ವಾರದ ಸಂತೆ ಆಗುವ ಅದೇ ದಿನದ ಹೆಸರುಗಳು ಊರುಗಳಾಗಿವೆ. ಸೋಮವಾರಪೇಟೆ, ಶನಿವಾರಸಂತೆ, ಶುಕ್ರವಾರಸಂತೆ ಇತ್ಯಾದಿಗಳು. ‘ಅಂಗ’ಡಿ ಎಂಬ ಹೆಸರನ್ನು ಕಡೆಯಲ್ಲಿ ಹೊಂದಿರುವ ಬೆಳ್ತಂಗಡಿ, ಉಪ್ಪಿನಂಗಡಿ, ಹಳೆಯಂಗಡಿ, ಹಟ್ಟಿಯಂಗಡಿ ಎಂಬ ಊರುಗಳಿವೆ. ‘ಅಂಗಡಿ’ ಎನ್ನುವ ಹೆಸರಿಗೂ ಹೊಯ್ಸಳ ಸಾಮ್ರಾಜ್ಯಕ್ಕೂ ಅವಿನಾಭಾವ ನಂಟು. ಇದಕ್ಕೂ ಅನನ್ಯ ಹೆಸರಿನ ಊರುಗಳಿವೆ. ರಸ್ತೆಯಲ್ಲಿರುವ ಪಾಲವನ್ನು ಸೇರಿಸಿಕೊಂಡು ಜೋಡುಪಾಲವೆಂದೂ ಕರೆಯುತ್ತಾರೆ. ‘ಪಾಲ’ ಅಂದರೆ ಸಂಕ /ಕಾಲುಸಂಕ ಅರ್ಥಾತ್ ಚಿಕ್ಕ ಸೇತುವೆ ಎಂದರ್ಥ. ಇಂಥ ಪಾಲಗಳಿಂದ ಕೊನೆಗೊಳ್ಳುವ ಊರಿನ ಹೆಸರುಗಳು ಕೊಡಗಿನ ಎಲ್ಲಾ ಕಡೆ ಸಿಗುತ್ತವೆ.
ಸುಮಾವೀಣಾ ಬರೆಯುವ “ಮಾತು-ಕ್ಯಾತೆ” ಸರಣಿಯ ಆರನೆಯ ಬರಹ
ಭಾಷೆ ಹರಿಯುವ ನೀರಿನಂತೆ… ನಿತ್ಯ ಪ್ರವಹಿಸುತ್ತಿರುತ್ತದೆ. ಹಾಗೆ ಪ್ರವಹಿಸುವ ಮಾರ್ಗದಲ್ಲಿ ಅನೇಕ ಹಳ್ಳ ಕೊಳ್ಳಗಳನ್ನು ಕೂಡಿಕೊಳ್ಳುವಂತೆ ಭಾಷೆಯೂ ಅನ್ಯದೇಶಿ ಪದಗಳನ್ನು ಒಳಗುಕೊಳ್ಳುತ್ತಿರುತ್ತದೆ. ಹಾಗೆ ಬಂದ ಅನ್ಯದೇಶಿಗಳು ಯಥಾವತ್ತಾಗಿರದೆ ಅಲ್ಲಲ್ಲಿ ಕೊಂಚ ಬದಲಾವಣೆಗಳನ್ನು ಪಡೆದು ಕೆಲವೊಮ್ಮೆ ವಿಶಾಲಾರ್ಥದಲ್ಲಿ ಕೆಲವೊಮ್ಮೆ ಸಂಕುಚಿತಾರ್ಥದಲ್ಲಿ ಬಳಕೆಯಲ್ಲಿ ಗಟ್ಟಿಯಾಗುತ್ತವೆ. ಅಂಥ ಪದಗಳ ಜಾಡು ಹಿಡಿದು ನಮ್ಮ ಮಾತುಕತೆಯನ್ನು ಮಾತುಕ್ಯಾತೆಯನ್ನು ಮುಂದುವರೆಸೋಣ!
ಏನ್ ಯೋಗಾಯೋಗಾ? ಇಷ್ಟೆಲ್ಲಾ ಯೋಗಾಯೋಗದಿಂದ ಆಯಿತು! ಎನ್ನುವ ಉದ್ಗಾರವನ್ನೆಳೆಯುವುದಿದೆ. ‘ಯೋಗಾಯೋಗಾ’ ಪದವು ಒಳ್ಳೆಯ ಅದೃಷ್ಟವನ್ನು ಪಡೆದಿದ್ದಾನೆ. ಅದರಿಂದಲೆ ಇಷ್ಟೆಲ್ಲಾ ಒಳ್ಳೆಯದಾಯಿತು ಎನ್ನುವುದಿದೆ. ‘ಯೋಗ’ ಎಂದರೆ ಭಾರತದಲ್ಲಿ ಆರಂಭವಾದ ಸಾಂಪ್ರದಾಯಿಕ ದೈಹಿಕ ಹಾಗು ಮಾನಸಿಕ ಆಚರಣೆಗಳ ಬೋಧನಶಾಖೆ. ಇದರಲ್ಲಿ ರಾಜಯೋಗ, ಕರ್ಮಯೋಗ, ಜ್ಞಾನಯೋಗ, ಭಕ್ತಿಯೋಗ, ಹಠಯೋಗ ಇತ್ಯಾದಿ ಭಾಗಗಳನ್ನು ಕಾಣಬಹುದು. ಜೈನಧರ್ಮದಲ್ಲಿ ಮಾನಸಿಕ, ಮೌಖಿಕ ಮತ್ತು ದೈಹಿಕ ಎಲ್ಲಾ ಚಟುವಟಿಕೆಗೂ ಇಡಿಯಾಗಿ ಈ ‘ಯೋಗ’ ಪದವನ್ನು ಬಳಸುತ್ತಾರೆ. ಸಂಸ್ಕೃತದ ಮೂಲ ‘ಯುಜ್ʼನಿಂದ ವ್ಯುತ್ಪತ್ತಿಯಾಗಿ ಯೋಗಪದವು ಬಂದಿದೆ. ಯೋಗಪದವು ನಿಯಂತ್ರಿಸುವ ಐಕ್ಯವಾಗು ಅಥವಾ ಒಗ್ಗಟ್ಟಾಗು ಎಂಬರ್ಥಗಳನ್ನು ಹೊಂದಿದೆ. ‘ಯೋಗ’ ಎಂದರೆ ಅದೃಷ್ಟ, ಸುಖ ಎಂಬರ್ಥದಲ್ಲಿ ಬಳಕೆಯಾಗುತ್ತದೆ. ಇದು ಗ್ರಾಮ್ಯಭಾಷೆಯಲ್ಲಿ ‘ಏಗ’ ಎಂಬ ಪದಪ್ರಯೋಗವನ್ನು ಹೊಂದಿದೆ. ಮಲೆಮಹದೇಶ್ವರ ಕಾವ್ಯದಲ್ಲಿ ‘ಮೂಡಲಾ ಮನೆಯಲ್ಲಿ ಮಾದೇವ ಏಗದಲ್ಲಿ ತಾವೊರಗವರೆ’ ಎಂಬ ಸಾಲು ಬರುತ್ತದೆ. ಅಂದರೆ ಭಗವಂತ ಯೋಗನಿದ್ರೆಯಲ್ಲಿದ್ದಾನೆ ಎಂಬರ್ಥದಲ್ಲಿ ಬಳಕೆಯಾಗಿದೆ.
