ದೇಶಪಾಂಡೆ ಅವರ ಮನೆಯಿಂದ ಖಾನ್ ಇದ್ದ ಸ್ಥಳಕ್ಕೆ ತಲುಪುವತನಕ ಚಾಂದಬೀ ಭೂಮಿಯ ಮೇಲೆ ಕಾಲೂರಲೇ ಇಲ್ಲ. ಕ್ಷಣಕ್ಕೊಮ್ಮೆ ಗರ್ಭವ ಮುಟ್ಟಿ ನೋಡಿಕೊಳ್ಳುತ್ತ ಪ್ರತಿಸಲವೂ ಹೊಸ ಹೊಸದಾಗಿ ಕೃಷ್ಣನ ತಾಯಿ ಯಶೋಧೆಯಾಗಿ ಕನಸು ಕಾಣತೊಡಗಿದಳು. ಖಾನನ ಬಳಿಗೆ ಹೋದೊಡನೆ ದೇಶಪಾಂಡೆ ದಂಪತಿಗಳ ಪ್ರೀತಿ, ಗೌರವಾದರಗಳನ್ನು ಹತ್ತು ಸಲ ಹೇಳಿದಳು. ಬಸಿರಾದ ವಿಷಯವನ್ನು ಹತ್ತು ಬಾರಿ ಹೇಳಿದಳು. ಪ್ರತಿಯೊಂದು ಸಲವೂ ಇದೇ ಮೊದಲನೇ ಸಲವೆಂಬಂತೆ ಪ್ರತಿಸಲವೂ ಹೊಸ ಹೊಸ ವಿವರಗಳೊಂದಿಗೆ ಹೇಳಿದಳು.
ಡಾ. ಚಂದ್ರಶೇಖರ ಕಂಬಾರರ ಹೊಸ ಕಾದಂಬರಿ ‘ಚಾಂದಬೀ ಸರ್ಕಾರ’ದ ಒಂದು ಅಧ್ಯಾಯ ನಿಮ್ಮ ಓದಿಗೆ

 

ಆಟದಿಂದ ಬದುಕಿನಾಟಕ್ಕೆ

ಚಾಂದಬೀಯ ಚಿಕ್ಕಂದಿನ ಹೆಸರು ಶೀಲವಂತಿ. ಹುಕ್ಕೇರಿ ತಾಲ್ಲೂಕಿನ ಕೊಟಬಾಗಿಯ ದೇವದಾಸಿ ನಿಂಬೆವ್ವನ ಮಗಳು. ಭಜನಾಮೇಳದಲ್ಲಿ ಚೆನ್ನಾಗಿ ಹಾಡುತ್ತಿದ್ದ ಶೀಲವಂತಿಯ ಹಾಡು ಕೇಳಿ ಪಾರಿಜಾತದ ಉಸ್ತಾದ್ ಅಲಿ ಆಗಾಖಾನ್ ಅವಳನ್ನು ತನ್ನ ಮೇಳಕ್ಕೆ ಕೊಡಬೇಕೆಂದು ನಿಂಬೆವ್ವನನ್ನು ಅಂಗಲಾಚಿದ. ಹೆಸರು ಮಾಡಲು ಮಗಳಿಗೊಂದು ಅವಕಾಶ ಕೂಡಿ ಬಂತೆಂದುಕೊಂಡ ನಿಂಬೆವ್ವ ಮಗಳನ್ನು ಅಂದೇ ಆಗಾಖಾನನ ಸುಪರ್ದಿಗೆ ಅರ್ಪಿಸಿ ತಾನೂ ಅದೇ ಮೇಳದ ಬೆನ್ನು ಹತ್ತಿ ಬಹಳ ಕಾಲ ಬದುಕಲಿಲ್ಲ.

ಮೊದಮೊದಲು ಶೀಲವಂತಿ ಪೂರ್ವರಂಗದ ರಾಧೆಯಾಗಿ ಕೃಷ್ಣನಾಗಿದ್ದ ಆಗಾಖಾನನ ಚಿತ್ತ ಚಂಚಲಗೊಳಿಸಿದಳು. ಆಮೇಲೆ ರಾಧೆ ಇಡೀ ಮೇಳದಲ್ಲೇ ಮುಖ್ಯ ಹೆಸರು ಪಡೆದು ಉಡಿತುಂಬ ಪ್ರೇಕ್ಷಕರ ಬಹುಮಾನ ಪಡೆಯುವಂತಾದಳು. ಬರಬರುತ್ತ ಅವಳ ಪಾತ್ರವೇ ಮುಖ್ಯವಾಗಿ ಆಗಾಖಾನನ ಪಾತ್ರ ಮಸಕಾಯಿತು. ಕೊನೆಗೊಮ್ಮೆ ಶಿಷ್ಯಳಿಂದ ಪರಾಜಿತನಾದೆನೆಂದು ಒಪ್ಪಿಕೊಂಡ ಆಗಾಖಾನ್ “ಗುರುದಕ್ಷಿಣೆ ಯಾಗಿ ನನಗೇನು ಕೊಡುತ್ತಿ?” ಅಂದ.

“ನಿಮ್ಮಂಥ ದೊಡ್ಡವರಿಗೆ ನಾನೇನು ಕೊಡಬಲ್ಲೆ? ಆದರೂ ಕೈಲಾದ್ದನ್ನು ಕೊಡ್ತೀನಿ” ಎಂದಳು.

