ನಾವು ಗುಹೆಯಲ್ಲಿ ನಿಂತುಕೊಂಡು ಆಕಾಶದ ಕಡೆಗೆ ನೋಡಿದಾಗ ಮಳೆ ಒಂದೇ ಸಮನೆ ಸುರಿಯುತ್ತಿತ್ತು, ಆದರೆ ನಾವು ತೂತುಗಳಿಂದ ದೂರಕ್ಕೆ ನಿಂತಿದ್ದರಿಂದ ನೆನೆಯಲಿಲ್ಲ. ಬಿದ್ದ ನೀರು ಜರೋ ಎಂದು ಸದ್ದು ಮಾಡುತ್ತ ಹರಿದುಹೋಗುತ್ತಿದ್ದರೂ ನಮಗೆ ಕಾಣಿಸಲಿಲ್ಲ. ಸೂರ್ಯನ ಬೆಳಕು ನೇರವಾಗಿ ಗುಹೆಗಳ ಒಳಕ್ಕೆ ಬೀಳುವುದರ ಜೊತೆಗೆ ಮಳೆಗಾಲದಲ್ಲಿ ಅಪಾರವಾದ ಮಳೆ ಗುಹೆಗಳ ಒಳಕ್ಕೆ ಸುರಿಯುತ್ತದೆ. ಬಿದ್ದ ಮಳೆ ಬೆಟ್ಟದ ಯಾವುದೊ ಕಡೆಗೆ ಬಿರುಕುಗಳ ಮೂಲಕ ಹರಿದುಹೋಗುತ್ತದೆ.
ಡಾ. ಎಂ. ವೆಂಕಟಸ್ವಾಮಿ ಬರೆದ ಮಲೇಷ್ಯಾ ಪ್ರವಾಸದ ಮತ್ತಷ್ಟು ಅನುಭವಗಳು ನಿಮ್ಮ ಓದಿಗೆ
2019ರ ಅಕ್ಟೋಬರ್ 11ರ ರಾತ್ರಿ ಬೆಂಗಳೂರಿನಲ್ಲಿ ಸಿಂಗಾಪುರ ಅಂತರರಾಷ್ಟ್ರೀಯ ವಿಮಾನದಲ್ಲಿ ಕುಳಿತಾಗ `ದಿ ಸ್ಟ್ರೈಟ್ಸ್ ಟೈಮ್ಸ್’ ಪತ್ರಿಕೆ ಕೈಗೆ ಸಿಕ್ಕಿ ಕಣ್ಣಾಡಿಸಿದೆ. ಆಗ್ನೇಯ ಏಷ್ಯಾ ದೇಶಗಳು ಉರಿಯುತ್ತಿರುವ ಅರಣ್ಯಗಳ ಬೆಂಕಿಯ ಹೊಗೆಯಿಂದ ಉಸಿರಾಡಲಾಗದೆ ತತ್ತರಿಸುತ್ತಿವೆ ಎಂಬ ಶೀರ್ಷಿಕೆ ನೋಡಿ ಕುತೂಹಲಗೊಂಡು ಓದಿದೆ. ನನ್ನಲ್ಲಿ ಸಣ್ಣದಾಗಿ ಅಳುಕು ಕಾಣಿಸಿಕೊಂಡಿತು. ಮರುದಿನ ಬೆಳಿಗ್ಗೆ ಸಿಂಗಾಪುರ ವಿಮಾನದಲ್ಲಿ ಇಳಿದಾಗ ದಟ್ಟವಾದ ಹೊಗೆ/ಮಬ್ಬು ಕವಿದಿತ್ತು. ಅಲ್ಲಿಂದ ವಿಮಾನ ಹತ್ತಿ ಮಲೇಷ್ಯಾದ ರಾಜಧಾನಿ ಕೌಲಾಲಂಪುರ್‌ದಲ್ಲಿ ಇಳಿದಾಗಲೂ ಮಜು/ಮಬ್ಬು ಕವಿದಿತ್ತು. ಏರ್‌ಪೋಟ್‌ನಲ್ಲಿ ದೊರಕಿದ ಪತ್ರಿಕೆಗಳ ಮುಖಪುಟಗಳಲ್ಲೂ ಅದೇ ವಿಷಯ ತುಂಬಿಕೊಂಡಿತ್ತು. ರಸ್ತೆಗಳು, ಎತ್ತರೆತ್ತರ ಕಟ್ಟಡಗಳು, ಗಿಡಮರಗಳ ಸುತ್ತ ಹೊಗೆ ಸುತ್ತುವರಿದಿತ್ತು. ಸಾಕಷ್ಟು ಜನರು ಮುಖವಾಡಗಳನ್ನು ಧರಿಸಿ ಓಡಾಡುತ್ತಿದ್ದರು. ಆಗ್ನೇಯ ಏಷ್ಯಾ ದೇಶಗಳೆಲ್ಲ ಸಮಶೀತೋಷ್ಣ ತಾಪಮಾನದಿಂದ ಕೂಡಿದ ದೇಶಗಳಾಗಿವೆ.
