ಜನಸಾಮಾನ್ಯರ ಶಕ್ತಿಯಲ್ಲಿ ಮತ್ತು ಜ್ಞಾನ ಶಕ್ತಿಯಲ್ಲಿ ಅವರಿಗೆ ಅಪಾರವಾದ ನಂಬಿಕೆ ಇದೆ. ಒಬ್ಬ ವಕೀಲನಿಗೆ ತನ್ನ ಕ್ಷೇತ್ರದಲ್ಲಿನ ಎಷ್ಟು ಶಬ್ದಗಳು ಗೊತ್ತಿವೆಯೋ ಅದಕ್ಕಿಂತ ಹೆಚ್ಚಿನ ಶಬ್ದಗಳು ಮೀನುಗಾರನಿಗೆ ಅವನ ಸಮುದ್ರ ಸಂಬಂಧದಿಂದ ಗೊತ್ತಾಗುತ್ತವೆ ಎಂದು ಅವರು ಹೇಳಿದ್ದರು. ಆತನಿಗೆ ವಿವಿಧ ಜಾತಿಯ ಜಲಚರಗಳು, ಗಾಳಿ, ಮೋಡಗಳು, ತೆರೆಗಳು, ಕಾಲ ಮತ್ತು ದಿನಮಾನಗಳ ಪರಿಚಯವಿರುತ್ತದೆ. ಅವನ ಇಡೀ ಬದುಕೇ ನಿಸರ್ಗಮಯವಾಗಿರುತ್ತದೆ. ಅವನಿಗೆ ಸ್ವಾನುಭವದಿಂದಲೇ ಜ್ಞಾನ ಲಭಿಸಿರುತ್ತದೆ ಎಂದು ಮೀನುಗಾರನ ಹಿರಿಮೆಯನ್ನು ಮೆರೆಯುತ್ತಿದ್ದರು.
ರಂಜಾನ್‌ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿಯ 68ನೇ ಕಂತು ನಿಮ್ಮ ಓದಿಗೆ

“ನೋಡುಇದೊ ಇಲ್ಲರಳಿ ನಗುತಿದೆ
ಏಳು ಸುತ್ತಿನ ಮಲ್ಲಿಗೆ.
ಇಷ್ಟು ಹಚ್ಚನೆ ಹಸಿರು ಗಿಡದಿಂ-
ದೆಂತು ಮೂಡಿತೊ ಬೆಳ್ಳಗೆ!”

1971ರ ಮಾತು. ಬಾಹ್ಯ ವಿದ್ಯಾರ್ಥಿಯಾಗಿ ಪ್ರಥಮ ಬಿ.ಎ. ಮುಗಿಸಿದ್ದ ನನಗೆ ವಿಜಾಪುರದ ಎಸ್.ಬಿ. ಆರ್ಟ್ಸ್ ಕಾಲೇಜಿನಲ್ಲಿ ಎರಡನೇ ಬಿ.ಎ. ಸೇರುವತನಕ ಅರ್ಥಶಾಸ್ತ್ರವನ್ನು ಪ್ರಧಾನ ವಿಷಯವಾಗಿ ತೆಗೆದುಕೊಂಡು ಓದುವ ಹಂಬಲ. ಪ್ರಧಾನ ವಿಷಯದ ಕಾಲಂನಲ್ಲಿ ಅರ್ಥಶಾಸ್ತ್ರವೆಂದೂ ಉಪಪ್ರಧಾನ ಕಾಲಂನಲ್ಲಿ ರಾಜಕೀಯ ಶಾಸ್ತ್ರ, ಸಮಾಜಶಾಸ್ತ್ರವೆಂದೂ ತುಂಬಿದ ಅರ್ಜಿ ಫಾರ್ಮನ್ನು ಕಾಲೇಜಿನ ಕಚೇರಿಯಲ್ಲಿ ಕೊಟ್ಟು ಕೆಲ ನಿಮಿಷಗಳಾಗಿದ್ದವು. ಕಾಲೇಜಿನ ಆವರಣದಲ್ಲೇ ಸಂಭ್ರಮದಿಂದ ಸುತ್ತಾಡುತ್ತಿದ್ದೆ.

ಕಾಲೇಜಿನ ಕೋಣೆಯೊಂದರಲ್ಲಿ ಪಾಠ ನಡೆಯುತ್ತಿತ್ತು. ಹೊರಗೆ ಕೂಡ ವಿದ್ಯಾರ್ಥಿಗಳು ಕಿಕ್ಕಿರಿದು ತುಂಬಿದ್ದರು. ನನ್ನ ಕುತೂಹಲ ಹೆಚ್ಚಿತು. ಕಿಟಕಿಯ ಬಳಿ ಹೋಗಿ ಒಂದಿಷ್ಟು ಜಾಗ ಮಾಡಿಕೊಂಡು ನಿಂತೆ. ಹಚ್ಚನೆ ಹಸಿರು ಗಿಡದಿಂದ ಬೆಳ್ಳಗೆ ಮೂಡಿ ಬಂದ ಮಲ್ಲಿಗೆಯ ಕುರಿತು ಗಂಭೀರವಾಗಿ ಪಾಠ ಮಾಡುತ್ತಿದ್ದವರು ಪ್ರೊ. ಎ. ಎಸ್. ಹಿಪ್ಪರಗಿ ಅವರು ಎಂಬುದನ್ನು ತಿಳಿದುಕೊಂಡೆ. ಅದೊಂದು ಅವಿಸ್ಮರಣೀಯ ಘಟನೆ. ನನ್ನ ಬದುಕಿನ ಗತಿಯನ್ನೇ ಬದಲಿಸಿದ ಘಟನೆ.

ಹಸಿರಿನಿಂದ ಬಿಳಿ ಸೃಷ್ಟಿಯಾಗುವುದು ವಿಶಿಷ್ಟವಾದ ಅನುಭಾವದ ಆನಂದ ನೀಡಿತು. ಪಾಠದ ಓಘವೇ ಹಾಗಿತ್ತು. ಈ ‘ಮಲ್ಲಿಗೆ’ ಕವನ ಕನ್ನಡದ ಖ್ಯಾತ ಕವಿ ಜಿ. ಎಸ್. ಶಿವರುದ್ರಪ್ಪ ಅವರ ‘ಚೆಲುವು-ಒಲವು’ ಸಂಕಲನದ್ದು ಎಂಬುದನ್ನು ನಂತರ ತಿಳಿದುಕೊಂಡೆ. ಸಾಹಿತ್ಯದ ಬಗೆಗಿನ ನನ್ನ ಒಲವನ್ನು ಆ ಕ್ಷಣಗಳು ಉದ್ದೀಪನಗೊಳಿಸಿದವು. ನಂತರದ ಅವಧಿಯಲ್ಲಿ ದೇವರ ಬಗ್ಗೆ ಎಂದೂ ಮಾತನಾಡದ ಪ್ರೊ. ಹಿಪ್ಪರಗಿಯವರು ಆ ದಿನ, ಅನುಭಾವವೆಂಬುದು ದೇವರು ಮತ್ತು ಧರ್ಮಗಳನ್ನು ಮೀರಿದ್ದು ಎನ್ನುವ ರೀತಿಯಲ್ಲಿ ಮಲ್ಲಿಗೆಯ ವರ್ಣನೆ ಮಾಡಿದ್ದರು. ಈ ಸೋಜಿಗದ ಹಿಂದಿನ ಸೃಷ್ಟಿಯ ರಹಸ್ಯದ ಕುರಿತು ವಿದ್ಯಾರ್ಥಿಗಳ ಮನದಲ್ಲಿ ಹೊಸ ಅಲೆಗಳು ಏಳುವಂತೆ ಮಾಡಿದ್ದರು. ಕಾವ್ಯದ ಈ ಅನುಭಾವ ‘ಇದು ನಿಚ್ಚಂ ಪೊಸತು’ ಎನ್ನುವ ಹಾಗೆ ನನ್ನ ಮನಸ್ಸನ್ನು ಸೂರೆಗೊಂಡಿತು.

ಪಾಠ ಮುಗಿದ ನಂತರ ಪ್ರೊ. ಹಿಪ್ಪರಗಿ ಅವರು ಹೊರಬಂದರು. ಬಿಳಿ ಪ್ಯಾಂಟು, ಕರಿಕೋಟು, ಕೈಯಲ್ಲಿ ‘ಚೆಲುವು-ಒಲವು’. ಸ್ಥಿತಪ್ರಜ್ಞನ ಗಂಭೀರ ನಡೆ. ಅಲ್ಲಿಂದ ಅವರು ಸ್ವಲ್ಪದೂರ ಹೋದ ನಂತರ ಅವರ ಬಳಿ ಧಾವಿಸಿ “ನನಗೆ ಕನ್ನಡ ವ್ಯಾಕರಣ ಇತ್ಯಾದಿ ಗೊತ್ತಿಲ್ಲ. ಕನ್ನಡ ಸಾಹಿತ್ಯವನ್ನು ಕೂಡ ಹೆಚ್ಚಾಗಿ ಓದಿಕೊಂಡಿಲ್ಲ. ನಾನು ಕನ್ನಡವನ್ನು ಪ್ರಧಾನ ವಿಷಯವಾಗಿ ತೆಗೆದುಕೊಳ್ಳಬಹುದೆ ಸರ್” ಎಂದು ಅಳಕುತ್ತಲೇ ಕೇಳಿದೆ. “ರಠಈಕ ಬಂದರೆ ಸಾಕು” ಎಂದರು. ನನಗೆ ಬಹಳ ಖುಷಿಯಾಯಿತು. ಥ್ಯಾಂಕ್ಸ್ ಹೇಳಿದ ನಂತರ ನೇರವಾಗಿ ಕಾಲೇಜಿನ ಕಚೇರಿಗೆ ಹೋಗಿ ಅರ್ಜಿ ಫಾರ್ಮ್‌ನಲ್ಲಿ ಕನ್ನಡವನ್ನು ಮೇಜರ್ ವಿಷಯವಾಗಿ ಹಿಂದಿ ಮತ್ತು ಸಂಸ್ಕೃತಗಳನ್ನು ಮೈನರ್ ವಿಷಯಗಳಾಗಿ ಬದಲಾಯಿಸಿದೆ.

(ಗೆಳೆಯರ ಬಳಗ (೧೨.೪.೧೯೪೭ರಂದು ತೆಗೆದದ್ದು) ಎಡದಿಂದ: ೧ ಬಿ.ಬಿ. ಮೇಗೇರಿ, ೨ ಎ.ಎಸ್. ಹಿಪ್ಪರಗಿ, ೩ ಎಸ್. ಎಂ. ಕೋರಿ, ೪ ಎಚ್. ಎನ್. ಸಾಲೋಟಗಿ, ೫ ಕೆ.ಎಂ. ಕುಂಟೋಜಿ)

