ವಾರವೆಲ್ಲ ಕೆಲಸವಿಲ್ಲದೆ ಬಿಟ್ಟಿ ಊಟ ತಿಂದುಕೊಂಡು ವಾಹನ ದಟ್ಟಣೆಯ ತುಮಕೂರಿನಲ್ಲಿ ಓಡಾಡಿದ್ದು ಮನಸ್ಸಿಗೆ ಹಿಡಿಸದಾಗಿ ಮಂಕು ಕವಿಯತೊಡಗಿತು. ಆ ಮಂಕಿನೊಳಗೆ ಊರಿನ ನೆನಪುಗಳು ಬಾದಿಸತೊಡಗಿದವು. ಪರಿಣಾಮವಾಗಿ ದುಡಿಯದಿದ್ದರೂ ಸರಿಯೆ ಊರು ಹೋಗೆನ್ನುವಂತೆಯೂ ಕಾಡು ಬಾ ಎನ್ನುವಂತೆಯೂ ಕರೆದಂತಾಯಿತು. ಇದಕ್ಕೆ ಒತ್ತುಕೊಡುವಂತೆ ಎಸ್‌ಎಸ್‌ಎಲ್‌ಸಿ ಫಲಿತಾಂಶದ ದಿನಾಂಕ ಪತ್ರಿಕೆಯಲ್ಲಿ ಪ್ರಕಟಣೆಯಾಗಿದ್ದು ನನ್ನ ದಿಗಿಲನ್ನು ಹೆಚ್ಚಿಸಿತ್ತು. ಈ ಎಲ್ಲವೂ ನನ್ನಲ್ಲಿ ಒಟ್ಟಿಗೆ ಭವಿಸಿ ಊರ ಕಡೆಯ ಗೀಳು ಹೆಚ್ಚಾಗಿ ಅಣ್ಣನ ಹತ್ತಿರ ಹೇಳಿಕೊಂಡೆ.
‘ಟ್ರಂಕು ತಟ್ಟೆ’ ಸರಣಿಯಲ್ಲಿ ಗುರುಪ್ರಸಾದ್ ಕಂಟಲಗೆರೆ ಅನುಭವ ಕಥನದ ಹನ್ನೆರಡನೆಯ ಕಂತು.

 

ಬೆಂಗಳೂರಿಗೆ ಹೋಗುವುದಕ್ಕೆ ರಾಮನಳ್ಳಿ ಗಾಡಿ ಹೆಸರುವಾಸಿ. ಬೆಳಗಿನ ಐದು ಗಂಟೆ ಸುಮಾರಿಗೆ ಜೆ.ಸಿ. ಪುರಕ್ಕೆ ಬರುತ್ತಿದ್ದ ಅದನ್ನು ಕಾದುಕೊಂಡಿದ್ದು ಜನ ಬೆಂಗಳೂರು ತಲುಪುತ್ತಿದ್ದರು. ಮಬ್ಬುಗತ್ತಲಲ್ಲಿ ಊರು ಬಿಡುತ್ತಿದ್ದವರಿಗೆ ಬೆಳಕು ಹರಿದಂತೆಲ್ಲ ಚೂರು ಚೂರೆ ಬೆಂಗಳೂರು ಬಿಚ್ಚಿಕೊಳ್ಳುತ್ತಿತ್ತು. ನಾನು ಕೂಡ ದುಡಿಯಲು ತೀರ್ಮಾನಿಸಿದ್ದರಿಂದ ಆ ಬಸ್ಸನ್ನೆ ಹತ್ತಬೇಕೆಂದು ನಿರ್ಧರಿಸಿದೆ. ನಗರಕ್ಕೆ ಹೊರಟಿರುವ ನನ್ನ ಹತ್ತಿರ, ತೊಟ್ಟಿದ್ದ ಒಂದು ಪ್ಯಾಂಟ್ ಬಿಟ್ಟು ಇನ್ಯಾವುದೂ ಇರಲಿಲ್ಲವಾದ್ದರಿಂದ ಅಪ್ಪನ ಬಳಿ ಹೇಳಿದೆ. ಅಪ್ಪನಿಗೆ ಅದು ಹೇಗೆ ತಲೆ ಓಡಿತೊ.. ಮಧ್ಯರಾತ್ರಿ ಸುಮಾರು ಎರೆಡು ಗಂಟೆ ಇರಬೇಕು ಪಕ್ಕದ ಮನೆಯಲ್ಲಿ ಮಲಗಿದ್ದ ನಾಗೇಂದ್ರಣ್ಣನನ್ನು ಕದ ತಟ್ಟಿ ಎಬ್ಬಿಸಿತು. ಅಮ್ಮನ ಅಣ್ಣನ ಮಗನಾದ ನಾಗೇಂದ್ರಣ್ಣ ಆಗ ತಾನೆ ಎಂ.