“ನನಗ ನಿನ್ನನ್ನ, ಕೊಡು. ಅದಿಲ್ಲ ಅಂದ್ರ ಏನೂ ಬ್ಯಾಡ”

-ಅಂದ. ಶೀಲವಂತಿ ಇದನ್ನು ನಿರೀಕ್ಷಿಸಿರಲಿಲ್ಲ. ಆದರೆ ಗುರುವಿನ ಆಸೆಯನ್ನ ಈಡೇರಿಸಲು ಬೇರೆ ದಾರಿ ಕಾಣದೆ ಶೀಲವಂತಿ ಖಾನನಿಂದ ಚಾಂದಬೀ ಎಂಬ ಹೊಸ ಹೆಸರು ಪಡೆದು ಅವನ ಮಡದಿಯಾದಳು. ಮುಂದೆ ಖಾನನ ಆಟದಲ್ಲಿ ಸತ್ಯಭಾಮೆಯ ಪಾತ್ರವಹಿಸಿ ಬಹಳ ಪ್ರಸಿದ್ಧಿ ಪಡೆದಳು. ಅವಳ ಸಂಗೀತದಿಂದಾಗಿ ಕನ್ನಡವೇ ಬಾರದ ಮರಾಠೀ ಭಾಷೆಯ ಮುಂಬೈ ನಗರದಲ್ಲೂ ಅವಳ ಪಾರಿಜಾತದ ಪ್ರಯೋಗಗಳು ಜನಪ್ರಿಯವಾದವು. ಅವಳ ಸಂಗೀತ, ಅಭಿನಯ, ಸಂಭಾಷಣೆಗಳಿಂದಾಗಿ ಬೇರೆ ಪ್ರಾಂತ್ಯಗಳಲ್ಲೂ ಅವಳ ಪಾರಿಜಾತದ ಪ್ರಯೋಗಗಳಾದವು. ಮುಂದೊಮ್ಮೆ ಕಲ್ಲೊಳ್ಳಿಯಲ್ಲೇ ಆಟವಾಡುವ ಪ್ರಸಂಗ ಬಂದಿತು.

(ಡಾ. ಚಂದ್ರಶೇಖರ ಕಂಬಾರ)

ಕಲ್ಲೋಳಿಯ ದೇಶಪಾಂಡೆ ವಾಮನರಾಯರು, ಭಾರೀ ಪಂಡಿತರು. ಭಾರತ ಭಾಗವತ ಪುರಾಣಗಳನ್ನೋದಿದವರು. ಪಾರಿಜಾತ ಹ್ಯಾಗೆ ಸಂಗೀತ ರಸಿಕರ ಆಟವೋ ಹಾಗೆ ವಿದ್ವತ್ ಜನರ ಕೃತಿಯೂ ಹೌದು. ಹ್ಯಾಗೆ ದೇವರೋ ಹಾಗೇ ಭಕ್ತನೂ ಮುಖ್ಯನೆಂದು ಸತ್ಯಭಾಮೆ ಪ್ರತಿಪಾದಿಸುತ್ತಿದ್ದ ರೀತಿಯನ್ನವರು ಬಹಳ ಮೆಚ್ಚಿಕೊಂಡರು. ಕಲ್ಲೋಳಿಯ ಹನುಮಪ್ಪನ ಗುಡಿಯೆದುರು ನಡೆದ ಚಾಂದಬೀ ಆಟವನ್ನವರು ತಮ್ಮ ಶ್ರೀಮತಿಯೊಂದಿಗೆ ತದೇಕಧ್ಯಾನದಿಂದ ಬೆಳ್ಳಂಬೆಳಗು ಕೂತಲ್ಲೇ ಕೂತು ನೋಡಿದರು.

ಆಟ ಮುಗಿದು ಪ್ರೇಕ್ಷಕರಲ್ಲಿ ಕೂತಿದ್ದ ಕೃಷ್ಣನಲ್ಲಿಗೆ ಸತ್ಯಭಾಮೆ ಬಂದು ಕಾಲು ಮುಟ್ಟಿ ನಮಸ್ಕರಿಸಿ ಭಕ್ತಿಯೊಂದಿಗೆ “ಬಾ ಸ್ವಾಮಿ ಮಂದಿರಕ್ಕೆ” ಎಂದು ವಿನಯದಿಂದ ಹೇಳಿದಾಗ ದಂಪತಿಗಳು ಕಣ್ಣೀರಿನಲ್ಲಿ ಮಿಂದಿದ್ದರು. ವಾಮನರಾಯರ ಪತ್ನಿ ಅಂಬಾಬಾಯಿಯಂತೂ “ಎಷ್ಟ ಚಂದ ಹಾಡ್ತೀಯೆ ನನ್ನವ್ವಾ!’’ ಎಂದು ದೃಷ್ಟಿ ತೆಗೆದು ತೂಪಿರಿದರು. ವಾಮನ ರಾಯರು ಕೃಷ್ಣ ಸತ್ಯಭಾಮೆ ಇಬ್ಬರಿಗೂ “ಮನೆಗೆ ಬರ್ರಿ” ಎಂದು ಆಮಂತ್ರಣ ಕೊಟ್ಟರು.

ಇವರ ಆಮಂತ್ರಣವನ್ನು ಆಗಾಖಾನ್ ಒಪ್ಪಲಿಲ್ಲ. ಒಬ್ಬಳೇ ವಾಮನರಾಯರ ಮನೆಗೆ ಹೋಗುವುದೆಂದಾಯಿತು. ಕೂತ ಎಲ್ಲಾ ಮಂದಿ ಚಾಂದಬೀಯ ಹಾಡುಗಾರಿಕೆ ಅಭಿನಯಗಳನ್ನು ಮೆಚ್ಚಿ ಹೊಗಳಿಕೆಯ ಮಳೆ ಸುರಿಸಿದ್ದರು. ಆದರೆ ಅವಳ ಪಕ್ಕದಲ್ಲೇ ನಿಂತಿದ್ದ ತನ್ನ ಬಗ್ಗೆ ಯಾರೂ ಒಂದೂ ಮಾತಾಡದ ಅಸೂಯೆ ಕಾರಣವೋ ಏನೋ, ಅಂತೂ ಆಗಾಖಾನ್ ವಾಮನರಾಯರ ಮನೆಗೆ ಹೋಗಲಿಲ್ಲ. ಆದರೆ ಅಂಥ ದೊಡ್ಡವರು ವಿದ್ವಾಂಸರೆಂದು ಖ್ಯಾತರಾದ ಮತ್ತು ಅವರ ಮೆಚ್ಚುಗೆಗಾಗಿ ಆ ಭಾಗಕ್ಕೆ ಬಂದ ಎಲ್ಲ ಕಲಾವಿದರು ತಪಸ್ಸು ಮಾಡಿದಂತೆ ಹಾರೈಸುವಾಗ ತಾನಾಗಿ ಬಂದ ಈ ಭಾಗ್ಯವನ್ನು ಬಿಡಬಾರದೆಂದು ಚಾಂದಬೀ ಒಬ್ಬಳೇ ವಾಮನರಾಯರ ಮನೆಗೆ ಹೋದಳು.

