ನಿಜ ಹೇಳಬೇಕೆಂದರೆ ಎಲ್ಲಿಕಾಟ್ ಸಿಟಿಯಲ್ಲಿ ಮನೆ ತೆಗೆದುಕೊಳ್ಳೋಣವೆಂದು ಪ್ರಸಾದ್ ಹೇಳಿದಾಗ ರಾಧಿಕಳೇ ಬೇಡ ಅದು ಮಿನಿ ಭಾರತ, ಎಲ್ಲಿ ನೋಡಿದರೂ ಮುಖ್ಯವಾಗಿ ತೆಲುಗಿನವರೇ. ಪ್ರತಿಯೊಂದಕ್ಕೂ ಮಕ್ಕಳು, ಮಹಿಳೆಯರು, ಗಂಡಸರ ನಡುವೆ ಅನಗತ್ಯ ಸ್ಪರ್ಧೆ. ಅದಕ್ಕೇ ಭಾರತೀಯರು ಕಡಿಮೆ ಇರುವ ಪ್ರದೇಶದಲ್ಲಿ ಮನೆ ತೆಗೆದುಕೊಳ್ಳೋಣ ಎಂದು ಪಟ್ಟುಹಿಡಿದು ಇಲ್ಲಿಗೆ ಬಂದಿದ್ದಾರೆ. ಆದರೂ ರಾಧಿಕಳಿಗೆ ಮಗ ಆಕಾಶನಿಗೆ ಯಾರಾದರೂ ತೆಲುಗು ಸ್ನೇಹಿತರಿದ್ದರೆ ಚೆನ್ನಾಗಿತ್ತೆಂಬ ಆಸೆ ಕಡಿಮೆಯಾಗಿಲ್ಲ.
ಎಂ.ಜಿ. ಶುಭಮಂಗಳ ತೆಲುಗಿನಿಂದ ಕನ್ನಡಕ್ಕೆ ಅನುವಾದಿಸಿದ ನಕ್ಷತ್ರಂ ವೇಣುಗೋಪಾಲ್ ಬರೆದ ಕತೆ “ವೇಕ್‌ ಅಪ್!” ನಿಮ್ಮ ಈ ಭಾನುವಾರದ ಓದಿಗೆ

 

ಪ್ರಸಾದ್ ಅಮೆರಿಕದ ಮೇರೀಲ್ಯಾಂಡ್‌ನಲ್ಲಿ ಕಳೆದ ಹತ್ತು ವರ್ಷಗಳಿಂದ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾನೆ, ಅವನ ಹೆಂಡತಿ ರಾಧಿಕ ಕೂಡಾ ಸಾಫ್ಟ್‌ವೇರ್ ಉದ್ಯೋಗಿ. ಅವರ ಮಗ ಆಕಾಶ್ ಸವೆಂತ್ ಗ್ರೇಡ್ ಓದುತ್ತಿದ್ದಾನೆ. ಇಲ್ಲಿ ಬಹುತೇಕ ಎಲ್ಲರೂ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಯಲ್ಲೇ ಓದಿಸುತ್ತಾರೆ. ಒಳ್ಳೆಯ ರ್ಯಾಂಕಿಂಗ್ ಇರುವ ಸ್ಕೂಲಿಗೆ ಸೇರಿಸಲು ಕಡ್ಡಾಯವಾಗಿ ಆ ಸ್ಕೂಲಿನ ವ್ಯಾಪ್ತಿಯಲ್ಲಿ ವಾಸಿಸಬೇಕೆಂಬ ನಿಯಮದಿಂದಾಗಿ ಆಕಾಶನ ಶಾಲೆಗೋಸ್ಕರ ಪ್ರಸಾದ್ ಕುಟುಂಬ ಇತ್ತೀಚೆಗೆ ಟಾಪ್ ರ್ಯಾಂಕ್ ಶಾಲೆಯಿರುವ ಏರಿಯಾ ಜರ್ಮನ್ ಟೌನ್‌ಗೆ ವಾಸ ಬದಲಿಸಿದೆ.

“ಪ್ರಸಾದ್, ಈ ಏರಿಯಾದಲ್ಲಿ ತೆಲುಗು ಫ್ಯಾಮಿಲಿ ಕಾಣುತ್ತಿಲ್ಲ, ಒಂದಾದರೂ ಇದ್ದಿದ್ದರೆ ಚೆನ್ನಾಗಿರುತ್ತಿತ್ತು” ಬದಲಾದ ಹೊಸ ಮನೆಯಲ್ಲಿ ಜೋಡಿಸಲು ಬಾಕ್ಸಿನಿಂದ ಡೆಕೊರೇಟಿವ್ ಷೋ ಪೀಸ್ ತೆಗೆಯುತ್ತ ಹೇಳಿದಳು ರಾಧಿಕ.

“ತೆಲುಗಿನವರು ಹೆಚ್ಚಾಗಿ ಇರುವ ಕಡೆ ಮನೆ ಬೇಡ ಅಂದುಕೊಂಡಿದ್ದೆವಲ್ಲ! ಮತ್ತೆ ಈಗೇಕೆ ಆ ವಿಷಯ? ಇಲ್ಲಿ ಕೂಡ ಕೆಲವು ಇಂಡಿಯನ್ ಫ್ಯಾಮಿಲಿಗಳಿವೆ” ಟಿವಿ ಸ್ಟ್ಯಾಂಡ್ ಅಸೆಂಬಲ್ ಮಾಡುತ್ತ ಹೇಳಿದ ಪ್ರಸಾದ್ ಸ್ವಲ್ಪ ಅಸಹನೆಯಿಂದ.
“ಅದೇನೋ ಸರಿ, ಆದರೆ ನಮ್ಮ ಆಕಾಶ್‌ಗೆ ಮೊದಲು ಅಕ್ಕ ಪಕ್ಕ ಬಹಳ ಸ್ನೇಹಿತರಿದ್ದರು, ಇಲ್ಲಿ ಅವನಿಗೆ ಒಂದಿಬ್ಬರಾದರೂ ಸ್ನೇಹಿತರಿದ್ದಿದ್ದರೆ ಚೆನ್ನಾಗಿರುತ್ತಿತ್ತು ಅಂತ ಅಷ್ಟೆ” ಹೇಳಿದಳು ರಾಧಿಕ.

ನಿಜ ಹೇಳಬೇಕೆಂದರೆ ಎಲ್ಲಿಕಾಟ್ ಸಿಟಿಯಲ್ಲಿ ಮನೆ ತೆಗೆದುಕೊಳ್ಳೋಣವೆಂದು ಪ್ರಸಾದ್ ಹೇಳಿದಾಗ ರಾಧಿಕಳೇ ಬೇಡ ಅದು ಮಿನಿ ಭಾರತ, ಎಲ್ಲಿ ನೋಡಿದರೂ ಮುಖ್ಯವಾಗಿ ತೆಲುಗಿನವರೇ. ಪ್ರತಿಯೊಂದಕ್ಕೂ ಮಕ್ಕಳು, ಮಹಿಳೆಯರು, ಗಂಡಸರ ನಡುವೆ ಅನಗತ್ಯ ಸ್ಪರ್ಧೆ. ಅದಕ್ಕೇ ಭಾರತೀಯರು ಕಡಿಮೆ ಇರುವ ಪ್ರದೇಶದಲ್ಲಿ ಮನೆ ತೆಗೆದುಕೊಳ್ಳೋಣ ಎಂದು ಪಟ್ಟುಹಿಡಿದು ಇಲ್ಲಿಗೆ ಬಂದಿದ್ದಾರೆ. ಆದರೂ ರಾಧಿಕಳಿಗೆ ಮಗ ಆಕಾಶನಿಗೆ ಯಾರಾದರೂ ತೆಲುಗು ಸ್ನೇಹಿತರಿದ್ದರೆ ಚೆನ್ನಾಗಿತ್ತೆಂಬ ಆಸೆ ಕಡಿಮೆಯಾಗಿಲ್ಲ.

ಸ್ವಲ್ಪ ಸಾಮಾನು ಜೋಡಿಸಿ ಹಾಲು ತರಕಾರಿ ತರಲು ಗ್ರಾಸರೀ ಸ್ಟೋರಿಗೆ ಹೋದರು. ಷಾಪಿಂಗ್ ಮಾಡುವಾಗ ಯಾರೋ ದಂಪತಿಗಳು ತೆಲುಗಿನಲ್ಲಿ ಮಾತನಾಡುವುದನ್ನು ಕೇಳಿಸಿಕೊಂಡ ತಕ್ಷಣ ರಾಧಿಕಳ ಕಿವಿ ಚುರುಕಾಗಿ, ತಾನೇ ಅವರನ್ನು ಪರಿಚಯ ಮಾಡಿಕೊಂಡಳು. ಶ್ವೇತ ಆಕೆಯ ಪತಿ ರಾಜೇಶ್ ಹಾಗೂ ಅವರ ಮಗ ವರುಣ್‌ರ ಪರಿಚಯವಾಯಿತು. ಮಾತಿನ ನಡುವೆ ವರುಣ್ ಆಕಾಶ್ ಒಂದೇ ವಯಸಿನವರು ಹಾಗೂ ಒಂದೇ ಶಾಲೆಯವರೆಂದು ತಿಳಿಯಿತು. ಎರಡು ಬೀದಿ ದಾಟಿದರೆ ಅವರ ಮನೆ. ಆಗಾಗ ಆಕಾಶ್ ಅಲ್ಲಿ ಹೋಗಿ ಆಟವಾಡಿಕೊಳ್ಳಬಹುದು ಹಾಗೂ ತನಗೂ ತೆಲುಗಿನವರಿಲ್ಲವೆಂಬ ಕೊರತೆ ನೀಗಿತೆಂದುಕೊಂಡು ರಾಧಿಕ ಬಹಳ ಖುಷಿಪಟ್ಟಳು. ಇಬ್ಬರೂ ಫೋನ್ ನಂಬರ್ ಎಕ್ಸ್‌ಚೇಂಜ್ ಮಾಡಿಕೊಂಡರು. ಶ್ವೇತಳಿಗೂ ಬಹಳ ಸಂತೋಷವಾಯಿತು.

