ಇವರೆಲ್ಲ ಎಷ್ಟು ಸುಖವಾಗಿದ್ದಾರೆ, ಆರಾಮವಾಗಿದ್ದಾರೆ, ಯಾವುದೇ ಗೊಂದಲವಿಲ್ಲ, ತಳಮಳವಿಲ್ಲ. ಮುಖದಲ್ಲಿ ಅದೆಷ್ಟು ಜೀವಂತಿಕೆ, ಆರೋಗ್ಯ, ಉಲ್ಲಾಸ. ಯಾವುದರಲ್ಲೂ ಆತುರವಿಲ್ಲ, ಧಾವಂತವಿಲ್ಲ. ಪ್ರತಿ ಕ್ಷಣವನ್ನೂ ವಿವರವಾಗಿ, ವಿರಾಮವಾಗಿ ಅನುಭವಿಸುತ್ತಿದ್ದಾರೆ. ವಾಯುವಿಹಾರದ ಸಮಯದಲ್ಲಿ. ಟ್ರಾಮ್ ಒಳಗಡೆ ಕುಳಿತಾಗ, ಮಾರ್ಕೆಟ್‌ನಲ್ಲಿ ವ್ಯಾಪಾರ ಮಾಡುವಾಗ, ಸ್ಕೂಲ್ ಬಳಿ ಮಕ್ಕಳನ್ನು ಬಿಡಲು ಬರುವಾಗ ನೋಡಿದ್ದೇನೆ. ಎಲ್ಲರೂ ಬಿಳಿ ಬಣ್ಣದವರು, ಕೆಂಪು ಬಣ್ಣದವರು. ತುಂಬಾ ಸುಖವಾಗಿದ್ದಾರೆ, ಸಂತೃಪ್ತಿಯಿಂದಿದ್ದಾರೆ ಎಂಬ ಭಾವನೆ. ಸರಿ, ಅವರು ಸಂತೋಷವಾಗಿದ್ದರೆ, ಸುಖವಾಗಿದ್ದರೆ ನನಗೇಕೆ ಈ ರೀತಿಯ ಅಸೂಯೆ, ದ್ವೇಷ?
ಕೆ. ಸತ್ಯನಾರಾಯಣ ಬರೆಯುವ ಪ್ರವಾಸ ಪ್ರಬಂಧಗಳ “ನೆದರ್‌ಲ್ಯಾಂಡ್ಸ್ ಬಾಣಂತನ” ಸರಣಿಯ ಎರಡನೆಯ ಬರಹ

ಸಹಿಸಲಾಗದಷ್ಟು ಉತ್ಕಟವಾಗಿಬಿಟ್ಟಿತು.
ದೇಹದೊಳಗಡೆಯೆಲ್ಲಾ ವಿಪರೀತ ಹಿಂಸೆ.
ಯಾವ ಕ್ಷಣದಲ್ಲಾದರೂ ವಾಂತಿ ಮಾಡಿಬಿಡುವೆ ಎಂಬ ಭಯ.
ತಲೆಸುತ್ತು ಬಂತು.
ಆಯ ತಪ್ಪಿ ಬೀಳುವೆ ಎನಿಸಿತು.
ನಾನು ಉರಿಯತ್ತಿದ್ದೇನೆ,
ಕೆಂಡಾ ಮಂಡಲವಾಗಿ ಉರಿಯುತ್ತಿದ್ದೇನೆ.
ಯಾರಾದರೂ ಎದುರಿಗೆ ಬಂದರೆ ದಹದಹಿಸಿ ಉರಿದುಹೋಗಿಬಿಡಬಹುದು.

ಆಮ್‌ಸ್ಟರ್‌ಡ್ಯಾಂನ ಕಬಾಲ್ ಬೀದಿ. ಪ್ರವಾಸಿಗರು, ಪಟ್ಟಣದ ನಾಗರಿಕರು ಇಬ್ಬರೂ ವಾರಾಂತ್ಯದಲ್ಲಿ ಮೋಜಿಗೆಂದು ಬಂದು ಮುಗಿಬಿದ್ದಿದ್ದಾರೆ. ಮುಂಬೈ, ಪ್ಯಾರಿಸ್, ನ್ಯೂಯಾರ್ಕ್ ನಗರಗಳ ರೀತಿಯ ಜನಸಂದಣಿ. ಸಂಜೆ ಸುಮಾರು ಆರೂವರೆಯ ಸಮಯ. ಬೇಸಿಗೆಯಾದ್ದರಿಂದ ಬೆಳಕು ಇನ್ನೂ ಪ್ರಖರವಾಗಿದೆ.