ಕನ್ನಡ ಪ್ರಧಾನ ವಿಷಯದ ತರಗತಿಗಳು ಒಂದೆರಡು ದಿನಗಳಲ್ಲಿ ಪ್ರಾರಂಭವಾದವು. ಬೆಳಿಗ್ಗೆ 7-30 ಕ್ಕೆ ತರಗತಿಗಳು ಪ್ರಾರಂಭವಾಗುತ್ತಿದ್ದವು ಎಂಬ ನೆನಪು. ಆ ಎಳೆ ಬಿಸಿಲಿನಲ್ಲಿ ಶುಭ್ರವಾಗಿ, ವೇಗವಾಗಿ ಕಾಲೇಜಿಗೆ ಹೋಗುವುದು ಆಹ್ಲಾದಕರವಾಗಿತ್ತು. ಪಿಯುಸಿಯನ್ನು ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಓದಿದ್ದೆ. ಹಣದ ಸಮಸ್ಯೆಯಿಂದಾಗಿ ಹೊರಗಿನಿಂದ ಕುಳಿತು ಮೊದಲ ಬಿ.ಎ. ಪಾಸಾಗಿದ್ದೆ. ಹೀಗಾಗಿ ಬಹಳ ಹಸಿದವನಾಗಿ ತರಗತಿಗಳಿಗೆ ಹೋಗುತ್ತಿದ್ದೆ. ನನ್ನ ಮಟ್ಟಿಗೆ ಕಾಲೇಜು ವಿದ್ಯಾರ್ಥಿಯಾಗುವುದೊಂದು ಭಾಗ್ಯವಾಗಿತ್ತು. ಇಂಗ್ಲಿಷ್ ಬೇಸಿಕ್‌ನಲ್ಲಿ ಹೆಚ್ಚಿನ ಆಕರ್ಷಣೆ ಹುಟ್ಟಿಸುವಂಥ ವಾತಾವರಣವಿರಲಿಲ್ಲ. ಇದಕ್ಕೆ ಇಂಗ್ಲಿಷ್ ಬಗ್ಗೆ ಇದ್ದ ಭಯವೂ ಕಾರಣವಿರಬೇಕು. ನನ್ನ ಮನೆಯ ಹತ್ತಿರವೇ ಇದ್ದ ಗಣಪತಿ ಮಾಮಾ (ನಿವೃತ್ತ ಪ್ರಿನ್ಸಿಪಾಲ್ ಜಿ. ಬಿ. ಸಜ್ಜನ್) ಅವರ ಇಂಗ್ಲಿಷ್ ಭಾಷಾಜ್ಞಾನದ ಬಗ್ಗೆ ಎಲ್ಲರಿಗೂ ಗೌರವವಿತ್ತು. ಅವರು ಇಂಗ್ಲಿಷ್ ಪದಗಳನ್ನು ಉಚ್ಚರಿಸುವ ರೀತಿ ನನ್ನನ್ನು ಗಾಬರಿಗೊಳಿಸುತ್ತಿತ್ತು. ಅವರು ಅತ್ಯಂತ ಶಿಸ್ತಿನ ವ್ಯಕ್ತಿ, ಬಹಳ ಶ್ರದ್ಧೆಯಿಂದ ಕಲಿತವರು, ಗಂಭೀರ ಹಾಗೂ ಉದಾತ್ತ ಮನುಷ್ಯರು ಎಂಬ ಕಾರಣಕ್ಕಾಗಿ ನಮ್ಮ ನಾವಿಗಲ್ಲಿ-ಮಠಪತಿಗಲ್ಲಿ ಜನರಿಗೆ ಅವರು ಆದರ್ಶಪುರುಷರಾಗಿದ್ದರು. ನನಗೆ ಅವರ ಬಗ್ಗೆ ಗೌರವ ಮತ್ತು ಅವರ ಇಂಗ್ಲಿಷ್ ಬಗ್ಗೆ ಭಯ ಇದ್ದವು. ಇಂಗ್ಲಿಷ್ ಕಲಿಕಾ ವಿಧಾನದಲ್ಲಿ ಅನೇಕ ರೀತಿಯ ನ್ಯೂನತೆಗಳು ಇದ್ದಕಾರಣ ಮತ್ತು ಇಂಗ್ಲಿಷ್ ಬರಿ ಪಾಸಾದರೆ ಸಾಕು ಎಂಬ ಮನೋಭಾವ ಸಾರ್ವತ್ರಿಕವಾಗಿದ್ದರಿಂದ ಬೇಸಿಕ್ ಇಂಗ್ಲಿಷ್ ಬಗ್ಗೆ ವಿದ್ಯಾರ್ಥಿಗಳಿಗೆ ಭಯವಿದ್ದರೂ ಹೆಚ್ಚು ತಲೆಕೆಡಿಸಿಕೊಳ್ಳುತ್ತಿರಲಿಲ್ಲ.

ಕನ್ನಡ ವಿಷಯಕ್ಕೆ ಸಂಬಂಧಿಸಿದಂತೆ ಪ್ರೊ. ಹಿಪ್ಪರಗಿ ಮತ್ತು ವಿಭಾಗದ ಮುಖ್ಯಸ್ಥರಾದ ಪ್ರೊ. ನಾಡಗೌಡ ಅವರು, ಹಿಂದಿ ಪ್ರಾಧ್ಯಾಪಕ ವಜ್ರಮಟ್ಟಿ ಅವರು ಹಾಗೂ ಸಂಸ್ಕೃತ ಪ್ರಾಧ್ಯಾಪಕ ಸಾರಂಗಮಠ ಅವರು ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚಿನವರಾಗಿದ್ದರು. ಪ್ರಿನ್ಸಿಪಾಲರಾಗಿದ್ದ ಬಿ. ಎಸ್. ಗಣಾಚಾರಿ, ಪ್ರೊ. ಎಸ್. ಎಸ್. ನಾದ, ಪ್ರೊ. ಇನಾಮದಾರ, ಪ್ರೊ. ಸಾಲಿಮಠ ಮುಂತಾದವರು ಇಂಗ್ಲಿಷ್ ಭಾಷಾಜ್ಞಾನವಿಲ್ಲದ ಮತ್ತು ಹಳ್ಳಿಗಾಡಿನ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಕಲಿಸಲು ಹೆಣಗುತ್ತಿದ್ದರು. ಪ್ರೊ. ರಾವ್ ಹಾಗೂ ಪ್ರೊ. ಕಲಾಲ್ ಅವರು ಇತಿಹಾಸದ ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚಿನವರಾಗಿದ್ದರು. ಪ್ರೊ. ಕಲ್ಯಾಣಪ್ಪಗೋಳ ಅವರು ರಾಜಕೀಯ ಶಾಸ್ತ್ರ ವಿಭಾಗಕ್ಕೆ ಹೊಸತನವನ್ನು ತಂದಿದ್ದರು. ಸಮಾಜಶಾಸ್ತ್ರ ವಿಭಾಗದ ಪ್ರೊ. ಪುರಾಣಿಕಮಠ ಅವರು ವಿಜಾಪುರದ ಟಾಂಗಾವಾಲಾಗಳ ಬದುಕಿನ ಬಗ್ಗೆ ಕನಿಕರ ಹುಟ್ಟುವ ರೀತಿಯಲ್ಲಿ ಹೇಳುತ್ತಿದ್ದರು. ವಿದ್ಯಾಕೇಂದ್ರದಲ್ಲಿ ಬಡವರ ಬದುಕಿನ ವಿವರಗಳ ಕುರಿತು ವಿಶ್ಲೇಷಣೆ ಮಾಡುವುದು ಹೊಸದೆನಿಸಿತು. ನನಗೆ ಸಂಬಂಧಿಸಿದ ತರಗತಿಗಳು ಇಲ್ಲದೆ ಇದ್ದಾಗ ಈ ಪ್ರಾಧ್ಯಾಪಕರುಗಳ ಪಾಠ ಕೇಳುವ ಅವಕಾಶ ಲಭಿಸುತ್ತಿತ್ತು. ಅದೇ ಸಂದರ್ಭದಲ್ಲಿ ಮಾರ್ಕ್ಸ್‌ವಾದಿ ವಿಚಾರ ಲಹರಿಗೆ ಒಳಗಾಗಿದ್ದ ನನಗೆ ಎಲ್ಲವನ್ನೂ ಹೊಸತನದಿಂದ ನೋಡುವ ಪ್ರಜ್ಞೆ ಲಭಿಸಿತು.

ಎಸ್. ಬಿ. ಆರ್ಟ್ಸ್ ಕಾಲೇಜಿನ ಕನ್ನಡ ವಿಭಾಗ ಬಹಳ ಪ್ರಸಿದ್ಧವಾಗಿತ್ತು. ಕನ್ನಡ ವಿಷಯವನ್ನು ಪ್ರಧಾನವಾಗಿ ಕಲಿಯುವುದೊಂದು ಸವಾಲಾಗಿತ್ತು. ಹೀಗಾಗಿ ಬಹಳಷ್ಟು ಮಂದಿ ಬುದ್ಧಿವಂತ ವಿದ್ಯಾರ್ಥಿಗಳು ಕನ್ನಡವನ್ನು ಪ್ರಧಾನ ವಿಷಯವಾಗಿ ಆಯ್ಕೆ ಮಾಡಿಕೊಳ್ಳುತ್ತಿದ್ದರು. ಒಟ್ಟು 120 ಮಂದಿ ಇದ್ದೆವು. ಅವರಲ್ಲಿ 20 ಮಂದಿ ವಿದ್ಯಾರ್ಥಿನಿಯರು. ಬಹುಶಃ ಇಷ್ಟೊಂದು ಮಂದಿ ಕನ್ನಡ ವಿಷಯವನ್ನು ಪ್ರಧಾನವಾಗಿ ತೆಗೆದುಕೊಂಡ ಉದಾಹರಣೆ ಬೇರೆಲ್ಲೂ ಇರಲಿಕ್ಕಿಲ್ಲ. ಈ ಗೌರವ ಪ್ರೊ. ಹಿಪ್ಪರಗಿ ಅವರಿಗೆ ಸಲ್ಲಬೇಕು.

ಪ್ರೊ. ಹಿಪ್ಪರಗಿ ಅವರು ಮೊದಲ ದಿನದ ಕ್ಲಾಸ್ ತೆಗೆದುಕೊಳ್ಳುವಾಗ ಬಿಎಂಶ್ರೀ ಮತ್ತು ತೀನಂಶ್ರೀ ಅವರನ್ನು ಜ್ಞಾಪಿಸಿಕೊಂಡರು. ಇಂಥ ಮಹಾನುಭಾವರು ಪಾಠ ಹೇಳಿ ಹೋದ ಈ ವೃತ್ತಿಗೆ ಗೌರವ ತರುವುದು ನನ್ನ ಜವಾಬ್ದಾರಿ ಎಂದು ಮುಂತಾಗಿ ಅವರು ಹೇಳುವಾಗ ನನಗೆ, ನಾನು ಪಡೆಯುತ್ತಿರುವ ಶಿಕ್ಷಣದ ಬಗ್ಗೆ ಹೆಮ್ಮೆ ಎನಿಸಿತು. ಎಂಥದೇ ಕಷ್ಟದಲ್ಲಿ ಚೆನ್ನಾಗಿ ಓದಬೇಕು. ಓದಿನಲ್ಲಿ ನನ್ನ ಎಲ್ಲ ನೋವು, ಅಪಮಾನಗಳನ್ನು ಮರೆಯಬೇಕು ಎಂದು ನಾನು ಅಂದೇ ತೀರ್ಮಾನಿಸಿದೆ.

(ಛಂದೋವಾಹಿನಿ ಕೃತಿ ಬಿಡಗಡೆ ಮತ್ತು ಹಿಪ್ಪರಗಿ ಅವರಿಗೆ ಸನ್ಮಾನ)

ಅವರು ಅಂದು ಸ್ವರ ಮತ್ತು ವರ್ಣಗಳ ಬಗ್ಗೆ ಹೇಳಿದರು. ಅವರು ಮನಂಬುಗುವಂತೆ ಹೇಳುತ್ತಿದ್ದರು. ನಾಲಿಗೆಯು ಬಾಯಿಯ ಯಾವುದೇ ಭಾಗಕ್ಕೆ ತಾಗದೆ ಉಚ್ಚರಿಸುವಂಥವು ಸ್ವರಗಳು ಎಂದು ಅವರು ಹೇಳಿದರು. ನಾನು ಕೂಡಲೆ ‘ಅ’ ದಿಂದ ‘ಳ’ದ ವರೆಗೆ ಎಲ್ಲ ಸ್ವರ ಮತ್ತು ವ್ಯಂಜನಗಳನ್ನು ಧ್ವನಿ ತೆಗೆಯದೆ ಉಚ್ಚರಿಸಿ ಪರೀಕ್ಷಿಸಿದೆ. ಸರ್ ‘ಹ’ ವ್ಯಂಜನ ಉಚ್ಚರಿಸುವಾಗ ನಾಲಗೆ, ಬಾಯಿಯ ಯಾವ ಭಾಗಕ್ಕೂ ತಾಗುವುದಿಲ್ಲ. ಹಾಗಾದರೆ ಅದು ವ್ಯಂಜನ ಹೇಗೆ? ಎಂದು ಅಳಕುತ್ತ ಕೇಳಿದೆ. ಅವರಿಗೆ ಒಂದುಕ್ಷಣ ಮಜಾ ಎನಿಸಿತು. ದುರ್ಬಲ ವ್ಯಂಜನವಾದ ‘ಹ’ ಉಚ್ಚರಿಸುವಾಗ ನಾಲಿಗೆಯ ಬುಡದಲ್ಲಿ ಆಗುವ ಪ್ರಕ್ರಿಯೆಯ ಬಗ್ಗೆ ವಿವರಿಸಿದರು. ನಮಗೆಲ್ಲ ಈ ವಿವರಣೆ ಹಿಡಿಸಿತು. ಹೀಗೆ ಅವರು ವಿದ್ಯಾರ್ಥಿಗಳ ಚಿಕಿತ್ಸಕ ಬುದ್ಧಿಗೆ ಎಂದೂ ನೀರೆರಚುತ್ತಿರಲಿಲ್ಲ. ಯಾವುದಾದರೂ ಸಂದಿಗ್ಧ ವಿಚಾರ ಬಂದರೆ ಮರುದಿನದ ತರಗತಿಯಲ್ಲಿ ವಿವರಿಸುವುದಾಗಿ ತಿಳಿಸುವ ಸೌಜನ್ಯ ಅವರದಾಗಿತ್ತು.

