ನಾನೇ ಮೇಲೆ ಬಿದ್ದು ಹೋದರೂ ಸರಿಯಾದ ಸ್ಪಂದನೆಯಿಲ್ಲದೆ, ತಿಂಗಳುಗಟ್ಟಲೆ ಮಾತು ಬಿಟ್ಟು, ಬೇರೆ ಬೇರೆ ಮಲಗುವ ರೂಢಿ ಚಾಲ್ತಿಗೆ ಬಂತು. ಒಂದೇ ಮನೆಯಲ್ಲಿದ್ದೂ ನಮ್ಮ ಮಧ್ಯೆ ಮೈಲಿಗಟ್ಟಲೆ ಅಂತರ ಬೆಳೆಯುತ್ತಾ ಹೋಯಿತು. ಆಗ ಅಮ್ಮನ ಮನೆಗೆ ಹೋಗುವ ಬಯಕೆ ತೀವ್ರವಾಗುತ್ತಿತ್ತು. ಹೇಗಿದ್ದರೂ ಅಲ್ಲಿ ಯಾರದ್ದಾದರೂ ಮದುವೆ-ಮುಂಜಿ, ನಾಮಕರಣ ಅಂದರೆ ಎಲ್ಲರಿಗಿಂತ ಮೊದಲು ನನಗೇ ಬುಲಾವ್ ಬರ್ತಿತ್ತು. ಆ ನೆಪದಲ್ಲಿ ತವರು ಸೇರಿದರೆ ತಿಂಗಳು ಎರಡು ತಿಂಗಳ ಕಮ್ಮಿ ವಾಪಸ್ ಹೋಗ್ತಿರಲಿಲ್ಲ. ಜೊತೆಯಿರುವುದಕ್ಕಿಂತ ಬಿಟ್ಟಿರುವುದೇ ಲೇಸೆಂದು, ಸುಖವೆಂದು ಅನ್ನಿಸುತ್ತಿತ್ತು.
ಎಸ್. ನಾಗಶ್ರೀ ಬರೆದ ‘ಬೆಳಕ ಹಾದಿ’ ಕಥೆ, ಈ ಭಾನುವಾರದ ನಿಮ್ಮ ಓದಿಗೆ
“ಈ ಬದುಕಲ್ಲಿ ನಾನು ನಿನ್ನನ್ನು ನಂಬಿದಷ್ಟು, ಹಚ್ಚಿಕೊಂಡಷ್ಟು ಇನ್ಯಾರನ್ನೂ ಹತ್ತಿರಕ್ಕೆ ಬಿಟ್ಟುಕೊಳ್ಳಲಿಲ್ಲ. ನೀನು ತೊರೆದು ಐದು ವರ್ಷಗಳಾದರೂ ನಿಯತ್ತಿನಿಂದ ಇದ್ದೀನಿ. ಯಾರದೋ ಮಾತು ಕೇಳಿ ವಿಚ್ಛೇದನ ಕೊಡುವ ನಿರ್ಧಾರ ಮಾಡಿ, ನನಗೆ ದ್ರೋಹ ಬಗೆಯುವ ಮುನ್ನ ಯೋಚಿಸು. ಈಗಲೂ ಕ್ಷಮಿಸಲು ಸಿದ್ಧವಿದ್ದೇನೆ. ಮಾತಾಡಿ ಪರಿಹರಿಸಿಕೊಳ್ಳೋಣ. ನಿನ್ನ ಉತ್ತರಕ್ಕಾಗಿ ಎದುರು ನೋಡುವೆ. ಶುಭರಾತ್ರಿ.”
ಸುಂದರೇಶನಿಂದ ಈ ಸಂದೇಶ ಬಂದಾಗ ಲತಾ ರಜೆಯ ಮೇಲಿದ್ದಳು. ಕೆಲಸಕ್ಕೆ ಸೇರಿ ವರ್ಷವಾದರೂ ಒಂದೂ ರಜೆ ತೆಗೆದುಕೊಂಡಿಲ್ಲ ಎಂಬುದು ನೆನಪಾಗಿ, ಅದಕ್ಕೆ ಸರಿಯಾಗಿ ಮನೆಯವರೆಲ್ಲಾ ಧರ್ಮಸ್ಥಳ ಯಾತ್ರೆಗೆ ಹೊರಡುವ ಯೋಜನೆಯೂ ರೂಪುಗೊಂಡು ಹಿಂದೆ ಮುಂದೆ ಎರಡು ದಿನ ಸೇರಿಸಿ ಒಂದು ವಾರ ರಜೆ ಹಾಕಿ ಮನೆಯಲ್ಲಿದ್ದಳು. ಊಟ ಮುಗಿಸಿ ಇನ್ನೇನು ಮಲಗುವ ಸಿದ್ಧತೆಯಲ್ಲಿದ್ದಾಗ ಬಂದ ಸಂದೇಶ ಯಾರದಿರಬಹುದೆಂಬ ಕುತೂಹಲಕ್ಕೆ ಕಣ್ಣಾಡಿಸಿದ್ದಳು. ಲೆಕ್ಕಕ್ಕೆ ಅವರಿಬ್ಬರ ಮಧ್ಯೆ ಮಾತು ಸತ್ತು ಎರಡು ಮೂರು ವರ್ಷವಾಗಿರಬೇಕು. ಪ್ರೀತಿ-ಪ್ರೇಮ ಮಾತ್ರವಲ್ಲ. ಸಿಟ್ಟಿನ ಮಾತೂ ಸಂಬಂಧವೊಂದು ಜೀವಂತವಿದ್ದಾಗ ಮಾತ್ರ ಸಾಧ್ಯ. ಇವನೊಂದಿಗೆ ಇನ್ನು ಬದುಕಲಾರೆ ಎನ್ನಿಸಿ ಅಮ್ಮನ ಮನೆಗೆ ಬಂದು ನಿಂತಾಗಲೂ, ಅವಳ ಎದೆಯಲ್ಲೊಂದು ಆಸೆಯ ಮೊಳಕೆಯಿತ್ತು. ನೆಂಟರಿಷ್ಟರ ಬುದ್ಧಿವಾದ, ಅತ್ತಿಗೆಯ ಸಿಡುಕು ಮುಖ, ಅಣ್ಣನ ಚಿಂತೆ, ಅಪ್ಪ ಅಮ್ಮನ ದುಃಖ ತವರನ್ನು ಅಸಹನೀಯಗೊಳಿಸಿದರೂ, ಇವನೊಮ್ಮೆ ಬಂದು ಎಲ್ಲರ ಮುಂದೆ ನನಗೆ ನನ್ನ ಹೆಂಡತಿ ಮುಖ್ಯ. ಅವಳನ್ನು ಕಳಿಸಿಕೊಡಿ. ನಾವಿಬ್ಬರೂ ಕಡೆತನಕ ಜೊತೆಯಾಗಿ ಬಾಳಲೆಂದೇ ಮದುವೆಯಾದವರು. ಇದಕ್ಕೆ ಯಾರ ಅಪ್ಪಣೆಯೂ ಬೇಡ ಅಂತ ಸಿನಿಮಾಗಳಲ್ಲಿ ತೋರಿಸುವಂತೆ ಕೈಹಿಡಿದು ಕರೆದುಕೊಂಡು ಹೋಗುವ ಹಗಲುಗನಸು ಎಷ್ಟಿತ್ತು!
