ಅಲ್ಲಿನ ಉಪ್ಪಿಟ್ಟಿಗಿರುವ ರುಚಿಯೇ ಬೇರೆ. ಬೆಂಗಳೂರಿನವರ ಹಾಗೆ ಬನ್ಸಿ ರವೆಯಲ್ಲೋ, ಅಥವಾ ನಾಲಿಗೆ ಹೆಚ್ಚು ರುಚಿಯನ್ನು ಬಯಸುವಾಗ, ತುಪ್ಪದಲ್ಲಿ ಹುರಿದ ಚಿರೋಟಿ ರವೆಯಲ್ಲೋ ಮಾಡುವ ಉಪ್ಪಿಟ್ಟಲ್ಲ ಅದು. ದಪ್ಪ ರವೆಯ ಒಂಚೂರು ಹೆಚ್ಚಿಗೆಯೇ ಅನ್ನಿಸುವಷ್ಟು ಎಣ್ಣೆಯ ಒಗ್ಗರಣೆಯಲ್ಲಿ ಯಥೇಚ್ಚವಾಗಿ ಸುರಿದ ಉಳ್ಳಾಗಡ್ಡಿ (ಈರುಳ್ಳಿ), ಕರಿಬೇವು, ಸಾಸಿವೆ, ಜೀರಿಗೆ ಮತ್ತು ತಿಂದವರ ಮೂಗು ಸೋರುವಷ್ಟು ಖಾರದ ಮೆಣಸನ್ನು ಹಾಕಿದ ಉಪ್ಪಿಟ್ಟದು. ಅದರ ರುಚಿ ತಿಂದವರಿಗೇ ಗೊತ್ತು ಅಂತ ಬಿಡಿಸಿ ಹೇಳಬೇಕಿಲ್ಲ.
ರೂಪಶ್ರೀ ಕಲ್ಲಿಗನೂರ್ ಬರೆದ ಲೇಖನ
ಬೇಸಿಗೆಯ ರಜೆಯಲ್ಲಿ ಊರಿಗೆ ಹೋಗೋದಂದ್ರೆ ಯಾವ ಮಕ್ಕಳಿಗೆ ಇಷ್ಟವಿಲ್ಲ? ಅದರಲ್ಲೂ ನಾವೆಲ್ಲ ಚಿಕ್ಕವರಿದ್ದಾಗ, ಕೆಲಸದ ನಿಮಿತ್ತ ಬೆಂಗಳೂರಿನಲ್ಲಿ ವಾಸಕ್ಕಿದ್ದ ಕುಟುಂಬಗಳೆಲ್ಲ ಬೇಸಿಗೆಯ ರಜ ಬಂತೆಂದರೆ ಮಕ್ಕಳನ್ನು ಕಟ್ಟಿಕೊಂಡು ಕನಿಷ್ಟ ವಾರದ ಹೊತ್ತಿಗಾದರೂ ತಮ್ಮತಮ್ಮ ಊರುಗಳಿಗೆ ಹೋಗಿಬರುವ ರೂಢಿಯಿಟ್ಟುಕೊಂಡಿರುತ್ತಿದ್ದರು. ಮತ್ತೆ ಬೆಂಗಳೂರೇ ಊರಾಗಿರುವ ಮಕ್ಕಳೆಲ್ಲ “ಬೇಸಿಗೆ ಶಿಬಿರ” ಗಳಲ್ಲಿ ತಮ್ಮ ಬೇಸಿಗೆಯ ಸಮಯವನ್ನು ಕಳೆಯುತ್ತಿದ್ದರು. ಈಗ ಎಲ್ಲರ ಕೈಯಲ್ಲೂ ಕಾಸು ಕುಣಿಯುತ್ತಿರುವ ಕಾಲ. ಹಾಗಾಗಿ ನೆಲ ಬಿಟ್ಟು ಮೂಲ ಬಿಟ್ಟು ಆಕಾಶದಲ್ಲಿ ತೇಲುತ್ತಿರುವ ಈ ಸಮಯದಲ್ಲಿ ಮಕ್ಕಳನ್ನು ಸೀದಾ ದೇಶ-ವಿದೇಶಗಳನ್ನು ಸುತ್ತಿಸುವುದು ರೂಢಿಯಾಗಿದೆ. ಮತ್ತೆ ಬಹುತೇಕ ನನ್ನ ವಯೋಮಾನದವರು ಬೆಂಗಳೂರಿನಲ್ಲಿ ಬೆಳೆದವರಲ್ಲದಿದ್ದರೂ, ಕಾಲೇಜಿಗೆ ಇಲ್ಲೇ ಬಂದು, ಕೆಲಸವನ್ನೂ ಇಲ್ಲಿಯೇ ಮಾಡುತ್ತಿರುವವರಾದ್ದರಿಂದ ಅಪ್ಪಾಮ್ಮನನ್ನು ಊರುಬಿಡಿಸಿ ಇಲ್ಲೇ ಸಂಸಾರ ಹೂಡಿರುವಾಗ, ಮತ್ತೆಲ್ಲಿಗೆ ಅವರು ತಮ್ಮ ಮಕ್ಕಳನ್ನು ಕರೆದುಕೊಂಡು ಹೋಗೋದು?
