ಅಂದು ಬೆಳಿಗ್ಗೆ ಕೋರ್ಟಿಗೆ ಹೋದ ನನಗೆ ಕಟ ಕಟೆಯಲ್ಲಿ ಮುಖಾಮುಖಿಯಾಗಿದ್ದು ಆಗ ಬೆಂಗಳೂರಿನಲ್ಲಿ ಇದ್ದಂತಹ ಇಬ್ಬರು ಪ್ರಸಿದ್ಧ, ಘಟಾನುಘಟಿ ಕ್ರಿಮಿನಲ್ ವಕೀಲರುಗಳಲ್ಲಿ ಒಬ್ಬರು. ಶವಪರೀಕ್ಷೆಗೆ ಸಂಬಂಧಿಸಿದ ಮಾಹಿತಿಗಳನ್ನು ನಾನು ನೀಡುತ್ತ ಹೋದಂತೆ ಅವರು ಅನೇಕ ಪ್ರಶ್ನೆಗಳನ್ನು ಕೇಳಿದ್ದರು. ಕೆಲವು ದಿವಸಗಳ ಹಿಂದೆಯಷ್ಟೇ ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡು ಬಂದಿದ್ದ ನಾನು ಪರೀಕ್ಷೆಗೆಂದು ಬಹಳಷ್ಟು ಓದಿದ್ದೆ. ಆದ್ದರಿಂದ ಪಾಟೀ ಸವಾಲು ಎದುರಿಸುತ್ತ, ಸಾವು ಸಂಭವಿಸಿ ಅಂದಾಜು ಎಷ್ಟು ದಿನಗಳಾಗಿರಬಹುದು ಎಂಬುದನ್ನು ಹೇಳಿದೆ. ಡಾ. ಕೆ.ಬಿ. ಸೂರ್ಯಕುಮಾರ್ ಬರೆಯುವ ‘ನೆನಪುಗಳ ಮೆರವಣಿಗೆ’ ಸರಣಿಯಲ್ಲಿ ಹೊಸ ಬರಹ.
ಕೆಲವು ವರ್ಷಗಳ ಹಿಂದೆ ತೆಲುಗಿನಲ್ಲಿ ಸುದೀಪ್ ನಟಿಸಿದ “ಈಗ” ಎಂಬ ಚಲನಚಿತ್ರ ತೆರೆ ಕಂಡಿತು. ನಂತರ “ಮಕ್ಕಿ”ಯಾಗಿ ಹಿಂದಿ ಭಾಷೆಯಲ್ಲಿ ಬಂದು ಕನ್ನಡದಲ್ಲಿ ಮುಂದೆ ಒಂದು ದಿನ ಡಬ್ ಕೂಡಾ ಆಯಿತು. ಈ ಚಿತ್ರದಲ್ಲಿ ಖಳ ನಾಯಕ ಅಥವಾ ವಿಲನ್ ನನ್ನು ಒಂದು ಸಣ್ಣ ನೊಣ ಪರಿ ಪರಿಯಾಗಿ ಕಾಡುವುದನ್ನು ಬಹಳ ಚೆನ್ನಾಗಿ ಚಿತ್ರಿಸಿದ್ದರು. ಇಂತಹದೇ ಒಂದು ನೊಣ ನನ್ನ ಜೀವನದಲ್ಲಿ ಬಂದು, ನನ್ನ ತಲೆಯನ್ನು ತಿಂದು, ಕೋರ್ಟಿನ ಕಾಲವನ್ನೂ ವ್ಯಯಿಸಿದ ಘಟನೆ ನಡೆದಿದ್ದು ನಾನು ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡು ಹೊರಗೆ ಬಂದ ಕೆಲವು ತಿಂಗಳುಗಳಲ್ಲಿ.
