1887 ಜನವರಿ, 28ರಂದು ಅಡಿಪಾಯ ಅಗೆಯಲು ಪ್ರಾರಂಭಿಸಿ 1889 ಮಾರ್ಚ್ 31ರಂದು ಗೋಪುರವನ್ನು ಕಟ್ಟಿ ಮುಗಿಸಲಾಯಿತು. ಇಪ್ಪತ್ತು ವರ್ಷಗಳಲ್ಲಿ ಗೋಪುರವನ್ನು ಕೆಡವಲು ಮೊದಲಿಗೆ ತೀರ್ಮಾನಿಸಲಾಗಿತ್ತು. ಜನರು ಮೊದಲಿಗೆ ಗೋಪುರ ತುಂಬಾ ಕೆಟ್ಟದಾಗಿ ಕಾಣಿಸುತ್ತಿದೆ, ಪ್ಯಾರಿಸ್ ನಗರದ ಅಂದವನ್ನು ಕೆಡಿಸಿಬಿಟ್ಟಿದೆ ಎಂದು ದೂರಿದರು. ಆದರೆ ಅದು ಮುಂದಿನ ದಿನಗಳಲ್ಲಿ ಪ್ಯಾರಿಸ್‌ಗೆ ದೊಡ್ಡ ಆಸ್ತಿಯಾಗಿ ಮಾರ್ಪಟ್ಟಿತು. ಮುಂದಿನ ದಿನಗಳಲ್ಲಿ ಗೋಪುರದ ಮೇಲೆ ಸಂವಹನ, ಗುರುತ್ವಾಕರ್ಷಣೆ, ವಿದ್ಯುಚ್ಛಕ್ತಿ ಮತ್ತು ಪವನಶಾಸ್ತ್ರ ಪ್ರಯೋಗಾಲಯವನ್ನು ಅದರ ಮೇಲೆ ಸ್ಥಾಪನೆ ಮಾಡಲಾಯಿತು. ಯುದ್ಧಗಳ ಕಾಲದಲ್ಲಿ ಗೋಪುರವನ್ನು ಮಿಲಿಟರಿ ಸಂವಹನಕ್ಕಾಗಿ ವೈರ್‌ಲೆಸ್ ಟೆಲಿಗ್ರಾಫ್ ಟ್ರಾನ್ಸ್‌ಮೀಟರ್ ಆಗಿ ಬಳಸಿಕೊಳ್ಳಲಾಯಿತು.
ಪ್ಯಾರಿಸ್‌ನಲ್ಲಿ ಓಡಾಡಿದ ಅನುಭವಗಳ ಕುರಿತು ಡಾ. ಎಂ. ವೆಂಕಟಸ್ವಾಮಿ ಪ್ರವಾಸ ಕಥನದ ಮೂರನೆಯ ಭಾಗ ನಿಮ್ಮ ಓದಿಗೆ

2023, ಅಕ್ಟೋಬರ್ 11ರಂದು ಮಧ್ಯಾಹ್ನ 1.30ಕ್ಕೆ ಚಳಿ ಮತ್ತು ನವಿರು ಬಿಸಿಲಿನಲ್ಲಿ ಪ್ಯಾಕೇಜ್ ಟೂರಿನ 26 ಜನರು ಐಫೆಲ್ ಟವರ್ ಮುಂದೆ ಸಾಲಿನಲ್ಲಿ ನಿಂತುಕೊಂಡಿದ್ದೆವು. ಮೊದಲ ನೋಟಕ್ಕೆ ಐಫೆಲ್ ಟವರ್ ನನಗೆ ಭೂಗರ್ಭವನ್ನೇ ಬಗೆದು ನೋಡುವ ಗಣಿಯ ಮೇಲಿನ ಅಸ್ಥಿಪಂಜರದಂತೆ ಕಾಣಿಸಿಬಿಟ್ಟಿತು. ಇದೆಂತಹ ರಚನೆ? ಇದೆಂತಹ ಕಟ್ಟಡ? ಇದು ಕಲೆಯೊ ಕಬ್ಬಿಣದ ಬಲೆಯೊ ಅರ್ಥವಾಗಲಿಲ್ಲ. ಪ್ಯಾರಿಸ್‌ನ ಗುಸ್ಟಾವ್ ಐಫೆಲ್ ಗೋಪುರ ನೋಡಿದ ಗಾಂಧೀಜಿ ಅವರಿಗೆ `ಇದೊಂದು ಮನುಷ್ಯನ ಮಕ್ಕಳಾಟಿಕೆಯಂತಿರುವ ಸೌಂದರ್ಯಹೀನ ಬೃಹತ್ ಅವಿವೇಕದ ಪ್ರತೀಕ’ ಲಿಯೋ ಟಾಲ್‌ಸ್ಟಾಯ್ ಹೇಳಿದ ಮಾತು ಜ್ಞಾಪಕಕ್ಕೆ ಬಂದಿತಂತೆ. ಐಫೆಲ್ ಕಂಪನಿಯ ಇಬ್ಬರು ಇಂಜಿನಿಯರುಗಳು ಎಮಿಲ ನೌಗಿಯರ್ ಮತ್ತು ಮೌರಿಸ್ ಕೊಚ್ಲಿನ್ ಅವರಿಗೆ 1884ರಲ್ಲಿ ಅತ್ಯಂತ ಎತ್ತರದ ಗೋಪುರವನ್ನು ಕಟ್ಟುವ ಆಲೋಚನೆ ಬಂದು ಅದನ್ನು ಕಟ್ಟಿದ ಮೇಲೆ ಐಫೆಲ್ ಕಂಪನಿಯ ಮುಖ್ಯಸ್ಥ ಗುಸ್ಟಾವ್ ಐಫೆಲ್ ಅವರ ಹೆಸರನ್ನೇ ಗೋಪುರಕ್ಕೆ ಇಡಲಾಯಿತು. ಈ ಗೋಪುರ ಕಟ್ಟುವಾಗ ಒಬ್ಬ ಕಾರ್ಮಿಕ ಮಾತ್ರ ಸತ್ತ ಎನ್ನಲಾಗಿದೆ!

