ಐಶ್ವರ್ಯಾಳ ಸೌಂದರ್ಯ, ಅಮಿತಾಬನ ಎತ್ತರ ಜೊತೆಗೆ ಮಂಗಲ ನಾಥನ ಶಕ್ತಿ ಎಲ್ಲವೂ ಗೌಣ ಹಸಿವಿನ ಮುಂದೆ. ಅಲ್ಲಿಯೇ ನಾಲ್ಕಾರು ರಸ್ತೆಯ ಮುಂದೆ ಇದ್ದ, ದೊಡ್ಡ ಶಾಮಿಯಾನ ಹಾಕಿ ಮದುವೆ ಮನೆಯ ಊಟದ ಹಜಾರದಂತೆ ಇದ್ದ ಜಾಗಕ್ಕೆ ಕರೆದುಕೊಂಡು ಬಂದ ಪವನ್. ‘ಸಾಯು ಕ್ರುಪಾ’ ಎನ್ನುವ ಬೋರ್ಡ್ ಇತ್ತು. ‘ಉಜ್ಜಯಿನಿಯಲ್ಲಿ ಉತ್ಕೃಷ್ಠವಾದ ಶಾಖಾಹಾರಿ ಭೋಜನ ಇಲ್ಲಿಯೇ ಸಿಗುವುದು’ ಎಂದ. ಸಾಲುಸಾಲು ಟೇಬಲ್ ಕುರ್ಚಿಗಳು ಸ್ವಾಗತಿಸಿದವು.
ಅಂಜಲಿ ರಾಮಣ್ಣ ಬರೆಯುವ ‘ಕಂಡಷ್ಟೂ ಪ್ರಪಂಚ’ ಪ್ರವಾಸ ಅಂಕಣದಲ್ಲಿ ಮಧ್ಯಪ್ರದೇಶನ ಸಾಂದೀಪನಿ ಆಶ್ರಮಕ್ಕೆ ಭೇಟಿಕೊಟ್ಟ ಅನುಭವದ ಕುರಿತ ಬರಹ

ಬಿಸಿಲು ಧೋ ಎನ್ನುತ್ತಿತ್ತು. ಭತೃಹರಿ ಗುಹೆ ಎನ್ನುವ ಅನೂಹ್ಯ ಲೋಕ ನೋಡಿಯಾಗಿತ್ತು. ಕಾಲಭೈರವೇಶ್ವರನೂ ಸಮಾಧಾನದ ದರ್ಶನ ಕೊಟ್ಟಿದ್ದ. ಹೊಟ್ಟೆ ಥಕಪಕ ಎನ್ನುತ್ತಿತ್ತು. “ಪವನ್ ಭಯ್ಯ ಮೊದಲು ಊಟ ಹಾಕಿಸಿ ಆಮೇಲೆ ಮುಂದಿನದು” ಎಂದು ರಾಗ ಎಳೆದೆ. ಚಾಲಕ ಪವನ್ “ಅದಕ್ಕೆ ಮೊದಲು ಮಂಗಲ ನಾಥನ ದರ್ಶನ ಮಾಡಿಬಿಡಿ. ಇಡೀ ಪ್ರಪಂಚದಲ್ಲಿ ಇದೊಂದೇ ದೇವಸ್ಥಾನ ಇರುವುದು” ಎಂದ. ಇದ್ಯಾವ ದೇವರಪ್ಪ ಎನ್ನುವ ಪ್ರಶ್ನೆಗೆ “ನಿಮಗೆ ಐಶ್ವರ್ಯ ರೈ ವಿಷಯ ಗೊತ್ತಲ್ಲ್ವಾ? ಯಾರಿಗಾದರೂ ಜಾತಕದಲ್ಲಿ ಮಾಂಗ್ಲಿಕ್ ಎನ್ನುವ ದೋಷ ಇದ್ದರೆ ಇಲ್ಲಿ ಬಂದು ಪೂಜೆ ಮಾಡುತ್ತಾರೆ. ಆಮೇಲೆ ಮದುವೆ ಮಾಡಿಕೊಳ್ಳುತ್ತಾರೆ. ಅಮಿತಾಬ್ ಬಚ್ಚನ್ ಕೂಡ ಬಂದಿದ್ದರು ಇಲ್ಲಿಗೆ” ಎನ್ನುವ ಮಾಹಿತಿ ಕೊಟ್ಟ. ಅದೊಂದು ಆಧುನಿಕ ಕಟ್ಟಡದ ಹಾಗೆ ಆದರೆ ಕೇಸರಿ ಗೋಪುರವಿದ್ದ ದೇವಸ್ಥಾನದಂತಿತ್ತು. ಯಾವುದೇ ಐತಿಹ್ಯವಿಲ್ಲದೆ ಈ ದೇಶದಲ್ಲಿ ದೇವಸ್ಥಾನ ಎದ್ದಿರಲಾರದು ಎನ್ನುವ ಅರಿವಿದ್ದರೂ ಆಗ ಅಲ್ಲಿಗೆ ಹೋಗಲಿಲ್ಲ.  