ಐಬಿಲ್ಲದ ಕೊಲೆ ಎಂದು ಶೀರ್ಷಿಕೆ ಕೊಟ್ಟು ಬರಹವನ್ನು ಮುಗಿಸಿದರೂ, ಅದು ನಿಜಕ್ಕೂ ಹಾಗಿರಲಿಲ್ಲ ಎಂಬುದು ನನಗೆ ಬಳಿಕ ತಿಳಿಯಿತು. ಮರಳುಗಾಡಿನಲ್ಲಿ ನಡೆದ ಕೊಲೆಯ ಪೂರ್ವಾಪರಗಳು ಎಷ್ಟೋಕಾಲದ ಬಳಿಕ ಅನಾವರಣಗೊಂಡಿದ್ದವು. ಅದು ಮೊಬೈಲು, ಕಂಪ್ಯೂಟರು ಇಲ್ಲದ ಕಾಲವಾದ್ದರಿಂದ ಪತ್ತೆದಾರಿಕೆಯು ನಿಧಾನವಾಗಿತ್ತು. ಕೊಲೆಯ ಹಿಂದಿರುವ ಕಾರಣವನ್ನು ಹುಡುಕಬೇಕಾದರೆ ಸಾಕ್ಷ್ಯಗಳು ಅಗತ್ಯವಾಗಿರುತ್ತವೆ. ಅಂತಹ ಸಾಕ್ಷ್ಯ ಹುಡುಕಾಟದಲ್ಲಿ ಕಾಣಿಸಿದ ಕೆಲವು ವಿಸ್ಮಯಗಳನ್ನು ಇಲ್ಲಿ ಪ್ರಸ್ತುತ ಪಡಿಸಿದ್ದೇನೆ.
ಡಾ. ಕೆ.ಬಿ. ಸೂರ್ಯಕುಮಾರ್ ಬರೆಯುವ  ‘ನೆನಪುಗಳ ಮೆರವಣಿಗೆ’ ಸರಣಿಯಲ್ಲಿ ಮತ್ತೊಂದು ಬರಹ ಇಲ್ಲಿದೆ.

 

ಮನುಷ್ಯನ ಜೀವನವೇ ಒಂದು ಕಗ್ಗಂಟು ಎಂದರೆ ತಪ್ಪಲ್ಲ. ಯಾರೊಬ್ಬರ ಜೀವನದಲ್ಲೂ ಸ್ಥಿರತೆ ಎಂಬುದು ಇರುವುದಿಲ್ಲ. ಇಂದು ನಾವು ಹೀಗೆ ಎಂದು ಯೋಚಿಸಿದ್ದು, ನಾಳೆ ಬದಲಾಗಿ ಮುಂದೆ ಮತ್ತೇನೋ ಆಗಿ ಕೊನೆಗೊಳ್ಳಬಹುದು. ಅನೇಕ ಅಪರಾಧ ಪ್ರಕರಣಳಲ್ಲಿ ಕೂಡ ನಾವು ಮೊದಲು ಯೋಚಿಸಿದಂತೆ ನಡೆದಿರದೆ ಚಿತ್ರ ವಿಚಿತ್ರ ತಿರುವುಗಳನ್ನು ಹೊಂದಿ ಕೊನೆಗೆ ಯಾವ ಪತ್ತೇದಾರಿ ಕಾದಂಬರಿಗೂ ಕಡಿಮೆ ಇಲ್ಲ ಎಂಬಂತೆ ಅಂತ್ಯಗೊಂಡ ಘಟನೆಗಳನ್ನು ನಾನು ನನ್ನ ವೈದ್ಯಕೀಯ ವೃತ್ತಿಯ ಅವಧಿಯಲ್ಲಿ ನೋಡಿದ್ದೇನೆ. ಆದರೆ ಕೆಲವು ವಿಷಯಗಳಲ್ಲಿ ಮುಂದಿನ ತನಿಖೆಯ ಫಲಿತಾಂಶದ ಬಗ್ಗೆ ಮಾಹಿತಿ ಸಿಗದಿದ್ದಾಗ, ನಮ್ಮ ಮನಸ್ಸಿನ ಜಿಜ್ಞಾಸೆಗೆ ಒಂದು ಸಂಪೂರ್ಣತೆ ಸಿಕ್ಕಂತೆ ಆಗುವುದಿಲ್ಲ. ಹೀಗಾಗಿ ಒಮ್ಮೊಮ್ಮೆ ಬಿಡುವಿನ ವೇಳೆಯಲ್ಲಿ ಇಂತಹ ಅಪರಾಧಗಳ ಹಿಂದೆ ಬೀಳುವ ತವಕ ಮನಸ್ಸಿಗೆ ಬಂದರೂ, ಬಿಡುವಿಲ್ಲದ ವೇಳಾಪಟ್ಟಿಯ ಜೊತೆಗೆ, ಪೊಲೀಸರು ‘ಇವನಿಗ್ಯಾಕೆ ಬೇಕು ಎಂಬ ನಿರ್ಲಕ್ಷ್ಯ ಧೋರಣೆಯನ್ನು ತೋರಬಹುದು’, ಎಂಬ ಅನಿಸಿಕೆ ನನ್ನನ್ನು ಸುಮ್ಮನಾಗಿಸಿಬಿಡುತ್ತದೆ.

ಇತ್ತೀಚೆಗೆ ನಾನು ಬರೆದ ‘ಐಬಿಲ್ಲದ ಕೊಲೆ’ ಬರಹವನ್ನು ಓದಿದ ಅನೇಕರು ಈ ಕಥೆ ಪೂರ್ಣವಾಗಿಲ್ಲ, ಅರ್ಧ ಊಟ ಮಾಡಿದಂತಾಗಿದೆ ಎಂದು ಹೇಳಿದಾಗ, ಅದರ ಕಡೆ ಚಿತ್ತ ಹರಿದು, ರಜೆ ಪಡೆದು ಉತ್ತರ ಭಾರತದ ಪ್ರವಾಸ ಕೈಗೊಂಡೆ. ನಾನು ತಂಗಿದ ಹಿಮಾಚಲ ಪ್ರದೇಶದಲ್ಲಿನ ಒಂದು ಹೋಟೆಲಿನಲ್ಲಿ ರಾಜಸ್ಥಾನದಿಂದ ಬಂದ ಒಬ್ಬ ನಿವೃತ್ತ ಪೊಲೀಸ್ ಅಧಿಕಾರಿಯ ಪರಿಚಯವಾಯಿತು. ಅವರ ಮುಂದೆ ನನ್ನ ಕೆಲವು ಅನುಭವವನ್ನು ಹಂಚಿಕೊಳ್ಳುತ್ತಿದ್ದೆ. ಆಗ, ಕಾಕತಾಳಿಯ ಎಂಬಂತೆ ಅನೇಕ ವರ್ಷಗಳ ಹಿಂದೆ ಅವರು ಅಧಿಕಾರಿಯಾಗಿದ್ದ ಊರಿನ ಪಕ್ಕದ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಾನು ಬರೆದ ‘ಐಬಿಲ್ಲದ ಕೊಲೆ’ ಬರಹದ ಮಾದರಿಯ ಪ್ರಕರಣವೊಂದು ನಡೆದಿತ್ತು ಎಂದು ತಿಳಿದು ಬಂತು.

ಅರೆ,ಅಪರಾಧ ಪ್ರಕರಣಗಳಿಗೆ ಕಾಲದೇಶದ ಹಂಗಿಲ್ಲವಲ್ಲಾ ಎಂದು ನನಗೆ ಅನಿಸಿತು. ಎರಡು ದಿನ ರೂಮಿನಲ್ಲಿ ಕುಳಿತು ಅವರೊಂದಿಗೆ ಮಾತುಕತೆ ನಡೆಸಿದಾಗ ಆ ಕೊಲೆಯ ಮಾಹಿತಿಯನ್ನು ಅವರು ಅತ್ಯಂತ ಮುತುವರ್ಜಿ ವಹಿಸಿ, ವಿವರಿಸಿ ಹೇಳಿದರು. ಹಾಗಾಗಿ ನನಗೆ ಆ ಕೊಲೆಗೆ ಸಂಬಂಧಿಸಿದ ವಿಭಿನ್ನ ಆಯಾಮಗಳ ಮಾಹಿತಿಗಳು ಸಿಕ್ಕಿದವು.