ಆಗೆಲ್ಲಾ ಇವನದೊಂದು ಕರೆಗೆ ಹಂಬಲಿಸಿ ನಿದ್ದೆ-ಊಟ ಬಿಟ್ಟು ಕೆಟ್ಟ ದಿನಗಳು ನೆನಪಾಯ್ತು. ನನಗಿಂತ ಹತ್ತು ವರ್ಷ ದೊಡ್ಡವನಾದ ಅಣ್ಣ, ತಂಗಿಯ ಮದುವೆಯ ಜವಾಬ್ದಾರಿ ಮುಗಿಸಿಯೇ ಮದುವೆಯಾಗುವೆನೆಂದು ಕಾದು ಹುಡುಕಿ ಹುಡುಕಿ ತಂದ ಹುಡುಗನಿವನು. ಒಳ್ಳೆಯವನೇ. ಕೆಟ್ಟ ಘಳಿಗೆಯಲ್ಲಿ ಆಡಿದ ನಾಲ್ಕು ಮಾತಿಗೆ ಪಶ್ಚಾತ್ತಾಪಪಟ್ಟು ಬಂದೇ ಬರುತ್ತಾನೆಂಬ ಭರವಸೆ ಅಣ್ಣನಿಗೂ ಇತ್ತು. ಒಬ್ಬೊಬ್ಬರಾಗಿ ಸುಂದರೇಶನ ಅಪ್ಪ ಅಮ್ಮ, ಅಣ್ಣ ತಮ್ಮಂದಿರು ಬಂದು ಮನೆಗೆ ಬಾ ಎಂದರೇ ಹೊರತು ಸುಂದರೇಶ ತಪ್ಪಿಯೂ ಕ್ಷಮೆಯಾಚಿಸಲಿಲ್ಲ. ಮನೆಗೆ ಬರಲೂ ಇಲ್ಲ. ಆದರೆ ಈಗ ನಿರೀಕ್ಷೆಗಳೆಲ್ಲಾ ಹುಸಿಯಾಗಿ, ನೋವು ಕುದ್ದು ಆವಿಯಾಗಿ, ನಿರ್ಭಾವುಕ ನೆಲೆಯಲ್ಲಿ ನಿಂತವಳಿಗೆ ಮತ್ತೆ ಯೋಚಿಸುವ ಪ್ರಮೇಯ ಕಾಣಲಿಲ್ಲ. ಬೇಕೋ ಬೇಡವೋ ಮನಸ್ಸು ಮಾತ್ರ ವಿಚಾರ ಸಿಕ್ಕ ತಕ್ಷಣ ಅದಕ್ಕೆ ಸಂಬಂಧಪಟ್ಟ ಎಳೆಗಳನ್ನೆಲ್ಲಾ ತಂದು ಗುಡ್ಡೆ ಹಾಕಿ ಮಾತು ನೇಯಲು ಶುರುವಿಟ್ಟಿತು.
ಸುಂದರೇಶನನ್ನು ಮೊದಲು ನೋಡಿದ್ದು ಮೈಸೂರಿನ ಚಿಕ್ಕಪ್ಪನ ಮನೆಯಲ್ಲಿ. ಸತ್ಯನಾರಾಯಣ ಪೂಜೆಯೆಂದು ಅಪ್ಪನ ಬಳಗವೆಲ್ಲಾ ಅಲ್ಲೇ ನೆರೆದಿತ್ತು. ಅಂದು ಸಂಜೆಯೇ ಗಂಡಿನ ಮನೆಯವರು ಮನೆಗೆ ಬಂದು, ಹುಡುಗಿ ನೋಡಿದ ಶಾಸ್ತ್ರ ಮಾಡುವುದೆಂದು ಮಾತಾಗಿತ್ತು. ವಿಶಾಲ ಮನೆಯೂ ಇಕ್ಕಟ್ಟೆನಿಸುವಷ್ಟು ಜನ. ಅವರ ಕಡೆಯಿಂದ ಬಂದವರು ನಾಲ್ಕೇ ಆದರೂ ನಮ್ಮ ಬಳಗವೇ ದೊಡ್ಡದಿತ್ತು. ಒಳಕೋಣೆಯಲ್ಲಿ ಸೀರೆಯುಡಿಸಿ, ಮಲ್ಲಿಗೆ ಮುಡಿಸಿ, ಚಿನ್ನದ ಸರ, ಬಳೆ, ಓಲೆಯಿಕ್ಕಿಸಿ ಸೋದರತ್ತೆ ಸಂಭ್ರಮದಿಂದ ಅಲಂಕಾರ ಮಾಡಿ ನೆಟಿಕೆ ತೆಗೆದಿದ್ದರು. ಆಗಲೇ ಒಬ್ಬೊಬ್ಬರಾಗಿ ನನ್ನ ತಂಗಿಯರು ಓಡಿ ಬಂದು, ಹುಡುಗ ಎಷ್ಟು ಸುಂದರಾಂಗ ಗೊತ್ತೇನೆ? ಅಕ್ಕಯ್ಯಾ… ಈ ಹುಡುಗನ್ನೇ ಮದ್ವೆ ಆಗೇ. ಎಷ್ಟು ಸ್ಮಾರ್ಟ್, ಎಷ್ಟು ಡೀಸೆಂಟ್, ಇಷ್ಟು ಹ್ಯಾಂಡ್ಸಮ್ ಹುಡುಗ ಸಿಕ್ಕಲ್ವೇ ಅಂತ ಒಂದೇ ರಾಗ.
ಕಾಫಿ ತಟ್ಟೆ ಕೈಲಿ ಹಿಡಿದು ಹೊರಟಾಗ ಒಳಗೊಳಗೆ ಹಿಗ್ಗು. ಚೂರು ಭಯ. ಚೂರು ನಾಚಿಕೆ. ಕಾಫಿ ಕೊಡುವಾಗ ಗಮನಿಸಿದ ಅವನ ನೀಳ ಬೆರಳು, ಕಡುಗಪ್ಪು ಕೂದಲು, ಚೂಪು ಮೂಗು ಬಹಳ ಹಿಡಿಸಿತ್ತು. ಸಾದಾಗಪ್ಪು ಬಣ್ಣ, ಕಿರಿದಾದ ಕಣ್ಣು, ಮೊಂಡು ಮೂಗಿನ ನನ್ನನ್ನು ಅಷ್ಟು ಚೆಲುವ ಒಪ್ಪುವುದು ಕಷ್ಟವೆಂದುಕೊಂಡಿದ್ದೆ. ಹಿರಿಯರು ಮಾತು ಮುಗಿಸಿ, ಮನೆಗೆ ಕಳುಹಿಸಿ, ಎಲ್ಲರ ಊಟವಾಗಿ ಅಣ್ಣ ಮಾತಿಗೆ ಸಿಕ್ಕಾಗ ರಾತ್ರಿ ಹನ್ನೊಂದಾಗಿತ್ತು. ಒಳ್ಳೆ ಮನೆತನ. ಪ್ರಾಮಾಣಿಕರು. ಹುಡುಗನೂ ಸಭ್ಯಸ್ತ. ಕಣ್ಮುಚ್ಚಿ ಮದುವೆಯಾಗಬಹುದು. ನಾನು ಗ್ಯಾರೆಂಟಿ ಅಂದ. ಬೇಕಿದ್ರೆ ನಾಳೆ ನಾಡಿದ್ದರ ಹಾಗೆ ಫೋನಲ್ಲಿ ಮಾತಾಡಿ. ಅಭಿಪ್ರಾಯ ಹೊಂದಿದ್ರೆ ಮಾತುಕತೆ ಮುಂದುವರೆಸೋಣ. ನಿನ್ನ ಭವಿಷ್ಯದ ಪ್ರಶ್ನೆ. ನಿನ್ನ ತೀರ್ಮಾನವೇ ಅಂತಿಮ. ಅಂತವನು ಮಾತು ಮುಗಿಸಿದ. ಅಮ್ಮ ಅಪ್ಪನ ಮಾತೆಲ್ಲವೂ ಅಣ್ಣನ ಮುಖಾಂತರವೇ ನನ್ನನ್ನು ತಲುಪುತ್ತಿತ್ತು. ಅಣ್ಣ-ತಂಗಿ ಬಾಂಧವ್ಯ ಗಟ್ಟಿಯಾಗುವುದೇ ಹಾಗಿದ್ದಾಗ ಅನ್ನುವುದು ಅಪ್ಪನ ನಂಬಿಕೆ. ಅವನು ಹೇಳಿದ ಹಾಗೆ ಹುಡುಗನ ಹತ್ತಿರ ಮಾತಾಡಿದ್ರೆ “ಜಾತಕ ಹೊಂದತ್ತೆ. ಬರೀ ಗಂಡುಮಕ್ಕಳ ಯೋಗವೇ ಇದೆ. ನಮ್ಮ ತಂದೆಯೂ ಹುಡುಗಿ ಅಂದ- ಚೆಂದಕ್ಕಿಂತ ಗುಣ ಮುಖ್ಯ. ಕೂಡುಕುಟುಂಬದಿಂದ ಬಂದಾಕೆ ಮನೆಯಲ್ಲಿ ಹೊಂದಿಕೊಳ್ತಾಳೆ. ಕಪ್ಪು ಅಂತ ಹಿಂಜರಿದ್ರೆ, ಇಂಥ ಸಂಬಂಧ ಮತ್ತೆ ಸಿಗಲ್ಲ ಅಂದ್ರು. ನನಗೆ ನಿಮ್ಮ ಉದ್ದ ಜಡೆ, ನಕ್ಕಾಗ ಹೊಳೆಯುವ ಅಚ್ಚಬಿಳಿ ಹಲ್ಲುಗಳು ಇಷ್ಟವಾಯ್ತು. ನೀವೂ ಒಪ್ಪಿದ್ರೆ ಮದುವೆಯಾಗೋಣ” ಅಂದಿದ್ದ.
