ರಂಗಸ್ವಾಮಿ ಅಭ್ಯಾಸಬಲದಂತೆ ಬೆಳಿಗ್ಗೆ ಆರಕ್ಕೆ ಕಣ್ಣು ಬಿಟ್ಟ ನಂತರ ಎಲ್ಲ ಕೆಲಸಗಳನ್ನು ವಿಶ್ವನಾಥ-ರಾಗಿಣಿ ಹಂಚಿಕೊಂಡಿದ್ದರು. ಅವರ ಚಲನೆಗೆ ವೀಲ್ ಚೇರ್ ನ ಅನಿವಾರ್ಯತೆಯಿತ್ತು. ಹಾಸಿಗೆಯಿಂದ ಏಳಿಸುವುದು, ಹಲ್ಲುಜ್ಜಿಸುವುದು, ಟಾಯ್ಲೆಟ್ ಇತ್ಯಾದಿ. ಅವರು ಮಾಡುವ ಪ್ರಯತ್ನಕ್ಕೆ ರಂಗಸ್ವಾಮಿಯವರ ಸಹಕಾರವಷ್ಟೇ ಅಗತ್ಯವಾಗಿತ್ತು. ಈ ರೀತಿಯ ಹೊಂದಾಣಿಕೆಯಲ್ಲಿ ಆರೇಳು ದಿನಗಳು ಕಳೆದುಹೋದದ್ದು ಯಾರ ಗಮನಕ್ಕೂ ಬರಲಿಲ್ಲ. ರಂಗಸ್ವಾಮಿಗೆ ಸ್ಟ್ರೋಕ್ ಗೆ ಒಳಗಾದ ದೇಹದ ಬಲಭಾಗದಲ್ಲಿ ಕೈ, ಕಾಲು ಹೆಚ್ಚು ಹೆಚ್ಚು ಜುಮ್ ಎನ್ನುತ್ತಿದ್ದದ್ದು ಅನುಭವಕ್ಕೆ ಬರುತ್ತಿತ್ತು. ಅವುಗಳಿಗೆ ಯಾವ ರೀತಿಯ ಸಂವೇದನೆಯೂ ಇರಲಿಲ್ಲ.
ಎ.ಎನ್.‌ ಪ್ರಸನ್ನ ಬರೆದ ಈ ವಾರದ ಕತೆ “ಪಲ್ಲಟ” ನಿಮ್ಮ ಈ ಭಾನುವಾರದ ಓದಿಗೆ

 

ಅವತ್ತು ಕೂಡ ಎಂದಿನಂತೆಯೇ. ಏನೂ ವಿಶೇಷವಿಲ್ಲ. ಗೋಡೆಗೆ ತಗಲುಹಾಕಿದ್ದ ವಾಲ್ ಕ್ಲಾಕ್ ಗಿಂತ ಹೆಚ್ಚು ಕರಾರುವಕ್ಕಾಗಿ ಮೈಯೊಳಗಿನ ಕ್ಲಾಕ್ ಅಲಾರಂ ಬಾರಿಸಿ ಸರಿಯಾಗಿ ಆರು ಗಂಟೆಗೆ ಎಬ್ಬಿಸಿತ್ತು. ಒಂದು ಕ್ಷಣದ ಹಿಂದೆ ಯಾವುದೋ ಗಮ್ಮತ್ತಿನ ಕನಸು. ಹತ್ತಾರು ಜನರೊಂದಿಗೆ ರನ್ನಿಂಗ್ ರೇಸ್ ಗೆ ನಿಂತು ಪೀಪಿಯ ಶಬ್ದವಾಗುತ್ತಿದ್ದಂತೆ ತನ್ನ ಬದುಕೇ ಈ ಓಟದ ಮೇಲೆ ನಿಂತಿದೆ ಎನ್ನುವ ಹಾಗೆ ಓಡುತ್ತಿದ್ದದ್ದು ಕಟ್ ಆಗಿ, ಕಣ್ಬಿಟ್ಟರು ರಂಗಸ್ವಾಮಿ. ಬಿಳಿ ಬಣ್ಣದ ಟೀ ಶರ್ಟ್ ಮತ್ತು ನೀಲಿ ಬಣ್ಣದ ಶಾರ್ಟ್ ಹಾಕಿಕೊಂಡು ಓಡುತ್ತ, ಹಾಗೆಯೇ ರಕ್ತದೊತ್ತಡ ಏರುತ್ತಾ, ಕತ್ತಿನ ಸುತ್ತ ಸಾಲುಗಟ್ಟಿದ ಬೆವರು ಹನಿಗಳು. ಕಾಲು ನೆಲಕ್ಕೆ ಸ್ಪರ್ಶವಾಗುತ್ತಿದ್ದರೆ ಮನಸ್ಸು ನೆತ್ತಿಯಿಂದ ಎಲ್ಲೋ ಮೇಲಕ್ಕೆ. ಆದರೆ ಉಮೇದು ಅಷ್ಟಕ್ಕೇ ಕಡಿತವಾಗಿತ್ತು. ಅದೇಕೋ ಅವರಿಗೆ ಕನಸು ಮತ್ತು ಮನಸ್ಸಿಗೆ ಸಂಬಂಧವಿದ್ದ ಹಾಗೆ ಕಂಡು ನಿಜಕ್ಕೂ ನಗು ಬಂತು. ಅನಂತರ ಸಮತೋಲನದ ಲಹರಿ ಉಂಟಾದಾಗ ಕಿಟಕಿಯಿಂದ ಒಳತೂರಿಬಂದ ಬೆಳಕಲ್ಲಿ ಗೆಲುವಿನ ಲಾಸ್ಯ ಕಂಡಿತು. ಸಂಪೂರ್ಣ ಎಚ್ಚರವಾಗುವ ಹಾಗೆ ಮಾಡಿದ ಅದಕ್ಕೆ ಧನ್ಯವಾದ ಹೇಳುವ ರೀತಿಯಲ್ಲಿ ಅರೆಕ್ಷಣ ಮೈ-ಕೈ ಜಾಡಿಸಿ ಹೆಚ್ಚು ಜೀವಂತಿಕೆ ತಂದುಕೊಂಡು ಎದ್ದರು ರಂಗಸ್ವಾಮಿ.

ಅನಂತರ ಬೆಳಗಿನ ಕೆಲಸಗಳೆಲ್ಲ ಗಡಿಯಾರದ ಮುಳ್ಳಿಗೆ ಅನುಸಾರವಾಗಿ. ನಸುಗಪ್ಪು ಬಣ್ಣದ ಐದೂಮುಕ್ಕಾಲು ಅಡಿ ಎತ್ತರದ ನಡುವಯಸ್ಸು ದಾಟಿದ ಅವರ ಸೊಂಟದ ಸುತ್ತಳತೆ ಕೊಂಚ ಹೆಚ್ಚು. ಅವರ ಡಾಕ್ಟರು ಎರಡಿಂಚು ಕಮ್ಮಿ ಮಾಡಲಿಕ್ಕೆ ಟ್ರೈ ಮಾಡಿ ಎಂದು ಕೆಲವು ವರ್ಷಗಳಿಂದ ಹೇಳುತ್ತಲೇ ಇದ್ದರು. ಅವರ ಹೆಂಡತಿ ವಿಮಲಮ್ಮ ಐದು ವರ್ಷದ ಹಿಂದೆ ಇದ್ದಕ್ಕಿದ್ದ ಹಾಗೆ ಬ್ರೈನ್ ಹೆಮರೇಜ್ ನಿಂದ ತೀರಿಕೊಳ್ಳದಿದ್ದರೆ ರಂಗಸ್ವಾಮಿಯ ಸೊಂಟದ ಅಳತೆಗೆ ಬಲವಂತದಿಂದ ಒಂದಷ್ಟು ಗತಿ ಕಾಣಿಸುತ್ತಿದ್ದರೋ ಏನೋ. ಆಕೆಯ ಆಸೆ ಕೊಂಚವಾದರೂ ನೀಗುತ್ತಿತ್ತೇನೋ. ಇದೇನಿದ್ದರೂ ಸರಿಯೆ ಅವರ ಆಸೆ ಪೂರ್ಣಗೊಂಡದ್ದು ಮಗ ವಿಶ್ವನಾಥನ ಮದುವೆ ಮಾಡುವುದರಲ್ಲಿ. ಮದುವೆ ಮಾಡಿಕೋ ಎಂದು ಅವನ ಬೆನ್ನು ಹತ್ತಿದಾಗ ಸಾಮಾನ್ಯವಾಗಿ ಈಗಿನ ಹುಡುಗರು ಮಾಡುವಂತೆ, ʻಮದುವೆ ಎಂದರೆ ಏನುʼ, ʻಅದೂ ಒಂದು ಬೇಕಾʼ ಎಂದು ಮೂರು ಪದಗಳಲ್ಲಿ ಕೇಳಿ ಕಾಲ್ತೆಗೆಯುವಂತೆ ಒಂದಿಷ್ಟು ಕಾಲ ಕಳೆದದ್ದುಂಟು. ರಾಗಿಣಿಯ ಪ್ರಸ್ತಾಪ ಬಂದಾಗ ʻಅವನೆಲ್ಲಿ ಒಪ್ತಾನೆ, ಗೊತ್ತಿಲ್ಲವೇʼ ಎಂದು ಒಂದು ಬಗೆಯ ಉದಾಸೀನತೆಯಿಂದಲೇ ಪ್ರಸ್ತಾಪ ಮಾಡಿದ್ದಕ್ಕೆ ಅವನ ನಿರಾಸಕ್ತಿ ಆಸಕ್ತಿಗೆ ತಿರುಗಿದ್ದು ಎಲ್ಲರಿಗೂ ಆಶ್ಚರ್ಯ. ಅವಳ ಕೆಲಸ ಇತ್ಯಾದಿಗಿಂತ ಅವಳ ಮುಂದಲೆ, ಮುಂಗುರುಳು, ಮುಖಮುದ್ರೆಗಿಂತ ಅವರಿಬ್ಬರೇ ಭೇಟಿಯಾದಾಗ ಅವಳ ಕಂಠಸಿರಿಯಿಂದ ಹೊರಟ ಬೇಂದ್ರೆಯವರ ʻಮೊದಲಗಿತ್ತಿ…ʼ ಪದ್ಯವೋ ಅಥವಾ ಅವಳು ಬರೆದ ಕಾಗದದಲ್ಲಿ ಪಾರಿವಾಳದ ನಡಿಗೆಯಂತಹ ಸುಮನೋಹರ ಅಕ್ಷರಗಳೋ ಅರ್ಥವಾಗದೆ ಎಲ್ಲವೂ ದಿಢೀರನೆ ಎಂದರೆ ಕೇವಲ ಒಂದೇ ವಾರದಲ್ಲಿ ಪೂರೈಸಿತ್ತು. ಎರಡೂ ಕಡೆಯವರಿಗೂ ತರಾತುರಿ. ವಿಶ್ವನಾಥನ ಮನೆಯವರು ಕೀಲು ಕುದುರೆಯ ಮೇಲೆ ಕುಳಿತ ಹಾಗೆ. ರಾಗಿಣಿ ಮನೆಯವರು ಪುಷ್ಪಕ ವಿಮಾನದಲ್ಲಿ ಹಾರಿದ ಹಾಗೆ. ದಿನವೊಂದರಲ್ಲಿ ಗಂಟೆಗಳ ಓಟ ಸರಿಯಾಗಿ ಮನವರಿಕೆಯಾದದ್ದು ಆಗಲೇ.

