ಅವರು ಉತ್ತರ ಕನ್ನಡದ ಎಲ್ಲೆಂದರಲ್ಲಿ ಹೋರಾಟದ ಮುಂಚೂಣಿಯಲ್ಲಿರುತ್ತಿದ್ದರು. ಒಂದು ಕಡೆ ಮಹಿಳೆಯರ ಸಂಘಟನೆ. ಇನ್ನೊಂದು ಕಡೆ ಸಾಕ್ಷರತಾ ಸಭೆ, ಮತ್ತೊಂದು ಕಡೆ ದೇಶೀಯ ಔಷಧಿಗಳ ಮಹತ್ವದ ಕುರಿತು ಮಾತನಾಡುವುದು, ಇನ್ನೊಂದು ಕಡೆ ಸರಳ ಜೀವನ ವಿಧಾನದ ಬಗ್ಗೆ ತಿಳಿ ಹೇಳುವುದು. ಹೀಗೆ ನಮ್ಮ ಕುಸುಮಕ್ಕನ ಅವತಾರಗಳು ಬಹಳವಾಗಿದ್ದವು. ಭತ್ತದ ಒಂದು ಹಿಡಿ ಸೂಡಿನಂತಿದ್ದ ಆ ದೇಹದೊಳಗೆ ಅದೆಷ್ಟು ಚೈತನ್ಯದ ಬೀಜಗಳಿದ್ದವೊ ನಾನರಿಯೆ.
ರಂಜಾನ್ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿಯ 91ನೇ ಕಂತು ನಿಮ್ಮ ಓದಿಗೆ
ಹಾಲಕ್ಕಿ ಮಹಿಳೆ ಸುಕ್ರಿ ಗೌಡ ಅವರಿಗೆ ಅಂಕೋಲದಲ್ಲಿ ಸನ್ಮಾನ ಸಮಾರಂಭವಿತ್ತು. ಉತ್ತರ ಕನ್ನಡದ ‘ಜನಪದ ಕೋಗಿಲೆ’ ಎಂದೇ ಖ್ಯಾತಿ ಪಡೆದ ಈಕೆಗೆ ಅದೇ ತಾನೆ ರಾಜ್ಯೋತ್ಸವ ಪ್ರಶಸ್ತಿಯನ್ನು ಸರ್ಕಾರ ಘೋಷಿಸಿತ್ತು.
‘ಸರ್ಕಾರ ನನಗೆ ರಾಜ್ಯೋತ್ಸವ ಪ್ರಶಸ್ತಿ ಕೊಡುವ ಬದಲು ನಮ್ಮೂರಿನಲ್ಲಿ ಮದ್ಯಪಾನ ನಿಷೇಧ ಮಾಡಿದ್ದರೆ ಅದೇ ನನಗೆ ಬಹಳ ಸಂತೋಷ ತರುತ್ತಿತ್ತು’ ಎಂದು ಆ ಸಮಾರಂಭದಲ್ಲಿ ಸನ್ಮಾನಕ್ಕೆ ಉತ್ತರವಾಗಿ ಸುಕ್ರಿ ಹೇಳಿದಳು. ‘ನಾವು ಹಿಂದುಳಿದ ಜನ, ಬೆಟ್ಟ ಹತ್ತಿ, ಗದ್ದೆ ಕೊಯ್ಲಿಗೆ ಹೋಗಿ ಬಂದು ಗಂಡಂದಿರನ್ನು ಸಾಕಬೇಕಾಗಿದೆ’ ಎಂದು ಆಕೆ ದುಃಖ ವ್ಯಕ್ತಪಡಿಸಿದಳು. ಕೂಲಿ ಮಾಡುವ ಈ ಕೋಗಿಲೆ ಪ್ರಶಸ್ತಿ ಸಿಕ್ಕ ದಿನ ಗದ್ದೆ ಗೊಯ್ಲಿನ ತನ್ನ ಕರ್ತವ್ಯದಲ್ಲಿ ನಿರತವಾಗಿತ್ತು.
ಬುಡಕಟ್ಟು ಜನಾಂಗವಾದ ಹಾಲಕ್ಕಿ ಗೌಡರು, ಪ್ರಾಮಾಣಿಕತೆಗೆ ಮತ್ತು ಬೇಸರವಿಲ್ಲದ ದುಡಿಮೆಗೆ ಹೆಸರಾದವರು. ಕುಡಿತ ಅವರಿಗೆ ಗೊತ್ತೇ ಇರಲಿಲ್ಲ! 19ನೇ ಶತಮಾನದ ಬಾಂಬೆ ಗೆಜೆಟಿಯರ್‌ನಲ್ಲಿನ ಮದ್ಯ ಸೇವನೆ ಮಾಡದ ಜನಾಂಗಗಳ ಪಟ್ಟಿಯಲ್ಲಿ ಈ ಹಾಲಕ್ಕಿ ಜನಾಂಗದ ಹೆಸರೂ ಇದೆ. ಆದರೆ ಈಗ ನೋಡಿ, ಸುಕ್ರಿ ಗೌಡ ಹೇಳುವ ವಾತಾವರಣವಿದೆ.
ಇಡೀ ಉತ್ತರ ಕನ್ನಡದಲ್ಲಿ ಕುಡಿತ, ನಿರಕ್ಷರತೆ, ಅರಣ್ಯ ನಾಶ, ಅಣುಶಕ್ತಿ ಮತ್ತು ಭೋಗಲಾಲಸೆಗಳ ಐಹಿಕ ದುರಾಶೆಯ ಬದುಕಿನ ವಿರುದ್ಧ ಹೋರಾಟ ಮಾಡುತ್ತ ಬದುಕನ್ನೇ ಸವೆಸಿ ಮಾಯವಾದ ಕುಸುಮಕ್ಕ (ಡಾ|| ಕುಸುಮಾ ಸೊರಬ), ಬಡ ಸುಕ್ರಿ ಗೌಡರಂಥ ಸಹಸ್ರಾರು ಮಹಿಳೆಯರ ನಾಲಗೆಯ ಮೇಲೆ ಧ್ವನಿಯ ಅವತಾರ ತಾಳಿ ನಮ್ಮನ್ನೆಲ್ಲ ಎಚ್ಚರಿಸುತ್ತಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ 1991ರಿಂದ ನಾಲ್ಕೂವರೆ ವರ್ಷ ಪ್ರಜಾವಾಣಿ, ಡೆಕ್ಕನ್ ಹೆರಾಲ್ಡ್ ಬಾತ್ಮೀದಾರನಾಗಿ ನಾನು ಕಾರವಾರದಲ್ಲಿದ್ದ ಸಂದರ್ಭದಲ್ಲಿ ಕುಸುಮಕ್ಕನ ಜೀವನದ ಅನೇಕ ರೂಪಗಳನ್ನು ನೋಡಿದ್ದೇನೆ. ವೈದ್ಯೆಯಾಗಿ, ಶಿಕ್ಷಣ ತಜ್ಞೆಯಾಗಿ, ಪರಿಸರವಾದಿಯಾಗಿ, ಸಾಮಾಜಿಕ ಕಾರ್ಯಕರ್ತೆಯಾಗಿ ಆಕೆ ಗಮನ ಸೆಳೆದಿದ್ದರು. ಕನಸುಗಳನ್ನು ವಾಸ್ತವಕ್ಕೆ ತರುವ ಕಲೆ ಅವರಿಗೆ ಕರಗತವಾಗಿತ್ತು.
‘ವಿಶ್ವದಲ್ಲಿ ಅನೇಕ ಮಹಾನ್ ವ್ಯಕ್ತಿಗಳಿದ್ದಾರೆ; ಆದರೆ ಏನು ಮಾಡುವುದು, ಅವರು ಮೋಡಗಳ ಜೊತೆ ಮಾತನಾಡುತ್ತಾರೆʼ ಎಂಬ ಮಾತು ಪಾಬ್ಲೊ ನೆರುದಾ ಕವನವೊಂದರಲ್ಲಿ ಬರುತ್ತದೆ. ಕುಸುಮಕ್ಕ ಇಂಥ ‘ಮಹಾವ್ಯಕ್ತಿ’ ಆಗಿರಲಿಲ್ಲ. ಲೋಕದ ಜೊತೆ ಮಾತನಾಡುವ ಕೇವಲ (ಪವಿತ್ರ) ಮನುಷ್ಯಳಾಗಿದ್ದಳು. ಅವರು ತಮ್ಮ ಜೀವಭಾವದ ಪರಿಶುದ್ಧತೆಯನ್ನು ನಮಗೆ ಬಳುವಳಿಯಾಗಿ ಬಿಟ್ಟುಹೋಗಿದ್ದಾರೆ.