ಭಗೀರಥ ಒಬ್ಬ ಎಂಜನಿಯರ್, ಮಂತ್ರಗಳೆಂದರೆ ಡೆಫನೀಷನ್‌ಎಂದು ಹೇಳುತ್ತ ಪುರಾಣ ಕಲ್ಪನೆಗಳು ಮತ್ತು ಅಪೌರುಷೇಯ ವಿಚಾರಗಳ ಹಿಂದಿನ ಭೌತಿಕ ನೆಲೆಗಳನ್ನು ಗುರುತಿಸುವ ತರ್ಕಶಕ್ತಿಯನ್ನು ಅವರು ಹೊಂದಿದ್ದರು. ನಾಗರಿಕತೆಯ ಮಧ್ಯೆ ಬಂದ ಕುಟುಂಬ ವ್ಯವಸ್ಥೆ ಕೊನೆಯವರೆಗೂ ಉಳಿಯುವಂಥದ್ದೇನಲ್ಲ. ಅದರಲ್ಲಿ ಎಷ್ಟೇ ನ್ಯೂನತೆಗಳಿದ್ದರೂ ಮನುಷ್ಯನನ್ನು ಸಭ್ಯನನ್ನಾಗಿ ಮಾಡುವಲ್ಲಿ ಅದರ ಪಾತ್ರ ಹೆಚ್ಚು ಎಂಬುದು ಅವರ ಚಿಂತನೆಯ ಸೆಳಕು. ವಚನ ಸಾಹಿತ್ಯವನ್ನು ಅವರು ಸದಾ ಭೌತಿಕವಾದಿ ನೆಲೆಯಲ್ಲೇ ನೋಡಿದರು. ವಚನಕಾರರ ಧರ್ಮವನ್ನು ಸಂಪ್ರದಾಯಗಳ ಸಂಕೋಲೆಗಳಿಂದ ವಿಮುಕ್ತಗೊಳಿಸಬೇಕು ಎಂಬುದು ಅವರ ಆಶಯ. ಅವರು ವಚನಗಳನ್ನು ಅರ್ಥೈಸುವುದು ವೈಚಾರಿಕತೆಯ ನೆಲೆಗಟ್ಟಿನ ಮೇಲೆ. ಸಂಕೇತಗಳ ಹಿಂದಿನ ವಾಸ್ತವಗಳನ್ನು ಹುಡುಕುವುದು ಅವರಿಗೆ ಅತ್ಯಂತ ಪ್ರಿಯವಾದುದು. ಒಮ್ಮೆ ಅವರು ಅಕ್ಕಮಹಾದೇವಿಯ ಚಿತ್ರದ ಕುರಿತು ಹೇಳುತ್ತಿದ್ದರು. ಅಕ್ಕನ ಸುತ್ತಮುತ್ತ ಹುಲಿ, ಜಿಂಕೆ, ಮೊಲ ಮುಂತಾದವು ಜೊತೆಜೊತೆಯಾಗಿ ಇರುವ ಚಿತ್ರ ಅದು. ಮನುಷ್ಯರು ಪ್ರವೃತ್ತಿಗಳ ಮೇಲೆ ಹಿಡಿತ ಸಾಧಿಸಿದರೆ ಅವು ತಮ್ಮ ಮೂಲ ಗುಣಗಳನ್ನು ಕಳೆದುಕೊಳ್ಳುವವು ಎಂಬುದನ್ನು ಅವರು ಬಹಳ ಸೊಗಸಾಗಿ ವಿವರಿಸಿದ್ದರು. ಇದು ಶರಣ ಸಾಹಸ, ಬಹಳ ಕಠಿಣತಮವಾದುದು. ಅಂತೆಯೇ ಕೋಟಿಗೊಬ್ಬ ಶರಣ ಎಂಬುದು ನಿಜವಾದುದು ಎಂದು ಅಂದು ನನಗೆ ಅನಿಸಿತ್ತು.

ಹೊಸದೆಲ್ಲವನ್ನೂ ತೆರೆದ ಮನಸ್ಸಿನಿಂದ ನೋಡುವ ಅವರ ಕ್ರಮ ಅನುಕರಣೀಯವಾದುದು. ಹಳಗನ್ನಡ, ನಡುಗನ್ನಡ, ಹೊಸಗನ್ನಡ, ನವೋದಯ, ನವ್ಯ, ಬಂಡಾಯ ಹೀಗೆ ಎಲ್ಲದಕ್ಕೂ ಸ್ಪಂದಿಸುತ್ತಿದ್ದರು. ಎಲ್ಲವುಗಳಲ್ಲಿನ ಸತ್ವವನ್ನು ಕಂಡುಹಿಡಿಯುವವರು. ಪಂಪನ ಯುಗಧರ್ಮವನ್ನು ಅವರು ಅರ್ಥೈಸಿದ ರೀತಿ ಅನುಕರಣೀಯವಾಗಿದೆ. ನವೋದಯದ ಜೀವನ ಪ್ರೀತಿ, ನವ್ಯದ ಸ್ಫೋಟಕ ಸ್ವಭಾವ, ಬಂಡಾಯದ ಸಾಮಾಜಿಕ ಪ್ರಜ್ಞೆಕುರಿತು ಅವರ ಹಾಗೆ ಆಳವಾಗಿ ಮಾತನಾಡುವವರು ವಿರಳ. ಅಧ್ಯಯನ, ಅಧ್ಯಾಪನಗಳು ಅವರ ಬದುಕಿನ ರಥದ ಎರಡು ಗಾಲಿಗಳು. ವೈಚಾರಿಕತೆಯೇ ಈ ರಥವನ್ನು ಎಳೆಯುವ ಕುದುರೆ. ಅವರ ಬದುಕೆಂಬುದು ಅನುಭವದ ಆಗರ.

ಸಂಸ್ಥೆಯಲ್ಲಿ ಅದಾವುದೋ ಲೆಕ್ಕಾಚಾರದಿಂದ ಅವರಿಗೆ ಬಿ.ಎ.ತರಗತಿಗೆ ಪಾಠ ಹೇಳುವ ಅವಕಾಶ ತಪ್ಪಿಸಲು ಯತ್ನಿಸಲಾಯಿತು. ಅವರಿಗೆ ಇದೆಲ್ಲ ಅಪಮಾನವೆಂದು ಅನಿಸಲಿಲ್ಲ. ಅವರು ಯಾವುದೇ ರೀತಿಯ ಬೇಸರಪಟ್ಟುಕೊಳ್ಳದೆ ಸ್ಥಿತಪ್ರಜ್ಞರಾಗೇ ಉಳಿದರು. ಮೊದಲನೇ ಇಯತ್ತೆ ಕಲಿಸಿ ಬಂದವನಿಗೆ ಪಿಯುಸಿ ವಿದ್ಯಾರ್ಥಿಗಳಿಗೆ ಪಾಠ ಹೇಳುವ ಅವಕಾಶ ಕೂಡ ದೊಡ್ಡದೇ ಎಂದು ಅವರು ತಿಳಿಸಿದರು. ಅವರು ಹೊಗಳಿಕೆ-ತೆಗಳಿಕೆಗಳಿಗೆ ಅತೀತರಾಗಿ ಬದುಕನ್ನು ಕಂಡವರು. ಅದನ್ನು ಭಾವನಾತ್ಮಕವಾಗಿ ರಸಾತ್ಮಕವಾಗಿ ಅನುಭವಿಸಿದವರು. ಅವರ ಚಿಂತನಶೀಲತೆ ಸದಾ ಕ್ರಿಯಾಶೀಲತೆಯ ಜೊತೆ ಇರುವಂಥದ್ದು. ಅವರು ಹಳ್ಳಿಗರೊಂದಿಗೆ ಹಳ್ಳಿಗರಾಗಿ, ಮಕ್ಕಳೊಂದಿಗೆ ಮಕ್ಕಳಾಗಿ, ವಿದ್ವಾಂಸರೊಂದಿಗೆ ವಿದ್ವಾಂಸರಾಗಿ ಹಿತಮಿತ ಮೃದು ವಚನಗಳೊಂದಿಗೆ ಜನಮನ ಗೆದ್ದವರು.

ಅವರು ಶಿಕ್ಷಕರ ತರಬೇತಿ ಕೋರ್ಸ್‌ಗೆ ಸೇರಿದ್ದಾಗ ವೃದ್ಧರೊಬ್ಬರ ಮೇಲೆ ಸೈಕಲ್ ಹಾಯಿಸಿದ್ದರಂತೆ. ‘ಸೈಕಲ್ ಹೊಡೆಯುವುದು ಬಿಟ್ಟು ಎಮ್ಮಿ ಮ್ಯಾಲ ಹೋಗು’ ಎಂದೇನೋ ಆ ವೃದ್ಧ ಹೇಳಿದ್ದರಂತೆ. ಅಂದಿನಿಂದ ಅವರು ಜೀವನದಲ್ಲಿ ಯಾವ ವಾಹನ ಚಾಲನೆಯನ್ನೂ ಮಾಡಲಿಲ್ಲ. ಸೈಕಲ್ ಸವಾರಿ ಮಾಡುವುದನ್ನು ಅಂದೇ ಬಿಟ್ಟರು! ಅವರು ಎಷ್ಟೊಂದು ಸೂಕ್ಷ್ಮಮತಿ ಎಂದರೆ ಸಾಯಂಕಾಲ ಸೋಮನಾಥ ಬೀಳಗಿ ಅವರ ಜವಳಿ ಅಂಗಡಿಯಲ್ಲಿ ಕುಳಿತಾಗ ಗಿರಾಕಿಗಳಿಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸುವವರು. ಸಂಗೀತಪ್ರಿಯರೂ ವಿದ್ವಜ್ಜನಪ್ರಿಯರೂ ಆದ ಬೀಳಗಿ ಮಾಮಾ (ಬೀಳಗಿ ಭೋಜಣ್ಣನವರು) ಮಾತನಾಡುವುದು ಕಡಿಮೆ. ಆದರೆ ಮಾತುಗಳನ್ನು ಕೇಳುವಲ್ಲಿ ಆಸಕ್ತರು. ಹೆಚ್ಚಾಗಿ ಸಾಯಂಕಾಲ ಅವರ ಅಂಗಡಿಯಲ್ಲಿ ಪ್ರೊ. ಸುಶೀಲಾ ಪಟ್ಟಣಶೆಟ್ಟಿ, ಪ್ರೊ. ಹಿಪ್ಪರಗಿ, ಪ್ರೊ. ಸಾರಂಗಮಠ, ಪ್ರೊ. ಸುರಪುರ ಮುಂತಾದ ಅವರ ಆಪ್ತಮಿತ್ರರು ಸೇರುವುದು ವಾಡಿಕೆ. ನಾನೂ ಸೇರಿದಾಗ ಮಾಮಾ ಜೊತೆ ಮಾತನಾಡುತ್ತಲೇ ಇರುವುದು ನನ್ನ ಅಭ್ಯಾಸ. ಆಗ ಗಿರಾಕಿಗಳು ಹೆಚ್ಚಿಗೆ ಬರುತ್ತಿದ್ದರೆ ಪ್ರೊ. ಹಿಪ್ಪರಗಿ ಅವರು ‘ಜಾಗ ಖಾಲಿ ಮಾಡುವ’ ಸೂಚನೆ ನೀಡುತ್ತಿದ್ದರು. ಮೊದಮೊದಲು ಅವರಿಗೆ ತಡವಾಗುತ್ತಿದೆ ಎಂದೇ ಭಾವಿಸುತ್ತಿದ್ದೆ. ಹೀಗೆ ಅವರು ನಮಗೆ ಅನೇಕ ವಿಷಯಗಳನ್ನು ಹೇಳದೆ ಕೂಡ ಕಲಿಸಿದ್ದಾರೆ. ಬೀಳಗಿ ಅವರ ಅಂಗಡಿಯಲ್ಲಿ ಸಾಹಿತ್ಯ, ಸಂಸ್ಕೃತಿ, ಇತಿಹಾಸ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ಚರ್ಚೆಗಳು ಕೂಡ ನನ್ನ ಬೆಳವಣಿಗೆಗೆ ಕಾರಣವಾಗಿವೆ.

ನಾನು ಎರಡನೆ ಬಿ.ಎ.ಗೆ ಸೇರಿದ ವರ್ಷ ವಿಜಾಪುರದ ಸ್ಟೇಷನ್ ರೋಡಿನ ‘ಆಲ್‌ಮೇಲ್ ಹೌಸ್’ನಲ್ಲಿ ಇದ್ದಾಗ ನಾನು ಪ್ರತಿದಿನವೂ ಮನೆಗೆ ಹೋಗುತ್ತಿದ್ದೆ. ಮುಂದೆ ಸ್ವಲ್ಪದೂರ ಹೋದರೆ ಪ್ರೊ. ಬಿ. ಬಿ. ನಾಡಗೌಡರ ಮನೆ, ನನ್ನ ಸಹಪಾಠಿ ಶ್ರೀನಿವಾಸ ಕುಲಕರ್ಣಿ ಹೇಳುತ್ತಿದ್ದ, ‘ಪ್ರೊ. ಹಿಪ್ಪರಗಿ ನಮ್ಮ ತಂದೆ, ಪ್ರೊ. ನಾಡಗೌಡರು ನಮ್ಮ ತಾಯಿ’ ಎಂದು. ನಾವೆಲ್ಲ ಇವರ ಮನೆಯ ಮಕ್ಕಳೇ ಆಗಿಬಿಟ್ಟೆವು. ನಮ್ಮ ಊಟ, ತಿಂಡಿ, ಮಲಗುವುದು ಸಾಕಷ್ಟು ಬಾರಿ ಪ್ರೊ. ಹಿಪ್ಪರಗಿ ಅವರ ಮನೆಯಲ್ಲೇ ಆಗುತ್ತಿತ್ತು. ಅವರಿಗೆ ನಾವು ‘ಅಪ್ಪ’ ಎಂದೇ ಕರೆಯುತ್ತಿದ್ದೆವು.

