ಆತನಕ ಎಲ್ಲಾ ಅಂದುಕೊಂಡಂತೆಯೇ ನಡೆದು ಇನ್ನೇನು ಛತ್ರದೊಳಗೆ ಎರಡು ಹೆಜ್ಜೆ ಹೋಗಿಲ್ಲ, ಅಷ್ಟರೊಳಗೆ ಪ್ರೌಢಶಾಲಾ ಗೆಳೆಯ, ನನ್ನ ಜ್ಯೂನಿಯರ್ ಒಬ್ಬ ಸಿಕ್ಕ. ನನ್ನ ಮುಖಪರಿಚಯ ಚೆನ್ನಾಗಿಯೇ ಇದ್ದ ಮಂಜುನಾಥನೇ ಅವನು! ನಾನು ಅವನ ಮುಖ ಕಂಡೊಡನೆಯೇ ತಬ್ಬಿಬ್ಬಾಗಿ, ನನ್ನ ಪರಿಚಿತರ ಮದುವೆಗೆ ಬಂದಿದ್ದೇನೆ ಎಂದು ಅವನ ಎದುರು ತೋರ್ಪಡಿಸಿಕೊಳ್ಳಲು, ಅವನು ಮಾತಾಡುವ ಮುನ್ನವೇ ‘ಏನ್ ಮಂಜು ಇಲ್ಲಿ?’ ಎಂದು ಪ್ರಶ್ನಿಸಿದೆ. ಅದಕ್ಕವನು ಅತ್ಯಾಶ್ಚರ್ಯ ಮುಖ ಭಾವದಿಂದ ‘ಅಣ್ಣಾ, ಇಲ್ಲಿ ನಡೆಯುತ್ತಿರುವುದು ನನ್ನ ಸ್ವಂತ ಅಕ್ಕನ ಮದುವೆ’ ಎಂದ! ಈಗ ತಬ್ಬಿಬ್ಬಾಗುವ ಸರದಿ ನನ್ನದಾಗಿತ್ತು.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಇಪ್ಪತ್ತೇಳನೆಯ ಕಂತು ನಿಮ್ಮ ಓದಿಗೆ

ಜಯದೇವ ಹಾಸ್ಟೆಲ್‌ನಲ್ಲಿ ಮೊದಲು ನಾನು 35 ನೇ ರೂಮಿನಲ್ಲಿದ್ದೆ. ಅಲ್ಲಿ ಡಿಗ್ರಿ ಓದುತ್ತಿದ್ದ ಸೀನಿಯರ್ ಒಬ್ಬರು ಇದ್ದರು. ಅವರ ತಮ್ಮನೂ ಇಲ್ಲೇ ಇದ್ದನು. ನಾನು ಮೂರನೇಯವನಾಗಿ ಅಲ್ಲಿಗೆ ಹೋದಾಗ ಅವರು ಸ್ವಲ್ಪ ಕಿರಿಕ್ ಮಾಡ್ತಾ ಇದ್ದರು. ಹಾಸ್ಟೆಲ್‌ನ ಬೇರೆ ಹುಡುಗರು ಪರಿಚಯ ಆದ್ಮೇಲೆ ಅಲ್ಲಿ ಲಗೇಜ್ ಇದ್ದರೂ ಸಹ ನಾನು ಬೇರೆ ರೂಮಿನವರ ಜೊತೆಯೇ ಇರುತ್ತಿದ್ದೆ. ನನ್ನ ರೂಮ್ ಮೇಟ್ ಆಗಿದ್ದ ಡಿಗ್ರಿ ವಿದ್ಯಾರ್ಥಿ ಪದೇ ಪದೇ ಅವನ ಸೌಂದರ್ಯದ ಬಗ್ಗೆ ನನ್ನನ್ನು ಕೇಳುತ್ತಿದ್ದ. ನೋಡೋಕೆ ಸ್ಮಾರ್ಟ್ ಇಲ್ಲದಿದ್ದರೂ ಸಹ ‘ತನ್ನನ್ನು ತಾನೇ ತುಂಬಾ ಸುಂದರ’ ಎಂದು ಭಾವಿಸಿದ್ದ! ರಸ್ತೆಯಲ್ಲಿ ಯಾವುದಾದರೂ ಜೋಡಿ ಹೋಗುತ್ತಿದ್ದರೆ ಹುಡುಗ ಸ್ಮಾರ್ಟ್ ಇದ್ದಾಗ್ಯೂ ಇವನು ಮಾತ್ರ ‘ಆ ಹುಡುಗ ಎಷ್ಟು ಕರಾಬ್ ಇದಾನಲ್ವಾ?’ ಎಂದು ಹೇಳುತ್ತಿದ್ದ!! ಅವನ ಬಳಿ ನಿಜ ಹೇಳಿದರೆ, ಅವನಿಗೆ ಸಿಟ್ಟು ಬರುತ್ತದೆ ಎಂದು ಗ್ರಹಿಸಿದ್ದ ನಾನು ಅವ ಹೇಳಿದ್ದಕ್ಕೆಲ್ಲಾ ಕೋಲೆ ಬಸವನಂತೆ ತಲೆಯಾಡಿಸುತ್ತಿದ್ದೆ! ಅವನಿಗೆ ಆಗ ಖುಷಿಯಾಗಿ ನನ್ನನ್ನು ಅಶೋಕ ರಸ್ತೆಗೆ ಕರೆದುಕೊಂಡು ಹೋಗಿ ತಿನ್ನಲು ಹಣ್ಣು ಕೊಡಿಸುತ್ತಿದ್ದ. ಜಗತ್ತಿನಲ್ಲಿ ಅಷ್ಟೇ ಕಣ್ರೀ. ಕಹಿಯಾದ ಸತ್ಯಕ್ಕಿಂತ ಸುಳ್ಳನ್ನೇ ಹೆಚ್ಚು ಇಷ್ಟಪಡುತ್ತಾರೆ!

“ಸತ್ಯಂ ಬ್ರೂಯಾತ್ ಪ್ರಿಯಂ ಬ್ರೂಯಾತ್ ನಾ ಬ್ರೂಯಾತ್ ಸತ್ಯಮಪ್ರಿಯಂ |
ಪ್ರಿಯಂಚ ನಾನೃತಂ ಬ್ರೂಯಾತ್ ಏತನ್ನೇವ ಧರ್ಮ ಸನಾತನಃ ||”

ಎಂಬ ಶ್ಲೋಕದಂತೆ “ಸತ್ಯವನ್ನು ಹೇಳು, ಪ್ರಿಯವನ್ನು ಹೇಳು, ಆದರೆ ಸತ್ಯವನ್ನು ಅಪ್ರಿಯವಾಗಿ ಹೇಳಬೇಡ, ಪ್ರಿಯವೆಂದು ಸುಳ್ಳನ್ನು ಹೇಳಬೇಡ” ಎಂಬುದು ನನಗೆ ನೆನಪಾಗುತ್ತಿತ್ತಾದರೂ ನನಗೆ ಸತ್ಯವನ್ನು ಪ್ರಿಯವಾಗಿ ಹೇಳಲು ಬಾರದೇ ಇದ್ದ ಕಾರಣ ಸುಮ್ಮನೇ ಅವನು ಹೇಳಿದ್ದಕ್ಕೆ ಕೆಲವೊಮ್ಮೆ ‘ಹ್ಞೂ… ಹ್ಞಾ’ ಅನ್ನುತ್ತಿದ್ದೆ!! ಇವನು ಅಷ್ಟಕ್ಕೆ ಸುಮ್ಮನಾಗದೇ ಮತ್ತೆ ರೂಮಿಗೆ ಬಂದಾಗಲೂ ನನಗೆ ಓದಲು ಬಿಡದೇ ಕೊರೆಯುತ್ತಿದ್ದ. ಅವನ ಕೊರೆತ ತಾಳದೇ ನಾನು, ಅದೂ ಇದೂ ನೆಪ ಹೇಳಿ ಅಲ್ಲಿಂದ ಜಾರಿಕೊಳ್ಳುತ್ತಿದ್ದೆ. ಆಗ ನನಗೆ ಜೊತೆಯಾಗಿ ಸಿಕ್ಕವನೇ ಲಿಂಗರಾಜ ಹಾಗೂ ಸುಧಾಕರ. ಅವರಿಬ್ಬರೂ ನನಗೆ ಅವರು ತುಂಬಾ ಕ್ಲೋಸ್ ಆದರು. ಇದೇ ರೂಮಿನಲ್ಲಿ, ನನ್ನ ಬಳಿಯಿದ್ದ ನನ್ನಕ್ಕನ ನೆನಪಿಗೆಂದೇ ಇಟ್ಟುಕೊಂಡಿದ್ದ, ಅವಳು ಧರಿಸುತ್ತಿದ್ದ ವಾಚೊಂದು ಕಳೆದೋಯ್ತು. ತುಂಬಾ ಬೇಸರವಾಗಿ ರೂಮನ್ನೇ ಬಿಟ್ಟು ಬೇರೆಡೆ ಹೋದೆ. ನನ್ನ ಹೊಸ ರೂಮಿನಲ್ಲಿ ಜಗದೀಶ, ಗಿರೀಶ ಎಂಬ ನನಗಿಂತ ಜೂನಿಯರ್ ಹುಡುಗರಿದ್ದರು. ಅವರು ನನ್ನ ಜೊತೆ ತುಂಬಾ ಕ್ಲೋಸ್ ಆಗಿ ಇದ್ದರು.

ಪ್ರತಿದಿನದ ಬೆಳಗ್ಗೆ 5:30 ಕ್ಕೆ ಫಿಸಿಕ್ಸ್ ಟ್ಯೂಷನ್ನಿಗೆ ನಡೆದುಕೊಂಡು ಹೋಗುವ ಮೂಲಕ ನನ್ನ ಬೆಳಗಿನ ದಿನಚರಿ ಪ್ರಾರಂಭವಾಗುತ್ತಿತ್ತು. ಅಷ್ಟೊತ್ತಿಗಾಗಲೇ ನಮ್ಮ ಹಾಸ್ಟೆಲ್ಲಿನ ಕೆಲ ಹುಡುಗರು ಪೇಪರ್ ಹಾಕೋಕೆ ಹೋಗ್ತಾ ಇದ್ದರು! ಆಗ ವೇತನವಾಗಿ ತಿಂಗಳಿಗೆ 300 ರೂಪಾಯಿ ಅವರಿಗೆ ಕೊಡುತ್ತಿದ್ದರಂತೆ. ತಮ್ಮ ಖರ್ಚಿಗೇ ಅಂತಾ ಕೆಲವರು ತಮ್ಮ ಹಣವನ್ನು ತಾವೇ ಗಳಿಸುತ್ತಿದ್ದರು. ನನಗೂ ನಾನೂ ಈ ರೀತಿ ಗಳಿಸಬೇಕು ಎಂಬ ಆಸೆ ಇದ್ದರೂ ಈ ಸಮಯದಲ್ಲಿ ನನ್ನ ಬಳಿ ಸೈಕಲ್ ಅಲಭ್ಯತೆಯ ಕಾರಣ ನಾನು ಕೆಲಸಕ್ಕೆ ಹೋಗೋಕೆ ಆಗದಿದ್ದುದಕ್ಕೇ ಬೇಸರವಾಗುತ್ತಿತ್ತು. ನನಗೆ ನಮ್ಮ ಕಾಲೇಜು ಬೆಳಗ್ಗೆ 8 ರಿಂದ ಪ್ರಾರಂಭವಾಗುತ್ತಿತ್ತು. ನಮ್ಮ ಹಾಸ್ಟೆಲ್ಲಿನಲ್ಲಿ ಬೆಳಗಿನ ತಿಂಡಿ ವ್ಯವಸ್ಥೆ ಇರಲಿಲ್ಲ. ನಾನು ಹಸಿದ ಹೊಟ್ಟೆಯಲ್ಲಿಯೇ ಕಾಲೇಜಿಗೆ ಹೋಗಬೇಕಾಗಿತ್ತು. ಕೆಲವರು ಹೋಟೆಲ್ಲಿನಲ್ಲಿ ತಿಂಡಿ ತಿಂದು ಹೋಗುತ್ತಿದ್ದರು. ನನ್ನ ಬಳಿ ಹಣ ಇರುತ್ತಿರಲಿಲ್ಲವಾದ್ದರಿಂದ ಉಪವಾಸ ಹೋಗುವುದು ನನಗೆ ಅನಿವಾರ್ಯವಾಗಿತ್ತು, ಇದು