ಹುಡುಕುತ್ತಿದ್ದದ್ದು ಕೊನೆಗೂ ಸಿಕ್ಕಿತು. ಓದುವುದಕ್ಕೆ ಶುರು ಮಾಡಿದ. ಪ್ರಿಂಟಾಗಿದ್ದ ಸಾಲುಗಳು ಅವನ ಕಣ್ಣ ಮುಂದೆ ಕುಣಿಯುತ್ತಿದ್ದವು. ಆದರೂ ‘ಹೊಸ ಸುದ್ದಿ’ಯನ್ನು ಇಡಿಯಾಗಿ ಆತುರದಲ್ಲಿ ಓದಿ ಮುಗಿಸಿದ. ಆಮೇಲೆ ಆ ಬಗ್ಗೆ ಇನ್ನೇನಿದೆ ಹುಡುಕಿದ. ಪುಟ ತಿರುಗಿಸುವಾಗ ಸಹನೆ ಇಲ್ಲದೆ ಅವನ ಕೈ ಕಂಪಿಸುತ್ತಿದ್ದವು. ಇದ್ದಕಿದ್ದ ಹಾಗೇ ಯಾರೋ ಬಂದು ಅವನ ಪಕ್ಕದ ಟೇಬಲ್ಲಿನಲ್ಲಿ ಕೂತರು ಅನ್ನಿಸಿ ತಲೆ ಎತ್ತಿ ನೋಡಿದ. ಝಮ್ಯತೋವ್.
ಪ್ರೊ. ಓ.ಎಲ್. ನಾಗಭೂಷಣ ಸ್ವಾಮಿ ಅನುವಾದಿಸಿದ ಫ್ಯದೊರ್ ದಾಸ್ತಯೇವ್ಸ್ಕಿ ಬರೆದ ‘ಅಪರಾಧ ಮತ್ತು ಶಿಕ್ಷೆʼ ಕಾದಂಬರಿಯ ಎರಡನೆಯ ಭಾಗದ ಆರನೆಯ ಅಧ್ಯಾಯ

 

ಅವಳು ಅತ್ತ ಹೋಗುತ್ತಲೇ ಇತ್ತ ರಾಸ್ಕೋಲ್ನಿಕೋವ್ ಎದ್ದು ಬಾಗಿಲು ಭದ್ರ ಮಾಡಿದ. ರಝುಮಿಖಿನ್ ತಂದುಕೊಟ್ಟಿದ್ದ ಬಟ್ಟೆಯ ಗಂಟು ಬಿಚ್ಚಿದ. ಅದರಲ್ಲಿದ್ದ ಬಟ್ಟೆ ತೊಟ್ಟುಕೊಂಡ. ವಿಚಿತ್ರ. ಅವನ ಮನಸ್ಸು ಪೂರಾ ಸಮಾಧಾನವಾಗಿತ್ತು. ಮೊದಲಿದ್ದ ಅರೆ ಹುಚ್ಚಿನಂಥ ಸನ್ನಿ, ಭಯಭೀತ ನಡವಳಿಕೆ ಮಾಯವಾಗಿದ್ದವು. ಯಾವುದೋ ವಿಚಿತ್ರ ಶಾಂತಿ ಅವನನ್ನು ಆವರಿಸಿದ ಹಾಗಿತ್ತು. ಯಾವುದೋ ಕೆಲಸ ಮಾಡಲೇಬೇಕು ಅನ್ನುವ ನಿಶ್ಚಯ ಅವನ ಚಲನವಲನದಲ್ಲಿ ಕಾಣುತ್ತಿತ್ತು. ‘ಇವತ್ತು, ಇವತ್ತು…’ ಎಂದು ಗೊಣಗುತ್ತಿದ್ದ. ಮೈಯಲ್ಲಿ ನಿಶ್ಶಕ್ತಿ ಇದೆ ಅನ್ನಿಸಿತು. ಆದರೂ ಅವನ ಭಾವನೆಗಳ ಘರ್ಷಣೆ ಕ್ಲೈಮಾಕ್ಸಿಗೆ ಮುಟ್ಟಿ, ಮನಸ್ಸು ಯಾವುದೋ ನಿರ್ಣಯಕ್ಕೆ ಬಂದಿತ್ತು, ಆ ನಿರ್ಣಯ ಗೀಳಿನಂಥ ವಿಚಾರವಾಗಿ ಮನಸ್ಸಿಗೆ ಅಂಟಿಕೊಂಡಿತ್ತು.

ಇದು ಮನಸಿಗೆ ಒಂದು ಥರದ ಶಾಂತಿಯನ್ನು ಕೊಟ್ಟಿತ್ತು. ಈ ಗೀಳಿನಿಂದಲೇ ಶಕ್ತಿಯೂ ಆತ್ಮವಿಶ್ವಾಸವೂ ಮೂಡಿದ್ದವು. ‘ರಸ್ತೆಯಲ್ಲಿ ನಾನೆಲ್ಲೂ ಕುಸಿದು ಬೀಳುವುದಿಲ್ಲ,’ ಎಂಬ ಭರವಸೆಯನ್ನು ತನಗೆ ತಾನೇ ಕೊಟ್ಟುಕೊಂಡ. ಹೊಸ ಬಟ್ಟೆಗಳನ್ನು ತೊಟ್ಟು ಮೇಜಿನ ಮೇಲಿದ್ದ ದುಡ್ಡು ಕಣ್ಣಿಗೆ ಬಿತ್ತು. ಇಪ್ಪತ್ತೈದು ರೂಬಲ್ ಇದ್ದವು. ಜೊತೆಗೆ ರಝುಮಿಖಿನ್ ತೆಗೆದುಕೊಂಡಿದ್ದ ಹತ್ತು ರೂಬಲ್‍ ಗಳಲ್ಲಿ ಬಟ್ಟೆ ಖರೀದಿಸಿ ಉಳಿದ ಚಿಲ್ಲರೆಯಾಗಿ ಒಂದಷ್ಟು ಐದು ಕೊಪೆಕ್ ನಾಣ್ಯಗಳಿದ್ದವು. ಯೋಚನೆ ಮಾಡಿದ. ಎಲ್ಲಾ ದುಡ್ಡು ಜೇಬಿಗಿಟ್ಟುಕೊಂಡ. ಸದ್ದು ಮಾಡದ ಹಾಗೆ ಚಿಲಕ ತೆಗೆದು ರೂಮಿನಿಂದಾಚೆಗೆ ಕಾಲಿಟ್ಟ. ಮೆಟ್ಟಿಲಿಳಿದು ಹೋಗುತ್ತ ಎಂದಿನಂತೆ ಬಾಗಿಲು ತೆರೆದುಕೊಂಡಿದ್ದ ಓನರಮ್ಮನ ಅಡುಗೆಮನೆಯತ್ತ ಕಣ್ಣು ಹಾಯಿಸಿದ. ನಸ್ತಾಸ್ಯ ಬಾಗಿಲಿಗೆ ಬೆನ್ನು ಮಾಡಿಕೊಂಡು ಸಮೋವರ್ ಮೇಲೆ ಬಗ್ಗಿ ಕೆಂಡವನ್ನು ಊದುತ್ತಿದ್ದಳು. ಅವಳಿಗೆ ಯಾವ ಸದ್ದೂ ಕೇಳಿಸಲಿಲ್ಲ. ಅಲ್ಲದೆ, ಆ ಹೊತ್ತಿನಲ್ಲಿ ಅವನೆದ್ದು ಬರುತ್ತಾನೆಂದು ಯಾರು ಊಹೆ ಮಾಡಿದ್ದರು? ಮರು ಕ್ಷಣದಲ್ಲಿ ರಾಸ್ಕೋಲ್ನಿಕೋವ್ ಬೀದಿಯಲ್ಲಿದ್ದ.

ಎಂಟು ಗಂಟೆಯಾಗುತ್ತಿತ್ತು. ಸೂರ್ಯ ಮುಳುಗುತ್ತಿದ್ದ. ಧಗೆ ಇನ್ನೂ ಹಾಗೇ ಇತ್ತು. ಆದರೂ ನಗರದ ದೂಳು ತುಂಬಿದ ಹಳಸಲು ವಾಸನೆಯ ಗಾಳಿಯನ್ನು ಆಸೆಬುರುಕನ ಹಾಗೆ ದೊಡ್ಡದಾಗಿ ಉಸಿರೆಳೆದುಕೊಂಡ. ಸ್ವಲ್ಪ ತಲೆ ಸುತ್ತು ಅನಿಸಿತು. ಅವನ ಊದಿದ ಕಣ್ಣು ಮೃಗೀಯವಾದ ಶಕ್ತಿಯನ್ನು ಸೂಸುತ್ತಿತ್ತು. ಎಲ್ಲಿಗೆ ಹೋಗುತ್ತಿದ್ದೇನೆ ಅನ್ನವುದೂ ಗೊತ್ತಿರಲಿಲ್ಲ, ಆ ಪ್ರಶ್ನೆಯೂ ಹುಟ್ಟಲಿಲ್ಲ. ‘ಎಲ್ಲಾನೂ ಇವತ್ತು ಮುಗಿಯಬೇಕು, ಈಗಲೇ. ಇಲ್ಲದಿದ್ದರೆ ಮನೆಗೆ ಹೋಗಲೇಬಾರದು. ಆ ಥರ ಬದುಕಿ ಉಪಯೋಗವಿಲ್ಲ,’ ಅನ್ನುವ ಒಂದು ಸಂಗತಿ ಮನಸ್ಸಿನಲ್ಲಿತ್ತು. ಹೇಗೆ ಮುಗಿಯಬೇಕು, ಏನನ್ನು ಮುಗಿಸಬೇಕು? ಅನ್ನುವ ಯಾವ ಕಲ್ಪನೆಯೂ ಇರಲಿಲ್ಲ. ಆ ಬಗ್ಗೆ ಯೋಚನೆ ಮಾಡುವ ಮನಸ್ಸೂ ಇರಲಿಲ್ಲ. ಆ ಯೋಚನೆಯನ್ನು ಹೊರದೂಡಲು ಪ್ರಯತ್ನಪಡುತ್ತ ಹೆಜ್ಜೆ ಹಾಕಿದ. ‘ಹೀಗೋ ಹಾಗೋ ಹೇಗಾದರೂ ಸರಿ; ಇದೆಲ್ಲವೂ ಬದಲಾಗಲೇಬೇಕು,’ ಎಂದು ಹತಾಶನ ಹಾಗೆ ವಿಚಿತ್ರ ಆತ್ಮವಿಶ್ವಾಸದಲ್ಲಿ ತನಗೇ ಹೇಳಿಕೊಳ್ಳುತ್ತಿದ್ದ.

ಹಳೆಯ ಅಭ್ಯಾಸದಂತೆ ಮಾಮೂಲು ದಾರಿಯಲ್ಲಿ ನಡೆಯುತ್ತ ಸೀದಾ ಹೇಮಾರ್ಕೆಟ್ಟಿಗೆ ಹೋದ. ಹೇಮಾರ್ಕೆಟ್ಟಿಗೆ ಸ್ವಲ್ಪ ಮೊದಲು, ದಿನಸಿ ಅಂಗಿಯ ಮುಂದೆ, ಫುಟ್‍ಪಾತಿನ ಮೇಲೆ ಯಾರೋ ಯುವಕ ಹಾರ್ಮೋನಿಯಂ ಬಾರಿಸುತ್ತ ನಿಂತಿದ್ದ. ಪ್ರೇಮಗೀತೆಯನ್ನು ಹೃದಯ ತುಂಬಿ ನುಡಿಸುತ್ತಿದ್ದ. ಅವನೆದುರಿಗೆ ಹದಿನೈದು ವರ್ಷದ ಹುಡುಗಿ ನಿಂತಿದ್ದಳು. ಸಭ್ಯಸ್ಥ ಮಹಿಳೆಯ ಹಾಗೆ ಅಲಂಕಾರ ಮಾಡಿಕೊಂಡಿದ್ದಳು. ನಿರಿಗೆಗಳಿರುವ ಉಬ್ಬುಲಂಗ ತೊಟ್ಟಿದ್ದಳು, ಗೌನು ಹಾಕಿಕೊಂಡಿದ್ದಳು, ಕಡುಕೆಂಪು ಬಣ್ಣದ ಗರಿಗಳನ್ನು ಸಿಕ್ಕಿಸಿದ ಹುಲ್ಲಿನ ಹ್ಯಾಟು ತಲೆಯಲ್ಲಿತ್ತು. ಎಲ್ಲವೂ ಹಳೆಯವು, ಅಸಡ್ಡಾಳವಾಗಿದ್ದವು. ಸ್ವಲ್ಪ ಒಡಕಲಾಗಿದ್ದರೂ ಖುಷಿಕೊಡುವ ಹಾಗಿದ್ದ ಬೀದಿ ಹಾಡುಗಾರ್ತಿಯ ಗಟ್ಟಿ ದನಿಯಲ್ಲಿ, ಎರಡು ಕೊಪೆಕ್ ಕೊಟ್ಟಾರು ಅಂಗಡಿಯವರು ಎಂಬ ನಿರೀಕ್ಷೆಯಲ್ಲಿ ಪ್ರೇಮಗೀತೆ ಹಾಡುತ್ತಿದ್ದಳು.

ಅಲ್ಲಿದ್ದ ಇಬ್ಬರು ಮೂವರ ಜೊತೆಯಲ್ಲಿ ರಾಸ್ಕೋಲ್ನಿಕೋವ್ ಕೂಡ ನಿಂತು ಹಾಡು ಕೇಳಿದ. ಐದು ಕೊಪೆಕ್ ನಾಣ್ಯ ತೆಗೆದು ಹುಡುಗಿಯ ಕೈಯಲ್ಲಿಟ್ಟ. ಹೃದಯ ಮುಟ್ಟುವ ಹಾಗೆ ತೀವ್ರಕ್ಕೆ ಏರಿದ್ದ ಹಾಡನ್ನು ಯಾರೋ ಚಾಕುವಿನಲ್ಲಿ ಇರಿದರೋ ಅನ್ನುವ ಹಾಗೆ ತಟ್ಟನೆ ನಿಲ್ಲಿಸಿ, ಹಾರ್ಮೋನಿಯಂ ನುಡಿಸುತ್ತಿದ್ದವನತ್ತ ತಿರುಗಿ, ಒರಟಾಗಿ ‘ಸಾಕು!’ ಅಂದು ಮುಂದಿನ ಅಂಗಡಿಯತ್ತ ಹೆಜ್ಜೆ ಹಾಕಿದಳು.

ಹಾರ್ಮೊನಿಯಂ ಬಾರಿಸುವವನ ಹತ್ತಿರ ನಿಂತು ಹಾಡು ಕೇಳುತ್ತಿದ್ದ ಕೆಲಸವಿಲ್ಲದ ಸೋಮಾರಿಯ ಹಾಗೆ ಕಾಣುತ್ತಿದ್ದ ದಾರಿ ಹೋಕನನ್ನು ರಾಸ್ಕೋಲ್ನಿಕೋವ್ ತಡೆದು ನಿಲ್ಲಿಸಿ, ‘ಬೀದಿ ಹಾಡು ನಿಮಗೆ ಇಷ್ಟಾನಾ?’ ಎಂದು ಕೇಳಿದ. ಆ ಮನುಷ್ಯ ತಬ್ಬಿಬ್ಬಾಗಿ, ‘ಹ್ಞೂಂ,’ ಅಂದ. ರಾಸ್ಕೋಲ್ನಿಕೋವ್ ಮಾತು ಆಡುತ್ತಲೇ ಇದ್ದ. ‘ನನಗೆ ಚಳಿಗಾಲದ ಕತ್ತಲಲ್ಲಿ, ಮಳೆಗಾಲದ ಸಂಜೆಯಲ್ಲಿ ಹಾಡು ಕೇಳುವುದಕ್ಕೆ ಇಷ್ಟ. ಮಳೆ ಬಂದು ವದ್ದೆ ವದ್ದೆ ಅನ್ನಿಸುವ ಸಾಯಂಕಾಲದ ಹೊತ್ತಿನಲ್ಲಿ ಹಾಡು ಕೇಳಬೇಕು. ದಾರಿಯಲ್ಲಿ ಹೋಗುವವರೆಲ್ಲ ತೆಳು ಹಸಿರು ಬಣ್ಣವಾಗಿ ಕಾಣುವ ಹೊತ್ತಿನಲ್ಲಿ ಹಾಡು ಕೇಳಬೇಕು. ಗಾಳಿ ಬೀಸುತ್ತಾ ಬೀಳುತ್ತಿರುವ ಹಿಮದಲ್ಲಿ ಜನ ಕಾಯಿಲೆಯಿಂದ ಬಿಳಿಚಿಕೊಂಡ ಹಾಗೆ ಕಾಣುತ್ತಿರುವಾಗ ಹಾಡು ಕೇಳಬೇಕು. ಆಗ ಬೀದಿಯಲ್ಲಿ ಗ್ಯಾಸ್ ಲೈಟು ಹೊತ್ತಿಸಿರಬೇಕು…’

ಸಡಿಲವಾದ ಬಟ್ಟೆಯಲ್ಲಿ ವಿಚಿತ್ರವಾಗಿ ಕಾಣುತ್ತಿದ್ದ, ತನ್ನನ್ನೇ ದಿಟ್ಟಿಸುತ್ತಿದ್ದ ರಾಸ್ಕೋಲ್ನಿಕೋವ್ ಕೇಳಿದ ಪ್ರಶ್ನೆಯಿಂದ ಬೆದರಿದ ಆ ಮನುಷ್ಯ ‘ನನಗೆ ಗೊತ್ತಿಲ್ಲ ಸಾರ್, ಸಾರಿ, ಕ್ಷಮಿಸಿ…’ ಅನ್ನುತ್ತ ದಿಢೀರನೆ ರಸ್ತೆ ದಾಟಿ ಇನ್ನೊಂದು ಬದಿಗೆ ಹೊರಟು ಹೋದ.

ರಾಸ್ಕೋಲ್ನಿಕೋವ್ ಹಾಗೇ ಮುಂದೆ ನಡೆದ. ಹೇಮಾರ್ಕೆಟ್ಟಿನ ಮೂಲೆಗೆ ಬಂದ. ಅಲ್ಲಿ ಆ ಹೊತ್ತು ಲಿಜಾವೆಟ ಜೊತೆ ಮಾತನಾಡುತ್ತಿದ್ದ ವ್ಯಾಪಾರಿ, ಅವನ ಹೆಂಡತಿಯ ತಳ್ಳು-ಅಂಗಡಿ ಇತ್ತು. ಅವರು ಈಗ ಅಲ್ಲಿರಲಿಲ್ಲ. ಆ ಜಾಗ ಗುರುತು ಸಿಕ್ಕಿ ರಾಸ್ಕೋಲ್ನಿಕೋವ್ ನಿಂತ. ಸುತ್ತಲೂ ನೋಡಿದ, ಗಿರಣಿಯ ಬಾಗಿಲಲ್ಲಿ ಕೆಂಪು ಅಂಗಿ ತೊಟ್ಟ ಯುವಕ ಆಕಳಿಸುತ್ತಾ ಕೂತಿದ್ದ. ಅವನನ್ನು ನೋಡುತ್ತ ರಾಸ್ಕೋಲ್ನಿಕೋವ್ ಮಾತಾಡಿದ.

‘ಇಲ್ಲಿ ತಳ್ಳು ಗಾಡಿಯ ಮೇಲೆ ವ್ಯಾಪಾರ ಮಾಡತ್ತಿದ್ದರಲ್ಲಾ ಗಂಡಾ ಹೆಂಡತೀ..?’ ಅಂದ.

ರಾಸ್ಕೋಲ್ನಿಕೋವ್‍ ನನ್ನು ಕಾಲಿನಿಂದ ತಲೆಯವರೆಗೆ ಅನುಮಾನದಿಂದ ನೋಡುತ್ತಾ ‘ಇಲ್ಲಿ ಎಲ್ಲಾ ಥರದ ಜನ ಅಂಗಡಿ ಇಟ್ಟುಕೊಂಡು ವ್ಯಾಪಾರ ಮಾಡತಾರೆ,’ ಅಂದ ಯುವಕ.

‘ಅವನ ಹೆಸರೇನು?’

‘ಅವನ ಅಪ್ಪ ಅಮ್ಮ ಇಟ್ಟಿದ್ದೇ ಹೆಸರು.’

‘ನೀನೂ ಝರಸಿಕ್‍ ನವನಾ? ಯಾವೂರು ನಿಮ್ಮದು?’

ಅವನು ರಾಸ್ಕೋಲ್ನಿಕೋವ್‍ ನನ್ನು ಇನ್ನೊಂದು ಸಾರಿ ದುರುಗುಟ್ಟಿದ.

‘ನಮ್ಮದು ಪ್ರಾಂತ ಅಲ್ಲ ಯುವರ್ ಎಕ್ಸಲೆನ್ಸಿ, ಜಿಲ್ಲೆ ಸ್ಟ್ರಿಕ್ಟ್ ಆಗಿ ಮನೆಯಲ್ಲಿರುವವನು ನಮ್ಮಣ್ಣ. ನಾನು ಇಲ್ಲಿಗೆ ಬಂದುಬಿಟ್ಟೆವು. ಊರಿನ ಸುದ್ದಿ ತಿಳಿದಿಲ್ಲ. ದಯವಿಟ್ಟು ಮನ್ನಿಸಬೇಕು, ಯುವರ್ ಎಕ್ಸಲೆನ್ಸಿ.’

