ಇಷ್ಟೆಲ್ಲ ನಡೆಯತ್ತಿದ್ದಾಗ, ಅವನೆಲ್ಲಿದ್ದ? ಎಂದೇನಾದರೂ ಕೇಳಿದರೆ ತಾರಾಗೆ ಸರಿಯಾಗಿ ಉತ್ತರಿಸಲು ಸಾಧ್ಯವಾಗುವುದಿಲ್ಲ. ಅಷ್ಟಕ್ಕೂ ತಮ್ಮಿಬ್ಬರ ನಡುವೆ ಏನಿತ್ತು? ಇದ್ದದ್ದು ಎಷ್ಟು ಗಾಢವಾಗಿತ್ತು? ಸಾಧ್ಯವಾಗಿದ್ದರೆ ಅವನ ಜೊತೆ ಓಡಿ ಹೋಗುತ್ತಿದ್ದೇನೇ ತಾನು? ಕೇಳಿಕೊಳ್ಳುತ್ತಾಳೆ ಕೆಲವೊಮ್ಮೆ! ಕೆಲಕಾಲ ಬಿಟ್ಟಿರಲಾರದಂತೆ ಬೆಸೆದುಕೊಂಡಿದ್ದ ತಾವಿಬ್ಬರೂ, ಅದೆಷ್ಟು ಬೇಗ ಒಂದೇ ಊರಿನಲ್ಲಿದ್ದೂ ದಶಕಗಟ್ಟಲೇ ಅಜ್ಞಾತರಾಗಿ ಬದುಕಿ ಬಿಡುವಷ್ಟು ಬದಲಾಗಿ ಹೋದೆವು? ಮಾತಿನಲ್ಲಿ ನೂರಾರು ಚಂದದ ಕನಸುಗಳನ್ನು ಹೆಣೆದುಕೊಡುತ್ತಿದ್ದ ಅವನು, ಫಕ್ಕನೇ ನೋಡಿದರೆ ಗುರುತು ಹಿಡಿಯಲೂ ಕಷ್ಟವಾಗುವಷ್ಟು ಬೇರೆಯವನಾದದ್ದು ಯಾವಾಗ?
ಕಾರ್ತಿಕ್ ಆರ್. ಬರೆದ ಕಥೆ “ಒಂದು ಜೋಂಪು ನಿದ್ದೆ” ನಿಮ್ಮ ಈ ಭಾನುವಾರದ ಓದಿಗೆ
ಮಧ್ಯಾಹ್ನದ ಊಟವಾದ ನಂತರ, ಹೊರಗೆ ಬೆಂಕಿಯ ಮಳೆಯಂತೆ ಸುರಿಯುವ ಬಿಸಿಲನ್ನೂ ಲೆಕ್ಕಿಸದೇ ಬಾಲ್ಕನಿಯಲ್ಲಿ ಬಂದು ನಿಲ್ಲುತ್ತಾಳೆ ತಾರಾ. ಹಾಗೆ ನಿಲ್ಲುವವಳ ಕಣ್ಣುಗಳಲ್ಲಿ ಹರಳುಗಟ್ಟಿದ ನಿರೀಕ್ಷೆ ಹೊಳೆಯುತ್ತಿರುತ್ತದೆಯಾದರೂ, ಅದನ್ನವಳು ಒಪ್ಪುವುದಿಲ್ಲ. ಬಂದು ನಿಂತ ಐದು ಹತ್ತು ನಿಮಿಷಗಳಲ್ಲಿ ಬೀದಿಯ ಆಚೆ ಬದಿಯ ತಿರುವಿನಿಂದ ಸೈಕಲ್ ತುಳಿಯುತ್ತಾ ಬರುವ ಆಕೃತಿಯೊಂದು ಇವಳ ಮನೆಯೆದುರು ಹಾದು, ಬೀದಿಯು ಕೊನೆಯವರೆಗೂ ಹೋಗಿ, ಸೈಕಲ್ ತಿರುಗಿಸಿಕೊಂಡು ಮತ್ತೊಮ್ಮೆ ಮನೆಯೆದುರಿನಿಂದ ಸಾಗಿ ಹೋಗುತ್ತದೆ. ಕೆಲವೊಮ್ಮೆ ಮೂರು ನಾಲ್ಕು ಬಾರಿ ಬಾಲ್ಕನಿಯೆದುರು ಸುಳಿದಾಡುವ ಆ ವ್ಯಕ್ತಿಯನ್ನು ಒಂದಷ್ಟು ಹೊತ್ತು ದಿಟ್ಟಿಸಿ ನೋಡುವ ಇವಳು, ಕೊನೆಗೊಮ್ಮೆ ಸಣ್ಣಗೆ ಆಕಳಿಸಿ ಮನೆಯೊಳಗೆ ಹೋಗಿಬಿಡುತ್ತಾಳೆ. ಸೈಕಲ್ ಸವಾರ ಆಕೃತಿಯೂ ಬೀದಿಯ ತಿರುವು ದಾಟಿ ಮರೆಯಾಗುತ್ತದೆ. ಹಾಗೆ ಒಳಗೆ ಬಂದವಳು ಗಾಢವಾದ ನಿದ್ರೆಗೆ ಜಾರುತ್ತಾಳೆ.
ಏನು ನಿನ್ನ ಬಾಲ್ಕನಿ ಸಮಾಚಾರ? ಎಂದೇನಾದರೂ ಕೇಳಿದರೆ, ತಾರಾಳಿಗೆ ಥಟ್ಟನೇ ಉತ್ತರಿಸಲು ಆಗದೇ ಹೋಗಬಹುದು. ಏನೆಂದು ತಾನೇ ಹೇಳಿಯಾಳು? ತಂಗಿಯ ಜೊತೆ ತಿಂಗಳ ದಿನಸಿ ಸಾಮಾನಿಗೆಂದು ಪೇಟೆಗೆ ಹೋಗಿದ್ದಾಗ, ಸೊಪ್ಪು ಕೊಳ್ಳುತ್ತಿದ್ದ ವೇಳೆ, ಪಕ್ಕದಲ್ಲಿ ಹೋಗುತ್ತಿದ್ದ ಆಸಾಮಿಯೊಬ್ಬ ಇವಳನ್ನು ನೋಡಿದ್ದೇ ಒಂದು ಘಳಿಗೆ ದಿಟ್ಟಿಸಿ ಮುಂದೆ ಹೋದ. ಯಾರಿದೂ ಎಂದು ಇವಳೂ ನೋಡಿದಳು. ಅವಳು ಹೊತ್ತುಕೊಂಡಿದ್ದ ತರಕಾರಿ, ದಿನಸಿ, ಮಸಾಲೆ ಇತ್ಯಾದಿಗಳ ಚೀಲಗಳೆಲ್ಲ ಏಕಾಏಕಿ ಭಾರವೆನಿಸತೊಡಗಿದವು. “ತಾರಕ್ಕ, ಆಯ್ತಾ? ಹೋಗಣಾ?” ಎಂದು ಕೂಗಿ ಕರೆದ ತಂಗಿಯ ದನಿಯಿಂದ ಬೋಧೆ ಮರಳಿತು. ಇದಾಗಿ ಎರಡು ಮೂರು ದಿನಗಳ ನಂತರ, ಒಂದು ಮಧ್ಯಾಹ್ನ ಬಾಲ್ಕನಿಯಲ್ಲಿ ನಿಂತು ಎದುರು ಮನೆಯ ಹೆಂಗಸಿನ ಜೊತೆಯಲ್ಲಿ ಹರಟೆ ಕೊಚ್ಚುತ್ತಿದ್ದವಳು ಕೆಳಗೆ ಸೈಕಲ್‌ನಲ್ಲಿ ಹೋಗುತ್ತಿದ್ದ ಅದೇ ವ್ಯಕ್ತಿಯ ಕಣ್ಣಿಗೆ ಬಿದ್ದಳು. ಇವಳಿಗೂ ಅವನು ಕಾಣಿಸಿದ. ತನ್ನನ್ನು ಯಾರೋ ದಿಟ್ಟಿಸಿ ನೋಡುತ್ತಿದ್ದಾರೆ ಎನಿಸಿ, ಒಡನೇ ಗಾಬರಿ ಬಿದ್ದು ಮನೆಯೊಳಗೆ ಹೋದವಳು, ಧೈರ್ಯಗೂಡಿಸಿಕೊಂಡು ಮತ್ತೆ ಬಾಲ್ಕನಿಗೆ ಬಂದಾಗ, ಅವನು ಬೀದಿಯ ಅಂಚಿನ ತಿರುವನ್ನು ದಾಟುತ್ತಿದ್ದ.
ಅಂದಿನಿಂದ ದಿನವೂ ತಾರಾ ಹೆಚ್ಚು ಕಡಿಮೆ ಅದೇ ಹೊತ್ತಿಗೆ ಬಾಲ್ಕನಿಗೆ ಬಂದು ನಿಲ್ಲುತ್ತಾಳೆ. ಅವನೂ ಅದೇ ವೇಳೆ ದೂರದಲ್ಲಿ ಕಾಣಿಸಿಕೊಂಡು, ಒಂದೆರೆಡು ಬಾರಿ ಅವಳೆದುರು ಸುಳಿಯುತ್ತಾನೆ. ಮೊದಮೊದಲು ಸುಮ್ಮನೇ ದಿಟ್ಟಿಸುತ್ತಿದ್ದವನು, ಮೊನ್ನೆಯಿಂದ ಸಣ್ಣಗೆ ನಗಲು ಶುರುಮಾಡಿದ್ದಾನೆ. ಮುಂದೊಮ್ಮೆ ಮಾತನ್ನೂ ಆಡಿಯಾನು! ಇವಳು ಮಾತ್ರ ಸುಮ್ಮನೇ ನಿಂತು ನೋಡುತ್ತಾಳೆ. ಈ ಬಿಸಿಲಿನಲ್ಲಿ ಇವನನ್ನು ನಾನೇಕೆ ನೋಡುತ್ತಾ ನಿಂತಿದ್ದೇನೆ ಎಂದು ಯೋಚಿಸುತ್ತಾಳೆ ಕೆಲವೊಮ್ಮೆ. ಇನ್ನೆಷ್ಟು ದಿನ ಹೀಗೆ ನೋಡುತ್ತ ನಿಲ್ಲುವುದು, ಮಾತಾದರೂ ಆಡಬಹುದಿತ್ತು ಎಂದು ಕೆಲವು ಬಾರಿ ಅವಳಿಗೆ ಅನಿಸಿದ್ದಿದೆ, ಆದರೆ ಹಾಗೆಂದುಕೊಂಡ ಬೆನ್ನಿಗೇ, “ಅಯ್ಯಯ್ಯಪ್ಪ” ಎಂದುಕೊಂಡು ಬೆಚ್ಚಿಬಿದ್ದಿದ್ದಾಳೆ. ಎಷ್ಟೋ ಬಾರಿ ಅವನನ್ನು ನೋಡಿದಾಗಲೆಲ್ಲ, “ಉಹು, ಇದು ಅವನಲ್ಲ, ಅವನಲ್ಲ”ಎಂದೂ ಅನಿಸುತ್ತದೆ. ಒಮ್ಮೊಮ್ಮೆ, ಯಾವುದೋ ಕೋನದಲ್ಲಿ ಅವನ ಹಾಗೇ ಕಾಣಿಸುತ್ತಾನಲ್ಲಾ ಎಂಬ ಗೊಂದಲದ ಬೆನ್ನಿಗೇ, ಅವನೇ ಆಗಿದ್ದರೇನು, ಬಿಟ್ಟರೇನು ಎಂಬ ಉದಾಸೀನವೂ ಉಂಟಾಗುತ್ತದೆ ಅವಳಿಗೆ. ಆದರೂ ಈ ವಿಚಾರದ ಬಗ್ಗೆ ಪೂರಾ ಅಸಡ್ಡೆ ಮಾಡಲು ಅವಳಿಗೆ ಆಗುವುದಿಲ್ಲ.
ಅವನನ್ನು ಕೊನೆಯ ಬಾರಿ ನೋಡಿ ಇಪ್ಪತ್ತೋ ಇಪ್ಪತ್ತೆರೆಡೋ ವರ್ಷಗಳೇ ಆಗಿರಬೇಕು ಎನಿಸಿದಾಗಲೆಲ್ಲ ತಾರಾಗೆ ಆಶ್ಚರ್ಯವಾಗುತ್ತದೆ. ಇಷ್ಟು ವರ್ಷಗಳಲ್ಲಿ ಏನೆಲ್ಲ ಆಗಿ ಹೋಯಿತು! ಅವನ ಜೊತೆ ಕಳೆದ ಕಾಲಕ್ಕಿಂತಲೂ, ಅವನು ಇಲ್ಲದೇ ಕಳೆದ ಕಾಲದ ತೂಕವೇ ಹೆಚ್ಚಾಗಿದ್ದರೂ, ಈಗಲೂ ಅವನು ಜೊತೆಗಿದ್ದ ದಿನಗಳ ನೆನಪಾದಾಗಲೆಲ್ಲ ಕಾಲ ತನ್ನೆಲ್ಲ ಕೆಲಸಗಳನ್ನೂ ಅಲ್ಲಲ್ಲೇ ಬಿಟ್ಟು ಆಗಿನ ತಮ್ಮಿಬ್ಬರ ಹತ್ತಿರವೇ ಓಡಿ ಹೋಗಿ ಬಿಡುತ್ತದೆ ಎನಿಸಿದಾಗ, “ಥೋ, ನನಗೆ ನಲವತ್ತೈದು ದಾಟಿರುವುದು ನಿಜವೋ!” ಎಂದುಕೊಂಡು ಸಣ್ಣಗೆ ನಕ್ಕುಬಿಡುತ್ತಾಳೆ. ಎಲ್ಲವೂ ಮಾಸಲು ಮಾಸಲಾಗಿಯಷ್ಟೇ ನೆನಪಿವೆ. ಕಣ್ಣೆದುರಿಗಿಲ್ಲದ ವಸ್ತು, ಅದು ಎಷ್ಟೇ ಪ್ರಿಯವಾದದ್ದೇ ಆಗಿದ್ದರೂ, ದಿನಗಳೆದಂತೆ ತನ್ನ ರೂಪ, ಆಕಾರ, ಘಮ, ಸ್ಪರ್ಶಗಳ ನಿರ್ದಿಷ್ಟ ರೂಪವನ್ನೆಲ್ಲ ಕಳೆದುಕೊಂಡು, ಹೀಗೆಂದು ಹೇಳಿಕೊಳ್ಳಲಾಗದ ಒಂದು ಅನುಭೂತಿಯಷ್ಟೇ ಆಗಿ ಉಳಿಯುತ್ತದೆ, ಪುಸ್ತಕದಲ್ಲಿಟ್ಟು ಮರೆತ ಹೂವಿನ ಪಕಳೆಗಳೆಲ್ಲ ಉದುರಿ ಹೋಗಿ, ಕಡೆಗೆ ಪುಟದ ಮೇಲೆ ಹೂವಿನ ಅಸ್ಪಷ್ಟ ಛಾಯೆ ಮಾತ್ರ ಉಳಿದ ಹಾಗೆ.