ಕೌಲಾಲಂಪುರ ಇಡೀ ನಗರವೇ ಸಂಪೂರ್ಣವಾಗಿ ವಿಷಮ ಗಾಳಿಯಿಂದ ಉಸಿರುಗಟ್ಟಿದಂತೆ ತೋರುತ್ತಿತ್ತು. ಆದರೆ ನನ್ನ ಜೊತೆಗೆ ಬಂದಿದ್ದ 14 ಭಾರತೀಯ ಪ್ಯಾಕೇಜ್ ಪ್ರವಾಸಿಗರು ಯಾವ ಅಳುಕು ಇಲ್ಲದೇ ದಟ್ಟ ಮಂಜು/ಹೊಗೆಯ ವಾತಾವರಣದಲ್ಲಿ ನಡೆಯುತ್ತಿದ್ದರು. ಸುತ್ತಮುತ್ತಲೂ ಮಬ್ಬುಮಬ್ಬಾಗಿ ಆಕಾಶವೆಲ್ಲ ಹೊಗೆ ತುಂಬಿಕೊಂಡಿರುವಂತೆ ಕಾಣಿಸುತ್ತಿತ್ತು. ಗೈಡ್‌ನ ಕೇಳಿದಾಗ ಇಂಡೋನೇಷ್ಯಾದಲ್ಲಿ ಅರಣ್ಯಗಳು ಹೊತ್ತಿ ಉರಿಯುತ್ತಿದ್ದು ಆ ಹೊಗೆ ಇಲ್ಲಿಗೂ ತಲುಪಿದೆ ಎಂದನು. ಜಾಗತಿಕ ತಾಪಮಾನ ಇದಕ್ಕೆ ಕಾರಣ ಎನ್ನುವುದು ತೀರಾ ಸರಳವಾದ ಮಾತಾಗುತ್ತದೆ. ಆದರೆ ಅದರ ವಿಷದ ಬಿಳಲುಗಳು ಮಾತ್ರ ಇಂದಿನ ಆಧುನಿಕ ಜಗತ್ತಿನಲ್ಲಿ ಸಾವಿರಾರು ರೂಪಗಳಲ್ಲಿ ಕಾಣಿಸಿಕೊಳ್ಳುತ್ತಿದೆ. ಅದರಲ್ಲಿ ಅರಣ್ಯನಾಶ ಮನುಷ್ಯ ಸೃಷ್ಟಿಸಿದ ಅತ್ಯಂತ ವಿಷಮ ವಿಪತ್ತಾಗಿದೆ. ಇಂಡೋನೇಷ್ಯಾದ ಪೂರ್ವ ತಟದಿಂದ ಕೌಲಾಲಂಪುರಕ್ಕೆ ಸುಮಾರು 2000 ಕಿ.ಮೀ.ಗಳು ದೂರವಿದ್ದು ಅಲ್ಲಿಯವರೆಗೂ ಹೊಗೆ ಸಾಗಿಬಂದಿದೆ ಎಂದರೆ ಎಷ್ಟು ಅರಣ್ಯ ಸುಟ್ಟು ಕರಕಲಾಗಿದೆ ಎಂಬುದನ್ನು ಊಹಿಸುವುದು ಕಷ್ಟಲಸಾಧ್ಯವಾಗಿದೆ. ಇಂಡೋನೇಷ್ಯಾ 1.905 ದಶಲಕ್ಷ ಚ.ಕಿ.ಮೀ. ವಿಸ್ತೀರ್ಣ ಇರುವ ದೊಡ್ಡ ದೇಶವಾಗಿದ್ದು ಅಪಾರ ಮಳೆಕಾಡನ್ನು ಹೊಂದಿರುವ ದೇಶವಾಗಿದೆ.
ಏಷ್ಯಾದ ಆಗ್ನೇಯ ದೇಶಗಳ ಅರಣ್ಯಗಳು ಇತ್ತೀಚೆಗೆ ನಿರಂತರವಾಗಿ ಬೆಂಕಿಗೆ ಆಹುತಿಯಾಗುತ್ತಿದ್ದು ಜಾಗತಿಕ ಮಟ್ಟದಲ್ಲಿ ಪರಿಸರ ಮಾಲಿನ್ಯವಾಗುತ್ತಿದೆ. ಇದರಿಂದ ಈ ದೇಶಗಳ ಜನರ ಆರೋಗ್ಯದ ಮೇಲೆ ಅಪಾಯಕಾರಿ ಪರಿಣಾಮ ಬೀರುತ್ತಿದ್ದು ಆರ್ಥಿಕವಾಗಿಯೂ ಹೆಚ್ಚು ನಷ್ಟಕ್ಕೆ ಒಳಗಾಗುತ್ತಿವೆ. ಮುಖ್ಯವಾಗಿ ಬ್ರೂನಿ, ದಾರುಸ್ಸಲಾಮ್, ಇಂಡೋನೇಷ್ಯಾ, ಫಿಲಿಪೈನ್ಸ್, ಥೈಲ್ಯಾಂಡ್, ಸಿಂಗಾಪುರ, ಮಲೇಷ್ಯಾ ದೇಶಗಳು ಈ ದುರಂತಕ್ಕೆ ಸಿಲುಕಿಕೊಂಡಿವೆ. ಪ್ರತಿ ಬೇಸಿಗೆಯಲ್ಲೂ ದಟ್ಟವಾದ ಅಪಾರ ಮಳೆಕಾಡುಗಳು ಹೊತ್ತಿ ಉರಿಯುತ್ತಿರುತ್ತವೆ. ಬ್ರೂನಿ ಪ್ರಾಂತ್ಯದಲ್ಲಿ ಅಳಿವಿನ ಅಂಚಿನಲ್ಲಿರುವ ಒರಾಂಗುಟನ್ ಸಂಕುಲ ಅಪಾಯಕ್ಕೆ ಸಿಕ್ಕಿಕೊಂಡಿದೆ ಎಂಬ ವರದಿಗಳು ಬರುತ್ತಿವೆ. ಡಜನ್‌ಗಟ್ಟಲೆ ಏಪ್ ಮರಿಗಳು ಹೊಗೆಗೆ ಸಿಕ್ಕಿಕೊಂಡು ಉಸಿರಾಡಲಾಗದೆ ರಕ್ಷಣಾ ಕೇಂದ್ರಗಳಲ್ಲಿ ನರಳುತ್ತಿರುವುದಾಗಿಯೂ ವರದಿಗಳು ಬಂದಿದ್ದವು. ಇಂಡೋನೇಷ್ಯಾ ಜಗತ್ತಿನ ವೈವಿಧ್ಯ ಪ್ರಾಣಿ ಮತ್ತು ಸಸ್ಯಸಂಕುಲಗಳ ತಾಣವಾಗಿದೆ. ಅಪಾರ ಸಸ್ಯ/ಪ್ರಾಣಿಸುಂಕುಲ ಉಸಿರುಗಟ್ಟುವ ವಾತಾವರಣದಲ್ಲಿ ಸಿಕ್ಕಿಕೊಂಡು ಜೀವಜಗತ್ತಿನ ಅಮೂಲ್ಯ ಜೈವಿಕವೈವಿಧ್ಯ ಕಳೆದುಹೋಗುತ್ತಿರುವುದು ಕಳವಳಕಾರಿ ವಿಷಯವಾಗಿದೆ.
