ನಮ್ಮ ಆಸ್ಟ್ರೇಲಿಯಾದಲ್ಲಿ ದೀಪಾವಳಿ ಸಮಯವೆಂದರೆ ಕತ್ತಲು ಕಡಿಮೆಯಾಗುತ್ತಾ ಹೋಗುವ ತದ್ವಿರುದ್ಧ ಕಾಲ. ಎಷ್ಟಾದರೂ ನಾವಿರುವುದು ದಕ್ಷಿಣ ಭೂಗೋಳದಲ್ಲಿ. ತಲೆಮೇಲಿನ ಉತ್ತರ ಗೋಳದಲ್ಲಿ ನಡೆಯುವ ಪ್ರಾಪಂಚಿಕ ವಹಿವಾಟುಗಳ ವಿರುದ್ಧ ದಿಕ್ಕಿನಲ್ಲಿ ನಮ್ಮ ಕಾಲ ನಡೆಯುತ್ತದೆ. ಹಬ್ಬದ ದಿನಗಳ ಸಂಜೆ ಮನೆತುಂಬಾ, ಅಂಗಳದಲ್ಲಿ ದೀಪ ಹಚ್ಚಲು ‘ಓ ಕತ್ತಲೆ ದಯವಿಟ್ಟು ಬೇಗ ಓಡಿ ಬಾ’ ಎಂದು ನಾವು ಪ್ರಾರ್ಥಿಸಬೇಕು. ಚಳಿಯಂತೂ ಹೆಚ್ಚುಕಡಿಮೆ ಮಂಗಮಾಯವಾಗಿರುತ್ತದೆ. ಇಷ್ಟಾದರೂ ನಾವುಗಳು ಹಬ್ಬ ಮಾಡಿಯೇ ಮಾಡುತ್ತೇವೆ. ಕ್ರಿಸ್ ಮಸ್ ಹಬ್ಬದಂತೆ ನಮ್ಮ ಭಾರತೀಯ  ಹಬ್ಬ ದೀಪಾವಳಿ ಕೂಡ ಗ್ಲೋಬಲ್ ಆಗಿರುವದನ್ನ ಕಂಡು ಖುಷಿಪಡುತ್ತೀವಿ
ಡಾ. ವಿನತೆ ಶರ್ಮ ಬರೆಯುವ ಆಸ್ಟ್ರೇಲಿಯಾ ಅಂಕಣ

 

ಬೆಳಕು-ಕತ್ತಲೆಯ ಸುತ್ತ ಇಡೀ ಪ್ರಪಂಚವೆಲ್ಲಾ ಗಿರಿಗಿಟ್ಟಲೆ ಹೊಡೆಯುತ್ತಿದೆಯೇನೋ ಅನಿಸುವಷ್ಟು ಅದರ ಬಗ್ಗೆ ಮಾತು, ಸಂದೇಶಗಳು ಹರಿದಾಡುತ್ತಿವೆ. ಶುರುವಾಗಿದ್ದು ದೀಪಾವಳಿ ಹಬ್ಬದಿಂದ. ಹಬ್ಬಗಳನ್ನು ಸೃಷ್ಟಿಸಿಕೊಂಡ ಮಾನವಕುಲಕ್ಕೆ ಕತ್ತಲು ಕಳೆದು ಬೆಳಕು ಮೂಡಲಿ ಎನ್ನುವ ಸಂದೇಶ ಅದೆಷ್ಟು ಮುಖ್ಯ ಅನ್ನುವುದು ಈ ಹಬ್ಬದ ಸಂದರ್ಭದಲ್ಲಿ ಇನ್ನೂವೆ ಸ್ವಲ್ಪ ಜಾಸ್ತಿ ಮನದಟ್ಟಾಗುತ್ತದೆ.