ಎ. ಮುಗಿಸಿಕೊಂಡು ಬಂದು ಮನೆಯಲ್ಲಿತ್ತು. ಅಪ್ಪ ಈತರ್ಕಿತರ ಎಂದು ಹೇಳಿ ನಿಂದೊಂದು ಪ್ಯಾಂಟ್ ಇದ್ರೆ ಕೊಡಪ್ಪ ಅಂದಿತು. ನಾಗೇಂದ್ರಣ್ಣನ ಬಳಿಯೂ ಬಟ್ಟೆಗೆ ಬರವೆ ಆದರೂ.. ಒಳಿಕೋಗಿ ಒಂದನ್ನ ತಂದು ಕೊಟ್ಟಿತು. ದೊಪ್ಪಗಿದ್ದ ನಾಗೇಂದ್ರಣ್ಣನ ಪ್ಯಾಂಟ್ ಸಣ್ಣಕಿದ್ದ ನನ್ನ ಸೊಂಟಕ್ಕೆ ಎಷ್ಟು ಬಿಗಿದರೂ ಲೂಸೆ ಆಗುತ್ತಿತ್ತು. ಅಪ್ಪನ ಸಹಾಯದಿಂದ ಉರುದಾರಕ್ಕೆ ಸಿಗಿಸಿಕೊಂಡು ಅಪ್ಪನ ಸೈಕಲ್ ಹೇರಿ ಜೆ.ಸಿ.ಪುರಕ್ಕೆ ಬಂದು, ರಾಮನಹಳ್ಳಿ ಗಾಡಿ ಹತ್ತಿ ಸೂರ್ಯ ಹುಟ್ಟುವ ಮುನ್ನವೇ ಬಂದು ತುಮಕೂರಿನಲ್ಲಿ ಇಳಿದೆ.

ಅವ್ವನಾಗಿ ಬಂದ ಸಣ್ಣಹೊನ್ನಣ್ಣ

ತುಮಕೂರಿನಲ್ಲಿ ನಮಗೆ ಮೊಟ್ಟ ಮೊದಲ ಮಾರ್ಗದರ್ಶಿಯೆಂದರೆ, ಆಗಿನ್ನು ಎಂಪ್ರೆಸ್ ಮತ್ತಿತರ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕನಾಗಿ ಕೆಲಸ ಮಾಡುತ್ತಿದ್ದ ಸಣ್ಣಹೊನ್ನಣ್ಣ. ಆತನನ್ನು ಕಂಡರೆ ನಮಗೆ ದಿಕ್ಕು ದೆಸೆ ಎಲ್ಲವನ್ನೂ ಕಲ್ಪಿಸುತ್ತಾನೆಂದು ಅಪ್ಪ ಹೇಳಿ ಕಳುಹಿಸಿತ್ತು. ಸಣ್ಣಹೊನ್ನಣ್ಣ ಇಲ್ಲಿಗೆ ಬಂದೇ ಬರುತ್ತಾನೆಂಬ ನಿಖರ ಮಾಹಿತಿ ಆಧರಿಸಿ ಎಂಪ್ರೆಸ್ ಕಾಲೇಜಿನ ಗೇಟ್ ಬಳಿಯೇ ಕಾದು ಸಾಕಾದೆ. ನಂಬಿಕೆ ಸುಳ್ಳಾಗಲಿಲ್ಲ. ಮಧ್ಯಾಹ್ನದ ಹೊತ್ತಿಗೆ ನಾಕಾರು ಕಡೆ ಪಾಠ ಮಾಡಿ ಕುಟು ಕುಟು ಶಬ್ದ ಮಾಡುವ ಲೂನ ಗಾಡಿಯಲ್ಲಿ ಸೈಡಿಗೊಂದು ಬ್ಯಾಗ್ ನೇತಾಕಿಕೊಂಡು ಸಣ್ಣಹೊನ್ನಣ್ಣ ಬಂದೆ ಬಿಟ್ಟ. ಅಣ್ಣನನ್ನು ಕಂಡದ್ದೆ ಅಷ್ಟೊತ್ತು ನನಗಾದ ಆಯಾಸವೆಲ್ಲ ಕರಗಿಹೋಗಿ ಉತ್ಸಾಹ ಬಂದಂತಾಯಿತು.
