‘ಅಸಲಿಗೆ ಇದನ್ನೇ ನಾಟಕ ಅಂದುಕೊಂಡಿದ್ದೆ. ಅಕ್ಷರ ರೂಪದಲ್ಲಿ ಇರುವಷ್ಟು ಹೊತ್ತು ಅದು ನಾಟಕವೇ. ಕೃತಿಯೇ. ಚರ್ಚಿತ ವಸ್ತುವೇ. ಆದರೆ ನಾಟಕ ಅಂದರೆ ಅಷ್ಟೇ ಅಲ್ಲ. ನಮ್ಮ ನಡುವಿನ ಮನುಷ್ಯರ ಢಾಳಾದ ಚಿತ್ರಣ ಅಕ್ಷರಗಳಲ್ಲಿ ರೂಪು ತಳೆಯುತ್ತ ಒಂದು ರೂಪು ಪಡೆಯುವುದನ್ನು ಮೊದಮೊದಲು ನಾನೂ ನಾಟಕ ಅಂತಲೇ ಅಂದುಕೊಂಡಿದ್ದೆ. ಆದರೆ ನಂತರದಲ್ಲಿ ನಾನು ಅರಿತ ಸತ್ಯ ಅಂದರೆ ಈ ಅಕ್ಷರರೂಪದ ನಾಟಕ ರಂಗದ ಮೇಲೆ ರೂಪು ತಳೆಯಬೇಕಾದ ಪೂರ್ವದಲ್ಲಿ ಒಂದು ಮಹಾನ್ ನಾಟಕದ ಅನಾವರಣ ಆಗತೊಡಗುತ್ತದೆ. ಆ ಹೊತ್ತು ಅಸಲಿಗೆ ಯಾವುದು ನಾಟಕ ಎಂಬ ಪ್ರಶ್ನೆ ಏಳಲು ಶುರುವಾಗುತ್ತದೆ.’
ಎನ್.ಸಿ. ಮಹೇಶ್‌ ಬರೆಯುವ ‘ರಂಗ ವಠಾರ’ ಅಂಕಣ

 

ಮೊದಲಾಗಿದ್ದರೆ ನನ್ನ ಮನಸ್ಸು ನಾಟಕಗಳನ್ನು ನೋಡಲು ಇನ್ನಿಲ್ಲದ ಹಾಗೆ ತುಡಿಯುತ್ತಿತ್ತು. ಆದರೆ ಈಚೆಗೆ ಸಿನಿಮಾಗಳ ಕಡೆಗೆ ನನ್ನ ಧ್ಯಾನ ಹೆಚ್ಚು ಹೊರಳಿದೆ. ಒಳ್ಳೆ ಸಿನಿಮಾಗಳು ಬಂದಾಗ ನೋಡದೆ ಮಿಸ್ ಮಾಡಿಕೊಳ್ಳಬಾರದು ಎನ್ನುವುದು ನನ್ನ ಸಿದ್ಧಾಂತ. ನಾಟಕದ ಗ್ರಾಮರ್ ಬೇರೆ, ಸಿನಿಮಾದ್ದು ಬೇರೆ; ಅವುಗಳನ್ನ ನೋಡುವ ಮತ್ತು ನೋಡಬೇಕಾದ ಕ್ರಮವೂ ಬೇರೆ. ಯಾವುದರ ಪರ ನನ್ನ ಒಲವು ಹೆಚ್ಚು ಎಂದು ಈ ಮೊದಲು ತಾತ್ವಿಕವಾಗಿ ಕೇಳಿಕೊಳ್ಳುತ್ತಿದ್ದೆ. ಈಗ ಆ ಯಾವ ಗೋಜಿಗೂ ಹೋಗದೆ ಯಾವುದೇ ಸಿನಿಮಾದ ಬಗ್ಗೆ ನನಗೆ ತಿಳಿದ ವಸ್ತುನಿಷ್ಠವಾದಿಗಳು ಒಳ್ಳೆಯ ಪ್ರತಿಕ್ರಿಯೆ ಕೊಟ್ಟಾಗ ಅದನ್ನು ನೋಡಲು ಸಮಯ ಹೊಂದಿಸಿಕೊಳ್ಳುತ್ತೇನೆ. ನಾಟಕ ಲೈವ್, ಅದರ ವಸ್ತುನಿರ್ವಹಣೆ ಸಿನಿಮಾಗಿಂತ ಬೇರೆ ಅನ್ನುವುದು ಬಿಟ್ಟರೆ ಬದುಕನ್ನು ದರ್ಶಿಸುವ ಬಗೆಯನ್ನ ಈ ಎರಡೂ ಮಾಧ್ಯಮಗಳು ಹೇಗೆ ನಿರ್ವಹಿಸುತ್ತಿವೆ ಎಂದು ವಿಭಾಗ ಮಾಡಿಕೊಂಡು ನೋಡಲು ಯಾವ ತೊಡಕೂ ಇಲ್ಲ.

ಮಿಗಿಲಾಗಿ ಮೊದಲಿಂದ ನಾಟಕ ರಂಗದವರ ಜೊತೆ ಹೆಚ್ಚಿಗೇ ಒಡನಾಡುತ್ತಿರುವ ನನಗೆ ಅವರು ಕೆಲಸ ಮಾಡುವ ಕ್ರಮ, ಇರಿಸಿಕೊಂಡಿರುವ ಸಿದ್ಧಾಂತಗಳು, ಜಗಳಗಳ ಬಗೆಗೆ ಗೊತ್ತಿವೆ. ಇದು ಸಿನಿಮಾರಂಗದಲ್ಲಿ ಇಲ್ಲ ಎಂದಲ್ಲ. ಅಲ್ಲಿ ದೊಡ್ಡ ಪ್ರಮಾಣದಲ್ಲೇ ಇರಬಹುದು. ಆದರೆ ಆ ರಂಗಕ್ಕೆ ನನಗೆ ಸುಲಭದ ಅಕ್ಸೆಸ್ ಇಲ್ಲ. ಹಾಗಾಗಿ ಒಂದು ನಾಟಕವನ್ನ ಪ್ರದರ್ಶಿಸುವ ಆ ತಂಡದವರ ಬಗ್ಗೆ ತಿಳಿದೂ ತುಂಬ ಮುಕ್ತವಾಗಿ ನಾಟಕ ನೋಡಲು ಆಗುವುದಿಲ್ಲ.

ಆದರೆ ಸಿನಿಮಾವನ್ನ ಹಾಗೆ ನೋಡಬಹುದು. ನೋಡಿ ಕಡೆಗೆ ಚೆನ್ನಾಗಿದೆ ಅಥವಾ ಚೆನ್ನಾಗಿಲ್ಲ ಅಂತಂದುಬಿಟ್ಟು ಸುಮ್ಮನಿದ್ದುಬಿಡಬಹುದು. ಒಂದು ಸಂಗತಿ ನಿಜ. ನಾಟಕರಂಗದ ಜೊತೆ ನಿಕಟವಾದಂತೆ ಅದರ ಬಗ್ಗೆ ಮಾತಾಡುವುದು ಕಷ್ಟವಾಗುತ್ತದೆ. ನನಗೆ ನಾಟಕವೊಂದು ಇಷ್ಟವಾಯಿತು ಅಂತ ಹೇಳಿದರೆ ಆ ನಾಟಕ ಇಷ್ಟಪಡದವರು ನನ್ನ ಬಗ್ಗೆ ಗೇಲಿ ಆರಂಭಿಸುತ್ತಾರೆ. ಹಾಗೇ ನನಗೆ ಮತ್ತೊಂದು ನಾಟಕ ಹಿಡಿಸಲಿಲ್ಲ ಎಂದು ಯಾವ ಮುಲಾಜಿಲ್ಲದೆ ಹೇಳಿದರೆ ಅದನ್ನು ಇಷ್ಟಪಟ್ಟು ಕಟ್ಟಿರುವ ಗುಂಪು ಕಣ್ಣುಗಳನ್ನು ಕೆಂಪಗೆ ಮಾಡಿಕೊಳ್ಳುತ್ತದೆ. ಈ ಎಲ್ಲವನ್ನ ತುಂಬ ಚೆನ್ನಾಗಿ ಅರ್ಥೈಸಿಕೊಂಡಿರುವ ನನಗೆ ಸಿನಿಮಾಗಳು (ಒಳ್ಳೆಯ) ಇನ್ ಎ ವೇ ಇಷ್ಟವಾಗಲು ಆರಂಭಿಸಿವೆ. ಹಾಗಾಗಿ ನಾಟಕ ರಂಗದಿಂದ ಬ್ರೇಕ್ ತೆಗೆದುಕೊಂಡು ಮತ್ತೆ ಮೊದಲಿನ ಹಾಗೆ ಸಿನಿಮಾಗಳನ್ನ ನೋಡುವ ಉಮೇದು ಬೆಳೆಸಿಕೊಳ್ಳಲು ಆರಂಭಿಸಿದ್ದೇನೆ.

