ಮಲೆನಾಡು, ಕರಾವಳಿ ಭಾಗದ ಹಳ್ಳಿಯ ಮನೆ ಮನೆಗಳಲ್ಲಿ ನಾಯಿಗಳಿರುವುದು ಕಡ್ಡಾಯ. ಕಾಡು, ಹಾಡಿ, ಗುಡ್ಡ, ಬಯಲುಗಳ ನಡುವೆ ಫರ್ಲಾಂಗುಗಳ ಅಂತರದಲ್ಲಿ ಅವಿತುಕೊಂಡಿರುವ ಮನೆಗಳ ರಕ್ಷಣೆಗೆ, ಜೀವಂತಿಕೆಗೆ ನಾಯಿಗಳು ಅನಿವಾರ್ಯ. ಕಳ್ಳಕಾಕರು, ಜೀವಾದಿಗಳು, ದೆವ್ವ-ಭೂತ-ಪೀಡೆ-ಕುಲೆಗಳನ್ನು ಕೂಡಾ ನಾಯಿಗಳು ದೂರವಿಡುತ್ತವೆಂಬ ನಂಬಿಕೆಯಿದೆ! ಮನುಷ್ಯರ ಕಣ್ಣಿಗೆ ಕಾಣದ ದೆವ್ವ ಭೂತಗಳು ನಾಯಿಗಳಿಗೆ ಕಾಣುತ್ತವಂತೆ, ಇದರಿಂದಾಗಿಯೇ ಅವು ರಾತ್ರಿಯಿಡೀ ಬೊಗಳುವುದಂತೆ! ನಮ್ಮ ಹಳ್ಳಿಯವರ ಈ ತರದ ಕಲ್ಪನೆಗಳಿಗೆ ಯಾವುದೇ ಆಧಾರವಿಲ್ಲವಾದರೂ ಇಂತವುಗಳನ್ನು ಕೇಳುವುದು ರೋಮಾಂಚನಕಾರಿಯಾಗಿತ್ತು.
ವಿಜಯಶ್ರೀ ಹಾಲಾಡಿ ಹೊಸ ಪ್ರಬಂಧ ಸಂಕಲನ “ಕಣ್ಣ ಕಾಡಿನ ಹಾಡು” ಒಂದು ಪ್ರಬಂಧ ನಿಮ್ಮ ಓದಿಗೆ

ದುಡಿದು ದಣಿದು, ಮರುಬೆಳಗಿನ ಧಾವಂತದ ದಿನಚರಿಗೆ ಅಣಿಯಾಗಬೇಕಾದ ತುರ್ತಿನೊಂದಿಗೆ ಗಾಢ ಕತ್ತಲ ನಡುರಾತ್ರಿ ದಿಂಬಿಗೆ ತಲೆಯಿಟ್ಟಾಗೆಲ್ಲ… ಜೋಗುಳದಂತೆ ಸಾಂತ್ವನಿಸುತ್ತ ಬಂದದ್ದು ನಾಯಿಗಳ ಬೊಗಳು! ಹಳ್ಳಿಮನೆಯಲ್ಲಿ ವಿಧ ವಿಧ ಇರುಳ ಸದ್ದುಗಳನ್ನು ಕೇಳುತ್ತ ನಿದ್ದೆಹೋಗಿ ಬೆಳೆದ ಹಲವರಿಗೆ ಇದು ಸಹಜ. ಅಂದರೆ, ಮನುಷ್ಯನದ್ದಲ್ಲದ; ನಿಸರ್ಗಕ್ಕೆ ಸಂಬಂಧಿಸಿದ ಬೊಗಳು, ಬೊಳ್ಳು, ಗುಟುರು ಯಾವುದಾದರೊಂದು ಕಿವಿಗೆ ತಾಕುತ್ತಿದ್ದರೆ ಏನೋ ಸಮಾಧಾನ! ಪ್ರಕೃತಿಯ ಮಟ್ಟೆಯಲ್ಲೇ ಸ್ವಸ್ಥವಾಗಿ, ಸುರಕ್ಷಿತವಾಗಿ ಮಲಗಿದ್ದೇವೆಂಬ ನೆಮ್ಮದಿಯ ಭಾವ; ನಿದ್ದೆ! ಹೀಗೆ ನಮಗೇ ಅರಿಯದಂತೆ ರಾತ್ರಿಗಳನ್ನು ನಿರುಮ್ಮಳಗೊಳಿಸುವುದು ನಾವೆಲ್ಲ ಯಃಕಶ್ಚಿತ್ ಎಂದೆಣಿಸುವ ನಾಯಿಗಳು; ಅದರಲ್ಲೂ ಬೀದಿ ನಾಯಿಗಳು! ಗೊಣಗುತ್ತ, ಬಯ್ಯುತ್ತ, ರೇಗುತ್ತ, ಕೆಲವೊಮ್ಮೆ ಬಾಯಿಗೆ ಬಂದಂತೆ ಒದರುತ್ತ ಕತ್ತಲೊಂದಿಗೆ ಸಂಭಾಷಿಸುವ ನಾಯಿಗಳ ಧ್ವನಿ ಹೃದಯವಂತರಿಗೆ ಸಾಂತ್ವನದಂತೆ ಕಾಣುವುದು ಅಚ್ಚರಿಯೇನಲ್ಲ.

(ವಿಜಯಶ್ರೀ ಹಾಲಾಡಿ)

ನಾಯಿಗಳ ಕುರಿತು ಬರೆಯಲು ಕುಳಿತ ಈ ರಾತ್ರಿಯಲ್ಲಿ ಸುತ್ತ ಬೀದಿಗಳಿಂದ ಆಗಾಗ ಅವುಗಳದ್ದೇ ವಿವಿಧ ಸ್ವರ ತೇಲಿ ಬರುತ್ತಿದೆ. ಹಾಗೇ ಎಷ್ಟೋ ನೆನಪುಗಳು, ಘಟನೆಗಳು, ಪದಗುಚ್ಛಗಳು ನಾನು ತಾನೆಂದು ಮುಂದೊತ್ತಿ ಬಂದು ನಿಲ್ಲುತ್ತಿವೆ. ಯಾವುದನ್ನು ಹೇಗೆ ನಿಮ್ಮ ಮುಂದಿಡುತ್ತೇನೋ ನಾನೇ ಕಾದು ನೋಡಬೇಕಾಗಿದೆ. ಯಾಕೆಂದರೆ ಸಾವಿರಾರು ವರ್ಷಗಳಿಂದ ಮನುಷ್ಯನ ಜೊತೆ ವಾಸಿಸುತ್ತ ಸುಖಕ್ಕಿಂತ ಕಷ್ಟವನ್ನೇ ಉಂಡು ಬದುಕುತ್ತಿರುವ ಜೀವವೊಂದರ ಬಗ್ಗೆ ಏನೇ ಹೇಳಿದರೂ ಅದು ಕಡಿಮೆಯೇ. ಅದಲ್ಲದೆ ಬರೀ ಮಾತು, ಬರಹಗಳು ನ್ಯಾಯ ಒದಗಿಸಲಾರವು ಎಂಬ ಎಚ್ಚರಿಕೆಯೊಂದಿಗೇ ಮುಂದುವರಿಯುತ್ತಿದ್ದೇನೆ.

ಐದರಿಂದ ಏಳನೇ ತರಗತಿಗೆ ಹಾಲಾಡಿ ಶಾಲೆಗೆ ಹೋಗುತ್ತಿದ್ದಾಗ ಅಲ್ಲೊಂದು ನಾಯಿಯಿತ್ತು. ನಾವದನ್ನು ‘ಚೆನ್ನಿ’ ಎಂದು ಕರೆದಿದ್ದೆವು. ನಸುಕಂದು ಬಣ್ಣದ, ಚೆಲುವಿನ ಹೆಣ್ಣುನಾಯಿ. ಮಧ್ಯಾಹ್ನ ಊಟ ಮಾಡುವಾಗ ಚೆನ್ನಿಗೆಂದು ಪಾಲು ತೆಗೆದಿಟ್ಟು, ಬಾವಿಕಟ್ಟೆಗೆ ಬುತ್ತಿ ತೊಳೆಯಲು ಹೋಗುವಾಗ ಒಯ್ದು ಕೊಡುತ್ತಿದ್ದವು. ಅದು ನಮ್ಮೆಲ್ಲರ ಮನೆಯ ವಿಧ ವಿಧ ಊಟ ತಿಂಡಿಗಳ ರುಚಿ ನೋಡಿ ತಿಂದು ಹೇಗೋ ಅರಗಿಸಿಕೊಂಡಿತ್ತು ಪಾಪ! ನಾನು ಚೆನ್ನಿಯನ್ನು ತುಂಬಾ ಹಚ್ಚಿಕೊಂಡಿದ್ದೆ. ಮನೆಗೆ ಬಂದು ಅದರದ್ದೇ ಗುಣಗಾನ. ಆ ನಾಯಿ ನಮ್ಮನ್ನು ಕಂಡೊಡನೆ ಬಳುಕಾಡಿ ಪ್ರೀತಿ ತೋರಿಸುವ ಪರಿ ಆತ್ಮೀಯ. ಆವತ್ತೊಂದಿನ ಬೆಳಿಗ್ಗೆ ಶಾಲೆಗೆ ಹತ್ತಿರದ ರಸ್ತೆಯಲ್ಲಿ ಚೆನ್ನಿ ಕಂಡಳು. ನಾನು ಮುಗುಳ್ನಕ್ಕೆ… ಅಂದರೆ ಪರಿಚಿತ ಮನುಷ್ಯರು ಎದುರಾದಾಗ ನಸುನಗುತ್ತೇವಲ್ಲ; ಹಾಗೆ! ಈ ಕ್ರಿಯೆ ಸಹಜವಾಗಿ ನಡೆದುಹೋಗಿತ್ತು. ಆ ಕಡೆಯಿಂದ ಚೆನ್ನಿಯೂ ನಕ್ಕಿರಬೇಕು! ಮರುಕ್ಷಣ ‘ಇದೆಂತದಪ್ಪಾ’ ಎಂದು ನನಗೇ ನಾಚಿಕೆ, ಅಚ್ಚರಿಯಾಗಿ ಸುಮ್ಮನಿರಲಾರದೆ ಗೆಳತಿಯರಲ್ಲಿ ಹೇಳಿಕೊಂಡಾಗ ‘ನಾಯಿನ್ ಕಂಡ್ ನಗಾಡ್ತಾಳಂಬ್ರ್’ ಎಂದು ತಮಾಷೆ ಮಾಡಿದರು. ಈ ಘಟನೆ ಯಾವತ್ತೂ ಮರೆಯುವುದಿಲ್ಲ. ಈಗಲೂ ನಾಯಿಗಳನ್ನು ಕಂಡಾಗ ಮುಗುಳ್ನಗುವುದು ನನ್ನ ಅಭ್ಯಾಸ. ಎದುರಿಗಿದ್ದವರು ತಪ್ಪು ತಿಳಿದುಕೊಂಡರೆ ಅವರಿಗೇ ನಷ್ಟವೆಂದು ನನಗೆ ನಾನೇ ಧೈರ್ಯ ಹೇಳಿಕೊಂಡಿದ್ದೇನೆ. ಆದರೀಗ ಮಾಸ್ಕಿನ ಮರೆಯಲ್ಲಿರುವುದರಿಂದ ನಮ್ಮಷ್ಟಕ್ಕೆ ನಕ್ಕರೂ ಯಾರಿಗೂ ತಿಳಿಯುವುದಿಲ್ಲ!