ಕಾರ್ತಿಕಮಾಸ ಕಾಲಿಟ್ಟಿತು ಅಂದರೆ ಹೊರಗಡೆ ವಾತಾವರಣದಲ್ಲಿ ಗವ್ವನೆ ಕತ್ತಲು ಕವಿಯುತ್ತದೆ ಅನ್ನೋದು ಮನುಷ್ಯರಿಗಷ್ಟೇ ಅಲ್ಲ ಮೃಗಪಕ್ಷಿಗಳಿಗೂ ಅರ್ಥವಾಗುತ್ತದೆಯಲ್ಲವೇ. ಸೂರ್ಯನ ಸುತ್ತ ಸುತ್ತುವ ಭೂಮಿ, ಬೆಳಕು-ಕತ್ತಲೆಯಾಟ. ಪ್ರಕೃತಿ ಸಹಜ ಬದಲಾವಣೆ, ಋತುಮಾನಗಳ ಚಕ್ರವದು. ಚಳಿಯನ್ನು ಬೈಯುತ್ತಲೇ ಅದನ್ನು ಆನಂದಿಸಲು ಸುಖವಾಗಿ ಕಂಬಳಿ ಹೊದ್ದು ಒಂದಷ್ಟು ಜಾಸ್ತಿ ಹೊತ್ತು ನಿದ್ರಿಸಬೇಕು. ಕತ್ತಲಿನ ಗಾಢತೆಯಲ್ಲಿ ಮೌನವ್ರತವನ್ನು ಆಚರಿಸಬೇಕು. ಎಲೆ ಉದುರಿಸುತ್ತಾ ಇಷ್ಟಿಷ್ಟೇ ಬರಿಮೈ ಬಿಟ್ಟುಕೊಂಡು ಬೋಳಾಗುವ ಮರಗಿಡಗಳನ್ನು ನೋಡುತ್ತಾ ಇನ್ನಷ್ಟು ಚಕಿತರಾಗಬೇಕು. ಕತ್ತಲೆಯ ಮಾಯಾವಿ ಲೋಕಕ್ಕೆ ಜಾರಿದಾಗ ಅಲ್ಲಿರುವ ರಾಜಕುಮಾರಿ, ರಾಜಕುಮಾರ, ರಾಕ್ಷಸ, ಬೇತಾಳ, ಸ್ಮಶಾನ, ಮಂತ್ರವಾದಿ ಎಲ್ಲರನ್ನೂ ಮಾತನಾಡಿಸಬಹುದು. ಮಾತು ಮುಗಿದಾದ ಮೇಲೆ ಮಾಯಾ ಕಂಬಳಿಯ ಮೇಲೆ ಕೂತು ಹಾರಿಕೊಂಡು ಬಂದು ನಮ್ಮ ಬೆಳಕಿನ ಲೋಕಕ್ಕೆ ಮರಳಬಹುದು. ಕತ್ತಲೆಯಿದ್ದರೆ ಮಾತ್ರ ಈ ಮಾಯಾಲೋಕಕ್ಕೆ ಪ್ರವೇಶಿಸಬಹುದು. ‘ಕಪ್ಪು ಕತ್ತಲೆ’ ಅನ್ನೋದೇ ಅದರ ಎಂಟ್ರಿ ಪಾಸ್ ವರ್ಡ್.

ಧರ್ಮಗಳನ್ನು, ದೇವರುಗಳನ್ನು, ಪುರಾಣಕಥೆಗಳನ್ನು ಹುಟ್ಟುಹಾಕಿದ ನಮಗೆ ಅವು ಒಳಗಿನ ಕತ್ತಲೆಯನ್ನು ಹೊಡೆದೋಡಿಸಿ ಬೆಳಕಿನ ಜ್ಞಾನದೀಪವನ್ನು ಹಚ್ಚುವ ಕಾಲವಾಗಿ ಮೂಡಿಬರುತ್ತದೆ. ಹೊಸ ಬಗೆಯ ಸಂದೇಶಗಳು, ನೂತನ ಪದಗಳಿಂದ ಕಟ್ಟಿದ ಶುಭಹಾರೈಕೆಗಳು, ಪುಟ್ಟ ಕವನಗಳಿಂದ ಸಾಮಾಜಿಕ ಜಾಲತಾಣಗಳು ತುಂಬಿತುಳುಕಾಡುತ್ತವೆ. ಫೇಸ್ ಬುಕ್, ವಾಟ್ಸಾಪ್, ಮೆಸೆಂಜರ್ ತಾಣಗಳು ನವೀನ ಕವಿತ್ವಕ್ಕೆ ಸಾಕ್ಷಿಯಾಗುತ್ತವೆ. ದೀಪಗಳನ್ನು ಮತ್ತು ಸಂದೇಶವನ್ನು ವಿನ್ಯಾಸಗೊಳಿಸುವ ಕಲ್ಪನೆಗಳ ವಿಧಗಳೇ ವಾಹ್ ಅನ್ನುವಷ್ಟು ಅಚ್ಚರಿ ಹುಟ್ಟಿಸುತ್ತವೆ.

