ಸಿಸಿಲಿಯ ಹತ್ತು ದಿನದ ಪ್ರವಾಸದಲ್ಲಿ ಮೊದಲು ಭೇಟಿ ಕೊಟ್ಟಿದ್ದು ಯುರೇಕಾ ನಗರಿ”ಸಿರಕುಸಾ”ಗೆ. ಹೌದು! ಇದು ಆರ್ಕಿಮಿಡಿಸ್ ಎಂಬ ಮೇಧಾವಿಯ ಜನ್ಮಸ್ಥಳ ಹಾಗೂ ವಾಸಸ್ಥಳವಾಗಿತ್ತು. ಆರ್ಕಿಮಿಡಿಸ್ ಎಂದಾಕ್ಷಣ ಯುರೇಕಾ ಎಂದು ಮಾತ್ರ ತಿಳಿದಿದ್ದ ನನಗೆ, ಈ ಪ್ರವಾಸ ಬೇರೆಯ ಪ್ರಪಂಚವನ್ನೇ ತೆರೆದಿಟ್ಟಿತು. ಪ್ರತಿಭಾವಂತ ಎಂಜಿನಿಯರ್ ಆಗಿದ್ದ ಆರ್ಕಿಮಿಡಿಸ್ ತನ್ನ ಬುದ್ಧಿಮತ್ತೆಯನ್ನು ಉಪಯೋಗಿಸಿ ರಾಜ್ಯವು ಭದ್ರವಾಗಿರಲು ಪೂರಕವಾದ ಅನೇಕ ಸಲಹೆಗಳನ್ನು ಕೊಡುತ್ತಿದ್ದ. ಅವನ ರಾಜ್ಯ ಸಿರಕುಸಾದಲ್ಲಿ ಓಡಾಡಿದ ಅನುಭವಗಳನ್ನು ಗುರುದತ್ ಅಮೃತಾಪುರ ಅವರು ತಮ್ಮ ‘ದೂರದ ಹಸಿರು’ ಅಂಕಣದಲ್ಲಿ ಪ್ರಸ್ತುತಪಡಿಸಲಿದ್ದಾರೆ.
ಇಟಲಿಯ ಅತಿ ದೊಡ್ಡ ದ್ವೀಪ ಸಿಸಿಲಿ. ಸಿಸಿಲಿ ಇಟಲಿಯ ಒಂದು ರಾಜ್ಯ. ಸುಮಾರು ಐವತ್ತು ಲಕ್ಷ ಜನಸಂಖ್ಯೆ ಇರುವ ಈ ದ್ವೀಪಕ್ಕೆ, ಪ್ರತಿ ವರ್ಷ ಬರುವ ಪ್ರವಾಸಿಗರ ಸಂಖ್ಯೆ ಮೂವತ್ತೈದು ಲಕ್ಷ ಎನ್ನುವುದು ಒಂದು ಅಂದಾಜು ಲೆಕ್ಕ! ಅಂದರೆ ಪ್ರವಾಸೋದ್ಯಮ ಇಲ್ಲಿನ ಜೀವಾಳ ಎನ್ನುವುದು ನಿಸ್ಸಂದೇಹ. ಸಿಸಿಲಿಯ ಅಧಿಕೃತ ಭಾಷೆ ಇಟಾಲಿಯನ್. ಸಿಸಿಲಿಯ ರಾಜಧಾನಿ “ಪಲೆರ್ಮೊ”. ನಾನು ಇದುವರೆಗೂ ಸುತ್ತಾಡಿದ ಯೂರೋಪಿನ ಹದಿನೈದು ದೇಶಗಳ ನಗರಗಳಲ್ಲಿ ಪಲೆರ್ಮೊ ಅತ್ಯಂತ ವಿಶಿಷ್ಟ ಅನುಭವ ನೀಡಿತು. ಇದನ್ನು ಮುಂದಿನ ಸಂಚಿಕೆಗಳಲ್ಲಿ ಬರೆಯುತ್ತೇನೆ.
ಗತಕಾಲದ ಇತಿಹಾಸದಿಂದ ಹಿಡಿದು ನೀಲ ಹವಳದಂತೆ ಹೊಳೆಯುವ ಕಡಲ ಕಿನಾರೆಗಳು ಇಲ್ಲಿನ ಆಕರ್ಷಣೆಗಳು. ಬೇಸಿಗೆಯ ಸುಡು ಬಿಸಿಲಿನಲ್ಲಿ 40 ಡಿಗ್ರಿ ಸೆಲ್ಷಿಯಸ್ ಗೂ ಹೆಚ್ಚು ತಾಪಮಾನ ಇರುವ ಈ ಪ್ರದೇಶದಲ್ಲಿ ಚಳಿಗಾಲ ಸ್ವಲ್ಪ ತಂಪು. ಜೂಲೈ, ಆಗಸ್ಟ್ ಇಲ್ಲಿ ಬೇಸಿಗೆಯ ಕಾಲ. ನವೆಂಬರ್ ನಿಂದ ಫೆಬ್ರುವರಿ ವರೆಗೆ ಚಳಿಗಾಲ. ಅಷ್ಟು ಚಳಿಯೂ ಇಲ್ಲದ, ಸೆಖೆಯೂ ಇಲ್ಲದ ಚೈತ್ರ ಕಾಲ ಹಾಗೂ ಶರತ್ಕಾಲ ಸಿಸಿಲಿಯ ಪಯಣಕ್ಕೆ ಹೇಳಿಮಾಡಿಸಿದ ವಾತಾವರಣ.