ಇಂಡೋನೇಷ್ಯಾದಲ್ಲಿ ನಡೆಯುವ ಅಕ್ರಮ ಕೃಷಿ ಮತ್ತು ಕೈಗಾರಿಕೆಗಳ ಸ್ಥಾಪನೆ ಅರಣ್ಯ ನಾಶಕ್ಕೆ ಮುಖ್ಯ ಕಾರಣವಾಗಿದೆ. ದಕ್ಷಿಣ ಸುಮಾತ್ರಾ, ರಿಯಾವು ಮತ್ತು ಕಲಿಮಂತನ್ ಪ್ರದೇಶಗಳಲ್ಲಿ ಅಕ್ರಮ ಚಟುವಟಿಕೆಗಳು ಹೆಚ್ಚಾಗಿ ನಡೆಯುತ್ತಿದ್ದು ಇದರಲ್ಲಿ ಹೆಚ್ಚು ತಾಳೆ ಎಣ್ಣೆ ಕೃಷಿ ಮತ್ತು ಮರದತಿರುಳು ತೆಗೆಯುವುದು ಕಾರಣವಾಗಿದೆ. ಜಗತ್ತಿನ ಪ್ರಖ್ಯಾತ ಬ್ರ್ಯಾಂಡ್ ಕಂಪನಿಗಳು ತಮ್ಮ ಆಹಾರ ಪದಾರ್ಥಗಳ ತಯಾರಿಕೆಗೆ ತಾಳೆ ಎಣ್ಣೆಯನ್ನು ಉಪಯೋಗಿಸುತ್ತಿದ್ದು ಅದು ಹೆಚ್ಚಾಗಿ ಇಂಡೋನೇಷ್ಯಾದಲ್ಲಿ ಬೆಳೆಯಲಾಗುತ್ತಿದ್ದು ಅರಣ್ಯನಾಶಕ್ಕೆ ಮುಖ್ಯ ಕಾರಣವಾಗಿದೆ. ಅರಣ್ಯನಾಶದಿಂದ ಆಗ್ನೇಯ ದೇಶಗಳ ಜಿಡಿಪಿ ಆಗಾಗ ಕೆಳಕ್ಕೆ ಜಾರಿ ಬೀಳುತ್ತಿರುತ್ತದೆ. 2015ರಲ್ಲಿ ಇದೇ ರೀತಿಯ ವಿಷ ಹೊಗೆ ಆವರಿಸಿಕೊಂಡು ಇಂಡೋನೇಷ್ಯಾ 221 ಟ್ರಿಲಿಯನ್ ರೂಪಾಯಿಗಳ ನಷ್ಟವನ್ನು ಅನುಭವಿಸಿತು. ಇದು ಆರೋಗ್ಯ, ಪ್ರವಾಸೋದ್ಯಮ, ಶಿಕ್ಷಣ, ವ್ಯಾಪಾರ, ಅಗ್ನಿಶಾಮಕ, ಗಣಿಗಾರಿಕೆ ಉತ್ಪಾದನೆಯ ಮೇಲೆ ವ್ಯತಿರಿಕ್ತ ಪರಿಣಾಮಗಳನ್ನು ಬೀರುತ್ತದೆ.