ಸಣ್ಣಹೊನ್ನಣ್ಣನಿಗೂ ನನಗೂ ಅತ್ಯಂತ ಬಾಲ್ಯದ ನಂಟು. ಊರಲ್ಲಿ ಅಕ್ಕ ಪಕ್ಕದ ಮನೆಯವರಾದ ನಾವು ಅಣ್ಣನ ಅಪ್ಪನನ್ನು ಕೇಸುದೊಡಪ್ಪ (ಕೇಶವಯ್ಯ) ಎಂದು ಕರೆಯುತ್ತಿದ್ದೆವು. ರಾತ್ರಿಯಲ್ಲ ಬಜನೆ, ಕರಪಾಲ ಮಾಡುತ್ತಿದ್ದ ಅಣ್ಣನನ್ನು ನಾವು ‘ಅವ್ವ’ ಎಂದು ಕರೆಯುತ್ತಿದ್ದೆವು. ಅವ್ವನ ಬಳಿಯೇ ಮಲಗುತ್ತೇವೆಂದು ಅಮ್ಮನಿಗೆ ಹೇಳಿ, ನಾನು ಜೇಪಿ ಅಣ್ಣನನ್ನು ಅವಚಿಕೊಂಡು ಮಲಗುತ್ತಿದ್ದೆವು. ಇಂಥ ಅವ್ವ ಗೊತ್ತು ಪರಿಚಯ ಇಲ್ಲದ ತುಮಕೂರಿನಲ್ಲಿ ಸಿಕ್ಕರೆ ಹೇಗಾಗಬೇಡ! ಅಂದುಕೊಂಡಂತೆಯೆ ಸಲುಗೆಯಿಂದ ನನ್ನನ್ನು ಮಾತಾಡಿಸಿ ಊಟಕೊಡಿಸಿದ. ‘ನಡಿಯೊ ಹುಡುಗ ಈಗ ಮನಿಗೋಗನ, ನಾಳಿಕೆ ಕೆಲ್ಸ ಹುಡುಕಿರಾಗುತ್ತೆ’ ಎಂದು ಉಪ್ಪಾರಳ್ಳಿಯಲ್ಲಿದ್ದ ಮನೆಗೆ ಕರೆದುಕೊಂಡು ಹೋದ. ಅಲ್ಲಿ ನನಗೆ ಆದರದ ಉಪಚಾರವಿತ್ತು.

ಸಣ್ಣಹೊನ್ನಣ್ಣ ನನ್ನಂತೆಯೇ ಹೋದ ಅನೇಕರಿಗೆ ತನ್ನ ಮನೆಯಲ್ಲೇ ಆಶ್ರಯ ಒದಗಿಸಿ ಅವರ ದುಡಿಮೆಗೆ ಮಾರ್ಗ ಮಾಡಿಕೊಡುತ್ತಿದ್ದ. ಅದರಲ್ಲಿ ನಮ್ಮೂರಿನವನೇ ಆದ ತೋಟದ ರಂಗಣ್ಣನ ಮಗ ನಾಗರಾಜನೂ ಒಬ್ಬ. ರಂಗಣ್ಣ ಬಹಳ ವರ್ಷಗಳಿಂದಲೂ ಜೆ.ಸಿ. ಪುರದವರ ಅಡಿಕೆ ತೆಂಗಿನ ತೋಟ ಕಾಯುತ್ತಿದ್ದುದರಿಂದ ಅವನ ಹೆಸರಿನ ಹಿಂದೆ ‘ತೋಟ’ ಸೇರಿಕೊಂಡಿತ್ತು. ಆತನ ಮಗ ನಾಗರಾಜ ನಮ್ಮೂರಿನಲ್ಲೆ ಓದಿ, ಎಸ್‌ಎಸ್‌ಎಲ್‌ಸಿಯನ್ನು ಫಸ್ಟ್ ಕ್ಲಾಸ್‌ನಲ್ಲಿ ಪಾಸು ಮಾಡಿ, ಪಿಯುಸಿ ಓದಲು ತುಮಕೂರಿಗೆ ಹೋಗಿದ್ದ. ಪ್ರಥಮ ಪಿಯುಸಿ ಮುಗಿಸಿ ಸೆಕೆಂಡ್ ಪಿಯುಸಿ ಪ್ರವೇಶ ಪೂರ್ವ ರಜೆಯಲ್ಲಿದ್ದ ನಾಗರಾಜ, ಹಾಸ್ಟೆಲ್ ಇಲ್ಲದ ಆ ಎರಡು ತಿಂಗಳು ಊರಿಗೋಗಿ ಯಾರದೋ ತೋಟದಲ್ಲಿ ಮಾಡೋದಾದರೂ ಏನು ಎಂದು, ತುಮಕೂರಿನಲ್ಲೆ ಒಂದು ಜೆರಾಕ್ಸ್ ಅಂಗಡಿಗೆ ಸೇರಿಕೊಂಡು ಅಷ್ಟೋ ಇಷ್ಟೋ ತನ್ನ ಖರ್ಚಿಗೆ ನೋಡಿಕೊಳ್ಳುತ್ತಿದ್ದ. ಮಾರನೆ ದಿನ ನಾಗರಾಜ ಬೆಳಗ್ಗೆ ಏಳಕ್ಕೆಲ್ಲ ಅಣ್ಣನ ಮನೆಯಲ್ಲಿ ಪ್ರತ್ಯಕ್ಷನಾದ. ಬೆಳಗಿನ ತಿಂಡಿ ಆದ ನಂತರ ಅಣ್ಣ ನನ್ನನ್ನು ನಾಗರಾಜನ ಜೆರಾಕ್ಸ್ ಅಂಗಡಿಯಲ್ಲಿ ಇರು, ಕೆಲಸ ಮುಗಿಸಿಕೊಂಡು ಬರುತ್ತೇನೆ, ಆಮೇಲೆ ಅಲ್ಲಿ ಇಲ್ಲಿ ಕೆಲಸ ನೋಡೋಣ ಎಂದಿತು. ಅದರಂತೆ ನಾನು ನಾಗರಾಜನ ಜೊತೆ ಕುಣಿಗಲ್ ರೋಡ್‌ನಲ್ಲಿದ್ದ ಜೆರಾಕ್ಸ್ ಅಂಗಡಿಗೆ ಹೋದೆ. ಅಂಗಡಿಯ ಕೀ ಇವನ ಹತ್ತಿರವೇ ಇತ್ತು. ಬೀಗ ತೆಗೆದು ಶೆಟರ್ ಎತ್ತಿ ಇವನೇ ಅಂಗಡಿ ಓನರ್ ಆದ. ದುಡಿಯುವ ಆಸೆ ಹೊತ್ತು ಬಂದಿದ್ದ ನನಗೆ ನಾಗರಾಜನ ದಿನಚರಿ ಆಸೆ ಹುಟ್ಟಿಸಿತು. ಮಧ್ಯಾಹ್ನದವರೆವಿಗೂ ನಾಗರಾಜನೊಂದಿಗೆ ಇದ್ದು, ಅದು ಇದು ಮಾತಾಡುತ್ತ ಆತನ ಜೆರಾಕ್ಸ್ ಕೆಲಸದಲ್ಲಿ ನೆರವಾದೆ. ನನಗೂ ಇಂಥದ್ದೇ ಒಂದು ಕೆಲಸ ಸಿಗಬಾರದೆ ಎಂದು ಮನಸ್ಸು ಒಳೊಳಗೇ ಬೇಡುತ್ತಿತ್ತು.

ಅಣ್ಣನ ಕುಟು ಕುಟು ಲೂನ ಗಾಡಿ ಬಂತು. ಅಣ್ಣನ ಹಿಂದೆ ಕೂತ ನಾನು, ನನ್ನ ಕೆಲಸದ ನಿರೀಕ್ಷೆಯಲ್ಲಿ ಹೊರಟೆ. ಅಣ್ಣ ದಾರಿಯುದ್ದಕ್ಕೂ ಸಿಕ್ಕ ಸಿಕ್ಕವರನ್ನೆಲ್ಲ ಮಾತಾಡಿಸಿಕೊಂಡು ಸೀದ ಚಿತ್ರಕಲಾವಿದ ಡೇವಿಡ್ ಇದ್ದಲ್ಲಿಗೆ ಕರೆದುಕೊಂಡು ಹೋಯಿತು. ಅವರಿಗೆ ‘ಇವನು ನನ್ನ ತಮ್ಮ ಊರಿಂದ ಬಂದಿದ್ದಾನೆ, ಚಿತ್ರ ಬರೆಯೋದ್ರಲ್ಲಿ ನಂಬರ್ ಒನ್. ಪಿಯುಸಿಗೆ ಇಲ್ಲೆ ಸೇರ್ಕಂತನೆ, ರಿಜಲ್ಟ್ ಬರೊವರೆಗು ಏನಾದ್ರು ಕೆಲ್ಸ ಕಲಿಲಿ, ಕಮರ್ಶಿಯಲ್ ಆರ್ಟ್ಸ್ ನವರತ್ರ ಸೇರ್ಸು’ ಎಂದರು. ಡೇವಿಡ್ ‘ನೋಡೋಣ ಇರಿ ವಿಚಾರ್ಸಿ ಹೇಳ್ತಿನಿ’ ಎಂದರು. ಅಲ್ಲಿಂದ ಎಸ್‌ಎಸ್ ಪುರಂನಲ್ಲಿದ್ದ ಒಂದು ಫೈಲು ಗ್ಲಾಸ್ ಬೈಂಡಿಂಗ್ ಮಾಡುತ್ತಿದ್ದ ಅಂಗಡಿ ಹತ್ತಿರ ಕರೆದುಕೊಂಡು ಹೋಯಿತು. ಅಲ್ಲೂ ಕೂಡ ಆನಂದ್ ಎಂಬ ಅಣ್ಣನ ಶಿಷ್ಯ ಕೆಲಸ ಮಾಡುತ್ತಿದ್ದ. ಆತನಿಗೆ ‘ಎಲ್ಲಾದ್ರು ಇಂಥದ್ದೆ ಒಂದು ಕೆಲ್ಸ ನೋಡಪ್ಪ’ ಎಂದು ನನ್ನ ಪರಿಚಯ ಹೇಳಿತು. ಸಂಜೆ ಹೋಟೆಲ್‌ನಲ್ಲಿ ದೋಸೆ ಕೊಡಿಸಿ ಮನೆಗೆ ತಂದು ಬಿಟ್ಟಿತು. ಅಲ್ಲಿಗೆ ನನ್ನ ಕೆಲಸ ಹುಡುಕುವ ಪರ್ವ ಮೂರನೇ ದಿನಕ್ಕೆ ಬಂದಿತ್ತು. ಅದು ನಾಲ್ಕಾಗಿ, ಐದಾಗಿ ವಾರಕ್ಕೆ ಬಂದರೂ ಎಲ್ಲೂ ಕೆಲಸ ಸಿಗಲೇ ಇಲ್ಲ. ಬಹುಶಃ ಅಣ್ಣ ನನ್ನ ಶಿಕ್ಷಣಕ್ಕೆ ಲಿಂಕ್ ಆಗುವಂತ ಆರ್ಟ್ಸ್‌ ಈ ಥರದ ಕೆಲಸಕ್ಕೆ ಒತ್ತುಕೊಡದೆ ಬೇಕರಿ, ಹೋಟೆಲ್, ಬಟ್ಟೆ ಅಂಗಡಿ ಮುಂತಾದೆಡೆ ಹುಡುಕಿದ್ದರೆ ಸಿಗುತ್ತಿತ್ತೇನೊ?

