ಪ್ರತೀ ಸಾವೂ ಒಂದು ವಿವರಿಸಲಾಗದ ಶೂನ್ಯವನ್ನೂ, ತಲ್ಲಣವನ್ನೂ ಸೃಷ್ಟಿಸುತ್ತದೆ. ಹಾಗೆ ನೋಡುವುದಾದರೆ ಯಾರ ಸಾವೂ, ಯಾವ ಸಾವೂ ನೆಮ್ಮದಿಯನ್ನು, ಸಂಭ್ರಮವನ್ನು ತರುವುದಿಲ್ಲ. ವರ್ಷಗಳ ಕಾಲ ಹಾಸಿಗೆ ಹಿಡಿದವನು, ಕೋಮಾದಲ್ಲಿದ್ದವನು ಮರಣ ಹೊಂದಿದರೂ ಒಂದು ಬಗೆಯ ಶೂನ್ಯತೆ ಕಾಡದೇ ಇರದು. ಅವನು ಮಲಗಿದ್ದಲ್ಲೇ ಅನೂಹ್ಯವಾದ ಯಾವುದೋ ಸಂಬಂಧವೊಂದು ಬೆಳೆದು ಬಿಟ್ಟಿರುತ್ತದೆ, ಅದನ್ನು ಸುಲಭವಾಗಿ ಕತ್ತರಿಸಲಾಗುವುದಿಲ್ಲ. ಬದುಕೆಂಬ ಅಗಾಧ ಸಂತೆಯೊಳಗೆ ಸಾವೆಂಬುವುದು ಸಂತನಂತೆ, ಅದಕ್ಕೆ ಅಬ್ಬರವಿಲ್ಲ, ವೈಭವವಿಲ್ಲ, ಕೂಗಿ ಕರೆದು ವ್ಯಾಪಾರ ಕುದುರಿಸಬೇಕೆಂದಿಲ್ಲ.
ಫಾತಿಮಾ ರಲಿಯಾ ಬರೆಯುವ ಪಾಕ್ಷಿಕ ಅಂಕಣ.
ಈಗಷ್ಟೇ ಕಟ್ಟಿದ ಮಲ್ಲಿಗೆ ಮಾಲೆಯೊಂದರಿಂದ ಹಗೂರ ಜಾರಿದ ಹೂವೊಂದು ಗಾಳಿ ಬೀಸಿದಲ್ಲೆಲ್ಲಾ ತನ್ನ ಘಮವೊಂದನ್ನು ಉಳಿಸಿಕೊಳ್ಳುವಂತೆ ಚಳಿಗಾಲ ಆವರಿಸಿಕೊಂಡಿದೆ. ಪಾಳಿಯ ವ್ಯತ್ಯಾಸವೇ ಗೊತ್ತಾಗದ ಹಾಗೆ ಸುರಿಯುವ ಮಂಜು, ಕಿರಿದಾದ ಹಗಲು, ದೀರ್ಘ ರಾತ್ರಿ, ಕೌದಿಯೊಳಗಿಂದ ಮೆಲ್ಲನೆ ಹೊಯ್ದಾಡುವ ಜೋಡಿ ಉಸಿರು, ಬೆಳಗಿನ ತಣ್ಣನೆಯ ಚಳಿ, ಹಗಲಿನ ಹಿತವಾದ ಬಿಸಿಲು, ಬಿರುಕು ಬಿಟ್ಟ ಪಾದಗಳು, ಒಡೆದ ತುಟಿ… ಗರಿಕೆಯ ಗರ್ಭವೂ ಕೊನರುವ ಕಾಲದಲ್ಲಿ ಏನು ಬರೆಯಬೇಕೆಂದು ತೋಚದೆ ಸುಮ್ಮನೆ ಆಕಾಶ ದಿಟ್ಟಿಸುತ್ತಿರುವ ನಾನು, ಅಸೀಮ ಸಾಧ್ಯತೆಗಳ ಒಂದು ಪುಟ್ಟ ಮೌನ ಮತ್ತು ಇಷ್ಟು ವರ್ಷಗಳಾದ ಮೇಲೂ ಬೆಂಬಿಡದೆ ಕಾಡುವ ಒಂದು ಮದುವೆಯ ಸಂಭ್ರಮ ಮತ್ತದರ ಬೆನ್ನ ಹಿಂದೆಯೇ ದಾಂಗುಢಿಯಿಡುವ ಸಾವಿನ ಖಾಲಿತನ… ಯಾವುದರ ಬಗ್ಗೆ ಬರೆಯಲಿ? ಮದುವೆಯ ವೈಭವವನ್ನೇ? ಅಥವಾ ಸಾವಿನ ಶೂನ್ಯತೆಯನ್ನೇ?
ಅದೊಂದು ಇಂಥದ್ದೇ ಚಳಿಗಾಲ. ದೂರದ ಮಡಿಕೇರಿಯಿಂದ ಓದಲೆಂದು ಕಡಲೂರಿಗೆ ಬಂದ ಗೆಳತಿ ತನ್ನಣ್ಣನ ಮದುವೆಗೆಂದು ಆಮಂತ್ರಿಸಿದ್ದಳು. ಬದುಕಿನ ಪ್ರತೀ ಥ್ರಿಲ್ಲನ್ನೂ ಅನುಭವಿಸಬೇಕು ಅನ್ನುವ ಉತ್ಸಾಹವಿದ್ದ ವಯಸ್ಸದು. ಹಿಂದು ಮುಂದು ಯೋಚಿಸದೆ ಅವಳ ಆಮಂತ್ರಣವನ್ನು ಕಣ್ಣು ಮುಚ್ಚಿ ಒಪ್ಪಿಕೊಂಡೆವು. ಆದರೆ ಸಮಸ್ಯೆ ಇದ್ದುದು ನಮ್ಮ ನಮ್ಮ ಮನೆಯವರನ್ನು ಒಪ್ಪಿಸುವುದರಲ್ಲಿ. ಮೊದಲೇ ಹೋದಲ್ಲೆಲ್ಲಾ ಏನಾದರೊಂದು ಕಿತಾಪತಿ ಮಾಡಿ ಹೆಸರು ಕೆಡಿಸಿಕೊಂಡಿದ್ದವರು ನಾವು. ಅಷ್ಟು ಸುಲಭವಾಗಿ ಮನೆಯಲ್ಲಿ ಒಪ್ಪಿಗೆ ಸಿಗುವುದಿಲ್ಲ ಅನ್ನುವುದು ಸ್ಪಷ್ಟವಾಗಿಯೇ ಗೊತ್ತಿತ್ತು. ಹಾಗಾಗಿ ಸ್ಟಡಿ ಟೂರ್ ನ ನೆಪದಲ್ಲಿ, ಅದೂ ‘ಕ್ಲಾಸಿನ ಎಲ್ಲಾ ವಿದ್ಯಾರ್ಥಿಗಳು ಹೋಗ್ತಿದ್ದಾರೆ, ನನ್ನನ್ನು ಕಳುಹಿಸದೇ ಇದ್ರೆ ನಾನು ಕಲಿಕೆಯಲ್ಲಿ ಹಿಂದುಳಿಯುತ್ತೇನೆ. ನನಗೆ ಹೋಗಲೇಬೇಕಂತೇನಿಲ್ಲ, ನೀವು ಸಂತೋಷದಿಂದ ಕಳುಹಿಸಿಕೊಟ್ಟರೆ ಮಾತ್ರ ಹೋಗುತ್ತೇನೆ’ ಅಂತ ಎಲ್ಲರ ಮನೆಯಲ್ಲೂ ಹೇಳುವುದೆಂದು ಮೊದಲೇ ನಿರ್ಧರಿಸಿಕೊಂಡು ಹಾಗೆಯೇ ಉರು ಹೊಡೆದು ಒಂದು ರೀತಿಯಲ್ಲಿ ಇಮೋಷನಲ್ ಬ್ಲಾಕ್ ಮೇಲ್ ಮಾಡಿ ಮನೆಯವರನ್ನು ಒಪ್ಪಿಸಿ ಒಂದು ಸಂಜೆ ಮಡಿಕೇರಿಗೆ ಹೊರಟು ನಿಂತೆವು.