ಬೆಂಗಳೂರಿನಲ್ಲಿ ವಿಧಿ ವಿಜ್ಞಾನ ವಿಷಯದಲ್ಲಿ ಮೂರು ವರ್ಷದ ಪರಿಣಿತಿಯನ್ನು ಹೊಂದಿದ್ದ ನಾನು ಇಲ್ಲಿನ ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯನಾಗಿದ್ದೆ. ಆ ಸಮಯದಲ್ಲಿ ಬೆಂಗಳೂರಲ್ಲಿ ಇದ್ದ ಅವಧಿಯಲ್ಲಿ ನಾನು ನಡೆಸಿದ್ದ ಮರಣೋತ್ತರ ಪರೀಕ್ಷೆಗಳ ಬಗ್ಗೆ ವಿವಿಧೆಡೆ ಕೋರ್ಟಿನಲ್ಲಿ ವಿಚಾರಣೆಗೆ ಬಂದಾಗ ಅಲ್ಲಿಗೆ ಹೋಗಿ ಸಾಕ್ಷಿಯನ್ನು ಹೇಳಿ ಬರಬೇಕಾಗಿತ್ತು. ಇದರ ಬಗ್ಗೆ ಕೆಲವು ಲೇಖನಗಳಲ್ಲಿ ಮಾಹಿತಿಯನ್ನು ಮತ್ತು ಕೆಲವು ವಿಚಿತ್ರ ಪ್ರಸಂಗಗಳನ್ನು ನಾನು ದಾಖಲಿಸಿದ್ದೇನೆ. ನಾನು ಅಲ್ಲಿ ಇದ್ದ ಸಮಯದಲ್ಲಿ ಅನೇಕ ರೀತಿಯ ಮರಣೋತ್ತರ ಪರೀಕ್ಷೆಗಳನ್ನು ನೋಡಿದ್ದೆ, ಮಾಡಿದ್ದೆ. ಇದರಲ್ಲಿ ರಸ್ತೆ ಅಪಘಾತಗಳು, ಬೆಂಕಿಯಿಂದ ಸುಟ್ಟ ಗಾಯಗಳಿಂದ ಮರಣ ಹೊಂದಿದವರು, ವಿಷ ಸೇವನೆ, ನೀರಿನಲ್ಲಿ ಮುಳುಗಿದವರು ಹೆಚ್ಚು. ಆಗೊಮ್ಮೆ ಈಗೊಮ್ಮೆ ಹೊಡೆದಾಟ, ಕೊಲೆಯಲ್ಲಿ ಮರಣ ಹೊಂದಿದ ಪ್ರಕರಣಗಳಿರುತ್ತಿದ್ದವು. ಇವುಗಳಲ್ಲಿ ಕ್ರಿಮಿನಲ್ ಪ್ರೊಸೀಜರ್ ಸಂಹಿತೆ 174 ರ ಅಡಿಯಲ್ಲಿ ಪರೀಕ್ಷೆ ಮಾಡಿದ ಕೇಸುಗಳು ಕೋರ್ಟಿಗೆ ಬರುತ್ತಿರಲಿಲ್ಲ. ಆದರೆ ಭಾ. ದ. ಸಂ 304 ( A ), 302 ಪರಿಚ್ಛೇದದಲ್ಲಿ ಸಾವು ಸಂಭವಿಸಿದ್ದಾಗ ಇದಕ್ಕಾಗಿ ನಮ್ಮ ಆಸ್ಪತ್ರೆಯ ವಿಭಾಗದಲ್ಲಿ ಇದ್ದ ಪ್ರತ್ಯೇಕ ಪುಸ್ತಕದ ಪ್ರತಿಯನ್ನು ತೆಗೆದುಕೊಂಡು ಹೋಗಿ ಕೋರ್ಟಿನ ಕಟಕಟೆಯಲ್ಲಿ ನಿಂತು, ಓದಿ, ಸಾಕ್ಷಿ ಹೇಳಬೇಕಿತ್ತು. ಅದಾದ ನಂತರ ಸರಕಾರಿ ವಕೀಲರು ಪೊಲೀಸರ ಪರವಾಗಿ ಪ್ರಶ್ನೆಗಳನ್ನು ಕೇಳುತ್ತಾರೆ. ಆಗ ನಾವು ಅಲ್ಲಿ ಬರೆದ ವಿಷಯಕ್ಕೆ ಸಂಬಂಧಿಸಿದಂತೆ ನಮ್ಮ ಮಿತಿಯಲ್ಲಿ ಅಥವಾ ನಮಗೆ ತಿಳಿದ ವಿಷಯಗಳನ್ನು ಕೋರ್ಟಿಗೆ ಹೇಳುವುದು ನಮ್ಮ ಕರ್ತವ್ಯ. ಈ ರೀತಿಯ ಪ್ರಶ್ನೆಗಳನ್ನು, ಅಪರಾಧಿಯನ್ನು ಶಿಕ್ಷಿಸುವ ಸಲುವಾಗಿಯೇ ಕೇಳುವುದು ಒಂದು ಕಾರ್ಯ ವಿಧಾನ. ಯಾಕೆಂದರೆ ಪೋಲೀಸಿನವರು ಕೋರ್ಟಿನಲ್ಲಿ ಪ್ರಥಮ ಮಾಹಿತಿ ವರದಿ ( FIR ) ಹಾಕಿದ ಮೇಲೆ ಅದನ್ನು ದೃಢೀಕರಿಸಲು ಸರಕಾರಿ ವಕೀಲರ ಮುಖಾಂತರ ಪ್ರಯತ್ನಿಸುತ್ತಾರೆ. ಇದರಲ್ಲಿ ಹೆಚ್ಚಾಗಿ ಅಲ್ಲಿರುವ ಗಾಯಗಳ ಬಗ್ಗೆ ಮತ್ತು ಆಯಾ ಗಾಯಗಳು ಯಾವ ರೀತಿಯಿಂದ ಆಗಿರಬಹುದು ಎಂಬ ವಿವರಣೆಯನ್ನು ಕೇಳುತ್ತಾರೆ. ಜೊತೆಗೆ ಆ ವ್ಯಕ್ತಿಯು ಮೃತಪಟ್ಟು ಎಷ್ಟು ಸಮಯ ಆಗಿರಬಹುದು ಎಂಬ ವಿವರಗಳನ್ನು ಕೇಳುತ್ತಾರೆ. ಒಬ್ಬ ವ್ಯಕ್ತಿ ಮೃತನಾಗಿ ಕೆಲವು ಸಮಯದಲ್ಲಿ ಶರೀರದಲ್ಲಿ ಅನೇಕ ಬದಲಾವಣೆಗಳು ಆಗುತ್ತಿರುತ್ತವೆ ಮತ್ತು ಇದೆಲ್ಲಾ ಕೆಲವು ಕಾಲಾನುಕ್ರಮದಲ್ಲಿ, ನಿಶ್ಚಿತ ಸಮಯದ ಪ್ರಕಾರ ಆಗುತ್ತಿರುತ್ತದೆ. ರೈಗೋರ್ ಮಾರ್ಟಿಸ್, ಮರಣೋತ್ತರ ಲಿವಿಡಿಟಿ, ಎಂಜೈಮ್ ಗಳಲ್ಲಿನ ಬದಲಾವಣೆ, ಕೊಳೆಯುವಿಕೆ ಮುಂತಾದವುಗಳು ಇದರಲ್ಲಿ ಸೇರಿವೆ.
ಹೀಗೆ ಒಂದು ದಿನ ಕೋರ್ಟಿಗೆ ಹಾಜರಾಗಲು ಸಮನ್ಸ್ ಬಂದು ಬೆಂಗಳೂರಿನ ಕೋರ್ಟಿಗೆ ಹೋಗಿದ್ದೆ. ಆ ಕೇಸ್ ನನಗೆ ಹೆಚ್ಚಾಗಿ ನೆನಪಿರಲಿಲ್ಲ. ಆದರೆ ಅಲ್ಲಿಗೆ ಹೋಗಿ ಪುಸ್ತಕವನ್ನು ತೆರೆದು ನೋಡಿದಾಗ ಮಸುಕಾಗಿ ಎಲ್ಲಾವೂ ನೆನಪಾಯಿತು. ಅದು ಯಾವುದೋ ಒಂದು ನಿರ್ಜನ ಪ್ರದೇಶದಲ್ಲಿ ಸಿಕ್ಕಿದ ಗುರುತು ಇಲ್ಲ(unknown person) ವೆಂದು ಮೊದಲು ಪೊಲೀಸರು ಶವಾಗಾರಕ್ಕೆ ತೆಗೆದುಕೊಂಡು ಬಂದು ಅಲ್ಲಿ ಐದು ದಿವಸ ಇಟ್ಟುಕೊಂಡಿದ್ದ ಒಂದು ಶವದ ಪರೀಕ್ಷೆಯ ವಿವರಣೆಗಳು. ಆದರೆ ನಾಲ್ಕು ದಿನದ ಸಮಯದಲ್ಲಿ ಆ ವ್ಯಕ್ತಿಯ ಪತ್ತೆ ಸಿಕ್ಕಿ ಆ ಹೆಸರನ್ನು ನಮಗೆ ಸೂಚಿಸಿದ್ದರು. ಆದರೆ ಅಷ್ಟು ಹೊತ್ತಿಗಾಗಲೇ ಆ ಶವ ಕೊಳೆಯಲು ತೊಡಗಿ ಮೈಯಲ್ಲೆಲ್ಲಾ ಹುಳುಗಳ ಸಂಚಾರ ಆರಂಭವಾಗಿತ್ತು.