‘ಮೇಲೆ ಊಟ ಸಿಗತ್ತಾ?’

‘ಹೆಂಡದಂಗಡಿ ಇದೆ. ಬಿಲಿಯರ್ಡ್ಸ್ ಆಡಬಹುದು. ಚೆನ್ನಾಗಿರುವ ಪ್ರಿನ್ಸೆಸ್‍ ಗಳು ಇದಾರೆ…’ ಅನ್ನುತ್ತ ಸಿಳ್ಳೆ ಹಾಕಿದ.

ರಾಸ್ಕೋಲ್ನಿಕೋವ್ ಚೌಕವನ್ನು ದಾಟಿದ. ಅಲ್ಲಿ, ಮೂಲೆಯಲ್ಲಿ, ಜನ ದಟ್ಟವಾಗಿ ಗುಂಪು ಸೇರಿತ್ತು. ರೈತರು. ಜನರ ಮಧ್ಯೆ ದಾರಿ ಮಾಡಿಕೊಂಡು, ಒಬ್ಬೊಬ್ಬರ ಮುಖವನ್ನೂ ದಿಟ್ಟಿಸಿ ನೋಡುತ್ತ, ಗುಂಪಿನ ಮಧ್ಯಕ್ಕೆ ಹೋದ. ಯಾಕೋ, ಎಲ್ಲರ ಜೊತೆಗೂ ಮಾತಾಡಬೇಕು ಅನ್ನಿಸುತ್ತಿತ್ತು. ಜನ ಮಾತ್ರ ಅವನನ್ನ ಗಮನಿಸಲೇ ಇಲ್ಲ. ಅವರವರೇ ಪುಟ್ಟ ಪುಟ್ಟ ಗುಂಪು ಕಟ್ಟಿಕೊಂಡು ಅವರವರಲ್ಲೆ ಗಜಿಬಿಜಿ ಮಾತು ನಡೆಸಿದ್ದರು. ಯೋಚನೆ ಮಾಡುತ್ತ ಸ್ವಲ್ಪ ಹೊತ್ತು ನಿಂತ. ಆಮೇಲೆ ಫುಟ್‍ಪಾತಿನ ಮೇಲೆ ವೋಝೆನೆಸೆನ್ಸ್ಕಿ ಮುಖ್ಯ ರಸ್ತೆಯತ್ತ ನಡೆದ. ಚೌಕ ದಾಟಿದ ಮೇಲೆ ಅವನೊಂದು ಗಲ್ಲಿಯಲ್ಲಿದ್ದ.

ಅವನು ಈ ಚಿಕ್ಕ ಗಲ್ಲಿಯಲ್ಲಿ ಆಗಾಗ ಹೋಗುತ್ತಿದ್ದ. ಅದು ನಾಯಿಯ ಕಾಲಿನ ಹಾಗೆ ತಿರುವಿಕೊಂಡು ಚೌಕದಿಂದ ಸದೋವಯ ರಸ್ತೆಗೆ ಕರೆದುಕೊಂಡು ಹೋಗುತ್ತಿತ್ತು. ಇತ್ತೀಚೆಗೆ ಇಂತ ಜಾಗಗಳಲ್ಲಿ ಅಲೆದಾಡುವುದು ಅವನಿಗಿಷ್ಟವಾಗುತ್ತಿತ್ತು. ಅವನ ಮನಸ್ಸು ಕೆಟ್ಟಾಗ, ‘ಇನ್ನಷ್ಟು ಕೆಡಲಿ ಹಾಳಾದ್ದು ಮನಸ್ಸು,’ ಅಂದುಕೊಳ್ಳುತ್ತ ಇಂಥ ಜಾಗಗಳನ್ನ ಹುಡುಕಿಕೊಂಡು ಹೋಗುತ್ತಿದ್ದ. ಈಗ ಮಾತ್ರ ಆ ಗಲ್ಲಿಗೆ ಕಾಲಿಟ್ಟಾಗ ಮನಸಿನಲ್ಲಿ ಯಾವ ಯೋಚನೆಯೂ ಇರಲಿಲ್ಲ. ಅಲ್ಲಿದ್ದ ಒಂದು ಇಡೀ ಕಟ್ಟಡವನ್ನು ಹೆಂಡದಂಗಡಿಗಳಿಗೆ, ತಿಂಡಿ ಮನೆಗಳಿಗೆ ಬಾಡಿಗೆ ಕೊಟ್ಟಿದ್ದರು. ಸಾಮಾನ್ಯ ಉಡುಪು ತೊಟ್ಟ ಬರಿತಲೆಯ ಹೆಂಗಸರು ‘ಪಕ್ಕದ ಮನೆಗೆ ಹೋಗುವವರ ಹಾಗೆ’ ಈ ಕಟ್ಟಡದ ಕೋಣೆಗಳಿಗೆ ಪ್ರತಿ ನಿಮಿಷವೂ ಹೋಗಿ ಬಂದು ಮಾಡುತ್ತಿದ್ದರು. ಇಬ್ಬಿಬ್ಬರು, ಮೂವರು ಹೆಂಗಸರು ಫುಟ್‍ಪಾತಿನ ಉದ್ದಕ್ಕೂ ನಿಂತಿರುತ್ತಿದ್ದರು-ಅದರಲ್ಲೂ ತಳ ಮನೆಗೆ ಇಳಿಯುವ ಮೆಟ್ಟಿಲುಗಳ ಹತ್ತಿರ ಹೆಚ್ಚಾಗಿದ್ದರು. ಐದಾರು ಮೆಟ್ಟಿಲು ಇಳಿದು ಹೋದರೆ ಹಲವಾರು ‘ಶೃಂಗಾರ ನಿಲಯ’ಗಳು ಸಿಗುತ್ತಿದ್ದವು. ಇಂಥದೊಂದು ನಿಲಯದಿಂದ ಇಡೀ ಬೀದಿಗೆ ಕೇಳುವಷ್ಟು ಖುಷಿಯ ದೊಡ್ಡ ಗದ್ದಲ, ಗಿಟಾರ್ ವಾದನ, ಹಾಡು ಕೇಳುತ್ತಿದ್ದವು. ಆ ನಿಲಯದ ಬಾಗಿಲ ಮುಂದೆ, ಮೆಟ್ಟಿಲ ಮೇಲೆ ಹೆಂಗಸರ ದೊಡ್ಡ ಗುಂಪು ಕೂತಿತ್ತು. ಇನ್ನಷ್ಟು ಹೆಂಗಸರು ಫುಟ್‍ಪಾತಿನ ಮೇಲಿದ್ದರು. ಮತ್ತಷ್ಟು ಹೆಂಗಸರು ನಿಂತು ಮಾತಾಡಿಕೊಳ್ಳುತ್ತಿದ್ದರು.

ಕುಡಿದಿದ್ದ ಸೈನಿಕನೊಬ್ಬ ಬಾಯಲ್ಲಿ ಸಿಗರೇಟು ಕಚ್ಚಿಕೊಂಡು ಅಲ್ಲೇ ಠಳಾಯಿಸುತ್ತಿದ್ದ. ಜೋರಾಗಿ ಬೈಯುತ್ತಿದ್ದ. ಅವನೆಲ್ಲಿಗೋ ಹೋಗಬೇಕಾಗಿತ್ತು, ಎಲ್ಲಿಗೆ ಅನ್ನುವುದು ಮರೆತುಹೋದ ಹಾಗಿತ್ತು. ಚಿಂದಿ ತೊಟ್ಟ ಇಬ್ಬರು ಪೋಕರಿಗಳು ಬೈದಾಡಿಕೊಳ್ಳುತ್ತಿದ್ದರು. ಹರಕಲು ಬಟ್ಟೆ ತೊಟ್ಟ ಇನ್ನೊಬ್ಬ ಕುಡಿದದ್ದು ತಲೆಗೇರಿ ಫುಟ್‍ಪಾತಿನ ಮಧ್ಯದಲ್ಲೇ ಸತ್ತ ಹಾಗೆ ಬಿದ್ದಿದ್ದ. ರಾಸ್ಕೋಲ್ನಿಕೋವ್ ಹೆಂಗಸರ ದೊಡ್ಡ ಗುಂಪಿನ ಹತ್ತಿರ ನಿಂತ. ಅವರೆಲ್ಲ ಬರಿತಲೆಯಲ್ಲಿದ್ದರು, ಹತ್ತಿಯ ಬಟ್ಟೆ ತೊಟ್ಟಿದ್ದರು, ಕುರಿಯ ಚರ್ಮದ ಶೂ ಹಾಕಿಕೊಂಡಿದ್ದರು, ಗೊಗ್ಗರು ದನಿಯಲ್ಲಿ ಮಾತಾಡಿಕೊಳ್ಳುತ್ತಿದ್ದರು. ಕೆಲವರು ನಲವತ್ತು ದಾಟಿದವರು, ಕೆಲವರು ಹದಿನೇಳರ ಹರೆಯದವರು. ಎಲ್ಲರ ಕಣ್ಣಿನ ಸುತ್ತಲೂ ಕಪ್ಪು ಕಟ್ಟಿತ್ತು.

ಯಾಕೋ ಏನೋ ಕೆಳಗಿನ ಮನೆಗಳಿಂದ ಕೇಳಿಸುತ್ತಿದ್ದ ಹಾಡು, ಗದ್ದಲ, ಸಂಗೀತ ರಾಸ್ಕೋಲ್ನಿಕೋವ್‍ ನನ್ನು ಸೆಳೆದಿದ್ದವು. ಜನರ ಕಿರುಚಾಟ, ಜೋರು ನಗುಗಳ ಮಧ್ಯೆ ಗಿಟಾರ್ ಸದ್ದು ಕೇಳುತ್ತಿತ್ತು. ಸಣ್ಣ ಕೀಚಲು ದನಿಯ ಮೋಜಿನ ಹಾಡು. ಬೂಟುಗಾಲಲ್ಲಿ ತಾಳ ಹಾಕುತ್ತಿರುವುದು, ಯಾರೋ ಜೋರಾಗಿ ಕುಣಿಯುವುದು ಕೇಳಿಸುತ್ತಿತ್ತು. ಬಾಗಿಲ ಹತ್ತಿರ ಹೋಗಿ, ಸ್ವಲ್ಪ ಬಗ್ಗಿ ನೋಡುತ್ತ, ವಿಷಾದ ತುಂಬಿಕೊಂಡು, ಮಂಕಾಗಿ, ತೀರ ಗಮನವಿಟ್ಟು ಕೇಳಿಸಿಕೊಂಡ.

ಸಿಪಾಯೀ ಚಲುವಯ್ಯಾ
ದಮ್ಮಯ್ಯಾ, ಹೊಡೀತೀಯ ಯಾಕಯ್ಯಾ

ಕೀಚಲು ದನಿ ಹಾಡುತ್ತಿದ್ದ ಪದಗಳನ್ನು ಕೇಳಿಸಿ ಅರ್ಥಮಾಡಿಕೊಳ್ಳುವುದೇ ಮುಖ್ಯ ಅನ್ನುವ ಹಾಗೆ ನಿಂತಿದ್ದ.

‘ಒಳಕ್ಕೆ ಹೋದರೆ ಹೇಗೆ? ಅವರೆಲ್ಲ ಜೋರಾಗಿ ನಗತಾ ಇದಾರೆ! ಕುಡಿದಿದ್ದಾರೆ. ನಾನೂ ಕುಡಿದರೆ?’ ಅಂದುಕೊಂಡ.

‘ಒಳಕ್ಕೆ ಹೋಗಬೇಕಾ, ದೊರೇ?’ ಅಷ್ಟೇನೂ ಗೊಗ್ಗರಲ್ಲದ ದನಿಯಲ್ಲಿ ಒಬ್ಬಳು ಗಟ್ಟಿಯಾಗಿ ಕೇಳಿದಳು. ಹೆಂಗಸರ ಆ ಇಡೀ ಗುಂಪಿನಲ್ಲಿ ಅವಳೊಬ್ಬಳೇ ಹುಡುಗಿ, ನೋಡಿದರೆ ಅಸಹ್ಯವಾಗುವ ಹಾಗೂ ಇರಲಿಲ್ಲ.

‘ಓಹೋ, ಇಲ್ಲಿದಾಳೆ ಸುಂದರಿ!’ ನೆಟ್ಟಗೆ ನಿಲ್ಲುತ್ತ, ಅವಳನ್ನು ನೋಡುತ್ತ ಅಂದ.

ನಕ್ಕಳು. ‘ಸುಂದರಿ’ ಅಂದಿದ್ದಕ್ಕೆ ಖುಷಿಪಟ್ಟಿದ್ದಳು.

‘ನೀನೂ ಚೆನ್ನಾಗೇ ಇದೀಯಾ,’ ಅಂದಳು.

‘ಬರೀ ಮೂಳೆ ಚಕ್ಕಳ. ಈಗ ತಾನೇ ಆಸ್ಪತ್ರೆಯಿಂದ ಕಳಿಸಿದರಾ ಹೇಗೆ?’ ಇನ್ನೊಬ್ಬಳು ತಗ್ಗುದನಿಯಲ್ಲಿ ಅಂದಳು.

‘ಎಲ್ಲಾರೂ ಆಪೀಸರುಗಳ ಮಕ್ಕಳ ಹಾಗೆ ಆಡತಾರೆ. ಎಲ್ಲಾರಿಗೂ ಮೂಗು ಮೊಂಡು’ ಇದ್ದಕಿದ್ದ ಹಾಗೆ ಕಾಣಿಸಿದ ರೈತನೊಬ್ಬ ಬಾಯಿ ಹಾಕಿದ. ದಪ್ಪ ಕೋಟು ತೊಟ್ಟಿದ್ದ, ಗುಂಡಿ ಹಾಕಿರಲಿಲ್ಲ. ಕುಡಿದು ತೂರಾಡುತ್ತಿದ್ದ. ‘ಮಜಾ, ಮಜಾ ಇದೆ ಇಲ್ಲೀ!’ ಅಂದ.

‘ಹೋಗಂಗಿದ್ರೆ ಒಳಕ್ಕೋಗು!’

‘ಹೋಗ್ತೀನಿ. ತಡೀರೇ ಹುಡ್ಗೀರೇ ನೋಡಣಾ!’

ಮೆಟ್ಟಿಲ ಮೇಲೆ ತಟ್ಟಾಡಿಕೊಂಡು ಇಳಿದು ಹೋದ.
ರಾಸ್ಕೋಲ್ನಿಕೋವ್ ಮುಂದೆ ನಡೆದ.

‘ದಣೀ!’ ಹುಡುಗಿ ಕರೆದಳು.

‘ಏನು?’
ಅವಳಿಗೆ ಮುಜುಗರ.

‘ನಿಮ್ಮ ಜೊತೆ ಕಾಲ ಕಳೀಬೇಕು ಅಂತ ಇಷ್ಟ ದಣೀ. ಈಗ ನಿಮ್ಮೆದುರಿಗೆ ಇದೀನಲ್ಲಾ, ನಾಚಿಕೆ. ಕೇಳಬಾರದೂ, ಆದರೂ ಕೇಳತಿದೀನಿ, ಕುಡಿಯಕ್ಕೆ ಆರು ಕೊಪೆಕ್ ಕೊಡೂ ದಣೀ!’

ರಾಸ್ಕೋಲ್ನಿಕೋವ್ ಜೇಬಿಗೆ ಕೈ ಹಾಕಿದ. ಐದು ಕೊಪೆಕ್‍ ನ ಮೂರು ನಾಣ್ಯ ಸಿಕ್ಕವು.

‘ಎಂಥಾ ದೊಡ್ಡ ಮನಸು ನಿಂದು, ದಣೀ!;

‘ಏನು ನಿನ್ನ ಹೆಸರು?’

‘ಇಲ್ಲಿಗೆ ಬಂದಾಗ ದುಕ್ಲೀಡ ಎಲ್ಲಿ ಅಂತ ಕೇಳಿ ದಣೀ!’

‘ಎಲ್ಲೋ ಓದಿದ್ದೆನಲ್ಲಾ, ಎಲ್ಲಿ…’ ಮುಂದೆ ನಡೆಯುತ್ತ ರಾಸ್ಕೋಲ್ನಿಕೋವ್ ಯೋಚನೆ ಮಾಡಿದ. ‘ಎಲ್ಲಿ ಓದಿದ್ದೆ… ಯಾವನಿಗೋ ಮರಣ ದಂಡನೆ ಆಗಿರತ್ತೆ… ಸಾಯುವುದಕ್ಕೆ ಒಂದು ಗಂಟೆ ಮುಂಚೆ ಹೀಗನ್ನತಾನೆ ಅಥವಾ ಅಂದುಕೊಳ್ಳತಾನೆ… ಬೆಟ್ಟದ ತುದಿಯಲ್ಲಿ, ಎರಡು ಪಾದ ಊರುವಷ್ಟು ಜಾಗದಲ್ಲಿ ನಿಂತು, ಸುತ್ತಲೂ ಪ್ರಪಾತ, ಜೋರು ಬಿರುಗಾಳಿ… ಅಂಥ ಕಡೆ ಒಂದು ಚದರಡಿ ಜಾಗದಲ್ಲಿ ನಿಂತು ಇಡೀ ಜೀವನ, ಸಾವಿರ ವರ್ಷ, ಕೊನೆಯಿರದಷ್ಟು ಕಾಲ ಬದುಕುವುದು ವಾಸಿ, ಈಗ ಹೀಗೆ ಸಾಯಬಾರದು. ಬದುಕಬೇಕು ಅಷ್ಟೇ. ಬದುಕಬೇಕು, ಸುಮ್ಮನೆ ಬದುಕಬೇಕು, ಬದುಕಬೇಕು ಅಷ್ಟೇ! ಹೇಗೆ ಬದುಕಿದರೂ ಪರವಾಗಿಲ್ಲ…’ ಅಂದುಕೊಳ್ಳತಾನೆ. ಎಂಥಾ ಸತ್ಯ, ದೇವರೇ! ಎಂಥಾ ಸತ್ಯ! ಮನುಷ್ಯ ಕೇಡಿ!’ ಅಂದುಕೊಂಡ. ಒಂದು ಕ್ಷಣ ಬಿಟ್ಟು ‘ಮನುಷ್ಯನ್ನ ಕೇಡಿ ಅನ್ನುವವನು ಕೇಡಿ!’ ಎಂದು ಸೇರಿಸಿಕೊಂಡ.

ಮತ್ತೊಂದು ಬೀದಿಗೆ ಬಂದ. ‘ಆಹಾ! ಕ್ರಿಸ್ಟಲ್ ಪ್ಯಾಲೇಸ್! ರಝುಮಿಖಿನ್ ಆಗಲೇ ಈ ಜಾಗದ ಬಗ್ಗೆ ಹೇಳತಾ ಇದ್ದ. ಸರಿ, ನಾನು ಯಾಕೆ ಇಲ್ಲಿಗೆ ಬಂದೆ? ಹ್ಞಾ, ಹೌದು, ಓದುವುದಕ್ಕೆ! ಝೋಸ್ಸಿಮೋವ್ ಹೇಳಿದನಲ್ಲ, ಪೇಪರಿನಲ್ಲಿ ಓದಿದೆ ಅಂತ…’

‘ನಿಮ್ಮ ಹತ್ತಿರ ಪೇಪರ್ ಸಿಗತ್ತಾ?’ ವಿಶಾಲವಾಗಿದ್ದ, ತಕ್ಕಮಟ್ಟಿಗೆ ಅಚ್ಚುಕಟ್ಟಾಗಿಯೂ ಇದ್ದ ಪಡಖಾನೆಯೊಂದಕ್ಕೆ ಕಾಲಿಟ್ಟು ಕೇಳಿದ. ಅಲ್ಲಿ ಹಲವು ಕೋಣೆಗಳಿದ್ದವು. ಬಹಳಷ್ಟು ಖಾಲಿ ಇದ್ದವು. ಇಬ್ಬರು ಮೂರು ಗಿರಾಕಿಗಳು ಕೂತು ಟೀ ಕುಡಿಯುತ್ತಿದ್ದರು. ದೂರದ ಇನ್ನೊಂದು ರೂಮಿನಲ್ಲಿ ಮೂರು ನಾಲ್ಕು ಜನ ಗುಂಪಾಗಿ ನಿಂತು ಶಾಂಪೇನ್ ಕುಡಿಯುತ್ತಿದ್ದರು. ಅವರಲ್ಲೊಬ್ಬ ಪೋಲೀಸು ಗುಮಾಸ್ತ ಝಮ್ಯತೋವ್ ಅನ್ನಿಸಿತು. ದೂರಕ್ಕೆ ಗೊತ್ತಾಗುತ್ತಿರಲಿಲ್ಲ.

‘ಆಗಿದ್ದರೇನಂತೆ,’ ಅಂದುಕೊಂಡ.

‘ವೋಡ್ಕಾ ಬೇಕಾ ಸಾರ್?’ ವೇಟರ್ ಬಂದು ಕೇಳಿದ.

‘ಟೀ ಕೊಡು. ಆಮೇಲೆ, ಹಳೆಯ ಪೇಪರು ಬೇಕು, ಕಳೆದ ಐದು ದಿನದ್ದು. ನಿನಗೆ ಒಳ್ಳೆಯ ಟಿಪ್ಸ್ ಕೊಡತೇನೆ.’

‘ಸರಿ, ಸಾರ್. ಇಗೋ, ಇವತ್ತಿನದು ಇಲ್ಲಿದೆ. ಮಿಕ್ಕಿದ್ದು ತರತೇನೆ. ವೋಡ್ಕಾ, ಸಾರ್?