ಮಡಿಕೇರಿಯಲ್ಲಿ ಸೂರ್ಲಬ್ಬಿ ಅನ್ನುವ ಊರೊಂದಿದೆ ಅನ್ನುವುದು ತಿಳಿದದ್ದೇ ಬಸ್ ಹತ್ತಿ ಗೆಳತಿ ಅಲ್ಲಿಗೆ ಆರು ಟಿಕೆಟ್ ಮಾಡಿಸಿದಾಗಷ್ಟೇ. ಹಾಗೆ ಪ್ರಯಾಣ ಆರಂಭಿಸಿದಾಗಲೂ ಹೆಸರೊಂದನು ಹೊರತುಪಡಿಸಿ ಇನ್ಯಾವ ವಿಚಾರವೂ ಗೊತ್ತಿರಲಿಲ್ಲ. ಆದರೆ ಬಸ್ ಇಳಿದ ನಮ್ಮನ್ನು ಸ್ವತಃ ಮದುಮಗನೇ ಮನೆಗೆ ಕರೆದುಕೊಂಡು ಹೋಗುತ್ತಾನೆ ಅನ್ನುವುದು ನಮಗಾಗ ಒಂದು ದೊಡ್ಡ ಥ್ರಿಲ್. ಅದಕ್ಕೆ ಸರಿಯಾಗಿ ಗೆಳತಿ ಮನೆ, ಮನೆಯ ದೊಡ್ಡ ಅಂಗಳ, ಚಪ್ಪರ, ಅಡುಗೆ ಮನೆ, ಕೆಜಿಗಟ್ಟಲೆ ಅನ್ನ ಬೇಯಿಸಬಹುದಾದಂತಹ ಬಾಂಡ್ಲಿಗಳ ಬಗ್ಗೆ ತಿಂಗಳುಗಳ ಮೊದಲೇ ಗಂಟೆಗಟ್ಟಲೆ ಮಾತನಾಡಿದ್ದರಿಂದ, ಅಷ್ಟು ಕೆಲಸಗಳ ಮಧ್ಯೆಯೂ ಮದುಮಗನೇ ನಮ್ಮನ್ನು ಕರೆದೊಯ್ಯುತ್ತಾನೆ ಅನ್ನುವುದು ಥ್ರಿಲ್ ಹುಟ್ಟಿಸದೇ ಇದ್ದೀತೇ? ಮೇಲಾಗಿ ಅವನು ನೋಡಲೂ ಸಿನಿಮಾ ಹೀರೋ ತರಾನೇ ಇದ್ದ.
ಮೊದಲ ಬಾರಿ ಕೊಡಗನ್ನೂ ಮಡಿಕೇರಿಯನ್ನೂ ನೋಡುತ್ತಿದ್ದೆವಾದ್ದರಿಂದ ನಮ್ಮ ಉತ್ಸಾಹಕ್ಕೆ ಮೇರೆಯೇ ಇರಲಿಲ್ಲ.
ಮನೆ ತಲುಪಿದ ಕೂಡಲೇ ಜೀಪಿನಿಂದ ಇಳಿಯುವಷ್ಟು ತಾಳ್ಮೆ ಇಲ್ಲದ ನಾವು ಒಬ್ಬೊಬ್ಬರಾಗಿ ಜಿಗಿಯತೊಡಗಿದೆವು. ಆದರೆ ನಮ್ಮ ಗುಂಪಿನಲ್ಲಿ ನಾಲ್ಕಿಂಚು ಎತ್ತರದ ಚಪ್ಪಲಿ ಧರಿಸಿದ್ದ ಒಬ್ಬ ಗೆಳತಿ ಮಾತ್ರ ಜಿಗಿಯಲು ಪ್ರಯತ್ನಿಸುತ್ತಿದ್ದವಳು ಮುಗ್ಗರಿಸಿ ಬಿದ್ದಳು. ಬಿದ್ದವಳು ಹಾಗೇ ಜಾರಿಕೊಂಡು ಹೋಗಿ, ಮದುವೆಯಂದು ಕೈ ತೊಳೆಯಲೆಂದು ಮಾಡಿದ್ದ ಸಣ್ಣ ಹೊಂಡಕ್ಕೆ ಬಿದ್ದಳು. ತಡೆಯಲಾಗದೆ ನಾವು ನಗುತ್ತಿದ್ದರೆ ಅವಳು ಅಳು ಮುಖ ಮಾಡಿ ಗುಂಡಿಯಿಂದ ಎದ್ದು ಬಂದು ಪೂರ್ತಿ ಕೆಸರಾಗಿದ್ದ ಬಟ್ಟೆ ತೊಳೆಯಲು ಅಲ್ಲೇ ಇದ್ದ ನಲ್ಲಿಯ ಹತ್ತಿರ ಹೋದಳು. ಎಷ್ಟು ತೊಳೆದರೂ ಹೋಗಲೊಲ್ಲದ ಕೆಸರಿಗೆ ಬಯ್ಯುತ್ತಲೇ ತಲೆ ಎತ್ತಿ ನೋಡಿದರೆ, ನಮ್ಮ ಮಂಗಾಟವನ್ನು ನೋಡುತ್ತಾ ಇಡೀ ಮದುವೆ ಮನೆಯ ಹೆಂಗಸರು ಅಂಗಳದಲ್ಲಿ ನೆರೆದಿದ್ದರು. ಅವರೆಲ್ಲರ ತಲೆಯನ್ನು ಒಂದು ಕೆಂಪು ಬಟ್ಟೆ ಅಲಂಕರಿಸಿತ್ತು. ಅಷ್ಟು ಹೊತ್ತಾಗುವಾಗ ಅದೆಲ್ಲಿಂದಲೋ ಓಡಿ ಬಂದ ಅಜ್ಜಿಯೊಬ್ಬರನ್ನು ನಮ್ಮನ್ನು ಆತ್ಮೀಯವಾಗಿ ಮನೆಯೊಳಗೆ ಕರೆದು ಕೂರಿಸಿ ತಿಂಡಿ ಕೊಟ್ಟರು.