ಆ ಶವವನ್ನು ಪರೀಕ್ಷಿಸಲಾಗಿ ಅಲ್ಲಿ ಕುತ್ತಿಗೆಯನ್ನು ಹಗ್ಗದಿಂದ ಬಿಗಿದು ಆ ವ್ಯಕ್ತಿಯನ್ನು ಸಾಯಿಸಲಾಗಿತ್ತು.
*****
ಅಂದು ಬೆಳಿಗ್ಗೆ ಕೋರ್ಟಿಗೆ ಹೋದ ನನಗೆ ಕಟ ಕಟೆಯಲ್ಲಿ ಮುಖಾಮುಖಿಯಾಗಿದ್ದು ಆಗ ಬೆಂಗಳೂರಿನಲ್ಲಿ ಇದ್ದಂತಹ ಇಬ್ಬರು ಪ್ರಸಿದ್ಧ, ಘಟಾನುಗಟಿ ಕ್ರಿಮಿನಲ್ ವಕೀಲರುಗಳಲ್ಲಿ ಒಬ್ಬರು. ಇಲ್ಲಿ ನಾನು ಈ ವಕೀಲರ ಬಗ್ಗೆ ಕೆಲವು ಮಾತುಗಳನ್ನು ಬರೆಯಲೇಬೇಕು. ಯಾಕೆಂದರೆ ಅವರ ವಿಧಿ ವಿಜ್ಞಾನದ ಪರಿಜ್ಞಾನ ಎಷ್ಟು ಇತ್ತು ಅಂದರೆ ಅನೇಕ ಬಾರಿ ನಮ್ಮ ಕೆಲವು ಸಾಮಾನ್ಯ ವೈದ್ಯರಿಗೆ ಗೊತ್ತಿಲ್ಲದಂತಹ ಅನೇಕ ವಿಷಯಗಳನ್ನು ಅವರು ಓದಿ ಮನನ ಮಾಡಿಕೊಂಡು ಕೋರ್ಟಿಗೆ ಬರುತ್ತಿದ್ದರು. ಹಾಗಾಗಿ ಅಪರಾಧಿಯ ಪರವಾಗಿ ವಾದಿಸುವ ವಕೀಲರು ಅವರು ಎಂದರೆ ಹೆಚ್ಚಿನ ವೈದ್ಯರಿಗೆ ಬಹಳ ತಳಮಳ ಆಗುತ್ತಿದ್ದದ್ದು ಸಹಜ. ಇವರ ಸೂಕ್ಷ್ಮ ದೃಷ್ಟಿಯ ತೀವ್ರತೆಯ ಬಗ್ಗೆ ನನ್ನ ಇನ್ನೊಂದು ಕಥೆಯಲ್ಲಿ ಕೂಡ ದಾಖಲಿಸಿರುತ್ತೇನೆ.
ಸರಕಾರಿ ವಕೀಲರ ಪ್ರಶ್ನೆಗೆ ವಿವರಗಳನ್ನು ಕೊಡುತ್ತಾ ಅದರಲ್ಲಿ ಕತ್ತಿನ ಸುತ್ತ ಹೇಗೆ ಹಗ್ಗವನ್ನು ಬಿಗಿಯಲಾಗಿತ್ತು ಮತ್ತು ಅದು ಹೇಗೆ ಸಂಪೀಡನ ( strangulation ) ವನ್ನು ಹೋಲುತ್ತದೆ ಎಂಬ ಎಲ್ಲಾ ವಿವರವನ್ನು ಕೊಟ್ಟು ಆ ವ್ಯಕ್ತಿಯನ್ನು ಉಸಿರು ಕಟ್ಟಿ ಸಾಯಿಸಲಾಗಿದೆ ಎಂಬ ನನ್ನ ಅಂತಿಮ ವರದಿಯನ್ನು ಪುನರುಚ್ಚರಿಸಿದ್ದೆ.