ಏನೆ ಆಗಲಿ ಈ ಯೋಗ ಇದ್ದರೆ ನಮಗೆ ಯೋಗ್ಯ. ಬಂಧು ಬಾಂಧವರು ಸಿಗುವುದು. ಹಾಗಾದಾಗ ಊರುಗಳ ಹೆಸರುಗಳು ಹೇಗೆ ಇರಲಿ ಅದನ್ನು ಪ್ರತಿನಿಧಿಸುವವರು ನಮ್ಮ ಸಂಬಂಧಿಗಳೆ ಆಗಿರುತ್ತಾರೆ. ಅಂದರೆ ಆ ಊರುಗಳು ಅಕ್ಕನೂರು, ಅಜ್ಜಿಯೂರು, ಅಮ್ಮನೆಮನೆ ಎಂದು ಸಂಬಂಧಗಳನ್ನು ಅನ್ವಯಿಸಿ ಗುರುತಿಸಲ್ಪಡುತ್ತವೆ. ಅಂದರೆ ನಮಗೆ ಯಾರು ಮುಖ್ಯವೋ ಅವರದೇ ಊರು ಎಂದುಬಿಡುವುದು ಸಾಮಾನ್ಯ. ಅಕ್ಕ ಇದ್ದ ಊರು ‘ಅಕ್ಕನೂರು’ ಅಜ್ಜಿ ಇದ್ದ ಊರು ‘ಅಜ್ಜಿಯೂರು’ ಹಾಗೆ ಅಮ್ಮ ಯಾವುದೇ ಊರಲ್ಲಿ ಇರಲಿ ಅದು ಊರು ಆಗುವುದೇ ಇಲ್ಲ. ಇಡೀ ಊರೇ ಅಮ್ಮನ ಮನೆಯಾಗಿಬಿಡುತ್ತದೆ. ಅದಕ್ಕೆ ಅಷ್ಟು ಮಹತ್ವ. “ಊರು ಉಪಕಾರವರಿಯದು, ಹೆಣ ಶೃಂಗಾರವರಿಯದು” ಎಂಬ ಗಾದೆ ಉಪಕಾರಸ್ಮರಣೆ ಮಾಡದ ಊರನ್ನು ಕುರಿತು ಹೇಳುವುದಾದರೆ ‘ಊರಗಲ’ ಎಂಬ ಮಾತು ವ್ಯಂಗ್ಯವಾಗಿ ಬಳಕೆಯಾದರೂ ‘ಊರು’ ಎಂದರೆ ‘ವಿಶಾಲವಾದದ್ದು’ ಎಂಬ ಅರ್ಥದಲ್ಲೇ ಬಳಕೆಯಾಗುತ್ತದೆ.
‘ತವರೂರು’ ಎಂಬ ಮಾತೂ ಇದೆಯಲ್ಲಾ! ‘ತವರ್’ ಎಂದರೆ ತಮಿಳು ಭಾಷೆಯಲ್ಲಿ ‘ತಪ್ಪು’ ಎಂಬರ್ಥವಿದೆ (ಪದಕೋಶದ ಪ್ರಕಾರ ಊರು ಎಂದರೆ ‘ತಳವೂರು’, ‘ಬೇರೂ’ರು ಎಂದೂ ‘ಉರು’ ಎಂದರೆ ‘ತೊಡೆ’ ಎಂಬರ್ಥವಿದೆ ಇಲ್ಲಿ ಇಂದು ಸ್ವರಮಾತ್ರವೆ ವ್ಯತ್ಯಾಸವಾದರೂ ಅದು ನೀಡುವ ಅರ್ಥ ಭಿನ್ನವಾಗಿದೆ) ಆದರೆ ಕನ್ನಡದಲ್ಲಿ ನಾವು ಹುಟ್ಟಿ ಬೆಳೆದ ಮನೆ ತವರು ಮನೆಯಾದರೆ ಆ ತವರು ಇರುವ ಊರು ತವರೂರು ಆಗುತ್ತದೆ. ‘ಭಾಗ್ಯದಾ ಬಳೆಗಾರ ಹೋಗಿ ಬಾ ತವರಿಗೆ’ ಎನ್ನುವ ಗೀತೆಯ ಸಾಲೇ ಇದೆಯಲ್ಲಾ!