ನಿಜಕ್ಕೂ ಆಕೆ ಅನುಭವದ ಖಜಾನೆ. ಎಷ್ಟು ಮಾತಾಡಿದರೂ ಅವರ ಮಾತು ಮುಗಿಯುತ್ತಲೇ ಇರಲಿಲ್ಲ. ನಮ್ಮನ್ನೂ ಸೇರಿಸಿ ಮನೆಗೆ ಬರುವ ಎಲ್ಲಾ ಅತಿಥಿಗಳನ್ನು ವಿಚಾರಿಸಿಕೊಳ್ಳುತ್ತಾ, ಅವರಿವರಿಗೆ ಸೂಕ್ತ ನಿರ್ದೇಶಗಳನ್ನು ನೀಡುತ್ತಾ ಓಡಾಡುತ್ತಿದ್ದರು. ಕುಂದನ್ ಕುಸುರಿಯಿದ್ದ ತಲೆ ವಸ್ತ್ರ ಧರಿಸಿದ್ದ ಅವರನ್ನು ಐದು ನಿಮಿಷ ಕೂರಿಸಿ ಅದರ ಬಗ್ಗೆ ವಿಚಾರಿಸುವಷ್ಟರಲ್ಲಿ ಸಾಕುಬೇಕಾಯಿತು. ಹಾಗೆ ವಿಚಾರಿಸಿದಾಗಲೇ ‘ಅವ್ವಯ್ಯ’ “ಹಿಂದೆಲ್ಲಾ ಕೊಡವ ಮಹಿಳೆಯರು ಬಿಡುವಿನ ಸಮಯದಲ್ಲಿ ‘ವಸ್ತ್ರ’ದ ಮೇಲೆ ಸುಂದರವಾಗಿ ಕಸೂತಿ ಬಿಡಿಸುತ್ತಿದ್ದರು, ಕುಂದನ್ ಹಾಕುತ್ತಿದ್ದರು. ಈಗ ಹಾಳು ಧಾರವಾಹಿಗಳು ನಮ್ಮ ಕೊಡವ ಮಹಿಳೆಯರನ್ನೂ ಸೋಮಾರಿಗಳನ್ನಾಗಿಸಿವೆ” ಎಂದು ಗೊಣಗಿದರು. ನಾವು ಅವ್ವಯ್ಯಳನ್ನು ಇಂಪ್ರೆಸ್ ಮಾಡಲೆಂದು “ಅಜ್ಜೀ, ನಮಗೂ ಈ ಕಸೂತಿ ಕಲಿಸಿಕೊಡುತ್ತೀರಾ?” ಎಂದು ವೈಯ್ಯಾರದಿಂದ ಕೇಳಿದೆವು. ತುಸು ಖಾರವಾಗಿ ಆಕೆ “ಏನು ಆಟ ಅಂದುಕೊಂಡಿದ್ದೀರಾ? ಜೀಪಿಂದ ನೆಟ್ಟಗೆ ಇಳಿಯುವಷ್ಟು ತಾಳ್ಮೆ ನಿಮಗಿಲ್ಲ, ಇನ್ನು ಕಸೂತಿ ಕಲಿಯೋಕೆ ಇರುತ್ತದಾ?” ಎಂದು ದಬಾಯಿಸಿದರು. ಕಿಟಕಿಯ ಪಕ್ಕದಲ್ಲಿ ಹೂವಿನ ಮಾಲೆ ಇಳಿಬಿಡುತ್ತಿದ್ದ ಹೆಂಗಸು ನಮ್ಮನ್ನು ನೋಡಿ ಮುಸಿ ಮುಸಿ ನಕ್ಕರು. ನಾವು ತಲೆ ಅಡಿಗೆ ಹಾಕಿಕೊಂಡು ನಮಗಾಗಿ ಸಿದ್ಧಪಡಿಸಿದ ರೂಮಿಗೆ ಹೋಗಿ ಬಾಗಿಲ ಬಳಿ ಯಾರೂ ಇಲ್ಲವೆಂಬುವುದನ್ನು ಕನ್ಫರ್ಮ್ ಮಾಡಿಕೊಂಡು ಎಷ್ಟು ಧಿಮಾಕು ಆ ಅಜ್ಜಿಗೆ ಎಂದು ಗೊಣಗಿಕೊಂಡೆವು.
ನಾಲ್ಕಿಂಚು ಎತ್ತರದ ಚಪ್ಪಲಿ ಧರಿಸಿದ್ದ ಒಬ್ಬ ಗೆಳತಿ ಮಾತ್ರ ಜಿಗಿಯಲು ಪ್ರಯತ್ನಿಸುತ್ತಿದ್ದವಳು ಮುಗ್ಗರಿಸಿ ಬಿದ್ದಳು. ಬಿದ್ದವಳು ಹಾಗೇ ಜಾರಿಕೊಂಡು ಹೋಗಿ, ಮದುವೆಯಂದು ಕೈ ತೊಳೆಯಲೆಂದು ಮಾಡಿದ್ದ ಸಣ್ಣ ಹೊಂಡಕ್ಕೆ ಬಿದ್ದಳು. ತಡೆಯಲಾಗದೆ ನಾವು ನಗುತ್ತಿದ್ದರೆ ಅವಳು ಅಳು ಮುಖ ಮಾಡಿ ಗುಂಡಿಯಿಂದ ಎದ್ದು ಬಂದು ಪೂರ್ತಿ ಕೆಸರಾಗಿದ್ದ ಬಟ್ಟೆ ತೊಳೆಯಲು ಅಲ್ಲೇ ಇದ್ದ ನಲ್ಲಿಯ ಹತ್ತಿರ ಹೋದಳು.
ಹಾಗೆ ಗೊಣಗಿಕೊಂಡ ಐದೇ ನಿಮಿಷಕ್ಕೆ ಅದೇ ಅವ್ವಯ್ಯ ಒಂದು ತಂಬಿಗೆಯಲ್ಲಿ ಬಿಸಿ ಬಿಸಿ ಹಾಲು ಮತ್ತು ಐದು ಲೋಟ ಹಿಡಿದುಕೊಂಡು ನಾವಿದ್ದಲ್ಲಿಗೇ ಬಂದು ಹಾಲು ಕೊಟ್ಟು ಇನ್ನೇನಾದರೂ ಬೇಕಿದ್ದರೆ ನನ್ನನ್ನು ಕರೆಯಿರಿ ಎಂದು ಬಾಗಿಲು ಓರೆ ಮಾಡಿ ಹೋದರು. ಕೆಲವೇ ನಿಮಿಷಗಳ ಹಿಂದೆ ನಮ್ಮನ್ನೂ, ನಮ್ಮ ತಾಳ್ಮೆಗೇಡಿತನವನ್ನೂ ಜಾಡಿಸಿದ್ದ ಅವರು ಇಷ್ಟು ಪ್ರೀತಿಯಿಂದಲೂ ನಮ್ಮನ್ನು ನೋಡಿಕೊಳ್ಳಲು ಸಾಧ್ಯಾನಾ ಅನ್ನಿಸಿತು. ತಂಬಿಗೆಯಲ್ಲಿದ್ದ ಕೆನೆಗಟ್ಟಿದ ಹಾಲು ಸಾಧ್ಯ ಅಂದಿತು.