*****

ಆಕಾಶ್ ಬೇಸಿಗೆ ರಜೆಯಲ್ಲಿ ನೀಡಿದ್ದ ಸೈನ್ಸ್ ಪ್ರಾಜೆಕ್ಟ್ ವರ್ಕ್ ಮುಗಿಸಿ ಸಂಜೆ ಆಟವಾಡುತ್ತಿದ್ದಾನೆ. ವರುಣ್‌ನನ್ನು ಕರೆದುಕೊಂಡು ಬಂದರೆ ಮಕ್ಕಳಿಬ್ಬರೂ ಆಡಿಕೊಳ್ಳಬಹುದೆಂದು ಯೋಚಿಸಿ ಶ್ವೇತಳಿಗೆ ಫೋನ್ ಮಾಡಿದಳು ರಾಧಿಕ.

“ಅಯ್ಯೋ ವರುಣ್ ಟಿ.ಜೆ.(ಥಾಮಸ್ ಜೆಫೆರ್ಸನ್ ಪ್ರಸಿದ್ಧ ಟಾಪ್ ಟೆನ್ ಹೈಸ್ಕೂಲ್) ಕಾಂಪಿಟಿಷನ್ ಕೋಚಿಂಗ್ ಸಮ್ಮರ್ ಕ್ಯಾಂಪಿನಲ್ಲಿದ್ದಾನೆ, ಹಗಲಿಡೀ ಅಲ್ಲೇ ಇರುತ್ತಾನೆ, ಆ ಕ್ಲಾಸ್ ಇಲ್ಲದಿದ್ದಿದ್ದರೆ ನಾನೇ ನಿಮ್ಮನ್ನು ಡಿನ್ನರ್‌ಗೆ ಕರೆಯೋಣವೆಂದುಕೊಂಡೆ, ಅದಕ್ಕೇ ಫೋನ್ ಮಾಡಲಾಗಲಿಲ್ಲ” ಎಂದಳು ಶ್ವೇತಾ.

“ಓ ಹೌದಾ..” ಎಷ್ಟು ಆತ್ಮೀಯತೆ ಎಂದು ಮನಸಿನಲ್ಲೇ ಅಂದುಕೊಂಡಳು ರಾಧಿಕ.

“ನಿಮ್ಮ ಮಗ ಸಮ್ಮರ್ ಹಾಲಿಡೇಸ್‌ನಲ್ಲಿ ಏನು ಮಾಡುತ್ತಿದ್ದಾನೆ?” ಕೇಳಿದಳು ಶ್ವೇತ.

ಈ ಬಾರಿ ವಿ.ಟಿ. ಸೇವಾ ಸಂಸ್ಥೆ ನೀಡಿದ್ದ ಒಂದು ಸೈನ್ಸ್ ಪ್ರಾಜೆಕ್ಟ್, ಒಂದೊಂದು ಗ್ರೂಪಿನಲ್ಲಿ ನಾಲ್ಕು ಮಂದಿ, ಒಟ್ಟು 15 ಗ್ರೂಪ್‌ಗಳಿವೆ, ಒಂದು ಟೀಮ್‌ಗೆ ನಮ್ಮ ಆಕಾಶ್ ಹೆಡ್. ಅವನು ಹಾಗೂ ಸ್ನೇಹಿತರು ಆಡುತ್ತ, ಹಾಡುತ್ತ ಉತ್ಸಾಹದಿಂದ ಪ್ರಾಜೆಕ್ಟ್ ಮುಗಿಸಿದರು. ಎಲ್ಲರೂ ಸಾಕಷ್ಟು ಎಂಗೇಜ್ ಆಗಿದ್ದರು ಎಂದಳು ರಾಧಿಕ.

“ಓ ಹಾಗಾ, ಆದರೆ ಅಕಾಡೆಮಿಕ್ಸ್ ಕ್ಲಾಸೆಸ್‌ಗೆ ಹೋಗುತ್ತಿಲ್ಲವಾ ಆಕಾಶ್?” ಸೈನ್ಸ್ ಪ್ರಾಜೆಕ್ಟ್ ಕುರಿತು ಸ್ವಲ್ಪವೂ ಆಸಕ್ತಿ ತೋರದೆ ಕೇಳಿದಳು ಶ್ವೇತಾ.

“ಸ್ಕೂಲ್ ಶುರುವಾದಮೇಲೆ ಕ್ಲಾಸ್ ವರ್ಕ್ಸ್‌ ಇದ್ದೇ ಇರುತ್ತದೆ, ಬೇಸಿಗೆಯಲ್ಲೂ ಯಾಕೆ ಅಂತ ನಾವೇ ಕಳುಹಿಸಲಿಲ್ಲ” ಬಹಳ ಸಹಜವಾಗಿ ಹೇಳಿದಳು ರಾಧಿಕ.

“ಅಯ್ಯೋ.. ಮಾತನಾಡುತ್ತಿದ್ದರೆ ಟೈಮೇ ಗೊತ್ತಾಗಲಿಲ್ಲ, ಅವನನ್ನು ಕ್ಲಾಸಿನಿಂದ ಪಿಕ್ ಮಾಡಬೇಕು, ಇನ್ನೊಮ್ಮೆ ಮಾತನಾಡೋಣ” ಎಂದು ಶ್ವೇತ ಫೋನ್ ಇಟ್ಟಳು.

*****

ಆಕಾಶ್‌ಗೆ ನಾಳೆಯಿಂದ ಶಾಲೆ ಆರಂಭ. ಆಕಾಶ್, ವರುಣ್ ಇಬ್ಬರೂ ಆಟವಾಡುವ ರಾಧಿಕಳ ಆಸೆಯ ಭ್ರಮೆಯಲ್ಲೇ ಸಮ್ಮರ್ ಮುಗಿಯಿತು. ಸಮ್ಮರ್ ಕೋರ್ಸ್‌ನಿಂದ ವರುಣ್ ಇಷ್ಟುದಿನ ಬ್ಯುಸಿಯಾಗಿದ್ದ, ಇನ್ನು ಪ್ರತಿ ದಿನ ಸ್ಕೂಲ್ ಮುಗಿದ ಮೇಲೆ ಭೇಟಿಯಾಗಬಹುದು ಎಂದು ತನಗೆ ತಾನೇ ಸಮಾಧಾನ ಮಾಡಿಕೊಂಡಳು ರಾಧಿಕ.

ಶಾಲೆ ಆರಂಭವಾಗಿ ಒಂದು ವಾರ ಕಳೆಯಿತು. ಆದರೆ ಶ್ವೇತಳ ಸುದ್ದಿ ಸಿಗದೆ ತಾನೇ ಫೋನ್ ಮಾಡಿ ಶ್ವೇತಳ ಫ್ಯಾಮಿಲಿಯನ್ನು ಡಿನ್ನರ್‌ಗೆ ಆಹ್ವಾನಿಸಿದಳು ರಾಧಿಕ.

“ಅಯ್ಯೋ ನೀವೇ ಹೊಸದಾಗಿ ಬಂದಿದ್ದೀರಿ, ನಾವೇ ಕರೆಯೋಣವೆಂದುಕೊಳ್ಳುತ್ತಿದ್ದೇವೆ.. ಆದರೆ ಏನು ಗೊತ್ತಾ..” ಎಂದು ರಾಗವಾಗಿ ಉಲಿದಳು ಶ್ವೇತ.

“ಅಯ್ಯೋ ಅದಕ್ಕೇನು, ಮತ್ತೊಮ್ಮೆ ನಾವು ಬರುತ್ತೇವೆ ಬಿಡಿ, ನೀವು ಈ ಶನಿವಾರ ಬನ್ನಿ” ಎಂದು ಮತ್ತೊಮ್ಮೆ ಕರೆದಳು ರಾಧಿಕ.

“ಸರಿ, ನಾನು ಏನಾದರೂ ತೆಗೆದುಕೊಂಡು ಬರಬೇಕಾ, ನಿಮ್ಮೊಬ್ಬರಿಗೇ ಯಾಕೆ ಶ್ರಮ” ಕೇಳಿದಳು ಶ್ವೇತ.

“ಅಯ್ಯೋ ಅದರಲ್ಲೇನಿದೆ, ಎರಡೇ ಫ್ಯಾಮಿಲಿ ಅಲ್ಲವಾ, ಬಂದುಬಿಡಿ ಏನೂ ತರುವುದು ಬೇಡ” ಪ್ರೀತಿಯಿಂದ ಆಹ್ವಾನಿಸಿದಳು ರಾಧಿಕ.