ಪಂಜೆ ಮಂಗೇಶರಾಯರ ಹುತ್ತರಿ ಹಾಡು ಪದ್ಯದಲ್ಲಿ ‘ಇದು ಅಗಸ್ತ್ಯನ ತಪದ ಮನೆ ಕಾವೇರಿ ತಾಯ ತವರ್ಮನೆ’ ಎಂಬ ಸಾಲು ಬರುತ್ತದೆ. ಅಂದರೆ ಲೋಪಾಮುದ್ರೆ ಅರ್ಥಾತ್ ಕವೇರ ರಾಜನ ಮಗಳು ಕಾವೇರಿ ಜಲರೂಪಿಯಾಗಿ ಹುಟ್ಟಿದ ಸ್ಥಳ ತಲಕಾವೇರಿ. ಅದುವೆ ಅವಳ ತವರು ಮನೆ ಎಂಬರ್ಥದಲ್ಲಿ ಬಳಕೆಯಾಗಿದೆ. ‘ತವರೂರ ಹಾದೀಲಿ ಕಲ್ಲಿಲ್ಲ ಮುಳ್ಳಿಲ್ಲ’ ಎಂದ ಜನಪದರು ತವರು ಎಂದರೆ ಸುಖದ ನಾಡು; ಅಲ್ಲಿ ಕಲ್ಲು ಮುಳ್ಳಿನ ಸಂಚನೆಗಳು ಇಲ್ಲ ಎಂಬ ಅರ್ಥದಲ್ಲಿ ಹೇಳಿದ್ದಾರೆ. ತವರೆಂದರೆ ತಾಯಿಯೇ ಅಲ್ಲವೆ! ಹಾಗಾಗಿ ಆ ನೆಲವನ್ನು ತಾಯ್ನೆಲ ಎಂತಲೂ ಆ ಪ್ರದೇಶವನ್ನು ‘ತಾಯ್ನಾಡು’ ಎಂದೂ ಕರೆಯುತ್ತೇವೆ.
ನಮ್ಮ ನಾಡು ಹಾಗಿರಲಿ ವಿದೇಶಿ ಸ್ಥಳಗಳು ನಮ್ಮ ಸ್ಥಳೀಯ ಸ್ಥಳಗಳು ಕೆಲವೊಮ್ಮೆ ಗೊಂದಲ ಸೃಷ್ಟಿ ಮಾಡುತ್ತವೆ. ಮೊನ್ನೆ ಹಾಗೆ ಪರಿಚಯದವರು ‘ನಾನು ಸಿಂಗಾಪುರಕ್ಕೆ ಹೋಗಿದ್ದೆ! ರಾತ್ರಿ ಹೋಗಿ ಬೆಳಗ್ಗೆ ಬಂದೆ” ಎಂದಾಗ ಏನಾಶ್ಚರ್ಯ? ಇಷ್ಟು ಬೇಗ ಹೇಗೆ ಸಾಧ್ಯ? ಎಂದು ಯೋಚಿಸುತ್ತಿರುವಾಗ “ಆ ಸಿಂಗಾಪುರ ಅಲ್ಲ, ಆಲೂರು ತಾಲ್ಲುಕಿನ ಸಿಂಗಾಪುರ” ಎಂದಾಗ ಹೌದಾ? ಇಲ್ಲಿಯೂ ಸಿಂಗಾಪುರವಿದೆಯಾ? ಎಂದು ಕೇಳಿದ್ದೆ. ಅದೇ ಗುಂಗಿನಲ್ಲಿದ್ದ ನಾನು, ನನ್ನ ಗೆಳತಿ ನಾಲ್ಕು ರಾತ್ರಿ ಐದು ಹಗಲು ಸಿಂಗಾಪುರ ಪ್ಯಾಕೇಜ್ ಪ್ರವಾಸ ಮಾಡಿ ಬಂದು “ಸಿಂಗಾಪುರಕ್ಕೆ ಹೋಗಿದ್ದೆ” ಎಂದಾಗ ಕೇಳಿಸದ ಹಾಗೆ ಇದ್ದೆ. ಅವರ ಸ್ಟೇಟಸ್ ನೋಡಿ ನಿಜಕ್ಕೂ ಸಿಂಗಾಪುರ್ ಟೂರಿಗೆ ಹೋಗಿ ಬಂದಿದ್ದಾರೆಂದು ತಿಳಿದು ಅಲ್ಲಿಯ ಪ್ರವಾಸದ ಅನುಭವಗಳನ್ನು ತಿಳಿಯಲು ಕಾತುರಳಾದೆ. ಇಲ್ಲಿ ‘ಸಿಂಗಾಪುರ್’ ಎಂದಿದ್ದರೆ ನನ್ನ ಕಿವಿಗಳು ನಿಮಿರುತ್ತಿದ್ದವೋ ಏನೋ ಅವರು ‘ಸಿಂಗಾಪುರ’ ಎಂದರು. ಬೆಂದಕಾಳೂರು ಎಂದರೆ ಹೆಚ್ಚಿನವರಿಗೆ ಗೊತ್ತಿಲ್ಲ. ಬೆಂಗಳೂರು ಅಂದರೆ ಸುಮ್ಮನಿರುತ್ತೇವೆ. ಅದೇ ಬ್ಯಾಂಗಲೋರ್ ಎಂದರೆ ಓ ಇವರು ಭಾರೀ ಜನ ಎಂದು ತಿಳಿಯುತ್ತೇವಲ್ಲ ಹಾಗೆ!