ಉತ್ತರ ಕರ್ನಾಟಕ ಮೂಲದ ನಾನು ಬೆಳದದ್ದೆಲ್ಲ ಬೆಂಗಳೂರಿನಲ್ಲಿ ಅಂತ ಈ ಹಿಂದೆ ಬರೆದ ಲೇಖನವೊಂದರಲ್ಲಿ ಹೇಳಿದ್ದೆ. ಮೂರನೇ ಕ್ಲಾಸಿನ ಅರ್ಧ ವರ್ಷದ ಹೊತ್ತಿಗೆ ಸವಣೂರಿನಿಂದ ಹೊರಟು ಬಂದು ಬೆಂಗಳೂರಿನ ಗಲ್ಲಿಯೊಳಗೆ ಬಂದು ನಿಂತಿದ್ದೆ. ಬೆಂಗಳೂರಲ್ಲಿ ಈಗೀಗ ಬಿಸಿಲಿನ ತಾಪಮಾನ ಹೆಚ್ಚಾಗತೊಡಗಿದೆಯೇ ಹೊರತು, ಮೊದಲೆಲ್ಲ ಇಷ್ಟು ಬಿಸಿಲು ಇದ್ದಿರಲಿಲ್ಲ. ಅದರಲ್ಲೂ ನನಗೆ ನೆನಪಿದ್ದಂತೆ ಆಗೆಲ್ಲ ಬೀದಿಬೀದಿಗಳಲ್ಲಿ ಮುಗಿಲೆತ್ತರಕ್ಕೆ (ಅಂದ್ರೆ ಚಿಕ್ಕವರಾಗಿದ್ದ ನಮಗೆ ಉದ್ದುದ್ದ ಕಾಣುತ್ತಿದ್ದವು) ಇರುತ್ತಿದ್ದ ಮರಗಳು ಬೇಸಿಗೆಯಲ್ಲೂ ಬಿಸಿಲಿನ ಝಳವನ್ನು ನೆಲಕ್ಕೆ ತಾಕಲು ಕೊಡುತ್ತಿರಲಿಲ್ಲ. (ಅಭಿವೃದ್ಧಿ, ರಸ್ತೆ ಅಗಲೀಕರಣದ ನೆಪದಲ್ಲಿ ಈಗ ಬೆಂಗಳೂರಿನ ಆ ಮರಗಳೆಲ್ಲ ನೆಲಕಂಡಾಗಿವೆ). ಹಾಗಾಗಿ ರಜೆಯ ಸಮಯದಲ್ಲಿ ನಾವೆಲ್ಲ ಮಧ್ಯಾಹ್ನ ಊಟದ ಹೊತ್ತಿನವರೆಗೂ ಬೀದಿಗಳಲ್ಲಿ ಎದೆಬೀರಿ ನಿಂತಿರುತ್ತಿದ್ದ ಮರಗಳ ನೆರಳಲ್ಲಿ ಆಟವಾಡಿಕೊಂಡಿರುತ್ತಿದ್ದೆವು. ಮತ್ತೆ ಅದೇ ಕಾರಣಕ್ಕೇ ಬಿಸಿಲ ನಾಡಿನವಳಾದ ನನಗೆ ಬಿಸಿಲಿನ ಬೇಗೆಯಿಲ್ಲದ ಬೆಂಗಳೂರು ಒಂಥರ ಸೌಖ್ಯದ ಊರೆಂದು ಭಾಸವಾಗುತ್ತಿತ್ತು! ಬೆಣ್ಣೆ, ಮೊಸರು, ಅಣ್ಣ, ದೊಡ್ಡಮ್ಮಂದಿರ ಸಾಂಗತ್ಯವನ್ನು ಮಿಸ್ ಮಾಡಿಕೊಳ್ಳುವುದನ್ನು ಬಿಟ್ಟರೆ ಊರಿಗೆ ಹೋಗುವುದು ಸಜೆಯೇ ಅನ್ನಿಸುತ್ತಿತ್ತು.