ವಿಶ್ವನಾಥನ ಮದುವೆಯಿಂದ ಹೆಂಡತಿ ವಿಮಲಾಳ ಹುಬ್ಬಿನ ಮೇಲೆ ಒಂದಷ್ಟು ದಿನ ಹೋಳಿಗೆ ಹಬ್ಬವೇ ನೆರೆದದ್ದು ನಿಜ ಎಂದುಕೊಳ್ಳುತ್ತಾರೆ ರಂಗಸ್ವಾಮಿ. ಆಕೆಯದೇ ಅಷ್ಟಾದರೆ ಮಗಳು ಸುರಭಿ? ಅದನ್ನು ಯಾವ ಬಗೆಯಲ್ಲಿ ಹೇಳಿದರೂ ಕಡಿಮೆಯೇ. ಹೇಳುವುದೇನು ಬಂತು? ಮಾತು ವರ್ತನೆ ಮುಖಭಾವಗಳಲ್ಲಿ ತಡೆಯಿಲ್ಲದೆ ತುಳುಕುತ್ತಿರುವಾಗ ಮತ್ತಿನ್ನೇನು ಎಂದುಕೊಂಡರೂ ಆ ದಿನಗಳಲ್ಲಿ ಅವರ ಅಳಿಯನ ಕೆಲಸದ ಬಗ್ಗೆ ಎದ್ದ ಬಿರುಗಾಳಿ ದೂರ ಆಗುವುದಿಲ್ಲವೇನೋ ಎನ್ನುವ ಆತಂಕ ತನ್ನನ್ನು ವಿಮಲಳನ್ನು ಬಿಗಿದು ಕಟ್ಟಿತ್ತು. ಆದರೆ ಅವುಗಳ ಒಂದೊಂದೇ ಎಳೆಗಳು ಕಳಚಿ ಬಿದ್ದದ್ದು ಬೆರಗಾಗುವಂತೆ ಮಾಡಿತ್ತು. ಇದರಿಂದಾಗಿ ಬದುಕು ಎಷ್ಟು ಸರಳ ಸುಂದರ ಎನ್ನಿಸಲಿಕ್ಕೆ ಶುರುವಾಗಿದ್ದಕ್ಕೆ ಏನನ್ನಬೇಕು ಎಂದು ತಿಳಿಯದೆ ಸುಮ್ಮನೆ ಕಣ್ಣರಳಿಸಿ ನಿಂತದ್ದು ಕೂಡ ನಿಜ. ಇನ್ನು ನಿರಾಳ ಎಂದುಕೊಳ್ಳುವಷ್ಟರಲ್ಲಿಯೇ ದಿಢೀರನೆ ಚಪ್ಪಡಿಯಂತೆ ಅಪ್ಪಳಿಸಿದ್ದು ವಿಮಲಾಳ ಬ್ರೈನ್ ಹ್ಯಾಮರೇಜ್. ಸುಂದರವಾದದ್ದನ್ನು ಸುಖಕರವಾದದ್ದನ್ನು ತುಂಬಿಕೊಂಡು ಒಟ್ಟಿಗೇ ತೇಲುವುದು ಆಹ್ಲಾದಕರ. ಆದರೆ ಅಂಥ ಅನಿರೀಕ್ಷಿತ ಹೊಡೆತ? ಆ ದಿನ ಅವರು ಅರೆಪ್ರಜ್ಞೆಯಲ್ಲಿದ್ದಂತೆ ನೆನಪು. ಅನಂತರ ಕೂಡ ಏನೋ ಮಾಡುತ್ತಿರುವಾಗ, ಏನೋ ನೋಡುತ್ತಿರುವಾಗ ಮಾತುಗಳ ನಡುವಿನ ಮೌನದಲ್ಲಿ ಆ ನೆನಪು ಅವರಿಗೆ ಅರಿವಿಲ್ಲದೆಯೇ ರೆಪ್ಪೆಗಳನ್ನು ಭಾರವಾಗಿಸಿ ಒಳಗೆ ನುಸುಳುತ್ತಿತ್ತು. ಅಲ್ಲಿ ಅವರಿಗೆ ಕಾಣುತ್ತಿದ್ದ ದೃಶ್ಯಗಳು ಕೆಲವು ಮಾತ್ರ. ಹಜಾರದಲ್ಲಿ ಮಲಗಿಸಿದ್ದ ವಿಮಲಳ ದೇಹ. ಮನೆಯೊಳಗೆ, ಹೊರಗೆ ಎಲ್ಲಿ ಜಾಗ ಸಿಕ್ಕರೆ ಅಲ್ಲಿ ಕುಳಿತಿದ್ದ ಸಂಬಂಧಿಗಳು. ಅವರೆಲ್ಲರ ನಡುವೆ ಹರಿದಾಡುತ್ತಿದ್ದ ಮೆಲುನಡಿಗೆಯ ಗಾಳಿಯ ಜೊತೆಗೆ ಅವರ ವಿಚಿತ್ರ ಭಂಗಿಗಳು. ಆಡುತ್ತಿದ್ದ ಪಿಸುಮಾತಿನ ತುಣುಕುಗಳು ಮತ್ತು ಅಪರ ಕ್ರಿಯೆಗೆ ಬಂದಿದ್ದ ಪುರೋಹಿತರು, ಅನಂತರ ಕ್ರಿಮಟೋರಿಯಮ್. ಅದಂತೂ ಸರಿಯೇ ಸರಿ – ಇವೆಲ್ಲಾ ಆದಷ್ಟು ದೊಡ್ಡದಾಗಿ ಮನಸ್ಸಿಗೆ ಬಂದು ಆಡುವ ಮಾತು ತುಂಡಾಗುತ್ತದೆ. ಅನಂತರ ಅದನ್ನು ಸರಿಪಡಿಸಿ ಮುಂದುವರಿಸುವುದು ಅವರಿಗೆ ಕಷ್ಟವಾಗುತ್ತದೆ.

ಅನೇಕ ಬಾರಿ ಸುತ್ತಮುತ್ತಲ ಶಬ್ದಗಳು ನಿಂತು ನಾಲ್ಕಾರು ಜನರ ಮಧ್ಯದಲ್ಲಿ ದಿಢೀರನೆ ಒಬ್ಬಂಟಿಯಾದೆ ಎಂದು ಅನಿಸಿದ್ದುಂಟು. ಆಗ ಬೇಡವೆಂದು ಮುಷ್ಟಿ ಬಿಗಿ ಮಾಡಿದಷ್ಟೂ ಯೋಚನೆಗಳ ಗ್ರಾಫ್ ಏರುತ್ತಲೇ ಹೋಗುತ್ತದೆ. ಅವುಗಳಲ್ಲಿ ಅವರಿಗೆ ಮುಖ್ಯವಾಗಿ ಗಮನ ಸೆಳೆದದ್ದು ಒಂದು ಸಂಗತಿ. ಎಲ್ಲ ವಿಷಯಗಳಲ್ಲಿ ಅಂದ್ರೆ ಎಲ್ಲ ವಿಷಯಗಳಲ್ಲಿ, ತಾವು ಹೆಚ್ಚು ಕಡಿಮೆ ಒಂದು ರೀತಿಯಲ್ಲಿ ಇಂಟ್ಯೂಷನ್ ನಿಂದ ಖಚಿತವಾಗಿ, ನಿರ್ದಿಷ್ಟವಾಗಿ, ನಿಷ್ಠುರವಾಗಿ ಎಲ್ಲಾ ಸ್ನೇಹಿತರ, ಸಂಬಂಧಿಗಳ ಬಳಗದವರ ಅನೇಕ ವಿಷಯಗಳನ್ನು ತಿಳಿಸುತ್ತಿದ್ದರು. ಆದರೆ ಅದು ತಮ್ಮ ಹೆಂಡತಿ ವಿಷಯದಲ್ಲಿ ಕೈ ಕೊಟ್ಟಿದ್ದು ಹೇಗೆ? ಮುಷ್ಟಿಯೊಳಗಿನ ಮರಳಿನಂತೆ ಉದುರಿ ಹೋದದ್ದು ಹೇಗೆ ಎಂದು ತಿಳಿಯುವುದಿಲ್ಲ. ಅವರು ಅಂಥ ಕ್ಷಣಗಳಲ್ಲಿ ಬೇರೆಯವರಿರಲಿ ತಮ್ಮನ್ನು ತಾವೇ ನಂಬದಂತಾಯಿತು. ಈ ಅನ್ನಿಸಿಕೆ ತೀವ್ರಗೊಂಡು ಬೇರೆ ದಾರಿಯಿಲ್ಲದೆ ನಿಟ್ಟುಸಿರಿನ ದಾರಿ ಹಿಡಿಯುತ್ತದೆ. ಇವತ್ತು ಕೂಡ ಆದದ್ದು ಅದರ ಪುನರಾವರ್ತನೆ.

ಎಂದಿನಂತೆ ಆ ದಿನದ್ದೂ ಒಂದೇ ತಾಳ. ಬೆಳಗಿನ ವಾಕಿಂಗ್ ಗೆ ಹೊರಗೆ ಹೆಜ್ಜೆ ಇಟ್ಟ ಕೂಡಲೇ ಎಳೆಬಿಸಿಲು, ತಿಳಿಗಾಳಿ ಬೆನ್ನು ಚಪ್ಪರಿಸಿ ಇದ್ದ ನಡಿಗೆಯ ವೇಗ ಹೆಚ್ಚಾಯಿತು. ಪಾರ್ಕಿನಲ್ಲಿ ಎಂದಿನಂತೆ ಸಿಗುವ ಮುಖಗಳಿಗೆ ಮಂದಹಾಸದ ವಿನಿಮಯ. ಎಲ್ಲರಿಗೂ ಗೊತ್ತಿರುವ ಯಾರೂ ಆಡಬಹುದಾದ ಮಾತುಗಳು ಅಲ್ಲಿನ ಗಾಳಿಯ ಪದರುಗಳಲ್ಲಿ ಹರಿದಾಡುತ್ತಿದ್ದವು. ತಾವೂ ಒಂದಷ್ಟನ್ನು ಸೆಳೆದುಕೊಂಡು ಅಕ್ಕಪಕ್ಕದವರಿಗೆ ಹಂಚಿ ವಾಪಸ್ಸು ಮನೆ ಸೇರುವ ಹೊತ್ತಿಗೆ ಮಗ ಸೊಸೆ ಇಬ್ಬರೂ ಬುಲೆಟ್ ಟ್ರೈನ್ ಸ್ಪೀಡಿನಲ್ಲಿ ತಮ್ಮ ಬೆಳಗಿನ ಕೆಲಸಗಳನ್ನು ಪೂರೈಸಿದ್ದರ ಜೊತೆಗೆ ಮಧ್ಯಾಹ್ನದ ಡಬ್ಬಿ ಕೂಡ ಸಿದ್ಧ.

ಅವರಿಬ್ಬರೂ ಹೊರಟ ಮೇಲೆ ಮನೆ ಇರುವುದಕ್ಕಿಂತ ಹೆಚ್ಚು ವಿಶಾಲವಾದ ಹಾಗೆ. ಗಾಳಿಗೆ ಸಲೀಸಾಗಿ ಉಸಿರಾಡಿಕೊಂಡು ಹಜಾರ ರೂಮುಗಳಲ್ಲಿ ಬಿಡುಬೀಸಾಗಿ ಚಲಿಸಲು ಅವಕಾಶ ಸಿಕ್ಕ ಹಾಗೆ. ಹಿಂದೆ ತಾವೂ ಕೂಡ ಸ್ಕೂಟರ್ ಓಡಿಸುತ್ತಿದ್ದರು. ಒಮ್ಮೆ ಕಾಲಿಗೆ ಜೋರಾಗಿ ಪೆಟ್ಟು ಬಿದ್ದು ಡಾಕ್ಟರ್ ಓಡಿಸುವ ಹಾಗಿದ್ದರೆ ಕಾರು ಮಾತ್ರ ಎಂದು ಪ್ರಿಸ್ಕ್ರಿಪ್ಷನ್ ಕೊಟ್ಟಮೇಲೆ ಪಾಕೆಟ್ ಕೊಂಚ ಟೊಳ್ಳಾದರೂ ಸರಿಯೇ ಎಂದು ಹಾಗೆಯೇ ಮಾಡಿದರು.

ರಂಗಸ್ವಾಮಿಗೆ ತಮಗೆ ಸಂಬಂಧಿಸಿದ ಅಗತ್ಯವಿರುವ ಎಲ್ಲ ಕೆಲಸಗಳನ್ನು ಅಚ್ಚುಕಟ್ಟಾಗಿ ಕೊಂಚವೂ ಬೇಸರವಿಲ್ಲದೆ ಮಾಡಿಕೊಂಡು ಅಭ್ಯಾಸ. ಇನ್ನೊಬ್ಬರ ಸಹಾಯ ಬೇಕೆನ್ನುವುದೇ ಇರಲಿಲ್ಲ. ಇದರಿಂದ ತಮಗೂ ಹಾಗೂ ಉಳಿದವರಿಗೂ ಸುಖ ಎನ್ನುವ ನಿಲುವು ಅವರದು. ವಿಶ್ವನಾಥ-ರಾಗಿಣಿಯರಂತೂ ದೈನಂದಿನ ಕೆಲಸಕಾರ್ಯಗಳಿಗೆ ಅವರಿಂದ ಯಾವ ಸಹಾಯ ನಿರೀಕ್ಷಿಸುವುದಾಗಲಿ ಅಪೇಕ್ಷಿಸುವುದಾಗಿ ಸುತಾರಾಂ ಮಾಡುತ್ತಿರಲಿಲ್ಲ. ಒಮ್ಮೊಮ್ಮೆ ಅವರೇ ಮುಂದುವರೆದು ಮಾಡುತ್ತಿದ್ದದ್ದು ವಾಷಿಂಗ್ ಮಷಿನ್ ಗೆ ಬಟ್ಟೆಗಳನ್ನು ಹಾಕುವುದು, ಸ್ಕ್ರೂ ತಿರುಗಿಸಿ ಕುಕ್ಕರ್ ಮುಚ್ಚಳ ಬಲಪಡಿಸುವುದು ಇತ್ಯಾದಿ ಸಣ್ಣಪುಟ್ಟ ಕೆಲಸಗಳು.