ಮಾಂಡ್ವಾ ಎನ್ನುವುದು ರಾಜಸ್ತಾನದಲ್ಲಿನ ಒಂದು ಐತಿಹಾಸಿಕ ಪ್ರದೇಶ. ಇದು ಹಿಂದಿನ ಕಾಲದಲ್ಲಿ ಒಂದು ವ್ಯಾಪಾರೀ ಕೇಂದ್ರ ಸ್ಥಾನವಾಗಿತ್ತು. ಚೀನಾ ಮತ್ತು ಮಧ್ಯಪ್ರಾಚ್ಯದ ಊರುಗಳಿಗೆ ಒಂಟೆಗಳ ಮೇಲೆ ವ್ಯಾಪಾರ ವಸ್ತುಗಳನ್ನು ತೆಗೆದುಕೊಂಡು ಹೋಗುತ್ತಿದ್ದ ಜನರು ಇಲ್ಲಿ  ಸ್ವಲ್ಪ ಹೊತ್ತು ದಣಿವಾರಿಸಿಕೊಂಡು ಮುಂದೆ ಸಾಗುತ್ತಿದ್ದರು. 17ನೇ ಶತಮಾನದಲ್ಲಿ ನವಲ್ಗರದ ರಾಜ, ಠಾಕೂರ್ ನವಲ್ ಸಿಂಗ್ ವ್ಯಾಪಾರಸ್ಥರ ರಕ್ಷಣೆಗೆಂದು ಮಾಂಡವದ ಕೋಟೆಯನ್ನು ಕಟ್ಟಿಸಿದ್ದ. ಹಾಗಾಗಿ ಈ ಊರಿನ ಸುತ್ತ ಮುತ್ತಲಿನ ಹೆಚ್ಚಿನ ವ್ಯಾಪಾರಸ್ಥರ ವಾಸ್ತವ್ಯ ಅಲ್ಲಿಗೆ ವರ್ಗಾವಣೆ ಆಗಿತ್ತು. ಎಲ್ಲಿನಂತೆ ಇಲ್ಲಿಯೂ ಜಾತಿಯ ವಿಭಜನೆ ಇದ್ದು, ಮಾಂಡವಾದ ಸುತ್ತಮುತ್ತ ಇರುವ ಜನರನ್ನು ಶೇಖಾವತಿ ಪಂಗಡ ಎಂದು ಕರೆಯಲಾಗುತ್ತದೆ. ಚಂದ್ರಾಪುರ, ಅಲ್ಲಿಂದ ಕೆಲವು ಕಿಲೋಮೀಟರ್ ದೂರದಲ್ಲಿನ ಒಂದು ಹಳ್ಳಿ. ಈ ಊರು ಎಷ್ಟು ಚಿಕ್ಕದು ಎಂದರೆ ಅಲ್ಲಿನ ಒಟ್ಟಾರೆ ಜನಸಂಖ್ಯೆ ಆಗ ಸುಮಾರು ಒಂದು ಸಾವಿರ ಇದ್ದಿರಬಹುದು. ಹತ್ತಿರದ ಬಸ್ ನಿಲ್ದಾಣ ಇರುವುದೇ, ಅಲ್ಲಿಂದ ನಾಲ್ಕು ಕಿಲೋ ಮೀಟರ್ ದೂರದಲ್ಲಿರುವ ‘ನೂವ’ ಎಂಬ ಊರಿನಲ್ಲಿ. ದೂರದ ಕೆಲವು ಊರುಗಳಲ್ಲಿನ ಕೋಟೆ ಕೊತ್ತಲಗಳು ಮತ್ತು ಸುತ್ತಲೂ ಇರುವ ಮರಳುಗಾಡು ಇಲ್ಲಿನ ವಿಶಿಷ್ಟತೆ.

ಇಲ್ಲಿನ ಗಂಡಸರು ವಂಶ ಪಾರಂಪರ್ಯವಾಗಿ ಬಂದ ವ್ಯಾಪಾರವನ್ನು ಮಾಡುತ್ತಾ, ಆ ಊರಿನಲ್ಲಿ ತಮ್ಮದೇ ಆದ ಕಾನೂನನ್ನು ನಡೆಸುತ್ತಿದ್ದರು.  ಹಿಂದೆಲ್ಲ ಅಲ್ಲಿನ ಅನೇಕ ಹಳ್ಳಿಗಳಿಗೆ ಪೊಲೀಸರಿಗೆ ಪ್ರವೇಶವೇ ಇರಲಿಲ್ಲವಂತೆ. ಇಲ್ಲಿ ಊಳಿಗ ಮಾನ್ಯ (ಫ್ಯೂಡಲಿಸಂ) ಪದ್ಧತಿಯು ಅತಿಯಾಗಿ ಇದ್ದು, ಜೀತದಾಳುಗಳ ಸಂಖ್ಯೆ ಹೆಚ್ಚಾಗಿತ್ತು. ಇಲ್ಲಿನ ಹೆಚ್ಚಿನ ಜನರು ಶಾಖಾಹಾರಿಗಳು ಮತ್ತು ಇವರ ಉಡುಗೆ ತೊಡುಗೆಗಳು ಬಹಳಷ್ಟು ಬಣ್ಣ ಬಣ್ಣದಿಂದ ಕೂಡಿರುತ್ತವೆ. ಗಂಡಸರು ಆಂಘ್ರಕ ಎಂಬ ಮೇಲಂಗಿಯನ್ನು ಧರಿಸಿ, ಕೆಳ ಅಂಗಿಯಾಗಿ ಪೈಜಾಮ ಅಥವಾ ಧೋತಿಯನ್ನು ತೊಡುತ್ತಾರೆ. ಹೆಂಗಸರು ಗಾಜಿನ ಚೂರುಗಳ ಕಸೂತಿಯ ವರ್ಣರಂಜಿತ ಘಾಗ್ರ ಚೋಲಿ, ಧರಿಸಿ, ಓಡ್ನಿ ಎಂಬ‌  ಹೊಳಪಿನ ಬಣ್ಣ ಬಣ್ಣದ ವಸ್ತ್ರವನ್ನು ತಲೆಯ ಮೇಲಿನಿಂದ ಕೆಳಕ್ಕೆ ಮುಖ ಮುಚ್ಚುವಂತೆ, ಮುಸುಕು ಹಾಕಿಕೊಂಡೇ ಇರುತ್ತಾರೆ.

ಹೆಂಗಸರು ಎಂದೂ ತಲೆ ಎತ್ತಿ ಗಂಡಸರ ಮುಖವನ್ನು ನೋಡಬಾರದು ಎಂಬ ಒಂದು ಅಲಿಖಿತ ಕಾನೂನು ಅಲ್ಲಿತ್ತು. ಹಿರಿಯರನ್ನು ಅಥವಾ ತಮಗಿಂತ ಗೌರವಾನ್ವಿತರರನ್ನು ಕಂಡಾಗ ತಲೆ ತಗ್ಗಿಸಿ “ಖಮ್ಮಾ ಗಣಿ ಸಾ” ಎಂದು ಶುಭಾಶಯಗಳನ್ನು ಹೇಳುವುದು ಇಲ್ಲಿನ ಗುಡ್ ಮಾರ್ನಿಂಗ್. ಇದಕ್ಕೆ ʼಗಣಿ ಖಮ್ಮಾ ಸಾ’ ಎಂದು ಉತ್ತರಿಸುತ್ತಾರೆ.