ಅಂದ ಚೆಂದದ ಪ್ರಸ್ತಾಪ ಆಗಿದ್ದು ಮುಜುಗರವಾದರೂ ಕಡೆಯ ಸಾಲಿನ ಮೆಚ್ಚುಗೆ ಅದನ್ನು ಮರೆಸಿತ್ತು. ಅಂದಿನಿಂದಲೂ ಸಿಹಿಯೊಳಗೆ ಕಹಿ ಬರೆಸುವ ಮಾತುಗಾರಿಕೆ ಅವನದೆಂಬ ಗ್ರಹಿಕೆ ಸ್ಪಷ್ಟವಾಯಿತು. ನೆನಪುಗಳು ನಮ್ಮ ಮನಃಸ್ಥಿತಿಗೆ ತಕ್ಕಂತೆ ಅರ್ಥಪಡೆಯುತ್ತಾ, ಬಣ್ಣಬದಲಿಸುತ್ತಾ ಪ್ರಭಾವಿಸುತ್ತವೆ. ಈಗ ಆಗಿಹೋದ ಮಾತೆಲ್ಲಾ ಯಾಕೆ ಎದೆಯೊಳಗೆ ಸುತ್ತುತ್ತಿದೆ ಎನ್ನಿಸಿ ಹಿಂಸೆಯಾದರೂ ನಿದ್ದೆ ಬರುವ ಸೂಚನೆಯಿರಲಿಲ್ಲ. ಬೆಳಗಿನಿಂದ ಮೊಬೈಲ್ ನೋಡಿ ಕಣ್ಣುರಿ ಶುರುವಾಗಿತ್ತು. ಚೂರು ಹರಳೆಣ್ಣೆ ರೆಪ್ಪೆಗೆ ಹಚ್ಚಿ ಮಲಗಿದರೆ ಗಡದ್ದು ನಿದ್ದೆ, ಕಣ್ಣಿಗೂ ತಂಪು ಎಂಬ ಪರಿಹಾರ ಕಾಣಿಸಿ ಬಚ್ಚಲುಮನೆಯ ಪಕ್ಕದಲ್ಲಿದ್ದ ಕಪಾಟು ತೆರೆದು ಹರಳೆಣ್ಣೆ ಬಾಟಲಿಗೆ ತಡಕಾಡಿದಳು. ಎರಡೇ ತೊಟ್ಟು ಹರಳೆಣ್ಣೆ ಬೆರಳಲ್ಲಿ ಅದ್ದಿ ರೆಪ್ಪೆಗೆ ಸವರಿದಾಗ ಅಂಟಂಟು ಎನಿಸಿದರೂ ತಡೆದುಕೊಂಡಳು.
ಸುಂದರೇಶನೂ ಹಾಗೇ. ಅಂಟಂಟು ಜಿಗುಟು ವ್ಯಕ್ತಿ ಎನಿಸಿತು. ಎಲ್ಲಾ ವಿಷಯಕ್ಕೂ ತನ್ನ ಮಾತೇ ನಡೆಯಬೇಕೆನ್ನುವ ಹಠ. ಕಾಲಕ್ಕೆ ತಕ್ಕಂತೆ ಬದಲಾಗದ ಮೊಂಡುತನ. ಹಳೆ ಕಂದಾಚಾರಗಳನ್ನೇ ಹೇರಿ ಹಿಂಸಿಸಿ, ಉಸಿರುಗಟ್ಟಿಸುವ ಪೈಕಿ. ತಮಗಿನ್ನು ಮಕ್ಕಳಾಗುವ ಸಂಭವ ಕಡಿಮೆಯೆಂದು ವೈದ್ಯರು ಹೇಳಿದಾಗಲೂ ಒಪ್ಪಲು ತಯಾರಿಲ್ಲದೆ ದಿನಕ್ಕೊಂದು ಪೂಜೆ, ಹೋಮ, ವ್ರತ ಗಂಟುಹಾಕಿ, ಇಷ್ಟವಿಲ್ಲದಾಗಲೂ ಬಲವಂತಕ್ಕೆ ಕಾಮಿಸಿ, ಪ್ರತಿ ತಿಂಗಳು ಈಚೆಯಾಗುವ ಸಮಯದಲ್ಲಿ ಬಸುರಿನ ಚಿಹ್ನೆ ಯಾವುದಾದರೂ ಕಾಣಿಸುತ್ತಿದೆಯಾ ಅಂತ ಪ್ರಶ್ನೆ ಮೇಲೆ ಪ್ರಶ್ನೆ ಕೇಳಿ, ಅಯ್ಯಬ್ಬಾ ಮಕ್ಕಳಿಲ್ಲ ಎನ್ನುವ ಕೊರಗಿಗಿಂತ ಮಕ್ಕಳಾಗಲೆಂದು ಹಠಕ್ಕೆ ಬಿದ್ದು ಹಿಂಸಿಸುತ್ತಿದ್ದ ಅವನ ಜಿಗುಟು ಮನಃಸ್ಥಿತಿಯಿಂದ ರೋಸಿಹೋಗಿ “ಇನ್ನು ಸಾಕು. ತಡೆಯಲಾರೆ. ದತ್ತು ತೆಗೆದುಕೊಳ್ಳೋಣ. ಇಲ್ಲವಾದರೆ ಒಂದು ಮುದ್ದಾದ ನಾಯಿ ಸಾಕೋಣ. ಯಾವ ಜ್ಯೋತಿಷಿ, ಬಾಬಾ, ದೇವರು, ಮಂತ್ರ-ತಂತ್ರದ ಗೊಡವೆ ಬೇಡ. ಇರುವುದರಲ್ಲಿ ಉಂಡುಟ್ಟು ಸುಖವಾಗಿ, ನೆಮ್ಮದಿಯಿಂದ ಬಾಳೋಣ.” ಎಂದು ಪರಿಪರಿಯಾಗಿ ಅನುನಯಿಸಿದರೂ ಜಗ್ಗದೆ “ವಂಶಕ್ಕೊಂದು ಕೂಸಿಲ್ಲದಿದ್ದರೆ ಹೇಗೆ? ನಾಳೆ ನಾವು ಸತ್ತರೆ ತಿಥಿ ಮಾಡೋದು ಯಾರು? ನಮ್ಮಪ್ಪ ಅಮ್ಮ ಮೊಮ್ಮಕ್ಕಳಿಲ್ಲದೆ ಕೊರಗು ಹಚ್ಚಿಕೊಂಡಿಲ್ಲವಾ? ಅವರ ಬಗ್ಗೆ ಯೋಚಿಸು. ನಾನು ದುಡಿದ ದುಡ್ಡು, ಮಾಡಿಟ್ಟ ಆಸ್ತಿ ಮೂರನೆಯವರ ಪಾಲೇಕೆ ಆಗಬೇಕು ಹೇಳು. ಸಂಸಾರಿಯಾದವನು ಮಕ್ಕಳು ಮಾಡಿಕೊಳ್ಳಬೇಕಾದುದು ಧರ್ಮ. ಶಾಸ್ತ್ರದಲ್ಲೇ ಬರೆದಿಟ್ಟುಬಿಟ್ಟಿದಾರೆ. ಎಷ್ಟೋ ಸಾವಿರ ವರ್ಷದ ಹಿಂದೆ. ಮಕ್ಕಳು ಬೇಕು ಅಂದ್ರೆ ನಾಯಿ ಸಾಕು ಅಂತೀಯಾ? ಯಾರಿಗೋ ಹುಟ್ಟಿದವನ್ನ ನಾನು ತಂದು ನನ್ನ ಮಗು ಅಂದ್ರೆ ಯಾರು ಒಪ್ತಾರೆ? ಅವೆಲ್ಲಾ ಅನೈತಿಕ ಸಂಬಂಧಕ್ಕೆ, ತೀಟೆ ತೆವಲಿಗೆ ಹುಟ್ಟಿದ ಮಕ್ಕಳು ತಿಳ್ಕೋ. ಉಪದೇಶ ಕೊಡೋಕೆ ಬರಬೇಡ” ಅಂತ ಗಟ್ಟಿದನಿಯಲ್ಲಿ ಕಿರುಚಾಡಿದ್ದ. ನನಗೂ ಕೋಪ ನೆತ್ತಿಗೇರಿ,