ಎಲ್ಲಾ ಕಡೆ ಈಗೀಗ ಕ್ಲೈಮೇಟ್ ಚೇಂಜ್ ನಿಂದಾಗಿ ಚಳಿಯ ಸಮಯದಲ್ಲಿ ಬಿಸಿಲೂ, ಬಿಸಿಲಿನ ಸಮಯದಲ್ಲಿ ಚಳಿಯೂ ಇದ್ದರೆ, ಅಲ್ಲಿ ಊರಲ್ಲಿ ಎರಡೂ ಸಮಯದಲ್ಲೂ ಬಿಸಿಲೇ! ಮಳೆಗಾಲದಲ್ಲಿ ಅಲ್ಲಿನ ನೆಲ ಹಸಿಯಾಗುವುದೂ ಅಷ್ಟರಲ್ಲೇ ಇದೆ. ಮಳೆ ಸುರಿಯಲು ಶುರುವಾದರೆ ಅತಿವೃಷ್ಟಿ ಇಲ್ಲವಾದರೆ ಅನಾವೃಷ್ಟಿ. ಅದೆರಡೇ ಅಲ್ಲಿನ ಜನಕ್ಕೆ ದಕ್ಕಿರುವ ಅನುಭವ. ಈಗ ಬೆಂಗಳೂರು- ಮಡಿಕೇರಿ ಅಂತ ಓಡಾಡಿಕೊಂಡಿರುವ ನನಗೆ ಊರಿಗೆ ಹೋಗುವುದು ಇಷ್ಟದ ವಿಷಯವಾದರೂ ಅಲ್ಲಿನ ಬಿಸಿಲನ್ನು ನೆನೆಸಿಕೊಂಡರೇ ಮೈ ಬಿಸಿಯಾಗಿಬಿಡತ್ತೆ. ಹಿಂದೊಮ್ಮೆ ಚಿಕ್ಕವಳಿದ್ದಾಗ ಬೇಸಿಗೆ ರಜೆಗೆ ಅಮ್ಮನ ತವರುಮನೆಗೆ ಹೂಲಿಗೆ ಹೋದಾಗಿನ ನೆನಪು… ಅಲ್ಲಿರ ರಣರಣ ಎನ್ನುವ ಬಿಸಿಲಿನ ಝಳಕ್ಕೆ ಜೋರು ಜ್ವರ ಬಂದು ಅಲ್ಲೇ ಅಜ್ಜಿ ಮನೆಯ ಮುಂದಿದ್ದ ತೆಗ್ಗೆಳ್ಳಿ ಡಾಕ್ಟರ್ ಬಳಿ ಹೋದಾಗ “ಇವು ಪ್ಯಾಟಿ ಹುಡುಗ್ರು ಬಾಳ ಮೆತ್ತಗಿರ್ತಾವ್ರೀ… ಈ ಬಿಸಲೆಲ್ಲ ಆಗಂಗಿಲ್ಲ ಇವಕ್ಕ…” ಅಂತ ನಕ್ಕು ಇಂಜಕ್ಷನ್ ಚುಚ್ಚಿಸಿಕೊಂಡು ಬಂದದ್ದನ್ನ ಮರೆಯುವುದಾದರೂ ಹೇಗೆ!
ಇಂಥ ಬಿಸಿಲಿನ ಊರಲ್ಲಿ ಸದಾ ಬಿಸಿಬಿಸಿಚಹಾ, ಖಾರದ ಅಡುಗೆ, ಜೊತೆಗೆ ಅಲ್ಲಿಲ್ಲಿ ಕುದಿವ ಎಣ್ಣೆಯ ಮುಂದೆ ನಿಂತು ಬಿಸಿಲ ಝಳದಲ್ಲೂ ಬಿಸಿಬಿಸಿ ಖಾರದ ಮೆಣಸಿನಕಾಯಿ ಬಜ್ಜಿಯನ್ನು ತಿನ್ನುವ ಜನರನ್ನು ಕಂಡಾಗಲೆಲ್ಲ ನನಗೆ ಸೋಜಿಗ.. ಈ ಬಿಸಿಲಿಗೂ, ಬಿಸಿಗೂ, ಖಾರಕ್ಕೂ ಇರುವ ನಂಟಾದರೂ ಏನು ಮತ್ತು ಹೇಗೆ ಅನ್ನುವುದು ಬಿಡಿಸಲಾಗದ ಕಗ್ಗಂಟು.
ನಾವು ಮದುವೆಯಾದ ಹೊಸತು. ರಾಮದುರ್ಗ ತಾಲ್ಲೂಕಿನ ಊರೊಂದರಲ್ಲಿ ನನ್ನ ದೊಡ್ಡಮ್ಮನ ಮಗನ ಮದುವೆ ಏರ್ಪಾಡಾಗಿತ್ತು. ಹೊಸ ಜೋಡಿಯಾದ ನಮಗೆ ಅಲ್ಲಿಗೆ ವಿಶೇಷ ಆಮಂತ್ರಣವಿತ್ತು. ಎರಡು ಮೂರು ಸಲ ಫೋನಾಯಿಸಿ, ಹೊಸ ಮದುಮಕ್ಕಳು ಬರಲೇಬೇಕು, ತಪ್ಪಿಸಿಕೊಳ್ಳಲೇಬಾರದು ಅಂಥ ಕಂಡೀಷನ್ ಹಾಕಿದ್ದರು. ಹಾಗಾಗಿ ಅಪ್ಪ ಅಮ್ಮ ಅಕ್ಕ ಮತ್ತು ತಮ್ಮನೊಟ್ಟಿಗೆ ನಾವೂ ಊರಿಗೆ ಹೊರಟೆವು.