ಸುಮಾರು ಎಂಬತ್ತನೆಯ ಇಸವಿ. ಈ ಊರಿನಲ್ಲಿ ಹುಕುಂ ಚಂದ್ ಮತ್ತು ಪ್ರೀತಂ ಚಂದ್ ಎಂಬ ಅಣ್ಣ ತಮ್ಮಂದಿರು ಇದ್ದು, ಇಬ್ಬರೂ ಬಾಲ್ಯ ವಿವಾಹಿತರು. ಅಣ್ಣನಿಗೆ ಮಕ್ಕಳು ಇರಲಿಲ್ಲ. ತಮ್ಮ, ತನ್ನ ಆರನೇ ವಯಸ್ಸಿನಲ್ಲೇ, ಮೂರು ವಯಸ್ಸಿನ ಹುಡುಗಿಯನ್ನು ಮದುವೆಯಾಗಿದ್ದು, ಅವನ ಹೆಂಡತಿ, ಹದಿನೈದನೇ ವಯಸ್ಸಿನಲ್ಲಿ ತಾಯಿಯಾಗಿ, ಮುಂದಿನ ನಾಲ್ಕು ವರ್ಷದ ಒಳಗೆ ಇನ್ನೂ ಇಬ್ಬರು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದಳು. ಆ ಸಂಸಾರಕ್ಕೆ ಇವರೇ ಮೂರು ಮಕ್ಕಳು. ದೊಡ್ಡಮ್ಮ, ತನಗೆ ಮಕ್ಕಳಾಗಲಿಲ್ಲ ಎಂಬ ಕೊರಗು  ಇದ್ದರೂ, ತಂಗಿಯ ಮೂರು ಮಕ್ಕಳನ್ನೇ ತನ್ನ ಮಕ್ಕಳೆಂದು ಭಾವಿಸಿದ್ದಳು. ಮೊದಲ ಹುಡುಗಿ ಚಮೇಲಿಗೆ ದೊಡ್ಡಪ್ಪನೆಂದರೆ ಪ್ರಾಣ. ಚಿಕ್ಕವಳು ದಾಮಿನಿ.

ದಿನ ಕಳೆದಂತೆ ವ್ಯಾಪಾರದಲ್ಲಿ ಏಳಿಗೆಯನ್ನು ಕಂಡ ಅಣ್ಣ ಹುಕುಂ ಚಂದ, ತನ್ನದೇ ಆದ ಒಂದು ಸಾಮ್ರಾಜ್ಯವನ್ನು ಬೆಳೆಸಿಕೊಂಡಿದ್ದು, ವಯಸ್ಸು, ಮತ್ತು ಸ್ಥಿತಿಗತಿಯಿಂದ ಊರಿನ ಮುಖಂಡನಾಗಿ ಬೆಳೆಯತೊಡಗಿದ್ದ. ಇವರ ತಂದೆಯ ಕಾಲದಿಂದಲೇ ಅವರ ಜೊತೆಯಲ್ಲಿ ಇದ್ದ ಬುದ್ವ, ಇವನ ಬಲಗೈ ಬಂಟ. ಸಾಧಾರಣವಾಗಿ, ಧಣಿ ಎಲ್ಲಿ ಹೋದರೂ ಜೊತೆಯಲ್ಲೇ ಇರುತ್ತಿದ್ದವನು.

ವ್ಯಾಪಾರಕ್ಕೆಂದು ದೇಶದ ವಿವಿಧ ಊರುಗಳಿಗೆ ಅಣ್ಣ ತಮ್ಮಂದಿರು, ಬೇರೆ ಬೇರೆಯಾಗಿ ಹೋಗುವುದು ವಾಡಿಕೆಯಾಗಿತ್ತು. ಹಾಗೆ ಹೋದಾಗಲೆಲ್ಲ ಅವರು ಅಲ್ಲಿ ತಿಂಗಳುಗಟ್ಟಲೆ ವ್ಯಾಪಾರ ವಹಿವಾಟುಗಳನ್ನು ನಡೆಸಿ ಮರಳುತ್ತಿದ್ದರು. ಆಗೆಲ್ಲಾ ಮೊಬೈಲ್ ಹೋಗಲಿ, ಫೋನ್ ಕೂಡಾ ಹೆಚ್ಚಿನ ಊರುಗಳಲ್ಲಿ ಇರಲಿಲ್ಲ. ಕೆಲವೊಂದು ಮನೆಗಳಲ್ಲಿ ಇದ್ದ ರೇಡಿಯೋ ಮತ್ತು ರಾಜಸ್ಥಾನಿ ದಿನ ಪತ್ರಿಕೆ, ಅಲ್ಲಿನ ದೊಡ್ಡ ಹವೇಲಿಗಳ ಮಾಲೀಕರ, ಪ್ರತಿಷ್ಠಿತ ಸಂಕೇತಗಳು. ಆ ಕಾಲದಲ್ಲಿ, ಸಾಧಾರಣವಾಗಿ ಸಾಕ್ಷರತೆಯಿಂದಲೇ ವಂಚಿತರಾಗಿ ಹಿಂದೆ ಉಳಿಯುತ್ತದ್ದ ಹೆಂಗಸರಿಗೆ, ಗಂಡಸರ ಯಾವ ವ್ಯವಹಾರ ವಹಿವಾಟುಗಳ ಬಗ್ಗೆ ಹೆಚ್ಚಿನ ಮಾಹಿತಿ ಇರುತ್ತಿರಲಿಲ್ಲ. ಅಷ್ಟೇ ಅಲ್ಲದೆ, ಅವರಿಗೆ ತಮ್ಮ ಹವೇಲಿಯ ಹೊರಗಿನ ಪ್ರಪಂಚದ ಆಗು ಹೋಗುಗಳ ಅರಿವು ಕೂಡ ಇರುತ್ತಿರಲಿಲ್ಲ.

ಹೀಗೆ ಒಮ್ಮೆ ವ್ಯಾಪಾರಕ್ಕೆ ಹೋದ ಅಣ್ಣ ಹುಕುಮ್ ಚಂದ್ ತಿಂಗಳಾನುಗಟ್ಟಲೆ ಬರದಿದ್ದಾಗ, ಹೆಂಡತಿ ಮುನ್ನಿ ಬಾಯಿ, ತನ್ನ ವಾರಗಿತ್ತಿಯ ಬಳಿ ಒಂದೆರಡು ಬಾರಿ ತನ್ನ ಅಳಲನ್ನು ತೋಡಿಕೊಂಡಿದ್ದಳು. ಹಾಗೇ ವ್ಯಾಪಾರಕ್ಕೆಂದು ಹೋದ ಪ್ರೀತಂ ಚಂದ್ ಕೂಡಾ ಅನೇಕ ತಿಂಗಳವರೆಗೆ ಬರದಿದ್ದಾಗ, ಇವರಿಬ್ಬರನ್ನೂ ಹುಡುಕಿಕೊಂಡು ಹೋದ ಅವನ ಮಗ ಧ್ಯಾನ್ ಚಂದ್‌ಗೆ, ಕೆಲವು ದಿನಗಳ ಬಳಿಕ ತಂದೆ ಪ್ರೀತಂ ಚಂದ್, ಗುಜರಾತಿನ ಒಂದು ಊರಿನಲ್ಲಿ ವ್ಯಾಪಾರ ಮಾಡುತ್ತ ಇದ್ದುದನ್ನು ಕಂಡು ಮನೆಗೆ ಕರೆದುಕೊಂಡು ಬಂದಿದ್ದ. ಅಣ್ಣ ತಮ್ಮಂದಿರಿಬ್ಬರೂ ಬೇರೆ ಬೇರೆ ದಿಕ್ಕುಗಳಿಗೆ ವ್ಯಾಪಾರಕ್ಕೆಂದು ಹೋಗಿದ್ದರಿಂದ, ಅಣ್ಣನ ಬಗ್ಗೆ ತಮ್ಮನಿಗೆ ಯಾವುದೇ ಮಾಹಿತಿ ಇರಲಿಲ್ಲ. ನಂತರ, ಪಕ್ಕದ ಊರಿನಲ್ಲಿ, ಮಾನಸಿಕ ಸ್ಥಿಮಿತವನ್ನು ಕಳೆದು ಕೊಂಡು ಓಡಾಡುತ್ತಿದ್ದ ಬುಧ್ವ ಸಿಕ್ಕರೂ, ಅವನಿದ್ದ ಸ್ಥಿತಿಯಲ್ಲಿ ಅವನಿಂದ ಯಾವ ಸುಳಿವೂ ಸಿಗುವ ಹಾಗಿರಲಿಲ್ಲ.