“ಹೆಂಡತಿಯ ಆರೋಗ್ಯ, ಮಾನಸಿಕ ಪರಿಸ್ಥಿತಿ, ಕಷ್ಟ ಸುಖ ಏನೂ ತಿಳಕೊಳ್ಳದೆ ಪ್ರಾಣಿಗಿಂತ ಕಡೆಯಾಗಿ ಮಗು ಬೇಕು ಅಂತ ಬಲಾತ್ಕರಿಸೋದಕ್ಕೆ ಯಾವ ಹೆಸರಿದೆ? ಆಗ ನಿನ್ನದೂ ತೀಟೆಯಂತಲೇ ಆಗತ್ತೆ. ಮಕ್ಕಳನ್ನ ದೇವರಂತಾರೆ. ಅಂಥ ಮಕ್ಕಳ ಹುಟ್ಟಿನ ಬಗ್ಗೆ ಹೊಲಸಾಗಿ ಮಾತಾಡೋ ನಿನ್ನಂತಹವನ ಜೊತೆ ಮಾತಾಡೋಕೂ ಅಸಹ್ಯ ಆಗ್ತಿದೆ. ನಾಯಿಗಿರೋ ನಿಯತ್ತು ನಿನ್ನಂತವರಿಗೆ ಇರಲ್ಲ. ಅಪ್ಪ ಅಮ್ಮನ ಬಗ್ಗೆ, ಊರು ಜನರ ಬಗ್ಗೆ, ಶಾಸ್ತ್ರ ಸಂಪ್ರದಾಯದ ಬಗ್ಗೆ ಯೋಚನೆ ಮಾಡು ಅಂತ ಉದ್ದುದ್ದ ಭಾಷಣ ಬಿಗಿಯೋ ನೀನು ಯಾವತ್ತಾರೂ ನನ್ನ ಬಗ್ಗೆ- ಕಟ್ಟಿಕೊಂಡ ಹೆಂಡತಿ ಬಗ್ಗೆ ಯೋಚನೆ ಮಾಡಿದ್ದೀಯಾ? ನಿನ್ನ ಸ್ವಾರ್ಥಕ್ಕೆ ನನ್ನ ಹತ್ತು ವರ್ಷ ಬಲಿಕೊಟ್ಟೆ. ಇನ್ನು ಸಾಧ್ಯ ಇಲ್ಲ. ನಿನ್ನ ಬಿಟ್ಟು ಹೋಗ್ತಿದೀನಿ. ಮತ್ತೆ ವಾಪಸ್ ಬರಲ್ಲ. ಇದು ಖಂಡಿತ” ಅಂತ ರೋಷದಲ್ಲಿ ಪರ್ಸಿಗೆ ಐನೂರರ ಎರಡು ನೋಟು ಸೇರಿಸಿ, ಮೊಬೈಲ್ ತೊಗೊಂಡು ಊರ ಬಸ್ ಹತ್ತಿದ್ದಷ್ಟೇ. ಘಟನೆಯ ನೆನಪಾಗಿದ್ದೇ ಛೇ ಎಂಬ ಉದ್ಗಾರ ಬಾಯಿಂದ ಬಂತು. ಎಲ್ಲರೂ ನಿದ್ದೆಗೆ ಜಾರಿರುತ್ತಾರೆ. ಈಗ ನೇರ ಹೋಗಿ ಹಾಸಿಗೆಯಲಿ ಅಡ್ಡಾಗಿ ನಿದ್ದೆ ಹೊಡೆಯಬೇಕೆನ್ನಿಸಿತು. ಮಲಗಿದ ಐದು ನಿಮಿಷಕ್ಕೆ ಸೆಕೆಯೆನಿಸಿ ಫ್ಯಾನ್ ಹಾಕಿ, ಹೊದಿಕೆ ಜಾಡಿಸಿ ಅಂಗಾತ ಮಲಗಿದರೆ, ಆಲೋಚನೆಯ ಚಕ್ರ ನಿಲ್ಲುವ ಸೂಚನೆಯೇ ಇರಲಿಲ್ಲ.
ಮದುವೆಯಾಗಿ ಎರಡು ತಿಂಗಳಿನಿಂದಲೇ ಜಗಳ ಶುರುವಾಗಿತ್ತು. ಅಡುಗೆಗೆ ಉಪ್ಪು ಹೆಚ್ಚಾಯ್ತೆಂದು ದೊಡ್ಡ ರಂಪವೆಬ್ಬಿಸಿದ್ದ. ಅಂದಿನಿಂದ ಉಪ್ಪೇ ಇಲ್ಲದ ಅಡಿಗೆಯೆನಿಸುವಷ್ಟು ಕಡಿಮೆ ಉಪ್ಪು ಹಾಕಲು ಪ್ರಾರಂಭಿಸಿದೆ. ಮೇಲುಪ್ಪು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ಸಪ್ಪೆಯೂಟ ಮಾಡುತ್ತಿದ್ದ. ಎಂದಾದರೂ ಅಮ್ಮನ ಅಡುಗೆಯ ರುಚಿ ನಿನ್ನ ಕೈಗಿಲ್ಲವೆಂದು ಹಂಗಿಸಿದಾಗ, ಊಟ ಬಿಟ್ಟು ಮೇಲೇಳುತ್ತಿದ್ದೆ. ತಾನೇ ಮಜ್ಜಿಗೆ ಅನ್ನ ಕಲಸಿ, ಉಪ್ಪಿನಕಾಯಿ ಹೋಳು ಹಾಕಿ ತಟ್ಟೆ ಮುಂದಿಟ್ಟು ತಿನ್ನುವಂತೆ ಪೂಸಿ ಹೊಡೆಯುತ್ತಿದ್ದ. ನೀನು ಹಸಿವಿನಲ್ಲಿ ಒದ್ದಾಡುತ್ತಾ ಮಲಗಿದರೆ, ನಾನಿಷ್ಟೆಲ್ಲಾ ದುಡಿದು ಏನು ಸಾಧಿಸಿದ ಹಾಗಾಯ್ತು? ಆಫೀಸಿನ ಒತ್ತಡದಿಂದ ಏನೇನೋ ಒದರುವ ಹಾಗಾಗಿರುತ್ತೆ. ಅದಕ್ಕೆಲ್ಲಾ ಮುನಿಸು ಏಕೆ? ಎಂದು ಮುದ್ದಿಸುತ್ತಿದ್ದ. ಆ ಆಪ್ತಕ್ಷಣಗಳ ನೆನಕೆಯಿಂದಲೇ ಕಣ್ತುಂಬಿ ನೀರು ಹರಿಯತೊಡಗಿತು. ಆ ದಿನಗಳು ಹಾಗೇ ಇದ್ದಿದ್ದರೆಷ್ಟು ಚೆನ್ನ! ಆಮೇಲೆ ಜಗಳಗಳು ಉಳಿದವು. ಒಬ್ಬರಿಗೊಬ್ಬರು ಅನುನಯಿಸುವುದು ಸಾಕಾಗಿ, ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ಹೋಗಿ, ಪಾತ್ರೆ ನೆಲಕ್ಕೆಸೆದು, ಬಟ್ಟೆ ಹರಿದುಕೊಂಡು, ನಾಲ್ಕೇಟು ಬೀಸಿ, ಮೊಬೈಲ್ ಹೊಡೆದು ಹಾಕಿ ಎಷ್ಟೆಷ್ಟೋ ಅನಾಗರೀಕವಾಗಿ ಜಗಳಗಳಾಯಿತು. ಇದಕ್ಕೆ ಗ್ರಹಗತಿ ಕಾರಣವೆಂದು ಪರಿಹಾರ ಪೂಜೆಗೆ ಲಕ್ಷಾಂತರ ಸುರಿದನೇ ಹೊರತು ಮೊದಲಿನಂತೆ ಮಾತಿನ ಮುಲಾಮು ಹಚ್ಚಲಿಲ್ಲ.
ಮಕ್ಕಳು ಬೇಕು ಅಂದ್ರೆ ನಾಯಿ ಸಾಕು ಅಂತೀಯಾ? ಯಾರಿಗೋ ಹುಟ್ಟಿದವನ್ನ ನಾನು ತಂದು ನನ್ನ ಮಗು ಅಂದ್ರೆ ಯಾರು ಒಪ್ತಾರೆ? ಅವೆಲ್ಲಾ ಅನೈತಿಕ ಸಂಬಂಧಕ್ಕೆ, ತೀಟೆ ತೆವಲಿಗೆ ಹುಟ್ಟಿದ ಮಕ್ಕಳು ತಿಳ್ಕೋ. ಉಪದೇಶ ಕೊಡೋಕೆ ಬರಬೇಡ” ಅಂತ ಗಟ್ಟಿದನಿಯಲ್ಲಿ ಕಿರುಚಾಡಿದ್ದ.