ಸಿಸಿಲಿಯ ಮತ್ತೊಂದು ಅನನ್ಯ ರತ್ನ ಎಂದರೆ “ಎಟ್ನಾ” ಪರ್ವತ. ಇದು ಯೂರೋಪಿನ ಅತ್ಯಂತ ಚಟುವಟಿಕೆಯಿಂದ ಕೂಡಿರುವ ಜ್ವಾಲಾಮುಖಿ. ಸಮುದ್ರದ ದಡದಿಂದ ನೋಡಬಹುದಾದ ಅತೀ ಎತ್ತರದ ಪರ್ವತ. ಗೈಡ್ ಜೊತೆ ಈ ಪರ್ವತ ಪ್ರದೇಶ ಸುತ್ತಾಡಿದ ಮತ್ತು ಮಾಹಿತಿ ತಿಳಿದುಕೊಂಡ ಒಂದು ದಿನದ ಪ್ರವಾಸ, ನನ್ನ ಈವರೆಗಿನ ಪ್ರವಾಸಗಳಲ್ಲೇ ಅಸಾಮಾನ್ಯ ಎಂದರೂ ಅತಿಶಯೋಕ್ತಿಯಲ್ಲ. ಈ ಪರ್ವತದ ಬಗ್ಗೆ ಮುಂದಿನ ಲೇಖನದಲ್ಲಿ ವಿವರವಾಗಿ ಬರೆಯುತ್ತೀನಿ. ನಿರೀಕ್ಷಿಸಿ!
ಸಿಸಿಲಿಯ ಮತ್ತೊಂದು ಹೆಗ್ಗಳಿಕೆ ಎಂದರೆ ಅಲ್ಲಿಯ “ಸ್ಟ್ರೀಟ್ ಫುಡ್”. ಕಾಲದ ರೇಖೆಯಲ್ಲಿ ಹಲವಾರು ಸಾಮ್ರಾಜ್ಯಗಳ ಅಡಿಯಲ್ಲಿ ಬಂದು ಹೋಗಿರುವ ಸಿಸಿಲಿಯಲ್ಲಿ, ಸ್ಥಳೀಯ ಖಾದ್ಯಗಳಿಗೆ ಅತ್ಯುನ್ನತ ಸ್ಥಾನವಿದೆ. ಒಬ್ಬ ಸಿಸಿಲಿಯನ್ ಪ್ರಕಾರ “Food is an attraction in other places. But for us food is a Religion”! ನಮ್ಮ ಊರಿನಲ್ಲಿ ಬೇಕಾದಾಗ ಚಾಟ್ಸ್, ಸ್ವೀಟ್ ಎಲ್ಲಾ ತಿಂದು ತೇಗುತ್ತಿದ್ದ ನನಗೆ, ಈ ವಿಷಯ ನನ್ನ ಮನಸ್ಸಿಗೆ ಮತ್ತು ಹೊಟ್ಟೆಗೆ ಬಹಳ ಹತ್ತಿರವೆನಿಸಿತು. ಇದರ ಬಗ್ಗೆಯೂ ಒಂದು ಧೀರ್ಘ ಲೇಖನ ಬರೆದು ನಿಮ್ಮ ಬಾಯಲ್ಲಿ ನೀರು ಬರುವಂತೆ ಮಾಡುವ ಯೋಜನೆ ಇದೆ. ನೀವು ನನಗೆ ಹೊಟ್ಟೆ ಕಡಿಯುವ ಶಾಪ ಹಾಕುವುದಿಲ್ಲವಾದರೆ ಖಂಡಿತ ಬರೆಯುತ್ತೇನೆ.
ಸಿಲಿಯನ್ ಪ್ರಕಾರ “Food is an attraction in other places. But for us food is a Religion”! ನಮ್ಮ ಊರಿನಲ್ಲಿ ಬೇಕಾದಾಗ ಚಾಟ್ಸ್, ಸ್ವೀಟ್ ಎಲ್ಲಾ ತಿಂದು ತೇಗುತ್ತಿದ್ದ ನನಗೆ, ಈ ವಿಷಯ ನನ್ನ ಮನಸ್ಸಿಗೆ ಮತ್ತು ಹೊಟ್ಟೆಗೆ ಬಹಳ ಹತ್ತಿರವೆನಿಸಿತು.