ಅವರು ಪರಿಸರದ ಮತ್ತು ಅಣುವಿರೋಧಿ ಸಭೆ ಸಮಾರಂಭಗಳಲ್ಲಿ ಸಹ್ಯಾದ್ರಿಯನ್ನು ಕೊಂಡಾಡುವ ಪ್ರಾರ್ಥನಾ ಗೀತವನ್ನು ತದೇಕ ಚಿತ್ತದಿಂದ ಹಾಡುವಾಗ ನನ್ನ ಕಣ್ಣುಗಳು ತೇವವಾದದ್ದುಂಟು.
ಅವರು ಉತ್ತರ ಕನ್ನಡದಲ್ಲಿ ಸಾರಾಯಿ ವಿರುದ್ಧ ಮಹಿಳಾ ಸೈನ್ಯವನ್ನೇ ಕಟ್ಟಿದ್ದರು. ಆ ಮಹಿಳೆಯರಲ್ಲಿ ಹಾಲಕ್ಕಿ ಗೌಡತಿಯರೂ ಇದ್ದರು. ಮೇಲ್ಜಾತಿ ಮಹಿಳೆಯರೂ ಇದ್ದರು.
ಕುಸುಮಕ್ಕನ ಕತೆಗಳನ್ನು ಅವರ ಅಭಿಮಾನಿಗಳ ಬಾಯಿಂದಲೇ ಕೇಳಬೇಕು. ಅವರು ಪೊಲೀಸರಿಗೆ ಅಂಜಲಿಲ್ಲ. ಅಬ್ಕಾರಿ ಸಿಬ್ಬಂದಿಗೆ ಅಂಜಲಿಲ್ಲ. ಸಾರಾಯಿ ಗುತ್ತಿಗೆದಾರರ ಗೂಂಡಾಗಳಿಗೆ ಹೆದರಲಿಲ್ಲ. ಈ ಮೂರು ತೆರದವರು ಒಂದಾಗಿ ಬಂದರೂ ಭಯಪಡಲಿಲ್ಲ. ಅವರು ಅಕ್ರಮ ಸಾರಾಯಿ ಅಂಗಡಿಗಳನ್ನು ಸುಟ್ಟರು. ಲೈಸೆನ್ಸ್ ಇರುವ ಸಾರಾಯಿ ಅಂಗಡಿಗಳಲ್ಲಿನ ಅಕ್ರಮ ಸಾರಾಯಿಯನ್ನು ಜಪ್ತಿ ಮಾಡಿದರು. ಪೊಲೀಸರು ಮತ್ತು ಅಬ್ಕಾರಿ ಇಲಾಖೆಯವರು ಅವರು ವಿರುದ್ಧ ಕೇಸ್ ಹಾಕಿದರು. ಆ ಮಹಿಳೆಯರು ದೃಢ ನಿರ್ಧಾರದೊಂದಿಗೆ ಜೈಲಿಗೂ ಹೋಗಲು ಸಿದ್ಧರಾದರು. ಅನೇಕರು ಕುಸುಮಕ್ಕನ ಜೊತೆ ಜೈಲು ವಾಸವನ್ನೂ ಅನುಭವಿಸಿದರು!
ಈ ದೇಶದಲ್ಲಿ ಸಾಮಾಜಿಕ ಕಾರ್ಯಕರ್ತರಾಗುವವರು ಗೂಂಡಾಗಳಿಂದಲೂ ಪೊಲೀಸರಿಂದಲೂ ಏಕಕಾಲಕ್ಕೆ ಧಮಕಿಯನ್ನು ಎದುರಿಸಬೇಕಾಗುತ್ತದೆ ಎಂಬುದಕ್ಕೆ ಕುಸುಮಕ್ಕನ ಹೋರಾಟಗಳೇ ಸಾಕ್ಷಿಯಾಗಿವೆ.