ಹಬ್ಬಹರಿದಿನಗಳಲ್ಲಿ ಪ್ರೊ. ನಾಡಗೌಡ ಅವರ ಮನೆಯಲ್ಲಿ ಊಟ ಮಾಡುವುದು ನನಗೆ ಸಂಪ್ರದಾಯವಾಗಿತ್ತು. ಅವರು ಶಿಸ್ತಿನ ಸಂಕೇತ. ನಾನು ಹೋಗುವವರೆಗೂ ಪ್ರೊ. ನಾಡಗೌಡರು ಊಟ ಮಾಡುತ್ತಿರಲಿಲ್ಲ. ‘ನೀನೆ ನಮ್ಮ ಸ್ವಾಮಿ’ ಎಂದು ಅವರು ತಮಾಷೆ ಮಾಡುತ್ತಿದ್ದರು. ಅವರ ಮನೆಯಲ್ಲಿನ ಗ್ರಂಥಾಲಯ ನಮಗೆ ಜ್ಞಾನದ ಅಕ್ಷಯಪಾತ್ರೆಯಂತೆ ಅನಿಸುತ್ತಿತ್ತು. ಅದು ನಾಡಿನ ಕೆಲವೇ ಶ್ರೇಷ್ಠ ಗೃಹಗ್ರಂಥಾಲಯದಲ್ಲಿ ಒಂದು ಎಂದು ಹೇಳಿದರೆ ಅತಿಶಯೋಕ್ತಿ ಅಲ್ಲ. ಹೀಗೆ ನನಗೆ ಒಂದುರೀತಿಯ ಗುರುಕುಲ ಶಿಕ್ಷಣ ಸಿಕ್ಕಿತು. ಇವರೆಲ್ಲ ನಮಗೆ ಎಂಥ ಆಳವಾದ ಜ್ಞಾನವನ್ನು ಧಾರೆಯೆರೆದಿದ್ದರೆಂದರೆ, ನಾನು ಬಿ.ಎ. ವಿದ್ಯಾರ್ಥಿಯಾಗಿದ್ದಾಗ ಎಂ.ಎ. ಪರೀಕ್ಷೆಗೆ ಹೊರಗಿನಿಂದ ಕುಳಿತ ಹೈಸ್ಕೂಲ್ ಶಿಕ್ಷಕರಿಗೆ ಮತ್ತು ಇತರರಿಗೆ ‘ಶಬ್ದಮಣಿದರ್ಪಣ’ಕ್ಕೆ ಸಂಬಂಧಿಸಿದಂತೆ ಟ್ಯುಷನ್ ಹೇಳುತ್ತಿದ್ದೆ.

ಪ್ರೊ. ಹಿಪ್ಪರಗಿ ಅವರ ಜೊತೆ ವಾಕ್ ಮಾಡುವಾಗ, ಊಟ ಮಾಡುವಾಗ, ಕುಳಿತಾಗ, ನಿಂತಾಗ ಮತ್ತು ಒಂದೇ ಕೋಣೆಯಲ್ಲಿ ಮಲಗಿದಾಗ ನಾನು ವಿವಿಧ ವಿಷಯಗಳ ಬಗ್ಗೆ ಮಾತನಾಡುತ್ತಲೇ ಇದ್ದೆ. ಅವರು ನನ್ನ ತವನಿಧಿ. ಅವರು ಮಾತುಗಳ ಮೂಲಕ ಪ್ರತಿಮೆಗಳನ್ನು ಸೃಷ್ಟಿಸುತ್ತಾರೆ. ಸಂಕೇತ, ಪ್ರತೀಕಗಳ ಒಳಗನ್ನು ಬಿಚ್ಚಿಡುತ್ತಾರೆ. ಧ್ವನಿಪೂರ್ಣವಾದ ಚಿಂತನಾ ಲಹರಿ ಅವರದು. ಭಾಸನ ಪ್ರತಿಮಾ ನಾಟಕದಲ್ಲಿ ದಶರಥನ ನಿಧನದ ನಂತರ ಬಂದ ಭರತನಿಗೆ ಆತನ ನಿಧನದ ಬಗ್ಗೆ ಗೊತ್ತಿರುವುದಿಲ್ಲ. ಆದರೆ ಪೂರ್ವಜರ ಪ್ರತಿಮೆಗಳ ಸಾಲಿನಲ್ಲಿ ದಶರಥನ ಪ್ರತಿಮೆ ಇರುತ್ತದೆ. ಭರತ ಇದನ್ನು ಖಚಿತಪಡಿಸಿಕೊಳ್ಳಲು ಪದೇ ಪದೇ ಪ್ರತಿಮೆಗಳ ಲೆಕ್ಕ ಹಾಕುತ್ತಾನೆ. ಆಗಿನ ಭರತನ ಮನಸ್ಥಿತಿಯನ್ನು ಮನಂಬುಗುವಂತೆ ವರ್ಣಿಸುವ ಸಾಮರ್ಥ್ಯ ಹಿಪ್ಪರಗಿ ಗುರುಗಳಂಥವರಿಗೆ ಮಾತ್ರ ಇರುತ್ತದೆ. ವನವಾಸಕ್ಕೆ ಬೀಳ್ಕೊಡಲು ಬಂದ ಸಹಾಯಕ ರಾಮನಿಗೆ ಕೇಳುತ್ತಾನೆ ‘ದಶರಥ ಮಹಾರಾಜರಿಗೆ ಏನು ಹೇಳಲಿ?’ ಎಂದು. ಆಗ ಮೌನವೇ ರಾಮನ ಉತ್ತರವಾಗುತ್ತದೆ. ಇಂಥ ಧ್ವನಿಪೂರ್ಣ ಪ್ರಸಂಗಗಳನ್ನು ಮೂರು ದಶಕಗಳು ಕಳೆದರೂ ಮನದಲ್ಲಿ ಅಚ್ಚೊತ್ತುವ ಹಾಗೆ ಕಲಿಸಿದ್ದಾರೆ.

(ಪ್ರೋ. ಎ.ಎಸ್. ಹಿಪ್ಪರಗಿ)

ಅವರು ರಸ ಸಿದ್ಧಾಂತದ ಬಗ್ಗೆ ಪಾಠ ಹೇಳುವಾಗ ತರಗತಿಯಲ್ಲಿ ರಸದ ಹೊನಲು ಹರಿಯುವ ಭಾಸವಾಗುತ್ತಿತ್ತು. ಅದು ನನ್ನ ಬದುಕಿನ ಅವಿಸ್ಮರಣೀಯ ದಿನವಾಗಿ ಉಳಿದಿದೆ. ಭರತನ ನಾಟ್ಯಶಾಸ್ತ್ರದಲ್ಲಿ ಬರುವ “ವಿಭಾವಾನುಭಾವ ವ್ಯಭಿಚಾರೀ ಸಂಯೋಗಾತ್ ರಸನಿಷ್ಪತ್ತಿಃ” ಬಗ್ಗೆ ಅವರು ವಿವರಿಸುತ್ತಿದ್ದರು. ರಸ ನಿಷ್ಪತ್ತಿಯಾಗಬೇಕಾದರೆ ವಿಭಾವ, ಅನುಭಾವ, ವ್ಯಭಿಚಾರಿ ಭಾವಗಳು ಸ್ಥಾಯಿಭಾವದಜೊತೆ ಸಂಯೋಗವಾಗಬೇಕು. ಆದರೆ ಸ್ಥಾಯಿಭಾವ ಇಲ್ಲಿ ಅಧ್ಯಾಹಾರವಾಗಿದೆ. ಈ ಸೂಕ್ಷ್ಮವನ್ನು ಪ್ರೊ. ಹಿಪ್ಪರಗಿ ಅವರು ಬಹಳ ಚೆನ್ನಾಗಿ ವಿವರಿಸಿದ್ದು ಇನ್ನೂ ನೆನಪಿದೆ. ರಂಗಮಂಚದ ಮೇಲೆ ಭಾವ ಇರುವುದಿಲ್ಲ. ಅದು ಸಹೃದಯನಾಗಿ ಕುಳಿತಿರುವ ಪ್ರೇಕ್ಷಕನಲ್ಲಿ ಇರುತ್ತದೆ. ಆತನ ಭಾವವು ರಂಗಮಂಚದ ಮೇಲಿನ ಅಭಿನಯದಿಂದ ಹೊರಹೊಮ್ಮುವ ವಿಭಾವ, ಅನುಭಾವ ಮತ್ತು ವ್ಯಭಿಚಾರಿ ಭಾವಗಳೊಡನೆ ಸಂಯೋಗ ಹೊಂದಿದಾಗ ಆತನಲ್ಲಿ ರಸ ನಿಷ್ಪತ್ತಿಯಾಗುತ್ತದೆ. ರಂಗಮಂಚದ ಮೇಲೆ ಭಾವವೂ ಇಲ್ಲ, ರಸವೂ ಇಲ್ಲ ಎಂದು ಅವರು ವಿವರಿಸಿದ್ದರು. ‘ಅಭಿಜ್ಞಾನ ಶಾಕುಂತಲ’ ನಾಟಕ ನೋಡುವ ಬಾಲಕನಿಗೆ ಶೃಂಗಾರ ರಸದ ಅನುಭವವಾಗುವುದಿಲ್ಲ. ಏಕೆಂದರೆ ಆತನಲ್ಲಿ ರತಿ ಭಾವದ ಸೃಷ್ಟಿಯಾಗಿರುವುದಿಲ್ಲ ಎಂದು ಅವರು ತಿಳಿಸಿದ್ದರು. ಹೀಗೆ ಅವರ ತರಗತಿಗಳು ನವನವೋನ್ಮೇಷಶಾಲಿನಿಯಾಗಿರುತ್ತಿದ್ದವು. ಅಭಿಜ್ಞಾನ ಶಾಕುಂತಲದ ಉಂಗುರ ಪ್ರಸಂಗವನ್ನು ಅವರು ವಿವರಿಸಿದ್ದ ರೀತಿ ಅನುಪಮವಾಗಿದೆ. ಅವರ ನಿಜವಾದ ಸ್ತ್ರೀವಾದಿ ಧೋರಣೆಗೆ ಸಾಕ್ಷಿಯಾಗಿದೆ.

ಹೆಣ್ಣನ್ನು ಗಂಡು ಸದಾ ಮೋಸ ಮಾಡುತ್ತ ಬಂದಿದ್ದಾನೆ. ಉಂಗುರ ಪ್ರಸಂಗ ಒಂದು ನೆಪ ಮಾತ್ರ. ದುಷ್ಯಂತನ ವಿಸ್ಮೃತಿಯಲ್ಲಿ ಗಂಡಸಿನ ಬೇಜವಾಬ್ದಾರಿತನ ಮನೆ ಮಾಡಿದೆ. ಶಕುಂತಲೆ ರಾಜಧಾನಿಗೆ ಬರುವುದು, ನೈಸರ್ಗಿಕ ವ್ಯವಸ್ಥೆಯಿಂದ ನಾಗರಿಕ ವ್ಯವಸ್ಥೆಗೆ ಬರುವುದೇ ಆಗಿದೆ. ಈ ನಾಗರಿಕ ವ್ಯವಸ್ಥೆಯ ಶಿಷ್ಟಾಚಾರಗಳು ಕೃತ್ರಿಮವಾಗಿವೆ ಎಂಬುದನ್ನು ಅರಿಯಲು ಆಕೆಗೆ ಬಹಳ ಸಮಯ ಹಿಡಿಯಲಿಲ್ಲ. ದುಷ್ಯಂತನ ಮರೆವಿನಿಂದಾಗಿ ಆಸ್ಥಾನದಲ್ಲಿ ಅವಮಾನಿತಳಾದ ಅವಳು ಒಂದೇ ಒಂದು ಪದ ಬಳಸಿದಳು, ‘ಅನಾರ್ಯ’ ಎಂದು. ಇದು ನಾಗರಿಕತೆಯ ಮೇಲೆ ಬರೆದ ಷರಾ ಆಗಿದೆ. ಹೀಗೆ ಅವರ ಪಾಠಗಳು ಬಹುಮುಖಿ ಜ್ಞಾನದ ದರ್ಶನ ಮಾಡಿಸುತ್ತಿದ್ದವು.