ಅಲ್ಲಿ ನೋಡಿದರೆ ಆ ವಯಸ್ಸಾದ ದಂಪತಿಗಳೇ ಇವಳಿಗಿಂತ ಹೆಚ್ಚು ಸಡಗರ ಗೊಂಡರು. ಭಾಗ್ಯವೇ ನಡೆದು ಬಂದಂತೆ ಕಂಡ ಚಾಂದಬೀ ನೆಲದ ಮೇಲೆ ಕೂರುವಷ್ಟರಲ್ಲಿ ಅಂಬಾ ಬಾಯಿಯವರೇ ಅವಳನ್ನು ಕೈಹಿಡಿದು ಕುರ್ಚಿಯಲ್ಲಿ ಕೂರಿಸಿದರು, ನಿಂತೇ ಇದ್ದ ವಾಮನರಾಯರು “ಆಗಾಖಾನ್ ಬರಲಿಲ್ಲೇನು?’’ ಎಂದರು. “ನೀನ.. ಹೋಗಿ ಬಾ ಅಂತ ನನ್ನೊಬ್ಬಳನ್ನೇ ಕಳಿಸಿದರ್ರಿ”.

ಒಂದೇ ಸಮ ಚಾಂದಬೀಯ ಮುಖವನ್ನೇ ಮಂದಹಾಸದಿಂದ ನೋಡುತ್ತಿದ್ದ ಅಂಬಾಬಾಯಿ ಚಾಂದಬೀಯ ಬಳಿಗೆ ಹೋಗಿ, ಅವಳ ಕೈಹಿಡಿದು `ಇಲ್ಲಿ ಬಾʼ ಎಂದು ಸನ್ನೆ ಮಾಡಿ ಇನ್ನೊಂದು ರೂಮಿಗೆ ಕರೆದೊಯ್ದಳು. ಸೊಥಾ ವಾಮನರಾಯರಿಗೂ ಆಶ್ಚರ್ಯವಾಯಿತು. ಪ್ರಶ್ನಿಸುವಂತೆ ಮುಖ ಸಿಂಡರಿಸಿ ಇನ್ನಿಬ್ಬರು ಮಹಿಳೆಯರೂ ಇವರು ಕಣ್ಮರೆಯಾದ ಕೋಣೆಯತ್ತಲೇ ನೋಡುತ್ತ ನಿಂತರು.

ಒಳಗೆ ಹೋದವಳೇ ಅಂಬಾಬಾಯಿ ಅಕ್ಕರೆಯಿಂದ ಮೆಲ್ಲಗೆ ಚಾಂದಬೀಯ ಕಿವಿಯಲ್ಲಿ ಕೇಳಿದಳು:
“ಮುಟ್ಟು ನಿಂತು ಎಷ್ಟು ದಿನ ಆಯ್ತು ಮಗಳೆ?’’

“ಯಾಡ್ಡ ತಿಂಗಳಾತ್ರಿ ಎವ್ವ”.

ಮುದುಕಿ ಚಾಂದಬೀಯ ಎರಡೂ ಕೆನ್ನೆಗಳನ್ನು ಮೆಚ್ಚುಗೆಯಿಂದ ಜಿಗುಟಿ ಅವಳ ಗರ್ಭವನ್ನೆ ತೋರಿಸುತ್ತ ಅವಳ ಕಿವಿಯಲ್ಲಿ,
“ಸಾಕ್ಷಾತ್ ಕೃಷ್ಣ ಪರಮಾತ್ಮ ನಿನ್ನ ಗರ್ಭದಾಗ ಮೂಡ್ಯಾನಲ್ಲ ನನ್ನವ್ವ! ಎಂಥಾ ಪುಣ್ಯವಂತಿ!’’
-ಎಂದು ಎರಡೂ ಗಲ್ಲ ಮುಟ್ಟಿತಟ್ಟಿ ಲಟಿಕೆ ಮುರಿದು ದೃಷ್ಟಿ ನಿವಾರಿಸಿ ಮೂಲೆಗೆ ತೂ ತೂ ಎಂದುಗುಳಿ ಹೊರಕ್ಕೆ ಕರೆತಂದಳು. ನಿಂತಿದ್ದ ವಾಮನರಾಯರಿಗೂ ನಿಂತ ಇನ್ನಿಬ್ಬರು ಮಹಿಳೆಯರಿಗೂ ಗುಟ್ಟು ಅಂದಾಜಾಗಿ ಹೊಳಪುಳ್ಳ ಕಣ್ಣುಗಳಿಂದ ಪರಸ್ಪರರನ್ನು ನೋಡಿ ಮುಗುಳು ನಕ್ಕರು.

ಥೇಟ್ ತಮ್ಮ ಮಗಳಿಗೇ ಮಾಡಿದಂತೆ ಚಾಂದಬೀಗೆ ಆ ದಿನ ಚೊಚ್ಚಿಲು ಬಸಿರಿಯ ಊಟ ಮಾಡಿಸಿ, ಸೀರೆ ಉಡಿಸಿ, ತೌರು ಮನೆಯ ಉಡಿತುಂಬಿ ಸದಾಶಯಗಳೊಂದಿಗೆ ಹೃತ್ಪೂರ್ವಕವಾಗಿ ಬೀಳ್ಕೊಟ್ಟರು. ಅಂಬಾಬಾಯಿ ಬಾಲಕೃಷ್ಣನ ಲೀಲೆಯಿರುವ ಒಂದು ಕ್ಯಾಲೆಂಡರನ್ನೂ ಕೊಟ್ಟಳು.

ದೇಶಪಾಂಡೆ ಅವರ ಮನೆಯಿಂದ ಖಾನ್ ಇದ್ದ ಸ್ಥಳಕ್ಕೆ ತಲುಪುವತನಕ ಚಾಂದಬೀ ಭೂಮಿಯ ಮೇಲೆ ಕಾಲೂರಲೇ ಇಲ್ಲ. ಕ್ಷಣಕ್ಕೊಮ್ಮೆ ಗರ್ಭವ ಮುಟ್ಟಿ ನೋಡಿಕೊಳ್ಳುತ್ತ ಪ್ರತಿಸಲವೂ ಹೊಸ ಹೊಸದಾಗಿ ಕೃಷ್ಣನ ತಾಯಿ ಯಶೋಧೆಯಾಗಿ ಕನಸು ಕಾಣತೊಡಗಿದಳು. ಖಾನನ ಬಳಿಗೆ ಹೋದೊಡನೆ ದೇಶಪಾಂಡೆ ದಂಪತಿಗಳ ಪ್ರೀತಿ, ಗೌರವಾದರಗಳನ್ನು ಹತ್ತು ಸಲ ಹೇಳಿದಳು. ಬಸಿರಾದ ವಿಷಯವನ್ನು ಹತ್ತು ಬಾರಿ ಹೇಳಿದಳು. ಪ್ರತಿಯೊಂದು ಸಲವೂ ಇದೇ ಮೊದಲನೇ ಸಲವೆಂಬಂತೆ ಪ್ರತಿಸಲವೂ ಹೊಸ ಹೊಸ ವಿವರಗಳೊಂದಿಗೆ ಹೇಳಿದಳು. ಇನ್ನೂ ಎಷ್ಟು ಬಾರಿ ಕೇಳಬೇಕಿತ್ತೋ ಗಾಡಿಯಲ್ಲಿ ಆಗಾಖಾನ್ ನಿದ್ದೆ ಬಂದು ಮಲಗಿ ಬಿಟ್ಟ. ಈಗ ಇವಳು ಗರ್ಭದಲ್ಲಿಯ ಕೃಷ್ಣನ ಜೊತೆಗೆ ಯಶೋಧೆಯ ಕನಸಿಗಿಳಿದು ಅವನ ತುಂಟಾಟಗಳೊಂದಿಗೆ ವಿನೋದಕ್ಕಿಳಿದಳು.

ಇದು ಬಹಳ ದಿನ ನಡೆಯಲಿಲ್ಲ. ಅವಳು ಗರ್ಭ ಧರಿಸಿದ್ದು ಆಗಾಖಾನನ ಬಂಜೆ ಪತ್ನಿಗೆ ಸಹಿಸಲಾಗಲಿಲ್ಲ. ಕಟಕಟ ಹಲ್ಲು ಕಡಿದು ಗಂಡನನ್ನು ನೂರಾರು ಪರಿ ಬೈದು, ಅಣಕಿಸಿ, ಜರಿದು ವಕ್ರ ಜಗಳ ಹೂಡಿ ದಿನಾ ಬೆಳಗು-ರಾತ್ರಿ ಮನೆಯನ್ನು ರಾಡಿ ರಂಪ ಮಾಡಿ ಕಾಳಗದ ಕಣವಾಗಿಸಿದಳು. ಖಾನ ಸಾಹೇಬನೋ ಮಡದಿಗೆ ಪರಿಪರಿಯಾಗಿ ತಿಳಿಹೇಳಲು ಪ್ರಯತ್ನಿಸಿದ. ಅವಳಿಗಾದ ಮಗು ನಿನಗೂ ಮಗುವಲ್ಲವೆ? – ಎಂದು ಬುದ್ಧಿ ಹೇಳಿದ. ಆದರೆ ಮಡದಿಯ ಮನಸ್ಸಿನಲ್ಲಿ ಈ ಮಾತು ನಾಟಲೇ ಇಲ್ಲ. ಅವನ ಮಾತು ಕಾದ ಕಲ್ಲಿನ ಮೇಲೆ ಬೀಜ ಚೆಲ್ಲಿದಂತಾಗಿ ಹುರುಪಳಿಸಿ ಹೋಯಿತು. ಮೊದಲೇ ಇವಳ ರೂಪಕ್ಕೆ ಮರುಳಾದ ಸಾಬಿ ಮುಂದೆ ಮಗನನ್ನು ಕೊಡಲಿರುವ ಈ ಸೂಳೆಯ ಮುಂದೆ ನಾನು ನಿಲ್ಲುವುದಕ್ಕೆ ಬಿಟ್ಟಾನೆಯೆ? ಅಯ್ಯೊ, ಒಂದು ಹೆಜ್ಜೆ ಇಡಲಿಕ್ಕೂ ಅನುಕೂಲವಿಲ್ಲದ ಬರಡು ಭೂಮಿಯಲ್ಲಿ ನಾನು ಬದುಕಿರೋದುಂಟೆ? ಮೊದಲೇ ಹೆಜ್ಜೆಗೊಂದು ಹೊಸ ನಲುಗು ಮಾಡುವ ವಯ್ಯಾರಿಯ ಮುಂದೆ ಹಳಸಿ ನಾರುವ ನಾನು ನಿಲ್ಲಬಲ್ಲೆನೆ? ಬಸ್‌ಸ್ಟ್ಯಾಂಡುಗಳಲ್ಲಿ ಭಿಕ್ಷೆ ಬೇಡಬೇಕಾಗಿ ಬರಬಹುದೆಂದು ಭಾವಿಸಿ ಗರ್ಭಪಾತವಾಗುವ ಮದ್ದನ್ನು ಊಟದಲ್ಲಿ ಬೆರೆಸಿ ಕೊಟ್ಟಳು. ಮಾರನೇ ಬೆಳಿಗ್ಗೆ ಗರ್ಭಪಾತವಾಗಿ ಚಾಂದಬೀ ದೊಡ್ಡ ಆಘಾತದಲ್ಲಿ ಮೂರ್ಛೆ ಹೋದವಳು ಬಹಳ ಹೊತ್ತು ಏಳಲಿಲ್ಲ. ಜೀವ ಹೋದರೆ ಹೋಗಲೆಂದು ಇವಳೂ ಸುಮ್ಮನಿದ್ದಳು.