ಬೆಳಕೇ ನಮ್ಮಯ ಆಶಾದೀಪ. ಮನದೊಳಗಿನ ಕತ್ತಲನ್ನು ಹೊಡೆದೋಡಿಸುವುದೇ ನಮ್ಮಯ ನಿತ್ಯಧ್ಯಾನ. ಕಪ್ಪು ಕತ್ತಲನ್ನು ಪ್ರಕೃತಿಯ ಸಹಜತೆಯಿಂದ ಬೇರ್ಪಡಿಸಿ ತನ್ನ ಆತ್ಮಕ್ಕಂಟಿಸಿಕೊಂಡು ಬೆಳಕೇ ಆತ್ಮೋದ್ಧಾರದ ಬಾಗಿಲು ಎಂದೆಲ್ಲ ಹೇಳುತ್ತಾ ಆಧ್ಯಾತ್ಮಿಕ ಸಂದೇಶಗಳಿಗೆ ಜನ್ಮಕೊಡುವ ಮಾನವರ ಮನಸ್ಸಿನ ಕಲ್ಪನಾರೂಪಗಳನ್ನು ನೋಡುತ್ತಾ ಬೆರಗಾಗಿ ಹೂಂಗುಟ್ಟಲೇಬೇಕು. ಕತ್ತಲಿನ ಸೌಂದರ್ಯವನ್ನು ಮೆಚ್ಚಿದರೆ ಥೂ ನಿನ್ನ, ತಲೆ ನೆಟ್ಟಗಿದ್ಯೋ ಇಲ್ಲವೋ ಅಂತ ಬೈಯುತ್ತಾರೆ. ಮೈತುಂಬಾ, ತಲೆಮೇಲೆ ಕಪ್ಪು ಕಂಬಳಿ ಹೊದ್ದು ಪೊದೆಯಲ್ಲಿ ಅಡಗಿಕೂತು ಅಕ್ಕಪಕ್ಕ ಓಡಾಡುವ ನಿಶಾಚರ ಪ್ರಾಣಿಗಳನ್ನು ನೋಡಲು ಕತ್ತಲಿದ್ದರೆ ಮಾತ್ರ ಸಾಧ್ಯ. ಗಾಢಾಂಧಕಾರದಲ್ಲಿ ಮುಳುಗಿದ್ದು, ಬಯಲಲ್ಲಿ ಮಲಗಿ ಆಕಾಶಕಾಯಗಳನ್ನು, ನಕ್ಷತ್ರಗಳನ್ನು ಎಣಿಸುವುದು, ಆಕಾಶದಲ್ಲೊಂದು ಬೆಳಕಿನ ಬಾಲ ಭೂಮಿಯೆಡೆಗೆ ಧಾವಿಸಿದಾಗ ನಮ್ಮಲ್ಲೊಂದು wish ಹುಟ್ಟುವುದು, ಚಿಕ್ಕಮಕ್ಕಳು ಮನಸ್ಸಿನಲ್ಲೇ ಗುಟ್ಟಾಗಿ, ಕಡುಮೌನದಿಂದ ಮಾಡಿದ ತಮ್ಮ wish ಯಾವುದು ಎಂದು ಪಿಸುಗುಟ್ಟುತ್ತಾ ಅದನ್ನು ಹೇಳಿದಾಗ, ಅವರ ಕಣ್ಣುಗಳು ಇಷ್ಟಗಲ ಅರಳಿದಾಗ ಅದನ್ನು ನೋಡುವುದು, ಓಹ್ ಎಷ್ಟು ಚೆನ್ನ! ಓ ಕತ್ತಲೇ ನಿನಗೆ ತುಂಬಾ ಥ್ಯಾಂಕ್ಸ್! ನೀನಿಲ್ಲದೆ ಬೆಳಕೆಂದೂ ನನಗೆ ಆಶಾದೀಪವಾಗುವುದಿಲ್ಲ.