‘ಹಳೆಯ ಪೇಪರು, ಜೊತೆಗೆ ಟೀ ಬಂದವು. ರಾಸ್ಕೋಲ್ನಿಕೋವ್ ಪೇಪರಿನಲ್ಲಿ ಸುದ್ದಿ ಹುಡುಕಿದ: ‘ಇಝ್ಲರ್ ನ ಶೋ… ಇಝ್ಲರ್… ಅಝ್ಟೆಕ್… ಇಝ್ಲರ್, ಬರ್ತೋಲ… ಮಾಸ್ಸಿಮೋ… ಅಝ್ಟೆಕ್.. ಇಝ್ಲರ್… ಥೂ, ದೆವ್ವಾ! ತುಂಡು ಸುದ್ದಿಗಳು… ಮಹಡಿಯ ಮೇಲಿನಿಂದ ಬಿದ್ದ ಮಹಿಳೆ… ಮದ್ಯಪಾನದಿಂದ ಮರಣಿಸಿದ ವ್ಯಾಪಾರಿ… ಪೆಸ್ಕಿಯಲ್ಲಿ ಬೆಂಕಿ ಅನಾಹುತ… ಪೀಟರ್ಸ್‍ಬರ್ಗ್‍ ನಲ್ಲಿ ಇನ್ನೊಂದು ಬೆಂಕಿ ಅನಾಹುತ… ಇನ್ನೊಂದು… ಇನ್ನೂ ಒಂದು… ಇಝ್ಲರ್… ಇಝ್ಲರ್… ಮ್ಯಾಸಿಮೋ… ಹ್ಞಾ, ಇಗೋ ಇಲ್ಲಿದೆ.’

ಹುಡುಕುತ್ತಿದ್ದದ್ದು ಕೊನೆಗೂ ಸಿಕ್ಕಿತು. ಓದುವುದಕ್ಕೆ ಶುರು ಮಾಡಿದ. ಪ್ರಿಂಟಾಗಿದ್ದ ಸಾಲುಗಳು ಅವನ ಕಣ್ಣ ಮುಂದೆ ಕುಣಿಯುತ್ತಿದ್ದವು. ಆದರೂ ‘ಹೊಸ ಸುದ್ದಿ’ಯನ್ನು ಇಡಿಯಾಗಿ ಆತುರದಲ್ಲಿ ಓದಿ ಮುಗಿಸಿದ. ಆಮೇಲೆ ಆ ಬಗ್ಗೆ ಇನ್ನೇನಿದೆ ಹುಡುಕಿದ. ಪುಟ ತಿರುಗಿಸುವಾಗ ಸಹನೆ ಇಲ್ಲದೆ ಅವನ ಕೈ ಕಂಪಿಸುತ್ತಿದ್ದವು. ಇದ್ದಕಿದ್ದ ಹಾಗೇ ಯಾರೋ ಬಂದು ಅವನ ಪಕ್ಕದ ಟೇಬಲ್ಲಿನಲ್ಲಿ ಕೂತರು ಅನ್ನಿಸಿ ತಲೆ ಎತ್ತಿ ನೋಡಿದ. ಝಮ್ಯತೋವ್. ಪೋಲೀಸ್ ಸ್ಟೇಶನ್ನಿನ ಅದೇ ಗುಮಾಸ್ತ ಝಮ್ಯೊತೋವ್, ಮುಖದ ಮೇಲೆ ಅದೇ ಭಾವ, ಬೆರಳಿಗೆಲ್ಲ ಉಂಗುರ, ಗಡಿಯಾರದ ಸರಪಣಿ, ಪೊಮೇಡ್ ಹಚ್ಚಿದ ಕಪ್ಪು ಗುಂಗುರು ಕೂದಲ ನಡುವೆ ಅದೇ ಬೈತಲೆ, ಇತ್ತೀಚಿನ ಫ್ಯಾಶನ್ನಿನ ವೇಸ್ಟ್ ಕೋಟು ತೊಟ್ಟಿದ್ದ, ಸ್ವಲ್ಪ ಹಳತೆನಿಸುವ ಜಾಕೆಟ್, ಶುಭ್ರವಾದ ಅಂಗಿ, ಖುಷಿಯಾಗಿದ್ದ. ಶಾಂಪೇನ್ ಕುಡಿದು ಮುಖ ಕೆಂಪಾಗಿತ್ತು.

‘ಏನು! ನೀನಿಲ್ಲೀ?’ ಅವನು ತಬ್ಬಿಬ್ಬಾದವನ ಹಾಗೆ ಕೇಳಿದ. ತಾವಿಬ್ಬರೂ ಎಷ್ಟೋ ಕಾಲದ ಪರಿಚಯ ಅನ್ನುವ ಹಾಗಿತ್ತು ಅವನ ದನಿ.
‘ರಝುಮಿಖಿನ್ ನಿನ್ನೆ ತಾನೇ ಹೇಳಿದ್ದ ನಿನಗೆ ಇನ್ನೂ ಪ್ರಜ್ಞೆ ಬಂದಿಲ್ಲ ಅಂದಿದ್ದ. ಎಂಥಾ ವಿಚಿತ್ರ. ನಾನು ನಿಮ್ಮನೆ ಹತ್ತಿರ ಹೋಗಿದ್ದೆ…’

ಸಿಕ್ಕಿ ಬೀಳತೇನೆ ಅನ್ನಿಸಿತು ರಾಸ್ಕೋಲ್ನಿಕೋವ್‌ ಗೆ. ಪೇಪರುಗಳನ್ನ ಪಕ್ಕಕ್ಕೆ ಎತ್ತಿಟ್ಟ. ಝಮ್ಯತೋವ್‍ ತ್ತ ತಿರುಗಿದ. ಸೊಟ್ಟಗೆ ನಕ್ಕ. ಆ ನಗುವಿನಲ್ಲಿ ಅಸಹನೆ ಸುಳಿದಾಡುತ್ತಿತ್ತು.

‘ಹೋಗಿರತೀರಿ ನನಗೆ ಗೊತ್ತು ಸಾರ್. ನನ್ನ ಕಾಲುಚೀಲ ಹುಡುಕಿರತೀರಿ… ಗೊತ್ತಾ, ರಝುಮಿಖಿನ್ ನಿಮ್ಮ ಫ್ಯಾನ್ ಆಗಿದಾನೆ. ಹೇಳತಾನೆ, ನೀವು ಅವನ ಜೊತೆ ಲವಿಝ ಇವಾನೋವ್ನಾರನ್ನ ನೋಡೋದಕ್ಕೆ ಹೋಗಿದ್ದರಂತೆ. ಅದೇ, ಅವಳಿಗೋಸ್ಕರ ನೀವು ಅಷ್ಟೊಂದು ತೊಂದರೆ ತಗೊಂಡಿರಂತೆ, ಸಿಡಿಮದ್ದು ಲೆಫ್ಟಿನೆಂಟ್‍ ಗೆ ಕಣ್ಣು ಹೊಡೆದಿರಂತೆ, ಅವನಿಗೆ ಅರ್ಥವೇ ಆಗಲಿಲ್ಲವಂತೆ, ಜ್ಞಾಪಕ ಇದೆಯಾ? ಅವರಿಗೆ ಯಾಕೆ ಅರ್ಥ ಆಗಲಿಲ್ಲವೋ? ಹ್ಞಾಂ?

‘ಎಂಥ ರೌಡಿ ಅವನು!’

‘ಯಾರು? ಸಿಡಿಮದ್ದು ಲೆಫ್ಟಿನೆಂಟ್?’

‘ಅಲ್ಲ, ನಿನ್ನ ಫ್ರೆಂಡು, ರಝುಮಿಖಿನ್…;

‘ಲೈಫು ಅಂದರೆ ನಿಮ್ಮ ಲೈಫು, ಝಮ್ಯೊತೋವ್. ಕಾಸು ಬಿಚ್ಚದೆ ಯಾವ ಖುಷಿ ಜಾಗಕ್ಕೆ ಬೇಕಾದರೂ ಹೋಗಬಹುದು! ಈಗ ನಿಮ್ಮ ಗ್ಲಾಸಿಗೆ ಯಾರೋ ಶಾಂಪೇನು ಸುರೀತಾ ಇದ್ದರಲ್ಲ…?’

‘ಶಾಂಪೇನು ಸುರಿಯುವುದಾ! ಅತಿಯಾಯಿತು. ನಾವು ಸುಮ್ಮನೆ ಕುಡೀತಾ ಇದ್ದೆವು, ಅಷ್ಟೆ.’

‘ಏನಂದರೂ ಅದು ಲಾಭಾನೇ!’ ಝಮ್ಯೊತೋವ್‍ ನ ಭುಜ ತಟ್ಟಿ ರಾಸ್ಕೋಲ್ನಿಕೋವ್ ನಕ್ಕ. ‘ಹೊಟ್ಟೆಯ ಕಿಚ್ಚಿನಿಂದ ಹೇಳತಾ ಇಲ್ಲ, ಬರೀ ತಮಾಷೆಗೆ, ಅಷ್ಟೆ. ಅದೇ ಆ ಬಣ್ಣ ಬಳಿಯುವವರು ತಮಾಷೆಗೆ ಗುದ್ದಾಡಿಕೊಳ್ಳುತಿದ್ದರಲ್ಲಾ, ಹಾಗೆ.’

‘ಆ ಸುದ್ದಿ ನಿನಗೆ ಹೇಗೆ ಗೊತ್ತು?’

‘ಗೊತ್ತು! ನಿನಗಿಂತಲೂ ಜಾಸ್ತಿ ಗೊತ್ತಿದೆ, ನನಗೆ…’

‘ವಿಚಿತ್ರ ನೀನು… ನಿನಗಿನ್ನೂ ಹುಷಾರಾಗಿಲ್ಲ, ಹೊರಗೆಲ್ಲ ಸುತ್ತಾಡಬಾರದು…’

‘ನಾನು ವಿಚಿತ್ರ ಅನ್ನಿಸುತ್ತೇನಾ ನಿನಗೆ?’

‘ಹ್ಞೂಂ. ಏನಿದು, ಪೇಪರು ಓದತಾ ಇದೀಯಾ?’

‘ಹ್ಞೂಂ.’

‘ಬೆಂಕಿ ಬಿದ್ದ ಸುದ್ದಿ ಬಹಳ ಬಂದಿವೆ…’

‘ಬೆಂಕಿಯ ಸುದ್ದಿ ಓದತಾ ಇಲ್ಲ ನಾನು. ಅನ್ನುತ್ತ ಕಣ್ಣು ಮಿಟುಕಿಸಿ, ತುಟಿ ಸೊಟ್ಟ ಮಾಡಿಕೊಂಡು ನಕ್ಕ. ‘ಏನು ಓದತಾ ಇದೇನೆ, ತಿಳಿದುಕೊಳ್ಳಕ್ಕೆ ಪರದಾಡತಾ ಇದೀಯ, ಅಲ್ಲವಾ?’

‘ಖಂಡಿತ ಇಲ್ಲ. ಸುಮ್ಮನೆ ಕೇಳಿದೆ. ಕೇಳಬಾರದಾ? ಅಲ್ಲಾ, ಯಾಕೆ ನೀನು…?’

‘ನೀನು ಎಜುಕೇಟೆಡ್, ಹ್ಞೂಂ?

‘ಹೈಸ್ಕೂಲು ಮುಗಿಸಿದೆ,’ ಝಮ್ಯತೋವ್ ಹೆಮ್ಮೆಪಡುತ್ತಾ ಅಂದ.

‘ಹೈಸ್ಕೂಲು! ಅಯ್ಯೋ, ಗುಬ್ಬಚ್ಚೀ! ತಲೆ ಮಧ್ಯ ಬೈತಲೆ ತೆಕ್ಕೊಂಡು, ಬೆರಳಿಗೆಲ್ಲ ಉಂಗುರ ಇಟ್ಟುಕೊಂಡು, ಸಾಹುಕಾರ, ಕಣಯ್ಯಾ! ವ್ಹಾ, ಜಾಣಮರಿ!’ ರಾಸ್ಕೋಲ್ನಿಕೋವ್ ಅವನನ್ನು ನೋಡುತ್ತ ಗೊಳ್ಳನೆ ನಕ್ಕುಬಿಟ್ಟ. ಝಮತ್ಯೋವ್‍ ಗೆ ಅವಮಾನ ಅನ್ನಿಸಲಿಲ್ಲ, ಆಶ್ಚರ್ಯವಾಯಿತು.

‘ವ್ಹಾ, ಜಾಣಮರೀ!’ ಝಮ್ಯೊತೋವ್ ಅವನ ಮಾತನ್ನೇ ಗಂಭೀರವಾಗಿ ಮತ್ತೆ ಅಂದ. ‘ನೀನಿನ್ನೂ ಸನ್ನಿ ಹಿಡಿದು ಅರಚಾಡತಿದ್ದೀಯ ಅನ್ನಿಸತ್ತೆ.

‘ಅರಚಾಡತಾ ಇದೀನಾ? ನಾನ್‍ಸೆನ್ಸ್ ಗುಬ್ಬೀ ಮರೀ!… ಅಂದರೆ ನಾನು ನಿನ್ನ ಕಣ್ಣಿಗೆ ವಿಚಿತ್ರವಾಗಿ ಕಾಣತೇನೆ. ಹೌದಾ? ನನ್ನ ಬಗ್ಗೆ ನಿನಗೆ ಕುತೂಹಲ ಇದೆ, ಹೌದಾ? ಇದೆಯಾ?’

‘ಇದೆ.’

‘ಹಾಗಾದರೆ, ನಾನೇನು ಓದತಾ ಇದ್ದೆ, ಹೇಳತೇನೆ. ಏನು ನೋಡ್ತಾ ಇದ್ದೆ, ನಾನು? ಎಷ್ಟೊಂದು ಹಳೆ ಪೇಪರೆಲ್ಲ ತರಿಸಿಕೊಂಡಿದೇನೆ, ನೋಡು. ಅನುಮಾನ ಬಂತು, ಅಲ್ಲವಾ?’

‘ಸರಿ, ಹೇಳು.’

‘ಕಿವಿ ನಿಮಿರಿತಾ, ಹ್ಞಾಂ?’

‘ಕಿವಿ ಯಾಕೆ ನಿಮಿರಬೇಕು?’

‘ಯಾಕೆ ಅನ್ನುವುದನ್ನ ಆಮೇಲೆ ಹೇಳತೇನೆ. ಈಗ ಘೋಷಣೆ ಮಾಡತಿದೀನಿ… ಅಲ್ಲ ನಿನ್ನ ಎದುರಿಗೆ ಹೇಳಿಕೆ ಕೊಡತಿದೀನಿ… ಉಹ್ಞೂಂ… ಅಲ್ಲ… ತಪ್ಪೊಪ್ಪಿಗೆ ಮಾಡಿಕೊಳ್ಳತಾ ಇದೇನೆ… ಇಲ್ಲ, ಅದೂ ಸರಿಯಲ್ಲ… ಸಾಕ್ಷಿ ಹೇಳತಾ ಇದೇನೆ.. ಅದು ಸರಿ… ಕೇಳು… ನಾನು ಓದತಾ ಇದ್ದೆ… ಹುಡುಕುತಾ ಇದ್ದೆ, ಏನನ್ನ ಅಂದರೆ…’ ರಾಸ್ಕೋಲ್ನಿಕೋವ್ ಕಣ್ಣು ಕಿರಿದು ಮಾಡಿಕೊಂಡು, ಸ್ವಲ್ಪ ಹೊತ್ತು ಸುಮ್ಮನಿದ್ದ… ‘ಏನು ನೋಡತಾ ಇದ್ದೆ ಅಂದರೆ… ಏನು ಹುಡುಕುವುದಕ್ಕೆ ಇಲ್ಲಿಗೆ ಬಂದೆ ಅಂದರೆ—ಆಫೀಸರನ ವಿಧವೆ, ಮುದುಕಿ, ಇದ್ದಳಲ್ಲ ಅವಳ ಕೊಲೆಯ ಬಗ್ಗೆ ತಿಳಿದುಕೊಳ್ಳುವುದಕ್ಕೆ ಬಂದೆ,’ ಕೊನೆಗೂ ಹೇಳಿಬಿಟ್ಟ. ದನಿ ಪಿಸುದನಿಯಾಗಿತ್ತು. ಅವನ ಮುಖ ಝಮ್ಯತೋವ್‍ ನ ಮುಖಕ್ಕೆ ಬಹಳ ಹತ್ತಿರ ಬಂದಿತ್ತು. ಝೊಮ್ಯೊತೋವ್‍ ಅವನ ಕಣ್ಣಲ್ಲಿ ಕಣ್ಣಿಟ್ಟು, ಅಲ್ಲಾಡದೆ, ಮುಖ ಹಿಂದಕ್ಕೆ ಸರಿಸದೆ, ರಾಸ್ಕೋಲ್ನಿಕೋವ್‍ ನನ್ನೇ ನೇರವಾಗಿ ದಿಟ್ಟಿಸಿದ. ಅವರಿಬ್ಬರ ನಡುವೆ ಒಂದು ಇಡೀ ನಿಮಿಷ ಮೌನ ನೆಲೆಸಿತ್ತು. ಇಬ್ಬರೂ ಒಬ್ಬರನ್ನೊಬ್ಬರು ಒಂದು ಇಡೀ ನಿಮಿಷ ಹಾಗೇ ನೋಡಿಕೊಳ್ಳುತ್ತಲೇ ಇದ್ದರು.

ಝುಮ್ಯೊತೋವ್ ಸಹನೆ ಕಳಕೊಂಡು, ಗಲಿಬಿಲಿಯಾಗಿ ತಟ್ಟನೆ ಜೋರಾಗಿ ‘ಸರಿ, ಅದಕ್ಕೇನೀಗಾ?’ ಅಂದ.

ಝಮ್ಯೊತೋವ್ ಉದ್ಗಾರ ತೆಗೆದಿದ್ದರೂ ರಾಸ್ಕೋಲ್ನಿಕೋವ್ ಮಾತ್ರ ಅದೇ ಪಿಸುದನಿಯಲ್ಲಿ ಮಾತಾಡಿದ, ‘ಅದೇ ಮುದುಕಿ, ಜ್ಞಾಪಕ ಇದೆಯಾ, ಅವತ್ತು ಆಫೀಸಿನಲ್ಲಿ ನೀನು ಅವಳ ಸುದ್ದಿ ಮಾತಾಡಿದಾಗ ನಾನು ಎಚ್ಚರ ತಪ್ಪಿ ಬಿದ್ದೆನಲ್ಲಾ, ಅದೇ ಮುದುಕಿ. ಜ್ಞಾಪಕ ಬಂತಾ ಈಗ?’

‘ಅಂದರೆ ಏನರ್ಥ? ಅರ್ಥ ಆಗುವುದಕ್ಕೆ ಏನಿದೆ?’ ಝಮ್ಯೊತೋವ್ ಬೆದರಿದ ದನಿಯಲ್ಲಿ ಕೇಳಿದ.

ರಾಸ್ಕೋಲ್ನಿಕೋವ್‍ ನ ನಿಶ್ಚಲ, ಗಂಭೀರ ಮುಖ ಕ್ಷಣಾರ್ಧದಲ್ಲಿ ಕರಗಿ ಬದಲಾಗಿ ಮತ್ತೆ ಅದೇ ಸನ್ನಿ ನಗೆ ಹುಟ್ಟಿತು. ನಗು ತಡೆಯಲು ಆಗುವುದೇ ಇಲ್ಲ ಅನಿಸುತ್ತಿತ್ತು. ಅದೇ ಕ್ಷಣಾರ್ಧದಲ್ಲಿ ಅತ್ಯಂತ ಸ್ಫುಟವಾದ ಚಿತ್ರಗಳು ಅವನಲ್ಲಿ ಮೂಡಿದ್ದವು; ಕೊಡಲಿ ಹಿಡಿದು ಅವನು ಬಾಗಿಲ ಹಿಂದೆ ನಿಂತಿದ್ದ ಕ್ಷಣ, ಹೊರಗೆ ಯಾರೋ ಬಾಗಿಲು ತಟ್ಟಿದಾಗ ಮೇಲೆ ಕೆಳಗೆ ಕುಣಿಯುತ್ತಿದ್ದ ಬಾಗಿಲ ಚಿಲಕ, ಬಾಗಿಲಾಚೆಗೆ ಇದ್ದವರು ಬೈಯುತ್ತಿದ್ದದ್ದು, ಬಾಗಿಲು ದೂಡುತ್ತಿದ್ದದ್ದು, ಜೋರಾಗಿ ಕಿರುಚಿ ಅವರನ್ನೆಲ್ಲ ಬೈಯಬೇಕು, ನಾಲಗೆ ಹೊರಕ್ಕೆ ಚಾಚಿ ಅಣಕಿಸಬೇಕು, ನಗಬೇಕು ನಗಬೇಕು ಜೋರಾಗಿ ನಗಬೇಕು ಎಂದು ತಟ್ಟನೆ ಅನಿಸಿದ್ದು, ಇವೆಲ್ಲ ಮನಸಿನಲ್ಲಿ ಹಾದು ಹೋದವು.

ಝುಮ್ಯತೋವ್ ‘ನಿನಗೆ ಹುಚ್ಚು ಹಿಡಿದಿರಬೇಕು, ಅಥವಾ…’ ಮನಸ್ಸಿಗೆ ಅವನು ಇದುವರೆಗೆ ಊಹೆ ಮಾಡಿರದಿದ್ದ ಏನೋ ತಟ್ಟನೆ ಮಿಂಚಿತು ಅನ್ನುವ ಹಾಗೆ ಮಾತು ನಿಲ್ಲಿಸಿಬಿಟ್ಟ.