ಅದೇ ಹೊತ್ತು ನನಗೆ ಒಬ್ಬರು ತೆಲುಗಿನ ‘ಶ್ಯಾಮ್ ಸಿಂಗ ರಾಯ್’ ಮೂವಿ ನೋಡಿ ಎಂದು ಸಜೆಸ್ಟ್ ಮಾಡಿದರು. ಸರಿ ಎಂದು ನೋಡಿದೆ. ‘ಶ್ಯಾಮ್ ಸಿಂಗ ರಾಯ್’ ಎನ್ನುವುದು ಸಿನಿಮಾದ ನಿರ್ದೇಶಕ ರಾಹುಲ ಸಾಂಕೃತ್ಯ ಸೃಜಿಸಿರುವ ಒಂದು ಕಾಲ್ಪನಿಕ ಪಾತ್ರ. ಶ್ಯಾಮ್‍ನದು ಬಂಗಾಲ ಮೂಲ ಎಂದು ಆವರಣ ಕಟ್ಟಿಕೊಟ್ಟಿದ್ದಾರೆ. ಆತ ಕ್ರಾಂತಿಕಾರಿ; ಗನ್ನು ಹಿಡಿಯುವ ಬದಲು ಪೆನ್ನು ಹಿಡಿದು ಕ್ರಾಂತಿ ಮಾಡಿದವನು. ಎಪ್ಪತ್ತರ ದಶಕದಲ್ಲಿ ನಲುಗುತ್ತಿದ್ದ ದೇವದಾಸಿಯರ ಬದುಕು… ಹೆಣ್ಣು ಯಾರಿಗೂ ದಾಸಿಯಲ್ಲ ಎನ್ನುವ ಸೂತ್ರವಾಕ್ಯ ಈ ಚಿತ್ರದ ಹೈಲೈಟ್ ಅಂಶ.

ಈ ಎಲ್ಲದರ ನಡುವೆಯೇ ಒಂದು ಪ್ರೇಮಕಥೆ ಅರಳಿಕೊಳ್ಳುತ್ತದೆ. ಶ್ಯಾಮ್‍ನನ್ನು ನಿರ್ದೇಶಕರು ಒಂದು ಘಟ್ಟದ ಐತಿಹಾಸಿಕ ಪಾತ್ರದಂತೆ ಚಿತ್ರಿಸಿದ್ದರೂ ಆತನ ಕಥೆ ಹೇಳಲಿಕ್ಕೆ ಇಂದಿನ ಸಂವೇದನೆಯ ಆವರಣ ಕಟ್ಟಿದ್ದಾರೆ. ಹಾಗಾಗಿ ಈ ಚಿತ್ರಕಥೆ ವರ್ತಮಾನದಿಂದ ಭೂತಕ್ಕೆ ಜಿಗಿದು ಮತ್ತೆ ವರ್ತಮಾನಕ್ಕೆ ಜನ್ಮಾಂತರದ ಕಥೆಯ ಮೂಲಕ ಮರಳುವ ಕಥಾನಕ.

ದೇವದಾಸಿಯೊಬ್ಬಳ ಬದುಕಿನಲ್ಲಿ ನಾಯಕ ತನ್ನ ದಿಟ್ಟತನದಿಂದ ತರುವ ಬದಲಾವಣೆ, ಹೋರಾಟದ ತೀವ್ರತೆ, ಹೀರೋಯಿಸಂ ಕಾಣ್ಕೆ ಎಲ್ಲವೂ ಚೆನ್ನಾಗಿದೆ ಮೂಡಿಬಂದಿದೆ. ಪುನರ್ಜನ್ಮ, ಅದರ ಸಾಧ್ಯಾಸಾಧ್ಯತೆಗಳು, ಅನುಮಾನಗಳು ಈ ಎಲ್ಲದರ ಆಚೆಗೆ ಇಷ್ಟವಾಗುವುದು ಕಥೆಯ ಪ್ರೆಸೆಂಟೇಷನ್ ಸ್ಟೈಲ್. ಒಂದು ಮೈನ್ಯೂಟ್ ಸಂಗತಿಯನ್ನೂ ನಿರ್ದೇಶಕ ಜಸ್ಟಿಫೈ ಮಾಡಿರುವ ರೀತಿ ಚೆನ್ನಾಗಿದೆ. ಎಲ್ಲಕ್ಕಿಂತ ಹೆಚ್ಚಿಗೆ ಬಂಗಾಲದ ಪರಿಸರವನ್ನು ಚೇತೋಹಾರಿಯಾಗಿ ಕಾಣಿಸಲಾಗಿದೆ.

ಕಥೆಯ ತಿರುವಿನಲ್ಲಿ ಇದು ಜನ್ಮಾಂತರದ ಕಥೆ ಎಂದು ಸಾಬೀತುಪಡಿಸಲು ನೆರವಿಗೆ ಬರುವುದು ಒಂದು ಕಥೆಯೇ ಎನ್ನುವುದು ಇಲ್ಲಿಯ ದೊಡ್ಡ ಸಂಗತಿ. ಮತ್ತು ಇಂಟ್ರೆಸ್ಟಿಂಗ್ ಕೂಡ.

ಈ ಕಥೆಯನ್ನು ಶ್ಯಾಮ್ ಬರೆಯುವುದು ದೋಣಿಯಲ್ಲಿ ಪಯಣಿಸುವಾಗ. ತಾನು ಪಯಣಿಸುತ್ತಿರುವ ದೋಣಿಯಲ್ಲಿ ಒಂದು ಪುಟ್ಟ ಹುಡುಗಿ ಬಿಡಿಸುತ್ತಿರುವ ಚಿಟ್ಟೆ ಚಿತ್ರ ನೋಡಿಯೇ ಶ್ಯಾಮ್ ಅಲ್ಲೇ ಒಂದು ಕಥೆ ಬರೆದು ಮುಗಿಸುತ್ತಾನೆ. ಆ ಕಥೆ ಜನ್ಮಾಂತರಕ್ಕೆ ಸಾಕ್ಷಿ ಹೇಳುತ್ತದೆ.

ಅದೆಲ್ಲ ಒತ್ತಟ್ಟಿಗಿರಲಿ. ನನಗೆ ಮುಖ್ಯ ಅನಿಸಿದ್ದು ನಿರ್ದೇಶಕರು ಈ ಚಿತ್ರದಲ್ಲಿ ಒಬ್ಬ ಲೇಖಕನನ್ನು ಚಿತ್ರಿಸಿರುವ ರೀತಿ ಮತ್ತು ಅವನ ಕಲ್ಪನಾ ಜಗತ್ತಿನ ವರ್ಣಚಿತ್ತಾರವನ್ನು ಕಟ್ಟಿಕೊಟ್ಟಿರುವ ಬಗೆ. ದೋಣಿಯಲ್ಲಿ ತನ್ನ ಜೊತೆಗೆ ಪಯಣಿಸುತ್ತಿರುವ ಪುಟ್ಟ ಹೆಣ್ಣುಮಗಳು ಬಿಡಿಸುವ ಚಿಟ್ಟೆ ಚಿತ್ರ ಕಂಡು ಅಲ್ಲೇ ಕಥೆ ಹೆಣೆಯುವ ಲೇಖಕನ ಬಗೆಗೆ ಅನುಮಾನವನ್ನೂ ವ್ಯಕ್ತಪಡಿಸಬಹುದು; ಆದರೆ ಯಾಕೋ ಆ ದೃಶ್ಯ ನನ್ನನ್ನ ತುಂಬ ತಾಕಿತು.
ಅದರಲ್ಲೊಂದು ನಾಟಕೀಯತೆ ಇದೆ ಅನಿಸುತ್ತಿದ್ದಂತೆ ನನ್ನ ಮನಸ್ಸಿನಲ್ಲೂ ಒಂದು ಲಹರಿ ಆರಂಭವಾಯಿತು. ಅದು ನಾಟಕ ಲೋಕದ ಕುರಿತ ಲಹರಿ.