ನಾನೇ ಮೇಲೆ ಬಿದ್ದು ಹೋದರೂ ಸರಿಯಾದ ಸ್ಪಂದನೆಯಿಲ್ಲದೆ, ತಿಂಗಳುಗಟ್ಟಲೆ ಮಾತು ಬಿಟ್ಟು, ಬೇರೆ ಬೇರೆ ಮಲಗುವ ರೂಢಿ ಚಾಲ್ತಿಗೆ ಬಂತು. ಒಂದೇ ಮನೆಯಲ್ಲಿದ್ದೂ ನಮ್ಮ ಮಧ್ಯೆ ಮೈಲಿಗಟ್ಟಲೆ ಅಂತರ ಬೆಳೆಯುತ್ತಾ ಹೋಯಿತು. ಆಗ ಅಮ್ಮನ ಮನೆಗೆ ಹೋಗುವ ಬಯಕೆ ತೀವ್ರವಾಗುತ್ತಿತ್ತು. ಹೇಗಿದ್ದರೂ ಅಲ್ಲಿ ಯಾರದ್ದಾದರೂ ಮದುವೆ-ಮುಂಜಿ, ನಾಮಕರಣ ಅಂದರೆ ಎಲ್ಲರಿಗಿಂತ ಮೊದಲು ನನಗೇ ಬುಲಾವ್ ಬರ್ತಿತ್ತು. ಆ ನೆಪದಲ್ಲಿ ತವರು ಸೇರಿದರೆ ತಿಂಗಳು ಎರಡು ತಿಂಗಳ ಕಮ್ಮಿ ವಾಪಸ್ ಹೋಗ್ತಿರಲಿಲ್ಲ. ಜೊತೆಯಿರುವುದಕ್ಕಿಂತ ಬಿಟ್ಟಿರುವುದೇ ಲೇಸೆಂದು, ಸುಖವೆಂದು ಅನ್ನಿಸುತ್ತಿತ್ತು. ಬಹುಶಃ ಅವನಿಗೂ ಹಾಗೇ ಇರಬೇಕು. ಜಾಯಿಂಟ್ ಅಕೌಂಟಿಗೆ ದುಡ್ಡು ಹಾಕಿ, ಎಟಿಎಂ ಕಾರ್ಡ್ ಕೊಟ್ಟು ಕಳಿಸಿಬಿಡುತ್ತಿದ್ದ. ವಾರಕ್ಕೊಮ್ಮೆ ಕರೆ ಮಾಡಿದರೂ ಅದೂ ಜಗಳದಲ್ಲೇ ಕೊನೆಯಾಗ್ತಿತ್ತು.
ಅಪ್ಪನ ಜೊತೆ ಹುಟ್ಟಿದ ನಾಲ್ಕು ತಮ್ಮಂದಿರು, ಇಬ್ಬರು ತಂಗಿಯರು ಅವರ ಹೆಂಡತಿ ಮಕ್ಕಳು ಅಂತ ಮನೆಮನೆಯವರೇ ೫೦-೬೦ ಜನ. ಮೇಲಾಗಿ ನನ್ನ ಮದುವೆಯಾದ ವರ್ಷದಿಂದಲೇ ಸಾಲಾಗಿ ೮ ಜನ ತಂಗಿಯರ ಮದುವೆಗಳೂ ಆಗಿ, ಅವರ ಗಂಡ, ಅತ್ತೆ-ಮಾವ, ಇಬ್ಬಿಬ್ಬರು ಮಕ್ಕಳು ಸೇರಿ ಮನೆಯೇ ಛತ್ರದಂತಿರುತ್ತಿತ್ತು. ಊರಿಗೆ ಮುಂಚೆ ಯಾಕೆ ಬಂದೆ ಎಂದು ಕೇಳುವವರಾರು? ತಂಗಿಯರು ಕೂಡ ವರ್ಷಕ್ಕೊಮ್ಮೆ ಮಕ್ಕಳ ಸಮೇತ ತವರಿಗೆ ಬಂದು ತಿಂಗಳಿದ್ದು ಹೋಗುತ್ತಿದ್ದರು.
“ಅಕ್ಕಯ್ಯ ಬೇಗನೆ ಒಂದು ಮಗು ಮಾಡ್ಕೊಳೆ.. ನೀನು ಭಾವ ಮನಸ್ಸು ಮಾಡಿದ್ರೆ ಏನು ಮಹಾ ಕಷ್ಟ? ಈಗಂತೂ ಮೆಡಿಸಿನ್ ಎಷ್ಟು ಮುಂದುವರೆದಿದೆ ಅಂದ್ರೆ ಐವಿಎಫ್ ಮಾಡ್ಕೊಂಡ್ರೂ ಆಯ್ತು. ನಿಮಗೆ ತೊಂದರೆ ಇದೆ ಅಂತ ಹೇಳ್ತಿಲ್ಲ. ಸುತ್ತಮುತ್ತ ಕಿವಿಗೆ ಬಿದ್ದ ವಿಷಯ ಹೇಳಿದೆ ಕಣೆ… ನಮಗಂತೂ ಬೇಡ ಬೇಡ ಅಂದ್ರೂ ವರ್ಷದೊಳಗೆ ಮಗುವಾಗಿ ಪರ್ಸನಲ್ ಟೈಂ ಅನ್ನೋದೆ ಇಲ್ಲ. ನೀವಾದ್ರೆ ಲೈಫ್ ಚೆನ್ನಾಗಿ ಎಂಜಾಯ್ ಮಾಡಬೋದು. ಏನ್ ಹೇಳ್ತೀ ಅಕ್ಕಯ್ಯಾ…” ಅಂತ ಮಡಿಲಿನ ಮಗುವಿಗೆ ಹಾಲೂಡುತ್ತಲೋ, ಚೇಷ್ಟೆ ಮಾಡಿದ ಮಗುವಿಗೆ ಒಂದೇಟು ಕೊಟ್ಟು ಕೋಣೆಯಿಂದ ನೂಕಿ ಬಂದೋ, ರಾಗಿ ಸೆರ್ರಿ ತಿನ್ನಿಸಿ ಮೂತಿಯೊರೆಸುತ್ತಲೋ ಮಗುವಿನ ವಿಚಾರಕ್ಕೆ ಪ್ರಶ್ನೆ- ಉತ್ತರ ಸೇರಿಸಿ ಮಾತಾಡುತ್ತಿದ್ದರು.
ಅವರ ಮುಂದೆ ತನ್ನ ಸಂಸಾರದ ದಿನದಿನದ ಗೋಳು, ರಾದ್ಧಾಂತ ಬಾಯಿಬಿಡಲು ಧೈರ್ಯವಾಗುತ್ತಿರಲಿಲ್ಲ. ಸಂಸಾರ ಗುಟ್ಟು, ವ್ಯಾಧಿ ರಟ್ಟು ಎಂಬ ಗಾದೆಯನ್ನು ಅಮ್ಮ ನೂರಿ ತಲೆಗೆ ಸುರಿದ್ದಳು. ಒಳಗೊಳಗೆ ಅವರ ಸುಖೀ ಸಂಸಾರದ ಬಗ್ಗೆ ಅಸಹನೆ ಹೊಗೆಯಾಡುತ್ತಿದ್ದರೂ ನಗು ನಟಿಸಬೇಕಿತ್ತು. ಅವರೆಲ್ಲಾ ಅತ್ತೆ ಮಾವನ ಕೊಂಕು ಮಾತು, ಗಂಡನ ಅನಾರೋಗ್ಯ, ಹಣಕಾಸಿನ ಮುಗ್ಗಟ್ಟು ಇತ್ಯಾದಿಗಳ ಬಗ್ಗೆ ಹೇಳುತ್ತಿದ್ದರೆ ವಿವರವಾಗಿ ಕೇಳಿ ತಿಳಿದುಕೊಳ್ಳುವುದರಲ್ಲಿ ಸಮಾಧಾನ, ನೆಮ್ಮದಿ ಸಿಗುತ್ತಿತ್ತು. ಮನುಷ್ಯ ಸಹಜ ದೌರ್ಬಲ್ಯವಲ್ಲವೆ? ಅದು ಹೇಗೋ ಅಕ್ಕಯ್ಯನ ಮುಂದು ಸಂಸಾರದ ಸುಖ ಹೇಳ್ಕೊಂಡ್ರೆ ಸುಮ್ಮನೆ ಜಗಳ, ಮನಸ್ತಾಪ ಆಗತ್ತೆ. ಕೆಟ್ಟ ಕಣ್ಣು. ಎನ್ನುವ ವದಂತಿ ಹಬ್ಬಿ, ತಂಗಿಯರು ಸದಾ ಗೋಳು ಹೇಳುತ್ತಿದ್ದರೇ ಹೊರತು ಅಪ್ಪಿತಪ್ಪಿಯೂ ಸುಖದ ಸುದ್ದಿ ತೆಗೆಯುತ್ತಿರಲಿಲ್ಲ. ಆ ವದಂತಿ ವಿಚಾರವೂ ಬಹಳ ತಡವಾಗಿ ನನ್ನ ಕಿವಿಗೆ ಬಿತ್ತು. ಅಮ್ಮ ಅಪ್ಪನೂ ಮಕ್ಕಳಿಲ್ಲದ ಬೇಸರಕ್ಕೆ ತವರಿಗೆ ಬಂದು ಕೂರ್ತಾಳೆ. ಅವಳಿಗಾದರೂ ಯಾರು ಅಯ್ಯೋ ಅನಬೇಕು ಅಂತ ಇದ್ದಷ್ಟು ದಿನ ಉಪಚಾರ ಮಾಡಿ ಕಳಿಸಿಕೊಡುತ್ತಿದ್ದರು. ತವರ ಸುಖ ಕಂಡು ಮತ್ತೆ ಗಂಡನ ಮನೆಗೆ ಹೋದರೆ, ಬಿಕೋ ಎನ್ನುವ ಮನೆ. ಗಲೀಜು ಬಟ್ಟೆಗಳ ರಾಶಿ. ಕೊಳಕು ಅಡುಗೆ ಮನೆಯ ತುಂಬಾ ಜಿರಳೆಗಳು. ಒಂದು ವಾರ ಮನೆಯೆಲ್ಲಾ ಗುಡಿಸಿ, ಸಾರಿಸಿ, ತಿಕ್ಕಿ ತೊಳೆದು ಸಾಫ್ ಮಾಡುವಷ್ಟರಲ್ಲಿ ಬೆನ್ನು ನೋಯುತ್ತಿತ್ತು. ಅದಕ್ಕೊಂದು ಎಣ್ಣೆ ನೀವಲೂ ನೂರು ಕಣಿ ಮಾಡ್ತಿದ್ದ ಸುಂದರೇಶ.