‘ಅಥವಾ? ಏನು ಅಥವಾ? ಹೇಳು ಮುಂದಕ್ಕೆ,’ ರಾಸ್ಕೋಲ್ನಿಕೋವ್ ಬಲವಂತ ಮಾಡುವ ದನಿಯಲ್ಲಿ ಕೇಳಿದ.

‘ಏನಿಲ್ಲ! ಅಷ್ಟೇ,’ ಝಮ್ಯೊತೋವ್ ಕೆರಳಿ ನುಡಿದ.

ಇಬ್ಬರೂ ಸುಮ್ಮನಾದರು. ಅನಿರೀಕ್ಷಿತವಾಗಿ ಜೋರಾಗಿ ನಕ್ಕ ರಾಸ್ಕೋಲ್ನಿಕೋವ್ ತಟ್ಟನೆ ವಿಷಾದದಲ್ಲಿ ದುಃಖದಲ್ಲಿ ಅದ್ದಿಹೋದ. ಮೊಳಕೈಯನ್ನು ಮೇಜಿನ ಮೇಲೂರಿ, ತಲೆಯನ್ನು ಅಂಗೈಯಲ್ಲಿರಿಸಿ, ಝಮ್ಯೊತೋವ್‍ ನನ್ನು ಪೂರಾ ಮರೆತು, ಸುಮ್ಮನೆ ಕೂತುಬಿಟ್ಟ. ಬಹಳ ಹೊತ್ತು ಹೀಗೇ ಇದ್ದ.

‘ಟೀ ಕುಡಿ, ಆರಿ ಹೋಗತ್ತೆ,’ ಅಂದ ಝಮ್ಯೊತೋವ್.

‘ಹ್ಞಾಂ? ಏನೂ? ಟೀ?… ಸರಿ…’ ಅನ್ನುತ್ತ ರಾಸ್ಕೋಲ್ನಿಕೋವ್ ಒಂದು ಗುಟುಕು ಟೀ ಕುಡಿದ, ಬ್ರೆಡ್ಡು ಸ್ವಲ್ಪ ತಿಂದ. ಝಮ್ಯತೋವ್‍ ನನ್ನು ನೋಡುತ್ತ ಸಂಜೆಯಿಂದ ನಡೆದದ್ದೆಲ್ಲ ಇದ್ದಕ್ಕಿದ್ದ ಹಾಗೆ ನೆನಪಿಗೆ ಬಂದು ಒಳಗೇ ಎಚ್ಚರ ಮೂಡಿದ ಹಾಗನ್ನಿಸಿತು. ಮುಖದ ಮೇಲೆ ಮಾತ್ರ ಮೊದಲಿನದೇ ವಕ್ರವಾದ ನಗು ಇತ್ತು. ಟೀ ಕುಡಿಯುತ್ತ ಕೂತ.

‘ಇತ್ತೀಚೆಗಂತೂ ದಗಲ್ಬಾಜಿಗಳು ಹೆಚ್ಚಾಗಿದಾರೆ. ಮೊನ್ನೆಮೊನ್ನೆ ಮಾಸ್ಕೋ ಗೆಸೆಟ್‍ ನಲ್ಲಿ ಓದಿದೆ, ಖೋಟಾ ಲಾಟರಿ ಟಿಕೆಟ್ಟು ಪ್ರಿಂಟು ಮಾಡತಾ ಇದ್ದ ಗ್ಯಾಂಗನ್ನೇ ಹಿಡಿದು ಹಾಕಿದಾರೆ. ಇಡೀ ಗ್ಯಾಂಗೇ ಇತ್ತಂತೆ.’ ಅಂದ ಝಮ್ಯೊತೋವ್.

‘ಓ, ಅದನ್ನ ಓದಿ ಆಗಲೇ ಒಂದು ತಿಂಗಳಾಯಿತು.’ ರಾಸ್ಕೋಲ್ನಿಕೋವ್ ಶಾಂತವಾಗಿ ಮಾತಾಡುತ್ತಿದ್ದ ‘ನಿನ್ನ ದೃಷ್ಟಿಯಲ್ಲಿ ಅವರೆಲ್ಲ ದಗಲ್ಬಾಜಿಗಳು,’ ಅನ್ನುತ್ತ ಹಲ್ಲು ಕಿರಿದ.

‘ಇನ್ನೇನನ್ನಬೇಕು ಅವರನ್ನ?’

‘ಅವರನ್ನ? ಎಳಸುಗಳು, ಇನ್ನೂ ಪಳಗದವರು, ದಗಲ್ಬಾಜಿಗಳಂತೆ! ಐವತ್ತು ಜನ ಸೇರಿ ಅಂಥ ಕೆಲಸಕ್ಕೆ ಒಟ್ಟಿಗೆ ಕೈ ಹಾಕಿದಾರೆ. ಎಲ್ಲಾದರೂ ಉಂಟಾ? ಇಂಥ ಕೆಲಸಕ್ಕೆ ಮೂರು ಜನವೂ ಹೆಚ್ಚೇ. ಅವರಿಗೆ ಯಾರಿಗೂ ತಮ್ಮ ಮೇಲೆ ತಮಗೇ ವಿಶ್ವಾಸ ಇರಲಿಲ್ಲ, ಬೇರೆಯವರನ್ನ ನಂಬತಾ ಇದ್ದರು! ಅವರಲ್ಲಿ ಒಬ್ಬ ಕುಡಿದು ಬಾಯಿ ಬಿಟ್ಟರೂ ಇಡೀ ಪ್ಲಾನು ಕುಸಿದು ಬೀಳತ್ತೆ. ಎಳಸುಗಳು! ನಂಬಬಾರದವರನ್ನೆಲ್ಲ ನಂಬಿದರು. ಎದುರಿಗೆ ಸಿಕ್ಕವರಿಗೆಲ್ಲ ಖೋಟಾ ಟಿಕೆಟ್ಟು ಕೊಟ್ಟು ದುಡ್ಡು ತರಲು ಬ್ಯಾಂಕಿಗೆ ಕಳಿಸಿದರು. ಈ ಎಳಸುಗಳು ಗೆದ್ದಿದ್ದರು ಅಂತಲೇ ಇಟ್ಟುಕೋ. ಒಬ್ಬೊಬ್ಬರಿಗೂ ಹತ್ತು ಲಕ್ಷ ಸಿಕ್ಕಿತು ಅಂದುಕೊಳ್ಳಣ. ಆಮೇಲೆ? ಮುಂದಕ್ಕೇನು? ಇಡೀ ಬದುಕು ಒಬ್ಬರನ್ನ ಒಬ್ಬರು ಆತುಕೊಂಡೇ ಇರಬೇಕಾಗಿತು, ಇಡೀ ಬದುಕು! ಅದಕ್ಕಿಂತ ನೇಣು ಹಾಕ್ಕೊಳ್ಳೋದು ವಾಸಿ. ಹೋಗಲಿ ಅಂದರೆ ಅವರಿಗೆ ದುಡ್ಡು ಕೂಡ ಸಿಗಲಿಲ್ಲ. ಒಬ್ಬ ಹೋಗಿ ಖೋಟಾ ಟಿಕೆಟ್ಟು ಬ್ಯಾಂಕಿಗೆ ಕೊಟ್ಟ. ಐದು ಸಾವಿರ ಇಸಕೊಂಡ, ಕೈ ನುಡುಗುವುದಕ್ಕೆ ಶುರುವಾಯಿತು. ನಾಲ್ಕು ಸಾವಿರ ಎಣಿಸಿಕೊಂಡ. ಮಿಕ್ಕಿದ್ದನ್ನ ಎಣಿಸದೆ ಜೇಬಿಗಿಟ್ಟುಕೊಂಡು ಓಡಿದ. ಅನುಮಾನ ಬಂತು, ಅಟ್ಟಿಸಿಕೊಂಡು ಹೋಗಿ ಹಿಡಿದರು. ನಂಬಕ್ಕಾಗತ್ತಾ? ಹೀಗೆ ನಡೆಯತ್ತಾ?’

‘ಅವನ ಕೈ ಮೋಸಮಾಡಿತು? ನಂಬಕ್ಕಾಗಲ್ಲವಾ? ಆಗತ್ತೆ, ಅವನಿಗೆ ಮನಸಿನ ಆತಂಕ, ಒತ್ತಡ ತಡಕೊಳ್ಳುವುದಕ್ಕೆ ಆಗದೆ ಕೈ ನಡುಗಿತು’ ಅಂದ ಝಮ್ಯೊತೋವ್.

‘ಅಷ್ಟೂ ತಡಕೊಳ್ಳಕ್ಕೆ ಆಗಲ್ಲವಾ?’

‘ನಿನ್ನ ಕೈಯಲ್ಲಿ ಆಗತಿತ್ತಾ? ನನಗೆ ಆಗತಿರಲಿಲ್ಲ. ನೂರು ರೂಬಲ್ ಬಹುಮಾನ ಕೊಡತೇನೆ ಅಂದರೂ ಅಂಥ ಒತ್ತಡ ಸಹಿಕೊಳ್ಳತೀಯಾ ಅಂದರೆ ಒಲ್ಲೆ ಅನ್ನತೇನೆ. ಖೋಟಾ ನೋಟು ತಗೊಂಡು ಚಿಲ್ಲರೆ ಬೇಕು ಅಂತ ಬ್ಯಾಂಕಿಗೇ ಹೋಗುವುದು! ಸಾಚಾ ಯಾವುದು ಖೋಟಾ ಯಾವುದು ಅನ್ನುವದನ್ನ ದಿನವೂ ನೋಡುವ ಜನಕ್ಕೆ ಟೋಪಿ ಹಾಕಕ್ಕಾಗತ್ತಾ! ದಿಕ್ಕು ತೋಚದೆ ತಬ್ಬಿಬ್ಬಾಗತಿದ್ದೆ ನಾನಾಗಿದ್ದರೆ. ನಿನ್ನ ಕೈಯಲ್ಲಾಗತಿತ್ತಾ?’

ನಾಲಗೆ ಚಾಚಿ ಅಣಕಿಸಬೇಕು ಅನ್ನುವ ಯೋಚನೆ ಇದ್ದಕಿದ್ದ ಹಾಗೆ ರಾಸ್ಕೋಲ್ನಿಕೋವ್‍ ಗೆ ಬಂದಿತು. ಬೆನ್ನು ಹುರಿಯಲ್ಲಿ ಚಳಕು ಹರಿದಾಡಿತು.

ಸುತ್ತಿ ಬಳಸಿ ಮಾತಾಡಿದ. ‘ನಾನಾಗಿದ್ದರೆ ಹಾಗೆ ಮಾಡತಿರಲಿಲ್ಲ. ಏನು ಮಾಡತಿದ್ದೆ ಅಂದರೆ, ಬ್ಯಾಂಕಿಗೆ ಹೋಗಿ ನೋಟು ಮುರಿಸುತಿದ್ದೆ, ಅಲ್ಲೇ ಎಣಿಸತಾ ಇದ್ದೆ. ಮೊದಲ ಸಾವಿರದ ಕಟ್ಟನ್ನ ನಾಕು ಸಾರಿ ಎಣಿಸತಿದ್ದೆ. ಹಿಂದಿನಿಂದ, ಮುಂದಿನಿಂದ. ಒಂದೊಂದು ನೋಟನ್ನೂ ಪರೀಕ್ಷೆ ಮಾಡತಿದ್ದೆ. ಆಮೇಲೆ ಇನ್ನೊಂದು ಕಟ್ಟು. ಅರ್ಧದಷ್ಟು ಎಣಿಸಿದ ಮೇಲೆ ಐವತ್ತರ ಒಂದು ನೋಟು ತೆಗೆದು, ಬೆಳಕಿಗೆ ಎತ್ತಿ ಹಿಡಿದು, ತಿರುಗಿಸಿ ಮುರುಗಿಸಿ ನೋಡಿ, ಇದು ಖೋಟಾ ಅನ್ನಿಸತ್ತೆ ಅಂದು, ಮೊನ್ನೆ ನಮ್ಮ ನಂಟರ ಹೆಂಗಸರೊಬ್ಬರಿಗೆ ಹೀಗೇ ಇಪ್ಪತ್ತೈದು ರೂಬಲ್ ಟೋಪಿ ಬಿತ್ತು ಅಂತ ಕತೆ ಹೇಳತಿದ್ದೆ. ಆಮೇಲೆ ಮೂರನೆಯ ಕಟ್ಟು ಎತ್ತಿಕೊಳ್ಳತಿದ್ದೆ. ಮಧ್ಯದ್ಲೇ ನಿಲ್ಲಿಸಿ, ಸಾರೀ, ಎರಡನೆ ಕಟ್ಟು ಎಣಿಸುವಾಗ ಯಾಕೋ ಲೆಕ್ಕ ತಪ್ಪಿ ಹೋಯಿತು ಅನ್ನಿಸತಾ ಇದೆ ಅಂದು, ಮೂರನೆಯ ಕಟ್ಟು ಕೆಳಗಿಟ್ಟು ಎರಡನೆಯ ಕಟ್ಟು ಮತ್ತೆ ಎತ್ತಿಕೊಳ್ಳತಿದ್ದೆ. ಹೀಗೇ ಮಾಡತಾ ಐದು ಸಾವಿರ ಎಣಿಸತಿದ್ದೆ.

ಮುಗಿದ ಮೇಲೆ ಐದನೆಯ ಕಟ್ಟಿನಿಂದ ಒಂದು, ಎರಡನೆಯ ಕಟ್ಟಿನಿಂದ ಒಂದು ನೋಟು ಎಳಕೊಂಡು, ಮತ್ತೆ ಬೆಳಕಿಗೆ ಹಿಡಿದು ನೋಡಿ, ಅನುಮಾನದ ದನಿಯಲ್ಲಿ, ಇವೆರಡು ಬೇರೆ ಕೊಡಿ, ಪ್ಲೀಸ್ ಅನ್ನತಿದ್ದೆ.’ ಆ ಗುಮಾಸ್ತನಿಗೆ ಅಷ್ಟು ಹೊತ್ತಿಗೆ ತಲೆ ಕೆಟ್ಟು, ನಾನು ತೊಗಿದರೆ ಸಾಕೆಂದು ಹೇಳಿದ್ದೆಲ್ಲ ಮಾಡುವ ಸ್ಥಿತಿಗೆ ಬಂದಿರುತಿದ್ದ. ಬಾಗಿಲವರೆಗೂ ಹೋದವನು ವಾಪಸ್ ಬಂದು, ಸಾರಿ, ಅಂತ ಮತ್ತೆ ಅಂದು ಏನೋ ವಿಷಯದ ಬಗ್ಗೆ ಪ್ರಶ್ನೆ ಕೇಳಿ ಆಮೇಲೆ ಹೊರಡತಿದ್ದೆ. ನಾನಾಗಿದ್ದರೆ ಹೀಗೆ ಮಾಡತಿದ್ದೆ!’

‘ತೆಗಿ, ತೆಗಿ! ಏನು ಹೇಳತಾ ಇದೀಯ! ಇದೆಲ್ಲ ಮಾತಿನಲ್ಲಿ ಸುಲಭ! ಅನ್ನುತ್ತ ಝಮ್ಯೊತೇವ್ ನಕ್ಕ. ‘ಬರೀ ಮಾತು. ನಿಜವಾಗಲೂ ಹಾಗೆ ಮಾಡಕ್ಕೆ ಹೋಗು, ಎಲ್ಲೋ ಎಡವೇ ಎಡವತೀಯ. ಹೇಳತೇನೆ ಕೇಳು, ನಾನು ನೀನು ಮಾತ್ರ ಅಲ್ಲ, ಎಂಥಾ ಪಳಗಿದ ಆಸಾಮಿಯೇ ಆದರೂ ಇಂಥಾ ಕೆಲಸದಲ್ಲಿ ಗೆದ್ದೇ ಗೆಲ್ಲತೇನೆ ಅಂತ ಹೇಳಕ್ಕೆ ಆಗಲ್ಲ. ಅಷ್ಟು ದೂರ ಯಾಕೆ, ಮೊನ್ನೆ ನಮ್ಮ ಏರಿಯದಲ್ಲಿ ಕೊಲೆಯಾದ ಮುದುಕಿಯನ್ನೇ ತಗೋ. ಹುಚ್ಚು ಧೈರ್ಯ ಮಾಡಿ ಕೊಲೆ ಮಾಡಿದಾನೆ. ಹಾಡು ಹಗಲಲ್ಲಿ. ಲಕ್ಕಿತ್ತು, ತಪ್ಪಿಸಿಕೊಂಡ, ಅಷ್ಟೆ. ಅವನ ಕೈ ಕೂಡ ನಡಗತಾ ಇತ್ತು. ಅದಕ್ಕೇ ಪೂರಾ ದುಡ್ಡು ದೋಚಲಿಲ್ಲ. ಸಾಕ್ಷಿ ಏನೂ ಇಲ್ಲದ ಹಾಗೆ ಮಾಡಲಿಲ್ಲ…

ರಾಸ್ಕೋಲ್ನಿಕೋವ್‍ ಗೆ ಅವಮಾನ ಅನ್ನಿಸಿತು.

‘ಸರಿ ಮತ್ತೆ, ಹೋಗಿ ಹಿಡಿ ಅವನನ್ನ ಹಾಗಾದರೆ!’ ಝಮ್ಯತೋವ್‍ ನನ್ನು ಕೆಣಕಿದ.

‘ಹಿಡಿದೇ ಹಿಡೀತೇವೆ’

‘ಯಾರು? ನೀನು? ನೀನು ಹಿಡೀತೀಯಾ? ಹುಡುಕಿ ಹುಡುಕೀ ಸುಸ್ತಾಗಿ ಬಿದ್ದು ಹೋಗತೀಯ. ಕೊಲೆ ಮಾಡಿದವನ ಹತ್ತಿರ ದುಡ್ಡಿದೆಯೋ ಇಲ್ಲವೋ, ಸಿಕ್ಕಾಪಟ್ಟೆ ಖರ್ಚು ಮಾಡುತ್ತಿದ್ದಾನೋ ಅದೇ ಮುಖ್ಯ ನಿಮಗೆ. ಕಾಸಿರಲಿಲ್ಲ, ಈಗ ದುಂದು ಮಾಡತಾ ಇದಾನೆ, ಅಂದಮೇಲೆ ಇವನೇ ಅಂತ ಹಿಡೀತೀರಿ. ಸ್ಕೂಲು ಮಕ್ಕಳು ಕೂಡ ನಿಮಗೆ ಮೋಸ ಮಾಡಬಹುದು.’

‘ಎಲ್ಲಾರೂ ಮಾಡುವುದೇ ಹಾಗೆ. ಕೊಲ್ಲತಾನೆ, ತನ್ನ ಜೀವ ಪಣಕ್ಕಿಟ್ಟು ಕೊಲ್ಲತಾನೆ, ಆಮೇಲೆ ಐದು ನಿಮಿಷ ಆಗತಿದ್ದ ಹಾಗೇ ಯಾವುದೋ ಹೆಂಡದಂಗಡಿಯಲ್ಲಿ ಸಿಕ್ಕಿಬೀಳತಾನೆ. ಎಲ್ಲಾ ಕೊಲೆಗಾರರೂ ನಿನ್ನಷ್ಟು ಜಾಣರಾಗಿರಲ್ಲ. ನೀನಾದರೆ ಹೆಂಡದಂಗಡಿಗೆ ಹೋಗಲ್ಲ, ಅಲ್ಲವಾ?’ ಝಮ್ಯತೋವ್ ಕೇಳಿದ.

ಹುಬ್ಬು ಗಂಟಿಕ್ಕಿಕೊಂಡು ರಾಸ್ಕೋಲ್ನಿಕೋವ್ ಝಮ್ಯೊತೋವ್‍ ನನ್ನು ದಿಟ್ಟಿಸಿ ನೋಡಿದ.

‘ನಿನ್ನ ಕುತೂಹಲ ಕೆರಳಿತು ಅಂತ ಕಾಣತ್ತೆ. ಈ ಕೇಸಿನಲ್ಲೂ ನಾನಾಗಿದ್ದರೆ ಏನು ಮಾಡತಿದ್ದೆ ಅಂತ ತಿಳಿಯುವ ಆಸೆ ಅಲ್ಲವಾ ನಿನಗೆ?’

ದೃಢವಾಗಿ, ಗಂಭೀರವಾಗಿ ಹ್ಞೂಂ ಅಂದ ಝಮ್ಯೊತೋವ್.

‘ಬಹಳಾ ಆಸೇನಾ?’

‘ಬಹಳ.’

ಸ್ವಲ್ಪ ಒಡಕಲಾಗಿದ್ದರೂ ಖುಷಿಕೊಡುವ ಹಾಗಿದ್ದ ಬೀದಿ ಹಾಡುಗಾರ್ತಿಯ ಗಟ್ಟಿ ದನಿಯಲ್ಲಿ, ಎರಡು ಕೊಪೆಕ್ ಕೊಟ್ಟಾರು ಅಂಗಡಿಯವರು ಎಂಬ ನಿರೀಕ್ಷೆಯಲ್ಲಿ ಪ್ರೇಮಗೀತೆ ಹಾಡುತ್ತಿದ್ದಳು.