ಎಲ್ಲಿ ಸಿಕ್ಕ ಅವನು? ಹೇಳುವುದು ಸುಲಭವಲ್ಲ. ಸಾಕಷ್ಟು ಬಾರಿ ಒಂದೇ ಬೀದಿಯಲ್ಲಿ ಎದುರುಬದುರೇ ಓಡಾಡಿಕೊಂಡಿದ್ದ ತಾವಿಬ್ಬರೂ ಅದಾವ ಹೊತ್ತಿನಲ್ಲಿ ಒಬ್ಬರಿಗೊಬ್ಬರು ಕಾಣಿಸಿಕೊಂಡೆವು? ಅದು ಸಾಯಲಿ, ಅವನು ನೋಡುವುದಕ್ಕಾದರೂ ಹೇಗಿದ್ದ? ಅರೇ, ಮುಖವೇ ನೆನಪಾಗುತ್ತಿಲ್ಲ! ಕೈಕೊಡುವುದರಲ್ಲಿ ನೆನಪುಗಳನ್ನು ಮೀರಿಸಿದವರಾರು? ಒಟ್ಟಿನಲ್ಲಿ, ಮರೆವಿಗೆ ಜಾರಿಹೋಗಿರುವ ಯಾವುದೋ ಬಿಂದುವಿನಲ್ಲಿ ಅವನನ್ನು ಸಂಧಿಸಿ, ಜೊತೆಯಾದವಳಿಗೆ, ಅವನ ರಂಜಾನಿನ ಚಂದ್ರನು, ತನ್ನ ಉಗಾದಿಯ ಚಂದ್ರನಷ್ಟೇ ಮಳ್ಳ ಸ್ವಭಾವದವನೆಂದು ತಿಳಿಯುವ ಹೊತ್ತಿಗಾಗಲೇ, ಅವಳ ನಿದ್ದೆ ಬರದ ರಾತ್ರಿಗಳಿಗೆ ಅವನ ಹೆಸರಿಟ್ಟಾಗಿತ್ತು. ತನಗೆ ಅವನು ಇಷ್ಟವೋ, ಅವನ ಜೊತೆಗಿರುವುದು ಹಿಡಿಸುತ್ತದೋ ಅಥವಾ ಅದಾವುದೂ ಅಲ್ಲದ ಬೇರೇನೋ ಚೆಂದವೆನಿಸುತ್ತದೆಯೋ ಎಂಬ ಗೊಂದಲದಲ್ಲಿ ಇರುವಾಗಲೇ ವಾರಿಗೆಯ ಹುಡುಗಿಯರೆಲ್ಲ ಅವರಿಬ್ಬರನ್ನು ನೋಡಿ ಕಿಸಕಿಸ ನಗಲು ಶುರುಮಾಡಿದ್ದರು. “ಅವನು ನಮ್ಮ ಜಾತಿಯಲ್ಲ, ಗೊತ್ತು ತಾನೇ?”, “ಏ, ನಿನಗೆ ಬೇರೆ ಯಾರೂ ಸಿಗಲಿಲ್ಲವೇನೇ?”, “ಮನೆಯಲ್ಲಿ ಗೊತ್ತಾದರೆ ಮುಗೀತು ನಿನ್ನ ಕತೆ”ಎಂಬೆಲ್ಲ ಮಾತುಗಳು ಅದೆಷ್ಟೇ ಪ್ರಯತ್ನ ಪಟ್ಟರೂ ಮುಖ್ಯವೆನಿಸಿರಲೇ ಇಲ್ಲ, ಇಬ್ಬರಿಗೂ.
ತನ್ನನ್ನು ಯಾರೋ ದಿಟ್ಟಿಸಿ ನೋಡುತ್ತಿದ್ದಾರೆ ಎನಿಸಿ, ಒಡನೇ ಗಾಬರಿ ಬಿದ್ದು ಮನೆಯೊಳಗೆ ಹೋದವಳು, ಧೈರ್ಯಗೂಡಿಸಿಕೊಂಡು ಮತ್ತೆ ಬಾಲ್ಕನಿಗೆ ಬಂದಾಗ, ಅವನು ಬೀದಿಯ ಅಂಚಿನ ತಿರುವನ್ನು ದಾಟುತ್ತಿದ್ದ.
ತಾರಾ ಇಂಥವೇ ಲೆಕ್ಕವಿಲ್ಲದಷ್ಟು ನೆನಪುಗಳಲ್ಲೇ ತನ್ನ ದಿನಗಳನ್ನು ಅದ್ದಿ ತೆಗೆಯುತ್ತಾಳೆ. ಹೊತ್ತು ಹುಟ್ಟುವುದಕ್ಕೆ ಮುನ್ನವೇ ನಿದ್ದೆ ಮುಗಿಸಿ ಎದ್ದರೆ, ರಾತ್ರಿ ಹಾಸಿಗೆ ಬಿಡಿಸಿಕೊಳ್ಳುವವರೆಗೂ ಮನೆಯ ಕೆಲಸಗಳಲ್ಲಿ ಕುತ್ತಿಗೆಯವರೆಗೂ ಮುಳುಗೇಳುವ ಅವಳು, ಮಧ್ಯಾಹ್ನದ ಊಟದ ನಂತರ ತನಗೆಂದು ಉಳಿಯುವ ಒಂದರೆಡು ಗಂಟೆಗಳನ್ನು ಖಾಸಗೀ ಆಸ್ತಿಯಂತೆ ಜೋಪಾನ ಮಾಡುತ್ತಾಳೆ. ನಲವತ್ತಾರು (ಇಲ್ಲ ನಲವತ್ತೆಂಟೋ?) ದಾಟಿದ ತನ್ನ ಬದುಕಿನ ಕಳೆದ ಹದಿನೆಂಟಕ್ಕೂ ಹೆಚ್ಚು ವರ್ಷಗಳನ್ನು ತಂಗಿಯ ಮನೆಯ ಹಾಲಿನ ಮೂಲೆಯ ದೀವಾನು ಕಾಟು, ಮತ್ತು ಅದರ ಅಡಿಯಲ್ಲಿ ತುರುಕಿಟ್ಟ ಚಾಪೆ, ಹಾಸಿಗೆ, ಬಟ್ಟೆಯ ಪೆಟ್ಟಿಗೆಗಳಿಗಷ್ಟೇ ಸೀಮಿತವಾಗಿ ಕಳೆದಿರುವ ತಾರಾಳಿಗೆ, ಯಾರದೋ ಬರುವಿಕೆಯಿಂದ ತನ್ನ ಜೀವನ ಬದಲಾಗಿಬಿಡುತ್ತದೆ ಎಂಬ ನಿರೀಕ್ಷೆಯೇನೂ ಇಲ್ಲ. ಹಾಗಾಗಲಿ ಎಂಬ ಆಸೆಯೂ ಇಲ್ಲ. ಬದಲಾಗಬೇಕಿದ್ದರೆ, ಅದು ಹಿಂದೆಯೇ ಆಗಬೇಕಿತ್ತು. ಈಗೇನಿದ್ದರೂ ತನ್ನ ಪಾಲಿನ ಅಮೂಲ್ಯ ಆಸ್ತಿಯಾದ ಮಧ್ಯಾಹ್ನದ ಬಿಡುವಿನ ಭಾಗವಾಗಿ ಮಾತ್ರ ಅವನು ಇರಬಲ್ಲನೆಂದು ಅವಳಿಗೆ ಅನಿಸುತ್ತದೆ. ಮರುಗಳಿಗೆಯೇ, “ಇವನೇ ಅವನು ಅಂತಲೂ ಸರಿಯಾಗಿ ಗೊತ್ತಿಲ್ಲ, ಇನ್ನು ಇದೆಲ್ಲ ಬೇರೆ ಕೇಡು” ಎನಿಸಿಬಿಟ್ಟು ಪಿಚ್ಚೆನಿಸುತ್ತದೆ.