ಉತ್ತರ ಕರ್ನಾಟಕದ ಮದುವೆ ಮನೆಗಳಲ್ಲಿ ಬೆಳಗ್ಗಿನ ತಿಂಡಿಗೆ ಉಪ್ಪಿಟ್ಟಿನ ಹೊರತು ಬೇರೆ ಆಯ್ಕೆ ಇರೋದಿಲ್ಲ. ಮದುವೆಗಳಲ್ಲಿ ಅನಿಯಮಿತ ಜನರ ಆಗಮನ ಅಲ್ಲಿ ಸರ್ವೇಸಾಮಾನ್ಯ ಸಂಗತಿಯಾಗಿರೋದ್ರಿಂದ ಬೆಳಗ್ಗೆದ್ದು ಅಡುಗೆ ಮನೆಯಲ್ಲಿ ಉಪ್ಪಿಟ್ಟು ತಿರುವಿ ಇಟ್ಟುಬಿಟ್ಟರೆಂದರೆ ಮುಗೀತು. ಬೇಕಿದ್ದವರು, ಬೇಡದಿದ್ದವರು ಯಾರು ಬಂದರೂ “ಏ, ಉಪ್ಪಿಟ್ಟು ಹಾಕ್ಕೊಂಡ್ ಬರ್ರೀ ಇಲ್ಲೆ… ಊರಿಂದ ಅಜ್ಜಾರು ಬಂದಾರು” ಅಂತೊಂದು ಹೊರಗಿಂದ ಕೂಗುಬಂದರೆ, ಪ್ಲಾಸ್ಟಿಕ್ ತಟ್ಟೆಯಲ್ಲಿ ಉಪ್ಪಿಟ್ಟು ತಯಾರಾಗಿ ಬಂದು, ಊರಿಂದ ಬಂದವರ ಮುಂದೆ ನಿಲ್ಲುತ್ತಿತ್ತು. ಮಕ್ಕಳಿಂದ ಮುದುಕರವರೆಗೆ ಎಲ್ಲರಿಗೂ ಅದೇ…
ಅಲ್ಲಿನ ಉಪ್ಪಿಟ್ಟಿಗಿರುವ ರುಚಿಯೇ ಬೇರೆ. ಬೆಂಗಳೂರಿನವರ ಹಾಗೆ ಬನ್ಸಿ ರವೆಯಲ್ಲೋ, ಅಥವಾ ನಾಲಿಗೆ ಹೆಚ್ಚು ರುಚಿಯನ್ನು ಬಯಸುವಾಗ, ತುಪ್ಪದಲ್ಲಿ ಹುರಿದ ಚಿರೋಟಿ ರವೆಯಲ್ಲೋ ಮಾಡುವ ಉಪ್ಪಿಟ್ಟಲ್ಲ ಅದು. ದಪ್ಪ ರವೆಯ ಒಂಚೂರು ಹೆಚ್ಚಿಗೆಯೇ ಅನ್ನಿಸುವಷ್ಟು ಎಣ್ಣೆಯ ಒಗ್ಗರಣೆಯಲ್ಲಿ ಯಥೇಚ್ಚವಾಗಿ ಸುರಿದ ಉಳ್ಳಾಗಡ್ಡಿ (ಈರುಳ್ಳಿ), ಕರಿಬೇವು, ಸಾಸಿವೆ, ಜೀರಿಗೆ ಮತ್ತು ತಿಂದವರ ಮೂಗು ಸೋರುವಷ್ಟು ಖಾರದ ಮೆಣಸನ್ನು ಹಾಕಿದ ಉಪ್ಪಿಟ್ಟದು. ಅದರ ರುಚಿ ತಿಂದವರಿಗೇ ಗೊತ್ತು ಅಂತ ಬಿಡಿಸಿ ಹೇಳಬೇಕಿಲ್ಲ. ಅದರಲ್ಲೂ ಆ ಉಪ್ಪಿಟ್ಟಿಗೆ ಮನೆಯ ಆಕಳದ್ದೋ ಎಮ್ಮೆಯದ್ದೋ ಹಾಲಿನ ಗಟ್ಟಿ ಮೊಸರೋ ಅಥವಾ ಖಾರ ಚುರುಮರಿಯ ಸಾಂಗತ್ಯವಿದ್ದರಂತೂ, ಅಲ್ಲಿನ ಜಾಗಕ್ಕೆ ಅದೇ ಸಗ್ಗ. ಹಾಗೆಯೇ ದಪ್ಪ ರವೆಯಲ್ಲದೇ ಮುಸುಕಿನ ಜೋಳವನ್ನು ಮಿಲ್ಲಿಗೆ ಹಾಕಿಸಿ ಮಾಡಿದ ರವೆಯ ಉಪ್ಪಿಟ್ಟೂ ಅಲ್ಲಿನ ವಾತಾವರಣಕ್ಕೆ ಬಿಸಿಲಲ್ಲಿ ರಟ್ಟೆ ಮುರಿದು ದುಡಿಯುವ ಜನರಿಗೆ ಗಟ್ಟಿ ಆಹಾರವೇ.
ರಜೆಯ ಸಮಯದಲ್ಲಿ ನಾವೆಲ್ಲ ಮಧ್ಯಾಹ್ನ ಊಟದ ಹೊತ್ತಿನವರೆಗೂ ಬೀದಿಗಳಲ್ಲಿ ಎದೆಬೀರಿ ನಿಂತಿರುತ್ತಿದ್ದ ಮರಗಳ ನೆರಳಲ್ಲಿ ಆಟವಾಡಿಕೊಂಡಿರುತ್ತಿದ್ದೆವು. ಮತ್ತೆ ಅದೇ ಕಾರಣಕ್ಕೇ ಬಿಸಿಲ ನಾಡಿನವಳಾದ ನನಗೆ ಬಿಸಿಲಿನ ಬೇಗೆಯಿಲ್ಲದ ಬೆಂಗಳೂರು ಒಂಥರ ಸೌಖ್ಯದ ಊರೆಂದು ಭಾಸವಾಗುತ್ತಿತ್ತು!
ಹಾಗೆ ಮದುವೆ ಮನೆಗೆ ಬೆಂಗಳೂರಿನಿಂದ ಬಂದ ಹೊಸ ಅಳಿಯನಿಗೆ ಸತ್ಕಾರ ಮಾಡದೇ ಇರಲು ಸಾಧ್ಯವೇ? ಎಲ್ಲಿಬೇಕಾದರಲ್ಲಿ ಆರಾಮವಾಗಿ ಹೊಂದಿಕೊಂಡುಬಿಡುವ ವಿಪಿನ್ ಕಂಡು ಎಲ್ಲರಿಗೂ ಹಿಗ್ಗು. ದೊಡ್ಡಮ್ಮನ ಸೊಸೆಯಂದಿರು ಪ್ರೀತಿಯಿಂದ ಕೊಟ್ಟ ಉಪ್ಪಿಟ್ಟನ್ನು ಗಟ್ಟಿ ಮೊಸರಿನಲ್ಲಿ ಕಲೆಸಿ ತಿಂದಮೇಲೆ ಅವರಿಗೂ ಖುಷಿ. ಅಸಲಿ ಆಟ ಶುರುವಾದದ್ದೇ ಆಮೇಲೆ. ಅಲ್ಲಿನ ಬಿಸಿಲಿನ ಕಾರಣಕ್ಕೆ ಮೈಯ ನೀರೆಲ್ಲ ಕಾಲಿಯಾಗಿಬಿಡುವ ಕಾರಣಕ್ಕೋ ಅಥವಾ ಹೊಲದಲ್ಲಿ ದುಡಿವ ಜನರಿಗೆ ಶಕ್ತಿ ಬೇಕೆಂತಲೋ ಆಗಾಗ ಚಾ ಮಾಡಿ ಕುಡಿಯುವ ರೂಢಿ ಅಲ್ಲಿ. ಹಾಸಿಗೆಯಿಂದ ಎದ್ದಮೇಲೊಂದು, ತಿಂಡಿಯಾದಮೇಲೊಂದು, ಹನ್ನೆರೆಡುಗಂಟೆಗೊಂದು, ಊಟವಾದಮೇಲೊಂದು ಸಂಜೆಗೊಂದು, ಮತ್ತೆ ಮನೆಗೆಬಂದವರ ಜೊತೆಗೊಂದು, ಎಲ್ಲ ಕೆಲಸ ಮುಗಿದು ಆರಾಮ ಕುಂತಾಗಲೊಂದು ಅಂತ ದಿನಕ್ಕೆ ಏನಿಲ್ಲವೆಂದರೂ ಆರೇಳು ಚಾ ಕುಡಿಯದೇ ಅವರ ದಿನ ನಡೆಯುವುದಿಲ್ಲ. ಮನೆಯಲ್ಲಿ ಸದಾ ಮಕ್ಕಳ ದಂಡಿರುವ ಕಾರಣಕ್ಕೋ ಏನೋ ಹಾಲನ್ನು ಕೇವಲ ಮುಟ್ಟಿಸಿದಂಥಾ, ಧಾರಾಳವಾಗಿ ಸಕ್ಕರೆಯನ್ನು ಸುರಿದ ನೀರು ಚಹಾ ಅಲ್ಲಿ… ಎಲ್ಲರ ಮನೆಯಲ್ಲಿ…