*****

ಶ್ವೇತಾ ಮತ್ತು ಅವಳ ಪತಿ, ಮಗ ರಾಧಿಕಳ ಮನೆಗೆ ಬಂದರು. ರಾಧಿಕಳ ಕೈಗೆ ತಾನು ತಂದ ಗಿಫ್ಟ್ ನೀಡಿ ಕಂಗ್ರಾಜುಲೇಷನ್ಸ್ ಹೇಳಿದಳು ಶ್ವೇತ.

“ಅಯ್ಯೋ.. ಇದೆಲ್ಲ ಫಾರ್ಮಾಲಿಟೀಸ್ ಯಾಕೆ” ಎನ್ನುತ್ತಲೇ ಗಿಫ್ಟ್ ತೆಗೆದುಕೊಂಡಳು ರಾಧಿಕ.

ರಾಜೇಶ್, ಪ್ರಸಾದ್ ಅದೇ ಮೊದಲ ಬಾರಿ ಭೇಟಿಯಾದರು. ಕೆಲಹೊತ್ತು ಪರಿಚಯ, ಆಫೀಸ್ ವಿಚಾರ, ಇಂಡಿಯಾದಲ್ಲಿ ಎಲ್ಲಿಂದ ಎಂದು ಪೂರ್ತಿ ವಿವರಗಳು ಆಪಿಟೈಸರ್ ತೆಗೆದುಕೊಳ್ಳುತ್ತ ಮಾತನಾಡಿಕೊಂಡರು. ಪ್ರಸಾದ್ ಎರಡು ಗ್ಲಾಸುಗಳಿಗೆ ವೈನ್ ಸುರಿದು ರಾಜೇಶ್‌ಗೆ ನೀಡಿ ಇಬ್ಬರೂ ಚಿಯರ್ಸ್ ಮಾಡಿಕೊಂಡರು! ಶ್ವೇತ, ರಾಧಿಕ ಜ್ಯೂಸ್ ಕುಡಿಯುತ್ತ ಲೋಕಾಭಿರಾಮವಾಗಿ ಮಾತನಾಡಿಕೊಳ್ಳುತ್ತಿದ್ದಾರೆ. ಆಕಾಶ್, ವರುಣ್ ಎಕ್ಸ್ ಬಾಕ್ಸ್ ಶುರುಮಾಡಿಕೊಂಡರು.

“ಆಟ ಅಂದರೆ ನಮ್ಮ ಚಿಕ್ಕಂದಿನಲ್ಲಿಯೇ! ಎಷ್ಟು ಆಟಗಳಿರುತ್ತಿದ್ದವು? ಚಿಣ್ಣಿ ದಾಂಡು, ಕೊಕ್ಕೋ, ಕಬಡಿ, ಟೊಕ್ಕಾ.. ಈಗ ಮಕ್ಕಳು ಹೆಚ್ಚಿಗೆ ಎಲೆಕ್ಟ್ರಾನಿಕ್ ಪರಿಕರಗಳಲ್ಲಿ ಬಿಟ್ಟರೆ ಇನ್ನಾವ ಆಟ ಆಡುವುದಿಲ್ಲ ಅಲ್ಲವಾ?” ಮಕ್ಕಳಿಬ್ಬರನ್ನೂ ನೋಡುತ್ತ, ಬಾಲ್ಯದ ನೆನಪುಗಳನ್ನು ಮೆಲುಕುಹಾಕಿ ರಾಜೇಶ್‌ನನ್ನು ಮಾತಿಗೆಳೆದ ಪ್ರಸಾದ್.

“ಹೌದು, ಆಗೆಲ್ಲ ಹೊರಗೆ ಆಡುವ ಆಟಗಳೇ ಜಾಸ್ತಿ ಅಲ್ಲವಾ! ನಾವು ಕೂಡ ಬಹಳ ಆಟ ಆಡುತ್ತಿದ್ದೆವು” ಧ್ವನಿಗೂಡಿಸಿದ ರಾಜೇಶ್.

“ಮಕ್ಕಳಿಗೆ ದೈಹಿಕ ಚಟುವಟಿಕೆ ಈಗ ತುಂಬಾ ಕಡಿಮೆಯಾಗುತ್ತಿದೆ” ಎಂದ ಪ್ರಸಾದ್.

ರಾಜೇಶ್ ತನ್ನ ವಾಟ್ಸ್ ಆಪ್ ಮೆಸೇಜ್‌ನಲ್ಲಿ ಮುಳುಗಿದ. ಮತ್ತೆ ನಿಶ್ಯಬ್ದ!

“ಆಕಾಶ್ ಆಕ್ಟಿವಿಟೀಸ್ ಏನು?” ಸ್ಪ್ರಿಂಗ್ ರೋಲ್ಸ್ ತನ್ನ ಪ್ಲೇಟಿಗೆ ಹಾಕಿಕೊಳ್ಳುತ್ತ ಕೇಳಿದಳು ಶ್ವೇತ!

“ಅವನು ಕರಾಟೆ ಬ್ಲಾಕ್ ಬೆಲ್ಟ್, ಐದು ವರ್ಷದಿಂದ ಹೋಗುತ್ತಿದ್ದಾನೆ, ಸ್ಕೂಲ್ ಮುಗಿದ ತಕ್ಷಣ ಕರಾಟೆ ಕ್ಲಾಸ್. ಸ್ಕೂಲ್ ಬ್ಯಾಂಡ್‌ನಲ್ಲಿ ಡ್ರಮ್ಸ್ ಪ್ಲೇ ಮಾಡುತ್ತಿದ್ದಾನೆ, ಹೋಮ್ ಟ್ಯೂಷನ್ ಮ್ಯಾಥ್ಸ್‌ನಲ್ಲಿ ವೀಕ್ಲಿ ಎರಡು ಕ್ಲಾಸ್, ಫೋಟೋಗ್ರಫಿಯಲ್ಲಿ ಬಹಳ ಆಸಕ್ತಿ. ಟೈಂ ಸಿಕ್ಕಾಗೆಲ್ಲ ಯಾವುದಾದರೂ ಹೊಸ ಟೆಕ್ನಿಕ್ ಬಳಸಿ ಫೋಟೋ ತೆಗೆಯುತ್ತಿರುತ್ತಾನೆ” ಎಲ್ಲ ಸಂಭ್ರಮದಿಂದ ವಿವರಿಸಿದಳು ರಾಧಿಕ.

“ಮತ್ತೆ, ಮ್ಯಾಥ್ಸ್ ಒಲಂಪಿಯಾಡ್, ಟಿ.ಜೆ. ಟ್ರೈನಿಂಗ್‌ಗೆ ಹೋಗುತ್ತಿಲ್ಲವಾ?” ಆಶ್ಚರ್ಯದಿಂದ ಕೇಳಿದಳು ಶ್ವೇತ.

“ಸ್ಕೂಲಿನಲ್ಲಿ ಒಳ್ಳೇ ರ್ಯಾಂಕ್ ತಗೋತಿದಾನೆ. ಸ್ಕೂಲ್ ಪ್ರಾಜೆಕ್ಟ್ಸ್, ಅಸೈನ್‌ಮೆಂಟ್ಸ್ ಎಲ್ಲ ಅಚ್ಚುಕಟ್ಟಾಗಿ ಮಾಡುತ್ತಾನೆ. ಅದಕ್ಕೇ ಇನ್ನಾವ ಅಕಾಡೆಮಿಕ್ಸ್‌ನಲ್ಲಿ ಸ್ಟ್ರೆಸ್ ಕೊಡುವುದಿಲ್ಲ” ಆಕಾಶ್‌ನನ್ನು ಮೆಚ್ಚಿಕೊಳ್ಳುತ್ತಲೇ, “ವರುಣ್ ಯಾವ ಕ್ಲಾಸಿಗೆ ಹೋಗುತ್ತಾನೆ?” ಉತ್ಸಾಹದಿಂದ ಶ್ವೇತಳನ್ನು ಕೇಳಿದಳು ರಾಧಿಕ.

“ಅವನಿಗೆ ಟಿ.ಜೆ. ಟ್ರೈನಿಂಗ್‌ಗೇ ಹೆಚ್ಚು ಟೈಂ ಸರಿಹೋಗುತ್ತದೆ. ಇನ್ನು ಮ್ಯಾಥ್ಸ್ ಒಲಂಪಿಯಾಡ್‌ಗೆ ಹೋಗುತ್ತಿದ್ದಾನೆ, ಸ್ಪೋರ್ಟ್ಸ್‌ಗೆ ಟೈಂ ಇಲ್ಲ, ಸ್ಕೂಲ್‌ನಲ್ಲಿ ಹೇಗೂ ಪಿ.ಇ. ಕ್ಲಾಸ್ ಇರುತ್ತೆ” ಬಹಳ ಹೆಮ್ಮೆಯಿಂದ ಹೇಳಿದಳು ಶ್ವೇತ.

“ಓಹ್.. ನಿನ್ನ ಹವ್ಯಾಸಗಳೇನು?” ಕೇಳಿದಳು ರಾಧಿಕ ಶ್ವೇತಳನ್ನು.