ಅವರು ಐದು ನಿಮಿಷ ಅವಕಾಶ ಸಿಕ್ಕರೂ ಸಣ್ಣ ನಿದ್ದೆ ಮಾಡಿಬಿಡುತ್ತಿದ್ದರು. ರಾತ್ರಿ ಅನೇಕ ಬಾರಿ ಎಚ್ಚರಗೊಳ್ಳುತ್ತಿದ್ದರು. ಅವರು ಎದ್ದಾಗಲೆಲ್ಲ ಅವರ ಜೊತೆಚರ್ಚೆ ಮಾಡುವ ಅವಕಾಶ ಲಭಿಸುತ್ತಿತ್ತು. ಒಂದು ಸಲ ಅವರು ಧಾರವಾಡಕ್ಕೆ ಬಂದಾಗ ನೆಲದ ಮೇಲೆ ಮಲಗಬಯಸಿದರು. ನಾನು ಕಾಟ್ ಮೇಲೆ ಮಲಗಬೇಕಾಯಿತು. ರಾತ್ರಿ ಬಹಳ ಹೊತ್ತಿನವರೆಗೆ ಚರ್ಚೆ ಮಾಡಿದೆವು. ಧಾರವಾಡಕ್ಕೆ ಎಂ.ಎ. (ಭಾಷಾವಿಜ್ಞಾನ) ಓದಲು ಬಂದಿದ್ದ ನಾನು ಅವರ ತರಗತಿಗಳಿಂದ ದೂರವಾಗಿದ್ದೆ. ಬದುಕಿನಲ್ಲಿ ಬಹಳ ಮಹತ್ವದ್ದನ್ನು ಕಳೆದುಕೊಂಡಿದ್ದೆ. ಅವರು ಮರುದಿನ ವಿಜಾಪುರಕ್ಕೆ ವಾಪಸ್ಸಾಗುವವರಿದ್ದರು. ಹೀಗಾಗಿ ಇಡೀ ರಾತ್ರಿ ಎಚ್ಚರವಾಗಿದ್ದೆ. ಅವರು ಪದೇ ಪದೇ ಎಚ್ಚರಗೊಂಡಾಗಲೆಲ್ಲ ಚರ್ಚೆ ಮಾಡುವ ಅವಕಾಶ ಲಭಿಸುತ್ತಿತ್ತು. ಇಂಥ ಅನೇಕ ಸುಂದರ ಕ್ಷಣಗಳಿವೆ.

ನಾನು ಎಂ.ಎ. ಓದಲು ಧಾರವಾಡಕ್ಕೆ ಬಂದಾಗ ಒಂದು ಆಶ್ಚರ್ಯ ಕಾದಿತ್ತು. ಎಂ.ಎ. ಸಿಲೆಬಸ್ ನೋಡಿದೆ. ಈ ವಿಷಯಗಳಲ್ಲಿ ಬಹುಪಾಲನ್ನು ಈಗಾಗಲೇ ಓದಿ ಮುಗಿಸಿದ್ದೇನಲ್ಲ ಎಂಬ ಭಾವ ಮೂಡಿತು. ಪ್ರೊ. ಹಿಪ್ಪರಗಿ ಅವರು ಎಂ.ಎ. ವಿದ್ಯಾರ್ಥಿಗಳಿಗೆ ವಿಜಾಪುರದಲ್ಲಿ ಮನೆಪಾಠ ಹೇಳುವಾಗ ನಾನು ಅಲ್ಲಿಯೂ ಹಾಜರಾಗುತ್ತಿದ್ದೆ. ಪಂಪಭಾರತ, ಗಿರಿಜಾಕಲ್ಯಾಣ ಮುಂತಾದ ಮಹಾಕಾವ್ಯಗಳು ನನಗೆ ಹೀಗೆ ಪರಿಚಯವಾದವು. ಮನೋಹರ ಗ್ರಂಥಮಾಲೆಯ ಮೂಲಕ ನವ್ಯಕಾವ್ಯದ ಪರಿಚಯವಾಯಿತು. ಅವರು ಮನೋಹರ ಗ್ರಂಥಮಾಲೆಯ ಪುಸ್ತಕಗಳನ್ನೆಲ್ಲ ಕೊಳ್ಳುತ್ತಿದ್ದರು. ಮನೋಹರ ಗ್ರಂಥಮಾಲೆಯ ಜಿ. ಬಿ. ಜೋಷಿ ಅವರನ್ನು ನಾನು ಮೊದಲ ಬಾರಿಗೆ ಅವರ ಮನೆಯಲ್ಲೇ ನೋಡಿದ್ದು. ಜೋಷಿ ಅವರ ಜೊತೆ ಅವರು ಅದ್ಭುತರಸದ ಕುರಿತು ಮಾತನಾಡುತ್ತಿದ್ದರು. ಇಂದಿನ ವಿಜ್ಞಾನ ಮತ್ತು ತಂತ್ರಜ್ಞಾನ ಯುಗದ ಆವಿಷ್ಕಾರಗಳ ಹಿನ್ನೆಲೆಯಲ್ಲಿ ಅದ್ಭುತರಸದ ಬಗ್ಗೆ ಮುಖ್ಯವಾಗಿ ಮಕ್ಕಳಲ್ಲಿ ಯಾವರೀತಿ ಪ್ರಜ್ಞೆ ಮೂಡಿಸಲು ಸಾಧ್ಯ ಎಂಬುದನ್ನು ಅವರು ವಿವರಿಸಿದ್ದರು. ವೈಜ್ಞಾನಿಕ ಕಥೆ-ಕಾದಂಬರಿಗಳನ್ನು ಪ್ರಕಟಿಸಲು ಸೂಚಿಸಿದ್ದರು.

ಜನಸಾಮಾನ್ಯರ ಶಕ್ತಿಯಲ್ಲಿ ಮತ್ತು ಜ್ಞಾನ ಶಕ್ತಿಯಲ್ಲಿ ಅವರಿಗೆ ಅಪಾರವಾದ ನಂಬಿಕೆ ಇದೆ. ಒಬ್ಬ ವಕೀಲನಿಗೆ ತನ್ನ ಕ್ಷೇತ್ರದಲ್ಲಿನ ಎಷ್ಟು ಶಬ್ದಗಳು ಗೊತ್ತಿವೆಯೋ ಅದಕ್ಕಿಂತ ಹೆಚ್ಚಿನ ಶಬ್ದಗಳು ಮೀನುಗಾರನಿಗೆ ಅವನ ಸಮುದ್ರ ಸಂಬಂಧದಿಂದ ಗೊತ್ತಾಗುತ್ತವೆ ಎಂದು ಅವರು ಹೇಳಿದ್ದರು. ಆತನಿಗೆ ವಿವಿಧ ಜಾತಿಯ ಜಲಚರಗಳು, ಗಾಳಿ, ಮೋಡಗಳು, ತೆರೆಗಳು, ಕಾಲ ಮತ್ತು ದಿನಮಾನಗಳ ಪರಿಚಯವಿರುತ್ತದೆ. ಅವನ ಇಡೀ ಬದುಕೇ ನಿಸರ್ಗಮಯವಾಗಿರುತ್ತದೆ. ಅವನಿಗೆ ಸ್ವಾನುಭವದಿಂದಲೇ ಜ್ಞಾನ ಲಭಿಸಿರುತ್ತದೆ ಎಂದು ಮೀನುಗಾರನ ಹಿರಿಮೆಯನ್ನು ಮೆರೆಯುತ್ತಿದ್ದರು.

ಒಬ್ಬ ತರಕಾರಿ ಮಾರುವವನಿಗೆ ಇರುವ ಮನೋವೈಜ್ಞಾನಿಕ ಅನುಭವ ಸ್ವತಃ ಮನೋವಿಜ್ಞಾನಿಗೆ ಇರುವುದಿಲ್ಲ ಎಂದು ಅವರು ಹೇಳುತ್ತಿದ್ದರು. ಬದುಕಿನ ಎಲ್ಲ ಸ್ತರದ ಜನರ ಜೊತೆ ಅವರು ಆತ್ಮೀಯ ಸಂಬಂಧವನ್ನು ಹೊಂದಿದ್ದರು. ಅವರಿಗೆ ತರಕಾರಿ ಖರೀದಿ ಕೂಡ ಆನಂದದಾಯಕವಾದುದಾಗಿತ್ತು. ತರಕಾರಿ ಖರೀದಿಸುವಾಗ ವಸ್ತುಗಳ ರೇಟ್ ಕೇಳುವುದಾಗಲೀ, ಬೆಲೆ ಇಳಿಸು ಎಂದು ಹೇಳುವುದಾಗಲೀ ಮಾಡುತ್ತಿರಲಿಲ್ಲ. ಬಾಗವಾನರಿಗೆ ಅವರ ಬಗ್ಗೆ ತುಂಬ ಗೌರವ. ಅವರನ್ನು ವಿನಮ್ರವಾಗಿ ಸ್ವಾಗತಿಸುತ್ತಿದ್ದರು. ಒಳ್ಳೆಯ ಕಾಯಿಪಲ್ಲೆಗಳನ್ನು ಎಚ್ಚರಿಕೆಯಿಂದ ಆರಿಸಿಕೊಡುತ್ತಿದ್ದರು. ಅವರು ಸದಾ ಸಾಮಾನ್ಯರಲ್ಲಿ ಅತಿ ಸಾಮಾನ್ಯರಾಗೇ ಬದುಕಿದರು. ಆದರೆ ಸಮಾಜದ ಎಲ್ಲ ಜಾತಿ, ವರ್ಗ ಮತ್ತು ಧರ್ಮಗಳ ಜನರು ಅವರಿಗೆ ಅಸಾಮಾನ್ಯವಾದ ಗೌರವವನ್ನು ನೀಡುತ್ತಲೇ ಬಂದರು. ವಿಜಾಪುರದ ಪ್ರಸಿದ್ಧ ಸರ್ಜನ್ ಆಗಿದ್ದ ಡಾ. ಎಸ್. ಎಫ್. ಪಾಟೀಲರು ತಮ್ಮ ಮನೆತನದ ಯಾವುದೇ ಆಗುಹೋಗುಗಳ ಬಗ್ಗೆ. ಪ್ರೊ. ಹಿಪ್ಪರಗಿ ಅವರ ಬಳಿ ಸಲಹೆ ಕೇಳಲು ಕಾತರರಾಗಿರುತ್ತಿದ್ದರು. ಅವರು ಎಂಥ ಸಜ್ಜನರಾಗಿದ್ದರೆಂದರೆ ಪ್ರೊ. ಹಿಪ್ಪರಗಿ ಅವರ ಜೊತೆ ಇರುತ್ತಿದ್ದ ನನ್ನಂಥ ಹುಡುಗರನ್ನೂ ಪ್ರೀತಿ ವಿಶ್ವಾಸದಿಂದ ಕಾಣುತ್ತಿದ್ದರು. ಯಾವುದೇ ಹಣ ತೆಗೆದುಕೊಳ್ಳದೇ ನಮ್ಮ ಆರೋಗ್ಯ ತಪಾಸಣೆ ಮಾಡುತ್ತಿದ್ದರು ಮತ್ತು ಔಷಧಿ ಕೊಡುತ್ತಿದ್ದರು. ಪ್ರೊ. ಹಿಪ್ಪರಗಿ ಅವರು ಅಧ್ಯಯನ, ಅಧ್ಯಾಪನದ ಜೊತೆ ಜನರ ಕಷ್ಟ-ಸುಖಗಳಲ್ಲಿ ಸದಾ ಭಾಗಿಯಾಗುವ ಗುಣವನ್ನು ಹೊಂದಿದ್ದರು. ಛಂದಸ್ಸು, ವ್ಯಾಕರಣದ ಜೊತೆ ಅವರು ತಮ್ಮ ನೆನಪುಗಳನ್ನು ದಾಖಲಿಸಿದರೆ, ಕನ್ನಡ ಸಾರಸ್ವತ ಲೋಕಕ್ಕೊಂದು ಅನುಪಮ ಕಾಣಿಕೆಯಾಗುವುದರಲ್ಲಿ ಸಂಶಯವಿಲ್ಲ.