ಐಶ್ವರ್ಯಾಳ ಸೌಂದರ್ಯ, ಅಮಿತಾಬನ ಎತ್ತರ ಜೊತೆಗೆ ಮಂಗಲ ನಾಥನ ಶಕ್ತಿ ಎಲ್ಲವೂ ಗೌಣ ಹಸಿವಿನ ಮುಂದೆ. ಅಲ್ಲಿಯೇ ನಾಲ್ಕಾರು ರಸ್ತೆಯ ಮುಂದೆ ಇದ್ದ, ದೊಡ್ಡ ಶಾಮಿಯಾನ ಹಾಕಿ ಮದುವೆ ಮನೆಯ ಊಟದ ಹಜಾರದಂತೆ ಇದ್ದ ಜಾಗಕ್ಕೆ ಕರೆದುಕೊಂಡು ಬಂದ ಪವನ್. ‘ಸಾಯು ಕ್ರುಪಾ’ ಎನ್ನುವ ಬೋರ್ಡ್ ಇತ್ತು. ‘ಉಜ್ಜಯಿನಿಯಲ್ಲಿ ಉತ್ಕೃಷ್ಠವಾದ ಶಾಖಾಹಾರಿ ಭೋಜನ ಇಲ್ಲಿಯೇ ಸಿಗುವುದು’ ಎಂದ. ಸಾಲುಸಾಲು ಟೇಬಲ್ ಕುರ್ಚಿಗಳು ಸ್ವಾಗತಿಸಿದವು. ಇಪ್ಪತ್ತೈದು ಬಟ್ಟಲುಗಳು ಇದ್ದ ಹಿತ್ತಾಳೆ ತಟ್ಟೆಗಳು, ಪಕ್ಕದಲ್ಲಿ ಪಾವು ಅಳತೆಯಿದ್ದ ಎರಡೆರಡು ಹಿತ್ತಾಳೆ ಲೋಟಗಳು ಮಗುಚಿಕೊಂಡು ಕಾಯುತ್ತಿದ್ದವು. ಕುಳಿತುಕೊಳ್ಳುತ್ತಿದ್ದಂತೆಯೇ ಕೈ ತೊಳೆದುಕೊಳ್ಳಲು ಬೋಗುಣೀ ಹಿಡಿದ ಯುವಕನೊಬ್ಬ ಹಾಜರಾದ. ಕುಳಿತಲ್ಲೇ ನನ್ನ ಕೈ ಕೊಳೆಯನ್ನು ಮತ್ತೊಬ್ಬರ ಕೈಗೆ ವರ್ಗಾಯಿಸುವುದು ನನ್ನ ಮನೋಭಾವಕ್ಕೆ ಒಗ್ಗುವಂಥದ್ದಲ್ಲ. ಆದ್ರೆ ಎಲ್ಲೆಡೆಯೂ ಕೈತೊಳೆಯುವ ಜಾಗ ಶುಚಿಯಾಗಿ ಇರುತ್ತದೆ ಎನ್ನುವ ಖಾತರಿ ಇಲ್ಲ. ಹಾಗಾಗಿ, ಒದ್ದೆ ನ್ಯಾಪ್ಕಿನ್‍ಗಳನ್ನು ಪರ್ಸಿನಲ್ಲಿ ಇಟ್ಟುಕೊಂಡಿರುತ್ತೇನೆ. ಆತನಿಗೆ ಬೇಡ ಎಂದು ಕೈ ಒರೆಸಿಕೊಂಡು ತಯಾರಾದೆ. ಬಗೆಬಗೆಯ ಖಾದ್ಯಗಳನ್ನು ಬಡಿಸುತ್ತಾ ಹೋದರು. ದಾಲ್ ಬಾಫ್ಲ ಅಲ್ಲಿನ ಪ್ರಸಿದ್ಧ ಖಾದ್ಯ.