ಹಾಗೆ ನೋಡಿದರೆ, ಇಷ್ಟು ವರ್ಷಗಳಲ್ಲಿ ಅವನ ನೆನಪಾದದ್ದೂ ಕಡಿಮೆಯೇ. ಎಂದಾದರೂ ತಂಗಿಯ ಜೊತೆ ತಾವು ಹಿಂದೆ ವಾಸವಿದ್ದ ಆಸ್ಟಿನ್ ಟೌನ್ ಕಡೆಗೆ ಹೋದಾಗಲೆಲ್ಲ, ತನ್ನ ಬಾಲ್ಯದ, ಅಪ್ಪ ಅಮ್ಮ ಬದುಕಿದ್ದ ಕಾಲದ ಕೆಲವು ಸಂಗತಿಗಳು ನೆನಪಾಗುತ್ತಿದ್ದವು. ಪೋಲೀಸ್ ಕ್ವಾರ್ಟರ್ಸ್ ಪಕ್ಕದ ಇಳಿಜಾರು ರಸ್ತೆಯಲ್ಲಿ ಅಪ್ಪನ ಬಟ್ಟೆ ಅಂಗಡಿಯಿತ್ತು, ಮತ್ತು ಅಲ್ಲೇ ಪಕ್ಕದಲ್ಲಿ ಎರಡು ಕೋಣೆಗಳ ಬಿಡಾರದಲ್ಲಿ ನಾವು ವಾಸವಿದ್ದೆವು. ಮನೆಯಿಂದ ಒಂದೆರೆಡು ಫರ್ಲಾಂಗಿನಷ್ಟು ದೂರ ನಡೆದರೆ ಶಾಲೆ ಸಿಗುತ್ತಿತ್ತು, ಶಾಲೆ ಪಕ್ಕದ ಮುಖ್ಯ ರಸ್ತೆಯ ನಡುವಿನಲ್ಲಿದ್ದ ಮನೆದೇವರ ಗುಡಿಗೆ ಪ್ರತೀ ಶುಕ್ರವಾರ ಅಮ್ಮ ಮತ್ತು ತಂಗಿಯ ಜೊತೆ ಹೋಗುವುದಾಗುತ್ತಿತ್ತು, ಎಂಬೆಲ್ಲ ನೆನಪುಗಳ ನಡುವೆ, ಆ ಗುಡಿಯ ಎದುರಿನ ಕಿರಿದಾದ ರಸ್ತೆಯ ಕೊನೆಯಲ್ಲಿ ಅವನ ತಂದೆಯ ದಿನಸಿ ಅಂಗಡಿಯಿತ್ತು, ಅಲ್ಲೀಗ ಈಗ ಮೇರಿಯಮ್ಮಳ ಪುಟ್ಟ ಚರ್ಚಿದೆ, ಅವರ ಅಂಗಡಿಯಿಂದ ಕೂಗಳತೆ ದೂರದಲ್ಲಿ ಅವರ ಮನೆಯೂ ಇತ್ತು, ಈಗ ಅಲ್ಲಿ ಬೇರೇನೋ ಕಟ್ಟಡವಿದೆ ಎಂಬ ಯೋಚನೆಯೂ ಸೇರಿಕೊಳ್ಳುತ್ತಿತ್ತಷ್ಟೇ. ಹಿಂದೆಂದೋ ಜೀವಿಸಿದ್ದ ಜಾಗೆಯ ಹಲವಾರು ವಿವರಗಳ ನಡುವಿನ ಮತ್ತೊಂದು ವಿವರವಾಗಿಯಷ್ಟೇ ಇದ್ದವನು, ಈಗ ಏಕಾಏಕಿ ಜೀವ ಪಡೆದು, ಕಣ್ಣಳತೆಯಲ್ಲೇ ಸೈಕಲ್ ಏರಿ ಸುತ್ತತೊಡಗಿದಂತೆ ಅನಿಸುತ್ತಿತ್ತು ಅವಳಿಗೆ.
ಚೆಂದದ ಘಳಿಗೆಗಳು ಅದೆಷ್ಟು ಬೇಗ ಕಳೆದು ಹೋಗುತ್ತಾವೆಯಲ್ಲ ಎಂದು ತಾರಾ ಸೋಜಿಗ ಪಡುತ್ತಾಳೆ. ತನ್ನ ಮಧ್ಯಾಹ್ನದ ಬಿಡುವು, ಬೇಗ ಬೇಗ ಊಟ ಮುಗಿಸಿ ಬಾಲ್ಕನಿಗೆ ಬಂದು ನಿಲ್ಲುವವರೆಗಿನ ಧಾವಂತ, ಅವನು ಮನೆಯೆದುರು ಹಾದು ಹೋಗುವ ಕ್ಷಣಗಳು, ಮಾತ್ರವಲ್ಲದೇ, ತನ್ನಿಡೀ ಬದುಕೇ ನೋಡನೋಡುತ್ತಿದ್ದಂತೆ ಕಣ್ಣ ಎದುರಿನಿಂದ ಎಷ್ಟು ವೇಗವಾಗಿ ಸರಿದುಹೋಗುತ್ತಿದೆಯಲ್ಲ. ಇವರಿಬ್ಬರ ವಿಚಾರ ತಿಳಿಯುತ್ತಲೇ ಅಪ್ಪ ಇವಳಿಗೊಂದು ಮದುವೆ ಮಾಡಿಸಿಬಿಡಬೇಕೆಂದು ಆತುರದಲ್ಲಿ ಓಡಾಡತೊಡಗಿದ್ದು, ಬಂದ ಸಂಬಂಧಗಳೆಲ್ಲ ಒಂದಲ್ಲಾ ಒಂದು ಕಾರಣಕ್ಕೆ ಕೈಗೂಡದೇ ಹೋದದ್ದು, ಮೊದಮೊದಲು “ಹುಡುಗಿ ಇನ್ನೂ ಚಿಕ್ಕವಳು, ಬೇಡ” ಎನ್ನುತ್ತಿದ್ದವರು, ಕೊನೆ ಕೊನೆಗೆ “ಇಷ್ಟು ದೊಡ್ಡ ಹುಡುಗಿ ಬೇಡ, ಚಿಕ್ಕವಳನ್ನು ಕೊಡುವುದಾದರೆ ಸರಿ” ಎನ್ನತೊಡಗಿದ್ದು. ಹನ್ನೊಂದನೆಯದೋ, ಹನ್ನೆರಡನೆಯದೋ ಗಂಡು ಬಂದು ಹೋದ ದಿನ ಅಮ್ಮ “ಯಾವ್ದೂ ಕೂಡಿಬರ್ತಿಲ್ಲ ಅಂತ, ಯಾವೋನೊಟ್ಟಿಗಾದರೂ ಓಡಿಹೋದೀಯ! ಈವತ್ತಲ್ಲಾ ನಾಳೆ ನಾವೇ ಮಾಡಿಸ್ತೀವಿ ಮದುವೆ, ಏನೂ?” ಎಂದು ಆತಂಕ ಮತ್ತು ದುಗುಡದಲ್ಲಿ ಮಾತನಾಡಿದ್ದೂ, ಅದಕ್ಕೆ ತಾನು, “ಯಾರ ಜೊತೆ ಓಡಿಹೋಗ್ಲೇ ನಾನು? ಹೋದರೆ ಒಬ್ಬಳೇ ಓಡಬೇಕಷ್ಟೇ ನಿಮ್ಮ ಮದುವೆಯ ಕಾಟಕ್ಕೆ!” ಎಂದದ್ದೂ, ಎಲ್ಲವೂ ಸ್ಪಷ್ಟ ಸ್ಪಷ್ಟ ನೆನಪಿನಲ್ಲಿದೆ. ನಂತರ ಅದೇನಾಯಿತೋ, ತಂಗಿಗೊಂದು ಗಂಡು ಬಂತು, ಹಾ ಹ್ಞೂ ಎನ್ನುವಷ್ಟರಲ್ಲಿ ಮದುವೆಯೂ ಆಗಿ ಹೋಯಿತು. ಅಳಿಯನಾದ ಹೊಸತರಲ್ಲಿ ಭಾವನೂ ಅಪ್ಪನೊಟ್ಟಿಗೆ ಇವಳಿಗೆ ಗಂಡು ಹುಡುಕುವ ಕೆಲಸಕ್ಕೆ ಕೈಜೋಡಿಸಿದನಾದರೂ, ಅದು ಬಹಳ ದಿನ ನಡೆಯಲಿಲ್ಲ. ಕೆಲವೇ ತಿಂಗಳಲ್ಲಿ ಅಪ್ಪ ಹಾಸಿಗೆ ಹಿಡಿದ, ಅಲ್ಲಿಗೆ ಇವಳ ಮದುವೆಯ ವಿಚಾರವೂ ಹಳ್ಳಹಿಡಿಯಿತು. ಎಂದಾದರೂ ಅಪ್ಪ “ಅಲ್ಲ, ತಾರಾಗೊಂದು ಗಂಡು..” ಎನ್ನುತ್ತಲೇ, “ನೋಡನ, ನೋಡನ…..” ಎನ್ನುತ್ತಿದ್ದ ಭಾವ ಕೊನೆಗೊಂದು ದಿನ, “ಹುಡುಗಿಗೆ ಒಳ್ಳೆ ಹೆಸರಿಲ್ಲ ಏನಿಲ್ಲ…… ಎಲ್ಲಿಂದ ತರಲಿ ಗಂಡು” ಎಂದು ರೇಗಿಬಿಟ್ಟ. ಅದಾಗಿ ಒಂದೇ ತಿಂಗಳಿಗೆ ಅಪ್ಪ ತೀರಿಕೊಂಡರೆ, ಒಂದೇ ವರ್ಷದಲ್ಲಿ ಅಮ್ಮನ ಕೈಕಾಲುಗಳು ಸ್ವಾಧೀನ ಕಳೆದುಕೊಂಡವು. ಆಗ, ಅಮ್ಮನ ಜೊತೆ, ಅವಳ ದೇಖರೇಖಿಗೆಂದು ತಂಗಿಯ ಮನೆಗೆ ಬಂದಿಳಿದ ತಾರಾ, ಅಮ್ಮ ಹೋದ ನಂತರವೂ ಅಲ್ಲೇ ಉಳಿದಳು.
ಇಷ್ಟೆಲ್ಲ ನಡೆಯತ್ತಿದ್ದಾಗ, ಅವನೆಲ್ಲಿದ್ದ? ಎಂದೇನಾದರೂ ಕೇಳಿದರೆ ತಾರಾಗೆ ಸರಿಯಾಗಿ ಉತ್ತರಿಸಲು ಸಾಧ್ಯವಾಗುವುದಿಲ್ಲ. ಅಷ್ಟಕ್ಕೂ ತಮ್ಮಿಬ್ಬರ ನಡುವೆ ಏನಿತ್ತು? ಇದ್ದದ್ದು ಎಷ್ಟು ಗಾಢವಾಗಿತ್ತು? ಸಾಧ್ಯವಾಗಿದ್ದರೆ ಅವನ ಜೊತೆ ಓಡಿ ಹೋಗುತ್ತಿದ್ದೇನೇ ತಾನು? ಕೇಳಿಕೊಳ್ಳುತ್ತಾಳೆ ಕೆಲವೊಮ್ಮೆ! ಕೆಲಕಾಲ ಬಿಟ್ಟಿರಲಾರದಂತೆ ಬೆಸೆದುಕೊಂಡಿದ್ದ ತಾವಿಬ್ಬರೂ, ಅದೆಷ್ಟು ಬೇಗ ಒಂದೇ ಊರಿನಲ್ಲಿದ್ದೂ ದಶಕಗಟ್ಟಲೇ ಅಜ್ಞಾತರಾಗಿ ಬದುಕಿ ಬಿಡುವಷ್ಟು ಬದಲಾಗಿ ಹೋದೆವು? ಮಾತಿನಲ್ಲಿ ನೂರಾರು ಚಂದದ ಕನಸುಗಳನ್ನು ಹೆಣೆದುಕೊಡುತ್ತಿದ್ದ ಅವನು, ಫಕ್ಕನೇ ನೋಡಿದರೆ ಗುರುತು ಹಿಡಿಯಲೂ ಕಷ್ಟವಾಗುವಷ್ಟು ಬೇರೆಯವನಾದದ್ದು ಯಾವಾಗ? ಅವನು ಸುಮ್ಮನೇ ಮುಟ್ಟಿದರೂ ನೂರಾರು ಕಡೆಗಳಲ್ಲಿ ಟಿಸಿಲೊಡೆದು ಹಸಿರಾಗುತ್ತಿದ್ದ ತಾನು ಅದು ಯಾವ ಹೊತ್ತಿನಲ್ಲಿ ನಲವತ್ತರ ಅಂಚನ್ನು ದಾಟಿ, ಇನ್ನು ಬದುಕಿನಲ್ಲಿ ಹೊಸತೇನೂ ನಡೆಯಲಾರದು ಎಂದುಕೊಳ್ಳುವ ಹಂತ ತಲುಪಿದೆ? ಯಾರೋ ಹುಡುಗನ ಜೊತೆ ಸುತ್ತಾಡುವ ಚೆಲ್ಲು ಹುಡುಗಿಯೆಂಬ ಹೆಸರನ್ನು ಅಯಾಚಿತವಾಗಿ ಪಡೆದವಳು, ಕ್ರಮೇಣ ವಯಸ್ಸು ಮೀರಿದರೂ ಖರ್ಚಾಗದೇ ಉಳಿದ ಹಿರಿಯ ಮಗಳಾಗಿ, ಹಾಸಿಗೆ ಹಿಡಿದ ತಾಯಿಯ ಹೇಲು ಉಚ್ಚೆ ಬಾಚಿಕೊಂಡು “ಹಾಗೇ” ಉಳಿದವಳಾಗಿ, ಸದ್ಯಕ್ಕೆ ತಂಗಿಯ ಮನೆಯಲ್ಲಿ ಊಟಕ್ಕಿರುವ, ವಯಸ್ಸು ಮೀರಿದರೂ ಮದುವೆಯಾಗದ ತಾರಕ್ಕನಾಗುವಷ್ಟರಲ್ಲಿ, ಅವೆಷ್ಟು ಕನಸುಗಳು ಕೈಜಾರಿದುವು? ಲೋಕದ ವ್ಯಾಪಾರಗಳೇನೇ ಇದ್ದರೂ, ಹೊತ್ತಲ್ಲದ ಹೊತ್ತಲ್ಲಿ ತನ್ನಲ್ಲಿ ತಲೆಯೆತ್ತಿ ಸೆಟೆದು ನಿಲ್ಲುತ್ತಿದ್ದ ಎಷ್ಟೆಲ್ಲ ಸಹಜ ಬಯಕೆಗಳು ಹತ್ತಿಕ್ಕಲ್ಪಟ್ಟವು? ಕಂಕುಳ ಮಗುವಾಗಿದ್ದ ತಂಗಿ ತನ್ನ ಕಣ್ಣೆದುರೇ ಹೆಂಡತಿ, ಸೊಸೆ, ತಾಯಿ, ಎರಡು ಮಕ್ಕಳ ತಾಯಿ ಎಂಬೆಲ್ಲ ವಿವಿಧ ಹೆಸರುಗಳನ್ನು ಪಡೆಯುತ್ತಿದ್ದರೆ, ತಾನು ಮಾತ್ರ ತಾರಕ್ಕ, ಹೆಚ್ಚೆಂದರೆ ತಾರಿ ದೊಡ್ಡಮ್ಮನಾಗಿಯೇ ಉಳಿದದ್ದೇಕೆ? ಉತ್ತರ ಹುಡುಕುವ ಮನಸ್ಸಾಗಲೀ, ತ್ರಾಣವಾಗಲೀ ಅವಳಿಗಿರಲಿಲ್ಲ.
