ಜೀವಂತಿಕೆಯಿಂದ ತುಂಬಿ ತುಳುಕುತ್ತಿದ್ದ ಸೊಹೊ ಪ್ರದೇಶ, ಅಪಾಯಕಾರಿ ಅನಾರೋಗ್ಯಕರ ಸ್ಥಳವೂ ಆಗಿತ್ತು. ಸರಾಸರಿ ಹದಿನಾಲ್ಕು ಜನರು ಒಂದೇ ಮನೆಯಲ್ಲಿ ವಾಸಿಸುವಂತಹ ಜನಸಂದಣಿ, ಬಡತನದ ಬೀಡಾಗಿತ್ತು. ಕಾಯಿಲೆಗಳ ಗೂಡಾಗಿತ್ತು. ೧೮೫೪ರಲ್ಲಿ ಈ ಪ್ರದೇಶ ಕಾಲರಾ ಬಾಧೆಯಿಂದ ಬಳಲಿತು. ಸರಿಯಾದ ಕೆಲಸವಿಲ್ಲದ, ಹಣದ ನಿರ್ವಣೆಯಲ್ಲಿ ಚತುರನಲ್ಲದ ಮಾರ್ಕ್ಸ್ ನಿರಂತರವಾಗಿ ಗೆಳೆಯರ ಕೊಡುಗೆಯಲ್ಲಿ ಜೀವನ ಸಾಗಿಸುತ್ತಿದ್ದ. ಆಪ್ತನಾದ ಎಂಗೆಲ್ಸ್, ಬೇಕರಿ, ಹಾಲು, ತರಕಾರಿ, ಚಹಾ ಅಂಗಡಿಯವರ ಬಳಿ ಮಾರ್ಕ್ಸ್ ಮಾಡಿದ ಸಾಲವನ್ನು ತೀರಿಸುತ್ತಿದ್ದ. ಮಹಡಿಯ ಮೇಲಿದ್ದ ಮಾರ್ಕ್ಸ್ ನ ಮನೆಯಲ್ಲಿ ಮೊದಲು ಎರಡು ಕೋಣೆಗಳಿದ್ದವು.
ಯೋಗೀಂದ್ರ ಮರವಂತೆ ಬರೆಯುವ ‘ನೀಲಿ ಫಲಕಗಳಲಿ ನೆನಪಾಗಿ ನಿಂದವರು’ ಸರಣಿಯಲ್ಲಿ ಹೊಸ ಬರಹ
ಲಂಡನ್‌ನ ಹೈಗೇಟ್ ಸ್ಮಶಾನದಲ್ಲಿ ಸೇರಿದ್ದವರನ್ನು ಉದ್ದೇಶಿಸಿ ಮೃತನಾದ ವ್ಯಕ್ತಿಯ ಗೆಳೆಯ ಆಗಷ್ಟೇ ಮಾತನಾಡಲಾರಂಭಿಸಿದ್ದ. “ಮಡಿದ ಗೆಳೆಯ ಎರಡು ಮಹಾನ್ ಆವಿಷ್ಕಾರಗಳನ್ನು ಮಾಡಿದ್ದಾನೆ. ಮಾನವ ಇತಿಹಾಸದ ವಿಕಾಸದ ನಿಯಮ ಹಾಗು ಮಧ್ಯವರ್ಗದ ಜನರ ಥಿಯರಿಗಳ ಕುರಿತು. ಇವೆಲ್ಲದರ ಹೊರತಾಗಿ ಗೆಳೆಯ ಒಬ್ಬ ಕ್ರಾಂತಿಕಾರಿ. ಅತ್ಯಂತ ದ್ವೇಷಿಸಲ್ಪಟ್ಟ ಹಾಗು ತನ್ನ ಕಾಲದಲ್ಲಿ ಅತಿ ಹೆಚ್ಚು ತಪ್ಪು ಆಪಾದನೆಗಳನ್ನು ಹೊಂದಿದ್ದ ವ್ಯಕ್ತಿ. ಅಂತಹವನೂ ಸತ್ತುಹೋದ, ಲಕ್ಷಾಂತರ ಕ್ರಾಂತಿಕಾರಿ ಸಹಕಾರ್ಯಕರ್ತರ ಅಕ್ಕರೆ ಭಕ್ತಿ ಹಾಗು ಸಂತಾಪವನ್ನು ಪಡೆದು”. ಹೀಗೆ ಮಾತನಾಡಿದವನು ಫ್ರೆಡ್ರಿಕ್ ಎಂಗೆಲ್ಸ್ ತನ್ನ ಆತ್ಮೀಯ ಗೆಳೆಯನಾದ ಕಾರ್ಲ್ ಮಾರ್ಕ್ಸ್ ನ ಶವಸಂಸ್ಕಾರ ಸಭೆಯಲ್ಲಿ.
