ಇನ್ನೂ ಕಂಪ್ಯೂಟರ್ ಸರ್‌ರ ವರ್ಣನೆಯನ್ನೆಲ್ಲಾ ಕೇಳಿ ಅವರೆಂದೂ ನಗು ಮೊಗದಿಂದ ಪಾಠ ಮಾಡಲೇ ಇಲ್ಲವೆಂದು ತಿಳಿಯಬೇಡಿ. ನಮ್ಮ ಕಂಪ್ಯೂಟರ್ ಸರ್‌ರಂತಹ ಕಂಪ್ಯೂಟರ್ ಸರ್ ಕೂಡ ನಗು ಮೊಗದೊಂದಿಗೆ ಪಾಠ ಹೇಳಿ ಕೊಡುವ ರಸ ಗಳಿಗೆಗಳಿಗೆ ನಾವು ಸಾಕ್ಷೀಭೂತರಾಗಿದ್ದೆವು. ಆದರೆ, ಆ ಅದೃಷ್ಟ ಇದ್ದದ್ದು ಮಾತ್ರ ನಮಗಲ್ಲ. ಬದಲಿಗೆ, ಕೆಲದಿನಗಳ ಮಟ್ಟಿಗೆ ಪಕ್ಕದ ಶೃಂಗೇರಿಯಿಂದ ಬರುತ್ತಿದ್ದ, ನೋಡಲು ಸುರಸುಂದರಿಯಂತಿದ್ದ ಅತಿಥಿ ಶಿಕ್ಷಕಿಯೊಬ್ಬರಿಗೆ ಮಾತ್ರ!
ಪೂರ್ಣೇಶ್‌ ಮತ್ತಾವರ ಬರೆಯುವ “ನವೋದಯವೆಂಬ ನೌಕೆಯಲ್ಲಿ…” ಸರಣಿಯ ಎರಡನೆಯ ಬರಹ

ಅದೂ ದೇಶ ನವ ಆರ್ಥಿಕತೆಗೆ, ಕಂಪ್ಯೂಟರ್ ತಂತ್ರಜ್ಞಾನಕ್ಕೆ ತೆರೆದುಕೊಳ್ಳುತ್ತಿದ್ದ ತೊಂಬತ್ತರ ದಶಕದ ಆರಂಭಿಕ ವರ್ಷಗಳಲ್ಲಿ! ನಾನು ಅದೆಷ್ಟು ಪುಳಕಿತನೂ ಆನಂದ ತುಂದಿಲನೂ ಆಗಿದ್ದಿರಬಹುದೆಂದು ನೀವು ಯೋಚಿಸಬಹುದಲ್ಲವೇ!?

ಆದರೆ, ವಾಸ್ತವವಾಗಿ ಆ ದಿನ ನಾನು ಕಂಪ್ಯೂಟರ್ ಕ್ಲಾಸ್‌ಗೆ ಹೋಗದೆ ಹೊಟ್ಟೆ ನೋವಿನ ಸುಳ್ಳು ನೆಪ ಹೇಳಿ ‘ಕಳ್ ಪೇಷಂಟ್’ಗಳ ಪಟ್ಟಿ ಸೇರಿ ಡಾರ್ಮಿಟರಿಯಲ್ಲೇ ಉಳಿದು ಬಿಟ್ಟಿದ್ದೆ!

ಇದಕ್ಕೆಲ್ಲಾ ಕಾರಣ, ನಮ್ಮ ಬ್ಯಾಚಿನ ಕೊನೆಯವನಾಗಿ ಶಾಲೆಗೆ ಸೇರಿದ ನನಗೆ ಈ ಮೊದಲೇ ಶಾಲೆಗೆ ಸೇರಿ ನನ್ನ ಪಾಲಿಗೆ ‘ಸೀನಿಯರ್’ಗಳಂತಾಗಿದ್ದ ನನ್ನ ತರಗತಿ ಮಿತ್ರರು ‘ಕಂಪ್ಯೂಟರ್ ಸರ್’ರನ್ನೂ ಅವರ ತರಗತಿಯನ್ನೂ ವರ್ಣಿಸಿದ ಪರಿ ಹಾಗಿತ್ತು!

ಅವರ ವರ್ಣಿಕೆಯಲ್ಲೇನೂ ಅನೈಜತೆಯಾಗಲಿ, ಉತ್ಪ್ರೇಕ್ಷೆಯಾಗಲಿ ಇರಲಿಲ್ಲ ಬಿಡಿ. ಕಂಪ್ಯೂಟರ್ ತರಗತಿಯೆಂಬುದನ್ನು ಅಟೆಂಡ್ ಮಾಡುವುದಕ್ಕಿಂತ ‘ಕಳ್ ಪೇಷಂಟ್’ಗಳ ಪಟ್ಟಿ ಸೇರುವುದು ಎಷ್ಟೋ ವಾಸಿ ಎಂಬ ಅನುಭವ ಮೊದಲ ತರಗತಿಯನ್ನು ಅಟೆಂಡ್ ಮಾಡಿದ ಯಾರಿಗಾದರೂ ಆಗುವಂತದ್ದೇ ಆಗಿತ್ತು.

*****

ಮೊದಲನೆಯದಾಗಿ, ನಮ್ಮ ಕಂಪ್ಯೂಟರ್ ಸರ್ ಸರಿಸುಮಾರು ಆರು ಅಡಿಗೂ ಎತ್ತರದ ನೂರರ ಲೆಕ್ಕದ ತೂಕದ ಅಜಾನುಬಾಹುವಾಗಿದ್ದರು. ನೋಡುತ್ತಿದ್ದರೆ ನಾವು ಶಾಲಾ ಲೈಬ್ರರಿಯಲ್ಲಿ ಕುಳಿತು, ವೀಡಿಯೋ ಕ್ಯಾಸೆಟ್ ಹಾಕಿ ಬಿಟ್ಟ ಕಣ್ಣು ಬಿಟ್ಟಂತಹೇ ನೋಡುತ್ತಿದ್ದ “ಗಲಿವರ ಲಿಲಿಪುಟ್” ಸಿನೆಮಾದ ಗಲಿವರನನ್ನೇ ನೆನಪಿಸುವಂತಿದ್ದರು.

ಇಂತಹ ದೈತ್ಯದೇಹಿ ಗಲಿವರ ಜಗದೆಲ್ಲಾ ಗಂಭೀರತೆ, ರೌದ್ರವತೆ, ಕಠೋರತೆಗಳನ್ನು ಆವಾಹಿಸಿಕೊಂಡವರಂತೆ ತರಗತಿಯೊಳಗೆ ಬಂದರೆ, ಬಂದವರೇ ತಮ್ಮ ಬಿಗು ಮುಖವನ್ನು ಮತ್ತಷ್ಟು ಬಿಗಿಯಾಗಿಸಿಕೊಂಡು ಪಾಠ ಬೋಧನೆ ಆರಂಭಿಸಿದರೆ ಲಿಲಿಪುಟ್‌ಗಳಾಗಿದ್ದ ನಮ್ಮ‌ ಕತೆ ಏನಾಗಿರಬೇಡ!?