ಮದುವೆಯಲ್ಲಿ, ಮರಣದಲ್ಲಿ, ಕೌಟುಂಬಿಕ ಭಿನ್ನಾಭಿಪ್ರಾಯಗಳನ್ನು ಬಗೆಹರಿಸುವಲ್ಲಿ ಅವರು ಭಾಗಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಅವರು ಸಹಾಯ ಮಾಡಿದ್ದನ್ನು ಎಂದೂ ಹೇಳುವವರಲ್ಲ. ಅದೆಷ್ಟೋ ಬಡವರ ಮದುವೆಗಳಿಗೆ, ರೋಗಿಗಳಿಗೆ ಅವರು ಸಹಾಯ ಮಾಡಿದ್ದಾರೆ, ಅದೆಷ್ಟೋ ಬಾರಿ ಶ್ರೀಮಂತರ ಮನೆಗಳಲ್ಲಿನ ಭಿನ್ನಾಭಿಪ್ರಾಯಗಳನ್ನು ಅವರು ಬಗೆಹರಿಸಿದ್ದಾರೆ. ಆದರೆ ಅವರೆಂದೂ ತಾವು ಹೇಳಿದ ಹಾಗೆಯೇ ನಡೆಯಬೇಕು ಎಂಬ ಭಾವ ತಾಳಿದವರಲ್ಲ. ಅವರು ತಮ್ಮ ಮಕ್ಕಳಿಗೂ ಆದೇಶ ನೀಡಿದವರಲ್ಲ. ಪ್ರಜಾಪ್ರಭುತ್ವವು ಅವರ ಮನದಲ್ಲಿ ಮನೆ ಮಾಡಿತ್ತು.

(ಹಿಪ್ಪರಗಿ ದಂಪತಿ ಅಮೀನಪ್ಪ- ಶಿವಲಿಂಗಮ್ಮ)

“ನನಗೆ ಕನ್ನಡ ವ್ಯಾಕರಣ ಇತ್ಯಾದಿ ಗೊತ್ತಿಲ್ಲ. ಕನ್ನಡ ಸಾಹಿತ್ಯವನ್ನು ಕೂಡ ಹೆಚ್ಚಾಗಿ ಓದಿಕೊಂಡಿಲ್ಲ. ನಾನು ಕನ್ನಡವನ್ನು ಪ್ರಧಾನ ವಿಷಯವಾಗಿ ತೆಗೆದುಕೊಳ್ಳಬಹುದೆ ಸರ್” ಎಂದು ಅಳಕುತ್ತಲೇ ಕೇಳಿದೆ. “ರಠಈಕ ಬಂದರೆ ಸಾಕು” ಎಂದರು. ನನಗೆ ಬಹಳ ಖುಷಿಯಾಯಿತು. ಥ್ಯಾಂಕ್ಸ್ ಹೇಳಿದ ನಂತರ ನೇರವಾಗಿ ಕಾಲೇಜಿನ ಕಚೇರಿಗೆ ಹೋಗಿ ಅರ್ಜಿ ಫಾರ್ಮ್‌ನಲ್ಲಿ ಕನ್ನಡವನ್ನು ಮೇಜರ್ ವಿಷಯವಾಗಿ ಹಿಂದಿ ಮತ್ತು ಸಂಸ್ಕೃತಗಳನ್ನು ಮೈನರ್ ವಿಷಯಗಳಾಗಿ ಬದಲಾಯಿಸಿದೆ.

ಭಾಷೆ ಮತ್ತು ಸಾಹಿತ್ಯದ ಮೇಲೆ ಏಕಕಾಲಕ್ಕೆ ಪ್ರಭುತ್ವ ಸಾಧಿಸಿದವರು ಬಹಳ ಕಡಿಮೆ. ತುಂಬ ಒಳ್ಳೆಯ ಭಾಷಾ ಶಿಕ್ಷಕರು ಸಾಹಿತ್ಯದ ಮೇಲೆ ಹಿಡಿತ ಸಾಧಿಸಿರುವುದಿಲ್ಲ. ಅದೇರೀತಿ ತುಂಬಾ ಒಳ್ಳೆಯ ಸಾಹಿತ್ಯ ಶಿಕ್ಷಕರು ಭಾಷೆಯ ಮೇಲೆ ಹಿಡಿತ ಸಾಧಿಸಿರುವುದಿಲ್ಲ. ಪ್ರೊ. ಹಿಪ್ಪರಗಿ ಅವರು ವ್ಯಾಕರಣ ಮತ್ತು ಛಂದಸ್ಸನ್ನು ಕಲಾತ್ಮಕವಾಗಿ ಹೇಳುವವರು. ಅವರು ಮತ್ತೇಭವಿಕ್ರೀಡಿತ ವೃತ್ತದ ವರ್ಣನೆ ಮಾಡುವಾಗ ಅದಕ್ಕೆ ಸಂಬಂಧಿಸಿದ ಉದಾಹರಣೆ ನೀಡುವಾಗ ಮದಗಜವೊಂದು ಜಲಕ್ರೀಡೆಯಾಡುತ್ತಿರುವ ಭಾಸವಾಗುತ್ತಿತ್ತು. ಅವರು 2ನೇ ಬಿ.ಎ. ಗೆ ಇದ್ದ 13 ವೃತ್ತಗಳನ್ನು ಮರೆಯದಂತೆ ಕಲಿಸಿದ್ದರು. ಅಲಂಕಾರಗಳ ಬಗ್ಗೆ ಹೇಳುವಾಗ ಕವಿಯು ಕಾವ್ಯದ ಆತ್ಮಸೌಂದರ್ಯವನ್ನು ಮರೆಮಾಡುವ ರೀತಿಯಲ್ಲಿ ಅಲಂಕಾರಗಳನ್ನು ಬಳಸಬಾರದು ಎನ್ನುತ್ತಿದ್ದರು. ನೆರೂದಾ ಕವನಗಳನ್ನು ಓದುವಾಗ ಅವುಗಳ ಆತ್ಮದರ್ಶನವಾಗುವುದು ಇಂಥ ಎಚ್ಚರಿಕೆಯಿಂದಲೇ.

ಕೇಶಿರಾಜನ ಶಬ್ದಮಣಿದರ್ಪಣದ ಬಗ್ಗೆ ಅವರಿಗೆ ಎಲ್ಲಿಲ್ಲದ ಪ್ರೀತಿ. ಕೇಶಿರಾಜ ಆಯ್ಕೆ ಮಾಡಿದ ಪ್ರಯೋಗಗಳು ಆತನೊಳಗಿನ ಕಾವ್ಯ ಶಕ್ತಿಯದ್ಯೋತಕವಾಗಿವೆ. ಆ ಪ್ರಯೋಗಗಳ ಮೂಲಕ ಆತನ ಜೀವನದರ್ಶನವನ್ನು ಅರಿಯಲು ಪ್ರಯತ್ನಿಸುತ್ತಿದ್ದರು. ಪ್ರಯೋಗಗಳು ಬೇರೆ ಕವಿಗಳದ್ದಾಗಿದ್ದರೂ ಆಯ್ಕೆಯ ಅಭಿರುಚಿ ಗಮನಾರ್ಹವಾದುದು. ‘ಪೊನ್ನುಳ್ಳವನೇ ಕುಲೀನಂ’, ‘ಕಳ್ಸವಿಗೆ ಮನಸೋತು ಧನಮೆಲ್ಲಮಮಂ ಸೂರೆಗೊಂಡು…..’, ‘ಇತ್ತುದಂ ನೆನೆವನೆ? ಛಿ ಅದಂ ನೆನೆಯಂ’, ‘ನೇಸರ ಮೂಡಿದುದು ಬಕಂಗೆ ಮಿೞ್ತು ಮೂಡುವತೆರದಿಂ’ ಮುಂತಾದ ಪ್ರಯೋಗಗಳ ಮೂಲಕ ಅವರು ಮಧ್ಯಯುಗದ ಸಮಾಜದ ಕಲ್ಪನೆ ಮೂಡಿಸುತ್ತಿದ್ದರು.

ಪಂಪ ಭಾರತದಲ್ಲಿ ಬಾಲ ಅರಿಕೇಸರಿ ಹೇಗೆ ಬೆಳೆದ ಎಂಬುದಕ್ಕೆ ಪಂಪ “ನೆತ್ತರ ಕೋಡಿಯೊಳ್ ಜಿಗಳೆ ಬಳೆವ ತೆರದಿಂ ಬಳೆದಂ’ ಎಂದು ಹೇಳುತ್ತಾನೆ. ಮೇಲ್ವರ್ಗದ ಪ್ರತೀಕವಾದ ರಾಜನು ಪರಾವಲಂಬಿ ಜಿಗಳೆಯ ಹಾಗೆ ಜನಸಮುದಾಯದ ರಕ್ತ ಹೀರುತ್ತ (ಸುಲಿಗೆ ಮಾಡುತ್ತ) ಅಭಿವೃದ್ಧಿ ಹೊಂದುತ್ತಾನೆ. ಹೀಗೆಯೇ ಸಾಮ್ರಾಜ್ಯಶಾಹಿಗಳು ಬಡರಾಷ್ಟ್ರಗಳನ್ನು ಸುಲಿಯುತ್ತಿರುತ್ತಾರೆ. ಈ ರೀತಿ ಅವರ ವಿಶ್ಲೇಷಣಾ ರೀತಿ ಅನನ್ಯವಾಗಿತ್ತು. ಅವರು ಸೃಜನಶೀಲ ವಾಸ್ತವವಾದಿ.

ಅವರು ಹಳ್ಳಿ, ಪಟ್ಟಣ ಮತ್ತು ನಗರಗಳನ್ನು ಚೆನ್ನಾಗಿ ಬಲ್ಲವರು. ಅವರು ಮುಕ್ಕಾಲು ಶತಮಾನದ ಅನುಭವದ ಆಳದಿಂದ ಇವುಗಳ ನಿಜರೂಪದ ದರ್ಶನ ಮಾಡಿಸುತ್ತಿದ್ದರು. ಗ್ರಾಮಾಂತರ ಪ್ರದೇಶಗಳಿಗೆ ಸಂಬಂಧಿಸಿದ ಅವರ ಕಾಲಕೋಶದಲ್ಲಿ ಅದೆಷ್ಟೋ ಜೀವಿಗಳು ಮಿಡಿಯುತ್ತಲೇ ಇದ್ದವು. ಕೆಲ ದುಷ್ಕರ್ಮಿಗಳು ಶ್ರೀಮಂತ ವಿಧವೆಯೊಬ್ಬಳ ಬಣವೆ ಸುಟ್ಟಿದ್ದರು. ಆ ವಿಧವೆ ಧೈರ್ಯವಂತೆ, ಕುದುರೆ ಸವಾರಿ ಮಾಡುವವಳು. ಹಳ್ಳಿಯಲ್ಲಿ ತನ್ನ ಮನೆತನದ ವೈರಿಗಳು ಯಾರು ಎಂಬುದು ಆಕೆಗೆ ಚೆನ್ನಾಗಿ ಗೊತ್ತು. ರಾತ್ರಿ ಅವರೆಲ್ಲರ ಬಣವೆಗಳ ಮೇಲೆ ಹಣತೆಯನ್ನು ಹಚ್ಚಿಟ್ಟು ಬಂದಿದ್ದಳು. ‘ದನಗಳ ಆಹಾರವನ್ನು ಸುಟ್ಟು ಹಾಕುವುದು ದೊಡ್ಡ ಮಾತಲ್ಲ. ಮನಸ್ಸು ಮಾಡಿದರೆ ನಾನು ನನ್ನ ಎಲ್ಲ ವಿರೋಧಿಗಳ ಬಣವೆಗಳನ್ನು ಸುಡಬಹುದಿತ್ತು’ ಎಂಬುದನ್ನು ಆಕೆ ತೋರಿಸಿಕೊಟ್ಟಿದ್ದಳು. ಇನ್ನೊಬ್ಬಳು ವಿಧವೆ ಹದಿಹರೆಯದವರಿಗೆ ದಾಂಪತ್ಯ ಪಾಠ ಕಲಿಸುವವಳಾಗಿದ್ದಳು. ಬೇರೆ ಹಳ್ಳಿಯಿಂದ ಬಂದ ಮುಸ್ಲಿಂ ಕೂಲಿಕಾರನೊಬ್ಬ ದೇವದಾಸಿಯೊಬ್ಬಳ ಜೊತೆ ಕೊನೆಯವರೆಗೂ ಬದುಕಿದ. ಅವರಿಬ್ಬರೂ ಆದರ್ಶ ದಂಪತಿಯಂತೆ ಬಾಳಿದರು. ಅವರು ಯಾರೊಬ್ಬರ ತಂಟೆಗೂ ಹೋಗುತ್ತಿರಲಿಲ್ಲ. ಅವರ ಮೌನ ಮತ್ತು ಪ್ರಾಮಾಣಿಕ ಬದುಕು ಹಳ್ಳಿಯವರಿಗೆಲ್ಲ ಮಾರ್ಗದರ್ಶಕವಾಗಿತ್ತು. ಆಧುನಿಕ ಸಮಾಜದ ‘ಲಿನ್‌ ಇನ್ ಟುಗೆದರ್’ ಪರಿಕಲ್ಪನೆಯಂತೆ ಅವರು ಮದುವೆಯಾಗದಿದ್ದರೂ ಒಂದಾಗಿ ಬಾಳಿದರು. ಆತ ಸತ್ತಾಗ ಆ ಮಹಿಳೆ ಹಳ್ಳಿಯಲ್ಲಿನ ಮುಸ್ಲಿಮರನ್ನು ಕರೆಸಿ ಸಾಕಷ್ಟು ಹಣಕೊಟ್ಟು ಮುಸ್ಲಿಂ ಪದ್ಧತಿ ಪ್ರಕಾರವೇ ಆತನ ಅಂತಿಮ ಸಂಸ್ಕಾರವನ್ನು ನೆರವೇರಿಸಿದಳು. ಹೀಗೆ ಹಳ್ಳಿಗಾಡಿನ ಅನೇಕ ‘ಮಣ್ಣಿನ ಮೂರ್ತಿ’ಗಳ ಬಗ್ಗೆ ಅವರು ನನಗೆ ಹೇಳಿದ್ದರು.