ನಮ್ಮ ಆಸ್ಟ್ರೇಲಿಯಾದಲ್ಲಿ ದೀಪಾವಳಿ ಸಮಯವೆಂದರೆ ಕತ್ತಲು ಕಡಿಮೆಯಾಗುತ್ತಾ ಹೋಗುವ ತದ್ವಿರುದ್ಧ ಕಾಲ. ಎಷ್ಟಾದರೂ ನಾವಿರುವುದು ದಕ್ಷಿಣ ಭೂಗೋಳದಲ್ಲಿ. ತಲೆಮೇಲಿನ ಉತ್ತರ ಗೋಳದಲ್ಲಿ ನಡೆಯುವ ಪ್ರಾಪಂಚಿಕ ವಹಿವಾಟುಗಳ ವಿರುದ್ಧ ದಿಕ್ಕಿನಲ್ಲಿ ನಮ್ಮ ಕಾಲ ನಡೆಯುತ್ತದೆ. ಹಬ್ಬದ ದಿನಗಳ ಸಂಜೆ ಮನೆತುಂಬಾ, ಅಂಗಳದಲ್ಲಿ ದೀಪ ಹಚ್ಚಲು ‘ಓ ಕತ್ತಲೆ ದಯವಿಟ್ಟು ಬೇಗ ಓಡಿ ಬಾ’ ಎಂದು ನಾವು ಪ್ರಾರ್ಥಿಸಬೇಕು. ಚಳಿಯಂತೂ ಹೆಚ್ಚುಕಡಿಮೆ ಮಂಗಮಾಯವಾಗಿರುತ್ತದೆ. ಇಷ್ಟಾದರೂ ನಾವುಗಳು ಹಬ್ಬ ಮಾಡಿಯೇ ಮಾಡುತ್ತೇವೆ. ಕ್ರಿಸ್ ಮಸ್ ಹಬ್ಬದಂತೆ ನಮ್ಮ ಭಾರತೀಯ  ಹಬ್ಬ ದೀಪಾವಳಿ ಕೂಡ ಗ್ಲೋಬಲ್ ಆಗಿರುವದನ್ನ ಕಂಡು ಖುಷಿಪಡುತ್ತೀವಿ. ದೀಪ ಹಚ್ಚಿ, ಬಲು ಹುಷಾರಾಗಿ ಕೈಯಲ್ಲಿ sparklers ಹಿಡಿದು ‘ಪಟಾಕಿ ಹಬ್ಬ’ ಆಚರಿಸುತ್ತೀವಿ.

ಇದೇ ಕಾಲದಲ್ಲಿ ಇಡೀ ಆಸ್ಟ್ರೇಲಿಯಾ ಹ್ಯಾಲೋವೀನ್ (Halloween) ಎಂಬ ಮತ್ತೊಂದು ಆಚರಣೆಗೆ ಸಂಭ್ರಮದಿಂದ ತಯಾರಾಗುತ್ತದೆ. ಹ್ಯಾಲೋವೀನ್ ಆಚರಣೆ ಪ್ರತಿವರ್ಷ ಅಕ್ಟೋಬರ್ ೩೧ರಂದು ನಡೆಯುವುದು. ಇದಕ್ಕೂ ಮುಂಚಿತವಾಗೇ ಅಂಗಡಿಗಳಲ್ಲಿ ಬಗೆಬಗೆಯ ಭಯ ಹುಟ್ಟಿಸುವ ಹ್ಯಾಲೋವೀನ್ ಆಚರಣೆಯ ಭೂತ ಪ್ರೇತಗಳ ಪೋಷಾಕುಗಳು, ವಿಕಾರ ಮುಖವಾಡಗಳು, ಫೇಸ್ ಪೈಂಟ್, ನೂರಾರು ಬಗೆಗಳ ಸಿಹಿ ಮತ್ತು ಚಾಕಲೇಟ್ ಕೊಳ್ಳುವುದು ಚುರುಕಾಗಿ ನಡೆಯುತ್ತದೆ. ವ್ಯಾಪಾರೀಕರಣದ ಮತ್ತೊಂದು ಉದಾಹರಣೆ, ಕೊಳ್ಳುಬಾಕತನಕ್ಕೆ ಹೇಳಿಮಾಡಿಸಿದ್ದು ಎಂದು ಗೊಣಗುವುದೂ ಇದೆ.

ಕತ್ತಲೆಯ ಮಾಯಾವಿ ಲೋಕಕ್ಕೆ ಜಾರಿದಾಗ ಅಲ್ಲಿರುವ ರಾಜಕುಮಾರಿ, ರಾಜಕುಮಾರ, ರಾಕ್ಷಸ, ಬೇತಾಳ, ಸ್ಮಶಾನ, ಮಂತ್ರವಾದಿ ಎಲ್ಲರನ್ನೂ ಮಾತನಾಡಿಸಬಹುದು. ಮಾತು ಮುಗಿದಾದ ಮೇಲೆ ಮಾಯಾ ಕಂಬಳಿಯ ಮೇಲೆ ಕೂತು ಹಾರಿಕೊಂಡು ಬಂದು ನಮ್ಮ ಬೆಳಕಿನ ಲೋಕಕ್ಕೆ ಮರಳಬಹುದು. ಕತ್ತಲೆಯಿದ್ದರೆ ಮಾತ್ರ ಈ ಮಾಯಾಲೋಕಕ್ಕೆ ಪ್ರವೇಶಿಸಬಹುದು. ‘ಕಪ್ಪು ಕತ್ತಲೆ’ ಅನ್ನೋದೇ ಅದರ ಎಂಟ್ರಿ ಪಾಸ್ ವರ್ಡ್.