ಅನೇಕರು ಹೇಳುವುದಿದೆ- ಸಿನಿಮಾ ಎನ್ನುವುದು ಪ್ಯೂರ್ ನಿರ್ದೇಶಕನ ಮಾಧ್ಯಮ; ರಂಗಭೂಮಿ ಎನ್ನುವುದು ನಟನ ಮಾಧ್ಯಮ… ಇತ್ಯಾದಿ. ಆದರೆ ಒಂದು ಘಟ್ಟದಲ್ಲಿ ರಂಗ ನಿರ್ದೇಶಕರು ನಟರ ಚಾರ್ಮನ್ನು ಮೀರಿಸಿದಾಗ ಆವರೆಗಿನ ದೃಷ್ಟಿಯೇ ಬದಲಾಯಿತು. ಅಲ್ಲಿಂದ ನಿರ್ದೇಶಕರ ಹೆಸರುಗಳು ರಂಗಭೂಮಿಯಲ್ಲಿ ಢಾಳಾಗಿ ಕೇಳಿಸಲಿಕ್ಕೆ ಆರಂಭಿಸಿತು. ಅದರ ಜೊತೆಗೇ ನಟ, ನಟಿಯರದ್ದೂ ಹೌದು. ಆದರೆ ಈ ಎಲ್ಲಕ್ಕಿಂತ ಮುಖ್ಯ ಸಂಗತಿ ಎಂದರೆ ನಟನೆ, ನಿರ್ದೇಶನಕ್ಕೆ ದ್ರವ್ಯ ಒದಗಿಸುವ ಬರಹಗಾರನದ್ದು. ಕಾಳಿದಾಸ, ಭಾಸ, ಭವಭೂತಿ, ಶೇಕ್ಸ್‌ಪಿಯರ್ ಮುಂತಾದವರು ಆಕಾಶ ತುಂಬುವಂತೆ ಆವರಿಸಿಕೊಂಡುಬಿಟ್ಟರು. ಉಳಿದವರು? ಸತ್ವ ಹೆಚ್ಚಿಗೆ ಇದ್ದೂ ಯಾಕೆ ಮುನ್ನೆಲೆಗೆ ಬರಲಿಲ್ಲ ಎನ್ನುವುದು ಇಂದಿಗೂ ನಿಗೂಢ.

ಈ ನೆಲೆಯಲ್ಲಿ ಮತ್ತು ಶ್ಯಾಮ್ ಸಿಂಗ ರಾಯ್ ದೋಣಿಯಲ್ಲಿ ಇನ್ಸ್ಟಂಟ್ ಆಗಿ ಬರೆದ ಕಥೆ ನನ್ನಲ್ಲಿ ಹುಟ್ಟುಹಾಕಿದ ಸ್ಫೂರ್ತಿಯನ್ನು ಚಿಮ್ಮಿಸಿತು. ಜೊತೆಗೆ ಒಬ್ಬ ಅಜ್ಞಾತ ನಾಟಕಕಾರನೊಬ್ಬನ ಪಿಸು ಮಾತುಗಳು ನನಗಷ್ಟೇ ಕೇಳಿಸಲು ಆರಂಭಿಸಿತು. ಆ ನಾಟಕಕಾರ ಯಾರು ಎಂದು ನಿರ್ದಿಷ್ಟವಾಗಿ ಕೇಳಿದರೆ ಅದಕ್ಕೆ ನನ್ನ ಉತ್ತರ- ಗೊತ್ತಿಲ್ಲ ಅನ್ನುವುದು ಅಷ್ಟೇ. ಹಾಗೇ ನನ್ನಲ್ಲಿ ಪಿಸುಗುಡಲು ಆರಂಭಿಸಿದ ಆ ನಾಟಕಕಾರ ತನಗೆ ತಕ್ಕ ಮಾನ್ಯತೆ ಸಿಗಲಿಲ್ಲ ಎಂದು ಹಲುಬುವ ಪೈಕಿ ಅಲ್ಲ. ಮೊದಲಿನಿಂದ ಬರವಣಿಗೆಯ ಸೆಳೆತ ಮತ್ತು ಮಾಂತ್ರಿಕತೆಗೆ ಸಿಕ್ಕಿ ತಾನು ಬರೆಯಬಲ್ಲೆನೆ ಎಂದು ಅನುಮಾನದಲ್ಲೇ ಲೇಖನಿ ಕೈಗೆತ್ತಿಕೊಂಡವನು. ಮೊದಮೊದಲು ತುಂಬ ಡಿಸಿಪ್ಲೀನ್ಡ್ ವಿದ್ಯಾರ್ಥಿಯ ಹಾಗೆ ನಾಟಕ ಸಿದ್ಧಾಂತದ ಸೂತ್ರ ಪಾಲಿಸುತ್ತ ಬರೆಯಲು ಆರಂಭಿಸಿದವನು. ಆದರೆ ಬರಬರುತ್ತ ಚಿತ್ರ ಬದಲಾಯಿತು.

ನಾಟಕಕಾರ ನಿಸ್ಸಹಾಯಕತೆ ಅನುಭವಿಸಲು ಆರಂಭಿಸಿ ಕ್ರಮೇಣ ರಾಜಿಗೆ ಬೀಳಲು ಆರಂಭಿಸಿದ. ತಾನು ಕಟ್ಟುವ ನಾಟಕಲೋಕ ಒಂದು ಕಡೆಯಾದರೆ ಅದು ರಂಗಕ್ಕೆ ಬರಬೇಕಾದಾಗ ಎದುರಿಸುವ ತೊಡಕುಗಳು ಅವನಿಗೆ ನಾಟಕವೊಂದರ ದೃಶ್ಯಗಳ ಹಾಗೇ ಕಾಣಿಸಲು ಆರಂಭಿಸುತ್ತದೆ. ತನ್ನ ಬದುಕಿನ ಒಂದು ಇಳಿ ಸಂಜೆಯಲ್ಲಿ ಅವನ ಆತ್ಮಾವಲೋಕನಕ್ಕೆ ತೊಡಗುತ್ತದೆ. ಆ ಅವಲೋಕನದ ಲಹರಿಯನ್ನ ನಾನು ಹೀಗೆ ಕಟ್ಟುತ್ತಿದ್ದೇನೆ. ಇದು ಒಬ್ಬ ನಾಟಕಕಾರನ ಮಾತುಗಳು ಮಾತ್ರ ಆಗಬೇಕಿಲ್ಲ. ಹಲವರದೂ ಆಗಬಹುದು. ಹಾಗೇ ಕೆಲವು ಸಂದರ್ಭಗಳಲ್ಲಿ ನನ್ನ ನಿಲುವುಗಳೂ ಆಗಿ ದಾಖಲಾಗಿರಬಹುದು. ಆತನ ಲಹರಿ ನಿಮ್ಮ ಓದಿಗೆ…

‘ನನಗೆ ಅರವತ್ತು ತುಂಬಿದಾಗ ಕೆಲವರು ಷಷ್ಟ್ಯಬ್ದದ ಬಗ್ಗೆ ಮಾತಾಡಿ ಅದರ ತಯಾರಿಗೆ ತುಡಿದರು. ನನಗೆ ಅದರಲ್ಲೆಲ್ಲ ಉತ್ಸಾಹ ಇರಲಿಲ್ಲ. ನನ್ನ ನಿರಾಕರಣೆಗೆ ಅವರಲ್ಲಿ ಮಾನ್ಯತೆ ಇಲ್ಲ ಅನಿಸಿದಾಗ ಸುಮ್ಮನಾಗುವ ಸರದಿ ನನ್ನದಾಗಬೇಕಾಯಿತು. ಅವರಿಗೆ ಏನೋ ಖುಷಿ ಮತ್ತು ಸಂಭ್ರಮ. ಅರವತ್ತು ಚಂದ್ರಗಳನ್ನ ಕಂಡವನು ಇತ್ಯಾದಿ ಮಾತಾಡಿದರು.