ಆಗ ಮನೆಯಾಟ ಆಡುತ್ತಿದ್ದೆವು. ಮೂರ್ನಾಲ್ಕು ಮಕ್ಕಳು ಒಟ್ಟಿಗೆ ಸೇರಿದರಂತೂ ಆಟಕ್ಕೆ ಒಳ್ಳೇ ಹುರುಪು ಕೂಡುತ್ತಿತ್ತು. ಕೆಲವು ಸಲ ಅಮ್ಮನ ಸೀರೆ ಉಟ್ಟುಕೊಂಡು ದೊಡ್ಡ ಹೆಂಗಸರಂತೆ ನಡೆದುಕೊಳ್ಳುತ್ತಿದ್ದೆವು! ಪ್ರತೀ ಮನೆಯಾಟದ ಮುಖ್ಯ ಥೀಮ್ ‘ನೆಂಟರು ಬರುವುದು’! ನೆಂಟ್ರಿಗೆ ಚಾ, ಕಾಫಿ, ಅಡುಗೆ ತಯಾರಿಸುವುದು, ನೀಡುವುದು. ಮಣ್ಣಿನ ಊಟ, ಚಂಡ್ಪಳೆಯ ಲೋಟ, ಬೀಜಗಳ ತಿಂಡಿ… ಹೀಗೆ! ನೆಂಟರು ಮನೆ ಮುಂದೆ ಬಂದಾಗ ಒಬ್ಬರು ನಾಯಿಯ ಹಾಗೆ ಕೂಗಿ ಗಮನ ಸೆಳೆಯಬೇಕಿತ್ತು. ಸುಮಾರು ಹೊತ್ತು ಬೌ ಬೌ ಕೇಳಿದ ನಂತರ ‘ಮನೆಯೊಡತಿ’ ಹೋಗಿ ಬಾಗಿಲು ತೆಗೆದು “ಬಂದ್ರ್ಯಾ, ಬನಿ ಬನಿ” ಎಂದು ಸ್ವಾಗತಿಸುವುದು! ಈಗಿನ ಮಕ್ಕಳೂ ಇಂತಹ ಆಟ ಆಡುತ್ತ ‘ಟ್ರಿಣ್‌ ಟ್ರಿಣ್‌ʼ ಎನ್ನುತ್ತ ಕಾಲಿಂಗ್ ಬೆಲ್ ಶಬ್ದವನ್ನು ಅನುಕರಿಸುವುದನ್ನು ಗಮನಿಸಿದಾಗ ಬದಲಾದ ಸನ್ನಿವೇಶ; ಬದಲಾಗದ ಮೂಲದ್ರವ್ಯ ಸೋಜಿಗ ತರಿಸಿತು.

ಮಲೆನಾಡು, ಕರಾವಳಿ ಭಾಗದ ಹಳ್ಳಿಯ ಮನೆ ಮನೆಗಳಲ್ಲಿ ನಾಯಿಗಳಿರುವುದು ಕಡ್ಡಾಯ. ಕಾಡು, ಹಾಡಿ, ಗುಡ್ಡ, ಬಯಲುಗಳ ನಡುವೆ ಫರ್ಲಾಂಗುಗಳ ಅಂತರದಲ್ಲಿ ಅವಿತುಕೊಂಡಿರುವ ಮನೆಗಳ ರಕ್ಷಣೆಗೆ, ಜೀವಂತಿಕೆಗೆ ನಾಯಿಗಳು ಅನಿವಾರ್ಯ. ಕಳ್ಳಕಾಕರು, ಜೀವಾದಿಗಳು, ದೆವ್ವ-ಭೂತ-ಪೀಡೆ-ಕುಲೆಗಳನ್ನು ಕೂಡಾ ನಾಯಿಗಳು ದೂರವಿಡುತ್ತವೆಂಬ ನಂಬಿಕೆಯಿದೆ! ಮನುಷ್ಯರ ಕಣ್ಣಿಗೆ ಕಾಣದ ದೆವ್ವ ಭೂತಗಳು ನಾಯಿಗಳಿಗೆ ಕಾಣುತ್ತವಂತೆ, ಇದರಿಂದಾಗಿಯೇ ಅವು ರಾತ್ರಿಯಿಡೀ ಬೊಗಳುವುದಂತೆ! ನಮ್ಮ ಹಳ್ಳಿಯವರ ಈ ತರದ ಕಲ್ಪನೆಗಳಿಗೆ ಯಾವುದೇ ಆಧಾರವಿಲ್ಲವಾದರೂ ಇಂತವುಗಳನ್ನು ಕೇಳುವುದು ರೋಮಾಂಚನಕಾರಿಯಾಗಿತ್ತು. ಬ್ರಹ್ಮರಕ್ಕಸ, ಉಮ್ಮಲ್ತಿ, ಬೊಬ್ಬರ್ಯ, ಭೂತ, ಪ್ರೇತ ಮುಂತಾದವುಗಳು ಮನೆ ಜನರಿಗೆ, ಜಾನುವಾರುಗಳಿಗೆ ತೊಂದರೆ ಕೊಡಲು ಬಂದಾಗ ನಾಯಿಗಳು ಕಾಳಗ ಹೂಡಿ ಪೆಟ್ಟು ಮಾಡಿಕೊಂಡು ರಕ್ಷಣೆ ಕೊಟ್ಟ ಕಥೆಗಳನ್ನು ವರ್ಣಿಸುತ್ತಿದ್ದರು. ಈ ಘಟನೆಗಳ ಸತ್ಯಾಸತ್ಯತೆಗಳನ್ನು ಹೇಳಬಲ್ಲ ಮೊದಲ ಸಾಕ್ಷಿಯಾದ ನಾಯಿಗಳಿಗೆ ಬೊಗಳಲು ಬಿಟ್ಟರೆ ಬೇರೆ ಮಾತು ಬರುವುದಿಲ್ಲವಾದ್ದರಿಂದ ಏನೂ ಮಾಡುವಂತಿಲ್ಲ. ಎರಡನೆಯ ಸಾಕ್ಷಿಯಾದ ದೆವ್ವ ಭೂತಗಳು ಕಾಣಲೇ ಸಿಗುವುದಿಲ್ಲವಾದ್ದರಿಂದ; ಸಿಕ್ಕರೂ ಆತ್ಮಾಭಿಮಾನ ಬಿಟ್ಟು ತಾವು ಸೋತದ್ದನ್ನು ಒಪ್ಪಿಕೊಳ್ಳುವ ಸಂಭವ ಇಲ್ಲವಾದ್ದರಿಂದ ಕಥೆ ಹೇಳಿದವರು ಬಚಾವಾದರು!

ಹಳೆಯ ಕಾಲದ ಹಳ್ಳಿಮನೆಗಳ ಬದುಕನ್ನು ನಾವಿಂದು ಊಹಿಸಲೂ ಅಸಾಧ್ಯ. ವಿದ್ಯುತ್ತಿಲ್ಲದ ಕಾಳ ರಾತ್ರಿಗಳು, ಯಂತ್ರದ ಸಹಾಯವಿಲ್ಲದ ಜೀವನಶೈಲಿಯ ರಾಶಿ ರಾಶಿ ಕೆಲಸ ಕಾರ್ಯಗಳು, ಕೃಷಿ ಇವೆಲ್ಲದರ ನಡುವೆ ಪ್ರಾಣಿ, ಪಕ್ಷಿ, ಕೀಟಸಂಕುಲ, ವಿಷಜಂತುಗಳಿಂದ ಜೀವ-ಜೀವನವನ್ನು ರಕ್ಷಿಸಿ ಭದ್ರಪಡಿಸಿಕೊಳ್ಳಬೇಕಾದ ಸವಾಲುಗಳು! ಈ ಸಂದರ್ಭದಲ್ಲಿ ಮುಖ್ಯವಾಗಿ ಮನುಷ್ಯರ ನೆರವಿಗೆ ಒದಗುತ್ತಿದ್ದುದು ಸಾಕುಪ್ರಾಣಿಗಳೇ. ನಾಯಿ, ಬೆಕ್ಕು, ಜಾನುವಾರುಗಳು ಅನಿವಾರ್ಯವೆನಿಸಿದ್ದವು. ಮನೆಯಲ್ಲಿ ನಾಯಿ ಬೆಕ್ಕುಗಳಿದ್ದರೆ ಸಾಕಷ್ಟು ಧೈರ್ಯ. ‘ನಾಯಿಯೊಂದಿದ್ದರೆ ಒಂದಾಳು ಬಲ’ ಎಂಬ ಮಾತೇ ಇತ್ತು. ಜೋರಿನ ನಾಯಿಗಳಿರುವ ಮನೆ, ತೋಟದ ಕಡೆಗೆ ಹೆಜ್ಜೆ ಹಾಕಲು ಎಂತವರೂ ಹೆದರುತ್ತಾರೆ. ನಾಯಿ ಹೊರಗಿನ ಕಾವಲಿಗಾದರೆ, ಬೆಕ್ಕು ಒಳಗಿನ ಬಂದೋಬಸ್ತಿಗೆ! ಮೊದಲೇ ಹೇಳಿದಂತೆ ಕಳ್ಳರು, ದೆವ್ವ ಭೂತಗಳೊಂದಿಗೆ ಜೀವಾದಿಗಳನ್ನು ಓಡಿಸುವ ಜವಾಬ್ದಾರಿಯೂ ಇವುಗಳ ಮೇಲಿದೆ. ಹಂದಿ, ಹುಲಿ, ಚಿರತೆ, ಮುಂತಾದ ದೊಡ್ಡ ಮೃಗಗಳ ಜೊತೆಗೆ ಮಂಗ, ಗುಡ್ಡೆಹೆಗ್ಳ, ವಿಷದ ಹಾವುಗಳು, ಚೇಳುಗಳಿಂದಾಗುವ ಅಪಾಯ, ಬೆಳೆ ಹಾನಿಗಳನ್ನು ನಾಯಿಗಳು ತಪ್ಪಿಸುತ್ತವೆ. ಬೆಕ್ಕು ಮನೆಯೊಳಗಿನ ಇಲಿ ಮತ್ತು ವಿಷಜಂತುಗಳ ಭಯವನ್ನು ದೂರ ಮಾಡುತ್ತದೆ. ಹಾಗಾಗಿ ನಾಯಿ, ಬೆಕ್ಕುಗಳಿಲ್ಲದ ಮನೆಗಳೇ ಮೊದಲು ಇರಲಿಲ್ಲ. ನಮ್ಮನೆಯಲ್ಲಿ ಮೂರ್ನಾಲ್ಕು ಬೀಚು, ಮ್ವಾಳ ಬೆಕ್ಕುಗಳು ಸದಾ ಇದ್ದರೂ ಅಟ್ಟದಲ್ಲಿನ ಇಲಿಯನ್ನು ಹಿಡಿಯಲು ಹಂಯ್ಸಾರ್ ಹಾವು (ಕೇರೆ) ಆಗಾಗ ಬರುತ್ತಿತ್ತು. ಉಪ್ಪರಿಗೆಯಲ್ಲಿ ಮಲಗಿದ್ದಾಗ ಅಟ್ಟದಿಂದ ಹಾವಿನ ಪೊರೆ ನೇತಾಡುವುದನ್ನು ಕಂಡು ಹೆದರಿದ್ದು ಎಷ್ಟೋ ಸಲ. ಆದರೂ ಬೆಕ್ಕುಗಳಿವೆ ಎಂಬ ಸಮಾಧಾನ.