ಅವರಿಗೆ ಒಳ್ಳೆಯದರೆಲ್ಲರಲ್ಲೂ ಆಸಕ್ತಿ. ಜವಾಬ್ದಾರಿಯಿಂದ ಎಂದೂ ನುಣುಚಿಕೊಳ್ಳದ ಮನಸ್ಸು. ಸಾಲ ಮಾಡಿಯಾದರೂ ಸಹಾಯ ಮಾಡುವ ಸಂವೇದನಾಶೀಲತೆ. ಪಂಪನ ಮಹೋಪಮೆಗಳ ಬಗ್ಗೆ ಅಥವಾ ಬಸವಣ್ಣನವರ ಸೋಹಂ-ದಾಸೋಹಂ ಬಗ್ಗೆ ತಲ್ಲೀನವಾಗಿ ಮಾತಾಡುವಂತೆಯೇ ಬಂಡಾಯ ಸಾಹಿತ್ಯದ ಬಗ್ಗೆಯೂ ಆಸಕ್ತಿ ತೋರಿಸುವವರು. ಬಂಡಾಯ ಸಾಹಿತ್ಯ ಸಂಘಟನೆ 1979 ರಲ್ಲಿ ಪ್ರಾರಂಭವಾದ ಹೊಸದರಲ್ಲಿಯೇ ಅವರು ಮುಂದೆ ನಿಂತು ವಿಜಾಪುರದಲ್ಲಿ ರಾಜ್ಯ ಬಂಡಾಯ ಸಾಹಿತ್ಯ ಸಮ್ಮೇಳನ ಮಾಡಿಸಿದರು. ಅದಕ್ಕಾಗಿ ಅವರು ಸಾಲವನ್ನೂ ಮಾಡಿದ್ದು ಬಹಳ ದಿನಗಳ ನಂತರ ಗೊತ್ತಾಯಿತು.

(ಅಮೀನಪ್ಪ ಸಂಗನಬಸಪ್ಪ ಹಿಪ್ಪರಗಿ ಪರಿವಾರ)

ಬಂಡಾಯ ಸಾಹಿತ್ಯ ಸಮ್ಮೇಳನ ನಡೆದ ಸಂದರ್ಭದಲ್ಲಿ ವಿಜಾಪುರದ ಕೆಲ ಬ್ರಾಹ್ಮಣರು ಭಯಪಟ್ಟು ಬೇಗ ಊರಿಗೆ ಹೋದ ವಿಚಾರ ನನಗೆ ತಿಳಿದು ಬಂದಿತ್ತು. ಬಹಳ ಬೇಸರವಾಯಿತು. ಮಾನವೀಯತೆಯೇ ತಳಹದಿಯಾದ ಒಂದು ಕಾರ್ಯಕ್ರಮಕ್ಕೆ ‘ಬ್ರಾಹ್ಮಣ ವಿರೋಧಿ’ ಎಂಬ ತಪ್ಪು ಅಭಿಪ್ರಾಯ ಮೂಡುವಂತಾಗಿದ್ದು ವಿಷಾದಕರವಾದುದು. ಹೀಗೆ ಒಂದಿಲ್ಲೊಂದು ರೀತಿಯಲ್ಲಿ ಭಾರತದ ಎಲ್ಲ ಜಾತಿ ಮತ್ತು ಧರ್ಮಗಳವರು ಒಂದಿಲ್ಲೊಂದು ರೀತಿಯಲ್ಲಿ ಭಯ ಮತ್ತು ಅಪನಂಬಿಕೆಯ ವಾತಾವರಣದಲ್ಲೇ ಬದುಕುತ್ತಿರುತ್ತಾರೆ. ಇದೆಲ್ಲವನ್ನೂ ಮೀರಿದ ಮನಸ್ಥಿತಿಯುಳ್ಳವರ ಸಂಖ್ಯೆ ಕಡಿಮೆ. ಮನುಷ್ಯರ ಮಧ್ಯೆ ಸಂಪರ್ಕ ಏರ್ಪಡುವಂತಹ ವಾತಾವರಣ ಸೃಷ್ಟಿಸಬೇಕು ಎಂಬುದು ಪ್ರೊ. ಹಿಪ್ಪರಗಿ ಅವರ ಆಶಯವಾಗಿತ್ತು. ಅದಕ್ಕಾಗಿ ಅವರೊಂದು ಸೂತ್ರಕಂಡು ಹಿಡಿದರು. ಅದೆಂದರೆ ತಮ್ಮ ಶಿಷ್ಯಂದಿರ ಜೊತೆ ಎಂದೂ ಜಾತಿ, ಧರ್ಮ ಮತ್ತು ದೇವರುಗಳ ಬಗ್ಗೆ ಮಾತನಾಡದಿರುವುದು. ಎಲ್ಲ ವಿದ್ಯಾರ್ಥಿಗಳನ್ನು ಮಕ್ಕಳಂತೆ ಕಾಣುವುದು ಮೌಲ್ಯಗಳ ಜೊತೆ ವೈಜ್ಞಾನಿಕ ಮನೋಭಾವ ಬೆಳೆಸುವುದು. ಜಿಡ್ಡುಗಟ್ಟಿದ ಸಂಪ್ರದಾಯವನ್ನು ಕಡೆಗಣಿಸಿ ಮಾನವನ ಬೆಳವಣಿಗೆಗೆ ಸಹಾಯಕವಾಗುವ ಪರಂಪರೆಯನ್ನು ಎತ್ತಿಹಿಡಿಯುವುದು. ಹೀಗೆ ಅವರು ನಮ್ಮ ಒಳಗನ್ನು ಬೆಳಗಿದ್ದಾರೆ. ಒಂದು ಸಲ ಅವರು ಕಲೆಯ ಕುರಿತು ಪಾಠ ಹೇಳುತ್ತಿದ್ದರು. ನಿಜವಾದ ಕಲೆ ಜಾತಿ, ಧರ್ಮ, ದೇಶ ಮತ್ತು ಕಾಲವನ್ನು ಮರೆಸುವಂಥದ್ದು. ನೀವು ಗೋಳಗುಮ್ಮಟದ ಮುಂದೆ ನಿಂತು ನೋಡುವಾಗ ಅದರ ಅದ್ಭುತ ಸೌಂದರ್ಯವನ್ನು ಆಸ್ವಾದಿಸುವಲ್ಲಿ ತಲ್ಲೀನರಾಗುವಿರಿ. ಆಗ ನಿಮ್ಮ ದೇಶ, ಭಾಷೆ, ಜಾತಿ, ಧರ್ಮ ಮತ್ತು ಕಾಲದ ನೆನಪಿರುವುದೇ ಎಂದು ಕೇಳಿದ್ದರು. ಅವರು ಪಾಠ ಹೇಳುವ ಕ್ರಮ ಇದು. ಮರೆಯಲಾಗದಂಥದ್ದು.

ನಾನು ಬರೆದದ್ದರಲ್ಲಿನ ಒಳ್ಳೆಯದೆಲ್ಲ ಅವರ ಚಿಂತನೆಯ ಬೀಜಗಳಿಂದಲೇ ಸೃಷ್ಟಿಯಾದುದು ಎಂಬ ಭಾವ ನನಗಿದೆ. ನಾನು ಏನೇ ಬರೆಯಲಿ, ಎಲ್ಲೇ ಮಾತನಾಡಲಿ ಅವರ ಚಿಂತನೆಗಳು ನನಗೆ ಸದಾ ಶ್ರೀರಕ್ಷೆಯನ್ನು ಒದಗಿಸುತ್ತವೆ. ಮಾರ್ಕ್ಸ್‌ವಾದಿ ಚಿಂತಕರಾಗಿದ್ದ ನರಸಿಂಗರಾವ್ ಕುಲಕರ್ಣಿ ಮತ್ತು ಪ್ರೊ. ಹಿಪ್ಪರಗಿ ಅವರಷ್ಟು ಪ್ರಭಾವ ಬೀರಿದವರು ಕಡಿಮೆ. ಇವರಿಬ್ಬರ ಅನುಭವವನ್ನು ಅರಗಿಸಿಕೊಂಡವರಿಗೆ ಜಗತ್ತಿನಲ್ಲಿ ಸೋಲೆಂಬುದೇಇಲ್ಲ. ಸಾಹಿತ್ಯ, ಸಮಾಜ ಮತ್ತು ಶಿಕ್ಷಣ ಕ್ಷೇತ್ರಗಳು ಪ್ರೊ. ಹಿಪ್ಪರಗಿ ಅವರಿಗೆ ಅತ್ಯಂತ ಪ್ರಿಯವಾದುವು. ಪ್ರಾಥಮಿಕ ಶಾಲೆಯಿಂದ ವಿಶ್ವವಿದ್ಯಾಲಯಗಳವರೆಗೆ ಶಿಕ್ಷಣ ವ್ಯವಸ್ಥೆ ಹೇಗಿರಬೇಕು? ಸಾಹಿತ್ಯ ಮತ್ತು ಶಿಕ್ಷಣದ ಸಾಮಾಜಿಕ ಜವಾಬ್ದಾರಿ ಎಂಥದು? ಶಿಕ್ಷಣದ ವಿವಿಧ ಹಂತಗಳಲ್ಲಿ ಭಾಷೆಯ ಬಳಕೆ ಯಾವರೀತಿ ಇರಬೇಕು? ಎಂಬುದರ ಬಗ್ಗೆ ಅವರು ಸ್ಪಷ್ಟವಾದ ಕಲ್ಪನೆಗಳನ್ನು ಹೊಂದಿದ್ದರು ನಮ್ಮ ಸರ್ಕಾರಗಳು ಮತ್ತು ಸ್ಥಳೀಯ ರಾಜಕಾರಣಿಗಳು ಇಂಥವರ ಅನುಭವಗಳನ್ನು ಬಳಸಿಕೊಳ್ಳುವಷ್ಟು ಪ್ರಬುದ್ಧವಾಗಿ ಬೆಳೆಯಲಿಲ್ಲ ಎಂಬುದು ನನ್ನ ಅನಿಸಿಕೆ.