ದಿನಗಳು ಕಳೆದು, ತಿಂಗಳುಗಳು, ಕೊನೆಗೆ ವರ್ಷಗಳೇ ಜಾರಿದರೂ ಅಣ್ಣ ಹುಕುಮ್ ಚಂದ್‌ನ ಯಾವುದೇ ಸುಳಿವು ಸಿಗದೇ ಹೋಗಿತ್ತು. ವಿದ್ಯೆ ಇಲ್ಲದ, ಹೊರಗಿನ ವ್ಯವಹಾರ ಜ್ಞಾನವಿಲ್ಲದ, ಗಂಡನನ್ನೇ ಅವಲಂಬಿತಳಾಗಿ, ಜೀವನ ಸಾಗಿಸುತ್ತಿದ್ದ ಮುನ್ನೀ ಬಾಯಿ, ಗಂಡನ ವ್ಯಾಪಾರ ವಹಿವಾಟುಗಳನ್ನು, ತನ್ನ ಮೈದುನ ಮತ್ತು ಆತನ ಮಗನಿಗೇ ನೋಡಿ ಕೊಳ್ಳಲು ಬಿಟ್ಟುಕೊಟ್ಟಿದ್ದಳು. ಹೀಗೇ ಐದು ವರ್ಷ ಕಳೆದು ಹೋಗಿ, ಎಲ್ಲರೂ ಹುಕುಂ ಚಂದ್ ಬಗ್ಗೆ ಎಲ್ಲಾ ಆಸೆಯನ್ನು ಬಿಟ್ಟಿದ್ದರು.

ಗಂಡಸರು ಆಂಘ್ರಕ ಎಂಬ ಮೇಲಂಗಿಯನ್ನು ಧರಿಸಿ, ಕೆಳ ಅಂಗಿಯಾಗಿ ಪೈಜಾಮ ಅಥವಾ ಧೋತಿಯನ್ನು ತೊಡುತ್ತಾರೆ. ಹೆಂಗಸರು ಗಾಜಿನ ಚೂರುಗಳ ಕಸೂತಿಯ ವರ್ಣರಂಜಿತ ಘಾಗ್ರ ಚೋಲಿ, ಧರಿಸಿ, ಓಡ್ನಿ ಎಂಬ‌  ಹೊಳಪಿನ ಬಣ್ಣ ಬಣ್ಣದ ವಸ್ತ್ರವನ್ನು ತಲೆಯ ಮೇಲಿನಿಂದ ಕೆಳಕ್ಕೆ ಮುಖ ಮುಚ್ಚುವಂತೆ, ಮುಸುಕು ಹಾಕಿಕೊಂಡೇ ಇರುತ್ತಾರೆ.

ಹೀಗಿರುವಾಗ, ಒಂದು ದಿನ ಬೆಂಗಳೂರಿನಿಂದ ಬಂದ ಆ ಸುದ್ದಿ ಎಲ್ಲರನ್ನೂ ದಂಗು ಬಡಿಸಿತ್ತು. ಅಲ್ಲಿನ ರೈಲ್ವೆ ಹಳಿಯ ಪಕ್ಕದಲ್ಲಿ ಗೋಣಿ ಚೀಲದ ಒಳಗಡೆ ಒಂದು ಮಮ್ಮಿಫೈಡ್ ಶವ ಕಂಡುಬಂದು, ಆ ವ್ಯಕ್ತಿ ಧರಿಸಿದ್ದ ಆಂಘ್ರಕದ ಕತ್ತಿನಲ್ಲಿ, ಸಂತೋಷಿ ಟೈಲರ್, ಮಾಂಡ್ವ ಎಂಬ ಗುರುತು ಪಟ್ಟಿ ಇದ್ದು, ಶವದ ಕೆಲವು ಭಾಗಗಳಿಗೆ ಮಾಂಡ್ವಾದಲ್ಲಿ ಪ್ರಕಟಗೊಂಡ, ರಾಜಸ್ತಾನಿ ಭಾಷೆಯ ದಿನ ಪತ್ರಿಕೆಯ ತುಣುಕುಗಳು ಅಂಟಿದ್ದು, ಅದರಲ್ಲಿ, ಪತ್ರಿಕೆಯ ಮುದ್ರಣ ದಿನಾಂಕವಿತ್ತು. ಅದು ಸುಮಾರು ಐದು ವರ್ಷಗಳ ಹಿಂದಿನ ದಿನಾಂಕ. ರಾಜಸ್ತಾನದ ಸುತ್ತ ಮುತ್ತಲಿನ ಎಲ್ಲಾ ಪೊಲೀಸ್ ಠಾಣೆಗಳಿಗೆ ಸುದ್ದಿ ತಲುಪಿಸಿ, ಯಾವುದಾದರೂ ಮಿಸ್ಸಿಂಗ್ ಕಂಪ್ಲೇಂಟ್ ಇದೆಯೇ ಎಂಬುದನ್ನು ಪತ್ತೆ ಹಚ್ಚಲು ಸೂಚಿಸಲಾಗಿತ್ತು.

ಇಷ್ಟರಲ್ಲಿ ಚಂದ್ರಾಪುರದಲ್ಲಿ, ಪೊಲೀಸ್ ಠಾಣೆ ಬಂದಿದ್ದು, ಹೊಸದಾಗಿ ಕೆಲಸಕ್ಕೆ ಆಯ್ಕೆ ಆದ ಕೈಲಾಶ್ ನಾಥ್, ಅಲ್ಲಿ ಸಬ್ ಇನ್ಸ್ಪೆಕ್ಟರ್ ಆಗಿ ನೇಮಕ ಆಗಿದ್ದರು. ಸುದ್ದಿ ಅಲ್ಲಿಗೂ ತಲುಪಿತ್ತು. ಆ ಪೊಲೀಸ್ ಠಾಣೆಯಲ್ಲಿ, ಯಾವುದೇ ಹಳೆಯ ಮಿಸ್ಸಿಂಗ್ ಕಂಪ್ಲೇಂಟ್ ಇರುವ ಸಾಧ್ಯತೆ ಇರಲಿಲ್ಲ. ಆದರೂ ನಮ್ಮ ಈ ಯುವ ಸಬ್ಇನ್ಸ್ಪೆಕ್ಟರ್, ವಿಷಯವನ್ನು ಹಾಗೆಂದು ನಿರ್ಲಕ್ಷಿಸದೆ, ಊರಿನ ಹಿರಿಯರನ್ನೆಲ್ಲಾ ವಿಚಾರಿಸ ತೊಡಗಿದ್ದರು. ಆಗ ಅವರಿಗೆ, ಚಂದ್ರಾಪುರದ ಹುಕುಂ ಚಂದ್, ‘ಗಾಯಬ್’ ಆದ ವಿಷಯ ತಿಳಿದು, ಅವರು ಮುನ್ನಿ ಬಾಯಿಯವರ ಮೇಲೆ ಸ್ವಲ್ಪ ಒತ್ತಡ ಹಾಕಿ ಒಂದು ಕಂಪ್ಲೇಂಟ್ ಬರೆಯಿಸಿಕೊಂಡಿದ್ದರು. ಪೊಲೀಸ್ ಠಾಣೆಯಲ್ಲಿ ಅದುವರೆಗೆ ಯಾವುದೇ ಕಂಪ್ಲೇಂಟ್ ಗಳನ್ನು ಕೊಡದ ಆ ಊರಿನ ಜನರು ವಿರೋಧ ವ್ಯಕ್ತಪಡಿಸಿದ್ದರು. ಐದು ವರ್ಷದಿಂದ ಗಂಡನ ಬಗ್ಗೆ ಯಾವ ಸುಳಿವು ಸಿಗದೆ ಕೊರಗುತ್ತಿದ್ದ ಮುನ್ನಿ ಬಾಯಿ, ಕೊನೆಗೆ ಯಾವುದೋ ಒಂದು ಹೊಸ ಆಸೆಯನ್ನು ಹೊತ್ತು ಮನಸ್ಸನ್ನು ಗಟ್ಟಿ ಮಾಡಿ ಪಿರ್ಯಾದಿಗೆ ಹೆಬ್ಬೆಟ್ಟು ಒತ್ತಿದ್ದಳು.