ಒಬ್ಬ ವ್ಯಕ್ತಿ ಮೃತನಾಗಿ ಕೆಲವು ಸಮಯದಲ್ಲಿ ಶರೀರದಲ್ಲಿ ಅನೇಕ ಬದಲಾವಣೆಗಳು ಆಗುತ್ತಿರುತ್ತದೆ ಮತ್ತು ಇದೆಲ್ಲಾ ಕೆಲವು ಕಾಲಾನುಕ್ರಮದಲ್ಲಿ, ನಿಶ್ಚಿತ ಸಮಯದ ಪ್ರಕಾರ ಆಗುತ್ತಿರುತ್ತದೆ. ರೈಗೋರ್ ಮಾರ್ಟಿಸ್, ಮರಣೋತ್ತರ ಲಿವಿಡಿಟಿ, ಎಂಜೈಮ್ ಗಳಲ್ಲಿನ ಬದಲಾವಣೆ, ಕೊಳೆಯುವಿಕೆ ಮುಂತಾದವುಗಳು ಇದರಲ್ಲಿ ಸೇರಿದೆ.
ನಂತರ ಶುರುವಾಯಿತು ಅಪರಾಧಿ ಪರ ವಕೀಲರ ಪಾಟಿ ಸವಾಲು. ಮೊದಲು ಕೆಲವು ಸಾಮಾನ್ಯ ಪ್ರಶ್ನೆಗಳನ್ನು ಕೇಳುತ್ತಾ ಅದು ಸಂಪೀಡನ(strangulation) ಇಲ್ಲದೆ ಇರಬಹುದು ಎಂಬುದನ್ನು ಸಾಬೀತು ಪಡಿಸಲು ಪ್ರಯತ್ನಿಸಿದರು. ಆದರೆ ಅಲ್ಲಿದ್ದ ಎಲ್ಲಾ ಚಿಹ್ನೆಗಳು ಅದನ್ನೇ ಸಾಬೀತು ಪಡಿಸುತ್ತಿದ್ದರಿಂದ ಆ ವಿಷಯವನ್ನು ಅಲ್ಲಿಗೇ ಬಿಟ್ಟರು.
ನಂತರ ಅವರು ಹೋಗಿದ್ದು ಮೈ ಮೇಲಿದ್ದ ನೊಣದ ಮರಿ ಹುಳುಗಳ ವಿವರದ ಕಡೆಗೆ. ಆ ಹುಳದ ಉದ್ದ ಎಷ್ಟಿತ್ತು, ಬಣ್ಣ ಹೇಗಿತ್ತು, ಎಷ್ಟು ರೀತಿಯ ಹುಳಗಳು ಅಲ್ಲಿ ಇದ್ದವು ಇತ್ಯಾದಿ ಇತ್ಯಾದಿ. ಮರಣೋತ್ತರ ಸಮಯವನ್ನು ಕಂಡು ಹಿಡಿಯಲು ಇದು ಬಹಳ ಮುಖ್ಯವಾದ ವಿವರಗಳು. ಯಾಕೆಂದರೆ ನೊಣ ಮೊಟ್ಟೆ ಇಟ್ಟು ಇಂತಿಷ್ಟೇ ದಿನಗಳಲ್ಲಿ ಮರಿ ಆಗುತ್ತದೆ. ನಂತರ ಇಂತಿಷ್ಟೇ ದಿನಗಳಲ್ಲಿ ಅದರ ಉದ್ದ ಬೆಳೆಯುತ್ತದೆ ಮತ್ತು ಕೋಶಾವಸ್ಥೆಗೆ ಹೋಗಿ, ನಿರ್ದಿಷ್ಟ ದಿನಗಳಲ್ಲಿ ಅದು ಒಡೆದು ಇನ್ನೊಂದು ನೊಣ ಹೊರ ಬರುತ್ತದೆ.