1848ರಲ್ಲಿ ಯೂರೋಪಿನ ಕ್ರಾಂತಿಯ ವೈಫಲ್ಯದ ನಂತರ ಸಾವಿರಾರು ಜನರು ಬ್ರಿಟನ್ ಗೆ ರಾಜಕೀಯ ಕಾರಣಗಳಿಗೆ ಗಡೀಪಾರಾಗಿದ್ದರು. ಬ್ರಿಟನ್ನಿನಲ್ಲಿ ಆ ಕಾಲದಲ್ಲಿದ್ದ ಮುಕ್ತ ವಾತಾವರಣ, ವಲಸೆಗೆ ಯಾವುದೇ ನಿರ್ಬಂಧ ಇಲ್ಲದಿರುವುದು, ಅಭಿವ್ಯಕ್ತಿ ಸ್ವಾತಂತ್ಯ್ರ ಎಲ್ಲವೂ ಯೂರೋಪಿನಲ್ಲಿ ನಿರಾಶೆಗೊಂಡ ಕ್ರಾಂತಿಕಾರಿಗಳನ್ನು ಆಕರ್ಷಿಸುತ್ತಿತ್ತು. 1852ರ ಹೊತ್ತಿಗೆ ಸುಮಾರು 7000 ಮೂಲಭೂತವಾದಿಗಳು, ತೀವ್ರಗಾಮಿಗಳು, ಕ್ರಾಂತಿಕಾರಿಗಳು ಫ್ರಾನ್ಸ್, ಹಂಗೆರಿ, ಪೋಲೆಂಡ್, ಜರ್ಮನಿ, ಇಟಲಿಗಳಿಂದ ಲಂಡನ್‌ನಲ್ಲಿ ಸೇರಿದ್ದರು. ಅಂಥವರಲ್ಲಿ ಪ್ರಸಿದ್ಧ ಕ್ರಾಂತಿಕಾರಿ ಗಿಸೆಸ್ಸಿಪಿ ಮಝನಿ, ಫ್ರೆಂಚ್ ಸಮಾಜವಾದಿ ಲೂಯಿಸ್ ಬ್ಲ್ಯಾಂಕ್, ಹಂಗೆರಿಯ ಸ್ವಾತಂತ್ಯ್ರ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಲಜೋಸ್ ಕೊಸ್ಸುತ್ ಕೂಡ ಇದ್ದರು. ಲಂಡನ್‌ನಲ್ಲಿಯೇ ನಂತರ ಇದ್ದ ಅರಬಿಂದೋ ಘೋಷರ, ಯೌವನದ ಕಾಲದ ಚಿಂತನೆಗಳನ್ನು ಪ್ರಭಾವಿಸಿದವರಲ್ಲಿ ಗಿಸೆಸ್ಸಿಪಿ ಮಝನಿಯೂ ಒಬ್ಬ. ಅಂತಹವರನ್ನು, ಕಾರ್ಲ್ ಮಾರ್ಕ್ಸ್ ನ ಹಾಗೆ ತೀವ್ರವಾದಿ ಪ್ರಕಟಣೆಗಳನ್ನು ಬರೆದು ಚಳವಳಿಗಳನ್ನು ಪ್ರಭಾವಿಸುವ ಕಾರಣಕ್ಕೆ ಫ್ರಾನ್ಸ್ ಜರ್ಮನಿಗಳಿಂದ ಬಹಿಷ್ಕರಿಸಲ್ಪಟ್ಟ ಕೆಲವು ಯುವ ತತ್ವಜ್ಞಾನಿಗಳು ಪತ್ರಕರ್ತರು ಸೇರಿಕೊಂಡರು. ಮೂವತ್ತೊಂದು ವರ್ಷದ ಮಾರ್ಕ್ಸ್, ಗಡಿಪಾರಾದ ಇತರರಂತೆ ಯುರೋಪಿನಲ್ಲಿ ಮತ್ತೊಂದು ಕ್ರಾಂತಿಯ ನಿರೀಕ್ಷೆಯಲ್ಲಿ ತಾತ್ಕಾಲಿಕ ವಾಸ್ತವ್ಯಕ್ಕೆಂದು ಲಂಡನ್‌ಗೆ ಬಂದದ್ದು.