ಹೊಳೆನರಸಿಪುರವನ್ನು ಹೆಚ್.ಎನ್.ಪುರ, ತಿರುಮಕೂಡಲನರಸಿಪುರವನ್ನು ಕೃಷ್ಣರಾಜನಗರವನ್ನು ಕೆ.ಆರ್. ನಗರವೆಂದೂ ಕೃಷ್ಣರಾಜಪೇಟೆಯನ್ನು ಕೆ.ಆರ್ ಪೇಟೆ ಎಂದು ಉದ್ದದ ಹೆಸರುಗಳನ್ನು ಕತ್ತರಿಸಿ ಕರೆಯಲು ಸುಲಭವಾಗುವಂತೆ ಬಳಸುತ್ತೇವೆ. ಒಮ್ಮೆ ಬಸ್‌ನಲ್ಲಿದ್ದ ಪ್ರಯಾಣಿಕರನ್ನು, ಇನ್ನೊಬ್ಬ ಪ್ರಯಾಣಿಕರೊಬ್ಬರು ಬಸ್ ಯಾವೂರಿಗೆ ಹೋಗುತ್ತದೆ ಎಂದು ಕೇಳಬೇಕಿತ್ತು. ಬಾಯ್ತಪ್ಪಿ ಎಲ್ಲಿ ಹೋಗುತ್ತೆ ಎಂದು ಕೇಳಿದಾಗ ಬಸ್ ಮುಂದಕ್ಕೆ ಹೋಗುತ್ತೆ ಎನ್ನುವ ಉತ್ತರ ಬಂದಿತ್ತು. ಇರಲಿ ಇಂಥ ಮುಂದಕ್ಕೆ ಸಿಗುವ ಊರುಗಳ ಹೆಸರುಗಳನ್ನು ಚರ್ಚಿಸೋಣ.
ನಮ್ಮ ಊರುಗಳ ಹೆಸರುಗಳು ನಮ್ಮ ಸಂಸ್ಕೃತಿ ಹಾಗು ಚರಿತ್ರೆಯನ್ನು ಬಿಚ್ಚಿಡುತ್ತವೆ. ಭಾರತದೇಶ ಎಂದು ಕರೆಯುತ್ತೇವೆ. ಆದರೆ ಇದನ್ನು ಋಷಿ ಮುನಿಗಳು ‘ಭರತಖಂಡ’, ‘ಭರತ ವರ್ಷ’ ಎಂದೇ ಕರೆದದ್ದಲ್ಲವೆ. ನಮ್ಮ ದೇಶದ ಸ್ಥಳಗಳ ಹೆಸರುಗಳಿಗು ರಾಮಾಯಣ-ಮಹಾಭಾರತಕ್ಕೂ ಅವಿನಾಭಾವ ನಂಟಿದೆ. ಜಟಾಯು ರೆಕ್ಕೆ ಕಡಿದುಕೊಂಡು ಬಿದ್ದಿದ್ದ ಸ್ಥಳಕ್ಕೆ ರಾಮಬಂದು ‘ಲೇ ಪಕ್ಷಿ’ ಎಂದು ಕರೆದದ್ದೆ ಇಂದಿಗೆ ಆಂಧ್ರದ ‘ಲೇಪಾಕ್ಷಿ’ ಆಗಿದೆ. ಕಿಷ್ಕಿಂದೆ ಇಂದಿನ ಹಂಪಿ ಆಗಿದೆ. ಕಿಷ್ಕಿಂದೆಯನ್ನು ವಾನರ ರಾಜ ಸುಗ್ರೀವ ಮತ್ತು ಅವನ ಮಿತ್ರ ಹನುಮಂತ ಆಳಿದ ಎಂದು ಹೇಳಲಾಗುತ್ತದೆ. ಪಾಂಡವರು ವನವಾಸದ ಸಂದರ್ಭದಲ್ಲಿ ಬಂದು ನೆಲೆಸಿದ್ದ ಸ್ಥಳ ಪಾಂಡವಪುರ ಎಂದಾಯಿತಂತೆ ‘ಕುಂತಿಬೆಟ್ಟ’, ‘ರಾಮನಾಥಪುರ’ ಇವೆಲ್ಲವೂ ಪೌರಾಣಿಕ ಮಹತ್ವವನ್ನು ಹೊಂದಿರುವವು. ಹಾಗೆ ಯೋಚನೆ ಮಾಡುತ್ತಿದ್ದರೆ ನಮ್ಮ ಕರ್ನಾಟಕದ ಊರುಗಳು ದಿಕ್ಕುಗಳನ್ನು ಆಧರಿಸಿಯೂ ಇವೆ. ಉದಾಹರಣೆಗೆ ‘ಮೂಡಲಹಿಪ್ಪೆ’, ‘ಪಡುವಲ ಹಿಪ್ಪೆ’, ‘ಮೂಡುಗೆರೆ’, ‘ಪಡುಗೆರೆ’, ‘ಮೂಡುಬಿದರೆ’, ‘ಪಡುಬಿದರೆ’…. ಹೀಗೆ ಹರಿ ಮತ್ತು ಹರ ಈರ್ವರ ದೇವಾಲಯ ಇರುವ ಊರು ‘ಹರಿಹರ’. ಶಿವನ ಮುಖದ ಹಾಗೆ ಕಾಣುವ ಬೆಟ್ಟದ ಕಾರಣದಿಂದ ‘ಶಿವಮೊಗ್ಗ’ ಎಂಬ ಹೆಸರೂ ‘ಕಲ್ಲು ಮತ್ತು ಬುರುಗಿಗಳೆ’ ಹೆಚ್ಚಾಗಿ ಇರುವ ಊರು ‘ಕಲ್ಬುರಗಿ’ ಬಂದಿದೆ ಎನ್ನುತ್ತಾರೆ.