ಕೆಲವು ದಿವಸಗಳ ಹಿಂದೆಯಷ್ಟೇ ನನ್ನ ಸ್ನಾತಕೋತ್ತರ ಪದವಿಯನ್ನು ಪಡೆದುಕೊಂಡು ಬಂದಿದ್ದ ನಾನು ಪರೀಕ್ಷೆಗೆಂದು ಬಹಳಷ್ಟು ಓದಿದ್ದೆ. ಸಿ.ಜಿ. ಟೆಡಿಷಿ ಎಂಬ ಲೇಖಕರು ಬರೆದ ಮೂರು ಸಂಪುಟದ, ಒಂದೊಂದೂ, ಸಾವಿರದ ಏಳು ನೂರು ಪುಟಗಳನ್ನು ಮೀರುವ, ಈಗ ಕಡಿಮೆ ಎಂದರೆ, ಇಪ್ಪತ್ತು ಸಾವಿರ ರೂಪಾಯಿ ಬೆಲೆ ಬಾಳುವ ಪುಸ್ತಕಗಳಲ್ಲಿ ಸುಮಾರು ನೂರರಷ್ಟು ಪುಟಗಳನ್ನು ಬರೀ ನೊಣದ ಬಗ್ಗೆಗೇ ಮೀಸಲು ಇಡಲಾಗಿತ್ತು. ಹಾಗಾಗಿ ಹೆಚ್ಚಿನ ವಿವರಗಳು ನನ್ನ ನೆನಪಿನಲ್ಲಿ ಅಚ್ಚಳಿಯದೆ ಉಳಿದಿತ್ತು. ಬರೀ ನೊಣದ ಜೀವನ ಚರಿತ್ರೆಗೆ ಕೋರ್ಟಿನ ಅರ್ಧ ಗಂಟೆಗಿಂತ ಹೆಚ್ಚಿನ ಸಮಯ ಕಳೆದುಹೋಗಿತ್ತು. ಅವರು ಕೇಳುವ ಎಲ್ಲ ಪ್ರಶ್ನೆಗಳಿಗೆ ಉತ್ತರ ತಯಾರಿದ್ದುದರಿಂದ ಸೇರಿಗೆ ಸವ್ವಾಸೇರು ಆಗುತ್ತಾ ಹೋಯಿತು. ಇದಾದ ಮೇಲೆ ಸ್ವಲ್ಪ ಸಮಯ, ಶರೀರದಲ್ಲಿ ಆಗಿದ್ದ ಇತರ ಬದಲಾವಣೆಗಳ ಮೇಲೆ ಪ್ರಶ್ನೆಗಳನ್ನು ಕೇಳಲಾಗಿತ್ತು.
ಕೊನೆಗೆ ಮರಣ ಎಷ್ಟು ದಿನಗಳ ಹಿಂದೆ ಆಗಿರಬಹುದು ಎಂಬ ಖಚಿತ ಮಾಹಿತಿ ಅವರಿಗೆ ಬೇಕಾಗಿತ್ತು. ಹಾಗೆಯೇ ಅಲ್ಲಿದ್ದ ನೊಣದ ಮರಿಗಳ ಬೆಳವಣಿಗೆಯ ಮತ್ತು ಅಲ್ಲಿದ್ದ ಇತರ ಬದಲಾವಣೆಗಳ ಎಲ್ಲಾ ವಿವರಗಳನ್ನು ತಾಳೆ ಹಾಕಿ, ಮರಣವು ಸಾಧಾರಣ ಶವ ಪರೀಕ್ಷೆ ನಡೆಸುವುದಕ್ಕಿಂತ ಐದರಿಂದ ಎಂಟು ದಿವಸದ ಹಿಂದೆ ಆಗಿರಬಹುದು ಎಂಬ ಮಾಹಿತಿ ಕೊಟ್ಟೆ. ಅಷ್ಟು ಹೇಳಿದ್ದೇ ತಡ ಅವರ ಮುಖದಲ್ಲಿ ಒಂದು ಮಂದಹಾಸ ಬಂದು ‘ಥ್ಯಾಂಕ್ಯೂ ಡಾಕ್ಟರ್’ ಎಂದು ಅವರ ವಾದವನ್ನು ನಿಲ್ಲಿಸಿದರು.