ಖಾಸಗಿ ಕಂಪನಿಯಲ್ಲಿ ಅತ್ಯಂತ ಪ್ರಧಾನ ಶ್ರೇಣಿಯಲ್ಲಿ ಅಲ್ಲದಿದ್ದರೂ ನಡುವಿನ ಮಟ್ಟದ ಕೆಲಸ ರಂಗಸ್ವಾಮಿ ಅವರಿಗೆ. ಅವರದೇ ಆದ ಚೇಂಬರ್ ಇತ್ತು. ಅಲ್ಲಿದ್ದ ಮೇಜು ಕುರ್ಚಿ, ಫ್ಯಾನು, ಬೀರು, ಫೈಲ್ ಗಳನ್ನು ಇಡುವ ಟ್ರೇ ಇತ್ಯಾದಿಗಳ ವಿಂಗಡಣೆಯಲ್ಲಿ ಒಂದು ಬಗೆಯ ಹಿತವೆನಿಸುವ ವಿನ್ಯಾಸವಿತ್ತು. ಆಫೀಸಿನ ಒಳಗೆ ಅಲ್ಲಿನ ಕಾರಿಡಾರ್ ಇತ್ಯಾದಿಗಳಲ್ಲಿ ಚಿರಪರಿಚಿತರ ಓಡಾಟದಿಂದ ನೆಲದ ಮೇಲಿನ ಟೈಲ್ಸ್ ಚುರುಕುಗೊಂಡು ಮೆಲುದನಿಯಲ್ಲಿ ಸ್ವಾಗತಿಸುವಂತೆ ಕಾಣುತ್ತಿದ್ದವು. ಇವಲ್ಲದೆ ಅಕ್ಕಪಕ್ಕದ ಸೋಂಬೇರಿ ಹ್ಯಾಡ್ ರೇಲ್, ವಾಶ್ ಬೇಸಿನ್ ಇತ್ಯಾದಿಗಳನ್ನು ಬಡಿದೆಬ್ಬಿಸುವಂಥ ಕೆಲಸದಲ್ಲಿ ಕೆಲವರು ನಿರತರಾಗಿದ್ದರು. ಇದರ ಮುಂದುವರಿದ ಅಧ್ಯಾಯ ಎನ್ನುವ ಹಾಗೆ ತೀಕ್ಷ್ಣತೆಯಿಲ್ಲದ ಬೆಳಕು ಮೆಲ್ಲನೆ ಅಡಿಯಿಡುತ್ತಿತ್ತು. ಅಲ್ಲಲ್ಲಿ ಹಿತವೆನಿಸುವ ಗಾಳಿ ಬೆಂಬಲಕ್ಕೆ.

ರಂಗಸ್ವಾಮಿ ಕುರ್ಚಿಯಲ್ಲಿ ಕುಳಿತು ಯಥಾಪ್ರಕಾರ ಕೆಲಸ ಪ್ರಾರಂಭಿಸುತ್ತಿದ್ದಂತೆ ಎಲ್ಲಾ ಮಾಮೂಲು – ಆಫೀಸಿನ ಅಟೆಂಡರ್ ನರಸಿಂಹನ ಸಲ್ಯೂಟ್ ಕೂಡ. ಮೇಜಿನ ಮೇಲೆ ಎಡಗಡೆ ಇಟ್ಟಿದ್ದ ಟ್ರೇ ಇಂದ ಫೈಲ್ ತೆಗೆದುಕೊಂಡು ಎಂದಿನಂತೆ ಕೆಲಸ ಪ್ರಾರಂಭಿಸಿದ ರಂಗಸ್ವಾಮಿ ನಂತರ ಒಂದರ ಹಿಂದೆ ಮತ್ತೊಂದು. ಡ್ರಾಫ್ಟ್, ಟಿಪ್ಪಣಿ ಇವುಗಳ ಜೊತೆಗೆ ಫೋನಿನಲ್ಲಿ ಮಾತು. ಅಟೆಂಡರ್ ಫೈಲ್ ತಂದಿಡುವುದು, ತೆಗೆದುಕೊಂಡು ಹೋಗುವುದು. ಆಫೀಸಿನ ಕೆಲಸಕ್ಕೆಂದು ಒಬ್ಬಿಬ್ಬರು ಬರುವುದು, ಹೋಗುವುದು. ಹೀಗೆಯೇ ಜರುಗುತ್ತ ಹನ್ನೆರಡು ಗಂಟೆ ದಾಟಿದೆ ಎಂದು ಗೊತ್ತಾದದ್ದು ನರಸಿಂಹ ಕಾಫಿ ತಂದು ಕೊಟ್ಟಾಗಲೇ. ಅದೇ ಸಮಯಕ್ಕೆ ಕಾಫಿಯ ರುಚಿ ಹೆಚ್ಚಾಗುವಂತೆ ಮಾಡಿದ್ದು ಕೈಯಲ್ಲಿ ಕಪ್ ಹಿಡಿದು ಬಂದ ಕಲೀಗ್ ಮುನಿಯಪ್ಪ. ಅವರನ್ನು ನೋಡುತ್ತಲೇ ರಂಗಸ್ವಾಮಿ, “ಆ ನೋಡಿ ನೀವು ಹೇಳಿದ ಒಗಟಿಗೆ ಇವತ್ತು ಉತ್ತರ ಹೊಳೀತು…” ಎಂದು ಹೇಳುತ್ತಿದ್ದಂತೆ ಅವರು, “ವೆರಿಗುಡ್ ಏನ್ಹೇಳಿ ಹಾಗಾದ್ರೆ” ಎಂದು ರಂಗಸ್ವಾಮಿ ಕಡೆ ನೋಡುವಾಗಲೇ ಶುರುವಾದದ್ದು ಅವರ ವಿಚಿತ್ರ ವರ್ತನೆ. ಅವರು ಕೈ ಜೋತು ಬಿದ್ದಂತಾಗಿ ಕಾಫಿ ಕಪ್ ಎಲ್ಲೋ ಬಿದ್ದು ಮುನಿಯಪ್ಪ, “ರಂಗಸ್ವಾಮಿ… ರಂಗಸ್ವಾಮಿ…” ಎನ್ನುತ್ತಿದ್ದ ಹಾಗೆಯೇ ಅವರ ಮುಖ ಪಕ್ಕಕ್ಕೆ ವಾಲಿತು. ಜೊತೆಗೆ ಅವರ ಬಲಗಾಲು ಕೂಡ. ಮುನಿಯಪ್ಪ ತಕ್ಷಣವೇ ಗಾಬರಿಯಿಂದ ಚೇತರಿಸಿಕೊಂಡು, “ನಾರಾಯಣ… ನರಸಿಂಹ… ವೇಣುಗೋಪಾಲ್… ಬೇಗ ಬನ್ನಿ..” ಎಂದು ಕೂಗಿದ್ದಕ್ಕೆ ಅವರು ಮತ್ತು ಇನ್ನೂ ಕೆಲವರು ಓಡಿ ಬಂದರು. ರಂಗಸ್ವಾಮಿಯ ಕೈ ಹಿಡಿದವರು ಕೆಲವರಾದರೆ, ಕಾಲು ಪಕ್ಕಕ್ಕೆ ಇಡಲು ಪ್ರಯತ್ನಿಸಿದವರು ಕೆಲವರು. ಇಂಥ ಪ್ರಕರಣವನ್ನು ನೋಡಿದ್ದ ಶ್ರೀಕಂಠಗೆ ರಂಗಸ್ವಾಮಿಗೆ ಸ್ಟ್ರೋಕ್ ಆಗಿದೆ ಎನ್ನುವುದು ತಿಳಿಯಿತು.

ತಕ್ಷಣವೇ ಆಫೀಸಿನವರಿಗೆ ರಕ್ತದೊತ್ತಡ ಕೊಂಚ ಹೆಚ್ಚಾದರೆ, ಅಲ್ಲಿನ ವಸ್ತುಗಳು ಯಾವುದೋ ಹೊಡೆತಕ್ಕೆ ಸಿಕ್ಕು ಸ್ವಲ್ಪ ಮಂಕಾದವು. ಗಾಳಿ ಒತ್ತಡಕ್ಕೆ ಸಿಕ್ಕ ಹಾಗಿತ್ತು. ರಂಗಸ್ವಾಮಿಯ ಚೇಂಬರಿನ ಸುತ್ತಲಿದ್ದವರಿಂದ, ʻಏಕೆʼ, ʻಹೇಗೆ…ʼ ʻಹೆಲ್ತಿ ಪರ್ಸನ್..ʼ ಇತ್ಯಾದಿ ಮಾತುಗಳು ಅತ್ತಿತ್ತ ಹರಿದಾಡಿದವು. ಅವರಿಗೆ ಪ್ರಜ್ಞೆ ಇದೆಯೋ ಇಲ್ಲವೋ ಯಾರಿಗೂ ಸ್ಪಷ್ಟವಿರಲಿಲ್ಲ. ರಂಗಸ್ವಾಮಿ ಜುಂ ಎನ್ನುತ್ತಿದ್ದ ಕೈ, ಕಾಲಿನ ಕಡೆ ದೃಷ್ಟಿ ಹಾಯಿಸುತ್ತಿದ್ದರು. ಈ ನಡುವೆ ಶ್ರೀಕಂಠ, ಅವರ ಮಗನಿಗೆ ಕಾಯುವುದು ಬೇಡ.. ಆಮೇಲೆ ಹೇಳಿದರಾಯಿತು.. ಬೇಗ, ಬೇಗ… ಶಿಫ್ಟ್… ವಿ ಶಲ್ ನಾಟ್ ವೇಸ್ಟ್ ಟೈಂ ಎನ್ನುತ್ತ ಅವರನ್ನು ಹತ್ತಿರದ ನರ್ಸಿಂಗ್ ಹೋಮ್ ನಿಂದ ಆಂಬ್ಯುಲೆನ್ಸ್ ತರಿಸಿ ಶಿಫ್ಟ್ ಮಾಡಿದರು. ಸ್ವಲ್ಪ ಸಮಯದಲ್ಲಿಯೇ ವಿಷಯ ತಿಳಿದು ಬಂದ ವಿಶ್ವನಾಥ ಅತ್ತಿತ್ತ ಕಣ್ಣಾಡಿಸುತ್ತ ಅವರನ್ನು ಸೇರಿಕೊಂಡ.

ಆ ವೇಳೆಗೆ ನರ್ಸಿಂಗ್ ಹೋಂನಲ್ಲಿ ರಂಗಸ್ವಾಮಿಗೆ ಪ್ರಜ್ಞೆ ಇರದಂತೆ ಕ್ರಮ ತೆಗೆದುಕೊಂಡಿದ್ದಾರೆಂದು ತಿಳಿಯಿತು. ಉಳಿದಂತೆ ರಕ್ತಪರೀಕ್ಷೆ, ಬಿ.ಪಿ, ಇಸಿಜಿ ಇತ್ಯಾದಿ ಕ್ರಮಬದ್ಧವಾಗಿ ಜರುಗುತ್ತಿದ್ದ ಚಿಕಿತ್ಸೆಯನ್ನು ನೋಡುತ್ತಾ ಅಲ್ಲಿಯೇ ಕುಳಿತ. ಪರಿಸ್ಥಿತಿಯ ಗಂಭೀರತೆಗೆ ತನ್ನನ್ನು ಒಪ್ಪಿಸಿಕೊಂಡು ಕೈಗೊಳ್ಳಬೇಕಾದ ತಕ್ಷಣದ ಕೆಲಸಗಳನ್ನು ಮರೆಯಲಿಲ್ಲ. ಊರಾಚೆಯ ಆಫೀಸಿನಲ್ಲಿದ್ದ ರಾಗಿಣಿ ಬರುವೆನೆಂದು ಆತಂಕ ಹಾಗೂ ಕುತೂಹಲ ಭರಿತ ಧ್ವನಿಯಲ್ಲಿ ಹೇಳಿದಳು.

ಸಂಜೆಯ ಹೊತ್ತಿಗೆ ಪರಿಸ್ಥಿತಿ ಒಂದಷ್ಟು ಸ್ಪಷ್ಟವಾಗತೊಡಗಿತು. ರಂಗಸ್ವಾಮಿ ನಡೆಯುತ್ತಿದ್ದ ವಿದ್ಯಮಾನಗಳಿಂದ ತೀವ್ರವಾಗಿ ವಿಚಲಿತಗೊಂಡು ಯಾವುದೂ ಸ್ಪಷ್ಟವಾಗದೆ ಒಂದಿಲ್ಲೊಂದು ರೀತಿಯಲ್ಲಿ ಡಾಕ್ಟರು ತನ್ನನ್ನು ಪರೀಕ್ಷೆ ಮಾಡುತ್ತಿರುವುದರ ಬಗ್ಗೆ ಕೆಲವೊಮ್ಮೆ ತಾನೇ ವೀಕ್ಷಕನಂತೆ ಭಾಸವಾದರೂ ಅನಂತರ ಕುತೂಹಲ ಮತ್ತು ಆತಂಕಗಳು ಒಂದುಗೂಡಿ ಡಾಕ್ಟರ್ ಆಡುವ ಮಾತಿನಿಂದ ಏನಾದರೂ ಸೂಚನೆ ಸಿಗುತ್ತದೆಯೇ ಎಂದು ಸಾಧ್ಯವಾದಷ್ಟು ತಾಳ್ಮೆ ವಹಿಸಿದರು. ವಿಶ್ವನಾಥನಿಗೆ ಡಾಕ್ಟರು, ಜೀವಕ್ಕೆ ಅಪಾಯವಿಲ್ಲದಿದ್ದರೂ ಬಲಭಾಗಕ್ಕೆ ಸ್ಟ್ರೋಕ್ ಆಗಿದೆ. ಅದಕ್ಕೆ ಕಾರಣ ಹೇಳಲು ಸಾಧ್ಯವಿಲ್ಲ ಎಂದು ಮುಂದುವರಿಸಿ ದೇಹಪ್ರಕೃತಿ ಉತ್ತಮವಾಗಲು ಔಷಧಿ, ದಿನನಿತ್ಯ ಅಗತ್ಯವಾದ ಫಿಸಿಯೋಥೆರಪಿ ಇತ್ಯಾದಿಗಳನ್ನು ಹೇಳಿದರು. ರಂಗಸ್ವಾಮಿಗೂ ಕೂಡ ಪರಿಸ್ಥಿತಿಯ ಬಗ್ಗೆ ಅರಿವು ಮಾಡಿಕೊಟ್ಟು ಕೊನೆಗೆ ʻಡೋಂಟ್ ವರಿʼ ಎಂದು ಕಿರುನಗೆ ಹಾರಿಸುತ್ತ ಭುಜದ ಮೇಲೆ ಕೈಯಿಟ್ಟರು. ಹಠಾತ್ ಉಂಟಾದ ಬದಲಾವಣೆಯಿಂದ ಹೈರಾಣಾದ ರಂಗಸ್ವಾಮಿ ತಾನು ಸಂಪೂರ್ಣ ಬೇರೆಯೇ ಮನುಷ್ಯನಾದೆ ಎಂದುಕೊಂಡರು. ಬದಲಾದ ಪರಿಸ್ಥಿತಿಗೆ ಏನು ಕಾರಣ ಎಂಬ ಆಲೋಚನೆ ಅವರು ಎಚ್ಚರವಾಗಿದ್ದ ಸಮಯವನ್ನು ಪೂರ್ತಿಯಾಗಿ ಆಕ್ರಮಿಸಿತ್ತು. ಅದರಿಂದ ಉಪಯೋಗ ಸೊನ್ನೆಯಾಗಿ ಮತ್ತು ತಲೆಭಾರವಾಯಿತಷ್ಟೆ.

