ಮೇರಿ ಮಾತೆಯ ಪಾತ್ರದಲ್ಲಿ ನಟಿಸಲು ಆಯ್ಕೆಯಾಗ ಬೇಕಾದರೆ ಆಕೆ ಕನ್ಯೆಯಾಗಿರಬೇಕು. ಗಂಡುಗಳ ಸ್ನೇಹ ಬೆಳೆಸದೆ, ಹೆಚ್ಚಿನ ಗೆಳತಿಯರೊಡನೆ ಸೇರದೆ, ನಾಟಕ ಸಿನೆಮಾಗಳನ್ನು ನೋಡದೆ, ಉಪ್ಪು ರಹಿತ ಊಟ ಮಾಡುತ್ತಾ, ಸದಾ ಕಾಲವೂ ಆಧ್ಯಾತ್ಮಿಕವಾಗಿ ಜೀವನ ನಡೆಸುತ್ತಾ, ಬೈಬಲ್ ಓದುತ್ತಾ, ರಸ್ತೆಗಳಲ್ಲಿ ನಡೆಯುವಾಗ ತಲೆಯೆತ್ತದೆ ಸಾತ್ವಿಕವಾಗಿ 10 ವರ್ಷಗಳನ್ನು ಕಳೆದರೆ ಆಕೆ ಆಯ್ಕೆ ಪ್ರಕ್ರಿಯೆಯ ಸರದಿಗೆ ಬರಲು ಅರ್ಹಳಾಗುತ್ತಾಳೆ.
“ಕಂಡಷ್ಟೂ ಪ್ರಪಂಚ” ಪ್ರವಾಸ ಅಂಕಣದಲ್ಲಿ ಅಂಜಲಿ ರಾಮಣ್ಣ ಬರಹ ನಿಮ್ಮ ಓದಿಗೆ.

 

ಕ್ರಿಸ್ಮಸ್ ಸಮಯದಲ್ಲಿ ಸಣ್ಣಸಣ್ಣ ವಿದೇಶಿ ನಿರ್ಮಾಪಕರು ಹಬ್ಬಕ್ಕಾಗಿಯೇ ಒಂದಷ್ಟು ಸಿನೆಮಾ ನಿರ್ಮಾಣ ಮಾಡುತ್ತಾರೆ. ಒಂದಕ್ಕಿಂತ ಒಂದು ಮುದ್ದಾದ ಕಥೆಗಳು. ಅವುಗಳನ್ನು ನೋಡುವುದೇ ಹೊಸ ವರ್ಷಾಚರಣೆಯಂತಹಾ ಸಂಭ್ರಮ. ಈ ಬಾರಿ ಇಷ್ಟವಾಗಿದ್ದು ‘1000 miles from Christmas’ ಎನ್ನುವ ಸಿನೆಮಾ. ಸಿಡುಕು ಮೋರೆಯ ಆಡಿಟರ್ ಒಬ್ಬನಿಗೆ ಕ್ರಿಸ್ಮಸ್ ಎಂದರೆ ವರ್ಜ್ಯ. ಆದರೆ ಅವಳಿಗೆ ಅದೇ ಬದುಕು. ಕೊನೆಗೆ ಬಲ್ಮುದ್ದಿನ ರೋಮ್ಯಾಂಟಿಕ್ ಕಥೆಯಲ್ಲಿ ಅವರಿಬ್ಬರೂ ಒಂದಾಗುತ್ತಾರೆ. ಈ ಸಿನೆಮಾ ನನ್ನನ್ನು ಮತ್ತೊಮ್ಮೆ ನೆನಪಿನಲ್ಲಿ ಪ್ರಯಾಣ ಮಾಡಿಸಿದ್ದು ಒಮ್ಮೆ ನೋಡಿದ್ದ ಒಂದೂರನ್ನು.