ಈ ವಿಕಾರ ಮತ್ತು ದೈತ್ಯ ಕಬ್ಬಿಣದ ಗೋಪುರವನ್ನು ಕೇವಲ ಎರಡು ವರ್ಷಗಳಲ್ಲಿ (1887-1889) ಗುಸ್ಟಾವ್ ಕಂಪನಿ ಪ್ಯಾರೀಸ್‌ನ ಚಾಂಪ್ ಡಿ ಮಾರ್ಸ್‌ನಲ್ಲಿ ಕಟ್ಟಿ ಮುಗಿಸಿತು. ಇಡೀ ಗೋಪುರವನ್ನು ಮೃದು ಲ್ಯಾಟಿಸ್ ಕಬ್ಬಿಣದಿಂದ ಕಟ್ಟಲಾಗಿದೆ. ಸ್ಥಳೀಯವಾಗಿ ಇದನ್ನು `ಲಾ ಡೇಮ್ ಡಿ ಫೆರ್’ (ಐರನ್ ಲೇಡಿ) ಎಂದು ಕರೆಯಲಾಗುತ್ತದೆ. ಇದನ್ನು 1889ರ ವರ್ಲ್ಡ್ ಫೇರ್ ಕೇಂದ್ರಬಿಂದುವಾಗಿ ಮತ್ತು ಫ್ರೆಂಚ್ ಕ್ರಾಂತಿಯ ಶತಮಾನೋತ್ಸವದ ಅಂಗವಾಗಿ ನಿರ್ಮಿಸಲಾಯಿತು. ಆರಂಭದಲ್ಲಿ ಇದರ ವಿನ್ಯಾಸವನ್ನು ಫ್ರಾನ್ಸ್‌ನ ಕೆಲವು ಪ್ರಮುಖ ಬುದ್ಧಿಜೀವಿಗಳು ಮತ್ತು ಕಲಾವಿದರು ಟೀಕಿಸಿದರು. ಆದರೆ ಮುಂದಿನ ದಿನಗಳಲ್ಲಿ ಈ ಗೋಪುರ ಫ್ರಾನ್ಸ್‌ನ ಜಾಗತಿಕ ಸಾಂಸ್ಕೃತಿಕ ಸಂಕೇತವಾಗಿ ವಿಶ್ವದಾದ್ಯಂತ ಗುರುತಿಸಲ್ಪಟ್ಟ ಒಂದು ಪ್ರಸಿದ್ಧ ಸ್ಮಾರಕವಾಗಿಬಿಟ್ಟಿತು.

(ಐಫೆಲ್ ಗೋಪುರದ ಒಂದು ನೋಟ)

2022ರಲ್ಲಿ ಈ ಗೋಪುರ ಜಗತ್ತಿನಾದ್ಯಂತ 5,889,000 ಪ್ರವಾಸಿಗರನ್ನು ತನ್ನ ಕಡೆಗೆ ಸೆಳೆಯುವುದರೊಂದಿಗೆ ಹೆಚ್ಚು ಹಣವನ್ನು ಸಂಗ್ರಹ ಮಾಡಿತು. 2015ರಲ್ಲಿ 6.91 ದಶಲಕ್ಷ ಜನರು ಈ ಗೋಪುರ ಹತ್ತಿ ಇಳಿದರು. 1964ರಲ್ಲಿ ಈ ಗೋಪುರವನ್ನು ಐತಿಹಾಸಿಕ ಸ್ಮಾರಕ ಎಂದು ಗುರುತಿಸಿ ಯುನೆಸ್ಕೋ ವಿಶ್ವ ಪರಂಪರೆಯ ತಾಣವೆಂದು ಘೋಷಿಸಲಾಯಿತು. ಐಫೆಲ್ ಕಬ್ಬಿಣ ಗೋಪುರ 330 (1,083 ಅಡಿಗಳು) ಮೀಟರುಗಳ ಎತ್ತರ ಅಂದರೆ 81 ಅಂತಸ್ತುಗಳ ಕಟ್ಟಡದ ಎತ್ತರವಿದೆ. ಈ ಗೋಪುರ ಮೊದಲು 200-300 ಮೀಟರುಗಳ ಎತ್ತರವನ್ನು ಮೀರಿದ ವಿಶ್ವದ ಮೊದಲ ರಚನೆಯಾಗಿತ್ತು. 1947ರಲ್ಲಿ ಗೋಪುರದ ತುದಿಯ ಮೇಲೆ ಪ್ರಸಾರ ವೈಮಾನಿಕ ಗೋಪುರವನ್ನು ಸೇರ್ಪಡೆ ಮಾಡಿ ಗೋಪುರದ ಎತ್ತರವನ್ನು ಇನ್ನೂ 17 ಅಡಿಗಳಷ್ಟು ಹೆಚ್ಚಿಸಲಾಯಿತು.