ಮಡಿಕೇರಿಯಲ್ಲಿ ಹಾಲಿನಲ್ಲೆ ಚಾ, ಕಾಫಿ ಕುಡಿದು ರೂಢಿಯಿದ್ದ ಹೊಸ ಅಳಿಯ ಅಲ್ಲಿನ ಚಹಾ ಕುಡಿದು ಕಕ್ಕಾಬಿಕ್ಕಿ… ಅದರಲ್ಲೂ ಗಂಟೆಗೊಮ್ಮೆ “ಅಣ್ಣಾರ ಚಾ ತಗೊಳ್ರೀ… ಮಾಮಾರ ಚಾ ಕುಡೀರಿ…” ಅಂತ ಪ್ರೀತಿಯಿಂದ ಹೆಣ್ಣುಮಕ್ಕಳು ಬಂದು ಹಾಗೆಲ್ಲ ಬಂದು ಚಹಾದ ಗ್ಲಾಸುಗಳು ತುಂಬಿದ ತಟ್ಟೆಯನ್ನು ಮುಂದೆ ಹಿಡಿದಾಗ ಬೇಡವೆನ್ನಲಾದೀತೆ…! ಬೇಸರ ಮಾಡ್ಕೊಳ್ಳಬಾರ್ದು ಅಂತ ಎರಡು ಮೂರು ಸಲ ಚಹಾ ಕುಡಿದರೂ, ನಾಲ್ಕನೇ ಐದನೇ ಚಹಾಕ್ಕೆ ಮೈ ಬೆವರು ಸಣ್ಣಗೆ ಇಳಿಯತೊಡಗಿತ್ತು. ಹಾಗೆ ಸುಸ್ತುಹೊಡೆದು ಬೇಡವೆಂದರೆ ಕೇಳುವವರಾದರೂ ಯಾರು? “ಹೊಸಾ ಮಂದಿ, ನಾಚ್ಕೋತಾರ… ಪಾಪ…” ಅಂತ ಚಾ ಕುಡಿಸಿಯೇ ಅವರನ್ನು ಕೈ ಬಿಡುವಾಗ ನನಗೊ ಅವರ ಮುಖ ನೋಡಿ ಒಳಗೊಳಗೇ ನಗು. ಮತ್ತೆ ಅಂಥ ಚಹಾ ಮಾಡಿದ ಪಾಪವೆಲ್ಲ ಒಲೆಯ ಮೇಲಿಂದ ಇಳಿಸಿದ ಬಿಸಿಬಿಸಿ ಜೋಳದ ರೊಟ್ಟಿಗೆ ಬೆಣ್ಣೆಹಚ್ಚಿಕೊಂಡು ತಿನ್ನುವಾಗ ಪರಿಹಾರವಾಗಿಬಿಡುತ್ತಿತ್ತು. ಆಮೇಲೆ ಪಲ್ಯಕ್ಕೆ ಮೊಸರು, ಹಿಂಡಿ, ಜೊತೆಗೆ ಕಡಿಯಲು ಎಳೇಸೌತೇಕಾಯಿ… ಅಷ್ಟು ಸಾಕು ಅನ್ನಿಸುತ್ತಿತ್ತು.
ಹಾಗೆ ಮಾಡುತ್ತಿದ್ದ ಜವಾರಿ ಖಾರಖಾರ ಉಪ್ಪಿಟ್ಟಿಗೆ ಮಣ ಮೊಸರು ಹಾಕಿಕೊಂಡು, ಚಹಾವನ್ನು ತಟ್ಟೆಯಲ್ಲಿ ಹಾಕಿ ಕುಡಿಯುವಲ್ಲಿ ಅಲ್ಲಿನ ಮಕ್ಕಳು ಯಾವಾಗಲೂ ರೆಡಿ… ನಮ್ಮ ಊರುಗಳಲ್ಲಿ ಮಕ್ಕಳಿಗೆ ಹೀಗೆ ಬೆಂಗಳೂರಿನವರ ಹಾಗೆ ಬೀದಿಯಲ್ಲಿ ಓಡಾಡಿಸಿ ಕಲೆಸಿದ ತುಪ್ಪದನ್ನವನ್ನ ತಿನ್ನಿಸಿ ಗೊತ್ತಿಲ್ಲ. ಕೃಷಿ ಹಿನ್ನೆಲೆಯ ಮನೆಯ ಮಕ್ಕಳೆಲ್ಲ ವರ್ಷ ತುಂಬುವುದರೊಳಗೆ ಎಲ್ಲರೊಟ್ಟಿಗೆ ಕೂತು ತಟ್ಟೆಯಲ್ಲಿ ರೊಟ್ಟಿಯನ್ನೂ, ಅದಕ್ಕೆ ಹಾಲೋ ಮೋಸರೋ ಅಥವಾ ಬೆಣ್ಣೆಯನ್ನೋ ಹಾಕಿಕೊಂಡು ತಿನ್ನಲು ರೂಢಿಸಿಕೊಂಡಿರುತ್ತಾರೆ. ಒಳಗೆ ಹೊರಗೆ ರಾಶಿರಾಶಿ ಕೆಲಸವಿರುವಾಗ ಚಿನ್ನಾ, ಬಂಗಾರಾ… ತಿನ್ನುಪುಟ್ಟ… ಅಂತ ಮುದ್ದಿಸಲು ಸಮಯವಾದರೂ ಅಲ್ಲಿನ ಅಮ್ಮಂದಿರಿಗೆ ಎಲ್ಲಿಂದ ಬರಬೇಕು? ಸಿಟ್ಟುಮಾಡಿಕೊಂಡ ಮಕ್ಕಳನ್ನಂತೂ ಮುದ್ದಿಸುವ ಪ್ರಮೇಯವೇ ಅಲ್ಲಿ ಬರೋದಿಲ್ಲ. ʼಹಸದ್ರ ಬರ್ತಾನ ಬಿಡು…ʼ ಅಂತಂದು ಸುಮ್ಮನಾದರೆ ಹಸಿವಾದ ಯಾರಾದರೂ ಕದ್ದು ಅಡುಗೆ ಮನೆಗೆ ಹೋಗಿ ತಿನ್ನಬೇಕು. ಅಷ್ಟೇ… ಹಾಗಾಗಿ ಹಸಿವಾಗಿ ಬಂದಾಗಲಷ್ಟೇ ಅಡುಗೆಮನೆಯಲ್ಲಿದ್ದದ್ದನ್ನು ಕೊಟ್ಟು ಕಳಿಸುತ್ತಾರೆ. ಅತ್ತರೆ-ಕರೆದರೆ ಕೈಗೊಂದು ರೊಟ್ಟಿಯ ತುಣುಕು. ಇಲ್ಲವಾದರೆ ಹೊಲದಿಂದ ಕೆಲಸ ಮುಗಿಸಿ ವಾಪಾಸ್ಸು ಬರುವಾಗ ಹರಿದುಕೊಂಡು ಬಂದ ಹಸಿ ಅಲಸಂದೆ, ಅಥವಾ ಎಳೆ ಸೌತೆಕಾಯಿ.
ಹಿಂದೊಮ್ಮೆ, ಅಜ್ಜಿ ಬೆಂಗಳೂರಿಗೆ ಬಂದಾಗ ನಡೆದ ಪ್ರಸಂಗವೊಂದು ನೆನಪಿಗೆ ಬರುತ್ತಿದೆ. ಅವತ್ತು ಅಜ್ಜಿ ತಲೆಗೆ ಸ್ನಾನ ಮಾಡಿದವರು, ಕೂದಲು ಒಣಗಿಸಲೆಂದು, ಕೆಳಗಿಳಿದು ಹೋಗಿದ್ದರು. ಅದು ಹತ್ತಿರತ್ತಿರ ಮಧ್ಯಾಹ್ನ ಹನ್ನೆರೆಡು ಗಂಟೆ ಸಮಯ ಅನ್ನೋದು ನೆನಪು. ಹಾಗವರು ಹೋಗಿ, ಬಿಸಿಲಲ್ಲಿ ಕೂದಲು ಹರವಿಕೊಂಡು ಕೂಳಿತಿದ್ದಾಗಲೇ, ಎದುರುಗಡೆ ಬಿಲ್ಡಿಂಗಿನಲ್ಲಿದ್ದ ಆಂಟಿಯೊಬ್ಬರ ಮಗಳು ಒಂದು ಕೈಯಲ್ಲಿ ಮಗುವನ್ನೆತ್ತಿಕೊಂಡು ಇನ್ನೊಂದು ಕೈಯಲ್ಲಿ ತುಪ್ಪ ಕಲೆಸಿದ ಅನ್ನದ ಬಟ್ಟಲನ್ನು ಹಿಡಿದುಕೊಂಡು ಹೊರಗೆ ಬಂದಳು. ಅಜ್ಜಿಗೆ ಅವಳ್ಯಾಕೆ ಹಾಗೆ ಅನ್ನದ ಬಟ್ಟಲನ್ನು ಹಿಡಿದುಕೊಂಡು ಓಡಾಡುತ್ತಿದ್ದಾಳೆಂದು ಆಶ್ಚರ್ಯ. ಇಲ್ಲಿ ಗೊತ್ತಲ್ಲ, ಮಗುವಿಗೆ ಹಸಿವಿದೆಯೋ ಇಲ್ಲವೋ, ಒಟ್ಟು, ಸಮಯಕ್ಕೆ ಸರಿಯಾಗಿ, ಬಟ್ಟಲಿನ ಅನ್ನವನ್ನೆಲ್ಲ ಬಾಯಿಗೆ ತುರುಕುವುದೇ ಅಮ್ಮಂದಿರ ಕೆಲಸ! ಹಾಗೆ ಅವಳೂ ಅಲ್ಲಿಂದಿಲ್ಲಿಗೆ ಓಡಾಡುತ್ತ “ತಿನ್ನು ಪುಟ್ಟ… ತಿನ್ನು ಪುಟ್ಟ…” ಅಂತನ್ನುತ್ತ ಬಾಯಿಗೆ ಅನ್ನ ತುರುಕುವುದನ್ನ ಅಜ್ಜಿ ನೋಡಿದ್ದೇ ಅವರ ಕೋಪ ನೆತ್ತಿಗೇರಿತ್ತು. ಕುಳಿತಲ್ಲಿಂದಲೇ “ಏ ಹುಚಮಂಗ್ಯಾ.. ಕೂಸಿಗೆ ಹಿಂಗ ರಸ್ತಾದಾಗ ಅಡ್ಯಾಡಿ ಅನ್ನಾ ತಿನ್ನಸ್ತಾರನು…? ಅನ್ನಕ್ಕ ಧೂಳು ಬೀಳಂಗಿಲ್ಲಾ….? ಒಬ್ಬಿ ಒಬ್ಬಿ ಅನ್ನಾ ಅದರ ಬಾಯಿಗೆ ತುರುಕ್ತಿಯಲ್ಲ… ನಿಂಗೂ ಹಂಗ ತುರುಕ್ಲನು…? ಒಳಗ್ ಹೊಕ್ಕಿಯಾ.. ಇಲ್ಲ ಬರ್ಲ…” ಅಂತ ಆವಾಜು ಹಾಕಿದ್ದೇ ಆ ಹುಡುಗಿ ಕೂಸನ್ನೆತ್ತಿ ಮನೆಯೊಳಗೆ ಓಡಿದ್ದಳು. ಅಜ್ಜಿ ಹೇಳಿದ್ದೂ… ಅವರ ಬೈಗುಳವೂ ಅವಳಿಗೆಷ್ಟು ಅರ್ಥವಾಯ್ತೋ ಏನೋ ಇವತ್ತಿಗೂ ಗೊತ್ತಿಲ್ಲ… ಆದ್ರೆ ಅಜ್ಜಿ ಊರಿಗೆ ವಾಪಾಸ್ಸು ಹೋಗುವವರೆಗಂತೂ ಅವಳು ಹಾಗೆ ಹೊರಗೆ ಬಂದು ತನ್ನ ಮಗುವಿಗೆ ಊಟ ಮಾಡಿಸಿದ್ದು ಕಾಣಲಿಲ್ಲ.
ಮತ್ತೆ ಬಹಳ ಸಮಯದ ನಂತರ ಕೆಲ ದಿನಗಳ ಹಿಂದೆ ಊರಿಗೆ ಹೋಗಿದ್ದೆ. ಬೆಳಗ್ಗಿನ ಜಾವವೊಂದನ್ನು ಬಿಟ್ಟರೆ ಮಧ್ಯಾಹ್ನ ಮತ್ತು ಸಂಜೆಗಳ ನಡುವೆ ಯಾವ ವ್ಯತ್ಯಾಸವೂ ಇಲ್ಲ. ಎಲ್ಲ ಈಗಲೂ ಒಂದೇ ಅಲ್ಲಿ. ರಣರಣ ಅನ್ನುವಂಥ ಬಿಸಿಲು. ಸಂಜೆ ಮಾರ್ಕೆಟ್ಟಿಗೆ ಹೋಗಿ ಏನಾದ್ರೂ ತರೋಣ ಅಂತಂದರೆ ಅದಕ್ಕೆ ಅಷ್ಟೇನೂ ಡಿಸ್ಕೌಂಟ್ ಇಲ್ಲ. ಸಂಜೆ ಐದರ ಮೇಲೆ ಸೂರ್ಯನ ಉರವಣಿಗೆ ಕೊಂಚ ತಗ್ಗೋದು. ಇಲ್ಲಾಂದ್ರೆ ಅದೇ ಝಳಝಳ ಬಿಸಿಲಿನಲ್ಲಿ ಬಿಸಿಬಿಸಿ ಮೆಣಸಿನ ಕಾಯಿ ಬಜ್ಜಿ ತಿಂದಂತೆಯೇ ಅಲ್ಲಿನ ಜೀವನ. ಬಿಸಿಲಿನಲ್ಲಿ ಬಿಸಿಬಿಸಿ ಬಜ್ಜಿಯ ಬಾಂಧವ್ಯ ಇನ್ನೂ ಬಿಡಿಸಲಾರದು ಕಗ್ಗಂಟು.
ಚಿತ್ರ ಕಲಾವಿದೆ, ಕವಯತ್ರಿ ಹಾಗೂ ಪತ್ರಕರ್ತೆ. ಚಿತ್ರಕಲೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ‘ಕಾಡೊಳಗ ಕಳದಾವು ಮಕ್ಕಾಳು’ ಮಕ್ಕಳ ನಾಟಕ . ‘ಚಿತ್ತ ಭಿತ್ತಿ’ ವಿಭಾ ಸಾಹಿತ್ಯ ಪ್ರಶಸ್ತಿ ಪಡೆದ ಕವನ ಸಂಕಲನ. ಹುಟ್ಟಿದ್ದು ಸವಣೂರಿನಲ್ಲಿ. ಈಗ ಬೆಂಗಳೂರು. ‘ಕೆಂಡಸಂಪಿಗೆ’ ಯಲ್ಲಿ ಸಹಾಯಕ ಸಂಪಾದಕಿ.