ಅಮ್ಮಮ್ಮ “ಅದ್ ಹಂಯ್ಸಾರ್ ಹಾವಿನ್ ಪೊರಿ ಮಕ್ಳೇ, ಅದೆಂತ ಮಾಡುದಿಲ್ಲೆ. ದೇವ್ರ್ ಹಾವ್ ಹಾಂಗೆಲ್ಲ ಮನೆಯೊಳ್ಗೆ ಬತ್ತಿಲ್ಲೆ” ಎನ್ನುತ್ತಿದ್ದರು. ನಾವೂ ಹಾಗೇ ನಂಬಿದ್ದೆವು. ಯಾವತ್ತೂ ಯಾವ ಅವಘಡಗಳೂ ಸಂಭವಿಸಲಿಲ್ಲ. ಆದರೆ ದೇವ್ರಹಾವು (ಸರ್ಪ) ಮನೆಯ ಹೊರಗೆ ಆಗಾಗ ಬರುತ್ತಿತ್ತು. ಆಗ ನಾಯಿ ಬೆಕ್ಕುಗಳು ಅದನ್ನು ಹೆದರಿಸದಂತೆ, ಕಚ್ಚಿ ಎಳೆಯದಂತೆ ಗಮನಿಸುತ್ತ ಆ ಹಾವಿಗೆ ಎಲ್ಲವೂ ಅರ್ಥವಾಗುತ್ತದೆ ಎಂಬಂತೆ ಗೌರವದಿಂದ “ಈ ಬದಿಗ್ ಎಂತಕ್ ಬಂದದ್ದ್ ನೀವ್, ಹೋಯ್ನಿ ಬದಿಮ್ಯಾಲೆ… ಇಲ್ಲೆಲ್ಲ ಎಂಜ್ಲ್, ಮುಸ್ರಿ, ಗೌಲ್ ಇತ್ತ್. ಮಕ್ಕಳ್ ಇದ್ದೋ ಇಲ್ಲ್… ಹೋಯ್ನಿ…” ಎನ್ನುತ್ತಿದ್ದರು. ನಿಧಾನಕ್ಕೆ ಹರಿದು ಹೋಗಿ ತನ್ನ ಪಾಡಿಗೆ ಮರೆಯಾಗುವ ತನಕ ಸರ್ಪವನ್ನು ಕಾಯುತ್ತಲೇ ಇರಬೇಕಿತ್ತು. ಒಂದು ವೇಳೆ ಅದು ಕಚ್ಚಿದರೆ ಜೀವನ್ಮರಣದ ಪ್ರಶ್ನೆ ತಾನೇ?! ಈಗ ಮುದೂರಿಯಲ್ಲಿ ನಾಯಿಕುರ್ಕಗಳ ಹಾವಳಿ ಅತಿಯಾಗಿದೆ. ಎಷ್ಟೆಂದರೆ ನಾಯಿಗಳಿಗೆ ಗೂಡು ಮಾಡಿ ರಾತ್ರಿ ಹೊತ್ತು ಅದರೊಳಗೆ ಹಾಕಿ ಭದ್ರಪಡಿಸುವಷ್ಟು! ರಾತ್ರಿ ಕಾವಲು ಕಾಯಬೇಕಾದ ನಾಯಿ ಈಗ ಗೂಡಿನೊಳಗೆ! ಬೆಕ್ಕುಗಳನ್ನೂ ಕುರ್ಕಗಳು ಕಚ್ಚಿಕೊಂಡು ಹೋಗುವುದರಿಂದ ಅವುಗಳನ್ನು ಕೋಣೆಯೊಳಗೆ ಬಂಧಿಸಿ ಇಡಬೇಕಾಗಿದೆ.!

ಒಂದು ವಿಶೇಷ ಸಂಗತಿಯೆಂದರೆ, ನಮ್ಮೂರಲ್ಲೂ ‘ನಾಯಿಗುತ್ತಿ’ ಮತ್ತು ‘ಹುಲಿಯ’ ಇದ್ದದ್ದು! ನಮ್ಮೂರು ಮುದೂರಿಗೆ ಹೊಂದಿಕೊಂಡು ಇರುವ ಚೇರ್ಕಿಯಲ್ಲಿ ‘ಗುತ್ತಿ’ ಎಂದರೆ ಹೂಹಾಂಡರ ಮನೆ ಇತ್ತು. ಚೇರ್ಕಿಯ ‘ಹುಲಿಯ’ ಕೆಂಪು (ಕಂದು) ಬಣ್ಣದ, ಜೂಲು ರೋಮ ಹೊಂದಿದ ದಷ್ಟಪುಷ್ಟವಾದ ಎತ್ತರದ ನಾಯಿ. ಇಲ್ಲಿಯ ಗುತ್ತಿ ಕುಳ್ಳು ಆಳಲ್ಲ; ಒಳ್ಳೇ ಆಳ್ತನ ಹೊಂದಿದ ವ್ಯಕ್ತಿ. ಈ ಇಬ್ಬರೂ ದಿನವೂ ಎರಡೂವರೆ ಮೈಲಿ ದೂರದ ಹಾಲಾಡಿ ಪೇಟೆಗೆ ಹೋಗಿ ಬರುವುದು ಮಾಮೂಲಾಗಿತ್ತು. ಆಳೆತ್ತರ ಪೈರು ಬೆಳೆದ ಗದ್ದೆಗಳ ನಡುವಿನ ಕಂಟದಲ್ಲಿ ಈ ಜೋಡಿ ನಡೆದುಹೋಗುವುದನ್ನು ಕಾಣುವುದು ನಮಗೆಲ್ಲ ವಿಸ್ಮಯ. ಹೂಹಾಂಡರ ಒಂದು ಕೈಯ್ಯಲ್ಲಿನ ಮೂರು ಬೆರಳುಗಳು ಇರಲಿಲ್ಲ. ಯಾವುದೋ ಬಸ್ಸಿನ ಅಪಘಾತದಲ್ಲಿ ಬೆರಳು ಕಳೆದುಕೊಂಡದ್ದಾಗಿ ಊರಿನವರು ಮಾತಾಡುತ್ತಿದ್ದರು. ಆದರೆ ಅದೇ ಕೈಯ್ಯಲ್ಲಿ ಮಡಕೆ ತಯಾರಿಸುವ ನೈಪುಣ್ಯದ ಕೆಲಸವನ್ನು ಮಾಡುತ್ತಿದ್ದುದು ನಿಜಕ್ಕೂ ಹೆಚ್ಚುಗಾರಿಕೆ. ಶ್ರಮದ ಕೆಲಸವನ್ನು ಮಾಡಿ ಮುಗಿಸಿ ದಿನವೂ ಸಂಜೆ ಪೇಟೆಗೆ ತಿರುಗಲು ಹೋಗುವುದು ಹೂಹಾಂಡ ಮತ್ತು ಕೆಂಪರ ದಿನಚರಿ. ಆ ಕಾಲದಲ್ಲಿ ಹೀಗೆ ನಾಯಿಯನ್ನು ಮುಂದಿಟ್ಟುಕೊಂಡು ಅಲೆಯುವ ಜನ ಸುತ್ತಮುತ್ತಲಲ್ಲಿ ಬೇರೆ ಯಾರೂ ಇದ್ದಿರಲಿಲ್ಲ.

ಹೆಚ್ಚಿನವರು ನಾಯಿಗಳನ್ನು ಕಟ್ಟಿಹಾಕಿ ಹೊರ ಹೊರಡುತ್ತಿದ್ದರು. ಕೆಂಪನಿಗಂತೂ ಒಡೆಯನ ಜೊತೆ ಓಡಾಡುವುದೆಂದರೆ ಬಹಳ ಖುಷಿ; ಬಾಲ ಕುಣಿಸುತ್ತ ಸಾಗುತ್ತಿತ್ತು. ಎಲ್ಲಾ ನಾಯಿಗಳೂ ಹೀಗೇ. ಮನೆಯವರು ಹೊರ ಹೊರಟರೆ ಸಾಕು, ಅವರೊಂದಿಗೆ ಹೋಗುವ ಉಮೇದು. ಅಪರೂಪಕ್ಕಾದರೂ ಜೊತೆಗೆ ಬರಲು ಬಿಟ್ಟರೆ ಎಂಥಾ ಸಂಭ್ರಮ… ಕುಣಿದು ಕುಪ್ಪಳಿಸುತ್ತಾ, ಅಲ್ಲಿ ಇಲ್ಲಿ ಓಡಾಡುತ್ತಾ, ಮೂಸುತ್ತ ಜಗತ್ತಿನ ದಾರಿಗಳೆಲ್ಲ ತನಗೇ ತಿಳಿದಿದೆ ಎನ್ನುವಂತೆ ಮುಂದೆ ಮುಂದೆ ಓಡುವುದು! ಹಿಂದಕ್ಕೆ ಬಂದು, ನಿಧಾನಕ್ಕೆ ನಡೆಯುತ್ತಿರುವ ಮನೆಯವರಿಗೆ ಬೇಗ ಬೇಗ ಬನ್ನಿ ಎಂದು ಒತ್ತಾಯಿಸುವುದು! ಬಸ್ಸಿಗೆ ಹತ್ತುವ ಮನೆಮಂದಿಯನ್ನು ಬೀಳ್ಕೊಡಲು ಬಂದು ಅವರು ತೆರಳುವಾಗ ಸಪ್ಪೆ ಮುಖದೊಂದಿಗೆ ನಿಲ್ಲುವ ನಾಯಿಗಳ ದೃಶ್ಯ ಆಗಾಗ ಕಾಣಲು ಸಿಗುತ್ತಿರುತ್ತದೆ. ಕೆಲವು ನಾಯಿಗಳಂತೂ ತಾವೂ ಬಸ್ಸಿನೊಳಗೆ ಹೋಗಲು ಕಾತರಿಸುತ್ತವೆ. ಆಗ ಮನೆ ಜನರಿಗೂ ಅಗಲಿಕೆಯ ನೋವು; ಇರುಸುಮುರುಸು! ನಮ್ಮ ಪಾಪಣ್ಣ (ಪಪ್ಪು) ಮನೆ ಮಕ್ಕಳು ಶಾಲೆಗೆ ಹೋದಾಗ ಅವರ ಹಿಂದೇ ಹೋಗಿ ಕ್ಲಾಸಿನಿಂದ ಹೊರಗೆ ಜಗಲಿಯಲ್ಲಿ ಕಾಯುತ್ತಾ ಕುಳಿತಿರುತ್ತಿತ್ತು. ಆಗಾಗ ಕಿಟಕಿಯಲ್ಲಿ ನೋಡಿ ನೋಡಿ ಮಕ್ಕಳು ಅಲ್ಲೇ ಇದ್ದಾರೆಂದು ಖಾತ್ರಿ ಪಡಿಸಿಕೊಳ್ಳುತ್ತಲೂ ಇತ್ತಂತೆ! ನಮ್ಮ ಮುದೂರಿ-ಚೇರ್ಕಿ ಬೈಲಿನ ಗುತ್ತಿ, ಕೆಂಪರು ಊರಿಗೊಂದು ರೂಪಕದಂತೆ ಇದ್ದದ್ದಂತೂ ಸುಳ್ಳಲ್ಲ. ಸ್ನೇಹಮಯಿ ವ್ಯಕ್ತಿತ್ವದ ಇವರಿಬ್ಬರು ನೆನಪಿನ ಚಿತ್ರಗಳಲ್ಲಿ ಉಳಿದುಬಿಟ್ಟಿದ್ದಾರೆ.