ಗೋಪುರ ಮುಖ್ಯವಾಗಿ ಮೂರು ಹಂತಗಳನ್ನು ಹೊಂದಿದ್ದು, ಮೊದಲ ಮತ್ತು ಎರಡನೇ ಹಂತಗಳಲ್ಲಿ ರೆಸ್ಟಾರೆಂಟ್‌ಗಳಿವೆ. ಮೂರನೇ ಮಹಡಿಯಲ್ಲಿ (ನೆಲಮಟ್ಟದಿಂದ 906 ಅಡಿಗಳ ಎತ್ತರ) ಸಾರ್ವಜನಿಕರು ಪ್ರವೇಶಿಸಬಹುದಾದ ಅತ್ಯುನ್ನತ ವೀಕ್ಷಣಾ ಡೆಕ್(ಅಟ್ಟ)ವನ್ನು ಸುತ್ತಲೂ ನಿರ್ಮಿಸಲಾಗಿದೆ. ಮೆಟ್ಟಿಲುಗಳ ಮೂಲಕ ಮೂರನೆಯ ಹಂತದವರೆಗೂ ಹತ್ತಲು ಟಿಕೇಟುಗಳನ್ನು ಖರೀದಿಸಬೇಕಾಗುತ್ತದೆ. ನೆಲಮಟ್ಟದಿಂದ ಮೊದಲ ಹಂತಕ್ಕೆ 300 ಮೆಟ್ಟಿಲು, ಎರಡನೇ ಹಂತಕ್ಕೆ 600 ಮೆಟ್ಟಿಲನ್ನು ಹತ್ತಬೇಕಾಗುತ್ತದೆ. ಕೆಳಗಿನಿಂದ ಮೂರನೇ ಹಂತಕ್ಕೆ ಒಮ್ಮೆಲೇ ಲಿಫ್ಟ್ ಮೂಲಕವೂ ಹೋಗಬಹುದು. ಇದಕ್ಕೆ 19 ಯೂರೋಗಳನ್ನು ತೆರಬೇಕಾಗುತ್ತದೆ. ಇದರ ಮೇಲ್ಭಾಗದಲ್ಲಿ ಗುಸ್ಟಾವ್ ಐಫೆಲ್ ಅವರ ಖಾಸಗಿ ಬಳಕೆಗಾಗಿ ನಿರ್ಮಿಸಲಾದ ಮಹಡಿ ಇದ್ದು ಇದನ್ನು ಜೀನ್ ಲಾಚೇನ್ ಎಂಬ ಶಿಲ್ಪಿ ಪೀಠೋಪಕರಣಗಳಿಂದ ಅಲಂಕರಿಸಿದ್ದಾನೆ. ಇಲ್ಲಿಗೆ ವಿಶೇಷ ಮತ್ತು ಮುಖ್ಯ ಅತಿಥಿಗಳನ್ನು ಮಾತ್ರ ಆಹ್ವಾನಿಸಲಾಗುತ್ತಿತ್ತು.