ಕಟ ಕಟೆಯಿಂದ ಕೆಳಗೆ ಇಳಿದು ಹೊರ ಬಂದಾಗ ಆ ವಕೀಲರು ಕೋರ್ಟಿನ ಆವರಣದಲ್ಲಿ ಸಿಕ್ಕರು. ಮೊದಲೇ ಕೆಲವು ಬಾರಿ, ಬೇರೆ ಕೇಸುಗಳಲ್ಲಿ ಸಾಕ್ಷಿ ಹೇಳಿ ಪರಿಚಯವಿದ್ದ ಅವರ ಜೊತೆ ಮಾತಿಗಿಳಿದೆ. ಯಾಕೆ ಇಷ್ಟು ವಿವರವಾಗಿ ನನ್ನನ್ನು ಪ್ರಶ್ನೆ ಕೇಳ ಬೇಕಾಗಿ ಬಂತು ಎಂದಾಗ ಅವರು ಕೊಟ್ಟ ಉತ್ತರ ಏನೆಂದರೆ ಈ ಕೊಲೆಯಲ್ಲಿ ಮೊದಲು ಅಪರಾಧಿ ಯಾರು ಎಂದು ತಿಳಿಯದ ಪೋಲೀಸಿನವರು ನಂತರ ಇವರ ಕಕ್ಷಿದಾರರನ್ನು ಗುಮಾನಿಯ ಮೇಲೆ ಬಂಧಿಸಿದ್ದಾರೆ. ಆದರೆ ಇವರ ಕಕ್ಷಿದಾರರು ಶವ ಪರೀಕ್ಷೆಯ ಐದರಿಂದ ಹದಿನೈದು ದಿವಸಗಳ ಹಿಂದೆ ಬೇರೆ ದೂರದ ಊರಿನಲ್ಲಿ ಇದ್ದುದಕ್ಕೆ ಬಲವಾದ ಸಾಕ್ಷಿಗಳು ಇದ್ದುದರಿಂದ ಆ ವಕೀಲರಿಗೆ ಮರಣದ ಸರಿಯಾದ ಸಮಯವನ್ನು ಕೋರ್ಟಿಗೆ ತಿಳಿಸಿ, ತನ್ನ ಕಕ್ಷಿದಾರರು ಕೊಲೆಯಾದ ಸಮಯ ಆ ಊರಿನ ಹತ್ತಿರ ಎಲ್ಲಿಯೂ ಇರಲಿಲ್ಲಾ ಎಂಬುದನ್ನು ಸಾಬೀತು ಪಡಿಸಬೇಕಾಗಿತ್ತು.
ಕೆಲವು ಸಮಯದ ನಂತರ ಈ ಕೊಲೆಯ ನಿಜವಾದ ಅಪರಾಧಿ ಬೇರೆ ಒಂದು ಕೇಸಿನಲ್ಲಿ ಸಿಕ್ಕಿಹಾಕಿಕೊಂಡಾಗ ಈ ಪ್ರಸ್ತುತ ಕೊಲೆಯ ಬಗ್ಗೆ ತಪ್ಪೊಪ್ಪಿಗೆ ಮಾಡಿಕೊಂಡಿದ್ದ ಎಂಬ ಮಾಹಿತಿ ನನಗೆ ಸಿಕ್ಕಿತ್ತು.
ಹೀಗೆ ನಮ್ಮ ದೃಷ್ಟಿಯಲ್ಲಿ ಸಾಮಾನ್ಯ ಎಂದು, ಎಲ್ಲರೂ ಓಡಿಸುವ ಒಂದು ನೊಣ ಮತ್ತು ಇತರೆ ಕೆಲವು ಬದಲಾವಣೆಗಳ ವಿವರ ಅಂದು ಓರ್ವ ಅಮಾಯಕನ ಬಿಡುಗಡೆಗೆ ಕಾರಣವಾಗಿತ್ತು.
ಡಾ.ಕೆ.ಬಿ. ಸೂರ್ಯಕುಮಾರ್ ಅವರು ಹಿರಿಯ ವಿಧಿವಿಜ್ಞಾನ ತಜ್ಞರು. ಮಡಿಕೇರಿಯ ಜಿಲ್ಲಾ ಆಸ್ಪತ್ರೆಯಲ್ಲಿ 18 ವರ್ಷ ವಿಧಿವಿಜ್ಞಾನ ಪರಿಣತರಾಗಿ ಕೆಲಸ ಮಾಡಿದ್ದಾರೆ. ಕರ್ನಾಟಕ ಆರೋಗ್ಯ ಇಲಾಖೆಯಲ್ಲಿಯೂ ವಿಧಿವಿಜ್ಞಾನ ತಜ್ಞರಾಗಿ ತಮ್ಮ ತಜ್ಞ ಸಲಹೆ ನೀಡಿದ್ದಾರೆ. ಪ್ರಸ್ತುತ ಮಡಿಕೇರಿಯಲ್ಲಿ ವಾಸವಿರುವ ಇವರು ಸುಳ್ಯದ ಕೆ.ವಿ.ಜಿ ಮೆಡಿಕಲ್ ಕಾಲೇಜಿನಲ್ಲಿ ವಿಧಿ ವಿಜ್ಞಾನ ವಿಭಾಗದ ಪ್ರೊಫೆಸರ್. ‘ವೈದ್ಯ ಕಂಡ ವಿಸ್ಮಯ’ ಅವರು ಬರೆದ ಕೃತಿ.