ಬಿಟ್ಟಿರುವುದು ಸಂಸಾರದಲ್ಲಿ ಅಭ್ಯಾಸವಾದರೆ ಜೊತೆಬಾಳುವುದು ಅಸಹನೀಯವಾಗುತ್ತದೆ. ಮಾನಸಿಕ, ದೈಹಿಕ, ಭಾವನಾತ್ಮಕ ಅವಲಂಬನೆ ದಾಂಪತ್ಯಕ್ಕೆ ಎಷ್ಟು ಸೊಗಸು ತರುತ್ತದೆಂಬ ಪ್ರಜ್ಞೆಯೇ ನಮಗಿರಲಿಲ್ಲ. ಹತ್ತು ವರ್ಷದ ದಾಂಪತ್ಯದಲ್ಲಿ ನಮಗಾಗಿ ನಾವು ಬದುಕಲೇ ಇಲ್ಲ. ಕುರುಡುಗತ್ತಲಲ್ಲಿ ನರಳುವ ಬದಲು ಬೆಳಕಿಗೆ ಮುಖ ಮಾಡಬೇಕಿತ್ತು ಎನಿಸಿತು. ಚಿಕ್ಕದೊಂದು ಮಿಣುಕು ದೀಪ, ಹಣತೆಯಾದರೂ ಸಾಕಿತ್ತು. ಬತ್ತಿಯಿಟ್ಟು, ಎಣ್ಣೆ ಹಾಕಿ, ಮತ್ತೊಮ್ಮೆ ಬತ್ತಿ ಸರಿಪಡಿಸಿ, ಕಡ್ಡಿಗೀರಿ ಕಾರ್ತೀಕ ಮಾಸದಲ್ಲಿ ಮನೆ ಮುಂದೆ ಸಾಲು ಸಾಲು ಹಣತೆ ಹಚ್ಚಿಟ್ಟು ಅವನಿಗೆ ಕಾದ ದಿನಗಳ ನೆನಪಾಗಿ ಮತ್ತೊಮ್ಮೆ ಕಣ್ಣಂಚು ಒದ್ದೆಯಾಯ್ತು. ಗಂಟೆ ಎಷ್ಟಾಯ್ತೋ ನಿದ್ದೆ ಬರ್ತಿಲ್ಲವಲ್ಲ ಎಂಬ ಚಡಪಡಿಕೆಯೂ ಮೊದಲಾಗಿ, ಎಣ್ಣೆ ಕಣ್ಣಿಗೆ ಹಚ್ಚಿದ ಕಾರಣ ಕಣ್ಣು ಬಿಡಲಾಗ್ತಿಲ್ಲ. ಬಿಟ್ಟರೆ ಕಣ್ಣೊಳಗೆ ಎಣ್ಣೆಯಿಳಿದು ಹಿಂಸೆಯಾಗುತ್ತೆನಿಸಿ ಮೊಬೈಲ್ ತೆರೆದು ಗಂಟೆ ಎಷ್ಟಾಯ್ತೆಂದು ನೋಡುವ ಆಶೆಯನ್ನು ಹತ್ತಿಕ್ಕಿಕೊಳ್ಳಬೇಕಾಯ್ತು. ಬೆಳಿಗ್ಗೆ ಎದ್ದು ಮೊದಲು ಬಟ್ಟೆ ಜೋಡಿಸಿ ಬ್ಯಾಗ್ಗೆ ತುಂಬಬೇಕೆಂದು ಪ್ರಯತ್ನಪೂರ್ವಕವಾಗಿ ಯೋಚನೆಯನ್ನು ನಾಳಿನ ಕಡೆಗೆ ತಿರುಗಿಸಲು ಪ್ರಯತ್ನಿಸಿದರೂ ಮತ್ತೆ ಮತ್ತೆ ಸುಂದರೇಶನ ಕಥೆಗೇ ಹೊತ್ತೊಯ್ಯುತ್ತಿತ್ತು.
ಮದುವೆಯಾಗಿ ಗಂಡ-ಹೆಂಡತಿ ಇಬ್ಬರೇ ಬೇರೆ ಊರಿನಲ್ಲಿ ಸ್ವತಂತ್ರವಾಗಿ ಸಂಸಾರ ಹೂಡುವ ಅವಕಾಶ ಸಿಕ್ಕಾಗ ಸುಂದರೇಶನಿಗೆ ಏನನ್ನಿಸಿತ್ತೋ? ಲತಾಗೆ ಖುಷಿಯಾಗಿತ್ತು. ಯಾರ ಮುಲಾಜೂ ಇಲ್ಲದೆ ಮಜವಾಗಿ ಬದುಕಿಬಿಡಬೇಕೆಂಬ ಉತ್ಕಟ ಇಚ್ಚೆಯಿತ್ತು. ಹೋಟೆಲ್, ಸಿನಿಮಾ, ಟೂರ್ ಅಂತ ಸುತ್ತುವ ಕನಸಿತ್ತು. ಆದರೆ ಸದಾ ಕೆಲಸ ಕೆಲಸ ಎಂದು ಆಫೀನ ಒಳಗೇ ಬುದ್ಧಿ ಮನಸ್ಸಿಟ್ಟು, ದೇಹವನ್ನು ಮಾತ್ರ ಮನೆಗೆ ತರುತ್ತಿದ್ದ ಗಂಡ ವಿಚಿತ್ರವೆನಿಸಿದ್ದ. “ಕೆಲಸ ಮೊದಲ ಹೆಂಡತಿ. ನೀನು ಎರಡನೆಯವಳು. ದುಡ್ಡಿದ್ರೆ ಮಾತ್ರ ಹೆಂಡತಿ ಮಕ್ಕಳು ಮನೆ ಸಂಸಾರ. ಅದೇ ಇಲ್ಲ ಅಂದ್ರೆ ಏನೂ ಇಲ್ಲ.” ಅವನು ಹಾಗಂದಾಗ ಅದೂ ಸರಿಯೆನಿಸಿತ್ತು. ಆಗ ನೋವಾದ್ರೂ ತಿಂಗಳ ಸಂಬಳ ತಂದು ಕೈಗಿಟ್ಟಾಗ ಸಂಭ್ರಮವಾಗ್ತಿತ್ತು.