ಕಳೆದ ಎರಡುಮೂರು ವಾರಗಳಲ್ಲಿ ವಿಷಕಾರಿ ಹೊಗೆಯಿಂದ ಇಂಡೋನೇಷ್ಯಾದಲ್ಲಿ ನೂರಾರು ಶಾಲೆಗಳಿಗೆ ರಜಾ ಘೋಷಿಸಲಾಯಿತು. ಸಾಧ್ಯವಾದಷ್ಟು ಜನರನ್ನು ವಿಶೇಷವಾಗಿ ವೃದ್ಧರನ್ನು ಮತ್ತು ಮಕ್ಕಳನ್ನು ಮನೆಗಳ ಒಳಗೆ ಇರುವಂತೆ ತಿಳಿಸಲಾಯಿತು. ಆ ವಿಷಗಾಳಿ ಪಕ್ಕದ ಮಲೇಷ್ಯಾ ಮತ್ತು ಸಿಂಗಾಪುರ ದ್ವೀಪದವರೆಗೂ ಬೀಸಿ ಸೂರ್ಯನ ಬೆಳಕು ಕಾಣದಂತೆ ಮಾಡಿತ್ತು. ಎಲ್ಲಿ ನೋಡಿದರೂ ಹೊಗೆಯೇ ತುಂಬಿಕೊಂಡಿತ್ತು. ಸರ್ಕಾರ ಜನರಿಗೆ ಮುಖ ಕವಚಗಳನ್ನು ಹಾಕಿಕೊಂಡು ಓಡಾಡುವಂತೆ ಎಚ್ಚರಿಕೆ ನೀಡಿತ್ತು. ಸ್ಥಳೀಯರು, ಯುರೋಪ್ ಮತ್ತು ಇತರ ಪಶ್ಚಿಮ ದೇಶಗಳ ಜನರು ವಾತಾವರಣದ ಬಗ್ಗೆ ತಿಳಿದುಕೊಂಡು ಮುಖಗಳಿಗೆ ಕವಚಗಳನ್ನು ಕಟ್ಟಿಕೊಂಡು ಓಡಾಡುತ್ತಿದ್ದರು. ಗಾಳಿಯಲ್ಲಿ 10 ಮೈಕ್ರೊಮೀಟರ್‌ಗಳಿಗಿಂತ ಸಣ್ಣ ಕಣಗಳು ಹೆಚ್ಚಾಗಿದ್ದರೆ ಅವು ವಿಷಮಕಾರಿ. ಅವು 10 ರಿಂದ 50 ಒಳಗಿದ್ದರೆ ಪರವಾಗಿಲ್ಲ. ಆದರೆ 100ರ ಮೇಲಿದ್ದರೆ ಅಪಾಯಕಾರಿ, 200 ದಾಟಿದರೆ ವಿಷಮ ಪರಿಸ್ಥಿತಿ. ಕೆಲವು ಕಡೆ 200 ದಾಟಿ 300 ರವರೆಗೂ ಗಾಳಿಯಲ್ಲಿ ತುಂಬಿಕೊಂಡಿದ್ದವು. ಹೀಗಾದರೆ ಕಣ್ಣುಉರಿ, ಕೆಮ್ಮು, ಉಬ್ಬಸ, ಚರ್ಮ ಹುರಿ, ಉಸಿರಾಟಕ್ಕೆ ತೊಂದರೆಯಾಗಿ ಸಾವುಗಳು ಸಂಭವಿಸುತ್ತವೆ.
ಇಂಡೋನೇಷ್ಯಾದ ಅಧ್ಯಕ್ಷ ಜೋಕೊ ವಿಡೋಡೊ ಖುದ್ದಾಗಿ ಅರಣ್ಯದಲ್ಲಿ ಉಸ್ತುವಾರಿ ನಡೆಸಿದ್ದು ಒಟ್ಟು 14,000 ಜನರ ಸಿಬ್ಬಂದಿ ಬೆಂಕಿಯನ್ನು ನಂದಿಸುವ ಕೆಲಸದಲ್ಲಿ ತೊಡಗಿಕೊಂಡಿತ್ತು. ಅರಣ್ಯ ಬೆಂಕಿಗೆ ಕಾರಣರಾದ 200 ಜನರನ್ನು ಬಂಧಿಸಲಾಗಿತ್ತು. ಇಂಡೋನೇಷ್ಯಾದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ 40 ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಾಯಿತು. ಕೌಲಾಲಂಪುರದ ಜಗತ್ಪ್ರಸಿದ್ಧ ಅವಳಿ ಗೋಪುರಗಳನ್ನು ನೋಡಲು ಹೋದವರಿಗೆಲ್ಲ ನಿರಾಶೆ ಕಾದಿತ್ತು. ಅದರ ಮುಂದೆ ಸರಿಯಾಗಿ ಫೋಟೋ ಕೂಡ ಹಿಡಿದುಕೊಳ್ಳಲು ಆಗಲಿಲ್ಲ. ಕ್ಲೌಡ್ ಸೀಡ್ಲಿಂಗ್ ಮಾಡಿ ಯಾತ್ರಿಕರಿಗೆ ಕೌಲಾಲಂಪುರ ನೋಡಲು ಅನುಕೂಲ ಮಾಡೋಣವೆಂದರೆ ರಾಸಾಯನಿಕಗಳು ಸುರಿಯಲು ಮೋಡಗಳೆ ಇರಲಿಲ್ಲ. ಇಂಡೋನೇಷ್ಯಾ ಹವಾಮಾನ ಮತ್ತು ಭೂಭೌತಶಾಸ್ತ್ರ ಇಲಾಖೆ ಉಪಗ್ರಹದ ಮೂಲಕ ಅರಣ್ಯದಲ್ಲಿ ಕನಿಷ್ಠ 1000 ಹಾಟ್‌ಸ್ಪಾಟ್‌ಗಳು ಇರುವುದಾಗಿ ಗುರುತಿಸಿತ್ತು. ಡ್ರೋನ್‌ಗಳು ನಿರಂತರವಾಗಿ ಮಾಹಿತಿ ಒದಗಿಸುತ್ತಿದ್ದವು. ಹೆಲಿಕ್ಯಾಪ್ಟರ್‌ಗಳಲ್ಲಿ ನೀರನ್ನು ಮೇಲಿಂದ ಚೆಲ್ಲುತ್ತಿದ್ದು, ವಿಮಾನಗಳ ಮೂಲಕ ವಾಟರ್ ಬಾಂಬ್‌ಗಳನ್ನು ಎಸೆಯಲಾಗುತ್ತಿತ್ತು. ಇದರ ನಡುವೆ ಆಗಾಗ ಸಣ್ಣದಾಗಿ ಮಳೆ ಹನಿಯುತ್ತಿದ್ದು ಹೊಗೆ ಇನ್ನಷ್ಟು ಹೆಚ್ಚಾಗುತ್ತಿತ್ತು ಎಂಬುದಾಗಿ ಸುದ್ದಿಗಳು ಕೇಳಿಬರುತ್ತಿದ್ದವು. ಇತ್ತೀಚಿನ ದಶಕಗಳಲ್ಲಿ ಅಮೆರಿಕ, ಆಸ್ಟ್ರೇಲಿಯಾ, ಆಫ್ರಿಕಾ, ಇನ್ನೂ ಅನೇಕ ದೇಶಗಳಲ್ಲಿ ಸಾವಿರಾರು ಕಡೆ ಅರಣ್ಯಗಳು ಹೊತ್ತಿ ಉರಿಯುತ್ತಿರುವ ಸುದ್ದಿಗಳು ಬರುತ್ತಿವೆ. `ಭೂಮಿಯ ಶ್ವಾಸಕೋಶ’ ಎಂದು ಕರೆಯುವ ಅಮೆಜಾನ್ ಮಳೆಅರಣ್ಯ ಉರಿಯಲು ಪ್ರಾರಂಭವಾಗಿರುವುದು ಭೂಮಿಗೆ ಒಳ್ಳೆಯದಲ್ಲ.