ಪುಟ್ಟಪುಟ್ಟ ಹಳದಿ ಹೂವಿನ ಹಾಸು ಈ ಊರಿನ ನಾಲ್ಕೂ ದಿಕ್ಕುಗಳ ಸರಹದ್ದು. ಅದೆಷ್ಟು ಮಾಟವಾದ ಜಾಗವೆಂದರೆ ಇಂಚಿನಷ್ಟು ವರ್ಣನೆಯೂ ಅದರ ಅಂದಗೆಡಿಸುವುದು ಖಂಡಿತ. ಜರ್ಮನಿ ದೇಶದ ಮ್ಯೂನಿಕ್ ನಗರದಿಂದ 55 ನಿಮಿಷಗಳಷ್ಟು ದಾರಿ ಸವೆಸಿಬಿಟ್ಟರೆ ಎದುರಾಗುತ್ತೆ ‘ಅಮ್ಮೆರ’ ಎನ್ನುವ ದೊಡ್ಡ ನದಿ. ಅದರ ದಂಡೆಯ ಮೇಲೆ ಥಣ್ಣಗೆ ಮಲಗಿರುವ ಈ ಹಳ್ಳಿಯ ಹೆಸರು ‘ಒಬರಮೆರ್ಗಾವ್’ (Oberammergau).

ಇದು 1600 ಇಸವಿಗೂ ಮೊದಲು ಪ್ಯಾರಿಶ್ ಜನಾಂಗದವರ ಚರ್ಚ್ ಇದ್ದ ಜಾಗವಾಗಿದ್ದು, ಪ್ಲೇಗ್ ಮಾರಿಯಿಂದ ಅಲ್ಲಿದ್ದ ಅಷ್ಟೂ ಜನಗಳ ಸಾವಾಗಿ ಹೋಯಿತು. ಮತ್ತೊಮ್ಮೆ ಮಾನವ ಜೇವನವನ್ನು ಕಟ್ಟಿಕೊಳ್ಳುವ ಉದ್ದೇಶದಿಂದ ಅಲ್ಲಿ ಜನರ ವಾಸ್ತವ್ಯ ಪ್ರಾರಂಭವಾಯಿತು. ಈಗ ಹೇಗಿದೆಯೆಂದರೆ, ನಮ್ಮ ನಮ್ಮ ಬಾಲ್ಯದಲ್ಲಿ ಯಕ್ಷ ಕಿನ್ನರಿಯರ ಕಥೆಗಳಲ್ಲಿ ಓದಿ ಕಲ್ಪಿಸಿಕೊಂಡ ಓಣಿಗಳಲ್ಲಿ ಒಪ್ಪಗೊಂಡು ಮರದ ಚೌಕಟ್ಟುಗಳೊಳಗೆ ನಿಂತ ಮನೆಗಳು. ಮನೆಯ ಸುತ್ತಲೂ ಹೆಸರು ಹೇಳಲೂ ಬಾರದ ಸುಂದರ ಬಣ್ಣಗಳ ಹೂದೋಟ. ಬೀಡಿನ ಗೋಡೆಗಳ ಮೇಲೆಲ್ಲಾ ಗೋಥೆ ( Goethe) ಶೈಲಿಯ ಕುಂಚ ಕಲೆ ಮತ್ತು ಅದಕ್ಕೆ ನೈಸರ್ಗಿಕವಾಗಿ ಪ್ರತೀ ಮನೆಯವರೇ ತಯಾರಿಸಿಗೊಂಡ ವರ್ಣಗಳಿಂದ ಅಲಂಕಾರ. ಹೂವು, ಚಿಟ್ಟೆ, ನದಿ, ಬೆಟ್ಟಗಳು ಮಾತ್ರವಲ್ಲ ಯೇಸು ಕ್ರಿಸ್ತನ ಜೇವನದ ವಿವಿಧ ಹಂತಗಳನ್ನು ತೋರುವ ಚಿತ್ರಗಳು, ಬೈಬಲ್‌ನಲ್ಲಿ ಬರುವ ಕಥೆ ಉಪಕಥೆಗಳ ರೇಖಾ ಚಿತ್ರ ಮತ್ತು ಅದಕ್ಕೆ ಸಂಬಂಧ ಪಟ್ಟ ಹಾಗೆಯೇ ಇರುವ ಜಾನಪದ ಕಥೆಗಳು, ಅವರವರ ವಂಶವೃಕ್ಷದ ವಿವರಗಳು ಕೂಡ ಬಣ್ಣಗಳಲ್ಲಿ ಅರಳಿರುತ್ತವೆ.