‘ಕತ್ತಲಿಗೆ ಬೆಳಕಿನ ಬೊಟ್ಟು ಇಟ್ಟಂತೆ ಇರುವ ಚಂದ್ರ ಕತ್ತಲಿನ ಕೇಂದ್ರ ಬಿಂದು. ಆತ ಮೊದಲಿಗೆ ಕಾಣಬೇಕು. ಆದರೆ ನನಗೆ ಮೊದಲಿಂದ ಚಂದ್ರನ ಸುತ್ತ ಇರುವ ಕತ್ತಲೇ ಪ್ರಧಾನವಾಗಿ ಕಾಣುತ್ತಿತ್ತು. ಕಾರಣ ಹೇಳುತ್ತೇನೆ. ಚಂದ್ರನ ಸೌಂದರ್ಯದ ಬಗೆಗೆ ಬೇರೆಯವರಿಂದ ವರ್ಣನೆ ಕೇಳಿಸಿಕೊಂಡು ಕಣ್ಣುಗಳನ್ನು ಅದಕ್ಕೆ ಒಗ್ಗಿಸಿಕೊಂಡವರಿಗೆ ಚಂದ್ರ ಮಾತ್ರ ಕಾಣುವ ಅಪಾಯ ಇರುತ್ತದೆ. ಅನ್ಯರ ವರ್ಣನೆಗಳನ್ನು ಕೇಳಿಸಿಕೊಳ್ಳದೆ ಚಂದ್ರನನ್ನ ತನ್ನ ಕಾಣ್ಕೆಗೆ ಅನುಗುಣವಾಗಿ ಚಿತ್ರಿಸಿಕೊಳ್ಳುವವನಿಗೆ ಚಂದ್ರನನ್ನು ಬೆಳಗಿಸುತ್ತಿರುವ ಕತ್ತಲೂ ಪ್ರಧಾನ ಭೂಮಿಕೆಯಾಗಿ ಕಾಣುತ್ತದೆ. ಇದನ್ನೆಲ್ಲ ಹೇಳಿದರೆ ಗೆಳೆಯರು ನಗುತ್ತಾರೆಂದು ನನಗೆ ಗೊತ್ತಿತ್ತು. ಹಾಗಾಗಿ ಷಟ್ಯಬ್ದಕ್ಕೆ ನಾನು ಸಮ್ಮತಿಸಿದೆ.

‘ಬರಹಗಾರನಾಗಿ ರೂಪುತಳೆಯುವುದು ಅಂದರೆ ತನ್ನ ಕಣ್ಣುಗಳ ಗಿಂಡಿಗಳಿಂದ ಕಂಡದ್ದನ್ನು ಅನ್ಯರ ನೋಟಕ್ರಮದಲ್ಲಿ ತೂಗಿ ನೋಡದೆ ಇರುವ ಬಗೆ ಅಷ್ಟೇ. ಮೊದಲು ನನಗೆ ಚಂದ್ರ ಕಂಡ. ನಂತರ ಚಂದ್ರನ ಸುತ್ತಲಿರುವ ಕತ್ತಲು ಇನ್ನೂ ವಿಸ್ತಾರವಾಗಿ ಕಂಡಿತು. ಕತ್ತಲಿನಲ್ಲೇ ಬೆಳದಿಂಗಳು ಪ್ರಕಾಶಿಸಿಸಲು ಸಾಧ್ಯ ಎನ್ನುವುದನ್ನು ಕಂಡುಕೊಂಡೆ. ಅದು ತಾತ್ವಿಕತೆಯಾಯಿತು. ಇದನ್ನೇ ಅನ್ವಯ ಮಾಡಲು ಶುರುಮಾಡಿದೆ. ಸಾಹಿತ್ಯ ಆಗಲು ಆರಂಭವಾಯಿತು. ಕಾಣುವ ಬಗೆಯಲ್ಲಿ ಮತ್ತೊಂದನ್ನು ಕಾಣಲು ನನಗೆ ಬರುತ್ತಿತ್ತಾದ್ದರಿಂದ ನಾನು ಲೇಖನಿ ಕೈಗೆತ್ತಿಕೊಂಡೆ. ಚಿಕ್ಕ ವಯಸ್ಸಿಗೇ ಲೇಖನಿ ಹಿಡಿದಿದ್ದರಿಂದ ಮೊದಲಿಗೆ ನನಗೆ ಚಂದ್ರನ ಬೆಳಕು ಇಷ್ಟವಾಗುತ್ತಿತ್ತು. ಚೆಂದದ ಹುಡುಗಿಯರು ಸುತ್ತ ಸುಳಿ ತಿರುಗುವ ವಯಸ್ಸು ಅದು. ಸಹಜವಾಗಿ ಚಂದ್ರ ಮಾತ್ರ ಕಾಣುತ್ತಿದ್ದ.

ಆದರೆ ಇಲ್ಲಿ ಯಾವುದು ನಿಚ್ಚ ಸತ್ಯ? ಯಾವುದು ಇಲ್ಲಿ ಸ್ಥಾವರ? ಬದುಕು ಮುದಿಯಾಗುತ್ತ ಹರಿವ ಹೊಳೆಯ ಹಾಗೆ. ನಿಂತರೆ ಕೊಳೆಯುವುದು ಖಾತ್ರಿ. ಹರಿಯುವ ಹಾದಿಯಲ್ಲಿ ತೊಡರುಗಳು ಚಂದ್ರನ ಕಡೆಗೆ ನೆಟ್ಟಿದ್ದ ಕಣ್ಣುಗಳನ್ನು ಕತ್ತಲಿನ ಕಡೆಗೆ ಚಲಿಸುವಂತೆ ಮಾಡಿದವು. ಚಂದ್ರ ಒಂದು ಘಟ್ಟದಲ್ಲಿ ಹುರುಪು ತುಂಬಿದರೆ ಕತ್ತಲೆ ಶೂನ್ಯವನ್ನ ಪರಿಚಯಿಸಿತು.

‘ಕಾಣುವ ನೋಟದಲ್ಲಿ ಮತ್ತೊಂದನ್ನು ಕಾಣುವವನು ಮಾತ್ರ ಲೇಖಕನಾಗುತ್ತಾನೆ. ಈ ನೋಟಕ್ರಮದ ಚೆಂದ ತರುವ ಅಹಂ ಬಗೆಗೆ ಮೊದಲು ನನಗೆ ತಿಳಿದಿರಲಿಲ್ಲ. ಅಹಂ ಜೊತೆಗೇ ನಾನೂ ಲೇಖಕನಾಗಲು ಬಯಸಿದೆ. ಸಾಹಿತ್ಯದ ಉಳಿದ ಪ್ರಕಾರಗಳಿಗಿಂತ ನಾಟಕದ ಬರವಣಿಗೆ ವಿಚಿತ್ರ ಮತ್ತು ಚೆಂದ.