ಇನ್ನು ಕುವೆಂಪು ಅವರ ಊರು ‘ಕುಪ್ಪ’ಳ್ಳಿ ಎನ್ನುತ್ತೇವೆ ಆದರೆ ಅದು ‘ಕುಪ್ಪಳಿ’ ಆಗಬೇಕು. ಕುವೆಂಪು ಅವರ ಮನೆಯ ದಾರಿ ಗುಂಡಿ ಹಳ್ಳಗಳಿಂದ ಕೂಡಿತ್ತಂತೆ. ಅಲ್ಲಿಗೆ ಹೋಗಬೇಕೆಂದರೆ ಕುಪ್ಪಳಿಸಿಕೊಂಡು, ಕುಪ್ಪಳಿಸಿಕೊಂಡು ಹೋಗಬೇಕಾಗಿತ್ತಂತೆ. ನಂತರ ಅದುವೆ ‘ಕುಪ್ಪಳ್ಳಿ’ ಆಯಿತು ಎನ್ನುತ್ತಾರೆ. ಇನ್ನು ಹಾಸನ ಜಿಲ್ಲೆಯ ಕಸಬಾ ತಾಲೂಕಿನಲ್ಲಿ ‘ಶಂಖ’, ‘ಜನಿವಾರ’, ‘ಬೊಮ್ಮನಹಳ್ಳಿ’ ಹೆಸರಿನ ಹಳ್ಳಿಗಳು, ಕೆ. ಆರ್. ನಗರ ತಾಲ್ಲೂಕಿನಲ್ಲಿ ‘ಸಾಲಿಗ್ರಾಮ’, ‘ಚುಂಚನಕಟ್ಟೆ’ ಹೆಸರಿನ ಹಳ್ಳಿಗಳು ಇವೆ. ಇವುಗಳ ಇತಿಹಾಸ ಕೆದಕಿದರೆ ಬಹುಶಃ ವಿಷ್ಣು- ಬ್ರಹ್ಮರ ಕುರಿತಾದ ಸ್ಥಳ ಪುರಾಣ ಸಿಗಬಹುದು.
ಈ ಊರುಗಳ ಹೆಸರುಗಳನ್ನು ಒಂದೊಂದು ಪ್ರದೇಶದಲ್ಲಿ ಒಂದೊಂದು ತೆರನಾಗಿ ಹೇಳುವುದಿದೆ. ಬೆಂಗಳೂರಿನಲ್ಲಿ ಅಂಚೆಪಾಳ್ಯ, ಗೊರುಗುಂಟೆ ಪಾಳ್ಯ, ಕಾಮಾಕ್ಷಿಪಾಳ್ಯ ಎಂದಿಲ್ಲವೆ ಹಾಗೆ! ಹಳ್ಳಿ, ಅಗ್ರಹಾರ, ಪೇಟೆ, ಊರು, ನಗರ, ಪುರ, ಪಟ್ಟಣ, ಕೇರಿ, ಏರಿ, ನಗರ, ಘಡ, ಕಟ್ಟೆ, ಅಂಗಡಿ, ಒಕ್ಕಲು, ಕುಪ್ಪೆ, ಮಂಗಲ ಎಂಬ ಪ್ರದೇಶ ಸೂಚಿಗಳಿಂದ ಕರೆಯುತ್ತೇವೆ. ಇವೆಲ್ಲವೂ ಜನವಸತಿ ಇರುವ ಪ್ರದೇಶಗಳನ್ನು ಜನಸಂಖ್ಯೆ ಆಧಾರದ ಮೇಲೆ ನಮಗೆ ಗೊತ್ತು ಮಾಡುತ್ತವೆ. ‘ಹರಿಹಳ್ಳಿ’, ’ಸಾಸುವೆಹಳ್ಳಿ’, ‘ನಗರನಹಳ್ಳಿ’, ‘ಅಯರಹಳ್ಳಿ’, ‘ಅವಲಹಳ್ಳಿ’….. ಇತ್ಯಾದಿಗಳು ಹಳ್ಳಿ ಎಂಬುದರಿಂದ ಕೊನೆಯಾಗುತ್ತವೆ. ಬ್ರಾಹ್ಮಣರಿಗೆ ದಾನವಾಗಿ ಕೊಡಲಾದ ಹಳ್ಳಿಗಳನ್ನು ಅಗ್ರಹಾರಗಳೆಂದು ಕರೆಯುತ್ತಾರೆ.
‘ಹೊಸಅಗ್ರಹಾರ’, ‘ಲಕ್ಷ್ಮಿವಿಲಾಸ ಅಗ್ರಹಾರ’, ‘ರಾಮವಿಲಾಸ ಅಗ್ರಹಾರ’, ಹೀಗೆ….. ವೀರರಾಜಪೇಟೆ, ದಾಬಸ್ಪೇಟೆ, ತುಮಕೂರು, ಮೈಸೂರು, ಹಿರಿಯೂರು, ರಾಣೆಬೆನ್ನೂರು, ಮೂಟೆಬೆನ್ನೂರು, ಹೊಳೆನರಸೀಪುರ, ತಿರುಮಕೂಡಲ, ನರಸೀಪುರ, ಸಕಲೇಶಪುರ, ಚಿಕ್ಕಮಗಳೂರು, ಮಂಗಳೂರು, ಕೊಣನೂರು, ಹುದಿಕೇರಿ, ಬಾಡಗಕೇರಿ, ಶೃಂಗೇರಿ, ಹಾಲೇರಿ, (ಇವುಗಳು ಹಿರಿದಾದ ಬೆಟ್ಟಗಳ ನಡುವೆ ಇರುವುದರಿಂದ ಹೀಗೆ ಕರೆಯಬಹುದ ಅನ್ನಿಸುತ್ತದೆ) ಚಾಮರಾಜನಗರ. ಕೆ.ಆರ್ ನಗರ, ಕುಶಾಲನಗರ, ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ, ಬಾಗೇಶಪುರ, ನಂಜನಗೂಡು, ಅರಕಲಗೂಡು, ನಂಜರಾಯಪಟ್ಟಣ, ರುದ್ರಪಟ್ಟಣ, ಬಸವಾಪಟ್ಟಣ, ಬುಕ್ಕಾಪಟ್ಟಣ, ಗಜೇಂದ್ರಘಡ, ರಾಯಘಡ, ಹೆಗಡೆಕಟ್ಟೆ, ಹಂಪನಕಟ್ಟೆ, ಸಾಗರಕಟ್ಟೆ, ನಾಪೊಕ್ಲು, ಅರ್ವತ್ತೊಕ್ಕಲು, ಬಯಲುಕುಪ್ಪೆ, ಸೆಣವಿನಕುಪ್ಪೆ, ನಾಗಮಂಗಲ, ಸತ್ಯಮಂಗಲ, ಕೋರಮಂಗಲ ಇತ್ಯಾದಿ ಹೆಸರುಗಳಿವೆ ಇವುಗಳ ಜೊತೆಗೆ ನಿಮ್ಮ ಯಾದಿಗೆ ಬರುವ ಸ್ಥಳಗಳನ್ನು ಸೇರಿಸಿಕೊಳ್ಳಿ….