ರಂಗಸ್ವಾಮಿಯನ್ನು ನೋಡಲು ಅವರ ಆಫೀಸಿನವರು, ವಿಶ್ವನಾಥ ಹಾಗೂ ರಾಗಿಣಿ ಆಫೀಸಿನವರು ಸಣ್ಣಸಣ್ಣ ತಂಡಗಳಲ್ಲಿ ಬರುತ್ತಿದ್ದರು. “ಜಸ್ಟ್ ಆಬ್ಲಿಗೇಷನ್ʼʼ ಎಂದು ವಿಶ್ವನಾಥ ರಾಗಿಣಿಗೆ ಹೇಳಿದರೆ, “ಫ್ರೆಂಡ್ಸ್ ಮತ್ತೆ ರಿಲೇಟಿವ್ಸ್” ಎಂದು ಪ್ರಶ್ನೆ ಹಾಕಿಕೊಂಡು, “ಅದೂ ಅಷ್ಟೆ” ಎಂದಳು. ಅವಳ ವಿಶ್ಲೇಷಣೆಯನ್ನು ಮೆಚ್ಚುವಂತೆ ನಸುನಗೆ ಬೀರಿದ ವಿಶ್ವನಾಥ. ಅನಂತರ ಕಿಟಕಿಯ ಮೂಲಕ ರಸ್ತೆಯಲ್ಲಿ ಕಾರು ಹಾಗೂ ದ್ವಿಚಕ್ರ ವಾಹನದಲ್ಲಿ ಒಬ್ಬರೇ ಕುಳಿತು ಹೋಗುತ್ತಿದ್ದವರನ್ನು ನೋಡುತ್ತ ಕುಳಿತಿದ್ದವನಿಗೆ ಇದ್ದಕ್ಕಿದ್ದಂತೆ ಆಲೋಚನೆಯೊಂದು ಹೊಳೆದು, “ಕೇಳಲೇ” ಎಂದು ಅವಳಲ್ಲಿ ದೃಷ್ಟಿನೆಟ್ಟ. ಅದಕ್ಕವಳು “ಏನುʼʼ ಎನ್ನುವಂತೆ ತಲೆ ಆಡಿಸಿದಳು. ಅವನು “ನಮ್ಮದು?”. ಎಂದು ಅವಳ ಕಣ್ಣನ್ನು ಬಗೆಯುವಂತೆ ನೋಡಿದ. ಅವಳು ಏನಾದರೊಂದನ್ನು ಹೇಳುತ್ತಿದ್ದಳು ಎಂದು ಕಾಣುತ್ತದೆ. ಅಷ್ಟರಲ್ಲಿ, “ಹೇಗಿದ್ದಾರೆʼʼ ಎಂದು ಕೇಳುತ್ತಾ ಡಾಕ್ಟರ್ ಬಂದದ್ದರಿಂದ ಬಿಡುಗಡೆ ಸಿಕ್ಕಂತಾಯಿತು. ಉತ್ತರ ಕೊಡುವುದು ತಪ್ಪಿದ್ದಕ್ಕೆ ರಾಗಿಣಿಗೆ ಒಂದು ಬಗೆಯ ಸಮಾಧಾನವಾಯಿತು. ಪರಿಚಿತರು ಅಪರಿಚಿತರು ಬಂದು ವಿಶ್ವನಾಥ ರಾಗಿಣಿಯ ಬಳಿ ಮೆಲುದನಿಯಲ್ಲಿ ಅದೇನನ್ನು ಮಾತನಾಡುತ್ತಾರೋ ತಿಳಿಯಲು ಮನಸ್ಸಾಗದೆ ರಂಗಸ್ವಾಮಿ ಕಿಟಕಿಯ ಕರ್ಟನ್ ಸಂದಿಯಿಂದ ತೂರಿ ಬಂದ ಬೆಳಕು ಗೋಡೆಯ ಮೇಲೆ ಚಿತ್ತಾರ ರೂಪಿಸುವ ಬಗೆಗಳನ್ನು ನೋಡುತ್ತಿದ್ದರು.

ರಂಗಸ್ವಾಮಿಯನ್ನು ಮನೆಗೆ ಕರೆತಂದ ಮೇಲೆ ಎಲ್ಲಾ ಕೆಲಸದ ಸಮಯವನ್ನು ಪುನರ್ ವ್ಯವಸ್ಥೆಗೆ ಒಳಪಡಿಸುವುದು ಅಗತ್ಯವಾಗಿತ್ತು. ಅವರು ಯಾವ ರೀತಿಯಲ್ಲಿಯೂ ಸ್ವತಂತ್ರವಾಗಿರಲು ಸಾಧ್ಯವಿರಲಿಲ್ಲ. ಒಳಗಿದ್ದ ಸೋಫಾ, ಟೀವಿ, ಟೀಪಾಯ್ ಇತ್ಯಾದಿ ವಸ್ತುಗಳಿಗಿಂತ ಒಂದಷ್ಟು ಮಾತ್ರ ಭಿನ್ನ ಎಂದುಕೊಂಡರು ರಂಗಸ್ವಾಮಿ. ಇಲ್ಲಿಯ ತನಕ ವೈಯಕ್ತಿಕ ವಿಷಯಗಳಿಗೆ ಬೇರೆಯವರ ಸಹಾಯ ಕೇಳದ ರಂಗಸ್ವಾಮಿಗೆ ಈಗ ಒತ್ತಡದ ಪರಿಸ್ಥಿತಿ ಉಂಟಾಯಿತು. ಹಳೆಯದೇನೇ ಇದ್ದರೂ ಈಗ ಕೇವಲ ನೆನಪಷ್ಟೇ. ವರ್ತಮಾನ ಅವರನ್ನು ಅಲ್ಲಾಡಿಸಿದ್ದು ಸಣ್ಣಪುಟ್ಟ ಪ್ರಮಾಣದಲ್ಲಲ್ಲ. ಇಂತಹ ವಿಪರೀತ ಸಮಯದಲ್ಲೂ ಹೆಚ್ಚೂಕಡಿಮೆ ಮೊದಲಿನಷ್ಟೇ ನಿದ್ದೆ ಮಾಡಲು ಸಾಧ್ಯವಾಗುತ್ತಿರುವುದು ಹೇಗೆಂದು ತಿಳಿಯದೆ ಡಾಕ್ಟರನ್ನೇ ಪ್ರಶ್ನೆ ಮಾಡಿದ್ದರು. ಅವರು, “ದಟ್ ಈಸ್ ಎ ಗಿಫ್ಟ್ ಯು ಬೈ ದ ಆಲ್ ಮೈಟಿ” ಎಂದಾಗ ಕಿರುನಗೆ ಮೂಡಿತು.

ರಂಗಸ್ವಾಮಿ ಅಭ್ಯಾಸಬಲದಂತೆ ಬೆಳಿಗ್ಗೆ ಆರಕ್ಕೆ ಕಣ್ಣು ಬಿಟ್ಟ ನಂತರ ಎಲ್ಲ ಕೆಲಸಗಳನ್ನು ವಿಶ್ವನಾಥ-ರಾಗಿಣಿ ಹಂಚಿಕೊಂಡಿದ್ದರು. ಅವರ ಚಲನೆಗೆ ವೀಲ್ ಚೇರ್ ನ ಅನಿವಾರ್ಯತೆಯಿತ್ತು. ಹಾಸಿಗೆಯಿಂದ ಏಳಿಸುವುದು, ಹಲ್ಲುಜ್ಜಿಸುವುದು, ಟಾಯ್ಲೆಟ್ ಇತ್ಯಾದಿ. ಅವರು ಮಾಡುವ ಪ್ರಯತ್ನಕ್ಕೆ ರಂಗಸ್ವಾಮಿಯವರ ಸಹಕಾರವಷ್ಟೇ ಅಗತ್ಯವಾಗಿತ್ತು. ಈ ರೀತಿಯ ಹೊಂದಾಣಿಕೆಯಲ್ಲಿ ಆರೇಳು ದಿನಗಳು ಕಳೆದುಹೋದದ್ದು ಯಾರ ಗಮನಕ್ಕೂ ಬರಲಿಲ್ಲ. ರಂಗಸ್ವಾಮಿಗೆ ಸ್ಟ್ರೋಕ್ ಗೆ ಒಳಗಾದ ದೇಹದ ಬಲಭಾಗದಲ್ಲಿ ಕೈ, ಕಾಲು ಹೆಚ್ಚು ಹೆಚ್ಚು ಜುಮ್ ಎನ್ನುತ್ತಿದ್ದದ್ದು ಅನುಭವಕ್ಕೆ ಬರುತ್ತಿತ್ತು. ಅವುಗಳಿಗೆ ಯಾವ ರೀತಿಯ ಸಂವೇದನೆಯೂ ಇರಲಿಲ್ಲ. ಡಾಕ್ಟರ್ ಸಲಹೆಯಂತೆ ಫಿಜಿಯೋಥೆರಪಿಗೆ ಆಸ್ಪತ್ರೆಗೂ ವಿಶ್ವನಾಥ ರಂಗಸ್ವಾಮಿಯನ್ನು ಕರೆದುಕೊಂಡು ಹೋಗಲೇಬೇಕಿತ್ತು. ಆದರೆ ಇದು ಬಹಳ ದಿನಗಳ ಕಾಲ ನಡೆಯದಾಯಿತು. ಪ್ರತ್ಯೇಕವಾಗಿ ಫಿಜಿಯೋಥೆರಪಿಗೆ ಏರ್ಪಾಡು ಮಾಡುವ ಅಗತ್ಯ ಕಂಡು ಬಂತು. ಈ ಸಮಸ್ಯೆಯನ್ನು ಬಗೆಹರಿಸುವುದು ಸುಲಭವಲ್ಲ ಎಂದು ಅರಿವಾಗುತ್ತಾ ಸಮಸ್ಯೆ ಬೆಟ್ಟದಷ್ಟು ದೊಡ್ಡದಾಗಿ ಕಂಡಿತು. ಎಲ್ಲ ಕಡೆ ವಿಚಾರಿಸಿದಾಗ ಸಾಮಾನ್ಯವಾಗಿ ಸಿಗುತ್ತಿದ್ದದ್ದು ಒಂದೇ ಉತ್ತರ. ಅದಕ್ಕೆ ಬೇಕಾದ ಉಪಕರಣಗಳನ್ನು ಮನೆಗೆ ತರಲಾಗುವುದಿಲ್ಲ ಎಂದು. ಅದೊಂದು ದಿನ ಚಿಕಿತ್ಸೆ ಕೊಡುತ್ತಿದ್ದ ಡಾಕ್ಟರ್ ರಿಂದಲೇ ಪರಿಹಾರ ದೊರಕಿತು ಇದು ಉಂಟಾದದ್ದು ಫಿಜಿಯೋಥೆರಪಿಸ್ಟ್ ರಂಗನಾಥನಿಗೆ ಡಾಕ್ಟರ್ ಮೇಲಿದ್ದ ಗೌರವ ಕಾರಣವೆಂದು ಗೊತ್ತಾಯಿತು.

ಕಂದುಬಣ್ಣ ಚೌಕು ಮುಖದ ಸುಮಾರು ಮೂವತ್ತರ ಆಸುಪಾಸಿನ ರಂಗನಾಥ ಮೈಕೈ ತುಂಬಿಕೊಂಡ ಮೇಲುಗಣ್ಣಿನವನು. ಅವನು ತೆಗೆದುಕೊಳ್ಳುವ ಫೀಸ್ ಮತ್ತು ಶುಶ್ರೂಷೆಗೆ ಬೇಕಾದ ಇತರ ಅಗತ್ಯಗಳ ಬಗ್ಗೆ ಆಗಲೇ ಡಾಕ್ಟರು ಸೂಚನೆ ಕೊಟ್ಟಿದ್ದರಿಂದ ಅವನು ಬ್ಯಾಗ್ ಹಿಡಿದುಕೊಂಡು ಬಂದಾಗ ಮಾತಿನ ಅಗತ್ಯ ತೀರಾ ಕಡಿಮೆ ಆಗಿತ್ತು. ಪರಸ್ಪರ ದೃಷ್ಟಿಸುವುದನ್ನು ಬಿಟ್ಟರೆ ಮತ್ತು ರಾಗಿಣಿ ತಂದುಕೊಟ್ಟ ಕಾಫಿಯನ್ನು ಕುಡಿಯುವುದನ್ನು ಬಿಟ್ಟರೆ ಹೆಚ್ಚಿನದೇನೂ ಇರಲಿಲ್ಲ.