ಒಂಟಿ ಪುಸ್ತಕದಲ್ಲಿನ ಅಕ್ಷರ ಸರಮಾಲೆ; ಅದನ್ನು ಓದುತ್ತ ಕೂರುವ ಓದುಗ. ಆ ಪುಸ್ತಕ ಕಟ್ಟಿಕೊಡುವ ಚಿತ್ರವನ್ನ ಚಿತ್ರಿಸಿಕೊಳ್ಳುವ ಓದುಗ ಏಕಾಂಗಿ ಮತ್ತು ಏಕಾಂತ ಜೀವಿ. ಇದು ಕೆಲವರಿಗೆ ಸೊಗಸು. ನನ್ನಂಥವನಿಗೆ ಇದೆಂಥ ಸೊಗಸು ಎನ್ನುವ ಸೋಜಿಗ.

‘ನಾಟಕ ಎಂದೂ ಒಂಟಿತನದ ಲೇಪ ಸೋಕಿಸಿಕೊಳ್ಳದ ಬರವಣಿಗೆ. ನಾಟಕವೂ ಮೊದಲು ಪುಸ್ತಕದಲ್ಲೇ ಮತ್ತು ಅಕ್ಷರ ರೂಪದಲ್ಲೇ ದಾಖಲಾದರೂ ಅದರ ಅಸಲೀ ಕಾರ್ಯಕ್ಷೇತ್ರ ಕಣ್ಣ ಮುಂದಿನ ವಾಸ್ತವದ ಜಗತ್ತು ಎನ್ನುವುದು ಸತ್ಯ. ಮತ್ತು ವರ್ತಮಾನದ ಜಗತ್ತು ಅಕ್ಷರಗಳು ಕಟ್ಟಿಕೊಡುವ ಮತ್ತು ಕಲ್ಪಿಸಿಕೊಳ್ಳಲಿಕ್ಕೆ ಅನುವು ಮಾಡಿಕೊಡುವ ಕ್ರಿಯೆ ಮಾತ್ರ ಅಲ್ಲ. ನಾಟಕ ಜೀವನ ವ್ಯಕ್ತಿಗಳ ಕಣ್ಣ ಎದುರಿನಲ್ಲಿ ಜೀವಂತ ವ್ಯಕ್ತಿಗಳು ಪಾತ್ರಗಳಾಗಿ ಒಡಮೂಡಿ ಒಡನಾಡುವ ಲೋಕ. ಕಣ್ಣೆದುರಿನ ಲೋಕದ ಎದುರು ಕಲ್ಪನೆ ನಾಚಿಕೊಳ್ಳುತ್ತದೆ. ತನ್ನದೇ ಆಂಗಿಕ ಬೆಳೆಸಿಕೊಂಡಿರುವ ವ್ಯಕ್ತಿ ರಂಗದ ಮೇಲೆ ಅದನ್ನು ಮೀರಿ ಬೇರೆ ಏನೋ ಆಗಿ ಕಾಣಿಸುವ ಜಾದು ನಾಟಕದ್ದು. ನಾಟಕ ಲೋಕ ಎಂದರೆ ಅದು ಕಲ್ಪನೆಯ ಒಂಟಿ ಬಾಳುವೆ ಅಲ್ಲ. ಸಮಾನ ಹುಚ್ಚಿನ ಜೀವಂತ ವ್ಯಕ್ತಿಗಳು ಒಂದೆಡೆ ಸೇರಿ ಹುಚ್ಚರಂತೆ ಕೆಲಸ ಮಾಡುವ ಕಲೆ. ಅದು ನಾಟಕ.

ತಾನು ಪಯಣಿಸುತ್ತಿರುವ ದೋಣಿಯಲ್ಲಿ ಒಂದು ಪುಟ್ಟ ಹುಡುಗಿ ಬಿಡಿಸುತ್ತಿರುವ ಚಿಟ್ಟೆ ಚಿತ್ರ ನೋಡಿಯೇ ಶ್ಯಾಮ್ ಅಲ್ಲೇ ಒಂದು ಕಥೆ ಬರೆದು ಮುಗಿಸುತ್ತಾನೆ. ಆ ಕಥೆ ಜನ್ಮಾಂತರಕ್ಕೆ ಸಾಕ್ಷಿ ಹೇಳುತ್ತದೆ.

ನನ್ನ ಅರವತ್ತನೆಯ ವಯಸ್ಸಿನಲ್ಲಿ ಸಂತೋಷಪಟ್ಟಿದ್ದ ನನ್ನ ಸುತ್ತಲಿನ ಜನ, ನನಗೆ ಎಪ್ಪತ್ತಾದಾಗ ಮುಖದಲ್ಲಿ ಅನುಮಾನದ ಎಳೆಗಳನ್ನು ಕಾಣಿಸಿದರು. ಎಪ್ಪತ್ತೂ ಮೀರಿ ಎಂಬತ್ತಕ್ಕೆ ಹೆಜ್ಜೆ ಊರಿದಾಗ ನನ್ನನ್ನ ಅಚ್ಚರಿಯಲ್ಲಿ ನೋಡುತ್ತಿರುವುದು ಪೂರಾ ಮಬ್ಬಾಗಿರುವ ನನ್ನ ಕಣ್ಣುಗಳಿಗೂ ನಿಲುಕುತ್ತಿದೆ.

‘ನೆನಪು ಮಾಸಿ ಎಲ್ಲವೂ ವಿಸ್ಮೃತಿಗೆ ಒಳಗಾಗಿ ನಾನು ನಡೆದಾಡುವ ಖಾಲಿ ದೇಹದಂತೆ ಆಗಿಬಿಡುವ ಅಪಾಯದ ಬಗ್ಗೆ ಯೋಚನೆ ಬಂದಾಗ ಮನಸ್ಸು ಹಿಂದಕ್ಕೆ ಹೆಜ್ಜೆಗಳನ್ನ ಇಡಲು ಆರಂಭಿಸಿತು. ನನ್ನನ್ನು ನಾಟಕಕಾರನನ್ನಾಗಿಸಿದ ಅಂಶಗಳನ್ನು ಈಚೆಗೆ ನೆನೆಪಿಸಿಕೊಳ್ಳುತ್ತಾ ಕೂತೆ.

‘ಆಗಲೇ ನಾಟಕ ಎನ್ನುವುದು ಜೀವಂತ ವ್ಯಕ್ತಿಗಳ ಹುಚ್ಚಿನ ಕೆಲಸ ಅಂದೆ. ನಿಜ. ನಾಟಕ ಕಟ್ಟುವ ಕಲೆಯ ಬಗೆಗೆ ಬಹಳಷ್ಟು ಜನ ಬೆರಗು ಇರಿಸಿಕೊಂಡಿದ್ದರು. ಅದೊಂದು ಜಾದು ಎಂಬಂತೆ ಮಾತಾಡಿ ಹೆದರಿಸುತ್ತಿದ್ದರು. ನಾನು ನಾಟಕ ಬರೆಯಲು ಆರಂಭಿಸಿದ್ದು ನನ್ನ ಒಂಟಿತನ ಮೀರಲು ಅಷ್ಟೇ. ಎಲ್ಲದರಿಂದ ವಿಮುಕ್ತನಾಗಿ ಕೂತರೆ ತಲೆಯಲ್ಲಿ ಮಿದುಳು ಹೆಡೆಬಿಚ್ಚುತ್ತದೆ. ಜೊತೆಗೆ ಬುಸುಗುಡುತ್ತದೆ. ಮನಸ್ಸು ಯಾರಿಗೂ ಕೇಳಿಸದಂತೆ ಮಾತಾಡುವುದನ್ನು ಹೆಚ್ಚಿಗೆ ಮಾಡಿಕೊಳ್ಳುತ್ತದೆ. ಹೀಗಾದಾಗ ಮನುಷ್ಯ ರೋಷದ, ಕಿಚ್ಚಿನ ಹೆಚ್ಚಿನ ತಂತ್ರಗಳನ್ನು ಹೂಡಲು ನಿಶ್ಯಬ್ದದಲ್ಲಿ ಆರಂಭಿಸುತ್ತಾನೆ. ಹಾಗಾಗಿ ನಿಶ್ಯಬ್ದ ಅಪಾಯಕಾರಿ ಅನಿಸಿ ಮತ್ತು ಅದನ್ನು ಭರಿಸಲು ನನಗೆ ಕಷ್ಟ ಅನಿಸಿ- ಕಷ್ಟವೋ ಸುಖವೋ ನನ್ನ ಕಣ್ಣೆದುರು ಜೀವಂತಿಕೆ ಕದಲುತ್ತಿರಬೇಕು ಅನಿಸಿದ ಹೊತ್ತು ನನ್ನೊಂದಿಗೆ ನಾಟಕ ಲೋಕ ಕೈಕುಲುಕಿತು.