ಸಿಸಿಲಿಯ ಬಗ್ಗೆ ಪೀಠಿಕೆಯ ಜೊತೆ ಮುಂದೆ ಏನೇನು ಬರೆಯಬೇಕು ಎನ್ನುವುದನ್ನು ಅಂದಾಜಿನಲ್ಲಿ ಜೋಡಿಸಿದ್ದಾಯಿತು. ಈಗ ಅಸಲಿ ವಿಷಯಕ್ಕೆ ಬರ್ತೀನಿ. ಸಿಸಿಲಿಯ ಹತ್ತು ದಿನದ ಪ್ರವಾಸದಲ್ಲಿ ಮೊದಲು ಭೇಟಿ ಕೊಟ್ಟಿದ್ದು ಯುರೇಕಾ ನಗರಿ “ಸಿರಕುಸಾ”ಗೆ. ಹೌದು! ಇದು ಆರ್ಕಿಮಿಡಿಸ್ ಎಂಬ ಮೇಧಾವಿಯ ಜನ್ಮಸ್ಥಳ ಹಾಗೂ ವಾಸಸ್ಥಳವಾಗಿತ್ತು. ಆರ್ಕಿಮಿಡಿಸ್ ಎಂದಾಕ್ಷಣ ಯುರೇಕಾ ಎಂದು ಮಾತ್ರ ತಿಳಿದಿದ್ದ ನನಗೆ, ಈ ಪ್ರವಾಸ ಬೇರೆಯ ಪ್ರಪಂಚವನ್ನೇ ತೆರೆದಿಟ್ಟಿತು. ಮೊದಲು ಗೊತ್ತಿದ್ದ ವಿಷಯವನ್ನು ಹೇಳಿಬಿಡ್ತೀನಿ. ಆಮೇಲೆ ಅಲ್ಲಿ ತಿಳಿದ ಅನೇಕ ವಿಷಯಗಳನ್ನು ಹಂಚಿಕೊಳ್ಳುತ್ತೇನೆ.
“ಆರ್ಕಿಮಿಡಿಸ್ ಸಿದ್ಧಾಂತ”:
ಕ್ರಿ.ಪೂ. ಎರಡನೇ ಶತಮಾನದ ಹೊತ್ತಿಗೆ ಗ್ರೀಕ್ ಸಾಮ್ರಾಜ್ಯದ ಪ್ರಭಾವ ಯೂರೋಪಿನ ಬಹುತೇಕ ಪ್ರದೇಶಗಳನ್ನು ಆವರಿಸಿತ್ತು. ಆಗ ಸಿರಕುಸಾ ಪ್ರಾಂತ್ಯದ ರಾಜ “ಹೈರಾನ್” ವೈಭವೋಪೂರಿತ ಆಡಳಿತ ನಡೆಸುತ್ತಿದ್ದ. ಕ್ರಿ.ಪೂ. ಸಮಯದ ಗ್ರೀಕ್, ರೋಮನ್ಸ್ ಹಾಗೂ ಇನ್ನಿತರರ ಕಾಲಘಟ್ಟದಲ್ಲಿ ಮೂರ್ತಿ ಪೂಜೆ, ದೇವಸ್ಥಾನಗಳ ಕಲ್ಪನೆಯಿತ್ತು. ಈಗಲೂ ಸಿಸಿಲಿಯ ಹಲವು ಪ್ರದೇಶಗಳಲ್ಲಿ ಪುರಾತನ ದೇವಾಲಯಗಳ ಕುರುಹುಗಳನ್ನು ಕಾಣುತ್ತೇವೆ. ಸಿರಕುಸಾ ರಾಜನಾದ ಹೈರಾನ್ ದೇವರಿಗಾಗಿ ಚಿನ್ನದ ಕಿರೀಟವನ್ನು ರಚಿಸಲು ತನ್ನ ಊರಿನ ಅಕ್ಕಸಾಲಿಗನಿಗೆ ಆದೇಶಿಸಿದ. ಅದಕ್ಕೆ ಬೇಕಾದ ಅಪ್ಪಟ ಚಿನ್ನವನ್ನು ರಾಜನೇ ಅಕ್ಕಸಾಲಿಗನಿಗೆ ಕೊಟ್ಟ. ಕೆಲ ದಿನಗಳ ನಂತರ ಅಕ್ಕಸಾಲಿಗ ಅತ್ಯಪರೂಪದ ಕಿರೀಟಗಳನ್ನು ಮಾಡಿ ರಾಜನ ಮುಂದೆ ತಂದು ಒಪ್ಪಿಸಿದ. ಆ ಸಮಯದಲ್ಲಾಗಲೇ ಚಿನ್ನಕ್ಕಿಂತಲೂ ಅಗ್ಗವಾದ ಬೆಳ್ಳಿಯನ್ನು ಬೆರೆಸಿ ಆಭರಣ ಮಾಡಿ, ಅಪ್ಪಟ ಚಿನ್ನವೆಂದೇ ಮಾರಿ ಮೋಸ ಮಾಡುವ ಉದಾಹರಣೆಗಳು ಇದ್ದವಂತೆ. ರಾಜನಿಗೆ ಕಿರೀಟಗಳನ್ನು ನೋಡಿ ಅನುಮಾನ ಬಂದಿತ್ತು. ಆದರೆ ಯಾವ ಆಧಾರದ ಮೇಲೆ ಇದನ್ನು ಪ್ರಮಾಣಿಸುವುದು ಎನ್ನುವುದು ರಾಜನಿಗೆ ಬಹು ದೊಡ್ಡ ಪ್ರತಿಷ್ಠೆಯ ಪ್ರಶ್ನೆಯಾಗಿತ್ತು. ಅತ್ತ ಅಕ್ಕಸಾಲಿಗ ತನ್ನನ್ನು ತಾನು ಸತ್ಯ ಹರಿಶ್ಚಂದ್ರ ಎನ್ನುವಂತೆ ಬಿಂಬಿಸಿ, ಎಲ್ಲ ರೀತಿಯ ನಾಟಕ ಮಾಡುತ್ತಿದ್ದ.