ಇಲ್ಲಿರುವ ಒಂದಷ್ಟು ಸಾವಿರ ಜನಗಳು ತಮ್ಮ ಜೀವನಕ್ಕೆ ಹೊರಗಿನವರನ್ನು ಅವಲಂಬಿಸಿಯೇ ಇಲ್ಲ. ಸಮೃದ್ಧ ಪ್ರಕೃತಿ ಒದಗಿಸುವ ಮರಗಳಲ್ಲಿ ಕೆತ್ತನೆಯ ಕೆಲಸ ಮತ್ತು ಪಿಂಗಾಣಿಯಿಂದ ತಯಾರು ಮಾಡುವ ಕರಕುಶಲ ಸಾಮಾಗ್ರಿಗಳಿಂದ ಈ ಹಳ್ಳಿ ಶ್ರೀಮಂತ. ಓಹ್, ಇಂತಹ ಅಂದಗಾತಿ ತಾಣ ಜಗತ್ತಿನ ಇನ್ನ್ಯಾವುದೋ ಮೂಲೆಯಲ್ಲೂ ಇರುವ ಸಾಧ್ಯತೆ ಇಲ್ಲದಿಲ್ಲ ಮತ್ತು ನೀವು ನೋಡಿಯೂ ಇರುತ್ತೀರಿ. ಆದರೆ ನಾನು ಇಲ್ಲಿ ಹೇಳ ಹೊರಟಿದ್ದು ಅದಲ್ಲ!

ಇಲ್ಲೊಂದು ರಂಗಸ್ಥಳವಿದೆ. ಅದರ ಹೆಸರು The Passion Play Theatre. 4700 ಜನರು ಒಟ್ಟಿಗೆ ಕುಳಿತು ನಾಟಕ ನೋಡಬಹುದು. ಆಹಾ, ರಂಗಾಸಕ್ತರ ಸ್ವರ್ಗವೇ ಸರಿ. ವರ್ಷದ 300 ದಿನಗಳು ತಪ್ಪದೆ ನಾಟಕ ಪ್ರದರ್ಶನವಿರುತ್ತದೆ. ಎಲ್ಲಾ ದಿನಗಳ ನಾಟಕ ನೋಟಕ್ಕೆ ಜಗತ್ತಿನ ಎಲ್ಲಾ ಮೂಲೆಗಳಿಂದಲೂ ಸರಿಸುಮಾರು ಎರಡು ಲಕ್ಷ ಜನಗಳು ಬಂದು ಹೋಗುತ್ತಾರೆ. ಇಂತಹ ರಂಗಸ್ಥಳವನ್ನು ನಮ್ಮದೇ ಊರಿನಲ್ಲೂ ನೋಡಿರುತ್ತೀರ. ಆದರೆ ನಾನು ಹೇಳ ಹೊರಟಿದ್ದು ಇದೂ ಅಲ್ಲ!

ಪುಟ್ಟಪುಟ್ಟ ಹಳದಿ ಹೂವಿನ ಹಾಸು ಈ ಊರಿನ ನಾಲ್ಕೂ ದಿಕ್ಕುಗಳ ಸರಹದ್ದು. ಅದೆಷ್ಟು ಮಾಟವಾದ ಜಾಗವೆಂದರೆ ಇಂಚಿನಷ್ಟು ವರ್ಣನೆಯೂ ಅದರ ಅಂದಗೆಡಿಸುವುದು ಖಂಡಿತ. ಜರ್ಮನಿ ದೇಶದ ಮ್ಯೂನಿಕ್ ನಗರದಿಂದ 55 ನಿಮಿಷಗಳಷ್ಟು ದಾರಿ ಸವೆಸಿಬಿಟ್ಟರೆ ಎದುರಾಗುತ್ತೆ ಅಮ್ಮೆರ ಎನ್ನುವ ದೊಡ್ಡ ನದಿ.