‘ಸರಿ. ನಾನಾಗಿದ್ದಿದ್ದರೆ ಹೀಗೆ ಮಾಡತಿದ್ದೆ,’ ರಾಸ್ಕೋಲ್ನಿಕೋವ್ ಮತ್ತೆ ಶುರುಮಾಡಿದ, ಮತ್ತೆ ತನ್ನಮುಖ ಝಮ್ಯತೋವ್ ಮುಖದ ಹತ್ತಿರಕ್ಕೆ ತಂದ, ಮತ್ತೆ ಅವನನ್ನ ದಿಟ್ಟಿಸಿದ, ಮತ್ತೆ ಪಿಸುದನಿಯಲ್ಲಿ ಮಾತಾಡಿದ. ಈ ಬಾರಿ ಝಮ್ಯೊತೋವ್ ಮೆಟ್ಟಿಬಿದ್ದ.

‘ನಾನಾಗಿದ್ದಿದ್ದರೆ ದುಡ್ಡು, ಜೊತೆಗೆ ಅಲ್ಲಿದ್ದ ವಸ್ತು ಎಲ್ಲಾ ತಗೊಳ್ಳತಿದ್ದೆ, ಅಲ್ಲಿಂದ ಹೊರಟ ತಕ್ಷಣ, ಎಲ್ಲೂ ನಿಲ್ಲದೆ, ಯಾರ ಕಣ್ಣಿಗೂ ಬೀಳದಂಥ ಜಾಗಕ್ಕೆ ಹೋಗಿ, ಅಲ್ಲೀ ಬರೀ ಬೇಲಿ ಇರಬೇಕು, ಜನ ಇರಬಾರದು, ಅಂಥ ಕಡೆಗೆ, ಯಾರದಾದರೂ ಕೈತೋಟವೋ ಹಿತ್ತಿಲೋ ಇಂಥಾ ಜಾಗಕ್ಕೆ ಹೋಗತಿದ್ದೆ. ಅಲ್ಲೇ ಬಿದ್ದಿರುವ ಮೂವತ್ತು ನಲವತ್ತು ಪೌಂಡು ತೂಕದ ಕಲ್ಲು, ಮನೆ ಕಟ್ಟಿದಾಗಿನಿಂದಲೂ ಬೇಲಿ ಹತ್ತಿರ ಮೂಲೆಯಲ್ಲಿ ಬಿದ್ದಿರುವಂಥದ್ದು ಎತ್ತಿಕೊಳ್ಳತಿದ್ದೆ. ಅದರ ಕೆಳಗೆ ನೆಲ. ಮಾಮೂಲಾಗಿ ಹಳ್ಳ ಬಿದ್ದಿರತ್ತೆ, ನನ್ನ ಹತ್ತಿರ ಇರುವ ದುಡ್ಡು, ವಸ್ತುಗಳು ಎಲ್ಲವನ್ನೂ ಅಲ್ಲಿ ಇಟ್ಟು, ಕಲ್ಲನ್ನ ಮೊದಲಿದ್ದ ಹಾಗೇ ಕೂರಿಸಿ, ಸುತ್ತಲಿನ ನೆಲ ಕಾಲಲ್ಲಿ ತುಳಿದು ಧಮ್ಮಸ್ಸು ಮಾಡಿ ಹೊರಟು ಹೋಗತಿದ್ದೆ. ಒಂದು ವರ್ಷ, ಎರಡು ವರ್ಷ, ಮೂರು ವರ್ಷವಾದರೂ ಸರಿ ಅದನ್ನ ಮುಟ್ಟುವುದಕ್ಕೇ ಹೋಗತಿರಲಿಲ್ಲ. ನೀವು ಎಷ್ಟೇ ಹುಡುಕಿದರೂ ಈಗಿನ ಹಾಗೆ ನಿಮಗೇನೂ ಪತ್ತೆ ಆಗತಿರಲಿಲ್ಲ.’

ಯಾವ ಕಾರಣಕ್ಕೋ ಏನೋ ಝಮ್ಯೊತೋವ್ ಕೂಡ ಪಿಸುದನಿಯಲ್ಲಿ ‘ಹುಚ್ಚ ನೀನು!’ ಅಂದ. ಯಾಕೋ ಏನೋ ತಟ್ಟನೆ ರಾಸ್ಕೋಲ್ನಿಕೊವ್‍ ನಿಂದ ದೂರ ಸರಿದ. ರಾಸ್ಕೋಲ್ನಿಕೋವ್‍ ನ ಕಣ್ಣು ಮಿಂಚುತಿತ್ತು, ಮುಖ ತೀರ ಬಣ್ಣಗೆಟ್ಟಿತ್ತು, ತುಟಿ ಕಂಪಿಸುತ್ತಿತ್ತು, ಮೈ ನಡುಗುತ್ತಿತ್ತು. ಅವನು ಸಾಧ್ಯವಾದಷ್ಟೂ ಝಮ್ಯತೋವ್‍ ನತ್ತ ಬಾಗಿದ. ಮುಖದ ಹತ್ತಿರ ಮುಖ ತಂದು ಏನೋ ಹೇಳುವ ಹಾಗೆ ಕಂಪಿಸುವ ತುಟಿಗಳನ್ನು ಆಡಿಸಿದ, ಮಾತು ಮಾತ್ರ ಆಡಲಿಲ್ಲ. ಸುಮಾರು ಅರ್ಧ ನಿಮಿಷ ಹೀಗೇ ಕಳೆಯಿತು. ತಾನೇನು ಮಾಡುತಿದ್ದೇನೆ ಅನ್ನುವ ಅರಿವಿತ್ತು ಅವನಿಗೆ, ಆದರೂ ಸುಮ್ಮನೆ ಇರಲು ಆಗಲಿಲ್ಲ. ಬಾಗಿಲ ಚಿಲಕದ ಹಾಗೆ ಅವನ ನಾಲಗೆಯ ಮೇಲೆ ಕೆಟ್ಟ ಪದವೊಂದು ಮೇಲಕ್ಕೆ ಕೆಳಕ್ಕೆ ಆಡುತ್ತಿತ್ತು, ಆ ದಿನ ಬಾಗಿಲ ಚಿಲಕ ಅಲ್ಲಾಡಿದ ಹಾಗೆ. ಇನ್ನೊಂದು ಕ್ಷಣದಲ್ಲಿ ಚಿಲಕ ತೆಗೆದುಕೊಳ್ಳುತ್ತದೆ, ಆ ಮಾತು ಕುಪ್ಪಳಿಸಿ ಆಚೆಗೆ ಬರುತ್ತದೆ, ಇಗೋ ಅವನು ಇನ್ನೇನು ಆ ಮಾತು ಆಡಿಬಿಡುತ್ತಾನೆ!

‘ಆ ಮುದುಕೀನ, ಲಿಝವೆಟಾನ ನಾನೇ ಕೊಂದಿದ್ದರೆ?’ ತಟ್ಟನೆ ಅಂದ, ಅನ್ನುತಿದ್ದ ಹಾಗೆ ಮೈ ಮೇಲೆ ಎಚ್ಚರ ಬಂದಿತು.

ಝಮೊತ್ಯೋವ್ ಬೆಚ್ಚಿದ. ಮುಖ ಹೆಣದ ಬಟ್ಟೆಯ ಹಾಗೆ ಬೆಳ್ಳಗಾಗಿತ್ತು. ಸಣ್ಣ ನಗು ಬಂದು ಮುಖ ವಕ್ರವಾಯಿತು.

‘ನಿಜವಾಗಲೂ ಹೀಗೆಲ್ಲ ಆಗತ್ತಾ?’ ಕೇಳಿಸದಷ್ಟು ಕ್ಷೀಣವಾಗಿತ್ತು ಅವನ ದನಿ.

ಅವನತ್ತ ನೋಡಿದ ರಾಸ್ಕೋಲ್ನಿಕೋವ್‍ ನ ನೋಟದಲ್ಲಿ ಸಿಟ್ಟಿತ್ತು.

‘ನಾನು ಹೇಳಿದ್ದನ್ನ ನಂಬಿದ್ದೆ! ಅಲ್ಲವಾ?ʼ

‘ಇಲ್ಲ, ಈಗಂತೂ ಬಿಲ್‍ಕುಲ್ ಇಲ್ಲಾ!’ ಝಮ್ಯೊತೋವ್ ಸಟಕ್ಕನೆ ಅಂದ.

‘ಸಿಕ್ಕಿಬಿತ್ತು ಗುಬ್ಬಚ್ಚಿ! ಈಗಂತೂ ಇಲ್ಲ ಅಂದರೆ ಮೊದಲು ನಾನೇ ಕೊಂದಿದ್ದು ಅಂತ ನಂಬಿದ್ದೆ, ಅಲ್ಲವಾ?’

‘ಸತ್ಯವಾಗಲೂ ಇಲ್ಲ!’ ಅಂದ ಝಮೊತ್ಯೋವ್. ಅವನು ತಬ್ಬಿಬ್ಬಾಗಿದ್ದು ಎದ್ದು ಕಾಣುತ್ತಿತ್ತು. ‘ನನ್ನ ಹೆದರಿಸಬೇಕು ಅಂತಲೇ ಹೀಗೆಲ್ಲ ಮಾಡಿದೆ, ಅಲ್ಲವಾ?’

‘ನಂಬಲ್ಲವಾ? ಹೌದಾ? ಹಾಗಾದರೆ, ಅವತ್ತು ನಾನು ಪೋಲೀಸ್‍ ಸ್ಟೇಶನ್ನಿನಿಂದ ಹೊರಟ ಮೇಲೆ, ಬೆನ್ನ ಹಿಂದೆ ಏನೇನು ಮಾತಾಡಿಕೊಂಡಿರಿ? ನಾನು ಪ್ರಜ್ಞೆ ತಪ್ಪಿ ಬಿದ್ದು ಎಚ್ಚರ ಆದಮೇಲೆ ಆ ಸಿಡಿಮದ್ದು ಲೆಫ್ಟನೆಂಟ್ ಯಾಕೆ ನನ್ನ ವಿಚಾರಣೆ ಶುರುಮಾಡಿಕೊಂಡ? ಏಯ್, ಇವನೇ, ಬಾ ಇಲ್ಲಿ. ಎಷ್ಟಾಯಿತು?’

‘ಮುವತ್ತು ಕೊಪೆಕ್, ಸಾರ್. ಎಲ್ಲಾ ಸೇರಿ,’ ಓಡಿ ಬಂದ ವೇಟರ್ ಹೇಳಿದ.

‘ಇಗೋ ಇನ್ನಿಪ್ಪತ್ತು, ವೋಡ್ಕಾಗೆ. ನೋಡಿದೆಯಾ, ಎಷ್ಟೊಂದು ದುಡ್ಡು?’ ಝಮ್ಯೊತೋವ್‍ ನ ಮುಂದೆ ಕೈ ಚಾಚಿದ. ನಿಜವಾದ ದುಡ್ಡು, ನೀಲಿ ನೋಟು. ಹೊಸಾ ಬಟ್ಟೆ ಎಲ್ಲಿಂದ ಬಂತು ಅಂದುಕೊಂಡೆ? ನನ್ನ ಹತ್ತಿರ ಒಂದೇ ಒಂದು ಕೊಪೆಕ್ ಇರಲಿಲ್ಲ. ಆಗಲೇ ಹೋಗಿ ನಮ್ಮ ಓನರಮ್ಮನ ವಿಚಾರಣೆ ನಡೆಸಿದೀಯ, ಬೆಟ್ ಕಟ್ಟತೇನೆ ಬೇಕಾದರೆ. ಸಾಕು, ಎನಫ್ ಟಾಕ್! ಚೆನ್ನಾಗಿ ಊಟ ಮಾಡು, ಬರತೇನೆ…ʼ

ಹೊರಟ. ಉನ್ಮತ್ತನ ಹಾಗಿದ್ದ. ಮೈಯೆಲ್ಲ ನಡುಗುತ್ತಿತ್ತು. ಸನ್ನಿ ಹಿಡಿದ ಹಾಗಿತ್ತು. ಅಪಾರವಾದ ಸಂತೋಷ ಅನುಭವಿಸುತ್ತಿದ್ದ; ಹಾಗೆಯೇ ಮಂಕಾಗಿದ್ದ, ದಣಿದಿದ್ದ. ಮೂರ್ಛೆ ತಿಳಿದೆದ್ದವನ ಹಾಗೆ ಅವನ ಮುಖಬಣ್ಣಗೆಟ್ಟಿತ್ತು. ಕ್ಷಣ ಕ್ಷಣವೂ ದಣಿವು ಹೆಚ್ಚುತ್ತಿತ್ತು. ರೇಗಿ ಭಾವನೆಗಳು ಕೆರಳಿದಾಗ ತಟ್ಟನೆ ಉಕ್ಕೇರಿದ್ದ ಅವನ ಚೈತನ್ಯ ಭಾವನೆಗಳು ತಣ್ಣಗಾದಾಗ ಅಷ್ಟೇ ಬೇಗ ಸೋಸಿ ಹೋಗಿತ್ತು.

ಝಮ್ಯೊತೋವ್ ಇದ್ದಲ್ಲಿ ಇದ್ದ ಹಾಗೇ ಒಬ್ಬನೇ ಬಹಳ ಹೊತ್ತು ಸುಮ್ಮನೆ ಕೂತಿದ್ದ. ಯೋಚನೆ ಮಾಡುತ್ತಿದ್ದ. ಒಂದು ಪಾಯಿಂಟಿನ ಬಗ್ಗೆ ಅವನು ಕಟ್ಟಿಕೊಂಡಿದ್ದ ವಿಚಾರಗಳನ್ನೆಲ್ಲ ರಾಸ್ಕೋಲ್ನಿಕೋವ್ ತನಗೇ ಗೊತ್ತಿಲ್ಲದೆ ತಲೆಕೆಳಗು ಮಾಡಿದ್ದ, ಅವನ ಅಭಿಪ್ರಾಯ ಗಟ್ಟಿ ಮಾಡಿದ್ದ.

‘ಪೋಲೀಸು ಆಫೀಸರು ಇಲ್ಯಾ ಪೆಟ್ರೊವಿಚ್ ಪೆದ್ದ!’ ಎಂಬ ಕೊನೆಯ ತೀರ್ಮಾನಕ್ಕೆ ತಲುಪಿದ ಝಮ್ಯತೋವ್.

ರಾಸ್ಕೋಲ್ನಿಕೋವ್ ಬಾಗಿಲು ತೆರೆದು ಹೊರಕ್ಕೆ ಕಾಲಿಡುವಾಗ ಅದೇ ಆಗ ಒಳಕ್ಕೆ ಬರುತ್ತಿದ್ದ ಅಲ್ಲೇ ರಝುಮಿಖಿನ್‍ ಗೆ ಡಿಕ್ಕಿ ಹೊಡೆದ. ಒಂದೇ ಒಂದು ಹೆಜ್ಜೆಯ ಮೊದಲು ಕೂಡ ಇಬ್ಬರೂ ಒಬ್ಬರನ್ನೊಬ್ಬರು ನೋಡಿರಲಿಲ್ಲ. ಇಬ್ಬರ ತಲೆಗಳು ಘಟ್ಟಿಸಿದವು. ಸ್ಲಲ್ಪ ಹೊತ್ತು ಇಬ್ಬರೂ ಒಬ್ಬರನ್ನೊಬ್ಬರು ತಲೆಯಿಂದ ಕಾಲಿನವರೆಗೆ ನೋಡುತ್ತ ನಿಂತರು. ರಝುಮಿಖಿನ್‍ ಗೆ ಆಶ್ಚರ್ಯವಾಯಿತು. ನಿಜವಾದ ಸಿಟ್ಟಿನಲ್ಲಿ ಅವನ ಕಣ್ಣು ಕೆಂಪಾಯಿತು.

‘ಇಲ್ಲಿದ್ದೀಯಾ!’ ಶಕ್ತಿಯೆಲ್ಲಾ ಬಿಟ್ಟು ಕಿರುಚಿದ. ‘ಹಾಸಿಗೆ ಹಿಡಿದು ಮಲಗಿದ್ದವನು ಎದ್ದು ಓಡಿಬಂದಿದ್ದೀಯ! ಸೋಫಾದ ಕೆಳಗೂ ನಿನ್ನ ಹುಡುಕಿದಿವಿ, ನೆಲಮಾಳಿಗೆನೂ ನೋಡಿದಿವಿ! ನಸ್ತಾಸ್ಯನ ಹಿಡಿದು ಬಾರಿಸುವುದರಲ್ಲಿದ್ದೆ. ನಿನ್ನಿಂದಾನೇ ಇದೆಲ್ಲಾ. ನೋಡಿದರೆ ಇಲ್ಲಿದಾನೆ ರೋದ್ಯಾ! ಯಾಕೆ ಹೀಗೆ ಮಾಡಿದೆ, ಹೇಳು! ನಿಜ ಹೇಳದಿದ್ದರೆ ಬಿಡಲ್ಲ! ಯಾಕೆ ಸುಮ್ಮನೆ ಇದ್ದೀಯ, ಕೇಳಿಸಲ್ಲಾ?’

‘ಯಾಕೆ ಅಂದರೆ ನಿಮ್ಮನ್ನೆಲ್ಲ ನೋಡಿ ನೋಡಿ ತಲೆ ಕೆಟ್ಟುಹೋಗಿತ್ತು. ಸಾಯಬೇಕು ಅನ್ನಿಸಿತ್ತು. ಒಬ್ಬನೇ ಇರಬೇಕು ಅನ್ನಿಸಿತ್ತು!’

‘ಒಬ್ಬನೇ? ಗೂಶ್ಲು! ನೆಟ್ಟಗೆ ನಡೆಯಕ್ಕಾಗಲ್ಲ, ಮುಖ ಬೆಳ್ಳಗೆ ಬಿಳಿಚಿಕೊಂಡಿದೆ, ಉಸಿರಾಡೋದು ಕೂಡ ಕಷ್ಟ! ಕ್ರಿಸ್ಟಲ್ ಪ್ಯಾಲೇಸಿಗೆ ಬಂದು ಏನು ಮಾಡತಿದ್ದೆ, ನಿಜ ಹೇಳು.’

‘ನನ್ನ ಪಾಡಿಗೆ ಬಿಟ್ಟುಬಿಡಿ ನನ್ನ,’ ಅಂದ ರಾಸ್ಕೋಲ್ನಿಕೋವ್ ಅವನ ಪಕ್ಕದಿಂದ ಮುಂದೆ ಹೋಗಲು ನೋಡಿದ. ಅದನ್ನು ನೋಡಿ ರಝುಮಿಖಿನ್‍ ನ ಕೋಪ ಹೆಚ್ಚಿತು. ಗಟ್ಟಿಯಾಗಿ ಅವನ ತೋಳು ಹಿಡಿದು ನಿಲ್ಲಿಸಿದ.

‘ನಿನ್ನ ಪಾಡಿಗೆ ಬಿಡೋದು? ಅಷ್ಟು ಧೈರ್ಯ ಬಂತಾ ನಿನಗೆ? ಏನು ಮಾಡತೀನಿ ಈಗ ಗೊತ್ತಾ? ನಿನ್ನ ಹಿಡಿದು, ಕೈ ಕಾಲು ಕಟ್ಟಿ, ಹೊತ್ತುಕೊಂಡು ಹೋಗಿ ನಿಮ್ಮ ಮನೆಯಲ್ಲಿ ಎಸೀತೇನೆ.’

‘ಕೇಳು, ರಝುಮಿಖಿನ್,’ ರಾಸ್ಕೋಲ್ನಿಕೋವ್ ನಯವಾಗಿ ಶುರುಮಾಡಿದ. ನೋಡುವುದಕ್ಕೆ ಶಾಂತನಾಗೇ ಇದ್ದ. ‘ನೀವು ನನಗೆ ಸಹಾಯ ಮಾಡುವುದು ನನಗೆ ಬೇಕಾಗಿಲ್ಲ, ನಿಮಗೆ ಯಾಕೆ ಅರ್ಥ ಆಗಲ್ಲ? ಥೂ ಅಂತ ಉಗುಳಿದರೂ ಒಳ್ಳೆಯವರ ಥರ ಬಂದು ಸಹಾಯ ಮಾಡೋದು ಯಾಕೆ? ನಿಮ್ಮ ಸಹಾಯದ ಭಾರ ಹೆಚ್ಚಾಯಿತು. ನನಗೆ ಕಾಯಿಲೆ ಶುರುವಾದಾಗ ಯಾಕೆ ಬಂದೆ? ನಾನು ಸತ್ತುಹೋಗಿದ್ದರೇ ಚೆನ್ನಾಗಿರತಿತ್ತು. ನೀನು ನನಗೆ ಹಿಂಸೆ ಮಾಡತಿದೀಯ ಅಂತ ನಾನು ಬಾಯಿ ಬಿಟ್ಟ ಹೇಳಲಿಲ್ಲವಾ? ನಿನ್ನ ನೋಡೀ ನೋಡೀ ಸಾಕಾಗಿದೆ. ಜನಕ್ಕೆ ಯಾಕೆ ಹಿಂಸೆ ಕೊಡತೀಯ ನೀನು? ಬಂದು ಬಂದು ಕಾಟ ಕೊಡತೀಯ, ಸಿಟ್ಟು ಬರತ್ತೆ ನನಗೆ. ನಿನ್ನಿಂದಲೇ ನನ್ನ ಕಾಯಿಲೆ ವಾಸಿ ಆಗಿಲ್ಲ. ಝೋಸ್ಸಿಮೋವ್ ನೋಡು, ನನಗೆ ತೊಂದರೆ ಕೊಡಬಾರದು ಅಂತ ಹೊರಟು ಹೋದ. ದಮ್ಮಯ್ಯಾ ಅಂತೇನೆ, ನೀನೂ ಹೋಗು! ಅಲ್ಲಾ, ಬಲವಂತವಾಗಿ ನನ್ನ ತಡೆದು ನಿಲ್ಲಿಸೋದಕ್ಕೆ ಏನು ಹಕ್ಕಿದೆ ನಿನಗೆ? ನಿನ್ನಿಂದ ತಪ್ಪಿಸಿಕೊಂಡು ಹೋಗತಾ ಇದೀನಿ ಅಂದರೆ ಆರೋಗ್ಯ ಚೆನ್ನಾಗಿದೆ ಅಂತ ಗೊತ್ತಾಗಲ್ಲವಾ? ನಿನ್ನ ಒಳ್ಳೆಯತನ ತೋರಿಸಿ ತೋರಿಸಿ ಕಾಟ ಕೊಡಬೇಡ ಅಂತ ಇನ್ನು ಯಾವ ಥರ ಹೇಳಬೇಕು, ಅದನ್ನಾದರೂ ಹೇಳು. ಮಾಡಿದ ಸಹಾಯ ಮರೆಯೋನು, ಕೃತಘ್ನ ಅಂತ ನನ್ನ ಬೇಕಾದರೆ ಬೈದುಕೋ. ನನ್ನ ಪಾಡಿಗೆ ನನ್ನ ಬಿಟ್ಟು ಹೋಗು, ಸಾಕು. ಬಿಡು, ಬಿಟ್ಟುಬಿಡೂ ನನ್ನ, ಬಿಡೂ!’