ಈಗಿನ ಜರ್ಮನಿಯ ಭಾಗ ಅಂದರೆ ಆ ಕಾಲದ ಪ್ರಷ್ಯಾದಲ್ಲಿ ಯಹೂದಿ ಮನೆತನದಲ್ಲಿ ಹುಟ್ಟಿದ ಮಾರ್ಕ್ಸ್, ಇಂಗ್ಲೆಂಡ್ ಗೆ ಮೊದಲ ಭೇಟಿ ನೀಡಿದ್ದು ೧೮೪೫ರಲ್ಲಿ, ತನ್ನ ಸಮಾಜವಾದಿ ಗೆಳೆಯ ಫ್ರೆಡ್ರಿಕ್ ಎಂಗೆಲ್ಸ್ ಜೊತೆಗೆ. ಎರಡು ವರ್ಷಗಳ ನಂತರ ಮರಳಿ ಭೇಟಿ ನೀಡಿದ್ದು 1848ರಲ್ಲಿ “ಕಮ್ಯುನಿಸ್ಟ್ ಪ್ರಣಾಳಿಕೆ” ಪ್ರಕಟವಾಗುವ ಮೊದಲು. 1849ರಲ್ಲಿ ತನ್ನ ತಾಯ್ನಾಡಿನಿಂದ ಮತ್ತೆ ಹೊರಹಾಕಲ್ಪಟ್ಟಾಗ ಪತ್ನಿ ಹಾಗು ಕುಟುಂಬದೊಡನೆ ಲಂಡನ್ ಗೆ ಬಂದ. ಮತ್ತೆ, ಬದುಕಿರುವ ತನಕವೂ ಅಲ್ಲೇ ನೆಲೆಸಿದ. ಲಂಡನ್ ನ ಮೊದಮೊದಲ ವಸತಿಗಳಲ್ಲಿ ಬಾಡಿಗೆ ನೀಡಲಾರದ ಕಾರಣಕ್ಕೆ ಹೊರದೂಡಲ್ಪಟ್ಟ ಮಾರ್ಕ್ಸ್ ನ ಸಂಸಾರ, ಸೊಹೊ ಪ್ರದೇಶದ ಡೀನ್ ರಸ್ತೆಯ 28 ನಂಬರಿನ ಮನೆಯಲ್ಲಿ 1851ರಿಂದ 1856ರ ತನಕ ವಾಸಿಸಿತು. ಈ ಸ್ಥಳ ಲಂಡನ್ ನ ನಿರಾಶ್ರಿತರ ಕೇಂದ್ರವಾಗಿತ್ತು. ಕಡಿಮೆ ವೆಚ್ಚದಲ್ಲಿ ಬದುಕು ಸಾಗಿಸುವವರ, ವಲಸಿಗರ ದೀರ್ಘ ಇತಿಹಾಸ ಇರುವ ಪ್ರದೇಶ ಅದಾಗಿತ್ತು. ಸೊಹೊ ಪ್ರದೇಶ, ಲಂಡನ್ ಗೆ ಗಡೀಪಾರಾದ ಬಹುರಾಷ್ಟ್ರಿಯರು ಕಲೆಯುವ ಸಹಜ ಸ್ಥಳವಾಯಿತು. ಈ ಪ್ರಾಂತ್ಯದ ಗೋಜಲು ರಸ್ತೆಗಳಲ್ಲಿ ತುಂಬಿತುಳುಕುವ ಬಹು ಸಂಸ್ಕೃತಿಯ ವಲಸಿಗರ ಬಗ್ಗೆ ಮಾತನಾಡುವ ಬರೆಯುವ ಆಂಗ್ಲರ ಸಂಖ್ಯೆಯೂ ಬೆಳೆಯಿತು. 1853ರಲ್ಲಿ ಚಾರ್ಲ್ಸ್ ಡಿಕನ್ಸ್, ಇಂತಹ ವಠಾರದಲ್ಲಿ ಏಕಕಾಲಕ್ಕೆ ಯೂರೋಪಿನ ಬೇರೆ ಬೇರೆ ದೇಶಗಳ “ಮಾಜಿ ಜನಪ್ರತಿನಿಧಿ”ಗಳು ಹೇಗೆ ಎದುರಾಗುತ್ತಿದ್ದರು ಎಂದು ಬರೆದ. ಜರ್ಮನಿಯ ವೈಜ್ಞಾನಿಕ ಪಿತೂರಿಗಾರರು, ಕಪ್ಪು ಬಣ್ಣದ ಇಟಾಲಿಯನ್ನರು, ಹೊಳಪು ಗಡ್ಡದ ಹಂಗೆರಿಯನ್ನರು, ಕಸೂತಿಯ ಟೊಪ್ಪಿ ಧರಿಸಿದವರ ಬಗ್ಗೆ ಉಲ್ಲೇಖಿಸಿದ. ವಿದೇಶಿ ಭಾಷೆಯ ಪತ್ರಿಕೆಗಳ ಮಾರಾಟ, ಪುಸ್ತಕದಂಗಡಿಗಳು, ನಿರಾಶ್ರಿತ ವಸತಿಗಳು ಸೋಹೋದ ಬಡಾವಣೆಗಳಲ್ಲಿ ಹುಲುಸಾಗಿ ಬೆಳೆಯಿತು.