ಗೋಪುರವನ್ನು ಕಟ್ಟುವುದಕ್ಕೆ ಮುಂಚೆ 50 ವಾಸ್ತುಶಿಲ್ಪಿಗಳು, ಇಂಜಿನಿಯರುಗಳು ಮತ್ತು ಡ್ರಾಫ್ಟ್‌ಮನ್‌ಗಳು ಒಟ್ಟುಗೂಡಿ ಗೋಪುರದ 5,300 ರೇಖಾಚಿತ್ರಗಳನ್ನು ಬಿಡಿಸಿದರು. ಅನಂತರ ಒಟ್ಟು 18,000 ಬಿಡಿಬಿಡಿ ಕಬ್ಬಿಣ ತುಣುಕುಗಳನ್ನು ನಿರ್ಮಿಸಿ ಸಿದ್ಧಪಡಿಸಿಕೊಳ್ಳಲಾಯಿತು. ಈ ಬಿಡಿಭಾಗಗಳನ್ನು 1/10 ಮಿಲಿಮೀಟರ್ ನಿಖರತೆಗೆ ತಯಾರಿಸಿಕೊಳ್ಳಲಾಯಿತು. ಕೊನೆಗೆ ಐದು ಮೀಟರ್ ಉದ್ದದ ಬಿಡಿಭಾಗಗಳನ್ನು ಪೋಣಿಸಿಕೊಂಡು ಕಟ್ಟಡದ ಹತ್ತಿರಕ್ಕೆ ಸಾಗಿಸಲಾಯಿತು. ಸ್ಥಳದಲ್ಲಿ 132 ಕಾರ್ಮಿಕರು ಅವುಗಳನ್ನು ಮತ್ತೆ ವೆಲ್ಡಿಂಗ್ ಮಾಡಿ ಜೋಡಿಸಿಕೊಂಡರು. 1/3 ಭಾಗದ ಗೋಪುರ ನಿರ್ಮಾಣಕ್ಕೆ 2.50 ದಶಲಕ್ಷ ರಿವಿಟ್‌ಗಳನ್ನು ಬಳಸಲಾಯಿತು. ಐದು ತಿಂಗಳ ಕಾಲ ಅಡಿಪಾಯ ಕೆಲಸ ನಡೆದು ಮಣ್ಣನ್ನು ಕುದುರೆಗಳು ಮತ್ತು ಉಗಿಬಂಡಿಗಳಿಂದ ದೂರ ಸಾಗಿಸಲಾಯಿತು. ಒಂದು ಕಡೆ ಸೀನ್ ನದಿಯ ದಡವಿದ್ದು ನದಿಯ ಬದಿಯಲ್ಲಿ ಕಂಪ್ರೆಸ್ಸರ್ ಏರ್ ಮೂಲಕ ಉಕ್ಕಿನ ಕೈಸನ್‌ಗಳನ್ನು ನೀರಿನ ಕೆಳಗೆ ಐದು ಮೀಟರುಗಳ ಆಳದವರೆಗೂ ಇಳಿಸಲಾಯಿತು. ಅಡಿಪಾಯವನ್ನು 15 ಮೀಟರುಗಳ ಆಳದವರೆಗೂ ಇಳಿಸಲಾಯಿತು. ನಾಲ್ಕು ದಿಕ್ಕುಗಳಲ್ಲಿ ನಾಲ್ಕು ಗೋಪುರಗಳ ಕಂಬಗಳ ಜೊತೆಗೆ ಟ್ರಸ್ ಚೌಕಟ್ಟುಗಳನ್ನು ಬೆಂಬಲಕ್ಕಾಗಿ ನೀಡಲಾಯಿತು.

ಎಲಿವೇಟರ್‌ಗಳಲ್ಲಿ ನಿರ್ಗಮನದ ಬಿಂದುವಿನೊಂದಿಗೆ ಕಟ್ಟಡ ಸಾಮಗ್ರಿಗಳನ್ನು ಸಾಗಿಸುವಾಗ, ಕಾರ್ಮಿಕರು ಹತ್ತಿಕೊಂಡು ಹೋಗಿ ಮೊದಲ ಹಂತವನ್ನು ನಿರ್ಮಿಸುವಾಗ ಕಷ್ಟಪಡಬೇಕಾಯಿತು. ಮೊದಲ ಮಹಡಿಯಲ್ಲಿ ಸಮತಲ ತೊಲೆಗಳನ್ನು ಜೋಡಿಸಲು ಎಲಿವೇಟರ್‌ಗಳನ್ನು ಓರೆಕೋನದಲ್ಲಿ ಇರಿಸಬೇಕಾಗಿತ್ತು. ಎಲಿವೇಟರ್ ಓರೆಯಾದ ಕಂಬಗಳ ಮೇಲೆ ಎಲಿವೇಟರನ್ನು ಸರಿಸಲು ಮತ್ತು ನಿಲ್ಲಿಸಲು ಹೈಡ್ರಾಲಿಕ್ ಜ್ಯಾಕ್‌ಗಳನ್ನು ಬಳಸಿಕೊಳ್ಳಲಾಯಿತು. ಎಲಿವೇಟರ್‌ಗಳ ಮಾರ್ಗವನ್ನೇ ಬಳಸಿಕೊಂಡು ಕ್ರೇನ್‌ಗಳೊಂದಿಗೆ ಎರಡನೇ ಮಹಡಿಯ ಕಂಭಗಳು, ತೊಲೆಗಳನ್ನು ಜೋಡಿಸಲಾಯಿತು. ಇಲ್ಲಿಂದ ಗೋಪುರ ನಿರ್ಮಾಣ ಸುಲಭವಾಯಿತು.