ಸತ್ಯ ತಿಳಿಯದ ಹೊರತು ಈ ಕಿರೀಟಗಳನ್ನು ದೇವರಿಗೆ ಅರ್ಪಿಸಲು ರಾಜನಿಗೆ ಮನಸ್ಸಾಗಲಿಲ್ಲ. ಅಕಸ್ಮಾತ್ ಶುದ್ಧವಲ್ಲದ ಕಿರೀಟಗಳನ್ನು ಅರ್ಪಿಸಿ ದೇವರು ಶಾಪ ಕೊಟ್ಟರೆ ಎಂಬ ಭಯ! ತನ್ನ ಸಾಮ್ರಾಜ್ಯದ ಎಲ್ಲ ಸಮಸ್ಯೆಗಳಿಗೂ ಒಂದಲ್ಲೊಂದು ಪರಿಹಾರ ಸೂಚಿಸುತ್ತಿದ್ದ ಆರ್ಕಿಮಿಡಿಸ್ ನನ್ನು ಕರೆದು ತನ್ನ ದ್ವಂದ್ವವನ್ನು ವಿವರಿಸಿ, ಇದಕ್ಕೊಂದು ಉತ್ತರ ಹುಡುಕುವಂತೆ ಹೇಳಿದ. ರಾಜ ಬಿಟ್ಟ ಹುಳ ಆರ್ಕಿಮಿಡಿಸ್ ತಲೆಯಲ್ಲಿ ಬೃಹದಾಕಾರದ ಯೋಚನೆಯಾಗಿ ಬೆಳೆಯುತ್ತಾ ಹೋಯಿತು. ದಿನದ ಇಪ್ಪತ್ತನಾಲ್ಕು ತಾಸು ಇದೇ ಯೋಚನೆ ಮಾಡುತ್ತಿದ್ದ ಆರ್ಕಿಮಿಡಿಸ್ ಗೆ ಸಮಸ್ಯೆ ಬಗೆಹರಿಸಲು ಇದ್ದಿದ್ದ ಒಂದೇ ಒಂದು ಉತ್ತರವೆಂದರೆ ಚಿನ್ನದ ಸಾಂದ್ರತೆ ಹಾಗೂ ಬೆಳ್ಳಿಯ ಸಾಂದ್ರತೆಗೂ ಇದ್ದ ವ್ಯತ್ಯಾಸ. ಇವೆರಡೂ ಬೇರೆ ಬೇರೆ ಲೋಹಗಳಾಗಿರುವುದರಿಂದ, ಅವುಗಳ ಸಾಂದ್ರತೆಯಲ್ಲಿ ವ್ಯತ್ಯಾಸವಿರುತ್ತದೆ. ಆದರೆ ಇದನ್ನು ಹೇಗೆ ಪ್ರಾಮಾಣಿಸುವುದು? ಎಂದು ಯೋಚಿಸುತ್ತಾ ದಿನಗಳೇ ಕಳೆದವು. ವಿಶ್ರಮಿಸಲು ಒಮ್ಮೆ ಸ್ನಾನಕ್ಕಾಗಿ ಸಾರ್ವಜನಿಕ ಸ್ನಾನಗ್ರಹಕ್ಕೆ ಹೋದಾಗ, ತೊಟ್ಟಿಯಲ್ಲಿ ಕಾಲು ಜಾರಿ ಒಳಗೆ ಬಿದ್ದನಂತೆ. ಆಗ ಸ್ವಲ್ಪ ಪ್ರಮಾಣದ ನೀರು ಹೊರಚೆಲ್ಲಿದ್ದನ್ನು ಗಮನಿಸಿ, ತಕ್ಷಣ “ಯುರೇಕಾ” (ನಾನು ಕಂಡು ಹಿಡಿದೆ) ಎಂದು ಬರಿ ಮೈಯಲ್ಲಿ ಬೀದಿಗಳಲ್ಲಿ ಓಡಿ, ರಾಜನ ಮುಂದೆ ಬಂದು ನಿಂತಿದ್ದನಂತೆ! ಇದು ನನಗೆ ಗೊತ್ತಿದ್ದ ಕಥೆ.