ಮಲೇಷ್ಯಾದ ರಾಜಧಾನಿ ಕೌಲಾಲಂಪುರದ ಅಂಚಿನಲ್ಲಿರುವ ಬಟು ಗುಹೆಗಳ ಕಡೆಗೆ ವಾಹನದಲ್ಲಿ ಹೋಗುತ್ತಿದ್ದಂತೆ ದೂರದಿಂದಲೇ ರಸ್ತೆಯ ಎದುರಿಗೆ ಹಸಿರು ತುಂಬಿಕೊಂಡಿರುವ ದೊಡ್ಡಬೆಟ್ಟ ಅದರ ಮುಂದೆ ಎತ್ತರವಾದ ಬಂಗಾರ ಬಣ್ಣದ ಮುರುಗನ ಪ್ರತಿಮೆ ಕಾಣಿಸಿಕೊಂಡಿತು. ಹತ್ತಿರಕ್ಕೆ ತಲುಪಿದಾಗ ಅದು ತಮಿಳುನಾಡಿನ ಒಂದು ದೇವಸ್ಥಾನದಂತೆ ಕಾಣಿಸಿಕೊಂಡು ಅಲ್ಲಿ ದೊಡ್ಡ ಜಾತ್ರೆಯೆ ನಡೆಯುತ್ತಿತ್ತು. ಎಲ್ಲಿ ನೋಡಿದರು ತಮಿಳು ಮಾತನಾಡುವ ಜನರು ಮತ್ತು ಅಂಗಡಿಗಳು. ಸಣ್ಣದಾಗಿ ಮಳೆ ಹನಿಯುತ್ತಿದ್ದು ಅಂಗಡಿಯಲ್ಲಿ ಒಂದು ಕೊಡೆ ಕೊಂಡುಕೊಂಡು ಮೊದಲು ಗುಹೆಗಳನ್ನು ನೋಡಿಕೊಂಡು ಬಂದುಬಿಡೋಣ ಎಂದು ಬಣ್ಣಬಣ್ಣದ ದೊಡ್ಡದಾದ ಮೆಟ್ಟಿಲುಗಳನ್ನು ಹತ್ತಿಕೊಂಡು ಹೊರಟೆವು. ಎಲ್ಲಾ ದೇವಸ್ಥಾನಗಳ ಸುತ್ತಮುತ್ತಲೂ ಇರುವಂತೆ ಇಲ್ಲಿಯೂ ನೂರಾರು ಮಂಗಗಳು ಜನರ ಕೈ-ಬಾಯಿಗಳನ್ನು ನೋಡುತ್ತ ನಗೆದಾಡುತ್ತಿದ್ದವು.
ಬಟು ಗುಹೆಗಳ ಮುಂದಿರುವ ಕುಮಾರಸ್ವಾಮಿ ಶಿಲ್ಪ
ಜಗತ್ತಿನ ಹೆಚ್ಚೆಚ್ಚು ಪ್ರದೇಶಗಳಲ್ಲಿ ಸುಣ್ಣದ ಶಿಲೆಗಳಲ್ಲಿ (ಲೈಮ್ ಸ್ಟೋನ್) ಅಪರೂಪವಾದ ಮತ್ತು ಬಣ್ಣಬಣ್ಣದ ಗುಹೆಗಳು ರೂಪುಗೊಂಡಿರುವುದನ್ನು ನೋಡಬಹುದು. ಅದೇ ರೀತಿ ಮಲೇಷ್ಯಾದ ಬಟು ಹಳ್ಳಿಯ ಪಕ್ಕದಲ್ಲಿ ಸುಣ್ಣದ ಶಿಲೆಗಳ ಬೆಟ್ಟದಲ್ಲಿ ಸುಮಾರು 40 ಕೋಟಿ ವರ್ಷಗಳ ಹಿಂದೆ ನೈಸರ್ಗಿಕವಾಗಿ ಗುಹೆಗಳು ರೂಪುಗೊಂಡಿವೆ. ಈ ಗುಹೆಗಳನ್ನು ಮೊದಲಿಗೆ ಆದಿಮಾನವನು, ಅನಂತರ ಗುಹೆಗಳ ಪ್ರವೇಶ ದ್ವಾರಗಳನ್ನು ಸ್ಥಳೀಯ ತೆಮುವಾನ್ ಜನರು (ಒರಾಂಗ್ ಅಸ್ಲಿಯ ಬುಡಕಟ್ಟು) ಆಶ್ರಯಗಳಾಗಿ ಬಳಸಿಕೊಂಡಿದ್ದರು. ಕ್ರಿ.