ಹಾಲಿನ ಲೋಟ ಕೆಳಗಿಡುವಷ್ಟರಲ್ಲಿ ಮತ್ತೆ ಊರು ಸುತ್ತುವ ನಮ್ಮ ಉತ್ಸಾಹ ಗರಿಗೆದರಿತ್ತು. ಚಪ್ಪರದ ಸುತ್ತ ಕುಳಿತಿದ್ದವರಲ್ಲೆಲ್ಲಾ ಗೋಗರೆದೂ ಆಯಿತು, ಅವರು ನಮ್ಮೊಂದಿಗೆ ಹೊರಡಲೂ ಸಿದ್ಧವಾದರು. ಆದರೆ ಮತ್ತೆ ನಮ್ಮ ತಿರುಗಾಟಕ್ಕೆ ತೊಡರುಗಾಲು ಹಾಕಿದ್ದು ಅವ್ವಯ್ಯನೇ. “ಇನ್ನೂ ಪ್ರಯಾಣದ ಸುಸ್ತೇ ಆರಿರುವುದಿಲ್ಲ. ಅದಲ್ಲದೆ ಈ ರಾತ್ರಿನೇ ಊರು ತಿರುಗಬೇಕೆಂದಿಲ್ಲ. ಮಡಿಕೇರಿ ಎಲ್ಲೂ ಓಡಿಹೋಗುವುದಿಲ್ಲ. ಮದುವೆ ಮುಗಿಸಿದ ಮೇಲೆ ಮಡಿಕೇರಿಯೇಕೆ, ಇಡೀ ಕೊಡಗನ್ನೇ ನೋಡಬಹುದು. ಈಗ ಸ್ವಲ್ಪ ಹೊತ್ತು ಮಲಗಿ ವಿಶ್ರಾಂತಿ ತೆಗೆದುಕೊಳ್ಳಿ” ಎಂದು ನಮ್ಮ ಉತ್ಸಾಹಕ್ಕೆ ತಣ್ಣೀರೆರಚಿದರು. ನಾವು ಇನ್ನು ವಾದಿಸಿ ಪ್ರಯೋಜನವಿಲ್ಲ ಎಂದು ಅರಿತುಕೊಂಡವರಂತೆ ಕೋಣೆಗೆ ಹೋಗಿ ಅಕ್ಷರಶಃ ಬಿದ್ದುಕೊಂಡೆವು.
ಮರುದಿನ ಮದುವೆಯ ಸಂಭ್ರಮ. ರಾತ್ರಿ ಮಲಗುವಾಗ , ಮನೆಯೊಳಗೆ ಕೆಂಡದ ಅಗ್ಗಿಷ್ಟಿಕೆ ಹಾಕಿಕೊಂಡೆ ಮೈ ಬಿಸಿಯಾಗಿಸಿಕೊಳ್ಳಬೇಕಾದ, ತಣ್ಣೀರನ್ನು ಮುಟ್ಟುವಂತಿಲ್ಲದ, ಟ್ಯಾಪ್ ಗಳಲ್ಲಿ ಬರೋ ನೀರು ಐಸ್ ಗಿಂತಲೂ ಕೋಲ್ಡ್ ಇರುವ, ನಮ್ಮೂರಿನ ಜಿಟಿ ಜಿಟಿ ಮಳೆಯಂತೆ ಮಂಜು ಸುರಿಯುವ ಈ ಊರಿನಲ್ಲಿ ಬೆಳಗಾಗುವುದು ಯಾವಾಗಲೋ, ಮದುವೆ ಕಾರ್ಯ ಶುರುವಾಗುವುದು ಯಾವಾಗಲೋ ಅಂತೆಲ್ಲಾ ಅಂದುಕೊಂಡಿದ್ದೆವು. ಆದರೆ ಹೊತ್ತು ಮೂಡುವ ಮುಂಚೆಯೇ ಎಲ್ಲರೂ ಶಿಸ್ತಾಗಿ ರೆಡಿಯಾಗಿದ್ದರು. ಶೌರ್ಯ, ಸಾಹಸದೊಂದಿಗೆ ಶಿಸ್ತೂ ಕೊಡಗು ಮಣ್ಣಿನ ವಿಶಿಷ್ಟತೆಯೇನೋ ಅನ್ನಿಸುವಷ್ಟರಮಟ್ಟಿಗೆ ನೀಟಾಗಿ ತಯಾರಾಗಿದ್ದರು.
ಮದುವೆ ಮಂಟಪದಲ್ಲಿ ಮದುಮಕ್ಕಳನ್ನು ನೋಡುವುದೇ ಒಂದು ಹಬ್ಬ. ವರನು ಬಿಳಿ ಕುಪ್ಪಸ, ತಲೆಗೆ ‘ಪಾನಿಮಂಡೆತುಣಿ’, ಸೊಂಟಕ್ಕೆ ಕತ್ತಿ, ಕೊರಳಿಗೆ ಸರ ಹಾಗೂ ಕೈಗೆ ಬಳೆ, ಕೈ ಬೆರಳಿಗೆ ಉಂಗುರ ಧರಿಸಿದ್ದರೆ, ವಧು ಸೀರೆಯ ಜೊತೆಗೆ ತಲೆಗೆ ‘ಮುಸ್ಕೋಲಿ’ ಧರಿಸಿ, ತೋಳಿನ ಹಿಂದಿನಿಂದ ತಂದು ಸೊಂಟಕ್ಕೆ ಸಿಕ್ಕಿಸಿದ್ದರು. ಕೊಡಗಿನ ವಿಶಿಷ್ಟ ಆಚರಣೆಗಳಿಗೆ ಮನಸೋಲುತ್ತಿರಬೇಕಾದರೆ ತರಾತುರಿಯಿಂದ ಬಂದ ವಧುವಿನ ಅತ್ತಿಗೆ ಮಧುಮಗಳ ಕೈಬೆರಳ ಉಗುರು ಕತ್ತರಿಸಿ ಹಾಲಿನಲ್ಲಿ ಹಾಕಿ ಒಂದು ಮರದ ಬುಡಕ್ಕೆ ಚೆಲ್ಲಿದರು. ವಧುವಿಗೆ ದೃಷ್ಟಿಯಾಗದಿರಲಿ ಎಂದು ಈ ಕ್ರಮವಂತೆ.