ನನ್ನ ದ್ವೇಷ, ಅಸಹನೆ ಮುಗಿಲು ಮುಟ್ಟಿತು. ಆದರೆ ಅದು ಅವತ್ತು ಆ ಕ್ಷಣದಲ್ಲಿ ಹುಟ್ಟಿದ್ದಲ್ಲ.

ನೆದರ್‌ಲ್ಯಾಂಡ್ಸ್‌ನ ಮೂರನೇ ಪ್ರವಾಸಕ್ಕೆ ಬಂದು ಇಪ್ಪತ್ತು ದಿನಗಳಾಗಿದ್ದವು. ನನ್ನಲ್ಲಿ ಒಂದು ವಿಚಿತ್ರ ಬದಲಾವಣೆಯನ್ನು ಗಮನಿಸಿದೆ.

ಯಾರೇ ಬಿಳಿಯರನ್ನು, ಕೆಂಪಗಿರುವವರನ್ನು ಕಂಡರೆ ಸಾಕು, ಒಂದು ರೀತಿಯ ದ್ವೇಷ, ಅಸಹನೆ ಮನಸ್ಸಿನಲ್ಲಿ ತಕ್ಷಣ ಮೂಡಿಬಿಡುತ್ತಿತ್ತು. ಮೊದಲನೇ ದಿನ ಇದು ಮನಸ್ಸಿನಲ್ಲಿ ಹಾದುಹೋಗುವ ಲಹರಿ ಅನಿಸಿತು. ಆದರೆ ಪ್ರತಿ ದಿನವೂ ಯಾರೇ ಬಿಳಿಯರನ್ನು, ಕೆಂಪು ಬಣ್ಣದವರನ್ನು ನೋಡಿದರೂ ಈ ಭಾವನೆ ಮತ್ತಷ್ಟು ಖಚಿತವಾಗುತ್ತಿತ್ತು. ಮನಸ್ಸು ರೊಚ್ಚಿಗೇಳುತ್ತಿತ್ತು.

ಇವರೆಲ್ಲ ಎಷ್ಟು ಸುಖವಾಗಿದ್ದಾರೆ, ಆರಾಮವಾಗಿದ್ದಾರೆ, ಯಾವುದೇ ಗೊಂದಲವಿಲ್ಲ, ತಳಮಳವಿಲ್ಲ. ಮುಖದಲ್ಲಿ ಅದೆಷ್ಟು ಜೀವಂತಿಕೆ, ಆರೋಗ್ಯ, ಉಲ್ಲಾಸ. ಯಾವುದರಲ್ಲೂ ಆತುರವಿಲ್ಲ, ಧಾವಂತವಿಲ್ಲ. ಪ್ರತಿ ಕ್ಷಣವನ್ನೂ ವಿವರವಾಗಿ, ವಿರಾಮವಾಗಿ ಅನುಭವಿಸುತ್ತಿದ್ದಾರೆ. ವಾಯುವಿಹಾರದ ಸಮಯದಲ್ಲಿ. ಟ್ರಾಮ್ ಒಳಗಡೆ ಕುಳಿತಾಗ, ಮಾರ್ಕೆಟ್‌ನಲ್ಲಿ ವ್ಯಾಪಾರ ಮಾಡುವಾಗ, ಸ್ಕೂಲ್ ಬಳಿ ಮಕ್ಕಳನ್ನು ಬಿಡಲು ಬರುವಾಗ ನೋಡಿದ್ದೇನೆ. ಎಲ್ಲರೂ ಬಿಳಿ ಬಣ್ಣದವರು, ಕೆಂಪು ಬಣ್ಣದವರು. ತುಂಬಾ ಸುಖವಾಗಿದ್ದಾರೆ, ಸಂತೃಪ್ತಿಯಿಂದಿದ್ದಾರೆ ಎಂಬ ಭಾವನೆ. ಸರಿ, ಅವರು ಸಂತೋಷವಾಗಿದ್ದರೆ, ಸುಖವಾಗಿದ್ದರೆ ನನಗೇಕೆ ಈ ರೀತಿಯ ಅಸೂಯೆ, ದ್ವೇಷ? ಇದೇನೂ ಆಕಸ್ಮಿಕವಲ್ಲ, ತಾತ್ಕಾಲಿಕವೂ ಅಲ್ಲ. ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ನನಗೂ ಹಿಂಸೆ. ಇವರೆಲ್ಲ ಇಷ್ಟೊಂದು ಸುಖಕ್ಕೆ, ನೆಮ್ಮದಿಗೆ, ಸಂತೋಷಕ್ಕೆ ಅನರ್ಹರೆಂದೇ? ನಾನು ಮಾತ್ರ ಅರ್ಹನೆಂದೇ?