ಹ್ಯಾಲೋವೀನ್ ಕಾಲವೆಂದರೆ ಋತುಮಾನಗಳಲ್ಲಿ ಗುರುತರ ಬದಲಾವಣೆಯಾಗಿ (ಚಳಿಗಾಲಕ್ಕೆ ದಾಪುಗಾಲು ಹಾಕುತ್ತಾ), ಇದೇ ಸಂದರ್ಭದಲ್ಲಿ ಸತ್ತುಹೋಗಿರುವ ನಮ್ಮವರನ್ನು ನೆನಪಿಸಿಕೊಳ್ಳುವುದಂತೆ. ಹಾಗಂತ ಇಂಗ್ಲೆಂಡಿನಲ್ಲಿದ್ದಾಗ ಗೊತ್ತಾಯ್ತು.   ದೂರದ ಬ್ರಿಟನ್ನಿನಲ್ಲಿ ಮತ್ತು ಅಮೆರಿಕೆಯ ಚಳಿಯಲ್ಲಿ ತುಂಬಾ ಜೋರಾಗಿ ನಡೆಯುವ ಅನುಕರಣೆಯ ಹ್ಯಾಲೋವೀನ್ ಆಸ್ಟ್ರೇಲಿಯಾದಲ್ಲೂ ನಡೆಯುತ್ತದೆ. ಆ ದೇಶಗಳಲ್ಲಿ ಪದ್ಧತಿಯಂತೆ ದೊಡ್ಡದೊಡ್ಡ ಸಿಹಿ ಕುಂಬಳಕಾಯಿಗಳನ್ನ ಮುಖದಂತೆ ಕೆತ್ತಿ ಅದರೊಳಗೆ ದೀಪವನ್ನಿಟ್ಟು, ಕುಂಬಳಕಾಯಿಯನ್ನು ಮನೆಮುಂದೆ ಪ್ರದರ್ಶಿಸುತ್ತಾರೆ. ಹ್ಯಾಲೋವೀನ್ ಭಯಂಕರ ಭೂತ, ಪ್ರೇತದಂತೆ ಪೋಷಾಕು ಧರಿಸಿ, ಕೂದಲಿಗೆ, ಮುಖಕ್ಕೆ ಬಣ್ಣ ಹಚ್ಚಿಕೊಂಡು, ಮುಖವಾಡಗಳನ್ನು ಹಾಕಿಕೊಂಡು ಮಕ್ಕಳು ಗುಂಪುಗುಂಪಾಗಿ ಕುಂಬಳಕಾಯಿಯನ್ನು ನೋಡಲು ಮನೆಮನೆಗೆ ಹೋಗುತ್ತಾರೆ. ಮನೆ ಬಾಗಿಲು ಬಡಿದು ‘ಟ್ರಿಕ್ ಆರ್ ಟ್ರೀಟ್’ ಎಂದು ಕೇಳುತ್ತಾರೆ. ಟ್ರೀಟ್ ಅಂದರೆ ಮನೆಯವರು ಮಕ್ಕಳಿಗೆ ಸಿಹಿ ತಿಂಡಿಗಳನ್ನು ಕೊಡಬೇಕು. ಟ್ರಿಕ್ ಅಂದರೆ ಮಕ್ಕಳು ಯಾವುದಾದರೂ ಭಯಹುಟ್ಟಿಸುವ ಟ್ರಿಕ್ ಮಾಡಿ ತೋರಿಸಬೇಕು. ಇಂಗ್ಲೆಂಡಿನ ಚಳಿಯಲ್ಲಿ ಈ ಹಬ್ಬದ ಆಚರಣೆ ನಮ್ಮ ದೀಪಾವಳಿಯಷ್ಟೇ ಖುಷಿ ಕೊಟ್ಟಿತ್ತು.