ನಿಜಕ್ಕೂ ಒಂದು ಅದ್ಭುತವಾದ ನಿಮ್ಮವೈದ್ಯಕಿಯ ವೃತ್ತಿಯ ಅನುಭವ ಹಾಗೂ ನಮಗೂ ಅದನ್ನು ಪರಿಚಯ ಮಾಡಿಕೊಡುವ ನಿಮ್ಮ ಪ್ರಯತ್ನಕ್ಕೆ ಧನ್ಯವಾದಗಳು ಭಾವೋಜಿ. ಒಬ್ಬ ಅಮಾಯಕನ ಬಿಡುಗಡೆಗೆ ನೊಣ ಕಾರಣ ನಿಜ, ಆದರೆ ಅದರ ಬಗ್ಗೆ ನೀವು ಓದಿದ ಹಾಗೂ ಅಧ್ಯಯನ ಮಾಡಿದ್ದು ಸಾರ್ಥಕ ಆಯಿತು ಅಲ್ವಾ? ಧನ್ಯವಾದಗಳು ?
ಉಫ್!! ಆಗ ಆ ಕೇಸಿನಲ್ಲಿ ಕೊಲೆಗಾರ ಬಚಾವಾಗಿಬಿಟ್ಟನೇ..
Intresting
Interesting story
Surprising
Juris prudence is a beautiful and fascinating subject. Writing about that in kannada is also an art. Which you have mastered.what ever may be the story you make interesting
What more I can say keep writing cheers ???
ಒಳ್ಳೆಯ ಬರವಣಿಗೆ
. ತುಂಬಾ ಚೆನ್ನಾಗಿದೆ ಒಂದು ನೊಣದಿಂದ time and days of death ಸರಿಯಾಗಿ ಹೇಳಿದ್ದೀರಿ Hearty congratulations Surya. ಹೀಗೇ ಬರಿಯುತ್ತಾ ಇರಿ
Your really great sir ???
ಅಯ್ಯೋ ನೋಣವೇ…ಅಂತೂ ವೊಬ್ಬನನ್ನು ಉಳಿಸಿತು!!
ಪ್ರಸಾದ್ ಅವರ ಅನಿಸಿಕೆಯನ್ನು ಸಂಪೂರ್ಣ anumodisuttene.ಆಳವಾದ ಅಧ್ಯಯನ ಎಷ್ಟು ಮುಖ್ಯ ಅಂತ ನಿಮ್ಮ ಅನುಭವ ತೋರಿಸುತ್ತದೆ.
This interesting and well narrated story explores how a humble insect, with its fascinating life cycle helped solving a murder mystery and saved an innocent person.
? तस्मै नमः
Very interesting. Respect your thoughts on sharing your experiences through your narratives and educating readers.
ಕುತೂಹಲ ಮತ್ತು ಅಷ್ಟೇ ಅನೇಕ ಗಮನಕ್ಕೆ ಬಾರದೆ ಇರುವ ಸೂಕ್ಷ್ಮಅಂಶಗಳನ್ನು ತಮ್ಮ ಲೇಖನ ಒಳಗೊಂಡಿದೆ.ಕಲಿಯುವವರಿಗೆ ಒಳ್ಳೆಯ ಸಬ್ಜೆಕ್ಟ್. ಧನ್ಯವಾದಗಳು ಸರ್.
ಪ್ರತೀ ಜೀವಿಯೂ ಮುಕ್ಯ ಎಂಬುದು ಮತ್ತೊಮ್ಮೆ ಸಾಬೀತು ಆಯ್ತು.!!!
Very interesting..