ಅಂದಹಾಗೆ, ಮಾಹೇಶ್ವರದಲ್ಲಿ ನರ್ಮದೆಯ ತಟದಲ್ಲಿ “ಬಾಕೇ ಬಿಹಾರಿ ಶುದ್ಧ ಶಾಖಾಹಾರಿ”. ಇಲ್ಲಿಯೂ ಕೆಳಗೆ ಕುಳಿತು ತಿಂದ ಬಿಸಿಬಿಸಿಯಾದ ರುಚಿಯಾದ ಊಟ ಬಲು ಸೊಗಸಾಗಿತ್ತು.  ಅಲ್ಲಿನ  ಮಾರುಕಟ್ಟೆಯ ಒಳಗೆ ಜೇನ್ ಶ್ರೀ (Jain Shree) ಎನ್ನುವ  ಹೋಟೆಲಿನಲ್ಲಿ (ಅಲ್ಲಿನ MLA ಹೊಸದಾಗಿ ತೆರೆದಿರುವುದು) ಭಿಂಡಿ ಮಸಾಲ ಚಂದಿತ್ತು. ಇಂದೋರಿನಲ್ಲಿ “ಛಪ್ಪನ್ ದುಕಾನ್” ಎನ್ನುವ 56 ಅಂಗಡಿಗಳ ಸಾಲಿನ ಸಂಕೀರ್ಣವಿದೆ. (ಪ್ರತೀ ಊರಿನಲ್ಲೂ ಈಗ ತಿಂಡಿಗಲ್ಲಿ ಹೊಸದೇನಲ್ಲ.) ಆದರೆ ಇಲ್ಲಿ ಗಾಳಿ, ಬೆಳಕು, ದೀಪಗಳ ಝಗಮಗ ಎಲ್ಲವೂ ಚೆನ್ನಾಗಿದೆ. ವಿಜಯ್ chat ಸೆಂಟರ್ ಭಾರೀ demand ನಲ್ಲಿ ಇರುವ ಅಂಗಡಿ. ಸೀಮೆಯಕ್ಕಿ  ಖಿಚಡಿ, ಕೋಪ್ರ ಕಚೋರಿ, ಇಂದೊರೀ ಶಾಹಿ ಶಿಖಂಜಿ ಇವುಗಳ ರುಚಿ ನೋಡಲೇಬೇಕು. ಹಿಂದಿರುಗಿ ಬರುವಾಗ ಇಂದೋರೀ ನಮ್ಕೀನ್ ಮತ್ತು ಕಾಲಾಕಂದ ತರುವುದನ್ನು ತಪ್ಪಿಸಬಾರದು.