ಶ.1860ರ ದಶಕದಲ್ಲಿ ಇಲ್ಲಿದ್ದ ಚೀನಿಯರು ಗುಹೆಗಳ ಒಳಗೆ ಬಿದ್ದಿದ್ದ ಬಾವಲಿ ಇತರ ಪ್ರಾಣಿಗಳ ಗೊಬ್ಬರವನ್ನು ಸಂಗ್ರಹಿಸಿ ನೆಲಕ್ಕೆ ಚೆಲ್ಲಿ ತರಕಾರಿ ಇತರ ಬೆಳೆಗಳನ್ನು ಬೆಳೆಯುತ್ತಿದ್ದರು. ಅನಂತರ 1878ರಲ್ಲಿ ಅಮೆರಿಕದ ವಿಜ್ಞಾನಿಗಳು ಬಟು ಸುಣ್ಣದ ಶಿಲೆಗಳ ಗುಹೆಗಳನ್ನು ಗುರುತಿಸಿದ ಮೇಲೆ ಈ ಪ್ರದೇಶ ಪ್ರಸಿದ್ಧಿಗೆ ಬಂದಿತು. ಬೆಟ್ಟದ ಶಿಲೆಗಳಲ್ಲಿರುವ ಸುಣ್ಣದ ಖನಿಜಾಂಶ ಮಳೆ ನೀರಿನ ಜೊತೆಗೆ ಬೆರೆಯುತ್ತಾ ಮಿಶ್ರಣಗೊಂಡು ಲಕ್ಷಾಂತರ ವರ್ಷಗಳಲ್ಲಿ ಕರಗುತ್ತಾ ರೂಪುಗೊಂಡಿರುವ ಸ್ಟಾಲಗ್ಮೈಟ್ ಮತ್ತು ಸ್ಟಾಲ್ಕಟೈಟ್ ಕಲ್ಲು ಹೂವುಗಳನ್ನು ನೋಡಬಹುದು. ಆದರೆ ಇಲ್ಲಿ ಅವು ಅಷ್ಟೊಂದು ವೈವಿಧ್ಯಮಯ ಬಣ್ಣಗಳಿಂದ ಬೆಳೆದಿಲ್ಲ.
ಬ್ರಿಟಿಷರು, ಭಾರತವನ್ನು ಆಳುತ್ತಿದ್ದಾಗ ಮಲೇಷ್ಯಾದಲ್ಲಿ ಗಣಿಗಳು, ತೋಟಗಳು ಮತ್ತು ರಸ್ತೆಗಳನ್ನು ನಿರ್ಮಿಸಲು ಸಾಕಷ್ಟು ತಮಿಳು ಜನರನ್ನು ಮದ್ರಾಸ್ ಪ್ರೆಸಿಡೆನ್ಸಿಯಿಂದ ಕರೆದುಕೊಂಡು ಹೋದರು. ಅದಕ್ಕೂ ಮುಂಚೆ ನೂರಾರು ವರ್ಷಗಳ ಹಿಂದೆಯೆ ದಕ್ಷಿಣ ಭಾರತದ ಹಲವಾರು ರಾಜವಂಶಗಳು ಕಾಂಬೋಡಿಯಾ, ವಿಯಟ್ನಾಮ್, ಮಲೇಷ್ಯಾ, ಥೈಲ್ಯಾಂಡ್ ಇನ್ನಿತರ ಆಗ್ನೇಯ ಏಷ್ಯಾ ದೇಶಗಳ ಭಾಗಗಳನ್ನು ಆಳಿದ್ದು ಅಲ್ಲೆಲ್ಲ ಅದ್ಭುತವಾದ ಹಿಂದೂ ದೇವಾಲಯಗಳನ್ನು ನಿರ್ಮಿಸಿರುವುದು ಎಲ್ಲರಿಗೂ ತಿಳಿದಿರುವ ವಿಷಯವೇ ಆಗಿದೆ. 1892ರಲ್ಲಿ ಮಲೇಷ್ಯಾದಲ್ಲಿದ್ದ ತಮಿಳು ಮೂಲದ ಕೆ. ತಂಬೂಸಾಮಿ ಎಂಬ ವ್ಯಾಪಾರಿ ಬಟು ಗುಹೆಯ ಪ್ರವೇಶದ್ವಾರ ಮುರುಗನ ಶೂಲ (ವೆಲ್) ಆಕಾರದಲ್ಲಿರುವುದನ್ನು ಗಮನಿಸಿ ಸ್ಫೂರ್ತಿಗೊಂಡು ಅಲ್ಲಿ ದೇವಸ್ಥಾನ ಕಟ್ಟಲು ಪ್ರಾರಂಭಿಸಿದರು.