ಸಮಸ್ಯೆಗೆ ಪರಿಹಾರ ಹೀಗಿದೆ : ಒಂದು ಇಟ್ಟಿಗೆ ಚಿನ್ನದ ತೂಕ, ಒಂದು ಇಟ್ಟಿಗೆ ಬೆಳ್ಳಿಯ ತೂಕಕ್ಕಿಂತಲೂ ಎರಡು ಪಟ್ಟು ಹೆಚ್ಚು. ಅದೇ ಒಂದು ಇಟ್ಟಿಗೆಯ ಕಬ್ಬಿಣ ಇವೆರಡಕ್ಕಿಂತಲೂ ಇನ್ನೂ ಹೆಚ್ಚು ತೂಗುತ್ತದೆ. ಆದರೆ ಒಂದು ಇಟ್ಟಿಗೆ ಅಳತೆಯ ಹತ್ತಿಯ ತೂಕ ಬಲು ಕಡಿಮೆ.ಅಂದರೆ ಇಂತಿಷ್ಟು ಘನ ಅಳತೆಯಲ್ಲಿ ಇಡುವ ಒಂದೊಂದು ವಸ್ತುಗಳೂ ಸಹ ತನ್ನ ಸಾಂದ್ರತೆಯ ಮೇರೆಗೆ ಬೇರೆ ಬೇರೆ ತೂಕವನ್ನು ಹೊಂದಿರುತ್ತವೆ. ಇದನ್ನೇ “ಸಾಂದ್ರತೆ” ಎಂದು ಕರೆಯುತ್ತೇವೆ. ಒಂದು ಪಾತ್ರೆಯಲ್ಲಿ ಸಂಪೂರ್ಣ ನೀರು ತುಂಬಿಸಿ, ಕಿರೀಟ ಮಾಡಲು ಕೊಟ್ಟಷ್ಟು ಅಪ್ಪಟ ಚಿನ್ನವನ್ನು ಹಾಕಿದರೆ ಎಷ್ಟು ನೀರು ಹೊರ ಚೆಲ್ಲುತ್ತದೋ, ಅಷ್ಟೇ ನೀರು ಕಿರೀಟವನ್ನು ಹಾಕಿದರೂ ಚೆಲ್ಲಬೇಕು! ಆದರೆ ಬೆಳ್ಳಿಯನ್ನು ಉಪಯೋಗಿಸಿದ್ದರೆ, ಅದರ ಸಾಂದ್ರತೆಯ ಕಾರಣದಿಂದ ಕಡಿಮೆ ನೀರು ಹೊರ ಚೆಲ್ಲುತ್ತದೆ. ಈ ರೀತಿಯಲ್ಲಿ ಸಮಸ್ಯೆಗೆ ಪರಿಹಾರ ಕಂಡು ಹಿಡಿದು ಮೋಸ ಮಾಡಿದ ಅಕ್ಕಸಾಲಿಗನಿಗೆ ಶಿಕ್ಷೆ ಕೊಡಲಾಗಿತ್ತು.
ಗಣಿತದ ಪಠ್ಯದಲ್ಲಿ ಹಾಸ್ಯದ ವಿಷಯಗಳು ಬರುವುದೇ ವಿರಳ. ಅದಕ್ಕೆಲ್ಲ ಒಂದು ಅಪವಾದವೆಂಬಂತೆ ಆರ್ಕಿಮಿಡಿಸ್ ಬರಿ ಮೈಯಲ್ಲಿ ಓಡಿದ ಸನ್ನಿವೇಶವನ್ನು ಶಾಲೆಯಲ್ಲಿದ್ದಾಗ ಕೇಳಿ, ಆರ್ಕಿಮಿಡಿಸ್ ಎನ್ನುವ ವ್ಯಕ್ತಿಯ ಕಲ್ಪನೆ ಹಾಸ್ಯಮಯವಾಗಿತ್ತು.
ಇಂದಿಗೂ ಸಾಮಾನ್ಯವಾಗಿ ಯಾವುದಾದರು ಸಮಸ್ಯೆಗೆ ಥಟ್ ಅಂತ ಪರಿಹಾರ ಹೊಳೆದರೆ, ಅದಕ್ಕೆ “ಯುರೇಕಾ ಮೊಮೆಂಟ್” ಎಂದೇ ಕರೆಯಲಾಗುತ್ತದೆ. ಹಾಗಾದರೆ ಆರ್ಕಿಮಿಡೀಸ್ ಕಂಡುಹಿಡಿದದ್ದು ಇದೊಂದೆ ಸಿದ್ಧಾಂತವೇ? ಖಂಡಿತ ಅಲ್ಲ. ಆತ ಗಣಿತ ಲೋಕದ ಮೇಧಾವಿ. ತನ್ನ ಮನೆಯೊಳಗೆ ಮಣ್ಣಿನ ನೆಲದ ಮೇಲೆ ಗಣಿತ ಸೂತ್ರಗಳನ್ನು ರಚಿಸಿ ಹೊಸ ಸಿದ್ಧಾಂತಗಳನ್ನು ಸಿದ್ಧಪಡಿಸಿತ್ತಿದ್ದನಂತೆ. ಹಾಗಾಗಿ ಆತ ಒಬ್ಬ “ಗಣಿತ ಶಾಸ್ತ್ರಜ್ಞ”.