ಅದರ ಕೈ ಹಿಡಿದ ಕ್ಷಣ ನಾನು ಬರೆಯಲು ಆರಂಭಿಸಿದೆ. ನನ್ನೊಳಗೆ ನನಗೆ ಕಾಣುವ ಕ್ರೂರತೆ, ವಕ್ರತೆ, ಸೌಂದರ್ಯ, ಕುಟಿಲತೆ ಎಲ್ಲ ಮನುಷ್ಯರ ಒಳಗೂ ಬೇರೆಬೇರೆ ಬಗೆಗಳಲ್ಲಿ ಇರುವುದನ್ನು ಗುರುತಿಸಿಕೊಂಡು ಆ ಭಾವಗಳನ್ನೇ ಪಾತ್ರ ಮಾಡಿ ನಾಮಕರಣ ಮಾಡಿದೆ. ನಾವು ಮೇಲ್ನೋಟಕ್ಕೆ ಡಲ್ ಆಗಿ ಕಂಡರೂ ಅಂತರಂಗದಲ್ಲಿನ ತುಮುಲ ತುಂಬ ಬ್ರೈಟ್ ಆಗೇ ಇರುತ್ತದೆ. ಅಂತರಂಗಕ್ಕೆ ಮೇಕಪ್ ಮಾಡಲು ಆಗುವುದಿಲ್ಲ. ಬದಲಿಗೆ ಡಲ್ ಮುಖಭಾವದ ನಟರಿಗೆ ಪ್ರಸಾಧನದ ಮೂಲಕ ತುಂಬ ಢಾಳಾಗಿ ಕಾಣುವಂತೆ ಎಚ್ಚರವಹಿಸಲಾಗುತ್ತದೆ. ನಮ್ಮಲ್ಲಿ ಚದುರಿ ಹೋಗಿರುವ ಹಲವು ಒಳ್ಳೆಯ ಹಾಗೂ ಕೆಟ್ಟ ಗುಣಗಳೇ ಪಾತ್ರಗಳಾಗಿ ವಿಂಗಡಿಸಿಕೊಂಡು ಮೇಕಪ್ ಸಮೇತ ಬರುವ ಕ್ರಿಯೆಯೇ ನಾಟಕ.

‘ನಮ್ಮ ಒಳಗನ್ನು ಅನ್ಯರ ಬದುಕಿಗೆ ಕಲೆಯ ಹೆಸರಿನಲ್ಲಿ ಬೆರೆಸಿ – ಅದಕ್ಕೆ ನಟನೆ ಎಂದು ಹೆಸರುಕೊಟ್ಟು ಆಡುವುದು ನಾಟಕ ಎಂದು ಸೂತ್ರರೂಪದಲ್ಲಿ ವಿವರಿಸಿಕೊಂಡಿದ್ದೇವೆ. ಆ ಪ್ರಕಾರ ನಾನೂ ಆರಂಭದಲ್ಲಿ ನಾಟಕಗಳನ್ನು ಬರೆಯಲು ಆರಂಭಿಸಿದೆ. ನಮ್ಮ ಅಂತರಂಗ ಕೊಳೆಯುತ್ತಿರುವ ಬಗೆಯನ್ನು ಇಮೇಜ್‌ಗಳಲ್ಲಿ, ರೂಪಕಗಳಲ್ಲಿ ಕಟ್ಟಲು ಆರಂಭಿಸಿದೆ. ನನ್ನ ಕೆಲಸದಲ್ಲಿ ನಾನು ಮಾಗುತ್ತ, ಪಾತ್ರಗಳನ್ನೂ ಅವುಗಳನ್ನು ಭಾವಗಳಲ್ಲಿ ಮಾಗಿಸುತ್ತ ಬರೆದೆ. ತುಂಬ ಚಾಲೆಂಜಿಂಗ್ ಅನಿಸುತ್ತಿದ್ದರೂ ಬರೆಯುತ್ತಾ ಸಾಗಿದೆ.

‘ಅಸಲಿಗೆ ಇದನ್ನೇ ನಾಟಕ ಅಂದುಕೊಂಡಿದ್ದೆ. ಅಕ್ಷರ ರೂಪದಲ್ಲಿ ಇರುವಷ್ಟು ಹೊತ್ತು ಅದು ನಾಟಕವೇ. ಕೃತಿಯೇ. ಚರ್ಚಿತ ವಸ್ತುವೇ. ಆದರೆ ನಾಟಕ ಅಂದರೆ ಅಷ್ಟೇ ಅಲ್ಲ. ನಮ್ಮ ನಡುವಿನ ಮನುಷ್ಯರ ಢಾಳಾದ ಚಿತ್ರಣ ಅಕ್ಷರಗಳಲ್ಲಿ ರೂಪು ತಳೆಯುತ್ತ ಒಂದು ರೂಪು ಪಡೆಯುವುದನ್ನು ಮೊದಮೊದಲು ನಾನೂ ನಾಟಕ ಅಂತಲೇ ಅಂದುಕೊಂಡಿದ್ದೆ. ಆದರೆ ನಂತರದಲ್ಲಿ ನಾನು ಅರಿತ ಸತ್ಯ ಅಂದರೆ ಈ ಅಕ್ಷರರೂಪದ ನಾಟಕ ರಂಗದ ಮೇಲೆ ರೂಪು ತಳೆಯಬೇಕಾದ ಪೂರ್ವದಲ್ಲಿ ಒಂದು ಮಹಾನ್ ನಾಟಕದ ಅನಾವರಣ ಆಗಲು ಆರಂಭಿಸಿಸುತ್ತದೆ. ಆ ಹೊತ್ತು ಅಸಲಿಗೆ ಯಾವುದು ನಾಟಕ ಎಂಬ ಪ್ರಶ್ನೆ ಏಳಲು ಶುರುವಾಗುತ್ತದೆ. ಅಕ್ಷರ ರೂಪದಲ್ಲಿರುವುದು ನಾಟಕವೋ ಅಥವಾ ಆ ಅಕ್ಷರ ರೂಪದಲ್ಲಿರುವ ವಸ್ತು ಪ್ರಪಂಚವನ್ನು ಕಟ್ಟಲು ನಟರ ಜೊತೆ ಒಂದು ನಾಟಕಕ್ಕೆ ಸಿದ್ಧವಾಗಬೇಕೋ ಎಂಬುದು ಕಾಡಲಿಕ್ಕೆ ಶುರುವಾಗುತ್ತದೆ. ರಂಗದ ಆಚೆ ನಟರು ಆರಂಭಿಸುವ ನಾಟಕ ಅರಗಿಸಿಕೊಳ್ಳಲಿಕ್ಕೆ ಬಾರದವನಿಗೆ ನಾಟಕದ ಅಸಲೀ ಚಿತ್ರದ ಪರಿಚಯವಿಲ್ಲವೆಂದೇ ಅರ್ಥ ಎಂದು ನನಗೆ ಅನಿಸಿದೆ.