ಅವರ ಜಿಗುಟುತನ ನನ್ನಂಥ ಹುಲುಮಾನವರಿಗೆ ಅನೇಕ ಬಾರಿ ಬೇಸರ ಹುಟ್ಟಿಸುವಂತಿತ್ತು. ನನ್ನಂಥವರಿಗೆ ಸಾಕ್ಷರತೆ ಎಂಬುದು ಒಂದು ತುರ್ತು ಅವಶ್ಯಕತೆ ಮಾತ್ರ ಆಗಿದೆ. ಆದರೆ ಕುಸುಮಕ್ಕನಿಗೆ ಸಾಕ್ಷರತೆ ಎಂಬುದು ಜೀವನ ಮೌಲ್ಯವಾಗಿತ್ತು. ನವಸಾಕ್ಷರರು ಕಾಪಿ ಮಾಡುವುದನ್ನು ಅವರು ಸಹಿಸುತ್ತಿರಲಿಲ್ಲ. ಅವರನ್ನು ಡಿಬಾರ್ ಮಾಡುವಷ್ಟರ ಮಟ್ಟಿಗೆ ಅತಿರೇಕಕ್ಕೆ ಹೋಗುತ್ತಿದ್ದರು. ಹೀಗಾಗಿ ಸಾಕ್ಷರತಾ ಅಧಿಕಾರಿಗಳು ಕಂಗಾಲಾಗುತ್ತಿದ್ದರು!
ಕುಸುಮಕ್ಕ ಹೊಸ ಮಾನವನ ಶೋಧನೆಯಲ್ಲಿದ್ದರು. ಕುಟುಂಬವನ್ನು, ಸಮಾಜವನ್ನು ಮತ್ತು ನಿಸರ್ಗವನ್ನು ಏಕಕಾಲಕ್ಕೆ ಪ್ರೀತಿಸುವ ಯೋಗ್ಯತೆಯುಳ್ಳ ಸರಳ ಸಹಜವಾದ ಮಾನವ ಅವರ ಕಲ್ಪನೆಯ ಕೂಸಾಗಿದ್ದ.
ಅಣುಶಕ್ತಿ ವಿರೋಧಿ ಹೋರಾಟ ಅವರಿಗೆ ಕೇವಲ ಹೋರಾಟವಾಗಿರಲಿಲ್ಲ. ಜೀವನವನ್ನು ಪ್ರೀತಿಸುವ ಒಂದು ಮಾರ್ಗವಾಗಿತ್ತು. ಒಂದು ಸಲ ಹೀಗಾಯಿತು…
ಖಾಕಿ ಪ್ಯಾಂಟು ಧರಿಸಿದ ತೆಳ್ಳನೆಯ ಮಹಿಳೆಯೊಬ್ಬಳು ಇತರ ಮಹಿಳೆಯರ ಜೊತೆ ಅಣುಶಕ್ತಿ ವಿರೋಧಿ ಸೈಕಲ್ ಜಾಥಾದ ಮುಂದಾಳತ್ವ ವಹಿಸಿ ಕಾರವಾರದ ನೇತಾಜಿ ಸರ್ಕಲ್ ಬಳಿ ಬಂದಾಗ ಬೆರಗುಗಣ್ಣುಗಳಿಂದ ನೋಡಿದೆ. ನೋಡಿದರೆ ಕುಸುಮಕ್ಕ! ಸದಾ ಬಿಳಿ ಖಾದಿ ಸೀರೆಯಲ್ಲಿರುವ ಬಡಕಲು ದೇಹದ ಅಕ್ಕನ ಹೊಸ ಅವತಾರ ಇದಾಗಿತ್ತು.
ಹೀಗೆ ಅವರು ಉತ್ತರ ಕನ್ನಡದ ಎಲ್ಲೆಂದರಲ್ಲಿ ಹೋರಾಟದ ಮುಂಚೂಣಿಯಲ್ಲಿರುತ್ತಿದ್ದರು. ಒಂದು ಕಡೆ ಮಹಿಳೆಯರ ಸಂಘಟನೆ. ಇನ್ನೊಂದು ಕಡೆ ಸಾಕ್ಷರತಾ ಸಭೆ, ಮತ್ತೊಂದು ಕಡೆ ದೇಶೀಯ ಔಷಧಿಗಳ ಮಹತ್ವದ ಕುರಿತು ಮಾತನಾಡುವುದು, ಇನ್ನೊಂದು ಕಡೆ ಸರಳ ಜೀವನ ವಿಧಾನದ ಬಗ್ಗೆ ತಿಳಿ ಹೇಳುವುದು. ಹೀಗೆ ನಮ್ಮ ಕುಸುಮಕ್ಕನ ಅವತಾರಗಳು ಬಹಳವಾಗಿದ್ದವು. ಭತ್ತದ ಒಂದು ಹಿಡಿ ಸೂಡಿನಂತಿದ್ದ ಆ ದೇಹದೊಳಗೆ ಅದೆಷ್ಟು ಚೈತನ್ಯದ ಬೀಜಗಳಿದ್ದವೊ ನಾನರಿಯೆ.