1674ರಿಂದ ಪ್ರತೀ ಹತ್ತು ವರ್ಷಕ್ಕೊಮ್ಮೆ ಇಲ್ಲಿ ಯೇಸು ಪ್ರಭುವಿನ ಜನನದಿಂದ ಆರಂಭವಾಗಿ ಶಿಲುಬೆಯೇರುವವರೆಗೂ ಎಲ್ಲಾ ಹಂತಗಳನ್ನು ನಾಟಕದ ಮೂಲಕ ಪ್ರಸ್ತುತ ಪಡಿಸಲಾಗುತ್ತದೆ. ಇಂದಿನ ದಿನಗಳಲ್ಲಿ ಯೂರೋಪಿನ ಸುಪ್ರಸಿದ್ಧ 60 ನಾಟಕ ನಿರ್ದೇಶಕರು, 600 ನಟರು, 2000 ವಸ್ತ್ರಾಲಂಕಾರಗಳು, 200 ಬಾರಿ ಬದಲಾಗುವ ರಂಗಸಜ್ಜಿಕೆಯನ್ನೊಳಗೊಂಡ ಯೇಸು ಕ್ರಿಸ್ತನ ಜೇವನ ಗಾಥೆ ಮೇ ತಿಂಗಳ ಮೊದಲ ವಾರದಿಂದ ಅಕ್ಟೋಬರ ತಿಂಗಳ ಕೊನೆಯ ವಾರದವರೆವಿಗೂ ಒಂದು ದಿನವೂ ತಪ್ಪದೆ ದಿನಕ್ಕೆ 24 ಗಂಟೆಗಳ ಕಾಲ (ಊಟಕ್ಕೆ ಎಂದು ಒಟ್ಟು 2 ಗಂಟೆಗಳ ಕಾಲದ ಬಿಡುವು ಇರುತ್ತದೆ) ಪ್ರದರ್ಶನವಿರುತ್ತದೆ. ವಿಶೇಷತೆಯೆಂದರೆ, ನಿರ್ದೇಶಕರುಗಳನ್ನು ಹೊರತು ಪಡಿಸಿ ಎಲ್ಲಾ ನಟರೂ ಮತ್ತು ರಂಗದ ಹಿಂದೆ ಕೆಲಸ ಮಾಡುವ ಕಲಾವಿದರು ಎಲ್ಲರೂ ಈ ಹಳ್ಳಿಯ ಜನರೇ. ಅವರದ್ದೇ ಕ್ರಿಯಾಶೀಲತೆ ಉಪಯೋಗಿಸಿ ಪ್ರತಿ ಬಾರಿಯೂ ವಿಭಿನ್ನವಾದ ವಸ್ತ್ರಗಳು ಮತ್ತು ರಂಗಸಜ್ಜಿಕೆಯನ್ನು ರೂಪಿಸಿರುತ್ತಾರೆ. ಇಂತಹ ಅದ್ಭುತ, ಅಪ್ರತಿಮ passion playಗಳನ್ನು ವಿಶ್ವದ ಮತ್ತ್ಯಾವುದೋ ರಂಗಸ್ಥಳದಲ್ಲಿ ನೀವೂ ನೋಡಿರುತ್ತೀರ. ಆದರೆ ನಾನು ಹೇಳ ಹೊರಟಿದ್ದು ಇದನ್ನೂ ಅಲ್ಲ!

ಹೌದು, ನಿಮ್ಮ ಹಾಗೆ ನಾನೂ ತಾಳ್ಮೆಗೆಡುತ್ತಿದ್ದೆ ಪ್ರವಾಸ ಮಾರ್ಗದರ್ಶಕಿಯಾಗಿದ್ದ ನ್ಯಾನ್ಸಿಯ ಈ ವಿವರಣೆಗಳನ್ನು ಕೇಳುತ್ತಿದ್ದಾಗ. ಅಂತೂ ಆಕೆ ವಿಷಯದ ಅಂಗಳಕ್ಕೆ ಬಂದಿಳಿದಳು. ಭುಜದ ಮೇಲೆ ಕೈ ಇರಿಸುತ್ತಾ ಹೇಳಿದಳು “ನಿನಗೆ ಗೊತ್ತಾ ಜೀಸಸ್‌ನ ತಾಯಿ ಮೇರಿ ಪಾತ್ರ ಮಾಡಲು ಆಯ್ಕೆಯಾಗುವುದು ಈ ಊರಿನ ಹೆಣ್ಣು ಮಕ್ಕಳಿಗೆ ಮತ್ತು ಅವರ ಕುಟುಂಬಕ್ಕೆ ಅತ್ಯಂತ ಹೆಮ್ಮೆಯ, ಪ್ರತಿಷ್ಠಿತ ವಿಷಯ.” ನಿಜ, ಇಲ್ಲಿಂದಲೇ ನನ್ನ ಆಸಕ್ತಿ ಉದ್ಭವಿಸಿದ್ದೂ ಮತ್ತು ಬೆಳೆದದ್ದು. “ಮೇರಿ ಮಾತೆಯ ಪಾತ್ರದಲ್ಲಿ ನಟಿಸಲು ಆಯ್ಕೆಯಾಗ ಬೇಕಾದರೆ ಆಕೆ ಕನ್ಯೆಯಾಗಿರಬೇಕು. ಗಂಡುಗಳ ಸ್ನೇಹ ಬೆಳೆಸದೆ, ಹೆಚ್ಚಿನ ಗೆಳತಿಯರೊಡನೆ ಸೇರದೆ, ನಾಟಕ ಸಿನೆಮಾಗಳನ್ನು ನೋಡದೆ, ಉಪ್ಪು ರಹಿತ ಊಟ ಮಾಡುತ್ತಾ, ಸದಾ ಕಾಲವೂ ಆಧ್ಯಾತ್ಮಿಕವಾಗಿ ಜೀವನ ನಡೆಸುತ್ತಾ, ಬೈಬಲ್ ಓದುತ್ತಾ, ರಸ್ತೆಗಳಲ್ಲಿ ನಡೆಯುವಾಗ ತಲೆಯೆತ್ತದೆ ಸಾತ್ವಿಕವಾಗಿ 10 ವರ್ಷಗಳನ್ನು ಕಳೆದರೆ ಆಕೆ ಆಯ್ಕೆ ಪ್ರಕ್ರಿಯೆಯ ಸರದಿಗೆ ಬರಲು ಅರ್ಹಳಾಗುತ್ತಾಳೆ” ಎಂದಳು ನ್ಯಾನ್ಸಿ.