ಅದೂ ಹೇಳಿ ಕೇಳಿ ಈಗಿನಂತೆ ಮೌಸ್ ಕ್ಲಿಕ್, ಸ್ಕ್ರೀನ್ ಟಚ್ ಗಳ ಅಥವಾ ಪೆನ್ ಡ್ರೈವ್, ಸಿ.ಡಿ ಗಳ ಜಮಾನವಲ್ಲ! ಮಾತೆತ್ತಿದರೆ ಪ್ರತಿಯೊಂದಕ್ಕೂ ಉದ್ದುದ್ದನೆಯ ಪ್ರೋಗ್ರಾಂಗಳು, ಫ್ಲೋಚಾರ್ಟ್‌ಗಳು, ಶಾರ್ಟ್ ಕಟ್ ಕೀಗಳು, ಕಂಟ್ರೋಲ್ ಕೀಗಳು, ಕಮಾಂಡ್‌ಗಳು ಎಂದು ತಲೆ ಕೆಡಿಸಿಕೊಳ್ಳಬೇಕಿದ್ದ, ಪ್ರತಿಯೊಂದಕ್ಕೂ ಹೆಚ್ಚಿನ ವಿವರಣೆ ಬೇಕಿದ್ದ ಕಾಲ!

ಇಂತಹ ಕಾಲದಲ್ಲಿ ನಮ್ಮ ಕಂಪ್ಯೂಟರ್ ಸರ್ ಪಾಠ ಬೋಧನೆ ಎಂದರೆ ತಾನು ಹೇಳ ಬೇಕಿಂದಿರುವುದನ್ನೆಲ್ಲಾ ತನ್ನ ಪಾಡಿಗೆ ತಾನು ಹೇಳಿಬಿಡುವುದೆಂದು ದೃಢವಾಗಿ ನಂಬಿದಂತಿತ್ತೇ ವಿನಃ ಕೇಳುಗರ ಸ್ಥಿತಿಗತಿಗಳ ಬಗ್ಗೆ ಕಿಂಚಿತ್ತೂ ತಲೆ ಕೆಡಿಸಿಕೊಂಡಂತಿರಲಿಲ್ಲ. ಅದಕ್ಕೆಂದೇ ತಾನು ಬೋಧನೆ ಮಾಡುತ್ತಿರುವುದು ಬಹುತೇಕ ಕನ್ನಡ ಮಾಧ್ಯಮ ಶಾಲೆಗಳಿಂದ ಬಂದ, ಸರಿಯಾಗಿ ಇಂಗ್ಲಿಷ್ ಬಾರದ ಮಕ್ಕಳ ಮುಂದೆ ಎಂಬ ಅರಿವಿದ್ದರೂ ಅಪ್ಪಿ ತಪ್ಪಿಯೂ ಕನ್ನಡ ಪದವೊಂದನ್ನು ಬಳಸನೆಂದು ಪ್ರತಿಜ್ಞೆ ಮಾಡಿದವರಂತೆ ಪಾಠ ಬೋಧಿಸುತ್ತಿದ್ದರು.

ಅಷ್ಟೇ ಆಗಿದ್ದರೆ ಪರ್ವಾಗಿರಲಿಲ್ಲವೇನೋ! ಮುಂದುವರೆದು, ‘ತಮ್ಮ ವಿದ್ಯಾರ್ಥಿ ಮಹಾಶಯರು ಪ್ರಶ್ನೆಯನ್ನೇ ಸರಿಯಾಗಿ ಅರ್ಥಮಾಡಿಕೊಳ್ಳದೆ ಉತ್ತರವನ್ನು ಹೇಗೆ ತಾನೇ ನೀಡುವರು!’ ಎಂಬ ಸಾಮಾನ್ಯ ತಿಳುವಳಿಕೆಯನ್ನೂ ಮೀರಿ ಪಾಠದ ಮಧ್ಯೆ ಮಧ್ಯೆ ಪ್ರಶ್ನೆ ಕೇಳಿ ಸರಿಯಾಗಿ ಬಾರಿಸುತ್ತಿದ್ದರು.

ಬಾರಿಸುವುದೆಂದರೆ ಸಾಮಾನ್ಯವೇನಲ್ಲ. ತಮ್ಮ ಕೈಯ ಮುಷ್ಟಿಯನ್ನು ಬಿಗಿದು ಸುತ್ತಿಗೆಯಂತೆ ಮಾಡಿ ಥೇಟು ಆನೆಯೊಂದು ಸೊಂಡಿಲ ತುದಿ ಮಡುಚಿ ಹಿಡಿದು ತಲೆ ಮೇಲೆ ಬಡುಚುವಂತೆ ಸರಿಯಾಗಿ ನೆತ್ತಿಯ ಮೇಲೆ ಕುಟುಕುತ್ತಿದ್ದರು. ಹೀಗೆ ಕುಟುಕಿಸಿ ಕೊಂಡವರಿಗೋ ಯಾವುದೋ ಬಂಡೆ ಜಾರಿ ಥಟ್ಟನೆ ತಲೆಯ ಮೇಲೆ ಬಿದ್ದಂತೆ ಅನುಭವವಾಗುತಿತ್ತು. ಅದು ಅಲ್ಲಿಗೆ ನಿಲ್ಲದೇ ‘ಏನಾಯ್ತು!’ ಎಂದು ಯೋಚಿಸುವಷ್ಟರಲ್ಲಿ ಮತೊಮ್ಮೆ ಮಗದೊಮ್ಮೆ ಅದೇ ಅನುಭವವಾಗುತ್ತಾ ಸಾಗಿ ಕಣ್ಣು ಕತ್ತಲಾದಂತಾಗಿ ಅಕ್ಷರಶಃ ನರಕ ಯಾತನೆ ಎಂದರೇನೆಂಬುದರ ಅನುಭವವಾಗುತಿತ್ತು.

ಆ ನರಕ ಯಾತನೆ ಅನುಭವಿಸಿದವರು ಒಬ್ಬಿಬ್ಬರಾಗಿದ್ದರೆ ಅನುಭವಿಸಿದವರಿಗೇ ಗೊತ್ತು ಎನ್ನಬಹುದಾಗಿತ್ತಾದರೂ ಅನುಭವಿಸಿದವರ ಸಂಖ್ಯೆ ಸಚಿನ್ ಸಿಡಿಸಿದ ಸೆಂಚುರಿಗಳ ಪಟ್ಟಿಯನ್ನೂ ಮೀರಿಸುವಂತಿದ್ದರಿಂದ ಅನುಭವಿಸಿದವರೆಲ್ಲರಿಗೂ ಗೊತ್ತು ಎನ್ನುವುದೇ ಸೂಕ್ತವೆನಿಸೀತು.

ಸರಿ, ಈ ಕತೆ ಪಾಠ ಬೋಧನೆಗಷ್ಟೇ ಸೀಮಿತಗೊಂಡಿದ್ದರೆ ‘ಸದ್ಯ ಪರ್ವಾಗಿಲ್ಲ!’ ಎಂದು ಖುಷಿ ಪಡುತ್ತಿದ್ದೆವೇನೋ! ಆದರೆ, ಅದು ಅಷ್ಟು ಸುಲಭವಾಗಿ ಮುಗಿಯಬೇಕಲ್ಲ! ಟೆಸ್ಟ್, ಎಕ್ಸಾmffಗಳು, ಅವನ್ನೂ ಮೀರಿ ಅಂಕ ವಿತರಣೆಯವರೆಗೂ ಮುಂದುವರೆಯುತಿತ್ತು.