1887 ಜನವರಿ, 28ರಂದು ಅಡಿಪಾಯ ಅಗೆಯಲು ಪ್ರಾರಂಭಿಸಿ 1889 ಮಾರ್ಚ್ 31ರಂದು ಗೋಪುರವನ್ನು ಕಟ್ಟಿ ಮುಗಿಸಲಾಯಿತು. ಇಪ್ಪತ್ತು ವರ್ಷಗಳಲ್ಲಿ ಗೋಪುರವನ್ನು ಕೆಡವಲು ಮೊದಲಿಗೆ ತೀರ್ಮಾನಿಸಲಾಗಿತ್ತು. ಜನರು ಮೊದಲಿಗೆ ಗೋಪುರ ತುಂಬಾ ಕೆಟ್ಟದಾಗಿ ಕಾಣಿಸುತ್ತಿದೆ, ಪ್ಯಾರಿಸ್ ನಗರದ ಅಂದವನ್ನು ಕೆಡಿಸಿಬಿಟ್ಟಿದೆ ಎಂದು ದೂರಿದರು. ಆದರೆ ಅದು ಮುಂದಿನ ದಿನಗಳಲ್ಲಿ ಪ್ಯಾರಿಸ್‌ಗೆ ದೊಡ್ಡ ಆಸ್ತಿಯಾಗಿ ಮಾರ್ಪಟ್ಟಿತು. ಮುಂದಿನ ದಿನಗಳಲ್ಲಿ ಗೋಪುರದ ಮೇಲೆ ಸಂವಹನ, ಗುರುತ್ವಾಕರ್ಷಣೆ, ವಿದ್ಯುಚ್ಛಕ್ತಿ ಮತ್ತು ಪವನಶಾಸ್ತç ಪ್ರಯೋಗಾಲಯವನ್ನು ಅದರ ಮೇಲೆ ಸ್ಥಾಪನೆ ಮಾಡಲಾಯಿತು. ಯುದ್ಧಗಳ ಕಾಲದಲ್ಲಿ ಗೋಪುರವನ್ನು ಮಿಲಿಟರಿ ಸಂವಹನಕ್ಕಾಗಿ ವೈರ್‌ಲೆಸ್ ಟೆಲಿಗ್ರಾಫ್ ಟ್ರಾನ್ಸ್‌ಮೀಟರ್ ಆಗಿ ಬಳಸಿಕೊಳ್ಳಲಾಯಿತು.

(ದೀಪಗಳ ಬೆಳಕಿನಲ್ಲಿ ಐಫೆಲ್ ಗೋಪುರ)

ಮೊದಲನೇ ವಿಶ್ವಮಹಾಯುದ್ಧದಲ್ಲಿ ಪತ್ತೇದಾರಿ `ಮಾತಾ ಹರಿ’ಯನ್ನು ಸೆರೆಹಿಡಿಯಲು ಗೋಪುರದಲ್ಲಿ ಅಳವಡಿಸಿದ್ದ ಸಂವಹನವನ್ನು ಬಳಸಿಕೊಳ್ಳಲಾಯಿತು. ಈಕೆ ದಚ್‌ನ ವಿಲಕ್ಷಣ ನರ್ತಕಿ ಮತ್ತು ವೇಶ್ಯೆಯಾಗಿದ್ದು ಮಹಾಯುದ್ಧ ಕಾಲದಲ್ಲಿ ಜರ್ಮನಿಯ ಗೂಢಾಚಾರಣಿ ಎಂದು ಫ್ರಾನ್ಸ್‌ನಲ್ಲಿ ಆಕೆಯನ್ನು ಹಿಡಿದು ಗಲ್ಲಿಗೇರಿಸಲಾಯಿತು. ಪ್ರಸ್ತುತ ರೇಡಿಯೋ ಮತ್ತು ದೂರದರ್ಶನ ಸಂಕೇತಗಳನ್ನು ಕಳುಹಿಸಲೂ ಸಹ ಗೋಪುರವನ್ನು ಬಳಸಿಕೊಳ್ಳಲಾಗುತ್ತಿದೆ. ಜೊತೆಗೆ ಎರಡನೇ ಹಂತದ ಗೋಪುರದಲ್ಲಿ ಎರಡು ಗಾಳಿ ಟರ್ಬೈನ್‌ಗಳನ್ನು ನಿರ್ಮಿಸಿ ಹಸಿರು ಶಕ್ತಿಯ ಉತ್ಪಾದನೆ ಮಾಡಲಾಗುತ್ತಿದೆ. ಈ ಗಾಳಿಯಂತ್ರಗಳು ಗಂಟೆಗೆ 10,000 ಕಿಲೋವ್ಯಾಟ್ (13,000 ಅಶ್ವಶಕ್ತಿ) ವಿದ್ಯುತ್ ಶಕ್ತಿಯನ್ನು ಉತ್ಪಾದಿಸುತ್ತಿವೆ.