ಬಹಳ ಶಾಂತವಾಗಿ ಮಾತು ಶುರುಮಾಡಿದ್ದ. ಏನೇನೆಲ್ಲ ವಿಷ ತುಂಬಿದ ಮಾತು ಹೇಳತೇನೆಂದು ಮೊದಲೇ ಬಾಯಿ ಚಪ್ಪರಿಸಿಕೊಂಡಿದ್ದ. ಮಾತು ಮುಗಿಸುವ ಹೊತ್ತಿಗೆ ಮಾತ್ರ ಉನ್ಮತ್ತನ ಹಾಗೆ ಚೀರುತ್ತ ಏದುಸಿರುಬಿಡುತ್ತಿದ್ದ, ಪೀಟರ್ ಪೆಟ್ರೊವಿಚ್ ಜೊತೆ ಮಾತಾಡುವಾಗ ಆಗಿತ್ತಲ್ಲ, ಹಾಗೇ ಈಗಲೂ ಆಗಿತ್ತು.

‘ದೆವ್ವಾ! ಎಲ್ಲಿ ಹೋಗತೀಯೋ ಹೋಗು!’ ವಿಷಾದದ ದನಿಯಲ್ಲಿ ಮೆಲ್ಲಗೆ ಅಂದ. ರಾಸ್ಕೋಲ್ನಿಕೋವ್ ಹೊರಟಾಗ ತಟ್ಟನೆ, ‘ತಾಳು!’ ಎಂದು ಜೋರಾಗಿ ಕೂಗಿದ. ‘ಕೇಳಿಲ್ಲಿ, ಇದೀಯಲ್ಲಾ ನೀನು, ನಿನ್ನಂಥವರು, ಎಲ್ಲರೂ ಬರೀ ಬಾಯಿ ಬಡಾಯಿ ಕೊಚ್ಚುತೀರಿ! ಸ್ವಲ್ಪ ಕಷ್ಟ ಬಂದರೂ ಸಾಕು, ಮೊಟ್ಟೆಗೆ ಕಾವು ಕೊಡೋ ಕೋಳೀ ಥರಾ ಮೂಲೇಲ್ಲಿ ಕೂತು ತಲೆ ಕೆಡಿಸಿಕೊಳ್ಳತೀರಿ! ನೀವು ಆಡುವ ಮಾತು ಕೂಡ ವಿದೇಶದ ಲೇಖಕರದ್ದು. ನಿಮಗೆ ಸ್ವಂತ ಬದುಕೇ ಇಲ್ಲ. ನೀವೆಲ್ಲ ಸ್ಪೆರ್ಮಸೆಟಿ ಆಯಿಂಟ್‍ಮೆಂಟಿಗೆ ಹುಟ್ಟಿದವರು. ನಿಮ್ಮ ಮೈಯಲ್ಲಿರೋದು ರಕ್ತ ಅಲ್ಲ, ನೀರುಗಂಜಿ! ನಿಮ್ಮಂಥ ಯಾರನ್ನೂ ನಂಬಲ್ಲ ನಾನು! ಎಂಥಾ ಸಂದರ್ಭ ಬಂದರೂ ಮನುಷ್ಯರ ಹಾಗೆ ಕಾಣಬಾರದು, ಇರಬಾರದು ಅನ್ನೋದು ನಿಮ್ಮ ಹಟ!’ ರಾಸ್ಕೋಲ್ನಿಕೋವ್ ಹೊರಡುವುದಕ್ಕೆ ತಯಾರಾದ ಅನ್ನುವುದು ಗೊತ್ತಾದ ತಕ್ಷಣ ಅವನ ಸಿಟ್ಟು ಎರಡರಷ್ಟಾಗಿ ‘ತಾಳು! ಮಾತು ಪೂರ್ತಿ ಕೇಳಿಸಿಕೋ!’ ಅಂದ! ನಿನಗೆ ಗೊತ್ತಲ್ಲವಾ! ಇವತ್ತು ಹೊಸ ಮನೆಗೆ ಒಕ್ಕಲಾಗತಾ ಇದೇವೆ. ಸಾಯಂಕಾಲ ನಮ್ಮ ಮನೆಯಲ್ಲಿ ಪಾರ್ಟಿ ಇದೆ. ಎಷ್ಟೋ ಜನ ಬರತಾರೆ. ಇಷ್ಟುಹೊತ್ತಿಗೆ ಬಂದಿರಲೂ ಬಹುದು. ಅವರನ್ನ ಮಾತಾಡಿಸಿಕೊಂಡಿರು ಅಂತ ನಮ್ಮ ಚಿಕ್ಕಪ್ಪನ್ನ ಅಲ್ಲಿ ಬಿಟ್ಟು ನಿನ್ನ ಹುಡುಕ್ಕೊಂಡು ಬಂದಿದೀನಿ. ನೀನು ಪೆದ್ದ, ಮಹಾ ಪೆದ್ದ, ನೀನು ಫಾರಿನ್ ಪೆದ್ದನ ರಶಿಯನ್ ಅನುವಾದ. ನನಗೆ ಗೊತ್ತು ರೋದ್ಯಾ ನೀನು ಬುದ್ಧಿವಂತ, ಅಷ್ಟೇ ಪೆದ್ದ. ನೀನು ಪೆದ್ದ ಅಲ್ಲದಿದ್ದರೆ ಸುಮ್ಮನೆ ಹೀಗೆ ಬೂಟು ಸವೆಸುವ ಬದಲು ನಮ್ಮ ಮನೆಗೆ ಬರುವುದು ವಾಸಿ. ಮನೆ ಬಿಟ್ಟು ಬಂದಿದ್ದಾಗಿದೆ, ಇನ್ನು ಬೀದೀಲ್ಲಿದ್ದರೇನು, ನಮ್ಮನೇಲ್ಲಿದ್ದರೇನು? ನಮ್ಮ ಮನೆ ಓನರ್ ಕೊಟ್ಟಿರುವ ಮೆತ್ತನೆ ಸೋಫಾ ಮೇಲೆ ಕೂರಿಸತೇನ, ಟೀ ಇರತ್ತೆ, ಒಳ್ಳೆಯ ಕಂಪನಿ ಇರತ್ತೆ. ಬೇಡ ಅಂದರೆ ನೀನು ಮಲಗುವುದಕ್ಕೂ ವ್ಯವಸ್ಥೆ ಮಾಡತೇನೆ. ಇವತ್ತು ನಮ್ಮ ಜೊತೇಲ್ಲೇ ಇರಬಹುದು. ಝೋಸ್ಸಿಮೋವ್ ಕೂಡ ಇರತಾನೆ. ಬರತೀಯಾ? ಹೇಳು.’

‘ಇಲ್ಲ.’

‘ಥೋ!’ ರಝುಮಿಖಿನ್ ಅಸಹನೆಯಿಂದ ಅಂದ. ‘ಏನು ಮಾತಾಡತಾ ಇದೀಯೋ ಅದು ನಿನಗೇ ಗೊತ್ತಿಲ್ಲ.! ನಿನಗೆ ಏನೇನೂ ತಿಳಿಯಲ್ಲ… ಮತ್ತೆ ನೋಡು, ನಾನು ಸಾವಿರ ಸಾರಿ ಸ್ನೇಹಿತರ ಹತ್ತಿರ ಜಗಳ ಆಡಿದೇನೆ, ಮತ್ತೆ ಓಡಿ ಹೋಗಿ ಸ್ನೇಹ ಮಾಡಿಕೊಂಡಿದೇನೆ, ಅವರೇ ನನ್ನ ಹತ್ತಿರ ಬಂದಿದಾರೆ… ನಿನಗೂ ಅಷ್ಟೆ, ಆಮೇಲೆ ನಿನಗೆ ನಾಚಿಕೆ ಆಗತ್ತೆ, ಬರತೀಯ ನೋಡತಿರು… ಜ್ಞಾಪಕ ಇಟ್ಟುಕೋ. ಪೋಚಿಂಕೋವ್ ಹೌಸ್, ಮೂರನೆ ಮಹಡಿ…’

‘ಜನಕ್ಕೆ ಒಳ್ಳೆಯದು ಮಾಡತಾ ಇದೀಯ ರಝುಮಿಖಿನ್, ಹೀಗೇ ಒಳ್ಳೆಯದು ಮಾಡತಾ ಇರು. ನಿನ್ನಿಂದ ಒಳ್ಳೆಯದು ಮಾಡಿಸಿಕೊಂಡವರು ನಿನ್ನ ಹಿಡಕೊಂಡು ಚಚ್ಚಿದರೂ ನಿನ್ನ ಒಳ್ಳೆಯತನ ಬಿಡಬೇಡ.’

‘ಹೀಗೆಲ್ಲ ಅಂದರೆ ನಿನ್ನ ಮೂಗು ಜಜ್ಜಿಬಿಡತೇನೆ! ಪೋಚಿನ್ಕೊವ್ ಹೌಸ್, ಮನೆ ನಂಬರ್ ನಲವತ್ತೇಳು, ಆಫೀಸರು ಬಬೂಷ್ಕಿನ್ ಅಪಾರ್ಟ್‍ಮೆಂಟು…’

‘ಬರಲ್ಲ, ರಝುಮಿಖಿನ್!’ ರಾಸ್ಕೋಲ್ನಿಕೋವ್ ಬೆನ್ನು ತಿರುಗಿಸಿ ಹೆಜ್ಜೆ ಹಾಕಿದ.

‘ಬೆಟ್. ಬಂದೇ ಬರತೀಯ!’ ರಝುಮಿಖಿನ್ ನಿಂತಲ್ಲಿಂದಲೇ ಕೂಗಿದ. ‘ಬರದೇ ಇದ್ದರೆ ನೀನು… ನಿನ್ನ ಯಾವತ್ತೂ ಮಾತಾಡಿಸಲ್ಲ ನೋಡು! ಹೇಯ್! ಝಮ್ಯೊತೋವ್ ಒಳಗಿದಾನಾ?’

‘ಇದಾನೆ.’

‘ನೋಡಿದೆಯಾ? ‘

‘ನೋಡಿದೆ.’

‘ಮಾತಾಡಿದಿರಾ?’

‘ಮಾತಾಡಿದೆವು.;

‘ಏನು ಮಾತಾಡಿದಿರಿ? ಹೋಗಲಿ ಬಿಡು. ದೆವ್ವ ಹಿಡೀಲಿ! ಅದೇ, ಪೋಚಿನ್ಕೋವ್ ಹೌಸು, ನಲವತ್ತೇಳನೇ ನಂಬರ್ ಮನೆ, ಬಬೂಷ್ಕಿನ್ ಅಪಾರ್ಟ್‍ಮೆಂಟು. ‘

ರಾಸ್ಕೋಲ್ನಿಕೋವ್ ಸದೋವಯ ರಸ್ತೆಗೆ ಬಂದ. ಮೂಲೆಯಲ್ಲಿ ತಿರುಗಿದ. ರಝುಮಿಖಿನ್ ಅವನನ್ನೇ ನೋಡತಾ ಇದ್ದ. ಯೋಚನೆ ಮಾಡತಿದ್ದ. ಕೊನೆಗೆ ಸುಮ್ಮನೆ ಕೈ ಕೊಡವಿ ಪಡಖಾನೆಯೊಳಕ್ಕೆ ಕಾಲಿಟ್ಟ. ಮೆಟ್ಟಿಲು ಹತ್ತುತಿದ್ದವನು ಹಾಗೇ ನಿಂತ.

‘ದೆವ್ವ ಹಿಡಿಯಲಿ!’ ಸಾಕಷ್ಟು ಗಟ್ಟಿಯಾಗಿಯೇ ಮಾತಾಡಿಕೊಂಡ. ‘ಯಾಕೋ ಸರೀ ಇಲ್ಲ! ಅವನ ಮಾತಿನಲ್ಲಿ ಅರ್ಥ ಇದೆ… ಆದರೆ ಆ ಮಾತು… ಆದರೂ ನಾನೂ ಪೆದ್ದಾನೇ ಸರೀ! ಹುಚ್ಚರು ಅರ್ಥ ಇರುವ ಮಾತು ಆಡಲ್ಲವಾ? ಅದಕ್ಕೇ ಝೋಸ್ಸಿಮೋವ್‍ ಗೆ ಭಯ ಅಂತ ಕಾಣತ್ತೆ.’ ಬೆರಳಿನಲ್ಲಿ ಹಣೆ ಬಡಿದುಕೊಂಡ. ‘ಏನು ಗತಿ, ಅವನೇನಾದರೂ… ಇಲ್ಲ… ಅವನನ್ನ ಒಬ್ಬನನ್ನೇ ಬಿಡಬಾರದು, ಈಗಂತೂ! ಹೋಗಿ ನೀರಿಗೆ ಹಾರಿಕೊಂಡರೆ… ಥೋ ಎಲ್ಲಾ ನಾನೇ ಕೆಡಿಸಿ ಕೂತಿದ್ದೀನಿ…’ ರಾಸ್ಕೋಲ್ನಿಕೋವ್‍ ನನ್ನು ಹುಡುಕಿಕೊಂಡು ಮತ್ತೆ ಹೊರಕ್ಕೆ ಓಡಿ ಬಂದ. ರಾಸ್ಕೋಲ್ನಿಕೋವ್ ಸುಳಿವು ಎಲ್ಲೂ ಇರಲಿಲ್ಲ. ಉಗುಳಿದ. ದೊಡ್ಡ ಹೆಜ್ಜೆ ಹಾಕಿಕೊಂಡು ಕ್ರಿಸ್ಟಲ್ ಪ್ಯಾಲೇಸಿಗೆ ಹೋದ. ಬೇಗ ಹೋಗಿ ಝಮ್ಯೊತೋವ್‍ ನನ್ನ ಕೇಳಬೇಕು ಅಂದುಕೊಂಡ.

ರಾಸ್ಕೋಲ್ನಿಕೋವ್ ಸೀದಾ ವೋಸ್ನೆಸೆನ್ಸ್ಕಿ ಬ್ರಿಜ್‍ ಗೆ ಹೋದ. ಸೇತುವೆಯ ಮಧ್ಯಕ್ಕೆ ಹೋದಾಗ ಸೇತುವೆಯ ಪಕ್ಕದ ಕಂಬಿಯ ಮೇಲೆ ಕೈಯೂರಿ ನಿಂತು ದಡದತ್ತ ದೃಷ್ಟಿ ಹಾಯಿಸಿದ. ರಝುಮಿಖಿನ್‍ ನನ್ನು ಬಿಟ್ಟು ಬಂದಮೇಲೆ ತೀರ ಸುಸ್ತಾಗಿತ್ತು, ಇಲ್ಲಿಯವರೆಗೆ ಬರುವುದೇ ಕಷ್ಟ ಅನಿಸುತ್ತಿತ್ತು. ಕೂರಬೇಕು, ರಸ್ತೆಯೇ ಆಗಿದ್ದರೂ ಪರವಾಗಿಲ್ಲ, ಸುಮ್ಮನೆ ಅಂಗಾತ ಮಲಗಬೇಕು ಅನ್ನಿಸುತ್ತಿತ್ತು. ಬಗ್ಗಿ ನೀರನ್ನು ನೋಡುತ್ತಿದ್ದವನು ಯಾಂತ್ರಿಕವಾಗಿ ತಲೆ ಎತ್ತಿದ. ಮುಳಗುತ್ತಿದ್ದ ಸೂರ್ಯನ ಕೊನೆಯ ಕಿರಣಗಳ ಕೆಂಪು ಚೆಲ್ಲಾಡಿತ್ತು, ಎಡದ ದಂಡೆಯ ಮೇಲೆ ಮುಸ್ಸಂಜೆ ಹೊತ್ತಲ್ಲಿ ಕತ್ತಲಲ್ಲಿ ಕರಗುತ್ತಿದ್ದ ಮನೆಗಳ ಸಾಲು, ಅಗೋ ಅಲ್ಲಿ ಯಾವುದೋ ಮನೆಯ ಕಿಟಕಿಯಲ್ಲಿ ಮುಳುಗುತ್ತಿದ್ದ ಸೂರ್ಯನ ಕಿರಣ ಬೆಂಕಿ ಹೊತ್ತಿಸಿತೋ ಅನ್ನುವ ಹಾಗೆ ಕಾಣುತ್ತಿದ್ದ ಕೆಂಪು ಬೆಳಕು, ದೊಡ್ಡ ಕಾಲುವೆಯಲ್ಲಿ ಹರಿಯುತ್ತಿದ್ದ ನೀರು, ನೋಡಿದ. ಕಾಲುವೆಯಲ್ಲಿ ಹರಿಯುವ ಕಪ್ಪು ನೀರನ್ನೇ ಗಮನವಿಟ್ಟು ನೋಡುತ್ತಿದ್ದಾನೋ ಅನ್ನಿಸುತ್ತಿತ್ತು. ಕೊನೆಗೆ ಅವನ ಕಣ್ಣಲ್ಲಿ ಕೆಂಪು ಚಕ್ರಗಳು ಗಿರಗಿರ ಸುತ್ತಿದವು. ಮನೆಗಳು ತುಯ್ದಾಡಿದವು, ದಾರಿಹೋಕರು, ಸಾರೋಟು ಗಾಡಿಗಳು ಜಾರಿ ಹೋಗುತ್ತಿದ್ದವು, ಜಾರುತ್ತ ಅವನ ಸುತ್ತ ಕುಣಿಯುವುದಕ್ಕೆ ಶುರು ಮಾಡಿದವು. ಇದ್ದಕಿದ್ದ ಹಾಗೆ ಭೀಕರ ದೃಶ್ಯವೊಂದನ್ನು ಕಂಡ. ಅದಕ್ಕೇ ಅವನು ಮತ್ತೆ ಎಚ್ಚರ ತಪ್ಪಿ ಬೀಳುವುದು ತಪ್ಪಿತು. ತನ್ನ ಪಕ್ಕದಲ್ಲೇ ಯಾರೋ ನಿಂತಿದ್ದಾರೆ ಅನ್ನಿಸಿತು.

ಬಲಕ್ಕೆ ತಿರುಗಿ ನೋಡಿದ. ಯಾರೋ ಹೆಂಗಸು. ಎತ್ತರವಾಗಿದ್ದಳು. ತಲೆಗೆ ಕರ್ಚೀಫು ಕಟ್ಟಿಕೊಂಡಿದ್ದಳು. ಹಳದಿ ತಿರುಗಿದ ನವೆದು ಹೋದ ಉದ್ದನೆ ಮುಖ. ಗುಳಿ ಬಿದ್ದ ಕೆಂಪು ತಿರುಗಿದ ಕಣ್ಣು. ನೇರ ಅವನನ್ನೇ ನೋಡುತ್ತಿದ್ದಳು. ನೋಡುತ್ತಿದ್ದರೂ ಅವಳಿಗೇನೂ ಕಾಣುತ್ತಿರಲಿಲ್ಲ. ತಟ್ಟನೆ ಬಲ ಮೊಳಕೈಯನ್ನು ತಡೆಗೋಡೆಯ ಮೇಲೂರಿ, ಬಲಗಾನ್ನು ಮೇಲೆತ್ತಿ ಬೀಸಿ ಗೋಡೆಯ ಸರಳ ಮೇಲಿರಿಸಿ, ಎಡಗಾಲನ್ನು ಚಿಮ್ಮಿ ತುಯ್ದು ಕೆಳಗಿನ ಕಾಲುವೆಗೆ ಹಾರಿಕೊಂಡಳು. ಕಾಲುವೆಯ ಕೊಳಕು ನೀರು ಸೀಳಿಕೊಂಡು ತನ್ನ ಬಲಿಯನ್ನು ಗಬಕ್ಕನೆ ನುಂಗಿಬಿಟ್ಟಿತು. ಮುಳುಗುತ್ತಿದ್ದ ಹೆಂಗಸು ಮರು ನಿಮಿಷದಲ್ಲಿ ತೇಲಿದಳು. ನೀರಿನ ಪ್ರವಾಹದಲ್ಲಿ ಮುಂದೆ ಹೋದಳು, ಅವಳ ಕಾಲು-ತಲೆಗಳು ನೀರಲ್ಲಿ ಮುಳುಗಿ ಬೆನ್ನು ಮಾತ್ರ ಮೇಲೆದ್ದು, ಅವಳ ಲಂಗ ಒಂದು ಬದಿಯಲ್ಲಿ ಉಬ್ಬಿ, ನೀರ ಮೇಲಿನ ದಿಂಬಿನ ಹಾಗೆ ಕಾಣುತ್ತಿತ್ತು.