ರೂಢಿಯೂ ಆಗಿತ್ತು. ಆದರೆ ಕಾಲೇಜು 11:30 ಕ್ಕೆ ಮುಗಿಯುತ್ತಿದ್ದುದರಿಂದ ನಾನು ಹಾಸ್ಟೆಲ್ಲಿಗೆ ವಾಪಾಸ್ ಬರುವಾಗ ಕೆಲವು ಸಲ ನನ್ನ ಚಿಕ್ಕಮ್ಮನ ಮನೆಯಲ್ಲಿ ತಿಂಡಿ ತಿಂದು ಬರುತ್ತಿದ್ದೆ. ಹಲವು ಸಲ ಹಾಗೆಯೇ ಉಪವಾಸ ಇರುತ್ತಿದ್ದೆ. ಹಾಸ್ಟೆಲ್ಲಿನಲ್ಲಿ ಮಧ್ಯಾಹ್ನದ ಊಟವಾಗಿ ನಮಗೆ ಜೋಳದ ಮುದ್ದೆ, ಅನ್ನ ಸಾಂಬಾರ್ ಕೊಡುತ್ತಿದ್ದರು. ಅಡುಗೆ ಭಟ್ಟರಾಗಿ ಮಹೇಶಣ್ಣ ಎನ್ನುವರಿದ್ದರು. ದಿನಾಲು ಅದೇ ರುಚಿಯ ಊಟ ಉಂಡೂ ಉಂಡೂ ನಮಗೆ ನಾಲಗೆ ಜಿಡ್ಡು ಹಿಡಿದ ಹಾಗಾಗಿತ್ತು.

ಅಪರೂಪಕ್ಕೊಮ್ಮೆ ಮಾತ್ರ ನಮ್ಮ ಹಾಸ್ಟೆಲ್ಲಿನಲ್ಲಿ ಪಾಯಸದ ಊಟವನ್ನು ಮಾಡಿಸುತ್ತಿದ್ದರು. ಕೆಲವೊಮ್ಮೆ ನಮ್ಮ ಹಾಸ್ಟೆಲ್ಲಿಗೆ ಮದುವೆ ಇನ್ನಿತರೆ ಸಮಾರಂಭಗಳಲ್ಲಿ ಉಳಿದ ಊಟವನ್ನು ಕೊಡಲು ರಾತ್ರಿ 11 ಕ್ಕೆ ಒಂದು ಆಟೋ ಬರೋದು. ಆಗ ಈ ಸುದ್ದಿಯು ಹಾಸ್ಟೆಲ್ಲಿನಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿ ತಟ್ಟೆ ಹಿಡಿದುಕೊಂಡು ಎಲ್ಲರೂ ಬರುತ್ತಿದ್ದರು. ಅವರು ತಂದ ಊಟವೆಲ್ಲಾ ಖಾಲಿಯಾಗೋದು!! ಉಳಿದ ಆಹಾರವನ್ನು ವ್ಯರ್ಥ ಮಾಡದೇ ಈ ರೀತಿ ಕೊಡುತ್ತಿದ್ದ ಹಾಗೂ ತರುತ್ತಿದ್ದವರಿಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು. ಇಂದಿಗೂ ಸಹ ದಾವಣಗೆರೆಯಲ್ಲಿ ಈ ರೀತಿಯ ಸಂಸ್ಥೆಗಳು ಇರುವುದು ಖುಷಿಯ ವಿಷಯ. ಇಂತಹ ಕಷ್ಟಮಯ ವಾತಾವರಣದಲ್ಲಿ ಬೆಳೆದ ನನಗೆ ಇಂದಿಗೂ ಯಾರೇ ಆಗಲೀ ಆಹಾರವನ್ನು ವ್ಯರ್ಥ ಮಾಡಿದರೆ ಬೇಸರವೆನಿಸುತ್ತದೆ.