*****

ಪ್ರಶ್ನೆ ಪತ್ರಿಕೆ ಎಂದರೆ ಅದರಲ್ಲಿ ರ್ಯಾಮ್, ರೋಮ್, ಬೇಸಿಕ್ ಇತ್ಯಾದಿಗಳ ವಿಸ್ತರಣೆ ಮಾಡುವ ಮಟ್ಟಿಗಿದ್ದ ನಮ್ಮ ಜ್ಞಾನ ಮಟ್ಟಕ್ಕೆ ಅಥವಾ ಪಾರ್ಟ್ಸ್ ಆಫ್ ದ ಕಂಪ್ಯೂಟರ್, ಯೂಸಸ್ ಆಫ್ ದ ಕಂಪ್ಯೂಟರ್ ಬಗ್ಗೆ ಒಂದೆರಡು ವಾಕ್ಯಗಳಲ್ಲಿ ಉತ್ತರಿಸುವ ನಮ್ಮ ತಿಳುವಳಿಕೆ ಮಟ್ಟಕ್ಕೆ ನಿಲುಕುವ ಪ್ರಶ್ನೆಗಳನ್ನು ಕೇಳುವರೆಂದು ನಿರೀಕ್ಷಿಸುತ್ತಿದ್ದೆವು. ಆದರೆ ಅವರೋ ಹೊಸ ವಿಷಯ ನೀಡಿ ಅದಕ್ಕೆ ಸಂಬಂಧಿಸಿದಂತೆ ಫ್ಲೋಚಾರ್ಟ್, ಪ್ರೋಗ್ರಾಂಗಳ ರಚನೆಯಂತಹ ಬಹುತೇಕ ಅಪ್ಲಿಕೇಶನ್ ಮಟ್ಟದ ಪ್ರಶ್ನೆಗಳ ಬ್ರಹ್ಮಾಸ್ತ್ರಗಳನ್ನು ತುಂಬಿ, ನಮ್ಮತ್ತ ತೂರಿ ನಮ್ಮನ್ನು ಅಕ್ಷರಶಃ ನಿಶಸ್ತ್ರಗೊಳಿಸಿ ಅಧೀರರನ್ನಾಗಿಸಿ ಬಿಡುತ್ತಿದ್ದರು.

ಇನ್ನೂ ಮುಂದುವರೆದು ಅಂಕ ವಿತರಣೆ ಎಂಬುದು ಈಗಾಗಲೇ ಅಪರಾಧಿಗಳೆಂದು ಸಾಬೀತಾಗಿರುವ ಖೈದಿಗಳಿಗೆ ನ್ಯಾಯಾಧೀಶನೊಬ್ಬ ಶಿಕ್ಷೆಯ ಪ್ರಮಾಣವನ್ನು ಘೋಷಿಸುವ ಘನ ಘೋರ ಗಳಿಗೆಯಂತಿರುತಿತ್ತು. ಅಂತಿದ್ದಾಗ ಮುಖದ ಮೇಲೆ ಉತ್ತರ ಪತ್ರಿಕೆ ಎಸೆಯುವುದು, ಬೈಯುವುದು, ಹೀಯಾಳಿಸುವುದು, ಕುಟುಕುವುದು, ಚೀರಾಡುವುದು, ಗೋಳಾಡುವುದು ಇವಕ್ಕೇನೂ ಕಡಿಮೆ ಇರದೆ ತರಗತಿ ಕೋಣೆ ಎಂಬುದು ಒಂದು ರೀತಿಯ ರಣಾಂಗಣವಾಗಿಬಿಡುತಿತ್ತು.

‘ಪರೀಕ್ಷೆಗಳಲ್ಲಿ ಫೇಲಾದವರಿಗೆ, ಕಡಿಮೆ ಅಂಕ ತೆಗೆದವರಿಗೆ ಈ ರೀತಿಯ ಶಿಕ್ಷೆ ನೀಡುವುದು ಮಾಮೂಲಲ್ಲವೇ’ ಎಂದು ನಿಮಗನಿಸಬಹುದು. ಆದರೆ, ನಮ್ಮ ಕಂಪ್ಯೂಟರ್ ವಿಷಯದಲ್ಲಿನ ಪಾಸ್ ಪರ್ಸೆಂಟೇಜ್ ನಾವು ಆ ಕಾಲಕ್ಕೆ ಕಡಿಮೆ ಪರ್ಸೆಂಟೇಜ್ ನ ಪರೀಕ್ಷೆಗಳೆಂದು ಕೇಳಿ ತಿಳಿದಿದ್ದ ಸಿ.ಎ, ಐ.ಎ.ಎಸ್, ಐ.ಐ.ಟಿ ಗಳಿಗಿಂತಲೂ ಹೆಚ್ಚಿರುತ್ತಿರಲಿಲ್ಲ. ಹೋಗಲಿ, ಪಾಸಾದವರು, ಹೆಚ್ಚು ಅಂಕ ತೆಗೆದವರಾದರೂ ಪ್ರಶಂಸೆಗೆ ಪಾತ್ರರಾಗುತ್ತಿದ್ದರ, ಕುಟಕುವಿಕೆಯಿಂದ ವಿನಾಯಿತಿ ಪಡೆದುಕೊಳ್ಳುತ್ತಿದ್ದರ ಎಂದರೆ ಅದೂ ಸುಳ್ಳಾಗಿತ್ತು. ಪಾಸಾದ, ಹೆಚ್ಚು ಅಂಕ ತೆಗೆದ ಕಾರಣಕ್ಕಾಗಿಯೂ ಪೆಟ್ಟು ತಿಂದ ಮಹನೀಯರಿರುತ್ತಿದ್ದರು!
.
ಪಾಪ, ಸೇಠು! ಬೇರೆ ವಿಷಯಗಳಲ್ಲಿ ಅವರೇಜ್ ಅಂಕ ತೆಗೆಯುತ್ತಿದ್ದವನು ಅದ್ಯಾವ ಗಳಿಗೆಯಲ್ಲಿ ಕಂಪ್ಯೂಟರ್ ಬಗ್ಗೆ ವಿಶೇಷ ಒಲವು ಬೆಳೆಸಿಕೊಂಡನೋ! ವಿಶೇಷ ಆಸಕ್ತಿಯಿಂದ ತರಗತಿಯಲ್ಲಿ ಪಾಠ ಕೇಳಲಾರಂಭಿಸಿದ್ದ. ಕಂಪ್ಯೂಟರ್ ಒರೆಸುವುದರಿಂದ ಹಿಡಿದು ಕಂಪ್ಯೂಟರ್ ರೂಮಿನ ಕಸ ಗುಡಿಸುವವರೆಗೆ ಅವಕಾಶ ಸಿಕ್ಕಾಗಲೆಲ್ಲಾ ಕಂಪ್ಯೂಟರ್ ಸಹವಾಸ ಮಾಡ ತೊಡಗಿದ್ದ. ಈ ಒಲವು, ಆಸಕ್ತಿ, ಸಹವಾಸದ ಫಲವೆಂಬಂತೆ ಕಂಪ್ಯೂಟರ್‌ನಲ್ಲಿ ಪಾಸಾಗಿದುದಲ್ಲದೇ ಒಮ್ಮೆ ಹೆಚ್ಚು ಅಂಕಗಳನ್ನು ತೆಗೆದುಬಿಟ್ಟಿದ್ದ. ಹೆಚ್ಚು ಅಂಕವನ್ನೇನೋ ತೆಗೆದಿದ್ದನಾದರೂ “ಹೇಗೆ ತೆಗೆದೆ?” ಎಂಬ ಸರ್ ರ ಇಂಗ್ಲಿಷ್ ಪ್ರಶ್ನೆಯನ್ನು ಅರ್ಥೈಸಿಕೊಳ್ಳಬಲ್ಲನಾದನೇ ಹೊರತು ಇಂಗ್ಲಿಷ್ ನಲ್ಲೇ ಉತ್ತರಿಸ ಬಲ್ಲವನಾಗದೆ ಸರ್ ಕುಟುಕುವಿಕೆಯ ಪ್ರಯೋಗಕ್ಕೆ ತಲೆ ಕೊಡಬೇಕಾಯಿತು. ಫೇಲಾದವರೆಲ್ಲ ಒಂದೆರಡು ಬಾರಿ ತಲೆ ಕೊಟ್ಟು ಖುಷಿಯಿಂದಲೇ ಇದ್ದರೆ, ಪಾಪ ಸೇಠು ತಾನು ಪಾಸಾದದಕ್ಕೆ ನಾಲ್ಕಾರು, ಹೆಚ್ಚು ತೆಗೆದದ್ದಕ್ಕೆ ನಾಲ್ಕಾರು ಎನ್ನುತ್ತಾ ಡಜನ್‌ಗಟ್ಟಲೆ ಬಾರಿ ತಲೆ ಕೊಟ್ಟುದಲ್ಲದೇ ಕಂಪ್ಯೂಟರ್‌ನಲ್ಲಷ್ಟೇ ಅಲ್ಲ, ಜೀವನದಲ್ಲಿ ಮತ್ತೆಂದೂ ಮತ್ತ್ಯಾವ ವಿಷಯದಲ್ಲೂ ಹೆಚ್ಚು ಅಂಕ ತೆಗೆಯುವುದಿರಲಿ ಪಾಸಾಗಲೂಬಾರದು ಎಂಬ ನಿರ್ಧಾರಕ್ಕೆ ಬಂದು ಬಿಟ್ಟಿದ್ದ!