‘ನೀರಿಗೆ ಬಿದ್ದಳು! ನೀರಿಗೆ ಬಿದ್ದಳು! ಅಯ್ಯೋ, ಮುಳುಗಿಹೋದಳು!’ ಹತ್ತಾರು ದನಿಗಳು ಚೀರಿದವು. ಜನ ಓಡಿ ಬಂದರು. ಸೇತುವೆಯ ಎರಡೂ ಬದಿ ಜನ, ರಾಸ್ಕೋಲ್ನಿಕೋವ್‍ ನ ಹಿಂದಿದ್ದವರು ಅವನನ್ನು ಮುಂದೊತ್ತುತ್ತಿದ್ದರು.

‘ದೇವರೇ, ನಮ್ಮ ಅಫ್ರೋಸಿನಾ!’ ಯಾರೋ ಹೆಂಗಸಿನ ಅಳುದನಿ ಹತ್ತಿರದಲ್ಲೇ ಕೇಳಿಸಿತು.

‘ದೋಣೀ! ದೋಣೀ!’ ಜನ ಕೂಗಿದರು.

ದೋಣಿಯ ಅಗತ್ಯ ಬರಲಿಲ್ಲ. ದಡದ ಮೇಲಿದ್ದ ಪೋಲೀಸನೊಬ್ಬ ಓವರ್ ಕೋಟು, ಶೂಗಳನ್ನು ಕಿತ್ತೆಸೆದು ನೀರಿಗೆ ಧುಮುಕಿದ್ದ. ಮುಳುಗುತ್ತಿದ್ದ ಹೆಂಗಸನ್ನು ಕಾಲುವೆಯ ನೀರು ದಬ್ಬಿಕೊಂಡು ಮೆಟ್ಟಿಲಿಂದ ಎರಡು ಮೂರು ಗಜದವರೆಗೆ ತಂದಿತ್ತು. ಪೋಲೀಸಿನವನು ಎಡಗೈಯಲ್ಲಿ ಮೆಟ್ಟಿಲ ಬಳಿ ಇದ್ದ ಕಂಬ ಹಿಡಿದು, ಬಲಗೈಯಲ್ಲಿ ಅವಳ ಉಡುಪನ್ನು ಹಿಡಿದು ಎಳೆದುಕೊಂಡ. ದಡದ ಮೇಲಿದ್ದ ಇನ್ನೊಬ್ಬ ಪೋಲೀಸು ತನ್ನ ಕೈಚಾಚಿದ. ಮುಳುಗುತ್ತಿದ್ದ ಹೆಂಗಸನ್ನು ಇಬ್ಬರೂ ಸೇರಿ ಎಳೆದುಕೊಂಡರು. ದಡದಲ್ಲಿದ್ದ ಕಲ್ಲು ಮೆಟ್ಟಿಲ ಮೇಲೆ ಅವಳನ್ನ ಮಲಗಿಸಿದರು. ಸ್ವಲ್ಪ ಹೊತ್ತಿನಲ್ಲೇ ಅವಳಿಗೆ ಪ್ರಜ್ಞೆ ಬಂದಿತು. ಎದ್ದು ಕೂತು ಒಂದೇ ಸಮ ಕೆಮ್ಮುತ್ತ ಸೀನುತ್ತ ಇದ್ದಳು. ಬುದ್ಧಿ ಇಲ್ಲದವಳ ಹಾಗೆ ಕೈಯನ್ನು ವದ್ದೆ ಬಟ್ಟೆಗೆ ಒರೆಸಿಕೊಳ್ಳುತ್ತಿದ್ದಳು.

‘ಕಣ್ಣು ಕತ್ತಲೆ ಬರೋಗಂಟ ಕುಡಿದುಬಿಟ್ಟಳು ಧಣೀ!’ ಆಗಲೇ ಮಾತಾಡಿದ್ದ ಅದೇ ಹೆಂಗಸಿನ ದನಿ ಜನರ ಗಜಿಬಿಜಿಯನ್ನೂ ಮೀರಿ ಕೇಳಿಸಿತು. ಈಗ ಅದು ಅಫ್ರೋಸಿನಾಳ ಹತ್ತಿರವೇ ಬಂದಿತ್ತು. ‘ಮನ್ನೆ ತಾನೇ ನೇಣಾಕ್ಕಂಡಿದ್ಲು. ನಾವೇ ಓಗಿ ಅಗ್ಗ ಬಿಡಿಸಿದೋ ಈಗ ನಾನು ಅಂಗಡೀ ತಾವ ಓಗಬೇಕಿತ್ತು, ಅವಳ ಮ್ಯಾಲೊಂದು ಕಣ್ಣ್ ಮಡಗಿರು ಅಂತ ವುಡ್ಗೀಗೆ ಏಳ್ಬಿಟ್‍ ಬಂದೆ. ಇವಳದೂ ಪೆಟ್ಗೆ ಅಂಗ್ಡಿ ಅದೆ. ಇವರ ಮನೇನೂ ನಮ್ಮನೇ ತಾವಾನೇ. ಇಲ್ಲೇ. ನಮ್ಮನೆಯಿಂದ ಎರಡ್ನೇ ಮನೆ.’

ಜನ ನಿಧಾನವಾಗಿ ಚದುರಿತು. ಪೋಲೀಸರು ತಾವು ಅಪಾಯದಿಂದ ರಕ್ಷಿಸಿದ ಹೆಂಗಸಿನ ವಿಚಾರಣೆಯನ್ನು ಇನ್ನೂ ನಡೆಸುತ್ತಿದ್ದರು. ಯಾರೋ ಪೋಲೀಸ್‍ ಸ್ಟೇಶನ್ನು ಅಂದರು… ರಾಸ್ಲೋಲ್ನಿಕೋವ್ ನಡೆಯುತ್ತಿರುವುದನ್ನೆಲ್ಲ ಉದಾಸೀನವಾಗಿ, ನಿರ್ಲಿಪ್ತವಾಗಿ ನೋಡುತ್ತಿದ್ದ. ‘ತೀರ ಕೆಟ್ಟದು… ನೀರು… ಮಾಡದೆ ಇರೋದು ಒಳ್ಳೆಯದು…’ ತನ್ನಷ್ಟಕ್ಕೇ ಗೊಣಗುತ್ತಿದ್ದ. ‘ಏನೂ ಆಗಲ್ಲ, ಕಾದು ಪ್ರಯೋಜನ ಇಲ್ಲ… ಏನದು ಪೊಲೀಸ್ ಸ್ಟೇಶನ್ನು ಅನ್ನತಿದ್ದರು?… ಯಾಕೆ ಝಮ್ಯತೋವ್ ಆಫೀಸಿಗೆ ಬಂದಿಲ್ಲ?… ಆಫೀಸು ಒಂಬತ್ತು ಗಂಟೆಗೆ ತೆಗೆಯತ್ತೆ…’ ಸೇತುವೆಯ ಕಬ್ಬಿಣದ ಸರಳಿಗೆ ಬೆನ್ನು ಮಾಡಿ ಸುತ್ತಲೂ ನೋಡಿದ.

‘ಆದರೇನಂತೆ! ಯಾಕಾಗಬಾರದು!’ ದೃಢವಾಗಿ ತನಗೇ ಹೇಳಿಕೊಂಡು ಪೋಲೀಸ್‍ ಸ್ಟೇಶನ್ನಿನ ದಿಕ್ಕಿಗೆ ಹೆಜ್ಜೆ ಹಾಕಿದ. ಮನಸ್ಸು ಸೊನ್ನೆಯಾಗಿತ್ತು.

ಯೋಚನೆ ಮಾಡುವುದು ಬೇಕಾಗಿರಲಿಲ್ಲ. ಕಳವಳ ಕೂಡ ಹೋಗಿತ್ತು. ‘ಎಲ್ಲಾ ಮುಗಿಸಿಬಿಡಬೇಕು!’ ಅಂದುಕೊಂಡು ಮನೆಯಿಂದ ಹೊರಟಾಗ ಇದ್ದ ಚೈತನ್ಯದ ಸುಳಿವೂ ಇರಲಿಲ್ಲ. ಜಡತ್ವ ಪೂರಾ ಆವರಿಸಿಕೊಂಡಿತ್ತು.

‘ಎಷ್ಟಂದರೂ ತಪ್ಪಿಸಿಕೊಳ್ಳುವುದಕ್ಕೆ ಅದೂ ಒಂದು ದಾರಿ!’ ಕಾಲುವೆಯ ಸೇತುವೆಯ ಮೇಲೆ ಕಾಲೆಳೆದುಕೊಂಡು ಹೋಗುತ್ತ ಅಂದುಕೊಂಡ. ‘ಏನೇ ಆಗಲಿ, ಮುಗಿಸಿಬಿಡತೇನೆ, ಯಾಕೆ ಅಂದರೆ, ನನ್ನಿಷ್ಟ ಅದು… ನಿಜವಾಗಲೂ ಅದು ಎಲ್ಲಾ ಮುಗಿಸುವ ದಾರಿ ಹೌದಾ? ಆಗಿದ್ದರೇನು, ಆಗಿರದಿದ್ದರೇನು? ನಿಲ್ಲೋದಕ್ಕೆ ಒಂದು ಚದರಡಿ ಜಾಗ ಇರತ್ತೆ. ಹ್ಞಾ! ಎಂಥಾ ಚದರ ಅಡಿ ಜಾಗ ಅದು ಅನ್ನುವುದು ಪ್ರಶ್ನೆ. ನಿಜವಾಗಲೂ ಕೊನೆಯಾಗತ್ತಾ? ನಿಜವಾಗಲೂ ಅವರಿಗೆ ಹೇಳಲಾ? ಬೇಡವಾ? ಅಯ್ಯೋ… ಥೂ ದೆವ್ವಾ! ಸುಸ್ತು. ಕೂತುಕೋಬೇಕು ಎಲ್ಲಾದರೂ… ಮಲಕ್ಕೋಬೇಕು. ಹೀಗೆ ಮಾಡೋದು ಪೆದ್ದತನ! ನಾಚಿಗ್ಗೇಡು! ಆದರೇನಂತೆ! ಥೂ, ಮನಸ್ಸಿಗೆ ಎಂತೆಂಥಾ ಪೆದ್ದ ಯೋಚನೆ ಬರತವೆ…’

ಪೋಲೀಸ್‍ ಸ್ಟೇಶನ್ ತಲುಪುವುದಕ್ಕೆ ಅವನು ನೇರ ಹೋಗಿ ಎರಡನೆಯ ತಿರುವಿನಲ್ಲಿ ಎಡಕ್ಕೆ ಹೊರಳಬೇಕಿತ್ತು. ಆ ತಿರುವು ಇನ್ನೂ ಎರಡು ಬೀದಿ ಆಚೆ ಇರುವಾಗ ನಿಂತ. ಯೋಚನೆ ಮಾಡಿದ. ಅಲ್ಲೇ ಎಡಕ್ಕೆ ತಿರುಗಿದ. ಹಾಗೇ ಎರಡು ರಸ್ತೆ ದಾಟಿ ಮುಂದೆ ಹೋದ. ಪೋಲೀಸ್‍ ಸ್ಟೇಶನ್ನಿಗೆ ಸುತ್ತು ಬಳಸಿನ ದಾರಿ ಹಿಡಿದಿದ್ದ. ಹೀಗೆ ಮಾಡುವುದಕ್ಕೆ ಕಾರಣವೇನೂ ಇದ್ದಿರಲಾರದು. ಅಥವಾ ಇನ್ನಷ್ಟು ಯೋಚನೆ ಮಾಡಲು ಸಮಯ ಸಿಗಲಿ ಅಂದುಕೊಂಡನೇನೋ. ತಲೆ ತಗ್ಗಿಸಿಕೊಂಡು ನಡೆಯುತ್ತಿದ್ದ. ಇದ್ದಕಿದ್ದ ಹಾಗೆ ಅವನ ಕಿವಿಯಲ್ಲಿ ಯಾರೋ ಏನೋ ಪಿಸುಗುಟ್ಟಿದ ಹಾಗೆ ಅನ್ನಿಸಿತು. ತಲೆ ಎತ್ತಿ ನೋಡಿದ. ಅವನು ಆ ಮನೆಯ ಮುಂದೆ ನಿಂತಿದ್ದ. ಕಮಾನು ಗೇಟಿನ ಮುಂದೆಯೇ. ಅವನು ಆ ದಿನ ಕಳೆದ ಮೇಲೆ ಅಲ್ಲಿಗೆ ಹೋಗಿರಲಿಲ್ಲ, ಆ ಜಾಗದ ಹತ್ತಿರವೂ ಸುಳಿದಿರಲಿಲ್ಲ.

ತಡೆಯಲಾಗದಂಥ ಆಸೆ ಅವನನ್ನು ಮುಂದೆ ಮುಂದೆ ದಬ್ಬುತ್ತಿತ್ತು. ಕಮಾನು ದಾಟಿದ. ಒಳಕ್ಕೆ ಹೋದ. ಬಲಕ್ಕೆ ತಿರುಗಿದ. ಅವನಿಗೆ ಅಷ್ಟೊಂದು ಪರಿಚಯವಾಗಿದ್ದ ಮೆಟ್ಟಿಲು ಏರಿದ, ನಾಲ್ಕನೆಯ ಮಹಡಿಗೆ. ಇಕ್ಕಟ್ಟಾದ, ಕಡಿದಾದ ಮೆಟ್ಟಿಲು ಕತ್ತಲು ಕತ್ತಲಾಗಿತ್ತು. ಒಂದೊಂದು ತಿರುವಿನಲ್ಲೂ ನಿಂತು ಕುತೂಹಲದಿಂದ ಸುತ್ತಲೂ ನೋಡುತ್ತಿದ್ದ. ಮೊದಲ ಮಹಡಿಯ ತಿರುವಿನಲ್ಲಿದ್ದ ಇಡೀ ಕಿಟಕಿಯ ಚೌಕಟ್ಟನ್ನು ತೆಗೆದುಬಿಟ್ಟಿದ್ದರು. ‘ಮೊದಲು ಹೀಗಿರಲಿಲ್ಲ,’ ಅಂದುಕೊಂಡ. ಇದು ಎರಡನೆಯ ಮಹಡಿ, ಇಲ್ಲೇ ನಿಕೊಲಾಯ್, ಮಿಟ್ಕಾ ಇಬ್ಬರೂ ಕೆಲಸ ಮಾಡತಾ ಇದ್ದದ್ದು. ‘ಬಣ್ಣ ಬಳಿದ ಬಾಗಿಲಿಗೆ ಬೀಗ ಹಾಕಿದೆ. ‘ಅಂದರೆ ಈ ಮನೆ ಬಾಡಿಗೆಗೆ ಇದೆ.’ ಈಗ ಮೂರನೆಯ ಮಹಡಿ. ನಾಲ್ಕನೆಯದು… ಇಗೋ!’ ಗೊಂದಲ ಹುಟ್ಟಿತು. ಆ ಮನೆಯ ಬಾಗಿಲು ತೆಗೆದಿತ್ತು. ಒಳಗೆ ಜನ ಇದ್ದರು. ಮಾತು ಕೇಳಿಸುತಿತ್ತು. ಇದನ್ನು ಅವನು ನಿರೀಕ್ಷೆ ಮಾಡಿಯೇ ಇರಲಿಲ್ಲ. ಸ್ವಲ್ಪ ಹಿಂಜರಿದ. ಆಮೇಲೆ, ಉಳಿದ ಎರಡು ಮೂರು ಮೆಟ್ಟಿಲು ಹತ್ತಿ ಆ ಮನೆಯೊಳಕ್ಕೆ ಕಾಲಿಟ್ಟ.

ಈ ಮನೆಗೂ ಸುಣ್ಣ ಬಣ್ಣ ನಡೆದಿತ್ತು. ಕೆಲಸದವರಿದ್ದರು. ಅವನಿಗೆ ಆಘಾತವೇ ಆಯಿತು. ಆ ಮನೆ ಮೊದಲಿದ್ದ ಹಾಗೇ ಇರುತ್ತದೆ, ಎಲ್ಲಾ ಅಲ್ಲಲ್ಲೇ ಇರತವೆ, ಹೆಣ ಕೂಡ ಅಲ್ಲೇ ಹಾಗೇ ನೆಲದ ಮೇಲೆ ಬಿದ್ದಿರತವೆ ಅನ್ನುವ ಕಲ್ಪನೆ ಇತ್ತು ಮನಸಿನಲ್ಲಿ. ಈಗ ಖಾಲಿ ಗೋಡೆಗಳು, ಫರ್ನಿಚರು ಇಲ್ಲ! ಕಿಟಕಿಯ ಹತ್ತಿರ ಹೋದ. ಕಿಟಕಿಯ ಅಡಿಗಟ್ಟಿನ ಮೇಲೆ ಕೂತ.

ಇಬ್ಬರು ಕೆಲಸಗಾರರಿದ್ದರು. ಯುವಕರು, ಒಬ್ಬ ದೊಡ್ಡವನು, ಇನ್ನೊಬ್ಬ ಸ್ವಲ್ಪ ಚಿಕ್ಕವನು. ಅವರು ಗೋಡೆಗೆ ನೇರಿಳೆ ಬಣ್ಣದ ಹೂಗಳ ಚಿತ್ರವಿರುವ ವಾಲ್ ಪೇಪರ್ ಹಚ್ಚುತ್ತಿದ್ದರು. ಮೊದಲು ಅಲ್ಲಿ ಹಳದಿಯ ಬಣ್ಣದ, ಹರಿದ ವಾಲ್ ಪೇಪರಿತ್ತು. ರಾಸ್ಕೋಲ್ನಿಕೋವ್‍ ನ ಮನಸಿಗೆ ಪಿಚ್ಚೆನಿಸಿತ್ತು. ಹೊಸ ವಾಲ್‍ ಪೇಪರನ್ನು ದ್ವೇಷದಿಂದ ದಿಟ್ಟಿಸಿದ. ಎಲ್ಲ ಬದಲಾಗಿದೆಯಲ್ಲ ಎಂದು ದುಃಖವಾಗಿತ್ತು ಅವನಿಗೆ.

ತಡವಾಗಿತ್ತು ಕೆಲಸದವರಿಗೆ. ವಾಲ್‍ಪೇಪರನ್ನು ಆತುರವಾಗಿ ಸುರುಳಿ ಸುತ್ತುತ್ತ ಮನೆಗೆ ಹೊರಡಲು ಸಿದ್ಧವಾಗುತಿದ್ದರು. ರಾಸ್ಕೋಲ್ನಿಕೋವ್ ಕಾಣಿಸಿಕೊಂಡದ್ದು ಅವರ ಗಮನಕ್ಕೇ ಬರಲಿಲ್ಲ ಅನ್ನುವ ಹಾಗಿತ್ತು. ತಮ್ಮ ಪಾಡಿಗೆ ಏನೋ ಮಾತಾಡಿಕೊಳ್ಳುತಿದ್ದರು. ಅವನು ಕೈ ಕಟ್ಟಿಕೊಂಡು ಅವರ ಮಾತು ಕೇಳಿಸಿಕೊಂಡ.

‘ಅವ್ಳು ಇವತ್ತ್ ಬೆಳಿಗ್ಗೆ ಬಂದ್ಲಾ,’ ಸ್ವಲ್ಪ ದೊಡ್ಡವನು ಕಿರಿಯನಿಗೆ ಹೇಳುತ್ತಿದ. ‘ಬೆಳಿಗ್‍ ಬೆಳಿಗ್ಗೇನೇ ಬಂದ್ಲು. ಸಿಂಗಾರ ಬಂಗಾರ ಮಾಡ್ಕೊಂಡಿದ್ಳು. ಏನು ಹಬ್ಬದಡಿಗೆ ಇದ್ದಂಗಿದೀಯಲ್ಲಾ ಅಂದೆ. ಅವಳು ನುಲೀತಾ ‘ಇನ್ ಮ್ಯಾಲೆ ನೀನ್ ಹೇಳ್ದಂಗೆ ಕೇಳ್ಕೊಂಡು ನಿನ್ನ್ ಜೊತೇಗೇ ಇರ್ತೀನಿ,’ ಅಂದ್ಳು. ಇಂಗಾಯ್ತು ನೋಡು. ಪೆಪರ್ ಬುಕ್ಕಿನ ಥರ ಇದ್ಳು.!’

‘ಪೇಪರ್ ಬುಕ್ಕು ಅಂದರೆ ಏನ್‍ ಗುರೂ?’ ಕಿರಿಯ ಕೇಳಿದ.