“ಹವ್ಯಾಸಗಳಾ?.. ಅಬ್ಬಾ ನನಗೆ ಅಷ್ಟು ಟೈಂ ಇರುವುದೇ ಇಲ್ಲ, ಜಸ್ಟ್ ಜಾಬ್. ಆಫೀಸ್‌ನಿಂದ ಬರುತ್ತಲೇ ಇವನಿಗೆ ಟಿ.ಜೆ. ಕ್ಲಾಸ್‌ಗೆ ಡ್ರಾಪ್ ಅಂಡ್ ಪಿಕಪ್, ಹೋಂವರ್ಕ್ ಮಾಡಿಸುವುದು. ಮುಂದಿನ ವರ್ಷದಿಂದ ಸ್ಯಾಟ್(ಎಸ್‍ಎಟಿ-ಕಾಲೇಜ್ ಅಡ್ಮಿಷನ್ ಟೆಸ್ಟ್) ಟ್ರೈನಿಂಗ್ ಸ್ಟಾರ್ಟ್ ಮಾಡೋಣ ಎಂದುಕೊಳ್ಳುತ್ತಿದ್ದೇವೆ. ನೀವು ಯಾವುದಾದರೂ ಬೆಸ್ಟ್ ಕೋಚಿಂಗ್ ಎಂಕ್ವೈರಿ ಮಾಡಿದ್ದೀರಾ?”
ರಾಧಿಕಳಿಗೆ ಸಾಕಷ್ಟು ಇರುಸುಮುರುಸಾದರೂ ತೋರಗೊಡದೆ “ಇಲ್ಲ ಅಂತಹ ಪ್ಲ್ಯಾನ್ ಏನೂ ಇಲ್ಲ, ಟೆಂತ್ ಗ್ರೇಡ್‌ಗೆ ಬಂದಾಗಲ್ಲವಾ ಎಲ್ಲರೂ ಎಸ್‌ಎಟಿ ಟ್ರೈನಿಂಗ್ ಕೊಡಿಸುವುದು?” ನೇರವಾಗಿ ಹೇಳಿದಳು.

“ಹಾಗೇನಿಲ್ಲ, ಮೊದಲಿನಿಂದಲೇ ಸ್ಟಾರ್ಟ್ ಮಾಡಿದರೆ ಸ್ವಲ್ಪ ಅವರಿಗೆ ಸುಲಭವಾಗಿರುತ್ತದೆ, ಹೆಚ್ಚು ಮಾರ್ಕ್ಸ್‌ ಸ್ಕೋರ್ ಮಾಡಬಹುದು” ತಾನೇ ಕರೆಕ್ಟ್ ಎಂಬಂತೆ ಹೇಳಿದಳು ಶ್ವೇತ.

“ಮತ್ತೆ ಕ್ಲಾಸ್ ಹೋಂವರ್ಕ್‌ಗೆ, ಅಸೈನ್ಮೆಂಟ್ಸ್ ಗೆ ಟೈಂ ಸಾಕಾಗುತ್ತಾ?” ಕೇಳಿದಳು ರಾಧಿಕ.
ಶ್ವೇತ ರಾಧಿಕಳನ್ನು ವಿಚಿತ್ರವಾಗಿ ನೋಡಿ “ಅದಕ್ಕೇ ಅನಗತ್ಯ ಆಕ್ಟಿವಿಟೀಸ್‌ಗಳನ್ನು ಬಿಡಿಸಿಬಿಟ್ಟಿದ್ದೇವೆ ಸಾಕರ್, ಸ್ವಿಮ್ಮಿಂಗ್‌ನಂತಹವು” ಎಂದಳು.

“ಓ ಹೌದಾ” ಎಂದಳು ರಾಧಿಕ.

“ಆಗಲೇ ಎಂಟೂವರೆ ಆಗಿದೆ, ಡಿನ್ನರ್ ಮಾಡುತ್ತ ಮಾತನಾಡೋಣವಾ?” ಯಾವುದೇ ಸಂಕೋಚವಿಲ್ಲದೆ ಹೇಳಿದಳು ಶ್ವೇತ.

“ಅಯ್ಯೋ ಸಾರಿ, ನಾಳೆ ವೀಕೆಂಡ್ ಅಲ್ಲವಾ ಲೇಟಾಗಿ ಡಿನ್ನರ್ ಮಾಡುತ್ತೀರೇನೋ ಎಂದುಕೊಂಡೆ, ಮಕ್ಕಳು ಆಟವಾಡುತ್ತಿದ್ದಾರೆ, ಆಡಿಕೊಳ್ಳಲಿ ಅಂತ. ಎಲ್ಲ ರೆಡಿಯಾಗಿದೆ” ಮಕ್ಕಳು ಇನ್ನು ಸ್ವಲ್ಪ ಹೊತ್ತು ಆಟವಾಡಿದ್ದರೆ ಚೆನ್ನಾಗಿತ್ತು ಎನಿಸಿದರೂ ಊಟ ಬಡಿಸಲು ಎದ್ದಳು.

ಮಾತಿನ ನಡುವೆ ವರುಣ್ ಆಕಾಶ್ ಒಂದೇ ವಯಸಿನವರು ಹಾಗೂ ಒಂದೇ ಶಾಲೆಯವರೆಂದು ತಿಳಿಯಿತು. ಎರಡು ಬೀದಿ ದಾಟಿದರೆ ಅವರ ಮನೆ. ಆಗಾಗ ಆಕಾಶ್ ಅಲ್ಲಿ ಹೋಗಿ ಆಟವಾಡಿಕೊಳ್ಳಬಹುದು ಹಾಗೂ ತನಗೂ ತೆಲುಗಿನವರಿಲ್ಲವೆಂಬ ಕೊರತೆ ನೀಗಿತೆಂದುಕೊಂಡು ರಾಧಿಕ ಬಹಳ ಖುಷಿಪಟ್ಟಳು. 

“ವರುಣ್ ಪ್ರತಿ ದಿನ ರಾತ್ರಿ ಏಳೂವರೆಗೆಲ್ಲ ಡಿನ್ನರ್ ಮಾಡುತ್ತಾನೆ. ಇವತ್ತು ಆಗಲೇ ಎಂಟು ದಾಟಿದೆ, ಅವನಿಗೆ ಬೆಳಗ್ಗೆ ಕ್ಲಾಸ್ ಇದೆ ಅದಕ್ಕೇ” ಎನ್ನುತ್ತ ಮಕ್ಕಳತ್ತ ನೋಡಿದಳು ಶ್ವೇತ.

“ನಾಳೆ ಭಾನುವಾರ ಅಲ್ಲವಾ?” ಭಾನುವಾರವೂ ಕ್ಲಾಸಾ ಎಂಬಂತೆ ಆಶ್ಚರ್ಯವಾಗಿ ಕೇಳಿದಳು ರಾಧಿಕ.

“ಊಂ..ಅದು.. ಒಂದು ಕ್ಲಾಸ್ ಇದೆ. ಆ ಟೀಚರ್ ವಾರದಲ್ಲಿ ಒಂದು ದಿನ ಮಾತ್ರ ಫ್ರೀ ಇದಾರಂತೆ” ಇಂಗ್ಲಿಷ್ ಕ್ಲಾಸ್ ಎಂದು ಹೇಳಹೊರಟು, ಆಕಾಶ್‌ನನ್ನು ಎಲ್ಲಿ ಕಳುಹಿಬಿಡುವರೋ ಎಂದು ಬಾಯಿಗೆ ಬಂದ ಮಾತನ್ನು ಹಾಗೇ ತಡೆದಳು.

“ಓ.. ಐ ಸಿ” ಎಂದಳು ರಾಧಿಕ.

“ವರುಣ್ ಟೈಂ ಟು ಡಿನ್ನರ್, ಯು ಹ್ಯಾವ್ ಮಾರ್ನಿಂಗ್ ಕ್ಲಾಸ್” ಗೇಮ್‌ನಲ್ಲಿ ಮುಳುಗಿದ್ದ ಮಗನನ್ನು ಕರೆದಳು ಶ್ವೇತ.

“ನೋ ಮಮ್, ಸ್ವಲ್ಪ ಹೊತ್ತು ಆಟವಾಡಿ ಡಿನ್ನರ್ ಮಾಡುತ್ತೇನೆ, ಗಿವ್ ಮಿ ಫ್ಯೂ ಮೋರ್ ಮಿನಿಟ್ಸ್” ಪ್ಲೀಸ್ ಎಂದ ವರುಣ್.

“ಯು ಹ್ಯಾವ್ ಮಾರ್ನಿಂಗ್ ಕ್ಲಾಸ್ ಟುಮಾರೋ” ಎಂದಳು ಶ್ವೇತ.

“ಎಸ್ ಮಮ್, ಇಟ್ಸ್ ಬೀನ್ ಎ ಲಾಂಗ್ ಟೈಂ ಐ ಹ್ಯಾವ್ ಎವರ್ ಪ್ಲೇಡ್” ಎಷ್ಟು ದಿನಗಳಾದವೋ ಇಷ್ಟು ಮಾತ್ರ ಆಡಲು ಟೈಂ ಕೊಟ್ಟು ಎಂದು ಅವನ ಮಾತುಗಳಿಂದ ಅರ್ಥವಾಗುತ್ತಿದೆ.

“ಓ.ಕೆ, ಬಟ್ ಜಸ್ಟ್ ಫೈವ್ ಮಿನಿಟ್ಸ್” ಆಟವಾಡಲು ಪರ್ಮಿಷನ್ ಕೊಟ್ಟಳು ಶ್ವೇತ.