ಮನೆಯವರು, ನೆಂಟರಿಷ್ಟರ ಮುಂದು ನನ್ನ ಕೆಲಸ ಕಾರ್ಯದ ಬಗ್ಗೆ ಹೆಮ್ಮೆಯಿಂದ ಮಾತಾಡುತ್ತಿದ್ದ. ದುಶ್ಚಟವಿರಲಿಲ್ಲ. ಹೆಂಡತಿಯೆಂದರೆ ಮನೆ ಮಹಾಲಕ್ಷ್ಮಿ ಎಂದೆಲ್ಲಾ ಹೊಗಳಿ ಅಟ್ಟಕ್ಕೇರಿಸುತ್ತಿದ್ದ. ನಮ್ಮ ಸಂಬಂಧಿಕರೆಲ್ಲಾ ಇದ್ದರೆ ಸುಂದರೇಶನಂತ ಅಳಿಯನಿರಬೇಕು. ಗಂಡನಿರಬೇಕು. ವಿದ್ಯೆ, ರೂಪು, ಗುಣ ಎಲ್ಲದರಲ್ಲೂ ಅಪ್ಪಟ ಚಿನ್ನ. ಹೆಂಡತಿಯ ಬಗ್ಗೆ ಇಷ್ಟು ಹೊಗಳುವ ಗಂಡ ಸಿಗುವುದು ಅಪರೂಪ. ಮಕ್ಕಳಾಗಿಬಿಟ್ಟರಂತೂ ಲತಾ ಸುಂದರೇಶನಂತಹ ಅನುರೂಪ ಜೋಡಿ ನಮ್ಮ ಮನೆತನದಲ್ಲೇ ಇಲ್ಲವೆನ್ನುತ್ತಿದ್ದರು.
ಸುಂದರೇಶನ ಮನಸ್ಸಿಗೆ ಯಾವುದಾದರೂ ವಿಚಾರ ಹೊಕ್ಕರೆ ಅದು ಮಾಡಿ ಮುಗಿಸದೆ ವಿರಮಿಸುತ್ತಿರಲಿಲ್ಲ. ಎಲ್ಲವನ್ನೂ ಅತಿಯಾಗಿ ಹಚ್ಚಿಕೊಂಡು ನೂರಕ್ಕೆ ನೂರು ಸರಿಯಾಗಿ ಮಾಡಬೇಕೆಂಬ ಒತ್ತಡಕ್ಕೆ ಬೀಳುವ ಗುಣದಿಂದ ಆಫೀಸಿನ ಕಾರ್ಯಬಾಹುಳ್ಯ ವಿಸ್ತರಿಸುತ್ತಲೇ ಹೋಗಿ, ಭಾನುವಾರವೂ ಮನೆಗೆ ಬರದಂತಾದ. ಒಬ್ಬಳೇ ಮನೆಯಲ್ಲಿ ಹುಚ್ಚು ಹಿಡಿದಂತೆ ಆಗುತ್ತೆ. ಕೆಲಸಕ್ಕೆ ಸೇರ್ತೀನಿ ಅಂದಾಗ, ನಿನ್ನ ಕೈಲಿ ದುಡಿಸಿಕೊಂಡು ನಾನು ತಿನ್ನೋದಾ? ಬೇಡ ಬೇಡ ಅಂತ ನಿರಾಕರಿಸಿದ. ಮಗುವೊಂದಾದ್ರೆ ಜೊತೆಯಾಗುತ್ತೆ. ಈ ಬದುಕು ಬದಲಾಗತ್ತೆ ಎಂಬ ಯೋಚನೆ ಬಂದ ದಿನವೇ ನಮ್ಮ ಮದುವೆ ಮುರಿಯಲು ಪ್ರಾರಂಭವಾಯ್ತು…
ದಿನಕ್ಕೊಬ್ಬ ಡಾಕ್ಟರ್, ಜ್ಯೋತಿಷಿ, ದೇವಸ್ಥಾನ, ಮಂತ್ರ ಮದ್ದು ಅಂತ ಎಂಟು ವರ್ಷ ಅಲೆಸಿ, ಕಾಡಿಸಿ ನಾನು ರೋಸಿ ಹೋಗಿದ್ದೀನಂದ್ರೂ ಬಿಡದೆ, ಅವತ್ತು ಆಡಿದ ಮಾತಿಗಿಂತ ನೂರರಷ್ಟು ಅಸಹ್ಯಕರ ಮಾತುಗಳಾಗಿ, ಜೀವನ ಸಾಕೆನಿಸಿ ಮನೆಗೆ ಬಂದದ್ದು ಕಣ್ಮುಂದೆ ಹಾದುಹೋಯ್ತು. ಮತ್ತೆ ಆ ನರಕಕ್ಕೆ ಕಾಲಿಡಲಾರೆನೆನ್ನಿಸಿ, ಕಣ್ಣು ಮಂಜಾದ್ರೂ ಪರವಾಗಿಲ್ಲ ಎಂದು ಉಜ್ಜಿಕೊಳ್ತಾ ಆದಷ್ಟು ಎಣ್ಣೆಯನ್ನು ಕೈಗೆ ಸವರಿಕೊಂಡು ಮೊಬೈಲ್ ತೆಗೆದು ಉತ್ತರಿಸಿದಳು:
“ನನ್ನ ಉತ್ತರವೂ ಒಂದಿದೆ ಎಂದು ಗುರುತಿಸಿದ್ದಕ್ಕೆ ಧನ್ಯವಾದಗಳು. ನಿಮ್ಮಷ್ಟೇ ನಾನೂ ನಂಬಿದ್ದೆ. ಹಚ್ಚಿಕೊಂಡಿದ್ದೆ. ಆದರೆ ಸ್ವಾರ್ಥಕ್ಕೆ ಬಿದ್ದು ದೂರಮಾಡಿಕೊಂಡಿದ್ದು ನೀವು. ಮನೆಬಿಟ್ಟು ಬಂದ ಮೇಲೂ ನೀವು ಬರುವಿರೆಂಬ ನಿರೀಕ್ಷೆಯಲ್ಲಿ ಕಾದೆ. ಆಗ ಮಾತಾಡಿ ಪರಿಹರಿಸಿಕೊಳ್ಳುವ ಅವಕಾಶವಿತ್ತು. ನಿಮಗೆ ಬೇಡವಾಗಿತ್ತು. ಈಗ ನನ್ನ ಬದುಕಿನ ದಿಕ್ಕು ಬದಲಾಗಿದೆ. ಇಬ್ಬರೂ ನಮ್ಮ ನಮ್ಮ ಗುರಿಯೆಡೆಗೆ ಬಹಳ ದೂರ ಸಾಗಿ ಬಂದಿದ್ದೇವೆ. ಮತ್ತೆ ಹಿಂತಿರುಗುವ ಆಸೆಯಾಗಲೀ, ಶಕ್ತಿಯಾಗಲೀ ನನಗೆ ಉಳಿದಿಲ್ಲ. ಇದನ್ನು ದ್ರೋಹವೆನ್ನುವಿರಾದರೆ ನನ್ನ ಆಕ್ಷೇಪವಿಲ್ಲ. ಕ್ಷಮೆಯ ಅಗತ್ಯವೂ ನನಗಿಲ್ಲ. ನಾನು ಬಯಸಿದ ಪ್ರೀತಿ, ಬದುಕು ನಿಮ್ಮಿಂದ ಸಿಗಲಿಲ್ಲ. ನೀವು ಬಯಸಿದ್ದು ನಿಮಗೂ ಸಿಕ್ಕಿರಲಿಕ್ಕಿಲ್ಲ. ಮಿಕ್ಕ ಬದುಕನ್ನಾದರೂ ಸಾರ್ಥಕಗೊಳಿಸಿಕೊಳ್ಳಿ. ನಮ್ಮ ಜಗಳಕ್ಕೆ ಮೂರನೆಯವರು ಕಾರಣ ಎಂದು ಕಲ್ಪಿಸಿ ಕೊರಗುವುದನ್ನು ಬಿಡಿ. ನಿಮಗೆ ಒಳಿತಾಗಲಿ. ಶುಭರಾತ್ರಿ”
ಗಡಿಯಾರ ಮೂರು ಮುಕ್ಕಾಲೆಂದು ಹೇಳುತ್ತಿತ್ತು. ಲತಾ ಮಗ್ಗುಲು ಬದಲಿಸಿ ನಿದ್ದೆ ಹತ್ತಬಹುದೆಂಬ ಆಶೆಯಲ್ಲಿ ಕಣ್ಮುಚ್ಚಿದಳು. ಬೆಳಕು ಹರಿಯಲು ಸ್ವಲ್ಪಕಾಲವಷ್ಟೇ ಬಾಕಿಯಿತ್ತು.