‘ಪೇಪರ್ ಬುಕ್ಕೂ ಅಂದರೆ ತಮಾ, ದರ್ಜೀರ ಅಂಗಡೀಗೆ ಫಾರಿನ್ನಿಂದ ಬರತಾವಲ್ಲ, ಗಂಡಸರದು, ಹೆಂಗಸರದು ಫ್ಯಾಶನ್ ಬಟ್ಟೆಗಳ ಡಿಸೈನ್ ಡಿಸೈನ್ ಚಿತ್ರ ಬಣ್ಣ ಬಣ್ಣದ ಚಿತ್ರ ಇರೋ ಬುಕ್ಕು ಅಂಗಿದ್ದಳು. ಹೆಂಗಸರ ಡಿಸೈನ್ ಬಟ್ಟೆ ಖರೀದಿ ಮಾಡಕ್ಕೆ ನಾವು ಎಷ್ಟು ದುಡದ್ರೂ ಸಾಲಲ್ಲ.’

‘ಅಪ್ಪಾ ಅಮ್ಮಾ ಬಿಟ್ರೆ ಇನ್ನೆಲ್ಲಾ ಖರೀದಿಗೆ ಸಿಗತವೆ ಬಿಡು ಈ ಊರಿನಲ್ಲಿ!’

‘ಹೌದಪ್ಪಾ, ಹುಟ್ಟಿಸಿದ ಅಪ್ಪ ಅಮ್ಮನ ಖರೀದಿ ಮಾಡಕ್ಕಾಗಲ್ಲ,’ ಹಿರಿಯ ಉಪದೇಶದ ದನಿಯಲ್ಲಿ ಅಂದ.

ರಾಸ್ಕೋಲ್ನಿಕೋವ್ ಎದ್ದ. ಪಕ್ಕದ ಕೋಣೆಗೆ ಹೋದ. ಪೆಟ್ಟಿಗೆ. ಮಂಚ, ಬೀರು ಇದ್ದ ರೂಮಿಗೆ. ಖಾಲಿ ಖಾಲಿಯಾಗಿದ್ದ ಕೋಣೆ ತೀರ ಚಿಕ್ಕದು ಅನ್ನಿಸಿತು ಅವನಿಗೆ. ಗೋಡೆಗೆ ಇನ್ನೂ ಅದೇ ವಾಲ್ ಪೇಪರಿತ್ತು. ಮೂಲೆಯಲ್ಲಿ ವಿಗ್ರಹವಿದ್ದ ಸ್ಟಾಂಡ್ ಇಟ್ಟಿದ್ದ ಜಾಗ ಇದೇ ಅನ್ನುವುದು ವಾಲ್‍ಪೇಪರಿನ ಮೇಲೆ ಮುದ್ರೆಯೊತ್ತಿದ ಹಾಗೆ ಕಾಣುತ್ತಿತ್ತು. ಸುತ್ತಲೂ ಕಣ್ಣಾಡಿಸಿ ಮತ್ತೆ ಕಿಟಕಿಯ ಹತ್ತಿರ ಬಂದು ಕೂತ. ಹಿರಿಯ ಕೆಲಸಗಾರ ಕಣ್ಣಂಚಿನಲ್ಲೇ ಅವನನ್ನು ಗಮನಿಸುತ್ತಿದ್ದ.

‘ಏನು ಬೇಕಾಗಿತ್ತು, ಸಾರ್?’ ತಟಕ್ಕನೆ ಕೇಳಿದ.

ಉತ್ತರ ಹೇಳುವ ಬದಲು ರಾಸ್ಕೋಲ್ನಿಕೋವ್ ಎದ್ದು ಹೊರಕ್ಕೆ ಹೋದ. ಕರೆಗಂಟೆಯ ದಾರ ಎಳೆದ. ಅದೇ ಬೆಲ್ಲು, ಅದೇ ಕಿಣಿಕಿಣಿ ಶಬ್ದ! ಎರಡನೆಯ ಬಾರಿ, ಮೂರನೆಯ ಬಾರಿ ಗಂಟೆ ಸದ್ದು ಮಾಡಿದ. ಕೇಳಿದ. ಜ್ಞಾಪಿಸಿಕೊಂಡ. ಗಂಟೆಯ ಒಂದೊಂದು ಕಿಣಿ ಕಿಣಿ ಸದ್ದೂ ಭೀಕರ ಭಾವವನ್ನು ಮತ್ತಷ್ಟು ಸ್ಪಷ್ಟವಾಗಿ ಮತ್ತೆ ಮನಸ್ಸಿಗೆ ತಂದಿತ್ತು. ಮೈ ಕಂಪಿಸಿತು. ಭಯದ ಆ ಕಂಪನಗಳನ್ನು ಸುಖಿಸುತ್ತಿದ್ದ.

‘ಏನು ಬೇಕು ಸಾರ್ ನಿಮಗೆ, ಯಾರು ನೀವು?’ ಅವನ ಹತ್ತಿಕ್ಕೆ ಬಂದ ಕೆಲಸಗಾರ ಕೇಳಿದ.

‘ಮನೆ ಬಾಡಿಗೆಗೆ ಬೇಕಾಗಿತ್ತು, ನೋಡತಿದ್ದೆ,’ ಅಂದ ರಾಸ್ಕೋಲ್ನಿಕೋವ್.

‘ರಾತ್ರಿ ಹೊತ್ತಲ್ಲಿ ಯಾರೂ ಬಾಡಿಗೆಗೆ ಕೊಡಲ್ಲ ಮನೇನ. ಮನೆ ನೋಡೋ ಹಂಗಿದ್ದರೆ ವಾಚ್‍ಮ್ಯಾನ್‍ ನ ಕರಕೊಂಬರಬೇಕಾಗಿತ್ತು.’

‘ನೆಲ ತೊಳದಿದ್ದೀರಿ. ನೆಲಕ್ಕೂ ಬಣ್ಣ ಹಚ್ಚತೀರ?’ ರಾಸ್ಕೋಲ್ನಿಕೋವ್ ಕೇಳಿದ. ‘ತುಂಬಾ ರಕ್ತ ಇತ್ತಾ?’

‘ಯಾವ ರಕ್ತ?

‘ಆ ಮುದುಕಿಯದು, ಅವಳ ತಂಗಿಯದು ಕೊಲೆ ಆಗಿತ್ತು ಈ ಮನೆಯಲ್ಲಿ. ರಕ್ತದ ಕೆರೆ ಇದ್ದ ಹಾಗಿತ್ತು.’

‘ಯಾರ್ರೀ ನೀವು?’ ಕೆಲಸಗಾರ ಕಿರಿಕಿರಿಪಡುತ್ತ ಕೇಳಿದ.

‘ನಾನು?’

‘ಹ್ಞೂಂ ನೀವೇ, ನೀವೇ.

‘ನಾನು ಯಾರು ಹೇಳಬೇಕಾ? ನಡೀ ಪೋಲೀಸ್‍ ಸ್ಟೇಶನ್ನಿಗೆ. ಅಲ್ಲೇ ಹೇಳತೇನೆ.’

ಕೆಲಸಗಾರನಿಗೆ ಗಲಿಬಿಲಿಯಾಯಿತು.

‘ಲೇಟ್ ಆಯ್ತು, ಸಾರ್. ಇಷ್ಟೊತ್ತಿಗೆ ಹೋಗಬೇಕಾಗಿತ್ತು ಅಂತೀನಿ. ಅಲ್ಯೋಶಾ, ನಡಿ, ತಗೋ, ಬೀಗ ಹಾಕು,’ ಹಿರಿಯ ಕೆಲಸಗಾರ ಅಂದ.

ರಾಸ್ಕೋಲ್ನಿಕೋವ್ ಉದಾಸೀನವಾಗಿ ‘ಸರಿ, ನಡೀರಿ, ಹಾಗಾದರೆ!’ ಅಂದು ಹೊರಟ. ನಿಧಾನವಾಗಿ ಮೆಟ್ಟಿಲಿಳಿಯುತ್ತಾ

‘ಹೇಯ್, ವಾಚ್‍ಮ್ಯಾನ್,’ ಎಂದು ಕೂಗಿದ.

ಕಟ್ಟಡದ ದೊಡ್ಡ ಗೇಟಿನ ಹತ್ತಿರ ಒಂದಷ್ಟು ಜನ ಇದ್ದರು. ರಸ್ತೆಯಲ್ಲಿ ಓಡಾಡುವವರನ್ನು ಸುಮ್ಮನೆ ನೋಡುತ್ತಾ ನಿಂತಿದ್ದರು. ಆ ಗುಂಪಿನಲ್ಲಿ ಇಬ್ಬರೂ ವಾಚ್‍ಮ್ಯಾನ್‍ ಗಳು, ಒಬ್ಬ ಹಳ್ಳಿಯ ಹೆಂಗಸು, ಯಾರೋ ವ್ಯಾಪಾರಿ, ಜೊತೆಗೆ ಇನ್ನೊಂದಷ್ಟು ಜನ ಇದ್ದರು. ರಾಸ್ಕೋಲ್ನಿಕೋವ್ ಸೀದಾ ಆ ಗುಂಪಿನತ್ತ ಹೆಜ್ಜೆ ಹಾಕಿದ.

‘ಏನು ಬೇಕು?’ ಒಬ್ಬ ವಾಚ್‍ಮ್ಯಾನ್ ಕೇಳಿದ.

‘ಪೋಲೀಸ್‍ ಸ್ಟೇಶನ್‍ ಗೆ ಹೋಗಿದ್ದೆಯಾ?’

‘ಹ್ಞೂ. ಈಗ ತಾನೇ ಬಂದೆ. ನಿಮಗೇನು ಬೇಕು?’ ಅಂದ ವಾಚ್‍ಮ್ಯಾನ್.

‘ಎಲ್ಲಾರೂ ಅವರವರ ಸೀಟಿನಲ್ಲೇ ಇದ್ದರಾ?’ ರಾಸ್ಕೋಲ್ನಿಕೋವ್ ಕೇಳಿದ.

‘ಇದ್ದರು.’

‘ಅಸಿಸ್ಟೆಂಟೂ ಇದ್ದನಾ?’

‘ಇದ್ದ, ಸ್ವಲ್ಪ ಹೊತ್ತಿದ್ದ. ನಿಮಗೇನು ಬೇಕು?’

ರಾಸ್ಕೋಲ್ನಿಕೋವ್ ಉತ್ತರ ಹೇಳಲಿಲ್ಲ. ಗುಂಪಿನ ಪಕ್ಕದಲ್ಲೇ ಯೋಚನೆ ಮಾಡುತ್ತ ನಿಂತ.

‘ಈ ಸಾರ್ ಅಲ್ಲಿಗೆ ಬಂದಿದ್ದರು,’ ಹಿರಿಯ ಕೆಲಸಗಾರ ಅವರ ಹತ್ತಿರ ಬಂದು ಅಂದ.

‘ಅಲ್ಲಿಗೆ, ಅಂದರೆ ಎಲ್ಲಿಗೆ?’ ವಾಚ್‍ಮ್ಯಾನು ಕೇಳಿದ.

‘ಕೆಲಸ ಮಾಡತಿದ್ವಲ್ಲಾ, ಅಲ್ಲಿಗೆ. ರಕ್ತ ಎಲ್ಲಾ ಯಾಕೆ ತೊಳದಿರೀ ಅಂದರು. ಇಲ್ಲಿ ಕೊಲೆ ಆಗಿತ್ತು, ನಾನು ಮನೆ ಬಾಡಿಗೆಗೆ ಕೇಳಕ್ಕೆ ಬಂದಿದೀನಿ ಅಂದರು. ಹೋಗಿ ಬೆಲ್ಲು ಬಾರಿಸಿದರು. ಇನ್ನೊಂದ್ ಸ್ವಲ್ಪ ಇದ್ದಿದ್ದರೆ ಅದು ಕಿತ್ತ್ ಬರತಾ ಇತ್ತು. ಪೋಲೀಸ್‍ ಸ್ಟೇಶನ್ನಿಗೆ ಹೋಗಣ, ಅಲ್ಲಿ ಸಾಬೀತು ಮಾಡತೀನಿ, ಬಿಡಲ್ಲಾ ಅಂತಾರೇ.’

ವಾಚ್‍ಮ್ಯಾನು ಗೊಂದಲಪಟ್ಟುಕೊಂಡು ರಾಸ್ಕೋಲ್ನಿಕೋವ್‍ ನನ್ನು ನೋಡಿದ, ಮುಖ ಗಂಟಿಕ್ಕಿಕೊಂಡ.

‘ಯಾರ್ರೀ ನೀವು?’ ಹೆದರಿಸುವ ಹಾಗೆ ಕೇಳಿದ.

‘ನಾನು ರೋದಿಯಾನ್ ರೊಮೊನೊವಿಚ್ ರಾಸ್ಕೋಲ್ನಿಕೋವ್. ಮಾಜೀ ಸ್ಟೂಡೆಂಟು. ಶಿಲ್ಸ್ ಹೌಸಿನಲ್ಲಿದೇನೆ, ಇಲ್ಲೇ ಹತ್ತಿರ. ಅಪಾರ್ಟ್‍ಮೆಂಟ್ ನಂಬರ್ ಹದಿನಾಕು, ವಾಚ್ ಮ್ಯಾನ್‍ ನ ಕೇಳಿ ಬೇಕಾದರೆ, ಅವನಿಗೆ ನನ್ನ ಪರಿಚಯ ಇದೆ.’ ಕತ್ತಲಾಗುತ್ತಿದ್ದ ಬೀದಿಯನ್ನೇ ದಿಟ್ಟಿಸುತ್ತ ರಾಸ್ಕೋಲ್ನಿಕೋವ್ ಇದನ್ನೆಲ್ಲ ಸೋಮಾರಿತನದ ದನಿಯಲ್ಲಿ, ದುಃಖ ಪಡುತ್ತಿರುವವನ ಹಾಗೆ ಹೇಳಿಕೊಂಡ.

‘ಮೇಲಕ್ಕೆ ಯಾಕೆ ಹೋಗಿದ್ದೆ?’

‘ನೋಡೋದಕ್ಕೆ.’

‘ನೋಡೋದಕ್ಕೆ ಏನಿದೆ ಅಲ್ಲಿ?’

‘ಪೋಲೀಸ್‍ ನವರ ಹತ್ರ ಕರಕೊಂಡೋಗ್ಬೇಕಲ್ವಾ?’ ತಟ್ಟನೆ ಮಾತಾಡಿದ ವ್ಯಾಪಾರಿ ಸುಮ್ಮನಾಗಿಬಿಟ್ಟ.

ರಾಸ್ಕೋಲ್ನಿಕೋವ್ ತಲೆ ಅಲುಗಿಸದೆ ಅವನನ್ನು ಓರೆಗಣ್ಣಿನಲ್ಲಿ ನೋಡಿದ. ಮೊದಲಿನ ಹಾಗೇ ಸೋಮಾರಿತನ ತುಂಬಿದ ಉದಾಸೀನವಾದ ದನಿಯಲ್ಲಿ, ‘ನಡೀರೀ, ಹೋಗಣ,’ ಅಂದ.

‘ಮೊದೂಲು ಕರಕೊಂಡು ಹೋಗಿ ಅವನ್ನ!’ ಅಂಗಡಿಯವನಿಗೆ ಧೈರ್ಯ ಬಂದಿತ್ತು. ‘ಯಾಕೆ ಬಂದ? ಅದು ಯಾಕೆಂತೇ ಅವನಿಗೆ?’

‘ಟೈಟಾಗಿದಾನೋ ಏನೋ, ಯಾರಿಗ್ಗೊತ್ತು?’ ಕೆಲಸಗಾರ ಗೊಣಗಿದ.

‘ಏನ್ರೀ ಬೇಕು ನಿಮಗೇ? ಯಾಕ್ರೀ ಹಿಂಗ್‍ ಗೋಳ್ ಹೊಯ್ಕೊತಿದೀರಾ?’ ವಾಚ್‍ಮ್ಯಾನು ರೇಗಿದ.

‘ಪೋಲೀಸು ಅಂದ ತಕ್ಷಣ ಭಯಾ ಆಯ್ತಾ ನಿಮಗೇ? ರಾಸ್ಕೋಲ್ನಿಕೋವ್ ಅಣಕಿಸಿದ.

‘ಭಯ ಯಾಕ್ರೀ? ಸುಮ್ಮನೆ ನಿಮ್ಮ್ ಕೆಲಸ ನೋಡಿಕೋ ಹೋಗ್ರೀ!ʼ

‘ಕಣ್‍ ಗೆ ಮಣ್ ಎರಚತಾರೆ ಇಂಥಾವ್ರೆಲ್ಲಾ’ ಅಂದಳು ಹೆಂಗಸು.’

‘ಸುಮ್ಮನೆ ತೌಡು ಕುಟ್ಟಿದರೆ ಏನು ಬಂತು?’ ಇನ್ನೊಬ್ಬ ವಾಚ್‍ಮ್ಯಾನ್ ಮುಂದೆ ಬಂದ. ದೊಡ್ಡ ದೊಡ್ಡ ಗಾತ್ರದ, ಕೋಟಿನ ಗುಂಡಿ ಬಿಚ್ಚಿಕೊಂಡಿದ್ದ, ಸೊಂಟಕ್ಕೆ ಬೀಗದ ಕೈ ಗೊಂಚಲು ಸಿಕ್ಕಿಸಿಕೊಂಡಿದ್ದ ಅವನು, ‘ಖಾಲೀ ಮಾಡು ಜಾಗ, ರೈಟ್ ಹೇಳು,’ ಅಂದ.

ರಾಸ್ಕೋಲ್ನಿಕೋವ್‍ ನ ಭುಜ ಹಿಡಿದು ಅವನನ್ನು ರಸ್ತೆಗೆ ಬಲವಾಗಿ ದೂಡಿದ. ರಾಸ್ಕೋಲ್ನಿಕೋವ್ ಉರುಳಿ ಬೀಳಬೇಕಾಗಿತ್ತು, ಬೀಳಲಿಲ್ಲ. ನಿಧಾನವಾಗಿ ನೆಟ್ಟಗೆ ನಿಂತ. ಸುಮ್ಮನೆ ಸುತ್ತಲೂ ನೋಡಿದ. ಹೊರಟುಹೋದ.

‘ಎಲ್ಲಿಂದ ಬಂದನೋ, ವಿಚಿತ್ರ ಆಸಾಮಿ,’ ಅಂದ ಕೆಲಸಗಾರ.

‘ಇತ್ತಿತ್ಲಾಗೆ ಬಾಳ ಜನ ಎಂಗೆಂಗೋ ಆಡತಾರೆ,’ ಅಂದಳು ಹಳ್ಳಿಯ ಹೆಂಗಸು.

‘ಏನಾದರೂ ಅನ್ನಿ, ಅವನ್ನ ಪೋಲೀಸಿನವರಿಗೆ ಕೊಡಬೇಕಾಗಿತ್ತು,’ ಅಂದ ವ್ಯಾಪಾರಿ.

‘ಸುಖಾಸುಮ್ಮನೆ ನಾವ್ಯಾಕೆ ಕೋರ್ಟು ಕಛೇರಿ ಅಲೀಬೇಕು? ಎಲ್ಲೋ ಸರಿಯಾಗಿ ಏರಿಸಿಕೊಂಡು ಬಂದಿದಾನೆ, ಗ್ಯಾರಂಟಿ. ನೀವೇ ನೋಡಿದಿರಲ್ಲ, ಅವನಾಗೇ ಮೇಲೆ ಬೀಳೋ ಹಾಗೆ ಬಂದ. ಇಂಥ ಕೇಸಿನಲ್ಲಿ ಸಿಕ್ಕಿಕೊಂಡರೆ ತಪ್ಪಿಸಿಕೊಳ್ಳೋದು ಕಷ್ಟ. ಗೊತ್ತು ನನಗೆ,’ ಅಂದ ದೊಡ್ಡ ವಾಚ್‍ಮ್ಯಾನು.

ಎರಡು ರಸ್ತೆ ಒಂದನ್ನೊಂದು ಹಾದು ಹೋಗುವಲ್ಲಿ ರಸ್ತೆ ಮಧ್ಯೆ ನಿಂತು ರಾಸ್ಕೋಲ್ನಿಕೋವ್ ಯೋಚನೆ ಮಾಡಿದ: ‘ಈಗ ನಾನು ಹೋಗಲೋ ಬೇಡವೋ?’ ಯಾರಾದರೂ ಉತ್ತರ ಹೇಳುತ್ತಾರೇನೋ ಅನ್ನುವ ಹಾಗೆ ಕಾದು ನಿಂತ. ಯಾವ ದಿಕ್ಕಿನಿಂದಲೂ ಯಾರಿಂದಲೂ ಉತ್ತರ ಬರಲಿಲ್ಲ. ಎಲ್ಲಾ ಖಾಲಿ ಖಾಲಿ. ನಿರ್ಜೀವ. ಅವನು ಹೆಜ್ಜೆ ಹಾಕುತ್ತಿದ್ದ ಕಲ್ಲಿನ ಹಾಗೆ. ಎಲ್ಲವೂ ಅವನ ಪಾಲಿಗಷ್ಟೇ ನಿಶ್ಚಲ ನೀರವ ನಿರ್ಜೀವ. ಇದ್ದಕಿದ್ದ ಹಾಗೆ ಸುಮಾರು ಇನ್ನೂರು ಹೆಜ್ಜೆ ದೂರದಲ್ಲಿ, ಬೀದಿಯ ಕೊನೆಯಲ್ಲಿ, ಕವಿಯುತ್ತಿದ್ದ ಕತ್ತಲಿನಲ್ಲಿ ಜನ ಗುಂಪು ಸೇರಿದೆ, ಮಾತು ಕೇಳುತ್ತಿದೆ, ಕಿರಿಚಾಡುತ್ತಿದ್ದಾರೆ ಅನ್ನಿಸಿತು.