ಈ ಗೋಪುರದ ಮೇಲೆ ಇಷ್ಟೆಲ್ಲ ಚಟುವಟಿಕೆಗಳು ನಡೆಯುತ್ತಿರುವುದು ಆಶ್ಚರ್ಯ ಹುಟ್ಟಿಸುತ್ತದೆ. ಸಂವಹನ, ವೈರ್‌ಲೆಸ್ ಟ್ರಾನ್ಸ್‌ಮೀಟರ್, ಗುರುತ್ವಾಕರ್ಷಣೆ, ಪವನಶಾಸ್ತ್ರ ಪ್ರಯೋಗಾಲಯ ಮತ್ತು ವಿದ್ಯುಚ್ಛಕ್ತಿ ತಯಾರಿಸಲು ಬಳಸಿಕೊಳ್ಳುತ್ತಿರುವುದರ ಜೊತೆಗೆ ದಿನಕ್ಕೆ ಸಾವಿರಾರು ಜನರನ್ನು ಲಿಫ್ಟ್‌ಗಳು ಮತ್ತು ಮೆಟ್ಟಿಲುಗಳ ಮೂಲಕ ಹತ್ತಿಸಿ ಹಣ ಸಂಗ್ರಹ ಮಾಡಿಕೊಳ್ಳಲಾಗುತ್ತಿದೆ. ಇಷ್ಟಕ್ಕೂ ಈ ಗೋಪುರದ ಸುತ್ತಲೂ ವಾಸಿಸುವ ಜನರು ಮತ್ತು ಗೋಪುರ ಹತ್ತುವ ಜನರ ಆರೋಗ್ಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲವೇ ಎನ್ನುವು ಆಲೋಚನೆ ನನಗೆ ಹೊಳೆಯದೇ ಇರಲಿಲ್ಲ. ಯುರೋಪ್ ದೇಶಗಳು ಇಂತಹ ವಿಷಯದಲ್ಲಿ ಮುಂಚೂಣಿಯಲ್ಲಿದ್ದರೂ ಯಾರೋ ಬರುತ್ತಾರೆ ಯಾರೋ ಹೋಗುತ್ತಾರೆ ಎಂದು ಸುಮ್ಮನೆ ಇದ್ದಿರಬಹುದೆ?

ಇಷ್ಟೆಲ್ಲ ಹೆಸರಿರುವ ಪ್ಯಾರಿಸ್‌ನ ಈ ಗೋಪುರವನ್ನು ನೋಡಲು ಬರುವವರಿಗೆ ಯಾವುದೇ ವ್ಯವಸ್ಥೆ ಇಲ್ಲದೆ ಇರುವುದು ಮಾತ್ರ ಸೋಜಿಗವೆನಿಸುತ್ತದೆ. ನಮ್ಮ ಜೊತೆಗಿದ್ದ ಪ್ಯಾಕೇಜ್ ಟೂರಿನ 26 ಜನರನ್ನು (ಎಲ್ಲರೂ ಬೆಂಗಳೂರಿನ ಕನ್ನಡಿಗರೆ) ನಮ್ಮ ಗೈಡ್ ಮಧ್ಯಾಹ್ನ ಊಟ ಮಾಡಿಸಿ ಸರಿಯಾಗಿ 1.30ಕ್ಕೆ ಗೋಪುರದ ಹತ್ತಿರಕ್ಕೆ ಕರೆದುಕೊಂಡು ಹೋಗಿ ಉದ್ದನೆ ಸಾಲಿನಲ್ಲಿ ನಿಲ್ಲಿಸಿದನು. ವಯಸ್ಕರಿಗೆ 19 ಯೂರೋಗಳು, ಅಂದರೆ ಸುಮಾರು 1800 ಭಾರತೀಯ ರೂಪಾಯಿಗಳು. ಮೊದಲನೇ ಮಹಡಿ ಲಿಫ್ಟ್‌ನಲ್ಲಿ 46 ಜನರು ಹೋಗಬಹುದಾದರೆ, ಎರಡನೆ ಹಂತದ ಲಿಫ್ಟ್‌ನಲ್ಲಿ 15 ಜನರು ಮಾತ್ರ ಮೂರನೇ ಹಂತಕ್ಕೆ ಹೋಗಬಹುದು. ಸಮಯ 6.30 ಆದರೂ ನಾವು ಲಿಫ್ಟ್ ಹತ್ತಿರಕ್ಕೆ ಹೋಗಲಿಲ್ಲ. ನಿಂತೂನಿಂತೂ ಎಲ್ಲರಿಗೂ ಕೈ ಕಾಲು ಸೊಂಟ ನೋವಾಗಿ ಕೆಲವರು ಡಾಂಬರು ನೆಲದ ಮೇಲೆ ಕುಳಿತುಕೊಳ್ಳಬೇಕಾಯಿತು. ಆದರೆ ನಿಧಾನವಾಗಿ ಸಾಗುತ್ತಿದ್ದ ಸಾಲಿನಲ್ಲಿ ಕುಳಿತುಕೊಳ್ಳಲೂ ಆಗುತ್ತಿರಲಿಲ್ಲ.