ಹೇಳಲೊರಟರೆ, ತರಗತಿಗೆ ತಡವಾಗಿ ಬಂದುದರಿಂದ ಹಿಡಿದು ಬೇಗ ಬೇಗನೆ ಓಡಿ ಬಂದದ್ದಕ್ಕೆ, ಮಳೆ ಎಂಬ ಕಾರಣಕ್ಕೆ ನಿಂತು ಬಂದುದರಿಂದ ಹಿಡಿದು ಮಳೆಯಲ್ಲೇ ನೆನೆದು ಬಂದದ್ದಕ್ಕೆ, ಗಾಂಧಿ ಸ್ಮರಣೆಯ ಮೌನಾಚರಣೆಯಲ್ಲಿ ತೂಕಡಿಸಿದ್ದರಿಂದ ಹಿಡಿದು ಮುಸಿ ಮುಸಿ ನಕ್ಕಿದ್ದಕ್ಕೆ.. ಹೀಗೆ ಸಾಲು ಸಾಲು ಕತೆಗಳು ಬಿಚ್ಚಿಕೊಳ್ಳುತ್ತವೆ!

ಒಟ್ಟಿನಲ್ಲಿ, ಕಂಪ್ಯೂಟರ್ ಸರ್ ರ ಕುಟುಕುವಿಕೆಯ ಪ್ರಯೋಗಕ್ಕೆ ಕಾರಣಗಳು ಬೇಕೆಂದೇನೂ ಇರಲಿಲ್ಲ ಅಷ್ಟೇ. ಹೀಗಾಗಿಯೇ ಕಂಪ್ಯೂಟರ್ ಪೀರಿಯಡ್ ಎಂದೊಡನೆ ಎಲ್ಲರೂ ಬಗೆ ಬಗೆಯಾಗಿ ವರ್ಣಿಸುತ್ತಿದ್ದದ್ದು!

ನಮ್ಮ ಪುಣ್ಯಕ್ಕೆ ಕಂಪ್ಯೂಟರ್ ಪೀರಿಯಡ್ ಎಂಬುದು ಇರುತಿದ್ದದ್ದು ವಾರಕ್ಕೊಮ್ಮೆ ಮಾತ್ರ. ಆದರೆ, ಕಂಪ್ಯೂಟರ್ ಪೀರಿಯಡ್ ಮತ್ತೆ ಬಂದಾಗ ವಾರ ಎಂಬುದು ನಮ್ಮ ಪಾಲಿಗೆ ಅರೆ ಗಳಿಗೆಯಲ್ಲೇ ಮರುಕಳಿಸಿದಂತಾಗುತಿತ್ತು! ಅದಕ್ಕೆಂದೇ ಯಾರಾದರೂ ಮಹನೀಯರು ಸತ್ತು ರಜೆ ಘೋಷಣೆಯಾದಾಗ ‘ಛೇ! ಸಾಯೋರು ಸತ್ತರು, ಕಂಪ್ಯೂಟರ್ ಪೀರಿಯಡ್ ಇದ್ದ ದಿನವಾದರೂ ರಜೆ ಸಿಗುವಂತೆ ಸಾಯಬಾರದಿತ್ತೆ ದೇವರೇ!’ ಎಂದು ದೇವರಲ್ಲಿ ಮೊರೆ ಇಡುತಿದ್ದೆವು. ಆದರೇನು ಮಾಡುವುದು! ಪ್ರತಿದಿನವೂ ಒಂದಲ್ಲ ಒಂದು ತರಗತಿಗೆ ಕಂಪ್ಯೂಟರ್ ಪೀರಿಯಡ್ ಇರುತ್ತಿದುದರಿಂದ, ಪ್ರತಿಯೊಂದು ತರಗತಿಯವರೂ ಹೀಗೆಯೇ ದೇವರ ಮೊರೆ ಹೋಗುತ್ತಿದುದರಿಂದ ದೇವರೆಂಬ ದೇವರು ಯಾರ ಮೊರೆಯನ್ನು ತಾನೇ ಕೇಳಿಯಾನು!

ಮತ್ತೆ ಇನ್ನೇನು ಮಾಡುವುದು! ವೃತ್ತಪತ್ರಿಕೆಗಳಲ್ಲಿ ಅದೆಲ್ಲೋ ದೂರದಲ್ಲಿ ಭೂಕಂಪವಾಗಿ ಕಟ್ಟಡಗಳು ನೆಲ ಸಮವಾದವು, ಪ್ರವಾಹಕ್ಕೆ ಕಟ್ಟಡಗಳು ಕೊಚ್ಚಿ ಹೋದವು ಎಂದೆಲ್ಲಾ ಓದುವಾಗ ‘ಕನಿಷ್ಟ ಪಕ್ಷ ಅಂತಹ ಲೀಲೆಯನ್ನಾದರೂ ನಮ್ಮ ಕಂಪ್ಯೂಟರ್ ಲ್ಯಾಬ್‌ನ ಮೇಲೆ ನೀನು ತೋರಬಾರದೆ ದೇವ!’ ಎಂದು ನಾವೆಲ್ಲ ದೇವರ ಮೇಲೆ ಮುನಿಸಿಕೊಳ್ಳುತ್ತಿದ್ದೆವು.