ಈ ಸಂದರ್ಭದಲ್ಲಿ ಮುಖ್ಯವಾಗಿ ಮನುಷ್ಯರ ನೆರವಿಗೆ ಒದಗುತ್ತಿದ್ದುದು ಸಾಕುಪ್ರಾಣಿಗಳೇ. ನಾಯಿ, ಬೆಕ್ಕು, ಜಾನುವಾರುಗಳು ಅನಿವಾರ್ಯವೆನಿಸಿದ್ದವು. ಮನೆಯಲ್ಲಿ ನಾಯಿ ಬೆಕ್ಕುಗಳಿದ್ದರೆ ಸಾಕಷ್ಟು ಧೈರ್ಯ. ‘ನಾಯಿಯೊಂದಿದ್ದರೆ ಒಂದಾಳು ಬಲ’ ಎಂಬ ಮಾತೇ ಇತ್ತು. ಜೋರಿನ ನಾಯಿಗಳಿರುವ ಮನೆ, ತೋಟದ ಕಡೆಗೆ ಹೆಜ್ಜೆ ಹಾಕಲು ಎಂತವರೂ ಹೆದರುತ್ತಾರೆ. ನಾಯಿ ಹೊರಗಿನ ಕಾವಲಿಗಾದರೆ, ಬೆಕ್ಕು ಒಳಗಿನ ಬಂದೋಬಸ್ತಿಗೆ!

ಆಗೆಲ್ಲ ಮನೆಗೆ ಎರಡರಂತೆ ನಾಯಿಗಳಿರುತ್ತಿದ್ದುದು ಸಾಮಾನ್ಯ. ಧೈರ್ಯಕ್ಕೆ ಜೊತೆಯಿರಲಿ ಎಂದು ಸಾಕುತ್ತಿದ್ದರು. ಇಂಥಾ ನಾಯಿಗಳ ಕೂಗು ಬಯಲು, ಕಾಡಲ್ಲೆಲ್ಲ ಮೊಳಗಿ ರಾತ್ರಿಯ ನಿರ್ಭೀತ ನಿದ್ದೆ ಸಾಧ್ಯವಾಗಿತ್ತು. ನಮ್ಮನೆಯಲ್ಲಿ ನಾಯಿ ಸಾಕುವುದು ಅಮ್ಮಮ್ಮನಿಗೆ ಯಾಕೋ ಇಷ್ಟವಿರಲಿಲ್ಲ. ನಮಗೆ ಮಕ್ಕಳಿಗಾದರೋ ತಡೆಯಲಾಗದ ಆಸೆ. ಕಾಡಿ, ಬೇಡಿ ಒಪ್ಪಿಸಿ ಕಾಲಾನುಕಾಲಕ್ಕೆ ಮೂರು ನಾಯಿಮರಿಗಳನ್ನು ತಂದು ಇನ್ನಿಲ್ಲದಂತೆ ಆರೈಕೆ, ಪ್ರೀತಿ ಮಾಡಿ ಪೋಷಿಸಿದ್ದೆವು. ನಾಯಿಗಳಿಗೆ ಇಡುತ್ತಿದ್ದ ಸಾಮಾನ್ಯ ಹೆಸರುಗಳೆಂದರೆ, ಕರಿಯ, ಕಾಳ, ಹಂಡ, ಹುಂಡ, ಗುಂಡ, ಮೋತಿ, ಕೆಂಪ, ಟೀಪು, ಕಾಳಿ, ಜೂಲಿ, ಬೆಳ್ಳಿ ಮುಂತಾದವು. ಇದರಲ್ಲಿ ಹೆಚ್ಚಿನವು ಬಣ್ಣ, ಆಕಾರಗಳಿಗೆ ಅನ್ವಯವಾಗುವಂತವು. ಆದರೆ ಟೀಪು ಎಂಬ ಹೆಸರನ್ನು ಬಹಳ ಎಚ್ಚರಿಕೆಯಿಂದ ಗಮನಿಸಬೇಕಾಗಿದೆ. ಈ ಹೆಸರಿನ ಮೂಲ ‘ಟಿಪ್ಪು’ ಎನ್ನುವುದು ಹೌದಾದರೆ ಧಾರ್ಮಿಕ ಅಸಹಿಷ್ಣುತೆಯ ಒಂದು ಉದಾಹರಣೆಯಾಗಿ ಇದು ತೋರುತ್ತದೆ; ಇದಕ್ಕೆ ಪೂರಕವಾಗಿ ಕೀಳು (ಮೇಲು ಪದದ ವಿರುದ್ಧಾರ್ಥವಾಗಿ) ಅರ್ಥ ಕೊಡುವ ನಾಯಿಸೋಣೆ, ನಾಯಿಸೊಲಂಕೆ (ತುಳು), ನಾಯಿಕೊಡೆ, ನಾಯಿಸಂಪಿಗೆ ಮುಂತಾದ ಪದಗಳನ್ನು ನೋಡಬಹುದು. ನಮ್ಮದೊಂದು ನಾಯಿಯ ಹೆಸರು ಕಾಳ. ಒಮ್ಮೆ ಊರಿಗೆ ಹುಚ್ಚುನಾಯಿಯೊಂದು ಬಂದು ಹೆಚ್ಚಿನ ನಾಯಿಗಳಿಗೆಲ್ಲ ಕಚ್ಚಿ ಹೋಗಿದೆ ಎಂಬ ಸುದ್ದಿ ಹಬ್ಬಿತು. ಆ ಹುಚ್ಚು ನಾಯಿಯನ್ನು ನೋಡಿದವರೂ ಇದ್ದರು. ಅದೇ ಸಂದರ್ಭದಲ್ಲಿ ಕಾಳನಿಗೆ ಹುಷಾರಿಲ್ಲದಾಗಿ ಊಟ ಬಿಟ್ಟಿತು. ನಾನದನ್ನು ಸದಾ ಮುದ್ದು ಮಾಡುತ್ತಿದ್ದೆ; ಬೇಗನೇ ಗುಣವಾಗಲಿ ಎಂದು ಹಾರೈಸುತ್ತಿದ್ದೆ. ಆದರೆ ಮೂರ್ನಾಲ್ಕು ದಿನದಲ್ಲಿ ಅದಕ್ಕೂ ಹುಚ್ಚು ನಾಯಿ ಕಚ್ಚಿರಬಹುದೆಂದು ಶಂಕಿಸಿ, ಮಾವಿನ ಮರದಡಿ ಕಟ್ಟಿ ಹಾಕಿದರು. ಅದರ ಹತ್ತಿರ ಹೋಗದಂತೆ ಹಿರಿಯರು ನಿರ್ಬಂಧಿಸಿದರು. ಆದರೆ ಕಾಳ ಸರಿಯಾಗಿಯೇ ಇತ್ತು; ಅದಕ್ಕೆ ನಮ್ಮೆಲ್ಲರ ಪರಿಚಯವೂ ಸಿಗುತ್ತಿತ್ತು. ವೇದನೆಯ ಕಣ್ಣುಗಳಿಂದ ನೋಡುತ್ತಿತ್ತು. ದೂರದಿಂದ ನೀರು ಕೊಟ್ಟರೆ ಚೂರೇ ಚೂರು ಚಪ್ಪರಿಸುತ್ತಿತ್ತು. ಆಮೇಲೆ ನೀರನ್ನೂ ತಿರಸ್ಕರಿಸಿತು. ಆ ಕಾಲದಲ್ಲಿ ಹುಚ್ಚುನಾಯಿ ಕಚ್ಚಿದ ನಾಯಿಗಳಿಗೆ ಚಿಕಿತ್ಸೆ ಕೊಡಿಸುವ ಮಾತು ನಮ್ಮ ಹಳ್ಳಿಗಳಲ್ಲಿ ಇರಲಿಲ್ಲ. ಹೀಗೇ ಐದಾರು ದಿನ ಕಳೆಯುವಷ್ಟರೊಳಗೆ ಊರಿನ ಕೆಲವರು ಸೇರಿ ಒಂದು ನಿರ್ಧಾರಕ್ಕೆ ಬಂದರು; ಈಗಾಗಲೇ ಮೂರ್ನಾಲ್ಕು ನಾಯಿಗಳಿಗೆ ಮಾಡಿದ್ದನ್ನು ಕಾಳನಿಗೂ ಮಾಡುವುದು ಎಂದು.

ಮುಂದಾಗುವ ದುಷ್ಪರಿಣಾಮಗಳನ್ನು ಚಿಂತಿಸಿ ಇಂಥಾ ನಿರ್ಧಾರ ಕೈಗೊಂಡಿದ್ದರು. ಹುಚ್ಚುನಾಯಿಯ ಎಂಜಲು ತಾಕಿದರೂ ಮನುಷ್ಯರಿಗೆ ಆ ಕಾಯಿಲೆ ಬರುತ್ತದೆ ಎಂಬ ಅಪಾರ ಹೆದರಿಕೆಯಿತ್ತು. ಹುಚ್ಚುನಾಯಿ ಕಚ್ಚಿದರೆ ನಾಯಿಯಂತೆಯೇ ಬೊಗಳಿ ಬೊಗಳಿ ಹುಚ್ಚರಾಗಿ ನರಳಿ ಮನುಷ್ಯರು ಸಾಯುತ್ತಾರೆಂಬ ಪ್ರತೀತಿ ಊರಿನಲ್ಲಿ ಹರಡಿತ್ತು. ಹಾಗಾಗಿ ಕಾಳನನ್ನು ಉಸಿರುಕಟ್ಟಿಸಿ ಕೊಲ್ಲುವುದೆಂದು ಯೋಚಿಸಿದರು. “ಅಯ್ಯೋ, ಬೇಡ ಬೇಡ” ಎಂದು ಎಷ್ಟು ಅತ್ತರೂ ನಿರ್ಧಾರ ಬದಲಾಗಲಿಲ್ಲ. ಒಂದು ದಿನ ಹತ್ತಿರದ ಮನೆಯ ಅನುಭವಿ ವ್ಯಕ್ತಿಯೊಬ್ಬರು ಬಲವಾದ ಕೋಲುಗಳ ಮೂಲಕ ಉಸಿರುಕಟ್ಟಿಸಿ ಕಾಳನನ್ನು ಕೊಂದರು! ಸುಮಾರು ಮೂವತ್ತು ವರ್ಷಗಳ ನಂತರವೂ ಅಂದಿನ ನೋವು ನನ್ನೊಳಗೆ ಚೂರೇ ಚೂರೂ ತೆಳುವಾಗುತ್ತಿಲ್ಲ. ಆ ದಿನ ಮನೆಯೊಳಗೆ ಓಡಿ ಹೋಗಿ ಬಿಕ್ಕಿ ಬಿಕ್ಕಿ ಅತ್ತ ಕ್ಷಣಗಳು ಈಗಲೂ ಕಣ್ಣನ್ನು ತೇವಗೊಳಿಸುತ್ತವೆ…. ಆಮೇಲೆ ಸುಮಾರು ಸಮಯದ ನಂತರ ಅಪ್ಪಯ್ಯ ಆಂಧ್ರದಿಂದ ತಂದು ಸಾಕಿದ ‘ಟೈಗರ್’ ಮನೆಯ ಸದಸ್ಯನಾಗಿ ಹದಿಮೂರು ವರ್ಷಗಳ ಕಾಲ ನಮ್ಮನ್ನು ಸಂತಸದಲ್ಲಿಟ್ಟಿತ್ತು.