ಆಗ ನನಗೆ ಜ್ಞಾಪಕ ಬಂದಿದ್ದು ತಿರುಪತಿ ತಿಮ್ಮಪ್ಪನ ದರ್ಶನ. ತಿರುಪತಿ ಬೆಟ್ಟದ ಮೇಲೆ ಸಾಲಿನಲ್ಲಿ ಒಮ್ಮೆ ಒಳಗೆ ಹೋಗಿಬಿಟ್ಟರೆ ನೆರಳು, ಕುಳಿತುಕೊಳ್ಳಲು ಹಾಲ್‌ಗಳು, ಕೆಲವೊಮ್ಮೆ ತಿನ್ನಲು ಏನಾದರೂ ದೊರಕುತ್ತದೆ. ಆದರೆ ಇಲ್ಲಿ, ಅಂತಹ ಯಾವ ಸೌಕರ್ಯಗಳು ಇರಲಿಲ್ಲ. ನೀರಿಗೂ ಹಾಹಾಕಾರ, ಹತ್ತಿರದಲ್ಲಿ ಯಾವುದೇ ಅಂಗಡಿಗಳೂ ಇರಲಿಲ್ಲ. ಬಿಸಿಲಿನಲ್ಲೆ ಒಣಗಿಒಣಗಿ ಕೊನೆಗೆ ಸೂರಪ್ಪ ಪಶ್ಚಿಮದಲ್ಲಿ ಮುಳುಗಲು ಪ್ರಾರಂಭಿಸಿ ಬಿಸಿಲಿನಿಂದ ಬಚಾವಾದೆವು. ಆದರೆ ಕೈಕಾಲುಗಳು, ಸೊಂಟ ನೋವಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಒಂದಕ್ಕೆ ಬಂದರೆ ಎಲ್ಲೋ ದೂರ ಹೋಗಬೇಕಾಗಿತ್ತು. ಸಾಲಿನಲ್ಲಿರುವವರು ಮುಂದಕ್ಕೆ ಹೋಗಿಬಿಟ್ಟರೆ? ನಮ್ಮ ದುರದೃಷ್ಟವೆಂದರೆ ಗೋಪುರ ಹತ್ತುವ ಸಮಯಕ್ಕೆ ಕತ್ತಲೂ ಮೂಡತೊಡಗಿತು. ಅಷ್ಟರಲ್ಲಿ ಮುಂದಿದ್ದ ಒಂದು ಬಿಳಿ ಹುಡುಗಿ ಅಳುತ್ತಿದ್ದು ಅವಳ ತಾಯಿ ಸಮಾಧಾನಪಡಿಸುತ್ತಿದ್ದಳು. ವಿಷಯವೇನೆಂದರೆ ಗೋಪುರದ ಹತ್ತಿರ ಬರುವುದಕ್ಕೆ ಮುಂಚೆ ಆ ಹುಡುಗಿ ಎಟಿಮ್’ನಲ್ಲಿ ಹಣ ತೆಗೆಯುತ್ತಿದ್ದಂತೆ ಒಬ್ಬ ನೀಗ್ರೋ ಅವಳ ಕೈಯಿಂದ ಹಣ ಮತ್ತು ಎಟಿಎಮ್ ಕಾರ್ಡ್ ಎರಡನ್ನೂ ಕಿತ್ತುಕೊಂಡು ಓಡಿಹೋಗಿಬಿಟ್ಟನಂತೆ. ನಮ್ಮ ಇಂಡಿಯನ್ ಗೈಡ್ ಪ್ಯಾರೀಸ್‌ನಲ್ಲಿ ಬಹಳ ಕಳ್ಳರಿದ್ದಾರೆ, ನಿಮ್ಮ ಕಿಸೆಗಳು ಬ್ಯಾಗುಗಳು ಭದ್ರ ಎಂದು ಪದೇ ಪದೇ ಹೇಳುತ್ತಲೇ ಇದ್ದನು.