ಸಣ್ಣಹೊನ್ನಣ್ಣ ಇಲ್ಲಿಗೆ ಬಂದೇ ಬರುತ್ತಾನೆಂಬ ನಿಖರ ಮಾಹಿತಿ ಆಧರಿಸಿ ಎಂಪ್ರೆಸ್ ಕಾಲೇಜಿನ ಗೇಟ್ ಬಳಿಯೇ ಕಾದು ಸಾಕಾದೆ. ನಂಬಿಕೆ ಸುಳ್ಳಾಗಲಿಲ್ಲ. ಮಧ್ಯಾಹ್ನದ ಹೊತ್ತಿಗೆ ನಾಕಾರು ಕಡೆ ಪಾಠ ಮಾಡಿ ಕುಟು ಕುಟು ಶಬ್ದ ಮಾಡುವ ಲೂನ ಗಾಡಿಯಲ್ಲಿ ಸೈಡಿಗೊಂದು ಬ್ಯಾಗ್ ನೇತಾಕಿಕೊಂಡು ಸಣ್ಣಹೊನ್ನಣ್ಣ ಬಂದೆ ಬಿಟ್ಟ.

ಅಂತೂ ವಾರವೆಲ್ಲ ಕೆಲಸವಿಲ್ಲದೆ ಬಿಟ್ಟಿ ಊಟ ತಿಂದುಕೊಂಡು ವಾಹನ ದಟ್ಟಣೆಯ ತುಮಕೂರಿನಲ್ಲಿ ಓಡಾಡಿದ್ದು ಮನಸ್ಸಿಗೆ ಹಿಡಿಸದಾಗಿ ಮಂಕು ಕವಿಯತೊಡಗಿತು. ಆ ಮಂಕಿನೊಳಗೆ ಊರಿನ ನೆನಪುಗಳು ಬಾದಿಸತೊಡಗಿದವು. ಪರಿಣಾಮವಾಗಿ ದುಡಿಯದಿದ್ದರೂ ಸರಿಯೆ ಊರು ಹೋಗೆನ್ನುವಂತೆಯೂ ಕಾಡು ಬಾ ಎನ್ನುವಂತೆಯೂ ಕರೆದಂತಾಯಿತು. ಇದಕ್ಕೆ ಒತ್ತುಕೊಡುವಂತೆ ಎಸ್‌ಎಸ್‌ಎಲ್‌ಸಿ ಫಲಿತಾಂಶದ ದಿನಾಂಕ ಪತ್ರಿಕೆಯಲ್ಲಿ ಪ್ರಕಟಣೆಯಾಗಿದ್ದು ನನ್ನ ದಿಗಿಲನ್ನು ಹೆಚ್ಚಿಸಿತ್ತು. ಈ ಎಲ್ಲವೂ ನನ್ನಲ್ಲಿ ಒಟ್ಟಿಗೆ ಭವಿಸಿ ಊರ ಕಡೆಯ ಗೀಳು ಹೆಚ್ಚಾಗಿ ಅಣ್ಣನ ಹತ್ತಿರ ಹೇಳಿಕೊಂಡೆ. ಸಣ್ಣಹೊನ್ನಣ್ಣ ಒಲ್ಲದ ಮನಸ್ಸಿನಿಂದಲೇ ‘ರಿಜಲ್ಟ್ ನೋಡಿಕೊಂಡು ಬಾ ಹೋಗು ಇಲ್ಲೆ ಸೇರಿವಂತೆ’ ಎಂದು ಹೇಳಿ ಬಸ್ ಹತ್ತಿಸಿ ಕಳಿಸಿಕೊಟ್ಟಿತು.

ಬ್ಯಾಡರಹಳ್ಳಿ ಗೇಟ್‌ನಲ್ಲಿ ಇಳಿದು ಊರು ತಲುಪುವ ಸೊಂಪ್ಲ ಹಾದಿಯಲ್ಲಿ ಹೋಗುತ್ತಿದ್ದರೆ ನನ್ನಲ್ಲಿ ನೂರೆಂಟು ವಿಷಾದ ಭಾವಗಳು. ಪೈಸೆ ಪೈಸೆಗು ಪರದಾಡುವ ಅಪ್ಪನ ಬಳಿಯೇ ದುಡಿದುಕೊಂಡು ಬರುವುದಾಗಿ ಹೇಳಿ ಎಪ್ಪತ್ತು ರೂಪಾಯಿ ಪಡೆದು ಬಂದಿದ್ದು, ಇತ್ತ ದುಡಿದು ತಂದದ್ದಿರಲಿ ಇದ್ದುದನ್ನೂ ಖರ್ಚು ಮಾಡಿಕೊಂಡು ವಾಪಾಸ್ಸಾಗುತ್ತಿರುವುದು ನನ್ನ ಬಗ್ಗೆಯೇ ನಾಚಿಕೆಯಾಗುವಂತೆ ಮಾಡಿತ್ತು. ಅಪ್ಪ ಅಮ್ಮನಿಗೆ ಹೇಗೆ ಮುಖ ತೋರಿಸುವುದೆಂದು ಊರು ಸಮೀಪಿಸಿದಂತೆಲ್ಲ ನಡಿಗೆ ತಡವರಿಸುತ್ತಿತ್ತು. ಸೊಂಪ್ಲು ಕೊನೆ ಆಗುತ್ತಲೆ ಬಾಡಿ ಬತ್ತಿರುವ ನ್ಯಾಗೇನಹಳ್ಳಿ ಕೆರೆ ಅಂಗಳ ಸಿಕ್ಕಿತು. ಕೆರೆ ಅಂಗಳಕ್ಕೆ ಅತ್ತಂಡೆಯಾಗೆ ನಮ್ಮ ತೋಟದ ಕೊನೆ ಇತ್ತು. ಬೇಸಿಗೆಯಾದ್ದರಿಂದ ಗರಿ ಒಣಗಿ ಬಾಡಿ ನಿಂತಿರುವ ತೆಂಗಿನ ಮರಗಳು ದೂರದಿಂದಲೇ ಕಾಣುತ್ತಿದ್ದವು. ಅದರ ಅಡಿಯಲ್ಲೇ ನಮ್ಮಮ್ಮ ಒಣಗಿ ಬಿದ್ದಿರುವ ಸೋಗೆ ಗರಿಗಳನ್ನು ಗುಡ್ಡಾಕಿಕೊಂಡು ಕಡ್ಡಿ ಸಿಗಿಯುತ್ತಿತ್ತು. ಶಖೆಗೆ ಅಂಗಿ ಬಿಚ್ಚಾಕಿದ್ದ ಅಪ್ಪ ಯಾರೊ ಬರುತ್ತಿದ್ದಾರೆಂದು ಇತ್ತಲೇ ನೋಡುತ್ತಿತ್ತು. ದುಡಿಯಲು ಹೋದ ಮಗ ಇನ್ನು ತಿಂಗಳು ತುಂಬದೆಯೇ ಹೇಗೆ ಬರಲು ಸಾಧ್ಯ ಎಂದನಿಸಿತೇನೊ.. ಪ್ರತ್ಯಕ್ಷವಾಗಿ ಕಂಡರೂ ಪ್ರಮಾಣಿಸಿ ನೋಡಿದಂತಿತ್ತು. ಅದೇನು ಮಾತಾಡಿ ಭಾರ ಇಳಿಸಿಕೊಂಡೆವೊ.. ಅಂತೂ ಆ ಗಳಿಗೆಗಳು ಕರಗಿದವು.

