಂಬುದನ್ನು ನೆನೆಸಿಕೊಂಡು ಇನ್ನಷ್ಟು ತಣ್ಣಗಾಗುತ್ತಿತ್ತು. ಅಲ್ಲೆಲ್ಲಿಂದಲೋ ಗುಂಪಿನಿಂದ ತಪ್ಪಿಸಿಕೊಂಡು ಬಂದ ಈ ಹುಲಿಮರಿ ಗರ‍್ಕಗಳ ಜತೆಗೆ ಸೇರದೇ ಏಕಾಂಗಿಯಾಗಿ ಬೆಳೆದು ಇದೀಗ ತನ್ನೊಡಲಲ್ಲಿ ಲೀನವಾದ ಕತೆಯನ್ನು ಹಾಡಾಗಿ ಹೇಳುತ್ತ ಹರಿಯತೊಡಗಿತು.