ಇನ್ ಸ್ಪೆಕ್ಟರ್ ಕೈಲಾಶ್ ನಾಥ್, ಮೇಲಧಿಕಾರಿಗಳ ಅನುಮತಿ ಪಡೆದು ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದರು. ಅಲ್ಲಿದ್ದ ಆ ಶವದ ಮೇಲೆ ಉಳಿದಿದ್ದ ಮರಳು ಮಿಶ್ರಿತ ಆಂಗ್ರಖ, ಪೈಜಾಮ ಮತ್ತು ಪುಡಿ ಪುಡಿ ಆಗುತ್ತಿದ್ದ ಪೇಪರಿನ ತುಂಡುಗಳನ್ನು ಜೋಪಾನವಾಗಿ ಲ್ಯಾಮಿನೇಷನ್ ಮಾಡಿಸಿ, ಊರಿಗೆ ತಂದಿದ್ದರು. ಪೇಪರ್ ಮೇಲಿದ್ದ ಪ್ರಕಾಶನ ಮಾಂಡವ ಎಂಬುದನ್ನು ದೃಢಪಡಿಸಿಕೊಂಡು, ದಿನಾಂಕವನ್ನು ಗಮನಿಸಿದಾಗ, ಅದು ಹುಕಮ್ ಚಾಂದ್ ಗಾಯಬ್ ಆದ ದಿನದ ಹಿಂದಿನ ದಿನ ಎಂಬುದು ಸಾಬೀತಾಗಿತ್ತು. ಚಂದ್ರಪುರದಲ್ಲಿ, ಪೇಪರ್ ಓದುವಂತಹ ಜನರು ಕೆಲವರೇ ಇದ್ದು, ಐದು ವರ್ಷಗಳ ಹಿಂದೆ, ಪೇಪರ್ ಹಾಕುತ್ತಿದ್ದ ಹುಡುಗನ ಜಾಡು ಹಿಡಿದು ಹೊರಟ ಇನ್ಸ್ಪೆಕ್ಟರರಿಗೆ, ಆತ ಪತ್ರಿಕೆ ಹಾಕುತ್ತಿದ್ದ ಕೆಲವೇ ಹವೇಲಿಗಳ ಹೆಸರುಗಳಲ್ಲಿ ಒಂದು “ಪುರಾನಾ ಹವೇಲಿ” ಅರ್ಥಾತ್ ಚಾಂದ್ ಸಹೋದರರ ಮನೆ ಎಂದು ತಿಳಿದಿತ್ತು.

ನಂತರ ಕೈಲಾಶ್ ನಾಥ್ ಮಾಂಡ್ವಾದ ‘ಸಂತೋಷಿ ಟೈಲರ್’ ಅವರನ್ನು ಹುಡುಕಿಕೊಂಡು ಹೋಗಿ ಆ ಶವದ ಮೈಮೇಲೆ ಇದ್ದ ಬಟ್ಟೆಗಳ ಫೋಟೋವನ್ನು ತೋರಿಸಿದ್ದಾರೆ. ಮೊದಮೊದಲು ನೆನಪು ಮಾಡಿಕೊಳ್ಳಲು ಕಷ್ಟ ಪಟ್ಟ ದರ್ಜಿ ಸಂತೋಷ್ ರಾಮ್ ಕೊನೆಗೆ ಬಟ್ಟೆಯನ್ನು ನೋಡಲು ಕೋರಿಕೊಂಡಿದ್ದರು. ಆ ಬಟ್ಟೆಯಲ್ಲಿ ಹಾಕಿದ್ದ ಕೆಲವು ವಿಶಿಷ್ಟ ವಿನ್ಯಾಸಗಳನ್ನು ನೋಡಿದ ಅವರಿಗೆ ಇದನ್ನು ಚಂದ್ರಾಪುರದ ಹವೆಲಿಯ ಠಾಕೂರ್ ರಿಗೆ ಹೊಲಿದು ಕೊಟ್ಟ ಅಸ್ಪಷ್ಟ ನೆನಪು ಬಂದಿದೆ.

ಅಲ್ಲಿಗೆ ಹುಕಮ್ ಚಂದ್ ಕೊಲೆಯಾದದ್ದು ಬಹುತೇಕವಾಗಿ ಖಚಿತವಾಗಿತ್ತು. ಯಾರು, ಯಾಕೆ ಮಾಡಿರಬಹುದು ಎಂಬುದನ್ನು ಪತ್ತೆ ಹಚ್ಚುವ ಬೃಹತ್ ಜವಾಬ್ದಾರಿ ಹೊತ್ತ ಕೈಲಾಶ್ ನಾಥ್, ಒಂದೊಂದೇ ವಿಷಯಗಳ ಬಗ್ಗೆ ತಲೆ ಕೆಡಿಸಿಕೊಳ್ಳತೊಡಗಿದರು. ಅವರ ಕೆಲಸ, ಹುಲ್ಲು ಬಣವೆಯಲ್ಲಿ ಸೂಜಿ ಹುಡುಕಿದಂತೆ ಸಾಗುತ್ತಿತ್ತು.