“ಥ್ಯಾಂಕ್ ಯು ಮಮ್” ಎಂದು ಆಕಾಶನೊಂದಿಗೆ ಮತ್ತೆ ಆಟದಲ್ಲಿ ಮುಳುಗಿದ ವರುಣ್.
ರಾಧಿಕ ಅಡುಗೆ ತಂದು ಟೇಬಲ್ ಮೇಲಿಟ್ಟಳು, ಹೇಳಿದಂತೆ ಐದು ನಿಮಿಷದಲ್ಲಿ ಬಂದು ಮಕ್ಕಳು ಡಿನ್ನರ್ ಮುಗಿಸಿದರು. ದೊಡ್ಡವರು ಡಿನ್ನರ್ ಸ್ಟಾರ್ಟ್ ಮಾಡಿದರು. ಸಾಮಾನ್ಯವಾಗಿ ಯಾವ ವೀಕೆಂಡ್ ಪಾರ್ಟಿ ಆದರೂ ರಾತ್ರಿ ಹನ್ನೊಂದರ ನಂತರ ಡಿನ್ನರ್ ಮಾಡುತ್ತಾರೆ, ಇಷ್ಟು ಬೇಗ ಡಿನ್ನರ್ ಮಾಡುತ್ತಿರುವುದು ವಿಚಿತ್ರವೆನಿಸುತ್ತಿದೆ ರಾಧಿಕಳಿಗೆ.

“ಮೂವೀಸ್ ನೋಡುತ್ತಿರುತ್ತೀರಾ?” ರಾಜೇಶ್ ಏನೂ ಮಾತನಾಡದಿದ್ದರಿಂದ ಇನ್ನಾವ ಟಾಪಿಕ್ ಇಲ್ಲದೆ ತಾನೇ ಸ್ಟಾರ್ಟ್ ಮಾಡಿದ ಪ್ರಸಾದ್.

“ನಮಗೆ ವರುಣ್ ಜೊತೆಗೇ ಸರಿಹೋಗುತ್ತದೆ ಅವನ ಅಸೈನ್ಮೆಂಟ್, ಪ್ರಾಜೆಕ್ಟ್ ಎಂದು!” ಸ್ವಲ್ಪ ಇರಿಸುಮುರುಸಾದಂತೆ ಹೇಳಿದ ರಾಜೇಶ್.

ಶ್ವೇತಾ ನಡುವೆ ಬಂದು “ಅಂದಹಾಗೆ ಆಗಿನಿಂದ ಕೇಳುವುದನ್ನು ಮರೆತೆ.. ಆಕಾಶ್‌ಗೆ ಯಾವ ಸಬ್ಜೆಕ್ಟ್ ಇಂಟರೆಸ್ಟ್? ಐ ಮೀನ್.. ಫ್ಯೂಚರ್‌ನಲ್ಲಿ ಮೆಡಿಕಲ್ ಇಲ್ಲವೇ ಇಂಜನಿಯರಿಂಗ್? ಯಾವುದಾದರೂ ಕಾಲೇಜ್ ಸೆಲೆಕ್ಟ್ ಮಾಡಿಕೊಂಡಿದ್ದಾನಾ? ಮೊನ್ನೆ ಸಮ್ಮರ್‍ನಲ್ಲಿ ಒಂದು ದಿನ ಜಾನ್ ಹಾಪ್ಕಿನ್ಸ್ ಕ್ಯಾಂಪಸ್ ನೋಡಲು ಹೋಗಿದ್ದೆವು, ತುಂಬಾ ಇಷ್ಟವಾಯಿತು. ವರುಣ್ ಮಾತ್ರ ಮೆಡಿಕಲ್ ಜಾನ್ ಹಾಪ್ಕಿನ್ಸ್‌ನಲ್ಲಿ ಮಾತ್ರ ಮಾಡುತ್ತೇನೆ ಎನ್ನುತ್ತಿದ್ದಾನೆ.

ಈ ಮಾತು ಕೇಳಿ ಪ್ರಸಾದ್, ರಾಧಿಕರಿಗೆ ತಲೆ ತಿರುಗಿದಂತಾಯಿತು. ನಿಜವಾಗಿ ಅವನು ಹೇಳಿದನೋ ಇಲ್ಲವೋ, ಇವರಿಗೆ ಮಾತ್ರ ಅವನನ್ನು ಅಲ್ಲಿಗೇ ಸೇರಿಸಬೇಕೆಂದಿದೆ ಎಂಬಂತೆ ರಾಧಿಕ, ಪ್ರಸಾದ್ ಇಬ್ಬರೂ ಮನಸಿನಲ್ಲಿ ಅಂದುಕೊಂಡು ಒಬ್ಬರ ಮುಖ ಒಬ್ಬರು ನೋಡಿಕೊಂಡರು. ವಿಷಯವೆಲ್ಲ ಸುತ್ತಿ ಬಳಸಿ ಮಗನ ಸ್ಟಡೀಸ್‌ಗೇ ಬಂದು ನಿಂತಿತು!

ಇವರಿಗೆ ವರುಣ್ ಅವನ ಓದು ಬಿಟ್ಟರೆ ಜೀವನದಲ್ಲಿ ಮತ್ತೇನೂ ಇಲ್ಲವಾ? ಮಗನ ಓದು ಜೀವನದ ಒಂದು ಭಾಗ, ಆದರೆ ಜೀವನವೇ ಅವನಾಗಿ ಈ ಎಳೆ ವಯಸ್ಸಿನಲ್ಲಿ ಅವನ ಮೇಲೆ ಸಬ್ಜೆಕ್ಟ್‌ಗಳ ಭಾರ ಹೊರಿಸಿ ಅವನ ಇಷ್ಟ ಅರಿತುಕೊಳ್ಳದೆ, ಆಟವಾಡಲು ಸ್ವತಂತ್ರ ಕೊಡದೆ, ಕನಿಷ್ಟ ಕಣ್ತುಂಬ ನಿದ್ದೆ ಕೂಡ ದೂರ ಮಾಡುತ್ತಿರುವ ಈ ತಂದೆ ತಾಯಿಯರನ್ನು ಏನನ್ನಬೇಕು?” ಎಂದು ಮನಸಿನಲ್ಲಿ ಅಂದುಕೊಂಡಳು ರಾಧಿಕ.

“ಅಯ್ಯೋ.. ಡಸರ್ಟ್ ತಿಂದು ಹೋಗಿ” ಎಂದು ಡಿನ್ನರ್ ಮುಗಿಸಿ ಹೊರಡಲು ಸಿದ್ಧವಾಗಿದ್ದವರನ್ನು ಬಲವಂತವಾಗಿ ತಡೆದು ತಾನು ತಯಾರು ಮಾಡಿದ ಮ್ಯಾಂಗೋ ಕುಲ್ಫೀ ಸರ್ವ್ ಮಾಡಿದಳು ರಾಧಿಕ. ಅವನಿಗೆ ಮಾರ್ನಿಂಗ್ ಕ್ಲಾಸ್ ಇದೆಯೆಂದು ಆತುರವಾಗಿ ತಿಂದಂತೆ ಮಾಡಿ ಹೊರಟರು ಶ್ವೇತಾ, ಪ್ರಸಾದ್ ಮತ್ತು ವರುಣ್.

*****

“ವರುಣ್, ಕಮಾನ್ ವೇಕ್ ಅಪ್.. ವೇಕ್ ಅಪ್..” ಶ್ವೇತ ಮಗನನ್ನು ಆರೂವರೆಗೆ ಎಬ್ಬಿಸುತ್ತಿದ್ದಾಳೆ.

“ಮಾಮ್, ಟುಡೇ ಈಸ್ ಸಂಡೇ.. ಪ್ಲೀಸ್ ಇವತ್ತು ಒಂದು ದಿನವಾದರೂ ಇನ್ನು ಸ್ವಲ್ಪಹೊತ್ತು ಮಲಗಲು ಬಿಡು. ಪ್ಲೀಸ್!” ಗೋಗರೆದ ವರುಣ್.

“ನೋ.. ಲಾಸ್ಟ್ ಇಯರ್ ಇಂಗ್ಲಿಷಿನಲ್ಲಿ ನಿನಗೆ ಆ ವಿವೇಕ್‌ಗಿಂತಲೂ ಒನ್ ಪರ್ಸೆಂಟ್ ಕಡಿಮೆಯಾಯಿತು, ನೆಕ್ಸ್ಟ್ ಮಂತ್‌ನಲ್ಲಿ ನಿನಗೇ ಜಾಸ್ತಿ ಬರಬೇಕು, ಆಗಲೇ ನೀನು ಟಿ.ಜೆ. ಗೆ ಕ್ವಾಲಿಫೈ ಆಗುತ್ತೀಯ. ಇವತ್ತಿನಿಂದ ಪ್ರತಿ ಸಂಡೆ ಹೋಮ್ ಟ್ಯೂಷನ್ ಇರುತ್ತದೆ. ನಿನ್ನೆಯೇ ಹೇಳಿದ್ದೆನಲ್ಲ ಏಳು ಗಂಟೆಗೆಲ್ಲ ನೀನು ರೆಡಿ ಆಗಬೇಕು ಎಂದು, ಅದಕ್ಕೇ ಆಕಾಶ್ ಜೊತೆ ಅಷ್ಟು ಹೊತ್ತು ಆಟವಾಡಬೇಡ ಎಂದು ಹೇಳಿದ್ದು. ವಿವೇಕ್‌ಗೆ ಹೆಚ್ಚು ಮಾರ್ಕ್ಸ್‌ ಬಂದ ಕೋಪ ವರುಣ್ ಮೇಲೆ ತೀರಿಸಿಕೊಳ್ಳುತ್ತಿದ್ದಾಳೆ.