ವಿಶ್ವನಾಥ, “ಯಾವತ್ತಿಂದ ಶುರು ಮಾಡ್ತೀರಿ” ಎಂದು ಕೇಳಿದ್ದಕ್ಕೆ, “ಯಾವತ್ತಿಂದ ಏನು ಬಂತು… ಇವತ್ತೇ..” ಎಂದ ರಂಗನಾಥ. ರಂಗನಾಥ ತಕ್ಷಣವೇ ಒಪ್ಪಿಕೊಂಡದ್ದು ವಿಶ್ವನಾಥನಿಗೆ ರಂಗಸ್ವಾಮಿಯನ್ನು ಫಿಸಿಯೋಥೆರಪಿಗೆ ನರ್ಸಿಂಗ್ ಹೋಂಗೆ ಕರೆದುಕೊಂಡು ಹೋಗುವ ಕೆಲಸ ತಪ್ಪಿದ್ದಕ್ಕೆ ಸಂತೋಷವಾಯಿತು. ಅನಂತರ ರಂಗಸ್ವಾಮಿ ಮೊದಲ ದಿನದ ಶುಶ್ರೂಷೆಯ ಕಡೆಗೆ ಗಮನಕೊಡುತ್ತಾ ರಂಗನಾಥನ ಸೂಚನೆಗಳನ್ನು ಪೂರ್ಣವಾಗಿ ಪರಿಪಾಲಿಸಲು ಪ್ರಯತ್ನಿಸಿದರು. ರಂಗನಾಥನ ಮಾತು, ವರ್ತನೆ ಮತ್ತು ಕೆಲಸದಲ್ಲಿ ತಿಳಿದುಕೊಳ್ಳುತ್ತಿದ್ದ ಕ್ರಮಬದ್ಧತೆ ಇತ್ಯಾದಿಗಳು ಎಲ್ಲರಿಗೂ ಪ್ರಿಯವಾಯಿತು. ರಂಗನಾಥ ಬಂದು ಹೋಗಲು ಕೀ ಕೊಡುವ ಹಾಗೂ ಪಡೆಯುವ ವ್ಯವಸ್ಥೆಗೆ ಅವರ ಮನೆಯಿಂದ ಮೂರು ಮನೆಯಾಚೆಯವರು ಒಪ್ಪಿದ್ದು ಅನುಕೂಲವಾಯಿತು.

ಮಾರನೆಯ ದಿನದಿಂದ ರಂಗನಾಥ ನಿಗದಿ ಪಡಿಸಿಕೊಂಡ ಸಮಯಕ್ಕೆ ಸರಿಯಾಗಿ ಬರುತ್ತಿದ್ದ. ಜೊತೆಗೆ ಅಂಗೈಯಷ್ಟು ಹೊಸ ಬೆಳಕು, ಬೊಗಸೆಯಷ್ಟು ಹೊಸ ಗಾಳಿ ತರುತ್ತಿದ್ದ. ಮಾತು ಕಡಿಮೆ. ಮಾಡುವ ಕೆಲಸಕ್ಕೆ ತಿಳಿಮನಸ್ಸಿನ ಬೆಂಬಲ. ದಿನದಿಂದ ದಿನಕ್ಕೆ ಪರಸ್ಪರ ಸಾಮೀಪ್ಯ ಒಂದಷ್ಟು ಸಲಿಗೆಯನ್ನು ಬೆಳೆಸಿತ್ತು. ರಂಗನಾಥ ಮಾಡಬೇಕಾದ ಕೆಲಸವನ್ನು ಸುಲಲಿತವಾಗಿ ಮಾಡುತ್ತಿದ್ದ. ಮಧ್ಯೆ ಮಧ್ಯೆ ಕನಿಷ್ಠ ಸೂಚನೆಗಳು, ಮಾತುಗಳು. ಆಗೀಗ ನಗುವಿನ ಝಳಕು.

(ಇಲ್ಲಸ್ಟ್ರೇಷನ್‌ ಕಲೆ: ರೂಪಶ್ರೀ ಕಲ್ಲಿಗನೂರ್)

ಒಂದೊಂದು ದಿನ ಅವನು ಬರುತ್ತಿದ್ದ ಮೊಬೈಲ್ ಕಾಲ್ ಗಳನ್ನು ಕಟ್ ಮಾಡುತ್ತಿದ್ದ. ಅವು ಬೇಡವಾದಂಥವು ಎಂದು ರಂಗಸ್ವಾಮಿ ಭಾವಿಸಿದರು. ಅನಂತರ ಒಂದೆರಡು ದಿನಗಳಲ್ಲಿಯೂ ಹೀಗೆಯೇ ಮಾಡಿದ್ದರಿಂದ ರಂಗಸ್ವಾಮಿಗೆ ಮಾತನಾಡುವಂತೆ ಸೂಚಿಸುತ್ತಿದ್ದರು. ಮಾತಾಡಿ ಬಂದವನು ಯಾವುದೋ ಗೊಂದಲದಲ್ಲಿ ಇರುವಂತೆ ರಂಗಸ್ವಾಮಿಗೆ ಭಾಸವಾಯಿತು. ವಿಷಯವನ್ನು ತಿಳಿದುಕೊಳ್ಳುವುದು ಹೇಗೆ ಎಂದು ತಿಳಿಯದೆ ಸುಮ್ಮನಿರುತ್ತಿದ್ದರು.

ಆಫೀಸಿನ ಒಳಗೆ ಅಲ್ಲಿನ ಕಾರಿಡಾರ್ ಇತ್ಯಾದಿಗಳಲ್ಲಿ ಚಿರಪರಿಚಿತರ ಓಡಾಟದಿಂದ ನೆಲದ ಮೇಲಿನ ಟೈಲ್ಸ್ ಚುರುಕುಗೊಂಡು ಮೆಲುದನಿಯಲ್ಲಿ ಸ್ವಾಗತಿಸುವಂತೆ ಕಾಣುತ್ತಿದ್ದವು. ಇವಲ್ಲದೆ ಅಕ್ಕಪಕ್ಕದ ಸೋಂಬೇರಿ ಹ್ಯಾಡ್ ರೇಲ್, ವಾಶ್ ಬೇಸಿನ್ ಇತ್ಯಾದಿಗಳನ್ನು ಬಡಿದೆಬ್ಬಿಸುವಂಥ ಕೆಲಸದಲ್ಲಿ ಕೆಲವರು ನಿರತರಾಗಿದ್ದರು. ಇದರ ಮುಂದುವರಿದ ಅಧ್ಯಾಯ ಎನ್ನುವ ಹಾಗೆ ತೀಕ್ಷ್ಣತೆಯಿಲ್ಲದ ಬೆಳಕು ಮೆಲ್ಲನೆ ಅಡಿಯಿಡುತ್ತಿತ್ತು.

ಆ ದಿನ ರಂಗನಾಥ ಕೆಲಸದಲ್ಲಿ ತೊಡಗಿದ್ದಾಗ ಫೋನ್ ನಲ್ಲಿ ಮಾತನಾಡಿ ಬಂದನಂತರ ತಳಮಳದಲ್ಲಿ ಇದ್ದ ಹಾಗೆ ರಂಗಸ್ವಾಮಿಗೆ ಕಂಡಿತು. ಕೆಲಸ ಮುಂದುವರಿಸಲು ಹೆಚ್ಚು ಸಮಯ ತೆಗೆದುಕೊಳ್ಳುತ್ತಿದ್ದ ಅವನನ್ನು ಏನು ಯೋಚನೆ ಎಂದು ಅರ್ಥವಾಗುವಂತೆ ನೋಟ ಬೀರಿದರು. ಅವನು, “ಏನಿಲ್ಲ ನಮ್ಮಮ್ಮಂಗೆ ವಾರಕ್ಕೆ ಎರಡು ದಿನ ಡಯಾಲಿಸಿಸ್ ಆಗ್ಬೇಕು… ಒಂದೊಂದು ದಿನ ಅವ್ನು ಕೈಕೊಟ್ಟು ಬಿಡ್ತಾನೆ…” ಎಂದ. ರಂಗಸ್ವಾಮಿ, “ಯಾರು?” ಎಂದದ್ದಕ್ಕೆ, “ಅದೇ ನಮ್ಮ ಸೋದರಮಾವನ ಮಗ.. ಸರಿಯಾಗಿ ನೋಡ್ಕೋತಾನೆ… ಆದ್ರೆ ಒಂದೊಂದು ದಿನ ಅವನು ಸರಿಯಾದ ಟೈಂಗೆ ಬರಲ್ಲ. ಇನ್ನೊಬ್ಬರನ್ನು ಹುಡುಕ್ಬೇಕು… ಸಿಕ್ತಾರೆ… ಅಲ್ಲೀ ತನಕ…ʼʼ ಎಂದು ಕತ್ತು ಕೆಳಗೆ ಮಾಡಿದ. ಮಾಡುತ್ತಿದ್ದ ಕೆಲಸವನ್ನು ನಿಲ್ಲಿಸುವಂತೆ ಕೈಮಾಡಿ, “ಈಗ ನೀವೇ ಹೋಗಿ… ನಂದು ಆಮೇಲೆ ಮಾಡಿದ್ರಾಯ್ತು…ʼʼ ಎಂದು ರಂಗಸ್ವಾಮಿ ಅವನ ಹೆಗಲು ಮುಟ್ಟಿ ಮೆಲ್ಲಗೆ ಹೇಳಿದರು. ಅವನು ಸಣ್ಣಗೆ ತಲೆ ಹಾಕಿ ಉರಿಬಿಸಿಲಲ್ಲಿ ಹೊರಟ.

ಅವನು ಹಿಂತಿರುಗಿ ಬಂದದ್ದು ಮಧ್ಯಾಹ್ನದ ವೇಳೆಗೆ. ಬಂದವನ ಮುಖದಲ್ಲಿ ನಿರಾಳತೆ ಕಂಡಿತು ರಂಗಸ್ವಾಮಿಗೆ. ರಂಗನಾಥ ಅವರಿಗೆ ಮಾತನಾಡಲು ಬಿಡದೆ ತನ್ನ ಕೆಲಸವನ್ನು ಪೂರೈಸಿದ. ಅನಂತರವೇ ರಂಗಸ್ವಾಮಿ ಎಲ್ಲವನ್ನೂ ವಿವರವಾಗಿ ತಿಳಿಸಲು ಎಡಗೈಯನ್ನು ಅವನಿಗೆ ಅರ್ಥವಾಗುವಷ್ಟು ಸಲ ಜೋರಾಗಿ ಆಡಿಸಿದರು. ರಂಗನಾಥ ಕಡಿಮೆ ಮಾತುಗಳಲ್ಲಿ ಹೇಳಿದ್ದು ಇಷ್ಟು.