‘ತಿನ್ನಲು ಬದುಕಬಾರದು, ಬದುಕಲು ತಿನ್ನಬೇಕು’ ಎಂಬ ವೇದಾಂತದ ನುಡಿಗಳು ನಮಗೆ ಈ ವಯಸ್ಸಿನಲ್ಲಿ ಇಷ್ಟವಾಗದ್ದರಿಂದ ನಾವು ನಮ್ಮ ಜಿಹ್ವಾ ಚಪಲತೆಯನ್ನು ತಣಿಸಲು ಯಾರೇ ಕರೆಯಲಿ, ಯಾವುದೇ ಫಂಕ್ಷನ್‌ಗಳನ್ನು ತಪ್ಪಿಸುತ್ತಿರಲಿಲ್ಲ. ಹೀಗೆ ಇರಬೇಕಾದರೆ ಒಮ್ಮೆ ನಾನು, ಸುಧಾಕರ, ಲಿಂಗರಾಜ ಮೂರೂ ಜನ ನಮ್ಮ ಆಸೆ ಈಡೇರಿಸಿಕೊಳ್ಳಲು ದಾವಣಗೆರೆಯಲ್ಲಿ ಪ್ರಸಿದ್ಧವಾಗಿದ್ದ ಸಿರಿವಂತರ ಮದುವೆಗಳು ಮಾತ್ರ ನಡೆಯುತ್ತಿದ್ದ ಗುಂಡಿ ಛತ್ರಕ್ಕೆ ಹೋಗಲು ತೀರ್ಮಾನಿಸಿದೆವು. ಅಲ್ಲಿ ಯಾರಾದರೂ ಪರಿಚಿತರು ಸಿಕ್ಕರೆ ಗತಿ ಏನು? ಎಂಬ ಪ್ರಶ್ನೆ ನಮ್ಮಲ್ಲಿ ಮೂಡಿದ್ದರಿಂದ ಇದಕ್ಕಾಗಿ ನಾವು ಸಾಕಷ್ಟು ಗ್ರೌಂಡ್ ವರ್ಕ್ ಮಾಡಿಕೊಂಡಿದ್ದೆವು. ಛತ್ರದಲ್ಲಿ ಮದುವೆ ಇರೋ ಬಗ್ಗೆ ಖಾತ್ರಿಪಡಿಸಿಕೊಂಡು ಗಂಡು, ಹೆಣ್ಣಿನ ಹೆಸರು, ಅವರ ಊರಿನ ಊರಿನ ಮಾಹಿತಿ ಕಲೆ ಹಾಕಿದ್ದೆವು. ಛತ್ರದ ಮುಂದೆ ನಿಂತಾಗ, ಸುತ್ತಲೂ ಝಗಮಗಿಸುವ ವಿದ್ಯುತ್ ಅಲಂಕಾರ ನೋಡಿ ಇದು ಭಾರೀ ಕುಳದ ಮದುವೆಯೇ ಇರಬೇಕು. ಭೂರಿ ಭೋಜನದ ವ್ಯವಸ್ಥೆ ಇರುತ್ತದೆ ಎಂದು ಕಲ್ಪಿಸಿಕೊಂಡು ಬಾಯಲ್ಲಿ ನೀರೂರಿಸಿಕೊಂಡು ಹೊರಟೆವು. ಯಾರಿಗೂ ಅಪರಿಚಿತರು ಎಂಬ ಅನುಮಾನ ಬಾರದಿರಲೆಂದು ಇರುವ ಬಟ್ಟೆಗಳಲ್ಲೇ ಟ್ರಿಮ್ಮಾಗಿ ಕಾಣುವಂತೆ ನೋಡಿಕೊಂಡಿದ್ದೆವು.