ಮೊದಲು ಪುರಾನಾ ಹವೇಲಿಯಿಂದ ವಿಚಾರಣೆಗೆ ತೊಡಗಿದ ಅವರಿಗೆ, ವ್ಯಾಪಾರಕ್ಕೆ ಎಂದು ಹೋಗಿದ್ದರು ಎಂಬುದು ಒಂದು ಬಿಟ್ಟರೆ ಬೇರೆ ಹೆಚ್ಚಿನ ವಿವರಗಳು ಅವರಿಗೆ ಸಿಕ್ಕಿರಲಿಲ್ಲ. ಒಂಟೆಯನ್ನು ಏರಿ ಹೋಗಿದ್ದ ಅವರನ್ನೇ ಆಗಲಿ, ಆ ಒಂಟೆಯನ್ನಾಗಲೀ ನೋಡಿದ್ದು ನೆನಪಿಸಿಕೊಂಡು ಹೇಳುವವರು ಯಾರೂ ಸಿಕ್ಕಲಿಲ್ಲ. ಮರಳುಗಾಡಿನಲ್ಲಿ ವಾರಸುದಾರರು ಇಲ್ಲದೆ ಎಷ್ಟೋ ಒಂಟೆಗಳು ಅಲೆಯುತ್ತಿರುವಾಗ, ಇವರದ್ದು ಯಾವುದು ಎಂದು ಐದು ವರ್ಷಗಳ ನಂತರ, ಕಂಡು ಹಿಡಿಯುವ ಪ್ರಯುತ್ನ ಹಾಸ್ಯಾಸ್ಪದವಾಗುತ್ತಿತ್ತು. ಹೀಗಿರಲು, ಕೆಲವು ದಿನಗಳ ಬಳಿಕ ಪಕ್ಕದ ಊರಿನಲ್ಲಿ ಕೆಲಸಕ್ಕೆ ಎಂದು ಹೋದ ಕೈಲಾಶ್ ನಾಥ್ ದೃಷ್ಟಿ, ಅಲ್ಲಿ, ಮರಳು ದಿಬ್ಬ ಒಂದರ ಮೇಲೆ, ಚಿಂದಿ ಚಿಂದಿಯಾದ ಬಟ್ಟೆಗಳನ್ನು ತೊಟ್ಟ, ಕೆದರಿದ ಉದ್ದನೆಯ ಕೂದಲು ಗಡ್ಡ ಬಿಟ್ಟುಕೊಂಡು, ತನ್ನಷ್ಟಕ್ಕೆ ತಾನು ಅಸ್ಪಷ್ಟವಾಗಿ ಮಾತನಾಡುತ್ತಾ ಕುಳಿತಿದ್ದ, ಒಬ್ಬ ವ್ಯಕ್ತಿಯ ಮೇಲೆ ಹರಿದಿತ್ತು.. ಯಾಕೋ ಅವನ ಬಗ್ಗೆ ಕನಿಕರ ಮೂಡಿ, ಅವನ ಬಳಿ ಹೋಗಿ ತನ್ನಲ್ಲಿದ್ದ ರೋಟಿ ಮತ್ತು ನೀರನ್ನು ಅವನಿಗೆ ಕೊಟ್ಟಿದ್ದರು. ಎಷ್ಟೋ ದಿನದಿಂದ ಊಟವನ್ನೆ ಕಾಣದ ಆ ದುರ್ಭಾಗ್ಯ ವ್ಯಕ್ತಿ, ಕೊಟ್ಟದ್ದನ್ನೆಲ್ಲಾ ಗಬಗಬನೆ ತಿಂದು, ದೈನತೆಯ ಭಾವದಿಂದ ಇನ್ಸ್ಪೆಕ್ಟರ್ ಅನ್ನು ನೋಡಿ ಏನೋ ಮಾತನಾಡಲು ಹೊರಟ. ಅವನನ್ನು ಜೀಪ್ ನಲ್ಲಿ ಕೂರಿಸಿಕೊಂಡು, ಪಕ್ಕದ ಊರಿನ ಚಿಕ್ಕ ಸರಕಾರೀ ಆಸ್ಪತ್ರೆಗೆ ಕರೆದೊಯ್ದು, ಅಲ್ಲಿ ಅವನನ್ನು ಶುಚಿಗೊಳಿಸಿ ಕೂದಲು, ಗಡ್ಡ, ಕತ್ತರಿಸುವ ವ್ಯವಸ್ಥೆಯನ್ನು ಮಾಡಿಸಿದ್ದರು. ಆಗ, ಅವರ ಕಣ್ಣಿಗೆ ಬಿದ್ದದ್ದು, ಹಿಂದೆ ಒಳ್ಳೆಯ ದಿನಗಳನ್ನು ಕಂಡಿರಬಹುದಾದಂತ ಸುಮಾರು ಎಪ್ಪತ್ತು ವರ್ಷದ ಒಬ್ಬ ವಯಸ್ಕ. ಮುಳುಗುವವನಿಗೆ ಹುಲ್ಲು ಕಡ್ಡಿಯೂ ಆಸರೆ ಎಂಬಂತೆ, ಆ ವ್ಯಕ್ತಿಯಿಂದ ತನಗೆ ಬೇಕಾದ ವಿವರಗಳು ಸಿಗಬಹುದೇ ಎಂದುಕೊಂಡು, ನಿಧಾನವಾಗಿ ಪ್ರಶ್ನಿಸತೊಡಗಿದ ಅವರಿಗೆ, ಅನಿರೀಕ್ಷಿತವಾಗಿ, ಒಂದು ಆಶ್ಚರ್ಯಕರವಾದ ವಿಷಯ ತಿಳಿದು ಬಂದಿತ್ತು.

ಆ ವ್ಯಕ್ತಿ ಮತ್ಯಾರೂ ಆಗಿರದೇ ಹುಕುಂ ಚಂದನ ಜೊತೆಯಲ್ಲಿ ಹೋಗಿದ್ದ ಅವನ ಬಲಗೈ ಬಂಟ, ಬುದ್ವಾ! ವಯಸ್ಸಿನ ಅರಳು ಮರಳಿನ ಜೊತೆಗೆ, ಮಾನಸಿಕ ಆಘಾತಕ್ಕೆ ಒಳ ಪಟ್ಟಂತೆ ಕಾಣುತ್ತಿದ್ದ ಅವನು ಹೇಳಿದ ಕೆಲವು ವಿಷಯಗಳನ್ನು ಜೋಡಿಸಿದಾಗ, ಕೊಲೆಯ ಹಿಂದಿನ ಚಿತ್ರಣ ಅವರಿಗೆ ಬಿಡಿಸಿದ ‘ಜಿಗ್ ಜಾಗ್’ ಒಗಟಿನಂತೆ ಆಯಾಯ ಜಾಗದಲ್ಲಿ ಕೂರಲು ತೊಡಗಿತ್ತು.

*****

ತಮ್ಮ ಪ್ರೀತಮ್ ಚಂದನ ಮಗಳು ಚಮೇಲಿಗೆ ದೊಡ್ಡಪ್ಪ ಎಂದರೆ ಇಷ್ಟ ಎಂದು ಮೊದಲೇ ಹೇಳಿದ್ದೆ. ಅದೇ ರೀತಿ ಮಕ್ಕಳಿಲ್ಲದ ದೊಡ್ಡಪ್ಪ ಅವಳನ್ನು ತುಂಬಾ ಹಚ್ಚಿಕೊಂಡಿದ್ದರು ಮತ್ತು ಅವಳು ಮಾಡುತ್ತಿದ್ದ ಎಲ್ಲಾ ಕೆಲಸದಲ್ಲಿ ಅವಳಿಗೆ ಅವರ ಬೆಂಬಲವಿರುತ್ತಿತ್ತು. ದಿನ ಕಳೆದಂತೆ, ಚಮೇಲಿ ಪಕ್ಕದ ಊರಿನ ಒಬ್ಬ ಕೆಳ ಸ್ತರದ ಜನಾಂಗದ ಯಾರೂ ಗತಿ ಗೋತ್ರ ಇಲ್ಲದ ಅನಾಥ ಹುಡುಗ ಪನ್ನಾರಾಮ್ ನೊಂದಿಗೆ ಬೆರೆಯುವುದನ್ನು ಕಂಡ ಅಣ್ಣ ಧ್ಯಾನ್ ಚಂದ್, ಇದನ್ನು ವಿರೋಧಿಸಿದ್ದ. ಇದು ರಾಜಪೂತರ ಮರ್ಯಾದೆಯ ಪ್ರಶ್ನೆಯಾಗಿತ್ತು. ಆ ಹುಡುಗನಿಗೂ ಬುದ್ಧಿ ಹೇಳಿ ನೋಡಿ ಅದು ಯಾವುದೇ ಪರಿಣಾಮ ಬೀರದೇ ಇರುವಾಗ ಅವನನ್ನು ಮುಗಿಸಲು ನಿಶ್ಚಯಿಸಿದ್ದಾನೆ. ಆ ಒಂದು ದುರಂತ ನಡೆದ ದಿನ, ಬೆಳಿಗ್ಗೆ ಮನೆಯಿಂದ ಹೊರಟ ಧ್ಯಾನ್ ಚಂದ್ ಗೆ, ದಾರಿಯಲ್ಲಿ ಪೇಪರ್ ಹುಡುಗ ಸಿಕ್ಕಿ, ಪೇಪರ್ ಕೊಟ್ಟು ಹೋಗಿದ್ದಾನೆ. ಮುಂದೆ ಹೊಲದಲ್ಲಿ ಒಬ್ಬನೇ ಕೆಲಸ ಮಾಡುತಿದ್ದ ಪನ್ನಾ ರಾಮ್ ನನ್ನು ಕೊನೇ ಬಾರಿಯ ಪ್ರಯತ್ನ ಎಂದು, ತಂಗಿಯ ಸಹವಾಸ ಬಿಟ್ಟು ದೂರ ಹೋಗಲು ಹೇಳಿದ್ದಾನೆ. ಬಿಸಿ ರಕ್ತದ ತರುಣ ಮಾರುತ್ತರ ಕೊಟ್ಟಾಗ, ಧ್ಯಾನ್ ಚಂದ್ ಅವನನ್ನು ಸಿಕ್ಕಾಪಟ್ಟೆ ಹೊಡೆದು, ಆ ಹುಡುಗ ಅಲ್ಲೇ ಸತ್ತು ಬಿದ್ದಿದ್ದ.