ನಮ್ಮದು ಸಾಧಾರಣ ಮಧ್ಯಮ ವರ್ಗದ ಕುಟುಂಬ. ಅಪ್ಪಂಗೆ ಮೊದಲನೇ ದರ್ಜೆ ಗುಮಾಸ್ತನ ಸರ್ಕಾರಿ ಕೆಲಸ. ಸ್ವಂತ ಊರಿನಲ್ಲಿ ಆಸ್ತಿ ಎಂದರೆ ಒಂದು ಐದು ಎಕರೆ ಜಮೀನು. ಅದೂ ಕೂಡ ದಾಯಾದಿಗಳ ಸಂಚಿನಲ್ಲಿ ಮಣ್ಣುಮುಕ್ಕಿತ್ತು. ಅಪ್ಪಂಗೆ ಸರ್ವೀಸ್ ನ ಉದ್ದಕ್ಕೂ ಸಿಗರೇಟಿನ ಚಟ. ಜತೆಗೆ ಇಸ್ಪೀಟು ಬೇರೆ. ಮನೆಯಲ್ಲಿ ಮಕ್ಕಳು ಅಂತ ಇದ್ದೋರು ನಾನು, ನನ್ನ ಅಕ್ಕ. ಅಮ್ಮನ ಜಾಣತನ ಇಲ್ದಿದ್ರೆ ಯಾವಾಗ್ಲೋ ನಾವು ಹಳ್ಳ ಹಿಡೀತಿದ್ವಿ. ಅಪ್ಪ ಸುಮ್ನೆ ಓಡಾಡಿಕೊಂಡಿದ್ರಷ್ಟೆ. ಅಮ್ಮ ಅಕ್ಕಂಗೆ ಮದ್ವೆ ಮಾಡಿದ್ದು ಅಂದ್ರೆ ಬೆಟ್ಟ ಕಡಿದು ಹಾಕಿದ ಹಾಗಿತ್ತು. ಭಾವಂದು ದೂರದೂರಲ್ಲಿ ಸ್ವಂತ ವ್ಯಾಪಾರ. ವರಮಾನ ಅಷ್ಟಕಷ್ಟೆ. ಇಷ್ಟೆಲ್ಲಾ ಅವ್ಯವಸ್ಥೆ ನಡುವೆ ನಾನು ಡಾಕ್ಟರ್ ಆಗಬೇಕು ಅಂತ ಒಳಗೊಳಗೆ ಹಂಬಲಿಸುತ್ತಾ ಇದ್ದವನನ್ನು ಕೇಳೋರು ಯಾರೂ ಇರ್ಲಿಲ್ಲ. ಕೊನೆಗೂ ಅಪ್ಪನನ್ನ ಬಿಡ್ಲಿಲ್ಲ ಆ ಸುಡುಗಾಡು ಸಿಗರೇಟು, ಬಲಿ ತೊಗೊಳ್ತು. ಇದೊಂದು ದೊಡ್ಡ ಅಧ್ಯಾಯ ಮುಗೀತು ಅನ್ನೋದ್ರಲ್ಲಿ ಮತ್ತೊಂದು ಅಮರಿಕೊಳ್ತು. ಅದು ಅಮ್ಮನ ಶುಗರ್ ಕಂಪ್ಲೇಂಟ್. ಬಹಳ ದಿನದಿಂದ ಇದ್ರೂ ಕೂಡ ಅದರ ಕಡೆ ಲಕ್ಷ್ಯ ಇರಲಿಲ್ಲ. ತುಂಬಾ ಹೆಚ್ಚಾದ ಮೇಲೇನೇ ಗೊತ್ತಾಗಿದ್ದು. ಏನೂ ಮಾಡಿದ್ರೂ ಜಗ್ಲೇ ಇಲ್ಲ. ಕಿಡ್ನೀನು ಕೈಕೊಟ್ಟು ಡಯಾಲಿಸಿಸ್ ಮಾಡಿಸಿಕೊಳ್ಳೋ ಸ್ಟೇಜ್ ಗೆ ಬಂತು.. ನಾನು ಇನ್ನೊಂದು ಹೇಳೋದನ್ನ ಮರ್ತೆ. ಇದಕ್ಕಿಂತ ಮುಂಚಿನ ದಿನಗಳಲ್ಲಿ ನನ್ನ ಸೋದರಮಾವನ ಮಗ ನಮ್ಮ ಮನೆಯಲ್ಲೇ ಓದ್ಕೊಂಡಿದ್ದ. ಅದ್ಯಾಕೋ ನಮ್ಮಂಗೆ ಅವನನ್ನ ಕಂಡ್ರೆ ಪ್ರಾಣ. ಅವನೂ ಕೂಡ ಅಷ್ಟೇ. ಓದು ಮುಗ್ಸಿ ಈಗ ಒಳ್ಳೆಯ ಕೆಲಸಕ್ಕೂ ಸೇರಿದಾನೆ… ಆದ್ರೆ ಅವನ್ಗೆ ಕಾಸಿನ ಕಡೆ ಕಣ್ಣು. ಈಗಿರೋ ಕಡೆ ಅದಕ್ಕೆ ಮಸ್ತಾಗಿ ಅವಕಾಶ ಇದೆ… ಇರ್ಲಿ… ಮಡ್ಕಳ್ಲಿ… ಅದಕ್ಕಲ್ಲ.. ಅಮ್ಮನ್ನ ಡಯಾಲಿಸಿಸ್ ಗೆ ಕರಕೊಂಡು ಹೋಗೊದನ್ನ ನಂಗೆ ಬಿಟ್ಟು ಬಿಡು ಅಂತ ಅವನೇ ಒತ್ತಾಯ ಮಾಡಿದ್ದ. ಆದರೆ ಒಂದೊಂದ್ ಸಲ ಪಿತ್ತ ಏರಿದ ಹಾಗೆ ಆಡ್ತಾನೆ. ಯಾವಾಗ ಅಂತ ಹೇಳಕ್ಕಾಗಲ್ಲ. ಅದೇ ಎಡವಟ್ಟು. ಅದಿರ್ಲಿ. ನನ್ನ ವಿಷ್ಯ ಅಂದ್ರೆ… ನಿಮ್ಮನ್ನ ಟ್ರೀಟ್ ಮಾಡ್ತಿದ್ರಲ್ಲ ಅವ್ರೇ ಇದನ್ನ ಕಲಿಯಕ್ಕೆ ಹೆಲ್ಪ್ ಮಾಡಿದ್ರು.

ಅವನು ಮಾತು ಮುಗಿಸಿದ ಮೇಲೆ ಸ್ವಲ್ಪ ಹೊತ್ತು ಇಬ್ಬರೂ ಸುಮ್ಮನೆ ಕುಳಿತಿದ್ದರು. ಕೇಳಿದ್ದೆಲ್ಲ ಒಳಕ್ಕಿಳಿದು ಹರಡಲು ಬಿಟ್ಟಿದ್ದರು ರಂಗಸ್ವಾಮಿ. ಹೊರಗೆ ಮುಸ್ಸಂಜೆ ಇಳಿಯುತ್ತಿತ್ತು.

ಸಾಕಷ್ಟು ವಾರಗಳು ಕಳೆಯುವಷ್ಟರಲ್ಲಿ ರಂಗಸ್ವಾಮಿಗೆ ತಮ್ಮಲ್ಲಿಯೇ ಕೊಂಚ ಭರವಸೆ ಉಂಟಾಗಲು ಪ್ರಾರಂಭವಾಗಿತ್ತು. ರಂಗನಾಥನ ಎದುರೇ ವಾಕಿಂಗ್ ಸ್ಟಿಕ್ ಹಿಡಿದುಕೊಂಡು ಅಲ್ಪಸ್ವಲ್ಪ ನಡೆಯುವ ಪ್ರಯತ್ನ ಮಾಡಲು ಶುರುಮಾಡಿದರು. ಈ ಅವಧಿಯಲ್ಲಿಯೇ ಅವರಿಗೆ ಮನೆಯಲ್ಲಿ ಒಬ್ಬಂಟಿಯಾಗಿದ್ದ ಸಂಗತಿ ಮನವರಿಕೆಯಾಗಲು ಶುರುವಾಗಿತ್ತು. ರಂಗಸ್ವಾಮಿ ಆಫೀಸಿನಲ್ಲಿ ತೆರೆದುಕೊಂಡ ಹಾಗೆ ಮನೆಯಲ್ಲಿ ಸಾಧ್ಯವಾಗುತ್ತಿರಲಿಲ್ಲ. ವಿಮಲಾ ತೀರಿಕೊಂಡ ಮೇಲೆ ಮನೆಯವರ ನಡುವೆ ಉಂಟಾಗುತ್ತಿದ್ದ ಕಂದಕಗಳು ಯಾವ ಮಟ್ಟದಲ್ಲಿ ಇವೆ ಎಂದು ಅರ್ಥವಾಗುತ್ತಾ ಬಂತು. ಈಗಂತೂ ಕೈಕಾಲು ಸರಿಯಾಗಿ ಆಡದೆ ಒಂದು ಬಗೆಯಲ್ಲಿ ಮಗು ಮತ್ತು ಎಷ್ಟೋ ತುಂಬಿ ಎಷ್ಟೋ ಖಾಲಿಯಿದ್ದ ರಂಗನಾಥನೂ ಇನ್ನೊಂದು ಬಗೆಯಲ್ಲಿ ಮಗು ಎಂದುಕೊಳ್ಳುತ್ತಿದ್ದರು. ತನ್ನ ಮನಸ್ಸನ್ನು, ಭಾವನೆಯ ಪದರುಗಳನ್ನು, ಯಾವ ಹಿಂಜರಿಕೆ ಇಲ್ಲದೆ ಬಿಡುಬೀಸಾಗಿ ಬಿಚ್ಚಿಡುತ್ತಿದ್ದ ಕಾರಣದಿಂದ ರಂಗಸ್ವಾಮಿಗೆ ಈ ಅವಸ್ಥೆಯಲ್ಲಿಯೂ ಅವನೊಡನೆ ಮನಸಾರೆ ನಗುವ, ಕೆಲವೊಮ್ಮೆ ಅಳುವ ಸಂದರ್ಭಗಳು ಉಂಟಾಗಿದ್ದು ಸಂತೋಷ ಉಂಟುಮಾಡಿತ್ತು. ಹೀಗಾಗುವುದಕ್ಕೆ ರಂಗನಾಥ ಹೇಳುತ್ತಿದ್ದ ಮನೆಯವರ, ಸಂಬಂಧಿಕರ ಎಲ್ಲೂ ಬರೆದಿಡದ ವಿಚಿತ್ರ ಘಟನಾವಳಿಗಳು, ಓದಿದ ಪುಸ್ತಕಗಳ ಕಣ್ಣು ತೆರೆಸುವಂಥ ಕಥನಗಳು, ನೋಡಿದ ಸಿನಿಮಾಗಳ ಸನ್ನಿವೇಶಗಳು ಮತ್ತು ವಾಸ್ತವದ ಎಲ್ಲಾ ಕ್ಷೇತ್ರಗಳಲ್ಲಿನ ಡೊಂಬರಾಟ- ಹುಚ್ಚಾಟಗಳ ತಳಬುಡ ಜಾಲಾಡುವ ಅವನ ಸ್ವಭಾವ ಕಾರಣವಾಯಿತು. ಇದರಿಂದಾಗಿ ರಂಗಸ್ವಾಮಿಗೆ ರಂಗನಾಥ ಬಂದನೆಂದರೆ ಸಂತೋಷದ ಲಹರಿ. ಒಮ್ಮೊಮ್ಮೆ ಅವರಿಗೆ ಸ್ಟ್ರೋಕಾಗಿದ್ದು ಒಳ್ಳೆಯದೇ ಆಯಿತು. ಒಂದಷ್ಟು ಬೆಚ್ಚಗೆನಿಸುವ ದಿನಗಳನ್ನು ಕಾಣುವಂತಾಯಿತು ಎಂಬ ವಿಲಕ್ಷಣ ಯೋಚನೆಯೂ ಬಂದದ್ದುಂಟು.

ರಂಗಸ್ವಾಮಿಗೆ ತಿಳಿದಿತ್ತು. ತಾವಿನ್ನು ಆಫೀಸ್ ಗೆ ಹೋಗುವಂತಿಲ್ಲ. ನಿರುದ್ಯೋಗಿ. ಅಷ್ಟೇ ಅಲ್ಲ ವರಮಾನ ಸೊನ್ನೆ. ಎಲ್ಲ ರೀತಿಯಲ್ಲಿಯೂ ಪರಾವಲಂಬಿ. ಹೀಗೆ ಮುತ್ತುತ್ತಿದ್ದ ಆಲೋಚನೆಗಳು ಹಲವು ಬಾರಿ. ಆದರೆ ಯಾವುದನ್ನೂ ಹೀಗಾಗುವುದೆಂದು ನಿರೀಕ್ಷಿಸುವಂತಿಲ್ಲ ಎಂದು ಸುಮ್ಮನೆ ಕಿಟಕಿಯಾಚೆ ನೆರಳು ಹಬ್ಬುವುದರ ಕಡೆ ದೃಷ್ಟಿ ಹಾಯಿಸಿದರು.

ಅಂದು ಸಂಜೆ ಅವರಿಗೆ ಹುಚ್ಚು ಉಮೇದು. ಕಿಟಕಿಯಿಂದಾಚೆ ಕಾಣುವ ಸುಮ್ಮನೆ ನಕ್ಷತ್ರಗಳನ್ನು ನೋಡುತ್ತಿದ್ದವರು ವಾಕಿಂಗ್ ಸ್ಟಿಕ್ ತಗೆದುಕೊಂಡು ಎದ್ದು ಮೆಲ್ಲನೆ ಹೆಜ್ಜೆಹಾಕಲು ಕೊಂಚ ಹಿಂಜರಿಕೆಯಿಂದಲೇ ಪ್ರಯತ್ನಿಸಿದರು. ತಕ್ಷಣವೇ ಅವರ ಮುಖದಲ್ಲಿ ನಸು ನಗು ಮೂಡಿತು. ಹೆಜ್ಜೆ ಇಡಲು ಸಾಧ್ಯವಿತ್ತು. ಅವರು ಏನೂ ತೋಚದೆ ನಡೆದು ಹಜಾರದ ಸಮೀಪ ಬಂದರು. ವಿಶ್ವನಾಥ, ರಾಗಿಣಿ ಊಟ ಮುಗಿಸಿ ಮಾತನಾಡುತ್ತ ಕುಳಿತಿದ್ದರು. ಹಾಗೆಯೇ ವಾಪಸು ಹೊರಡಲು ನೋಡಿದರು. ಆದರೆ ಏನೋ ಕೇಳಿದಂತಾಗಿ ನಿಂತರು. ತಕ್ಷಣ ತಿಳಿಯಿತು. ವಿಷಯ ತಮ್ಮದೇ. ವಾಕಿಂಗ್ ಸ್ಟಿಕ್ ಗಟ್ಟಿಯಾಗಿ ಹಿಡಿದುಕೊಂಡರು.

“ಇವರನ್ನು ಎಷ್ಟು ದಿನ ನೋಡ್ಕೋಬೇಕಾತ್ತೆ?”

“ಎಷ್ಟು ದಿನ ಅಂದ್ರೆ? ಇದು ಟರ್ಮಿನಲ್ ಕೇಸು.. ಅಂದ್ರೆ ಗೊತ್ತಾಯ್ತಲ್ಲ?