ಸಾಯಿ ಕೃಪಾದಲ್ಲಿ ಮಾಲೀಕರು ಖುದ್ದಾಗಿ ಎಲ್ಲದರ ಮೇಲೂ ಎರಡೆರಡು ಮಿಳ್ಳೆ ತುಪ್ಪ ಹಾಕುತ್ತಿದ್ದರು. ಕೊನೇ ತಂಗಿಯ ಸೀಮಂತದಲ್ಲಿ ಹಿರಿಯಣ್ಣನೊಬ್ಬನ ಉಪಚಾರದ ಭಾವ. ಊಟ ಮುಗಿದ ನಂತರ ಮತ್ತದೇ ಯುವಕ ಕೈತೊಳೆಯಲು ಬೋಗುಣಿ ತಂದ. ನಿರಾಕರಿಸಿದ ನನ್ನ ಮಾತಿಗೆ ಇಬ್ಬರ ಮುಖದಲ್ಲೂ ಆಡದ್ದು ಅರ್ಥವಾಯಿತು ಎನ್ನುವಂತಹ ನಗುವಿತ್ತು. ಕೈತೊಳೆದ ಕೂಡಲೇ ಪವನ್ “ಈಗ ನೋಡಿ ಒಂದು ಸುಂದರ ಜಾಗಕ್ಕೆ ಕರೆದುಕೊಂಡು ಹೋಗುತ್ತೇನೆ” ಎನ್ನುತ್ತಲೇ ಹೋಟೆಲಿನ ಎದುರೇ ರಸ್ತೆ ದಾಟಿಸಿ ಒಂದು ಕಮಾನಿನ ಮುಂದೆ ನಿಲ್ಲಿಸಿದ.

ಪಕ್ಕದ ಕಾಂಪೌಂಡಿನ ದೊಡ್ಡ ಕಮಾನಿನ ಮೇಲೆ ಬರೆದಿತ್ತು “ಮಹರ್ಷಿ ಸಾಂದಿಪನಿ ಆಶ್ರಮ್”. ಕೃಷ್ಣ, ಬಲರಾಮ, ಸುಧಾಮ ಓದಿದ ಗುರುಕುಲ. ನಾನೋದಿದ ಮೈಸೂರಿನ ಶಾಲೆ ಅವಿಲಾ ಕಾನ್ವೆಂಟಿನ ಮುಖ್ಯ ಗೇಟಿನ ಕಮಾನೂ ಹೀಗೇ ಇತ್ತು. ಎಲ್ಲಾ ಶಿಕ್ಷಕರೂ ನಿಸ್ಪೃಹವಾಗಿ ನನ್ನನ್ನೂ ಕೃಷ್ಣನ ಅರ್ಧದಷ್ಟಾದರೂ ಜಾಣೆ ಮಾಡಬೇಕೆನ್ನುವ ಪ್ರಯತ್ನ ನಡೆಸಿ ಸೋತಿದ್ದನ್ನು ನೆನೆಸಿಕೊಂಡೇ ಒಳಹೊಕ್ಕೆ.

ಉಜ್ಜನಿಯ ಸಾಂದಿಪನಿ ಆಶ್ರಮದಲ್ಲಿ ಆ ದಿನ ಹೆಚ್ಚಿನ ಜನರಿರಲಿಲ್ಲ. ಕುಟಿರಾಕಾರದ ಸಿಮೆಂಟಿನ ಅಂಗಳದೊಳಗಿನ ಗೋಡೆಗಳ ಮೇಲೆಲ್ಲಾ ಕೃಷ್ಣ ಕಲಿತ ಹದಿನಾಲ್ಕು ವಿದ್ಯೆಗಳನ್ನು ಬಣ್ಣಬಣ್ಣದಲ್ಲಿ ರಚಿಸಿದ್ದಾರೆ. ಗಾಢ ಬಣ್ಣಗಳು ಈಗಿನ ಆಧುನಿಕ ಶಾಲೆಗಳನ್ನು ಹೋಲುತ್ತಿದ್ದರೂ ಕೃಷ್ಣಭಾವ ಕೊಡುವುದರಲ್ಲಿ ಸೋಲುವುದಿಲ್ಲ. ಆ ಕೋಣೆಯ ದೊಡ್ಡ ಆಕರ್ಷಣೆ ಎಂದರೆ ಗಿರಿಧಾರಿ ಕಲಿತನೆನ್ನಲಾದ ಹದಿನಾಲ್ಕು ವಿದ್ಯೆಗಳು ಯಾವುವು ಎನ್ನುವ ಪಟ್ಟಿಯೊಂದನ್ನು ಬಾಗಿಲಿನ ಹಿಂದಿನ ಗೋಡೆಯ ಮೇಲೆ ತೂಗು ಹಾಕಿರುವುದು. ನಾಲ್ಕು ವೇದಗಳು, ಕಲ್ಪಗಳು, ತಂತ್ರಜ್ಞತೆ, ವ್ಯಾಕರಣ, ಪುರಾಣ, ಜ್ಯೋತಿಷ್ಯ, ಖಗೋಳ ಶಾಸ್ತ್ರ, ಭಾಷಾ ಶಾಸ್ತ್ರ, ಛಂದಸ್ಸು ಹೀಗೆ ಇನ್ನು ಉಳಿದವುಗಳು ಎಲ್ಲವನ್ನೂ ಆತ ಕಲಿತು ಬ್ರಹ್ಮಾಂಡಕ್ಕೆ ಕಲಿಸಲು ಪ್ರಯತ್ನಿಸಿದ್ದು ಇದೇ ಗುರುಕುಲದಲ್ಲಿ.  ಹೈಸ್ಕೂಲ್‍ನಲ್ಲಿ ಸಮಾಜ ಪಾಠ ಮಾಡುತ್ತಿದ್ದ ಸುಶೀಲಾ ಮಿಸ್ ಅನಾಯಾಸವಾಗಿ ನೆನಪಾದರು. ಅವರು ಎಂಟನೆಯ ತರಗತಿಯಲ್ಲಿ ನಮಗೆ ಹೇಳಿದ್ದ ಮಾತು “ಚರಿತ್ರೆ ಭೂಗೋಳ ತಾನಾಗೇ ಬರತ್ತೆ ನೀವು ಸಂಗೀತ ಕಲಿತರೆ” ಅಂತ. ಬಹುಶಃ ಇದರ ಹಿಂದಿನ ತತ್ವವರಿಯಲು ಸಾಂದಿಪನಿ ಗುರುಕುಲದಲ್ಲೇ ಕಲಿಯಬೇಕೇನೋ.

ಮಹರ್ಷಿ ಸಾಂದಿಪನಿ ಒಂದು ಬಿಲ್ವಪತ್ರೆಯಿಂದ ಸೃಷ್ಟಿಸಿದರು ಎನ್ನುವ ಶಿವಲಿಂಗ ಸರ್ವೇಶ್ವರನೆನ್ನುವ ಹೆಸರಿನಿಂದ ಪ್ರತಿಷ್ಠಾಪನೆಗೊಂಡಿದ್ದಾನೆ. ಪಾಠಕ್ಕೆ ಕೂರುವ ಮೊದಲು ಕೃಷ್ಣ ಮತ್ತು ಸಂಗಡಿಗರು ಪೂಜೆ ಸಲ್ಲಿಸುತ್ತಿದ್ದ ಶಿವಲಿಂಗ ಅಲ್ಲೇ ಸ್ವಲ್ಪ ಮುಂದೆ ಕುಂಡೇಶ್ವರನೆನ್ನುವ ನಾಮಧೇಯನಾಗಿ ಕುಳಿತಿದ್ದಾನೆ. ಅಲ್ಲಿ ಪೂಜೆ ಮಾಡುತ್ತಿದ್ದವರು ಹೇಳಿದ್ದು “ಜಗತ್ತಿನ ಎಲ್ಲೆಡೆಯಲ್ಲಿಯೂ ಶಿವನ ಎದುರು ಕುಳಿತ ನಂದಿ ಇರುತ್ತಾನೆ ಆದರೆ ಇಲ್ಲಿ ಮಾತ್ರ ನಂದಿ ನಿಂತಿದ್ದಾನೆ ನೋಡಿ” ಎನ್ನುತ್ತಾ ತೋರಿಸಿದರು. ಅದರ ಕಾರಣವನ್ನು ಅವರು