ಜಿಲ್ಲಾ ಕೇಂದ್ರವಾಗಿರುವ ಊರೊಂದರಲ್ಲಿ ಇದ್ದ ದಿನಗಳು. ಮಗನಿಗೆ ಎಂಟ್ಹತ್ತು ತಿಂಗಳಾಗಿತ್ತಷ್ಟೇ. ಆಗ ತಾನೇ ಅಲ್ಲಿಗೆ ಹೋಗಿದ್ದೆವು. ಹೊಸ ಪರಿಸರ, ಜನಜೀವನಕ್ಕೆ ಹೊಂದಿಕೊಳ್ಳುತ್ತಿದ್ದ ದಿನಗಳು. ಅಚಾನಕ್ಕಾಗಿ ಮನೆಯ ಎಲ್ಲರಿಗೂ ಜ್ವರ ಬಂತು. ಅದು ವಿಚಿತ್ರ ಜ್ವರ. ಎಷ್ಟು ಸಲ ಡಾಕ್ಟ್ರಿಗೆ ತೋರಿಸಿದರೂ ಗುಣವಾಗಲಿಲ್ಲ. ಮಗುವಿನ ಮೈ ಮುಟ್ಟಲಾಗದಷ್ಟು ಸುಡು ಜ್ವರ. ನಮಗೆ ಗಾಬರಿ, ಆತಂಕ. ಗಂಜಿ ಬೇಯಿಸಿ ತಿನ್ನಲೂ ಆಗದಷ್ಟು ನಿಶ್ಯಕ್ತಿ. ಹೀಗೆ ಹದಿನೈದು ಇಪ್ಪತ್ತು ದಿನ ಸತಾಯಿಸಿದ ಜ್ವರ ಕೊನೆಗೆ ಪಾಪುಗೂ, ನನಗೂ ಸ್ವಲ್ಪ ಬಿಡುಗಡೆ ನೀಡಿತು. ಆದರೆ ಇವರಿಗೆ ಜ್ವರ ಬಿಡಲೇ ಇಲ್ಲ. ಟೆಸ್ಟ್‌ಗಳನ್ನು ಮಾಡಿಸಿದರೂ ಮಲೇರಿಯಾ, ಟೈಫಾಯ್ಡ್ ಮುಂತಾದುವೇನೂ ಕಾಣಲಿಲ್ಲ. ಯಾವಾಗಲೂ ಆರೋಗ್ಯವಾಗಿ ದಷ್ಟಪುಷ್ಟವಾಗಿದ್ದ ಅವರ ಜೀವ ಸೊರಗಿ ಗುರುತೇ ಸಿಗದಂತಾದರು. ಇಂಥಾ ಪರಿಸ್ಥಿತಿಯಲ್ಲಿ ಒಂದು ದಿನ ನಡುರಾತ್ರಿ ಕಳೆದ ಸಮಯ. ಎಲ್ಲರೂ ಜ್ವರದ ನಿದ್ದೆಯಲ್ಲಿದ್ದೆವು! ಆಗ ನೀರವವನ್ನು ಸೀಳಿಕೊಂಡು ಬೀದಿಯಲ್ಲಿ ವಿಚಿತ್ರ ಅಟ್ಟಹಾಸದ ಕೂಗೊಂದು ಕೇಳಿಸಿತು! ಆ ಕೂಗು ಹೇಗಿತ್ತೆಂದರೆ, ಕಿವಿಯಿಂದ ಮೆದುಳೊಳಗೆ ಹೊಕ್ಕು ಇಡೀ ಮೈಯ್ಯನ್ನು ಆಕ್ರಮಿಸಿ ಚಳಿ ಹುಟ್ಟಿಸಿತು. ಹಾರಿಬಿದ್ದು ಚಾಪೆಯಲ್ಲಿ ಎದ್ದು ಕುಳಿತೆ. ಎಲ್ಲ ಕಡೆ ಕಡುಕತ್ತಲು. ಮಗುವನ್ನು ಬಿಗಿಯಾಗಿ ಅಪ್ಪಿಕೊಂಡೆ. ಎದ್ದು ದೀಪ ಹಾಕಬೇಕೆಂದರೆ ಕೈಕಾಲೇ ಆಡಲಿಲ್ಲ. ಕೂಗು ವಿಧವಿಧವಾಗಿ ಮುಂದುವರಿದಿತ್ತು. ಪಕ್ಕದ ಮನೆಯ ಜಯರಾಜಮ್ಮ ಹೇಳುತ್ತಿದ್ದ; ಮನೆ ಮುಂದಿನ ನೀರಿನ ತೊಟ್ಟಿಯ ಆಸುಪಾಸಿನ ಹೊಂಗೆ, ಬೇವಿನ ಗಿಡಗಳಲ್ಲಿ ‘ನೆಲೆಸಿರುವ’ ದೆವ್ವ, ಭೂತಗಳೇ ಕೂಗುತ್ತಿರಬೇಕು ಎಂಬ ಭ್ರಮೆಯಾಯಿತು! ಎಂದೂ ಭೂತಗಳನ್ನು ನಂಬದೇ ಇರುವವಳು ಆವತ್ತಿನ ಸ್ಥಿತಿಯಲ್ಲಿ ಹೆದರಿಕೆಯಿಂದ ನಡುಗಿಹೋದೆ! ನಿಜವಾಗಿಯೂ ಆ ಸಂದರ್ಭದಲ್ಲಿ ಧೈರ್ಯ ತಂದದ್ದು ಬೀದಿನಾಯಿಗಳ ಬೊಗಳು! ಆರಂಭದಲ್ಲಿ ರೌರವ ಕೂಗಿಗೆ ಅವೂ ಮರಗಟ್ಟಿದವೋ ಏನೋ! ಆದರೆ ಆಮೇಲೆ ಗುಂಪು ಗುಂಪಾಗಿ ಕೂಗತೊಡಗಿ ಸಮಾಧಾನ ತಂದವು. ಸುಮಾರು ಗಂಟೆಯ ಕಾಲ ಆಗಾಗ ಕೇಳಿಬರುತ್ತಿದ್ದ ಕೂಗು ಕ್ರಮೇಣ ದೂರಾಯಿತು. ಕೂಗಿನ ಸತ್ಯಾಸತ್ಯತೆ ಏನಿರಬಹುದೆಂದು ಆನಂತರ ಯೋಚಿಸಿದಾಗೆಲ್ಲ ಮನುಷ್ಯ ಜಗತ್ತಿನ ಕಾಳ ವ್ಯವಹಾರದ; ಸಭ್ಯ ನಾಗರಿಕರಿಗೆ ಭಯ ಹುಟ್ಟಿಸುವ ಇರಾದೆಯ… ವಿವಿಧ ಸಾಧ್ಯತೆಗಳು ತೆರೆದುಕೊಂಡು ಬೆಚ್ಚಿಬೀಳುವಂತಾಯಿತು!

ಹಳ್ಳಿಗಳಲ್ಲಿ ನಾಯಿಗಳಿಗೆ ವಿಶೇಷ ಮರ್ಯಾದೆಯಿತ್ತು; ಈಗಲೂ ಇದೆ. ಒಂದು ನಾಯಿಮರಿ ಅಥವಾ ಬೆಕ್ಕಿನಮರಿಯನ್ನು ದೊಡ್ಡ ಮಾಡಬೇಕಾದರೆ ಎಷ್ಟು ಕಷ್ಟವಿದೆ ಎಂದು ಹಳ್ಳಿಗರಿಗೇ ಗೊತ್ತು! ಮೊದಲನೆಯದಾಗಿ ವಿಧ ವಿಧ ಕಾಯಿಲೆಗಳು. ಒಂದೊಂದು ಸಮಯದಲ್ಲಿ ನಾಯಿ-ಬೆಕ್ಕುಗಳಿಗೆ ಕಾಯಿಲೆ ಬರುವುದು ವಿಪರೀತ. ಇದನ್ನು “ಅವರ ಮನೆಯಲ್ಲಿ ನಾಯಿ ಆಗುವುದಿಲ್ಲ”, “ಬೆಕ್ಕು ಆಗುವುದಿಲ್ಲ” ಮುಂತಾಗಿ ನಂಬಲಾಗುತ್ತದೆ! ಆಗೆಲ್ಲ ಮನುಷ್ಯರಿಗೇ ಸರಿಯಾದ ಆಸ್ಪತ್ರೆಗಳು ಲಭ್ಯವಿರಲಿಲ್ಲ; ಇನ್ನು ನಾಯಿ ಬೆಕ್ಕುಗಳಿಗೆಲ್ಲಿರುತ್ತದೆ? ನಾಯಿಗಳಿಗೆ ಆಗಾಗ ‘ಟೀ ಕಣ್ಣ್’ ಹಾಕುತ್ತಿದ್ದರು. ಇದರಿಂದ ಅವುಗಳ ಹೊಟ್ಟೆನೋವು, ಹೊಟ್ಟೆಹುಳ ಕಮ್ಮಿಯಾಗುತ್ತದೆಂದು ತಿಳುವಳಿಕೆ. ಬೆಕ್ಕುಗಳ ಅನ್ನಕ್ಕೆ ತೆಂಗಿನೆಣ್ಣೆ ಮಿಶ್ರಮಾಡಿ ಕೊಡುತ್ತಿದ್ದರು, ಕಾಯಿತುರಿಯನ್ನು ತಿನ್ನಲು ಪ್ರೇರೇಪಿಸುತ್ತಿದ್ದರು. ಈ ನಾಯಿ ಬೆಕ್ಕುಗಳೂ ಏನೂ ಕಮ್ಮಿ ಪೈಕಿಯಲ್ಲ. ಹೊರಗಡೆ ಹೋದೊಡನೆ ಒಳ್ಳೇ ಎಳೇ ಹುಲ್ಲನ್ನು ಹುಡುಕಿ ಹುಡುಕಿ ತಿಂದು ದುಳ್ಸಿ ದುಳ್ಸಿ ವಾಂತಿ ಮಾಡಿಕೊಂಡು ಸ್ವಯಂ ವೈದ್ಯ ಮಾಡುವುದನ್ನು ಬಲ್ಲವು! ಹೊಟ್ಟೆನೋವು ಇದ್ದಾಗ ಹೀಗೆ ಮಾಡುತ್ತವಂತೆ! ‘ಹಾಗಾದರೆ ಬೆಕ್ಕಿನ ಜಾತಿಯ ಹುಲಿಯೂ ಇದೇ ತರ ಹುಲ್ಲು ತಿಂದು ವಾಂತಿ ಮಾಡುತ್ತದಾ?, ‘ಹುಲಿಯೂ ಹುಲ್ಲು ತಿನ್ನುತ್ತದಾ?’ ಎಂಬ ಕೀಟಲೆಯ ಪ್ರಶ್ನೆ ಆಗಾಗ ತಲೆಯೊಳಗೆ ಓಡಾಡುತ್ತಿತ್ತು!