ಹಾಗೆಂದು ಕಂಪ್ಯೂಟರ್ ಸರ್ ಮೇಲೆ ನಮಗೆ ದ್ವೇಷವಿತ್ತೆಂದಾಗಲಿ, ಅವರಿಗೆ ಏನಾದರೂ ಆಗಲೆಂದು ದೇವರಲ್ಲಿ ಬೇಡಿಕೊಳ್ಳುತ್ತಿದ್ದೆವೆಂದಾಗಲಿ ತಪ್ಪಾಗಿ ಯೋಚಿಸ ಹೋಗಬೇಡಿ. ಎಷ್ಟಾದರೂ ಗಲಿವರನ ಮುಂದೆ ಲಿಲಿಪುಟ್‌ಗಳಂತಿದ್ದ ಅಥವಾ ಆನೆಯ ಮುಂದೆ ಕೋಳಿ ಪಿಳ್ಳೆಗಳಂತಿದ್ದ ನಮಗೆ ಕಂಪ್ಯೂಟರ್ ಸರ್ ರ ದೇಹಸಿರಿಯ ಬಗ್ಗೆ ಅದೇನೋ ವಿಶೇಷ ಬೆರಗು, ಅಭಿಮಾನ!

ಈ ಅಭಿಮಾನದಿಂದಲೇ ಕಂಪ್ಯೂಟರ್ ಸರ್ ಅವರನ್ನೂ ಮತ್ತು ಅವರ ದೇಹಸಿರಿಯನ್ನೂ ಮೀರಿಸುವಂತಿದ್ದ, ಕನ್ನಡ, ಹಿಂದಿ, ಇಂಗ್ಲಿಷ್ ಎಂದರೆ ನಾವು ಅಂದಾಜಿಸ ಬಹುದೆಂದು ತಮಿಳು, ತೆಲುಗು ಸಿನಿಮಾಗಳಲ್ಲಿ ತಾನು ಹೀರೋ ಪಾತ್ರ ಮಾಡಿರುವವನೆಂದು ಫೈಟಿಂಗ್ ಸೀನ್‌ಗಳ ಸಮೇತ ವರ್ಣಿಸುತ್ತಿದ್ದ, ಬೆಳಿಗ್ಗೆ ಸಂಜೆ ಶಾಲಾ ಮೈದಾನದ ನಡುವೆ ಇದ್ದ ಮಾಸ್ತಿಕಲ್ಲಿನ ಮೇಲೆ ಕುಳಿತು ನಮ್ಮಂತಹ ನಾಲ್ಕಾರು ಹುಡುಗರಿಂದ ಕೈಕಾಲು ಒತ್ತಿಸಿಕೊಳ್ಳುತ್ತಿದ್ದ ಪೀಟೀ ಸರ್ ರನ್ನು ಒಂದುಗೂಡಿಸಿ, ಇಬ್ಬರ ತಲೆ ಬೋಳಿಸಿ, ಕೈಗೆ ಒಂದೊಂದು ಹಾಕಿ ಸ್ಟಿಕ್‌ಗಳನ್ನು ಕೊಟ್ಟು ನಿಲ್ಲಿಸಿದರೆ ಹಾಲಿವುಡ್ ವಿಲನ್‌ಗಳನ್ನೂ ಮೀರಿಸುವಂತಹ ಜಗದ್ವಿಖ್ಯಾತ ವಿಲನ್‌ಗಳಾಗಬಲ್ಲರೆಂದೂ ಸಿನೆಮಾ ಸೂಪರ್ ಹಿಟ್ ಆಗ ಬಲ್ಲದೆಂದೂ ನಮ್ಮ ನಮ್ಮ ನಡುವೆಯೇ ಮಾತನಾಡಿಕೊಳ್ಳುತ್ತಿದ್ದೆವು. ಆದರೆ ಈ ಅಭಿಮಾನದ ಮಾತುಗಳನ್ನು ಅವರೆದುರು ಬಿಚ್ಚಿಡುವ ಧೈರ್ಯ ಯಾರಿಗೂ ಇರಲಿಲ್ಲವಾಗಿ ಅಮೆರಿಕ ಅಮೆರಿಕ ಸಿನೆಮಾದ ರಮೇಶನ ಪ್ರೀತಿಯಂತೆ ಅದು ಎದೆಯಲ್ಲಿಯೇ ಉಳಿದು ಬಿಟ್ಟಿತ್ತು.

ಇನ್ನೂ ಕಂಪ್ಯೂಟರ್ ಸರ್‌ರ ವರ್ಣನೆಯನ್ನೆಲ್ಲಾ ಕೇಳಿ ಅವರೆಂದೂ ನಗು ಮೊಗದಿಂದ ಪಾಠ ಮಾಡಲೇ ಇಲ್ಲವೆಂದು ತಿಳಿಯಬೇಡಿ. ನಮ್ಮ ಕಂಪ್ಯೂಟರ್ ಸರ್‌ರಂತಹ ಕಂಪ್ಯೂಟರ್ ಸರ್ ಕೂಡ ನಗು ಮೊಗದೊಂದಿಗೆ ಪಾಠ ಹೇಳಿ ಕೊಡುವ ರಸ ಗಳಿಗೆಗಳಿಗೆ ನಾವು ಸಾಕ್ಷೀಭೂತರಾಗಿದ್ದೆವು. ಆದರೆ, ಆ ಅದೃಷ್ಟ ಇದ್ದದ್ದು ಮಾತ್ರ ನಮಗಲ್ಲ. ಬದಲಿಗೆ, ಕೆಲದಿನಗಳ ಮಟ್ಟಿಗೆ ಪಕ್ಕದ ಶೃಂಗೇರಿಯಿಂದ ಬರುತ್ತಿದ್ದ, ನೋಡಲು ಸುರಸುಂದರಿಯಂತಿದ್ದ ಅತಿಥಿ ಶಿಕ್ಷಕಿಯೊಬ್ಬರಿಗೆ ಮಾತ್ರ! ಆಗೆಲ್ಲಾ ನಾವು ‘ ಅಯ್ಯೋ! ನಮಗೂ ಹಾಗೆಯೇ ಕಂಪ್ಯೂಟರ್ ಮುಂದೆ ಕುಳ್ಳಿರಿಸಿ ನಗು ಮೊಗದಿಂದ ಪಾಠ ಹೇಳಿ ಕೊಡವಂತಿದ್ದರೇ..’ ಎಂದು ಯೋಚಿದರೆ ಕೆಲ ಕಿರಾತಕರು ಅದನ್ನು ಮೀರಿ
‘ಅಯ್ಯೋ! ಅತಿಥಿ ಶಿಕ್ಷಕಿಗೆ ಪಾಠ ಹೇಳಿಕೊಡುವ ಕಂಪ್ಯೂಟರ್ ಸರ್ ನಾವೇ ಆಗಿದ್ದರೇ..’ ಎಂದು ವೇದನೆ ತೋಡಿಕೊಳ್ಳುತ್ತಿದ್ದರು.

ಆದರೆ, ನಮ್ಮ ನತದೃಷ್ಟತನಕ್ಕೆ ಈ ಯಾವ …ರೇ ಗಳು ಈಡೇರುವಂತಿರಲಿಲ್ಲ. ಹಾಗಾಗಿ ನಮ್ಮ ಈ ಸಮಸ್ಯೆಗೆ ನಾವೇ ಪರಿಹಾರ ಕಂಡು ಹಿಡಿಯಬೇಕಾಗಿತ್ತು. ಅದಕ್ಕಾಗಿ ಈ ಕಂಪ್ಯೂಟರ್ ತಜ್ಞರು ವೈಟುಕೆ ಬಗ್ ನಂತಹ ಸಮಸ್ಯೆ ಎದುರಾಗಬಹುದೆಂದು ತಲೆ ಕೆಡಿಸಿಕೊಂಡಿದ್ದಕ್ಕಿಂತಲೂ ಹೆಚ್ಚು ತಲೆ ಕೆಡಿಸಿಕೊಳ್ಳಲಾರಂಭಿಸಿದೆವು. ತರಗತಿಗೆ ತರಗತಿಯೇ ತಲೆ ಕೆಡಿಸಿಕೊಂಡ ಮೇಲೆ ಪರಿಹಾರ ಸಿಗದಿರುವುದೇ. ಅಂತೂ ಸಿಕ್ಕಿತು. ಅದು ಸರಳವೂ ಆಗಿದ್ದಂತೆ ತೋರಿತು. ಅದು ‘ಮಾಸ್ ಕಾಪಿ’ ಮಾಡುವುದಾಗಿತ್ತು!

ಎಷ್ಟಾದರೂ ನಾವು ಮಿತಿ ಮೀರಿ ಪ್ರಾಮಾಣಿಕರಾಗಿದ್ದವರು. ಹೆಚ್ಚು ಅಂಕ ತೆಗೆಯುತ್ತೇವೆಂದು ಮೈಸೂರು ಪಾಕ್, ಹಾಲು ಕೋವಾಗಳನ್ನೆಲ್ಲಾ ಬೆಟ್ಟಿಂಗ್ ಕಟ್ಟಿಕೊಳ್ಳುತ್ತಿದ್ದವರು, ಅರ್ಧ ಅಂಕ, ಕಾಲು ಅಂಕಕ್ಕೂ ಶಿಕ್ಷಕರೊಡನೆ ಚೌಕಾಸಿ ಮಾಡಿ ಕಣ್ಣೀರು ಹಾಕುತ್ತಿದ್ದವರು, ಪದೇ ಪದೇ ಒಬ್ಬರು ಹೆಚ್ಚು ಅಂಕ ತೆಗೆದರೆಂದರೆ ಶಿಕ್ಷಕರು ಪಾರ್ಷಿಯಾಲಿಟಿ ಮಾಡುತ್ತಿರುವರೆಂದು ದೂರುತ್ತಿದ್ದವರೂ ಆಗಿದ್ದೆವು. ಹೀಗಿರುವಾಗ ಯಾರಾದರೂ ಕಾಪಿ ಮಾಡುವುದಿರಲಿ ಅತ್ತಿತ್ತ ತಿರುಗಿದರೂ ‘ಚೀಟಿಂಗ್ ಚೀಟಿಂಗ್’ ಎಂದು ಅವರ ಉತ್ಸಾಹ ಭಂಗಗೊಳಿಸಿಬಿಡುತ್ತಿದ್ದೆವು.

ಆದರೆ, ಕಂಪ್ಯೂಟರ್ ವಿಚಾರದಲ್ಲಿ ಮಾತ್ರ ಈ ಎಲ್ಲಾ ರಗಳೆಗಳಿಂದ ನಮಗೆ ನಾವೇ ವಿನಾಯಿತಿ ಕೊಟ್ಟು ಕೊಳ್ಳಲು ನಿರ್ಧರಿಸಿ ಬಿಟ್ಟಿದ್ದೆವು. ಹೇಳಿಕೇಳಿ ಕಂಪ್ಯೂಟರ್ ವಿಷಯ ಪಾರ್ಟ್ ಬಿ ಯಲ್ಲಿ ಬರುತ್ತಿದ್ದು, ಅದರಲ್ಲಿನ ಅಂಕಗಳು ಗ್ರೇಡ್ ಗಷ್ಟೇ ಸೀಮಿತವಾಗಿದ್ದವೇ ವಿನಃ ರ್ಯಾಂಕ್ ಗೆ ಕೌಂಟ್ ಆಗುತ್ತಿರಲಿಲ್ಲ. ಈ ಅಂಶವೂ ವಿನಾಯಿತಿ ಕೊಟ್ಟುಕೊಳ್ಳುವ ನಮ್ಮ ನಿರ್ಧಾರಕ್ಕೆ ಅನುಕೂಲಕರವಾಗಿ ಪರಿಣಮಿಸಿತ್ತು.

ಸರಿ, ಮಾಸ್ ಕಾಪಿಯ ನಿರ್ಧಾರ ಮಾಡಿದರಷ್ಟೇ ಸಾಕೆ, ಕಾರ್ಯರೂಪಕ್ಕೆ ತರಬೇಡವೇ. ಆ ಗಳಿಗೆಗಾಗಿಯೇ ಕಾದು ಕುಳಿತೆವು. ಅದೊಂದು ಕಿರು ಪರೀಕ್ಷೆಯ ದಿನ ಆ ಗಳಿಗೆಯೂ ಬಂದು ಬಿಟ್ಟಿತ್ತು.

ಆದರೆ, ಆ ಗಳಿಗೆಯಲ್ಲಿ ನಾವು ನಿರೀಕ್ಷಿಸದೆ ಇದ್ದ ಘಟನೆಯೊಂದು ಘಟಿಸಿಬಿಟ್ಟಿತು. ಪರೀಕ್ಷೆ ಆರಂಭವಾಗಿ ನಾವೆಲ್ಲಾ ‘ಕಾಪಿ ಮಾಡಿವುದಾ ಬೇಡವಾ, ಮಾಡುವುದಾದರೆ ಕಂಪ್ಯೂಟರ್ ಸರ್ ಕಣ್ತಪ್ಪಿಸಿ ಕಾಪಿ ಮಾಡುವುದಾದರೂ ಹೇಗೆ’ ಎಂಬ ಆಲೋಚನೆ, ಅಂಜಿಕೆ, ಅಳುಕಿನಲ್ಲಿರುವಾಗಲೇ ಮೃತ್ಯುಂಜಯ ಡೆಸ್ಕ್ ಅಡಿಯಲ್ಲಿನ ಬುಕ್ ತೆಗೆದು ನಮ್ಮ ಜೊತೆ ಮಾಡಿಕೊಂಡಿರುವ ಒಡಂಬಡಿಕೆಯನ್ನು ಕಂಪ್ಯೂಟರ್ ಸರ್ ಜೊತೆಗೇ ಮಾಡಿಕೊಂಡಿರುವೆನೋ ಎಂಬಂತೆ, ಸರ್ಕಾರ ಈಗ ಜಾರಿಗೆ ತರಲು ಯೋಚಿಸುತ್ತಿರುವ ‘ಓಪನ್ ಬುಕ್ ಎಕ್ಸಾಮ್’ ಅನ್ನು ಅದಾಗಲೇ ಜಾರಿಗೆ ತಂದವನಂತೆ ಕಾಪಿ ಮಾಡಲಾರಂಭಿಸಿದ್ದ. ಇದನ್ನು ಕಂಪ್ಯೂಟರ್ ಸರ್ ಅವರ ಹದ್ದಿನ ಕಣ್ಣು ಹಿಂದಿನಿಂದ ಗಮನಿಸಿಬಿಡಬೇಕೆ!