‘ಬರೆದುಕೊಟ್ಟ ಕೂಡಲೇ ರಂಗದ ಮೇಲೆ ನಾಟಕ ರೂಪುತಳೆಯುವುದಿಲ್ಲ ಎನ್ನುವುದು ಮೊದಲು ತಿಳಿದುಕೊಂಡಿರಬೇಕು. ನಂತರ ಅದು ರಂಗದ ಮೇಲೆ ಬಂದಾಗ ಅದು ಪ್ರದರ್ಶನದಿಂದ ಪ್ರದರ್ಶನಕ್ಕೆ ಪಡೆದುಕೊಳ್ಳುವ ತಿರುವು, ತಾಲೀಮಿಗೆ ತಪ್ಪಿಸಿಕೊಳ್ಳಲು ನಟರು ಕೊಡುವ ಕಾರಣಗಳು ಒಂದೊಂದನ್ನೂ ಹಾದು ಸಾಗಿದಾಗಲೇ ನಾಟಕ ಎನ್ನುವುದು ರಂಗದ ಮೇಲೆ ಘಟಿಸುವುದು. ನಾಟಕದಲ್ಲಿ ಕೆಲವು ಪಾತ್ರಗಳು ಸಂಯಮದಲ್ಲಿ ಇರಬಹುದು. ಯಾಕೆಂದರೆ ಅದು ಬರವಣಿಗೆಯ ಮಿತಿ ಮತ್ತು ಪಾತ್ರದ ಸನ್ನಿವೇಶವೂ ಆಗಿರಬಹುದು. ಆದರೆ ರಂಗದ ಮೇಲಿನ ನಾಟಕದ ಪೂರ್ವದಲ್ಲಿ ಪಾತ್ರ ಮಾಡುವ ನಟರು ನಿಜತ್ವದಲ್ಲಿ ಕದಲಲು ಆರಂಭಿಸಿದಾಗ ಅಲ್ಲೊಂದು ಅಸಲೀ ಮನುಷ್ಯ ಚಿಂತನೆಯ ನಾಟಕ ಆರಂಭವಾಗುತ್ತದೆ.

‘ಇದನ್ನು ತಾಳಿಕೊಳ್ಳಲು ಬಾರದವನು ರಂಗಭೂಮಿಯ ಕಡೆ ಮುಖ ಹಾಕಬಾರದು. ಅಕ್ಷರ ರೂಪದಲ್ಲಿರುವ ನಾಟಕಕ್ಕೆ ಪ್ರೇಕ್ಷಕನಾಗಲು ಮತ್ತು ಅದನ್ನು ನಗುತ್ತ ನೋಡಲು ಬಾರದವನು ನಾಟಕ ರಂಗಕ್ಕೆ ಬರಬಾರದು. ಯಾಕೆಂದರೆ ನಮ್ಮೊಳಗಿನ ಅಸಲೀ ಚಿತ್ರಗಳನ್ನು ಮತ್ತು ಸ್ವಭಾವಗಳನ್ನು ರಂಗದ ಮೇಲೆ ಆಡುವ ನಾಟಕಗಳ ಪೂರ್ವದಲ್ಲಿ ಕಾಣಿಸುವ ಶಕ್ತಿ ಇರುವುದು ರಂಗಭೂಮಿಗೆ ಮಾತ್ರ.

ತನಗೆ ಚಿಕ್ಕಪಾತ್ರವೇ ಸಿಗುತ್ತಿದೆ.. ದೊಡ್ಡ ಪಾತ್ರಕ್ಕೆ ತನ್ನನ್ನು ಪ್ರೊಮೋಟ್ ಮಾಡುತ್ತಿಲ್ಲ ಎಂದು ತಂಡ ತೊರೆದುಹೋಗುವವರೂ ಇರುತ್ತಾರೆ. ತಂಡದ ಒಳಗೇ ಇದ್ದುಕೊಂಡು ತಂಡದ ಆಗುಹೋಗುಗಳ ಬಗೆಗೆ ಮರೆಯಲ್ಲಿ ಮತ್ತು ಕೆಲವರ ಕಿವಿಗಳಲ್ಲಿ ಉಸುರುವ ಕೆಲಸಗಳು ನಿರಂತರವಾಗಿ ನಡೆಯುತ್ತಿರುತ್ತದೆ. ನಾವು ವಾಸಿಸುವ ಕಡೆ ಗಾಳಿ ಸುಳಿದಾಡುತ್ತಿರುತ್ತದೆ ಎನ್ನುವ ಅರಿವು ಮತ್ತು ಎಚ್ಚರ ಹಲವರಿಗೆ ಇರುವುದಿಲ್ಲವಾದ್ದರಿಂದ ಮಾತುಗಳು ಹೀಗೆಲ್ಲ ಹೊರಡುತ್ತಿರುತ್ತವೆ ಎನ್ನುವ ಎಚ್ಚರ ಇರುವುದಿಲ್ಲ. ಹಾಗೂ ಕಿವಿಗಳಿಗೆ ಬಾಗಿಲುಗಳಿಲ್ಲದ ಕಾರಣ ಅವು ಬೇರೆಯವರ ಕಿವಿಗಳನ್ನೂ ಪ್ರವೇಶಿಸುತ್ತಲೇ ಇರುತ್ತವೆ. ಬಾಗಿಲುಗಳಿಲ್ಲದ ಕಿವಿ ಹೊಗುವ ಇಂಥವುಗಳನ್ನು ಕೇಳಿಸಿಕೊಂಡೂ ತನಗೆ ಏನೂ ಕೇಳಿಸಿಲ್ಲ ಎಂಬಂತೆ ಬದುಕುವುದು ನಿಜವಾದ ನಾಟಕ ಎಂದು ನನ್ನ ಅನುಭವದಲ್ಲಿ ಕಂಡುಕೊಂಡಿದ್ದೇನೆ. ಈ ಬಗೆಯ ನಾಟಕ ಮಾಡದಿದ್ದರೆ ರಂಗದ ಮೇಲೆ ನಟರು ಖಾಲಿಯಾಗುತ್ತಾ ಬರುತ್ತಾರೆ. ರಂಗ ಖಾಲಿಯಾಯಿತೆಂದರೆ ಅಕ್ಷರ ರೂಪದಲ್ಲಿರುವ ನಾಟಕ ಒಡಮೂಡುವ ಬಗೆ ಹೇಗೆ?

‘ಮನುಷ್ಯ ಮೂಲತಃ ವಕ್ರ. ಹಾಗೂ ತನಗೆ ಬೇಡದ ಕೆಲಸಗಳನ್ನು ಲೀಲಾಜಾಲವಾಗಿ ಮಾಡುವುದನ್ನು ಕಷ್ಟಪಟ್ಟು ಕಲಿಯದೆಯೂ ಸೊಗಸಾಗಿ ರೂಢಿಸಿಕೊಂಡಿರುವವನು. ಆ ಗುಣವನ್ನು ಅವನು ಹತ್ತಿಕ್ಕಿ ಬದುಕುವುದು ಮತ್ತು ನಾಟಕದ ಯಾವುದೋ ಪಾತ್ರವಾಗುವ ಮೂಲಕ ತನ್ನ ಅಸಲೀ ಸ್ವಭಾವ ತೋರಗೊಡದಂತೆ ಇರುವುದು ರಂಗದ ಮೇಲೆ ಮಾತ್ರ. ರಂಗದ ಮೇಲೆ ನಟರು ಮನುಷ್ಯರಾಗಿ ಸಹ್ಯ ಆಗುವಷ್ಟು ನಾಟಕ ಮುಗಿದಾಗ ಆಗುವುದು ಕಷ್ಟ. ಒಬ್ಬರು ಮತ್ತೊಬ್ಬರಿಗಿಂತ ಭಿನ್ನ. ಸ್ವಭಾವಗಳು, ದುಷ್ಟಬುದ್ಧಿ, ಒಳಿತಿನ ಗುಣ ಎಲ್ಲವೂ. ಆ ಎಲ್ಲವನ್ನು ತಾಳಿಕೊಳ್ಳುವ ಗುಣ ಬೆಳೆಸಿಕೊಳ್ಳುವುದು ಹಾಗೂ ಆ ಮೂಲಕ ರಂಗದ ಮೇಲೆ ಮಾತ್ರ ನಿಚ್ಚಳದ ಮನುಷ್ಯರನ್ನು ಕಾಣಲಿಕ್ಕೆ ಸಾಧ್ಯವಾಗುವುದು ರಂಗಭೂಮಿಯಲ್ಲಿ ಮಾತ್ರ ಎನ್ನುವ ತಿಳುವಳಿಕೆ ನನ್ನಲ್ಲಿ ಹುಟ್ಟಿದೆ. ಅದು ಹುಟ್ಟಿದ ಕ್ಷಣವೇ ನಾಟಕ ಬರೆಯವ ಕ್ರಮವೂ ಬದಲಾಯಿತು, ಯಾಕೆಂದರೆ ನಾಟಕಕ್ಕೆ ವಸ್ತುವಾಗುವ ಮನುಷ್ಯರೇ ಪಾತ್ರಗಳಾಗಲು ತುಡಿಯುತ್ತಿರುತ್ತಾರೆ.