ಇಂಗ್ಲೆಂಡಿನ ಪುಟ್ಟಪುಟ್ಟ ಹಳ್ಳಿಗಳಲ್ಲಿ ನಡೆಯುವ ಹ್ಯಾಲೋವೀನ್ ಹಬ್ಬದಾಚರಣೆಗೆ ಹಳ್ಳಿಯ ಏಕಮಾತ್ರ ಶಾಲೆ, ಚರ್ಚ್, ಹಳ್ಳಿಯ ಸಮುದಾಯ ಒಟ್ಟಾಗಿ ಸೇರಿ ಸಿದ್ಧವಾಗುತ್ತಾರೆ. ಅಲ್ಲಿರುವ ಆಶಯ ಮಕ್ಕಳು ಖುಷಿಪಡಬೇಕು ಎನ್ನುವುದು. ಹಾಗಾಗಿ ಕುಂಬಳಕಾಯಿ ಮುಖ ಕೆತ್ತನೆಯಲ್ಲಿ ಬಹಳ ಆಸಕ್ತಿ, ಮುತುವರ್ಜಿಯಿರುತ್ತದೆ. ಕೆಲವರು ತಮ್ಮ ಮನೆಮುಂದೆ ಹಿಂದಿನ ಕಾಲದಲ್ಲಿದ್ದಂತೆ ಲ್ಯಾಂಟರ್ನ್ ಕೂಡ ತೂಗು ಹಾಕುತ್ತಾರೆ. ಕೆಲವರಂತೂ ತಮ್ಮ ಮನೆ ಮುಂದೆ ಮಕ್ಕಳ ಗುಂಪು ಬಂದು ಬಾಗಿಲು ತಟ್ಟುವುದನ್ನೇ ಕಾಯುತ್ತಿರುತ್ತಾರೆ.

ಮಕ್ಕಳಿಗೆಂದು ವಿವಿಧ ಕೇಕುಗಳನ್ನು, ಸಿಹಿ ತಿಂಡಿಗಳನ್ನು ತಾವೇ ಕೈಯಾರೆ ತಯಾರಿಸಿ ಕಾದಿರಿಸುತ್ತಾರೆ. ತಮ್ಮ ಮನೆಯಲ್ಲಿ ಚಿಕ್ಕ ಮಕ್ಕಳಿಲ್ಲದೆ ಇರುವವರಂತೂ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ‘ಟ್ರಿಕ್ ಆರ್ ಟ್ರೀಟ್’ ಎಂದು ಕೇಳುವ ಪುಟಾಣಿಗಳಿಗೆ ಚಿಕ್ಕದೊಂದು ಟ್ರಿಕ್ ಮಾಡಿ ತೋರಿಸುವಂತೆ ಹೇಳಿ ಅವರಿಗೆ ಪುಟ್ಟಪುಟ್ಟ ಉಡುಗೊರೆಗಳನ್ನೂ ಕೊಡುತ್ತಾರೆ. ಹಳ್ಳಿಗಳ ಸಮುದಾಯ ಭವನದಲ್ಲಿ ದೊಡ್ಡವರಿಗೆಂದು mulled wine, ಕೇಕ್, ಸ್ಕೋನ್ ಇತ್ಯಾದಿಗಳನ್ನು ತಿನ್ನಲು ಕುಡಿಯಲು ಇತ್ತು ನಮಗೂ ಬೇಕು ಒಂದು ಹಬ್ಬ ಎನ್ನುವಂತೆ ಸೇರಿಬಿಡುತ್ತಾರೆ. ಇಡೀ ವಾತಾವರಣದ ಒಗ್ಗಟ್ಟು ಬಹಳ ಚೆನ್ನಿರುತ್ತದೆ.

ಆಸ್ಟ್ರೇಲಿಯಾದಲ್ಲಿ ಇಂಗ್ಲೆಂಡಿನಷ್ಟು ಜೋಶಿಲ್ಲವಾದರೂ ಅಲ್ಲೊಂದು ಇಲ್ಲೊಂದು ಕಾಣಿಸುವ ಕುಂಬಳಕಾಯಿ ಮುಖದ ಕೆತ್ತನೆ, ಅದರೊಳಗೆ ಕೂತಿರುವ ದೀಪಗಳನ್ನು ನೋಡುವುದು, ಬಗೆಬಗೆಯ ಪೋಷಾಕುಗಳನ್ನು ನೋಡುವುದು ಚೆನ್ನ. ಅಲ್ಲಲ್ಲಿ ಮಕ್ಕಳಿಗಾಗಿಯೇ ನಡೆಯುವ ಪಾರ್ಟಿಗಳಿದ್ದರೆ, ಬೇರೆ ಕಡೆ ಬರಿ ದೊಡ್ಡವರ ಹ್ಯಾಲೋವೀನ್ ಪಾರ್ಟಿಗಳು ನಡೆಯುತ್ತವೆ. ದೀಪಾವಳಿಯಂತೆಯೇ ಹ್ಯಾಲೋವೀನ್ ಆಚರಣೆಗೂ ಕೂಡ ಬೇಕಾದಷ್ಟು ಹಣ ಖರ್ಚಾಗುತ್ತದೆ. ಬಹುಶಃ ಒಳಪ್ರದೇಶಗಳ ಹಳ್ಳಿಗಳಲ್ಲಿ ಕೂಡ ಇಡೀ ಸಮುದಾಯವೇ ಸೇರಿ ನಡೆಸುತ್ತಾರೇನೋ. ನಾನಂತೂ ಹೆಚ್ಚು ಕೇಳಿಲ್ಲ.