ಮಕ್ಕಳು ಬೇಕೆಂಬ ಆಸೆ ನನಗೂ ಇತ್ತು. ಅದೊಂದು ಸುಂದರ ಅಚ್ಚರಿಯಾಗಿ ಸಂಭವಿಸಿದ್ದರೆ ಪ್ರೀತಿಯಿಂದ ಬರಮಾಡಿಕೊಳ್ಳುತ್ತಿದ್ದೆ. ಅದಕ್ಕಾಗಿ ನಮ್ಮ ಸಂಬಂಧದ ಮಾಧುರ್ಯವೇ ನಶಿಸಿಹೋಗವಂತಾದಾಗ ಮಕ್ಕಳು ಬೇಡವೆನಿಸಿತು. ಆಗಲೂ ದಿನದಿನದ ನೋವು, ಹಿಂಸೆ, ಅಪಮಾನದ ಘಳಿಗೆಯಲ್ಲಿ ಗಂಡನಾಗಿ ಸಾಂತ್ವನ ನೀಡಿದ್ದರೆ, ನಿರಂತರ ಓಟಕ್ಕೊಂದು ವಿರಾಮ ಕೊಟ್ಟು, ನಾವಿಬ್ಬರೇ ಇದ್ದ ಸಂತೋಷಮಯ ಸಂದರ್ಭಗಳನ್ನು ಸೃಷ್ಟಿಸಿಕೊಂಡಿದ್ದರೆ ಬಹುಶಃ ಬದುಕು ದುರ್ಭರವೆನಿಸುತ್ತಿರಲಿಲ್ಲ. ಈ ಪ್ರಬುದ್ಧತೆ ಆಗ ಇಬ್ಬರಿಗೂ ಇರಲಿಲ್ಲ. ಇದಕ್ಕೆ ವಿಧಿಯನ್ನು ದೂರಬೇಕೋ ನಮ್ಮ ಅಜ್ಞಾನಕ್ಕೆ ಮರುಗಬೇಕೋ ಅಥವಾ ಪಾಠವೆಂದು ಕಲಿತು ಮುಂದೆ ಸಾಗಬೇಕೋ… ಅಂತೂ ಮತ್ತೆ ಜೊತೆಯಾಗಲಾರದಷ್ಟು ದೂರ ಬಂದ ಮೇಲೆ ಮುಂದೆ ಸಾಗಲೇಬೇಕು ಎಂದು ನಿಟ್ಟುಸಿರಿಟ್ಟಳು. ಇನ್ನು ಮುಂದಾದರೂ ಹೃದಯಕ್ಕೆ ಹಿತವೆನ್ನಿಸುವ ಘಳಿಗೆಗಳನ್ನು ನನಗಾಗಿ ನಾನು ಸೃಷ್ಟಿಸಿಕೊಳ್ಳಬೇಕು. ನೆನಪಿನ ನೂಲಿನಲ್ಲಿ ನಲಿವಿನ ಹೆಣಿಗೆ ಮೂಡುವಂತೆ ಸುಂದರವಾಗಿ ಬಾಳಬೇಕೆಂದುಕೊಂಡಾಗ ಬೆಳಕು ಹರಿದಿತ್ತು. ಹೊಸ ಹುರುಪು ಮೈದುಂಬಿತ್ತು.
ನಾಗಶ್ರೀ ಎಂ.ಕಾಂ ಹಾಗೂ ICWAI Intermediate ಪದವೀಧರೆ. ಆಕಾಶವಾಣಿ ಎಫ್.ಎಂ ರೈನ್ಬೋದಲ್ಲಿ ರೇಡಿಯೋ ಜಾಕಿಯಾಗಿ ಕಳೆದ ಒಂಭತ್ತು ವರ್ಷಗಳಿಂದ ಹಾಗೂ ದೂರದರ್ಶನ ಚಂದನ ವಾಹಿನಿಯಲ್ಲಿ ನಿರೂಪಕಿಯಾಗಿ ಕಳೆದ ಐದು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ಸಾಹಿತ್ಯದ ಓದು ಹಾಗೂ ನಿರೂಪಣೆ ಅವರ ಆಸಕ್ತಿಯ ಕ್ಷೇತ್ರಗಳು.
ಕೆಲವೊಮ್ಮೆ ಕಥೆಗಳನ್ನು ಓದಿಕೊಳ್ಳುವಾಗ ಕಥೆಯ ನಾಯಕ ಅಥವಾ ನಾಯಕಿ ನಾನು, ನಾವು ಎಂಬ ಭಾವ ಮೊಳೆತುಕೊಳ್ಳುತ್ತದೆ. ಒಂದೊಮ್ಮೆ ನಮ್ಮ ಬದುಕಿನ ಸಮಸ್ಯೆಗಳೆ ಜಟಿಲವಾದವುಗಳು ಮತ್ತು ನಮ್ಮ ಬದುಕಿನ ಸಮಸ್ಯೆಗಳು ಬೇರೆಲ್ಲರ ಬದುಕಿಗಿಂತ ಭಿನ್ನವಾದವು ಹಾಗೂ ಗಂಭೀರವಾದವುಗಳು ಎಂದುಕೊಳ್ಳುವಾಗಲೆ ಕಣ್ಣೆದುರು ತೆರೆದುಕೊಳ್ಳುವ ಇಂತಹ ಕಥೆಗಳು ಸಾಂತ್ವನವನ್ನು ಒದಗಿಸುತ್ತವೆ. ಬಹುಶಃ ನಿಮ್ಮ ಕಥೆಯನ್ನು ಓದಿಕೊಂಡ ಪ್ರತಿ ಹೆಣ್ಣು ಭಾವಪರವಶತೆಗೆ ಒಳಗಾಗದೆ ಇರಲಾರಳು. ಕಥೆ ಒಂದೊಮ್ಮೆ ಅನುಭವಗಳ ಹೂರಣವೆನಿಸುತ್ತದೆ. “ಡೈವ್ ಇನ್” ಎಂಬ ಶಬ್ಧದೊಂದಿಗೆ ಸಮುದ್ರದ ಆಳಕ್ಕೆ ಹೊರಟು ಕೌತುಕವೆನಿಸುವ ಸಂಗತಿಗಳನ್ನು ಅರಿಯುವ ಹಾಗೆ ನಿಮ್ಮ ಕಥೆಯ ಒಡನೆಯೇ ಡೈವ್ ಇನ್ ಹೊರಟು ಬದುಕಿನ ಹಲವು ಘಟನೆಗಳನ್ನು ಸ್ಪರ್ಶಿಸಿದಂತಾಯಿತು.
“ಕೆಟ್ಟ ಕಣ್ಣು”, “ಈ ಪ್ರಬುದ್ಧತೆ ಆಗ ಇಬ್ಬರಿಗೂ ಇರಲಿಲ್ಲ. ಇದಕ್ಕೆ ವಿಧಿಯನ್ನು ದೂರಬೇಕೋ ನಮ್ಮ ಅಜ್ಞಾನಕ್ಕೆ ಮರುಗಬೇಕೋ ಅಥವಾ ಪಾಠವೆಂದು ಕಲಿತು ಮುಂದೆ ಸಾಗಬೇಕೋ…” ಇಂತಹ ಕೆಲವು ಸಾಲುಗಳು ಪ್ರತಿಯೊಬ್ಬನ ಬದುಕಿನ ದುರ್ಭರತೆಯನ್ನು ಅರ್ಥೈಸಿಕೊಳ್ಳುವಂತಾಗಿಸುತ್ತವೆ. ಸಾಲುಗಳಲ್ಲಿ ಬದುಕಿನ ಮಾರ್ಮಿಕತೆಯನ್ನು ಸಾದರಪಡಿಸಿದ ನಿಮ್ಮ ಚಾಕಚಕ್ಯತೆಗೆ, ಕಥಾ ಶೈಲಿಗೆ ನಾನು ಬೆರಗಾಗಿದ್ದು ಅಕ್ಷರಶಃ ಸುಳ್ಳಲ್ಲ. ಬದುಕಿನ ತಿರುವುಗಳನ್ನು, ಹೆಣ್ಣ ಮನದ ತುಡಿತ, ತುಮುಲ, ಆಕೆ ಅನುಭವಿಸುವ ವೇದನೆಯನ್ನು ಪ್ರಭಾವ ಬೀರುವ ಹಾಗೆ ತೆರೆದಿಡುತ್ತ ಕೊನೆಯವರೆಗೂ ಓದಿನೆಡೆಗಿನ ಆಸಕ್ತಿಯನ್ನು ಜಾಗೃತವಾಗಿರಿಸಿದ ನಿಮ್ಮ ಕಥೆ, ಕಥನ ಶೈಲಿ ಎಲ್ಲವೂ ಅದ್ಭುತವಾದವುಗಳು ಮತ್ತು ವಿಮರ್ಶಾತ್ಮಕವಾದವುಗಳು.