ಸಾರಾಯಿ ವಿರೋಧಿ ಆಂದೋಲನಕ್ಕೆ ಸಂಬಂಧಿಸಿದಂತೆ ನಮ್ಮ ಸರ್ಕಾರ ಅವರನ್ನು ಜೈಲಿಗೆ ಕಳಿಸಿತ್ತು! ಕಾಂಗ್ರೆಸ್ ನಾಯಕ ಪ್ರಭಾಕರ ರಾಣೆ ಮುಂತಾದವರು ಇದನ್ನು ವಿರೋಧಿಸಿ ಕಾರವಾರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಆಮರಣ ಉಪವಾಸ ಕುಳಿತರು. ಅವರಲ್ಲಿ ಹಾಲಕ್ಕಿ ಗೌಡತಿಯರೂ ಇದ್ದರು. ಉಪವಾಸ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದ ಗಂಭೀರ ಸ್ವಭಾವದ ಗೋಕರ್ಣದ ಗೌಡತಿಯೊಬ್ಬಳನ್ನು ಮಾತನಾಡಿಸಿದಾಗ ಆಕೆ ಹೇಳಿದಳು: ‘ಕುಡಿದು ನನ್ನ ಮಗ ಸತ್ತ. ನನ್ನ ಅಳಿಯ ಸತ್ತ, ನನ್ನ ಗಂಡನೂ ಸತ್ತ. ಸೊಸೆ, ಮಗಳು ಮತ್ತು ಅವರ ಮಕ್ಕಳೊಡನೆ ಜೀವ ಸವೆಸುತ್ತಿದ್ದೇನೆ. ನಾನು ಕುಸುಮಕ್ಕನಿಗಾಗಿ ಸಾಯಲೂ ಸಿದ್ಧ. ಕುಸುಮಕ್ಕ ಸಾರಾಯಿ ಬಂದ್ ಮಾಡಿದರೆ ನನ್ನ ಮೊಮ್ಮಕ್ಕಳು ಸಾರಾಯಿಗೆ ಬಲಿ ಆಗುವುದು ತಪ್ಪುತ್ತದೆ!’
ಇನ್ನೊಬ್ಬ ಗೌಡತಿ ಗಣಪಿ, ದೀವಗಿ ಗ್ರಾಮದವಳು. ಅಂಕೋಲೆ ಮತ್ತು ಕುಮಟಾ ಮಧ್ಯದ ಈ ಗ್ರಾಮ ಒಂದು ಕಾಲಕ್ಕೆ ಬೌದ್ಧ ಕೇಂದ್ರವಾಗಿತ್ತು. ಇಂದು ಅಲ್ಲಿ ಏನು ನಡೆಯುತ್ತಿದೆ? ಗಣಪಿ ಹೇಳಿದಳು: ‘ಸಾರಾಯಿ ಮಾರುವವರು ತಮ್ಮ ಹೆಣ್ಣು ಮಕ್ಕಳನ್ನು ಗಂಡನ ಮನೆಗೆ ಕಳಿಸದೆ ಸಾರಾಯಿ ಮಾರಲು ಹಚ್ಚುತ್ತಾರೆ. ಕುಡುಕರು ಆ ಯುವತಿಯರ ಹೆಗಲ ಮೇಲೆ ಕೈ ಹಾಕಿ ಸಾರಾಯಿ ಕುಡಿಯುತ್ತಾರೆ!’
ಗಣಪಿಯಂಥ ಅದೆಷ್ಟೋ ದುರ್ಬಲ ಮಹಿಳೆಯರಲ್ಲಿ ಹೋರಾಡುವ ನೈತಿಕ ಸ್ಥೈರ್ಯವನ್ನು ತುಂಬಿದವರು ಕುಸುಮಕ್ಕ. ಆ ಕಾಲದಲ್ಲಿ ಪೊಲೀಸರೆಂದರೆ ಅವಿತುಕೊಳ್ಳುತ್ತಿದ್ದ ಈ ಮಹಿಳೆಯರು ಠಾಕುಠೀಕಾಗಿ ಖಾಕಿಧಾರಿಗಳ ಎದುರು ಸ್ವಾಭಿಮಾನ ತುಂಬಿದ ಹೆಜ್ಜೆ ಇಡುತ್ತ ಸಾಗಿ ಬಂದು ಪೊಲೀಸ್ ವ್ಯಾನನ್ನು ಹತ್ತುತ್ತಿರುವುದನ್ನು ಮೂರು ದಶಕಗಳ ಹಿಂದೆ ನೋಡಿದ್ದೇನೆ.