ಕೊಡವ ವಿವಾಹದ ಅಷ್ಟೂ ಸಂಪ್ರದಾಯಗಳಲ್ಲಿ ನನಗೆ ಆಪ್ತ ಎನಿಸಿದ್ದು ಅವರ ಭೋಜನಾ ಕ್ರಮ. ಮದುವೆಗೆ ಬಂದ ಬಂಧು ಬಳಗದವರು, ನೆಂಟರು ಹಾಗೂ ದೂರದ ಊರುಗಳಿಂದ ಬಂದವರು ಮೊದಲು ಕುಳಿತು ಊಟ ಮಾಡುವುದು ಕ್ರಮ. ಅನಂತರವಷ್ಟೇ ಅದೇ ಊರಿನವರು, ಮನೆಯವರು ಮತ್ತು ಇತರರು ಊಟ ಮಾಡಬೇಕು. ಅದೂ ಎಲೆಗೆ ಬಡಿಸಿದ ತಕ್ಷಣವೇ ಊಟ ಮಾಡುವಂತಿಲ್ಲ, ಯಾರಾದರೂ ಹಿರಿಯ ವ್ಯಕ್ತಿ ಉಣ್ಣೋಣವೇ ಎಂದು ಕೇಳಿ ಅದಕ್ಕೆ ಉಳಿದವರಿಂದ ಸಮ್ಮತಿ ಪಡೆದ ನಂತರವಷ್ಟೇ ಭೋಜನ ಶುರುವಾಗುತ್ತದೆ. ಮೊದಲು ತನಗಿರಲಿ ಅಂದುಕೊಳ್ಳುವವರೇ ಇರುವ ಈ ಕಾಲದಲ್ಲೂ ಇಂಥದ್ದೊಂದು ಸಂಪ್ರದಾಯವೂ ಇದೆ ಅನ್ನುವುದೇ ನಮಗೆ ಒಂದು ದೊಡ್ಡ ಅಚ್ಚರಿಯ ಸಂಗತಿ.
ಮದುವೆಯ ಸಂಭ್ರಮ, ದಿಬ್ಬಣ, ಸಂಪ್ರದಾಯ, ರೀತಿ ರಿವಾಜುಗಳು, ಕಟ್ಟಳೆಗಳು ಎಲ್ಲವನ್ನೂ ವಿವರಿಸುತ್ತಾ ಮೊಮ್ಮಗನ ಮದುವೆಯ ಪ್ರತಿ ಕ್ಷಣವನ್ನೂ ಇಡಿಇಡಿಯಾಗಿ ಅನುಭವಿಸಲು ನಮಗನುವು ಮಾಡಿಕೊಟ್ಟವರು ಅವ್ವಯ್ಯ. ನಮ್ಮೊಂದಿಗೇ ಹಾಡುತ್ತಾ, ನಾವು ಕುಣಿದಾಗ ನಮ್ಮೊಂದಿಗೆ ಹೆಜ್ಜೆ ಹಾಕುತ್ತಾ, ನಾವು ಕಿರುಚಿದಾಗ ಮತ್ತಷ್ಟು ಧ್ವನಿ ಸೇರಿಸುತ್ತಾ, ನಮಗಿಂತಲೂ ಜೋರಾಗಿ ವಿಷಲ್ ಹೊಡೆಯುತ್ತಾ ಇಡೀ ಮದುವೆಯಲ್ಲಿ ಉಲ್ಲಾಸದಿಂದ ಓಡಾಡುತ್ತಾ ಜೊತೆಗೆ ನಮ್ಮನ್ನೂ ಓಡಾಡಿಸುತ್ತಾ ಒಂದು ಕ್ಷಣವೂ ಅಪರಿಚಿತ ಭಾವ ನಮ್ಮನ್ನು ಕಾಡದಂತೆ ನೋಡಿಕೊಂಡರು. ಜನರೇಷನ್ ಗ್ಯಾಪ್, ಗೊತ್ತಿಲ್ಲದ ಸಂಪ್ರದಾಯಗಳು ಯಾವುದೂ ನಮ್ಮ ನಡುವೆ ಬರಲೇ ಇಲ್ಲ.
ಅತ್ತಿಗೆಯನ್ನು ಮನೆ ತುಂಬಿಸಿಕೊಂಡ ಮೇಲಂತೂ ಅಜ್ಜಿಯ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಇಡೀ ದಿನ ಕೆಲಸ ಮೈಗೆಳೆದುಕೊಂಡು ಓಡಾಡುವುದೇನು, ನಮ್ಮೆಲ್ಲರನ್ನು ಅವರಿಗೆ ಪರಿಚಯಿಸುವುದೇನು, ಆಗಾಗ ಕೆಲಸದವರನ್ನು ಕರೆದು ಆಗಬೇಕಾಗಿರುವ ಕೆಲಸದ ಪಟ್ಟಿ ಕೊಡುವುದೇನು, ಒಮ್ಮೆ ಚಪ್ಪರಕ್ಕೆ ಮತ್ತೊಮ್ಮೆ ಅಡುಗೆ ಮನೆಗೆ ಮತ್ತೊಮ್ಮೆ ಮಹಡಿ ಮೇಲಿರುವ ಅತಿಥಿಗಳನ್ನು ಸುಧಾರಿಸೋಕೆ ಅಂತ ಓಡಾಡುತ್ತಿದ್ದರೆ ಆಗಷ್ಟೇ ಇಪ್ಪತ್ತೊಂದನೇ ವರ್ಷದ ಬರ್ತ್ ಡೇ ಕ್ಯಾಂಡಲ್ ಊದಿದ್ದ ನಮ್ಮ ಎದೆಯೊಳಗೆ ಸಣ್ಣಗೆ ಅವಲಕ್ಕಿ ಕುಟ್ಟಿದ್ದಂತಾಗುತ್ತಿತ್ತು. ನವ ವಧು-ವರರನ್ನು ದೇವಸ್ಥಾನಗಳಿಗೆ, ಪ್ರೇಕ್ಷಣೀಯ ಸ್ಥಳಗಳಿಗೆ ಕರೆದೊಯ್ಯುವುದರಲ್ಲೂ ಅಜ್ಜಿಯದೇ ಮುಂದಾಳುತನ. ಅಜ್ಜಿಯ ಬಾಲದಂತೆ ನಾವೂ ಅವರ ಜೊತೆ ಊರು ಸುತ್ತಲು ಹೊರಡುತ್ತಿದ್ದೆವು. ಮಾಂದಲಪಟ್ಟಿಗೆ ಹೋದಾಗಲಂತೂ ಮಧುಮಗಳನ್ನು ಸೇರಿಸಿ ನಾವೆಲ್ಲರೂ ಬೆಟ್ಟ ಹತ್ತಲಾಗದೆ ಏದುಸಿರು ಬಿಡುತ್ತಾ ಅರ್ಧದಲ್ಲೇ ನಿಂತಿರಬೇಕಾದರೆ ಅವರು ನಮಗಿಂತ ಇಪ್ಪತ್ತೈದು ಹೆಜ್ಜೆ ಮುಂದಿದ್ದರು.