ಸಿರಕುಸಾ ರಾಜನಾದ ಹೈರಾನ್ ಗೆ ಒಂದು ಐಷಾರಾಮಿ ನೌಕೆಯನ್ನು ನಿರ್ಮಿಸುವ ಹೆಬ್ಬಯಕೆ ಇತ್ತು. ರಾಜ ಅದರ ಜವಾಬ್ದಾರಿಯನ್ನು ವಹಿಸಿದ್ದು ಆರ್ಕಿಮಿಡಿಸ್ ಗೆ. ಕ್ರಿ. ಪೂ. 250 ರ ಸುಮಾರಿಗೆ ಆರುನೂರು ಜನ ಪ್ರಯಾಣಿಸಬಲ್ಲ ಹಡಗನ್ನು ಆರ್ಕಿಮಿಡಿಸ್ ಮಾರ್ಗದರ್ಶನದಲ್ಲಿ ನಿರ್ಮಿಸಲಾಯಿತು. ಆ ಹಡಗಿನ ವಿಶೇಷವೆಂದರೆ, ಆಗಿನ ಕಾಲದಲ್ಲಿಯೇ ಅದರೊಳಗೆ ಗಾರ್ಡನ್, ಗರಡಿ ಮನೆ ಮತ್ತು Aphrodite (ಪ್ರೀತಿ, ಭೋಗ ಮತ್ತು ಸಂತಾನೋತ್ಪತ್ತಿಯ ದೇವತೆ) ದೇವಾಲಯಗಳೆಲ್ಲವೂ ಇದ್ದವಂತೆ! ಹಡಗಿನ ಒಳಗೆ ನೀರನ್ನು ಎತ್ತಿ ಹೊರಚೆಲ್ಲಲು ಆರ್ಚಿಮೆಡಿಸ್ ಅನ್ವೇಷಿಸಿದ ಸ್ಕ್ರೂ ಬಳಸಲಾಗಿತ್ತು ಎನ್ನುವುದು ಇನ್ನೊಂದು ಹೆಗ್ಗಳಿಕೆ. ಆರ್ಕಿಮಿಡಿಸ್ ಒಬ್ಬ ಇಂಜಿನಿಯರ್!
ನಾನು ಚಿಕ್ಕವನಿದ್ದಾಗ ಭೂತಕನ್ನಡಿಯಲ್ಲಿ ಸೂರ್ಯನ ಬೆಳಕನ್ನು ಕೇಂದ್ರೀಕರಿಸಿ ಒಂದು ಪೇಪರ್ ಹಾಳೆಯನ್ನು ಬೆಂಕಿ ಹಚ್ಚಿ ಸುಡುವುದು ಒಂದು ಪ್ರಯೋಗ, ಆಟ ಎಲ್ಲವೂ ಆಗಿತ್ತು. ಕ್ರಿ. ಪೂ. ಎರಡನೇ ಶತಮಾನದಲ್ಲಿ ಆರ್ಕಿಮಿಡಿಸ್ ಇದೇ ಸಿದ್ಧಾಂತದಿಂದ ಶತ್ರು ಪಡೆಯ ನೌಕೆಗಳನ್ನು ಸುಟ್ಟು ಹಾಕುವ ವಿಧಾನವನ್ನು ಕಂಡುಹಿಡಿದಿದ್ದನಂತೆ. ಅನೇಕ ಬೇರೆ ಬೇರೆ ರೀತಿಯ ಬೃಹದಾಕಾರದ ಕನ್ನಡಿಗಳನ್ನು ಸಮುದ್ರ ಕಿನಾರೆಯಲ್ಲಿ, ನಿರ್ದಿಷ್ಟ ಕೋನಗಳಲ್ಲಿ ನಿಲ್ಲಿಸಿ, ಸೂರ್ಯ ಕಿರಣಗಳನ್ನು ನೇರ ಶತ್ರುಗಳ ನೌಕಾ ಪಡೆಗಳ ಮೇಲೆ ಕೇಂದ್ರೀಕರಿಸಿ ಪ್ರತಿಫಲನದಿಂದ ಸುಟ್ಟು ಹಾಕುವ ವ್ಯವಸ್ಥೆ ಇದಾಗಿತ್ತು! ಅಬ್ಬಬ್ಬಾ ಇದನೆಲ್ಲ ಕೇಳಿಯೇ ನನಗೆ ಆಶ್ಚರ್ಯವೆನಿಸಿತು. ಇದಷ್ಟೇ ಅಲ್ಲದೆ ಹಲವಾರು ಗಣಿತದ ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿದು ಸಿರಕುಸಾ ಗ್ರೀಕ್ ಆಳ್ವಿಕೆಯನ್ನು ಅಚ್ಚಳಿಯದೆ ಉಳಿಯುವಂತೆ ಮಾಡಿದ್ದು ಆರ್ಕಿಮಿಡಿಸ್. ಈಗ ಹೇಳಿ, ಆರ್ಕಿಮಿಡಿಸ್ ನನ್ನು ಬರಿ ಮೈಯಲ್ಲಿ ಓಡಿದ್ದಕ್ಕೆ ಮಾತ್ರ ಸೀಮಿತಗೊಳಿಸಬೇಕಾ?