“ಅಮ್ಮಾ! ಈಗಾಗಲೇ ಟಿ.ಜೆ. ಕೋರ್ಸ್‍ನಲ್ಲಿ ಇಂಗ್ಲಿಷ್ ಕವರ್ ಆಗುತ್ತಿದೆ. ಒಂದು ದಿನವಾದರೂ ಸರಿಯಾಗಿ ನಿದ್ದೆ ಮಾಡಲು ಬಿಡುವುದಿಲ್ಲವಾ?” ಗೋಗರೆಯುತ್ತಿದ್ದಾನೆ.

“ದಿನಾಗಲೂ ಏಳುತ್ತಿದ್ದೀಯಲ್ಲ.. ಇದೊಂದು ದಿನ ಕೂಡ ಅಭ್ಯಾಸವಾದರೆ ಪ್ರತಿ ದಿನ ಒಂದೇ ಟೈಮಿಗೆ ಏಳಬಹುದು. ನಿನಗೋಸ್ಕರವೇ ಅಲ್ಲವಾ ಚಿನ್ನಾ ಡ್ಯಾಡಿ, ನಾನು ಕಷ್ಟ ಪಡುವುದು” ಮುದ್ದಿನಿಂದ ಎಬ್ಬಿಸಲು ಪ್ರಯತ್ನಿಸುತ್ತಿದ್ದಾಳೆ ಶ್ವೇತ, ವರುಣ್ ಮಾತ್ರ ಕೇಳುವ ಪರಿಸ್ಥಿತಿಯಲ್ಲಿಲ್ಲ. ಈ ವೀಕೆಂಡ್ ಹಾಲಿಡೇ ಏಕೆ ಕೊಡುತ್ತಿದ್ದಾರೋ ಈ ಅಮ್ಮನಿಗೆ ಯಾರಾದರೂ ಅರ್ಥ ಮಾಡಿಸಿದರೆ ಚೆನ್ನಾಗಿರುತ್ತಿತ್ತು ಎಂಬಂತೆ ಒಮ್ಮೆ ನೋಡಿ “ಪ್ಲೀಸ್ ಅಮ್ಮ ನನಗೆ ಇನ್ನೂ ನಿದ್ದೆ ಬರುತ್ತಿದೆ” ಎನ್ನುತ್ತ ಮತ್ತೆ ಕಂಫೋರ್ಟರ್‌ನಲ್ಲಿ ತಲೆ ತೂರಿಸಿ ಮುಸುಕು ಹಾಕಿಕೊಂಡ ವರುಣ್.

“ಏನು.. ಏನಾಗುತ್ತಿದೆ? ಬೆಳಗ್ಗೆ ನನ್ನನ್ನು ನಿದ್ದೆ ಮಾಡಗೊಡದೆ” ಗೊಣಗುತ್ತ ಕಣ್ಣುಜ್ಜಿಕೊಂಡು ವರುಣ್ ಬೆಡ್ ರೂಮಿಗೆ ಬಂದ ರಾಜೇಶ್. ರಾತ್ರಿಯೆಲ್ಲ ಪ್ರೊಡಕ್ಷನ್‌ನಲ್ಲಿ ಯಾವುದೋ ಸಮಸ್ಯೆಯಾಗಿದೆಯೆಂದು ಕಾಲ್ ಬಂದುದಕ್ಕೆ ಫಿಕ್ಸ್ ಮಾಡಿ ಮಲಗುವ ವೇಳೆಗೆ ಎರಡು ಗಂಟೆ. ಐ.ಟಿಯಲ್ಲಿ ಇರುವವರಿಗೆ ಇದು ಸಾಮಾನ್ಯ!

“ವಿವೇಕ್‌ಗೆ ಲಾಸ್ಟ್ ಇಯರ್ ಇಂಗ್ಲಿಷ್‍ನಲ್ಲಿ ನಮ್ಮವನಿಗಿಂತಲೂ ಒನ್ ಪರ್ಸೆಂಟ್ ಜಾಸ್ತಿ ಬಂದಿದೆ, ಆ ಗ್ಯಾಪ್ ಹೇಗಾದರೂ ವರುಣ್ ಈ ಮಂತ್‌ನಲ್ಲಿ ಕವರ್ ಮಾಡಬೇಕು ಎಂದು..”

“ಓ ಹಾಗಾ..” ಎಂದು ಇನ್ನೇನೂ ಹೇಳಲು ತೋಚದೆ ಮತ್ತೆ ಹೋಗಿ ಮಲಗಿದ ರಾಜೇಶ್.
ವರುಣ್ ಬಳಿ ಹೋಗಿ ಮುಸುಕು ಎಳೆದು “ಯು ಹ್ಯಾವ್ ಓನ್ಲಿ ಟೆನ್ ಮಿನಿಟ್ಸ್ ಟು ಗೆಟ್ ರೆಡಿ, ದಿಸ್ ಈಸ್ ಮೈ ಫೈನಲ್ ವಾರ್ನಿಂಗ್” ಎಂದು ಶ್ವೇತ ಹಾಲು ಮಿಕ್ಸ್ ಮಾಡಲು ಅಡುಗೆ ಮನೆಯತ್ತ ಹೊರಟಳು.

ವರುಣ್ ಎದ್ದು ಹತ್ತು ನಿಮಿಷದಲ್ಲಿ ರೆಡಿಯಾದ. ವಿಂಟರ್ ಜಾಕೆಟ್ ಹಾಕಿಕೊಂಡು, ಎರಡು ಕೈಗಳಿಗೂ ಕೈಗವಸು ತೊಟ್ಟು ಮೈನಸ್ ಡಿಗ್ರೀಸ್‌ನ ನಡುಗುವ ಚಳಿಯಿಂದ ಮೈ ಶಾಖವೇರಿಸಿಕೊಳ್ಳಲು ಕಾರಿನಲ್ಲಿ ಹೀಟರ್ ಆನ್ ಮಾಡಿದ್ದಳು ಶ್ವೇತ. ವಿಂಟರ್ ಜಾಕೆಟ್
ತೊಟ್ಟು, ಕಾರ್ ಸೀಟ್ ಬೆಲ್ಟ್ ಹಾಕಿಕೊಂಡು ಕುಳಿತ ವರುಣ್.

ಕಾರ್ ಡ್ರೈವ್ ಮಾಡುತ್ತ, ರಾತ್ರಿ ರಾಧಿಕಳ ಮನೆಯಲ್ಲಿ ನಡೆದ ಮಾತುಕತೆ ನೆನಪು ಮಾಡಿಕೊಂಡು, “ಅದೇನೋ ಮಕ್ಕಳ ಅಕಾಡೆಮಿಕ್ ಶಿಕ್ಷಣ ಎಷ್ಟು ಅಗತ್ಯವೆಂದು ಅವರಿಗೆ ಗೊತ್ತಿಲ್ಲವಾ? ಅವರಿಗೆ ಟಿ.ಜೆ ಕುರಿತು ಕೂಡ ಏನೂ ತಿಳಿದಂತಿಲ್ಲ. ಅಬ್ಬಾ ಇವರ ಜೊತೆ ಫ್ರೆಂಡ್ ಷಿಪ್ ಜಾಸ್ತಿಯಾದರೆ ನಾಳೆ ವರುಣ್ ಅಕಾಡೆಮಿಕ್ಸ್, ಟಿ.ಜೆ ಅಡ್ಮಿಷನ್ ಹೇಗೆ?” ಎಂದು ಮನಸಿನಲ್ಲಿ ಲೆಕ್ಕಾಚಾರ ಹಾಕಿ.. “ವರುಣ್.. ಯು ಹ್ಯಾವ್ ಟು ಗೆಟ್ ಟಿ.ಜೆ ಸೀಟ್, ನೌ ಆನ್‌ವರ್ಡ್ಸ್‌ ಯು ಆರ್ ನಾಟ್ ಪ್ಲೇಯಿಂಗ್ ವಿತ್ ಎನಿವನ್.. ಓಕೆ?” ಆಕಾಶ್‌ನೊಂದಿಗೆ ಆಡಬೇಡ ಎಂದು ನೇರವಾಗಿ ಹೇಳಲಾರದೆ ಹೀಗೆ ಹೇಳಿದಳು.

“ಓ.ಕೆ ಮಮ್” ಅರೆ ಮನಸಿನಲ್ಲಿ ಹೇಳಿದ ವರುಣ್.

*****

ಸಮಯ ಬೆಳಗ್ಗೆ ಎಂಟಾಗುತ್ತಿದೆ, ರಾಧಿಕ ಎದ್ದು ಆಕಾಶ್ ಬೆಡ್ ರೂಮಿನಲ್ಲಿ ನೋಡಿ ಬಂದಳು, ಹಾಯಾಗಿ ನಿದ್ದೆ ಮಾಡುತ್ತಿದ್ದಾನೆ. ಪ್ರಸಾದ್ ಬಳಿ “ನಾವೇನಾದರೂ ತಪ್ಪು ಮಾಡುತ್ತಿದ್ದೀವಾ ಅವನನ್ನು ಟಿ.ಜೆ ಟ್ರೈನಿಂಗ್‌ಗೆ ಕಳುಹಿಸದೆ?” ಎಂದು ಸಂಶಯದಿಂದ ಕೇಳಿದಳು ರಾಧಿಕ.