ಅಷ್ಟೇ ಏಕೆ ವಾರದ ಸಂತೆ ಆಗುವ ಅದೇ ದಿನದ ಹೆಸರುಗಳು ಊರುಗಳಾಗಿವೆ. ಸೋಮವಾರಪೇಟೆ, ಶನಿವಾರಸಂತೆ, ಶುಕ್ರವಾರಸಂತೆ ಇತ್ಯಾದಿಗಳು. ‘ಅಂಗ’ಡಿ ಎಂಬ ಹೆಸರನ್ನು ಕಡೆಯಲ್ಲಿ ಹೊಂದಿರುವ ಬೆಳ್ತಂಗಡಿ, ಉಪ್ಪಿನಂಗಡಿ, ಹಳೆಯಂಗಡಿ, ಹಟ್ಟಿಯಂಗಡಿ ಎಂಬ ಊರುಗಳಿವೆ. ‘ಅಂಗಡಿ’ ಎನ್ನುವ ಹೆಸರಿಗೂ ಹೊಯ್ಸಳ ಸಾಮ್ರಾಜ್ಯಕ್ಕೂ ಅವಿನಾಭಾವ ನಂಟು. ಇದಕ್ಕೂ ಅನನ್ಯ ಹೆಸರಿನ ಊರುಗಳಿವೆ. ರಸ್ತೆಯಲ್ಲಿರುವ ಪಾಲವನ್ನು ಸೇರಿಸಿಕೊಂಡು ಜೋಡುಪಾಲವೆಂದೂ ಕರೆಯುತ್ತಾರೆ. ‘ಪಾಲ’ ಅಂದರೆ ಸಂಕ /ಕಾಲುಸಂಕ ಅರ್ಥಾತ್ ಚಿಕ್ಕ ಸೇತುವೆ ಎಂದರ್ಥ ಇಂಥ ಪಾಲಗಳಿಂದ ಕೊನೆಗೊಳ್ಳುವ ಊರಿನ ಹೆಸರುಗಳು ಕೊಡಗಿನ ಎಲ್ಲಾ ಕಡೆ ಸಿಗುತ್ತವೆ.
ಒಮ್ಮೆ ನಾನು ಕೊಡಗಿನ ಪ್ರೈವೇಟ್ ಬಸ್‌ನಲ್ಲಿ ಪ್ರಯಾಣ ಮಾಡುತ್ತಿರುವಾಗ ಕಂಡಕ್ಟರಿಗೆ ಟಿಕೇಟಿಗಾಗಿ ಹಣಕೊಟ್ಟ ಪ್ರಯಾಣಿಕರು “ನೀರ್ಕೊಲ್ಲಿ ಒಂದು” ಎಂದರು. ಅದಕ್ಕೆ ಕಂಡಕ್ಟರ್ “ಬೆಂಕಿಕೊಳ್ಳಿ ಬೇಡ್ವ” ಎಂದಿದ್ದು ದೊಡ್ಡ ಗಲಾಟೆಗೆ ಕಾರಣವಾಗಿತ್ತು. ಚಿಕನಾಯಕನಹಳ್ಳಿಯ ಬಳಿ ಮದಲಿಂಗ ತನ್ನ ನಾದಿನಿಯನ್ನು ಮದುವೆಯಾಗಲು ಅತ್ತೆ ಒಡ್ಡಿದ ಹಿಂದು ಮುಂದು ಬೆಟ್ಟವನ್ನು ಹತ್ತುವ ಸವಾಲನ್ನು ಈಡೇರಿಸಹೋಗಿ ತೀವ್ರ ಬಾಯಾರಿಕೆಯಿಂದ ಅಲ್ಲಿಯೇ ಸತ್ತು ಹೋಗುತ್ತಾನೆ. ಅವನು ಬೆಟ್ಟ ಹತ್ತಿ ಇಳಿದು ಬಂದ ಕಿರಿದಾದ ಜಾಗವನ್ನು ‘ಮದಲಿಂಗನ ಕಣಿವೆ’ ಎಂದು ಕರೆಯುತ್ತಾರೆ. ಇದೊಂದು ಭಗ್ನ ಪ್ರೇಮಕಥಾನಕದಿಂದ ಉಳಿದ ಹೆಸರು.