******
ಆ ಮಧ್ಯಾಹ್ನ ಕೊಂಚ ಹೆಚ್ಚೇ ಬಿರುಸಾಗಿದ್ದ ಬಿಸುಲಿನಲ್ಲಿ, ತಲೆಯ ಮೇಲೊಂದು ದುಪ್ಪಟ್ಟಾವನ್ನು ಹೊದ್ದುಕೊಂಡು ಬಾಲ್ಕನಿಯಲ್ಲಿ ನಿಂತಿದ್ದ ತಾರಾ ಬೆವರಿನಲ್ಲಿ ಒದ್ದೆಯಾಗಿದ್ದಳು. ಆಗಾಗ ಸುಸ್ತಾದ ಪಾರಿವಾಳದಂತೆ ಕತ್ತು ಕೊಂಕಿಸಿ ಬೀದಿಯ ತಿರುವನ್ನೇ ನೋಡುತ್ತ ಒತ್ತಿಕೊಂಡು ಬರುತ್ತಿದ್ದ ನಿದ್ರೆ, ನೀರಡಿಕೆ ಮತ್ತು ದಣಿವಿನಿಂದ ಹೈರಾಣಾಗಿದ್ದಳು. ತಲೆಯ ಬಲಭಾಗ ಸಿರಸಿರ ಸಿಡಿಯುತ್ತಿತ್ತು. ಎಷ್ಟು ಹೊತ್ತು ನಿಲ್ಲವುದು! ಇಷ್ಟು ಹೊತ್ತಿಗಾಗಲೇ ಅವನು ಬಂದು ಹೋಗಿರುತ್ತಿದ್ದ. ಇವತ್ತೇಕೆ ಪತ್ತೆಯೇ ಇಲ್ಲ? ಏನಾಯಿತು? ಇನ್ನು ಸ್ವಲ್ಪ ಸಮಯ ಕಳೆದರೆ, ಮಕ್ಕಳು ಶಾಲೆಯಿಂದ ಹಿಂದಿರುಗುತ್ತಾರೆ. ಮತ್ತೊಂದಷ್ಟು ಹೊತ್ತು ಕಳೆದರೆ, ಭಾವನೂ ಬರುತ್ತಾನೆ. ಆನಂತರವಂತೂ ಮಲಗುವವರೆಗೂ ಕೆಲಸವೇ! ಅರ್ಧಗಂಟೆಯಾದರೂ ಕಾಲು ಚಾಚಿ ಮಲಗದಿದ್ದರೆ ಕೆಲಸ ಕೆಡುತ್ತದೆ ಎನಿಸಿ, ಕೊನೆಯ ಬಾರಿ ಕೆಳಗಿಣುಕಿ, ಬೀದಿಯ ಉದ್ದಕ್ಕೂ ಕಣ್ಣು ಹಾಯಿಸಿ ಮನೆಯೊಳಕ್ಕೆ ಬಂದಳು. ಒಳಬಂದು ಎಂದಿನಂತೆ ನೆಲದ ಮೇಲೆ ಚಾಪೆ ಹಾಸಿಕೊಂಡು ಮಲಗಿದವಳಿಗೆ ವಿಪರೀತ ದಣಿವಾಗಿತ್ತು. ಒಳಗೆ ತಂಗಿ ನಿದ್ದೆಯಲ್ಲಿ ಉಸಿರಾಡುತ್ತಿದ್ದ ಸದ್ದನ್ನು ಬಿಟ್ಟು ಬೇರಾವ ದನಿಯೂ ಇರಲಿಲ್ಲ. ಕಿಟಕಿಗಳಿಗೆ ಅಡ್ಡಲಾಗಿ ಇಳಿಬಿದ್ದಿದ್ದ ದಪ್ಪ ಪರದೆಗಳ ನಡುವಿನ ಸಪೂರ ಅಂಚುಗಳಿಂದ ಒಳಬರುತ್ತಿದ್ದ ಮಂದ ಬಳಕಿನಿಂದಾಗಿ ಮನೆಯ ಗೋಡೆಗಳ ತುಂಬ ನೆರಳು ಬೆಳಕಿನ ಉದ್ದುದ್ದ ಗೆರೆಗಳು ಮೂಡಿದ್ದುವು. ಒಂದೆರೆಡು ನಿಮಿಷ ಪರದೆಗಳ ಕುಲುಕಾಟಕ್ಕೆ ಗೋಡೆಯ ಮೇಲೆ ಮೂಡುತ್ತಿದ್ದ ಕಪ್ಪು ಬಿಳುಪು, ಬೂದು ಬಣ್ಣಗಳ ಹೊಯ್ದಾಟವನ್ನೇ ನಿರುಕಿಸಿದವಳು ದೀರ್ಘವಾದ ಉಸಿರೆಳೆದುಕೊಂಡು ಮಗ್ಗುಲಾದಳು.