ಇಷ್ಟು ಜೀವನೋತ್ಸಾಹ, ಬದುಕಿನ ಪ್ರತಿ ಕ್ಷಣಗಳನ್ನೂ ಅನುಭವಿಸಬೇಕೆಂಬ ತುಡಿತ, ತನಗಿಂತ ಚಿಕ್ಕವರಲ್ಲೂ ಸಲೀಸಾಗಿ ಬೆರೆಯುತ್ತಿದ್ದ ಮನೋಭಾವ, ಬದುಕಿನೆಡೆಗಿನ ಇಷ್ಟೊಂದು ಅಗಾಧ ಬದ್ಧತೆ ಬೆಳೆಸಿಕೊಳ್ಳಲು ಅವರಿಗೆ ಹೇಗೆ ಸಾಧ್ಯವಾಯಿತು ಅಂತ ಒಮ್ಮೊಮ್ಮೆ ಯೋಚನೆಗಿಟ್ಟುಕೊಳ್ಳುತ್ತಿತ್ತು. ಅವೆಲ್ಲಾ ಬೆಳೆಸಿಕೊಂಡಿರುವುದಲ್ಲ, ಅವರ ಬದುಕಿನ ಸಹಜ ರೀತಿಯದು ಅಂತ ಈಗ ಅರ್ಥವಾಗುತ್ತಿದೆ.
ಮೂರೇ ದಿನಗಳಿಗೆಂದು ಮನೆಯಲ್ಲಿ ಕಾಡಿ ಬೇಡಿ ಒಪ್ಪಿಸಿದ್ದ ನಾವು ಒಂದು ವಾರ ಅಲ್ಲಿ ಹೇಗೆ ಕಳೆದವೋ ಗೊತ್ತಿಲ್ಲ. ವಾರ ಕಳೆಯುವಷ್ಟರಲ್ಲಿ ಅಲ್ಲಿಯವರೆಲ್ಲರೂ ನಮ್ಮವರೇ ಆಗಿಬಿಟ್ಟದ್ದರು. ಆದರೆ ನಾವು ಮತ್ತೆ ನಮ್ಮ ನಮ್ಮ ಮನೆಗಳಿಗೆ ಹಿಂದಿರುಗಲೇಬೇಕಿತ್ತು. ಒಲ್ಲದ ಮನಸ್ಸಿನಿಂದಲೇ ರಾತ್ರಿ ಮಲಗುವ ಮುನ್ನ ಬ್ಯಾಗ್ ಪ್ಯಾಕ್ ಮಾಡಿ, ಮುಂಜಾನೆ ಹೊರಟು ನಿಂತಾಗ ಎಲ್ಲರ ಕಣ್ಣೂ ಒದ್ದೆ ಒದ್ದೆ. ನಮ್ಮನ್ನು ಬೀಳ್ಕೊಡಲೆಂದು ಗೆಳತಿಯ ಅಣ್ಣ ಜೀಪ್ ಹತ್ತುತ್ತಿದ್ದಂತೆ ಓಡಿ ಬಂದ ಅಜ್ಜಿಯೂ ಜೀಪ್ ಹತ್ತಿದರು. ಬಸ್ ಸ್ಟಾಂಡ್ ತಲುಪುವಷ್ಟರಲ್ಲಿ ನಾವು ಹೋಗಬೇಕಿದ್ದ ಬಸ್ಸೂ ಬಂದು ನಿಂತಿತ್ತು. ಜೀಪಿನಿಂದ ಇಳಿದ ನಾವು ಬಸ್ ಹತ್ತಿ ಮತ್ತೊಮ್ಮೆ ಅಜ್ಜಿಗೆ ಕೈ ಬೀಸಿದಾಗ ಅವರ ಕಣ್ಣಲ್ಲೂ ತೆಳು ನೀರು. ಮೋಜಿನಿಂದ ಆರಂಭವಾದ ನಮ್ಮ ಮಡಿಕೇರಿಯ ಪಯಣ ತುಂಬು ಭಾವುಕವಾಗಿ ಕೊನೆಗೊಂಡಿತ್ತು. ಅಲ್ಲಿ ಅನುಭವಿಸಿದ ಪ್ರತಿಯೊಂದು ಘಟನೆಗಳೂ ಬದುಕಿರುವವರೆಗೂ ನಮ್ಮೊಂದಿಗೆ ಬೆಚ್ಚಗಿರುತ್ತವೆ.
ಊರು ತಲುಪಿದ ಮೇಲೂ ಅಜ್ಜಿಯೊಂದಿಗಿನ ನಮ್ಮ ಸಂಬಂಧ ಗಾಢವಾಗಿಯೇ ಇತ್ತು. ಆಗಾಗ ಫೋನ್ ನಲ್ಲಿ ಮಾತನಾಡುತ್ತಾ, ಅವರನ್ನು ನಮ್ಮೂರಿಗೆ ಕರೆಯುತ್ತಾ, ಅವರು ಬಂದೇ ಬರುತ್ತೇನೆ ಪ್ರಾಮಿಸ್ ಮಾಡುತ್ತಾ, ನಮ್ಮನ್ನು ಮತ್ತೆ ಮಡಿಕೇರಿಗೆ ಕರೆಯುತ್ತಾ, ತಮಾಷೆ, ಚೋದ್ಯ, ತೆಳು ಹಾಸ್ಯದೊಂದಿಗೆ ಒಂದು ಚಂದದ ಸಂವಹನ ನಡೆಯುತ್ತಿತ್ತು. ಅಜ್ಜಿಯೊಂದಿಗೆ ಅತ್ತಿಗೆಯೂ ನಮಗೆ ತುಂಬಾ ಆತ್ಮೀಯರಾಗಿದ್ದರು.
ಇಷ್ಟು ಜೀವನೋತ್ಸಾಹ, ಬದುಕಿನ ಪ್ರತಿ ಕ್ಷಣಗಳನ್ನೂ ಅನುಭವಿಸಬೇಕೆಂಬ ತುಡಿತ, ತನಗಿಂತ ಚಿಕ್ಕವರಲ್ಲೂ ಸಲೀಸಾಗಿ ಬೆರೆಯುತ್ತಿದ್ದ ಮನೋಭಾವ, ಬದುಕಿನೆಡೆಗಿನ ಇಷ್ಟೊಂದು ಅಗಾಧ ಬದ್ಧತೆ ಬೆಳೆಸಿಕೊಳ್ಳಲು ಅವರಿಗೆ ಹೇಗೆ ಸಾಧ್ಯವಾಯಿತು ಅಂತ ಒಮ್ಮೊಮ್ಮೆ ಯೋಚನೆಗಿಟ್ಟುಕೊಳ್ಳುತ್ತಿತ್ತು. ಅವೆಲ್ಲಾ ಬೆಳೆಸಿಕೊಂಡಿರುವುದಲ್ಲ, ಅವರ ಬದುಕಿನ ಸಹಜ ರೀತಿಯದು ಅಂತ ಈಗ ಅರ್ಥವಾಗುತ್ತಿದೆ.