ಅದಕ್ಕೂ ಮುಂಚೆ ಇವರು 1890ರಲ್ಲಿ ತಮಿಳರೆ ಹೆಚ್ಚಾಗಿದ್ದ ಕೌಲಾಲಂಪುರ ಪಟ್ಟಣದ ಮಧ್ಯ ಭಾಗದಲ್ಲಿ ಶ್ರೀಮಾರಿಯಮ್ಮನ್ ದೇವಸ್ಥಾನವನ್ನು ಕಟ್ಟಿಸಿದ್ದರು. ಇಂದಿಗೂ ಈ ಪ್ರದೇಶವನ್ನು ಮಿನಿ ತಮಿಳುನಾಡು ಎಂದೇ ಕರೆಯುತ್ತಾರೆ. ಸುಮಾರು 500 ಅಡಿಗಳ ಎತ್ತರದ ಬಟು ಬೆಟ್ಟ ಹಸಿರಿನಿಂದ ಆವರಿಸಿಕೊಂಡಿದ್ದು ಬೆಟ್ಟದ ತಳದಿಂದ 100 ಮೀಟರುಗಳ ಎತ್ತರದಲ್ಲಿ ಗುಹೆಗಳು ರೂಪುಗೊಂಡಿವೆ. ಬೆಟ್ಟದ ಕೆಳಗೆ ದೊಡ್ಡದಾದ ದೇವಾಲಯವಿದ್ದು ಗುಹೆಗಳ ಒಳಗೆ ಸಣ್ಣ ದೇವಾಲಯಗಳನ್ನು ನಿರ್ಮಿಸಲಾಗಿದೆ. ಗುಹೆಯ ಎದುರಿಗೆ ಮೆಟ್ಟಿಲುಗಳ ಪಕ್ಕದಲ್ಲಿ 146 ಅಡಿಗಳ ಎತ್ತರದ ಭವ್ಯವಾದ ಮುರುಗನ ಬಂಗಾರ ಬಣ್ಣದ ಶಿಲ್ಪವನ್ನು ಸ್ಥಾಪಿಸಲಾಗಿದೆ. ಬಟು ಗುಹೆಯ ಕುಮಾರಸ್ವಾಮಿ ಮತ್ತು ಶ್ರೀಮಾರಿಯಮ್ಮನ್ ದೇವಾಲಯ ಇರುವ ಪ್ರದೇಶದಲ್ಲಿ ತಮಿಳರ ಥೈಮಾಸಂ ತಿಂಗಳಲ್ಲಿ (ಜನವರಿ-ಫೆಬ್ರವರಿ) ವಿಶೇಷ ಜಾತ್ರೆ ನಡೆಯುತ್ತದೆ.
ಬೆಟ್ಟದ ಒಳಗಿನ ಗುಹೆಗಳಲ್ಲಿ ಮುರುಗ ಮತ್ತು ಶ್ರೀರಾಮ-ಆಂಜನೇಯರ ದೇವಸ್ಥಾನಗಳನ್ನು ನಿರ್ಮಿಸಿ ಮೊದಲಿಗೆ ಮರದ ಮೆಟ್ಟಿಲುಗಳನ್ನು ನಿರ್ಮಿಸಲಾಯಿತು. ಅನಂತರ 1920ರಲ್ಲಿ ಅವುಗಳನ್ನು ಕೆಡವಿ 272 ಕಾಂಕ್ರೀಟ್ ಮೆಟ್ಟಿಲುಗಳನ್ನು ನಿರ್ಮಿಸಲಾಯಿತು. ಇತ್ತೀಚೆಗೆ ಈ ಮೆಟ್ಟಿಲುಗಳಿಗೆ ಸುಂದರ ಮತ್ತು ಆಕರ್ಷಕ ಬಣ್ಣಗಳನ್ನು ಬಳಿಯಲಾಗಿದೆ. ಗುಹೆಯ ಮುಂದೆ ನೆಲಮಟ್ಟದಲ್ಲಿ ನಿರ್ಮಿಸಿರುವ ಮುರುಗನ್ ಪ್ರತಿಮೆ 146 ಅಡಿಗಳ ಎತ್ತರವಿದ್ದು ಇದು ಜಗತ್ತಿನ ಎತ್ತರದ ಮುರುಗನ್ ಪ್ರತಿಮೆಯಾಗಿದೆ. ಈ ಪ್ರತಿಮೆ ನೋಡಲು ಬಹಳ ಆಕರ್ಷಕವಾಗಿದ್ದು ದೂರದಿಂದಲೇ ಎದ್ದು ಕಾಣಿಸುತ್ತದೆ. ಇದರ ಆಕರ್ಷಣೆಗೆ ಇನ್ನೊಂದು ಕಾರಣವೆಂದರೆ ಬಂಗಾರ ಬಣ್ಣ ಬಳಿದಿರುವುದು ಮತ್ತು ಅದರ ಹಿನ್ನೆಲೆಯಲ್ಲಿ ಹಸಿರು ಹೊದ್ದುಕೊಂಡು ನಿಂತಿರುವ ಬಟು ಬೆಟ್ಟ. ಈ ಪ್ರತಿಮೆಯನ್ನು ನಿರ್ಮಾಣ ಮಾಡಲು 1550 ಘನ ಮೀಟರುಗಳ ಕಾಂಕ್ರೀಟ್, 250 ಟನ್ನುಗಳ ಉಕ್ಕು ಮತ್ತು 300 ಲೀಟರುಗಳ ಚಿನ್ನದ ಬಣ್ಣವನ್ನು ಉಪಯೋಗಿಸಲಾಗಿದೆ.