“ಅಂದ್ರೆ ಇರೋತನಕ…”

“ಯೋಚನೆ ಮಾಡಿದ್ರೇ ಗಾಬರಿಯಾಗತ್ತೆ…”

“ನೋಡ್ಕೊಳಕ್ಕೆ ಯಾರನ್ನಾದರೂ ಕರಕೊಂಡು ಬರಬೇಕು ಅಂದ್ರೆ ಸಿಗೋದು ಕಷ್ಟ… ಅಲ್ಲದೆ ಅಡಿಶನಲ್ ಬರ್ಡನ್ʼʼ

“ಈಗ ಇವರಿಗೆ ಕೆಲ್ಸ ಕಟ್ ಆಗೋದ್ರಿಂದ ಯಾವ ರೀತಿ ಕಾಂಟ್ರಿಬ್ಯೂಷನ್ ಇಲ್ಲ… ಸೊನ್ನೆ…”

ʻʻಈಗ ಹೇಗಿದ್ರೂ ಬರ್ಡನ್ ತಾನೆ… ತಲೆ ಮೇಲೆ ಬಂಡೆ”

“ಬರ್ಡನ್ ಎಂದರೆ ನೂರಕ್ಕೆ ನೂರು ಪಾಲು”

“ಹಾಗಾದ್ರೆ ನಮ್ಮ ಫ್ಯೂಚರ್ ಪೂರ್ತಿ ಗೋತಾ…”

“ಅಷ್ಟೇ ಅಲ್ಲ ಫ್ರೀಡಂ ಕೂಡ…”

“…….”

“…….”

“ಅಂದ್ಹಾಗೆ ಹಿಂದುಗಡೆ ಇರೋ ಔಟ್ ಹೌಸ್ನ ರಿನೊವೇಟ್ ಮಾಡಿ ಮನೆಯನ್ನು ಇಂಪ್ರೂ ಮಾಡೋ ಪ್ಲಾನ್ ಲಗಾಟ ಹೊಡೆದ ಹಾಗೇನೇ?…”

“ಇಷ್ಟಕ್ಕೂ ಈ ಪರಿಸ್ಥಿತೀಲಿ ಅವರೆಲ್ಲಿ ಒಪ್ತಾರೆ… ಅದೆಲ್ಲ ಈ ಮನೆ ನಮ್ಮ ಕೈಗೆ ಬಂದ ಮೇಲೆ…”

“ಸದ್ಯಕ್ಕೆ ನೋ ಎಸ್ಕೇಪ್…”

“ನೋ ಎಸ್ಕೇಪ್ ಅಷ್ಟೆ…”

ಅವರ ಮಾತುಗಳು ಮತ್ತೆ ಮತ್ತೆ ಡಿಕ್ಕಿ ಹೊಡೆಯುತ್ತಿದ್ದ ಹಾಗೆ ವಾಕಿಂಗ್ ಸ್ಟಿಕ್ ಜೊತೆ ಗೋಡೆಯನ್ನು ಹಿಡಿದು ಕಷ್ಟಪಟ್ಟು ತಮ್ಮ ರೂಂ ಸೇರಿ ಒಂದು ಗ್ಲಾಸ್ ನೀರು ಕುಡಿದರು. ನೀರಿನಷ್ಟೇ ಸಲೀಸಾಗಿ, ʻಬರ್ಡನ್ʼ, ʻಫ್ಯೂಚರ್ ಗೋತಾʼ, ʻನೋ ಫ್ರೀಡಂʼ, ʻಟರ್ಮಿನಲ್’ ಮುಂತಾದುವು ಒಳಗಿಳಿಯಲು ಕಷ್ಟವಾಗಿತ್ತು. ಅವು ಅವರನ್ನು ಸುತ್ತುವರಿದು ಮೈ ಸುಡುವಂತಾಗಿ ಕುತ್ತಿಗೆಯ ಸುತ್ತ, ಹಣೆಯ ಉದ್ದಗಲಕ್ಕೂ ತೆಳುವಾದ ಬೆವರಿನ ಪದರು ಕಾಣಿಸಿಕೊಂಡಿತು. ಮೈಯನ್ನೇ ಮರೆತು ಹಾಸಿಗೆಯಲ್ಲಿ ಮಲಗಿ ಮೈ ಚಾಚಿದವರಿಗೆ ಹೊರಜಗತ್ತಿನ ನಿಶ್ಯಬ್ದದ ಭಾರ ಮೆಲ್ಲನೆ ಅರಿವಾಗತೊಡಗಿತು. ಸ್ವಂತ ಅಪೇಕ್ಷೆಯಿಂದ ಏಕಾಂತದಲ್ಲಿದ್ದರೆ ಅದು ಬೇರೆ.. ಆದರೆ ವಿಚಿತ್ರ ಒತ್ತಡದಿಂದ ಒಂಟಿ ಎನಿಸಿದರೆ? ಅನಿಸಿದ್ದ ಮತ್ತು ಬಯಸಿದ್ದ ಎಲ್ಲವೂ ಸಾರಾಸಗಟು ಪಲ್ಟಿ ಹೊಡೆದು ಉರುಳಿದ್ದನ್ನು ಕಂಡು… ಎಲ್ಲವೂ ಖಾಲಿ ಖಾಲಿ. ಬರೀ ಸೊನ್ನೆಗಳದೇ ಸಾಮ್ರಾಜ್ಯ ಎನ್ನಿಸಿತು. ಬೇರೆಲ್ಲವನ್ನೂ ಸಹಿಸಬಹುದರೂ ʻಬರ್ಡನ್ʼ, ʻತಲೆ ಮೇಲೆ ಬಂಡೆʼ ತಡೆಯಲಾಗಲಿಲ್ಲ.

ಬೆಳಿಗ್ಗೆ ಎಂದಿನಂತೆ ವಿಶ್ವನಾಥ-ನಾಗಿಣಿ ಹೊರಟಮೇಲೆ ಬೀರುವಿನ ಬಳಿ ಕಷ್ಟದಿಂದ ಹೋಗಿ ಅದರೊಳಗಿಂದ ತುಂಬಾ ಅಭಿಮಾನ ಪಟ್ಟುಕೊಂಡಿದ್ದ ತಮ್ಮ ಡಿಗ್ರಿ ಸರ್ಟಿಫಿಕೇಟ್, ಆಫೀಸಿನಿಂದ ಬಂದ ಸನ್ಮಾನದ ಹಾಳೆಗಳು ಮತ್ತು ಹುಚ್ಚು ಹಿಡಿಯುವಂತೆ ಮಾಡಿದ್ದ ಹೃದಯಕ್ಕೆ ಹತ್ತಿರ ಇರುತ್ತಿದ್ದ ಕೆಲವು ವಸ್ತುಗಳನ್ನೆಲ್ಲ ಒಟ್ಟುಮಾಡಿ ತೆಗೆದುಕೊಂಡು ಹೋಗಿ ಕಾಂಪೌಂಡಿನ ಮೂಲೆಯಲ್ಲಿ ಸುರುವಿ ಸೀಮೆಎಣ್ಣೆ ಹಾಕಿ ಸುಟ್ಟು ಬಿಟ್ಟರು. ಎಲ್ಲ ಮುಗಿದು ಬೂದಿ ಆಗುವ ತನಕ ಅದನ್ನೇ ನೋಡುತ್ತಿದ್ದರು. ಅಷ್ಟು ಸಮಯ ಅವರಿಗೆ ತಾವು ಮತ್ತು ಎದುರಿಗಿದ್ದ ಬೆಂಕಿ ಬಿಟ್ಟರೆ ಉಳಿದಿದ್ದೆಲ್ಲ ಸೊನ್ನೆ. ಅನಂತರ ತಲೆ ಎತ್ತಿದರು. ಸಿನಿಮಾದಲ್ಲಿ ರೆಪ್ಪೆ ಬಡಿತ ಬದಲಾಗುವುದರೊಳಗೆ ಎದುರಿಗೆ ಕಾಣುವ ದೃಶ್ಯ ಬದಲಾಗುವಂತೆ ಪರಿಚಿತ ಮನೆ, ವಸ್ತು, ವ್ಯಕ್ತಿಗಳೇ ಹಠಾತ್ ಬದಲಾದಂತೆ ಕಂಡು ಸುಮ್ಮನೆ ನಸುನಕ್ಕರು.

ಆ ದಿನ ಅವರಿಗೆ ವಿಶ್ವನಾಥ-ರಾಗಿಣಿ ಮನೆಯಲ್ಲಿ ಅತ್ತಿತ್ತ ಓಡಾಡುತ್ತಿರುವಾಗ ಕೀ ಕೊಟ್ಟ ಗೊಂಬೆಗಳಂತೆ ಕಂಡರು. ಏನು ಮಾಡಬೇಕೆಂದು ತಿಳಿಯದೆ ಕತ್ತಲ ಕಡೆಗೊಮ್ಮೆ ನೋಡಿ ಕಣ್ಮುಚ್ಚಿ ಸುಮ್ಮನಾದರು.

ರಂಗನಾಥ ಎಂದಿನಂತೆ ಕೆಲಸ ಮುಗಿಸಿ ಹೋಗುತ್ತಿದ್ದನಾದರೂ ಮೊದಲಿಗಿಂತ ಹೆಚ್ಚು ಹೊತ್ತು ತಮ್ಮ ಕಡೆ ನೋಡುತ್ತಿರುವಂತೆ ರಂಗಸ್ವಾಮಿಗೆ ಅನಿಸುವುದಕ್ಕೆ ಪ್ರಾರಂಭವಾಯಿತು. ಅವತ್ತು ಅವನು “ಹುಷಾರಿಲ್ವೇನೂ.. ಯಾಕೋ ಒಂಥರಾ ಇದ್ದೀರಿ” ಎಂದದ್ದಕ್ಕೆ ಕೃತಕವಾಗಿ ನಕ್ಕು, “ಹಾಗೇನಿಲ್ಲ” ಎಂದು ಹೇಳಿ ಕೈಯಾಡಿಸಿದರು. ಅನಂತರ ಬೇಕಂತಲೇ ಮಾತು ಬದಲಿಸಿ ಅವರಮ್ಮನ ಬಗ್ಗೆ ವಿಚಾರಿಸಿದರು. ಅವನು, “ಏನೋ ನಡೀತಾ ಇದೆ” ಎಂದ.

ರಂಗನಾಥನಿಗೆ ರಂಗಸ್ವಾಮಿ ಮನೆಯ ಕರೆಂಟ್ ಬಿಲ್, ನೀರಿನ ಬಿಲ್, ಫೋನಿನ ಬಿಲ್ ಬರುವ ಡೇಟ್ ಯಾವುದು ಮತ್ತು ಮನೆಗೆ ನೀರು ಬರುವ ದಿನ ಯಾವುದು, ಮನೆಗೆ ಬೇಕಾದ ಪ್ಲಂಬರ್ ಮತ್ತು ಕಾರ್ಪೆಂಟ್ ಕೆಲಸಗಳು ಯಾವುವು, ದಿನಸಿ ಅಂಗಡಿಯವನು ಯಾರು, ಅಂಗಡಿ ಎಷ್ಟು ದೂರ ಇದೆ, ಅವನ ಹೆಸರೇನು ಇತ್ಯಾದಿಯೆಲ್ಲ ಅವರೊಂದಿಗೆ ಅಡುವ ಮಾತುಗಳಿಂದ ಗೊತ್ತಿತ್ತು.

ಅಂದು ರಂಗನಾಥ ಬರುವುದಕ್ಕೆ ಇನ್ನೂ ಸ್ವಲ್ಪ ಸಮಯವಿತ್ತು. ಅವನು ಬರುವುದರೊಳಗೆ ಕಾಫಿ ಮಾಡಿಟ್ಟು ಅವನಿಗೆ ಸರ್ಪ್ರೈಸ್ ಮಾಡಿದರೆ ಹೇಗೆ ಎಂದು ವಾಕಿಂಗ್ ಸ್ಟಿಕ್ ಹಿಡಿದು ಎದ್ದು ಅಡುಗೆ ಮನೆಯ ಸಿಂಕ್ ನಲ್ಲಿದ್ದ ಕಾಫಿ ಪಾತ್ರೆಯನ್ನು ತೊಳೆಯಲು ನಲ್ಲಿ ತಿರುಗಿಸಿದರಷ್ಟೆ. ಬಿದ್ದುಬಿಟ್ಟರು. ವಾಕಿಂಗ್ ಸ್ಟಿಕ್ ಎಟುಕಲಾರದಷ್ಟು ದೂರ ಉರುಳಿಬಿತ್ತು. ಹಾಗೆ ಹೀಗೆ ಕೊಸರಾಡಿ ಕೈಯಾಡಿಸಿ ಏಳಲು ಪ್ರಯತ್ನಿಸಿದರು. ಸಾಧ್ಯವೇ ಆಗಲಿಲ್ಲ. ಈ ನಡುವೆ ನಲ್ಲಿಯಿಂದ ನೀರು ಸುರಿಯುತ್ತಲೇ ಇತ್ತು. ಮತ್ತೊಂದೆರಡು ಸಲ ಪ್ರಯತ್ನಿಸಿದರೂ ಸುತಾರಾಂ ಸಾಧ್ಯವಾಗಲಿಲ್ಲ. ಸಿಂಕ್ ತುಂಬಿ ನೀರು ಕೆಳಗೆ ಬೀಳುತ್ತಿತ್ತು. ಯಾರನ್ನಾದರೂ ಕೂಗಿ ಕರೆಯಲೇ ಎಂದುಕೊಂಡರು. ಅಕ್ಕಪಕ್ಕದ ಮನೆಯಲ್ಲಿ ಈ ಸಮಯದಲ್ಲಿ ಯಾರೂ ಇರುವುದಿಲ್ಲ. ಇನ್ನು ತಮ್ಮ ಮನೆಯ ಕೀ ಕೊಡುವವರು ಇರುವುದು ಸ್ವಲ್ಪ ದೂರವೇ. ಅವರಿಗೆ ತಿಳಿಸುವುದು ಹೇಗೆ? ವಿಶ್ವನಾಥ-ರಾಗಿಣಿ? ಇದಕ್ಕಿಂತ ಹೆಚ್ಚಿಗೆ ಅವರ ಮನಸ್ಸಿಗೆ ಏನೂ ಬರಲಿಲ್ಲ. ಹಾಗೆಯೇ ಅಕ್ಕಪಕ್ಕಕ್ಕೆ ತಿರುಗಿ ಜರುಗಿಕೊಳ್ಳುತ್ತಾ ಗೋಡೆಗೊರಗಿ ಕಾಲು ಚಾಚಿ ಕೂತರು. ನೀರು ಸುರಿಯುತ್ತಲೇ ಇತ್ತು. ಸ್ವಲ್ಪ ಹೊತ್ತು ಅದರ ಚಲನೆಯ ದಿಕ್ಕು, ಹೆಚ್ಚಾಗುತ್ತಿರುವ ಪ್ರಮಾಣ ಮುಂತಾದವನ್ನು ಗಮನಿಸುತ್ತಿದ್ದರು. ಅವರ ಹಿಮ್ಮಡಿ ಮುಳುಗಿತು. ಏನೂ ತೋಚದೆ ಸುಮ್ಮನೆ ಕುಳಿತರು. ನೀರು ಹೆಚ್ಚಾಗುತ್ತಿತ್ತು.