ಇಂಥದ್ದೇ ಒಂದು ಮಧ್ಯಾಹ್ನ, ಅವನ ಇರಕು ಕೋಣೆಯ ತಣ್ಣನೆಯ ಮಬ್ಬುಗತ್ತಲು ಸೃಷ್ಟಿಸಿದ ಅಕ್ಷಯ ಏಕಾಂತದಲ್ಲಿ, ಬೆನ್ನ ಮೇಲೆ ಬೆರಳಾಡಿಸುತ್ತಿದವನ ಎದೆಗೆ ಮುಖ ಆನಿಸಿಕೊಂಡು ಮಲಗಿದ್ದಳು. ಯಾವುದೋ ಮಾಯದಲ್ಲಿ ಸಣ್ಣ ನಿದ್ರೆ ಹತ್ತಿತ್ತು. ಹತ್ತೇ ನಿಮಿಷದ ಬಳಿಕ, ಅವನ ಸಣ್ಣ ಗೊರಕೆಗೆ ಎಚ್ಚರವಾದಾಗ ಇವಳಿಗಿನ್ನೂ ಮಂಪರು. ತಡವಾಗಿಬಿಟ್ಟಿತೇನೋ ಎಂದುಕೊಂಡು ಎದ್ದು ಕುಳಿತವಳಿಗೆ, ಕಿಟಕಿಯ ಬಿರುಕಿನಿಂದ ಒಳಬರುತ್ತಿದ್ದ ಕ್ಷೀಣ ಬೆಳಕಿನಲ್ಲಿ ಕೆಲವು ನೆರಳುಗಳು ಕದಲಿದಂತೆ ಕಾಣಿಸಿತು. ಕಿಟಕಿಯ ಎದುರಿಗಿದ್ದ ಗೋಡೆಯ ಮೇಲೆ ತಲೆಕೆಳಗಾದ ಫೋಟೋ ನೆಗೆಟಿವ್‌ಗಳಂತಹ ಚಿತ್ರಗಳು ಮೂಡಿದಂತೆ ಎನಿಸುವ ಹೊತ್ತಿಗೆ, ಕೋಣೆಯ ಬಾಗಿಲು ಧಡಧಡ ಬಡಿದುಕೊಂಡಿತು. ಆ ಸದ್ದಿಗೆ ಧಡಕ್ಕನೇ ಎದ್ದು ಕುಳಿತ ಅವನು, ಕಣ್ಣುಜ್ಜಿಕೊಂಡನು, ಸದ್ದುಗಳು ಅರಿವಿಗೆ ಬಂದದ್ದೇ, ಏನೋ ಹೊಳೆದಂತೆ ದೀರ್ಘವಾದ ಉಸಿರುಬಿಟ್ಟನು. ಸಣ್ಣಗೆ ಬೆವರುತ್ತಾ, ಒಮ್ಮೆ ಬಾಗಿಲಿನ ಕಡೆಗೂ, ಮತ್ತೊಮ್ಮೆ ಅವನ ಕಡೆಗೂ ನೋಡುತ್ತಾ ಕುಳಿತಿದ್ದ ಇವಳತ್ತ ತಿರುಗಿ, “ಇಲ್ಲೇ ಇರು ನೀನು, ಆಯ್ತಾ? ಏನು ಆಗಲ್ಲ! ನಾನು ನೋಡ್ಕೊಂಡು ಬರ್ತೀನಿ! ಇಲ್ಲೇ ಇರು!” ಎನ್ನುತ್ತಾ ನೆರಿಗೆ ಬಿದ್ದಿದ್ದ ತನ್ನ ಶರ್ಟನ್ನು ಸರಿಮಾಡಿಕೊಳ್ಳುತ್ತಾ ಎದ್ದ. ಅವನು ಎದ್ದ ಮರುಕ್ಷಣವೇ ಬಾಗಿಲು ಧಬಲ್ಲನೇ ತೆರೆದುಕೊಂಡು ಕೋಣೆ ತುಂಬ ಕರ್ಕಶ ಧ್ವನಿಗಳು ತುಂಬಿಕೊಂಡವು. ಹಾಯಾದ ತಿಳಿಗತ್ತಲನ್ನು ಒಮ್ಮೆಗೇ ಬೆತ್ತಲು ಮಾಡುವಂತಹ ತೀಕ್ಷ್ಣ ಬೆಳಕು ನುಗ್ಗಿಬಂದು, ಇವಳಿಗೆ ಏನೋ ಭಯವಾಗಿ ಕಣ್ಣುಗಳನ್ನು ಬಿಗಿಯಾಗಿ ಮುಚ್ಚಿಕೊಂಡಳು.
ಏನೇನೋ ಯೋಚನೆಯಲ್ಲಿ ನಿದ್ರೆ ಬಾರದೇ ಚಡಪಡಿಸುತ್ತಿದ್ದ ತಾರಾ ಪಕ್ಕನೇ ಎದ್ದು ಕುಳಿತಳು. “ಇಲ್ಲೇ ಇರು ನೀನು, ಆಯ್ತಾ?” ಎಂದು ಹೇಳಿ ಹೋದವನಿಗಾಗಿ ತಾನು, ಬೇರೆಯದೇ ಜಾಗೆಯೊಂದರಲ್ಲಿ ಅಂದಿನಿಂದಲೂ ಕಾಯುತ್ತ ನಿಂತಿದ್ದೇನೆಯೇ? ಹಾಗೆ ಹೇಳಿ ಹೋದವನು, ಇಷ್ಟು ವರ್ಷಗಳ ನಂತರ, ಬರಬಾರದ ಹೊತ್ತಿನಲ್ಲಿ, ತನ್ನ ಮಾತನ್ನು ಉಳಿಸಿಕೊಳ್ಳಲು ನನ್ನನ್ನು ಹುಡುಕಿಕೊಂಡು ಬಂದು ಬಿಟ್ಟನೇ? ಕಾಡುತ್ತಿದ್ದ ನೂರಾರು ಯೋಚನೆಗಳನ್ನು ಹತ್ತಿಕ್ಕಿ, ಗಂಟೆ ನಾಲ್ಕಾಯಿತು, ಮಕ್ಕಳು ಶಾಲೆಯಿಂದ ಇನ್ನೇನು ಬರುತ್ತಾರೆ, ಅಷ್ಟರಲ್ಲಿ ಹಾಲು ಕಾಯಿಸಿಬಿಡಬೇಕು ಎಂದುಕೊಂಡು ಎದ್ದು ಅಡಿಗೆ ಮನೆಯತ್ತ ನಡೆದಳು.