ಭಾರತದ ಹೊರಗಡೆ ಇದ್ದುಕೊಂಡು ಈ ಎರಡೂ ಹಬ್ಬಗಳನ್ನು ಒಟ್ಟೊಟ್ಟಿಗೆ ನೋಡುವುದು ಕುತೂಹಲವೆನಿಸುತ್ತದೆ. ಒಂದು ಕತ್ತಲಿನ ಅಂಧಕಾರವನ್ನು ನೀಗಿ ಬೆಳಕನ್ನು ಹರಡುವುದು, ಮೂರು ದಿನಗಳ ಕಾಲ ದೇವದೇವಿಯರನ್ನು ಪೂಜಿಸಿ, ಹೊಸ ಬಟ್ಟೆ ಧರಿಸಿ, ಚೆನ್ನಾದ ಅಡುಗೆ, ಭಕ್ಷ್ಯಗಳನ್ನು ಮಾಡಿಕೊಂಡು ತಿನ್ನುವುದು. ಮನೆಮಂದಿ, ಸ್ನೇಹಿತರು ಸೇರಿ ಪರದೇಶದ ಊರುಗಳಲ್ಲಿ ನಾನಾ ತರಹದ ಆಚರಣೆಗಳನ್ನು ಮುತುವರ್ಜಿಯಿಂದ ಮಾಡುತ್ತಾ ತಮ್ಮ ತವರನ್ನು ನೆನೆಯುವುದು. ಹಾಗೆ ಮಾಡುತ್ತಾ ನಮ್ಮ ಹಬ್ಬವನ್ನು ಪರದೇಶದ ಸಮಾಜದಲ್ಲಿ ಸೇರ್ಪಡಿಸಲು ಪ್ರಯತ್ನಿಸುವುದು. ನಿಧಾನವಾಗಿ ನಾವು ಅವರಾಗುತ್ತಾ, ಅವರನ್ನು ನಮ್ಮವರನ್ನಾಗಿಸಿಕೊಳ್ಳುವುದು.

ಇನ್ನೊಂದು, ಅಂದರೆ ಈ ಹ್ಯಾಲೋವೀನ್ ಹಬ್ಬ ಸತ್ತವರ ಆತ್ಮಗಳನ್ನು ನೆನೆಸಿಕೊಳ್ಳುವ, ಅಕ್ಟೋಬರ್ ೩೧ರಿಂದ ಆರಂಭವಾಗುವ ಮೂರು ದಿನಗಳ ಆಚರಣೆ. ದೀಪಾವಳಿ ಹಬ್ಬ ಹಿಂದೂ ಕ್ಯಾಲೆಂಡರಿನಂತೆ ಪ್ರತಿವರ್ಷ ಬೇರೆಬೇರೆ ತಾರೀಖುಗಳಲ್ಲಿ ಜರುಗುತ್ತದೆ. ಹ್ಯಾಲೋವೀನ್ ಹಾಗಲ್ಲ. ಕ್ರಿಶ್ಚಿಯನ್ ಕ್ಯಾಲೆಂಡರಿನಂತೆ ಕರಾರುವಕ್ಕಾಗಿ ಪ್ರತಿ ವರ್ಷ ಅದೇ ತಿಂಗಳು, ಅದೇ ತಾರೀಕಿನಂದು ಇರುತ್ತದೆ. ಆದರೆ ಎರಡೂ ಹಬ್ಬಗಳಲ್ಲಿ ಇರುವ ಸಾಮ್ಯತೆಯೆಂದರೆ ಅವು ಕತ್ತಲು-ಬೆಳಕಿಗೆ ಸಂಬಂಧಿಸಿದ್ದು. ದಿನದ ಹೊತ್ತಿನ ಬೆಳಕು ಕ್ರಮೇಣ ಕಡಿಮೆಯಾಗುತ್ತಾ ಚಳಿಗಾಲ ಸಮೀಪಿಸುವ ಹೊಸ್ತಿಲಿನಲ್ಲಿ ಈ ಹಬ್ಬಗಳ ಆಚರಣೆಗಳು ಹೆಚ್ಚು ಪ್ರಸ್ತುತವಾಗುತ್ತವೆ.