1850ರ ಹೊತ್ತಿಗೆ ಅಂದಾಜು 1000 ಜರ್ಮನ್ ನಿರಾಶ್ರಿತರು ಲಂಡನ್‌ನಲ್ಲಿ ಇದ್ದರು. ಅವರೆಲ್ಲರ ಸಾಮಾಜಿಕ ರಾಜಕೀಯ ಚರ್ಚೆಯ ಕೇಂದ್ರ ವಿಂಡ್ಮಿಲ್ ರಸ್ತೆಯ “ಲಯನ್ ಪಬ್” ಆಗಿತ್ತು. ಆ ಸ್ಥಳವೇ ಕಮ್ಯುನಿಸ್ಟ್ ಸಂಘಟನೆಯ ಲಂಡನ್ ಶಾಖೆಯಾಗಿತ್ತು. ಮಾರ್ಕ್ಸ್ ಮತ್ತು ಎಂಗೆಲ್ಸ್ ಜೊತೆಗೂಡಿ ಈ ಸಂಘಟನೆಗೆ ಪ್ರಣಾಳಿಕೆ ಬರೆದಿದ್ದರು. ಮಾರ್ಕ್ಸ್ ವಾಸಿಸುತ್ತಿದ್ದ ಡೀನ್ ರಸ್ತೆಯ ಬಿಡಾರದಿಂದ ತುಸು ದೂರದ ನಡಿಗೆಯಲ್ಲಿದ್ದ ಲಯನ್ ಪಬ್‌ನಲ್ಲೇ ಮಾರ್ಕ್ಸ್ ಕುಡಿಯುತ್ತ, ಸಿಗರೇಟು ಸೇದುತ್ತ, ಊಟ ಮಾಡುತ್ತಾ ಚೆಸ್ ಆಡುತ್ತ ಗೆಳೆಯರೊಡನೆ ಬೆರೆಯುತ್ತಿದ್ದ, ಗಡಿಪಾರಾದ ಗೆಳೆಯರೊಡನೆ ಸಮಾಜವಾದದ ಚರ್ಚೆ ನಡೆಸುತ್ತಿದ್ದ.
ಜೀವಂತಿಕೆಯಿಂದ ತುಂಬಿ ತುಳುಕುತ್ತಿದ್ದ ಸೊಹೊ ಪ್ರದೇಶ, ಅಪಾಯಕಾರಿ ಅನಾರೋಗ್ಯಕರ ಸ್ಥಳವೂ ಆಗಿತ್ತು. ಸರಾಸರಿ ಹದಿನಾಲ್ಕು ಜನರು ಒಂದೇ ಮನೆಯಲ್ಲಿ ವಾಸಿಸುವಂತಹ ಜನಸಂದಣಿ, ಬಡತನದ ಬೀಡಾಗಿತ್ತು. ಕಾಯಿಲೆಗಳ ಗೂಡಾಗಿತ್ತು. ೧೮೫೪ರಲ್ಲಿ ಈ ಪ್ರದೇಶ ಕಾಲರಾ ಬಾಧೆಯಿಂದ ಬಳಲಿತು. ಸರಿಯಾದ ಕೆಲಸವಿಲ್ಲದ, ಹಣದ ನಿರ್ವಣೆಯಲ್ಲಿ ಚತುರನಲ್ಲದ ಮಾರ್ಕ್ಸ್ ನಿರಂತರವಾಗಿ ಗೆಳೆಯರ ಕೊಡುಗೆಯಲ್ಲಿ ಜೀವನ ಸಾಗಿಸುತ್ತಿದ್ದ. ಆಪ್ತನಾದ ಎಂಗೆಲ್ಸ್, ಬೇಕರಿ, ಹಾಲು, ತರಕಾರಿ, ಚಹಾ ಅಂಗಡಿಯವರ ಬಳಿ ಮಾರ್ಕ್ಸ್ ಮಾಡಿದ ಸಾಲವನ್ನು ತೀರಿಸುತ್ತಿದ್ದ. ಮಹಡಿಯ ಮೇಲಿದ್ದ ಮಾರ್ಕ್ಸ್ ನ ಮನೆಯಲ್ಲಿ ಮೊದಲು ಎರಡು ಕೋಣೆಗಳಿದ್ದವು. ಹಿಂದೆ ಇದ್ದ ಮಲಗುವ ಕೋಣೆಯನ್ನು ಇಡೀ ಕುಟುಂಬ ಬಳಸುತ್ತಿತ್ತು. ಮುಂದಿನ ಕೊಠಡಿ ಅಡುಗೆ ಮನೆ ಹಾಗು ಹಾಲ್ ಆಗಿತ್ತು. ನಂತರ ಮೂರನೆಯ ಕೊಠಡಿಯನ್ನು ಓದುವ ಸಲುವಾಗಿ ಬಾಡಿಗೆ ಹಿಡಿದ. ಇಡೀ ವಾಸ್ತವ್ಯವನ್ನು ಹೆಂಡತಿ ಜೆನ್ನಿ ಮಾರ್ಕ್ಸ್ “ತಮ್ಮ ನೋವು ನಲಿವುಗಳನ್ನು ಹಿಡಿದಿಟ್ಟ ಭಯಾನಕ ರೌದ್ರ ಕೊಠಡಿಗಳು” ಎಂದು ಬಣ್ಣಿಸಿದ್ದಳು. ಆರ್ಥಿಕ ಮುಗ್ಗಟ್ಟಿನ ಪರಿಸ್ಥಿತಿಯನ್ನು ಹೊರತು ಪಡಿಸಿ ಮಾರ್ಕ್ಸ್ ರಾಜಕೀಯವಾಗಿ ಕ್ರಿಯಾಶೀಲನಾಗಿದ್ದ. 1851ರಲ್ಲಿ ಲಂಡನ್‌ನಲ್ಲಿ ಪತ್ರಿಕಾ ವರದಿಗಾರಿಕೆ ಮಾಡಿಕೊಂಡು ಅಲ್ಪಸ್ವಲ್ಪ ದುಡಿಯುತ್ತಿದ್ದರೂ ಬಡತನದಿಂದ ಹೊರಬರುವಷ್ಟು ಆದಾಯ ಇರಲಿಲ್ಲ. ಆತನ ಎರಡು ಎಳೆಯ ಮಕ್ಕಳು ಇದೇ ಮನೆಯಲ್ಲಿಯೇ ಸಾವಿಗೀಡಾದರು. ಆ ಸಮಯದಲ್ಲಿಯೇ ಅವನಿಗೊಬ್ಬಳು ಮಗಳು ಹುಟ್ಟಿದಳು. ಆಕೆ ಮುಂದೆ ಮಹತ್ವದ ಸಮಾಜವಾದಿ ಪ್ರಚಾರಕಿಯಾದಳು.
“ಇವೆಲ್ಲದರ ಹೊರತಾಗಿ ಗೆಳೆಯ ಒಬ್ಬ ಕ್ರಾಂತಿಕಾರಿ. ಅತ್ಯಂತ ದ್ವೇಷಿಸಲ್ಪಟ್ಟ ಹಾಗು ತನ್ನ ಕಾಲದಲ್ಲಿ ಅತಿ ಹೆಚ್ಚು ತಪ್ಪು ಆಪಾದನೆಗಳನ್ನು ಹೊಂದಿದ್ದ ವ್ಯಕ್ತಿ. ಅಂತಹವನೂ ಸತ್ತುಹೋದ, ಲಕ್ಷಾಂತರ ಕ್ರಾಂತಿಕಾರಿ ಸಹಕಾರ್ಯಕರ್ತರ ಅಕ್ಕರೆ ಭಕ್ತಿ ಹಾಗು ಸಂತಾಪವನ್ನು ಪಡೆದು”. ಹೀಗೆ ಮಾತನಾಡಿದವನು ಫ್ರೆಡ್ರಿಕ್ ಎಂಗೆಲ್ಸ್ ತನ್ನ ಆತ್ಮೀಯ ಗೆಳೆಯನಾದ ಕಾರ್ಲ್ ಮಾರ್ಕ್ಸ್ ನ ಶವಸಂಸ್ಕಾರ ಸಭೆಯಲ್ಲಿ.
ಕಡುಬಡತನದ ದಿನಗಳಲ್ಲೇ ಮಾರ್ಕ್ಸ್ ತನ್ನ ಅತ್ಯಂತ ಮಹತ್ವಪೂರ್ಣ ಕೃತಿಯಾದ “ದಾಸ್ ಕ್ಯಾಪಿಟಲ್” ಬರೆಯುವುದರಲ್ಲಿ ತಲ್ಲೀನನಾಗಿದ್ದ (1867), ಬ್ರಿಟಿಷ್ ಸಂಗ್ರಹಾಲಯದ ಲೈಬ್ರರಿಯಲ್ಲಿ ಸಂಶೋಧನೆ ನಡೆಸುತ್ತಿದ್ದ. 1856ರಲ್ಲಿ, ಗೆಳೆಯ ಎಂಗೆಲ್ಸ್ ನ ಸಹಾಯ, ಜೆನ್ನಿಯಿಂದ ಬಂದ ಬಳುವಳಿಯ ಸಹಾಯದಿಂದ ಡೀನ್ ರಸ್ತೆಯ ಜೋಪಡಿಯನ್ನು ಬಿಟ್ಟು “ಕೆಂಟಿಷ್ ಟೌನ್” ವಸತಿಗೆ ಹೋದ, ಸಾಯುವ ತನಕವೂ ಅಲ್ಲೇ ಇದ್ದ. ಅಮೆರಿಕದ “ನ್ಯೂಯಾರ್ಕ್ ಡೈಲಿ ಟ್ರಿಬ್ಯೂನ್”ಗೆ ಯುರೋಪಿನ ವರದಿಗಾರನಾಗಿ ಕೆಲಸ ಆರಂಭಿಸಿದ ಮೇಲೆ ಮಾರ್ಕ್ಸ್ ನ ಆದಾಯ ಸ್ವಲ್ಪ ಹೆಚ್ಚಿತು. 