ಇಷ್ಟಾಗುವಾಗ ವ್ಯಾಪಾರಕ್ಕೆಂದು ಹೊರಟ್ಟಿದ್ದ ಹುಕುಂ ಚಂದ್ ಆ ದಾರಿಯಲ್ಲಿ ಬಂದಿದ್ದು ಧ್ಯಾನ್ ಚಂದ್ ಓಡಿ ಹೋಗಿ ತಾನು ಕುಟುಂಬದ ಮರ್ಯಾದೆಯನ್ನು ಎತ್ತಿ ಹಿಡಿಯಲು ಹೇಗೆ ಈ ಕೊಲೆಯನ್ನು ಮಾಡಬೇಕಾಯಿತು ಎಂದು ಹೇಳಿ, ತನಗೆ ಸಹಾಯ ಮಾಡುವಂತೆ ಕೇಳಿಕೊಂಡಿದ್ದಾನೆ. ಆದರೆ ಊರಿನ ಹಿರಿಯನಾಗಿದ್ದು, ಊರವರಿಗೆ ನ್ಯಾಯ ಕೊಡಿಸುವ ಹುಕುಂ ಚಂದ್ ಇದಕ್ಕೆ ಒಪ್ಪದೆ, ಮಗನನ್ನು ಪೋಲೀಸರಲ್ಲಿ ಶರಣಾಗಲು ಹೇಳಿದ್ದಾರೆ. ಮಗ ಇದಕ್ಕೆ ಒಪ್ಪದಿರುವಾಗ, ತಾನೇ ಹೋಗಿ ಕಂಪ್ಲೇಂಟ್ ಕೊಡುತ್ತೇನೆ ಎಂದು ಹೇಳಿ, ಒಂಟೆಯನ್ನು ತಿರುಗಿಸಿದ್ದಾರೆ.

ಮೊದಲೇ ದೊಡ್ಡಪ್ಪನ ನ್ಯಾಯದ ಅನುಷ್ಠಾನವನ್ನು ಹೆಚ್ಚಾಗಿ ಸಹಿಸದೇ ಇದ್ದ ಧ್ಯಾನ್ ಚಂದ್, ಹೆದರಿಕೆಯಿಂದ ಕೂಡಲೇ ಹಿಂದಿನಿಂದ ಒಂಟೆಗೆ ಕಟ್ಟುವ ಮೂಗು ದಾರವನ್ನು ದೊಡ್ಡಪ್ಪನ ಕುತ್ತಿಗೆಯ ಸುತ್ತ ಹಾಕಿ ಎಳೆದಿದ್ದಾನೆ. ಕತ್ತಿನ ಸುತ್ತಲಿನ ಕುಣಿಕೆ ಬಿಗಿಯಾಗಿ ಹುಕುಮ್ ಚಂದ್ ಉಸಿರು ಕಟ್ಟಿ ಅಲ್ಲಿಯೇ ಮರಣ ಹೊಂದಿದ್ದಾರೆ. ಗಾಬರಿಗೊಂಡ ಧ್ಯಾನ ಚಂದ್ ನಿಗೆ, ಸ್ಪಲ್ಪ ದೂರದಲ್ಲಿ ನಿಂತು ಇದೆಲ್ಲವನ್ನೂ ನೋಡಿ, ಮಾನಸಿಕ ಆಘಾತಕ್ಕೆ ಒಳಗಾಗಿ ಪ್ರಜ್ಞೆ ತಪ್ಪಿ ಬಿದ್ದಿದ್ದ ಬುಧ್ವಾ ಗಮನಕ್ಕೆ ಬಾರದೆ ಹೋಗಿದ್ದ. ಹೊಲಕ್ಕೆ ಓಡಿದ ಆತ ಗುದ್ದಲಿ ತಂದು, ಅಲ್ಲೇ ಪಕ್ಕದ ಮರಳಿನಲ್ಲಿ ಗುಂಡಿ ತೆಗೆದು, ಕೈಯಲ್ಲಿ ಇದ್ದ ಪೇಪರ್ ನಲ್ಲಿ ದೊಡ್ಡಪ್ಪನ ಶವವನ್ನು ಆದಷ್ಟು ಸುತ್ತಿ, ಅಲ್ಲಿ ಹೂತು ಹಾಕಿದ್ದಾನೆ. ಹುಡುಗನ ಶವವನ್ನು ಒಂಟೆಯ ಬೆನ್ನ ಮೇಲೆ ಹಾಕಿ, ಅದನ್ನು ಚಾಟಿಯಿಂದ ಹೊಡೆದು ಮರಳುಗಾಡಿನಲ್ಲಿ ಓಡಿಸಿದ್ದಾನೆ. ಆಘಾತಕ್ಕೆ ಒಳಗಾದ ಬುಧ್ವಾ ಎಚ್ಚರಗೊಂಡಾಗ ಎಲ್ಲವೂ ಮುಗಿದಿತ್ತು. ಆತ ಮನಸ್ಸಿನ ಸ್ಥಿಮಿತ ಕಳೆದುಕೊಂಡು ಮರಳುಗಾಡಿನಲ್ಲಿ ಎಲ್ಲೆಲ್ಲೋ ಅಲೆಯಲು ತೊಡಗಿದ್ದ. ತನ್ನವರು ಯಾರೂ ಇಲ್ಲದ ಪನ್ನಾರಾಮನನ್ನು ಹುಡುಕುವ ಗೋಜಿಗೆ ಯಾರೂ ಹೋಗಲಿಲ್ಲ.

ಅದಷ್ಟರಲ್ಲಿ, ಕೊಲೆ ಆದದ್ದು ಯಾರು, ಯಾರು ಮಾಡಿದರು, ಕೊಲೆಯ ಕಾರಣ ಎಲ್ಲವೂ ಇನ್ಸ್ಪೆಕ್ಟರ್ ಕೈಲಾಶ್ ನಾಥ್ ಗೆ ತಿಳಿಯಿತಾದರೂ ಆ ಶವ ಹೇಗೆ ಬೆಂಗಳೂರಿಗೆ ಹೋಗಿತ್ತು ಎಂಬ ಪ್ರಶ್ನೆಗೆ, ಉತ್ತರ ಸಿಕ್ಕಲು ಕೆಲವು ದಿನಗಳೇ ಹಿಡಿದಿತ್ತು.