ಏಕೋ ಈ ಭಾವನೆ ನನ್ನಲ್ಲಿ ಶಾಶ್ವತವಾಗಿ ಉಳಿದುಬಿಡಬಹುದು. ಇವರೆಲ್ಲರೂ ಅವರವರ ಜಗತ್ತಿನಲ್ಲಿ ಮಗ್ನರಾಗಿದ್ದಾರೆ, ನನ್ನಂಥವರ ಅಭಿಪ್ರಾಯ, ನಿಲುವುಗಳಿಗೆ ಕಾಯದೇ ಎಂಬುದು ಕೂಡ ಈ ದ್ವೇಷಕ್ಕೆ ಒಂದು ಕಾರಣವಿರಬಹುದೇ?

ನನಗೆ ಎಪ್ಪತ್ತು ವರ್ಷ ಇನ್ನೇನು ತುಂಬುತ್ತದೆ. ಇದುವರೆಗಿನ ಅನುಭವ, ಓದು, ಚಿಂತನೆ, ಪ್ರವಾಸ, ಬರವಣಿಗೆ – ಇದಕ್ಕೆಲ್ಲ ಏನಾಯಿತು? ಇವರು ಇಲ್ಲಿ ಹೀಗೆ ಹುಟ್ಟಿರುವುದು, ಇಷ್ಟೊಂದು ಸುಖವಾಗಿರುವುದು, ಯಾವುದೂ ಅವರ ಆಯ್ಕೆಯಲ್ಲ, ಉದ್ದೇಶಪೂರ್ವಕವೂ ಅಲ್ಲ. ಒಂದು ಕಾಲಕ್ಕೆ ಇವರೆಲ್ಲ ವಸಾಹತುಶಾಹಿ ದೇಶಕ್ಕೆ ಸೇರಿದವರು. ನಮ್ಮ ದೇಶದ, ನಮ್ಮಂಥ ದೇಶದ ಸಂಪನ್ಮೂಲಗಳನ್ನು ಕೊಳ್ಳೆ ಹೊಡೆದವರು. ಅದರಿಂದಾಗಿ ಅಭಿವೃದ್ಧಿ ಪಥದಲ್ಲಿ ನಮಗಿಂತ ನೂರಾರು ವರ್ಷ, ನಾಲ್ಕಾರು ತಲೆಮಾರು ಮುಂದೆ ಹೋದರು. ಈಗ ಎಲ್ಲವೂ ಅವರಿಗೆ ಸುಲಭ, ಸಲೀಸು, ಸುಂದರ. ಆದರೆ ಇದಕ್ಕೆಲ್ಲ ಇವರು, ಈಗಿನವರು ಹೇಗೆ ಹೊಣೆ? ಇತಿಹಾಸದ ತಪ್ಪುಗಳಿಗೆಲ್ಲ ಒಂದು ದೇಶ, ಒಂದು ಸಮಾಜ ಹೊಣೆಯಾಗಬಹುದೇ ಹೊರತು, ಮನುಷ್ಯರಲ್ಲ, ವ್ಯಕ್ತಿಗಳಲ್ಲ. ನಾನೇ ಅವರ ಸ್ಥಾನದಲ್ಲಿದ್ದಿದ್ದರೆ, ಅವರು ನನ್ನ ಸ್ಥಾನದಲ್ಲಿದ್ದಿದ್ದರೆ, ಅವರು ನನ್ನನ್ನು ಹೀಗೇ ಕಂಡಿದ್ದಿದ್ದರೆ, ನಾನು ಅದನ್ನು ಒಪ್ಪಿಕೊಳ್ಳುತ್ತಿದ್ದೆನೇ? ಖಂಡಿತ ಇಲ್ಲ.