“ಯಾರೋ ಏನೋ ಮಾಡುತ್ತಿದ್ದಾರೆಂದು ಅದನ್ನು ನಾವು ಇಷ್ಟು ತೀವ್ರವಾಗಿ ಯೋಚಿಸುವ ಅಗತ್ಯವಿಲ್ಲ, ಹಿ ಈಸ್ ಫೈನ್.. ನೋ ವರ್ರೀಸ್” ಪ್ರಸಾದ್ ಬಹಳ ಪ್ರಶಾಂತವಾಗಿ ಹೇಳಿದ. ಮೊನ್ನೆ ಸೈನ್ಸ್ ಪ್ರಾಜೆಕ್ಟ್ ಪ್ರೆಸೆಂಟೇಷನ್ ಮಾಡಿದ್ದೂ ನಮ್ಮ ಆಕಾಶನೇ ಅಲ್ಲವಾ, ಅವರ ಗ್ರೂಪ್‌ಗೆ ಫಸ್ಟ್ ಪ್ರೈಸ್ ಕೂಡ ಬಂತು. ಎಲ್ಲದರಲ್ಲೂ ಅವನಿಗೆ ಒಳ್ಳೇ ರ್ಯಾಂಕೇ ಬಂದಿದೆಯಲ್ಲ?” ಎಂದು ಸಮಾಧಾನ ಮಾಡಿದ ಪ್ರಸಾದ್.

ಪ್ರಸಾದ್ ಮಾತಿಗೆ “ಹೌದು” ಎಂದು ತಲೆಯಾಡಿಸಿದಳು ರಾಧಿಕ.

*****

ಆಕಾಶ್ ಸ್ಕೂಲಿನಲ್ಲಿ ಫಸ್ಟ್ ಕ್ವಾರ್ಟರ್ ರಿಸಲ್ಟ್ ಬಂದಿದೆ, ಎಂದಿನಂತೆ ಎಲ್ಲದರಲ್ಲೂ ಒಳ್ಳೆ ರ್ಯಾಂಕ್ ಬಂದಿದೆ.
ರಾಧಿಕಳ ಫೋನ್ ರಿಂಗಾಯಿತು. ನೋಡಿದರೆ ಶ್ವೇತ ಫೋನ್ ಮಾಡಿದ್ದಾಳೆ..

ತಮ್ಮ ಮನೆಗೆ ಡಿನ್ನರ್‍ಗೆ ಬಂದ ನಂತರ ಕಳೆದ ಮೂರು ತಿಂಗಳಿನಲ್ಲಿ ಮತ್ತೆ ಇವತ್ತೇ ಫೋನ್. ಬಹುಶಃ ಆಕಾಶ್‌ಗೆ ಯಾವ ರ್ಯಾಂಕ್ ಬಂದಿದೆಯೆಂದು ಕೇಳಲು ಫೋನ್ ಮಾಡಿರಬಹುದು ಎಂದುಕೊಂಡಳು.

“ಹಲೋ ರಾಧಿಕಾ”..

“ಹಲೋ.. ಆಂ ಹೇಳು ಶ್ವೇತಾ” ನಿರುತ್ಸಾಹದಿಂದಲೇ ಮಾತನಾಡಿದಳು.

“ನಮ್ಮ ವರುಣ್ ನಿಮ್ಮ ಮನೆಗೇನಾದರೂ ಬಂದಿದ್ದಾನಾ?” ಸ್ಕೂಲಿನಿಂದ ಇನ್ನೂ ಮನೆಗೆ ಬಂದಿಲ್ಲ, ಇಷ್ಟು ಹೊತ್ತಿಗೆ ಬರಬೇಕಿತ್ತು!” ಶ್ವೇತ ಆತಂಕದಿಂದ ಕೇಳಿದಳು.

“ವರುಣ್.. ನಮ್ಮ ಮನೆಗಾ? ಇಲ್ಲಪ್ಪಾ.. ಅವತ್ತು ನಿಮ್ಮ ಜೊತೆ ಬಂದಿದ್ದಷ್ಟೆ. ಒಬ್ಬನೇ ನಮ್ಮ ಮನೆಗೆ ಯಾವತ್ತೂ ಬಂದಿಲ್ಲ” ಹೇಳಿದಳು ರಾಧಿಕ.

“ನಿನ್ನೆ ಫಸ್ಟ್ ಕ್ವಾರ್ಟರ್ ರಿಸಲ್ಟ್ ಬಂತು, ಅವನಿಗೆ ಹಿಸ್ಟರಿ ಅಂಡ್ ಸೈನ್ಸ್‌ನಲ್ಲಿ ರ್ಯಾಂಕ್-ಬಿ ಬಂದಿದೆ, ಅದಕ್ಕೇ ನಾನು ಅವನ ಮೇಲೆ ಕೋಪದಿಂದ ಕೂಗಾಡಿದೆ! ರಾತ್ರಿ ತುಂಬಾ ಬೇಸರವಾಗಿದ್ದ, ಬೆಳಗ್ಗೆ ಮಾಮೂಲಾಗಿಯೇ ಸ್ಕೂಲಿಗೆ ಹೋದ, ಇಷ್ಟು ಹೊತ್ತಿಗೆ ಬರಬೇಕಿತ್ತು ಇನ್ನೂ ಬರಲಿಲ್ಲ, ಅದಕ್ಕೆ ಸ್ವಲ್ಪ ಆತಂಕವಾಗಿದೆ”

“ಸ್ಕೂಲಿಗೆ ಫೋನ್ ಮಾಡಿದ್ದಿರಾ..”

“ಎಸ್, ಎಲ್ಲ ಕಡೆಗೂ ಫೋನ್ ಮಾಡಿದ್ವಿ, ಒಂದು ವೇಳೆ ಆಕಾಶ್ ಜೊತೆ ಬಂದಿದ್ದಾನಾ ಕೇಳೋಣ ಅಂತ”

“ಇಲ್ಲವಲ್ಲಾ.. ಮತ್ತೆ ಪೊಲೀಸ್ ಕಂಪ್ಲೆಂಟ್ ಏನಾದರೂ ಕೊಟ್ಟಿದ್ದೀರಾ..”

“ಇಲ್ಲ.. ಇಲ್ಲ.. ನಾನು ಮತ್ತೆ ಫೋನ್ ಮಾಡುತ್ತೇನೆ, ಬೇರೆ ಫೋನ್ ಬರುತ್ತಿದೆ” ಗಾಬರಿಯಿಂದ ಫೋನ್ ಕಟ್ ಮಾಡಿದಳು ಶ್ವೇತ.
ರಾಧಿಕಳಿಗೂ ಬಹಳ ಭಯವಾಗಿ ಕೂಡಲೇ ಪ್ರಸಾದ್‌ಗೆ ಫೋನ್ ಮಾಡಿ ವಿಷಯ ಹೇಳಿದಳು.

“ಓ ಹೌದಾ, ನಾನು ಆಫೀಸಿನಿಂದ ಹೊರಟಿದ್ದೇನೆ, ಮನೆಗೆ ಬಂದ ಕೂಡಲೇ ಅವರ ಮನೆಗೆ ಹೋಗಿಬರೋಣ, ಯಾವುದಕ್ಕೂ ಇನ್ನೊಮ್ಮೆ ಸ್ಕೂಲಿನ ಹತ್ತಿರ ನೋಡಲು ಹೇಳು, ಇಲ್ಲವಾದರೆ ನೀನು ಹೋಗಿ ನೋಡು” ಎಂದು ಹೇಳಿ ಫೋನ್ ಕಟ್ ಮಾಡಿದ. ಪಾಪ ಎಲ್ಲಿ ಹೋಗಿರುತ್ತಾನೋ, ಏನಾಗಿರುತ್ತಾನೋ ಎಂದು ಪ್ರಸಾದ್‌ಗೂ ಬಹಳ ಆತಂಕವಾಯಿತು. ಆಕಾಶ್‌ನೊಂದಿಗೆ ಖುಷಿಯಾಗಿ ಆಟವಾಡಿದ್ದೆಲ್ಲ ಕಣ್ಮುಂದೆ ಸುಳಿಯಿತು. ಕತ್ತಲಾವರಿಸುತ್ತಿದೆ, ದೂರದಲ್ಲಿ ಬೆನ್ನ ಮೇಲೆ ದೊಡ್ಡ ಬ್ಯಾಕ್ ಪ್ಯಾಕ್ ಹೊತ್ತು ಯಾರೋ ನಡೆಯುತ್ತಿದ್ದುದನ್ನು ನೋಡಿ ಸಡನ್ ಆಗಿ ತನ್ನ ಕಾರ್ ಸ್ಲೋ ಮಾಡಿದ. ಮೊದಲೇ ಮೂಳೆ ಕೊರೆಯುವಷ್ಟು ಚಳಿ, ಸಾಮಾನ್ಯವಾಗಿ ಆ ರಸ್ತೆಯಲ್ಲಿ ಯಾರೂ ನಡೆಯುವುದಿಲ್ಲ, ಅದು ಲೋಕಲ್ ಹೈವೇ! ಬಹುಶಃ ಕಾರ್ ರಿಪೇರಿಗೆ ಬಂದಿರಬಹುದು ಎಂದುಕೊಂಡ. ಕಾರು ಆ ವ್ಯಕ್ತಿಯ ಸಮೀಪಕ್ಕೆ ಬಂದಾಗ ಸ್ವಲ್ಪ ಗಮನವಿಟ್ಟು ನೋಡಿದರೆ ತನ್ನ ಕಣ್ಣನ್ನು ತಾನೇ ನಂಬಲಾಗುತ್ತಿಲ್ಲ, ಅದೇ ವರುಣ್! ತಕ್ಷಣ ಬ್ರೇಕ್ ಹಾಕಿದ್ದರಿಂದ ಹಿಂದಿನಿಂದ ಸಾಕಷ್ಟು ಹಾರನ್‌ಗಳು ಮೊಳಗಿದವು. ಅದಾವುದನ್ನು ಲೆಕ್ಕಿಸದೆ ಹಜಾರ್ಡ್ ಲೈಟ್ಸ್ ಹಾಕಿ ಷೋಲ್ಡ್ ಮೇಲೆ ನಿಲ್ಲಿಸಿದ. ಅವನಿಗೋಸ್ಕರ ಎಲ್ಲರೂ ಅಲ್ಲಿ ಆತಂಕವಾಗಿದ್ದರೆ ಇವನು ಮಾತ್ರ ಇಲ್ಲಿ ಹೀಗಿರುವುದು ಕಂಡು ಪ್ರಸಾದ್‌ಗೆ ಕೋಪ ಉಕ್ಕಿ ಬಂತು. ಕಾರಿನಿಂದ ಇಳಿದ ಪ್ರಸಾದ್‌ನನ್ನು ಗುರುತು ಹಿಡಿದು ವರುಣ್ ಓಡಲು ಪ್ರಯತ್ನಿಸಿದ, ಆದರೆ ಪ್ರಸಾದ್ ಜೋರಾಗಿ ಓಡಿಹೋಗಿ ಗಟ್ಟಿಯಾಗಿ ಅವನನ್ನು ಹಿಡಿದುಕೊಂಡು “ಯುವರ್ ಮಮ್ಮಿ ಟೋಲ್ಡ್ ಎವ್ರಿಥಿಂಗ್, ಗಲಾಟೆ ಮಾಡಿದರೆ ಪೊಲೀಸರನ್ನು ಕರೆಯುತ್ತೇನೆ” ಎಂದು ಪ್ರಸಾದ್ ದಬಾಯಿಸಿದ್ದರಿಂದ ಸುಮ್ಮನೆ ಬಂದು ಕಾರಿನ ಹಿಂದಿನ ಸೀಟಿನಲ್ಲಿ ಕುಳಿತ ವರುಣ್.