1864ರಲ್ಲಿ “ಅಂತಾರಾಷ್ಟ್ರೀಯ ಕೆಲಸಗಾರರ ಸಂಘಟನೆ”ಯನ್ನು ಸೇರಿದ. ಬ್ರಿಟನ್ನಿನ ಕಾರ್ಮಿಕ ಸಂಘಟನೆಯ ಸದಸ್ಯರಿಂದ ಆರಂಭವಾಗಿ, ಜಗತ್ತಿನ ಬೇರೆ ಬೇರೆ ಭಾಗಗಗಲ್ಲಿ ದುಡಿಯುವವರನ್ನು ಒಗ್ಗೂಡಿಸುವ ಹಿತಾಸಕ್ತಿಯನ್ನು ಉದ್ದೇಶವಾಗಿಟ್ಟುಕೊಂಡ ಸಂಸ್ಥೆ ಅದಾಗಿತ್ತು. ಆಂಗ್ಲ ದುಡಿಯುವ ವರ್ಗದ ಜೊತೆಗೆ ಸಂಪರ್ಕ ಬೆಳೆಸಿಕೊಂಡ ಮಾರ್ಕ್ಸ್ ಸಂಘಟನೆಯ ಸಕ್ರಿಯ ಸದಸ್ಯನಾದ. ನಿರಂತರ ಬರವಣಿಗೆಗಳ ಮೂಲಕ ಅಂತಾರಾಷ್ಟ್ರೀಯ ಪ್ರಭಾವವನ್ನು ಹೆಚ್ಚಿಸಿಕೊಂಡ. ಗೆಳೆಯ ಎಂಗೆಲ್ಸ್ ಜೊತೆಗೂಡಿ ಮಾರ್ಕ್ಸ್‌ವಾದವನ್ನು ಬೆಳೆಸಿದ. 1871ರಲ್ಲಿ ಫ್ರಾನ್ಸ್ ಅಲ್ಲಿ ನಡೆದ ರಾಜಕೀಯ ವಿಭಜನೆಯಲ್ಲಿ ಮಾರ್ಕ್ಸ್ ನ ಪ್ರಭಾವ ಅವನಿಗೆ ಲೋಕವಿಖ್ಯಾತಿಯನ್ನೂ ಕುಖ್ಯಾತಿಯನ್ನೂ ಜೊತೆಜೊತೆಗೆ ನೀಡಿತು.
ಮಾರ್ಕ್ಸ್ ನ ಬೌದ್ಧಿಕ ಬೆಳವಣಿಗೆಯಲ್ಲಿ ಬ್ರಿಟಿಷ್ ಸಂಗ್ರಹಾಲಯದ ಓದುವ ಕೊಠಡಿಯ ಪಾತ್ರವನ್ನು ಇತಿಹಾಸಕಾರರು ಉಲ್ಲೇಖಿಸುತ್ತಾರೆ. ಬ್ರಿಟಿಷ್ ಮ್ಯೂಸೀಯಂನ ಲೈಬ್ರರಿಯ “ಓದುವ ಕೊಠಡಿ”ಯ ನಿರ್ಮಾಣ 1854ರಲ್ಲಿ ಆರಂಭವಾಗಿ 1857ರಲ್ಲಿ ಮುಗಿಯಿತು. ವೃತ್ತಾಕಾರದ ವಿಶಿಷ್ಟ ವಿನ್ಯಾಸ, ಗೋಲಾಕಾರದ ಛಾವಣಿ ಇಟಲಿಯ ಪುರಾತನ ಸೌಧ ಪ್ಯಾಂಥಿಯಮ್ ಅನ್ನು ಹೋಲುತ್ತದೆ. ಅಸಂಖ್ಯ ಚಾರಿತ್ರಿಕ, ರಾಜಕೀಯ, ಅರ್ಥಶಾಸ್ತ್ರದ ಪತ್ರಿಕೆಗಳು, ರಾಜಕೀಯ ಜಿಜ್ಞಾಸೆಗಳು ಇಲ್ಲಿ ಲಭ್ಯ ಇರುತ್ತಿದ್ದವು. ಸೋಮವಾರದಿಂದ ಶನಿವಾರದ ತನಕ ಬೆಳಿಗ್ಗೆ 9ರಿಂದ ಸಂಜೆ 7ರವರೆಗೆ ಹಲವು ಬಹರಗಾರರು, ಚಿಂತಕರನ್ನು ಓದುವ ಕೋಣೆ ಆಕರ್ಷಿಸುತ್ತಿತ್ತು. ೧೮೫೦ರಲ್ಲಿ ಇಲ್ಲಿ ಓದುವ ಪರವಾನಿಗೆ ಬೇಡಿಕೆ ಸಲ್ಲಿಸಿ ಅನುಮೋದನೆ ಪಡೆದ ಮಾರ್ಕ್ಸ್, ಬದುಕಿದ್ದಷ್ಟು ದಿನವೂ ಸಾಧ್ಯ ಆದಾಗಲೆಲ್ಲ ಇಲ್ಲಿಗೆ ಬರುತ್ತಿದ್ದ, ಓದುತ್ತಿದ್ದ, ಸಂಶೋಧನೆ ನಡೆಸುತ್ತಿದ್ದ. “ನ್ಯೂಯಾರ್ಕ್ ಡೈಲಿ ಟ್ರಿಬ್ಯೂನ್” ನಲ್ಲಿ ಬರೆಯುತ್ತಿದ್ದ ಬರಹಗಳಿಂದ ಹಿಡಿದು ಪ್ರಸಿದ್ಧ “ದಾಸ್ ಕ್ಯಾಪಿಟಲ್” ಪುಸ್ತಕದ ತನಕ, ಅಗತ್ಯ ಇರುವ ಪ್ರಮುಖ ಮಾಹಿತಿ ಜ್ಞಾನವನ್ನು ಲೈಬ್ರರಿಯ ಓದುವ ಕೋಣೆ ಮಾರ್ಕ್ಸ್ ನಿಗೆ ನೀಡಿದೆ. ಲಂಡನ್‌ನ ಪುಸ್ತಕಗಳು ಪುಸ್ತಕಾಲಯದ ಸಾಂಗತ್ಯ ದೊರೆಯದಿದ್ದರೆ ಮಾರ್ಕ್ಸ್ ನಾವು ತಿಳಿದ ಮಾರ್ಕ್ಸ್ ಆಗುತ್ತಿರಲಿಲ್ಲ ಎಂದ ಇತಿಹಾಸಕಾರರಿದ್ದಾರೆ.
1875ರಲ್ಲಿ ಕಾರ್ಲ್ ಹಾಗು ಜೆನ್ನಿ ಮಾರ್ಕ್ಸ್ ರ ಎರಡೂ ಹೆಣ್ಣುಮಕ್ಕಳು ಮದುವೆಯಾಗಿ ಮನೆ ಬಿಟ್ಟ ಮೇಲೆ ಮೈಟ್ಲ್ಯಾಂಡ್ ರಸ್ತೆಯ 41ನಂಬರಿನ ಮನೆಗೆ ವಾಸ್ತವ್ಯ ಬದಲಾಯಿಸಿದರು. ಆ ಮನೆಯಲ್ಲಿಯೇ 1881ರಲ್ಲಿ ಅನಾರೋಗ್ಯದಿಂದ ಹೆಂಡತಿ ಜೆನ್ನಿ ತೀರಿಕೊಂಡಳು, ಮಾರ್ಕ್ಸ್ 1883ರಲ್ಲಿ ಮೃತನಾದ. ಇಬ್ಬರನ್ನೂ ಸ್ಥಳೀಯ ಹೈಗೇಟ್ ಸ್ಮಶಾನದ ಒಂದೇ ಸಮಾಧಿಯಲ್ಲಿ ಹೂಳಲಾಗಿತ್ತು. ಸಮಾಧಿಯಲ್ಲಿದ್ದ ಅವಶೇಷಗಳನ್ನು, ಮೊದಲೇ ಮಡಿದಿದ್ದ ಮಕ್ಕಳ ಸಮಾಧಿಯ ಅವಶೇಷಗಳನ್ನು ಬ್ರಿಟನ್ನಿನ ಕಮ್ಯುನಿಸ್ಟ್ ಪಕ್ಷ ದ ಖರ್ಚಿನಲ್ಲಿ 1954ರಲ್ಲಿ ಪ್ರಮುಖ ಸ್ಮಶಾನವೊಂದಕ್ಕೆ ವರ್ಗಾಯಿಸಲಾಯಿತು. ಅಲ್ಲಿನ ಸಮಾಧಿಯನ್ನು ಮಾರ್ಕ್ಸ್ ನ ಮೂರ್ತಿಯಿಂದ ಅಲಂಕರಿಸಲಾಗಿದೆ. “ಎಲ್ಲ ನಾಡುಗಳ ಕೆಲಸಗಾರರೂ ಒಂದಾಗಲಿ” ಎನ್ನುವ ಮಾರ್ಕ್ಸ್ ನ ಸಾಲನ್ನು ಬರೆಯಲಾಗಿದೆ. ಸುತ್ತಲೂ ಇತರ ಕ್ರಾಂತಿಕಾರಿಗಳ ಸಮಾಧಿಗಳೂ ಇವೆ. ಆತನ ಬದುಕು ಹಾಗು ಯೋಚನೆಗಳನ್ನು ಪ್ರಭಾವಿಸಿದ್ದ ಲಂಡನ್ನೇ ಚಿರಶಾಂತಿಗೆ ಸೂಕ್ತ ಸ್ಥಳ ಎಂದು ಕೆಲವು ಲಂಡನ್ನಿಗರು ತಿಳಿಯುತ್ತಾರೆ. ಯಾರು ಹೇಗೆ ತಿಳಿದರೂ, ಜರ್ಮನ್ ಅಲ್ಲಿ ಹುಟ್ಟಿ, ತತ್ವಜ್ಞಾನ ಹಾಗು ಸಮಾಜವಾದಗಳ ಕ್ರಾಂತಿಕಾರಕ ಯೋಚನೆಗಳಿಂದ ಜಗತ್ತನ್ನು ಪ್ರಭಾವಿಸಿ, ನಿತ್ಯವೂ ಜಗತ್ತಿನ ಒಂದಿಲ್ಲೊಂದು ಕಡೆ ಗೌರವವನ್ನು ಅಥವಾ ದ್ವೇಷವನ್ನು ಅಲ್ಲದಿದ್ದರೆ ತಪ್ಪು ಆಪಾದನೆಯನ್ನು ಈಗಲೂ ಸೆಳೆಯುತ್ತ ಮಾರ್ಕ್ಸ್ ಉತ್ತರ ಲಂಡನ್ ನ ಸಮಾಧಿಯಲ್ಲಿ ಮೌನವಾಗಿ ಮಲಗಿದ್ದಾನೆ.