ಅವಳು ಫ್ರಿಜ್ಜಿನಿಂದ ತೆಗೆದ ಹಾಲಿನ ಪ್ಯಾಕೇಟನ್ನು ನಲ್ಲಿಯ ನೀರಿನಡಿ ಜಾಳಿಸಿ, ಹಾಲಿನ ಕುಕ್ಕರಿನೊಳಗೆ ಸುರಿದು ಒಲೆಯ ಮೇಲಿಡುತ್ತಿದ್ದ ಹೊತ್ತಿಗೆ, ಅವಸರವಸರವಾಗಿ ಸೈಕಲ್ ತುಳಿಯುತ್ತಿದ್ದ ವ್ಯಕ್ತಿಯೊಬ್ಬ ಕೆಳಗಿನ ಬೀದಿಯ ತಿರುವಿನಲ್ಲಿ ಕಾಣಿಸಿಕೊಂಡ. ವೇಗವಾಗಿ ಪೆಡಲುಗಳನ್ನು ತುಳಿಯುತ್ತಿದ್ದ ಅವನ ಕಾಲುಗಳು, ಸೈಕಲ್ ಬೀದಿಯ ನಡುಭಾಗಕ್ಕೆ ಬರುತ್ತಿದ್ದಂತೆ ನಿಧಾನವಾದುವು. ಅವಳ ಮನೆಯ ಬಾಲ್ಕನಿಯತ್ತಲೇ ನೋಡುತ್ತ ಬಂದವನಿಗೆ, ಮನೆ ಹತ್ತಿರ ಬಂದಂತೆ, ಮೇಲೆ ಯಾರೂ ನಿಂತಿಲ್ಲವೆಂಬುದು ಖಾತ್ರಿಯಾಗಿ ನಿರಾಸೆಯಾಯ್ತು. ಮೇಲೆ ನೋಡುತ್ತಲೇ ಮುಂದೆ ಸಾಗಿ, ಬೀದಿಯ ಮತ್ತೊಂದು ಕೊನೆಯಲ್ಲಿ ನೆಲದ ಮೇಲೆಲ್ಲ ಉಜ್ವಲ ಹಳದಿ ಬಣ್ಣದ ಹೂಗಳನ್ನು ಚೆಲ್ಲಿ, ಅಷ್ಟೇ ಹೂಗಳನ್ನು ಮುಡಿದಿದ್ದ ಮರದ ನೆರಳಿನಲ್ಲಿ ನಿಂತ. ಕತ್ತಿನ ಹಿಂಭಾಗ, ಕಂಕುಳು ಬೆನ್ನುಗಳಿಂದೆಲ್ಲ ಒಸರುತ್ತಿದ್ದ ಬೆವರಿಗೆ ಒದ್ದೆಯಾಗಿ, ಮೈಗಂಟಿಕೊಂಡಿದ್ದ ಶರ್ಟನ್ನು ಝಾಡಿಸಿಕೊಂಡ. ಮತ್ತೆ ಸೈಕಲ್ಲೇರಿ ಬೀದಿಯ ಮತ್ತೊಂದು ಕೊನೆಯವರೆಗೂ ಬಾಲ್ಕನಿಯತ್ತ ನೋಡಿಕೊಂಡೇ ಹೋಗಿ ಬಂದ. ಹೀಗೆ ಆ ಖಾಲಿ ರಸ್ತೆಯಲ್ಲಿ ಒಂದೆರಡು ಬಾರಿ ಸುತ್ತಿ ಅವಳ ಮನೆಯೆದುರೇ ಸೈಕಲ್ ನಿಲ್ಲಿಸಿ ಕೆಳಗಿಳಿದ.
ಇತ್ತ ತಾರಾ “ಏ ಪಾತೀ! ಗಂಟೆ ಐದಾಗ್ತಾ ಬಂತು, ಮಕ್ಳು ಬರೋ ಹೊತ್ತು ಏಳು ಏಳು” ಎಂದು ತಂಗಿಯನ್ನು ಕೂಗಿದಳು. ಗಡಿಯಾರ ನೋಡಿ, ಇನ್ನೇನು ಆಟೋ ಬರುವ ಹೊತ್ತು ಎಂದುಕೊಂಡು, ಅಲ್ಲೇ ಕುರ್ಚಿಯ ಮೇಲಿದ್ದ ಮಾಸಲು ನೀಲಿ ದುಪಟ್ಟಾ ಎಳೆದುಕೊಂಡಳು.
ಚಪ್ಪಲಿ ಮೆಟ್ಟಿ, ಬಾಗಿಲು ದೂಡಿ ಹೊರಬರುವ ಹೊತ್ತಿಗೆ ಮಕ್ಕಳನ್ನು ಹೊತ್ತಿದ್ದ ಆಟೋವೊಂದು ಹಳದಿ ಹೂಮರದ ಕಡೆಯಿಂದ ಕಿರ್ರಕಿರ್ರ ಕೂಗಿಕೊಂಡು ಬರುತ್ತಿತ್ತು. ಅತ್ತ ನೋಡಿಕೊಂಡೇ ಮೆಟ್ಟಿಲಿಳಿದು ಕೆಳಬಂದ ತಾರಾ, ಒಂದರೆಘಳಿಗೆ ಮನೆಯ ಎದುರಿನ ಬದಿಗೆ ಕಣ್ಣು ಹಾಯಿಸಿದಂತಾಯಿತು. ತನ್ನನ್ನು ನೋಡಿದಳೋ, ಇಲ್ಲವೋ ಎಂದು ಇವನು ಅಂದುಕೊಳ್ಳುವಷ್ಟರಲ್ಲಿ ಆಟೋ ಬಂದು ಅವಳೆದುರು ನಿಂತಿತು. ಅದರ ಫಟ್‌ಪಟ್‌ಫಟಾರೆಂಬ ಸದ್ದು, ಮಕ್ಕಳ ಕವಕವ ಹರಟೆ, ಡ್ರೈವರ್‌ನ ಗದರಿಕೆ, ಬಾಯ್ ಬಾಯ್, ಟಾಟಾ ಆಂಟೀ, ಸೀಯೂಗಳೆಲ್ಲ ಸೇರಿ ಅಲ್ಲೊಂದು ದೊಂಬಿಯೇ ಎದ್ದಂತಾಯಿತು. ಕೆಲ ಹೊತ್ತಿನ ನಂತರ ಹೊರಟುಹೋದ ಆಟೋ ಉಳಿಸಿದ ಹೊಗೆ ಮತ್ತು ಧೂಳಿನಲ್ಲಿ, ಮಕ್ಕಳ ಬ್ಯಾಗುಗಳನ್ನು ಹೊತ್ತ ತಾರಾ ಮನೆಯ ಮೆಟ್ಟಿಲೇರುತ್ತಿದ್ದದ್ದು ಕಾಣಿಸಿತು. ಇವನು ಒಮ್ಮೆ ಜೋರಾಗಿ ಉಸಿರು ಬಿಟ್ಟು, ಇನ್ನು ನಿಂತು ಪ್ರಯೋಜನವಿಲ್ಲವೆಂಬಂತೆ ಸೈಕಲ್ ತಳ್ಳಿಕೊಂಡು ಹೊರಟ. ಮನೆ ಬಾಗಿಲಿಗೆ ತಲುಪಿದ ತಾರಾ ಒಮ್ಮೆ ತಿರುಗಿ, ಮುಂದೆ ಬಂದು, ತುಸುವೇ ಬಗ್ಗಿ ನೋಡಿದಳು, ಒಂದೇ ಕೈಯಲ್ಲಿ ಸೈಕಲ್ ತಳ್ಳುತ್ತಾ, ಮತ್ತೊಂದು ಕೈಯನ್ನು ಜೋರಾಗಿ ಬೀಸಿಕೊಂಡು ಕೊಂಚ ವಾರೆವಾರೆಯಾಗಿ ನಡೆದು ಹೋಗುತ್ತಿದ್ದವ ಕಾಣಿಸಿದ. ಮುಖದ ಮೇಲೆ ತಿಳಿಯಾದ ನಗೆ ತಂದುಕೊಂಡು, “ಸದ್ಯ! ಅಂತೂ ಬಂದ” ಎಂದು ಒಳನಡೆದಳು.
ಕಾರ್ತಿಕ್ ಆರ್. ಬೆಂಗಳೂರು ನಿವಾಸಿ, ವೃತ್ತಿಯಿಂದ ಅನುವಾದಕ ಮತ್ತು ಬರಹಗಾರ. ಇವರ ಹಲವು ಲೇಖನಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ‘ಬುಕ್ ಪೋಸ್ಟ್’ ಇವರ ಪ್ರಕಟಿತ ಕಥಾ ಸಂಕಲನ.
ಸುಂದರವಾದ ಕಥೆ.
ಇಂಗ್ಲಿಷಿನ ಒ ಹೆನ್ರಿಯ ಕತೆಯನ್ನು ನೆನಪಿಸುವ ನಿರೂಪಣೆ. ಒಳ್ಳೆಳೆಕುತೂಹಲಕರ ಕತೆ. ಧನ್ಯವಾದ.