ಇಂತಹ ಬಹುಮುಖ ಪ್ರತಿಭೆ, ಮೇಧಾವಿಯ ಸಾವು ಮಾತ್ರ ದುರಂತವಾಗಿ ನಡೆದುಹೋಯಿತು. ರೋಮನ್ ಮತ್ತು ಗ್ರೀಕ್ ಸಾಮ್ರಾಜ್ಯಗಳ ನಡುವೆ ಯುದ್ಧಗಳು ಪ್ರಾರಂಭವಾದ ದಿನಗಳು ಅವು. ಇದ್ದಕ್ಕಿಂದಂತೆ ಸಿರಕುಸಾ ಮೇಲೆ ಧಾಳಿ ಮಾಡಿದ ರೋಮನ್ನರು ಎಲ್ಲವನ್ನು ಸರ್ವ ನಾಶ ಮಾಡುತ್ತಾ ಬಂದರು. ಈ ವಿಷಯಗಳ ಪರಿವೆಯಿಲ್ಲದೆ, ತನ್ನ ಮನೆಯಲ್ಲಿ ಗಣಿತ ಸಂಶೋಧನೆಯಲ್ಲಿ ತೊಡಗಿದ್ದ ಆರ್ಕಿಮಿಡಿಸ್. ಇದ್ದಕ್ಕಿದ್ದಂತೆ ಅಪರಿಚಿತ ಯೋಧನೊಬ್ಬ ಮನೆಯೊಳಗೆ ಬಂದು ಎಲ್ಲವನ್ನೂ ಚೆಲ್ಲಾಪಿಲ್ಲಿ ಮಾಡುವಾಗ ಆರ್ಕಿಮಿಡಿಸ್ ಮಣ್ಣಿನ ನೆಲದ ಮೇಲೆ ಬರೆದಿದ್ದ ವೃತ್ತಗಳು, ಗಣಿತದ ಸೂತ್ರಗಳು ಅಳಿಸಿಹೋದವು. ಅದಕ್ಕೆ ಕೋಪಗೊಂಡ ಆರ್ಕಿಮಿಡಿಸ್ “ನನ್ನ ವೃತ್ತಗಳನ್ನು ಕೆಡಿಸಬೇಡ” ಎಂದು ಹೇಳಿದ್ದು ಅವನ ಕೊನೆಯ ವಾಕ್ಯವಂತೆ. ಆಮೇಲೆ ಅವನನ್ನು ಹಿಡಿದೆಳೆದು ಒಂದು ಗುಹೆಯಲ್ಲಿ ಶಿರಚ್ಛೇದನ ಮಾಡಲಾಯಿತು! ಆರ್ಕಿಮಿಡಿಸ್ ನನ್ನು ಕೊಂದವರಿಗೂ ಅವನೆಂತಹ ಮೇಧಾವಿ ಎಂದು ಗೊತ್ತಿರಲಿಲ್ಲ.
ಸಿರಕುಸಾ ಪ್ರವಾಸದಲ್ಲಿ ಅಚಾನಕ್ ಭೇಟಿಯಾದ ಅಲ್ಲಿನ ಸ್ಥಳೀಯ ಸಂಶೋಧಕರೊಬ್ಬರು ನಮಗೆ ಈ ಕಥೆಗಳನ್ನು ವಿವರಿಸಿದರು. ನಮ್ಮ ಆಸಕ್ತಿಯನ್ನು ಮೆಚ್ಚಿ ಎಲ್ಲ ವಿಷಯಗಳನ್ನು ಹಂಚಿಕೊಂಡ “ಗಿಯೊ ಸುಪ್ಪೆ” ಅವರಿಗೆ ಅನಂತ ಧನ್ಯವಾದಗಳು. ಅವರು ಭಾರತದ ಇತಿಹಾಸದ ಬಗ್ಗೆ ಕೂಡ ತಿಳಿದುಕೊಂಡರು. ವೇದ ಕಾಲ ಎಷ್ಟು ಹಳೆಯದು? ಎಷ್ಟು ವೇದಗಳಿವೆ? ಇತ್ಯಾದಿ. ಸಾವಿರಾರು ವರ್ಷಗಳ ವೈಭವೋಪೇರಿತ ಇತಿಹಾಸವಿರುವ ಸಿರಕುಸಾಗೆ ಸಮಕಾಲೀನ ಅಥವಾ ಇನ್ನೂ ಪುರಾತನವಾಗಿರುವ ಭಾರತದ ಇತಿಹಾಸವನ್ನು ತಿಳಿಯಬೇಕು ಎನ್ನುವುದು ಅವರ ಹೆಬ್ಬಯಕೆ. ಭಾರತಕ್ಕೆ ಅವಶ್ಯ ಭೇಟಿ ಕೊಡಿ ಎಂದು ನಾವೂ ಸಹ ಅವರಿಗೆ ಆಮಂತ್ರಣ ಕೊಟ್ಟೆವು.