ಇಲ್ಲಿನ ಸರ್ಕಾರ, ಸಮಾಜ, ಚರಿತ್ರೆಯ ಈ ಹೊಣೆಯನ್ನು, ಈ ಜವಾಬ್ದಾರಿಯನ್ನು ಒಪ್ಪಿಕೊಂಡಿದ್ದರೆ, ಒಪ್ಪಿಕೊಂಡಿದ್ದೇವೆಂದು ನನ್ನ ಬಳಿ ಬಂದು ನಿವೇದಿಸಿಕೊಂಡಿದ್ದರೆ, ನನ್ನಲ್ಲಿ ದ್ವೇಷ ಕಡಿಮೆ ಆಗುತ್ತಿತ್ತೇ?

ಅಲ್ಲದೆ, ಈಗ ನನ್ನ ಮಕ್ಕಳೇ ಇಲ್ಲಿಗೆ ಬಂದಿದ್ದಾರೆ, ಇಲ್ಲಿಯ ಜೀವನಶೈಲಿ, ಶ್ರೀಮಂತಿಕೆ, ವೈಭೋಗ, ಎಲ್ಲವನ್ನೂ ಅನುಭವಿಸುತ್ತಿದ್ದಾರೆ, ಸಂತೋಷವಾಗಿದ್ದಾರೆ. ಈ ಕಾರಣಕ್ಕಾಗಿಯಾದರೂ ನನ್ನ ಇಷ್ಟೊಂದು ಉತ್ಕಟ, ನಿರಂತರ ದ್ವೇಷ ಇರಬಾರದಿತ್ತು.

*****

ಈ ಭಾವನೆ, ತೊಳಲಾಟಗಳಿಂದ ಹೊರಬರಲು ತುಂಬಾ ದಿನ ಒದ್ದಾಡಿದೆ. ಇಲ್ಲಿ ಇದು ಹೇಳುವಷ್ಟು ಸುಲಭವಲ್ಲ. ನಕಾರಾತ್ಮಕ ಭಾವನೆಗಳು ಕ್ರಮೇಣ ಕಡಿಮೆಯಾದವು ಎಂಬುದು ನಿಜ.

ನಮ್ಮ ಓದು, ಅನುಭವ, ವಿಚಾರಗಳೆಲ್ಲ ಏನೇ ಇದ್ದರೂ, ಭಾವನೆ, ಸಂವೇದನೆಗಳ ಮಟ್ಟದಲ್ಲಿ ನಾವುಗಳು ಪ್ರಬುದ್ಧರಾಗಿರುವುದಿಲ್ಲ. ಹಾಗಾಗಿ, ವಿದೇಶ ಪ್ರವಾಸ, ಅನುಭವಗಳ ಬಗ್ಗೆ ಬರೆಯುವಾಗ ಎಚ್ಚರದಿಂದಿರಬೇಕು.

ನನ್ನ ಪ್ರವಾಸ-ವಾಸದ ಉಳಿದ ದಿನಗಳ ಮಟ್ಟಿಗೆ ಇಂತಹ ನಕಾರಾತ್ಮಕ ಭಾವನೆ ಮತ್ತ ಮತ್ತೆ ಮೂಡದಿರಲಿ ಎಂದು ಪ್ರಾರ್ಥಿಸುವೆ. ಪ್ರವಾಸವು ನಮಗೆ ಕಥನವನ್ನು ಮಾತ್ರ ಹೇಳುವುದಿಲ್ಲ, ನಮ್ಮನ್ನು ನಾವು ತಿದ್ದಿಕೊಳ್ಳಲು ಕೂಡ ದಾರಿಯನ್ನು ತೆರೆಯುತ್ತದೆ.

(ಹಿಂದಿನ ಕಂತು: ವಿದೇಶಿ ಪ್ರವಾಸಾನುಭವ ಅಂದರೇನು?)