ಕಾರವಾರದಲ್ಲಿ ಇಂಥ ಧೀರ ಮಹಿಳೆಯರು ಜೈಲಿನಲ್ಲಿ ಬಂಧಿಗಳಾಗಿದ್ದಾಗ ಹೊರಗಡೆ ಸಮಾಜದ ಹಿತಚಿಂತಕರು ಸತತವಾಗಿ ಸರ್ಕಾರದ ಮೇಲೆ ಒತ್ತಡ ತಂದರು. ಸರ್ಕಾರ ಅಂಜಿತು. ಕುಸುಮಕ್ಕನನ್ನು ಜೈಲಿನಿಂದ ಬಿಡುಗಡೆಗೊಳಿಸಿತು. ಆದರೆ ಸಾವು ಕರೆದೊಯ್ಯಿತು! ಕುಸುಮಾ ಸೊರಬ ಅವರು ಪರಿಸರ ವಿಚಾರವೊಂದಕ್ಕೆ ಸಂಬಂಧಿಸಿದ ಕೆಲಸಕ್ಕಾಗಿ 1998ನೇ ಮಾರ್ಚ್ 14ರಂದು ಬೆಂಗಳೂರಿಗೆ ಪ್ರಯಾಣಿಸುತ್ತಿದ್ದರು. ಬೆಳಗಿನ ಜಾವ ರಸ್ತೆ ದಾಟುವಾಗ ಅಪಘಾತಕ್ಕೀಡಾದರು.
ಗಾಂಧಿವಾದಿ ಹೋರಾಟಗಾರ್ತಿ ಡಾ|| ಕುಸುಮಾ ಸೊರಬ ಅವರು 1937ನೇ ಅಕ್ಟೋಬರ್ 13 ರಂದು ಜನಿಸಿದರು. ಅವರು ಹುಟ್ಟಿದ್ದು ಹುಬ್ಬಳ್ಳಿಯಲ್ಲಿ, ಬೆಳೆದದ್ದು ಸೊರಬದಲ್ಲಿ. ಅವರ ಪೂರ್ವಿಕರ ಊರು ಶಿವಮೊಗ್ಗ ಬಳಿಯ ಶರಾವತಿ ದಂಡೆಯ ಕೆರವಳ್ಳಿ.
ಡಾಕ್ಟರ್ ಆಗುವ ಕನಸು ಹೊತ್ತ ಕುಸುಮಾ ಅವರು ಆರ್ಥಿಕ ಸಮಸ್ಯೆಯಿಂದಾಗಿ ಮೊದಲಿಗೆ ವಿಜಯಪುರದಲ್ಲಿ ಸೂಲಗಿತ್ತಿ ತರಬೇತಿ ಪಡೆದರು. ನಂತರ ಮುಂಬೈ ಆಸ್ಪತ್ರೆಯೊಂದರಲ್ಲಿ ದಾದಿಯಾಗಿ ಸೇವೆ ಪ್ರಾರಂಭಿಸಿದರು. ರಾತ್ರಿ ನರ್ಸ್ ಕೆಲಸ ಮಾಡಿ ಪ್ರತಿದಿನ ಕೇವಲ ಎರಡು ಗಂಟೆ ಮಲಗುತ್ತ, ಹಗಲು ಮೆಡಿಕಲ್ ಕಾಲೇಜಿಗೆ ಹೋಗಿ ಎಂ.ಬಿ.ಬಿ.ಎಸ್. ಮುಗಿಸಿದರು. ನಂತರ ಎಂ.ಎಸ್. ಓದಿ ಸರ್ಜನ್ ಆದರು. ಹಿಮಾಲಯದಲ್ಲಿ ಯೋಗ, ನಿಸರ್ಗೋ ಚಿಕಿತ್ಸೆ ಮತ್ತು ಆಯುರ್ವೇದ ಕಲಿತರು. ಕ್ರಿಶ್ಚಿಯನ್ ಆಸ್ಪತ್ರೆಯಲ್ಲಿ ಅನುಭವ ಪಡೆದರು. ಅಲೊಪತಿಯ ಜೊತೆ ಯೋಗ, ನಿಸರ್ಗ ಮತ್ತು ಆಯುರ್ವೇದ ಪದ್ಧತಿಗಳನ್ನು ಒಗ್ಗೂಡಿಸಿ ಉತ್ತಮ ಪರಿಣಾಮ ಕಂಡುಕೊಂಡರು. ದೇಶೀ ಆರೋಗ್ಯ ವ್ಯವಸ್ಥೆಯ ಮಹತ್ವ ಸಾರಿದರು.