ಹೇಳಲಿಲ್ಲ. ಕಾನ್ವೆಂಟಿನಲ್ಲಿ ಓದಿದ ವಿದ್ಯಾರ್ಥಿನಿಯರು ಪ್ರಶ್ನೆ ಹೆಚ್ಚು ಕೇಳುವ ಹಾಗಿಲ್ಲ, ಅದಕ್ಕೇ ಇರಬೇಕು  ನಾನೂ ಸುಮ್ಮನಿದ್ದೆ. ವಿದ್ಯಾಭ್ಯಾಸ ಮುಗಿಸಿದ ನಂತರ ಗುರುಗಳಿಗೆ ದಕ್ಷಿಣೆ ಕೊಡಬೇಕು ಎನ್ನುವುದಕ್ಕೆ ಕೃಷ್ಣ ದೇವಲೋಕದಿಂದ ಕುಬೇರನನ್ನು ಕರೆಸಿದ್ದನಂತೆ. ಆದರೆ ಗುರುಗಳು ನಿನ್ನಂತಹ ಶಿಷ್ಯರೇ ನನಗೆ ದಕ್ಷಿಣೆ ಎಂದಾಗ ಕುಬೇರ ಅಲ್ಲಿಯೇ ಗಟ್ಟಿಯಾಗಿ ಕುಳಿತುಬಿಟ್ಟನಂತೆ. ಗುಂಡಗೆ, ಕುಳ್ಳಗೆ ಮಿರಮಿರಮಿಂಚುವ ಕರಿಕಲ್ಲಾಗಿ ಕುಳಿತವನನ್ನು ಕಂಡು ಒಮ್ಮೆ ನನ್ನ ಮನೆಯ ಕಡೆಗೂ ಬಂದು ಹೋಗಪ್ಪ ಎನ್ನುವ ಆಹ್ವಾನವನ್ನು ಕೊಟ್ಟು ಬಂದೆ. ಕುಂಡೇಶ್ವರನ ಎದುರು ಆಯತಾಕಾರದ ಮತ್ತೊಂದು ಕೋಣೆಯಲ್ಲಿ ಕೃಷ್ಣ, ಸುಧಾಮ ಮತ್ತು ಅವರ ಸಂಗಡಿಗರ ಮೂರ್ತಿಗಳನ್ನು ನಿಲ್ಲಿಸಿದ್ದಾರೆ.

ಹೊರಡುವ ಮುನ್ನ ದೇವಸ್ಥಾನದ ಎಡಗೋಡೆಯ ಮೇಲೆ ಹದಿನಾಲ್ಕು ವರ್ಷದ ದುಂಡು ಮುಖದ ಬಾಲಕನ  ದೊಡ್ಡ ಫೋಟೊ ಕಾಣಿಸಿತು. ಅವನು ಸಾಂದಿಪನಿ ವಂಶಜನಂತೆ. ಈಗ ಒಂದು ದೊಡ್ಡ ಅಂಗ್ರೇ‘ಜಿ ವಸತಿ ಶಾಲೆಯಲ್ಲಿ ಕಲಿಯುತ್ತಿದ್ದಾನಂತೆ. ಆ ಹುಡುಗನ ನಗುಮುಖದ ಫೋಟೊ ನೋಡಿದಾಗ ಈಗಿನ ಅವಿಲಾ ಕಾನ್ವೆಂಟಿನಲ್ಲಿ ಅದೆಷ್ಟು ಮಕ್ಕಳು ಹೀಗೇ ಹದಿನಾಲ್ಕು ವಿದ್ಯೆ ಕಲಿಯುತ್ತಿದ್ದಾರೋ, ಒಮ್ಮೆ ನೋಡಿ ಬರಬೇಕು, ಆಗ  ಕುಬೇರನೂ ಜೊತೆಗೇ ಬಂದರೆ ಎಷ್ಟು ಚೆನ್ನ ಎಂದುಕೊಳ್ಳುತ್ತಾ ಅಲ್ಲಿಯೇ ಇದ್ದ ಹಸುರು ಮರದ ಕೆಳಗೆ ಕುಳಿತಾಗ ತುಂಬಿದ ಹೊಟ್ಟೆ ತಿಂದ ತುತ್ತುಗಳ ತೂಕ ಹಾಕುತ್ತಿತ್ತು.