ಆತನಕ ಎಲ್ಲಾ ಅಂದುಕೊಂಡಂತೆಯೇ ನಡೆದು ಇನ್ನೇನು ಛತ್ರದೊಳಗೆ ಎರಡು ಹೆಜ್ಜೆ ಹೋಗಿಲ್ಲ, ಅಷ್ಟರೊಳಗೆ ಪ್ರೌಢಶಾಲಾ ಗೆಳೆಯ, ನನ್ನ ಜ್ಯೂನಿಯರ್ ಒಬ್ಬ ಸಿಕ್ಕ. ನನ್ನ ಮುಖಪರಿಚಯ ಚೆನ್ನಾಗಿಯೇ ಇದ್ದ ಮಂಜುನಾಥನೇ ಅವನು! ನಾನು ಅವನ ಮುಖ ಕಂಡೊಡನೆಯೇ ತಬ್ಬಿಬ್ಬಾಗಿ, ನನ್ನ ಪರಿಚಿತರ ಮದುವೆಗೆ ಬಂದಿದ್ದೇನೆ ಎಂದು ಅವನ ಎದುರು ತೋರ್ಪಡಿಸಿಕೊಳ್ಳಲು, ಅವನು ಮಾತಾಡುವ ಮುನ್ನವೇ ‘ಏನ್ ಮಂಜು ಇಲ್ಲಿ?’ ಎಂದು ಪ್ರಶ್ನಿಸಿದೆ. ಅದಕ್ಕವನು ಅತ್ಯಾಶ್ಚರ್ಯ ಮುಖ ಭಾವದಿಂದ ‘ಅಣ್ಣಾ, ಇಲ್ಲಿ ನಡೆಯುತ್ತಿರುವುದು ನನ್ನ ಸ್ವಂತ ಅಕ್ಕನ ಮದುವೆ’ ಎಂದ! ಈಗ ತಬ್ಬಿಬ್ಬಾಗುವ ಸರದಿ ನನ್ನದಾಗಿತ್ತು. ತುಸು ದಿಗಿಲುಗೊಂಡ ನಂತರ ಅವನಿಗೆ ಏನು ಉತ್ತರ ಕೊಡಬೇಕೆಂದೇ ತಿಳಿಯಲಿಲ್ಲ. ನನ್ನ ಜೊತೆಗಾರರು ಒಂದು ಕ್ಷಣ ಗಾಬರಿಗೊಂಡು ನನ್ನತ್ತ ದೃಷ್ಟಿ ಹರಿಸಿದರು. ‘ಕರೆಯದೇ ಬರುವವನ, ಬರೆಯದೇ ಓದುವವನ….ʼ ಎಂಬ ಸರ್ವಜ್ಞನ ಮಾತು ನೆನಪಿಸಿಕೊಂಡು ಅಲ್ಲಿ ಉಂಟಾದ ಮುಜುಗರದಿಂದ ಪಾರಾಗಲು, ನಾವು ಹುಡುಗನ ಕಡೆಯಿಂದ ಬಂದಿದ್ದೇವೆ ಎಂದು ಈ ಮೊದಲೇ ಓದಿಕೊಂಡು ಬಂದಿದ್ದ ವರನ ಊರ ಹೆಸರನ್ನು ಹೇಳುವ ಮೂಲಕ ಅವನಿಂದ ತಪ್ಪಿಸಿಕೊಂಡೆ. ಅವನು ‘ಹೌದಾ, ಊಟ ಮುಗಿಸಿಕೊಂಡು ಹೋಗಿ’ ಎಂದ. ನಾನು ಮನಸ್ಸಿನಲ್ಲಿ ‘ಬಂದಿರೋದು ಇದಕ್ಕೇ ತಾನೇ?’ ಎಂದು ಹೇಳಿಕೊಂಡು ಅವನಿಂದ ಜಾರಿಕೊಂಡೆವು.