ತಮ್ಮೆಲ್ಲ ನೆಲದ ಗುಣದೊಂದಿಗೆ ಹಳ್ಳಿಗಳು ಸ್ವಯಂಪೂರ್ಣವಾಗಿ ಬೆಳೆಯಬೇಕು. ಆಗ ಮಾತ್ರ ನಿಜವಾದ ಪ್ರಜಾಪ್ರಭುತ್ವದ ಹೂ ಅರಳುವುದು. ಬಡ ದೇಶಗಳು ಸಂಪನ್ಮೂಲಗಳನ್ನು ರಫ್ತು ಮಾಡುವ ಮತ್ತು ಸಿದ್ಧ ವಸ್ತುಗಳನ್ನು ಕೊಳ್ಳುವ ಮೂಲಕ ಹೆಚ್ಚು ಹೆಚ್ಚು ಬಡವಾಗುತ್ತ ಹೋಗುತ್ತವೆ. ಇದೇ ಕಾರಣದಿಂದಲೇ ಕೃಷ್ಣ ಗೋಕುಲದ ಬೆಣ್ಣೆ ಕೂಡ ಹೊರಗೆ ಕಳುಹಿಸಲು ವಿರೋಧಿಸುತ್ತಿದ್ದ ಎಂದು ಅವರು ಒಮ್ಮೆ ಹೇಳಿದ್ದರು. ಸ್ವಯಂ ಪರಿಪೂರ್ಣ ಗ್ರಾಮ ವ್ಯವಸ್ಥೆಯನ್ನು ನಾವಿಂದು ಸಂಪೂರ್ಣವಾಗಿ ಕಳೆದುಕೊಂಡು ಗೋಳಾಡುತ್ತಿದ್ದೇವೆ. ಜಾತಿಯ ಕ್ರೌರ್ಯವೊಂದನ್ನು ಬಿಟ್ಟರೆ ನಮ್ಮ ಗ್ರಾಮ ವ್ಯವಸ್ಥೆ ಅನುಕರಣೀಯವಾಗಿತ್ತು. ಹಳ್ಳಿಗೆ ಬೇಕಾದ ಎಲ್ಲ ಉತ್ಪನ್ನಗಳು ಮತ್ತು ಸೇವೆಗಳು ಅಲ್ಲೇ ಲಭ್ಯವಾಗುತ್ತಿದ್ದವು. ಹೆಚ್ಚೆಂದರೆ ಪಕ್ಕದ ಹಳ್ಳಿ ಅಥವಾ ಪಟ್ಟಣಕ್ಕೆ ಹೋಗಬಹುದಿತ್ತು. ಅಂಟವಾಳಕಾಯಿ ಸಾಬೂನಿನ ಕೆಲಸ ಮಾಡುತ್ತಿತ್ತು. ಸೀಗೆಕಾಯಿ ಶಾಂಪೂ ಆಗುತ್ತಿತ್ತು. ಸತ್ತ ದನದ ತೊಗಲು ಅದೇ ಹಳ್ಳಿಯ ಸಮಗಾರನ ಕೈಯಲ್ಲಿ ಚಪ್ಪಲಿಯಾಗುತ್ತಿತ್ತು. ಕ್ಷೌರಿಕನೆಂದೂ ಬ್ಲೇಡ್ ತಯಾರಿಸುವ ಕಂಪನಿಗಳ ಮೊರೆಹೋಗಬೇಕಿರಲಿಲ್ಲ. ನೇಕಾರರು, ಕಂಬಾರರು, ಕುಂಬಾರರು, ಕೃಷಿಕರು, ಕೂಲಿಕಾರರು ಒಬ್ಬರಿಗೊಬ್ಬರ ಅಗತ್ಯಗಳನ್ನು ಪೂರೈಸುತ್ತಿದ್ದರು. ‘ಗುರು ಸೈಪಾಕದಲ್ಲಿ ಭಿಕ್ಷೆ’ ಎಂದು ಬೆಳಿಗ್ಗೆ ಬರುತ್ತಿದ್ದ ಜಂಗಮ ಮನೆಯವರ ಆರೋಗ್ಯವನ್ನು ವಿಚಾರಿಸಿಕೊಳ್ಳುತ್ತಿದ್ದ. ಯಾರದಾದರೂ ಆರೋಗ್ಯ ಹದಗೆಟ್ಟಿದ್ದರೆ ತಕ್ಕ ಗಿಡಮೂಲಿಕೆ ಕೊಡುತ್ತಿದ್ದ. ಇಲ್ಲವೆ ಮನೆಯಲ್ಲೇ ಇರುವ ವಸ್ತುಗಳನ್ನು ಹೆಸರಿಸಿ ಔಷಧಿ ತಯಾರಿಸಲು ಸೂಚಿಸುತ್ತಿದ್ದ. ಇಂಥ ಒಂದು ವ್ಯವಸ್ಥೆ ಹಾಳಾಗಿ ಪರಾವಲಂಬಿ ವ್ಯವಸ್ಥೆ ಬಂದಿದೆ. ಮಗುವಿಗೆ ಶೀತವಾದರೂ ಮಕ್ಕಳ ವೈದ್ಯರನ್ನು ಹುಡುಕಿಕೊಂಡು ಹೋಗುವ ವ್ಯವಸ್ಥೆ ಸೃಷ್ಟಿಯಾಗಿದೆ. ರೈತರು ಕೃಷಿ ಉಪಕರಣಗಳು, ಬೀಜ, ಗೊಬ್ಬರ ಮತ್ತು ಕೀಟನಾಶಕಗಳನ್ನು ಆಮದು ಮಾಡಿಕೊಳ್ಳುವಷ್ಟು ಪರಿಸ್ಥಿತಿ ಹದಗೆಟ್ಟಿದೆ. ಹಿಂದೆ ಬರಿ ಜಾತಿಗಳಿದ್ದವು. ಇಂದು ಹಳ್ಳಿಗಳಲ್ಲಿ ಜಾತಿ ರಾಜಕಾರಣ ಮನೆ ಮಾಡಿದೆ. ಎಲ್ಲಕಡೆ ಮನುಷ್ಯ ನಂಬಿಕೆ ಇಲ್ಲದ ವಾತಾವರಣದಲ್ಲಿ ಬದುಕುತ್ತಿದ್ದಾನೆ. ಆತ ತನ್ನ ಸಾಮಾಜಿಕ ವ್ಯಕ್ತಿತ್ವವನ್ನೇ ಕಳೆದುಕೊಂಡಿದ್ದಾನೆ. ಅರೆ ಸತ್ತವರ ಸಮಾಜವಿದು. ಇಂಥ ಸಮಾಜದಲ್ಲಿ ಪ್ರೊ. ಹಿಪ್ಪರಗಿ ಅಂಥವರು ಅಲ್ಲಲ್ಲಿ ‘ಕೋಟಿಗೊಬ್ಬ ಶರಣನ’ ಹಾಗೆ ಇದ್ದಾರಲ್ಲ ಎಂಬುದೇ ಸಮಾಧಾನದ ವಿಚಾರ.

ನಮ್ಮ ಹಳ್ಳಿಗಳು ಮತ್ತೆ ಜೀವ ತಾಳಬೇಕು. ನಮ್ಮ ಸ್ಥಳೀಯ ಸಂಸ್ಕೃತಿಗಳು ಸೌಹಾರ್ದ ವಾತಾವರಣದಲ್ಲಿ ಬೆಳೆಯಬೇಕು. ಆತ್ಮಗೌರವ ಮತ್ತು ಸಾಮಾಜಿಕ ಸಂಬಂಧಗಳು ಮತ್ತೆ ಗಟ್ಟಿಗೊಳ್ಳಬೇಕು. ವಸ್ತುಮೋಹ ಕಡಿಮೆಯಾಗಿ ಜೀವನ ಪ್ರೀತಿ ಹೆಚ್ಚಬೇಕು. ಪ್ರೊ. ಹಿಪ್ಪರಗಿ ಅವರಿಗೆ ಗೌರವ ಸಲ್ಲಿಸುವುದೆಂದರೆ ಇಂಥ ಸರಳ ಮತ್ತು ಸುಂದರ ಸಮಾಜದ ಸೃಷ್ಟಿಗಾಗಿ ಹೆಣಗುವುದು.

(ಹಿಪ್ಪರಗಿ ಅವರ ಪುತ್ರರು. ಎಡದಿಂದ: ಸಂಗಣ್ಣ, ಅಶೋಕ, ಮೋಹನ)

ಅವರ ಪೂರ್ತಿ ಹೆಸರು ಅಮೀನಪ್ಪ ಸಂಗನಬಸಪ್ಪ ಹಿಪ್ಪರಗಿ. ಅವರ ಹೆಸರು ವಿಜಾಪುರದ ಶ್ರೇಷ್ಠ ಸೂಫಿ ಸಂತ ಖ್ವಾಜಾ ಅಮೀನುದ್ದೀನ್‌ ಅವರ ಸ್ಮರಣೆಗಾಗಿ ಇಟ್ಟ ಹೆಸರು. ಶಿರಹಟ್ಟಿ ಫಕೀರಸ್ವಾಮಿಗಳು ಖ್ವಾಜಾ ಅಮೀನುದ್ದೀನರ ನೇರ ಶಿಷ್ಯರಾಗಿದ್ದರು. ಖ್ವಾಜಾ ಅಮೀನುದ್ದೀನರು ಸೂಫಿ ಮತ್ತು ಶರಣ ತತ್ತ್ವಗಳನ್ನು ಮೈಗೂಡಿಸಿಕೊಂಡು 16ನೇ ಶತಮಾನದಲ್ಲೇ ವಿಶ್ವಪ್ರಸಿದ್ಧರಾಗಿದ್ದರು. ಆಗಿನ ಕಾಲದಲ್ಲಿ ವಿಜಾಪುರವು ವಿಶ್ವಪ್ರಸಿದ್ಧ ಸೂಫಿಕೇಂದ್ರವಾಗಿತ್ತು. ಪ್ರೊ. ಹಿಪ್ಪರಗಿ ಅವರ ಹೆಸರಿನಲ್ಲೇ ಇಂದು ಒಂದು ದೊಡ್ಡ ಪರಂಪರೆ ಇದೆ. ಖ್ವಾಜಾ ಅಮೀನುದ್ದೀನರು ಮಹಮ್ಮದ್ ಪೈಗಂಬರ್ ಮತ್ತು ಬಸವಣ್ಣನವರ ತತ್ತ್ವಗಳನ್ನು ಒಂದಾಗಿ ಕಂಡ ರೀತಿಯ ಬಗ್ಗೆ ಇನ್ನೂ ಸಂಶೋಧನೆಯಾಗಬೇಕಿದೆ.

ಸದ್ಗುರು ಅಮೀನ್ ಅಲಾ ಭೇದ ತೊರೆದು ನೀನೇ ಮೌಲಾ;
ಕರುಣಿಸಿ ನನ್ನ ಮ್ಯಾಲೆ ನೀನಾದಿ ನನ್ನ ಶೀಲಾ.
ಅಜ್ಞಾನಿಗಳಿಗೆ ನೀನು ಜ್ಞಾನದಾನ ಮಾಡುವಾತ
ಧರ್ಮ ಜಾತಿ ಭೇದ ಅತೀತಾಖ್ವಾಜಾಅಮೀನ್ ಆಲಾ.
ದೊರೆಗಳಿಗೆ ದೊರೆಯದಾತ ಬಡವರಿಗೆ ನೀ ವಿಧಾತ;
ಸರ್ವರಲ್ಲಿ ನೀನೆ ಪ್ರಾಣ ಆಖಾ ಅಮೀನ್ ಆಲಾ.
ಶೂನ್ಯ ಮರ್ಮ ತಿಳಿಸಿದಾತ ಭಯ ಬಯಲು ಮಾಡುವಾತ;
ಧ್ಯಾನಜಪತಪವಿಲ್ಲದಂತೆ ಮಮಾಮೋಕ್ಷ ಅಮೀನ್ ಆಲಾ”.

ಎಂದು 19ನೇ ಶತಮಾನದ ಮೊದಲ ಕನ್ನಡ ಸೂಫಿ ಕವಿ ಗುರು ಖಾದರಿ ಪೀರಾ ಅವರು ‘ಸದ್ಗುರು ಅಮೀನ್ ಆಲಾ’ ಹೆಸರಿನ ತತ್ತ್ವಪದದಲ್ಲಿ ತಿಳಿಸಿದ್ದಾರೆ. ಖ್ವಾಜಾ ಅಮೀನುದ್ದೀನ್ ನನ್ನ ಅತ್ಯಂತಗೌರವಾನ್ವಿತ ಸೂಫಿ ಸಂತ. ಆದಿಲ್‌ಶಾಹಿಗಳ ರಾಜಾಶ್ರಯ ಒಪ್ಪಿಕೊಳ್ಳದೆ ಜನರ ಮಧ್ಯೆ ಬದುಕಿದ ಮಹಾಪುರುಷ. ಎಲ್ಲ ಸಂಪ್ರದಾಯಗಳನ್ನು ತೊರೆದು ಪ್ರೀತಿ, ಕರುಣೆ ಮತ್ತು ಸಹಬಾಳ್ವೆಗೆ ಬೆಲೆ ಕೊಟ್ಟವರು. ಎಲ್ಲರನ್ನೂ ಒಂದಾಗಿ ಕಂಡವರು. ಇಂಥ ಸೂಫಿ ಸಂತರ ಹೆಸರು ನನ್ನ ವಿದ್ಯಾಗುರುವಿನ ಹೆಸರಾಗಿರುವುದು ನನಗೆ ಹೆಮ್ಮೆಯ ವಿಚಾರ. ಖ್ವಾಜಾ ಅಮೀನುದ್ದೀನ್ ನನ್ನ ‘ಮನೆದೈವ’ ಕೂಡ.

ಪ್ರೊ. ಹಿಪ್ಪರಗಿ ಅವರು ತಮ್ಮ ಹೆಸರಿಗೆ ತಕ್ಕಂತೆ ಇದ್ದರು. ಅವರು ಭೇದ ತೊರೆದವರು, ಕರುಣಾಳುಗಳು, ಜ್ಞಾನ ದಾಸೋಹಿಗಳು, ಧರ್ಮ ಮತ್ತು ಜಾತಿಗಳ ಭೇದಕ್ಕೆ ಅತೀತರು. ಶ್ರೀಮಂತರ ಸಹವಾಸಕ್ಕೆ ಹಾತೊರೆಯದವರು. ಬಡವರ ಜೊತೆ ಆನಂದಮಯವಾಗಿ ಬದುಕುವವರು.
ಅವರು ನೆನಪಾದಾಗಲೆಲ್ಲ ‘ತಂದೆ ನೀನು, ತಾಯಿ ನೀನು’ ಎಂಬ ಬಸವಣ್ಣನವರ ವಚನ ನೆನಪಾಗುತ್ತದೆ.