ಎಸ್‌ಎಸ್‌ಎಲ್‌ಸಿ ರಿಜಲ್ಟ್

ಎಸ್‌ಎಸ್‌ಎಲ್‌ಸಿ ಫಲಿತಾಂಶ ನೋಡಲು ಪರೀಕ್ಷೆ ಬರೆದವರನ್ನೆ ಕಳುಹಿಸುತ್ತಿರಲಿಲ್ಲ. ಅವರ ಪರವಾಗಿ ಬೇರೆ ಯಾರಾದರೂ ಹೋಗಿ ನೋಡಿಕೊಂಡು ಬರುತ್ತಿದ್ದರು. ಫಲಿತಾಂಶ ಬರುವರೆಗೆ ಆ ಹುಡುಗರನ್ನ ಕಾಯುವುದೇ ದೊಡ್ಡವರಿಗೊಂದು ಸವಾಲಾಗಿತ್ತು. ಹೀಗೆ ಸ್ವತಃ ಫಲಿತಾಂಶ ನೋಡಲೋದ ವಿದ್ಯಾರ್ಥಿಗಳು ಪಾಸಾಗಿದ್ದರೇನೋ ಸರಿ. ನಪಾಸೇನಾದರೂ ಆಗಿದ್ದರೆ ಅಲ್ಲಿಂದತ್ತಲೇ ಯಾರ ಕೈಗೂ ಸಿಗದೆ ಊರು ಬಿಟ್ಟೋಗಿಬಿಡುತ್ತಿದ್ದರು. ಮುಂದೆಂದೋ ಡ್ರೈವರ್ ಆಗಿಯೋ, ಇನ್ನೇನೋ ಆಗಿಯೋ ಊರ ಜಾತ್ರೆಯಲ್ಲಿ ಕಾಣಿಸಿಕೊಂಡ ಉದಾಹರಣೆಗಳಿದ್ದವು. ಇನ್ನು ಕೆಲ ಸೂಕ್ಷ್ಮ ಮನಸ್ಸಿನ ಹುಡುಗಿಯರು ಆತ್ಮಹತ್ಯೆ ಮಾಡಿಕೊಂಡರೆಂಬ ಸುದ್ದಿಗಳೂ ಹರಿದಾಡುತ್ತಿದ್ದವು. ಈ ಎಲ್ಲಾ ಕಾರಣದಿಂದ ಎಸ್‌ಎಸ್‌ಎಲ್‌ಸಿ ಫಲಿತಾಂಶವೆಂದರೆ ವಿದ್ಯಾರ್ಥಿಗಳ ಅಳಿವು ಉಳಿವಿನ ಪ್ರಶ್ನೆಯಾಗಿತ್ತು. ನಪಾಸಾಗುವ ಭಯದಲ್ಲಿದ್ದ ನನಗೆ ರಿಜಲ್ಟ್ ನೋಡಲು ಬೇರೆ ಯಾರನ್ನೊ ಕಳುಹಿಸಲು ಇಷ್ಟವಿರಲಿಲ್ಲ. ಸ್ವತಃ ನನಗೆ ಅವಕಾಶಿಸದ ಅಪ್ಪ ಅಮ್ಮ, ನಾಗೇಂದ್ರಣ್ಣನಿಗೆ ಚಿ.ನಾ.ಹಳ್ಳಿಗೋಗಿ ಫಲಿತಾಂಶ ನೋಡಿ ಬರಲು ಒಪ್ಪಿಸಿದರು. ನಾಗೇಂದ್ರಣ್ಣ ಹೋದದ್ದೇನೊ ಸರಿ ಇತ್ತ ಅದು ಫಲಿತಾಂಶ ಹೊತ್ತು ತರುವಷ್ಟರಲ್ಲಿ ನಾನು ಆತಂಕಕ್ಕೆ ಒಳಗಾಗಿ ನಾಕಾರು ಸಾರಿ ಮನೆಗೂ ತೋಟಕ್ಕೂ ಚಡ್ಡಿ ಎಳೆದುಕೊಂಡು ಓಡಾಡಿದ್ದೆ.

ಆ ದಿನ ಮಧ್ಯಾಹ್ನ ಮೂರುಗಂಟೆಗೆಲ್ಲ ನಾಗೇಂದ್ರಣ್ಣ ಸೈಕಲ್ ತುಳಿದುಕೊಂಡು ಬರುತ್ತಿರುವುದು ಕೆರೆ ಏರಿಮೇಲೆ ಕಾಣಿಸಿತು. ಬಂದದ್ದೆ ಒಂದೋಗೈತೆ, ಎರೆಡೋಗೈತೆ ಎಂದು ಸತಾಯಿಸುವುದೆ! ನಾನು ಎಲ್ಲವನ್ನು ನಂಬುವ ಸ್ಥಿತಿಯಲ್ಲೆ ಇದ್ದೆ. ಅಂತಿಮವಾಗಿ ತಿಳಿದಾಗ ನಾನು ಸೆಕೆಂಡ್ ಕ್ಲಾಸ್‌ನಲ್ಲಿ ಪಾಸಾಗಿದ್ದೆ. ಗಣಿತ ಮತ್ತು ವಿಜ್ಞಾನದಲ್ಲಿ ಮಾತ್ರ ಕ್ರಮವಾಗಿ ಮುವತ್ತೈದು, ಮುವತ್ತಾರು ಅಂಕಗಳು. ಊರಿನಲ್ಲಿದ್ದಾಗ ಜೊತೆಯಲ್ಲಿ ಓದುತ್ತಿದ್ದ ಹಲವರು ಕನ್ನಡ ಮೀಡಿಯಮ್‌ನಲ್ಲೇ ನಾಲ್ಕೈದು ಸಬ್ಜೆಕ್ಟ್ ಕಳೆದುಕೊಂಡದ್ದರು. ‘ಈ ಹುಡ್ಗ ಇಂಗ್ಲಿಷ್ ಮೀಡಿಯಮ್ಮಲ್ಲಿ ಇಷ್ಟು ಸಾಧನೆ ಮಾಡೈತಲ್ಲ’ ಎಂದು ಊರವರು ಕೊಂಡಾಡಿದರೆ, ಇತ್ತ ಮನೆಯರೂ ಸಮಾಧಾನ ಪಟ್ಟುಕೊಂಡರು.