ನಾಯಿ, ಬೆಕ್ಕುಗಳಿಗೆ ಅವುಗಳ ಆಹಾರವಾದ ಮೀನು, ಮಾಂಸವನ್ನು ಹಾಕುವುದು ಸರಿಯಾದ ಕ್ರಮ. ಆದರೆ ಸಸ್ಯಾಹಾರಿಗಳ ಮನೆಯಲ್ಲಿ ಇವು ಇರುವುದಿಲ್ಲವಾದ್ದರಿಂದ ಅನ್ನ, ಸಾರು, ಸಾಂಬಾರು, ಪಲ್ಯ, ಕಡುಬು, ದೋಸೆ ಹೀಗೆ ಹಾಕಿದ್ದನ್ನು ತಿಂದು ಹೋಗುವುದನ್ನು ಇವು ಒತ್ತಾಯಪೂರ್ವಕವಾಗಿ ರೂಢಿ ಮಾಡಿಕೊಂಡಿವೆ. ನಮ್ಮನೆಯಲ್ಲಿದ್ದ ನಾಯಿಯೊಂದು ಹಲಸು, ಮಾವು ಹೀಗೆ ಹೆಚ್ಚಿನ ಹಣ್ಣುಗಳನ್ನು ತಿನ್ನುತ್ತಿತ್ತು. ಬೆಕ್ಕುಗಳು ಕೂಡಾ ದೊಣ್ಣೆಮೆಣಸು, ದಿವ್‌ಹಲಸು, ಅಲಸಂದೆ, ಬಸಳೆ ಹೀಗೆ ತರಕಾರಿಗಳನ್ನು ಆಸೆಪಟ್ಟು ತಿನ್ನುವುದನ್ನು ಕಂಡು ಕೇಳಿದ್ದೇನೆ! ಎಷ್ಟೋ ಜನರು ತಮ್ಮ ಊಟದ ಪಾಲಿನಲ್ಲೇ ನಾಯಿ, ಬೆಕ್ಕುಗಳಿಗೂ ಸ್ವಲ್ಪ ಹಾಕಿ ಅಪಾರ ಪ್ರೀತಿಯಿಂದ ಸಾಕುತ್ತಾರೆ. ಬೇಕು ಬೇಕಾದಂತೆ ಅವುಗಳಿಗೆ ಮೀನು ಮಾಂಸ ತಂದುಹಾಕುವಷ್ಟು ಆರ್ಥಿಕ ಚೈತನ್ಯ ಇರುವುದಿಲ್ಲ. ಬೆಕ್ಕುಗಳಾದರೆ ಪರವಾಗಿಲ್ಲ, ತಾವೇ ಇಲಿ, ಕಪ್ಪೆ, ಹಾವು, ಹರಣೆ ಮುಂತಾದುವನ್ನೆಲ್ಲ ಬೇಟೆಯಾಡಿ ಸಾಕಷ್ಟು ಸಂಪಾದಿಸುತ್ತವೆ. ಕೆಲವು ನಾಯಿಗಳೂ ಕಾಡಿಗೆ ಹೋಗಿ ಮೊಲ, ಹಕ್ಕಿ, ಮನೆಹತ್ತಿರದ ಗುಡ್ಡೆಹೆಗ್ಣ ಮೊದಲಾದುವನ್ನು ಹಿಡಿದು ತಿನ್ನುತ್ತವೆ. ಏನೇ ಕೊಟ್ಟರೂ ಬಿಟ್ಟರೂ ನಾಯಿಗಳಂತೂ ತಮ್ಮ ಒಡೆಯರನ್ನು ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತವೆ. ಮನೆಮಂದಿ ಸತ್ತಾಗ ತಾನೂ ಊಟಬಿಟ್ಟು ಮರಣಿಸಿದ ನಾಯಿಗಳ ಉದಾಹರಣೆಗಳನ್ನೂ ಆಗಾಗ ಕೇಳಿದ್ದೇವೆ! ಒಂದು ಸಲ ಒಬ್ಬ ವ್ಯಕ್ತಿಯ ವಾಸನೆಯನ್ನು ಸರಿಯಾಗಿ ಗ್ರಹಿಸಿಕೊಂಡರೆ ಮತ್ತೆ ಕೊನೆಯ ತನಕವೂ ಅದನ್ನು ಮರೆಯುವುದಿಲ್ಲವಂತೆ ಇವು! ನಾಯಿಗಳ ಗ್ರಹಣ ಶಕ್ತಿ, ವಾಸನಾ ಶಕ್ತಿ, ನಿಷ್ಠಾವಂತ ಗುಣ ಅದ್ಭುತ! ಹಾಗೇ ಬುದ್ಧಿವಂತ, ಭಾವನಾತ್ಮಕವಾಗಿ ಸೂಕ್ಷ್ಮವಾಗಿರುವ ಪ್ರಾಣಿ. ನಾಯಿಗಳ ಆಟ, ಚಿನ್ನಾಟಗಳೂ, ಮೈಯ್ಯನ್ನೆಲ್ಲ ನೆಕ್ಕಿ ಮುದ್ದು ಮಾಡುವ ಸ್ವಭಾವವೂ ವಿಶಿಷ್ಟ! ಆದರೆ ನಾಯಿಯ ಪ್ರಾಮಾಣಿಕತೆಯನ್ನು ತನ್ನ ಸ್ವಾರ್ಥಕ್ಕಾಗಿ ಬಳಸಿಕೊಂಡು ಈ ಜೀವವನ್ನು ಮೂಲೆಗುಂಪು ಮಾಡಿ ದಯನೀಯ ಪರಿಸ್ಥಿತಿಗೆ ದೂಡಿದ ಕೀರ್ತಿ(ಅಪ) ಬುದ್ಧಿವಂತನಾದ ಮನುಷ್ಯನಿಗೆ ಸಲ್ಲುತ್ತದೆ!

ಮನುಷ್ಯ ಪಳಗಿಸಿದ ಪ್ರಾಣಿಗಳಲೆಲ್ಲಾ ಪ್ರಾಚೀನವಾದದ್ದು ನಾಯಿ. (Canis lupus familiaris) ಮೊಟ್ಟಮೊದಲು ಮಧ್ಯ ಯುರೋಪಿನಲ್ಲಿ ನಾಯಿಯನ್ನು ಪಳಗಿಸಿ ಸಾಕಲಾಯಿತೆಂದು ನಂಬಲಾಗಿದೆ. ಡೆನ್ಮಾರ್ಕಿನಲ್ಲಿ ಸಿಕ್ಕಿದ ಸುಮಾರು ಏಳು ಸಾವಿರ ವರ್ಷಗಳ ಹಿಂದಿನ ನಾಯಿಯ ಮೂಳೆಗಳ ಪಳೆಯುಳಿಕೆ ಅತ್ಯಂತ ಹಳೆಯದು. ಅನಂತರದ್ದು ಮೆಸಪೊಟೇಮಿಯಾದ ಕಣಿವೆ, ಅದರ ಪೂರ್ವ ಪ್ರದೇಶಗಳಲ್ಲಿ ಕಂಡುಬರುತ್ತದೆ. ಮಧ್ಯಶಿಲಾಯುಗ ಕಾಲದಲ್ಲೇ ಮನುಷ್ಯ ನಾಯಿಯನ್ನು ಸಾಕಲಾರಂಭಿಸಿದ್ದ. ಮಾನವ ಹೋದಲ್ಲೆಲ್ಲ ತಾನೂ ಹಿಂಬಾಲಿಸುತ್ತ ಅವನ ಒಡನಾಡಿಯಾಗಿ, ಸೇವಕನಾಗಿ ಗುರುತಿಸಿಕೊಂಡಿದೆ. ನಾಯಿಗಳು ತೋಳ ಮತ್ತು ಗುಳ್ಳೆನರಿಗಳ ಹತ್ತಿರದ ಸಂಬಂಧಿಗಳು. ಕಾಡುನಾಯಿಗಳ ಕೆಲವು ತಳಿಗಳಿಗೂ ಈಗಿನ ಊರು ನಾಯಿಗಳ ತಳಿಗೂ ಹೋಲಿಕೆಯಿದೆ. ನಾಯಿಗಳು ಪ್ರಾಚೀನ ಕಾಲದಿಂದಲೂ ಪಶುಸಂಗೋಪನೆ, ಹೊಲಗದ್ದೆಗಳ ಕಾವಲು, ಮನೆ-ಜನರ ರಕ್ಷಣೆ, ದರೋಡೆಕೋರರು, ಕಳ್ಳರ ಭಯ ನಿವಾರಣೆ ಹೀಗೆ ಸಹಕರಿಸುತ್ತಾ ಬಂದಿವೆ.

ಕಂಡ ಕಂಡ ಪ್ರಾಣಿ ಪಕ್ಷಿ ಜೀವಜಂತುಗಳಿಗೆ ಕಾರಣವೇ ಇಲ್ಲದೆ ಹಿಂಸೆ ಕೊಡುವುದು ಮನುಷ್ಯನಲ್ಲಿ ಹುದುಗಿರುವ ಮೂಲ ಗುಣ. ಬಾಲ್ಯದಲ್ಲಿ ಇಂತವೆಲ್ಲ ನೋಡಿದಾಗ ಯಾವುದೋ ಕ್ಷುಲ್ಲಕ ಕಾರಣಕ್ಕಾಗಿ ಪ್ರಾಣಿಗಳಿಗೆ ಮಾತು ನಿಂತುಹೋಗುವಂತೆ ದೇವತೆಯೊಬ್ಬಳು ಶಾಪ ಕೊಟ್ಟ ಕತೆ ನೆನಪಾಗುತ್ತಿತ್ತು. ಅದು ಕತೆಯೆಂದಲ್ಲದೆ, ನಿಜವಾಗಿ ನಡೆದದ್ದೇ ಎಂದು ನಂಬಿದ್ದೆ! ಛೇ ಯಾಕಾದರೂ ಹೀಗಾಯಿತೋ, ಪ್ರಾಣಿಗಳು ಮರಳಿ ಯಾವಾಗ ಮಾತಾಡಿ ತಮ್ಮ ಸುಖ ದುಃಖ ಹೇಳಿಕೊಳ್ಳುತ್ತವೋ, ಹೊಡೆತ ಬಡಿತಗಳನ್ನು ಪ್ರತಿಭಟಿಸಿ ನಿಲ್ಲುತ್ತವೋ ಅನ್ನಿಸುತ್ತಿತ್ತು! ಪಟಾಕಿ ಪುಟ್ಟ ಎಂಬ ವ್ಯಕ್ತಿಯೊಬ್ಬರಿದ್ದರು. ಅವರಿಗೆ ಆ ಹೆಸರು ಬಂದದ್ದು ಹೇಗೆಂದು ಕೇಳಿದಾಗ ತಿಳಿದುಬಂದ ವಿಷಯವೆಂದರೆ, ಅವರೊಮ್ಮೆ ದೀಪಾವಳಿಗೆಂದು ತಂದ ಸರ ಪಟಾಕಿಯನ್ನು ನಾಯಿಯ ಬಾಲಕ್ಕೆ ಕಟ್ಟಿ ಬೆಂಕಿಕೊಟ್ಟರಂತೆ. ಆಗ ಆದ ಗಲಾಟೆ, ಗಡಿಬಿಡಿಯಲ್ಲಿ ಅವರ ಹೋಟ್ಲಿನ ಮುಳಿಹುಲ್ಲಿನ (ಕರಡದ ಹುಲ್ಲು) ಮಾಡಿಗೆ ಬೆಂಕಿ ಹಿಡಿದು ಇಡೀ ಹೋಟ್ಲೇ ಸುಟ್ಟುಹೋಯಿತು. ಇದನ್ನು ಕಂಡ ಹಳ್ಳಿಯ ಜನರು ‘ಇಂಥಾ ದುರ್ಬುದ್ಧಿಯ ಮನುಷ್ಯನಿಗೆ ಹೀಗೇ ಆಗಬೇಕು’ ಎಂದುಕೊಂಡು ಪಟಾಕಿಯನ್ನು ಆ ವ್ಯಕ್ತಿಯ ಹೆಸರಿಗೆ ಶಾಶ್ವತವಾಗಿ ಅಂಟಿಸಿ ಪಟಾಕಿ ಪುಟ್ಟ ಎಂದು ಕರೆಕರೆದು ತೃಪ್ತಿಪಟ್ಟರು! ಇದು ಸುಮಾರು ನಲವತ್ತು ವರ್ಷಗಳ ಹಿಂದೆ ನಡೆದ ಘಟನೆ. ಈಗಲೂ ಕರುಳು ಕೊರೆಯುವ ಇಂಥಾ ಪೈಶಾಚಿಕ ಕೃತ್ಯಗಳನ್ನು ಆಗಾಗ ನೋಡುತ್ತ, ಕೇಳುತ್ತಾ ಇರುತ್ತೇವೆ!