‘ಕೊಲ್ಲಿ’ ಎಂದರೆ ಕಿರಿದಾದ ಜಾಗದಲ್ಲಿ ಹರಿಯುವ ನೀರು ಅರ್ಥಾತ್ ಎರಡು ಹಿರಿದಾದ ಬಂಡೆಗಳ ನಡುವಿನ ಕಿರಿದಾದ ಜಾಗ. ಅದೇ ಬೆಟ್ಟಗಳ ನಡುವಿನ ಕಿರಿದಾದ ಜಾಗ ಕಣಿವೆ ಆಗುತ್ತದೆ. ಕುಶಾಲನಗರ ಸಮೀಪದ ಕಣಿವೆ ಗ್ರಾಮದ ರಾಮಲಿಂಗೇಶ್ವರ ದೇವಸ್ಥಾನ ಬಹಳ ಪ್ರಸಿದ್ಧ. ಹಾಗೆ ಕಾವೇರಿ ನದಿ ಹಾರಂಗಿ ಜಲಾಶಯದಿಂದ ಕೆ.ಆರ್.ಎಸ್ ನತ್ತ ಸಾಗುವುದು ಇಲ್ಲಿಯೇ. ಕೊಲ್ಲಿ ನಾಮಾಂತ್ಯ ನೀರ್ ಕೊಲ್ಲಿ, ಕೋವರ್ ಕೊಲ್ಲಿ ಎಂಬ ಸ್ಥಳಗಳು ಕೊಡಗಿನಲ್ಲಿವೆ.(ಕೊಳ್ಳಿ ಪದವನ್ನು ನಾಮಪದದಲ್ಲಿ ಪ್ರಯೋಗಿಸಿದರೆ ಉರಿಯುತ್ತಿರುವ ಮರದ ಕೊರಡು ಎಂದಾದರೆ ಕ್ರಿಯಾಪದದಲ್ಲಿ ಕ್ರಯ ಎಂಬರ್ಥವನ್ನು ಸೂಚಿಸುತ್ತದೆ) ಮುಂದುವರೆದು ಬೆಟ್ಟದ ಮೇಲಿನ ವಿಶಾಲ ಪ್ರದೇಶಗಳಿಗೆ ಬೇರೆ ಬೇರೆ ಹೆಸರುಗಳು ಅಂದರೆ ‘ಬಾಣಿಮೊಟ್ಟೆ’, ‘ಕುಂದುರು ಮೊಟ್ಟೆ’, ‘ನಿಶಾನಿಮೊಟ್ಟೆ’, ‘ಕುರ ಮೊಟ್ಟೆ’, ‘ಹುಲಸ್ ಅರಮನೆ ಮೊಟ್ಟೆ’, ‘ಮಂಜ ಮೊಟ್ಟೆ’ ಇತ್ಯಾದಿಗಳನ್ನು ನೋಡಬಹುದು. ‘ಮೊಟ್ಟೆ’ ಎಂದರೆ ಬೆಟ್ಟದ ಮೇಲಿನ ವಿಶಾಲ ಜಾಗ ಎಂದರ್ಥ. ಇವೆಲ್ಲಾ ನೋಡಲು ಬಹಳ ಸುಂದರ ಕೆಲವೊಮ್ಮೆ ಇಲ್ಲಿ ಶಕ್ತಿ ದೇವಸ್ಥಾನಗಳೂ ಇರುವುದಿದೆ. ಉದಾಹರಣೆಗೆ ಕುಂದೂರು ಮೊಟ್ಟೆ. ಗುಂದ ಅಥವಾ ಕುಂದಗಳಿಂದ ಅಗ್ಗುಂದ, ಯಲಗುಂದ, ನೀರಗುಂದ ಹೆಸರಿನ ಊರುಗಳೂ ಇವೆ. ಎತ್ತಿನಭುಜ, ಆನೆಗೊಂದಿ, ಹುಲಿಯೂರುದುರ್ಗ, ಪಿಲಿಕುಳ, ಕೋಳಿವಾಡ, ನವಿಲೂರು ಹೀಗೆ ಪ್ರಾಣಿ ಪಕ್ಕಿಗಳೂ ಊರುಗಳ ಹೆಸರಾಗಿವೆ.
ಅಷ್ಟೇ ಏಕೆ ಮೆಣಸೂ ಕೂಡ ಬ್ಯಾಡಗಿ, ಮೆಣಸ(ಶನಿವಾರಸಂತೆ)ಸೊಪ್ಪಿನಹಳ್ಳಿ ಹೀಗೆ ಇವುಗಳ ಅಥರಾರ್ಥವನ್ನು ಹೊಕ್ಕರೆ ಬೇರೆಯದೆ ಇತಿಹಾಸಗಳು ಇಲ್ಲದಿಲ್ಲ. ಹೊಳೆನರಸಿಪುರವನ್ನು ಹೆಚ್.ಎನ್.ಪುರ, ತಿರುಮಕೂಡಲನರಸಿಪುರವನ್ನು ಕೃಷ್ಣರಾಜನಗರವನ್ನು ಕೆ.ಆರ್. ನಗರವೆಂದೂ ಕೃಷ್ಣರಾಜಪೇಟೆಯನ್ನ ಕೆ.ಆರ್ ಪೇಟೆ ಎಂದು ಉದ್ದದ ಹೆಸರುಗಳನ್ನು ಕತ್ತರಿಸಿ ಕರೆಯಲು ಸುಲಭವಾಗುವಂತೆ ಬಳಸುತ್ತೇವೆ. ಮುಖ್ಯವಾಗಿ ಆ ಊರಿನಲ್ಲಿ ಯಾವ ದೇವರ ದೇವಸ್ಥಾನವಿದೆಯೋ ಅದೇ ಹೆಸರು ಊರಿಗೂ ಇರುವುದು ಸಾಮಾನ್ಯ ಹಾಸನಾಂಬೆ ದೇವಾಲಯ ಇರುವುದರಿಂದ ಹಾಸನ, ನರಸಿಂಹಸ್ವಾಮಿ ದೇವಾಲಯ ಇರುವುದರಿಂದ ನರಸೀಪುರ, ಸಕಲೇಶ ಸ್ವಾಮಿ ದೇವಾಲಯವಿರುವುದರಿಂದ ಸಕಲೇಶಪುರ… ಹೀಗೆ. ಕೆಲವೊಮ್ಮೆ ಊರುಗಳ ಹೆಸರನ್ನೆ ತಪ್ಪು ಬರೆಯುವುದಿದೆ. ‘ದೊಡ್ಡಕಣಗಾಲ್’ ಬರೆಯಲು ‘ದಡ್ಡ ಕಣಗಾಲ್’ ಎಂದೂ ‘ಮೂಲ್ಕಿ ಎಂದು ಬರೆಯಲು ‘ಮೂಲಿ’ ಎಂದೂ ‘ಹುಬ್ಬ’ ಎಂದು ಬರೆಯಲು ‘ಹೂಬಳ್ಳಿ’ ಎಂದೂ ಕಡೇಪಕ್ಷ ನಮ್ಮ ಊರಿನ ಹೆಸರನ್ನಾದರೂ ಸರಿಯಾಗಿ ಬರೆಯಬಾರದೆ ಅನ್ನಿಸುತ್ತದೆ.