ಅಂದರೆ ಒಂದು ಹೆಣ್ಣು ತನ್ನ ಬದುಕಿನ ಯೌವ್ವನದ ಅತಿ ಪ್ರಮುಖ ಘಟ್ಟವನ್ನು ಈ ಜಗತ್ತು ವ್ಯಾಖ್ಯಾನಿಸಿರುವ ‘ಸಾತ್ವಿಕ’ ರೀತಿಯಲ್ಲಿ ಕಳೆಯಬೇಕು. ಆದರೂ ಆಕೆ ಮೇರಿಯ ಪಾತ್ರ ಮಾಡಿಯೇ ತೀರುತ್ತಾಳೆ ಎನ್ನುವ ಖಾತರಿ ಇಲ್ಲ ಮತ್ತು ಪಾತ್ರ ಮಾಡುವ ಅವಕಾಶ ಸಿಕ್ಕರೂ ನಂತರದ ದಿನಗಳಲ್ಲೂ ಆಕೆ ಈ ಎಲ್ಲಾ ನಿಬಂಧನೆಗಳ ಒಳಗೇ ಜೀವನ ನಡೆಸಬೇಕಿರುತ್ತದೆ. ನ್ಯಾನ್ಸಿಯನ್ನು ಕೇಳಿದೆ “ಯೇಸು ಕ್ರಿಸ್ತನ ಪಾತ್ರ ಮಾಡುವ ನಟನೂ ಇಷ್ಟೇ ನಿರ್ಬಂಧ ರೀತಿಯಲ್ಲಿ ಜೀವನ ನಡೆಸಬೇಕಿರುತ್ತದೆಯೇನು?”, “ಹಾಗೇನಿಲ್ಲ. ಮೇರಿ ಮಾತೆ ಪಾತ್ರಾಕಾಂಕ್ಷಿ ಮಾತ್ರ ಹೀಗಿರಬೇಕು” ಎನ್ನುವ ಆಕೆಯ ಉತ್ತರ ನಿರೀಕ್ಷಿತವಾಗಿಯೇ ಇತ್ತು. ಹೂಂ, ಇದನ್ನು ನಾನು ಹೇಳ ಹೊರಟಿದ್ದು.

ಈಗ ಇದೇ ರಂಗಸ್ಥಳದಲ್ಲಿ ರೋಮಿಯೋ-ಜುಲಿಯೆಟ್ ನಾಟಕದ ಕೆಲವು ದೃಶ್ಯಗಳನ್ನು ನೋಡಿ ಹೊರ ಬಂದೆ. ಆದರೆ ಇಷ್ಟವಾಗಿದ್ದು ‘1000 miles from Christmas’ ಸಿನೆಮಾ ಯಾಕೆ ತರಿಸಿತು ಎಂದು ತಿಳಿಯಲು ಮಾತ್ರ ಆ ಸಿನೆಮಾ ನೋಡಬೇಕು, ಈ ಹಳ್ಳಿ ಸುತ್ತಬೇಕು.