‘ನಾಟಕ ಬರೆಯುವುದು ದೊಡ್ಡ ಸಂಗತಿ ಎಂದೇ ನಾನೂ ಅಂದುಕೊಂಡಿದ್ದೆ. ಇರಬಹುದು. ಆದರೆ ಬರೆದ ನಾಟಕ ರಂಗದ ಮೇಲೆ ಎಲ್ಲ ಸವಾಲುಗಳು, ಚಕಾರಗಳು, ಲೆಕ್ಕಾಚಾರಗಳು, ಸ್ಟ್ರಾಟಜಿಸ್ಟ್‌ಗಳನ್ನು ಹಾದು ಗೆಲ್ಲವುದು ಕಷ್ಟದ ಸಂಗತಿ. ತಾವು ಸಾಕ್ಷಾತ್ಕರಿಸಿಕೊಂಡ ಸತ್ಯಗಳು ಸುಳ್ಳುಗಳೂ ಆಗಿರಬಹುದು ಎಂದು ಯೋಚಿಸಲೂ ಬಾರದವರ ನಡುವೆ ನಾಟಕಗಳನ್ನು ಕಟ್ಟುವುದು ಕಷ್ಟದ ಕೆಲಸ. ನಾಟಕಕಾರ ತನ್ನ ಕಣ್ಣುಗಳಿಂದ ಜಗತ್ತನ್ನು ಕಾಣಬೇಕು ಎಂಬ ಸಿದ್ಧಾಂತ ನನ್ನದಾಗಿತ್ತು. ಅದು ಹಾಗೇ ಆಗಬೇಕು ಕೂಡ. ಆದರೆ ನಾಟಕಕಾರನಿಗಿರುವ ಆ ಸ್ವಾತಂತ್ರ್ಯವನ್ನ ಅನ್ಯರ ಹಲವು ಲೆಕ್ಕಾಚಾರಗಳು ಕಿತ್ತುಕೊಂಡುಬಿಡುತ್ತವೆ. ಹೀಗಾದಾಗ ಅಕ್ಷರಗಳು ಪುಟಗಳನ್ನ ಬೆಡ್‌ಶೀಟ್ ಮಾಡಿಕೊಂಡು ಹೊದ್ದು ಮಲಗಿಬಿಡುತ್ತವೆ. ಅವುಗಳನ್ನು ಎಬ್ಬಿಸುವ ಕೆಲಸ ಯಾರೂ ಮಾಡುವುದಿಲ್ಲ. ಯಾಕೆಂದರೆ ಮಲಗಲು ಪ್ರೇರಣೆ ಕೊಟ್ಟವರೂ ಸ್ಟ್ರಾಟಜಿಸ್ಟ್‌ಗಳೇ ಆಗಿರುತ್ತಾರೆ. ಆಮೇಲೆ ನಾಟಕಕಾರನೇ ತನ್ನ ಸೃಜನೆಯ ದೃಶ್ಯಗಳ ಮತ್ತು ಪಾತ್ರ ಸಂಯೋಜನೆಯ ಪದರುಗಳನ್ನು ಒಳಗೊಂಡಿರುವ ಅಕ್ಷರಗಳ ಜೊತೆ ಸಂಧಾನಕ್ಕೆ ಮತ್ತು ಸಮಾಧಾನಕ್ಕೆ ಕೂರುವುದು ವ್ಯಸನ. ನಾಟಕ ಬರೆಯುವ ಕಷ್ಟದ ಜೊತೆಗೆ ಅವು ಹೊದ್ದು ಮಲಗುವುದನ್ನೂ ನೋಡಬೇಕಾದ ಅನಿವಾರ್ಯಕ್ಕೆ ಮೈ ಮನ ತೆತ್ತುಕೊಳ್ಳುವವನು ಮಾತ್ರ ನಾಟಕಕಾರನಾಗುತ್ತಾನೆ.

‘ಈಗ ನನಗೆ ಎಂಬತ್ತಾಯಿತು. ತಿಳುವಳಿಕೆಯೂ ಮೂಡಿದೆ ಎನ್ನುವುದು ನನ್ನ ಭಾವನೆ. ಆದರೆ ಈಗ ಮಾಡುವುದೇನು? ಕಣ್ಣು ಮಂಜಾಗಿದೆ. ಕಿವಿ ಕೇಳುವುದು ಪೂರಾ ಮಂದವಾಗಿದೆ. ಇಂಥ ಸನ್ನಿವೇಶದಲ್ಲಿ ನಾಟಕ ಲೋಕದ ಬಗ್ಗೆ ಸ್ಪಷ್ಟತೆ ಮೂಡಿದೆ. ಏನನ್ನು ಬರೆಯಲಿ? ಬರೆದದ್ದು ರೂಪುತಳೆಯುವ ಬಗೆಗೂ ನನ್ನಲ್ಲಿ ಆಸಕ್ತಿ ಇಲ್ಲ. ಜೊತೆಗೆ ಈ ಕಾಲಕ್ಕೆ ತಕ್ಕಂತೆ ಬರೆಯಬಲ್ಲೆನೆ ಎಂಬ ಅನುಮಾನವೂ ಇದೆ. ವಯಸ್ಸು ಇದ್ದಾಗ ಇಂಥ ಅವಲೋಕನಗಳೇ ನನ್ನಲ್ಲಿ ಜಿಗಿಯುತ್ತಿರಲಿಲ್ಲ. ವಯಸ್ಸು ಮುಗಿಯುತ್ತಿರುವ ಹೊತ್ತು ಅನುಮಾನಗಳು ಮಾಗಿದ ರೂಪದಲ್ಲಿ ಕಾಣಿಸಿಕೊಳ್ಳಲು ತುಡಿಯುತ್ತಿವೆ. ಆಯಿತು ಈ ಕಾಲದ ಸಂವೇದನೆ ಹಿಡಿಯೋಣ ಅಂದುಕೊಂಡರೆ ಅದು ನನ್ನನ್ನು ಅಣಕಿಸಿ ಯಾಮಾರಿಸಿ ಮಾಯಾ ಜಿಂಕೆಯ ಹಾಗೆ ಮರೆಯಾಗುತ್ತಿದೆ. ಈ ಕಾಲದ ಮಾಯಾ ಜಿಂಕೆಯನ್ನು ಹಿಡಿದೇ ತೀರಬೇಕು ಎಂದು ಹೊರಟರೆ ಕಾಲ ಬೇರೆಬೇರೆ ದಿರಿಸು ಬದಲಿಸಿಕೊಂಡು ನನ್ನನ್ನ ಚಕಿತಗೊಳಿಸುತ್ತ, ಇದು ಯಾರು ಮತ್ತು ಏನು ಎಂದು ಪ್ರಶ್ನೆಗಳನ್ನ ಹುಟ್ಟು ಹಾಕುತ್ತಿದೆ. ಕಾಲದೊಂದಿಗೆ ನಾನು ಚಲಿಸದೆ ವಿಧಿ ಇಲ್ಲ. ಆದರೆ ಕಾಲವೂ ನನ್ನೊಂದಿಗೆ ಚಲಿಸುತ್ತ ಸವಾಲು ಒಡ್ಡುತ್ತ ನಗುವ ಸದ್ದಿನ ನಡುವೆ ನಾಟಕ ಕಟ್ಟುವುದು ಕಷ್ಟದ ಕೆಲಸ.. ಏನಂತೀರಿ..