ಕತ್ತಲು ನಮಗೆ ಇಷ್ಟವಾಗುವುದಿಲ್ಲ, ಭಯ ಹುಟ್ಟಿಸುತ್ತದೆ, ಕಡುಚಳಿಯಿರುವ ಹಿಮ ದೇಶದ ಜನರಲ್ಲಿ ಚಳಿಗಾಲ ಬಂತೆಂದರೆ ಕೆಲವರಿಗೆ ಮಾನಸಿಕ ಖಿನ್ನತೆಯುಂಟಾಗುತ್ತದೆ. ಇವನ್ನು ದೂರಮಾಡಲು ಬೆಳಕು ಬರಬೇಕು, ಜೊತೆಯಿರಬೇಕು, ಶಾಖವಿರಬೇಕು. ಸಿಹಿತಿಂಡಿ, ಹಣ್ಣುಗಳನ್ನು ತಿನ್ನುತ್ತಾ ಸಂಭ್ರಮಿಸಬೇಕು. ಅದಕ್ಕೆ ಸಮಾನಾಂತರವಾಗಿ ಸತ್ತವರನ್ನು ನೆನೆಯಬೇಕು. ಸಂತಾಪ ಸೂಚಿಸುತ್ತಾ ಅವರಂತೆ ನಾವೂ ಕೂಡ ಒಂದಲ್ಲ ಒಂದು ದಿನ ಹೋಗಬೇಕಾದ್ದೇ, ಹಾಗಾಗಿ ಭೂಮಿ ಮೇಲೆ ಇರುವಾಗ ಒಳ್ಳೇದನ್ನ ನೆನೆಯೋಣ, ಬೆಳಕನ್ನು ಹುಟ್ಟಿಸಿಕೊಂಡು ಆಶಾವಾದವನ್ನು ನಿಲ್ಲಿಸೋಣ ಎಂದು ತತ್ವಜ್ಞಾನಿಗಳಾಗಬೇಕು. ಕತ್ತಲು ತುಂಬಿದ ದಿನಗಳು ಉದ್ದವಾದಂತೆ ಒಳಗೊಳಗೇ ಅಂಧಕಾರ ಕವಿದು ನಮಗೆ ಅರಿವಾಗದಂತೆ ಹೆಚ್ಚಾಗುವ ನಮ್ಮ ಮನಸ್ಸುಗಳಲ್ಲಿ ಗುಟ್ಟಾಗಿದ್ದ, ಅಡಗಿದ್ದ ವಿಕಾರಗಳು ಉಲ್ಬಣವಾಗದಂತೆ ನೋಡಿಕೊಳ್ಳಬೇಕು. ವಿಕೋಪಗಳನ್ನು ಕಡಿಮೆ ಮಾಡು ದೇವರೇ ಎಂದು ಪ್ರಾರ್ಥಿಸಬೇಕು.


ಏನೋ ಒಟ್ಟಾರೆ ಇವೆಲ್ಲಕ್ಕೂ ಒಂದು ಹಬ್ಬ ಸೃಷ್ಟಿಯಾಗಬೇಕು. ಹಬ್ಬ ಮಾಡುತ್ತಾ ನಾವೆಲ್ಲ ಮತ್ತೆ ಒಳ್ಳೆಯವರಾಗಬೇಕು. ಈ ಅಕ್ಟೋಬರ್ ತಿಂಗಳಲ್ಲಿ ಆಸ್ಟ್ರೇಲಿಯಾದ ಪ್ರಕೃತಿಯಲ್ಲಿ ಬೆಳಕು ತುಂಬಿತುಳುಕುತ್ತಿದ್ದರೂ ನಾವು ಕತ್ತಲೆಯನ್ನು ಓಡಿಸುತ್ತಾ ಬಾ ಬೆಳಕೇ ಎಂದು ಹಾಡಬೇಕು.