ಸೋಶಿಯಲ್ ಮೀಡಿಯಾಗಳಲ್ಲಿ ಬೀದಿ ನಾಯಿಗಳ ಕುರಿತು ಚರ್ಚೆಗಳಾದಾಗ; ಮನುಷ್ಯರನ್ನು ಅದರಲ್ಲೂ ಚಿಕ್ಕ ಮಕ್ಕಳನ್ನು ಅಟ್ಟಿಸಿಕೊಂಡು ಹೋಗಿ ಗಾಯಗೊಳಿಸಿದ ಅಥವಾ ಕೊಂದ ಪ್ರಕರಣಗಳನ್ನು ಪ್ರಸ್ತಾಪಿಸಲಾಗುತ್ತದೆ. ಹುಚ್ಚುನಾಯಿ ಕಚ್ಚುವ ಆತಂಕಕಾರಿ ಘಟನೆಗಳು, ನಾಯಿಗಳ ಬೊಗಳಿನಿಂದಾಗಿ ಆಗುವ ಕಿರಿ ಕಿರಿ ಮುಂತಾದುವೆಲ್ಲ ಮುನ್ನೆಲೆಗೆ ಬರುತ್ತವೆ. ನಿಜ, ಇಂತಹ ಆಘಾತಕಾರಿ ಘಟನೆಗಳು ನಡೆಯುವುದು ನಮ್ಮ ವ್ಯವಸ್ಥೆಯ ಲೋಪದೋಷಗಳಿಗೆ ಹಿಡಿದ ಕನ್ನಡಿ. ಇವುಗಳನ್ನು ಯಾರೂ ಸಹಿಸುವುದು ಸಾಧ್ಯವಿಲ್ಲ. ಆದರೆ ಇದಕ್ಕಾಗಿ ಬೀದಿನಾಯಿಗಳ ಮೇಲೆ ರೊಚ್ಚು ತೋರಿಸಿ ಪ್ರಯೋಜನವಿಲ್ಲ, ಸರಿಯೂ ಅಲ್ಲ. ಇಂತಹ ಪ್ರಕರಣಗಳಲ್ಲಿ ಬೀದಿನಾಯಿಗಳ ತಪ್ಪು ಏನು ಮತ್ತು ಎಷ್ಟು ? ಬುದ್ಧಿವಂತ ಪ್ರಾಣಿಯಾದ ಮನುಷ್ಯನ ಅಪರಾಧ ಎಷ್ಟು… ಎಂದು ನಿಷ್ಪಕ್ಷಪಾತವಾಗಿ ಯೋಚಿಸಬೇಕಾಗುತ್ತದೆ. ಶತಮಾನಗಳ ಹಿಂದೆ ಕಾಡಿನಿಂದ ಹಿಡಿದು ತಂದು ಮನುಷ್ಯ ಪಳಗಿಸಿದ ಪ್ರಾಣಿ ನಾಯಿ. ತನ್ನ ಉಪಯೋಗ, ಸ್ವಾರ್ಥಕ್ಕಾಗಿ ಅದರ ಬದುಕನ್ನು ಛಿದ್ರಗೊಳಿಸಿದ್ದು ಮಾನವವೇ. ಈಗ ನಾಯಿ, ಮನುಷ್ಯನಿಲ್ಲದೆ ಬದುಕಲಾಗದಷ್ಟು ಅವಲಂಬಿತವಾಗಿದೆ. ಅಡ್ಡಾದಿಡ್ಡಿ ಬೆಳೆದ ನಮ್ಮ ನಗರಗಳು, ನಾಗರಿಕತೆಯ ಸುಳ್ಳು ಭ್ರಮೆಗಳು, ಐಷಾರಾಮಿ ಜೀವನದ ಮಹದಾಸೆಗಳು ನಮ್ಮ ಜೊತೆಗೇ ಬದುಕುತ್ತಿರುವ ಇತರ ಜೀವಿಗಳ ಮೇಲೆ ಅಪಾರ ದುಷ್ಪರಿಣಾಮ ಬೀರಿವೆ; ಇದರಲ್ಲಿ ನಾಯಿಗಳು ಮುಖ್ಯವಾದವು. ಹಸಿವಿನಿಂದ ಕಂಗೆಟ್ಟು, ತುತ್ತಿಗಾಗಿ ಅಲೆಯುತ್ತ ಹೊಡೆಸಿಕೊಂಡು, ಬಡಿಸಿಕೊಂಡು ನರಕ ಸದೃಶ ಬದುಕು ನಡೆಸುತ್ತಿವೆ. ಈ ಪರಿಸ್ಥಿತಿಯನ್ನು ಸರಿಪಡಿಸಬೇಕಾದ ಕರ್ತವ್ಯ ನಮ್ಮದೇ. ತಮ್ಮ ಶ್ರೀಮಂತಿಕೆಯ ಕುರುಹಿಗಾಗಿ ದೊಡ್ಡ ಜಾತಿಯ ನಾಯಿಗಳನ್ನು ಅದರ ಆರೋಗ್ಯಕ್ಕೆ ಸರಿಹೊಂದದ ಜಂಕ್ ಫುಡ್‌ಗಳನ್ನು ತಿನ್ನಿಸಿ ಬೆಳೆಸಿ ಅದರ ಜೀವ-ಜೀವನವನ್ನು ಹಾಳು ಮಾಡುವುದು ಕೂಡಾ ಮತ್ತೊಂದು ತರದ ವ್ಯಸನವಾಗಿದೆ. ಇನ್ನು, ಬೀದಿ ನಾಯಿಗಳಿಗೆ ವ್ಯಾಕ್ಸಿನೇಶನ್, ಸಂತಾನ ನಿಯಂತ್ರಣ ಶಸ್ತ್ರಚಿಕಿತ್ಸೆ, ಸೂಕ್ತ ಆಹಾರ, ಆಶ್ರಯ ಕಲ್ಪಿಸಬೇಕಾದದ್ದು ನಮ್ಮ ಆಡಳಿತ ಯಂತ್ರದ ಜವಾಬ್ದಾರಿ. ವಿಶೇಷ ತಳಿಯ ಸಾಕು ನಾಯಿಗಳ ಆಸೆ ಬಿಟ್ಟು ಬೀದಿನಾಯಿ ಮರಿಗಳನ್ನು ತಂದು ಪೋಷಿಸಬೇಕಾದದ್ದು ನಾಗರಿಕರ ಬದ್ಧತೆಯಾಗಿದೆ.

ಕೊರೋನಾ ಲಾಕ್ಡೌನ್ ಸಮಯದಲ್ಲಿ ಕಾರ್ಮಿಕರ, ಶೋಷಿತರ, ಬಡಜನರ ಬದುಕಿನಲ್ಲಿ ಗುಣಪಡಿಸಲಾಗದ ದೊಡ್ಡ ಗಾಯಗಳಾದವು. ಊಹಿಸಿಯೇ ಇರದಿದ್ದ ಬಿಕ್ಕಟ್ಟಿನ ಪರಿಸ್ಥಿತಿ, ಗೊಂದಲ ತಲೆದೋರಿತು. ವಲಸೆ ಕಾರ್ಮಿಕರ ದಿನಗಳು ನುಚ್ಚುನೂರಾದವು. ಇದೇ ಸಮಯದಲ್ಲಿ ಜನರಹಿತ ಬೀದಿಗಳಲ್ಲಿ ಹಸಿವಿನಿಂದ ಒದ್ದಾಡಿ ಅನೇಕ ನಾಯಿಗಳೂ ಪ್ರಾಣಬಿಟ್ಟವು. ಆಗ ಸ್ವಯಂ ಸೇವಾ ಸಂಸ್ಥೆಗಳು, ಇತರ ನಾಗರಿಕರು ಅವುಗಳಿಗೆ ಒಂದಷ್ಟು ಸಹಾಯ ಮಾಡಿದರು. ಹೀಗೆ ಬೀದಿನಾಯಿಗಳ ಸಮಸ್ಯೆ ತೀವ್ರವಾಗಿರುವುದನ್ನು ಅರಿತು ಕೆಲಸ ಮಾಡುವ ಟ್ರಸ್ಟ್‌ಗಳು, ಜನರು ನಮ್ಮ ಸಮಾಜದಲ್ಲಿದ್ದಾರೆ ಎನ್ನುವುದು ತುಸು ನೆಮ್ಮದಿಯ ವಿಷಯ. ನಾವೆಲ್ಲರೂ ಅಂತವರಿಗೆ ಋಣಿಯಾಗಿರಬೇಕಾಗುತ್ತದೆ. ಇನ್ನು, ಹೆಣ್ಣುನಾಯಿಯ ಪರಿಸ್ಥಿತಿಯಂತೂ ಚಿಂತಾಜನಕ. ಮರಿಯಿಡುತ್ತದೆ ಎಂಬ ಕಾರಣಕ್ಕಾಗಿ ಹೆಣ್ಣುನಾಯಿಯನ್ನು ಸಾಕುವವರು ತುಂಬಾ ಕಡಿಮೆ. ಬೀದಿನಾಯಿಯಾಗಿ ಪರಿವರ್ತನೆಯಾಗುವ ಅದು ಮರಿಗಳನ್ನಿಟ್ಟಾಗ ಪಡುವ ಕಷ್ಟ, ಮರಿಗಳ ಹಸಿವು, ಆಕ್ರಂದನ ಸಲಸಲವೂ ಎದೆಯಲ್ಲಿ ನೋವೊಂದನ್ನು ನೆಟ್ಟು ಶಾಶ್ವತವಾಗಿಸಿದೆ. ರಸ್ತೆ ದಾಟುವಾಗ ಪಾಡು ಪಡುವ, ಆಘಾತಕ್ಕೆ ಒಳಗಾಗುವ ನಾಯಿಗಳ ನೋವು ಇನ್ನೊಂದು ಬಗೆಯದು. ನಮ್ಮ ನಾಗರಿಕತೆಯ ಎಲ್ಲ ರೋಗಗಳಿಗೂ ನಾವೇ ಮದ್ದನ್ನರೆಯುವ ವಿವೇಕ ಮಾಡಬೇಕಾಗಿದೆ. ಅದು ಬಿಟ್ಟು, ಮತ್ತೆ ಮೂಕಪ್ರಾಣಿಗಳ ಮೇಲೇ ತಪ್ಪು ಹೊರಿಸುವುದು ಪಲಾಯನವಾದವಾಗುತ್ತದೆ.