ಇದೇ ಮೊದಲ ಬಾರಿಗೆ ನಾವು ಈ ರೀತಿ ಕರೆಯದೇ ಇರುವವರ ಮದುವೆಗೆ ಮದುವೆಗೆ ಹೋಗಿ ಪೇಚಿಗೆ ಸಿಕ್ಕಿ ಹಾಕಿಕೊಂಡ್ವಿ! ಒಂದೊಮ್ಮೆ ಅವನು ಹೆಚ್ಚಿನ ಮಾಹಿತಿ ಕೇಳಿದ್ದರೆ ನಮ್ಮ ಬಂಡವಾಳ ಬಯಲಾಗುತ್ತಿತ್ತು. ಅದಕ್ಕೆ ಅವಕಾಶ ಕೊಡದೇ, ತಕ್ಷಣ ಅಲ್ಲಿಂದ ಊಟದ ಹಾಲ್‌ಗೆ ಹೋಗಿ ಮತ್ತಿನ್ಯಾರಾದರೂ ಸಿಕ್ಕಿ ಎಲ್ಲಿ ನಮ್ಮ ನಿಜ ಸ್ಥಿತಿ ತಿಳಿಯುತ್ತದೋ ಎಂಬ ಭಯದಿಂದ ಗಬಗಬನೇ ಊಟ ತಿಂದು ಹಾಸ್ಟೆಲ್ಲಿಗೆ ವಾಪಸ್ಸಾದೆವು. ಈಗಲೂ ಈ ಛತ್ರದ ಮುಂದೆ ಹಾದು ಹೋಗುವಾಗ ಆ ಘಟನೆಯು ನೆನಪಾಗಿ ಮನದಲ್ಲೇ ನಕ್ಕು ಮುಂದೆ ಸಾಗುತ್ತೇನೆ.

‘ಉದರನಿಮಿತ್ತಂ ಬಹುಕೃತ ವೇಷಂ’ ಎಂಬ ಮಾತಿನಂತೆ ನಾವು ರುಚಿಯಾದ ಊಟಕ್ಕಾಗಿ ಸುಳ್ಳಿನ ವೇಷ ತೊಟ್ಟೆವು! ಮತ್ತೆ ಬೇರೆ ಬೇರೆ ಮದುವೆಗೆ ಹೋದರೂ ಈ ರೀತಿ ಅಪರಿಚಿತರ ಮದುವೆಗೆ ಹೋಗೋ ಪ್ರಯತ್ನ ಮಾಡಲಿಲ್ಲ. ‘ಬಡವ ನೀ ಮಡಗಿದಂಗಿರು’ ಅಂತಾ ಹಾಸ್ಟೆಲ್ಲಿನ ಅದೇ ಮುದ್ದೆ ಸಾಂಬಾರ್ ತಿಂದುಕೊಂಡು ಇದ್ವಿ. ಆದರೂ ನಮ್ಮ ಹಾಸ್ಟೆಲ್ಲಿನಲ್ಲಿ ಕೆಲ ಹುಡುಗರು ವಾರ್ಡನ್ ಗೊತ್ತಾಗದಂತೆ ವಾಟರ್ ಹೀಟರ್, ಸೀಮೆ ಎಣ್ಣೆ ಸ್ಟೌವ್ ಇಟ್ಟುಕೊಂಡಿದ್ದರು. ಸರಿಸುಮಾರು 90 ರೂಮುಗಳಿದ್ದ ದೊಡ್ಡ ಹಾಸ್ಟೆಲಾದ್ದರಿಂದ ಮತ್ತು ಕೆಲವರ ಕಾಲೇಜುಗಳು ಬೇರೆ ಬೇರೆ ಸಮಯ ಇದ್ದುದರಿಂದ ಅವರಿಗೆ ಚೆಕ್ ಮಾಡಲು ಆಗುತ್ತಿರಲಿಲ್ಲ. ಒಂದೊಮ್ಮೆ ಚೆಕ್ ಮಾಡಲು ಬಂದರೆ ತಕ್ಷಣ ಎಲ್ಲರೂ ಅವನ್ನು ಬೇರೆಡೆ ಶಿಫ್ಟ್ ಮಾಡುತ್ತಿದ್ದರು!