ಸಿರಕುಸಾದಲ್ಲಿ ಗ್ರೀಕ್ ಆಳ್ವಿಕೆಯ ಬಹಳಷ್ಟು ವೈಶಿಷ್ಟ್ಯಗಳಿವೆ. ಮುಂದಿನ ಸಂಚಿಕೆಯಲ್ಲಿ ನಿರೀಕ್ಷಿಸಿ. ಸಿಸಿಲಿಯನ್ ಡೈರೀಸ್ ಮುಂದುವರೆಯುತ್ತದೆ…
ಮೂಲತಃ ದಾವಣಗೆರೆಯವರಾದ ಗುರುದತ್ ಸಧ್ಯ ಜೆರ್ಮನಿಯ ಕಾನ್‌ಸ್ಟೆನ್ಸ್‌ನಲ್ಲಿ ವಾಸಿಸುತ್ತಿದ್ದಾರೆ. ವೃತ್ತಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಫೋಟೋಗ್ರಫಿ, ಪ್ರವಾಸ, ಚಾರಣ, ಪುಸ್ತಕಗಳ ಓದು ಇವರ ಹವ್ಯಾಸಗಳು..
ಆರ್ಕಿಮಿಡೀಸ್ ಜೀವನ -ಸಾಂದ್ರತೆಯ ತತ್ವ -ವಿವರವಾಗಿ ತಿಳಿದು
ಹೈಸ್ಕೂಲಿನಲ್ಲಿ ಓದಿದ್ದು ನೆನಪಾಯ್ತು.
ಲೇಖನ ಚನ್ನಾಗಿದೆ. ಮುಂದಿನ ಬರಹ ಓದಲು ಕಾತುರವಿದೆ.
ಪ್ರಯಾಣದ ಲಾಭವೇ ಇದು.ಮುಖ್ಯವಾದದ್ದನ್ನು ಹಿಡಿದಿಟ್ಟುಕೊಳ್ಳುವುದು. ಧನ್ಯವಾದ ದತ್ತ.
Archimidies has been brought to life once again by gurudat ,interesting
ಸಿಸಿಲಿ ಕುರಿತು ಶಾಲೆಯ ದಿನಗಳಲ್ಲಿ ಓದಿದ್ದ ವಿಷಯಗಳು ನೆನಪಾದವು. ಸೊಗಸಾದ ಬರವಣಿಗೆ.
ಆರ್ಕಿಮೆಡಿಸ್ ಅಲ್ಲಿಯವನು ಎಂಬುದು ಗೊತ್ತಿರಲಿಲ್ಲ… “ಯುರೇಕ” ಗೊತ್ತಿರದವರಿಲ್ಲ… ಆರ್ಕಿಮೆಡಿಸ್ ಬಗ್ಗೆ ಹೆಚ್ಚು ತಿಳಿದಂತಾಯ್ತು.
ಪ್ರವಾಸಗಳನ್ನು ಸಾರ್ಥಕವಾಗಿಸುವ, ಅರ್ಥಪೂರ್ಣಗೊಳಿಸುವ ಪರಿಪಾಠ ಗುರು-ನಿತ್ಯ ದಂಪತಿಗಳಿಗೆ ಒಲಿದಿದೆ.
ಸಿಸಿಲಿಯ ಯುರೇಕಾ ನಗರಿ ಮತ್ತು ಆರ್ಕಿಮಿಡಿಸ್ನ ಬಗ್ಗೆ ನಮ್ಮ ಶಾಲೆಯ ದಿನಗಳಲ್ಲಿ ಇಷ್ಟೊಂದು ವಿವರಣೆ ಇರಲಿಲ್ಲ.
ಈ ಬರವಣಿಗೆಯಲ್ಲಿ ಹೊಸದಾಗಿ ಆರ್ಕಿಮಿಡಿಸ್ನ ಜನ್ಮಸ್ಥಳ ಮತ್ತು ಸಿಸಿಲಿಯ ಬಗ್ಗೆ ತಿಳಿದುಕೊಂಡೆ.
ಗುರುದತ್ ಅವರಿಗೆ ಧನ್ಯವಾದಗಳು.