ಈ ಮಧ್ಯೆ ಅಣ್ಣ ಮತ್ತೆ ಬೆಂಗಳೂರಿಗೆ ಹೊರಡುವ ಸಮಯ ಬಂತು. ಅತ್ತಿಗೆಗೆ ಬೆಂಗಳೂರು ಹೊಸದು, ಮೇಲಾಗಿ ಮನೆಯಲ್ಲಿ ಒಬ್ಬಳೇ ಇದ್ದು ಅಭ್ಯಾಸವೇ ಇಲ್ಲ. ಅಜ್ಜಿ ಎಷ್ಟು ಬೇಡಿಕೊಂಡರೂ ಬಿಡದೆ ಅವರಿಬ್ಬರೂ ಒತ್ತಾಯದಿಂದ ಅವರನ್ನು ಬೆಂಗಳೂರಿಗೆ ಕರೆದೊಯ್ದರು. ಸಾಮಾನ್ಯವಾಗಿ ಮೊದಲ ಸಲ ಬೆಂಗಳೂರು ಹೋದವರೆಲ್ಲಾ ಅಲ್ಲಿನ ಹವೆಗೋ, ಹಗಲು ರಾತ್ರಿ ವ್ಯತ್ಯಾಸವಿಲ್ಲದ ಬದುಕಿಗೋ ಹೊಂದಿಕೊಳ್ಳಲಾಗದೇ ರಾಜಧಾನಿಯನ್ನ ಹಳಿಯುತ್ತಾರಾದರೆ ನಮ್ಮ ಅಜ್ಜಿ ಮಾತ್ರ ಆರಾಮವಾಗಿ ಹೊಂದಿಕೊಂಡಿದ್ದರು. ಹಾಗೆ ಹೇಳುವುದಾದರೆ ಅಜ್ಜಿಗಿಂತ ಹೆಚ್ಚು ಕಷ್ಟವಾದದ್ದು ಅತ್ತಿಗೆಗೇ.
ಅಜ್ಜಿ ಪೂರ್ತಿಯಾಗಿ ಬೆಂಗಳೂರಲ್ಲೇ ಜಾಂಡಾ ಹೂಡುತ್ತಾರೇನೋ ಅಂತೆಲ್ಲಾ ನಾವು ತಮಾಷೆ ಮಾಡುತ್ತಿದ್ದೆವು. ಹಾಗಿರುವಾಗಲೇ ಒಂದು ಬೆಳ್ಳಂಬೆಳಗ್ಗೆ ಗೆಳತಿ ಕರೆ ಮಾಡಿದ್ದಳು. ಅನ್ಯಮನಸ್ಕತೆಯಲ್ಲೇ ಫೋನ್ ರಿಸೀವ್ ಮಾಡಿದ್ರೆ ಆ ಕಡೆಯಿಂದ ಅವಳ ಬಿಕ್ಕುವಿಕೆ ಮಾತ್ರ ಕೇಳಿಸುತ್ತಿತ್ತು. ನನಗೋ ಗಾಬರಿ. ಸ್ವಲ್ಪ ಸುಧಾರಿಸಿಕೊಂಡು ಏನಾಯ್ತು ಅಂತ ಕೇಳಿದಾಗ ಆಕೆ ಮತ್ತೆ ಜೋರಾಗಿ ಅಳುತ್ತಾ “ಅಜ್ಜಿ, ಅಣ್ಣ, ಅತ್ತಿಗೆ ತೀರಿಕೊಂಡರು. ನಿನ್ನೆ ರಾತ್ರಿ ಮೂವರೂ ಕಾರಲ್ಲಿ ಹೋಗುತ್ತಿರಬೇಕಾದರೆ ವೇಗವಾಗಿ ಬಂದ ಲಾರಿ ಕಾರಿನ ಮೇಲೆ ಹರಿದು ಮೂವರೂ ಸ್ಥಳದಲ್ಲಿ ಮೃತಪಟ್ಟಿದ್ದಾರೆ. ನೀನು ಉಳಿದ ಗೆಳತಿಯರಿಗೆಲ್ಲಾ ತಿಳಿಸಿಬಿಡು” ಎಂದಳು. ಹಾಗೆ ಹೇಳಿ ಸುಮಾರು ಹೊತ್ತಾದ ಬಳಿಕವೂ ಆಕೆ ಬಿಕ್ಕಳಿಸುತ್ತಿದ್ದುದು ಕೇಳಿಸುತ್ತಿತ್ತು.
ಅವಳಿಗೆ ಸಮಾಧಾನದ ಜರೂರಿತ್ತೇನೋ ಇತ್ತು. ಆದರೆ ನಾನು ಆಕೆಗೆ ಸಮಾಧಾನ ಮಾಡುವುದು ಬಿಡಿ ನನಗೇ ಯಾವುದಾದರೊಂದು ಆಸರೆ ಸಿಗುತ್ತದಾ ಎಂಬ ಹುಡುಕಾಟದಲ್ಲಿದ್ದೆ. ಫೋನ್ ಹಿಡಿದ ಕೈ ಅನೈಚ್ಛಿಕವಾಗಿ ನಡುಗುತ್ತಿತ್ತು, ಕಾಲು ಬವಳಿ ಬಂದು ಬಿಡುತ್ತೇನೋ ಅನ್ನಿಸುತ್ತಿತ್ತು, ಮಾತನಾಡಬೇಕೆಂದರೆ ಗಂಟಲಿನ ಶಬ್ಧವೇ ಹುಟ್ಟುತ್ತಿರಲಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಇಂಥದ್ದೊಂದು ಸನ್ನಿವೇಶವನ್ನು ಉಳಿದವರಿಗೆಲ್ಲಾ ತಿಳಿಸುವುದಾದರೂ ಹೇಗೆ ಅನ್ನುವುದೇ ಅರ್ಥವಾಗುತ್ತಿರಲಿಲ್ಲ.
ಪ್ರತೀ ಸಾವೂ ಒಂದು ವಿವರಿಸಲಾಗದ ಶೂನ್ಯವನ್ನೂ, ತಲ್ಲಣವನ್ನೂ ಸೃಷ್ಟಿಸುತ್ತದೆ. ಹಾಗೆ ನೋಡುವುದಾದರೆ ಯಾರ ಸಾವೂ, ಯಾವ ಸಾವೂ ನೆಮ್ಮದಿಯನ್ನು, ಸಂಭ್ರಮವನ್ನು ತರುವುದಿಲ್ಲ. ವರ್ಷಗಳ ಕಾಲ ಹಾಸಿಗೆ ಹಿಡಿದವನು, ಕೋಮಾದಲ್ಲಿದ್ದವನು ಮರಣ ಹೊಂದಿದರೂ ಒಂದು ಬಗೆಯ ಶೂನ್ಯತೆ ಕಾಡದೇ ಇರದು. ಅವನು ಮಲಗಿದ್ದಲ್ಲೇ ಅನೂಹ್ಯವಾದ ಯಾವುದೋ ಸಂಬಂಧವೊಂದು ಬೆಳೆದು ಬಿಟ್ಟಿರುತ್ತದೆ, ಅದನ್ನು ಸುಲಭವಾಗಿ ಕತ್ತರಿಸಲಾಗುವುದಿಲ್ಲ. ಬದುಕೆಂಬ ಅಗಾಧ ಸಂತೆಯೊಳಗೆ ಸಾವೆಂಬುವುದು ಸಂತನಂತೆ, ಅದಕ್ಕೆ ಅಬ್ಬರವಿಲ್ಲ, ವೈಭವವಿಲ್ಲ, ಕೂಗಿ ಕರೆದು ವ್ಯಾಪಾರ ಕುದುರಿಸಬೇಕೆಂದಿಲ್ಲ. ಮೂಲೆಯಲ್ಲಿ ಮೌನವಾಗಿಯೇ ಕೂತು ಎಲ್ಲವನ್ನೂ ನೋಡುತ್ತಾ , ಮನನ ಮಾಡಿಕೊಳ್ಳುತ್ತಾ ಒಂದು ನಿಶ್ಚಿತ ಸಮಯದಲ್ಲಿ ಮೌನವಾಗಿಯೇ ಎದ್ದು ಬಂದು ಕೈ ಹಿಡಿದು ಕರೆದುಕೊಂಡು ಹೋಗುತ್ತದೆ. ಆದರೆ ಅದು ಬದುಕಿರುವವರ ಎದೆಯಲ್ಲಿ ಉಳಿಸಿಬಿಡುವ ಒಂದು ಖಾಲಿತನವಿದೆಯಲ್ಲಾ, ಅದನ್ನು ಒಮ್ಮೆ ಅನುಭವಿಸಿದರೆ ಸ್ವತಃ ಸಾವೂ ಕೂಡ ಬೆಚ್ಚಿ ಬಿದ್ದೀತು.