ನನ್ನ ಪಿಯುಸಿಯ ಸಬ್ಜೆಕ್ಟ್ ಆಯ್ಕೆ ಒಂಥರ ಕಣ್ಕಟ್ಟಿನಂತಾಯ್ತು. ನನಗಿಂತಲೂ ಜಸ್ಟ್ ಪಾಸಾಗಿದ್ದ ಹಾಗು ಕನ್ನಡ ಮೀಡಿಯಮ್‌ನಲ್ಲಿ ಓದಿ ಬಂದಿದ್ದ ನನ್ನ ಹಾಸ್ಟೆಲ್ ಮಿತ್ರರನೇಕರು ಉತ್ಸಾಹದಿಂದ ಸೈನ್ಸ್ ತೆಗೆದುಕೊಳ್ಳುತ್ತಿದ್ದರು. ನಾನು ಇಂಗ್ಲೀಷ್ ಮೀಡಿಯಮ್‌ನಲ್ಲಿ ಓದಿದ್ದರಿಂದ ಸೈನ್ಸ್ ಆಯ್ಕೆಯಲ್ಲಿ ನನಗೆ ಗೊಂದಲ ಮಾಡಿಕೊಳ್ಳುವ ಅಗತ್ಯವೇ ಇರಲಿಲ್ಲ. ಆದರೆ ನಮ್ಮ ಕುಟುಂಬದವರಲ್ಲಿ ಈ ಬಗ್ಗೆ ಅರಿವು ಇದ್ದಂತಿರಲಿಲ್ಲ. ಇದ್ದರೂ ನನ್ನ ವಿಜ್ಞಾನ, ಗಣಿತದ ಅಂಕಗಳು ಇಂಗ್ಲಿಷ್ ಮೀಡಿಯಮ್‌ನಲ್ಲಿ ಓದಿದ್ದನ್ನ ನಿರರ್ಥಕಗೊಳಿಸಿದಂತಿತ್ತು. ನಾನು ಪ್ರೈಮರಿ ಓದುವಾಗ ಎಲ್ಲರ ಹತ್ರ ‘ನನ್ಮಗುನ್ನ ಡಾಗುಟ್ರು ಓದುಸ್ತಿನಿ’ ಎನ್ನುತ್ತಿದ್ದ ಅಪ್ಪನೂ, ಅದಾಗಲೇ ಪದವಿ ಮುಗಿಸಿದ್ದ ಅಕ್ಕನೂ ನಿರ್ಣಾಯಕ ಹಂತದಲ್ಲಿ ಕೈಚೆಲ್ಲಿದಂತಿತ್ತು. ಸ್ವಂತ ತೀರ್ಮಾನ ತೆಗೆದುಕೊಳ್ಳುವಷ್ಟು ಪ್ರೌಢಿಮೆ ನನ್ನಲ್ಲಿರಲಿಲ್ಲ. ನಮ್ಮ ಕುಟುಂಬದಲ್ಲಿ ಆ ವರ್ಷ ಎಸ್‌ಎಸ್‌ಎಲ್‌ಸಿ ಪಾಸಾಗಿದ್ದವರು ನಾನು ಮತ್ತು ಮಾವನ ಮಗ ಭಗತ್. ಭಗತ್ ಕಳೆದ ವರ್ಷ ಒಂದನ್ನ ಕಳೆದುಕೊಂಡು ನನ್ನೊಂದಿಗೆ ಪಾಸಾಗಿದ್ದ. ಈಗ ನಾವಿಬ್ಬರೂ ಒಟ್ಟಿಗೆ ಪಿಯುಸಿ ಓದುವ ಹೊಸಿಲಿನಲ್ಲಿದ್ದೆವು. ನಮ್ಮ ಕುಟುಂಬದವರ ಬಯಕೆ ಇಬ್ಬರೂ ಒಟ್ಟಿಗೆ ಒಂದನ್ನೇ ಓದಲಿ ಎಂಬುದಕ್ಕೆ ನನ್ನ ಗಣಿತ, ವಿಜ್ಞಾನದ ಅಂಕಗಳು ನೆರವಾಗಿದ್ದವೇನೊ. ಈ ಮೂಲಕ ಸೈನ್ಸ್‌ಗೆ ಸೇರಿ ಫಿಸಿಕ್ಸು, ಮ್ಯಾಥ್ಸು, ಲ್ಯಾಬರೇಟರಿ, ಟ್ಯೂಷನ್ನು, ಫೀಸು ಎಂದು ಪರದಾಡುವುದು ತಪ್ಪಿ ಸುಲಭವಾದದ್ದನ್ನೆ ಓದುವಂತಾಯಿತು. ಸೈನ್ಸ್‌ನಲ್ಲಿ ಫೇಲ್ ಆಗುತ್ತಿದ್ದೆನೊ ಪಾಸಾಗುತ್ತಿದ್ದೆನೊ.. ಅಂತೂ ಅನುಭವವೊಂದು ಕೈಜಾರಿತು.