ಊಟದ ವಿಷಯಕ್ಕೆ ಹೋಲಿಸಿದರೆ ಹಿಂದಿದ್ದ ಸ್ಥಿತಿ ಇಂದು ಇಲ್ಲ. ನಮ್ಮೂರಲ್ಲಿ ಕೆಲವರ ಮನೆಯಲ್ಲಿ ಹಬ್ಬದಲ್ಲಿ ಮಾತ್ರ ಅನ್ನ ಮಾಡುತ್ತಿದ್ದರು. ಪ್ರತಿದಿನ ಮುದ್ದೆ, ರೊಟ್ಟಿಯೇ ಅವರ ಊಟವಾಗಿರುತ್ತಿತ್ತು. ಆಗ ಹಳ್ಳಿಯಲ್ಲಿ ಯಾರದ್ದಾದರೂ ಮನೆಯ ಫಂಕ್ಷನ್ ನಡೆದರೆ ಜನಜಾತ್ರೆ ಆಗೋದು. ಊಟಕ್ಕಂತೂ ಯಾರೂ ಮಿಸ್ ಮಾಡುತ್ತಾ ಇರಲಿಲ್ಲ. ನಾವೂ ಹೋದಾಗ ಚಿಕ್ಕವರನ್ನು ಊಟದ ಪಂಕ್ತಿಗೆ ಕೂರಿಸಲು ಬಯ್ಯುತ್ತಿದ್ದರು! ಬೇರೆ ಊರಿನ ಮದುವೆಗಳಿಗೆ ಟ್ರ್ಯಾಕ್ಟರ್, ಲಾರಿ, ಬಸ್ ವ್ಯವಸ್ಥೆಯನ್ನು ಮದುವೆ ಮನೆಯವರು ಮಾಡಿದರೆ ಅವು ತುಂಬಿ ತುಳುಕುತ್ತಿದ್ದವು. ಆದರೆ ಆ ಪರಿಸ್ಥಿತಿ ಇಂದು ಇಲ್ಲ. ಎಲ್ಲವೂ ಬದಲಾಗಿದೆ. ಕರೆದರೂ ಫಂಕ್ಷನ್‌ಗಳಿಗೆ ಬರುವುದು ಕಷ್ಟ. ಅಂತಾದ್ರಲ್ಲಿ ಕರೆಯದೇ ಬರುವುದು ದೂರದ ಮಾತು!


ಊಟದ ಬಗ್ಗೆ ‘ಅದನ್ನು ಚೆಲ್ಲಬಾರದು’ ಎಂಬ ಮಾತು ಪಾಲನೆಯಾಗುತ್ತಿಲ್ಲ. ಸಭೆ ಸಮಾರಂಭಗಳಲ್ಲಿ ಊಟವು ಸಿಕ್ಕಾಪಟ್ಟೆ ವ್ಯರ್ಥವಾಗುತ್ತಿದೆ! ಹಿಂದೆ ಹಿರಿಯರು ಅನ್ನದಲ್ಲಿ ‘ಅನ್ನಪೂರ್ಣೇಶ್ವರಿಯ ಸ್ವರೂಪ’ ಕಂಡು ‘ಈ ಜನ್ಮದಲ್ಲಿ ಅನ್ನ ಚೆಲ್ಲಿದರೆ ಮುಂದಿನ ಜನ್ಮದಲ್ಲಿ ಅನ್ನ ಸಿಗೋಲ್ಲ’ ಎಂಬ ಮಾತನ್ನು ಎಳವೆಯಿಂದಲೂ ಹೇಳಿ ಹೇಳಿ ಈಗಲೂ ಈ ಮಾತು ಊಟ ಮಾಡುವಾಗ ನಮ್ಮ ಕಿವಿಯಲ್ಲಿ ಅದು ಕೇಳಿದಂತಾಗಿ ಆಹಾರ ವ್ಯರ್ಥ ಮಾಡಲು ಮನಸ್ಸೇ ಬರುವುದಿಲ್ಲ. ‘ಅನ್ನ ಪರಬ್ರಹ್ಮ ಸ್ವರೂಪ’ ಎಂಬ ವಾಕ್ಯ ನಮ್ಮ ಕಣ್ಣ ಮುಂದೆಯೇ ಹಾದು ಹೋದಂತಾಗುತ್ತದೆ!!