ಒಂದಷ್ಟು ಸಮಯ ಕಳೆದ ಮೇಲೆ ಮುಂಬಾಗಿಲು ತೆರೆಯಿತು. ಬಾಗಿಲು ಹತ್ತಿರಕ್ಕೂ ಬಂದ ನೀರನ್ನು ಕಂಡು ರಂಗನಾಥ ಹೌಹಾರಿ ಧಾವಿಸಿ ಬಂದ. ರಂಗಸ್ವಾಮಿ ರೆಪ್ಪೆ ಮಿಟುಕಿಸದೆ ಅವನ ಕಡೆ ನೋಡಿದರು. ಅವನು ಮೊದಲು ಮಾಡಿದ್ದು ನಲ್ಲಿ ನಿಲ್ಲಿಸುವ ಕೆಲಸ. ತಕ್ಷಣ ಹಜಾರಕ್ಕೆ ಹೋಗಿ ಕುರ್ಚಿಯೊಂದನ್ನು ತಂದ. ಮುಂಬಾಗಿಲಿಗೆ ಓಡಿಹೋಗಿ ಒಂದಿಬ್ಬರನ್ನು ಕರೆದು ಹಾಗೆ, ಹೀಗೆ ಎಂದು ಒಟ್ಟೊಟ್ಟಿಗೆ ಮಾತಾಡುತ್ತಾ ರಂಗಸ್ವಾಮಿಯನ್ನು ಕುರ್ಚಿಯಲ್ಲಿ ಕೂರಿಸಿದರು. ರಂಗಸ್ವಾಮಿ ಅವರ ಕಡೆ ನೋಡಿ ತುಟಿಯಾಡಿಸಿ ತಲೆ ಹಾಕಿದರು. ಬಂದವರು ಅಷ್ಟಕ್ಕೆ ಸುಮ್ಮನಾಗದೆ ಎಲ್ಲಂದರಲ್ಲಿ ಹರಡಿದ್ದ ನೀರನ್ನು ಒಟ್ಟುಮಾಡಿ ಬಕೀಟುಗಳಲ್ಲಿ ತುಂಬಿ ಹೊರಗೆ ಎಸೆಯುವುದಕ್ಕೆ ಮುಂದಾದರು. ಎಲ್ಲ ಒಂದು ಹದಕ್ಕೆ ಬಂದಮೇಲೆ ರಂಗನಾಥ “ಥ್ಯಾಂಕ್ಸ್” ಹೇಳಿದ್ದಕ್ಕೆ ರಂಗಸ್ವಾಮಿಯನ್ನು ತೋರಿಸಿ “ಅವರನ್ನ ನೋಡ್ಕೊಳಿ” ಎಂದು ಹೇಳಿ ಬಂದವರು ಹೊರಟರು. ರಂಗನಾಥ ನೆಲವನ್ನೆಲ್ಲ ಒಣಬಟ್ಟೆ ಹುಡುಕಿ ಒರೆಸಿದ. ಅನಂತರ ಎಲ್ಲ ಮಾಮೂಲಿನಂತಿದೆ ಎನ್ನುವ ಹಾಗೆ ತನ್ನ ಕೆಲಸ ಪೂರೈಸಿ, “ಸುಮ್ಮನೆ ಊಟ ಮಾಡಿ ಮಲಗಿಕೊಳ್ಳಿ” ಎಂದು ರಂಗಸ್ವಾಮಿಗೆ ಮಾತನಾಡಲು ಅವಕಾಶ ಕೊಡದೆ ಹೊರಟ.

ಸಂಜೆ ವಿಶ್ವನಾಥ-ರಾಗಿಣಿ ಹಿಂತಿರುಗಿದ ಮೇಲೆ ಸ್ವಲ್ಪ ಸಮಯದ ನಂತರ ಮೂರು-ನಾಲ್ಕು ಜನ ಗಂಡಸರು-ಹೆಂಗಸರು ಬಂದರು. ಅವರು ಹೆಚ್ಚು ಮಾತಾಡದೆ ಆದ ಘಟನೆಯನ್ನು ವಿವರಿಸಿ ಇನ್ನು ಮುಂದೆ ಹೀಗಾಗದಂತೆ ನೋಡಿಕೊಳ್ಳಿ ಎಂದು ಉಪದೇಶದ ಧ್ವನಿಯಲ್ಲಿ ಹೇಳಿದರು. ವಿಶ್ವನಾಥ-ರಾಗಿಣಿಗೆ ಮುಜುಗರವಾಯಿತು. ಜೊತೆಗೆ ಆದದ್ದನ್ನು ಇಲ್ಲಿಯ ತನಕ ತಮಗೆ ತಿಳಿಸದ ರಂಗಸ್ವಾಮಿಗೆ ಮೇಲೆ ಸಿಟ್ಟು ಬಂತು. ಅವರಿಗೆ ಕೇಳಿಸುವಂತೆ ಕೆಲವು, ಕೇಳಿಸದಂತೆ ಕೆಲವು ಮಾತುಗಳನ್ನಾಡಿದರು. ರಂಗಸ್ವಾಮಿ ಯಾವುದಕ್ಕೂ ಉತ್ತರಿಸದೆ ಸುಮ್ಮನಿದ್ದರು.

ಅವತ್ತೊಂದು ದಿನ ವಿಶ್ವನಾಥ ರಂಗಸ್ವಾಮಿ ಎದುರು ಡ್ರಾಯಿಂಗ್ ಒಂದನ್ನು ಹರಡಿ, “ಔಟ್ ಹೌಸನ್ನ ಒಂದಷ್ಟು ರಿನೊವೇಟ್ ಮಾಡಿದ್ರೆ ಒಳ್ಳೆ ರೆಂಟ್ ಬರತ್ತೆ… ಒಂದಷ್ಟು ಖರ್ಚಾಗತ್ತೆ ನಿಜ… ನಾನು, ಇವ್ಳು ಅದನ್ನ ನೋಡ್ಕೊತೀವಿ” ಎಂದ. ರಂಗಸ್ವಾಮಿ “ನಿಮ್ಮದೇನು ಬೇಡ… ನಂದೇ ಎಲ್ಲ ಬರುತ್ತಲ್ಲ… ಆಗ ನೋಡೋಣಂತೆ” ಎಂದು ಸ್ಪಷ್ಟ-ಅಸ್ಪಷ್ಟ ಮಾತು ಬೆರೆಸಿ ಹೇಳಿ ಮುಗಿಸಿದರು. ಅವರಿಬ್ಬರು ಏನೂ ತಿಳಿಯದೆ ಮುಖ ನೋಡಿಕೊಂಡರು.

ಇದಾದ ಮೂರ್ನಾಲ್ಕು ದಿನಗಳಲ್ಲಿ ರಂಗಸ್ವಾಮಿಗೆ ರಂಗನಾಥ ಮುಖಕ್ಕೆ ಮುಖ ಕೊಟ್ಟು ಮಾತನಾಡುತ್ತಿರಲಿಲ್ಲ. ಮಾರನೆಯ ದಿನ ಅವನು ಬರಲೇ ಇಲ್ಲ. ರಂಗಸ್ವಾಮಿ ಕಾಯುತ್ತ ಕುಳಿತರು. ಸುಸ್ತಾಗಿದ್ದರ ಜೊತೆ ಆಲೋಚನೆಗಿಟ್ಟುಕೊಂಡಿತು. ದಿನ ಕಳೆಯಿತಷ್ಟೆ. ಮಾರನೆಯ ದಿನವೂ ಅಷ್ಟೆ. ಗಂಟೆಗಳು ಉರುಳಿದವೇ ವಿನಃ ಪ್ರಯೋಜನವಾಗಲಿಲ್ಲ. ಅವರು ಎದ್ದರು. ತೋಚಿದಂತೆ ಬಟ್ಟೆ ಹಾಕಿಕೊಂಡು, ಮನೆಗೆ ಬೀಗ ಹಾಕಿ ರಸ್ತೆಗಳಿದು, ಆಟೋ ಹಿಡಿದರು.

ಸಂಜೆ ವಿಶ್ವನಾಥ ರಾಗಿಣಿ ಮನೆಗೆ ಬಂದಾಗ ಅವರಿಗೆ ಆಶ್ಚರ್ಯವೋ ಆಶ್ಚರ್ಯ. ಜೊತೆಗೆ ಗಾಬರಿ. ಏನೋ ಅನಾಹುತದ ಸೂಚನೆ. ಜೊತೆಗೆ ಹಲವು ಅನುಮಾನಗಳು ಕೂಡ. ಅಕ್ಕಪಕ್ಕದವರನ್ನು ಕೇಳಿದರೆ ಅವರಿಗೆ ದೊರೆತದ್ದು ಇನ್ನಷ್ಟು ಆಶ್ಚರ್ಯವಲ್ಲದೆ ಮತ್ತೇನಿಲ್ಲ. ಅವರಿಗೆ ಗೊಂದಲವೋ ಗೊಂದಲ. ಫೋನ್ ಮಾಡಬೇಕೆಂದರೆ ಯಾರಿಗೆಂದು ಬಗೆಹರಿಯಲಿಲ್ಲ. ರಂಗಸ್ವಾಮಿಯವರ ಮೊಬೈಲು ಸ್ವಿಚ್ ಆಫ್ ಆಗಿತ್ತು. ಅವರ ಸ್ನೇಹಿತರು? ಗೊತ್ತೇ ಇಲ್ಲ. ಪೊಲೀಸ್ ಕಂಪ್ಲೇಂಟ್ ಕೊಡುವುದು ಎಂಬ ಆಲೋಚನೆ ಕೂಡ ಬಂತು. ಅನಂತರ ತಟ್ಟನೆ ಏನೋ ಹೊಳೆದಂತೆ ವಿಶ್ವನಾಥ ಎದ್ದ. “ಏನ್ಮಾಡ್ತಿದೀರಿ..” ಎಂದು ರಾಗಿಣಿ ಕೇಳುತ್ತಿದ್ದರೂ ಏನಾದರೂ ಚೀಟಿ ಇತ್ಯಾದಿ ಸಿಗುತ್ತದೆಯೋ ಎಂದು ಟೇಬಲ್ ಮೇಲೆ, ಡ್ರಾ ಎಳೆದು ನೋಡಿದರು. ಏನೂ ಸಿಗದೆ ಸುಮ್ಮನೆ ಕುಳಿತರು.

ಅನಂತರ ಸಾಕಷ್ಟು ಸಮಯ ಕಳೆದ ಮೇಲೆ ಮನೆ ಮುಂದೆ ಕ್ಯಾಬ್ ಒಂದು ಬಂದು ನಿಂತಿತು. ರಂಗನಾಥ ಕೆಳಗಿಳಿದು ರಂಗಸ್ವಾಮಿಯವರನ್ನು ಜಾಗರೂಕತೆಯಿಂದ ಕೆಳಗಿಳಿಸಿದ. ರಂಗನಾಥನ ತಾಯಿಯ ಜೊತೆಗೆ ಸೋದರ ಮಾವನ ಮಗ ಕೂಡ ಇಳಿದ. ವಿಶ್ವನಾಥ-ರಾಗಿಣಿ ಪರಸ್ಪರ ಮುಖ ನೋಡಿಕೊಂಡರು. ಒಂದಷ್ಟು ಮುಂದೆ ಬಂದ ರಂಗಸ್ವಾಮಿ ಸಣ್ಣಗೆ ನಗುತ್ತ ಪಕ್ಕಕ್ಕೆ ಸರಿದು ಕೈ ತೋರಿಸಿ ನಿಂತರು. ಅವರೆಲ್ಲರೂ ಔಟ್ ಹೌಸಿನ ಕಡೆ ಹೊರಟರು. ವಿಶ್ವನಾಥ-ರಾಗಿಣಿ ನೋಡುತ್ತಲೇ ಇದ್ದರು.