ಆದರೆ ಎಚ್ಚತ್ತ ಮೇಲೆ ಎಲ್ಲ ಮತಲಬಿಗಳು ಅರ್ಥವಾಗಿ ಇನ್ನಿಲ್ಲಿ ಒಂದು ಕ್ಷಣವೂ ಇರಲಾರೆನೆಂದು ಚಾಂದಬೀ ತನ್ನ ಸೀರೆ ಕುಬಸಗಳನ್ನು ಅಂಬಾಬಾಯಿ ಕೊಟ್ಟ ಕ್ಯಾಲೆಂಡರ್ ಸಮೇತ ಕೈಚೀಲದಲ್ಲಿ ತುಂಬಿಕೊಂಡು ಹೊರಟಳು. ದಾರಿಗೆ ಅಡ್ಡಬಂದ ಖಾನ್ ಸಾಹೇಬ “ಸಿಟ್ಟಿನ ಕೈಗೆ ಬುದ್ಧಿ ಕೊಡಬೇಡವೆ ನಿನಗ ಕೈ ಮುಗೀತೇನಿರು” ಎಂದು ಅಂಗಲಾಚಿದ. ಚಾಂದಬೀ ತಿರಸ್ಕಾರದಿಂದ, ಅಷ್ಟೇ ವೀರಾವೇಶದಿಂದ ಅವನ ಮುಖದ ಮೇಲೆ ಉಗಿದು ಹೊರನಡೆದಳು.

ಆಮೇಲೆ ಚಾಂದಬೀ ಸೀದಾ ಹೋದದ್ದು ಕಲ್ಲೋಳಿಯ ದೇಶಪಾಂಡೆ ವಾಮನ ರಾಯರ ಮನೆಗೆ. ಹೋದವಳೇ ಅಂಬಾಬಾಯಿಯನ್ನು ತಬ್ಬಿಕೊಂಡು,
“ನೀನು ಆಶೀರ್ವದಿಸಿದ ಕೃಷ್ಣ ಎತ್ತಿಕೊಂಬಷ್ಟರೊಳಗ ಕೈಯಿಂದ ಜಾರಿ ಬಿದ್ದ ಎವ್ವಾ!’’
ಎಂದು ಮಡುಗಟ್ಟಿದ ಕಣ್ಣೀರನ್ನೆಲ್ಲಾ ಅತ್ತು ಬಿಟ್ಟಳು. ಎಲ್ಲಾ ವಿಷಯ ತಿಳಿದ ಮೇಲೆ ಅಂಬಾಬಾಯಿ ಹೇಳಿದಳು:

ಕೂತ ಎಲ್ಲಾ ಮಂದಿ ಚಾಂದಬೀಯ ಹಾಡುಗಾರಿಕೆ ಅಭಿನಯಗಳನ್ನು ಮೆಚ್ಚಿ ಹೊಗಳಿಕೆಯ ಮಳೆ ಸುರಿಸಿದ್ದರು. ಆದರೆ ಅವಳ ಪಕ್ಕದಲ್ಲೇ ನಿಂತಿದ್ದ ತನ್ನ ಬಗ್ಗೆ ಯಾರೂ ಒಂದೂ ಮಾತಾಡದ ಅಸೂಯೆ ಕಾರಣವೋ ಏನೋ, ಅಂತೂ ಆಗಾಖಾನ್ ವಾಮನರಾಯರ ಮನೆಗೆ ಹೋಗಲಿಲ್ಲ.

“ಕೃಷ್ಣ ಹುಸಿದೇವನಲ್ಲ ಮಗಳ, ಅಳಬೇಡ. ನಿನ್ನ ಗರ್ಭ ನಿನ್ನ ಸಂಕಲ್ಪ. ಇದರ ಭಗವಂತನಾದ ಕೃಷ್ಣನ ಸಂಕಲ್ಪ ಬ್ಯಾರೇ ಇರತಾವಲ್ಲ? ನೀನು ಸತ್ಯಭಾಮೆಯಾಗಿ ಕರೆದಾಗ ಬಂದನ?’’
“ಇಲ್ಲ”

ಆದರ ತಾನಾಗಿ ಕೊರವಂಜಿಯಾಗಿ ಬಂದನಲ್ಲ! ನಿನ್ನ ಆಸೆ ಪಕ್ವ ಆದ ಮ್ಯಾಲ, ನಿನ್ನ ಆತ್ಮದ ಕತ್ತಲ ಕಳೆದು ಬೆಳ್ಳಂಬೆಳಕಾದಾಗ, ಭಕ್ತಿ ಪಕ್ವ ಆದಾಗ ದರ್ಶನ ಕೊಟ್ಟ! ಹೌಂದಲ್ಲೊ?’’

“ಹೌಂದ್ರೆವ್ವ!’’

“ಇಲ್ಲೂ ಅದ ಲೆಕ್ಕ, ನಿನ್ನ ಗರ್ಭ ತೋಡಿದವನು ಇನ್ಯಾವುದೋ ರೂಪದಾಗ ಬಂದು ನಿನಗ “ಅವ್ವಾ” ಅಂದರಾಯ್ತೊ ಇಲ್ಲೊ?’’
ಬೆಂಕಿಯಲ್ಲಿ ಸುಡುತ್ತಿದ್ದ ಮನಸ್ಸಿಗೆ ಕೊಂಚ ಶಾಂತಿ ಸಿಕ್ಕಂತಾಯ್ತು.

ವಾಮನರಾಯರ ಬದುಕಿನಲ್ಲಿ ಅದು ಅವರ ಇಳಿ ಹೊತ್ತು, ಸೂರ್ಯ ಪಡುವಣಕ್ಕೆ ಒಲಿದು ಇಳಿಯತೊಡಗಿದ್ದ ಕಾಲ, ಅವರ ದೇಹಕ್ಕಾಗಲೇ ಅವರ ಒಂದುವರೆ ಪಟ್ಟು ನೆರಳು ಬೀಳತೊಡಗಿತ್ತು. ಹುಟ್ಟಿದ ಮಕ್ಕಳು ಮರಿ ಮಾಡಿಕೊಂಡು ಒಂದೊಂದು ನಿಟ್ಟಿನಲ್ಲಿ ನೆಮ್ಮದಿಯ ಬದುಕು ಸಾಗಿಸುತ್ತಿದ್ದರು. ಅವರಿಗೆ ಈ ದಂಪತಿಗಳ ಅಗತ್ಯವಿರಲಿಲ್ಲ. ಇವರ ಮನರಂಜನೆಗಾಗಿ ಆಗಾಗ ಕುಟುಂಬ ಸಮೇತ ಬಂದು ಕೆಲದಿನ ತಮ್ಮ ಹಾಗೂ ದಂಪತಿಗಳ ಸಮಯಗಳನ್ನು ಸಮನ್ವಯಗೊಳಿಸಿ, ಸಂತೋಷಪಡಿಸಿ ಹೋಗುತ್ತಿದ್ದರು. ಪಾರಿಜಾತದ ಆಟವೆಂದರೆ ಹುಟ್ಟಾ ಆಸಕ್ತಿ ವಾಮನರಾಯರಿಗೆ. ಆಗಾಖಾನ್ ತಂಡದಲ್ಲಿ ಹಾಡು ನೃತ್ಯಗಳ ಭಾಗವನ್ನು ಚೆನ್ನಾಗಿ ನಿಭಾಯಿಸುವ ಕಲಾವಿದರಿದ್ದರು. ಚೆನ್ನಾಗಿ ಅಂದರೆ ಪ್ರೇಕ್ಷಕರು ಬಯಸಿದರೆ ತಮ್ಮ ಅಭಿನಯವನ್ನು ಹಿಗ್ಗಿಸಿ ಕಾಂತಾ ಸಮ್ಮಿತಿಯ ಬೆಚ್ಚಗಿನ ಸುಖವನ್ನು ನೀಡಬಲ್ಲವರಾಗಿದ್ದರು. ಆದರೆ ಕಲಾವಿದರಲ್ಲಿ ಶಾಸ್ತ್ರ ರೀತ್ಯಾ ಕೆಲವು ಕೊರತೆಗಳಿದ್ದವು. ಕಲಾವಿದರ್ಯಾರೂ ಶಾಸ್ತ್ರಗಳನ್ನು ಓದಿದವರಲ್ಲ. ಪಾರಿಜಾತವು ಕೃಷ್ಣನ ಚರಿತ್ರೆಯನ್ನು ಕುರಿತದ್ದಾದರೂ ಅವನ ಭಾಗವತ, ಭಗವದ್ಗೀತೆಯಲ್ಲಿ ಬರುವ ಕೆಲವು ಸೂಕ್ಷ್ಮಾತಿಸೂಕ್ಷ್ಮ ಸಂಗತಿಗಳನ್ನು ತಿಳಿದಿರಬೇಕಾಗುತ್ತದೆ, ಕೃಷ್ಣನೇ ಕೊರವಂಜಿಯ ವೇಷಧರಿಸಿ ಬಂದಾಗ ದೇವ ಮತ್ತು ಭಕ್ತ ಇವರ ಮಧ್ಯದ ಸೂಕ್ಷ್ಮ ಸಂಬಂಧದ ಬಗ್ಗೆ ಪ್ರೇಕ್ಷಕರು ಪ್ರಶ್ನೆ ಕೇಳಬಹುದು, ಉತ್ತರ ಗೊತ್ತಿಲ್ಲದಿದ್ದರೆ ಕಲಾವಿದರು ತಬ್ಬಿಬ್ಬಾಗಿ ರಸಾಭಾಸವಾಗಿ, ಅವಮಾನಿತರಾದರೆ ಆಟವೇ ನಿಲ್ಲುವ ಸಂಭವವಿರುತ್ತದೆ. ಇದಕ್ಕೆಲ್ಲ ಸಿದ್ಧರಾಗಿರಬೇಕು ಕಲಾವಿದರು, ಅಂಥ ಪೂರ್ವತಯಾರಿ ಆಗಾಖಾನನಿಗಾಗಲಿ, ಉಳಿದ ಕಲಾವಿದರಿಗಾಗಲಿ ಇರಲಿಲ್ಲ. ಸಾಮಾನ್ಯವಾಗಿ ಪಾರಿಜಾತದ ತಂಡದಲ್ಲಿ ಇಂಥ ಶಾಸ್ತ್ರಬಲ್ಲ ಒಬ್ಬನಾದರೂ ನಟ ಇಲ್ಲವೆ ಭಾಗವತನಾದರೂ ಇರುತ್ತಾನೆ. ಅಂಥ ಅರ್ಹತೆ ವಾಮನರಾಯರಿಗಿತ್ತು. ಈಗ ಹ್ಯಾಗೂ ಬದುಕಿದ್ದಾಗಲೇ ಕತೆಯಾಗಿದ್ದ ನಟಿ ಚಾಂದಬೀ ತಾನಾಗಿ ಮನೆಗೆ ಬಂದಿದ್ದಳು. ಅವಳನ್ನಿಟ್ಟುಕೊಂಡು ತನ್ನ ಭಾಗವಂತಿಕೆಯಲ್ಲಿ ತಾನ್ಯಾಕೆ ಒಂದು ತಂಡ ಕಟ್ಟಬಾರದೆಂದು ಅನಿಸಿತು. ಅದಕ್ಕೆ ಚಾಂದಬೀಯೂ ಒಪ್ಪಿಕೊಂಡಳು.