“ಎಲ್ಲಿಗೆ ಅಂತ ಹೋಗುತ್ತಿದ್ದೀಯ” ಎರಡು ಡೋರ್ ಲಾಕ್ ಮಾಡಿ ಕಾರ್ ಸ್ಟಾರ್ಟ್ ಮಾಡಿ ಕೇಳಿದ. ಉತ್ತರ ಬರದಿದ್ದನ್ನು ಕಂಡು ಹಿಂದೆ ತಿರುಗಿ ನೋಡಿದ ಪ್ರಸಾದ್ ತನ್ನಷ್ಟಕ್ಕೆ ತಾನೇ ಬಿಕ್ಕಿ ಬಿಕ್ಕಿ ಅಳುತ್ತಿದ್ದ ವರುಣ್‌ನನ್ನು ಕಂಡು ಬಹಳ ನೋವಾಗಿ ಕೂಡಲೇ ಕಾರನ್ನು ಪಕ್ಕಕ್ಕೆ ನಿಲ್ಲಿಸಿ, ಹಿಂದೆ ವರುಣ್ ಪಕ್ಕ ಕುಳಿತು ಅವನನ್ನು ಬರಸೆಳೆದನು.

“ವರುಣ್ ಇಟ್ಸ್ ಓಕೆ, ಡೋಂಟ್ ವರಿ! ವೇರ್ ಆರ್ ಯು ಗೋಯಿಂಗ್?” ಸಮಾಧಾನ ಮಾಡುತ್ತ ವರುಣ್ ಬೆನ್ನು ಸವರುತ್ತ ಕೇಳಿದ ಪ್ರಸಾದ್.

“ಐ ಡೋಂಟ್ ನೋ ಅಂಕಲ್” ಅಳು ತಡೆದುಕೊಳ್ಳಲು ಪ್ರಯತ್ನಿಸುತ್ತಿದ್ದಾನೆ. ಆದರೆ ತಂದೆತಾಯಿಯರು ಅವನ ಸಾಮರ್ಥ್ಯಕ್ಕೆ ಮೀರಿ ಇಟ್ಟುಕೊಂಡಿರುವ ಆಸೆಗಳು, ಆ ಒತ್ತಡವನ್ನು ತಡೆಯಲಾಗದೆ, ಅವರಿಗೆ ಹೇಳಲಾಗದೆ, ಯಾರ ಬಳಿ ಹೇಳಿಕೊಳ್ಳಬೇಕೋ ತಿಳಿಯದೆ ಅವನು ಪಟ್ಟ ಮಾನಸಿಕ ಸಂಘರ್ಷ, ವೇದನೆಯೆಲ್ಲ ಒಮ್ಮೆಗೇ ಅಳುವಿನ ರೂಪದಲ್ಲಿ ಬಂದಿತು. ವರುಣ್ ಪ್ರಸಾದ್‌ನನ್ನು ಗಟ್ಟಿಯಾಗಿ ತಬ್ಬಿಕೊಂಡು ಅತ್ತುಬಿಟ್ಟ.

ವರುಣ್ ಪರಿಸ್ಥಿತಿ ಕಂಡು ಪ್ರಸಾದ್‌ಗೆ ಎದೆ ಭಾರವಾಯಿತು. ಆ ಎಳೆ ಹುಡುಗನ ಮಾನಸಿಕ ತೊಳಲಾಟದಿಂದ ಪಾರಾಗಲು ಇಂದು ತನ್ನ ಭುಜ ಆಧಾರವಾಗಿದೆ, ಅಂದರೆ ಆ ವಿಧಿ ಈ ರೀತಿ ನನ್ನ ಮೇಲೆ ಹೊಸ ಜವಾಬ್ದಾರಿ ಹೊರಿಸಿದೆಯೆಂದಾಯಿತು. ಕೂಡಲೇ ರಾಧಿಕಳಿಗೆ ಫೋನ್ ಮಾಡಿ ನಡೆದ ವಿಷಯ ಹೇಳಿ ವರುಣ್ ತಂದೆ ತಾಯಿಯರಿಗೆ ಫೋನ್ ಮಾಡಿ ಮನೆಗೆ ಕರೆಸುವಂತೆ ಹೇಳಿ ಕಾರ್ ಸ್ಟಾರ್ಟ್ ಮಾಡಿದ. ಪ್ರಸಾದ್ ತಲೆಯಲ್ಲೀಗ ನೂರೆಂಟು ಪ್ರಶ್ನೆಗಳು..

ರಾಧಿಕ ಅಂದುಕೊಂಡಂತೆ ಆಕಾಶ್‌ನನ್ನು ಯಾವ್ಯಾವುದೋ ಕ್ಲಾಸುಗಳಿಗೆ ಕಳುಹಿಸಲಿಲ್ಲವೆಂಬ ಗಿಲ್ಟಿ ಫೀಲಿಂಗ್‍ಗೆ ಪ್ರಸಾದ್‌ಗೆ ಉತ್ತರ ದೊರೆಯಿತೆನಿಸಿತು.

ತನ್ನ ಕಣ್ಣಿಗೆ ಕಾಣಿಸದಿದ್ದರೆ ಇಂದು ವರುಣ್ ಪರಿಸ್ಥಿತಿ ಏನಾಗುತ್ತಿತ್ತು! ದುರದೃಷ್ಟವಶಾತ್ ಅವನಿಗೆ ನಡೆಯಬಾರದ್ದೇನಾದರೂ ಆಗಿದ್ದರೆ? ಯಾವುದಾದರೂ ಸಂಘ ವಿದ್ರೋಹ ಶಕ್ತಿಗೆ ಸಿಕ್ಕಿದ್ದರೆ? ಮಗನೇ ಪ್ರಪಂಚವಾಗಿರುವ ಆ ತಂದೆತಾಯಿಯರ ಗತಿ ಏನಾಗುತ್ತಿತ್ತು? ಯೋಚಿಸುತ್ತಲೇ ಪ್ರಸಾದ್ ಮೈ ನಡುಗಿತು!

ಎಷ್ಟು ಕೇಳಿದರೂ ಉದ್ದೇಶವೇನೆಂದು ಒಂದು ಮಾತು ಕೂಡ ಹೇಳಲಾರದಾದ ಆ ಹುಡುಗನ ಅಳುವಿಗೆ ಸಾಕಷ್ಟು ಅರ್ಥ ತಿಳಿಯಿತು. ಅದು ಗಮ್ಯವಿಲ್ಲದ ಪಯಣ.. ಕನಿಷ್ಟ ವೀಕೆಂಡ್‌ನ ಒಂದು ದಿನವಾದರೂ ಕಣ್ತುಂಬ ನಿದ್ದೆಗಾಗಿ! ಆಟವಾಡಲು ಒಂದು ಜೊತೆಗಾಗಿ! ಬಳಲಿದ ಮಸ್ತಿಷ್ಕಕ್ಕೆ ಸ್ವಲ್ಪ ವಿಶ್ರಾಂತಿ ಅರಸುತ್ತ.. ಎಲ್ಲಿಗೋ ಓಡಿಹೋಗಬೇಕು.. ಇಷ್ಟವಿಲ್ಲದ ಕೋರ್ಸ್‌ಗಳಿಂದ ದೂರವಾಗಿ.. ತಂದೆ ತಾಯಿರಿಗೆ ದೂರವಾಗಿ, ಕೊನೆಗೆ.. ಈ ಮನುಷ್ಯರಿಂದ ದೂರವಾಗಿ!