ಸ್ವಲ್ಪ ಸಮಯದ ಹಿಂದೆ, ಆ ಊರಿಗೆಂದು ಒಂದು ಸರಕಾರಿ ಶಾಲೆ ಮಂಜೂರು ಆಗಿ, ಅದರ ಕಟ್ಟಡ ಈ ಶವವನ್ನು ಹೂಳಿದ್ದ ಸ್ಥಳದಲ್ಲೇ ಆಗಿದ್ದು, ಅದರ ಕೆಲಸಕ್ಕೆಂದು ಹೊರ ಊರಿನ ಜನರು ಬಂದವರಲ್ಲಿ ಇಬ್ಬರು, ಕುಡಿತದ ಮತ್ತಿನಲ್ಲಿ ಹೇಳಿದ್ದ ಕೆಲವು ಮಾತುಗಳನ್ನು ಕೇಳಿಸಿಕೊಂಡ ಯಾರೋ ಒಬ್ಬರು, ಪೊಲೀಸರಿಗೆ ತಿಳಿಸಿದ್ದಾರೆ. ಕಟ್ಟಡ ನಿರ್ಮಾಣದ ಸಮಯದಲ್ಲಿ ಸಿಕ್ಕಿದ ಶವವನ್ನು ಯಾರು, ಏನು ಎಂದು ತಿಳಿಯದ ಕೆಲಸಗಾರರು, ಧ್ಯಾನ್ ಚಂದ್ ಕೊಟ್ಟ ಹಣದ ಆಸೆಗೆ ಬಿದ್ದು, ಅದನ್ನು ಗೋಣಿ ಚೀಲದಲ್ಲಿ ಹಾಕಿ, ಪಕ್ಕದ ಊರಿನಲ್ಲಿ ಕಲ್ಲಿದ್ದಲು ಸಾಗಿಸುತ್ತಿದ್ದ ಗೂಡ್ಸ್ ರೈಲು ಗಾಡಿಯ ಮೇಲೆ ಎಸೆದಿದ್ದಾರೆ. ಅನೇಕ ದಿನ ಸಾಗಿದ ಆ ಗೂಡ್ಸ್ ಗಾಡಿ, ಬೆಂಗಳೂರಿನ ಸಮೀಪ ಬಂದಾಗ, ಆ ಗೋಣಿ ಚೀಲ ಕೆಳಗೆ ಬಿದ್ದಿರಬೇಕು.

ಈಗ ಬಂದು ಈ ಕೊಲೆಯನ್ನು ನ್ಯಾಯವಾದ ಮಾರ್ಗದಲ್ಲಿ ತೆಗೆದುಕೊಂಡು ಹೋಗುವ ಪರಿ ನೋಡೋಣ.

ಪನ್ನಾರಾಮ್ ನ ಶವ ಯಾರಿಗೂ ಸಿಕ್ಕದೇ ಮರಳುಗಾಡಿನ ಹದ್ದುಗಳ ಪಾಲಾಗಿರುವ ಸಾಧ್ಯತೆಗಳೇ ಹೆಚ್ಚು. ಕಾನೂನಿನ ಪ್ರಕಾರ ಇಲ್ಲಿ ಕಾರ್ಪಸ್ ಡಿಲೆಕ್ಟಿ ಇಲ್ಲ. ಅಂದರೆ ಯಾವುದೇ ವ್ಯಕ್ತಿಯನ್ನು ಒಂದು ಕೊಲೆಯ ಆರೋಪದ ಹಿನ್ನಲೆಯಲ್ಲಿ ಬಂಧಿಸಬೇಕಾದರೆ ಕೆಲವೊಂದು ವಿಷಯಗಳ ಅಗತ್ಯ ಇರುತ್ತದೆ. ಕೊಲೆ ಎಂದು ಸಾಬೀತು ಪಡಿಸಲು, ಕೊಲೆಯಾದ ವ್ಯಕ್ತಿಯ ಶವವಾಗಲೀ, ಬೇರೆ ಯಾವುದೇ ರೀತಿಯ ಸಾಕ್ಷ್ಯಾಧಾರಗಳೂ ಇಲ್ಲದ ಕಾರಣ, ಕೊಲೆಯ ಆರೋಪದ ಹಿನ್ನೆಲೆಯಲ್ಲಿ ಯಾರನ್ನೂ ಬಂಧಿಸುವ, ಅಥವಾ ಕೇಸ್ ದಾಖಲು ಮಾಡುವಂತಿರಲಿಲ್ಲ. ಇನ್ನೊಂದು ವಿಷಯವೆಂದರೆ, ಕಾಣೆಯಾಗಿರುವ ವ್ಯಕ್ತಿಯನ್ನು ಮೃತನಾಗಿದ್ದಾನೆ ಎಂದು ಕಾನೂನಿನಲ್ಲಿ ಘೋಷಿಸ ಬೇಕಾದರೆ ಏಳು ವರ್ಷ ಕಳೆಯಲೇಬೇಕು. ಇಲ್ಲಿ ಐದು ವರ್ಷ ಮಾತ್ರ ಕಳೆದಿದೆ. ಹಾಗಾಗೀ ಪನ್ನಾರಾಮ ಕಾನೂನಿನ ಪ್ರಕಾರ ಇನ್ನೂ ಜೀವಂತ ಇರಬಹುದು. ಈಗ ಅವನ ಕೊಲೆ ಬರೀ ನಮ್ಮ ಮನದಲ್ಲಿ ಮಾತ್ರ ಉಳಿದು ಬಿಡುತ್ತದೆ.

ಪ್ರಸ್ತುತದ ಪರಿಸ್ಥಿತಿಯಲ್ಲಿ, ಹುಕುಂ ಚಂದನ ಕೊಲೆಯ ಉದ್ದೇಶದ ಹಿನ್ನೆಲೆಯನ್ನು ಹುಡುಕುವುದು ಕಷ್ಟ. ಇದ್ದ ಒಬ್ಬ ಪ್ರತ್ಯಕ್ಷದರ್ಶಿ, ವಯೋಸಹಜ ಮರೆವು, ಮತ್ತು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದ. ಕೋರ್ಟ್, ಅವನ ಸಾಕ್ಷಿಯನ್ನು ಒಪ್ಪುವುದಿಲ್ಲ. ಸಾಂದರ್ಭಿಕ ಸಾಕ್ಷ್ಯ ಯಾವುದೂ ಸಿಕ್ಕಿರಲಿಲ್ಲ. ಆಗಿನ್ನೂ ಡಿ. ಎನ್. ಎ. ಪರೀಕ್ಷೆ ಬಂದಿರಲಿಲ್ಲ. ಹಾಗಾಗಿ, ಆ ಮಮ್ಮಿಫೈಡ್ ಶವ ಯಾರದ್ದು ಎಂದು ನಿಖರವಾಗಿ ಪ್ರತಿಪಾದಿಸಲು ಸಾಧ್ಯವಿರಲಿಲ್ಲ. ಅದರಲ್ಲೂ ಅದು ಸಾಕ್ಷಿಯನ್ನು ಮುಗಿಸುವ ಭರದಲ್ಲಿ, ದುಡುಕಿ, ಒಂದು ಸ್ವಾಭಾವಿಕ ಪ್ರತಿಕ್ರಿಯೆಯಿಂದ ನಡೆದಿದ್ದ ಕೊಲೆ. ಇದಕ್ಕೆ ಯಾವುದೇ ರೀತಿಯ ಪೂರಕ ಸಾಕ್ಷಿಗಳಿಲ್ಲ.


ಇಷ್ಟೆಲ್ಲಾ ಲೋಪದೋಷ ಇರುವ ಕೊಲೆ, ಶಿಕ್ಷೆಯಲ್ಲಿ ಪರಿವರ್ತಿತವಾಗುವ ಸಾಧ್ಯತೆ, ದೇಶದ ಕಾನೂನಿನ ಅಡಿಯಲ್ಲಿ ಕಷ್ಟ. ಇಂತಹ ಮರ್ಯಾದಾ ಹತ್ಯೆಗಳು ಆಗಾಗ ನಡೆಯುತ್ತಿದ್ದು, ಎಷ್ಟೋ ಬಾರಿ ಗೊತ್ತಾಗದೆ ಮುಚ್ಚಿ ಹೋಗಿವೆ. ಮೊದಲು ನಾನು, ‘ಐಬಿಲ್ಲದ ಕೊಲೆ’ ಎಂದು ಪರಿಗಣಿಸಿದ್ದುದು, ನನ್ನ ತಪ್ಪು ಕಲ್ಪನೆ ಎಂದು ಈಗ ಭಾಸವಾಗ ತೊಡಗಿದೆ….