ನಮ್ಮ ಪಪ್ಪು ಬೀದಿನಾಯಿಯ ಮರಿ. ಒಂದು ದಿನ ಕಾಯಿ ಹೆರೆಯುತ್ತ ನೆಲದಲ್ಲಿ ಕುಳಿತಿದ್ದಾಗ ನನ್ನ ಪಕ್ಕದಲ್ಲೇ ಧುತ್ತೆಂದು ಪ್ರತ್ಯಕ್ಷವಾದ ಆಸಾಮಿಯದು! ಆಹಾರ, ಆಶ್ರಯ ಅರಸಿ ಹಿಂಬಾಗಿಲಿನಿಂದ ಒಳಬಂದಿತ್ತು. ಅದರ ಮುಗ್ಧ ಮೂತಿಯನ್ನು ಕಂಡು ಮುದ್ದು ಉಕ್ಕಿಬಂದು ನಾವೇ ಇಟ್ಟುಕೊಳ್ಳೋಣವೆಂದು ನಿರ್ಧರಿಸಿದೆವು. ಅವು ನಮ್ಮನೆಯ ಸಂತಸದ ಚೈತ್ರಕಾಲ. ಏಕೆಂದರೆ ಮೊದಲೇ ಮನೆತುಂಬಾ ಓಡಾಡಿಕೊಂಡಿದ್ದ ಬೆಕ್ಕುಗಳ ಜೊತೆಗೆ ಈಗೊಂದು ದಡ್ಡ ಮುಖಭಾವದ ನಾಯಿ. ಎಲ್ಲರೂ ಸೇರಿ ಆಟವಾಡುತ್ತ ನಗುವನ್ನು ತುಂಬಿಕೊಂಡೆವು. ನಾಯಿ-ಬೆಕ್ಕುಗಳ ಸಲುಗೆ ಆಶ್ಚರ್ಯಕರವಾಗಿತ್ತು. ಒಂದರ ಮೇಲೊಂದು ಬಿದ್ದು ಆಟವಾಡುವುದು, ಹಾಗೇ ಮಲಗಿ ನಿದ್ರಿಸುವುದು, ಹಸಿವಾದಾಗ ಎದ್ದು ಒಂದೇ ತಟ್ಟೆಯಲ್ಲಿ ಉಣ್ಣುವುದು. ಆದರೆ ಏಳೆಂಟು ತಿಂಗಳುಗಳ ಬಳಿಕ ಮಿಂಚಿ ಮರಿ ಮಾಯವಾಯಿತು, ಅದರ ಬೆನ್ನಿಗೇ ಫುಟ್ಬಾಲ್ ಎಂಬ ಗುಂಡು ಮರಿಯೂ…. ಇದೆಲ್ಲ ಹೇಗಾಯಿತೆಂದು ಯೋಚಿಸುವಷ್ಟರಲ್ಲೇ ಮುಸುವ ಬೆಕ್ಕು ಶವವಾಗಿ ಬಿದ್ದು ಸಿಕ್ಕಿತು! ಅದರ ಪುಟ್ಟ ಮರಿಗಳು ಅನಾಥವಾದವು.

ಈ ಘಟನೆಗಳೆಲ್ಲ ಯಾಕಾಗುತ್ತಿವೆ ಎಂದೇ ತಿಳಿಯದೆ ನೋವಿನಲ್ಲಿ ಮುಳುಗಿದೆವು. ಇದೆಲ್ಲ ನಡೆದು ಸ್ವಲ್ಪ ಸಮಯ ಕಳೆದಿತ್ತು. ಎಲ್ಲ ದೂರವಾಯಿತು ಅಂದುಕೊಳ್ಳುವಷ್ಟರಲ್ಲಿ ಒಂದು ದಿನ ಪಪ್ಪು ಅಂಗಳದಲ್ಲಿ ಬಿದ್ದು ಹೊರಳಾಡುತ್ತಿತ್ತು. ಹಾವೇನಾದರೂ ಮುಟ್ಟಿತೋ, ಯಾರೋ ಹೆಗ್ಗಣಕ್ಕೆಂದು ಇಟ್ಟು ವಿಷ ತಿಂದಿತೋ ಎಂದೆಲ್ಲ ಶಂಕಿಸಿ ಗಡಿಬಿಡಿಯಲ್ಲಿ ಉಪ್ಪು ನೀರು ಕುಡಿಸಿ ವಾಂತಿ ಮಾಡಿಸಿ ಆಸ್ಪತ್ರೆಗೆ ಕರೆದೊಯ್ದೆ. ಸೂಕ್ತ ಸಮಯಕ್ಕೆ ದೊರೆತ ಚಿಕಿತ್ಸೆಯಿಂದಾಗಿ, ಒಂದು ವಾರ ಹೋರಾಡಿದರೂ ಕೊನೆಗೂ ಪಾಪಣ್ಣ ಸಾವನ್ನು ಗೆದ್ದಿತು. ಆದರೆ ಇನ್ನೂ ಮುಗಿದಿರಲಿಲ್ಲ! ಸ್ವಲ್ಪ ಸಮಯದಲ್ಲೇ ಇನ್ನೂ ಎರಡು ಬೆಕ್ಕಿನ ಮರಿಗಳು ಸತ್ತು ಗಡ್ಡೆ ಕಟ್ಟಿದ ಸ್ಥಿತಿಯಲ್ಲಿ ಪಕ್ಕದ ಮನೆಯ ಕಾಂಪೌಂಡಿನಲ್ಲಿ ಕಂಡವು. ಆಗ ಆದ ಮಾತಿನ ಚಕಮಕಿಯಲ್ಲಿ ನಿಗೂಢವಾಗಿದ್ದ ವಿಷಯ ಬಿಚ್ಚಿಕೊಂಡಿತು. ಪಾಪಣ್ಣ ಸುಮಾರು ಸಮಯದಿಂದ ಪಕ್ಕದ ಮನೆಯವರ ಮೂರ್ನಾಲ್ಕು ಜೊತೆ ಚಪ್ಪಲಿ ಕದ್ದಿತ್ತಂತೆ. ಸದ್ಯ, ವಾರದ ಹಿಂದೆ ಮತ್ತೊಂದು ಜಾಸ್ತಿ ಬೆಲೆಯ ಚಪ್ಪಲಿಯನ್ನೂ ಕಳ್ಳತನ ಮಾಡಿದೆಯಂತೆ. ಹೀಗಾಗಿ ಅದನ್ನು ‘ತೆಗೆಯಲು’ ಆಗಾಗ ವಿಷ ಇಟ್ಟಿದ್ದರಂತೆ! “ನಿಮಗೆ ಈ ನಾಯಿ ಬೆಕ್ಕುಗಳೆಲ್ಲ ಯಾಕೆ ಬೇಕಮ್ಮಾ” ಎಂಬ ಉಪದೇಶವೂ ಅಲ್ಲಿ ನನಗೆ ಸಿಕ್ಕಿತು! ಅವರು ಯಾರಿಗೂ ತೊಂದರೆ ಕೊಡದ ಸಭ್ಯ ನಾಗರಿಕರೇ; ಪ್ರಾಣಿಗಳ ವಿಷಯದಲ್ಲಿ ಮಾತ್ರ ಅಸಹನೆ ತುಂಬಿಕೊಂಡಿದ್ದರು! ಆದರೆ ಪಾಪಣ್ಣ ಚಪ್ಪಲಿ ತಂದ ವಿಷಯದಲ್ಲಿ ನಾವೂ ಅಸಹಾಯಕರಾಗಿದ್ದೆವು. ಸಣ್ಣದಿರುವಾಗ ಚಪ್ಪಲಿ ಕದ್ದು ಕಚ್ಚಿ ತುಂಡು ಮಾಡಿ ಜೂಲು ಜೂಲು ಮಾಡಿ ರೂಪ ಕೆಡಿಸಿ ಬಿಸಾಕುವುದು ನಾಯಿಗಳ ಒಂದು ಆಟ ಅಥವಾ ಅಭ್ಯಾಸ. ಬೆಳೆಯುತ್ತಿರುವ ಹಲ್ಲು ‘ಚೀಂಕಿ’ ಬರುವುದಕ್ಕೋ; ಚಪ್ಪಲಿಯ ವಾಸನೆಗೋ ಪ್ರಚೋದನೆಗೊಂಡು ಅವು ಹೀಗೆ ಮಾಡುವುದಿರಬಹುದು. ಸ್ವಲ್ಪ ದೊಡ್ಡದಾದ ನಂತರ ಈ ಅತಿರೇಕವನ್ನು ಮರೆತು ಸರಿಯಾಗುತ್ತವೆ. ಆದರೆ ನಮಗೆ ಮನುಷ್ಯರಿಗೆ ಅರ್ಥವಾಗುವುದಿಲ್ಲ. ನಾವೇ ಭೂಮಿಯ ಒಡೆಯರು ಎಂಬ ಮನೋಭಾವ ಬೇರೂರಿ ಹೋಗಿದೆ. ಜೀವಜಂತುಗಳ ಬದುಕುವ ಹಕ್ಕು ನಮಗೆ ಅಪರಾಧವೆನಿಸುತ್ತದೆ.

ತೇಜಸ್ವಿ ಅವರ ಮುದ್ದು ನಾಯಿ ʼಕಿವಿʼ ಚಪ್ಪಲಿ ಕದ್ದ ಪ್ರಸಂಗ ನೆನಪಾಗುತ್ತದೆ. ಮಾರ ಚಪ್ಪಲಿಯನ್ನು ಅದಲು ಬದಲಾಗಿ ಇಟ್ಟು ‘ದೆಯ್ಯದ ಮೆಟ್ಟುʼ ಎಂದು ಭಾವಿಸಿ ಇನ್ನು ಮುಂದೆ ಕದಿಯುವುದಿಲ್ಲ’ ಅಂತ ತೀರ್ಮಾನಿಸುತ್ತಾನೆ. ಪದೇ ಪದೇ ಎಡಗಾಲಿನ ಚಪ್ಪಲಿ ಬಲಕ್ಕೆ, ಬಲಗಾಲಿನದ್ದು ಎಡಕ್ಕೆ ಇರುತ್ತಿದ್ದುದರಿಂದ ಕಿರಿಕಿರಿಗೊಂಡ ಲೇಖಕರು ಪ್ರಶ್ನಿಸಿದಾಗ ಮಾರ ತನ್ನ ತರ್ಕವನ್ನು ಮುಂದಿಡುತ್ತಾನೆ! ಒಂದು ವೇಳೆ ಇದು ನಿಜವೇ ಆಗಿದ್ದರೆ ಕಿವಿಗೆ ಎಷ್ಟೊಂದೆಲ್ಲ ‘ಜ್ಞಾನ’ ಇರಬೇಕಾಗುತ್ತದೆ ಎಂದು ಅವರು ಪಟ್ಟಿಮಾಡುತ್ತಾರೆ! ಮೊದಲನೆಯದಾಗಿ ಅದಕ್ಕೆ ಮನುಷ್ಯರ ಕಾಲಿನ ರಚನೆ ಗೊತ್ತಿರಬೇಕು, ಇನ್ನೊಂದೆಂದರೆ ದೆವ್ವಗಳ ಕಾಲು ಇದಕ್ಕೆ ವ್ಯತಿರಿಕ್ತವಾಗಿರುತ್ತದೆ ಎಂದು ತಿಳಿದಿರಬೇಕು… ಎಲ್ಲಕ್ಕಿಂತ ಹೆಚ್ಚಾಗಿ ದೆವ್ವಗಳು ಇವೆ ಎಂಬ ವಿಷಯವನ್ನು ಮಾರನಂತೆ ಕಿವಿಯೂ ನಂಬಬೇಕು!! ಈಗ ನನಗನ್ನಿಸುತ್ತಿರುವುದು, ಕಿವಿಯ ಈ ಎಲ್ಲ ಜ್ಞಾನಗಳ ತರಹ ನಮ್ಮ ಪಪ್ಪುವಿಗೂ ಚಪ್ಪಲಿ ಕದ್ದದ್ದಕ್ಕಾಗಿ ವಿಷವುಣಿಸುವ ವ್ಯಕ್ತಿಗಳೂ ಇರುತ್ತಾರೆಂಬ ಜ್ಞಾನ ಇದ್ದಿದ್ದರೆ; ಮನುಷ್ಯರ ಸಹವಾಸವೇ ಬೇಡವೆಂದು ತೀರ್ಮಾನಿಸಿ ‘ದೆಯ್ಯದ ಚಪ್ಪಲಿ’ಯನ್ನೇ ಹುಡುಕಿಕೊಂಡು ಹೋಗಿ ಕದಿಯುತ್ತಿತ್ತೋ ಏನೋ ಎಂದು!

(ಕೃತಿ: ಕಣ್ಣ ಕಾಡಿನ ಹಾಡು (ಪ್ರಬಂಧಗಳ ಸಂಕಲನ), ಲೇಖಕರು: ವಿಜಯಶ್ರೀ ಹಾಲಾಡಿ, ಪ್ರಕಾಶಕರು: ಹಾಡ್ಲಹಳ್ಳಿ ಪಬ್ಲಿಕೇಷನ್ಸ್‌)