ಮಾರ್ಕ್ಸ್ ನ ಕೊನೆಯ ಮನೆಯಾದ ಮೈಟ್ಲ್ಯಾಂಡ್ ರಸ್ತೆಯ 41ನಂಬ್ರದ ಮನೆಯಲ್ಲಿ ನೆನಪಿನ ಫಲಕವನ್ನು ನೆಡಲಾಯಿತು. ಆದರೆ ಆ ಫಲಕವನ್ನು ಯಾರೋ ಘಾಸಿಗೊಳಿಸಿದರು. ಬದಲಿ ಫಲಕವನ್ನೂ ಹಾಳುಗೆಡವಿದರು. ಆ ಮನೆಯಲ್ಲಿ ವಾಸಿಸುತ್ತಿದ್ದವರು ಮೂರನೆಯ ಫಲಕವನ್ನು ನೆಡುವುದನ್ನು ನಿರಾಕರಿಸಿದರು. ಆ ಮನೆಯನ್ನು ಮುಂದೆ ಕೆಡವಿ ಅಲ್ಲಿ ಇನ್ನೊಂದು ಕಟ್ಟಡವನ್ನು ಕಟ್ಟಲಾಯಿತು. ನಂತರ ಮಾರ್ಕ್ಸ್ ನ ಲಂಡನ್ ದಿನಗಳ ಇನ್ನೊಂದು ವಸತಿಯಾದ ಡೀನ್ ರಸ್ತೆಯ 28 ನಂಬ್ರಕ್ಕೆ ಇತಿಹಾಸಕಾರರ ಗಮನ ತಿರುಗಿತು. ಇಲ್ಲಿ 1967ರಲ್ಲಿ ಸ್ಥಾಪಿಸಲಾದ ಫಲಕವೂ ಎಲ್ಲರಿಂದ ಸ್ವಾಗತ ಪಡೆಯಲಿಲ್ಲ. ಉಪ್ಪರಿಗೆಯಲ್ಲಿದ್ದ ಆ ಮನೆಯ ಕೆಳಸ್ಥರದಲ್ಲಿ ಈಗ ಹೋಟೆಲು ನಡೆಸುವಾತ “ನನ್ನ ಗಿರಾಕಿಗಳೆಲ್ಲ ಗಣ್ಯರು, ಶ್ರೀಮಂತರು, ರಾಜಮನೆತನದವರು ಆದರೆ ಹಿಂದೆಂದೋ ಇಲ್ಲೇ ಮೇಲೆ ವಾಸಿಸುತ್ತಿದ್ದ ಮಾರ್ಕ್ಸ್ ಆ ಎಲ್ಲರನ್ನೂ ತೊಡೆದು ಹಾಕಬೇಕೆಂದು ಬಯಸಿದವನು” ಎಂದು ವರ್ತಮಾನದ ವೈರುಧ್ಯವನ್ನು ಚಿತ್ರಿಸುತ್ತಾನೆ.
ಇಂಗ್ಲೆಂಡ್ ನ ಬ್ರಿಸ್ಟಲ್ ನಗರದ “ಏರ್ ಬಸ್” ವಿಮಾನ ಕಂಪನಿಯಲ್ಲಿ ವಿಮಾನ ಶಾಸ್ತ್ರ ತಂತ್ರಜ್ಞ. ಬರವಣಿಗೆ, ಯಕ್ಷಗಾನ ಆಸಕ್ತಿಯ ವಿಷಯಗಳು. ಮೂಲತಃ ಕನ್ನಡ ಕರಾವಳಿಯ ಮರವಂತೆಯವರು. “ಲಂಡನ್ ಡೈರಿ-ಅನಿವಾಸಿಯ ಪುಟಗಳು” ಇವರ ಪ್ರಕಟಿತ ಬಿಡಿಬರಹಗಳ ಗುಚ್ಛ.