ಈ ಗೋಪುರ ಯಾಕಾದರು ಹತ್ತಲು ಬಂದೆವು ಎಂದುಕೊಳ್ಳುವಷ್ಟರಲ್ಲಿ ಲಿಫ್ಟ್ ಬಂದು ನೂಕು-ನುಗ್ಗಲಿನಲ್ಲಿ ನಮ್ಮ ಟಿಕೆಟ್‌ಗಳನ್ನು ಪರಿಶೀಲಿಸಿ ನಮ್ಮನ್ನ ಸಾಲಿನಲ್ಲಿ ಒಳಕ್ಕೆ ಬಿಡಲಾಯಿತು. ಗೋಪುರದಿಂದ ಹೊರಕ್ಕೆ ಬರುವ ದಾರಿಯಲ್ಲಿ ನಮ್ಮಪಕ್ಕದಿಂದ ದಿಢೀರನೆ ಬಂದ ಸಣಕಲು ಜಿಪ್ಸಿಯೊಬ್ಬ ನಮ್ಮ ಸಾಲಿನ ಮಧ್ಯೆ ಇದ್ದ ಎರಡು ಸ್ಟೀಲ್ ಬಾರ್‌ಗಳ ನಡುವಿನ ಅರ್ಧ ಅಡಿ ಗ್ಯಾಪ್‌ನಲ್ಲಿ ಒಳಕ್ಕೆ ನುಗ್ಗಿ ಬಂದು ನನ್ನ ಮುಂದೆ ಸೇರಿಕೊಂಡ. ಇಷ್ಟು ಸಣ್ಣ ಗ್ಯಾಪ್‌ನಲ್ಲಿ ಇವನು ಹೇಗೆ ಒಳಕ್ಕೆ ಬಂದ ಎಂದುಕೊಳ್ಳುವಷ್ಟರಲ್ಲಿ ಒಳಗಿನಿಂದ ಕ್ಯಾಮಾರದಲ್ಲಿ ನೋಡುತ್ತಿದ್ದ ಸೆಕ್ಯೂರಿಟಿ ಹೊರಕ್ಕೆ ಬಂದು ಅವನನ್ನು ಪ್ರಶ್ನಿಸಿದ್ದೆ ಅವನು ಬಂದ ವೇಗದಲ್ಲಿಯೇ ಅದೇ ಗ್ಯಾಪ್‌ನಲ್ಲಿ ಹಿಂದಕ್ಕೆ ಓಡಿಹೋದನು. ನಾವೆಲ್ಲ ನಮ್ಮನಮ್ಮ ವಸ್ತುಗಳನ್ನು ನೋಡಿಕೊಂಡೆವು. ಸುಮಾರು ನಲವತ್ತು ಜನರು ನೂಕು-ನುಗ್ಗಲಿನಲ್ಲಿ ಲಿಫ್ಟ್ ಒಳಕ್ಕೆ ಸೇರಿಕೊಂಡೆವು. ಅಂತೂಇಂತೂ ಮೂರನೇ ಹಂತದವರೆಗೂ ಹೋಗಿ ಸುತ್ತಲಿನ ಅಟ್ಟದಲ್ಲಿ ನಿಂತುಕೊಂಡು ಪ್ಯಾರಿಸ್ ನಗರದ ನಾಲ್ಕೂ ದಿಕ್ಕುಗಳನ್ನು ನೋಡುತ್ತಿದ್ದಂತೆ ಕತ್ತಲು ಆವರಿಸಿಕೊಳ್ಳುತ್ತ ಪ್ಯಾರಿಸ್ ನಗರ ಮಸುಕುಮಸುಕಾಗಿ ಕಾಣಿಸಿತು. ಗೋಪುರದಿಂದ ಇಳಿದುಬರುತ್ತಿದ್ದಂತೆ ಕತ್ತಲು ತುಂಬಿಕೊಂಡಿತು. ನಮ್ಮ ಗೈಡ್ ಅಲ್ಲಿಂದ ಮತ್ತೆ ದೂರಕ್ಕೆ ಕರೆದುಕೊಂಡು ಹೋಗಿ ಒಂದು ಪ್ಲ್ಯಾಟ್‌ಫಾರ್ಮ್‌ ಮೇಲೆ ನಿಲ್ಲಿಸಿ ಗೋಪುರದ ಕಡೆಗೆ ನೋಡುತ್ತಿರಿ, ಗೋಪುರ ದೀಪಗಳ ಅಲಂಕಾರದಿಂದ ಜಗಮಗಿಸುತ್ತಿದೆ, ಎಂದು ಹೇಳಿದ. ಗೈಡ್ ಹೇಳಿದಂತೆ ಮೂರು ಬಣ್ಣಗಳು ಗೋಪುರದ ಕೆಳಗಿನಿಂದ ಮೇಲಕ್ಕೆ ಮೇಲಿನಿಂದ ಕೆಳಕ್ಕೆ ಐದು ನಿಮಿಷಗಳು ಕಾಲ ಜಗಮಗಿಸಿ ನಿಂತುಹೋಯಿತು. ನನಗೆ ಅದು ಯಾವುದೇ ರೀತಿಯಲ್ಲೂ ವಿಶೇಷ ಎನಿಸಲಿಲ್ಲ. ಅಲ್ಲಿಂದ ಇನ್ನಷ್ಟು ದೂರ ಪ್ಯಾರಿಸ್ ಬೀದಿಗಳಲ್ಲಿ ನಡೆದುಹೋಗಿ ಒಂದು ಇಂಡಿಯನ್ ಹೋಟಲಿನಲ್ಲಿ ಊಟ ಮಾಡಿ ಬಸ್ ಹತ್ತಿ ಹೋಟಲ್ ಸೇರಿಕೊಂಡೆವು.

(ಮುಕ್ತಾಯ)

(ಹಿಂದಿನ ಕಂತು: ಇಷ್ಟೊಂದ್‌ ಜನಾ.. ಎಲ್ಲಿಂದ ಬಂದೋರು)