ಮರಳಿನಲಿ ಊರಿದ ಹೆಜ್ಜೆಗುರುತುಗಳು
ಮಾಸದಿರುವುದೇ ಹೇಳು
ಮರೆತಿರುವ ಮನಸಿನಲಿ ನೆನಪುಗಳು
ಈಸದಿರುವುದೇ ಹೇಳು

ಹೃದಯದಲಿ ಹಚ್ಚಿಟ್ಟಿಹ ಪ್ರೇಮಜ್ಯೋತಿ
ಉರಿಯುತ್ತಲೆ ಇದೆಯೇಕೆ
ಅದುರದಂತಹ ಸನ್ನುಡಿಗಳು ಎದೆಯಲಿ
ಬೀಸದಿರುವುದೇ ಹೇಳು

ಆಂತರ್ಯದ ಆರ್ತನಾದ ಕೇಳದೆಯೆ
ಹೋದೆಯಲ್ಲ ಸಖ
ಭ್ರಾಂತಿಯಲಿ ಮುಳುಗಿರುವ ಮನವಿದು
ಕಾಸದಿರುವುದೇ ಹೇಳು

ಘಾಸಿಗೊಂಡ ಕನಸುಗಳಿಗೆ ತೇಪೆಬಳಿವ
ಕಾಯಕವು ಬೇಕೆ
ಲೇಸಬಯಸಿದ ಒಡಲು ಒಪ್ಪಿಗೆಯನು
ಸೂಸದಿರುವುದೇ ಹೇಳು

ಶುಕ್ತಿಯಲಿ ಮುಚ್ಚಿಟ್ಟಿರುವ ಮುತ್ತಂತೆ
ಅಭಿನವನ ಮಾತು
ಯುಕ್ತಿಯಲಿ ತಂಗಾಳಿಯ ತಂಪಿದು
ಮೂಸದಿರುವುದೇ ಹೇಳು

ಶಂಕರಾನಂದ ಹೆಬ್ಬಾಳ ಬಾಗಲಕೋಟ ಜಿಲ್ಲೆಯ ಇಳಕಲ್‌ ತಾಲ್ಲೂಕಿನವರು.
ಕನ್ನಡ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
“ಶಂಕರ ಶತಕ” (ಚೌಪದಿ ಸಂಕಲನ) ಇವರ ಪ್ರಕಟಿತ ಕವನ ಸಂಕಲನ.
ಇದುವರೆಗೂ ಎರಡು ಸಾವಿರ ಗಝಲ್‌ಗಳನ್ನು ಬರೆದಿರುವ ಇವರಿಗೆ, ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿ ಬರೆಯುವ ಹವ್ಯಾಸ