ನೆಲಮಟ್ಟದಿಂದ 100 ಮೀಟರುಗಳ ಎತ್ತರದಲ್ಲಿರುವ ಈ ಗುಹೆಗಳ ಇನ್ನೊಂದು ವಿಶೇಷವೆಂದರೆ ಗುಹೆಗಳ ಒಳಗೆ ನಿಂತುಕೊಂಡು ಬೆಟ್ಟದಲ್ಲಿ ಬಿದ್ದಿರುವ ಎರಡು ತೂತುಗಳಿಂದ ಆಕಾಶವನ್ನು ನೋಡಬಹುದು. ಅವು ಭೂಮಿಯಿಂದ ಆಕಾಶದ ಕಡೆಗೆ ನೋಡಿದರೆ ಓಝೋನ್ ತೂತುಗಳಂತೆ ಕಾಣಿಸುತ್ತಿದ್ದವು. ನಾವು ಗುಹೆಯಲ್ಲಿ ನಿಂತುಕೊಂಡು ಆಕಾಶದ ಕಡೆಗೆ ನೋಡಿದಾಗ ಮಳೆ ಒಂದೇ ಸಮನೆ ಸುರಿಯುತ್ತಿತ್ತು, ಆದರೆ ನಾವು ತೂತುಗಳಿಂದ ದೂರಕ್ಕೆ ನಿಂತಿದ್ದರಿಂದ ನೆನೆಯಲಿಲ್ಲ. ಬಿದ್ದ ನೀರು ಜರೋ ಎಂದು ಸದ್ದು ಮಾಡುತ್ತ ಹರಿದುಹೋಗುತ್ತಿದ್ದರೂ ನಮಗೆ ಕಾಣಿಸಲಿಲ್ಲ. ಸೂರ್ಯನ ಬೆಳಕು ನೇರವಾಗಿ ಗುಹೆಗಳ ಒಳಕ್ಕೆ ಬೀಳುವುದರ ಜೊತೆಗೆ ಮಳೆಗಾಲದಲ್ಲಿ ಅಪಾರವಾದ ಮಳೆ ಗುಹೆಗಳ ಒಳಕ್ಕೆ ಸುರಿಯುತ್ತದೆ. ಬಿದ್ದ ಮಳೆ ಬೆಟ್ಟದ ಯಾವುದೊ ಕಡೆಗೆ ಬಿರುಕುಗಳ ಮೂಲಕ ಹರಿದುಹೋಗುತ್ತದೆ. ಅಂದರೆ ಎಷ್ಟೇ ಮಳೆ ಬಿದ್ದರೂ ಗುಹೆಗಳ ಒಳಗಿರುವ ದೇವಾಲಯಗಳಿಗೆ ಯಾವುದೇ ಅಪಾಯವಿಲ್ಲ. ಜೊತೆಗೆ ಮೆಟ್ಟಿಲುಗಳ ಮೂಲಕ ನೀರು ಹೊರಕ್ಕೆ ಹರಿದು ಬರದಂತೆ ಮೆಟ್ಟಿಲುಗಳಿರುವ ಕಡೆ ನೆಲವನ್ನು ಎತ್ತರಿಸಲಾಗಿದೆ. ಹಾಗಾಗಿ ಗುಹೆಗಳ ಒಳಗಿರುವ ದೇವಸ್ಥಾನಗಳಿಗಾಗಲಿ ಯಾತ್ರಿಕರಿಗಾಗಲಿ ನೀರಿನ ಪ್ರವಾಹದ ಅಪಾಯವಿಲ್ಲ. ಕೌಲಾಲಂಪುರ ನಗರ ಬಟು ಹಳ್ಳಿಯ ಗುಹೆಗಳವರೆಗೂ ಬೆಳೆದು ಬಂದಿದ್ದು ಮಲೇಷ್ಯಾಗೆ ಹೋಗಿಬರುವ ಯಾತ್ರಿಕರಿಗೆ ಬಟು ಗುಹೆಗಳು ಒಂದು ಪ್ರೇಕ್ಷಣೀಯ ಸ್ಥಳವಾಗಿದೆ. ಅಂತೂ ನಾವು ಉಸಿರುಗಟ್ಟಿ ತತ್ತರಿಸುತ್ತಿರುವ ಸಮಯದಲ್ಲೇ ಮಲೇಷ್ಯಾ ಮತ್ತು ಸಿಂಗಾಪುರಗಳನ್ನು ನೋಡಿಕೊಂಡು ಬಂದಿದ್ದೆವು.
(ಹಿಂದಿನ ಕಂತು: ಆಗ್ನೇಯ ಏಷ್ಯಾದ ಮಲೇಷ್ಯಾ ದೇಶ)
ಡಾ.ಎಂ.ವೆಂಕಟಸ್ವಾಮಿ ಮೂಲತಃ ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನ ಯರ್ರಗೊಂಡ ಬ್ಯಾಟರಾಯನಹಳ್ಳಿಯವರು. 1984ರಲ್ಲಿ ಲಕ್ನೋದಲ್ಲಿ ಭೂವಿಜ್ಞಾನಿಯಾಗಿ ಸೇರಿ, ಭಾರತೀಯ ಭೂವೈಜ್ಞಾನಿಕ ಸರ್ವೆಕ್ಷಣಾ ಇಲಾಖೆಯ (2015ರಲ್ಲಿ ನಾಗ್ಪುರದಲ್ಲಿ) ಮಹಾನಿರ್ದೇಶಕರಾಗಿ ನಿವೃತ್ತರಾಗಿದ್ದಾರೆ. ಕೆಲಕಾಲ ಕೆಜಿಎಫ್ನ ಎಲ್.ಐ.ಸಿ ಮತ್ತು ಮಧ್ಯಪ್ರದೇಶದ ಬಿಲಾಯ್ನಲ್ಲಿಯೂ ಕೆಲಸ ಮಾಡಿದ್ದಾರೆ.
3 ಕವನ ಸಂಕಲನಗಳು 3 ಪ್ರವಾಸ ಕಥೆಗಳು 2 ವೈಚಾರಿಕ ಕೃತಿಗಳು 8 ಕಾದಂಬರಿಗಳು, 8 ವಿಜ್ಞಾನ ಕೃತಿಗಳು ಮತ್ತು 2 ಇಂಗ್ಲಿಷ್ ಕೃತಿಗಳು ಸೇರಿದಂತೆ ಇವರ ಒಟ್ಟು 30 ಕೃತಿಗಳು ಪ್ರಕಟಗೊಂಡಿವೆ.