ನಂತರ ಹೊನ್ನಾವರದ ಕಾಸರಕೋಡಿಗೆ ಬಂದು “ಸ್ನೇಹಕುಂಜ” ಸಂಸ್ಥೆ ಆರಂಭಿಸಿದರು. ಜೊತೆಗೆ ಸಣ್ಣ ಪ್ರಮಾಣದ ಆಸ್ಪತ್ರೆ ತಲೆ ಎತ್ತಿತು. ಕಾಸರಕೋಡ ಕಡಲತೀರದಲ್ಲಿ ವಿವೇಕಾನಂದ ಆರೋಗ್ಯಧಾಮ ನಿರ್ಮಿಸಿದರು. ಸೀ ಬರ್ಡ್, ಕೈಗಾ, ಕೊಂಕಣ ರೈಲ್ವೆ, ವಿದ್ಯತ್ ಉತ್ಪಾದನೆಯ ಅಣೆಕಟ್ಟುಗಳು ಮುಂತಾದ ಯೋಜನೆಗಳಿಂದ ಅರಣ್ಯ ನಾಶವಾಗುತ್ತ ಉತ್ತರ ಕನ್ನಡ ಜಿಲ್ಲೆಯ ಜನರ ಬದುಕು ಅಯೋಮಯವಾಗಿತ್ತು. ಕುಸುಮಾ ಅವರು ಪರಿಸರದ ಉಳಿವಿಗಾಗಿ ಹೋರಾಟ ಪ್ರಾರಂಭಿಸಿದರು. ಆ ಮೂಲಕ ಜನರಲ್ಲಿ ಪರಿಸರ ಜಾಗೃತಿ ಮಾಡಿದರು. ‘ಪಶ್ಚಿಮಘಟ್ಟ ಉಳಿಸಿ’ ಪಾದಯಾತ್ರೆ ಸಂದರ್ಭದಲ್ಲಿ ಗೋವಾ, ಕರ್ನಾಟಕ, ಕೇರಳ ಮುಂತಾದ ಕಡೆಗಳಲ್ಲಿ ಕೂಡ ಭಾಗವಹಿಸಿ ಜನರಲ್ಲಿ ಪರಿಸರ ಪ್ರಜ್ಞೆ ಮೂಡಿಸುವುದಕ್ಕಾಗಿ ಬೀದಿ ಭಾಷಣ ಮಾಡುತ್ತಿದ್ದರು. ಆರೋಗ್ಯದ ಕಡೆ ಲಕ್ಷ್ಯ ಕೊಡದೆ ಒಂದು ಕಣ್ಣನ್ನು ಕಳೆದುಕೊಂಡಿದ್ದ ಅವರು ಒಕ್ಕಣ್ಣಿನಿಂದಲೇ ಎಲ್ಲವನ್ನೂ ನಿಭಾಯಿಸುತ್ತಿದ್ದರು. ಜೋರಾಗಿ ಗಾಳಿ ಬಿಟ್ಟರೆ ಹಾರಿಹೋಗುವ ಹಾಗೆ ಇದ್ದ ಅವರು ಅದಾವುದನ್ನೂ ಲೆಕ್ಕಿಸದೆ ಕ್ರಿಯಾಶೀಲವಾಗಿ ಜನರ ಮಧ್ಯೆ ಬದುಕಿದ್ದರು. ಸುಂದರಲಾಲ ಬಹುಗುಣ, ಮೇಧಾ ಪಾಟ್ಕರ್, ಶಿವರಾಮ ಕಾರಂತ ಮುಂತಾದ ಪರಿಸರವಾದಿಗಳನ್ನು ಕರೆಸಿ ಪರಿಸರದ ಬಗ್ಗೆ ಜನಜಾಗೃತಿ ಮಾಡುವಲ್ಲಿ ಸಫಲರಾದರು.