ಒಂದು ತಿಂಗಳ ಅವಧಿಯಲ್ಲೇ ವಿಶ್ರಾಂತ ನಟರಲ್ಲಿ ಕಲಿಯುತ್ತಿದ್ದ ಶಿಷ್ಯರನ್ನ ಸೇರಿಸಿ ತಾಲೀಮು ಸುರುಮಾಡೇ ಬಿಟ್ಟರು. ಚಾಂದಬೀ ಇದ್ದುದರಿಂದ ಸಂಗೀತದ ಸಮಸ್ಯೆಯಾಗಲಿಲ್ಲ. ಬಾಗಿಲಿಗೆ ಬಂದ ಯುಗಾದಿಯ ದಿನವೇ ಸದರಿ ಹೊಸ ತಂಡ ಕಲ್ಲೋಳಿಯ ಹನುಮಪ್ಪನ ಎದುರು ಅಟ್ಟ ಏರಿತು! ಚಾಂದಬೀ ಮತ್ತೆ ಪಾರಿಜಾತದಲ್ಲಿ ತೊಡಗಿಸಿಕೊಂಡದ್ದಕ್ಕೆ ಎರಡು ಕಾರಣಗಳಿದ್ದವು: ಹಿಂದೆಂದೋ ತೀರಿಹೋದ ತಾಯಿಯನ್ನು ಬಿಟ್ಟರೆ ತಂದೆತಾಯಿಗಳ ಸಮಾನರಾದ ವಾಮನರಾಯರು ಮತ್ತವರ ಶ್ರೀಮತಿ ಅಂಬಾಬಾಯಿ ಅವರ ಆಸರೆ ಸಿಕ್ಕದ್ದು ಒಂದಾದರೆ, ಖಾನನ ಮಡದಿಯಿಂದಾದ ಗರ್ಭಪಾತದಿಂದಾಗಿ ಅಪಾರ ನಿಧಿಯನ್ನು ಕಳೆದುಕೊಂಡ ಹಳಹಳಿಯನ್ನು ಕೊಂಚಕಾಲ ಮರೆಯುತ್ತಿದ್ದಳು ಚಾಂದಬೀ, ಅದರಲ್ಲೂ
“ತೂಗೀರೆ ಕಂದನ
ತೂಗೀರೆ ಕೃಷ್ಣನ…’’
ಹಾಡು ಹೇಳುವಾಗಂತೂ ಅಂಬಾಬಾಯಿಯವರು ಹೇಳಿದ ಆಶಾಸುಖವನ್ನು ಅನುಭವಿಸುತ್ತಿದ್ದಳು!

ಕೆಲವು ವರ್ಷ ಮೈಸೂರಿನಿಂದ ಮುಂಬೈವರೆಗೆ ತಂಡದ ಜನಪ್ರಿಯತೆಯನ್ನು ತಡೆಯುವವರೇ ಇರಲಿಲ್ಲ. ಚಾಂದಬೀಯಂತೂ ಕಲಾಲೋಕದ ಸರಸ್ವತಿಯಂತೆ ಶೋಭಿಸಿದಳು. ಪ್ರಶಸ್ತಿ ಬಹುಮಾನಗಳಿರಲಿ, ಆಟ ಮುಗಿದೊಡನೆ ಆಕೆಯ ಕಾಲು ಮುಟ್ಟಿ ನಮಸ್ಕರಿಸುವ ಅಭಿಮಾನಿಗಳನ್ನು ನಿಯಂತ್ರಿಸುವುದು ಕಷ್ಟವಾಗುತ್ತಿತ್ತು. ಇನ್ನೇನು ಭಾಗವತ ವಾಮನರಾಯರೇ ದಣಿದರೆಂಬಲ್ಲಿ ಚಾಂದಬೀಗೂ ದಣಿದ ಅನುಭವವಾಯಿತು. ಮಾನಸಿಕವಾಗಿ ತಂಡದ ಮುಖ್ಯರಿಬ್ಬರೂ ದಣಿದಿರುವುದಕ್ಕೂ ಬಲದೇವ ನಾಯಕ ಬಂದು ಅವಳನ್ನು ಮದುವೆಯಾಗಿ ಕರೆದೊಯ್ದುದಕ್ಕೂ ಸರಿಹೋಯ್ತು, ಅವಳ ಆಸೆಯೂ ಈಡೇರಿತು:

ಅಂತೂ ದೇಶಪಾಂಡೆ ದಂಪತಿಗಳ ಆಶೀರ್ವಾದ ಪಡೆದು ನಲವತ್ತರ ದಶಕದ ವಯಸ್ಸಿನ ಹೊಸ ಸೊಸೆಯಾಗಿ, ಬಲಿತ ಗಂಡನ ಮಡದಿಯಾಗಿ ಅವನ ಮನೆ ತುಂಬುವುದಕ್ಕೆ ಚಾಂದಬೀ ಗಂಡನ ಕಾರಿನಲ್ಲಿ ಕೂತಳು. ಗಂಡಿನ ಸಹವಾಸ ಅವಳಿಗೂ ಹೆಣ್ಣಿನ ಸಹವಾಸ ಅವನಿಗೂ ಹೊಸದಲ್ಲವಾದರೂ ಇಬ್ಬರಲ್ಲೂ ಹೊಸ ಮದುಮಕ್ಕಳ ಉತ್ಸಾಹ, ಸಡಗರವಿತ್ತು. ಇಬ್ಬರೂ ಹೊಸತನದ ನಾಚಿಕೆಯನ್ನೂ ಕೂಡ ಅನುಭವಿಸಿದರು. ಆಕೆ ಮೊದಲು ಕಾರಿನಲ್ಲಿ ಕೂತು ಆಮೇಲೆ ಬಲದೇವ ನಾಯಕ ಬಂದು ಅವಳ ಪಕ್ಕದಲ್ಲಿ ಕೂತ. ದುಂಡನೆಯ ತಾಮ್ರದ ಚೊಂಬಿನಂತೆ ತುಂಬಿಕೊಂಡ ಮೊಲೆಗಳು, ಸಣ್ಣ ನಡು, ಜಿಂಕೆಯಂಥ ದೊಡ್ಡ ಕಣ್ಣುಗಳು ಸಂಪಿಗೆ ಎಸಳು ಮೂಗು, ನಕ್ಕಾಗ ಕುಳಿಬೀಳುವ ಮೃದುವಾದ ಕೆನ್ನೆಗಳು. ಗದ್ದದ ಮೇಲೆ ಸೂಕ್ಷ್ಮವಾಗಿ ಹಚ್ಚೆ ಹಾಕಿದ ಚಿಕ್ಕ ಮಚ್ಚೆ… ಕಾರು ಊರು ದಾಟಿದೊಡನೆ ಬಲದೇವ ಮಡದಿಯ ಬಳಿಗೆ ಸರಿದು ಅವಳ ಮೈ ತಗಲುವಂತೆ ಕೂತ, ಚಾಂದಬೀ ನಾಚಿ ನಾಯ್ಕನ ಕಡೆಗೆ ಓರೆ ನೋಟ ಬೀರಿ ಮುಗುಳು ನಕ್ಕಳು. ಇದರಿಂದ ಸ್ಫೂರ್ತಿಗೊಂಡ ನಾಯಕ ಅವಳನ್ನು ಎಡಗೈಯಿಂದ ಅಮುಕಿ ತನ್ನ ದೇಹಕ್ಕೆ ಅಂಟಿಸಿಕೊಂಡು ಕೂತ. ಇಬ್ಬರೂ ಮಾತಾಡಲಿಲ್ಲ. ಆದರೆ ಇಬ್ಬರ ಕಣ್ಣುಗಳೂ ವಾಚಾಳಿಗಳಾಗಿ ಹರಟೆ ಹೊಡೆಯುತ್ತಿದ್ದವು.

ಆಸೆ, ಆಸಕ್ತಿ, ಪ್ರೀತಿಗಳನ್ನು ಅನುಭವಿಸುತ್ತ ತಮ್ಮೂರಿಗೆ ಬಂದರೆ ಬಲದೇವ ನಾಯ್ಕನಿಗೆ ಆಘಾತ ಕಾದಿತ್ತು: ನಾಯಕ ಚಾಂದಬೀಯನ್ನು ಕರೆತರುವ ಸುದ್ದಿ ಕಾವೇರಮ್ಮನ ತೌರಿಗೆ ತಾಗಿ “ತಮ್ಮ ಮಗಳಿದ್ದ ಮನೆಯಲ್ಲಿ ಬಯಲಾಟದ ನಾಚವಾಲಿಗೆ ಇರಲು ಅವಕಾಶ ಕೊಡಲಾರೆವೆಂದು ಅಯ್ಯಾ ಸರಕಾರದವರು ವಾಡೆ ಮನೆಗೆ ದೊಡ್ಡ ಕೀಲಿ ಜಡಿದು ಹೋಗಿದ್ದರು! ಇದನ್ನು ತಿಳಿಸುವುದಕ್ಕೆ ತಮ್ಮ ಮನೆವಾಳ್ತೆಯನ್ನು ನೋಡಿಕೊಳ್ಳುವ ಗಜನಿಂಗವ್ವ “ನಾಯ್ಕರೇನಂತಾರೋ” ಎಂದು ನಡುಗುತ್ತ ವಾಡೇ ಮುಂದೆಯೇ ನಿಂತಿದ್ದಳು.

ಕೀಲಿ ಮುರಿಯುವುದು, ಅದ್ಯಾಕೆ ಹಾಕಿದ್ದಾರೆಂದು ಚರ್ಚಿಸುವುದು ಈ ಸಂದರ್ಭದಲ್ಲಿ ಅವೆಲ್ಲ ಅಪ್ರಸ್ತುತವೆಂದು ಊರ ಹೊರಗಿನ ತಮ್ಮ ವಿಲಾಸಖಾನೆಗೆ ಹೊಸ ದಂಪತಿಗಳು ಗಜನಿಂಗವ್ವ ಸಮೇತ ಪ್ರಯಾಣವಾದರು. ಅದು ಬಲದೇವನಾಯಕ ತನ್ನ ವಿಲಾಸಕ್ಕೆ ಕಟ್ಟಿಸಿಕೊಂಡ ಬಂಗ್ಲೆಯಾಗಿದ್ದು ಅಲ್ಲಿಗೆ ಕಾವೇರಮ್ಮ ಒಂದು ಸಲವೂ ಬಂದಿರಲಿಲ್ಲ.

(ಕೃತಿ: ಚಾಂದಬೀ ಸರ್ಕಾರ(ಕಾದಂಬರಿ), ಲೇಖಕರು: ಡಾ. ಚಂದ್ರಶೇಖರ ಕಂಬಾರ, ಪ್ರಕಾಶ್ಕರು: ಅಂಕಿತ ಪುಸ್ತಕ, ಬೆಲೆ: 150/-)