ಗಮನಿಸಿದೊಡನೆಯೇ ‌ಮೃತ್ಯುವನ್ನು ಹಿಡಿದೆಳೆದು ಮುಂದಕ್ಕೆ ತಂದು ನಿಲ್ಲಿಸಿದರು. ಅಲ್ಲದೇ ಡಾಕ್ಟರನೊಬ್ಬ ಸ್ಟ್ರಾಂಗ್ ಡೋಸೇಜ್‌ನ ಇಂಜೆಕ್ಷನ್ ನೀಡುವ ಮುನ್ನ ಸಣ್ಣದೊಂದು ಟೆಸ್ಟ್ ಡೋಸ್ ನೀಡುವಂತೆ ತಲೆಗೆ ಒಮ್ಮೆ ಸರಿಯಾಗಿ ಕುಟುಕಿದರು. ಮೃತ್ಯು ಕುಸಿದು ಬಿದ್ದ!

ನಾವುಗಳೋ ಗಾಬರಿಯಿಂದ ಎದ್ದು ಹೋಗಿ ‘ಮೃತ್ಯು ಮೃತ್ಯು’ ಎನ್ನುತ್ತಾ ಮುಖ ತಟ್ಟಿದೆವು. ಎಚ್ಚರಾಗಲಿಲ್ಲ. ಮುಖಕ್ಕೆ ನೀರು ಚುಮುಕಿಸಿದೆವು. ಎಚ್ಚರಾಗಲಿಲ್ಲ. ಕೊನೆಗೆ ಜಿಗುಟುವಂತೆ ಮಾಡಿದೆವು. ಆದರೂ ಎಚ್ಚರಾಗದೇ ಪ್ರಜ್ಞಾಹೀನ ಸ್ಥಿತಿಯಲ್ಲಿಯೇ ಇದ್ದ. ಇನ್ನೇನು ತಾನೇ ಮಾಡುವುದು! ಕಂಪ್ಯೂಟರ್ ಸರ್ ಕೊಟ್ಟ ‘ಮೆಡಿಕಲ್ ರೂಮ್ ಗೆ ಕರೆದುಕೊಂಡು ಹೋಗಿ’ ಎಂಬ ಸೂಚನೆ ಮೇರೆಗೆ ಅವನ ಎರಡು ಭುಜಗಳಿಗೆ ಇಬ್ಬರು ಹೆಗಲು ಕೊಟ್ಟು, ಇನ್ನಿಬ್ಬರು ಎರಡು ಕಾಲುಗಳನ್ನೊತ್ತು, ಒಬ್ಬ ತಲೆ ಹಿಡಿದು ಥೇಟು ಚಟ್ಟ ಹೊತ್ತಂತೆಯೇ ಹೊತ್ತು ನಡೆದೆವು.

ಕಂಪ್ಯೂಟರ್ ಸರ್ ಮಾತ್ರ ಅಂತಹ ವಿಷಮ ಪರಿಸ್ಥಿತಿಯಲ್ಲೂ ತರಗತಿಯಲ್ಲೇ ಉಳಿದರು. ತಮ್ಮ ಅನುಪಸ್ಥಿತಿಯಲ್ಲಿ ಪರೀಕ್ಷೆ ಬರೆದು ಯಾರಾದರೂ ಪಾಸಾಗಿ ಬಿಟ್ಟರೆ ಎಂಬ ಚಿಂತೆ ಅವರನ್ನು ಕಾಡಿರಬಹುದು!

ಸರಿ, ನಾವುಗಳು ಮೃತ್ಯುವನ್ನು ಹೊತ್ತು ಆತಂಕಿತರಾಗಿಯೇ ನಿಧಾನವಾಗಿ ಮೆಡಿಕಲ್ ರೂಮಿನತ್ತ ಸಾಗಲಾರಂಭಿಸಿದ್ದೆವು. ತರಗತಿ ಕೋಣೆ ಮರೆಯಾಗಿ ನಾಲ್ಕು ಹೆಜ್ಜೆ ಸಾಗಿರಬಹುದು ಅಷ್ಟರಲ್ಲಿ ಮೃತ್ಯು ಒಡನೆಯೇ ತಲೆ ಎತ್ತಿ ಕಣ್ಣು ಹೊಡೆಯಬೇಕೆ! ಹೆಣವೊಂದು ದಾರಿ ಮಧ್ಯೆ ಎದ್ದು ಕೂತರೆ ಆಗಬಹುದಾದಷ್ಟೇ ಅಚ್ಚರಿ ಪಡುವ ಸರದಿ ನಮ್ಮದಾಗಿತ್ತು. ಈ ಅಚ್ಚರಿಯಿಂದ ಉಕ್ಕಿ ಬಂದ ನಗುವನ್ನು ಯಾರಿಂದಲೂ ತಡೆಯಲು ಸಾಧ್ಯವಾಗದೇ, ಪಕ್ಕದಲ್ಲೇ ಇದ್ದ ತರಗತಿಗೆ ಕೇಳಿಸಿದರೆಂದು ಜೋರಾಗಿ ನಗಲೂ ಆಗದೆ ಮುಸಿ ಮುಸಿ ನಗುತ್ತಾ ಮೃತ್ಯುವನ್ನು ಹಾಗೆಯೇ ಹೊತ್ತು ಅಕ್ಷರಶಃ ಓಡುತ್ತಾ ಮೆಡಿಕಲ್ ರೂಮ್ ತಲುಪಿದೆವು.

ನಾವು ಹೊತ್ತು ಹೊಯ್ದ ಧಾಟಿ ನೋಡಿ ನರ್ಸ್ ಆಂಟಿ ಇದೇನೋ ಭಾರಿ ಸೀರಿಯಸ್ ಕೇಸ್ ಇರಬಹುದೆಂದು ಎಣಿಸಿ ವಿಚಾರಿಸಿದರು. ಮೃತ್ಯುವೋ ಮೊದಲೇ ಒಂದು ಒಂದೂವರೆ ಗಂಟೆಗಳ ಇಂಗ್ಲಿಷ್ ಸಿನೆಮಾಗಳನ್ನು ನೋಡಿ ಬಂದು ವಾರಗಟ್ಟಲೆ ಆ್ಯಕ್ಷನ್, ಡಿಟಿಎಸ್ ಎಫೆಕ್ಟ್, ಗ್ರಾಫಿಕ್ಸ್ ಎಫೆಕ್ಟ್ಸ್‌ಗಳೊಂದಿಗೆ ವರ್ಣಿಸುವ ಕೆಪಾಸಿಟಿ ಇದ್ದಾತ. ಅವನು ಹೇಳಿದ ಸ್ಟೋರಿ ಕೇಳಿಸಿಕೊಂಡು ಅದೆಷ್ಟೋ ಕಾಲವಾದ ಮೇಲೆ ಟರ್ಮಿನೇಟರ್, ಮ್ಯಾಡ್ ಮ್ಯಾಕ್ಸ್ ನಂತಹ ಸಿನೆಮಾ ನೋಡ ಹೊರಟರೆ ಸಿನೆಮಾಗಿಂತಲೂ ಮೃತ್ಯು ಹೇಳುತ್ತಿದ್ದ ಸ್ಟೋರೀನೆ ಭಾರಿ ಇಂಟರೆಸ್ಟಿಂಗ್ ಆಗಿತ್ತಲ್ಲ ಎಂದು ನಮಗೆಲ್ಲಾ ಅನಿಸಿದ್ದಿದೆ. ಇಂತಹ ಮೃತ್ಯು ಇರುವೆ ಕಚ್ಚಿದಷ್ಟರ ಮಟ್ಟಿಗಿನ ತನ್ನ ನೋವನ್ನು ಆನೆ ತುಳಿತದ ರೇಂಜಿಗೆ ವರ್ಣಿಸಲು ಕಷ್ಟಪಡುವುದುಂಟೆ. ಒಂದಕ್ಕೆ ನಾಲ್ಕು ಸೇರಿಸಿ ಹೇಳಿದ.