ನಾವಿಂದು ಮತ್ತೆ ಕುಸುಮಾ ಸೊರಬ ಅವರ ಚಿಂತನೆಯ ಕಡೆಗೆ ಸಾಗಬೇಕಿದೆ. ಪರಿಸರವನ್ನು ಮತ್ತು ಜೀವನ ಶಿಕ್ಷಣವನ್ನು ನಂಬಿ ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯವಂತ ಸಮಾಜದ ನಿರ್ಮಾಣದ ಕಡೆಗೆ ಮುನ್ನಡೆಯಬೇಕಿದೆ.
ಕನ್ನಡದ ಹಿರಿಯ ಲೇಖಕರು ಮತ್ತು ಪತ್ರಕರ್ತರು. ಬಂಡಾಯ ಕಾವ್ಯದ ಮುಂಚೂಣಿಯಲ್ಲಿದ್ದವರು. ವಿಜಾಪುರ ಮೂಲದ ಇವರು ಧಾರವಾಡ ನಿವಾಸಿಗಳು. ಕಾವ್ಯ ಬಂತು ಬೀದಿಗೆ (ಕಾವ್ಯ -೧೯೭೮), ಹೊಕ್ಕಳಲ್ಲಿ ಹೂವಿದೆ (ಕಾವ್ಯ), ಸಾಹಿತ್ಯ ಮತ್ತು ಸಮಾಜ, ಅಮೃತ ಮತ್ತು ವಿಷ, ನೆಲ್ಸನ್ ಮಂಡೇಲಾ, ಮೂರ್ತ ಮತ್ತು ಅಮೂರ್ತ, ಸೌಹಾರ್ದ ಸೌರಭ, ಅಹಿಂದ ಏಕೆ? ಬಸವಣ್ಣನವರ ದೇವರು, ವಚನ ಬೆಳಕು, ಬಸವ ಧರ್ಮದ ವಿಶ್ವಸಂದೇಶ, ಬಸವಪ್ರಜ್ಞೆ, ನಡೆ ನುಡಿ ಸಿದ್ಧಾಂತ, ಲಿಂಗವ ಪೂಜಿಸಿ ಫಲವೇನಯ್ಯಾ, ಜಾತಿ ವ್ಯವಸ್ಥೆಗೆ ಸವಾಲಾದ ಶರಣರು, ಶರಣರ ಸಮಗ್ರ ಕ್ರಾಂತಿ, ಬಸವಣ್ಣ ಮತ್ತು ಅಂಬೇಡ್ಕರ್, ಬಸವಣ್ಣ ಏಕೆ ಬೇಕು?, ಲಿಂಗವಂತ ಧರ್ಮದಲ್ಲಿ ಏನುಂಟು ಏನಿಲ್ಲ?, ದಾಸೋಹ ಜ್ಞಾನಿ ನುಲಿಯ ಚಂದಯ್ಯ (ಸಂಶೋಧನೆ) ಮುಂತಾದವು ಅವರ ಪ್ರಕಟಿತ ಕೃತಿಗಳಾಗಿವೆ. ಕರ್ನಾಟಕ ಸರ್ಕಾರದ ರಾಷ್ಟ್ರೀಯ ಬಸವ ಪುರಸ್ಕಾರ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಗೌರವ ಪ್ರಶಸ್ತಿ ಮುಂತಾದ ೫೨ ಪ್ರಶಸ್ತಿಗಳಿಗೆ ಭಾಜನರಾದ ರಂಜಾನ್ ದರ್ಗಾ ಅವರು ಬಂಡಾಯ ಸಾಹಿತ್ಯ ಪರಂಪರೆಯ ಶಕ್ತಿಶಾಲಿ ಕವಿಗಳಲ್ಲಿ ಒಬ್ಬರು. ಅಮೆರಿಕಾ, ನೆದರ್‌ಲ್ಯಾಂಡ್ಸ್, ಲೆಬನಾನ್, ಕೆನಡಾ, ಫ್ರಾನ್ಸ್, ಆಸ್ಟ್ರೇಲಿಯಾ ಸೇರಿದಂತೆ ಇನ್ನೂ ಹಲವು ದೇಶಗಳಲ್ಲಿ ಶರಣ ಸಂಸ್ಕೃತಿ, ಶಾಂತಿ ಮತ್ತು ಮಾನವ ಏಕತೆ ಕುರಿತು ಉಪನ್ಯಾಸ ನೀಡಿದ್ದಾರೆ.