ಅದರಲ್ಲೂ ಆ ಅಜ್ಜಿಯಂತಹ ತುಂಬು ಜೀವನೋತ್ಸಾಹದ ಜೀವಗಳನ್ನು ಕಳೆದುಕೊಂಡರಾಗುವ ನೋವನ್ನು ಯಾವ ಪದಗಳೂ ಸಶಕ್ತವಾಗಿ ವ್ಯಕ್ತಪಡಿಸಲಾರವು. ಕೆಲವೇ ವಾರಗಳ ಹಿಂದೆ ಅಕ್ಷತೆ ಕಾಳು ಹಾಕಿಸಿಕೊಂಡಿದ್ದ ಮದುಮಗಳು, ಅವಳನ್ನು ಹೊಟ್ಟೆಯಲ್ಲಿ ಹುಟ್ಟಿದ ಮಗಳೇನೋ ಎಂಬಂತೆ ನೋಡಿಕೊಂಡ ಅಜ್ಜಿ, ಬದುಕಿನ ಪೂರ್ತಿ ಜೊತೆಗಿರುತ್ತೇನೆ ಎಂದು ಭಾಷೆ ಕೊಟ್ಟ ಗಂಡ ಕ್ಷಣಗಳೊಳಗಾಗಿ ಪ್ರಪಂಚ ತೊರೆದು ಹೊರಟು ಬಿಡುತ್ತಾರೆಂದರೆ ಒಪ್ಪುವುದು ಕಷ್ಟ. ಹಾಗೆ ಕಷ್ಟವಾಗಿರುವುದಕ್ಕೇ ಇಷ್ಟು ವರ್ಷಗಳಾದ ಮೇಲೂ ಆ ಮೂರು ಜೀವಗಳ ಸಾವು ನಿರಂತರ ಕಾಡುತ್ತಿರುವುದು. ಈಗಲೂ ನಾವು ಗೆಳತಿಯರು ಒಟ್ಟಾದರೆ ನಮ್ಮ ಮಾತಲ್ಲಿ ಅಜ್ಜಿ ಬಂದೇ ಬರುತ್ತಾರೆ, ಕಣ್ಣು ತುಂಬಿಕೊಳ್ಳಬಾರದು ಅಂದುಕೊಳ್ಳುತ್ತಿರುವಾಗಲೇ ಕಣ್ಣೀರು ಕೆನ್ನೆಯನ್ನು ತೋಯಿಸಿಬಿಡುತ್ತದೆ.
ತುಂಬು ಜೀವಕ್ಕೆ ಅಶ್ರುತರ್ಪಣ ಸಲ್ಲಿಸುವಾಗೆಲ್ಲಾ ಅಜ್ಜಿ ಅಲ್ಲೆಲ್ಲೋ ನಿಂತು ನೋಡುತ್ತಿರುತ್ತಾರೆ, ಓಡಿ ಬಂದು ಹೆಗಲು ತಟ್ಟಿ ಕಣ್ಣೀರೊರೆಸಿ “ಅಳ್ಬೇಡ ಪಾಪಚ್ಚಿ, ಬದುಕು ದೊಡ್ಡದಿದೆ” ಅನ್ನುತ್ತಾರೇನೋ ಅನಿಸುತ್ತದೆ. ತೀರಿಕೊಂಡವರೆಲ್ಲಾ ನಕ್ಷತ್ರವಾಗುತ್ತಾರೆ ಅನ್ನುವುದೇ ನಿಜವಾಗಿದ್ದರೆ ಆಕೆ ಸ್ವಂತಿಕೆಯ ನಕ್ಷತ್ರ, ತನ್ನ ತಾನೇ ಸುಟ್ಟಕೊಂಡು ಆಕಾಶ ಲೋಕವ ಪೂರ್ತಿ ಬೆಳಗುವ ದೀಪದಂತಹ ನಕ್ಷತ್ರ.
ಇನ್ನೂ ಅರ್ಥವಾಗದ ಬದುಕಿನ ಬಗ್ಗೆ ತೀರದ ಬೆರಗನ್ನಿಟ್ಟುಕೊಂಡೇ ಕರಾವಳಿಯ ಪುಟ್ಟ ಹಳ್ಳಿಯಲ್ಲಿ ಬೆಳೆಯುತ್ತಿರುವವಳು ನಾನು, ಬದುಕು ಕಲಿಸುವ ಪಾಠಗಳನ್ನು ಶ್ರದ್ಧೆಯಿಂದ ಕಲಿಯುವಷ್ಟು ವಿಧೇಯ ವಿದ್ಯಾರ್ಥಿನಿ. ಪುಸ್ತಕಗಳೆಂದರೆ ಪುಷ್ಕಳ ಪ್ರೀತಿ. ಓದು ಬದುಕು, ಬರಹ ಗೀಳು ಅನ್ನುತ್ತಾರೆ ಫಾತಿಮಾ.
ಎಷ್ಟೊಂದು ಖುಷಿಯಿಂದ ನಿಮ್ಮ ಲೇಖನ ಓದುತ್ತಿದ್ದೆ.. ಖುಷಿಯಿಂದ ಓದುತ್ತಿರುವಾಗಲೇ ವಿಷಾದ ಮತ್ತು ದುಃಖ ಮೈ ಮನಸ್ಸುಗಳನ್ನು ಆಕ್ರಮಿಸಿ ನಮ್ಮನ್ನು ಭಾವ ಪರವಶರಾಗಿ ಮಾಡಿ ಬಿಟ್ಟಿತು. ಅಜ್ಜಿಯ ಜೀವನೋತ್ಸಹ ನಾವೂ ಕೂಡ ಮೈಗೂಡಿಸಿಕೊಳ್ಳಬೇಕು. ನಿಮ್ಮ ಲೇಖನ ಕ್ಕೆ ಧನ್ಯವಾದ.