ಇಲ್ಲಿ ಕೆಲವೆ ಊರುಗಳ ಹೆಸರುಗಳ ಬಗ್ಗೆ ಕ್ವಚಿತ್ತಾಗಿ ತಿಳಿಯುವ ಪ್ರಯತ್ನ ಮಾಡಿದೆ. ಊರುಗಳ ಹೆಸರುಗಳನ್ನು ಹಾಗೆ ಮೇಲಿಂದ ಮೇಲೆ ನೋಡುವ ಪ್ರಯತ್ನವಷ್ಟೆ. ದಲಿತ ಕವಿ ಸಿದ್ಧಲಿಂಗಯ್ಯನವರ ಊರು-ಕೇರಿ ಹೆಸರಿನ ಆತ್ಮಕಥಾನಕದಲ್ಲಿ ಅವರ ಇಡೀ ಜೀವನದ ಸುಖದ ಕಷ್ಟದ ನೆನಪಿನ ಗಳಿಗೆಗಳು ಇಲ್ಲಿ ದಾಖಲಾಗಿವೆ. ನಮ್ಮಲ್ಲಿ ಅನೇಕರು ತಮ್ಮ ಹೆಸರಿನ ನಂತರ ತಾವು ಹುಟ್ಟಿಬೆಳೆದ ಊರುಗಳ ಹೆಸರುಗಳನ್ನು ಬಳಸುತ್ತಾರೆ.
ಉದಾಹರಣೆಗೆ ಜರಗನಹಳ್ಳಿ ಶಿವಶಂಕರ್, ಮಲ್ಲೇಪುರಂ ವೆಂಕಟೇಶ, ನರಹಳ್ಳಿ ಸುಬ್ರಹ್ಮಣ್ಯ, ಅಗ್ರಹಾರಕೃಷ್ಣಮೂರ್ತಿ, ಭೈರಮಂಗಲ ರಾಮೇಗೌಡ ಎಂದು ಪ್ರಸಿದ್ಧ ಸಾಹಿತಿಗಳ ಹೆಸರುಗಳನ್ನೆ ಹೇಳಬಹುದು. ಜನರು ವಾಸಿಸುವ ಸ್ಥಳಗಳಿಗೆ ಯಾರೋ ಕರೆದ ಹೆಸರೆ ಇಲ್ಲವೆ ಅಲ್ಲಿ ಪ್ರಭಾವಿಗಳು ನೆಲೆ ನಿಂತಿದ್ದೆ ಊರುಗಳ ಹೆಸರಾಗಿ ನೆಲೆನಿಲ್ಲುತ್ತಿದ್ದವು. ಉದಾಹರಣೆಗೆ ರಾಜಾಜಿನಗರ, ಶೇಷಾದ್ರಿಪುರಂ, ರಿಪ್ಪನ್‌ಪೇಟೆ ಹೀಗೆ…. ಉರು ಯಾವುದೇ ಇರಲಿ ಅಲ್ಲಿ ವಾಸ ಮಾಡವ ಮನಸ್ಸುಗಳು ಸಮಾಧಾನವಾಗಿರಬೇಕು, ವ್ಯಷ್ಟಿ ಚಿಂತನೆಯನ್ನು ಬಿಟ್ಟು ಸಮಷ್ಟಿ ಚಿಂತನೆಯನ್ನು ರೂಢಿಸಿಕೊಳ್ಳಬೇಕು. ಊರುಗಳಿಂದ ಮೊದಲು ನಾವು ಗುರುತಿಸಿಕೊಂಡಿರುತ್ತೇವೆ. ನಂತರ ನಮ್ಮಿಂದ ಊರುಗಳು ಪ್ರಸಿದ್ಧಿಯಾಗಬೇಕು ಅಂಥ ಸಾಧನೆಯ ಜೊತೆಗೆ ನಾವು ಹುಟ್ಟಿ ಬೆಳೆದ ಊರಿನ ಕ್ಷೇಮ ಚಿಂತನೆಯೂ ಇರಬೇಕು!!
ವೃತ್ತಿಯಿಂದ ಉಪನ್ಯಾಸಕಿ. ಹಲವಾರು ಪತ್ರಿಕೆಗಳಲ್ಲಿ ಇವರ ಲೇಖನಗಳು ಪ್ರಕಟವಾಗಿವೆ. ‘ನಲವಿನ ನಾಲಗೆ’ (ಪ್ರಬಂಧ ಸಂಕಲನ) ‘ಶೂರ್ಪನಖಿ ಅಲ್ಲ ಚಂದ್ರನಖಿ’(ನಾಟಕ) ‘ಮನಸ್ಸು ಕನ್ನಡಿ’ , ‘ಲೇಖ ಮಲ್ಲಿಕಾ’, ‘ವಿಚಾರ ಸಿಂಧು’ ಸೇರಿ ಇವರ ಒಟ್ಟು ಎಂಟು ಪುಸ್ತಕಗಳು ಪ್ರಕಟವಾಗಿವೆ.