ಪಾಪ ನರ್ಸ್ ಆಂಟಿ, ಕೆಲ ಹೊತ್ತಿನ ಮುಂಚೆ ಮೃತ್ಯು ನಿಜವಾಗಿಯೂ ಮರಣಶಯ್ಯೆಯಲ್ಲಿದ್ದನೆಂದೇ ನಂಬಿ ಕನಿಕರ ಪಟ್ಟರು. ಅಲ್ಲದೇ ಮೃತ್ಯುವಿನ ಆಯಾಸಕ್ಕೆ ಗ್ಲುಕೋಸ್ ಪುಡಿಯ ಟ್ರೀಟ್ ಮೆಂಟ್ ನೀಡಿರೆಂಬ ನಮ್ಮ ಸಲಹೆಯನ್ನೂ ಒಪ್ಪಿ ಪೂರಾ ಪ್ಯಾಕೆಟ್ ಒಂದನ್ನು ನೀಡಿದರು. ನಾವುಗಳು ಪಡೆದ ಪ್ಯಾಕೆಟ್‌ನಲ್ಲಿ ಗುಟುಕಿನಷ್ಟನ್ನು ಮಾತ್ರ ಮೃತ್ಯುವಿನ ಬಾಯಿಗೆ ಸುರಿದು ಉಳಿದದ್ದನ್ನು ಸ್ಪರ್ಧೆ ನಡೆಸುವವರಂತೆ ನಮ್ಮಗಳ ಬಾಯಿಗೇ ಸುರಿದುಕೊಂಡೆವು.

ಅಹಾ, ಒಂದೆಡೆ ಕಂಪ್ಯೂಟರ್ ಪರೀಕ್ಷೆ ನಡುವಿನ ಅಪರೂಪದ ಬ್ರೇಕ್ ಮತ್ತೊಂದೆಡೆ ಗ್ಲುಕೋಸ್ ಪುಡಿಯ ಬೋನಸ್ ನ ಸಂಭ್ರಮ. ಆ ಸಂಭ್ರಮದಲ್ಲಿ ನಾವು ಹೋಗಿ ಪರೀಕ್ಷೆ ಬರೆಯಲಿರುವವರೆಂಬ ಅರಿವೂ ನಮಗಿರದಾಗಿತ್ತು!

ಇನ್ನೂ ಮೆಡಿಕಲ್ ರೂಮಿನಿಂದ ಹೊರ ಬಂದವರು ಒಬ್ಬರ ಮುಖ ಒಬ್ಬರು ನೋಡುತ್ತಲೇ ಉಕ್ಕಿ ಬರುತ್ತಿದ್ದ ನಗುವನ್ನು ತಡೆಯಲಾರದೇ ಹೊಟ್ಟೆ ಹುಣ್ಣಾಗುವಂತೆಂಬಂತೆ ಜೋರಾಗಿ ಮತ್ತೆ ಮತ್ತೆ ನಗುತ್ತಾ ಹೊಟ್ಟೆ ಹಿಡಿದು ಕುಳಿತೆವು. ಸಂಭ್ರಮದಿಂದಾದ ಆಯಾಸವನ್ನು ಸುಧಾರಿಸಿಕೊಳ್ಳಲೂ ಸಾಕಷ್ಟು ಸಮಯ ಬೇಕೆನಿಸಿತ್ತು. ಆದರೆ, ಪರೀಕ್ಷೆ ಬರೆಯುವುದಿನ್ನೂ ಬಾಕಿ ಇತ್ತಲ್ಲ. ಹಾಗಾಗಿ ತರಗತಿಯೆಡೆಗೆ ಹೊರಟೆವು. ಹೋಗುವಾಗ ಮೃತ್ಯುವನ್ನು ಚಟ್ಟದಂತೆ ಹೊತ್ತೊಯ್ದಿದ್ದ ನಾವು ಈಗ ಹಿಂದಿರುಗುವಾಗ ಹೆಗಲಿಗೆ ಆಸರೆಯಾದವರಂತೆ ನಿಧಾನವಾಗಿ ನಡೆಸಿಕೊಂಡು ಕೊಠಡಿ ಪ್ರವೇಶಿಸಿದೆವು.

ಕಂಪ್ಯೂಟರ್ ಪರೀಕ್ಷೆ ಎಂದರೆ ಮೊದಲೇ ಪ್ರಪಂಚ ತಲೆ ಮೇಲೆ ಹೊತ್ತವರಂತೆ ಇರುತ್ತಿದ್ದವರೆಲ್ಲಾ ಈಗ ಮೃತ್ಯುವಿನ ಸ್ಥಿತಿ ನೆನೆ ನೆನೆದು ಶೋಕತಪ್ತರಂತೆ ಮುಖ ಭಾವ ಹೊತ್ತು ಪರೀಕ್ಷೆ ಬರೆಯುತ್ತಿದ್ದಾರೆ. ನಮಗೋ ಇತ್ತ, ಒಬ್ಬರ ಮುಖ ಒಬ್ಬರು ನೋಡಿದಾಗೆಲ್ಲಾ ಒಳಗೊಳಗೆ ಉಕ್ಕಿ ಬರುತ್ತಿರುವ ಸಂಭ್ರಮದ ನಗು! ಅತ್ತ, ಎಲ್ಲಿ ನಗುವಿನ ಕಟ್ಟೆ ಹೊಡೆದು ಕಂಪ್ಯೂಟರ್ ಸರ್ ರ ಕಿವಿ ತಲುಪಿ ಕುಟುಕುವಿಕೆಗೆ ತಲೆ ಕೊಡಬೇಕಾದೀತೊ ಎಂಬ ಸಂಕಟ!

ಹೀಗೆ ಸಂಭ್ರಮ, ಸಂಕಟಗಳೆರಡೂ ಮಿಶ್ರಿತಗೊಂಡ ವಿವರಿಸಲಾಗದ ವಿಚಿತ್ರ ಮನಸ್ಥಿತಿಯಲ್ಲಿ ಪರೀಕ್ಷೆ ಬರೆಯ ಕೂತೆವು.
ಈ ಸಂದರ್ಭದಲ್ಲೂ ನಮ್ಮ ಕಂಪ್ಯೂಟರ್ ಸರ್ ತಮ್ಮ ಬಿಗುಮೊಗವನ್ನಾಗಲಿ, ಕಣ್ಗಾವಲನ್ನಾಗಲಿ ಸಡಿಲಗೊಳಿಸಿದಂತಿರಲಿಲ್ಲ. ಆದರೆ, ಅಂದಿನಿಂದ ತಮ್ಮ ಕುಟುಕುವಿಕೆಯ ಪ್ರಯೋಗವನ್ನು ಮಾತ್ರ ಸಂಪೂರ್ಣ ಎಂಬಂತೆ ಕಡಿಮೆ ಮಾಡಿ ಬಿಟ್ಟಿದ್ದರು.

(ಹಿಂದಿನ ಕಂತು: ಪೂರ್ಣೇಶ್‌ ಮತ್ತಾವರ ಹೊಸ ಸರಣಿ “ನವೋದಯವೆಂಬ ನೌಕೆಯಲ್ಲಿ…” ಶುರು..)